ಅತ್ಯಂತ ಸೂಕ್ಷ್ಮಸಂವೇದಿಯಾದ, ಅಷ್ಟೇ ಸಂಕೀರ್ಣವಾದ, ಸದಾ ರಕ್ಷಣೆಯನ್ನು ಬಯಸುವ, ಸ್ವಲ್ಪ ಹಾನಿಯಾದರೂ ತಡೆದುಕೊಳ್ಳಲಾಗದ, ತನ್ನ ಒಡಲಿಗಾದ ಗಾಯವನ್ನು ರಿಪೇರಿ ಮಾಡಿಕೊಳ್ಳಲಾಗದ ಮಿದುಳು ಜೀವಂತ ಇರುವಾಗ ಟೂತ್‌ಪೇಷ್ಟಿನಂತೆ, ಬೆಣ್ಣೆಯಂತೆ ಬಹಳ ಮೃದುವಾಗಿರುತ್ತದೆ. ಅಪಘಾತ ಅಥವಾ ತಲೆಗೆ ಬಲವಾಗಿ ಏಟು ಬಿದ್ದು, ತಲೆ ಬುರುಡೆ ಸೀಳಿದ್ದರೆ, ತೂತಾಗಿದ್ದರೆ, ಬುರುಡೆಯೊಳಗಿನ ಒತ್ತಡ ಏರಿದರೆ, ಸೀಳು ಅಥವಾ ತೂತಿನ ಮೂಲಕ ಮಿದುಳು ‘ಜೆಲ್ಲಿ’ಯಂತೆ ಹೊರಕ್ಕೆ ಹರಿಯುತ್ತದೆ ! ಅತ್ಯಂತ ಪ್ರಭಾವಶಾಲಿಯಾದರೂ, ತುಂಬಾ ದುರ್ಬಲವಾಗಿರುವ ನಮ್ಮ ಮಿದುಳಿನ ರಕ್ಷಣೆಗೆ, ಪ್ರಕೃತಿ ಏಳು ಸುತ್ತಿನ ಕೋಟೆಯನ್ನೇ ನಿರ್ಮಿಸಿದೆ. ತಲೆಯ ಮೇಲಿನ ಕೂಡಲರಾಶಿ, ಚರ್ಮ, ಸ್ನಾಯುವಿನ ಹಾಳೆ, ತಲೆಬುರುಡೆ, ಮೂರು ಪೊರೆಗಳು (ಮಾತೃಕೆಗಳು) ಇವೆ ಆ ಏಳು ಸುತ್ತಿನ ಕೋಟೆ. ಸುಲಭಕ್ಕೆ ತಲೆಬುರುಡೆ ಒಡೆಯದು. ಮೂರು ಮಾತೃಕೆಗಳಲ್ಲಿ ಹೊರಗಿನದು (ಡ್ಯೂರಾಮೇಟರ್) ಬುರುಡೆಯ ಒಳ ಮೇಲ್ಮೈಗೆ ಅಂಟಿಕೊಂಡಂತಿದ್ದರೆ, ಒಳಗಿನದು (ಪೈಯಾ ಮೇಟರ್), ಮಿದುಳಿಗೇ ಅಂಟಿಕೊಂಡಿರುತ್ತದೆ. ಇವೆರಡರ ನಡುವಿನ ಪೊರೆ ಜೇಡನ ಬಲೆಯಂತಿರುತ್ತದೆ. (ಅರೆಕ್‌ನಾಯ್ಡ್‌ ಮೇಟರ್) ಒಳಗಿನ ಮತ್ತು ಮಧ್ಯ ಪೊರೆಯ ನಡುವೆ, ಮಿದುಳು, ಮಿದುಳ ಬಳ್ಳಿ ರಸ (ಸೆರೆಬ್ರೊ-ಸ್ಪೈನಲ್‌ ಫ್ಲೂಯಿಡ್) ವಿರುತ್ತದೆ. ಇಡೀ ಮಿದುಳು ಮತ್ತು ಮಿದುಳ ಬಳ್ಳಿಯನ್ನು ಸುತ್ತುವರಿಯುವ ಈ ರಸ ‘ಕುಶನ್’ ರೀತಿ ಕೆಲಸ ಮಾಡಿ, ಏಟು-ಕುಲುಕಾಟದಿಂದ ಮಿದುಳ ವಸ್ತುವಿಗೆ ಮತ್ತಷ್ಟು ರಕ್ಷಣೆ ಒದಗಿಸುತ್ತದೆ. ಈ ರಸ, ರಕ್ತದಿಂದ ಉತ್ಪತ್ತಿಯಾಗಿ, ಮಿದುಳಿನ ಕುಳಿಗಳನ್ನು ತುಂಬಿ, ಮಿದುಳಿನ ಮೇಲ್ಮೈಯನ್ನೆಲ್ಲಾ ಆವರಿಸಿ, ಅಲ್ಲಿಂದ ಕೆಳಗಿಳಿದು ಬೆನ್ನ ನರಹುರಿಯ ಸುತ್ತಲೂ ಹರಡಿಕೊಳ್ಳುತ್ತದೆ. ರಕ್ತದಿಂದ ಉತ್ಪತ್ತಿಯಾಗಿ ಮತ್ತೆ ರಕ್ತವನ್ನು ಸೇರುವ, ಈ ಉಪಯುಕ್ತ ರಸದ ಒಟ್ಟು ಪ್ರಮಾಣ ಕೇವಲ ೧೨೦ ಮಿಲಿ ಎಂದರೆ ಆಶ್ಚರ್ಯವಾಗದಿರದು. ಒಂದು ದಿನದಲ್ಲಿ ಅನೇಕ ಬಾರಿ ಇಷ್ಟು ಪ್ರಮಾಣದಲ್ಲಿ ಈ ರಸ ಉತ್ಪತ್ತಿಯಾಗಿ, ಕೆಲಸ ಮುಗಿದ ಮೇಲೆ ರಕ್ತಕ್ಕೆ ಸೇರಿಕೊಳ್ಳುತ್ತದೆ. ಈ ರಸ ನರಕೋಶಗಳ ಪೋಷಣೆಗೂ ನೆರವಾಗುತ್ತದೆ ಎನ್ನಲಾಗಿದ.

 

 

ಆರೋಗ್ಯವಂತ ವ್ಯಕ್ತಿಯಲ್ಲಿ ಮಿದುಳ-ಮಿದುಳ ಬಳ್ಳಿ ರಸ ನೀರಿನಂತೆ ಪಾರದರ್ಶಕವಾಗಿರುತ್ತದೆ. ಅದರಲ್ಲಿ ಶೇಕಡಾ ೧೫ ರಿಂದ ೪೦ ಮಿಲಿಗ್ರಾಂ ಪ್ರೋಟೀನ್ ಇದ್ದರೆ, ೫೦ ರಿಂದ ೮೦ ಮಿ. ಗ್ರಾಂ ಗ್ರೂಕೋಸ್‌ ಇರುತ್ತದೆ. ಅತ್ಯಲ್ಪ ಪ್ರಮಾಣದಲ್ಲಿ ಕ್ಲೋರೈಡ್, ಸಲ್ಫೇಟ್, ಸೋಡಿಯಂ, ಪೊಟಾಸಿಯಂ ಲವಣಗಳಿರುತ್ತವೆ. ಅಲ್ಲೊಂದು ಇಲ್ಲೊಂದು ಜೀವಕೋಶವಿರಬಹುದು. ಇಲ್ಲದೆಯೂ ಇರಬಹುದು.

ಮಿದುಳುಮಿದುಳಬಳ್ಳಿ ರಸದ ಪರೀಕ್ಷೆ

ರೋಗಿಯ ಬೆನ್ನಿನಲ್ಲಿ ಸೂಜಿ ಹಾಕಿ, ನೀರು ತೆಗೆದು ಪರೀಕ್ಷಿಸಿದರು ಎಂಬುದನ್ನು ನೀವು ಕೇಳಿರುತ್ತೀರಿ. ಈ ವಿಧಾನದಿಂದ ವೈದ್ಯರು ಮಿ.ಮಿ. ರಸವನ್ನು ತೆಗೆದು ಪರೀಕ್ಷಿಸುತ್ತಾರೆ. ತೆಗೆದ ರಸ ಪಾರದರ್ಶಕವಾಗಿಲ್ಲದಿದ್ದರೆ ರಸದಲ್ಲಿ ಸೋಂಕಿನ ಸೂಚನೆ ಅಥವಾ ರಕ್ತ ಸ್ರಾವವಾಗಿದೆ ಎಂದು ಅರ್ಥ. ಮಿದುಳಿನ ವಸ್ತು ಅಥವಾ ಪೊರೆಯನ್ನು ಕ್ಷಯ ರೋಗಾಣುಗಳು ಆವರಿಸಿದ್ದರೆ, ಮಿ.ಮಿ. ರಸದಲ್ಲಿ ಜೇಡನ ಬಲೆಯಂತಹ ಬದಲಾವಣೆ ಕಂಡು ಬರುತ್ತದೆ. ಬ್ಯಾಕ್ಟೀರಿಯಾಗಳು ಮಿದುಳಿನ ಸೋಂಕಿಗೆ ಕಾರಣವಾಗಿದ್ದರೆ, ಬೆನ್ನಿನಲ್ಲಿ ಹಾಕಿದ ಸೂಜಿಯ ಮೂಲಕ ‘ಕೀವು’ ಹೊರಬರಬಹುದು ! ಒತ್ತಡವನ್ನು ಅಳೆಯುವ ಸಾಧನದಿಂದ ಮಿ.ಮಿ. ರಸ ಒತ್ತಡದಲ್ಲಿದೆಯೇ ಎಂದು ಗಮನಿಸಲಾಗುತ್ತದೆ. ಒತ್ತಡದಲ್ಲಿದ್ದರೆ, ಬುರುಡೆಯೊಳಗೆ ಒತ್ತಡ (INTRA-CRANIAL PRESSURE) ಹೆಚ್ಚಿದೆ ಎಂದು ಅರ್ಥ. ಈ ಏರು ಒತ್ತಡದ ಕಾರಣವನ್ನು ಪತ್ತೆ ಮಾಡಬೇಕಾಗುತ್ತದೆ. ರಸವನ್ನು ಸೂಕ್ಷ್ಮದರ್ಶಿಯಡಿಯಲ್ಲಿ ಪರೀಕ್ಷಿಸಿ, ಸತ್ತ ಜೀವಕೋಶಗಳಿವೆಯೇ, ಅವು ಎಂಥವು, ಕ್ಯಾನ್ಸರ್ ಕಣಗಳಿವೆಯೇ ಎಂದು ನೋಡಲಾಗುತ್ತದೆ. ರಾಸಾಯನಿಕ ಪರೀಕ್ಷೆಗಳಿಂದ ರಸದಲ್ಲಿ ಗ್ಲೂಕೋಸ್, ಪ್ರೋಟೀನ್ ಪ್ರಮಾಣವನ್ನು ಅಳೆಯಲಾಗುತ್ತದೆ. ಎಲ್ಲ ಸೋಂಕು ಪ್ರಕರಣಗಳಲ್ಲಿ ಗ್ಲೂಕೋಸ್ ಪ್ರಮಾಣ ತಗ್ಗಿ, ಪ್ರೋಟೀನ್ ಮಟ್ಟ ಹೆಚ್ಚುತ್ತದೆ. ಕ್ಷಯ ರೋಗವಿದ್ದಲ್ಲಿ ಕ್ಲೋರೈಡ್ ಮಟ್ಟ ಏರುತ್ತದೆ. ಮಿದುಳಿನ ವಸ್ತುವಿನಲ್ಲಿ ರಕ್ತ ಸ್ರಾವವಾಗುತ್ತಿದ್ದರೆ, ರಸದಲ್ಲಿ ಕೆಂಪು ರಕ್ತ ಕಣಗಳು ಕಾಣಿಸಿಕೊಳ್ಳುತ್ತವೆ.

 

 

ಸಿಫಿಲಿಸ್ (ಲೈಂಗಿಕ ರೋಗ)ನ ಮೂರನೇ ಹಂತದಲ್ಲಿ ಮಿದುಳಿನಲ್ಲಿ ರೋಗಾಣುಗಳಿವೆಯೇ ಎಂಬುದು ಮಿ.ಮಿ. ರಸದ ಪರೀಕ್ಷೆಯಿಂದಲೇ ನಿರೂಪಿತವಾಗಬೇಕು.

ಸಣ್ಣ ಮಕ್ಕಳಲ್ಲಿ ನೆತ್ತಿಯ ಮೂಳೆ ಇನ್ನೂ ಕೂಡಿಕೊಳ್ಳದೇ ಇರುವುದರಿಂದ, ಆ ಭಾಗದಿಂದಲೇ ಮಿ.ಮಿ. ರಸವನ್ನು ಸೂಜಿಯ ಮೂಲಕ ಪರೀಕ್ಷೆಗಾಗಿ ಪಡೆಯಬಹುದು.

ಸೋಂಕು ತೀವ್ರವಾಗಿದ್ದರೆ, ಜೀವಿರೋಧಕ ಔಷಧವನ್ನು ಮಿ.ಮಿ. ರಸದೊಳಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ.

ಹೆಚ್ಚು ಮಿ.ಮಿ. ರಸದ ಉತ್ಪಾದನೆ ಅಥವಾ ಸಂಗ್ರಹ

ಅಸ್ಪಷ್ಟವಾದ ಕಾರಣಗಳಿಂದ, ಮಕ್ಕಳಲ್ಲಿ ಮಿದುಳು-ಮಿದುಳ ಬಳ್ಳಿ ರಸ ಹೆಚ್ಚಾಗಿ ಉತ್ಪತ್ತಿಗೊಳ್ಳತೊಡಗಬಹುದು ಅಥವಾ ಮಿ.ಮಿ. ರಸ ಒಂದೆಡೆಯಿಂದ ಮತ್ತೊಂದೆಡೆಗೆ ಸರಾಗವಾಗಿ ಸಂಚರಿಸಲು ಅಡ್ಡಿಯಾಗಿ ಅಥವಾ ಉತ್ತತ್ತಿಯಾದ ರಸ, ಮತ್ತೆ ರಕ್ತಕ್ಕೆ ಹೀರಿಕೊಳ್ಳಲ್ಪಡದಿದ್ದರೆ, ಮಿ.ಮಿ. ರಸ ಅಧಿಕ ಪ್ರಮಾಣದಲ್ಲಿ ಸಂಗ್ರಹಗೊಳ್ಳತೊಡಗುತ್ತದೆ. ಇದು ಪ್ರಾಣಾಂತಿಕ ಸ್ಥಿತಿಯನ್ನುಂಟು ಮಾಡುತ್ತದೆ. ಮಕ್ಕಳಲ್ಲಿ, ತಲೆಬುರುಡೆಯ ಮೂಳೆಗಳು ಇನ್ನೂ ಕೂಡಿಕೊಂಡಿರುವುದಿಲ್ಲವಾದ್ದರಿಂದ, ತಲೆದಪ್ಪವಾಗುತ್ತಾ, ಗಡಿಗೆಯಂತಾಗುತ್ತದೆ. ದಿನೇ ದಿನೇ ತಲೆಯ ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಒತ್ತಡ ಹೆಚ್ಚಿ ಕಣ್ಣಿನ ನರಕ್ಕೆ ಹಾನಿಯಾಗಿ, ಮಗುವಿನ ದೃಷ್ಟಿ ಹಾಳಾಗತೊಡಗುತ್ತದೆ. ಸಾವೂ ಸಂಭವಿಸಬಹುದು. ಈ ಸ್ಥಿತಿಯನ್ನು ನೀರು೦ತಲೆ (Hydro-cephalus) ಎನ್ನುತ್ತಾರೆ. ಇದಕ್ಕೆ ಶಸ್ತ್ರಕ್ರಿಯೆಯೇ ಪರಿಹಾರ. ಹೆಚ್ಚಿನ ರಸ, ಕೊಳವೆಯೊಂದರ ಮೂಲಕ, ಹೊಟ್ಟೆಯ ಭಾಗಕ್ಕೆ ಹರಿದು ಹೋಗುವಂತೆ ಮಾಡಲಾಗುತ್ತದೆ

ಕೆಲವು ವಯಸ್ಕರಲ್ಲಿ ಮಿದುಳಿನ ಸೋಂಕು (ಕ್ಷಯ ಇತ್ಯಾದಿ) ಉಂಟಾಗಿ, ಮಿದುಳಿನ ತಳದಲ್ಲಿ ಮಿದುಳ ಪೊರೆಗಳು ಒಂದಕ್ಕೊಂದು ಅಂಟಿಕೊಂಡು, ರಸದ ಚಲನೆಗೆ ಅಡ್ಡಿಯಾಗಿ, ರಸದ ಸಂಗ್ರಹಣೆ ಹೆಚ್ಚತೊಡಗುತ್ತದೆ. ಒತ್ತಡದಿಂದ, ಮಿದುಳ ಕುಳಿಗಳು ಹಿಗ್ಗತೊಡಗುತ್ತವೆ. ಸುತ್ತಮುತ್ತಲಿನ ಮಿದುಳ ವಸ್ತು ನಶಿಸತೊಡಗುತ್ತದೆ. ತತ್ಫಲವಾಗಿ ವ್ಯಕ್ತಿಯ ಮಾನಸಿಕ ಸಾಮರ್ಥ್ಯಗಳೆಲ್ಲ ಕಡಿಮೆಯಾಗತೊಡಗುತ್ತವೆ. ಮರೆವು, ಹೊಸತಾಗಿ ಏನನ್ನೂ ಕಲಿಯಲಾಗದಿರುವುದು, ತರ್ಕಬದ್ಧ ಆಲೋಚನೆ ಮಾಡಲಾಗದಿರುವುದು, ಏಕಾಗ್ರತೆಯ ನಷ್ಟ, ಕೌಶಲಗಳ ನಷ್ಟ, ವಿಚಿತ್ರ-ಮಾತು ವರ್ತಮೆ, ಅನಿಯಂತ್ರಿ ಮೂತ್ರ ವಿಸರ್ಜನೆ, ಶರೀರದ ಬೇಕು ಬೇಡಗಳನ್ನು ಗಮನಿಸಲು ಆಗದಿರುವುದು ಇತ್ಯಾದಿ ರೋಗಲಕ್ಷಣಗಳು ಮೂಡತೊಡಗುತ್ತವೆ. ಈ ಸ್ಥಿತಿಯನ್ನು ‘ನಾರ್ಮಲ್ ಪ್ರೆಶರ್ ಹೈಡ್ರೋ ಕೆಫಲಸ್’ ಎನ್ನಲಾಗುತ್ತದೆ. ಅದನ್ನು ಗುರುತಿಸಿ, ಶಸ್ತ್ರ ಚಿಕಿತ್ಸೆ ಮಾಡಿದರೆ ವ್ಯಕ್ತಿಯ ಆರೋಗ್ಯ ಸುಧಾರಿಸುತ್ತದೆ.

ಮಿದುಳುಮಿದುಳ ಬಳ್ಳಿ ರಸ: ಆರೋಗ್ಯದಲ್ಲಿಅನಾರೋಗ್ಯದಲ್ಲಿ

ಮಧ್ಯಪೊರೆಯ ಕೆಳಗೆ ರಕ್ತಸ್ರಾವ

ಕೀವುಂಟು ಮಾಡುವ ಸೋಂಕು

ಕ್ಷಯ ರೋಗಾಣು ಸೋಂಕು

ವೈರಸ್ ಸೋಂಕು

ಆರೋಗ್ಯವಂತ ವ್ಯಕ್ತಿ

* ಒತ್ತಡ ಹೆಚ್ಚಿರುತ್ತದೆ ಸಾಮಾನ್ಯ/ ಸಾಮಾನ್ಯ/ ಸಾಮಾನ್ಯ ೫೦ ರಿಂದ ೧೮೦
* ಬಣ್ಣ ಕೆಂಪು ಛಾಯೆ ಮುಸುಕು ಮುಸುಕು ಪಾರದರ್ಶಕ ಪಾರದರ್ಶಕ
* ಗ್ಲೂಕೋಸ್ ೮೦ ಗ್ರಾಂ ಕಡಿಮೆ ಕಡಿಮೆ ೮೦ ಮಿ.ಗ್ರಾಂ ೮೦ ಮಿ.ಗ್ರಾಂ%
* ಪ್ರೋಟೀನ್ ಹೆಚ್ಚು ಹೆಚ್ಚು ಹೆಚ್ಚು ಸಾಮಾನ್ಯ ೫೦ ಮಿ. ಗ್ರಾಂ%ಕಡಿಮೆ
* ಜೀವ­ಕೋಶಗಳು ಕೆಂಪು ರಕ್ತ ಕಣಗಳಿರುತ್ತವೆ ೧೦೦೦ ದಿಂದ ೫೦೦೦೦ಪಾಲಿಮಾರ್ಫ್‌‌ಗಳು ೫೦ ರಿಂದ ೫೦೦೦ಲಿಂಪೋಸೈಟ್‌ಗಳು ೧೦ ರಿಂದ ೨೦೦೦ಲಿಂಪೋಸೈಟ್‌ಗಳು ಇಲ್ಲವೇ ಇಲ್ಲ ಅಥವಾ೧ ರಿಂದ ೪ ಮಾತ್ರ