ರಾಗ ಕೇತಾರಗೌಳ ಝಂಪೆತಾಳ

ಅರರೆ ಚೋದಿಗವಿದೈಸೆ | ಗೋಪಾಲ | ತರಳರೀ ನೃಪರ ಜೈಸೆ |
ತರುವಲಿಗಳೊಡನೆ ಯುದ್ಧ | ಪೇಳೆಂತು | ನೆರೆದುದಾವೆಡೆಯೆಂಬುದ ||೩೨೯||

ಮಿತ್ರ ಕೇಳ್ ಯಾದವರನು | ಮುರಿಯಲು ಧ | ರಿತ್ರಿಪರ ನೆರಹಿ ನಾನು |
ಮಿತ್ರಸುತೆ ದಡದಿ ಸೇನೆ | ಬಂದಿಳಿಯೆ | ರಾತ್ರಿ ಜೈಸಿದರು ಮೊನ್ನೆ ||೩೩೦||

ಮೋಸದಿಂ ಗೆಲ್ದರಿನ್ನು | ಪಟು ಭಟರ | ನೀ ಸೋಲ್ಗೆ ಚಿಂತೆಯೇನು |
ರೋಷವೇಕಾಯ್ತು ನಿನಗೆ | ಯಾದವರೊ | ಳೀಸು ವಿಸ್ತರಿಪುದೆನಗೆ ||೩೩೧||

ಆದರಾಲಿಸುವುದೆನ್ನ | ತನುಜೆಯರ | ಕಾದಲನ ಕಪಟಿ ಕೃಷ್ಣ |
ಯಾದವರ ಪಕ್ಷದಿಂದ | ಬಲಸಹಿತ | ಕಾದಿ ಬರಿಗಯ್ಯ ಕೊಂದ ||೩೩೨||

ಹರಹರಾಮರ ದನುಜರ | ಧುರಕೆ ಹಿಂ | ಜರಿಯದಾ ಕಂಸವೀರ |
ಹರಿದನೇ ಗೋಪರಿಂದ | ಪೇಳೇನ | ವಿರಚಿಸಿದೆ ಪ್ರತಿಯ ಮಗಧ ||೩೩೩||

ಆ ಲತಾಂಗಿಯರು ಬಂದು | ಮರುಗೆ ನಾ | ಕೇಳಿ ಮಾರ್ಬಲವನಂದು |
ಮೇಳವಿಸಿ ರಣಕೊದಗಲು | ಮಧುರೆಯೊಳು | ಸೋಲಿಸಿದರೆಮ್ಮ ಮೊದಲು ||೩೩೪||

ಕಂದ

ಕೇಳುತ ಹರಿರಾಮರ ಕ |
ಟ್ಟಾಳು ತನಂಗಳ ಬೆರಳನು ಮೂಗಿನೊಳಿಡುತಂ ||
ಆಲೋಚಿಸುತಿರೆ ಬಾಣಂ |
ಪೇಳಿದ ತನ್ನೆಣಿಕೆಯಂ ಜರಾಸಂಧಂ ತಾಂ ||೩೩೫||

ರಾಗ ಶಂಕರಾಭರಣ ತ್ರಿವುಡೆತಾಳ

ಆನಿದಕೆ ಚಿಂತಿಸೆನು ತನಗಾ | ಗೀ ನೃಪಾಲ ಸಂಕುಲ |
ಹಾನಿಹೊಂದಿತು ರಣದೊಳಸು ಧನ | ಮಾನಗಳಲಿ ||೩೩೬||

ಸೋಲವಾದುದು ವೈಪರೀತ್ಯದ | ಕಾಲಗತಿಯು ಧರಣಿಪ |
ಜಾಲವೆತ್ತಲು ಮಲೆವ ಹುಲು ಗೋ | ಪಾಲರೆತ್ತ ||೩೩೭||

ಕಾದಿ ವಿಜಯವನಲ್ಲದಿರೆ ಮೃತಿ | ಸಾಧಿಸುವೆನು ಬಿಡೆನೆನು |
ತೈದಲೆನ್ನನು ತಡೆದರಿವರೀ | ಮೇದಿನಿಪರು ||೩೩೮||

ಬಂದೆನದರಿಂ ಪೇಳ್ದೆ ನಾಚಿಕೆ | ಯಂದವೆಲ್ಲ ಯಾದವ |
ವೃಂದ ನಾಶ ವ್ರತನಿಗಭಯವ | ನಿಂದು ನೀಡು ||೩೩೯||

ಭಾಮಿನಿ

ಪೊಡವಿಪತಿ ಕೇಳದಕೆ ಬಾಣನು |
ನುಡಿದನೈ ಸಲೆ ಸಾಕು ದುಗುಡವ |
ಬಿಡು ಮಗಧ ತವ ಭಂಗವೆನ್ನದೆನುತ್ತ ತಕ್ಕೈಸಿ ||
ಒಡನೆ ನೃಪರೆಲ್ಲರನು ಮನೆಗೊ |
ಯ್ದುಡಿಗೆ ತೊಡಿಗೆಗಳಿಂದ ಮನ್ನಿಸಿ |
ಷಡುರಸಾನ್ನವನುಣಿಸಿ ಶ್ರಮ ಪರಿಹರಿಸುತಿಂತೆಂದ ||೩೪೦||

ರಾಗ ದೇಸಿ ಅಷ್ಟತಾಳ

ಲಾಲಿಸೋ | ಮಾತ | ಲಾಲಿಸೋ  || ಪಲ್ಲವಿ ||

ಲಾಲಿಸು ಮಗಧ ಭೂ | ಪಾಲ ವಾಕ್ಯವನು |
ಪೇಳೆ ನೀನೆ ಬಂದೆ | ಊಳಿಗದವನು |
ಓಲೆಯ ತರಲೊಂದ | ಸಾಲದೆ ನೀನು |
ಆಲಸ್ಯ ಗೈವಂಥ | ಕೀಳನೆ ನಾನು || ಲಾಲಿಸೊ ||೩೪೧||

ರೂಢಿಪ ಕೇಳೆನ್ನ | ನಾಡಸಂಪದದ |
ರೂಢಿ ನಿನ್ನದು ಕೋಶ | ನೋಡೊಪ್ಪಿದಂದ |
ನಾಡ ಮಾತುಗಳಿನ್ನು | ಬೇಡಶ್ವರಥದ |
ಜೋಡು ಶಸ್ತ್ರಾಸ್ತ್ರದ | ಪಾಡನೋಡೆಂದ || ಲಾಲಿಸೊ ||೩೪೨||

ಇತ್ತೆಕೊಳ್ಳೆಂದಾನೆ | ಹತ್ತು ಸಾವಿರವ |
ದೈತ್ಯಪಾಲಕ ಲಕ್ಷ | ವುತ್ತಮ ರಥವ |
ಇತ್ತನೊರಲ್ದಶ್ವ | ಹತ್ತು ಲಕ್ಷಗಳ |
ಮತ್ತಾಳಲೆಕ್ಕವೆನಿತ್ತೊ ಗೊತ್ತಿಲ್ಲ || ಲಾಲಿಸೊ ||೩೪೩||

ವಾರ್ಧಕ

ಪೃಥ್ವಿಪತಿ ಕೇಳ್ಬಳಿಕ ಮುನ್ನೂರು ಮಂದಿ ದನು |
ಜೋತ್ತಮರ ಮಾಯಾವಿದರನಖಿಳ ಶಸ್ತ್ರಾಸ್ತ್ರ |
ವಸ್ತುವಾಹನ ಕನಕ ಸಂಚಯವನಿತ್ತಧಿಕ ಮೈತ್ರಿಯಿಂ ಮಾಗಧಂಗೆ ||
ಮತ್ತೆ ನಿಜತಳ ತಂತ್ರರಕ್ಷೆಗೆನ್ನುತ ಮಂತ್ರಿ |
ಸತ್ತಮರ ಕುಂಭಾಂಡ ಕೂಪ ಕರ್ಣರ ನೇಮಿ |
ಸುತ್ತ ಬಾಣಂ ಬೀಳ್ಕೊಡಲು ಮಗಧಗೆಂದರತಿ ಧೈರ್ಯಮಂ ಸಚಿವೇಶರು ||೩೪೪||

ರಾಗ ಮಾರವಿ ಏಕತಾಳ

ಬಿಡುಬಿಡು ಮಾಗಧ | ಪೊಡವಿಪ ಚಿಂತೆಯ | ತಡೆಯದೆ ಗೋವಳರ ||
ಹುಡುಗರ ಗರ್ವವ | ತಡೆಗಡಿವೆವು ನೀ | ಕೊಡಿಸೈ ವೀಳೆಯವ ||೩೪೫||

ಹುಲುಗೆಲಸವಿದ | ಕ್ಕಲಸೆವು ಮನದಲಿ | ಹಲವೆಣೆಸದಿರಿಂದು ||
ಜಲಧಿಯ ಪೀರ್ವೆವು | ಮುಳಿದರೆ ಪದಿನಾ | ಲ್ಕಿಳೆಯಡಿ ಮಗುಚುವೆವು ||೩೪೬||

ಬರಲಾಖಂಡಲ | ಸರಸಿಜ ಭವ ಮುಖ | ಸುರರಲ್ಲದಡಭವ ||
ನೆರೆ ಬೆಂಬಲಕವ | ದಿರಪೆಸರಡಗಿಸ | ದಿರೆವೈ ತೋರವರ ||೩೪೭||

ವಾರ್ಧಕ

ಕೇಳರಸ ಮಂತ್ರಿಗಳ ವಿಕ್ರಮೋಕ್ತಿಯ ಮಗಧ |
ನಾಲಿಸುತ ಮುದವಾಂತು ಭರ್ಗನಕ್ಷಿಜ್ವಾಲೆ |
ಕಾಳುರಿಗೆ ಕೂಡಿದಂದವಿ ಮತ್ತೆ ನೆರಹಿದಂ ಚೆದರಿದಾಳ್ಗಳ ಕಟಕವ ||
ಪೇಳಲೇನಿಪ್ಪತ್ತ ಮೂರು ಅಕ್ಷೋಹಿಣಿಯ |
ಪಾಳಿಯಿಂದಾ ಪಡೆಗೆ ಕೈವೀಸೆ ವಹಿಲದಿಂ |
ಧಾಳಿಯಿಟ್ಟುದು ಮಧುರೆಗನಿಲನಂ ಹಿಂದುಳುಹಿ ಮನುಜ ದಿತಿಜರ ಸಮೂಹ ||೩೪೮||

ರಾಗ ಅಹೇರಿ ಏಕತಾಳ

ಸಮರಕೈತಂದರಾಗ | ಭೋರಿಡು | ತ್ತಮಮ ಸಾಹಸದಿ ಬೇಗ || ಸಮರ || ಪಲ್ಲವಿ ||

ಮತ್ತ ಗಜರಥ ತುರಗ | ಪತ್ತಿಗಳು ಬಿಡದೆ ದಂ |
ಡೆತ್ತಿ ನಡೆದುವು ಗಿರಿಯ | ಮಸ್ತಕವ ಕಾರ್ಮುಗಿಲು |
ಮುತ್ತುವಂದದಿ ಮಧುರೆಗೆ | ಪದಹುತಿಗೆ | ಕಿತ್ತೆದ್ದ ಧೂಳಿ ಮಸಗೆ |
ಗಗನವನು ಕತ್ತಲಿಸಿ ದೆಸೆಗಾಣದಾಗೆ || ಸಮರ ||೩೪೯||

ಭರಕೆ ಫಣಿಪತಿ ಕುಗ್ಗೆ | ಕರಿಕಮಠರಳಿವಳಿಯೆ |
ಧರಣಿ ಬೆಸಲಾದಂತೆ | ಶರಧಿ ಗಡಿಮಿಕ್ಕಂತೆ |
ಬರುತ ಕೋಟೆಯ ಕೆಡವಿತು | ಗುದ್ದಲಿಯ | ಕರದ ಬಲ ಕಡಿದೊಟ್ಟಿತು |
ಕೊಡಲಿಗರ | ನೆರವಿ ತರುಗಳ ಸೂರೆಹೋಯ್ತು || ಸಮರ ||೩೫೦||

ಹನುಮರಾವಿದು ಲಂಕೆ | ಯೆನುತ ಮನೆಮನೆಗಳನು |
ಅನಲಗಿತ್ತುರೆ ಕೇರಿ | ಯನು ಹೊಕ್ಕು ಬೊಬ್ಬಿರಿಯೆ |
ಜನಪದದ ಕಾವಲಿಗರು | ತರು ಬಲವ | ರನು ಕೈಯ್ಯ ಬಲಿದು ಖಳರು |
ಹೊಡೆದು ಕೃಷ್ಣನಿಗೆ ದೂರಿದನೆಂದರು || ಸಮರ ||೩೫೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭೂತಳಾಧಿಪ ಕೇಳು ಭಯದಿಂ | ದೂತರಾಗಳೆ ಪೋಗಿ ವೈರಿ |
ವ್ರಾತ ಬಂದುದನರುಹಿದರೆ ಶ್ರೀ | ನಾಥ ಕೇಳಿ ||೩೫೨||

ಮೂರನೆಯ ಸೂಳಿಂಗೆ ಪುನರಪಿ | ಸಾರಿಬಂದನೆ ಮಗಧ ಧುರಕೆ ವಿ |
ಚಾರ ಫಲಿಸಿತ್ತೆನುತ ಕೂಡಲೆ | ವಾರಿಜಾಕ್ಷ ||೩೫೩||

ಕರೆಸಿ ಯಾದವ ಸೈನಿಕರ ಹಲ | ಧರಸಹಿತ ಸಂಗರಕೆ ಪೊರಮಡ |
ಲೊರೆದರಾ ಯದುವೀರರೊಡೆಯನ | ಚರಣಕೆರಗಿ ||೩೫೪||

ರಾಗ ಕೇತಾರಗೌಳ ಝಂಪೆತಾಳ

ದೇವ ಚಿತ್ತೈಸು ವಚನ | ನೀ ಬಿಜಯ | ಗೈವನಿತು ಘನವೆ ಕದನ |
ದಾವಶಿಖಿಗಿದಿರೆ ಹಳುವ | ನೋಡೊಮ್ಮೆ | ಸೇವಕರ ಕೈ ಚಳಕವ ||೩೫೫||

ಹೋರುವೆವು ಸಮರಾಗ್ರದಿ | ರಿಪುಗಳಸು | ಹೀರುವೆವು ಭುಜಸತ್ವದಿ |
ಬೀರುವೆವು ವಿಕ್ರಮಗಳ | ಇರೆ ನಿನ್ನ | ಕಾರುಣ್ಯ ತೊಲಗದು ಛಲ ||೩೫೬||

ಹಿಂದೆ ಬಹುದೆಂದಪ್ಪಣೆ | ಕೈಕೊಂಡು | ಗಾಂದಿನಿಜ ಮುಖ್ಯರೊಡನೆ |
ಮುಂದೆ ನಡೆದಾರ್ದುಧನುವ | ಜೇವೊಡೆದು | ಸಂಧಿಸಲು ರಣರಂಗವ ||೩೫೭||

ವಾರ್ಧಕ

ಪುರವ ಹೊರವಂಟಸುರ ರಿಪು ರಾಮರನುವರಕೆ |
ಬರುತ ಶಂಖವ ಮೊಳಗಿ ಮತ್ತದಂತಿಗಳಂತೆ |
ಪರಬಲವ ಹರ್ಯಕ್ಷನಾದದಿಂದುರವಣಿಸುತೆಸೆದರಂಬುಧಿ ಮಧ್ಯದ ||
ವರಮಂದರಾದ್ರಿಯಂತದ ಕೇಳಿಬಂದವನು |
ಹರಿಯೆ ಕವಿಕವಿಯೆನುತ ಮುತ್ತಿದರು ದುಷ್ಟ ಭೂ |
ಪರು ಕಮಲ ಬಾಂಧವನನಭ್ರಗಳ್ಮುಸುಕುವಂದದಿ ಬಾಣ ವೃಷ್ಟಿಯಿಂದ ||೩೫೮||

ರಾಗ ಭೈರವಿ ತ್ರಿವುಡೆತಾಳ

ಮುತ್ತಿತಾಗ | ಹರಿಯನು | ಮುತ್ತಿತಾಗ  || ಪಲ್ಲವಿ ||

ಮುತ್ತಿತಾ ನೃಪಮೊತ್ತವಾಪುರು | ಷೋತ್ತಮನ ಬಿಡದೊತ್ತಿ ಹೊಸಮಸೆ |
ವೆತ್ತ ಶರದೊಳು ಮತ್ತೆ ಹರಿಶಂ | ಖೋತ್ತಮವ ಮೊಳಗುತ್ತ ಶಾರ್ಙ್ಗವ |
ನೆತ್ತಿ ಜೇವೊಡೆದಸ್ತ್ರ ಸುರಿಯಲು | ಕತ್ತಲೆಯ ಮುರಿದುತ್ತಪಿಸುವಾ |
ದಿತ್ಯ ನಂದದಿ ಮತ್ತ ಗಜಹಯ | ಪತ್ತಿರಥಗಳು ಸತ್ತ ಪರಿಯೇಂ
ಬಿತ್ತರಿಪೆನೂ | ಸೈನ್ಯದವಸ್ಥೆಯನ್ನು || ಮುತ್ತಿತಾಗ ||೩೫೯||

ಕುಲಿಶ ಹತ ಕುಲಗಿರಿಗಳೋ ಕೊಳು | ಗುಳಿದೊಳಡಗೆಡದಾನೆಗಳೊ ಶರ |
ದಳಿತ ಕಂಧರದಶ್ವನಿಚಯವೊ | ಹಳುವವೋ ಬಿರುಗಾಳಿ ಬೀಸಿದ |
ಬಲವೊ ಯೆನೆ ನುಗ್ಗಾಯ್ತು ಪರಬಲ | ವಿಳೆ ಹಗುರವಾಗಲ್ಕೆ ಕಂಡ |
ಗ್ಗಳೆಯ ಮಾಯಾವಿಗಳೂ ಮುನ್ನೂರ್ | ಖಳರು ಬೀಸಿದರಾಗ ಕೃಷ್ಣನ |
ಬಳಿಗೆ ಮಾಯ | ಕೇಳ್ ಶಶಿಕುಲದ ರಾಯ || ಮುತ್ತಿತಾಗ ||೩೬೦||

ಕವಿಸಿ ಮಾಯೆಯ ಪುಲಿಕರಡಿ ಸಿಂ | ಹವೆ ಮೊದಲ ಮೃಗಗಣವೆನಿಸಿ ದಾ |
ನವ ಸುಭಟರಾ ಗಜ ಹಯಾಳಿಯ | ಸವರುತಿರಲೀಕ್ಷಿಸುತ ಕರುಣಾ |
ರ್ಣವನು ವಿಜ್ಞಾನಾಸ್ತ್ರದಲಿ ಪರಿ | ಭವಿಸುತೆಚ್ಚಡೆ ಮುರಿದುದೊಂದೇ |
ನಿವಿಸದೊಳು ರಾಕ್ಷಸರ ಮೋಹರ | ತವಕೆ ಬೆದರುವುದುಂಟೆ ಸೂರಿಯ |
ನವನಿಪಾಲ | ಚೋದ್ಯದಿರವನು ಕೇಳ || ಮುತ್ತಿತಾಗ ||೩೬೧||

ವಾರ್ಧಕ

ಶರಹತಿಗೆ ಮಡಿದುರುಳ್ದಾನೆಗಳ ಸೇನೆಗಳ |
ಮುರಿದುಡಿದ ಖಳರ ಕೈಕಾಲುಗಳ ಸೀಳುಗಳ |
ಧುರರಂಗದೊಳು ಸಿಡಿವ ರುಂಡಗಳ ಮುಂಡಗಳ ರಥಹಯದ ತಂಡಗಳೊಳು ||
ನೊರೆರಕುತ ಹರಿಯುವ ಪ್ರವಾಹಗಳ ಊಹೆಗಳ |
ಲಿರದೆ ತೋರ್ಪತಿ ಭಯಂಕರವಾದ ವರಮೋದ |
ವಿರುತಿರ್ಪ ಗೃಧ್ರವೃಕ ಜಾತಗಳ ಭೂತಗಳ ಕೂಟದಿಂ ಕಣವಿರ್ದುದು ||೩೬೨||

ಭಾಮಿನಿ

ಭೂಪ ಕೇಳಿಂತಸುರರಳಿಯಲು |
ಕೋಪದಿಂ ಬಾಣನ ಸಚಿವರಂ |
ದಾ ಪರ‍್ಪಾತರನೆಡೆಗೆ ಹಾಯ್ದೈ ತರಲು ಕೃತವರ್ಮ ||
ಕೂಪಕರ್ಣನ ತಡೆದು ಬೇಗದಿ |
ಚಾಪವನು ಜೇವೊಡೆಯೆ ಕಾಣುತ
ತಾಪಿರಿದು ರೋಷದಲಿ ಸರಳನು ತೂಗುತಿಂತೆಂದ ||೩೬೩||

ರಾಗ ಮಾರವಿ ಏಕತಾಳ

ನೀನಾರೆಲವೋ ನರಗುರಿ ಸೆಣಸುವೆ | ದಾನವರೆಮ್ಮೊಡನೆ ||
ಪ್ರಾಣದೊಳೈದು ವೊಡಭಿಲಾಷೆಯಿರಲ್ | ಮಾಣೆನ್ನನುವರವ ||೩೬೪||

ಕಾದುವ ಭಟನಾರಾದೊಡೆ ನಿನಗೇಂ | ಪೋದುದು ಬಾಹುಜರು ||
ಮೈದೆಗೆವರೆ ಬಿಡು ಕೂರ್ಗಣೆಗಳ ನೀ | ಸಾಧಿಸು ಕೈಗುಣವ ||೩೬೫||

ಫಡ ಬಾಯಿಗೆ ಬಂದಂದದಿ ಗಳಹುತ | ಕೆಡದಿರು ಪೊಡವಿಪರ ||
ಕಡು ನೀಚತ್ವದಿ ಕಳ್ಗೊಲೆಗೊಂಡಾ | ಹುಡುಗರ ತೋರಿಕೊಡು ||೩೬೬||

ತೊರೆಯನು ದಾಟಲ್ಕರಿಯದ ಹೇಡಿಗೆ | ಶರಧಿಯ ಮಾತೇಕ ||
ಮರಿಸಿಂಹವು ಗಜದುರುಬೆಗೆ ಸೆಡೆವುದೆ | ಪರಿಕಿಸಿ ಪೋಗೆನ್ನ ||೩೬೭||

ಎಂದೆನೆ ನಿಶಿತಾಸ್ತ್ರಂಗಳ ಸುರಿಯಲು | ಕುಂದದೆ ಮಂತ್ರೀಶ ||
ಒಂದುಳಿಯದೆ ಕೃತವರ್ಮ ತರಿದು ತಂ | ಸಂದಿಸೆ ಪೊಸ ಸರಳ ||೩೬೮||

ಕಂದ

ಕೃತವರ್ಮಕನೆಸುಗೆಯೊಳಾ |
ಯತಿಗಿಡೆ ಸಚಿವಂ ಬಳಿಕ್ಕಲಾ ಕುಂಭಾಂಡಂ ||
ಅತಿರೋಷದಿ ಬರೆ ಸತ್ಯಕ |
ಸುತ ರಥವಂ ತಡೆಯೆ ನೋಡಿ ಮಾತಾಡಿಸಿದಂ ||೩೬೯||

ರಾಗ ತುಜಾವಂತು ಮಟ್ಟೆತಾಳ

ಆರೆಲೋ ಪ್ರಮತ್ತ ಯೋಧನೆ  || ಪಲ್ಲವಿ ||

ಆರು ನೀನು ಹುಡುಗ ನೋಡೆ | ಸಾರಿ ಬಂದು ನಿಮ್ಮ ಬಲವ |
ಸೂರೆಗೊಂಬೆ ಭಳಿರೆ ಜನಕ | ನಾರು ನಾಮಧೇಯವೇನು |
ವೀರನಹಡೆ ಬೇಗ ಪೇಳೆಲಾ | ಜೀವಿಪರೆ ತೊಲಗು | ದೂರ ಸಮರವನ್ನು ಬಿಟ್ಟೆಲಾ |
ಇಂತೆಂಬ ಯೆನ್ನ | ವಾರತೆಯನು ಪೇಳ್ವೆ ಕೇಳೆಲಾ || ಆರೆಲೋ ||೩೭೦||

ಗಂಡುಗಲಿ ಬಲೀಂದ್ರ ತನುಜ | ರುಂಡಮಾಲ ಶರಣದೈತ್ಯ |
ಮಂಡಲಾಧಿನಾಥ ಮಲೆವ | ತುಂಡು ದೊರೆಗಳೆದೆಯ ಬಾಣ |
ಚಂಡ ಬಾಣ ಸಚಿವ ವಾರಿಧಿ | ಸುಧಾಂಶು ಸಮಕುಂ | ಭಾಂಡ ತಾನು ಸೆಣಸಲಸ್ತ್ರದಿ |
ಸದೆಬಡಿದು ನಿನ್ನ | ಹಿಂಡುಗಣಕೆ ಕೊಡುವೆ ನಿಮಿಷದಿ || ಆರೆಲೋ ||೩೭೧||

ಬಿನುಗು ಸಚಿವ ಕೇಳು ಖಳವಿ | ಪಿನ ಕುಠಾರ ಸಾಧುಕಮಲ |
ವನ ಪತಂಗ ವಾಸುದೇವ | ಸನಕ ಮುಖ್ಯವಿನುತ ಸಗುಣ |
ತ್ರಿಣಯ ಮಿತ್ರ ನೀಲಗಾತ್ರನ | ಕೇವಲ ಭಕ್ತ | ಶಿನಿಯ ಮೋಹದಣುಗನಾ ಕಣಾ |
ಈ ರೀತಿ ಸಾವ | ತನಕ ಬಗುಳುತಿಹುದೆ ತವ ಗುಣ || ಆರೆಲೋ ||೩೭೨||

ರಾಗ ಶಂಕರಾಭರಣ ಅಷ್ಟತಾಳ

ಸಾಕು ಸಾಕು ಬಾಯ ಬೊಮ್ಮ | ವೇಕೆ ಹಿಂದೆ ರಣದಿ ನೃಪರ |
ನೀಕವನ್ನು ಗೆಲಿದ ಹಮ್ಮ | ಭೀಕರಿಸುವೆನು ||
ಭೀಕರಿಪುದು ಮತ್ತೆ ನಿನ್ನ | ನಾ ಕೃತಾಂತನೆಡೆಗೆ ಪೋದ |
ನೇಕ ಬಲಕಧೀಶನಾಗಿ | ಜೋಕೆಗೆಯ್ವೆನು ||೩೭೩||

ಒದರ ಬೇಡವೆಲವೊ ಧೂರ್ತ | ಯದುಕುಲಜರು ಕ್ಷತ್ರಿಯರೊಳು |
ಅಧಮರವರಿಗಳಿವ ಕಾಲ | ಒದಗಿ ತಿಂದಿಗೆ ||
ಒದಗಿತೆಂಬುದಹುದು ಕೃಷ್ಣ | ಮುದದಿ ಜನಿಸೆ ಸುಪ್ರಸಿದ್ಧಿ |
ಯದುಕುಲಕ್ಕೆ ಪ್ರಳಯಕಾಲ | ಮದಮುಖರಿಗೆ  ||೩೭೪||

ಮೂಗಿಲಿಗಳ ಪುರಕೆ ಸೊಟ್ಟ | ಮೂಗಿನಾತ ನರಸನೆಂಬ |
ಹಾಗೆ ನಿಮ್ಮ ಮೂರ್ಖಕುಲಕೆ | ಆಗನ್ನಗತಕಿ ||
ಆಗದಾತನಿರವು ನಿಮಗೆ | ಗೂಗೆ ರವಿಯ ಕಾಣದು ನಿ |
ರ್ಭಾಗಧೇಯ ನರಿವನೆ ಕಾ | ಲ್ದಾಗಿದ ನಿಧಿಯ ||೩೭೫||

ಹೊಳೆಗೆ ಬುರುಡೆಯನ್ನು ನೆಚ್ಚಿ | ಜಳಕಕಿಳಿಯೆ ಮುಳುಗದಿಹರೆ |
ಇಳೆಯಧೀಶ ಮಗಧ ನಹಿತ | ಬಳಸಿ ಕೆಟ್ಟಿರಿ ||
ಬಳಸಿ ಕೆಟ್ಟುದಿಲ್ಲ ನಾವು | ಖಳರ ಕೊಲಿಸಿ ಧರೆಯ ಭಾರ |
ಕಳೆವನಂಬುಜಾಕ್ಷ ಮಗಧ | ಮುಳಿದ ನೆವದೊಳು ||೩೭೬||

ರಾಗ ಭೈರವಿ ಏಕತಾಳ

ಕೂಗದಿರೆಲೊ ಸಾತ್ಯಕಿಯೇ | ಕೈ | ಯಾಗದು ಕೇಳ್ ನರಗುರಿಯೆ ||
ಸಾಗಿದ ನೃಪಬಲವಲ್ಲ | ದನು | ಜಾಗಮವಿದು ಲೇಸಿಲ್ಲ ||೩೭೭||

ನರನಾಥರ ಬಲತೀರೆ | ದಿತಿ | ಜರನೊರಸಲು ಕರತಾರೆ |
ಸರುವರಿಗಂತಕ ಮಗಧ | ನೀ | ನರಿತಿದನೈದು ಮದಾಂಧ ||೩೭೮||

ಹುಡುಗನೆನಿಪ ದಯೆಯಿಂದ | ಹಿತ | ನುಡಿಯಲೊಡಂಬಡೆ ಮುಗುದ |
ತೊಡುಮಾರ್ಗಣವನೆನುತ್ತ | ಖಳ | ಕಿಡಿಯುಗುಳುತ ಕಣ್ಣೊಳೆ ತಾ ||೩೭೯||

ಮೂರು ಮಹಾಸ್ತ್ರಂಗಳನು | ಯದು | ವೀರಗೆ ಬಿಡಲದನಿವನು |
ಭೋರನೆಯೆರಡಂ ತರಿದ | ಒಂ | ದೇರಲೆದಗೆ ನೆಲಹಿಡಿದ ||೩೮೦||

ಕಂದ

ಅರೆ ನಿಮಿಷಂ ನಸುಮೂರ್ಛೆಯೊ |
ಳುರೆ ಹ | ಮ್ಮೈಸುತಲನಂತನೊಲವಿನೊಳಂ ಚೇ ||
ತರಿಸುತ ಸಾತ್ಯಕಿ ಮಂತ್ರಿಯ |
ಜರೆದಿಂತೆಂದಂ ಕನಲ್ದು ತೂಗುತ್ತಂಬಂ ||೩೮೧||

ರಾಗ ಕೇತಾರಗೌಳ ಅಷ್ಟತಾಳ

ಲೇಸು ಲೇಸೆಲವೊ ಮಂ | ತ್ರೀಶ ನಾನೊಮ್ಮೆ ಹ | ಮ್ಮೈಸಿದೆನೆಂದೆನುತ ||
ರಾಶಿ ಗರ್ವವ ಹೊಂದ | ದೀಶರದೆಸಕವ | ನೀ ಸಲೆ ನೋಡೆನುತ ||೩೮೨||

ನಿಶಿತ ಕಳಂಬಗ | ಳೆಸಲು ಕುಂಭಾಂಡಕ | ನಸವಸದಿಂ ಕಡಿಯೆ ||
ಮಸೆದ ಮಂತ್ರಾಸ್ತ್ರದ | ವಿಸರವ ಹೂಡಿದ | ರಸುರ ಮಧ್ಯದಿ ತುಂಡಿಸೆ ||೩೮೩||

ಮುಳಿದು ಶಿನೇಯ ಕೈ | ಚಳಕದಿ ಬಾಣದ | ಮಳೆಗರೆದಾ ಮಂತ್ರಿಯ ||
ಸಲೆ ಸಂದು ಸಂದುಗಳ್ | ಕಳಚುವಂತೆಚ್ಚಡೆ | ನೆಲಕೊರಗಿದ ಸಚಿವ ||೩೮೪||

ಭಾಮಿನಿ

ಬಿದ್ದ ಸಚಿವನು ರಕ್ತಕಾರುತ |
ಲೊಯ್ದುನಾತನ ರಥದಿ ಸಾರಥಿ |
ಹೊದ್ದಿದರು ಮಿಕ್ಕಸುರರಂತಕನೆಡೆಯ ಕೃತವರ್ಮ ||
ಗೆದ್ದಡಾಗಳೆ ಕೂಪಕರ್ಣನ |
ಬಳ್ದ ದೈತ್ಯರು ಕೂಡಿ ಭಯದಿಂ |
ಹಾಯ್ದರೀ ದಂದುಗವು ನಮಗೇಕೆಂದು ನಿಜಪುರಕೆ ||೩೮೫||

ಭೋಗಷಟ್ಪದಿ

ಅತ್ತಲನಕ ಮಗಧನೆದೆಯು |
ಹೊತ್ತೆ ಮೊದಲ ಭಂಗದಿಂದ |
ಸುತ್ತಲಿರ್ಪ ಬಲವ ಕೊಲುವ ಸೀರ ಪಾಣಿಯ ||
ಕೃತ್ಯವನ್ನು ಕಂಡು ದೃಷ್ಟಿ |
ನೆತ್ತರಂತೆ ಮಸಗೆ ವಿಲಯ |
ಮೃತ್ಯುವೆನಲು ಕೆರಳಿ ರಥವ ಚಾಚಿ ನುಡಿದನು ||೩೮೬||

ರಾಗ ಕಾಂಭೋಜಿ ತ್ವರಿತ ಝಂಪೆತಾಳ

ಭಳಿಭಳಿರೆ ಹಿಡಿಬೇಗ | ಬಲನೆ ನಿನ್ನಯ ಮುಸಲ | ಹಲಗಳನು ವೈರಿ ಭಂಜನದ ||
ಬಲುಹ ತೋರಿಸು ನಿನ್ನ | ತಲೆಗೆ ಗದೆಯನು ತೊಡದೆ | ಕಲಿತನಕೆ ತೆರಪಿಲ್ಲವೆನ್ನ ||೩೮೭||

ಲೇಸೆನ್ನ ಬಾಹುಗಳಿ | ಗೇಸು ಜನ್ಮದ ಪುಣ್ಯ | ರಾಸಿಯೋ ಫಲಿಸಿತ್ತು ಮಗಧ ||
ಸಾಸಿಗನು ದೊರೆತೆ ನೀ | ನೀ ಸಮರದೊಳಗೆನುತ | ರೋಷದಿಂದುಗಿದನಾಯುಧವ ||೩೮೮||

ಒಂದು ಬಾರಿಗೆ ಗೆಲ್ದಿ | ರೆಂದು ಬರಲೆರಡನೆಗೆ | ಸಂಧಿಸುತ ಮೋಸದಿಂದಿರುಳು ||
ಕೊಂದು ನಿದ್ರಿಸುವವರ | ದಂದುಗಮನಿತ್ತೆಲವೊ | ಹಂದೆ ಮೆರೆದಿರಿ ಕಳ್ಳತನದಿ ||೩೮೯||

ಹೇಡಿ ನೀನೇಕೆ ಮೊದ | ಲೋಡಿ ಬದುಕಿದೆ ನಿನ್ನ | ಕೂಡಿದರಸರ ಕೊಲಿಸುತಧಮ ||
ರೂಢಿಪರಬಿರುದೇಕೆ | ಬೀಡಕೊಡಿಸುವೆ ಯಮನ | ನಾಡೊಳಗೆ ಪೋದವರ ಬಳಿಯ ||೩೯೦||

ಹಾರದಿರು ಮದವೇರಿ | ಕಾರೊಂದಕೊಂದು ಕೊಡೆ | ಹಾರಿಸಲು ಸಲ್ಲದೆಂದೆನುತ ||
ಚೋರರಿರ ನಿಮ್ಮ ಕೌ | ಮಾರ ಮತಿಗಿತ್ತೆದಯ | ಸಾರಿದೆನು ಕೊಡಬೇಡ ತಲೆಯ ||೩೯೧||

ಆದಡೀ ಕ್ಷಣ ನೀನು | ಕೈದುವಿಡಿ ನಿನ್ನರಸಿ | ಯೈದೆ ತನಕವಸಾನವನ್ನು ||
ಗೈದುಕೊಡುವೆನೆನುತ್ತ | ಕ್ರೋಧದಿಂ ತಿರುಗಿಸುತ | ಹೊಯ್ದ ಮಗಧನ ಹಲದಿ ಬಲನು ||೩೯೨||

ಭಾಮಿನಿ

ಅರಸ ಕೇಳಾ ಮುಸಲ ಹರಿಯೊಳು |
ಧರಣಿಪಾಲ ಗಿರಿವ್ರಜನ ರಥ |
ತುರಗ ಸಾರಥಿ ಛತ್ರಧಾರಿಗಳಳಿದರಾಕ್ಷಣದಿ ||
ಹರಣವುಳಿಯಲು ಕವಚ ಸೀಸಕ |
ವಿರದೆ ಕುಪ್ಪಳಿಸಲ್ಕೆ ಖತಿಯಿಂ |
ವಿರಥನಡಹಾಯ್ದೆಂದ ಗದೆಯಂ ಜಡಿದು ಹಲಧರಗೆ ||೩೯೩||

ರಾಗ ಭೈರವಿ ಏಕತಾಳ

ಧೀರುರೆ ರಥವಿಲ್ಲೆನುತ | ಪುಟ | ವೇರದಿರೆಲವೋ ಧೂರ್ತ |
ತೇರಿನ ಹಂಗೇತಕ್ಕ | ಕೈ | ಮೀರಲು ತಡೆವುದು ಜೋಕೆ ||೩೯೪||

ಕಡೆಯೆನುತಲೆ ಮಾಗಧನು | ತಿರು | ಹಿಡೆಗದೆಯನು ಹಲಧರನು |
ತುಡುಕಿದನೆಡಗೆಯ್ಯಿಂದ | ಅವ | ಗಡಿ ಸುತಲೇನಿಹುದೆಂದ ||೩೯೫||

ರಪಣಗಳೇಕೆಲೊ ಹೂಹೆ | ಭುಜ | ರಪಣವು ಭಟಿಗಾಜಿಗಿಹೆ ||
ನಿಪುಣನಹಡೆ ನಿಲು ನಿಲ್ಲು | ನಾ | ತೃಪುತಿಗೊಳಿಪೆ ಮುಷ್ಟಿಯೊಳು ||೩೯೬||

ಎನುತ ಗಿರಿವ್ರಜ ಭುಜವ | ಹೊ | ಯ್ದನು ವರಕಿದಿರಾಗಲಿವ |
ಕಣಕಿಳಿದನು ರಥ ಬಿಟ್ಟು | ಭುಜ | ವನು ತಟ್ಟುತ ಹಲವಿಟ್ಟು ||೩೯೭||

ರಾಗ ಸುರುಟಿ ಮಟ್ಟೆತಾಳ

ಕಾದಿದರವರು | ಮಾಗಧ ಬಲರು | ಕಾದಿದರವರು  || ಪಲ್ಲವಿ ||

ನೀಲಾಂಬರನಿಲು ನಿನ್ನ | ತೋಳಿನ ಬಲುಹನ್ನು |
ಕಾಳೆಗದೊಳು ತೋರೆನುತಲೆ | ತಾಳುತ ಕಿನಿಸನ್ನು || ಕಾದಿದ ||೩೯೮||

ಗುದ್ದಿದ ಮಾಗಧನಾತನ | ಹೊದ್ಯೆರಗಿದ ಬಲನು ||
ಬಿದ್ದರು ನೆಲಕಿತ್ತಟ್ಟಿನ | ಯುದ್ಧವಿಶಾರದರು || ಕಾದಿದ ||೩೯೯||

ಮಾಗಧನನು ಬೀಳಿಸಿದರೆ | ನೇಗಿಲ ಗೆಯ್ಯನು ತಾ |
ನಾಗಲೆ ಮೇಲಕೆ ನೆಗೆದನು | ರೇಗಿ ಜರಾಸಂಧ || ಕಾದಿದ ||೪೦೦||

ಭಾಮಿನಿ

ಏಳುತೆತ್ತಿದರಾಕ್ಷಣದಿ ಕ |
ಟ್ಟಾಳುಗಳು ಗದೆ ಮುಸಲಗಳನೇ |
ವೇಳುವೆನು ಘಾತಿಸಿದರನ್ಯೋನ್ಯದಿ ಮಹಾಭಟರು ||
ಶೈಲವೆರಡರ ಪೋಲ್ವ ಬಲನರ |
ಪಾಲಕರ ಹತಿ ಸಿಡಿಲಿನಂತಿರೆ |
ಕಾಳೆಗವನಚ್ಚರಿಯೊಳೀಕ್ಷಿಸುತಿರ್ದುದಮರಗಣ ||೪೦೧||

ರಾಗ ಶಂಕರಾಭರಣ ಮಟ್ಟೆತಾಳ

ಉಡುಗಣೇಶ ಕುಲಜ ಕೇಳು | ಕಡುವಿರೋಧದಿ ||
ಹೊಡೆದು ಕೊಂಡರಾಗ ಹಲಿಯು | ಬಿಡದೆ ಮುಸಲದಿ ||
ಪೊಡವಿಪಾಲನುರವ ಹೆಗಲ | ಪೊಡೆಯ ನುಡಿಯನು |
ತೊಡೆಯ ನಾಭಿ ಜಂಘೆಗಳನು | ಜಡಿದು ಹೊಯ್ದನು ||೪೦೨||

ಕೆರಳಿ ಹಲಿಯನೆದೆಯ ಪೆಗಲ | ಶಿರವ ಜಠರವ |
ಭರದೊಳಾತನೆರಗಿದಂತೆ | ಸರುವ ಭಾಗವ |
ಧರಣಿಪಾಲ ಹೊಡೆಯಲಿವರ | ಧುರಭಯಂಕರ |
ತೆರದಿ ಕಂಡುದೆನಿತೊ ಶೌರ್ಯ | ಸಾರವಿಬ್ಬರ ||೪೦೩||

ನೆಗ್ಗಿತವನಿ ಭಟರ ಹತಿಯ | ಲಗ್ಗೆಗಮರರು ||
ಹುಗ್ಗಿದರು ಫಣೀಂದ್ರ ವೇಣು | ದಿಗ್ಗಜಂಗಳು |
ಕುಗ್ಗಿ ತಲ್ಲಣಿಸೆ ಕೆನ್ನೀರ | ಹೆಗ್ಗಡಲಿನೊಳು |
ಬಗ್ಗದೊವಲಗಣವು ಮೀಯ | ಲಗ್ಗಮುದದೊಳು ||೪೦೪||

ರಾಗ ಕೇತಾರಗೌಳ ಅಷ್ಟತಾಳ

ಕೇಳೆಲೊ ಮಗಧ ನೃ | ಪಾಲಾಧಮನೆ ನಿನ್ನ | ಬಾಳುವೆ ಕೊನೆಯಾಯಿತು ||
ಪೇಳಿ ಕಳುಹು ಬಂಧು | ಚಾಲಕಂತಿಮ ಸುದ್ದಿ | ಬೀಳಮುನ್ನೆನಲೆಮಂದನು ||೪೦೫||

ಗಳಹದಿರೆಲೊ ನಿನ್ನ | ಬಲುಹ ಕುಂದಿಸುತ ನಿ | ರ್ಬಲನಾಗಿಸುತೆ ಭೂಪರ |
ಗೆಲಿದ ಗರುವ ರೋಗ | ವಿಳಿಸು ಮರ್ದೀವೆ | ತಿಳಿದು ನಿಲ್ಲೆಂದೆನುತ ||೪೦೬||

ಪೊಡವಿಪ ಮುಷ್ಟಿಯಿಂ | ದಿಡೆ ಗಣಿಸದೆ ರಾಮ | ನಡೆಸಿ ಜರಾಸಂಧನ ||
ಘಡ ಬೀಳೆಂದೆರಗುತ್ತ | ಹಿಡಿದು ಮುಂದಲೆಯನು | ನುಡಿದಪಚಾರಿಸುತ ||೪೦೭||

ರಾಗ ದೇಶಿ ಅಷ್ಟತಾಳ

ಏನೆಲವೆಲೊ ಮಗಧ | ಈ ಪರಿ ಸೋತು | ದೇನೆಲವೆಲೊ ಮಗಧ  || ಪಲ್ಲವಿ ||

ಮಾನನಿಧಿಯು ನಿನಗೀ ನಿಕೃಷ್ಟಾವಸ್ಥೆ || ಏನೆಲವೆಲೊ || ಅನು ಪಲ್ಲವಿ ||

ಭೂರಿ ಬಲಾಢ್ಯ ತಾನೆಂದೆ | ಸೈನ್ಯ | ವಾರಿಧಿಯನು ಕರತಂದೆ |
ಮೂರು ಸೂಳಿಗೆ ನಮ್ಮ | ಹೋರಾಟಕೆಂದು ಮ | ತ್ತೀ ರೀತಿ ಸಿಲುಕುವದೆ |
ಬೆಂಬಲಕೀಗ | ಯಾರಾದರೂ ಬಪ್ಪರೇ | ಕೊರಳು ಕೊಯ್ಯ | ವಾರವನಚ್ಚುವರೆ ||
ಏನೆಲವೆಲೊ ||೪೦೮||

ಹರನ ವರವ ನೀನು ಪಡೆದೆ | ಸರ್ವ | ದೊರೆ ಮಕ್ಕಳನು ಸೆರೆಗೆಯ್ದೆ |
ವರ ಚೈದ್ಯ ಬಾಣರು | ಪರಮ ಮಿತ್ರರು ನಿನ್ನ | ಸರಿಯಾರು ಭೂತಳದಿ |
ಏಕಚ್ಛತ್ರದರಸು ನೀನೀ ವೇಳ್ಯದಿ | ಪೇಳುವುದೇನ | ಚ್ಚರಿ ನಿನಗಾದ ವಿಧಿ || ಏನೆಲ ||೪೦೯||

ಕುಲಹೀನರಾವು ಗೋವಳರು | ನೀವು | ಬಲವುಳ್ಳ ಬಾಹುಜೋತ್ತಮರು |
ಸಲೆ ನಮ್ಮೊಡನೆ ಸೋತು | ತಲೆಬಾಗಿ ಮನೆವೊಕ್ಕು | ಲಲನೆಯರಿಗೆ ಮೊಗವ | ತೋರುವೆಯೆಂತು | ಖಳ ನಿನಗುಚಿತ ಸಾವ | ಹರಿಬವೆಂದು ಬಲನೆಗಹಿದ ಹಲವ ||  ಏನಿಲವೆಲೋ ||೪೧೦||

ಭಾಮಿನಿ

ಗೋಮಿನಿಪ ಕೇಳಾಕ್ಷಣದೊಳಾ |
ವ್ಯೋಮದಲಿ ನೇಗಿಲನು ತೆಗೆತೆಗೆ |
ರಾಮ ನಿನ್ನೊಳು ಮಡಿವನಲ್ಲೀ ವಿಗಡನದರಿಂದ ||
ಸೌಮನಸ್ಯದಿ ನಡೆ ಮನೆಗೆ ಸಂ |
ಗ್ರಾಮದೊಳು ಜಯವಾಯ್ತು ನಿನಗೆಂ |
ದಾ ಮಹಾಸಿಡಿಲಂತೆ ನುಡಿದಡಗಿತು ನಭೋವಚನ ||೪೧೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಿಟ್ಟನದ ಕೇಳುತ್ತ ಮಗಧನ | ಕೊಟ್ಟೆನಸುದಾನವನು ನೀನಿಂ |
ಬಿಟ್ಟು ಕೋ ಬುದ್ಧಿಯನು ನಡೆ ನಿಜ | ಪಟ್ಟಣಕ್ಕೆ ||೪೧೨||

ಎನುತ ತಿರುಗಿದನಿತ್ತ ಹಲಧರ | ಜನಪರನು ಪರಿಭವಿಸಿ ಭೀಕರ |
ಕಣವನುಳಿದವನೀಶರಾಚೆಯೊ | ಳನುವರದೊಳು ||೪೧೩||

ಜಾತಭಂಗದ ಭರದಿ ಮಗಧ ಸ | ಮೇತ ಹಾಯ್ದರು ನಗರಕಲ್ಪ ಪ |
ದಾತಿಯಲಿ ಸಂತಪಿಸುತಲೆ ಪರಿ | ಪಾತಬಲರು ||೪೧೪||

ಅತ್ತಲಸುರಾರಾತಿ ವೈರಿ ಜ | ಯೋತ್ತರದ ಸಂತೋಷದಿಂದೂ |
ದುತ್ತ ಶಂಖವ ಯಾದವರ ಕೂ | ಡುತ್ತ ಬಳಿಕ ||೪೧೫||

ಸಮರರಂಗವ ದಾಟಿ ಬಲು ಸಂ | ಭ್ರಮದಿ ನಗರವ ಪೊಕ್ಕರಭ್ರದೊ |
ಳಮರರಬ್ಜಜಹರರು ಜಯವೆನೆ | ಸುಮವ ಸುರಿಸಿ ||೪೧೬||

ಭಾಮಿನಿ

ಪುರವನಿತೆಯರು ಮುದದಿ ಕೃಷ್ಣನ |
ನೆರೆದು ನೋಡಲು ರಥವನಿಳಿಯುತ |
ಕರುಣವಾರಿಧಿಯಿಕ್ಕೆಲದಿ ಬಹ ಯಾದವರ ಕೂಡೆ ||
ಅರಮನೆಯ ಸೇರ್ದಲ್ಲಿ ಹರಿಹರ |
ಧರಸಹಿತ ಹರಿಪೀಠದೊಳಗೆಸೆ
ದಿರಲು ನಾರೀಮಣಿಯರೆತ್ತಿದರಾರತಿಯನೊಲಿದು ||೪೧೭||

ರಾಗ ಸುರುಟಿ ಆದಿತಾಳ

ಶ್ರೀರಾಮರಮಗೆ | ಧಾರಿಣಿ | ಭಾರ ನಿವಾರಣೆಗೆ |
ನೀರದಗಾತ್ರಗೆ | ಶೌರಿಗೆ ಖಳ ಕಂ |
ಸಾರಿಗೆ ನತವೃಂ | ದಾರಕ ಕುಜಗೆ ||
ವಾರಿಜದಾರತಿಯ ಬೆಳಗಿರೆ ||೪೧೮||

ಸಿಂಧುರ ವರದನಿಗೆ | ಸುರನರ | ವಂದಿತ ಚರಣನಿಗೆ |
ಚಂದದಿ ಶರಣರ | ವೃಂದವ ಕಾವ ಮು |
ಕುಂದಗೆ ನಿತ್ಯಾ | ನಂದಗೆ ಸತಿಯರು ||
ಕುಂದಣದಾರತಿಯ ಬೆಳಗಿದರು ||೪೧೯||

ರಾಮಗೆ ಕೃಷ್ಣನಿಗೆ | ಮಾಗಧ | ಭೀಮಮಹಾಭುಜಗೆ |
ತಾಮರಸಾಕ್ಷಗೆ | ಕಾಮಿತವೀವಗೆ |
ಸಾಮಜ ಗಮನದ | ಶ್ಯಾಮೆಯರೆಲ್ಲರು ||
ಪ್ರೇಮದೊಳಾರತಿಯ ಬೆಳಗಿರೆ ||೪೨೦||

ಭಾಮಿನಿ

ಗಜಪುರಾಧಿಪ ಲಾಲಿಸಿಂತಾ |
ಸುಜನ ಹಿತ ವಿಗ್ರಹರು ಖಳ ಭೂ |
ಭುಜರ ಕಟಕವ ಸದೆದು ವಸುಧೆಯ ಭಾರವನು ಕಳೆದು ||
ಭಜಿಪ ತನ್ನೇಕಾಂತ ಸಾಧು |
ವ್ರಜವ ರಕ್ಷಿಸುತಲಿ ಮಧುರೆಯೊಳು |
ನಿಜ ವಿನೋದದೊಳಿದ್ದರಾ ನಿತ್ಯಾತ್ಮ ಹಲಧರರು ||೪೨೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತೆಸೆವ ಸತ್ಕಥೆಯ ಗೋಪೀ | ಕಾಂತನೊಲವಿಂ ಶುಕ ಮುನೀಂದ್ರನು |
ದಂತಿಪುರ ಪತಿಗುಸುರೆ ಕೇಳ್ದತಿ | ಸಂತಸದೊಳು ||೪೨೨||

ಜಗದಧೀಶನ ಮನುಜಲೀಲೆಯ | ಪೊಗಳಲಸದಳವೆನುತ ಕೀರ್ತಿಸಿ |
ನಗಧರನ ಭೂಪಾಲನಿರ್ದನು | ಮಿಗೆ ಸುಖದೊಳು ||೪೨೩||

ಶೈಲಜಾರ್ಧ ಶರೀರನಹ ಪೆರ | ಡಾಲ ವುದನೇಶ್ವರನ ದಾಸ ಸು |
ಶೀಲ ಸದ್ಗುಣ ವೆಂಕಟಾಚಲ | ಬಾಲಕೃಷ್ಣ ||೪೨೪||

ಮಹಿತಜನ ಸಂಸ್ಕೃತ ಸುವಿದ್ಯಾ | ಗೃಹದ ಕನ್ನಡದೋಜನಾನೀ |
ಯಹಿಶಯನ ಕಥೆಯಿದನು ಪೇಳಿದೆ | ಮಹಿಗೊರಲ್ದು ||೪೨೫||

ಯಕ್ಷಗಾನದಿ ತಪ್ಪಿರಲ್ಕೆ ವಿ | ಚಕ್ಷಣರು ಸರಿಗೊಳಿಸಿ ನೋಳ್ಪುದು |
ಪೇಕ್ಷಿಸದೆ ಗುಣವನೆ ಸದಾ ಹರಿ | ರಕ್ಷಿಸುವನು ||೪೩೬||

ಭಾಮಿನಿ

ಶಾಲಿವಾಹನ ಶಕದ ನಭ ನಿಗ |
ಮಾಳಿ ದಿಕ್ಚಂದ್ರಮರ ಸಂಖ್ಯೆಯ |
ಕಾಲಯುಕ್ತಿಯ ವತ್ಸರದೊಳಾಷಾಢ ಮಾಸದಲಿ ||
ನೀಲಪಕ್ಷದ್ವಾದಶಿಯೊಳಿದ |
ಪೇಳಿ ಮುಗಿಸಿದೆ ಶಿವದಯದಿ ಹರಿ |
ಲೀಲೆಯನು ಪೊರೆಗನವರತ ಸಜ್ಜನರ ನಿತ್ಯಾತ್ಮ ||೪೨೭||

ರಾಗ ಭೂಪಾಳಿ ತ್ರಿವುಡೆತಾಳ

ಮಂಗಲಂ ಜಯ ಮಂಗಲಂ ಶುಭ | ಮಂಗಲಂ ನಿತ್ಯಾತ್ಮಗೆ ||
ಮಂಗಲಂ ಜಯ ಮಂಗಲಂ ಶುಭ | ಮಂಗಲಂ ಸರ್ವಾತ್ಮಗೆ  || ಪಲ್ಲವಿ ||

ರಂಗ ಕರುಣಾಪಾಂಗ ಖಳನೃಪ | ಭಂಗ ಜಲದನಿಭಾಂಗಗೆ ||
ತುಂಗಭುಜ ಸತ್ಸಂಗ ವರ ಗೋ | ಪಾಂಗನಾಳಿ ಭುಜಂಗಗೆ || ಮಂಗಲಂ || ||೪೨೮||

ನಂದ ಹೃದಯಾನಂದ ವರ್ಧನ | ಇಂದಿರೇಶ ಮುಕುಂದಗೆ ||
ಸುಂದರಾಂಬುಜ ಕಂದಸುರ ನರ | ವಂದಿತಾಂಘ್ರಿ ದ್ವಂದ್ವಗೆ || ಮಂಗಲಂ ||೪೨೯||

ಈಶ ಸಜ್ಜನಪೋಷ ಹಿಮಗಿರಿ | ಜೇಶ ಪನ್ನಗ ಭೂಷಗೆ ||
ಕೇಶವಾಪ್ತ ಸುರೇಶನುತ ನಭ | ಕೇಶ ಶ್ರೀ ಉದನೇಶಗೆ || ಮಂಗಲಂ ||೪೩೦||

* * *