ರಾಗ ಮಾರವಿ ಏಕತಾಳ

ತೋರಾದಡೆ ವಲ | ವೈರಿ ಮುಖಾಮರ | ವಾರವು ಪರಿಕಿಸಲಿ ||
ಭೋರನೆ ಛಲವ ವಿ | ಚಾರಗಳೇತಕೆ | ಕೂರಸಿಗಳು ಬರಲಿ ||೨೬೨||

ತಲೆಗಾಯ್ವರ ಬೆಂ | ಬಲಕೀಗಳೆ ಕರೆ | ತಳುವದೆನುತ ಚೈದ್ಯ ||
ಮುಳಿದೆಚ್ಚೆಡೆ ಮಸೆ | ದಲಗುಗಳನು ಪಥ | ದೊಳೆ ಕಡಿದಬ್ಜಾಕ್ಷ ||೨೬೩||

ಖಳ ನಿನ್ನಯ ಗಂ | ಟಲ ಮುರಿಯುವ ಜನ | ತಿಳಿನಾನೆಂದೆನುತ ||
ಹುಲುಗಣೆಗಳೊಳೇಂ | ಫಲ ಮಂತ್ರಾಸ್ತ್ರವ | ಕಳುಹೆಂದೆನುತೆಚ್ಚ ||೨೬೪||

ಸೈರಿಸಿ ಚೇದಿಪ | ನೇರಿಸುತನಲನ | ಶೌರಿಗೆ ಗುರಿಯಿಡಲು ||
ವಾರುಣದಿಂದ ನಿ | ವಾರಿಸೆ ಗರಳವ | ಕಾರುವ ಸರ್ಪಾಸ್ತ್ರ ||೨೬೫||

ಬಿಡಲಸುರಾರಿ ಗ | ರುಡನಿಂದರಿಯಲು | ಜಡಜಾಸನ ಶರವ ||
ಪೊಡವಿಪನೆಚ್ಚಡೆ | ನಡುವಿನೊಳಗೆ ಹರಿ | ಕಡಿದಿಡೆ ಮತ್ತವನು ||೨೬೬||

ಭಾಮಿನಿ

ಎಚ್ಚಮಂತ್ರ ಶಿಲೀಖಂಗಳ |
ನುಚ್ಚುನುರಿಗೆಯ್ದಬ್ಜನಾಭನು |
ಕೊಚ್ಚಿದನು ರಥದಶ್ವಗಳ ನಾ ಕೇತುದಂಡವನು ||
ಅಚ್ಚಮಸೆಯಲಗಿನಲಿ ಕವಚವ |
ಬಿಚ್ಚಿದನು ಡೊಣೆ ಬಿಲ್ಗಳನು ಮಗು |
ಳೆಚ್ಚು ಮಕುಟಚ್ಛತ್ರಗಳ ಕೆಡಹಿದನು ಚೇದಿಪನ ||೨೬೭||

ಕಂದ

ಭೂಲೋಲನೆ ಕೇಳೈ ಶಿಶು |
ಪಾಲಾದಿಗಳಸುವಿಡಿವೊಡೆ ಮೈಗರೆದೋಡಲ್ |
ನೀಲಾಂಗಂ ಪಡೆಯುತ ಜಯ |
ಬಾಲೆಯ ಶಂಖವ ಮೊಳಗಿದ ಘೇಯೆನೆ ವಿಬುಧರ್ ||೨೬೮||

ರಾಗ ಶಂಕರಾಭರಣ ಮಟ್ಟೆತಾಳ

ಜನಪ ಲಾಲಿಸಿತ್ತ ಮಾಗ | ಧನ ಬಲೌಘವ |
ಕನಲಿಹೊಕ್ಕು ಕಡಿದ ರಾಮ | ಬಿನುಗರಡವಿಯ ||೨೬೯||

ಮುಸಲ ಹಲಗಳಿಂದ ಹೊಡೆದು | ವಸುಧೆಗುರುಳಿಸಿ ||
ಅಸಿಯರೆದ ಚತುರ್ಬಲವನು | ಅಸಮ ಸಾಹಸಿ ||೨೭೦||

ಹರಿವ ರಕ್ತಕರುಳ ಹೊರಳಿ | ಧರೆಯ ತುಂಬಲು ||
ಅರರೆ ಬಲು ಭಯಾನಕದೊಳು | ಧುರವು ತೋರಲು ||೨೭೧||

ಸೃಷ್ಟಿಪಾಲ ನಿಚಯ ಮಗಧ | ನಿಟ್ಟ ಕಿಚ್ಚಿದು ||
ಅಟ್ಟಿಸುಡುವುದೆನುತ ರಣವ | ಬಿಟ್ಟು ಹಾಯ್ದದು ||೨೭೨||

ವಾರ್ಧಕ

ಕರಿನಿಕರ ದೀವಿಗಳೊಳಶ್ವರಥನಕ್ರಗಳೊ |
ಳಿರಿದ ಭುಜಫಣಿಗಳೊಳ್ ಕರವೆಂಬ ಝಷಗಳೊಳ್ |
ಕರುಳ ಹಾವಸೆಗಳೊಳ್ ಬಿಲ್ಲೊಗ್ಗಿನಲೆಗಳೊಳ್ ಮುರಿದಾಯುಧಂಗಳೆನಿಪ ||
ಕಿರುಗಿಡಂಗಳೊಳು ಭೀಕರ ಮಹಾನಕ ವಿಡಿದ |
ವರ ಸುಳಿಗಳೊಳ್ ರತ್ನಭೂಷಣದ ಶಿಲೆಗಳೊಳ್ |
ಹರಿದ ತಲೆ ಕೂರ್ಮಗಳೊಳರುಣ ಜಲವಾರಿನಿಧಿ ನಡುಗಿಸಿತು ನೋಳ್ಪರೆದೆಯ ||೨೭೩||

ಭಾಮಿನಿ

ಮೇದಿನೀಪತಿ ಕೇಳು ಬಲನು |
ಗ್ಗಾರುದನು ಮೇಣಖಿಳ ಭೂಪರು |
ಹೋದುದನು ಮಾಗಧನು ಕಾಣುತ ರೋಷಭೀಷಣನು ||
ಬಯ್ದು ವೇತುಗರೆನುತಲಿದಿರಡ |
ಹಾಯ್ದು ಕಾದುವಡಿದಿರು ನಿಲುನಿಲ್ |
ಕೈದುಗೊಳ್ಳೆಂದೆನುತ ಮುಸಲಿಯನೆರಗು ತಿಂತೆಂದ ||೨೭೪||

ರಾಗ ಮಾರವಿ ಅಷ್ಟತಾಳ

ಒನಕೆಗಾರನೆ ಮಝ ಭಾಪೆಲ | ನಿನ್ನ | ರಣದ ಕೌಶಲ್ಯವ ತೋರೆಲ |
ಜನಪರ ಗೆಲಿದಿಹ ಗರ್ವವ | ಬಿಟ್ಟು | ಮನೆಗೆಯ್ದು ಪಿಡಿವೊಡೆ ಜೀವವ ||೨೭೫||

ಬಲಹೀನ ಭೂಪರ ಕೇಳ್ಕುಟ್ಟಿ | ಸರ್ವ | ನೆಲವನನ್ಯಾಯದಿ ಜಗಜಟ್ಟಿ |
ತಳಮಳಿಸುವ ನಿನ್ನ ಪೆರ್ಮೆಯ | ಕ್ಷಣ | ಹಲದೊಳಿಳಿಸಿ ಸೇರ್ವೆನಾಲಯ ||೨೭೬||

ಮೊರೆಯೇನು ನಿನಗೆ ಭೂಮಿಪರೊಳು | ಸಹೋ | ದರರೊ ಹೆತ್ತವರೊ ಪೇಳೆನ್ನೊಳು |
ಬರಿದಂಭವೀಕಡೆ ಸಲ್ಲದು | ನಿನ್ನ | ತುರುಗಾವ ಹಳ್ಳಿಗುಚಿತವದು ||೨೭೭||

ಬಂಧುತ್ವವೆಮಗೆ ಸಾಧುಗಳೊಳು | ದುರ್ಮ | ದಾಂಧರೊಡನೆ ಕಡುಹಗೆ ಕೇಳು |
ಕೊಂದು ದುಷ್ಟರ ಧರ್ಮರಕ್ಷಣ | ಮಾಳ್ಪು | ದೊಂದೆ ಕರ್ತವ್ಯವೆಮ್ಮದು ಕಾಣ ||೨೭೮||

ಹೆಳವಗೇತಕೆ ತೀರ್ಥಯಾತ್ರೆಯು | ಗೋವು | ಗಳ ಮೇಯಿಸುವುದಾದವ ರೀತಿಯು |
ಬಲವಂತ ಕಂಸನ ಕೆಡಹಿದ | ತರು | ವಲಿಯ ಕಳುಹು ಸಾಕೀ ವಾಗ್ವಾದ ||೨೭೯||

ಗೋವಿನಿಂದತಿ ಸಾಧು ಜೀವಿಯ | ಕಾಣ | ದೋವಿದೆ ಪಶುಗಳು ನಿಮ್ಮಯ್ಯ |
ನೋವುದ ಸಹಿಸದೆ ಕಂಸನ | ಕೊಂದ | ಗೋವಿಂದವಧಿಸುವೆ ನಾ ನಿನ್ನ ||೨೮೦||

ರಾಗ ಕೇತಾರಗೌಳ ಝಂಪೆತಾಳ

ಪೂತುರೇ ರೌಹಿಣೇಯ | ಚದುರನಹೆ ಮಾತಿ | ನೊಳು ತಿಳಿದೆ ಬಗೆಯ |
ಮಾತುಳನ ಕೊಂದ ಪಾಪ | ತೊಲಗುವುದೆ | ಏತಕೀ ಬರಿ ವಿಲಾಪ ||೨೮೧||

ನೆರೆ ಗುಣಾವಳಿ ದುರ್ಗುಣ | ಲೇಶವನು | ಮರೆಸದೇ ಚಂದ್ರಕಿರಣ |
ಕರೆಯ ಮುಚ್ಚದೆ ಕಂಸನ | ವಧಿಸೆ ಸುಖ | ವರಿಸಿಹುದು ಯಾದವ ಗಣ ||೨೮೨||

ಮೋಹದಣುಗೆಯರ ಶೋಕ | ಮನಕೆ ಬಲು | ದಾಹಕುಡೆ ಬಂದೆ ಧುರಕಾ |
ದ್ರೋಹಿ ತಡೆಯೆನುತ ಗದೆಯ | ತಿರುಗಿಸುತ | ಸಾಹಸಿಗೆ ಹೊಡೆದನೆದೆಯ ||೨೮೩||

ಪುಸಿಗೆಯ್ದು ಹತಿಯ ರಾಮ | ಪ್ರತಿಯಾಗಿ | ಮುಸಲದಿಂ ಹೊಯ್ದನಮಮ |
ವಸುಧೆಯರಸನ ವರೂಥ | ನುಗ್ಗಾದು | ದೆಸೆವಶ್ವಸೂತ ಸಹತ ||೨೮೪||

ಭಾಮಿನಿ

ಧರಣಿಪತಿ ಕೇಳಿಂತು ಮಗಧನ |
ವಿರಥನಾಗಿಸಿ ಹೊಡೆದು ಭಂಗಿಸಿ |
ಹರಣ ಮಾತ್ರವನುಳುಹೆ ಕೊಲುವಡೆ ಸಮಯವಲ್ಲೆಂದು ||
ತಿರುಗಿಸಲು ಹರಿ ರಥವ ತನ್ನಪ |
ಮರುಳಿದನು ನಿಜಪುರಕೆ ಲಜ್ಜಾ |
ಭರದಿ ಚೈದ್ಯ ಸಮೇತವಪಜಯ ಲಲನೆಯೊಡಗೂಡಿ ||೨೮೫||

ವಾರ್ಧಕ

ಹರಿರಾಮರಿಂತು ಹಗೆಗಡಲನುತ್ತರಿಸುತ್ತ |
ಹರಣವಿತ್ತಳಿದ ಸೈನ್ಯಕೆ ರಿಪು ಬಲದ ಕೋಶ |
ವರ ವಸ್ತುವಾಹನಾಯುಧಗಳಂ ಹೇರಿಸುತ ಸುರರಭ್ರದೊಳಗುಲಿಯಲು ||
ಪುರಕೆ ನಡೆತರೆ ಪೌರರುತ್ಸವದೊಳಿದಿರ್ಗೊಳಲು |
ಬಿರುದಿನ ಕಹಳೆಯುಲಿಯೆ ಬಂದು ಧನಜಾಲವಂ |
ದೊರೆಯುಗ್ರಸೇನಗಿತ್ತತಿ ವಿಭವದಿಂದಿರ್ದರಸುರಾರಿ ಬಲಭದ್ರರು ||೨೮೬||

ರಾಗ ಮಧ್ಯಮಾವತಿ ತ್ರಿವುಡೆತಾಳ

ಅರಸ ಕೇಳಾಚೆಯೊಳು ಮಾಗಧ | ಧರಣಿಪತಿ ಮನಮರುಗುತಲಿ ನಿಜ |
ಪುರವ ಹೊಕ್ಕನು ತಲೆಯ ಮುಸುಕಿನ | ಮೆರೆವ ದುಗುಡದಿ ಬೇವುತ | ಇರುಳು ಹಗಲು ||೨೮೭||

ಮತ್ತೆ ಮೂರನೆ ತಿಂಗಳಿಗೆ ಪಗೆ | ವೆತ್ತು ಫಣಿಯಂತೊದಗಿಸಿದನಿ |
ಪ್ಪತ್ತು ಮೂರಕ್ಷೋಹಿಣೀ ಬಲ | ಪೃಥ್ವಿಪಾಲರ ಕೂಡುತ | ಮಗಧಪಾಲ ||೨೮೮||

ವೀರ ಸೌವೀರಾಂಧ್ರಿ ಮದ್ರಮ | ಹೀರಮಣನಾಚೇದಿಪತಿ ಹ |
ಮ್ಮೀರ ಗುರ್ಜ್ಜರ ಮುಖ್ಯ ಮಾರ್ಬಲ | ವಾರಿಧಿಗೆ ನದನದಿಗಳ | ತೆರದಿ ಬರಲು ||೨೮೯||

ಭಾಮಿನಿ

ಎನ್ನ ಬಿಡು ತನ್ನ ಬಿಡು ಸಮರಕೆ |
ಮುನ್ನರಿವೆ ಬಲಕೃಷ್ಣರನು ತಾ |
ನೆನ್ನ ಹರಿಬವಿದೆನ್ನದೆಂದುಲಿದುದು ಭಟಾನೀಕ ||
ಹೊನ್ನರಥವೇರಲು ಗಿರಿವ್ರಜ |
ಸೈನ್ಯ ಶರಧಿಯು ಸಹಿತ ಯಮುನೆಯ |
ಸನ್ನಿಧಿಯ ಸೇರಿತು ಖಳಾವನಿಪಾಲರುರು ಕಟಕ ||೨೯೦||

ವಾರ್ಧಕ

ಮರುತ ಹತಿಗೇಳುವ ತರಂಗದಿಂ ಭಂಗದಿಂ |
ಚರಿಸುತಿರುತಿಹ ಪೋತನಿಕರದಿಂ ಮಕರದಿಂ |
ಕರೆವಿಡಿದು ಬೆಳೆದ ವೃಕ್ಷಂಗಳಿಂ ಮೀಂಗಳಿಂ ದಡಿಯ ಕರ್ಗಲ್ಗಳಿಂದ ||
ಭರದೊಳುಯ್ಯಲ್ಪಡುವ ಸುಮಗಳಿಂ ದ್ರುಮಗಳಿಂ |
ಪರಿದು ಬಂದೊಳವುಗುವ ತೊರೆಗಳಿಂ ನೊರೆಗಳಿಂ |
ದುರೆ ನೀರನೀಂಟೆ ಬಹ ಮೃಗಗಳಿಂ ಖಗಗಳಿಂದಾ ಜಗುನೆ ಕಣ್ಗೆಸೆದಳು ||೨೯೧||

ರಾಗ ಕೇತಾರಗೌಳ ಅಷ್ಟತಾಳ

ಕುರುಕುಲೋದ್ಭವನೆ ಕೇಳುರು ನದೀ ತೀರಕೆ |
ಬರಲು ಮಾಗಧನ ಸೈನ್ಯ ||
ದುರುಳರ ಮೊಗನೋಡ | ಲರಿದೆಂದು ಹೊಕ್ಕನು |
ತರಣಿಯು ಪಡುಗಡಲ ||೨೯೨||

ಮುಗಿಯೆ ಪಂಕಜ ನಸು | ನಗಲು ಕೈರವಗೂಡ |
ಖಗ ಸಂದೋಹವು ಸೇರಲು ||
ಜಗವ ಮುಸುಕೆ ತಮ | ನೆಗೆಯೆ ತಾರಾಗಣ |
ಜಗುನೆಯುಸಿಕನಿರ್ದಳು ||೨೯೩||

ಕಾಣುತ್ತ ಮಾಗಧ | ಕ್ಷೋಣಿಪಾಲಕ ತನ್ನ |
ಸೇನಾಧಿಪರ ಕರೆದು ||
ಈ ನಿಶಿ ಕಳೆದು ಮುಂಜಾನೆ ನಡೆವುದೆನೆ |
ಸೇನೆ ಬೀಡನು ಬಿಟ್ಟಿತು ||೨೯೪||

ಕಂದ

ಮಾಗಧ ಸೈನಿಕರಿರುಳೊಳ |
ಗಾಗಿ ಸುಷುಪ್ತಿಗೆ ಸುಖದೊಳಿರಲ್ ಬಳಿಕತ್ತಲ್ ||
ಬೇಗನೆ ಬೇಹಿನವರ್ ಹರಿ |
ದಾಗಳೆ ಹದನಂ ಸರೋಜನೇತ್ರಂಗೆಂದರ್ ||೨೯೫||

ರಾಗ ಮುಖಾರಿ ಏಕತಾಳ

ಚಿತ್ತಾವಧಾನ ಗೋವಳರಾಯ | ನವನೀರದ ಕಾಯ | ಚಿತ್ತಾವಧಾನ || ಪಲ್ಲವಿ ||

ಮೊದಲೊಂದು ಬಾರಿ ವೈರಿಬಲವ | ಸದೆದಿತ್ತೆ ಸುಖವ | ಮಧುರಾಪುರಕ್ಕೆ ಮಗುಳೆ ಛಲವ |
ಅಧಿಕವೆನಿಸಿ ಮಾ | ಗಧ ತಾಳುತಲಿಂ | ತುದಧಿಯ ಪಡಿಬಲ | ವೊದಗಿಸಿಕೊಂಡು ||   ||೨೯೬||

ತುರಿಹದಿ ಬರ್ಪನಾಜಿಗಿಂದು | ಇರುಳಾಯಿತೆಂದು || ಸರುವರು ಯಮುನಾತಟದಿ ನಿಂದು |
ಬರುವರು ನಾಳೆಯಿ | ದರಿ ತುದನೊರೆದೆವು | ಕರುಣಾಕರ ನೀ | ಪೊರೆಯೆಂದೆರಗಲು ||೨೯೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದಡಾಹವ ಧೀರ ಮಾಗಧ | ಬಂದ ವಾರ್ತೆಯ ಕೇಳಿ ರಾಮ ಮು |
ಕುಂದರಾಲೋಚಿಸಿ ರಹಸ್ಯದೊ | ಳಂದಿನಿರುಳು ||೨೯೮||

ಮಂದಮತಿಯನು ಬರಗೊಡುವುದೆಮ | ಗಿಂದು ಹಿತವಲ್ಲಾತ ಮಧುರೆಗೆ |
ಬಂದರೀ ಸಮಯದೊಳು ನಾವ್ತಡೆ | ವಂದವೆಂತು ||೨೯೯||

ಆದುದಷ್ಟೇ ಮೂರು ತಿಂಗಳು | ಯಾದವರ ಪೆಸರಿಲ್ಲವೀಸೂ |
ಳಾದುರುಳರನು ತರಿವ ರಾತ್ರಿಯೊ | ಳೈದಿ ನಾವು ||೩೦೦||

ಎನುತ ಸತ್ಯಕ ತನುಜ ಗದ ಗಾಂ | ದಿನಿಜ ಪೃಥು ಕೃತವರ್ಮ ಮುಖ್ಯರ |
ನನಿಮಿಷಾರ್ಚಿಸಿ ಕರೆಸಿ ನುಡಿದನು | ಮನದ ಬಗೆಯ ||೩೦೧||

ರಾಗ ತುಜಾವಂತು ಮಟ್ಟೆತಾಳ

ಕೇಳಿ ಯಾದವಾಗ್ರಗಣ್ಯರು   || ಪಲ್ಲವಿ ||

ಖೂಳ ಮಾಗಧೇಶ ನಮ್ಮ | ಕಾಳೆಗದಲಿ ಸೋತು ಮುನ್ನ |
ಮೂಲಬಲವ ನೆರಹಿ ಮತ್ತೆ | ಧಾಳಿಯಿಡಲು ಬರುವನಂತೆ || ಕೇಳಿ ||೩೦೨||

ಆ ಮಹಾರಿಬಲವ ಮಧ್ಯ | ತಾಮಸಿಯೊಳು ತಡೆದು ನಾವು |
ಸಾಮರ್ಥ್ಯದಿ ತರಿದು ವಿಜಯ | ಕಾಮಿನಿಯನು ಪಡೆವುದುಚಿತ || ಕೇಳಿ ||೩೦೩||

ಒಮ್ಮೆ ನಡೆದ ರಣದೊಳಾದ | ನಿಮ್ಮ ನೋವು ಮಾಸದಿರಲು |
ಧರ್ಮವೆಮಗೆ ಮುಯ್ಯಿ ದುಷ್ಟ | ಕರ್ಮರ ಸರ್ವಸ್ವ ಹರಣ || ಕೇಳಿ ||೩೦೪||

ಎನಲು ಘುಡು ಘುಡಿಸುತ ಸಿಂಹ | ನಿನದವೆಸಗಿ ಯದುವರೇಣ್ಯ |
ರನಘರೆದ್ದರಾಗ ತಮ್ಮ | ಧನುವನೊದರಿಸುತ್ತ ಜನದಿ || ಕೇಳಿ ||೩೦೫||

ಭಾಮಿನಿ

ನಟ್ಟಿರುಳು ಯದುಸೇನೆ ದನುಜ ಘ |
ರಟ್ಟನಾಜ್ಞೆಯೊಳೈದೆ ರಿಪುಗಳು |
ಬಿಟ್ಟು ಕೈದುವ ಹಾಸಿಯುಡುಗೆಯ ನಿದ್ರಿಸುತ್ತಿರಲು ||
ಕಟ್ಟಿದಶ್ವಗಜಂಗಳನು ಕಂ |
ಡೊಟ್ಟಿನಲಿ ಮೇಲ್ವಾಯ್ದು ವಾದ್ಯವ |
ನಟ್ಟಹಾಸದಿ ಮೊಳಗೆ ಬಲ ಸಂಭ್ರಮಿಸಿತಾಹವಕೆ ||೩೦೬||

ರಾಗ ಭೈರವಿ ತ್ರಿವುಡೆತಾಳ

ಹೊಡೆದರಾಗ | ರಿಪುವನ | ಗಡಿದರಾಗ  || ಪಲ್ಲವಿ ||

ಮತ್ತೆ ಹರಿಯೆಡವಂಕದಲಿ ಖತಿ | ವೆತ್ತು ಮುತ್ತಲು ಮಾಗಧ |
ಮೊತ್ತವನು ಬಲವಂಕದಲಿ ಬರೆ | ಸಾತ್ಯಕಿಯು ಮುಸಲಾಯುಧ |
ಕತ್ತರಿಸಿ ಗಜಹಯವ ಮಧ್ಯದೊ | ಳೊತ್ತಿದೊಡೆ ದಾವಾನಲ |
ಸುತ್ತಿ ದಡವಿಯೊಲಾಯ್ತು ವೈರಿ ಬ | ಲೋತ್ತಮರ ಕೋಲಾಹಲ || ಹೊಡೆದರಾಗ ||೩೦೭||

ತುರಗ ಹೂಡದ ರಥಕೆ ರಥಿಕರು | ತೊರೆದು ಸೂತನನಡರುತ |
ಕರಿಗಳಿಗೆ ಗುಳವಿಡದೆ ಮಾವರು | ಬರಿಯ ಹಸ್ತದೊಳೇರುತ |
ಧರಿಸಿ ಚಮ್ಮಟಿಕೆಯನು ಬಿಗಿಯದ | ಹರಿಗೆ ಲಂಘಿಸಿ ರಾವುತ |
ನೆರವಿ ಬಂತು ನಿರಸ್ತ್ರದಿಂ ಪದ | ಚರರು ನಡೆದರು ಸಮರಕೆನುತ || ಹೊಡೆದರಾಗ ||೩೦೮||

ಬಿಟ್ಟ ಮಂಡೆಯಲೈದಿದರು ಜಗ | ಜಟ್ಟಿಗಳು ಧುರಧೀರರು |
ಮುಟ್ಟಿಹೊಯ್ದರು ಹಾಯ್ದರಮರ್ದುಣಿ | ಹೆಟ್ಟುಗೆಯರನು ವೀರರು ||
ಅಟ್ಟಿತರಿದರು ಶತ್ರು ಬಲವನು | ಕುಟ್ಟಿ ಕೈ ಕಾಲ್ದಲೆಯನು |
ಬಟ್ಟಬಯಲಾಯ್ತರಿ ಚತುರ್ಬಲ | ಸುಟ್ಟಡವಿ ತೆರನೆಂಬೆನು || ಹೊಡೆದರಾಗ ||೩೦೯||

ವಾರ್ಧಕ

ಕರಿಪಯೋಜಾಕರವ ಪರಶುಧರ ಖಳನೃಪರ |
ಹರನೈದೆ ಮುಪ್ಪೊಳಲ ತರಣಿ ಕಗ್ಗತ್ತಲೆಯ |
ಸುರವರಂಗಿರಿಕುಲವನರಿವು ಸಲೆ ಮೌಢ್ಯವಂ ದುರಿತಮಂ ಪುಣ್ಯರಾಶಿ ||
ವರಯೋಗಿ ಷಡ್ರಿಪುವ ಶರಧಿಯಂ ಕುಂಭಜಂ |
ಕರಿಘಟೆಯ ಹರಿಸೀಳ್ದ ತೆರದಿ ಸದೆಬಡಿದರಾ |
ದುರುಳ ಭೂಪಾಲಕರ ನೆರವಿಯಂ ಯದುಕುಲಜರಿರುಳ ಕಡೆ ಜಾವದಲ್ಲಿ ||೩೧೦||

ಭಾಮಿನಿ

ಧರಣಿಪತಿ ಕೇಳಾ ಸಮಯದೊಳು |
ಹರಿವ ಕತ್ತಲೆಯೊಡನೆ ಮಾರ್ಬಲ |
ಹರೆದುದವನೀಶ್ವರರು ವಿಪಿನೇಶ್ವರನಿಸೆ ಮಿಕ್ಕ ||
ಕರಿತುರಗಗಳಿಗೊಡೆಯರಿಲ್ಲನಿ |
ತರೊಳು ಬಲನಡಹಾಯ್ದು ಮಗಧಂ |
ಗೆರಗಲಸ್ತ್ರಾಭರಣ ವಿರಹಿತನೆಂದನುರೆ ಮುಳಿದು ||೩೧೧||

ರಾಗ ಭೈರವಿ ಅಷ್ಟತಾಳ

ಧೀರುರೆ ಮಝ ಗೋವಳ | ನಿಮ್ಮೊಳು ಧರ್ಮ | ಸಾರವಿದೇನೋ ಕಳ್ಳ |
ಆರೆಲೊ ಗುರು ನಿನ | ಗೀ ರಹಸ್ಯಕೆ ಮುಂದೆ | ದಾರಿ ಯಾವುದು ಪೇಳೆಲೋ ||೩೧೨||

ಪಾತಕಿ ನಿಷ್ಕಾರಣ | ಯಾದವರನು | ಘಾತಿಸಿ ಬಂದಡಿನ್ನಾ |
ಯಾತುಧಾನಾಂಶರ | ವ್ರಾತವ ಸವರುವ | ಡೀ ತೆರನೆಲೋ ಸಾಧನ ||೩೧೩||

ತನುಜೆಯರಿಗೆ ವೈಧವ್ಯ | ಬರಿಸಿ ಕಂಸ | ನನು ಸಂಹರಿಸಿ ಹಗೆಯ |
ಕನಲಿ ತೀರಿಸಬಂದೆ | ಜನಪರೊಡನೆ ಸುಮ್ಮ | ನೆನಬೇಡ ಮೋಸಗಾರ ||೩೧೪||

ವೀರನೆ ಬಲ್ಲಿದನು | ನೀನಾಗೆ ಕು | ಮಾರಿಯರಿನೆಯನನು |
ಭೂರಿ ಯಾದವಪರಿ | ವಾರ ಕಟ್ಟುಳುಯಿಡೆ | ಬಾರಿಸದಿರ್ದೆಯೇನು ||೩೧೫||

ಸಾಕೆಲವೋ ವಿಚಾರ | ಧುರದಿ ನಿನ್ನ | ನಾ ಕಾರಿಸುವೆ ಕನ್ನೀರ |
ಜೋಕೆಯೊಳೈದು ಪಿಂ | ದೇಕುದ್ದುರುಟುತನ | ಪೋಕನೀ ಬಿಡು ಕಪಟ ||೩೧೬||

ರಾಗ ಸಾಂಗತ್ಯ ರೂಪಕತಾಳ

ಎಂದೆನುತಲೆ ಮುಷ್ಟಿಯಿಂದ ಮಾಗಧನು ಕಾ | ಳಿಂದೀ ಭೇದನನ ತಿವಿಯಲು ||
ಕುಂದದೆ ನೇಗಿಲ ತಿರುಹಿಡಲಾ ಜರಾ | ಸಂಧನು ಬಳಲಿ ಕಂಗೆಟ್ಟು ||೩೧೭||

ಹರಣದಾಸೆಯೊಳೋಡಿ ಹಳುವವ ಹೊಕ್ಕನು | ಬಿರುದಾವಳಿಯನೆಲ್ಲ ಬಿಸುಟು ||
ಅರಸುತ್ತಲಿರೆ ಮಂತ್ರಿಗಳು ವೇಣು ನೃಪವರ್ಗ | ಬರಿಗಾಲೊಳಡವಿ ಮಧ್ಯದಲಿ ||೩೧೮||

ಹರಿ ರಾಮರಾ ವೈರಿ ಬಲದ ಬೊಕ್ಕಸ ರತ್ನಾ | ಭರಣಾದಿ ಧನ ಸಂಚಯವನು ||
ಹೊರಿಸುತ್ತ ಯಾದವರೊಡನೈದೆ ಮಧುರೆಗೆ | ಅರಸ ಕೇಳಿತ್ತಲಾದದನು ||೩೧೯||

ರಾಗ ಭೈರವಿ ಝಂಪೆತಾಳ

ಇಳೆಯಧಿಪ ತನಗಾದ | ಬಲುಭಂಗವನು ನೆನೆದು |
ಕಳವಳಿಸಿ ಮರುಗುತ್ತ | ನಿಳಯವನು ಹೊಗದೆ ||೩೨೦||

ಎಂತಿವರ ಸಂಹರಿಸಿ | ಪಂಥ ಜೈಸುವೆನೆನುತ |
ಚಿಂತಿಸುತ್ತಖಿಳ ಭೂ | ಕಾಂತರೊಡಗೂಡಿ ||೩೨೧||

ಕಾನನದಿ ತೊಳಲುತೀ | ಶಾನನನು ಸ್ಮರಿಸುತ್ತ |
ತಾ ನಡೆದ ವಹಿಲದಿಂ | ಶೋಣಿತಾಪುರಕೆ ||೩೨೨||

ವಾರ್ಧಕ

ನರಪೌತ್ರ ಕೇಳುತ್ತ ಶೋಣಿತಾಪುರದಿ ಬಲಿ |
ತರಳ ಬಾಣಾಸುರಂ ಮುನ್ನ ಹರನಂ ತಪದಿ |
ಹರುಷಗೊಳಿಸಿ ಸಹಸ್ರ ಭುಜಗಳಂ ಪಡೆದು ಗೌರೀಶನಂ ಸತತ ತನ್ನ ||
ಅರಮನೆಯೊಳಗೆ ನಿಲಿಸುತಧಿಕ ವೈಭವದಿಂದ |
ಸುರವೈರಿ ಸಂಕುಲದ ಚಕ್ರವರ್ತಿತ್ವದಿಂ
ದಿರುತಿರಲು ಸಚಿವ ಸಾಮಂತಾಪ್ತರಿಂದೊಂದು ದಿವಸವೊಡ್ಡೋಲಗದೊಳು ||೩೨೩||

ಭಾಮಿನಿ

ಭೂತಳಾಧಿಪ ಮಾಗಧೇಂದ್ರನು |
ಸೋತು ದುಗುಡದಿ ಬಂದ ವಾರ್ತೆಯ |
ದೂತರೊಡೆಯಂಗೆರಗಿ ಬಿನ್ನೈಸಲ್ಕೆ ಲಾಲಿಸುತ ||
ಪ್ರೀತಿಯಿಂ ಮಂತ್ರಿ ಪ್ರಮುಖರಿಂ |
ದಾತನಂ ಮನ್ನಿಸುತ ಕರೆತಂ |
ದೀ ತೆರದಿ ಬೆಸಗೊಂಡನರ್ಧಾಸನದಿ ಕುಳ್ಳಿರಿಸಿ ||೩೨೪||

ರಾಗ ತುಜಾವಂತು ಝಂಪೆತಾಳ

ಕ್ಷೇಮವೇನೈ ಮಗಧ | ಗೋಮಿನಿಪ ನಿನಗೆ |
ಕಾಮಿನೀ ಸುತರು ಪರಿ | ಣಾಮದಿಂದಿಹರೆ | ಕ್ಷೇಮವೇನೈ || ಪಲ್ಲವಿ ||

ಪರಿಜನರು ಮನ್ನೆಯರು ಪೌರಜನ ಪದುಳಿಗರೆ |
ಪುರಹರನ ದಯೆಗೀಗ | ಕೊರತೆಯಿಲ್ಲೈಸೆ ||
ಧರಣಿಪರು ನಿನ್ನಾಜ್ಞೆ | ಗೆರಡೆಣಿಸದಿಹರೆ ಹೊಸ |
ಬರವೇನು ಮೊಗದ ಸಿರಿ | ಹಿಂಗಿತೇಕಯ್ಯ || ಕ್ಷೇಮವೇ ||೩೨೫||

ದಿತಿಜೇಂದ್ರ ಕೇಳು ಸತಿ | ಸುತ ಪೌರತತಿ ಭೂತ |
ಪತಿಯ ಕರುಣೆಯೊಳನಕ | ಸುಖದೊಳಿಹುದೀಗ ||
ಅತುಲ ಬಲಶಾಲಿ ದು | ಸ್ಥಿತಿಯ ಪೇಳುವುದೇನು |
ಗತಿಹೀನನಾದೆ ನಾ | ನೊಂದು ಕತದಿಂದ || ಕ್ಷೇಮ ||೩೩೬||

ಮಾನನಿಧಿ ನಿರವಿಸಪ | ಮಾನಗಳ ಬಗೆಯೆಲ್ಲ |
ಪ್ರಾಣಪ್ತರೆಮ್ಮೊಳಗೆ | ನ್ಯೂನತೆಯು ಸಲ್ಲ ||
ಕ್ಷೋಣಿಹದಿ ನಾಲ್ಕೆನ್ನ | ತ್ರಾಣ ಪರಿಕಿಸಬರಲು |
ತ್ರೈನಯನನೊಲ್ಮೆಯಿಂ | ಗಣಿಸೆನನಲೆಂದ ||೩೨೭||

ಬಲಕೃಷ್ಣರೆಂಬ ಗೋ | ವಳರ ಧರ್ಮದಿ ನೃಪರ |
ಕಲಹದೊಳು ಪರಿಭವಿಸಿ | ಸರ್ವಸಾಧನವ ||
ಚೆಲುವ ಹಯರಥದಂತಿ | ಕುಲವ ಕೋಶಂಗಳನು |
ಸುಲಭದಿಂ ದೊಳೆದೊಯ್ದ | ರಳುಕದವರಿಂದು ||೩೨೮||