ವಾರ್ಧಕ

ಜಯತು ಜಯ ಕರುಣಾಲವಾಲ ಮಾನುಷಲೀಲ |
ಜಯತು ಜಲದ ನಿಭಾಂಗರಂಗ ಗೋಕುಲ ಸಂಗ |
ಜಯ ಕಾಶ್ಯಪಾಪತ್ಯ ನಿತ್ಯ ಸಜ್ಜನ ಭ್ಯತ್ಯ ಜಯತು ಸಂಹಾರ ದೈತ್ಯ ||
ಜಯ ಕಮಲ ಭವತಾತದಾತ ಭರ್ಗ ಪ್ರೀತ |
ಜಯ ಸಚ್ಚಿದಾನಂದ ನಂದಪಿತ ಮಾಕಂದ |
ಜಯನುತ ಸಹಸ್ರಾಕ್ಷ ರಕ್ಷನರಹರ್ಯಕ್ಷ ಜಯತುಜಯ ಸಲಹೆಂದನು ||೬೪||

ರಾಗ ಶಂಕರಾಭರಣ ತ್ರಿವುಡೆತಾಳ

ಆವ ನೋಂಪಿಯೊ ನಿಮ್ಮ ದರ್ಶನ | ಕಾವ ಪುಣ್ಯ ಫಲಿಸಿತೊ |
ಸೇವಕಗೆ ಬೆಸನೇನು ಕಜ್ಜಗ | ಳಾವುವೊಡೆಯ ||೬೫||

ಎನಲು ಕೇಶವನೆಂದ ಸಾಂದಿಪ | ತನುಜ ನಳಿದ ಕಡಲೊಳು |
ದನುಜ ಶಂಖನೊಳಾತನಂ ತೋ | ರೆನೆ ನುಡಿದನು ||೬೬||

ಮೀರೆನಾಜ್ಞೆಯನೆಲ್ಲ ಜೀವರು | ಪ್ರಾರಬುಧದ ಕರ್ಮದಿ |
ಸೇರುವರು ನರಕವನಿದಕೆ ಪರಿ | ಹಾರವುಂಟೆ ||೬೭||

ಮರುಳಲಾ ನಾನೊಲಿದ ಪ್ರಾಣಿಗೆ | ದುರಿತ ಬಾಧೆ ಇರ್ಪುದೆ |
ಭರದೊಳೀಯೆನಲಿತ್ತನಂತಕ | ಗುರುತನಯನ ||೬೮||

ವಾರ್ಧಕ

ಹರಿಕುಲಜ ಕೇಳವನ ಹರಿಯಿತ್ತು ಸುಲಲಿತಲ |
ಹರಿಯಡಿಗೆ ವಂದಿಸಲು ಹರಿಯವನ ಬೀಳ್ಕೊಂಡು |
ಹರಿವೇಗದಿಂದಾಗ ಹರಿಲಿಂಗ ನಗರಕ್ಕೆ ಹರಿತಂದು ಗುರುವಿನಡಿಗೆ||
ಹರಿಸದಿಂದೆರಗಿ ಬುಧ ಹರಿಸುತನನೀಯಲ್ಕೆ |
ಹರಿಜಾನ್ವಯಂ ಪೊಗಳೆ ಹರಿಯದಾನಂದದಿಂ |
ಹರಿತ ಪೀತಾಂಬರರ ಹರಸಿದಂ ಸಾಕ್ಷಾತ ಹರಿಯಂಶರೆಂದು ಬಗೆದು ||೬೯||

ರಾಗ ಧನಾಸರಿ, ರೂಪಕತಾಳ

ಧನ್ಯನಾದೆನೈ ಭಲಾ | ಜೀವಿತ ಸಫಲ || ಧನ್ಯನಾದೆನೈ ಭಲಾ || ಪಲ್ಲವಿ ||

ಪುಣ್ಯ ಪುರುಷರೆನಗೆ ನೀವಾ | ಪನ್ನರಾದ ಬಳಿಕ ಜಗದಿ || ಧನ್ಯನಾದೆನೈ || ಅ.ಪ ||

ತಿಳಿದು ಕೊಂಬುದೀ ರಹಸ್ಯ | ಖಳರಾದರೆ ನೃಪರಧರ್ಮ |
ಬೆಳೆವುದವರೆ ಭೂಮಿಭಾರ | ಬೆಳೆಯಬೇಲಿ ಮೇವತೆರದಿ || ಧನ್ಯ ||೭೦||

ಕ್ಷಿತಿಗಧೀಶರಾಗಿ ಸಾಧು | ತತಿಶರಣ್ಯರಾಗಿ ಕೀರ್ತಿ |
ಯುತ ಮಹಾತ್ಮರಾಗಿರೆಂದು | ಶ್ರುತಿವಿದನಾಶೀರ್ವದಿಸಲು || ಧನ್ಯನಾದೆನೈ ||೭೧||

ವಾರ್ಧಕ

ಗುರುವ ಬೀಳ್ಕೊಂಡು ಬಲಕೃಷ್ಣರೊಲವಿಂ ಬರಲು |
ಹರುಷದಿಂ ಮಧುರಾಪುರದ ಜನರ್ಶಶಿಯಿದಿರ |
ಶರಧಿಯಂತುಬ್ಬೆದ್ದು ಸಂಭ್ರಮದಿ ಕರೆತರಲು ರಥವನಿಳಿದತುಳ ಬಲರು ||
ಹಿರಿಯರಿಗೆ ವಿಪ್ರರಿಗೆ ತಾಯ್ತಂದೆಗಳಿಗೆರಗು |
ತರಮನೆಯ ಪೊಕ್ಕರತಿ ವಿಭವದಿಂದಾ ಮೇಲೆ |
ಹರಿಯೊಲಿಯಲಾವುದರಿದಾಯ್ತಭ್ಯುದಯಕೆ ಮೊದಲಾಯದುಪ್ರವರ ಕುಲಕೆ ||೭೨||

ಭಾಮಿನಿ

ಇಂತು ಮಧುರಾಪುರದಿ ಬಲ ಮಾ |
ಕಾಂತರಖಿಳ ಸುಬಾಂಧವರನ |
ತ್ಯಂತ ಸುಖ ಸಾಮ್ರಾಜ್ಯದೊಳು ವಿಹರಿಸುವವೋಲೆಸಗಿ ||
ಸಂತಸದೊಳಿರೆ ಕೃಷ್ಣನೊಂದಿನ |
ಚಿಂತಿಸುತ ಗೋಕುಲವ ತನ್ನೇ |
ಕಾಂತ ಭಕ್ತರ ದೇವನುದ್ಧವನನ್ನು ಕರೆದೆಂದ ||೭೩||

ರಾಗ ಕಲ್ಯಾಣಿ ಝಂಪೆತಾಳ

ಭಾಗವತ ಗಗನರವಿ | ಪೋಗು ಗೋಕುಲದಾ ವಿ |
ಯೋಗಿಗಳ ಮನದ ತಮ | ನೀಗಿಸು ಕೃತಾತ್ಮ  || ಪಲ್ಲವಿ ||

ದ್ತಂದೆ ತಾಯಿಗಳನ್ನು | ಬಂಧು ಬಳಗಂಗಳನು |
ದಂದುಗವಗೊಳಿಸಿದೆನು | ಸಂದೇಹವೇನು ||
ಸಂದ ಕಾರ್ಯಕ್ಕಾಗಿ ಬಂದೆನವರನು ತೊಲಗಿ |
ಹಿಂದೈದಲೆಂತು ನೀ | ನಿಂದರುಹು ಸುಗುಣಿ ||೭೪||

ಎನ್ನನೇ ನಂಬಿ ಮನವನ್ನಿರಿಸಿ ಗೋಪಿಜನ |
ಚಿಣ್ಣಮನೆ ಕಾದಲರ | ಗಣ್ಯವಿಡದವರ ||
ಸನ್ನುತೆಯರನು ಹರಣದನ್ನೆಯರ ವಂಚಿಪೆ ನಾ |
ಗನ್ನಗತಕದೊಳೆಂತು ಅನ್ಯಾಯವಾಂತು ||೭೫||

ನೀನೆನ್ನ ನಚ್ಚಿನ ಸಮಾನ ಬಾಂಧವ ನಾ ಸ |
ತೀನಿವಹ ಮೀನಾಂಕ ಬಾಣಹತಿಗನಕ ||
ಹಾನಿಗೊಳದಿರೆ ಭಕ್ತ ಪ್ರಾಣ ತಾನೆಂದೆನುತ |
ಜಾಣ ಪೇಳ್ದವರ ಸುಮ್ಮಾನದಿಂದಿರಿಸು || ||೭೬||

ಭಾಮಿನಿ

ಹರಿಯ ವಚನವ ವೈಷ್ಣವೋತ್ತಮ |
ಶಿರದೊಳಾಂತಡರುತೆ ವರೂಥವ |
ತೆರಳಿ ಬರೆ ಗೋಕುಲಕೆ ರವಿ ಪಡುವೆಟ್ಟೆಡೆಯ ಸೇರೆ ||
ಪರಿಕಿಸಲು ಕಾಲಾಖ್ಯ ವಣಿಜನು |
ಧರೆಯ ಜನರಾಯುವನಳೆದು ಬದಿ |
ಗಿರಿಸಿರುವ ಚೆಂಬೊನ್ನ ಬಳ್ಳದೊಲೆಸೆಯಲಿನಬಿಂಬ ||೭೭||

ವಾರ್ಧಕ

ಬರುತ ಕಂಡನು ಭಕ್ತ ಮುಂದೆಸೆವ ಗೋಕುಲವ |
ನರಸ ನಿದ್ರಾಸಕ್ತನಯ್ಯಂ ಜಡಾಶ್ರಯಂ |
ತರಳನ ಶರೀರನೊಡವುಟ್ಟಿದಂ ಕ್ಷಯರೋಗಿಯೆನುತರಮೆ ತನಗಿರಲ್ಕೆ ||
ವರನಿಲಯಮಂ ಪುಡುಕುತಿಳೆಯೊಳೀ ವ್ರಜದಿ ಸು |
ಸ್ಥಿರವಾಗಿ ನೆಲಸಿ ಹರಿಯವತರಿಸೆ ಪಾಲ್ಗೆ ಸ |
ಕ್ಕರೆ ತೀವಿದಂತಾಗೆ ಮಧುರೆಗಿನನೈದಲೊಡನೈದದಿಹಳೆಂಬ ತೆರದಿ ||೭೮||

ಕಂದ

ತುರುವಿಂಡುಗಳಂ ಕರುಗಳ |
ನೆರವಿಯ ಮನೆಮನೆಯ ದೇವ ಪೂಜೆಯ ಗೋಪೀ ||
ಹರಿಕೀರ್ತನೆಗಳ ಸೊಬಗಂ |
ನಿರುಕಿಸಿ ಕೈಜೋಡಿಸುತ್ತೆ ಗೋಕುಲವೊಕ್ಕಂ ||೭೯||

ಭಾಮಿನಿ

ಸ್ಯಂದನವನಿಳಿಯುತ್ತ ವಾತಕಿ |
ನಂದಗೋಪನ ನಿಲಯ ಕೈದಲು |
ಮುಂದೆ ಕಾಣುತ ಪೋದ ಹರಣವು ಮರಳಿ ಬಂದವೊಲು ||
ನಂದ ಕರೆದೊಯ್ದರ್ಘ್ಯ ಪಾದ್ಯವ |
ಬಂಧುವಿಂಗಿತ್ತುಪಚರಿಸುತಾ |
ನಂದದಿಂ ಮಾರ್ಗಾಯಸವ ಕಳೆದುಣಿಸುಕೊಳ್ಳುಣಿಸ ||೮೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕುಳ್ಳಿರಿಸಿ ಮಂಚದಲಿ ಮೃದುಪದ | ಪಲ್ಲವವನೊತ್ತುತ್ತ ಲಕ್ಷ್ಮೀ |
ವಲ್ಲಭನ ಸಮವೆಣಿಸಿ ನಂದನು | ಸೊಲ್ಲಿಸಿದನು ||೮೧||

ಕುಶಲನೇ ವಸುದೇವ ದೇವಕಿ | ಯಸುರಹರ ಬಲರಿಹರೆ ಸೌಖ್ಯದೊ |
ಳೆಸೆವ ನಮ್ಮಾಪ್ತರು ಸತೀಸುತ | ವಿಸರದೊಡನೆ ||೮೨||

ಚಿತ್ತವಿಭ್ರಮ ದೂರರೇ ಭು | ಕ್ತೋತ್ತಮರು ಪೊಸತೈಸೆಬಹುದು ಕೃ |
ತಾರ್ಥನಾದೆನೆನುತ್ತ ನುಡಿದನು | ಮತ್ತೆ ನಂದ ||೮೩||

ರಾಗ ಕೇತಾರಗೌಳ ಝಂಪೆತಾಳ

ವೃಷ್ಣಿಕುಲವನ ಚಂದನಾ | ನೆನೆವನೇ | ಕೃಷ್ಣನೆಮ್ಮನು ದೀನನ |
ತೃಷ್ಣೆಯನು ಪರಿಹರಿಸಲು | ಬಹನೆಂದು | ಜಿಷ್ಣು ವಾಹಾಭ ಪೇಳು ||೮೪||

ನಂದಗೋಕುಲವಮೇಣು | ಗೋಧನವ | ವೃಂದಾವನವ ತನ್ನನು |
ಒಂದೆ ಭಾವದಿ ನಂಬಿಹ | ಗೋಪಿಯರ | ವೃಂದವನು ನೆನೆವನೇ ಹಾ ||೮೫||

ವಾತಾದಿ ಖಳರ ಕೊಂದ | ಅತಿವೃಷ್ಟಿ | ಪಾತಕಚಲವ ನೆತ್ತಿದ |
ಘಾತಿಸಿದ ಕಾಳೀಯನ | ಕಾಳುರಿಯ | ಭೀತಿಯನು ತಣಿಸಿದವನ ||೮೬||

ನೀಲಗಾತ್ರನ ಮೋಹನ | ಮೂರುತಿಯ | ಬಾಲಲೀಲೆಗಳ ತೆರನ |
ಪೇಳೆಷ್ಟು ದಿನಕೆ ಕಾಂಬೆ | ಹರಿತೋರ್ಪ | ಕಾಲವಿನ್ನಾವುದೆಂಬೆ ||೮೭||

ಕಂದ

ಇಂತಾನಂದಂ ಹರಿಗುಣ |
ಚಿಂತನೆಯೊಳ್ ಮಿಗೆ ಸಮಾಧಿಗತನೆಂದೆಂಬೊಲ್ ||
ಸ್ವಾಂತಾನಂದದೊಳುಸಿರದೆ |
ನಿಂತಿರಲವನರಸಿಯುದ್ಧವಂಗಿಂತೆಂದಳ್ ||೮೮||

ರಾಗ ಬೇಗಡೆ ತ್ರಿವುಡೆತಾಳ

ಬಾಲನೆಂದಿಗೆ ಬಂದಪ | ಯದುಕುಲದೀಪ | ಬಾಲನೆಂದಿಗೆ ಬಂದಪ || ಪಲ್ಲವಿ ||

ಬಾಲನೆಂದಿಗೆ ಬರುವ ತುರುಗಳ | ಸಾಲ ಬೆಂಬಲಿ ಕೊಳಲನೂದುತ |
ಮೇಳದಣುಗರ ಕೂಡೊಲಿದು ಗೋ | ಪಾಲ ಮಕ್ಕಳ ಮಾಲಿಕಾ ಮಣಿ ||
ಬಾಲನೆಂದಿಗೆ ಬಂದಪ ||  || ಅನು ಪಲ್ಲವಿ ||

ಚೆನ್ನಕೇಶವ ಮೊಸರ | ಹಾಲನು ಮೇಣು | ಬೆಣ್ಣೆಯ ಗೋಪಿಯರ |
ಕಣ್ಣನೂ ಮರೆಗೆಯ್ದು ಕಳುತಲೆ | ಮಣ್ಣನೂ ಮೆಲುತಿರಲು ಕಂಡವ |
ನಣ್ಣನೂ ಕರೆದೊಯ್ದು ತೋರಿದ | ಡೆನ್ನನೂ ನಾ ಕೇಳಲಿಲ್ಲೆಂ |
ದೆನ್ನುತಲಿ ಪ್ರಾಮಾಣ್ಯಕಾಕಳಿ | ಪನ್ನಮಲ್ಲಿಳೆ | ಯನ್ನು ಕಂಡಾ |
ಪನ್ನಳಾದರೆ ಚಿನ್ಮಯಾಂಗ ಪ್ರ | ಸನ್ನನಾಗುತ್ತೆನ್ನ ಪೊರೆದ || ಬಾಲ ||೮೯||

ಮತ್ತೊಮ್ಮೆ ಮೊಲೆಗುಡಿದು | ದಣಿಯುವ ಮೊದ | ಲತ್ತ ಪೋದರೆ ನಾನಂದು |
ಸುತ್ತಲೂ ಚೆಲ್ಲುತ್ತ ಮೊಸರನು | ಹತ್ತಲೂ ನೆರೆಮನೆಗೊಡನೆ ಬೆಂ
ಬತ್ತಲು | ನಗು ತೋಡುವನ ಬಲಿ | ದಿತ್ತಲೂ ನಾ ತಿರುಗಲೊರಳೆಳೆ |
ಯುತ್ತ ಶ್ರೀಹರಿಕಿತ್ತಡಾಜುಗ | ಮತ್ತಿಗಳ ನಾವತ್ತಡಿರುತಲಿ |
ನಿತ್ಯನಾಗಿ ಕೊಲುತ್ತ ಖಳರಗ | ವೆತ್ತಿ ಮಧುರೆಗೆ ಕೂರ್ತು ನಡೆದ || ಬಾಲನೆಂದಿಗೆ ||೯೦||

ಭಾಮಿನಿ

ಅರಸ ಕೇಳೈ ಹರಿಗುಣವ ನೀ |
ತೆರದಿ ಹೊಗಳುತ ಹರುಷರಸದು |
ಬ್ಬರದ ಪುಳಕದಿ ತನುವ ಮರೆತಿರಲಂಬುರುಹವದನೆ ||
ಇರೆ ಯಶೋದಾನಂದರನು ವಿಭು |
ವಿರಹ ಸಂತಪ್ತರನು ವೈಷ್ಣವ |
ರೆರೆಯ ಕಂಡತಿ ಭಕ್ತಿಯಲಿ ಮಣಿದೆಂದನುದ್ಧವನು ||೯೧||

ರಾಗ ಸುರುಟಿ ಅಷ್ಟತಾಳ

ಶೋಕಿಪುದೇತಕೆ ಗೋಕುಲದೆರೆಯ | ನಾಕಾಣೆ ತವಪುಣ್ಯಾನೀಕಕೆ ದೊರೆಯ ||
ಶೋಕಿಪು || ಪಲ್ಲವಿ ||

ಆರುಂಟು ನಿಮ್ಮಂತೆ | ಧಾರಿಣಿ ಮಧ್ಯದಿ | ಭೂರಿಭಾಗ್ಯರು ಮುನಿ | ವಾರ ಹೃತ್ಪಂಕಜ |
ದೂರ ಶ್ರೀ ಕೃಷ್ಣನೊಳು | ಪುತ್ರಪ್ರೇಮ | ಬೇರುವರಿಯೆ ಕೃಪಾಳು |
ನಿಮ್ಮೊಲು ಧನ್ಯ | ರಾರು ತ್ರೈಗುಣಗಳೊಳು |
ತುಂಬಿದ ಮಾಯಾ | ನಾರಿಯಾವನ ಸೇವಿಪಳು ನಿತ್ಯಪೇಳು || ಶೋಕಿಪು ||೯೨||

ಈ ವಸುಂಧರೆ ದೂರ | ಲಾ ವಿಶ್ವಂಭರ ವಾಸು | ದೇವಾಖ್ಯೆಯಲಿ ಬಂದ | ನಾವನ ನಾಮವ |
ಜೀವಪೋಪಾವೇಳ್ಯದಿ | ಜಪಿಸಿದರೊಮ್ಮೆ | ಕೇವಲವಾ ಕೃತ್ಯದಿ |
ಮುಕ್ತಿಯ ಕೊಡು | ವಾ ವೈಕುಂಠನು ನಿಜದಿ |
ನಂದನನೆಂಬ | ಭಾವನೆಗೊಳಗಾದ ಮೇಲಿನ್ನು ಗುಣಧಿ || ||೯೩||

ಅಂತಿಕದೊಳಗಿರ್ದ | ಚಿಂತ್ಯ ತೊಲಗಿದ ನಿ | ಮ್ಮಂತರಂಗ ವ್ಯಥೆ | ಗಂತರಾತ್ಮನು ಶ್ರೀ |
ಕಾಂತನಲ್ಲವೆ ಯೋಚಿಸು| ನಿನ್ನೊಳು ಕಂಡ | ನಂತನ ಸುಖಿಯೆನಿಸು |
ಸರ್ವಾತ್ಮನ | ಚಿಂತೆಯೊಳಾನಂದಿಸು |
ಸುತಪಿತರೆಂಬ | ಭ್ರಾಂತಿ ಸಲ್ಲದು ತತ್ವವರಿಯಲು ಲೇಸು || ||೯೪||

ಎರಡೊಂದು ಗುಣದೊಳು | ಭರಿತನೆನಿಸಿ ವಿಧಿ | ಹರಿಹರರೂಪದಿ | ಪೊರೆವನು ಜಗವನ್ನು
ಪರಂಜ್ಯೋತಿಯಂತ್ಯದಲಿ | ಏಕಾಂಗಿಯಾ | ಗಿರುವ ಚಿಲ್ಲೀಲೆಯಲಿ |
ತಾ ತಿರುಗಿಳೆ | ತಿರುಗಿತೆಂಬಂದದಲಿ |
ತೋರ್ಪನು ತಥ್ಯ ವರಿಯದ ಮೂಢರ್ಗೆ ನಿರ್ಗುಣನೆಂದು ತಿಳಿ || ||೯೫||

ಕಂದ

ಇಂತೆನುತುದ್ಧವ ನಂದನ |
ಸಂತೈಸುತಲಾತ್ಮ ವಿದ್ಯೆಯಂ ತಿಳಿಯುವವೊಲ್ ||
ತಾಂ ತತ್ವನರುಹುತ ಬಳಿ |
ಕಂ ತರುಣೀಮಣಿ ಯಶೋದೆಗೆಂದನು ನಯದಿಂ ||೯೬||

ರಾಗ ನವರೋಜು ಆದಿತಾಳ

ಲಾಲಿಸು ನಂದನ ಜಾಯೆ | ಶ್ರೀಲೋಲನ ಸಾಕಿದ ತಾಯೆ |
ಪೇಳುವುದೇನು ವಿ | ಶಾಲಮತಿಯೆ ನಿನ್ನ |
ಪೋಲುವ ಸತಿಯರು | ಮೂಲೋಕದಿ ನಹಿ || ಲಾಲಿಸು ||೯೭||

ಚೆನ್ನಿಗಗೇ ಮೊಲೆಗೊಟ್ಟು | ಮೇಣು | ರನ್ನದೊಟ್ಟಿಲೊಳಿಟ್ಟು |
ಕನ್ನೈದಿಲ ಮೈ | ಬಣ್ಣನ ಸಲಹಿದೆ |
ಮನ್ನಣೆಯಲ್ಲಿದು | ಧನ್ಯಳು ನೀನಿಜ || ಲಾಲಿಸು ||೯೮||

ಜಗದಯ್ಯ ಮಾಧವನು | ನಿನ್ನ | ಮಗನೆಂದೆಂಬರೆ ತಾನು |
ಮಗನಾಗನೆ ಲೌ | ಕಿಗರೆಲ್ಲರಿಗಿದು |
ನಿಗಮ ವಚನವೆನ | ಲಗಲದೆಂತಿರ್ಪನು || ಲಾಲಿಸು ||೯೯||

ಇಳೆಯ ದುಷ್ಟರಕೊಂದು | ಸುರ | ಕುಲವ ರಕ್ಷಿಸ ಬಂದು |
ಬಳೆದೀಯೆಡೆ ನಿಜ | ಕೆಲಸಕೈದಿದ ಹರಿ |
ಸಲಹುವೆ ಬಿಡಿಮನ | ದಳಲೆಂದುಸುರಿದ || ಲಾಲಿಸು ||೧೦೦||

ಭಾಮಿನಿ

ಎಂದು ಭಕ್ತರ ದೇವನುದ್ಧವ |
ತಂದ ಹರಿಯುಚಿತಗಳ ನಿತ್ತಾ |
ನಂದ ಗೋಪಯಶೋದೆಯರ ಸುತವಿರಹ ಶೋಕಾಗ್ನಿ ||
ನಂದುವಂದದಿ ಸೂಕ್ತಿಯಮೃತದ |
ಬಿಂದುಗಳ ಸುರಿಸುತ್ತಲಿರೆ ನಿಶಿ |
ಸಂದುದರೆಗಳಿಗೆಯವೊಲಾ ಗೋವಿಂದ ದಾಸರಿಗೆ ||೧೦೨||

ವಾರ್ಧಕ

ಪೂರ್ವದಿಕ್ಕಾಮಿನಿಯ ಮೊಗದ ಸೆಂದುರವೆಳಗೊ |
ಶರ್ವರೀಕರ ಸಖಿಯ ಕೀಳ್ಗೈದು ಪದ್ಮಿನಿಯು |
ಬೀರ್ವ ಹಾಸದ್ಯುತಿಯೊ ರವಿ ರಥಾಶ್ವಗಳ ಖುರಹತಿಗೆದ್ದ ಕೆಂದೂಳಿಯ ||
ಪರ್ವುಗೆಯೊ ಪೇಳಲರಿದೆಂಬನಿತರೊಳ್ ಕೂಗ |
ಲುರ್ವರೆಯನೆಚ್ಚರಿಸೆ ಕುಕ್ಕುಟಂ ಖಳರೆದೆಯ |
ಗುರ್ವಿಸಲು ಮರ್ಬುಗಿರಿ ಗುಹೆಯ ಪಥವಂ ಪಿಡಿಯಲರುಣೋದಯಂ ಮೆರೆದುದು ||೧೦೩||

ರಾಗ ಸಾಂಗತ್ಯ ರೂಪಕತಾಳ

ಅರಸ ಕೇಳಾ ಸಮಯದೊಳೆದ್ದು ಗೋಪಿಕೆ | ಯರು ಸುಸ್ವರದಿ ಮನವೊಲಿದು ||
ಹರಿಲೀಲೆಗಳ ಭಕ್ತಿ | ಭರದಿ ಪಾಡುತಲಿ ಮೊ | ಸರ ಕಡೆವುತ್ತಿದ್ದರಂದು ||೧೦೩||

ದುರುಳರ ತರಿದೆ ಕಾ | ಳುರಿಯ ನಂದಿಸಿದೆ ಶ್ರೀ | ವರನೆ ಮೈದೋರುದೋರೆನುತ ||
ಸ್ಮರಿಸಲು ಪರಿಯೆ ತಿಮಿರ ಹರಿಭಜನೆಯಿಂ | ದುರಿತ ಹಿಂಗುವ ತೆರದಿಂದ ||೧೦೪||

ನೀರೆಯರುದಯದೊಳಾ ರಾಜಗೇಹದ | ದ್ವಾರದೊಳಿಹ ದಿವ್ಯರಥವಾ ||
ವಾರುವಗಳ ಕಂಡು | ಭೂರಿ ಚೋದಿಗಗೊಂಡು | ಯಾರೋ ಬಂದಿಹರೆಂದು ನೆನೆಸಿ ||೧೦೫||

ವಾರ್ಧಕ

ವಾರಿಜಾಕ್ಷಿಯರು ನಿಜವರಿಯದೋರೋರ್ವರೆ ವಿ |
ಚಾರಿಸಲು ರಥದೆಡೆಗೆ ಬಂದು ನೆರೆಯಲ್ಕಿತ್ತ |
ವೀರವೈಷ್ಣವನುದ್ಧವಂ ಸೂರ್ಯನುದಯದೊಳು ನಿತ್ಯಕರ್ಮಗಳನೆಸಗಿ ||
ನಾರಿಯರನೀಕ್ಷಿಸಲ್ಕಾ ಸ್ಥಳಕೆ ಬರುತಿರಲ್ |
ದೂರದಿಂ ಸತಿಯರಾತನ ನೋಡಿ ಮನದೊಳಿವ |
ನಾರಹನೆನುತ್ತೋರ್ವರೋರ್ವರಂ ಕುರಿತು ಪ್ರಸ್ತಾಪವೆತ್ತುತ ನುಡಿದರು ||೧೦೬||

ರಾಗ ಯಮುನಾ ಕಲ್ಯಾಣಿ ಅಷ್ಟತಾಳ

ಯಾರಿವನಮಮ ಸುಂದರಗಾತ್ರ | ಮದನ
ವೀರನ ಪಳಿವುತಿಹನು ಚಿತ್ರ || ಯಾರಿವ  || ಪಲ್ಲವಿ ||

ಅರಳುಗಂಗಳ ನಗೆಮೊಗ ನೋಡೆ | ಕೊಂಕು –
ಗುರುಳದಂತದಸಾಲ ಮನಮಾಡೆ |
ಕೊರಳೊಳಗಿಹ ತುಲಸಿಯ ದಂಡೆ | ಮೇಣು –
ನೆರಿದುಟ್ಟ ಪೀತಾಂಬರದ ಪಾಡೆ || ಯಾರಿವ ||೧೦೭||

ಅಚ್ಚಗನ್ನಡಿಯ ಪೋಲುವ ಕೆನ್ನೆ | ಮತ್ತೀ –
ಸಚ್ಚರಿತನ ರೂಪವೆಲೆ ಕನ್ನೆ |
ಅಚ್ಯುತನಿಗೆ ಸಮವಹುದಲ್ಲೇ | ಇವನ
ನೊಚ್ಚತದಿಂ ನುಡಿಸುವ ಕೇಳೆ ||೧೦೮||

ಭಾಮಿನಿ

ಯೋಷಿತೆಯರಿಂತುದ್ಧವನ ಶ್ರೀ |
ವೇಷಭೂಷಣದಿಂದ ಕೃಷ್ಣನ |
ದಾಸನೆಂದೂಹಿಸುತಲಧಿಕ ಮನೋನುರಾಗದಲಿ ||
ಆಸೆವಟ್ಟಚ್ಯುತನು ನುಡಿದಿಹ |
ಭಾಷಿತವ ನೆನೆದುತ್ಸವದಿ ಪರಿ |
ವೇಷದಂತಿರೆ ಬಳಸಿ ಕೇಳಿದರುದ್ಧವಂಗೆರಗಿ ||೧೦೯||

ರಾಗ ತೋಡಿ ಆದಿತಾಳ

ಆರೆಂಬುದರುಹು ತಂದೆ | ನೀನಿಲ್ಲಿ ಬಂದು | ದಾರ ಸಂದೇಶದಿಂದೆ |
ಆರ ಬಾಂಧವ ನೀನು | ಕಾರ‍್ಯಸಂಗತಿ ಏನು |
ಶ್ರೀರಮೆಯರಸನ | ಚಾರುಸೊಬಗು ನಿನ |
ಗಾರಾಜಿಸುವರೆ | ಕಾರಣವೇನು || ಆರೆಂಬು ||೧೧೦||

ಯಾದವರೊಳಗೊಬ್ಬನು | ನಾ ಭಾಗವತರ | ಪಾದಪಂಕಜಭೃಂಗನು |
ಆ ದಯಾಂಬುಧಿ ನಿಮ್ಮೊ | ಳಾದ ವಿಯೋಗದ |
ಭೇದಗಳೆದುಸ | ಮ್ಮೋದದೊಳಿರಿಸಲು |
ಮಾಧವನಪ್ಪಣೆ | ಗೈದಡೆ ಬಂದೆನು || ಆರೆಂಬು ||೧೧೧||

ಹರುಷದಿಂದುದ್ಧವನ | ಸತ್ಕರಿಸುತೆಂ | ದರು ಕೃಷ್ಣನೊಳು ದೂಷಣ |
ಹೊರಿಸಬಹುದೆ ಹೆತ್ತ | ವರಿಗೆ ಯೋಗಕ್ಷೇಮ |
ವರುಹಲು ನಿನ್ನನು ಕರೆದಟ್ಟಿದನೈ |
ಮರೆಯೆ ವಯೋಧಿಕ | ರಿರುವರೆ ಸೌಖ್ಯದಿ || ಆರೆಂಬು ||೧೧೨||

ಜನನೀಜನಕರೊಳಗೆ | ಇರುವಂಥ ಪ್ರೇಮ | ಘನತರವೆಲ್ಲರಿಗೆ |
ಮನೆವಾರ್ತೆಯನು ಬಿಟ್ಟ | ಮುನಿಗೆ ಸಹಿತಲಿನ್ನು |
ವನಜಾಕ್ಷಗೆ ಕೆಳೆ | ತನವಾರೊಡನಿ |
ಲ್ಲನಿತರ ಕೂರ್ಮೆಯ | ಜನರಾರಿರ್ಪರು || ಯಾರೆಂಬು ||೧೧೩||

ಭಾಮಿನಿ

ಮಿಕ್ಕವರ ಕೆಳೆ ಬಳೆದಪುದು ಕಾ |
ರ್ಯಕ್ಕೆ ತತ್ಸಿದ್ಧಿಯಲಿ ನಿಷ್ಫಲ |
ವಕ್ಕುಭ್ರಮರಕೆ ಕುಸುಮನಿಕರದ ಮೈತ್ರಿಯಂದದಲಿ ||
ಸಿಕ್ಕಿಹುದು ಸ್ವಾರ್ಥತೆಯೊಳೀಜಗ |
ವಕ್ಕರಾರೊಡನಾರಿಗೆನುತಲೆ |
ದುಃಖದಲಿ ತರುಣಿಯರು ಹರಿಯನು ದೂರುತಳಲಿದರು ||೧೧೪||

ರಾಗ ಯದುಕುಲ ಕಾಂಭೋಜಿ ಏಕತಾಳ

ಆರು ಕೃಷ್ಣನಿಗೆ | ನಾವೆಮಗವ | ನಾರು ವ್ಯಥೆ ಸುಮ್ಮಗೆ || ಆರು || ಪಲ್ಲವಿ ||

ಸೇರೆ ಸಾಮ್ರಾಜ್ಯವು | ವೈರಿಗಳೆಲ್ಲ | ತೀರೆ ಬಲು ಸುಖವು |
ನೀರಜನಯನಗಿ | ನ್ನಾರ ಹಂಗೆಮ್ಮ ಸಂ |
ಸಾರವೀ ಚಿಂತೆಯಿಂದ ಸೇರಿರುವಂದ ||೧೧೫||

ಓತ ಮನೆಮಕ್ಕಳ | ಬಿಡುತ ಗೆಯ್ದ | ಪ್ರೀತಿಗಿದೆ ಸುಫಲ |
ಬೀತ ಮರವ ಪಕ್ಷಿ | ಜಾತ ಸಾರ್ವುದೆ ಹರಿ |
ಗೇತರದೆಮ್ಮ ನಂಟು | ಕನಸಿನ ಗಂಟು ||೧೧೬||

ಎಚ್ಚರಿಂದಲ್ಲದೆ | ಸ್ವಪ್ನದೊಳು ಯ | ದೃಚ್ಛೆ ನೆನಪಹುದೆ |
ಅಚ್ಯುತಗೆಮ್ಮೊಳ | ಗಿಚ್ಛೆಯೇನೈ ನಮ್ಮ |
ಹುಚ್ಚುಮಾತಿದು ಮೋಹಕೆ | ಮುಪ್ಪಿನಿತಿರ್ಕೆ || ಆರು ||೧೧೭||

ವಾರ್ಧಕ

ಪಣವಧುಗಳರ್ಥ ಹೀನನ ಭ್ರಷ್ಟನೃಪನ ಪರಿ |
ಜನವು ಮವಗತ ವಿದ್ಯರೋದಿಸಿದ ಗುರುವ ದ |
ಕ್ಷಿಣೆ ಬರಲ್ ಋತ್ವಿಜರು ಯಜಮಾನನಂ ಪುಲ್ಗೆ ಬಗೆದಪರೆ ಲೋಕದಲ್ಲಿ ||
ಎನುತ ಸತಿಯರು ಮುನ್ನ ಕೃಷ್ಣನೊಡನಾಡಿರ್ದ |
ವನ ಕೇಳಿ ವಸ್ತ್ರಾಪಹರಣರಾಸಕ್ರೀಡೆ |
ಯನುಭವವ ನೆನೆದು ಪರಮಾನಂದ ಪರವಶೆಯರಿದ್ದರುದ್ಧವನ ಮುಂದೆ ||೧೧೮||