ಉತ್ಪಲ ಮಾಲಾವೃತ್ತ

ಶ್ರೀ ವಧುವಾನನಾಬ್ಜ ದಿವಸೇಶ್ವರನಾವನಮೋಘ ಯೋಗಿಹೃ |
ದ್ಭಾವ ಮಯೂರ ನೀರದನದಾವನಮರ್ತ್ಯಕದಂಬ ಪಾಲಕಂ ||
ಆವನನೇಕ ಗೋಪಯುವತೀಜನ ಕೈರವ ಚಂದ್ರನಾವನಾ |
ದೇವ ಮುಕುಂದ ನಾವಗಮೊರಲ್ದೆ ಮಗೀಗೆ ನಿತಾಂತ ಸೌಖ್ಯಮಂ ||೧||

ರಾಗ ನಾಟಿ ರೂಪಕತಾಳ

ಜಯ ಶಿವತನಯ ಗಜಾನನ | ಜಯ ಪಾವನ ಫಣಿಭೂಷಣ |
ಜಯ ಜಂಬೂ ಫಲ ಭಕ್ಷಣ | ಜಯ ಸುರನುತ ಚರಣ || ಜಯ || ಪಲ್ಲವಿ ||

ನಡುವಿಗೆ ಬಲಿದಹಿ ಶೇಷಗೆ | ಪಡಿಯೆನೆ ಸುರಿವ ಮದಾಂಬುಗೆ |
ಎಡೆವಿಡದೆರಗುವ ತುಂಬಿಯ | ಪಡೆ ಪೋಲ್ತಿರೆ ಮುಗಿಲ ||
ನಡೆವಿನ ಶಶಿಗಳ ಮೈಸಿರಿ | ಗುಡೆ ಮಕುಟವು ಮೇಣ್ ನಿಗ್ಗವ |
ಜಡಧಿಯ ಮಥಿಸಿದ ಮಂದರ | ಕೆಡೆಯಹ ಗಣಪಾಲ || ಜಯ ||೨||

ದುರ್ಗಾಹೃದಯೋತ್ಸವಕರ | ನಿರ್ಗತ ಭವಬಂಧನ ಖಳ |
ವರ್ಗಾಹಿತ ಶರಣೆಂಬೆನು | ದೀರ್ಘೋದರ ಗುಣಧೀ ||
ನಿರ್ಗತಿಕ ಶರಣ್ಯನೆ ಸ | ದ್ವರ್ಗದ ಕೆಳೆಕೊಡು ಕೃತಿಗಹ |
ದುರ್ಘಟನೆಗಳಂ ತೊಲಗಿಸೆ | ಡರ್ಗೇಡಿಯೆ ದಯದಿ || ಜಯ ||೩||

ದಿವ್ಯಾಷ್ಟೈಶ್ವರ್ಯಂಗಳ | ನವ್ಯಾಹತವೀವನೆ ಸ |
ದ್ದ್ರವ್ಯಾಷ್ಟಕಯುತವಪ್ಪಾ | ಹವ್ಯವ ನಿನಗೀವೆ ||
ಕಾವ್ಯಂ ಬುಧ ಸಮಿತಿಗೆ ಸು | ಶ್ರಾವ್ಯಮಿದಪ್ಪಂತೆನಗೊ |
ಲ್ದವ್ಯಯ ಮನಮಾಡೈಕ | ರ್ತವ್ಯವ ನಾಗೈವೆ || ಜಯ ||೪||‍

ವಾರ್ಧಕ

ಕಮಲ ಲೋಚನ ಮಿತ್ರ ಕಮಲ ನಿರ್ಮಲ ಗಾತ್ರ |
ಕಮಲವನರಿಪು ಚೂಡ ಕಮಲಾನುಜ ವಿಭಾಡ |
ಕಮಲ ಭವನುತ ಗೌರಿ ಕಮಲ ಮುಖತಿಮಿರಾರಿ ಕಮಲ ಸಾಯಕವಿದಾರಿ ||
ಕಮಲಭಿದಜಿನವಾಸ ಕಮಲಾಪ್ತ ಶತಭಾಸ |
ಕಮಲಾಕ್ಷಕೀನಾಶ ಕಮಲಬಂಧುಜನಾಶ |
ಕಮಲನಾಮ ಸುಕೇತ ಜಗದೀಶ ಉದನೇಶ ಶರಣು ಸಲಹೆನ್ನನನಿಶ

ದ್ವಿಪದಿ

ಇಂತಿಷ್ಟದೇವತಾ ಪ್ರಾರ್ಥನೆಯ ಗೈದು |
ಮುಂತಹ ಕಥಾಸಂಗ್ರಹವನೊರೆವೆನಿಂದು ||೬||

ಭಾಗವತ ಪೌರಾಣದೊಳು ಕಂಸವಧೆಯ |
ನಾಗಶಯನನು ಗೈದು ಮಧುರೆಗಧಿಪತಿಯ ||೭||

ಯದುವೃದ್ಧನು ಗೈದ ಬಳಿಕ ಗೋವಿಂದ |
ಮುದದೊಳಾಡಿದ ಲೀಲೆಯಹುದೀ ಪ್ರಬಂಧ ||೮||

ನರನಾಟಕರ್ಗೆ ವಸುದೇವನುಪನಯನ |
ವಿರಚಿಸಲು ಗುರುಕುಲಕೆ ನಡೆದು ಗುರುವಚನ ||೯||

ವಾಲಿಸುತ ಗೋಕುಲದ ಜನರನುದ್ಧವನ |
ಮೂಲಕದಿ ಸಂತೈಸಿ ಕಮಲದಳನಯನ ||೧೦||

ಶರಣವತ್ಸಲನೆನಿಸಲತ್ತ ಮಾಗಧನು |
ತೆರಳಿ ಬರೆ ಸದೆಬಡಿದು ಸೆಳೆದು ದ್ರವ್ಯವನು ||೧೧||

ಲಕ್ಷ್ಮೀಶ ಬಾಣಸೈನ್ಯವ ತರಿದ ಕಥೆಯ |
ಯಕ್ಷಗಾನದಿ ಪೇಳ್ವೆನಿದು ಪುಣ್ಯನಿಚಯ ||೧೨||

ರಾಗ ಯತಿ ತಾಳ ರಸಭಾವ ಮೊದಲಾದ |
ಯೋಗಗಳನರಿಯೆ ತಿದ್ದುವುದು ಬುಧವೃಂದ ||೧೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶ್ರೀಮದಮೃತಗಭಸ್ತಿ ವಂಶ | ವ್ಯೋಮ ದಿನಕರನಹ ಪರೀಕ್ಷಿತ |
ಭೂಮಿಪಾಲಗೆ ಶುಕಮುನೀಂದ್ರನು | ಸಾಮದಿಂದ ||೧೪||

ಪೇಳುತಿರೆ ಭಾಗವತ ಕಥನವ | ಕೇಳಿದನು ನೃಪನೊಮ್ಮೆ ಶ್ರೀ ಗೋ |
ಪಾಲ ಗೋಕುಲದಿಂದ ಗಾಂದಿನಿ | ಬಾಲನೊಡನೆ ||೧೫||

ಮಧುರೆಗೈತಂದಲ್ಲಿ ಕಂಸನ | ವಧಿಸಿ ತಂದೆಯ ಬಂಧನವ ಕಳ |
ಚಿದ ಬಳಿಕಲೇಂ ಗೆಯ್ದನೆಂಬುದ | ಮುದದೊಳೆನಗೆ ||೧೬||

ಬಿತ್ತರಿಪುದೆಂದೆರಗೆ ಮುನಿ ಭೂ | ಪೋತ್ತಮನ ಪಿಡಿದೆತ್ತಿ ಹರಿಯನು ||
ಚಿತ್ತದಲಿ ನೆಲೆಗೆಯ್ದು ಸಂತಸ | ವೆತ್ತು ನುಡಿದ ||೧೭||

ಭಾಮಿನಿ

ಕೇಳರಸ ಕಂಸಾಖ್ಯನುಪಟಳ |
ತಾಳಲಾರದೆ ತೊಲಗಿದಾ ಯದು |
ಜಾಲವನು ಬರಮಾಡಿ ಮುನ್ನಿನ ತೆರದಿ ಕುಲವೃದ್ಧ ||
ತಾಳಿಪಟ್ಟವ ವಂಶದುನ್ನತಿ |
ಮೇಳವಿಸಲೊಕ್ಕಟ್ಟ ಸಾಧಿಸಿ |
ನೀಲಮೇಘ ಶ್ಯಾಮಜನ ಜಾಗೃತಿಯನೊದವಿಸಿದ ||೧೮||

ರಾಗ ಮಧ್ಯಮಾವತಿ ತ್ರಿವುಡೆತಾಳ

ಇಂದು ಕುಲದ ಯಯಾತಿಯಾಜ್ಞೆಯ | ದಂದುಗವ ಪರಿಹರಿಸೆ ಹರಿಯಾ |
ನಂದ ಮಾನಸನುಗ್ರಸೇನನು | ಹೊಂದಿ ಮಧುರೆಯ ಪಟ್ಟವ | ಕುಂದನುಳಿದು ||೧೯||

ಒಂದು ದಿನ ವಸುದೇವನೊಡನೆ ಮು | ಕುಂದನನು ಶ್ಲಾಘಿಸುತ ನುಡಿದನು |
ಸಂದಮಲ್ಲರ ಕೆಡಹಿ ಕಂಸನ | ಕೊಂದನಮಮಾ ಕೃಷ್ಣನ | ಸತ್ವಕಿರಿದೇ ||೨೦||

ನರಕುಮಾರಕರಲ್ಲ ಬಲಕೃ | ಷ್ಣರು ಕಣಾ ಕಾರಣಿಕ ಪುರುಷರು |
ದುರುಳ ತನದಿಂ ಮಡಿದನಕಟಾ | ಹರಿವಿರೋಧವ ಸಾಧಿಸಿ | ತರಳ ಕಂಸ ||೨೧||

ಮೇದಿನಿಯೊಳಿವರಾತ್ಮಜರು ನಿನ | ಗಾದರೆಂದೊಡೆ ಭಾಪು ಪುಣ್ಯವೆ |
ಯಾದವರ ಪದ್ಧತಿಯ ಬಿಡದಿವ | ರಾದರಿಸಲುಪನಯನವಾ | ಮಾಳ್ಪುದೀಗ ||೨೨||

ರಾಗ ಸಾಂಗತ್ಯ ರೂಪಕತಾಳ

ಎಂದುಗ್ರಸೇನನ ನುಡಿಗೊಪ್ಪಿಯಾನಕ | ದುಂದುಭಿಗಾರ್ಗ್ಯರ ಕರೆಸಿ ||
ಬಂಧುಗಳೊಡನೆ ಸುಲಗ್ನವ ಹುಡುಕಿ ಗೋ | ವಿಂದ ರಾಮರಿಗೆ ಸಂತಸದಿ ||೨೩||

ಕುಲಧರ್ಮದಂತೆ ಚೌಳಂಗೆಯ್ದು ಮಂಗಳ | ಕಲಶೋದಕದಿ ಸ್ನಾನಗೈಸಿ ||
ಚೆಲುವಮೂರ್ತಿಗಳ ಸುಭಕ್ಷ್ಯ ಭೋಜ್ಯಗಳಿಂದ | ನಲವಾಂತು ದೇವಕಿಯುಣಿಸಿ ||೨೪||

ಪಟ್ಟಾವಳಿಯ ಮುಸುಕಿಟ್ಟುಪವೀತವ | ಮೆಟ್ಟಿಕ್ಕಿಯೇರಿಸಿ ತೊಡಿಸಿ ||
ಹೃಷ್ಟಮಾನಸನಾಗಿ ಬ್ರಹ್ಮೋಪದೇಶವ | ಕೊಟ್ಟನು ವಸುದೇವನಾಗ ||೨೫||

ಸೆರೆಮನೆಯೊಳು ಮುನ್ನ ಜನಿಸಿದ ಶಿಶುವನು | ಪೊರೆವುಪಾಯವ ಮಾಡುವಾಗ ||
ನೆರೆಸಂಕಲ್ಪಿಸಿದಂತೆ ಲಕ್ಷಗೋಧನವನು | ವರವಿಧಿಯಂತೆ ಸಿಂಗರಿಸಿ ||೩೬||

ಸಾಂಗವೇದಜ್ಞ ವಿಪ್ರರಿಗಿತ್ತು ಬಹುಧನ | ವಂಗಹೀನರಿಗೆ ತಾ ಕೊಡಲು ||
ರಂಗರಾಮರಿಗೆ ಭಿಕ್ಷೆಯನಿಡೆ ದೇವಕಿ | ಯಂಗನಾನಿವಹ ಪಾಡಿದುದು ||೨೭||

ರಾಗ ಬೇಗಡೆ ಅಷ್ಟತಾಳ

ಭಿಕ್ಷೆಯ ನೀಡೆ ಸಖಿ | ಸಾರಸಮುಖಿ | ಭಿಕ್ಷೆಯ ನೀಡೆ ಸಖಿ |
ಇಕ್ಷುಚಾಪನ ಪಿತ | ಪಕ್ಷಿವಾಹನ ಪರ |
ಪಕ್ಷರಹಿತ ನಿತ್ಯ | ಲಕ್ಷ್ಮೀಕಾಂತಗೆ ಮುದದಿ || ಭಿಕ್ಷೆಯ ||೨೮||

ಇಳೆಯು ದೂರಲು ದಯದಿ | ದೇವಕಿ ಗರ್ಭ | ದೊಳು ಬಂದು ಗೋಕುಲದಿ |
ಬಳೆದು ಯಶೋದೆಗೆ | ನಲವಿತ್ತು ಪಾಲ್ಬೆಣ್ಣೆ |
ಮೆಲುತ ಗೋವ್ಗಳ ಕಾಯ್ದು | ಚೆಲುವ ರಂಗಯ್ಯಗೆ || ಭಿಕ್ಷೆಯ ||೨೯||

ಚರಣಘಾತದಿ ಶಕಟ | ಖಳನ ನಿಕ್ಕಿ | ಮರಣ ಪೂತನಿಗೆ ಕೊಟ್ಟ |
ಗಿರಿಯನು ಕೊಡೆಗೆಯ್ದು | ಧುರಧೀರಮಲ್ಲರ |
ತರಿದ ಕಂಸಾಂತಕ | ಹರಿಗೆ ನೀ ಹಿಡಿಯಕ್ಕಿ || ಭಿಕ್ಷೆಯ ||೩೦||

ಜಗಕೆ ದುರ್ಮದ ದೈತ್ಯರ | ಭಾರವು ಹೆಚ್ಚೆ | ಹಗುರ ಮಾಡಲು ಸುರರು |
ತಗಹಿನಿಂದವತಾರ | ಹೊಗುವ ನಿತ್ಯಾತುಮ
ನಿಗಮವೇದ್ಯಗೆ ಭಕ್ತಿ | ಮಿಗೆ ವಸ್ತ್ರಾಭರಣವ || ಭಿಕ್ಷೆ ||೩೧||

ವಾರ್ಧಕ್ಯ

ಆದುದಿಂತತಿ ವಿಭವದಿಂದುಪನಯನ ಕರ್ಮ |
ವೇದೋಕ್ತದಿಂ ಬಳಿಕ ವಸುದೇವನವದಿರಂ |
ಭೂದಿವಿಜ ಸಾಂದಿಪನ ಬಳಿಗೆ ವಿದ್ಯಾಭ್ಯಾಸಕೆಂದೆನುತ ಕಳುಹಲವರು ||
ಮೇದಿನಿಯ ನರರಿಂಗೆ ಗುರುಮುಖಂ ಹೊರತಾಗಿ |
ತಾದೊರೆಯದಾತ್ಮ ವಿಜ್ಞಾನವೆಂದರಿಪುವಂ |
ತಾದಿಮೂರ್ತಿಗಳಖಿಳ ವಿದ್ಯಾನಿಧಿಗಳೋಜನೆಡೆಗೆಯ್ದಿದರು ಕಾಶಿಗೆ ||೩೨||

ರಾಗ ಸುರುಟಿ ಏಕತಾಳ
ಲಾಲಿಸು ಭೂಕಾಂತ | ಗುಣಯುತ |
ಪೇಳುವ ಹರಿಚರಿತ | ನೀಲಾಂಬರ ಗೋ | ಪಾಲರು ಗುರುವರ |
ನಾಲಯ ಕೈದಿದ | ಮೇಲಾನಂದದಿ || ಲಾಲಿಸು ||೩೩||

ಓದಿದರಾಚಾರ್ಯ | ಕಲಿಸಲು | ವೇದದ ಪದಗತಿಯ ||
ಸಾಧಿಸಿದರು ಶಿ | ಕ್ಷಾದ್ಯಂಗಗಳನು |
ಹಾದಿಯರಿತರಾ | ತೋದ್ಯ ಸಂಗೀತದ || ಲಾಲಿಸು ||೩೪||

ಗರಡಿಯ ಸಾಧಕವ | ಖಡುಗದ | ಹರಿಗೆಯ ಸಂಗರವ ||
ಶರಚಾಪಂಗಳ | ಕರಕೌಶಲ್ಯವ |
ಪರುಠವಣೆಗೆ ಬಹ | ಹೊರಿಗೆಯನೆಲ್ಲವ || ಲಾಲಿಸು ||೩೫||

ರಾಗ ಕೇದಾರಗೌಳ ಅಷ್ಟತಾಳ

ಪರಮ ಪುರುಷರಿಂತು | ಹರುಷದಿ ಚೌಷಷ್ಠಿ | ಪರಿಗಣನೆಯ ವಿದ್ಯೆಯ |
ಅರವತ್ತು ನಾಲ್ದಿನ | ಹರಿವಷ್ಟರೊಳು ಕಲ್ತು | ಸರುವಜ್ಞರಾದುದನು ||೩೬||

ಆ ಗುರು ವೀಕ್ಷಿಸಿ ಮೂಗಿಲಿ ಬೆರಳಿಟ್ಟು | ತೂಗಿ ತಲೆಯನಿವರು ||
ಯೋಗ ಸಿದ್ಧರು ಹೊರ | ತಾ ಗಲ್ಲ ನರರೆಂದು | ಬೀಗಿದ ಹರುಷದೊಳು ||೩೭||

ಎತ್ತಲೀ ಶಿಶುಗಳು | ಹೊತ್ತು ಹೊತ್ತಿನೊಳರು | ವತ್ತ ನಾಲ್ಕೂ ವಿದ್ಯೆಯ |
ಗೊತ್ತು ಗೈದಿವರ ಸು | ಚಿತ್ತ ಶುದ್ಧಿಯದೆಂತೆ | ನುತ್ತ ಧನ್ಯತೆವಡೆದ ||೩೮||

ಭಾಮಿನಿ

ಭೂಪ ಕೇಳಚ್ಚರಿವಡೆಯೆ ಗುರು |
ವಾ ಪದುಮ ದೃಶರಾಮರಖಿಳ ಕ |
ಲಾಪರಿಣತಿ ಪ್ರಾಪ್ತಮಾನಸರಾಗಿ ಸಂತಸದಿ ||
ಚಾಪವಿದ್ಯಾನಿಪುಣರೋಜನ |
ತಾಪ ಪರಿಹಾರಕ್ಕೆಳಸಿ ಸಾಂ |
ದೀಪನಂಘ್ರಿಗೆ ಮಣಿದು ನುಡಿದರು ಮಧುರ ವಚನದಲಿ ||೩೯||

ರಾಗ ಕಾಂಭೋಜಿ ಅಷ್ಟತಾಳ

ಗುರುರಾಯ ಕೇಳೆಮ್ಮ ಮಾತ | ದಯವಿರಿಸಿ ಬಾಲರೊಳು ವಿಖ್ಯಾತ ||   || ಪಲ್ಲವಿ ||

ಕಲಿತುಕೊಂಡೆವು ನಿಮ್ಮ ದಯದಿ | ಸರ್ವ | ಕಲೆಗಳ ಚೌಷಷ್ಠಿ ದಿನದಿ |
ಸಲೆ ಸೌಖ್ಯ ಸಂಪದ | ಗಳು ನಮಗಪ್ಪಂತೆ |
ಒಲಿದು ದಕ್ಷಿಣೆಗಳನು ಸ್ವೀಕರಿ |
ಸಲಘು ಮಹಿಮನೆ ಕಳುಹು ನಮ್ಮನು || ಗುರು ||೪೦||

ಮನಸಿ ಗಂಟಿದ ಚಿಂತೆಯುಳಿದು | ಸೇವೆ | ಯನು ನಮ್ಮ ಶಕ್ತಿಯ ತಿಳಿದು ||
ಅನಘ ಮುದದಿ ಬೆಸ | ಸೆನಲು ಭಕ್ತಿಯ ಮನ |
ದಣಿಯೆ ಹೊಗಳುತ | ವನಿತೆಗೆಂದಡೆ |
ಘನ ಪತಿವ್ರತೆ | ಯಿನಿಯಗೆಂದಳು || ಗುರು ||೪೧||

ಭಾಮಿನಿ

ಪ್ರಾಣವಲ್ಲಭ ಕೇಳು ತ್ರಿಜಗ |
ತ್ರಾಣಮೂರ್ತಿಗಳಲ್ಲದಿವರಳಿ |
ಮಾನವರು ತಾವಾಗಲೊಲ್ಲರು ಬದ್ಧವದರಿಂದ ||
ಕಾಣಿಕೆಗೆ ತೀರ್ಥದೊಳಳಿದ ಮ |
ತ್ಸೂನುವನು ತರಲಾಜ್ಞೆಯಿತ್ತರೆ |
ಕಾಣಿಸುವುದುತ್ಸವವು ನಮಗೆನಲೆಂದ ಶಿಷ್ಯರಿಗೆ ||೪೨||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮೆಚ್ಚಿದನು ಬಾಲಕರೆ ನಿಮ್ಮಯ | ನಿಚ್ಚಳದ ಗುರುಭಕ್ತಿಗದರಿಂ |
ದುಚ್ಚರಿಪೆ ಮತ್ತರುಣಿಯಳ ಮನ | ದಿಚ್ಛೆಯೊಂದ ||೪೩||

ಅಪ್ರತಿಮರಿರ ಕೇಳಿ ಪೂರ್ವದೊ | ಳಾ ಪ್ರಭಾಸದಿ ವರುಣನಿಂದ ಮ |
ನಃ ಪ್ರಿಯಾತ್ಮಜನಳಿದನಾತನ | ಕ್ಷಿಪ್ರದಿಂದ ||೪೪||

ಪಡೆದು ತಂದರೆ ನಮಗೆ ಮುದವ | ಪ್ಪುದು ನಿಮಗೆ ಸತ್ಕೀರ್ತಿಯೆಂದೆನೆ |
ಪದಕೆರಗಿ ಗುರುವರನ ಬೀಳ್ಕೊಂ | ಡಧಟರಾಗ ||೪೫||

ಮಣಿರಥವನೇರುತ ಪ್ರಭಾಸಾ | ವನಿಗೆ ನಡೆದಬ್ಜಾಕ್ಷರಾಮರು |
ವನಧಿಯುನ್ನತ ವಿಭವವೀಕ್ಷಿಸಿ | ಮನದಣಿಯಲು ||೪೬||

ಭಾಮಿನಿ

ವಿಧುಕುಲಾಧಿಪ ಕೇಳು ಸಾಗರ |
ನಿದನರಿತು ನವರತ್ನ ಕಾಣ್ಕೆಯೊ |
ಳಿದಿರು ವಂದರ್ಚಿಸುತ ಜಯ ಜಯವೆಂದು ವಂದಿಸಲು ||
ಮಧುಮಥನ ನಿಂತೆಂದ ನಿನ್ನೊಳ |
ಳಿದ ಗುರುವಿನಾತ್ಮಜನ ನೀತೋ |
ರ್ಪುದು ಬಳಿಕ ಉಪಚಾರವೆನಲಿಂತೆಂದನಬ್ಧಿಪತಿ ||೪೭||

ರಾಗ ತೋಡಿ ಅಷ್ಟತಾಳ

ಸ್ವಾಮಿ ಲಾಲಿಪುದೆನ್ನ ಮಾತ | ಭಕ್ತ | ಕಾಮಿತವೀವ ಶ್ರೀನಾಥ || ಸ್ವಾಮಿ || ಪಲ್ಲವಿ ||

ಕೊಲ್ಲೆನು ಗುರು ತನೂಭವನ | ಮೇಣು | ಕೊಲ್ಲುವವರಿಗೆಡೆಗುಡೆ ನಾ |
ಇಲ್ಲ ಸಂಶಯವೆನ್ನೊ | ಳುಳ್ಳ ಪಂಚಜನಾಖ್ಯ |
ಖುಲ್ಲ ಶಂಖಾಸುರ | ನೆಲ್ಲಾ ಕೃತ್ಯಕೆ ಮೂಲ || ಸ್ವಾಮಿ ||೪೮||

ಭೂಸುರನಾಗಿ ಬಂದೆನ್ನ | ಬೇಡಿ | ಮೋಸದಿಂದಿರ್ಪದಾನವನ |
ನಾಶಗೈದಿಳೆಗೆ ನೀ | ಲೇಸಪಾಲಿಸು ಮಿಕ್ಕ |
ವಾಸವಾದಿಗಳು ಶಂ | ಖಾಸುರ ಗೆಣೆಯಲ್ಲ || ಸ್ವಾಮಿ ||೪೯||

ಭಾಮಿನಿ

ವರುಣನಿಂತೆನೆ ಹರಿನುಡಿದನಾ |
ದುರುಳನಿರವನು ತೋರಿಸೀ ಕ್ಷಣ |
ಪರಿಕಿಸುವೆನೆನೆ ಸನ್ನೆಯಲಿ ತೋರಿಸಲು ಸಿಂಧುಪತಿ ||
ಮರಣರಹಿತರು ಶರಧಿಗಿಳಿದೈ |
ತರಲು ಕಾಣುತ ಕೆರಳಿ ಶಂಖಾ |
ಸುರನು ಘುಡುಘುಡಿಸುತ್ತಲಡ ಹಾಯ್ದೆಂದನವರೊಡನೆ ||೫೦||

ರಾಗ ಶಂಕರಾಭರಣ, ಮಟ್ಟೆತಾಳ

ಅರೆಲೋ ಮದಾಂಧರಾಗಿ | ವಾರಿಧಿಯೊಳು ಮುಳುಗುತೆದ್ದು |
ಯಾರೆನಿಂತು ಹುಡುಕುವಿರಿ ಮೊ | ಗೇರರಂದದಿ ||
ಚಾರು ಸುಂದರಾಂಗರಹಿರಿ | ನೀರಿನೊಳಗೆ ಕೆಲಸವೇನು |
ಭೋರನೈದದಿರಲು ಮಾಳ್ಪೆ | ಪಾರಣೆಯನ್ನು ||೫೧||

ಕಳ್ಳರಂತೆ ಕಡಲ ಮಧ್ಯ | ದಲ್ಲಿ ಮನೆಯ ಮಾಡಿಕೊಂಡು |
ಮೆಲ್ಲನಬ್ಧಿಗಿಳಿವ ಜನರ ಕೊಲ್ಲುತ್ತಧಮಾ ||
ಡೊಳ್ಳ ಬೆಳೆಸುತಾ ಪ್ರಭಾಸ | ದಲ್ಲಿ ಸೆಳೆದ ಸಾಂದಿಪಜನ |
ನಿಲ್ಲದೀಗ ತೋರು ತೋರು | ಖುಲ್ಲದಾನವ ||೫೨||

ಇಷ್ಟು ಕೆಲಸಕಿಲ್ಲಿ ಬಂದು | ಕೆಟ್ಟುಪೋದಿರಕಟ ನಿಮ್ಮ |
ಶಿಷ್ಟನಂದೇ | ಸಂದನೆನ್ನ | ಹೊಟ್ಟೆ ಹಸಿವಿಗೆ ||
ಕಷ್ಟನಿಮ್ಮ ಪೂರ್ವಕರ್ಮ | ವಟ್ಟಿಕೊಂಡು ಬಂದುದಿಲ್ಲಿ |
ಗಷ್ಟಮೂರ್ತಿ ದಯದೊಳೆನಗೆ | ಕೊಟ್ಟ ಹಿಟ್ಟನು ||೫೩||

ಖೂಳ ಹೆಚ್ಚುಗಳಹೆ ನಿನ್ನ | ನಾಲಿಗೆಯನು ತರಿವೆನೀಗ |
ಸೀಳಿ ನಿನ್ನ ಬಸಿರ ನಳಿದ | ಬಾಲಗುರುಜನ ||
ಮೇಲೆ ತೆಗೆದು ಪೋಪೆವೆನಲು | ತಾಳಿಕಿನಿಸ ತೆರೆದು ಬಾಯ |
ಬೀಳಬರಲು ಖಳನ ತಿವಿದ | ತಾಳ ಕೇತನು ||೫೪||

ರಾಗ ಭೈರವಿ ಏಕತಾಳ

ಬಲನ ಹತಿಗೆ ನೊಂದೆಂದ | ನರ | ಕುಲ ಮೇಣ್ ಸುಮನಸವೃಂದ |
ಸಲೆ ಕೇಳಲು ಮನ್ನಾಮ | ಭಯ | ದೊಳು ಮೈಗರೆದಪರಮಮ ||೫೫||

ಪುಸಿಯೊದರುವೆಯಾ ಮದಾಂಧ | ನಿಲೆ | ದೆಸೆಯಿಲ್ಲದೆ ಕ್ರವ್ಯಾದ |
ಎಸೆವ ನೃಪರ ಭಯದಿಂದ | ನೀ | ವಸುಧೆಯ ಬಿಟ್ಟೈತಂದೆ ||೫೬||

ಏನೆಂದೆಯೊ ಹುಲುಗುವರ | ಕುರಿ | ಯಾನೆಗೆ ಸರಿಯೆ ವಿಚಾರ |
ಮಾಣಿನ್ನೆಲೆಯೆಲೆ ಮರುಳೆ | ತವ | ಪ್ರಾಣಕಳೆವೆ ನಿಮಿಷದೊಳೆ ||೫೭||

ಎಂದೆನುತಲೆ ಮುಷ್ಟಿಯೊಳು | ಖಳ | ಬಂದರೆ ಹರಿಯನೆರಗಲು |
ಮಂದರಧರ ಪಾದದೊಳು | ಬೀ | ಳೆಂದೊದೆಯಲು ಖಾತಿಯೊಳು ||೫೮||

ಭಾಮಿನಿ

ಬಿದ್ದನಮರಾರಾತಿ ನೆತ್ತರು |
ಹಾಯ್ದುದಾಗಲೆ ಮುಖದಿ ಪದಹತಿ |
ಬುದ್ದಿಕಲಿಸಿತು ಖಳಗೆ ಹರಿಮಹಿಮೆಗಳ ನೇನೆಂಬೆ ||
ಚೋದ್ಯವಿದು ದನುಜಂ ಬಳಿಕ ತ |
ನ್ನುದ್ದುರುಟುತನವುಳಿದು ಹರಿಯನು |
ಶ್ರದ್ಧೆಯಲಿ ಹೊಗಳುತ್ತ ಜಯಜಯವೆನುತ ವಂದಿಸಿದ ||೫೯||

ರಾಗ ಬೇಗಡೆ ಅಷ್ಟತಾಳ

ಪಾಲಿಸೈ ಗೋಪಾಲ ವನಮಾಲ | ದುರಿತಾಬ್ಧಿ ವಡಬ ಸು
ಶೀಲ ದೇವಕಿ ಬಾಲ ಶ್ರೀಲೋಲ ||
ಬೀಳುಗೊಡು ಕೈವಲ್ಯಕವನಿಯ | ಮೇಲೆ ನಾನೀವೇಳೆಗೆಸಗಿದ |
ಕೀಳು ಕರ್ಮವ ಕ್ಷಮಿಸು ಜನ್ಮಕೆ | ಬೀಳಿಸದಿರು ದ | ಯಾಳು ನರಹರಿ || ಪಾಲಿಸೈ ||೬೦||

ಧರೆಯೊಳೆಂದೂ ಸ್ಮರಿಸುವಂತೆನ್ನ | ನೆಲೆಯಾಗಿಸು ಕಳೇ –
ಬರವ ಶುದ್ಧೀಕರಿಸಿ ಸಂಪನ್ನ ||
ವಿರಚಿಸಸ್ಥಿಯ ಪರಮ ಶಂಖವ | ಕರದಿ ಪಿಡಿದದ | ಪೊರೆ ಕೃಪೆಯೊಳೆಂ |
ದೆರಗಲಚ್ಯುತ ಕರುಣೆ ದೋರಲು | ತೆರಳಿದನು ಸದ್ಗತಿಗೆ ದಾನವ || ಪಾಲಿಸೈ ||೬೧||

ವಾರ್ಧಕ

ಇಳೆಯಧಿಪ ಕೇಳು ಖಳನಂ ಸೀಳಿನೋಡಿದೊಡೆ |
ಒಳಗೆ ಗುರುಸುತನಿಲ್ಲದಿರೆ ತದಸ್ಥಿಯನೆತ್ತಿ |
ಒಲಿದು ವಾದ್ಯೋತ್ತಮವ ಪಾಂಚಜನ್ಯವ ರಚಿಸಿ ಬಲರಮಾಧವರು ಬಳಿಕ ||
ಲಲಿತವಹ ಪಾಂಚಜನ್ಯವ ಪೂಜಿಸುವ ನರ |
ರ್ಕಳ ದುರಿತಗಿರಿ ಜರಿಯಲೆಂದು ಕರುಣಿಸಿ ವರವ |
ನಿಲದೆ ಶೈಮಿನಿಪುರಕೆ ತೆರಳಿ ಶಂಖನಿನಾದವಂ ಗೈದನಾ ಕೃಷ್ಣನು ||೬೨||

ಕಂದ

ಕೇಳುತ್ತಚ್ಚರಿಯಿಂದಾ |
ಕಾಲಂ ನಡೆತಂದು ನೋಡಿ ಸಂತಸಗಡಲೊಳ್ ||
ಓಲಾಡುತೆ ಮಣಿದಂಘ್ರಿಗೆ |
ನೀಲಾಂಗನ ಭಕ್ತಿಯೊಳುರೆ ಸಂಸ್ತುತಿಗೆಯ್ದಂ ||೬೩||