ರಾಗ ಶಂಕರಾಭರಣ ಏಕತಾಳ
ಅರಸ ಲಾಲಿಸೀ ಪರಿಯೊಳು | ತರುಣಿಯರು ರಮಾರಮಣನ |
ವಿರಹದಿಂದ ಬೆಂದು ಕರಗು | ತಿರೆ ಮೈಗಂಪಿಗೆ ||
ಎರಗಲಳಿ ಮೃಣಾಳದಂತೆ | ಮೆರೆವತೋಳ್ಗಳಿಂದ ತಡೆದು |
ಪರಮೆವರಿಗೆ ನುಡಿದಳಾಗ | ಹರಿಣಲೋಚನೆ ||೧೧೯||
ಆರಡಿಯೆ ನಿದಾನಿಸಸುರ | ವೈರಿ ನಿನ್ನ ಬಣ್ಣವೆನುತ |
ಮೀರಿ ಗರ್ವದಿಂದ ಬಳಿಗೆ | ಬಾರದಿರು ಖಳ ||
ನೀರನಸಿಯರೆಮ್ಮ ಸವತಿ | ವಾರವಿಟ್ಟ ಕುಚದ ಗಂಧ |
ಸಾರದಳೆದೆ ಮುಟ್ಟಿದೆಮ್ಮ | ದೂರಪೋಗೆಲ ||೧೨೦||
ಚರಣಕೆರಗಿ ಬೇಡುವೆ ನಾ | ವರಿತೆವವನ ಕೃತ್ಯವ ನಾ |
ಗರಿಕ ಸತಿಯರೊದಗಲೀಗ | ಮರೆತ ನಮ್ಮನು ||
ಪರಮ ಕಪಟಿಯಿವಗೆ ಸೋತ | ತೆರನದೆಂತೊ ಲಕ್ಷ್ಮಿವೇದ |
ವೊರಲೆ ನಮ್ಮ ಹಾಗೆ ಮುಗ್ಧೆ | ಮರುಳುಗೊಂಡಳು ||೧೨೧||
ವಾರ್ಧಕ
ಕೊಲುವನೇ ಧರ್ಮಾತ್ಮನಾಗೆ ಭೃಗುಪತ್ನಿಯಂ |
ಬಿಲಕಟ್ಟುವನೆ ದಾನವಿತ್ತ ಬಲಿಯಂ ಲಲನೆ |
ಯೊಲಿದು ಬರೆ ಮುಳಿದು ಮೊಲೆ ಮೂಗನರಿವನೆ ಕಾಮಿಯಲ್ಲ ದಿರ್ದೊಡೆ ಕುಬ್ಜೆಯ ||
ಕಳೆವರವ ಸಸಿನೆ ಗೈವನೆ ಸಾಕು ಗಿರಿಧರನ |
ಕಳೆತನಂ ಲುಬ್ಧಕನ ನುಡಿಗೆ ಮರುಳಾದ ಮೃಗ |
ಗಳ ತೆರದೆ ಕೆಟ್ಟೆವಾವೀಲಾಭವೊಂದೆ ಹರಿ ಕರದಕ್ಷತಂ ಕುಚಕ್ಕೆ ||೧೨೨||
ರಾಗ ಕೇತಾರಗೌಳ ಅಷ್ಟತಾಳ
ದಂತಿಪುರೇಶ ಕೇ | ಳಿಂತು ಹಲುಬಿ ಮತ್ತೆ | ಕಾಂತೆಯರುದ್ಧವನಾ ||
ತಿಂಥಿಣಿಯಿಂ ಕೇಳ್ದ | ರೆಂತು ಕಾಂಬೆವು ಕೃಷ್ಣ | ನಂ ತಾವು ಪೇಳೆನುತ ||೧೨೩||
ಸಂಧಿಯ ಮಾಡೆ ನೀ | ಬಂದುದಾದರೆ ಬಹೆ | ವಿಂದೆಲ್ಲವನು ಮರೆತು ||
ಸಿಂಧುಜೆಯುರದೊಳು ನಿಂದಿರೆ ಹರಿಯತೋ | ರ್ಪಂದವೆಂತಯ್ಯ ನೀನು ||೧೨೪||
ಚಿತ್ತವಲ್ಲಭಗೆ ನೀ | ಭೃತ್ಯನಲ್ಲವೆ ನಮ | ಗತ್ಯಂತ ಮಾನ್ಯನಯ್ಯ ||
ಕೃತ್ಯವೇನೆಮಗೆಂದ | ದೈತ್ಯಾರಿ ಪೇಳೆಂದು | ಮತ್ತೆ ಹಂಬಲಿಸಿದರು ||೧೨೫||
ಭಾಮಿನಿ
ಕಂಡ ವಸ್ತುಗಳೆಲ್ಲವನು ಮುಂ |
ಕೊಂಡು ಕೃಷ್ಣನೆನುತ್ತ ವಿಭ್ರಮೆ |
ಗೊಂಡು ಮಣಿಯುತ್ತಚ್ಯುತನ ಭೂತಾವಳಿಯೊಳಿಂತು ||
ಪುಂಡರೀಕಾಕ್ಷಿಯರು ಕಲ್ಪಿಪ |
ಚಂಡಭಕ್ತಿಯನೀಕ್ಷಿಸುತ ನಿಜ |
ಮಂಡೆಯಲಿ ಕರಯುಗವ ಜೋಡಿಸುತೆಂದನುದ್ಧವನು ||೧೩೬||
ರಾಗ ಘಂಟಾರವ ಏಕತಾಳ
ಕೇಳಿರೊಂದು ಮಾತು | ಮನಸಿತ್ತು | ಕೇಳಿರೊಂದು ಮಾತು || ಪಲ್ಲವಿ ||
ಕೇಳಿರಿ ತಾಯ್ಗಳಿ | ರಾ ಲಕ್ಷ್ಮೀ ವರ | ನೂಳಿಗವನು ನಾ | ಪೇಳುವೆ ಮತ್ತೆ || ಅ.ಪ ||
ಧನ್ಯರಾದರು ನಿಮ್ಮ | ಪೋಲುವ | ಪುಣ್ಯವಂತರಮ್ಮ |
ಮೂಜಗ | ವನ್ನು ಹುಡುಕಲಮಮ ||
ದೊರೆಯರ | ನನ್ಯ ವಿಧದ ಪ್ರೇಮ |
ಇರಿಸುತ | ಚೆನ್ನಿಗರಾಯಗೆ | ತನ್ನ ಸಮರ್ಪಿಸಿ |
ಮುನ್ನಸಂಗ ಸುಖ | ವನ್ನು ಪಡೆದಿರೌ || ಕೇಳಿ ||೧೨೭||
ನೇಮನಿಷ್ಠೆಗಳಲಿ | ಜ್ಯೋತಿ | ಷ್ಠೋಮಾದಿಕಗಳಲಿ |
ಮೇಣಿದ್ದಾಮತಪಂಗಳಲಿ |
ಸಿದ್ಧಿಯನಾಮ ವಿರಳ ಕೇಳಿ |
ಭಕ್ತಿಯೊಳಾಮಹಿತನ ಪದ | ತಾಮರಸವನೆನೆ ||
ದಾಮನುಜನವರ | ಕಾಮಿತವಹುದು || ಕೇಳಿ ||೧೨೮||
ದಣಿಯನವನು ಹೊಗಳಿ | ನಿಮ್ಮನು | ತನು ಕೇವಲವಲ್ಲಿ ||
ಕೃಷ್ಣನ | ಮನವೀವ್ರಜದಲ್ಲಿ | ಕರಗುವ | ನನಿಶ ನಿಮ್ಮನಗಲಿ |
ತಡೆಯದೆ | ಮನಸಿಜಪಿತನ | ನ್ನನು ಕಳುಹಿರ್ಪನು |
ಮನದೊಲ್ಮೆಯ ನಿ | ಮ್ಮನು ಸಂತೈಸಲು || ಕೇಳಿರೊಂದು ಮಾತು ||೧೨೯||
ರಾಗ ಸಾಂಗತ್ಯ ರೂಪಕತಾಳ
ಎಂದೆನೆ ಗೋಪಿಕಾ | ವೃಂದವಿಂತೆಂದುದು | ತಂದೆ ನೀನೈತಂದ ಕತದಿ ||
ಇಂದಿರಾವರನ ಗೋ | ವಿಂದ ದರ್ಶನಭಾಗ್ಯ | ವಿಂದೆಮಗಾಯ್ತು ಕೇಳ್ಸುಮತಿ ||೧೩೦||
ಎಂತು ನೆನೆವ ಪೌರ | ಕಾಂತಾಮೋಹಿತನೆಮ್ಮ | ಸಂತೈಸಲೆಂದ ಮಾತೇನು ||
ಸಂತಸದಿಂದೆಮ್ಮೊ | ಳಾಂತ ರಾಸಕ್ರೀಡೆ | ಮುಂತಾದ ಲೀಲೆಗಳನ್ನು ||೧೩೧||
ನೆನೆವನೇ ದಾಸಿಯ | ರನು ಮೇಣುನಿಜಗುಣ | ವೆನಿಪಸಂಗೀತದ ಸೊಬಗ ||
ಅನುಪಮ ಪ್ರೇಮದೊ | ಳನಘನಾಡಿದವೃಂದಾ | ವನ ಕೇಳಿಗಳ ವಿನೋದಗಳ ||೧೩೨||
ವಾರ್ಧಕ
ಎಂದು ಮೈದೋರುವನೊ ಹರಿ ವಿರಹ ತಾಪದಲಿ |
ನೊಂದರ್ಗೆ ಸೂಕ್ತಿಸುಧೆ ಸುರಿಸಲೇನಾಸೆಯೀ |
ನಂದಗೋಕುಲದ ಕಜ್ಜಂ ತೀರ್ದುದೆಮ್ಮನುಳಿದವಗೆ ದಿನಪೋಗಲಂತೆ ||
ಮುಂದೆ ನಮಗಾಗೆ ಸಾಕಬಲೆಯರ ಕಷ್ಟಮಂ |
ಬಂದೊಮ್ಮೆ ದಯದಿ ಪರಿಹರಿಸೆಂಬ ಕಡುಭಕ್ತಿ |
ಯಂದಮಂ ಕಂಡು ತಲೆದೂಗಿ ವೈಷ್ಣವರೆರೆಯ ಕೈಮುಗಿವುತಿಂತೆಂದನು ||೧೩೩||
ರಾಗ ಮಧ್ಯಮಾವತಿ ಏಕತಾಳ
ಚಿತ್ತವಿಪುದು ನಾಥನೆಂದ ಸೂಕ್ತಿಯನು |
ಚಿತ್ತದಜ್ಞಾನಾಂಧಕಾರ ದೀಪ್ತಿಯನು || ಪಲ್ಲವಿ ||
ಅಗಲುವನೆಂತು ನಿಮ್ಮನು ಜೀವಾವಳಿಯ |
ಬಗೆಗೆ ಚೇತನ ರೂಪನಹ ಕೃಷ್ಣರಾಯ |
ಗಗನಾಂಬು ಭೂಮ್ಯಾದಿ ಭೂತಪಂಚಕದಿ |
ಮಿಗೆ ಸೇರಿ ಭೂತಭೌತಿಕರೂಪ ನಿಜದಿ || ||೧೩೪||
ತನ್ನ ಮಾಯೆಯೊಳು ಸೃಷ್ಟಿಸ್ಥಿತಿಲಯವು |
ಭಿನ್ನವೆಂದೆನಿಪವಭಿನ್ನ ಮೂಜಗವು ||
ಮುನ್ನೀರ ತೆರೆಗಳಂತೊಂದಹವಿದನು |
ನನ್ನಿಯೆಂದರಿತು ಸುಖಿಸಿರೆಂದನವನು ||೧೩೫||
ಮೂರು ಗುಣದಿ ತೋರ್ಪಮತಿಯವಸ್ಥೆಯಲಿ |
ಚಾರು ಶುದ್ಧಜ್ಞಾನ ತತ್ವನಾಗುತಲಿ |
ಬೇರೊಂದು ನಿಜವುಂಟೆಂಬುದನು ತೋರಿಸುತ |
ಮೀರಿ ತುರೀಯವನಹೆ ತುರ್ಯಾತೀತ || ||೧೩೬||
ಮನದ ವಿಕಾರದಿ ಬೇರೆಂದು ತೋರ್ಕು |
ಕನಸಿನೊಲ್ ಜಗವೊಂದೆಂದರಿತರೆ ಸಾಕು |
ದಣಿದು ನಾ ಬಿಡೆ ತೋರಲರಿದೀ ಸೃಷ್ಟಿಯನು |
ಎಣಿಕೆ ಬೇಡೋರ್ಗುಡಿಸೆನು ನಾ ಚಿತ್ಸುಖನು || ||೧೩೭||
ಇತ್ತೆನು ನಿಮಗಗಲಿಕೆಯ ನಿಮ್ಮಗಳ |
ಚಿತ್ತವೆನ್ನೊಳೆ ನಾಂಟಲೆಂದನಿಗಾಲ |
ಮುಕ್ತಿಗೆನ್ನಯ ಧ್ಯಾನವಲ್ಲದೆ ಸಲ್ಲ |
ಮತ್ತೀ ಜಡಾಂಗ ಸಂಗದಿ ಹುರುಳಿಲ್ಲ || ||೧೩೮||
ನಲ್ಲನೊಂದಿಗೆ ಸತಿಯಿರಲವನಲ್ಲಿ |
ನಿಲ್ಲದೆರಕೆ ಮಿಕ್ಕು ದೂರದೇಶದಲಿ |
ವಲ್ಲಭನಿರೆ ತಾತ್ಪರ್ಯದಿ ನೆನೆವಂತೆ |
ಬಲ್ಲೆ ನಿಮ್ಮೊಳವನು ಬಿಡಿರೆನ್ನ ಚಿಂತೆ || ||೧೩೯||
ತೊರೆದಿರಿ ಸರ್ವಸ್ವವೆನ್ನ ನೇಹಕ್ಕೆ |
ಮರೆವೆನೆ ನಿಮ್ಮ ನಾ ಯುಗಯುಗಾಂತರಕೆ |
ನೆರೆಹಂಗಿಗನ ಮೇಲೆ ತಪ್ಪೆಣಿಸದಿರಿ |
ನಿರತ ಭಕ್ತರ ಭಾರ ತನಗೆಂದ ಶೌರಿ || ||೧೪೦||
ಭಾಮಿನಿ
ಕೇಳಿ ನಿಜನಾಥೋಕ್ತಿಗಳನಾ |
ಬಾಲೆಯರು ತಾವಂತರಾತ್ಮನ |
ನೀಲಗಾತ್ರನ ತತ್ವವರಿತುಳಿದರು ಮನೋವ್ಯಥೆಯ ||
ಮೇಲೆ ಕೃಷ್ಣನು ಕಳುಹಿರುವ ವನ |
ಮಾಲೆ ಮೃಗಮದ ಗಂಧಗಳ ನಿ |
ತ್ತಾಲಲನೆಯರ ಸಂತವಿಟ್ಟನು ಮುದದೊಳುದ್ಧವನು ||೧೪೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೂಪ ಕುಲಮಣಿ ಕೇಳು ಮತ್ತಾ | ಗೋಪಿಯರು ನಿಜವರಿತು ಮಿಗೆ ಸಂ |
ತಾಪಗಳೆದಾನಂದದಿಂದ ರ | ಮಾಪತಿಯನು ||೧೪೨||
ಶ್ರದ್ಧೆಯಲಿ ಕೀರ್ತಿಸುತ ತತ್ಪದ | ಬದ್ಧಪ್ರೇಮದಿ ವೈಷ್ಣವೋತ್ತಮ |
ನುದ್ಧವನ ವರಸಾಧುಸಂಗದೊ | ಳಿದ್ದರಂದು ||೧೪೩||
ಯದುಕುಲಗೆ ತೋರಿಸಿದರೊಲವಿಂ | ಮಧುಹರನ ನಾಟ್ಯಸ್ಥಳವ ದು |
ರ್ಮದ ವೃಷಭಧೇನುಕ ಬಕಾದ್ಯರ | ವಧಿಸಿದೆಡೆಯ ||೧೪೪||
ಪರಮ ಗೋವರ್ಧನ ಗಿರಿಯ ತಾ | ನಿರುಕಿಸುತಲುದ್ಧವ ಮುದದಿ ಮನ |
ಕರಗಿ ಧನ್ಯತೆವಡೆಯೆ ನಿಂದನು | ಹರುಷದಿಂದ ||೧೪೫||
ಬಂಧುಗಳಿಗುಚಿತಗಳ ರಾಮ ಮು | ಕುಂದರಿಗೆ ಮಿಗಲೀಯೆ ಕೊಂಡಾ |
ನಂದದಿಂ ಬೀಳ್ಕೊಂಡು ಮಧುರೆಗೆ | ಬಂದ ಭಕ್ತ ||೧೪೬||
ಭಾಮಿನಿ
ಬಂದು ರಥದಿಂದಿಳಿದು ಶ್ರೀಶನ |
ಮಂದಿರಕೆ ನಡೆದಿತ್ತು ಕಾಣ್ಕೆಯ |
ವಂದಿಸುತಲುದ್ಧವನು ಕೈಗಳ ಮುಗಿದು ಗೋಕುಲದ ||
ಮಂದಿಯನುರಾಗವನು ಬಿನ್ನಹ |
ವೆಂದು ವಿಸ್ತರಿಸುತ್ತಲಿತ್ತನು |
ನಂದಮುಖ್ಯರು ಕೊಟ್ಟ ವಸ್ತುವ ಪ್ರಕರದುಡುಗೊರೆಯ ||೧೪೭||
ರಾಗ ಕಾಂಭೋಜಿ ಝಂಪೆತಾಳ
ಲಾಲಿಸುತ್ತರೆಯಣುಗ | ಕೇಳಿ ಹೆತ್ತವರ ನಾ | ಮೇಲೆ ಗೋಪೀಜನದ ಕುಶಲ ||
ತಾಳಿ ಸಮ್ಮದವ ಕರು | ಣಾಳು ಹೊಂಪುಳಿವೋದ | ಪೇಳಲೇನವನ ವಾತ್ಸಲ್ಯ ||೧೪೮||
ಭಕ್ತರನುರಾಗವನು | ಚಿತ್ತದೊಳು ನೆನೆದಶ್ರು | ವೊತ್ತಿಪುಳಕದಲಿ ಮೈನೆನೆದ ||
ಮತ್ತೆ ನಂದನು ಬಂಧು | ಮೊತ್ತಕಿತ್ತುಡುಗೊರೆಯ | ನಿತ್ತನುದ್ಧವನು ನಲವಿಂದ ||೧೪೯||
ಮುಂದೆ ನೆಮ್ಮದಿಯೊಳಿ | ದ್ದೊಂದು ದಿನ ಗೋಪಾಲ | ಹಿಂದೆ ಸೈರಂಧ್ರಿಗೊರೆದಂತೆ ||
ಸುಂದರಿಯ ಮನೆಗೆಯ್ದಿ | ಸಂದ ಭಕ್ತಾಧೀನ | ನೆಂದೆಂಬ ಬಿರುದ ಪೋಷಿಸಿದ ||೧೫೦||
ವಾರ್ಧಕ
ನರಸುತಾತ್ಮಜಕೇಳು ಪೆರತೊಂದು ದಿನ ರಮಾ |
ವರಗಾಂದಿನೀಸುತನ ಮನೆಗೆ ಬಿಜಯಂಗೆಯ್ದು |
ಹರುಷದಿಂ ಭಕ್ತವರನೆಸಗಿದುಪಚಾರಗಳ ಕೈಕೊಂಡು ವರವನಿತ್ತು ||
ನೆರೆ ಕೃತಾರ್ಥನಗೆಯ್ದು ಮತ್ತವನ ಹಸ್ತಿನಾ |
ಪುರಕೆ ಕಳುಹಿಸಿ ಪಾಂಡುಸುತರ ಕುಶಲವನರಿತು |
ಚರಣ ಭಜಕರ ಕಾಂಕ್ಷಿಗಳನೊದಗಿಸುತ ಮಧುರೆಯೊಳಗಿರ್ದ ನಿತ್ಯಾತ್ಮನು ||೧೫೧||
ಪ್ರಥಮ ಸಂಧಿ ಸಂಪೂರ್ಣ
ದ್ವಿತೀಯ ಸಂಧಿ
ವಾರ್ಧಕ
ಭೂರಮಣ ಕೇಳ್ಮುನ್ನ ಮಗಧನಭವನನೊಲಿಸಿ |
ಭೇರಿತ್ರಯವ ಪಡೆದು ಭುಜಗರ್ವದಿಂ ನೃಪರ |
ಸೂರೆಗೊಂಡಾ ಚೈದ್ಯ ಬಾಣಾಸುರರ ಕೆಳೆಯ ಗಳಿಸಿ ಸಮ್ರಾಟನೆನಿಸಿ ||
ಭೂರಿ ಮಾರ್ಬಲ ಸಹಿತ ಸುಖದಿಂ ಗಿರಿವ್ರಜದಿ |
ಪೌರಸಚಿವಾಪ್ತರಿಂದೋಲಗದೊಳೊಂದು ದಿನ
ಧೀರನಿರೆ ವೈಧವ್ಯ ಶೋಕವಿಹ್ವಲೆಯರಣುಗೆಯರೈದಿ ಮಣಿದೆಂದರು ||೧೫೨||
ರಾಗ ಸಾವೇರಿ ಆದಿತಾಳ
ಜನಕನೆ ನೋಡಿದೆಯ | ನಿನ್ನಯ ಮುದ್ದು | ತನುಜಾತೆಯರ ವಿಧಿಯ |
ಮನದೆರೆಯನ ವಧಿಸಿ | ಶತ್ರುಗಳೀ ಭ | ವಣೆಯಿತ್ತರೆಮಗೆ ಸಾಸಿ || ಜನಕನೆ ||೧೫೩||
ಏತಕೆಮ್ಮಯ ಬದುಕು | ಕೊಡಿಸು ಪ್ರಾಣ | ಘಾತಕೊಂದಾಜ್ಞೆ ಸಾಕು |
ತಾತ ಮುತ್ತೈದೆ ಭಾಗ್ಯ | ತಪ್ಪಿದ ಘೋರ | ಪಾತಕಿಗಳಿವೆ ಯೋಗ್ಯ || ಜನಕನೆ ||೧೫೪||
ಶರ್ವನನೊಲಿಸಿ ನೃಪ | ವರ್ಗವ ಜೈಸಿ | ಸಾರ್ವಭೌಮಕನಿಪ |
ಗರ್ವಬಿಸುಡು ಕಂಸನ | ದುರ್ಮರಣದಿ | ಸರ್ವವಿಖ್ಯಾತಿ ಶೂನ್ಯ || ಜನಕನೆ ||೧೫೫||
ರಾಗ ಮಾರವಿ ಏಕತಾಳ
ಕೇಳುತಲಚ್ಚರಿ | ದಾಳುತ ಮಗಧನೃ | ಪಾಲಕ ತಲೆದೂಗಿ ||
ಕಾಲಗತಿಯೆ ಮೃಗ | ಜಾಲ ಕೇಸರಿಯನು | ಸೀಳಿತೆ ಶಿವಯೆಂದ ||೧೫೬||
ಹಾ ಯದುವಂಶ ವಿ | ಹಾಯಸಭಾನು ಸ | ಹಾಯವ ತೊರೆದೆಮ್ಮ ||
ಕಾಯವ ಬಿಸುಟೈ | ಕಾಯೆ ಜಸವ ನಮ | ಗಾಯಿತು ದುಷ್ಕೀರ್ತಿ ||೧೫೭||
ಬಂದ ಭವಣೆಗಿ | ನ್ನೆಂದರೆ ಫಲವೇ | ನೆಂದಿಗು ಬಿಡೆಹಗೆಯ ||
ಕೊಂದವರುಸುರನು | ನಂದಿಸಿ ವಿರಮಿಪೆ | ನಿಂದುಧರನೆ ಸಾಕ್ಷಿ ||೧೫೮||
ತರಳೆಯರಿರ ನಿ | ಮ್ಮರಸನಿಕ್ಕಿದ | ವರು ವಿಧಿಹರಿಹರರ ||
ಮರೆಹೊಕ್ಕರು ಸಂ | ಹರಿಸುವೆ ಬೆದರದಿ | ರರುಹಿ ನಡೆದ ಪರಿಯ ||೧೫೯||
ರಾಗ ಕೇತಾರಗೌಳ ಅಷ್ಟತಾಳ
ತಾತ ಕೇಳ್ನಿನ್ನ ಜಾ | ಮಾತನು ನಂದ ಸಂ | ಜಾತರ ಬಲಕೃಷ್ಣರ ||
ಓತು ಕರೆಸಲು ಬಿ | ಲ್ಲೌತಣ ಕೈತಂದು | ಖ್ಯಾತರು ಮಧುರೆಯೊಳು ||೧೬೦||
ತರಿದು ರಜಕನನ್ನು | ಪೊರೆದು ಕುಬ್ಜೆಯ ಮದ | ಕರಿಯ ಮರ್ದಿಸಿ ಮಲ್ಲರ ||
ಮುರಿದು ಕಾಂತನ ಸುರ | ಪುರಕಟ್ಟಿ ನಮ್ಮನೀ | ಪರಿಭವಕಡೆಗೆಯ್ದರು ||೧೬೨||
ವಿಗ್ರಹಕಪ್ಪ ಸ | ಮಗ್ರರು ವ್ರಜದಲ್ಲೆ | ನಿಗ್ರಹಕೊಳಗಾಗಿರೆ ||
ಉಗ್ರಸೇನಗೆ ಪಟ್ಟ | ವಾಗ್ರಹದಿಂ ಕೊಟ್ಟ | ವ್ಯಗ್ರದೊಳೆಲ್ಲ ಕೂಡಿ ||೧೬೩||
ಭಾಮಿನಿ
ಕಾಂತೆ ಸಹ ವಸುದೇವನನು ಬಿಡಿ |
ಸಿಂತು ಯದು ಕುಲಜರು ಸ್ವರಾಜ್ಯವ |
ಪಂಥದಿಂ ಕಟ್ಟಿಯೆ ನಿನಗೆ ಮಲೆತಿರ್ಪರೆನೆ ಕೇಳಿ ||
ಅಂತಕನ ಹೆತ್ತಯ್ಯನೋ ಕ |
ಲ್ಪಾಂತ ರುದ್ರನೊ ಮಗಧ ಧರಣೀ |
ಕಾಂತನೋಯೆನೆ ಮುಳಿದು ಗದ್ದುಗೆ ಹೊಯ್ವುತಿಂತೆಂದ ||೧೬೪||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸಾಕಕಟ ಸುರನರ ಭುಜಂಗಮ | ಭೀಕರನ ಕೊಂದವರು ತುರುಗಳ |
ಸಾಕುವವರೇ ನಮ್ಮ ಮೋರೆಗೆ | ಕಾಕಬಳಿದು ||೧೬೫||
ಗುಟ್ಟುರಿತೆ ವಸುದೇವ ಕುವರನ | ಹಟ್ಟಿಯೊಳು ಮರೆಸಿಟ್ಟು ಕಂಸನ |
ಕುಟ್ಟಿಸಿದ ಮಝ ಬಚ್ಚಲುರಿಮನೆ | ಸುಟ್ಟಹಾಗೆ ||೧೬೬||
ಕಾಲಗತಿ ಕೆಣಕಿದುದು ಯದುಕುಲ | ಜ್ವಾಲೆಯಂ ಶಲಭಗಳವೊಲು ಗೋ |
ಪಾಲ ಬಾಲರ ನಂಬಿ ರಿಪುಗಣ | ಕಾಲನೆನ್ನ ||೧೬೭||
ಹರನೊಲುಮೆ ಮೇಣಬ್ಧಿ ಮುದ್ರಿತ | ಧರಣಿಪರ ಬಲವಿರಲು ಗೋವಳ |
ಕುರಿಗಳೆನಗೀಡಹರೆ ಸಮರದೊ | ಳರಿಯಬಹುದು ||೧೬೮||
ತೋರಿದಪೆನೀ ಕ್ಷಣದಿ ಪ್ರಳಯದ | ಭೈರವನ ಮಾಮಸಕವನು ನೃಪ |
ವಾರ ನೆರೆಯಲೆನುತ್ತ ಗದೆಯನು | ವೀರ ತಿರುಹಿ ||೧೬೯||
ಬಿಡಿರಿ ಚಿಂತೆಯ ಮಕ್ಕಳಿರ ದಿಟ | ಹಿಡಿಯಿರೌ ನಂಬುಗೆಯ ದೂತರು |
ನಡೆಯಿರೈ ಬರಹೇಳಿ ಚೇದಿಯ | ಪೊಡವಿಪತಿಯ ||೧೭೦||
ಭಾಮಿನಿ
ರಸೆಯಧಿಪ ಕೇಳೈದಿ ಚಾರಕ |
ರಸಮಬಲ ಶಿಶುಪಾಲಗರುಹಲು |
ಕುಶಲದಿಂದೈತರೆ ಗಿರಿವ್ರಜನಿದಿರುಗೊಂಡವನ ||
ಎಸೆವ ವಿಭವದಿ ಸತ್ಕರಿಸಿ ನೃಪ |
ಬೆಸಗೊಳಲು ವಾರ್ತೆಗಳ ಚೈದ್ಯನು |
ಪೊಸತಿದೇನೈ ಕಾರ್ಯ ಸಂಗತಿಯೆನುತಲಿಂತೆಂದ ||೧೭೧||
ರಾಗ ಕಾಂಭೋಜಿ ಝಂಪೆತಾಳ
ರಾಯ ಪಡೆವಳ ಮಗಧ | ನಾಯಕನೆ ಕೇಳರಿನಿ | ಕಾಯಾಬ್ಜ ಸರಸಿ ದ್ವಿಪೇಂದ್ರ ||
ಆಯಿತೇನಿಂದು ಪೂ | ರಾಯ ವಿಕ್ರಮ ನಿನ್ನ | ತೋಯಜಾಸ್ಯದಿ ಮಸಗೆ ರೌದ್ರ ||೧೭೨||
ಸಾಗರ ಪರೀತನೆಲ | ದಾಗರುವ ಕ್ಷತ್ರಕುಲ | ವೀಗ ನಿನ್ನಾಜ್ಞೆಗೆರಡೆಣಿಸಿ ||
ಸಾಗಿಸದೆ ಕಾಣಿಕೆಯ | ಕೂಗುವುದೆ ಹಮ್ಮೇರಿ | ಬೇಗನುಡಿ ನುಡಿ ಬಂದ ಭವಣೆ ||೧೭೩||
ಕೇಳಯ್ಯ ದಮಘೋಷ | ಬಾಲ ಸಖ ಮೌಳಿಮಣಿ | ಫಾಲನೇತ್ರನ ದಯದಿ ನೃಪರು ||
ಕೇಳಿ ನಡೆವರು ಮಾತ | ಪೇಳಲೇನೊದಗಿರ್ಪ | ಮೂಲಸಂಗತಿಯ ಚಿತ್ತೈಸು ||೧೭೪||
ಯಾದವಾಭ್ರದ್ಯುಮಣಿ | ಯಾದ ಕಂಸನ ರಾಮ | ಮಾಧವರೆನಿಪ್ಪ ಗೋವಳರು ||
ಕಾದಿ ಮಡುಹಿದರಂತೆ | ವೈಧವ್ಯವಣುಗೆಯರ | ಬಾಧಿಸಿದರೆನಗೆ ದೂರಿದರು ||೧೭೫||
ಕುರಿಗಳಂತಿಹ ಯಾದ | ವರಿಗಿನಿತು ಬಲುಹಾಗೆ | ದೊರೆಗಳಾವಿರ್ದು ಫಲವೇನು ||
ಮುರಿಯಬೇಕೆಂದವರ | ಕರೆಸಿದೆನು ನಿನ್ನ ಮನ | ದಿರವ ತಿಳಿಸೆನಲೆಂದನವನು ||೧೭೬||
ರಾಗ ಭೈರವಿ ಏಕತಾಳ
ಗೋವಳರೇಂ ಮಡುಹಿದರೇ | ಮಧು | ರಾವಲ್ಲಭನನು ಮಝರೆ |
ಈ ವಿಧಯಾದವರೆಸಗೆ | ಬದ | ಲಾವುದು ದುರ್ಯಶವೆಮಗೆ ||೧೭೭||
ಅಂಜದಿರಂಜದಿರರಸ | ರವಿಯಂಜರೆವುದೆ ಬಲು ತಮಸ |
ನಂಜುಗೊರಲ ಬರಲಿಂದೆ | ರಿಪು ಭಂಜನವೆಸಗುವೆ ಬಿಡದೆ ||೧೭೮||
ವೀಳೆಯವನು ಕೊಡು ಧುರಕೆ | ಯದು ಜಾಲದೊಡನೆ ತಡವೇಕೆ ?
ಬೀಳಹೊಡೆದು ಹರಿಬಲರ | ಬಹೆವೇಳು ಕರೆಸು ಭೂವರರ ||೧೭೯||
ಭಾಮಿನಿ
ಪೊಡವಿಪತಿ ಕೇಳಿಂತು ಚೇದಿಪ |
ನುಡಿಯೆ ಹಿಗ್ಗಿ ಗಿರಿವ್ರಜನು ತಾ |
ಪಡೆಯನಿರದಿಪ್ಪತ್ತಮೂರಕ್ಷೋಹಿಣಿಯನಧಟ ||
ಬಿಡದೆ ಕೂಡಿಸಿ ಯಾದವರ ಪಂ |
ಗಡವ ನಿರ್ಮೂಲಿಸಲು ಶರನಿಧಿ |
ಗಡಿಯ ಮಿಕ್ಕೈತಹವೊಲೈದಿದ ಮಧುರೆಗಿದಿರಾಗಿ ||೧೮೦||
ರಾಗ ಭೈರವಿ ತ್ರಿವುಡೆತಾಳ
ನಡೆದುದಾಗ | ಮಧುರೆಗೆ | ಪಡೆಯು ಬೇಗ || ಪಲ್ಲವಿ ||
ಅಡಿಯಿಡುವ ಹತಿಗಿಳೆ ನಡುಗೆ ಕಂ | ಗೆಡಲು ದೆಸೆಧೂಳಿಯೊಳು ಲಗ್ಗೆಯ |
ಗಡಿಬಿಡಿಗೆ ರವಿರಥತುರಗತತಿ | ಗೆಡೆ ಸುಚಾಮರ ಸಿಂಧಸೀಗುರಿ |
ಕೊಡೆಗಳಲಿ ನಡೆವಖಿಳ ಭೂಮಿಪ | ಗಡಣ ಸಹಿತಲೆ ಚೈದ್ಯಮಾಗಧ |
ರಡಸಿ ಕೋಟೆಯ ಮುತ್ತಿದರು ಭೋ | ರಿಡುವ ಭೇರೀಪಟಹ ರಭಸದಿ || ||೧೮೧||
ಕನಕತೋರಣ ಹರ್ಮ್ಯ ಕೃತ್ರಿಮ | ವನವ ಮುರಿದು ಭಟಾಳಿ ಸಿಂಹ |
ಧ್ವನಿಯನೆಸಗಲು ಮಗಧಪತಿಯ | ಪ್ಪಣೆಯೊಳತಿ ಬಲದಂತವಕ್ರನು
ಜನಪ ಸಾಲ್ವವಿಡೂರಥಾದಿಗ | ಳಿನ ದೆಸೆಯ ಪೌಂಡ್ರಕವಿರಾಟರು |
ಕನಲಿ ಬಾಹ್ಲಿಕ ಮುಖ್ಯರಾ ತೆಂ | ಕಣದೆಸೆಯ ಮುತ್ತಿದರು ಬಿಡದೆ || ||೧೮೨||
ಶಲ್ಯಭೂರಿಶ್ರವಯುಧಾಮ | ನ್ಯೂಲ್ಲಸಿತ ಬೃಹಕ್ಷತ್ರ ಶಬರರ |
ವಲ್ಲಭನೆನಿಪ್ಪೇಕಲವ್ಯಕ | ರೆಲ್ಲಪಡುವಲೊಳುತ್ತರದಿ ರಣ |
ಮಲ್ಲ ಚೈದ್ಯಕಳಿಂಗ ಸಾಹಸ | ವುಳ್ಳ ಸೈಂಧವ ಶಕುನಿ ಮುಖ್ಯರು |
ಬಲ್ಲಿದರು ವರಸೋಮದತ್ತಕ | ರಲ್ಲಿ ಮಾಗಧ ಸಹಿತ ಮುತ್ತುತ || ||೧೮೩||
Leave A Comment