ಕಂದ

ಕ್ಷೋಣಿಪ ಕೇಳೀ ತೆರನಂ |
ಕಾಣುತ್ತಾ ಪೊಳಲಕಾಪಿನವರತಿ ಭಯದಿಂ |
ದಾನವ ಹರನೆಡೆಗೆಯ್ದುತ |
ಮಾಣದೆ ಪದಕೆರಗಿ ಬಿನ್ನವಿಸಿದರು ಹದನಂ ||೧೮೪||

ರಾಗ ಸಾರಂಗ ಅಷ್ಟತಾಳ

ಪಾಲಿಸು ಶ್ರೀ ಗೋಪಾಲ | ವೃಂದಾವನ | ಲೀಲ ಕೃಪಾಲವಾಲ |
ಲಾಲಿಪುದೆಮ್ಮ ಸು | ಶೀಲ ಬಿನ್ನಪವ ಭೂ |
ಲೋಲ ಮಗಧನೀಗ | ಕಾಳೆಗಕೈತಂದ || ಪಾಲಿಸು ||
ಕಂಸನ ಕೊಂದವನ | ತೋರೆನ್ನುತ | ತ್ರಿಂಶದ್ಧರೇಶ ಜನ |
ಧ್ವಂಸಗೆಯ್ಪೆವು ಯದು | ವಂಶವನೆನುತ ಸು |
ರಾಂಶ ಬೊಬ್ಬಿರಿದು ನಿ | ಸ್ತ್ರಿಂಶವ ಜಡಿವುದು  || ಪಾಲಿಸು ||೧೮೫||

ಕೋಟೆಯ ನಾಲ್ದಿಕ್ಕಿನ | ದ್ವಾರಕೆ ನಾಲ್ಕು | ಕೂಟದಿ ಬಂದರಿನ್ನಾ |
ಘೋಟಕ ಪದಚರ | ಮೀಟಾದ ಕರಿರಥ |
ಕೀಟಲೆಗೆಯ್ವವೀ | ಮಾಟ ನಿಲ್ಲಿಸು ದೇವ || ಪಾಲಿಸು ||೧೮೬||

ಭಾಮಿನಿ

ಧರಣಿಪತಿ ಕೇಳಿಂತು ಪೇಳಿದ |
ಚರರಿಗಭಯವನಿತ್ತು ಲಕ್ಷ್ಮೀ |
ವರನು ಮನದಲಿ ನಸುನಗುತ ಯೋಚಿಸಿದ ತನ್ನೊಳಗೆ ||
ಹರುಷವಾದುದು ಮದ್ದುವಳ್ಳಿಯ |
ನರಸುತಿಹ ಮಾನವಗೆ ತಾನೇ |
ಚರಣಕೆಡಗಿದೊಲೊದಗಿ ಬಂತೆಂದೆನುತಲಿಂತೆಂದ ||೧೮೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಂದನೇ ಸಮಯಕ್ಕೆ ಮಗಧನು | ತಂದನೇ ತಾನಾಗಿ ಕಲಹವ |
ಚಂದವಾಯಿತು ಭೂಮಿಭಾರವ | ಕುಂದಿಸಲ್ಕೆ ||೧೮೮||

ಎಲ್ಲರಂದದೊಳಿವನ ಮೊದಲೇ | ಕೊಲ್ಲಲಾಗದು ದುರ್ಮದಾಂಧರ |
ವಲ್ಲಭನಲಾ ಮಗಧನೀತನ | ಭುಲ್ಲವಣೆಗೆ ||೧೮೯||

ಕುಂಭಿನಿಯೊಳಿಹ ಭೂಭುಜರ ನಿಕು | ರುಂಬ ವೈತಂದಪುದು ನಿಲ್ಲದೆ |
ಬೆಂಬಲಕೆ ಬರೆ ಕೊಂದು ಯಮಪುರ | ತುಂಬಲಕ್ಕು ||೧೯೦||

ದುರಿತವಿದರಿಂದಿಲ್ಲ ಸುಜನರ | ಪೊರೆವುದೇ ಕರ್ತವ್ಯವೆನಗೆಂ |
ದರಿತು ಕರುಣಾಶರಧಿಯಗ್ರಜ | ಗೊರೆದ ಬಂದು ||೧೯೧||

ರಾಗ ಕೇತಾರಗೌಳ ಝಂಪೆತಾಳ

ಅಣ್ಣ ಚಿತ್ತೈಸು ನುಡಿಯ | ಮಾತುಳನ | ಮಣ್ಣಕೂಡಿಸಿದ ಹಗೆಯ |
ಕನ್ನೆಯರು ದೂರೆ ಕೇಳಿ | ಬಂದಿರ್ಪ | ನನ್ಯಾಯಿ ಮಗಧ ಕೆರಳಿ ||೧೯೨||

ಧರೆಯ ಬಾಹುಜರೆಲ್ಲರ | ನೆರಹಿರ್ಪ | ತರಿಯಲೆಮ್ಮನ ದುರ್ಧರ |
ಪೊರೆವುದೆಂತೀ ಮಧುರೆಯ | ಪೇಳೆನ | ಲ್ಕರುಹಿದ ಪ್ರಲಂಬವಗೆಯ ||೧೯೩||

ಬಂದುದೇ ಲೇಸು ತಮ್ಮ | ಧರಣೀಶ | ವೃಂದ ರಣಕೆಮ್ಮೊಳಮಮ |
ಮಂದೆ ಮಾರಿಯ ಗುಡಿಯನು | ಪೊಕ್ಕಂತೆ | ಕೊಂದು ದಿಗ್ಭಲಿಗೊಡುವೆನು ||೧೯೪||

ಮಾವನನು ಕೊಂದ ಹಗೆಗೆ | ಬಂದಡಿ | ನ್ನಾವಿಗಡ ಮಾಗಧಂಗೆ |
ಸಾವಲ್ಲದುಂಟೆ ಬೇರೆ | ಗತಿ ಯಮನ | ಠಾವ ತೋರಿಸುವೆ ಮಝರೆ ||೧೯೫||

ಅದಕಾಗಿ ಯದುಬಲವನು | ನೆರಹೀಗ | ಬದಲೆಣಿಸದಧಮರನ್ನು |
ಕದನದೊಳು ಹೊಡೆದು ಜಯವ | ತರುವ ಪೇಳ್ | ಮುದದಿ ಮುಂದಣ ಕಜ್ಜವ ||೧೯೬||

ವಾರ್ಧಕ

ಇನಿತು ಮಾತಾಡುತಿರಲಭ್ರದಿಂದುಲ್ಕೆಯೊಲ್ |
ಕನಕ ರಥಯುಗ ನಿಖಿಲಶಸ್ತ್ರಾಸ್ತ್ರಗಳು ಸೂತ |
ರಿನ ಸುಪ್ರಭೆಯೊಳಚ್ಯುತನ ಶಾರ್ಙ್ಗಚಕ್ರಾಸಿಗದೆಗಳ ಕ್ಷಯನಿಷಂಗ ||
ವಿನುತ ಸುಗ್ರೀವ ಸೈನ್ಯಕ ಬಲಾಹಕ ಮೇಣೊ |
ಡನೆ ಮೇಘ ಪುಷ್ಪಕಗಳೆಂಬಶ್ವಗಳು ನಾಲ್ಕು |
ಗಣನೆಗಳವೆನಿಸಿ ರಾಮಗೆ ಮುಸಲ ಹಲಗಳುಂ ಧರೆಗಿಳಿಯೆ ಹರಿ ನುಡಿದನು ||೧೯೭||

ರಾಗ ಸೌರಾಷ್ಟ್ರ ಅಷ್ಟತಾಳ

ಕಾಲೋಚಿತದ ಕೃತ್ಯ | ವಾಲೋಚಿಸುವುದೀಗ || ಅಣ್ಣದೇವ || ಸುರ
ಜಾಲವಟ್ಟಿರುವ ಶ | ಸ್ತ್ರಾಳಿಯ ನೋಡಿದ ಅಣ್ಣದೇವ ||೧೯೮||

ಆಡಲೇನೊದಗಿದೆ | ಕೇಡು ನಮ್ಮವರಿಗೆ || ಅಣ್ಣದೇವ || ಬಲ
ಕೂಡಿದೆ ಸುತ್ತ ಕೈ | ಮಾಡೀ ಕೈದುಗಳಿಂದ | ಅಣ್ಣದೇವ ||೧೯೯||

ಜನನ ಶೂನ್ಯರು ನಾವ | ವನಿಗಿಳಿದಿಹ ಕಾರ್ಯ | ಅಣ್ಣದೇವ || ಸಾಧು
ಜನರು ಸುಮನಸರ ರ | ಕ್ಷಣ ಮುಖ್ಯ ಬೇಗ ಮಾ | ಡಣ್ಣ ದೇವ ||೨೦೦||

ಭಾಮಿನಿ

ಏಕೆ ತಮ್ಮ ವಿಳಂಬ ಡಂಗುರ |
ಹಾಕಿಸೀ ಕ್ಷಣ ಚಾತುರಂಗವು |
ನಾಕು ಬಾಗಿಲಿಗಿರದೆ ನಡೆಯಲಿ ವೈರಿಗಳ ಸದೆದು ||
ಶಾಕಿನೀ ಗಣಕೌತಣಂಗಳ |
ನಾಕೊಡದೆ ಬಿಡೆಹರನೆ ತಡೆದರು |
ನಾಕಿಗಳು ಪರಿಕಿಸಲಿ ಮದ್ಭುಜ ವಿಕ್ರಮವನೆಂದ ||೨೦೧||

ರಾಗ ಮಾರವಿ ಏಕತಾಳ

ಎನಲು ರಮಾಧವ | ಕನಕರಥವನೇ | ರ್ದನುವರಕಾಯದು | ಘನಬಲದೊಳು ಶ |
ಕ್ರನ ದೆಸೆಗೆ ಸುಧಾ | ಮನ ಮೇಣ್ ಕೃತವ | ರ್ಮನನುದ್ಧವ ಸಹಿ | ತನಘರನಟ್ಟುತ || ||೨೦೨||

ಪೃಥುವಿಪೃಥರ ಯದು | ಪತಿಯ ಪ್ರಸೇನನ | ಪಿತೃವರ ಕಾಷ್ಠೆಗೆ | ಅತಿಬಲಗಾಂದಿನಿ |
ಸುತ ಸಾತ್ಯಕಿಗದ | ರತಿರಥರನ್ನ | ಪ್ಪತಿ ದಿಕ್ಕಿಗೆ ಕಳು | ಹುತ ಸಂಗರಕೆ || ||೨೦೩||

ಉತ್ತರದ್ವಾರಕೆ ಮತ್ತೆ ಬಲನ ಪುರುಷೋತ್ತಮ ತಾ ಕೂ | ಡುತ್ತಲಮಿತ್ರರ |
ಮೊತ್ತವ ಕೆಡಹುತ್ತೊತ್ತಿದರಾಕ್ಷಣ | ತಳ್ತುದು ಮಧುರೆಯ ಸುತ್ತಲು ಸಮರ || ||೨೦೪||

ವಾರ್ಧಕ

ನೆರೆದುದಾ ಯುದ್ಧಮಂ ನೋಡಲಂಬರದೊಳಗೆ |
ಸುರಸಿದ್ಧ ಗಂಧರ್ವ ಯಕ್ಷಕಿಂಪುರುಷ ಕಿ |
ನ್ನರ ಗರುಡ ಮನು ಮುನಿಗಳೊಂದೆಸೆಗೆ ಸಂಗರದಿ ಧೃತಿಗೆಡದೆ ಕಾದಿಮಡಿದ ||
ಧುರ ಪರಾಕ್ರಮಿಗಳಂ ವರಿಸಲೆಂದಪ್ಸರೆಯ |
ರರಳ ಸರಮಂ ಕೆಯ್ಯೊಳಾಂತುಮತ್ತೊಂದೆಸೆಗೆ |
ಗಿರಿಧರನ ಕೀರ್ತಿಸುತ ದಿಕ್ಪತಿಗಳೊಡನೆ ವಿಬುಧೇಶ್ವರಂ ನಭದೊಳಿರ್ದ ||೨೦೫||

ಭಾಮಿನಿ

ಆದುದಿತ್ತಲು ಬಳಿಕ ನಾಲ್ವರು |
ಯಾದವೋತ್ತಮ ಭಟರಿಗಷ್ಟ ಧ |
ರಾಧಿಪರೊಳಾಹವವು ಬಾಗಿಲು ಮೂರರೊಳು ಬಿಡದೆ ||
ಕಾದಿದರು ನೃಪರಸ್ತ್ರ ಘಾತಿಗೆ |
ಭೇದಿತಾಂಗರು ವಿಷ್ಣುಭಕ್ತರು |
ಯಾದಸಾಂಪತಿ ದಿಶೆಯೊಳಘಟಿತವಾಯ್ತು ಸಂಗ್ರಾಮ ||೨೦೬||

ರಾಗ ಶಂಕರಾಭರಣ ಮಟ್ಟೆತಾಳ

ಧರಣಿಪಾಲ ಕೇಳು ಮುಂದು | ವರಿದುವುಭಯ ಬಲವು ಸೆಣಸೆ |
ಪರಿಯೆ ರಕುತ ಹೊನಲು ಹೆಣನ | ಗಿರಿಯು ಬೀಳಲು ||
ಹರಿಯ ಮನದಿ ಭಜಿಸಿ ಯಾದ | ವರು ನಿಶಾತಶರಗಳಿಂದ |
ದುರುಳ ಪಡೆಯ ಬೀಳಗೆಡಹೆ | ಪರಿಕಿಸುತ್ತಲಿ ||೨೦೭||

ಓಡುತಿಹರ ಜರೆದು ನಿಲಿಸಿ | ಬೇಡರೊಡೆಯನೇಕಲವ್ಯ |
ದೂಡಿರಥವ ಮುಂದೆತಿರುವ | ತೀಡಿ ಬಾಣವ ||
ಗಾಢದಿಂದಲೆಚ್ಚು ಘಾಸಿ | ಮಾಡೆಯದು ಬಲವಶಿನೇಯ |
ಕೂಡೆ ರಥವ ಚಾಚೆ ಶಬರ | ನೋಡಿ ನುಡಿದನು ||೨೦೮||

ರಾಗ ಭೈರವಿ ಅಷ್ಟತಾಳ

ಆರು ನೀನೆಲೊ ಹುಡುಗ | ನಿನ್ನಯ ತಂದೆ | ಯಾರು ಪೇಳೆಲೊ ಧಡಿಗ |
ಸಾರತ್ತಗೋಪಕು | ಮಾರರ ನುಡಿಗೇಳಿ | ಮಾರ ಬೇಡೆಲೊ ತಲೆಯ ||೨೦೯||

ಖೂಳ ಗೋವಳನೆನ್ನಲು | ರೌರವದೊಳು | ಬೀಳುವೆ ಲೋಕಗಳು |
ಕೇಳಾವನೊಲುಮೆಯಿಂ | ಬಾಳಿಹವಾಹರಿ | ಯಾಳು ಸಾತ್ಯಕಿಯಹೆನು ||೨೧೦||

ಕುರುಬರು ಬಿದ್ದಿರುವ | ದಾರಿಯಕಲ್ಲು | ಹರಳ ಮಾಣಿಕವೆನ್ನುವ |
ತೆರದೊಳಾ ಕೃಷ್ಣನ | ಪರಬೊಮ್ಮ ವೆನಿಸಿ ಕೆ | ಟ್ಟಿರಿ ಯಾದವರು ನಿಶ್ಚಯ ||೨೧೧||

ಅಂತಕನಾಳುಗಳು | ಕೊಂಡೊಯ್ಯೆ ಜ | ನ್ಮಾಂತರ ಸುಕೃತದೊಳು |
ಬಂತೆನೆ ನಾಮ ಭ | ವಾಂತವಾಗುವುದವ | ನಂತಸ್ಥವೇನರಿವೆ ? ||೨೧೨||

ಕೊಂಡುದಾನವರಸುವ | ಬಾಲ್ಯದಿ ಗರ್ವ | ಗೊಂಡು ಕಂಸನ ಕೊಂದವ |
ಮಂಡೆಯ ಬಲವ ಕ | ಲ್ಗುಂಡಿಗೆ ತೋರಿದ | ಪುಂಡುತನವ ಬಲ್ಲೆನು ||೨೧೩||

ಮಾವನ ತಾನೆಕೊಂದ | ಅಟ್ಟಿದ ನಿನ್ನ | ಜೀವ ಹೀರಲು ಗೋವಿಂದ |
ಕೇವಲ ಖಳರಿಗೆ | ಸಾವಿತ್ತು ಸುಜನರ | ಕಾವ ಶ್ರೀ ಹರಿ ಮುಕುಂದ ||೨೧೪||

ರಾಗ ಮಾರವಿ ಏಕತಾಳ

ನುಡಿಯನು ಕೇಳುತ | ತಡೆಯದೆ ವನಚರ | ರೊಡೆಯನು ಮುಳಿದೆಂದ ||
ಸಡಗರವನು ಬಿಡು | ತೊಡು ಕೂರ್ಗಣೆಗಳ | ಫಡಫಡಯೆನುತೆಚ್ಚ ||೨೧೫||

ತರಿದಾಶರಗಳ | ನೊರೆದನು ಸಾತ್ಯಕಿ | ಪರಿಪರಿ ಮೃಗಗಳನು ||
ಅರಸುತ ಕಾಡೊಳು | ತಿರುಗುವ ಬೇಡಗೆ | ಧುರವೇಕೆಂದೆಚ್ಚ ||೨೧೬||

ಖಂಡಿಸಿ ಶಬರನು | ಕುಂಡಲಿಶರವನು | ಕೊಂಡೆಸೆಯಲು ಕಡಿದ ||
ಅಂಡಜನಿಂದದ | ಕಂಡಗ್ನಿಯ ಬಿಡೆ | ತುಂಡರಿಸಿದವರುಣ ||೨೧೭||

ರೋಷದಿ ತಿಮಿರಾ | ದ್ರೀಷುಗಳನು ಬಿಡ | ಲಾ ಶಬರನು ಮುಳಿದು ||
ಶ್ರೀಶನ ದಾಸ ದಿ | ನೇಶಪವಿಗಳಿಂ | ನಾಶಗೊಳಿಸೆ ಕಂಡು ||೨೧೮||

ತವೆ ಕೋಪದಿ ಬಿಡೆ | ಕವಲಂಬನು ಕೋ | ಲಿವನಿಸುವನಿತರೊಳು ||
ಕವಿದಾ ಸತ್ಯಕ | ಕುವರನ ಕೋದಂ | ಡವ ಮುರಿದೆಡೆ ತಾನು ||೨೧೯||

ಧನು ಮತ್ತೊಂದನು | ಶಿನಿಸುತ ಕೊಂಡಹಿತನ ರಥಹಯಗಳನು ||
ಡೊಣೆಬಿಲ್ ಸವಗಗ | ಳನು ಭೇದಿಸಿ ವಿರ | ಥನ ಮಾಡಲ್ಕವನು ||೨೨೦||

ಕಂದ

ಕೈರಾತಾಧಿಪ ಲಜ್ಜಸಿ |
ಜಾರಲು ಹಿಂದಕೆ ಶಿನೇಯನಧಟಂ ಕಂಡಾ ||
ಭೂರಿಶ್ರವಚಾಪಕೆ ತೆ |
ಬ್ಬೇರಿಸಿ ಕಣೆ ಮಳೆಗರೆವುತಲಡ ಹಾಯ್ದೆಂದಂ ||೨೨೧||

ರಾಗ ಪಂಚಗತಿ ಮಟ್ಟೆತಾಳ

ಫಡಫಡೆಲವೊ ಸತ್ಯಕಾಖ್ಯ | ಹುಡುಗ ನಿಲ್ಲೆಲ |
ಅಡವಿ ಚರರ ಪತಿಯ ಗೆಲಿದ | ಕಡುಹ ತೋರೆಲ ||
ಹೊಡೆದು ನಿನ್ನ ಭೂತಗಣಕೆ | ಕೊಡುವೆ ನೌತಣ ||
ಕೆಡದೆಬಾಗಿಲನ್ನು ಬಿಟ್ಟು | ನಡೆ ತತುಕ್ಷಣ ||೨೨೨||
ದುರುಳ ಶಬರನಿರವ ನೋಡಿ | ಬರುವುದೊಳ್ಳಿತು |
ಧುರಕೆ ಜವನ ಪುರದದ್ವಾರ | ತೆರೆದುದಾಯಿತು ||
ತ್ವರಿತದಿಂದ ಕಳುಹಿದಪೆನು | ಶರದಿ ನೋಡಿಕೊ |
ಬರಿದೆಗಳಹಿ ಹರಣ ಬಿಡುವ | ತೆರನಿದೇತಕೋ ||೨೨೩||

ಎಂದ ಮಾತಕೇಳಿ ಕೋಪ | ದಿಂದ ನುಡಿದನು ||
ಬಂದುದಂತ್ಯ ಯಾದವರ್ಗೆ | ಮುಂದೆ ತಿಳಿ ನೀನು ||
ಸೊಂದಿಗೋಡಗಗಳು ಕರಿಯ | ವೃಂದಕೆರಗಿದ |
ಒಂದು ರೀತಿಯಂತೆಗೆಯ್ಯೆ | ಬಂದ ಮಾಗಧ ||೨೨೪||

ಎಲವೊ ಹುಲು ನೃಪಾಲಗಜದ | ಬಳಗ ದುರುಬೆಯ |
ಗಳಿಗೆಯರ್ಧದೊಳು ಮೃಗೇಂದ್ರ | ನಿಲಿಪಕೇಳಯ್ಯ ||
ಖಳ ನರೇಂದ್ರ ದಂತಿ ಸಿಂಹ | ಜಲಜ ನಾಭನು |
ತಿಳಿದು ರಣಕೆ ನಿಲ್ಲುಕೊಂದು | ಕಳೆವೆ ನಿನ್ನನು ||೨೨೫||

ಅನಕ ಭೂರಿಶ್ರವನು ಮುಳಿದು | ಕಣೆಯ ಮಳೆಯನು |
ಅನಘನೆದೆಗೆ ಕರೆಯೆ ತರಿದು | ಧನುವ ಕಡಿದನು ||
ಬಿನುಗೆ ನಿಲ್ಲೆನುತ್ತ ಸಾತ್ಯ | ಕನುಕಳಂಬವ |
ಎಣಿಕೆಯಿಲ್ಲದೆಸಲು ಧರೆಗೆ | ಜನಪನೊರಗಿದ ||೨೨೬||

ವಾರ್ಧಕ

ಧರಣಿಪತಿ ಕೇಳಿಂತು ವರಸತ್ಯಕಾತ್ಮಜಂ |
ಧುರವಿಜಯರೀರ್ವರಂ ಜೈಸಲುಳಿದರಯಾದ |
ವರು ಬಡಿದು ಬೆನ್ನಟ್ಟಿ ಕಂಜನಾಭನ ದಯದಿ ವಿಜಯಾಂಗನೆಯ ಪಡೆಯಲು ||
ಶರಹತಿಗೆ ಮಡಿದಶ್ವಮದಗಜ ಪದಾತಿಗಳ |
ನರಿ ಹದ್ದು ಕಾಗೆ ಶಾಕಿನಿ ಡಾಕಿನಿಯರೈದ |
ಹರುಷದಿಂ ಮೆದ್ದು ಕೆನ್ನೀರ್ಗುಡಿದು ಕುಣಿಯಲಾ ಕಣ ಭಯಂಕರವಾದುದು ||೨೨೭||

ಭಾಮಿನಿ

ಅತ್ತಲಸುರಾರಾತಿಗಳು ಪುರ |
ದುತ್ತರದ್ವಾರದಿ ಸಪತ್ನರ |
ಮೊತ್ತವನು ಪೊಕ್ಕೊದರಿಸಲು ಬಿಲ್ಲನು ತೊಲಗೆ ಸೇನೆ ||
ಒತ್ತಿ ಬರೆ ಮಗಧೇಶ ನೋಡಿ ನ |
ಗುತ್ತಲಿವರೇ ರಾಮಕೃಷ್ಣರು |
ಸತ್ವಪರಿಕಿಪೆನೆನುತ ಕೃಷ್ಣನ ಮೂದಲಿಸಿ ನುಡಿದ ||೨೨೮||

ರಾಗ ಕಾಂಭೋಜಿ ಝಂಪೆತಾಳ

ದುಷ್ಟ ನೀನೇನೆಲವೊ | ಕಿಟ್ಟನೆಂಬವ ನಮ್ಮ | ಕೊಟ್ಟ ಮಗಳಂದಿರೆರೆಯನನು ||
ಕುಟ್ಟಿ ಕಳೆದೆಯದೇಕೆ | ಬಟ್ಟೆ ಮುಂದೇನು ಪರ | ಪುಟ್ಟನಿನಗಸುವ ಪಿಡಿದಿರಲು ||೨೨೯||

ನುಡಿಯಲಂಜುವೆನಜ್ಜ | ಮಡುಹಿದೆನು ಮಾವನನು | ಬಿಡಿಸೆ ಹೆತ್ತವರ ಬಂಧನವ ||
ಕಡುವಿರೋಧದಿ ನೀವು | ನಡೆತರಲು ಪಥವೇನು | ಕೊಡುವೆ ನಾಪನಿತು ಕಾಳೆಗವ ||೨೩೦||

ಸೆಣಸುವೆಯ ಧಣುಧಣುರೆ | ನಿನಗಾರು ನಿಜವಾದ | ಜನಕರೀ ಶೌರಿನಂದರೊಳು ||
ಜನಕರಿಬ್ಬರವೊಲು ರ | ಸನೆಯೆರಡೆನಿಸಿ ನಮ್ಮ | ದಣಿಸಿಯೋಡದಿರು ವಂಚಿಸುತ ||೨೩೧||

ಹೆತ್ತಯ್ಯ ವಸುದೇವ | ಮತ್ತೆನ್ನ ಸಾಕಿದ ನಿ | ವೃತ್ತಿಯಿಲ್ಲದೆ ನಂದಗೋಪ ||
ಮೃತ್ಯುವಿನ ನೆರದೊಳು | ನ್ಮತ್ತ ಕಂಸನು ಕಷ್ಟ | ವಿತ್ತಡವರೇಂ ಗೆಯ್ಯಲಹುದು ||೨೩೨||

ಕೋಗಿಲೆಯ ಮರಿಯನ್ನು | ಕಾಗೆಯಿಕ್ಕೆಯೊಳಿಟ್ಟು | ಪೋಗುವಂದದಿ ಶೌರಿ ನಿನ್ನ ||
ಸಾಗಿ ಪಲ್ಲಟಿಸೆ ಕಾ | ರಾಗಾರ ಹೆಚ್ಚಲ್ಲ | ಹೇಗೆ ತಪ್ಪಿದನು ಭೋಜನೃಪ ||೨೩೩||

ಹಗೆ ಮಾವಗಾನು ಮು | ನ್ನೊಗೆದಾರಣುಗರ ಸು | ಮ್ಮಗೆ ಕೊಂದು ತಾಯಿಗಿತ್ತನಲಾ ||
ದುಗುಡವಂ ಸಹಜನ ಬ | ಲಿಗೆ ಪಡೆದಳೇ ಜನನಿ | ಮಿಗೆ ಜೀವಕಧಿಕರಹ ಸುತರ ||೨೩೪||

ಶತ್ರು ಮುಂದುದಿಸಲಿಹ | ಕ್ಷೇತ್ರದೊಳಗೊಗೆದವರು | ಮಿತ್ರರಹರೇ ಮೊದಲೆ ಶೌರಿ ||
ಪುತ್ರರನು ಕೊಟ್ಟಹ ಚ | ರಿತ್ರೆಯರಿಯೆಯ ನೀನು | ಕ್ಷತ್ರಿಯಾಧಮನೆ ತೊಲಗಾಚೆ ||೨೩೫||

ಸ್ತ್ರೀ ಹತ್ಯವನು ತಡೆಯ | ಲೀಹದನ ಪಿತನೆಂದ | ಡಾ ಹಸುಳೆಗಳ ಕೊಂದ ಬಂಧು |
ದ್ರೋಹಿ ಗುರುಗೋದ್ವಿಜ | ದ್ರೋಹಿಯಹ ಖಳ ಕಂಸ | ಬೇಹವನು ನಿನಗುತ್ತಮನಲಾ ||೨೩೬||

ಆರರಿಯರೆಲೊ ನಿನ್ನ | ಚಾರುವೃತ್ತಗಳ ಬಡಿ | ವಾರ ಸಾಕೆಲವೊ ದನಗಾಹಿ ||
ಜಾರ ಪಾಲ್ಬೆಣ್ಣೆಗಳ | ಚೋರ ನಿಲುನಿಲ್ಲೆಂದ | ವೀರ ಮಾರ್ಬಲಕೆ ಕೈವೀಸೆ ||೨೩೭||

ವಾರ್ಧಕ

ಗರುಡ ತಾಳಧ್ವಜದ ಕುರುಹ ಕಂಡಹಿತರ |
ಬ್ಬರಿಸಿ ಕವಿತರೆ ರವಿಯ ಮುಸುಕುವಭ್ರಗಳಂತೆ |
ಪರಿಭವಂ ಯದುವರರಿಗಾದುದಕಟಕಟೆನುತ ಪುರದ ಹರ್ಮ್ಯಾಗ್ರದಿಂದ ||
ನಿರುಕಿಸುತ ಸುದತಿಯರು ಹಾಯೆನುತ್ತಿರೆ ಬಲೋ |
ತ್ತರವ ನಿಶಿತಾಸ್ತ್ರದಿಂ ಸಂಹರಿಸಿ ಶಂಖವಂ |
ಭರದೊಳೂದಲು ಕೇಳಿಪೌರತತಿ ಮುದವಾಂತುದಮರಚಯ ಜಯವೆನ್ನಲು ||೨೩೮||

ರಾಗ ಅಹೇರಿ ಮಟ್ಟೆತಾಳ

ಏನನೆಂಬೆ ಹರಿಯ ಸಾಹಸ   || ಪಲ್ಲವಿ ||

ಬಾಣವರ್ಷದಿಂದಲಹಿತ | ಕಾನನವನು ಸವರಿ ನಡೆದ || ಏನನೆಂಬೆ || ಅ. ಪ ||

ಕಂಡು ಸೈನ್ಯವಧಿಕರೋಷ | ಗೊಂಡು ಗಣನೆಯಿಲ್ಲದಂತೆ |
ಕಾಂಡಗಳನು ಸುರಿಸೆ ತನ್ನ | ತಂಡ ಹೊರಳುತಿರಲು ಕೆರಳಿ |
ಪುಂಡರೀಕ ನೇತ್ರ ನಿಜಕೋ | ದಂಡಕೇರಿಸುತ ಕೋಲ |
ದಿಂಡುರುಳ್ಚಿ ಮಾರ್ಬಲವನು | ಹಿಂಡಿಹಿಳಿದನಾಗ ಭರದೊ || ಳೇನನೆಂಬೆ ||೨೩೯||

ಕರವು ಹರಿದು ಚರಣವುಡಿದು | ಕರುಳು ಸೂಸಿ ವರಪದಾತಿ |
ಧರಣಿ ಗೊರಗಿತಾಗ ನಿಶಿತ | ಶರವಿಘಾತಿಗಶ್ವ ನಿಚಯ |
ಹೊರಳೆ ಸೊಂಡಲುಡಿದು ಕರಿಗ | ಳುರುಳೆ ಜವನ ಪುರವು ನೆರೆಯೆ |
ಬರತುದಾಗ ವೈರಿಜಲಧಿ | ಹರಿಕಳಂಬ ಕುಲನಿದಾಘ | ಕೇನನೆಂಬೆ ||೨೪೦||

ಧಾರಿಣೀಶ ಕಟಕ ಬೆನ್ನ | ತೋರಿ ಗಾರುಗೆಟ್ಟು ಹಿಂದೆ |
ಜಾರುತಿರಲು ಬಳಿಕ ದ್ವಾರ | ಮೂರ ಮುತ್ತಿಗೆಗಳು ತೆಗೆದು |
ಸೇರಿತೊಂದು ಬಡಗದೆಸೆಯ | ತೋರು ತೋರು ಹರಿಯನೆನುತ |
ಮೀರಿ ಬರಲು ಮತ್ತೆ ಕೃಷ್ಣ | ನೇರಿಸಿದನು ತಿರುವಿಗಂಬ || ನೇನನೆಂನೆ ||೨೪೧||

ಭಾಮಿನಿ

ತುರಗ ತತಿಯೊಳು ಕೃಷ್ಣ ರಥಿಕರ |
ನೆರವಿಯೆಡೆಯೊಳು ಕೃಷ್ಣ ಕರಿಘಟೆ |
ಹೊರಳಿಯೊಳು ಕೃಷ್ಣಂ ಪದಾತಿಗಳೊಳಗೆ ಕೃಷ್ಣಮಯ ||
ಇರಿದನೆಚ್ಚನು ಕೊಚ್ಚಿದನು ಸಂ |
ಹರಿಸಿದನು ರಿಪುಬಲವ ಮಗಧನ |
ಜರೆಯತೋಡೆ ಪದಾತಿ ಚೈದ್ಯನು ಹರಿಯ ತಡೆದೆಂದ ||೨೪೨||

ರಾಗ ಭೈರವಿ ಏಕತಾಳ

ಎಲವೋ ಗೋಪಕುಮಾರ | ಸಾ | ಕೆಲೊ ಹುಲು ಬಲಸಂಹಾರ |
ಗೆಲವೆಂಬಡವಿ ಕುಠಾರ | ಎ | ನ್ನೊಳು ನಿನ್ನಳವನು ತೋರ ||೨೪೩||

ಕುಶಲವೆ ಭಾವಂದಿರ್ಗೆ | ಇದು | ಪೊಸತು ಸಮಾಗಮವೆಮಗೆ |
ಒಸೆ ಗೌರವಿಸಲು ತಪ್ಪೆ | ಹೊಸ | ಮಸೆಯಂಬಿನೊಳುಪಚರಿಪೆ ||೨೪೪||

ದನಗಾಹಿಗೆ ದೊರೆಗಳಲಿ | ನಂ | ಟನುವಪ್ಪುದೆ ವ್ರಜದಲ್ಲಿ |
ಘನಬಲ ಕೇಶಿಬಕಾದಿ | ದಿತಿ | ತನುಜರ ವಧಿಸುತ ಬೆಳೆದಿ ||೨೪೫||

ಮೊರೆವಿಡಿದಾಡಲು ಪಳಿವೆ | ದೈ | ತ್ಯರ ಕೊಲೆಗೆನ್ನೊಳು ಮುಳಿವೆ ||
ದುರುಳರ ನಿನ್ನಂತಹರ | ನಾ | ತರಿದು ಕಳೆದೆ ಭೂಭಾರ ||೨೪೬||

ಕ್ಷೀರದಧಿಗಳನು ಸುಲಿದು | ದಯ | ದೋರದೆ ಮಾವನನಿರಿದು |
ತೋರಿದೆ ಸೌಜನ್ಯಗಳ | ಭೂ | ಭಾರಕರಾರೆಲೊ ಕಳ್ಳ ||೨೪೭||

ಮಾವನು ನಿನಗೆನ್ನಯ್ಯ | ನೀ | ನೇವಿಧ ಬಿಡಿಸಿದೆ ಸೆರೆಯ |
ಗೋವಿಪ್ರ ಸುಬಂಧುಗಳು | ಭೋ | ಜಾವನಿಪಗೆ ಶತ್ರುಗಳು ||೨೪೮||

ರಾಗ ಶಂಕರಾಭರಣ ಮಟ್ಟೆತಾಳ

ತೊಲಗು ಸಾಕು ಬಗುಳಬೇಡ | ಕೊಳಲ ದನಿಗೆ ಮರುಳುಗೊಂಡ |
ಲಲನೆಯರೊಳು ನೆರೆದು ಗೋವು | ಗಳನು ಮೇಯಿಸಿ ||
ಬೆಳೆದ ಚಪಳತನವು ಸಲ್ಲ | ಬಲುಹತೋರು ನಿನ್ನ ಭೂತ |
ಬಳಗ ಕುಣಿಸಿ ಬಿಡುವ ಗರಳ | ಗಳನೆ ತಡೆದರು ||೨೪೯||

ಬಾಯ ಹೆಗ್ಗಳಿಕೆಯೊ ಭಟನಿ | ಕಾಯ ದುರವಣಿಕೆಯೊ ಫಡ ಪ |
ಲಾಯನಕ್ಕೆ ದೊರಕದೆಡೆಯು | ತಾಯ ಬಸಿರೊಳು |
ಆಯತಿಕೆಯ ಪರಿಕಿಸೆಂದ | ಜೇಯನಾರ್ದು ಹೊಡೆ ಯೆ ಪೂ |
ರಾಯ ಸತ್ವದಿಂದ ಕಂಡು | ಹಾಯೆನಬ್ಬಲ ||೨೫೦||

ಎಚ್ಚಶರವ ಕಡಿದು ಚೈದ್ಯ | ನುಚ್ಚರಿಸಿದ ಭಾಪು ಮಝರೆ |
ಮೆಚ್ಚಬೇಕು ಚಳಕಕೆನುತ | ಲೆಚ್ಚಹಯವನು ||
ಅಚ್ಚಮಸೆಯ ನಾಲ್ಕು ಶರದಿ | ಬಿಚ್ಚಲೆದೆಯ ಸೂತನೋಯ |
ಲಚ್ಯುತನನು ಹತ್ತರಿಂದ | ಹೆಚ್ಚಿಹೊಡೆದನು ||೨೫೧||

ಲೇಸುಗೈದೆ ವೀರ ನೀನ | ಭ್ಯಾಸಿಯಹುದು ಧುರದಿ ಶರವಿ |
ನ್ಯಾಸವೊಳ್ಳಿತೀಕ್ಷಿಸೆನ್ನ | ಕೌಶಲಂಗಳ ||
ಮೈಸಿರಿಯನೆನುತ್ತ ಮಾರ್ಗ | ಣಾಸನವನು ಮಿಡಿದು ದಾಮ |
ಘೋಷ ನಂಗಕೆಚ್ಚು ಬಾಣ | ಘಾಸಿಮಾಡಲು || ||೨೫೨||

ಜಾರೆ ಹಿಂದೆ ಚೇದಿಯರಸ | ಭೂರಿಬಲವ ಕವಿಸಿ ತ್ರಿಂಶ |
ದ್ಧಾರಿಣೀಶ ನಿಕರತರುಬೆ | ವಾರಿಜಾಕ್ಷನು ||
ತೇರ ಮುರಿದು ಧನುವ ಕಡಿದು | ಮೂರು ಮೂರು ಶರದಿ ಹೊಡೆಯ |
ಲೋರೋರ್ವರಸರನ್ನು ವೈರಿ | ವಾರ ಬೆದರಿತು ||೨೫೩||

ವಾರ್ಧಕ

ಕೆಟ್ಟೋಡಿದರ್ ಕೆಲರ್ ಸಂಗರಕೆ ಭಯದಿ ಬೆಂ |
ಗೊಟ್ಟೋಡಿದರ್ ಕೆಲರ್ ಪಿಡಿದಸ್ತ್ರಶಸ್ತ್ರ ಬಿ |
ಸುಟ್ಟೋಡಿದರ್ ಕೆಲರ್ ಕಡಿವಡೆದುರುಳ್ದು ಬೆಟ್ಟಾಗಿರ್ದ ಪೆಣರಾಸಿಯ ||
ಮೆಟ್ಟೋಡಿದರ್ ಕೆಲರ್ ಸುರಿವ ಕಣೆಮಳೆಗೆ ಕಂ |
ಗೆಟ್ಟೋಡಿದರ್ ಕೆಲರ್ ಪಥಗಾಣದಿರೆ ಮೊರೆಯ |
ನಿಟ್ಟೋಡಿದರ್ ಕೆಲರ್ ಹರಿಯಂಬಿನುಗ್ರದಿಂ ಬಟ್ಟೆ ಬಯಲಾಗಿ ನೃಪರು ||೨೫೪||

ಕಂದ

ಇಂದುಕುಲಾಧಿಪ ಕೇಳು ಮು |
ಕುಂದಂ ಭೂಪರ ದೆಸೆಗೆಡಿಸುತ ಸೂರಿಯೊಳಂ ||
ಸ್ಯಂದನವಂ ಹಾರಿಸಿ ಬಳಿ |
ಸಂದಸ್ತ್ರವ ಸುರಿದುಸುರಿದ ಚೈದ್ಯನೊಳಾಗಳ್ ||೨೫೫||

ರಾಗ ಕಾಂಭೋಜಿ ತ್ವರಿತ ಝಂಪೆತಾಳ

ನಿಲ್ಲು ನಿಲ್ಲೆಲೊ ಧರಣಿ | ವಲ್ಲಭರ ನಿದಿರಿಕ್ಕಿ | ಕಳ್ಳನಂತೈದುವೆಯ ಚೈದ್ಯ ||
ಬಿಲ್ಲ ತೊಡು ತೊಡು ನಿನ್ನ | ಹಲ್ಲ ಕಳಚುವೆನೀಗ | ಲಲ್ಲದಡೆ ಶರಚಾಪವಿಳುಹು ||೨೫೬||

ಏನನೊದರಿದೆ ಕುಹಕಿ | ತ್ರಾಣಶೂನ್ಯನೆ ಚೈದ್ಯ | ನಾನೆ ಕುರಿಗೆರಗಿ ಬಾಳುವುದೆ ||
ಕ್ಷೋಣಿಯೊಳು ಯಾದವರು | ಹೀನದೊರೆತನರೆಮ್ಮ | ಮಾನನಿಧಿಗಳಿಗೆ ಸರಿಯಹರೆ ||೨೫೭||

ಯಾದವರ ಪಾತಿತ್ಯ | ವಾದರಿಸಿ ವರಿಸೆ ಮಮ | ಸೋದರತ್ತೆಯನು ದಮಘೋಷ ||
ಹೇ ಧೂರ್ತ ನೀ ಜನಿಸಿ | ಬೈದೆ ತಾಯ್ವನೆಯ ಕೆಡು | ಹಾದಿದುಳಿದೆಯಲ ಕಡುಪಾಪಿ ||೨೫೮||

ದುಷ್ಟ ದುಶ್ಚರಿತ ನೀ | ಹುಟ್ಟೆ ನಿನ್ನನು ನಂಬಿ | ಕಷ್ಟಕೊಳಗಾಯ್ತು ಯದುವಂಶ ||
ಭ್ರಷ್ಟ ನಿನ್ನನು ಮೊದಲು ಕುಟ್ಟಿಕೊಂದೆಮ್ಮೊಳೊ | ಕ್ಕಟ್ಟಿ ಬಳೆಸುವೆ ಬಳಿಕ ನೋಡು ||೨೫೯||

ಕೆಲಸ ಸರಿ ಮಾಗಧಂ | ಗಳಿಯನಾಗುತೆ ಕಂಸ | ಬಲು ಬನ್ನವಿತ್ತ ಬಳಗಕ್ಕೆ ||
ಕುಲವಿರೋಧಿಯನವನ | ಕಳೆದೆ ನಿಮ್ಮನು ತರಿದು | ಇಳೆಯ ಸುಜನರಿಗೆ ಸುಖವೀವೆ ||೨೬೦||

ವೈರಿ ನೀನೊಬ್ಬನೆ ವಿ | ಚಾರಿಸಲು ನಿಮಗಿಲ್ಲ | ವೈರಯಾದವರೊಳದರಿಂದ ||
ಸೈರಿಸಿದೆವೀತನಕ | ತೋರುವೆನು ಕಡೆಗಾಲ | ವೀರಣಾಗ್ರದೊಳು ನೋಡೆಂದ ||೨೬೧||