(ಶತ-ಶತಮಾನಗಳಿಂದಲೂ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಜೀವನಾವಶ್ಯಕ ವಸ್ತುಗಳನ್ನು ವಿತರಿಸುತ್ತಿದ್ದ ಅಲೆಮಾರಿ ಲಂಬಾಣಿಗಳ ಬದುಕು ಇಂದು ಪರಿವರ್ತನೆಯ ಹಾದಿಯಲ್ಲಿದೆ. ಇತರರ ಸಂಸ್ಕೃತಿಯಿಂದ ಪ್ರಭಾವಿತರಾಗದೆ ತಮ್ಮ ಸಂಸ್ಕೃತಿಯ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಬರುವಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ. ಆದರೂ ಈ ಜನಪದ ವೃಂದ, ರಾಷ್ಟ್ರೀಯ ಮುಖ್ಯ ಪ್ರವಾಹದಲ್ಲಿ ವಿಲೀನವಾಗುವ ಹಿನ್ನೆಲೆಯಲ್ಲಿ ಆಗಬೇಕಾದ ಕಾರ್ಯ ಬೆಟ್ಟದಷ್ಟಿದೆ).

ಕರ್ನಾಟಕದಲ್ಲಿ ನೆಲೆಸಿರುವ ಅನೇಕ ಜನಪದ ವೃಂದಗಳಲ್ಲಿ ಲಂಬಾಣಿ(ಬಂಜಾರ)ಗರದೂ ಒಂದು ವಿಶಿಷ್ಟ ಸಮೂಹ. ಇವರನ್ನು ಲಂಬಾಣಿ”

[1]. ಲಮಾಣಿ, ಲಂಬಾಡಿ,”[2] ಲಂಬಾಡಾ, ಬಂಜಾರ, ಸುಖಾಲಿ, ಸುಗಾಲಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. “ಬಂಜಾರ” ಅಥವಾ ಲಂಬಾಣಿ ಎನ್ನುವುದು ಯಾವುದೇ ಜಾತಿ ಸಂಬಂಧಿ ಪದಗಳಾಗಿರದೆ ಅದು ಅವರ ಕುಲವೃತ್ತಿಯಿಂದ ಬಂದ ಪದಗಳಾಗಿವೆ.

ಲಂಬಾಣಿಗರು ಮೂಲತಃ ಅಲೆಮಾರಿ ಗುಂಪಿನವರಾಗಿದ್ದು, ಮೊದ ಮೊದಲು ಬೇಕೆಂದಾಗ ಮಡಚಿ ಕಟ್ಟಿ ಎತ್ತಿಕೊಂಡು ಹೋಗಬಹುದಾದ ಹಣೆದ ಕಡ್ಡಿಚಾಪೆ, ಈಚಲು ಚಾಪೆಯ ಗುಡಿಸಲು (ಚಟಾಯಿ). ಕಾಲಾನಂತರ ಬಟ್ಟೆಯ ಡೇರೆಗಳನ್ನು ತಮಗೆ ಅನುಕೂಲವಾದಲ್ಲಿ ಸಾಗಿಸಿ ಅದನ್ನೆ ತಮ್ಮ ತಾತ್ಪೂರ್ತಿಕ ವಾಸಸ್ಥಳಗಳನ್ನಾಗಿ ಮಾಡಿಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಇವರು ಎಂಟ್ಹತ್ತು ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತ “ತಾಂಡಾ”ಗಳ ಹುಟ್ಟಿಗೆ ಕಾರಣರಾದರು.

ಶತಶತಮಾನಗಳಿಂದ ತುಳಿತಕ್ಕೊಳಗಾದ ಈ ಗುಂಪಿನವರ ಚಾರಿತ್ರಿಕ ಹಿನ್ನೆಲೆಯುಳ್ಳವರು.”[3] ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಪ್ರತಿನಿತ್ಯವೂ ಬೇಕಾಗುವ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವಲ್ಲಿ ಬಹು ಮುಖ್ಯವಾದ ಸೇವೆಯಲ್ಲಿ ಸಲ್ಲಿಸಿದ್ದಾರೆ.”[4] ಭಾರತದಂಥ ವಿಶಾಲ ರಾಷ್ಟ್ರದಲ್ಲಿ ಒಂದು ಕಾಲಕ್ಕೆ ವ್ಯಾಪಾರ”[5] ವ್ಯವಸ್ಥೆಯು ಈ ಜನರ ಹಿಡಿತದಲ್ಲಿತ್ತು ಎಂಬುದನ್ನು ಮರೆಯುವಂತಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಜನಸಮುದಾಯಕ್ಕೆ ಒಂದು ಬಗೆಯ ದಾಸ್ಯ, ಕಿರುಕುಳ, ತೊಂದರೆಗಳಾದರೆ, ಬಂಜಾರ ಜನಾಂಗಕ್ಕೆ ಇನ್ನೂ ಹೆಚ್ಚಿನ ಕಠಿಣ ಪರಿಸ್ಥಿತಿಗಳಿದ್ದವು. ಅದಕ್ಕೆ ಹಲವಾರು ಕಾರಣಗಳಿದ್ದವು. ಸಂಪದ್ಭರಿತ ಭಾರತವನ್ನು ನೋಡಿ ವ್ಯಾಪಾರ ಮಾಡುವ ನೆಪದಲ್ಲಿ ಕೊಳ್ಳೆ ಹೊಡೆಯಲು ಬಂದಿದ್ದ ಪರದೇಶದವರಿಗೆ ಮೊಟ್ಟ ಮೊದಲು ಸಿಕ್ಕಿದವರು ವ್ಯಾಪಾರಿ ಬಂಜಾರ ಜನಾಂಗ, ಬಂಜಾರರಿಗೂ ವಿದೇಶಿಯರಿಗೂ ವ್ಯಾಪಾರದಲ್ಲಿ ಪೈಪೋಟಿ. ಅನಾದಿ ಕಾಲದಿಂದ ವ್ಯಾಪಾರದಲ್ಲಿ ತೊಡಗಿದ್ದ ಲದಣಿಯಾ ಬಂಜಾರಿಗಳ ಮುಂದೆ ಮೊದಮೊದಲು ಹೊರದೇಶದವರ ಬೇಳೆ ಬೇಯಲಿಲ್ಲ. ಪ್ರಾಮಾಣಿಕತನದಿಂದ ಸರಳ ವ್ಯಾಪಾರಸ್ಥರಾದ ಬಂಜಾರರ ಮುಂದೆ ಕಪಟಿಗಳಾದ ಪರಕೀಯರ ವ್ಯವಹಾರ ದೇಶೀಯ ರಾಜರಿಗೂ ಹಾಗೂ ಜನಸಮುದಾಯಕ್ಕೂ ಹಿಡಿಸಲಿಲ್ಲ.

ಇದೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಕುಟಿಲೋಪಾಯದಿಂದ ಮೆಲ್ಲಮೆಲ್ಲನೆ ಒಂದೊಂದಾಗಿ ದೇಶದ ರಾಜ್ಯವನ್ನು ಕಸಿದುಕೊಂಡು ಕೊನೆಗೆ ಸಮಸ್ತ ಚಕ್ರಾಧಿಪತ್ಯವನ್ನೇ ಕಟ್ಟಿದ ಬ್ರಿಟೀಷರು ಬಂಜಾರ ಜನಾಂಗದವರನ್ನು ದೇಶದಲ್ಲಿ ತುಳಿದುಹಾಕತೊಡಗಿದರು. ಪರಕೀಯರ ದೌರ್ಜನ್ಯಕ್ಕೆ ಒಳಗಾದ ಬಂಜಾರರು ದಿಕ್ಕು ತೋಚದೆ ಕಾಡುಪಾಲಾದರು. ಸ್ವಾತಂತ್ರ್ಯ ದಿನಗಳರೆಗೂ ಕಾಡಿನ ಸರಹದ್ದಿನಲ್ಲಿ ಜೀವಿಸುತ್ತ ಕಾಲ ಕಳೆದ ಇವರು ಸ್ವಾಂತಂತ್ರ‍್ಯ ಗಳಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಉಸಿರಾಡುವಂತಾಯಿತು.

“ರಾಜ ಭೋಜನ ಆಡಳಿತ ಕಾಲದಿಂದ ಹಿಡಿದು ಹದಿನಾಲ್ಕನೆಯ ಶತಮಾನದವರೆಗೆ ನಡೆದ ಅನೇಕ ಧಾರ್ಮಿಕ ಸಂಘರ್ಷ, ವಿದೇಶಿ ಆಕ್ರಮಣ ಹಾಗೂ ರಜಪೂತರ ಅನೇಕ ಯದ್ಧಗಳಲ್ಲಿ ಲಂಬಾಣಿಗರು (ಬಂಜಾರ) ಕೂಡ ಭಾರತೀಯ ಸೈನಿಕರಾಗಿ ತಮ್ಮ ಸರ್ವಸ್ವವನ್ನು ತ್ಯಾಗ (ಬಲಿದಾನ) ಮಾಡಿದ್ದಾರೆ. ಈ ಕುರಿತು ಅವರ ಜನಸಮುದಾಯದಲ್ಲಿ ಅನೇಕ ಕಥೆ ಹಾಗೂ ಗೀತೆಗಳು ಪ್ರಚಲಿತವಿದ್ದು, ಅವುಗಳನ್ನು ಈಗಲೂ ಕೇಳಬಹುದಾಗಿದೆ. ತಮ್ಮ ಆಶ್ರಯದಾತ ರಾಜ ರಾಣಾಪ್ರತಾಪಸಿಂಹನ ಪರಾಜಯದಿಂದಾಗಿ ಈ ಜನರು ಕಾಡು ಬೆಟ್ಟಗಳಲ್ಲಿ ಹೋಗಿ ತಲೆಮರೆಸಿಕೊಳ್ಳಬೇಕಾಯಿತು. ಅಲ್ಲದೆ ಪ್ರಕೃತಿ ಪ್ರಕೋಪದಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತ ಅಂದಿನಿಂದ ಇಂದಿನವರೆಗೆ ಊರುಗಳಿಂದ ದೂರದಲ್ಲಿ ಸಾಮಾನ್ಯವಾಗಿ ಕಾಡು ಮತ್ತು ಬೆಟ್ಟಗಳಲ್ಲಿ “ತಾಂಡಾ” ಕಟ್ಟಿಕೊಂಡು ವಾಸವಾಗಿದ್ದಾರೆ.”[6]

ಲಂಬಾಣಿಗರು (ಬಂಜಾರ) ತಮಗೆ ಅನುಕೂಲವೆಂದು ತೋರಿಬಂದ ಪ್ರದೇಶಗಳಿಗೆ ಸ್ವತಃ ತಾವೇ ತಯಾರಿಸಿರುವ ಗೋಣಿ (ಗುಣಿ) ಚೀಲಗಳಲ್ಲಿ ಉಪ್ಪು, ಸಂಬಾರ ಪದಾರ್ಥ, ದವಸ ಧಾನ್ಯ ಮುಂತಾದವುಗಳನ್ನು ತಮ್ಮ ದನಕರುಗಳ ಮೇಲೆ ಹೇರಿಕೊಂಡು ತುಟ್ಟಿಯಾಗಿರುವ ಕಡೆಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು.”[7]ಉಪಜೀವನಕ್ಕಾಗಿ ಮತ್ತೊಂದು ಪ್ರದೇಶಗಳಿಗೆ ಹೋಗುವುದು, ಮತ್ತೆ ತಮ್ಮ “ತಾಂಡಾ”ಗಳಿಗೆ ಮರಳುವುದು, ಹೀಗೆ ಅಲೆಮಾರಿಯಿಂದ ಅರೆ ಅಲೆಮಾರಿಯಾಗಿ ಮತ್ತೆ ಕೆಲವೆಡೆ ಕೆಲಕಾಲ ಸ್ಥಿರವಾಗಿ ಬೇರೂರುತ್ತ, ಅಲ್ಲಿಂದಲೂ ತಮ್ಮ ಡೇರೆಗಳನ್ನು ಕೀಳುತ್ತ ಮುಂದುವರೆದ ಲಂಬಾಣಿಗರು ಹಾಗೂ-ಹೀಗೂ ತಮ್ಮ ಜೀವನ ನಡೆಸುತ್ತ ಬಂದರು. ಇದು ಮೇಲುನೋಟಕ್ಕೆ ಕಾಣುವ ಲಂಬಾಣಿ ಸಮುದಾಯದ ಜೀವನ ವಿಧಾನ.

ಕ್ರಿ.ಶ. ೧೧-೧೨ನೆಯ ಶತಮಾನ “ದಂಢಿ” ಬರೆದಂಥ ಸಂಸ್ಕೃತದ “ದಶಕುಮಾರ ಚರಿತಂ” ಎಂಬ ಗ್ರಂಥದಲ್ಲಿ ಬಂಜಾರಾಗಳ ತಾಂಡಾದಲ್ಲಿ ನಡೆಯುವ ಹುಂಜಗಳ ಕಾದಾಟದ ಸ್ಪರ್ಧೆಯ ವಿಷಯವಾಗಿ ಉಲ್ಲೇಖ ಸಿಗುತ್ತದೆ. ಇದನ್ನಾಧರಿಸಿ ಸರ್.ಎಚ್.ಎಂ. ಈಲಿಯಟ್ ಅವರು ಇವರ ಕಾಲವನ್ನು ಕ್ರಿ.ಶ. ಪೂರ್ವ ೪ನೆಯ ಶತಮಾನವೆಂದು ನಿರ್ಧರಿಸಿದ್ದಾರೆ.”[8]

ಸಾಮಾನ್ಯವಾಗಿ ಲಂಬಾಣಿಗರು ವಾಸಿಸುವ ಸ್ಥಳಗಳಿಗೆ “ತಾಂಡೆ” ಅಥವಾ “ತಾಂಡಾ” ಎಂದು ಕರೆಯುತ್ತಾರೆ. “ತಾಂಡೆ” ಎನ್ನು ಶಬ್ದಕ್ಕೆ ಕನ್ನಡ-ಕನ್ನಡ ನಿಘಂಟುವಿನಲ್ಲಿ ಬೀಡು; ಪಾಳೆಯ ಗುಂಪು, ಸಮೂಹ ಎಂಬ ಅರ್ಥ ಕೊಡಲಾಗಿದೆ. “ತಾಂಡಾ” ಎನ್ನುವ ಶಬ್ದಕ್ಕೆ “ಬಂಜಾರಾ ಸಮಾಜೇರ ಮೂಳ ವ ಇತಿಹಾಸ ಆಣಿ ಸಿಖ್ಖ ಧರ್ಮೇತಿ ಸಂಬಂಧ” (ಮರಾಠಿ) ಈ ಕೃತಿಯಲ್ಲಿ “ಒಂದು ದೊಡ್ಡ ಎತ್ತಿನ ಜಾತ(ಗುಂಪಿ)ನವರು ಒಂದು ಟೋಳಿ, ಅದಕ್ಕೆ “ತಾಂಡಾ” ಎಂದು ಕರೆಯುತ್ತಾರೆ.”[9] ಪೂರ್ವದಲ್ಲಿ ಎತ್ತುಗಳ ಮೇಲೆ ಬಿಡಾರ ಹೇರಿಕೊಂಡು ಬರುತ್ತಿದ್ದರು. ಆಗ ಜನರು ಬಂಜಾರುಗಳ “ತಾಂಡಾ” ಬಂದಿರುತ್ತದೆ ಎಂದು ಹೇಳುತ್ತಿದ್ದರು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ “ತಾಂಡಾ”ದವರು ಒಟ್ಟಿಗೆ ಕೂಡಿಕೊಂಡು ಹೋಗುವಾಗ ಇವರ “ತಂಡ”ವು ದೊಡ್ಡ ಸೈನ್ಯದಂತೆ ಕಾಣುತ್ತಿತ್ತು.

ಪೀಟರ ಮಂಡಿ (೧೯೨೮-೩೪) ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಬಂಜಾರಾಗಳನ್ನು ಕುರಿತು “ಆಗಸ್ಟ್-೨೩ರಂದು ನಮಗೆ ಒಂದು ತಾಂಡಾ (Tanda) ಅಂದರೆ ಎತ್ತುಗಳ “ಬಣಜಾರ” ಸಿಕ್ಕಿತ್ತು. ಈ ತಾಂಡಾದಲ್ಲಿ ೧೪,೦೦೦ ಎತ್ತುಗಳಿದ್ದವು. ಗೋದಿ, ಅಕ್ಕಿ ಮುಂತಾದ ದವಸಗಳನ್ನು ಅವುಗಳ ಮೇಲೆ ಹೇರಿದ್ದರು. ಒಂದೊಂದು ಎತ್ತಿನ ಮೇಲೆ ನಾಲ್ಕು ದೊಡ್ಡ ಮಣಗಳ ಹೇರು ಇತ್ತು. ಇವೆಲ್ಲಾ ಆಗ್ರಾಕ್ಕೆ ಹೋಗುತ್ತಿದ್ದವು. ಈ ಬಣಜಾರರು ತಮ್ಮ ಹೆಂಡತಿ, ಮಕ್ಕಳು ಮತ್ತು ಸಾಮಾನು ಸರಂಜಾಮುಗಳ ಸಮೇತ ಹೊರಡುತ್ತಾರೆ. ಇವರು ಒಂದು ಕಡೆ ನಿಲ್ಲದೆ ಊರಿಂದೂರಿಗೆ ಹೋಗುತ್ತಿರುತ್ತಾರೆ. ಎತ್ತುಗಳು ಅವರದೇ. ಈ ಎತ್ತುಗಳನ್ನು ಕೆಲವು ವೇಳೆ ವರ್ತಕರು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಆದರೆ ಬಹುತೇಕ ಕಡೆಗೆ ಸಾಗಿಸಿ, ಮಾರಾಟ ಮಾಡಿ, ಅಲ್ಲಿ ಸಿಕ್ಕಬಹುದಾದ ಉಪ್ಪು, ಬೆಲ್ಲ, ಬೆಣ್ಣೆ ಮುಂತಾದವುಗಳನ್ನು ಕೊಂಡು ತರುತ್ತಾರೆ. ಇಂಥ ಒಂದು ತಂಡದಲ್ಲಿ ೬೦೦ ರಿಂದ ೭೦೦ ಗಂಡಸರು, ಹೆಂಗಸರು, ಮಕ್ಕಳು ಇರುತ್ತಾರೆ. ಹೆಂಗಸರು-ಗಂಡಸರು ಗಟ್ಟಿಮುಟ್ಟಾದ ಜನ. ಸಂದರ್ಭ ಬಂದರೆ ಹೆಂಗಸರೂ ಗಂಡಸರಂತೆ ಹೋರಾಡಬಲ್ಲರು. ದಿನಾ ತಂಪು ಹೊತ್ತಿನಲ್ಲಿ ಆರೇಳು ಮೈಲಿಗಳಂತೆ ದಾರಿ ಸಾಗಿಸುತ್ತಾರೆ. ತಂಗಿದಾಗ ಹೇರನ್ನು ಇಳಿಸಿ ಎತ್ತುಗಳನ್ನು ಮೇಯಲು ಬಿಡುತ್ತಾರೆ.”[10] ಎಂದು ಹೇಳುತ್ತಾರೆ.

ಮೇಲಿನ ಉಲ್ಲೇಖಗಳಿಂದ ಸ್ಪಷ್ಟವಾಗುವುದೇನೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಲಂಬಾಣಿಗಳು ವಿವಿಧ ಪ್ರದೇಶಗಳ ವಿವಿಧ ರಾಜ-ಮಹಾರಾಜರುಗಳಿಗೆ, ಮೊಘಲರಿಗೆ ಮತ್ತು ಬ್ರಿಟಿಷರಿಗೆ ತಮ್ಮ ದನಕರುಗಳ ಮೇಲೆ ಧಾನ್ಯಗಳ ಮೂಟೆಗಳನ್ನು ಹೇರಿಕೊಂಡು ತಂಡೋಪತಂಡವಾಗಿ ವಲಸೆ ಹೋಗಿ, ಆಹಾರ ಸರಬರಾಜು ಮಾಡುತ್ತಿದ್ದರು. ಆಗ ವಲಸೆ ಹೋಗುವುದು ಅವರಿಗೆ ಅನಿವಾರ್ಯವಾಗಿತ್ತು. ಪ್ರಾಯಶಃ “ತಾಂಡಾ” ಎನ್ನುವ ಶಬ್ದವು ತಂಡ > ತಂಡ್ಯ > ತಾಂಡೆ – ತಾಂಡಾ ಎಂದಾಗಿದೆ. ಕ್ರಮೇಣ “ತಾಂಡಾ” ಎನ್ನುವ ಶಬ್ದವು ಲಂಬಾಣಿಗರು ವಾಸಿಸುವ ವಸತಿ ಪ್ರದೇಶಗಳಿಗೆ ಸೀಮಿತವಾಯಿತು.

ನಾಗರಿಕತೆಯ ಅಭಿವೃದ್ಧಿ ಮತ್ತು  ಜನಾಂಗ ವಿಕಾಸದ ವಿವಿಧ ಹಂತಗಳಲ್ಲಿ ಲಂಬಾಣಿ ಜನಪದ ವೃಂದ ತಮ್ಮ ವೃತ್ತಿ ಕೈಕೊಂಡು ಕಾಲಾನಂತರದಲ್ಲಿ ಬಗೆಬಗೆಯ ಕಸಬುಗಳನ್ನು ರೂಢಿಸಿಕೊಂಡಂತೆ ತೋರುತ್ತದೆ. ಆದರೆ ತಮ್ಮ ವೃಂದದ ಮೂಲ ನಡವಳಿಕೆ, ಸಂಪ್ರದಾಯ, ಪಾರಂಪರಿಕ ವೇಷಭೂಷಣ, ನಂಬಿಕೆ, ಆಚಾರ-ವಿಚಾರ, ಹಾಡು, ಕುಣಿತ ಮುಂತಾದ ಅಂಶಗಳನ್ನು ಇಂದಿಗೂ ಮೂಲರೂಪದಲ್ಲಿ ಉಳಿಸಿಕೊಂಡು ಬಂದಿರುವುದು ಅವರ ಸಂಸ್ಕೃತಿ ಪ್ರಿಯತೆಗೆ ಉತ್ತಮ ನಿದರ್ಶನವಾಗಿದೆ.

ಸಾಮಾನ್ಯವಾಗಿ ಹಳ್ಳಿ ನಗರಗಳಿಂದ ದೂರದಲ್ಲಿ ಕಾಡು-ಮೇಡು, ಕೊಳ್ಳ-ಕಣಿವೆ, ಗುಡ್ಡಗಾಡುಗಳಲ್ಲಿ ಲಂಬಾಣಿಗರ “ತಾಂಡಾ” ಇರುತ್ತದೆ.”[11] ನಿಸರ್ಗದ ಮಡಿಲಲ್ಲಿಯೇ ಹುಟ್ಟಿ ಬೆಳೆದಿರುವ ಲಂಬಾಣಿಗರು ನಿಸರ್ಗಪ್ರಿಯರು. ನಿಸರ್ಗದೊಡನೆ ಏಗುತ್ತಾ ಬದುಕುವ ಇವರದ್ದು ಸಾಹಸಮಯ ಜೀವನ. ಹರಿವ ಹೊಳೆಯ ಪಕ್ಕದಲ್ಲಿ ಹಸಿರು ಹೊದ್ದ ಕಾಡುಗಳಲ್ಲಿ ಸುತ್ತಾಡುವಾಗ ತಮ್ಮ ರಂಗುರಂಗಿನ ವೇಷಭೂಷಣದಿಂದ ಜನಮನವನ್ನೇ ಸೆಳೆಯುತ್ತಾರೆ.

ಸಾಮಾನ್ಯವಾಗಿ ಲಂಬಾಣಿಗಳು ತಮ್ಮ ಗುಡಿಸಲುಗಳಿಗೆ ಬಾದೆಹುಲ್ಲು, ಆಪದ ಹುಲ್ಲು ಅಥವಾ ನೆಲ್ಲಹುಲ್ಲು ಇತ್ಯಾದಿಯನ್ನು ಮೇಲು ಹೊದಿಕೆಯಾಗಿ ಉಪಯೋಗಿಸುತ್ತಾರೆ. ಮನೆಯ ಪಕ್ಕದಲ್ಲಿ ದನಕರುಗಳನ್ನು ಕಟ್ಟಲಿಕ್ಕೆ ಚಪ್ಪರ ಕಟ್ಟಿರುತ್ತಾರೆ. ಸಾಮಾನ್ಯವಾಗಿ ತಮ್ಮ “ತಾಂಡಾ”ಗಳಲ್ಲಿ “ಸೇವಾಭಾಯಾ”[12] ಮತ್ತು “ಮರಿಯಮ್ಮಳ” ಗುಡಿ ಕಟ್ಟಿರುತ್ತಾರೆ.”[13] “ಸೇವಾಭಾಯಾ” ಗುಡಿಯ ಮುಂದೆ ಬಿಳಿ “ಝಂಡಾ” (ಬಾವುಟ) ಮತ್ತು ಮರಿಯಮ್ಮಳ ಗುಡಿಯ ಮುಂದೆ ಕೆಂಪು ಝಂಡಾ ನೆಟ್ಟಿರುತ್ತಾರೆ.[14] ತಾಂಡಾಗಳಲ್ಲಿ ಪ್ಲೇಗ, ಕಾಲರಾ ಮುಂತಾದ ಪೀಡೆಗಳು ಬಂದರೆ ಆ ದೇವತೆಗಳ ಹೆಸರಿನ ಮೇಲೆ ಹರಕೆ ಹೊತ್ತು, ಗುಣವಾದಾಗ ಪ್ರಾರ್ಥನೆ ಸಲ್ಲಿಸುತ್ತಾರೆ.

ಲಂಬಾಣಿಗರು ಇತರ ಜನಪದ ವೃಂದಗಳ ಮಧ್ಯೆ ಕೂಡಿರದೆ ಪ್ರತ್ಯೇಕವಾದ “ತಾಂಡಾ”ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾರೆ. ಇವರು ಹೀಗೇಕೆ ವಾಸಿಸುತ್ತಾರೆ ಎಂದು ಆಲೋಚಿಸಿದರೆ, ಇದಕ್ಕೆ ಕಾರಣಗಳು ಹೀಗಿರಬಹುದು. ಲಂಬಾಣಿಗರು ಮೂಲತಃ ಒಂದೇ ಸ್ಥಳದ ನಿವಾಸಿಗಳಲ್ಲ. ಇವರು ಬೇರೆ ಕಡೆಯಿಂದ ವಲಸೆ ಬಂದವರು.”[15] ಸಾಮಾನ್ಯವಾಗಿ ಬೇರೆ ಕಡೆಯಿಂದ ವಲಸೆ ಬಂದ ಜನಪದ ಗುಂಪಿನವರು ಸ್ಥಾನಿಕ ನಿವಾಸಿಗಳಿಂದ ದೂರವಾಗಿಯೇ ತಮ್ಮ ಡೇರೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಾರೆ.”[16] ಪೂರ್ವದಲ್ಲಿ ವ್ಯಪಾರ ಮಾಡುತ್ತಿದ್ದ ಇವರು, ಕಾಲಾನಂತರದಲ್ಲಿ ಪರಕೀಯರ ಆಗಮನದಿಂದ ನಮ್ಮ ದೇಶದಲ್ಲಿ ಎಷ್ಟೋ ಬಗೆಯ ಬದಲಾವಣೆಗಳಾದರೂ ಕೂಡ ಈ ಗುಂಪಿನವರ ಮೇಲೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ರೈಲು ಮತ್ತು ವೇಗದ ಸಂಚಾರ ಸಾಧನಗಳು ಇವರ ಆರ್ಥಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಹಾಕಿದಂತೆ ತೋರುತ್ತದೆ. ತಮ್ಮ ದನಕರುಗಳಿಗೆ ನೀರು ಮೇವುಗಳ ಚಿಂತೆ, ಕಡುಬಡತನ, ಅನಕ್ಷರತೆ ಮುಂತಾದ ಸಮಸ್ಯೆಗಳು ಇವರ ಪ್ರಗತಿಗೆ ಅಡ್ಡಗೋಡೆಯಾದವು. ಜೊತೆಗೆ ಜನರೇ ಇವರಿಂದ ದೂರ ಉಳಿದ ಪರಿಣಾಮವಾಗಿ ಇವರು ಏಕಾಕಿತನ ಅನುಭವಿಸಿರಲು ಸಾಧ್ಯವಿದೆ. ಈ ಕಾರಣಗಳ ಹಿನ್ನೆಲೆಯಲ್ಲಿ ಬಹುಶಃ ಲಂಬಾಣಿಗರು ಹೆಚ್ಚಾಗಿ ಗ್ರಾಮ, ನಗರಗಳಿಂದ ಸ್ವಲ್ಪ ದೂರವೇ ಕೊಳ್ಳ, ಕಣಿವೆ, ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆನಿಂತಂತೆ ತೋರುತ್ತದೆ.

ಆರ್ಥಿಕ ಮುಗ್ಗಟ್ಟು, ಕಡುದಾರಿದ್ರ್ಯದಿಂದ ಬೆಂದ ಕೆಲವು ಜನ ಅಲ್ಲಲ್ಲಿ ಅಪಾಯಕಾರಿ ಭಟ್ಟಿಸೆರೆ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿದ್ದೂ ಉಂಟು. ಇದನ್ನು ಗುರುತಿಸಿದ ತಾಂಡಾದ ಹಿರಿಯರು ಅಂಥವರನ್ನು ಕರೆದು ಛೀ ಹಾಕಿದ್ದೂ ಉಂಟೆಂದು ತಿಳಿಯುತ್ತದೆ. ಈ ಸಮುದಾಯದವರು ಅನೇಕ ಅಪರಾಧಗಳ ಆಪಾದನೆ ಹೊತ್ತದ್ದರಿಂದ ಅದರ ಪರಿಣಾಮವಾಗಿ ೧೮೭೧ರಲ್ಲಿ ಬುಡಕಟ್ಟು ಜನಾಂಗದವರನ್ನು ಹತ್ತಿಕ್ಕಲು ಬ್ರಿಟಿಷ್ ಸರಕಾರವು ಜಾರಿಗೊಳಿಸಿ ಅಪರಾಧ ಕಾನೂನು (Criminal Tribe Act) ಇವರನ್ನು ಸಂಕಟಕ್ಕೀಡು ಮಾಡಿತು. ಬ್ರಿಟೀಷ್ ಸರಕಾರ ಹಾಗೂ ಸಂಸ್ಥಾನ ಸರಕಾರಗಳು ಈ ಕಾನೂನುಗಳನ್ನು ಬಹು ಕಟ್ಟುನಿಟ್ಟಾಗಿ ಜಾರಿಗೆ ತಂದವು. ಒಂದು ಕಾಲಕ್ಕೆ ಶಾಂತ ಮತ್ತು ವೀರ ಸಮಾಜವೆಂದು ಪ್ರಸಿದ್ಧಿಯಾದ ಈ ಸಮಾಜದವರನ್ನು ಅಪರಾಧಿಗಳು ಎಂದು ಜನ ಕರೆಯುವಂತಾಯಿತು. ಇದಕ್ಕಿಂತಲೂ ಹೆಚ್ಚಾಗಿ ಮುಗ್ಧ ಬಂಜಾರ ಜನರನ್ನು ಸೀಮಿತ ವಸತಿ ಪ್ರದೇಶ (Settlement)ಗಳಲ್ಲಿ ಮತ್ತು ಸುತ್ತಲೂ ಎತ್ತರ ಗೋಡೆಗಳಿಂದ ಕಟ್ಟಿದ ಪ್ರದೇಶಗಳಲ್ಲಿ ಇರಿಸಿ ಚಲನವಲನಕ್ಕೆ ಪೂರ್ಣ ದಿಗ್ಭಂದನ ಹಾಕಲಾಯಿತು. ಈ ಎಲ್ಲ ಕಾರಣಗಳಿಂದಾಗಿ ಲಂಬಾಣಿಗರು ಇತರರಿಂದ ಪ್ರತ್ಯೇಕವಾಗಿಯೇ ತಮ್ಮ ತಾಂಡಾಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಆದರೆ ತಾಂಡಾಗಳಿಗೆ ಪ್ರತ್ಯೇಕವಾದ ಹೆಸರಿನಿಂದ ಕರೆಯುವುದಿಲ್ಲ.”[17] ಉದಾ: ಮಿಂಚನಳ ಹಳ್ಳಿಯ ಸಮೀಪದಲ್ಲಿದ್ದರೆ ಆ “ತಾಂಡಾ”ಕ್ಕೆ “ಮಿಂಚನಾಳ ತಾಂಡಾ” ಎಂದು, ರಾಜನಾಳ ಊರಿನ”[18] ಸಮೀಪದಲ್ಲಿದ್ದರೆ “ರಾಜನಾಳ ತಾಂಡಾ” ಎಂದು ಕರೆಯುತ್ತಾರೆ. ಯಾವುದೇ ಹಳ್ಳಿಯ ಸಮೀಪದಲ್ಲಿ ಒಂದಕ್ಕಿಂತ ಹೆಚ್ಚು ತಾಂಡಾಗಳಿದ್ದರೆ ಅವುಗಳನ್ನು ಪ್ರತ್ಯೇಕ ಹೆಸರಿನಿಂದ ಕರೆಯುವುದಿಲ್ಲ.”[19]

ಲಂಬಾಣಿಗರು ಏಕಾಂಗಿಯಾಗಿರುವುದು ಅಪರೂಪ. ಎಲ್ಲರೂ ಒಟ್ಟಿಗೆ ಬಾಳುವ ಸಮುದಾಯ ಜೀವನವೇ ಇವರ ಉಸಿರು. ಅವರು ಯಾವುದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಎಂಟ್ಹತ್ತು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಯಾವುದೇ ಸಾಂಪ್ರದಾಯಿಕ ಆಚರಣೆಗಳು ಇತರ ಗುಂಪಿನವರ ಆಚರಣೆಗಿಂತ ಭಿನ್ನವಾಗಿರುತ್ತದೆ. ತಾವು ವಾಸಿಸುವ ಪ್ರದೇಶದ ಇತರ ಸಮುದಾಯದವರೊಡನೆ ವ್ಯವಹರಿಸುವ ರೀತಿಯೂ ಹಾಗೆ ಇದೆ. ತಮ್ಮ ತಾಂಡಾಗಳಿಗೆ ತಮ್ಮ ತಮ್ಮಲ್ಲಿಯೇ ಪ್ರತ್ಯೇಕ ಹೆಸರುಗಳಿರುವ ಸಂಗತಿ ಅವರನ್ನು ಬಿಟ್ಟರೆ ಉಳಿದವರಿಗೆ ಗೊತ್ತಾಗುವುದಿಲ್ಲ. ಅಲ್ಲದೆ ಅವರು ವಾಸಿಸುವ ತಾಂಡಾಗಳಿಗೆ ನಾಲ್ಕು ಹೆಸರುಗಳು ರೂಢಿಯಲ್ಲಿರುವುದು ಕಂಡು ಬರುತ್ತದೆ. ಉದಾ: ಈ ಕೆಳಗಿನ ಪಟ್ಟಿಯನ್ನು ಗಮನಿಸಿ.

ವರ್ಗ-೧

ವರ್ಗ-೨

ವರ್ಗ-೩

ವರ್ಗ-೪

೧) ರಾಜನಾಳ ತಾಂಡೆ ಎಲ್.ಟಿ.ನಂ. ೧

ರಾಮಾ ನಾಯಕೇರ ತಾಂಡೋ

ಮಕು ಬಾವಾರ ತಾಂಡೋ

ಝರಪಲಾ ತಾಂಡೋ

೨) ರಾಜನಾಳ ತಾಂಡೆ ಎಲ್.ಟಿ.ನಂ. ೨

ಲಾಲಾ ನಾಯಕೇರ ತಾಂಡೋ

ಸೀತಾ ಭಗವತಣೇರ ತಾಂಡೋ

ವೋಡ್ಯಾಳೇರ ತಾಂಡೋ

೩) ಮಿಂಚನಾಳ ತಾಂಡೆ

ಗಾಜು ನಾಯಕೇರ ತಾಂಡೋ

ಹೇಡಾವು ಭಗತೇರ ತಾಂಡೋ

ಭಾಣಾವಳೇರ ತಾಂಡೋ

೪) ರಾಮತೀರ್ಥ ತಾಂಡೆ

ಖೇತಾ ನಾಯಕೇರ ತಾಂಡೋ

ಲಚಮಾ ಭಗತೇರ ತಾಂಡೋ

ಮೂಡೇರ ತಾಂಡೋ

೫) ಹಡಲಸಂಗ ತಾಂಡೆ

ಮಾನಾ ನಾಯಕೇರ ತಾಂಡೋ

ಸಾಕು ಭಗತೇರ ತಾಂಡೋ

ಗಂಜಾಳೇರ ತಾಂಡೋ

೬) ನಿಂಬಾಳ ತಾಂಡೆ

ಉದಾ ನಾಯಕೇರ ತಾಂಡೋ

ರಾಮಸಿಂಗ ಭಗತೇರ ತಾಂಡೋ

ರಾಣಾವಳೇರ ತಾಂಡೋ

ಮೇಲೆ ವಿವರಿಸಲಾಗಿರುವ ನಾಲ್ಕು ವರ್ಗಗಳಲ್ಲಿಯ ಹೆಸರುಗಳು ಒಂದೇ ತಾಂಡಾಕ್ಕೆ ರೂಢಿಯಲ್ಲಿರುವುದು ಗಮನಾರ್ಹ.”[20] ಮೊದಲ ವರ್ಗದ ಹೆಸರು ಅಧಿಕೃತ ಎಲ್ಲ ದಾಖಲೆಗಳಲ್ಲೂ ಇದು ಕಾಣಸಿಗುತ್ತದೆ. ಆ ಹೆಸರು ಪಕ್ಕದ ಊರಿನ ಹೆಸರನ್ನವಲಂಬಿಸಿ ಹುಟ್ಟಿದ್ದು. ಎರಡನೆಯ ಮೂರನೆಯ ಮತ್ತು ನಾಲ್ಕನೆಯ ವರ್ಗದ ಹೆಸರುಗಳು ಅವರೇ ಇಟ್ಟಿದ್ದು; ಅಥವಾ ಅವರಲ್ಲಿ ಸಹಜವಾಗಿ ಬೆಳೆದು ಬಂದದ್ದು. “ಈ ವರ್ಗದ ಹೆಸರುಗಳ ಕೊನೆಯಲ್ಲಿ ಬರುವ ತಾಂಡೋ ಭಾಗ ಲಂಬಾಣಿ ಭಾಷೆಯ ಮುದ್ರೆ(ಛಾಪು) ಹೊತ್ತಿದೆ. ಈ ಮೊದಲ ವರ್ಗದ ಹೆಸರುಗಳು ಲಂಬಾಣಿ ಮತ್ತು ಲಮಾಣೇತರ ಮಧ್ಯೆ ಅಥವಾ ಇತರರು ತಮ್ಮಲ್ಲೇ ವ್ಯವಹರಿಸುವಾಗ”[21] ಬಳಸುತ್ತಾರೆ.

ಎರಡನೆಯ ವರ್ಗದ ಹೆಸರು ತಾಂಡಾದ ಪೂರ್ವದ ನಾಯಕರ ಹೆಸರಿನಿಂದ ಕರೆಯುತ್ತಾರೆ.”[22] ಸಾಮಾನ್ಯವಾಗಿ ಗೋರ (ಲಂಬಾಣಿ) ಪಂಚಾಯಿತಿಯಲ್ಲಿ ನಾಯಕನೇ ನ್ಯಾಯಾಧೀಶ, ಇವನು ತಾಂಡಾದ ಪ್ರತಿಷ್ಠಿತ ವ್ಯಕ್ತಿಯೂ ಹೌದು. ಅಷ್ಟೇ ಅಲ್ಲ ತಾಂಡಾದ ಮುಖ್ಯಸ್ಥನಾದುದರಿಂದ ತಾಂಡಾದ ಆಗು-ಹೋಗುಗಳಿಗೆ ಇವನೇ ಜವಾಬ್ದಾರನಾಗಿರುತ್ತಾನೆ. ಆದ್ದರಿಂದ ಪ್ರತಿಯೊಂದು ವ್ಯವಹಾರಗಳು ನಾಯಕನ ಮುಖಾಂತರವೇ ನಡೆಯಬೇಕು”[23] ನಾಯಕನ ಆಯ್ಕೆಯು ತಂದೆಯಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ, ಹೀಗೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಪಂಚಾಯತಿಯ ಸಂಘಟನೆಗಾಗಿ ನಾಯಕನಿಗೆ ಸಹಾಯಕರಾಗಿ ಕಾರಿಭಾರ, ಡಾವ ಮತ್ತು ಪಂಚರು ಇರುತ್ತಾರೆ. ತಾಂಡಾದ ನಾಯಕನು ಲಂಬಾಣಿಗರಿಗೆ ದೇವರ ಸಮಾನವೆಂದು ಜನ ಅವನನ್ನು ಪೂಜ್ಯ ಭಾವನೆಯಿಂದ ಕಾಣುತ್ತಾರೆ.

ಮೂರನೆಯ ವರ್ಗದ ಹೆಸರು ತಮ್ಮ ತಾಂಡಾದ ಭಗತನ (ಪೂಜಾರಿ)”[24] ಹೆಸರಿನಿಂದ ಕರೆಯುತ್ತಾರೆ. ತಾಂಡಾದ ಜನರಿಗೆ ಅಥವಾ ಜಾನುವಾರುಗಳಿಗೆ ಕಾಯಿಲೆ ಅಥವಾ ಪೀಡೆಗಳು ಬಂದರೆ ಆಸ್ಪತ್ರೆಗಳಿಗೆ ಹೋಗುತ್ತಿರಲಿಲ್ಲ. ತಮ್ಮ ತಾಂಡಾದ ಭಗತನಿಗೆ ಕೇಳಿ ಅವರಿಂದ ಪ್ರಸಾದ ಅಥವಾ ಭಂಡಾರವನ್ನು ತೆಗೆದುಕೊಳ್ಳುತ್ತಿದ್ದರು. ಪೂರ್ವದಲ್ಲಿ  ಲಂಬಾಣಿಗರಲ್ಲಿ “ಝಾಪಾಸೂರ” ಮತ್ತು “ಸೂರಾ ಭಗತ” ಎಂಬ ಪ್ರಸಿದ್ಧ ಭಗತಗಳಿದ್ದರು.”[25] ಇವತ್ತಿಗೂ ಪ್ರತಿಯೊಂದು ತಾಂಡಾಗಳಲ್ಲಿ ಭಗತರಿದ್ದಾರೆ. ಆದ್ದರಿಂದ ತಮ್ಮ ಆಂತರಿಕ ವ್ಯವಹಾರ ಮಾಡುವಾಗ ಆಯಾ ತಾಂಡಾದ ಭಗತನ ಹೆಸರು ಸಂಕೇತವಾಗಿಟ್ಟು ಕರೆಯುವುದು ರೂಢಿಯಿದೆ.

ನಾಲ್ಕನೆಯ ವರ್ಗದ ಹೆಸರು ಅವರ ಗೋತ್ರದಿಂದ ಬಂದಿರುತ್ತದೆ. ಉದಾ: ರಾಜನಾಳ ತಾಂಡಾ (ಎಲ್.ಟಿ. ನಂ. ೧)ಗೆ “ಝರಪಲಾ ತಾಂಡೋ” ಎಂದು ಕರೆಯುತ್ತಾರೆ. ಈ ತಾಂಡಾದಲ್ಲಿ ಝರಪಲಾ”[26] ಪಂಗಡದವರು ಅಧಿಕ ಸಂಖ್ಯೆಯಲ್ಲಿರುವುದರಿಂದ “ಝರಪಲಾ ತಾಂಡೋ” ಎಂದು ಕರೆಯುತ್ತಾರೆ.”[27] ಒಂದೊಂದು ತಾಂಡಾದಲ್ಲಿ ಬೇರೆ ಬೇರೆ ಗೋತ್ರದವರು ಇರುವುದುಂಟು. ಆದಾಗ್ಯೂ ಸಹ ಪೂರ್ವದಲ್ಲಿ ತಮ್ಮ ಆತಂರಿಕ ವ್ಯವಹಾರಕ್ಕಾಗಿ ಬಳಸಿಕೊಂಡಿದ್ದ ಗೋತ್ರದ ಹೆಸರಿನಿಂದ ಕರೆಯುವ ರೂಢಿಯಿದೆ.

ಲಂಬಾಣಿಗರ ಧಾರ್ಮಿಕ ಕಾರ್ಯಗಳು ಢಾಡಿಯರಿಲ್ಲದೆ ನೆರವೇರುತ್ತಿರಲಿಲ್ಲ. ಅಷ್ಟೊಂದು ಮಹತ್ವದ ಸ್ಥಾನ ಢಾಡಿಯರಿಗೆ ಇತ್ತು. ಲಂಬಾಣಿ ಸಮಾಜವನ್ನು ತಿದ್ದುವ, ಎಚ್ಚರಿಸುವ ಕಾಯಕ ಅವರದಾಗಿತ್ತು. ಢಾಡಿಯರು ಲಂಬಾಣಿಗರಲ್ಲಿ ವೃತ್ತಿಗಾಯಕರಾದ್ದರಿಂದ ಲಂಬಾಣಿ ತಾಂಡಾಗಳ ಮಧ್ಯೆ ಇಡೀ ರಾತ್ರಿ ಕಥೆ, ಹಾಡು, ಧಾರ್ಮಿಕ ಕಥಾನಕಗಳನ್ನು ಹಾಡುತ್ತ ಗುಂಪಿನ ಜನರಿಗೆ ಮನರಂಜನೆ ಒದಗಿಸುತ್ತಿದ್ದರು.”[28] ಆಯಾ ತಂಡಗಳ ಮಧ್ಯೆ ಹೆಣ್ಣು ಗಂಡಿನ ಸಂಬಂಧವನ್ನು ಬೆಸೆಯುವಲ್ಲಿ ಢಾಡಿಯರದ್ದು ಮಹತ್ವದ ಪಾತ್ರವಿತ್ತು. ಇವರು ಸಂಚಾರಿ ನಿಘಂಟುಗಳಾಗಿದ್ದರು. ಒಂದು ತಂಡದ ಸುಖ ಸಂತೋಷ, ನೋವು, ನಲಿವುಗಳು ಮತ್ತೊಂದು ತಂಡಕ್ಕೆ, ಮತ್ತೊಂದು ತಂಡದ ವಿಷಯ ಮೊಗದೊಂದು ತಂಡಕ್ಕೆ ಹೀಗೆ ಬೇರೆ ಬೇರೆ ಲಂಬಾಣಿ ತಾಂಡಾಗಳಿಗೆ”[29] ಸುದ್ದಿ ತಲುಪಿಸುವ ಕಾಯಕ ಇವರದಾಗಿತ್ತು. ಆಯಾ ಲಂಬಾಣಿ ತಾಂಡಾದ ಕ್ಷೇಮ ಸಮಾಚಾರಗಳನ್ನು ತಿಳಿಸುವಾಗ ಇವರು ಆಯಾ ತಾಂಡಾದ “ನಾಯಕ” ಇಲ್ಲವೆ “ಭಗತ” ಅಥವಾ “ಪಂಗಡ”ದ ಹೆಸರುಗಳಿಂದ ಕರೆಯುತ್ತಿದ್ದರು. ಲಂಬಾಣಿ ತಾಂಡಾಗಳಿಗೆ ಈ ರೀತಿ ಹೆಸರುಗಳು ರೂಢಿಯಲ್ಲಿ ಬರುವುದಕ್ಕೆ “ಢಾಡಿ”ಯರದ್ದೂ ಒಂದು ಮಹತ್ವದ ಪಾತ್ರವಿತ್ತು ಎಂಬುದನ್ನು ಮರೆಯುವಂತಿಲ್ಲ.

ತಾಂಡಾ ಪ್ರಗತಿ :

ಲಂಬಾಣಿಗರು ತಮ್ಮ ತಾಂಡಾಗಳಿಗೆ ಪ್ರತ್ಯೇಕ ಸ್ಥಳನಾಮಗಳನ್ನಿಟ್ಟುಕೊಂಡಿರುವುದು ಅವರ ಸ್ವಂತಿಕೆಯ ಲಕ್ಷಣವಾಗಿದೆ. ಲಂಬಾಣಿ ತಾಂಡಾಗಳು ಪ್ರತ್ಯೇಕ ಹೆಸರುಗಳಿಂದ ಕರೆಯುವುದು ಅಗತ್ಯವಾಗಿದೆ. ಏಕೆಂದರೆ ಲಂಬಾಣಿ ತಾಂಡಾಗಳು ಸ್ವತಂತ್ರ ಊರುಗಳೆಂದು ಕರೆಯಿಸಿಕೊಳ್ಳಲು ಎಲ್ಲ ಅರ್ಹತೆಗಳನ್ನು ಪಡೆದುಕೊಂಡಿದೆ. ಪೂರ್ವದಲ್ಲಿ ಲಂಬಾಣಿ ತಾಂಡಾಗಳಲ್ಲಿ ಗುಡಿಸಲು ಮನೆಗಳಿದ್ದವು. ಆದರೆ ಇಂದು ಗುಡಿಸಲು ಹೋಗಿ ಮಾಳಿಗೆ ಮನೆಗಳು ಕಾಣಿಸಿಕೊಂಡಿವೆ. ಹಲವಾರು ತಾಂಡಾಗಳಿಗೆ ಬಸ್ಸಿನ ಸೌಕರ್ಯ, ವಿದ್ಯುತ್ ದೀಪಗಳು, ಅಂಗನವಾಡಿ ಶಾಲೆಗಳು, ಕಿರಿಯ(ಕೆಲವು ಕಡೆ ಹಿರಿಯ) ಪ್ರಾಥಮಿಕ ಶಾಲೆಗಳು ಕೆಲವು ತಾಂಡಾಗಳಲ್ಲಿ ಮಾಧ್ಯಮಿಕ ಶಾಲೆ, ನೀರಿನ ವ್ಯವಸ್ಥೆ ಮೊದಲಾದ ಸೌಕರ್ಯಗಳಿವೆ. ಇತ್ತೀಚೆಗೆ ಕರ್ನಾಟಕ ಸರಕಾರವು ಲಂಬಾಣಿ ತಾಂಡಾಗಳನ್ನು ಕಂದಾಯ ಹಳ್ಳಿಗಳನ್ನಾಗಿ ಪರಿವರ್ತಿಸಲು ಗಂಭೀರವಾದ ಆಲೋಚನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸಾಮಾಜಿಕ, ರಾಜಕೀಯ ರಂಗದಲ್ಲಿಯೂ ಕೆಲವರು ಅತ್ಯಂತ ಮಹತ್ವದ ಸ್ಥಾನಗಳಲ್ಲಿದ್ದು, ದೇಶದ ಸಲುವಾಗಿ ದುಡಿಯುತ್ತಿದ್ದಾರೆ. ಲಂಬಾಣಿಗರು ಪಡುತ್ತಿರುವ ಕಷ್ಟಗಳು ಹಲವಾರು. ಇವರಿಗಿನ್ನೂ ಭದ್ರ ನೆಲೆ ಸಿಗುವುದು ಅತ್ಯವಶ್ಯ.

ಲಂಬಾಣಿಗರು ತಮ್ಮಸಂಸ್ಕೃತಿ, ಇತಿಹಾಸ, ಜೀವನ ಶೈಲಿಗಳನ್ನು ಕುರಿತು ಗಾಢವಾದ ಅಭಿಮಾನ ತಾಳಿದವರು. ಇತರ ಸಂಸ್ಕೃತಿಯಿಂದ ಪ್ರಭಾವಿತರಾಗದೆ, ತಮ್ಮ ಸಂಸ್ಕೃತಿಯ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬರುವಲ್ಲಿ ಈ ಜನರು ಸದಾ ಜಾಗರೂಕವಾಗಿ, ಕಾರ್ಯ ಮಾಡಿದ್ದಾರೆ. ಸಾಮಾಜಿಕವಾಗಿ ಅವರು ಕೆಳಮಟ್ಟದಲ್ಲಿದ್ದರೂ ಒಂದು ಪ್ರತಿಷ್ಠೆಯ ಸ್ಥಾನ ಅವರಿಗಿದೆ. ಅವರ ಸ್ವಾಭಿಮಾನ ತಮ್ಮ ಸಂಸ್ಕೃತಿ ಪೋಷಣೆಯಲ್ಲಿ ಅವರು ತೋರುವ ಸಹಜ ಕಾಳಜಿಗಳು ಅನುಕರಣೀಯವಾಗಿವೆ.

ಈ ಜನಾಂಗಕ್ಕೆ ಶಿಕ್ಷಣ ಪಡೆಯುವ ಸೌಲಭ್ಯ ದೊರೆತು ನಾಡಿನ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶ ಪಡೆದು ರಾಷ್ಟ್ರೀಯ ಪ್ರವಾಹದಲ್ಲಿ ಈ ಜನಾಂಗವು ಒಂದಾಗುವ ಹಿನ್ನೆಲೆಯಲ್ಲಿ ಆಗಬೇಕಾಗಿರುವ ಕಾರ್ಯ ಬೆಟ್ಟದಷ್ಟಿದೆ. ಇದೀಗ ಕಣ್ತೆರೆಯುತ್ತಿರುವ ಈ ಸಮುದಾಯಕ್ಕೆ ಇದೇ ಸಮುದಾಯದ ಮೂಲದಿಂದ ಬಂದು ಇಂದು ರಾಜಕೀಯ ಕ್ಷೇತ್ರದಲ್ಲಿ ಪ್ರತಿಷ್ಠೆಯ ಸ್ಥಾನ ಪಡೆದಿರುವ ಜನರು ಇದಕ್ಕಾಗಿ ಹಗಲಿರುಳು ಶ್ರಮಿಸಬೇಕಾದ ಅಗತ್ಯವಿದೆ. ವಿದ್ಯಾವಂತರು ಪ್ರತಿಷ್ಠಿತರು ತಮ್ಮ ಸಮುದಾಯವನ್ನೇ ಮರೆತು ನಾವೇ ಬೇರೆ ಎನ್ನುವ ಮನೋಭಾವನೆಯನ್ನು ಬೆಳೆಸಿಕೊಂಡರೆ ಇನ್ನೂ ಅಪಾಯಕಾರಿ. ಕಾರಣ ಸರಕಾರ ನೀಡುತ್ತಿರುವ ಸೌಲಭ್ಯಗಳ ಜೊತೆಗೆ ವಿವಿಧ ವರ್ಗದ ಜನರ ಸಹಕಾರ ಪ್ರೋತ್ಸಾಹ ಮತ್ತು ವಿಶ್ವಾಸಗಳು ದೊರಕುವ ನಿಟ್ಟಿನಲ್ಲಿ ಸಾಮಾಜಿಕ ಚಟುವಟಿಕೆಗಳು ರೂಪಗೊಳ್ಳಬೇಕಾಗಿದೆ. ಆಗ ಮಾತ್ರ ಈ ಸಮುದಾಯ ತನ್ನ ಸತ್ವಪೂರ್ಣವಾದ ವಿಶಿಷ್ಟ ಗುಣಗಳನ್ನು ಉಳಿಸಿಕೊಳ್ಳುತ್ತಲೆ ಸಾಮಾಜಿಕ ಸಂಸ್ಕೃತಿಯ ಪುನರುತ್ಥಾನದಲ್ಲಿ ಭಾಗಿಗಳಾಗುವುದು ಸಾಧ್ಯ. ಅಂಥ ಒಂದು ಮಹತ್ವದ ಕ್ಷಣಕ್ಕಾಗಿ ಈ ಸಮುದಾಯ ಕಾತರದಿಂದ ನಿರೀಕ್ಷಿಸಲಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಬಂಜಾರ(ಲಂಬಾಣಿ)ಗಳದ್ದು ಒಂದು ಸಮುಚ್ಛಯ ಸಂಸ್ಕೃತಿ ಮತ್ತು ಅಷ್ಟೇ ಸಂಕೀರ್ಣ ಸಂಸ್ಕೃತಿ. ಏಕೆಂದರೆ ಲಂಬಾಣಿಗರದು ಮುಕ್ತ ಸಮುದಾಯ ಅಥವಾ ಸಮಾಜ.

* * *


*     “ಸಾಧನೆ” ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು (ಸಂಪುಟ ೨೧-೨೨, ಸಂಚಿಕೆ ೧-೪, ೧-೨ ಜನೆವರಿ, ಡಿಸೆಂಬರ್ ೧೯೯೨, ಜೂನ್ ೧೯೯೩) ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದ ಪರಿಷ್ಕೃತ ಹಾಗೂ ವಿಸ್ತೃತ ರೂಪ.

[1]     ಲಂಬಾಣಿಗಳು ತಮ್ಮನ್ನು ತಾವು ಗೋರ, ಗೋರಿಯಾ, ಗೋರಭಾಯಿ, ಗೋರಬಂದಾ, ಗೋರಮಾಟಿ, ಗೋರವಟಿ, ಗೋರಬಂಜಾರಾ ಎಂದು ಕರೆದುಕೊಳ್ಳುತ್ತಾರೆ.

[2]     ಮಧ್ಯಕಾಲೀನ ಭಾರತದಲ್ಲಿ ಬಂಜಾರುಗಳು ಅಮೇರಿಕಾ, ಇಂಗ್ಲೆಂಡ್, ಸ್ಪೇನ್, ಜರ್ಮನಿ, ಈಜಿಪ್ತ್ ಮುಂತಾದ ಪಾಶ್ಚಿಮಾತ್ಯ ದೇಶಗಳೊಂದಿಗೆ ವ್ಯಾಪಾರಕ್ಕಾಗಿ ಹೆಚ್ಚಿನ ಸಂಪರ್ಕವನ್ನಿಟ್ಟುಕೊಂಡವರಾಗಿದ್ದರು. ಇಟಲಿಯ “ಲಂಬಾರ್ಡಿಯಾ” ಪಟ್ಟಣವು ಅವರ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು. ಜಗತ್ತಿನಾದ್ಯಂತ ವ್ಯಾಪಾರಕ್ಕಾಗಿ ಹೋದ ಬಂಜಾರಾಗಳ ಕೆಲವು ಕುಟುಂಬಗಳು ತಮಗೆ ಅನುಕೂಲವಾದ ದೇಶಗಳಲ್ಲಿ ನೆಲೆಸಿಕೊಂಡರು. ಮುಂದೆ ಅವೇ ಕುಟುಂಬಗಳು ಯುರೋಪ, ಜಿಪ್ಸಿ ಹಾಗೂ ಸಿಂಧಿ ಎಂಬ ಹೆಸರುಗಳಿಂದ ಕರೆಸಿಕೊಂಡರೆಂದು ವಿದ್ವಾಂಸರ ಅಭಿಪ್ರಾಯ. (ವಿವರಣೆ ನೋಡಿ, “GIPSEIES” Chamanlal (1962). ಇಟಲಿಯ “ಲಂಬಾರ್ಡಿಯಾ” ಪಟ್ಟಣದ ಹೆಸರನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಬಂಜಾರುಗಳಿಗೆ “ಲಂಬಾಡಿ” ಹೆಸರಿನಿಂದ ಕರೆಯುವದನ್ನು ಕಾಣುತ್ತೇವೆ. ಲಂಬಾರ್ಡಿಯಾ ಹೆಸರಿನ “ಯಾ” ಪದವು ಅಪಭ್ರಂಶವಾಗಿ ಪಟ್ಟಣವು ವ್ಯಾಪಾರ ಕೇಂದ್ರ ಸ್ಥಳವಾಗಿತ್ತು. ಆದ್ದರಿಂದ “ಲಂಬಾರ್ಡಿಯಾ” ಹೆಸರಿನಿಂದ “ಲಂಬಾಡಿ” ಅಥವಾ “ಲಂಬಾಡಾ” ಹೆಸರು ಬಂದಿರುವ ಸಾಧ್ಯತೆ ಇದೆ.

[3]     ಲಂಬಾಣಿಗರಲ್ಲಿ ಪ್ರಚಲಿತವಿರುವ ಅನೇಕ ಜನಪದ ಗೀತೆ ಹಾಗೂ ಕಥೆಗಳಲ್ಲಿ ಪ್ರಚಲಿತವಿರುವ ರಾಣಾ ಪ್ರತಾಪ ಸಿಂಹ, ಪೃಥ್ವಿರಾಜ ಚವ್ಹಾಣ, ಅಲಾ ಉದಲ್, ಜಯಮಲ್, ಫತಮಲ್, ಜಂಗಿ-ಭಂಗಿ, ಭೀಮಾನಾಯಕ, ವಜಿಯಾ-ಭೋಜಿಯಾ, ಜಮಣಿ ನಾಯಕಣ ಮುಂತಾದ ವೀರಶಿರೋಮಣಿಗಳ ಶೌರ್ಯ ಪರಾಕ್ರಮಗಳ ವರ್ಣನೆ ಬರುತ್ತದೆ.

[4]     ನಮ್ಮ ತಂದೆ ದಿ. ಖೀರು ಮೇಗು ಪವಾರ ಅವರು ಈ ರೀತಿ ಹೇಳುತ್ತಿದ್ದರು. ಮೌಖಿಕ ಪರಂಪರೆಯನ್ನೇ ಚರಿತ್ರೆ ಎಂದು ಭಾವಿಸುವ ಜನಾಂಗ ಇದು.

[5]     ಅಬ್ಬೆಸ್ ಜೆ.ಎ. ಡುಬಾಯ್ಸ್‌ರವರ ಪ್ರಕಾರ ಲಂಬಾಣಿಗರು ಹಿಂದಿನ ಕಾಲದಲ್ಲಿ ಪ್ರಸಿದ್ಧ ವ್ಯಾಪಾರಿಗಳಾಗಿದ್ದು, ಮೊಗಲ್ ಚಕ್ರವರ್ತಿಗಳಿಗೂ, ಮಹಾರಾಷ್ಟ್ರರಿಗೂ, ಇಂಗ್ಲೀಷರಿಗೂ ಯುದ್ಧ ಸಮಯದಲ್ಲಿ ಸಹಾಯ ಮಾಡುತ್ತಿದ್ದರಂತೆ. ಟಿಪ್ಪು ಸುಲ್ತಾನನೊಡನೆ ಕಾರ್ನ್‌‌ವಾಲೀಸ್ ನಡೆಸಿದ ಯುದ್ಧದಲ್ಲಿ ಲಂಬಾಣಿಗರು ಆಂಗ್ಲರಿಗೆ ಸಹಾಯ ಮಾಡಿದ್ದು, ಆದ್ದರಿಂದ ಶ್ರೀರಂಗಪಟ್ಟಣ ಇಂಗ್ಲೀಷರ ವಶವಾಯಿತು ಎಂಬ ವಾದವೂ ಇದೆ. -(ಉಧೃತ : “ಕಣಿವೆಗೆ ಇಳಿದ ಕೋಗಿಲೆಗಳು ಲಂಬಾಣಿಗರು” ಜೆ.ಎನ್. ಮೋಹನ್ : ಸುಧಾ ೨೮, ಜುಲೈ-೩, ಆಗಸ್ಟ್ ೧೯೮೫, ಸಂ. ೨೧, ಸಂಚಿಕೆ ೩೦, ಪುಟ ೧೪)

[6]     ಲಂಬಾಣಿ ಸಂಸ್ಕೃತಿ : ಡಾ. ಪಿ.ಕೆ. ಖಂಡೋಬಾ, ೧೯೮೮, ಪುಟ ೪-೫

[7]     ಆ ಕಾಲದಲ್ಲಿ “ಉಪ್ಪು, ತಯಾರಿಸುವ ವಿಧಾನವನ್ನು ಕಂಡುಹಿಡಿದಿದ್ದು ಒಂದು ವಿಶೇಷವಾಗಿದೆ.

[8]     Banjara as nothing but the same ancient tribe which were in existence during 4th century B.C. residing in small tents and hiring out their out their bullocks for transport of food.-Elliot, H.M. : “The races of the N.W. Provinces of India,” Vol. I. London, 1869, p. 229

[9]     “ಬಂಜಾರ ಸಮಾಜೇರ ಮೂಳ ವ – ಇತಿಹಾಸ ಆಣಿ ಸಿಖ್ಖ ಧರ್ಮೇತಿ ಸಂಬಂಧ,” ಪುಟ ೭

[10]    “ಪ್ರವಾಸಿ ಕಂಡ ಇಂಡಿಯಾ” : ಸಂಪಾದಕರು, ಎಚ್.ಎಲ್. ನಾಗೇಗೌಡ, ಸಂ. ೪, ೧೯೭೨, ಪುಟ-೩೦೬

[11]    ಎಂಟ್ಹತ್ತು ಮನೆಗಳಿರುವ “ತಾಂಡಾ”ಗಳು ಉಂಟು. ಸಾವಿರಾರು ಮನೆಗಳಿರುವ “ತಾಂಡಾ”ಗಳು ಉಂಟು. ಇಂದು ಲಮಾಣಿಗಳ ತಾಂಡಾಗಳು ಪರಿವರ್ತನೆಯ ಹಾದಿಯಲ್ಲಿವೆ. ಇದಕ್ಕೆ ಅಲ್ಲಲ್ಲಿ ತಲೆ ಎತ್ತಿರುವ ಶಿಕ್ಷಣ ಸಂಸ್ಥೆಗಳೇ ಸಾಕ್ಷಿ.

[12]    ಲಂಬಾಣಿಗರ ಸಾಂಸ್ಕೃತಿಕ ನಾಯಕ “ಸೇವಾಭಾಯಿ” ಲಂಬಾಣಿಗರಿಗೆ ಅತ್ಯಂತ ಮಹತ್ವದ ವ್ಯಕ್ತಿಯಾದನು. ಆದ್ದರಿಂದ ಎಲ್ಲ ಲಂಬಾಣಿಗರು ಅವರನ್ನು ಪ್ರೀತಿಯಿಂದ “ಸೇವಾಭಾಯಾ” ಎಂದು ಕರೆಯತೊಡಗಿದರು. ಲಂಬಾಣಿ ಭಾಷೆಯಲ್ಲಿ “ಭಾಯಿ” ಎಂದರೆ ಸಹೋದರ ಎಂದರ್ಥ. “ಭಾಯಿ” ಪದದ ಪರ್ಯಾಯ ಪದವೇ ಭಾಯಾ (ವಿವರಣೆ ನೋಡಿ : “ಸಂತ ಸೇವಾಲಾಲ” : ಡಾ. ಹರಿಲಾಲ ಪವಾರ, ೧೯೯೮)

[13]    ಕೆಲವು ತಾಂಡಾಗಳಲ್ಲಿ “ಸೇವಾಭಾಯಾ” ಮತ್ತು “ಮರಿಯಮ್ಮಳ” ಗುಡಿಗಳಿರುವುದು ಕಂಡು ಬರುವುದಿಲ್ಲ. “ಸೇವಾಭಾಯಾ” ಅಥವಾ “ಮರಿಯಮ್ಮಳ” ಹೆಸರಿನ ಕಲ್ಲಿನ ಇಲ್ಲವೆ ಕಂಚು ಅಥವಾ ಬೆಳ್ಳಿಯಿಂದ ಮಾಡಿಸಿರುವ ಪ್ರತಿಮೆಗಳನ್ನು ಗುಡಿಸಲಿನಲ್ಲಿ ಇಟ್ಟಿರುವುದು ಕಂಡಬರುತ್ತದೆ.

[14]    ಕೆಲವು “ತಾಂಡಾ”ಗಳಲ್ಲಿ “ಸೇವಾಭಾಯಾ” ಮತ್ತು “ಮರಿಯಮ್ಮಳ” ಗುಡಿಗಳ ಮುಂದೆ “ಝಂಡಾ”ಗಳಿರುವುದು ಕಂಡುಬರುವುದಿಲ್ಲ. ಕಾಲಾನಂತರ ಲಂಬಾಣಿಗಳು ಈ ಬಗೆಯ ಶೌರ್ಯ ಪರಂಪರೆಯ ಕುಲ-ಸಂಕೇತಗಳನ್ನು ಕಳೆದುಕೊಂಡಿರುವ ಸಾಧ್ಯತೆಯೂ ಇದೆ.

[15]    “ಇಬ್ಬೆತ್ಸನ್” ಎಂಬುವರು “ಬಂಜಾರ ಜಾತಿಯ ಮೂಲಸ್ಥಾನ ಗೋರಖಪುರದಿಂದ ಹರಿದ್ವಾರದವರೆಗಿನ ಉಪಪರ್ವತದ ಗಡಿಯಾಗಿದೆ” ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

[16]    ಇತರ ಜನಪದ ಗುಂಪಿನವರು ಕೂಡ ಸ್ಥಾನಿಕ ನಿವಾಸಿಗಳಿಗಿಂತ ಪ್ರತ್ಯೇಕವಾಗಿಯೇ ತಮ್ಮ ಡೇರೆಗಳನ್ನು ಹಾಕಿಕೊಂಡು ವಾಸ ಮಾಡುತ್ತಿರುವುದನ್ನು ಇವತ್ತಿಗೂ ಕಾಣಬಹುದು. ಉದಾ: ದುರಗಮುರಗಿಯರು, ಕೊಂಡಮಾಮರು, ಕೌಲೆತ್ತಿನವರು, ಡಕ್ಕಲಿಗರು ಮುಂತಾದ ಜನಪದ ಗುಂಪಿನವರನ್ನು ಹೆಸರಿಸಬಹುದು.

ಲಂಬಾಣಿಗರಲ್ಲಿ ಪ್ರಚಲಿತವಿರುವ ಒಂದು ಜನಪದ ಗೀತೆಯಲ್ಲಿ ಡೇರೆಯ ಪ್ರಸ್ತಾಪ ಬರುವುದನ್ನು ಕಾಣಬಹುದು.

ಉದಾ: “ಡೇರಾವಾಳೋ ಗೋರಮಾಟಿ, ವಣತೆತೇ ಸಣಪಾಟಿ

ಆಯಿವಾಳೋ ದಿನೋಚರೇಬಾಟಿ, ಜಂಗಲೇಮ ರೇತೆತೇರ ಡೇರಾ

ಪಳತೆತೇ ಗಾವಡಿ ಲವಾರಾ, ಬಚನೇಮ ಕಗೋರ ಬಿಚಾರಾ

ಭೀಮಾರೋ ಛೋರಾ…

(ಅನುವಾದ : ಅಡವಿಯಲ್ಲಿ ಡೇರೆ ಕಟ್ಟಿಕೊಂಡು ವಾಸಿಸುತ್ತಿದ್ದ ಲಂಬಾಣಿಗರು ಅಸಂಖ್ಯಾತ ಗೋವುಗಳನ್ನು ಸಾಕುತ್ತಿದ್ದರು. ಬಿಡುವಿನ ವೇಳೆಯಲ್ಲಿ ಸೆಣಬಿನಿಂದ ಗೋಣಿಚೀಲ ತಯಾರಿಸುತ್ತಿದ್ದರು. ಕಷ್ಟಜೀವಿಗಳಾದ ಇವರಿಗೆ ಸೇವಾಲಾಲನ ಆಶೀರ್ವಾದವೂ ಇತ್ತು ಎಂದು ಮೇಲಿನ ಜನಪದ ಗೀತೆಯಲ್ಲಿ ಪ್ರಸ್ತಾಪವಿದೆ.)

[17]    ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಜಗಜಿವಣಗಿ ಸಮೀಪ “ಲಮಾನಹಟ್ಟಿ” ಮತ್ತು “ತಾಂಬಾ” ಸಮೀಪ “ನಾರಾಯಣಹಟ್ಟಿ” ಎಂಬ ಹೆಸರಿನ ಲಂಬಾಣಿಗರು ವಾಸಿಸುವ ಅಧಿಕ ಸಂಖ್ಯೆಯಲ್ಲಿ ಲಂಬಾಣಿಗರು ವಾಸಿಸುತ್ತಾರೆ. ಲಮಾಣೇತರ ರೈತಾಪಿ ಜನರು ಜಿಗಜಿವಣಗಿ ಊರಿಂದ ತಮ್ಮ ಹೊಲಗಳಿಗೆ ಹೋಗಿ ಬರಲು ಅನಾನುಕೂಲ ಇದ್ದುದರಿಂದ “ಲಮಾನಹಟ್ಟಿ”ಯಲ್ಲಿಯೇ ಮನೆ ಮಾಡಿಕೊಂಡು ನೆಲೆ ನಿಂತಿದ್ದಾರೆ. “ತಾಂಡಾ” ಅನ್ನುವ ಶಬ್ದ ಒಂದು ಗುಂಪಿಗೆ ಮಾತ್ರ ಸೀಮಿತವಾದುದರಿಂದ ಅದರ ಬದಲಿಗೆ “ಹಟ್ಟಿ” ಅನ್ನುವ ಶಬ್ದ ಮೇಲ್ವರ್ಗದವರು ಒಪ್ಪಿಕೊಂಡಿರಬೇಕು.

ನಾರಾಯಣ ಹಟ್ಟಿ ಇದು ಇತ್ತೀಚೆಗೆ ಹುಟ್ಟಿಕೊಂಡದ್ದು. ಜಗದಂಬಾ ಶಿಕ್ಷಣ ಸಂಸ್ಥೆಯ ಚೇರ್‌ಮನ್‌ರಾಗಿದ್ದ ಫೂಲಸಿಂಗ ನಾರಾಯಣ ಚವ್ಹಾಣ ಅವರು ತಾಂಬಾದಿಂದ ೨ ಕಿ.ಮೀ. ಅಂತರದಲ್ಲಿರುವ ತಮ್ಮ ಜಮೀನಿನಲ್ಲಿ ಲಂಬಾಣಿ ಜನರಿಗೆ ಇರಲು ವ್ಯವಸ್ಥೆ ಮಾಡಿಕೊಟ್ಟರು. ಮುಂದೆ ಸರಕಾರಿ ಲೆಕ್ಕಪತ್ರಗಳಲ್ಲಿ ಅಧಿಕೃತ ಹೆಸರು ನಮೂದಿಸುವಾಗ ದಿ. ಚವ್ಹಾಣ ಅವರು ತಮ್ಮ ತಂದೆಯವರ ಹೆಸರಿನಲ್ಲಿ “ನಾರಾಯಣ ಹಟ್ಟಿ” ಎಂದು ನಮೂದಿಸಿರಬೇಕೆಂದು ತಿಳಿಯುತ್ತದೆ.

“ಹಟ್ಟಿ” ಅನ್ನುವ ಶಬ್ದದ ಅರ್ಥ ನಿಘಂಟುವಿನಲ್ಲಿ “ಕೊಟ್ಟಿಗೆ”, “ಚಿಕ್ಕಹಳ್ಳಿ”, “ಒಂದು ಗುಂಪಿನವರು ವಾಸಿಸುವ ಸ್ಥಳ” ಎಂದು ಅರ್ಥೈಸಲಾಗಿದೆ. ಹಳೆ ಮೈಸೂರಿನ ಕಡೆಗೆ ಕೆಲವು ಗುಂಪಿನವರು ಬಡಬಗ್ಗರು ವಾಸಿಸುವ ಪ್ರದೇಶಗಳಿಗೆ ಹಟ್ಟಿ, ಹುಂಡಿ, ಪಾಳ್ಯಗಳೆಂದು ಕರೆಯುತ್ತಾರೆ.

ಈ ಕೆಲವು ವಿಷಯಗಳನ್ನು ಗಮನಿಸಿದಾಗ “ಹಟ್ಟಿ” ಅನ್ನುವ ಶಬ್ದ ಇತರರ ಪ್ರಭಾವದಿಂದ ಲಂಬಾಣಿಗರು ವಾಸಿಸುವ ಸ್ಥಳಗಳಿಗೆ ಕನ್ನಡದ ಮುದ್ರೆ ಒತ್ತಿದ ಹೆಸರು “ಲಮಾನಹಟ್ಟಿ” ಮತ್ತು “ನಾರಾಯಣ ಹಟ್ಟಿ” ಎಂಬುವ ಎರಡು ಹಟ್ಟಿಗಳು ಇತ್ತೀಚೆಗೆ ಹುಟ್ಟಿಕೊಂಡವು ಎಂಬುದರಲ್ಲಿ ಅನುಮಾನವಿಲ್ಲ.

[18]    ಇಂದು ರಾಜನಾಳ ಹೆಸರಿನಲ್ಲಿ ಊರು ಇರುವುದಿಲ್ಲ. ಅದು ಇನ್ನೂರ ಐವತ್ತು ವರ್ಷಗಳ ಹಿಂದೆ ಮಹಾಮಾರಿಯ ರೋಗಕ್ಕೆ ಬಲಿಯಾಗಿ ಇಡೀ ಊರಿಗೆ ಊರೇ ತತ್ತರಿಸಿ ಜನವಿಹೀನವಾಯಿತೆಂದು ಹೇಳುತ್ತಾರೆ. ಆಗ ಅಳಿದುಳಿದ ಜನ ಪ್ರಾಣದ ಭೀತಿಯಿಂದ ಹೋದರು. ಸಧ್ಯ “ರಾಜನಾಳ” ಊರು ಇದ್ದ ಜಾಗದಲ್ಲಿ ಒಂದು ಹನುಮಂತ ದೇವರ ಗುಡಿ ಮಾತ್ರ ಇದೆ. ಅಲ್ಲಿ ಹಾಳಾದ ಮನೆಗಳ ಗೋಡೆಗಳನ್ನು ಜನ ಕೆಡವಿ ಕಲ್ಲು ಮಣ್ಣುಗಳನ್ನು ಬಳಿದುಕೊಂಡು ಹೋಗಿದ್ದಾರೆ. ಎಷ್ಟೋ ಜನ “ನಿಧಿ”ಯ ಆಸೆಗಾಗಿ ಭೂಮಿಯನ್ನು ಅಗೆದು ಹಣ್ಣಾಗಿದ್ದಾರೆ? ಕೆಲವರಿಗೆ ನಿಧಿ ಸಿಕ್ಕಿದೆಯೆಂಬ ವದಂತಿ ಕೂಡ ಇದೆ? ರಾಜನಾಳ ಊರು ಹಾಳಾಗಿ ಹೋಗಿದ್ದರೂ ಅದರ ಸಮೀಪ ನೆಲೆಸಿರುವ ಲಂಬಾಣಿಗರ ವಸತಿಗಳಿಗೆ “ರಾಜನಾಳ ತಾಂಡಾ” ಎಂಬ ಹೆಸರು ಇಂದಿಗೂ ರೂಢಿಯಲ್ಲಿದೆ.

[19]    ರಾಜನಾಳ ಹಳ್ಳಿಯ ಸಮೀಪದಲ್ಲಿ ಎರಡು ತಾಂಡಾಗಳಿವೆ. ಅವುಗಳನ್ನು ರಾಜನಾಳ ತಾಂಡಾ ನಂ. ೧, ರಾಜನಾಳ ತಾಂಡಾ ನಂ. ೨ ಎಂದು ಕರೆಯುತ್ತಾರೆ. ಇದನ್ನೇ ಇಂಗ್ಲೀಷಿನಲ್ಲಿ ಸಂಕ್ಷೇಪಿಸಿ ಎಲ್.ಟಿ. (Lamani Tanda) ನಂ.೧, ಎಲ್.ಟಿ. ನಂ. ೨ ಎಂದು ಕರೆಯುತ್ತಾರೆ.

[20]    ಉದಾ: ವಿಜಾಪುರ ಜಿಲ್ಲೆಯ ಕೆಲವು ತಾಂಡಾಗಳ ಹೆಸರು ಸೂಚಿಸಿರುವೆ.

[21]    ಕರ್ನಾಟಕ ಜಾನಪದ “ಜಾನಪದ ಶಾಸ್ತ್ರ, ಸಮೂಹ ಸ್ಮರಣೆಯ ಕಲೆಗಳು ಇತ್ಯಾದಿ” ಡಾ. ಎಂ. ಚಿದಾನಂದಮೂರ್ತಿ ಅವರ ಲೇಖನ, ೧೯೮೧, ಪುಟ ೨೯೪

[22]    “….. ಪೂರ್ವದಲ್ಲಿ ಲಕ್ಕಿ ಬಣಜಾರ ಎಂದು ಹೆಸರುವಾಸಿಯಾಗಿದ್ದ ಈ ಪಂಗಡದವರು ಭಾರಿ ವ್ಯಾಪಾರಸ್ಥರಾಗಿ ಸಾವಿರಗಟ್ಲೆ ಸಬರದ ಎತ್ತುಗಳನ್ನು ಇಟ್ಟುಕೊಂಡು ದಿನಸುಗಳಾದಿಯಾಗಿ ಭೋಗ್ಯ ವಸ್ತುಗಳನ್ನೆಲ್ಲಾ ದೇಶ ವಿದೇಶಕ್ಕೂ ಸಾಗಿಸಿ ಅಲ್ಲಲ್ಲಿ ಊರುಗಳ ಹೊರಗೆ “ತಾಂಡಾ” ಇಳಿದು ಲಕ್ಷಗಟ್ಲೆ ವ್ಯಪಾರ ಮಾಡುತ್ತಿದ್ದರು. ಇದಕ್ಕಾಗಿ ಸೆಟ್ಟಿ, ಶ್ರೇಷ್ಠಿ, ನಾಯಕ ಎಂಬ ಬಿರುದುಗಳು ರಾಜಸನ್ನದುಗಳಿಂದ ಕೊಡಲ್ಪಟ್ಟಿದ್ದವೆಂದು “ಚಾಲುಕ್ಯ ವಿಕ್ರಮ ಚರಿತ್ರೆ”ಯಲ್ಲಿ ಕಂಡುಬರುತ್ತವೆ. ಈಗ ಇವರೆಲ್ಲ ಚದುರಿ ಹೋಗಿದ್ದರೂ ಪೂರ್ವದಲ್ಲಿ ಕೊಡಲ್ಪಟ್ಟಿದ್ದ ಬಿರುದು “ನಾಯಕ” ಎಂಬುದು ಮಾತ್ರ ಹೆಸರಿನ ಮುಂದೆ ಇನ್ನೂ ಇದೆ. “ಪೆರುಮಾಳಸ್ವಾಮಿ”.

[23]    ಇಂದಿನ ಯಾಂತ್ರಿಕ ರಭಸದ ಸದ್ದು-ಗದ್ದದಲಗಳಲ್ಲಿ ಕೆಲವು ತಾಂಡಾಗಳಲ್ಲಿ ಬದಲಾವಣೆಗಳಾಗಿವೆ.

[24]    ಕೆಲವು ತಾಂಡಾಗಳಲ್ಲಿ ಭಗತನ ಬದಲಿಗೆ (ಮೇಲೆ ಹೇಳಿರುವ ರಾಜನಾಳ ತಾಂಡಾ ನಂ. ೨ರಲ್ಲಿ ಶ್ರೀಮತಿ ಸೀತಾಬಾಯಿ ಲಚಮು ಪವಾರ) ಭಗತಣ (ಪೂಜಾರತಿ) ಇದ್ದಾಳೆ. ಇವಳು ತಾಂಡಾದಲ್ಲಿ ನಡೆಯುವ ಜಾತ್ರೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಪೂಜಾರತಿ ಕಾರ್ಯ ನಿರ್ವಹಿಸುತ್ತಾಳೆ.

[25]    ಅ) ಝಾಪಾಸೂರನು ಜಗದಂಬಾ ದೇವಿಯ ಪರಮ ಭಕ್ತ. ಇವನಿಗೆ ದೇವಿಯ ಸ್ಮರಣೆ ಬಿಟ್ಟು ಪ್ರಪಂಚವೆ ಗೊತ್ತಿರಲಿಲ್ಲ. ಭಕ್ತಿಯ ಭ್ರಾಂತಿಯಲ್ಲಿಯೇ ಇರುತ್ತಿದ್ದನು. ಒಮ್ಮೆ ಮಳೆಗಾಲ ಆರಂಭವಾಗಿ ಜನ ಬಿತ್ತನೆ ಮಾಡುವಾಗ ಝಾಪಾಸೂರ ತಮ್ಮ ಹೊಲದಲ್ಲಿ ಧಾನ್ಯಗಳನ್ನು ಬಿತ್ತದೆ ಈಜು ಕುಂಬಳಕಾಯಿ ಬಿತ್ತಿ ಜನರಿಂದ ಅಪಹಾಸ್ಯಕ್ಕೆ ಈಡಾಗಿದ್ದನಂತೆ.

ಆ) ಸೂರಭಗತನು ಯಾವತ್ತಲೂ ದೇವಿಯ ಸ್ಮರಣೆಯಲ್ಲಿಯೇ ಇರುತ್ತಿದ್ದ. ಪವಾಡ ಪುರುಷನಾಗಿದ್ದ ಇವನಿಗೆ ಮಾರುದ್ಧ ಜಡೆಗಳಿದ್ದವು. ಭೂತ-ಪಿಶಾಚಿಗಳನ್ನು ಬಿಡಿಸುವುದರಲ್ಲಿ ಎತ್ತಿದ ಕೈ. ತನ್ನ ಮೈಯಲ್ಲಿ “ದೇವಿ” ಕಾಣಿಸಿಕೊಂಡಾಗ, ಬೇವಿನಸೊಪ್ಪು ತಿನ್ನುತ್ತ, ದೆವ್ವ ಹಿಡಿದವನ ಮೈಮೇಲೆ ಭಂಡಾರ ಗೊಜ್ಜಿ ದೆವ್ವ ಬಿಡಿಸುತ್ತಿದ್ದ. ಇವೇ ಮುಂತಾದ ದಂತಕಥೆಗಳು ಇಂದಿಗೂ ಈ ಸಮುದಾಯದಲ್ಲಿ ಪ್ರಚಲಿತವಾಗಿವೆ. (ವಿವರಗಳಿಗೆ ನೋಡಿ : “ಸಂತ ಸೇವಾಲಾಲ” ಡಾ. ಹರಿಲಾಲ ಪವಾರ, ೧೯೯೮, ಪುಟ ೨೧-೨೨)

[26]    ಪವಾರ ಗೋತ್ರದಲ್ಲಿ ಒಟ್ಟು ಹನ್ನೆರಡು ಪಂಗಡ (ಪಾಡಾ)ಗಳು ಅದರಲ್ಲಿ “ಝರಪಲಾ” ಪಂಗಡವು ಒಂದು.

[27]    ಅ) ಕ್ವಚಿತ್ತಾಗಿ ಕೆಲವು ತಾಂಡಾಗಳಿಗೆ ಗೋತ್ರದ ಹೆಸರಿನಿಂದ ಕರೆಯುವುದಿಲ್ಲ. ಉದಾ : ಮೇಲೆ ಹೇಳಿರುವ ಹಡಲಸಂಗ ತಾಂಡೆ ನಂ.-೨ಕ್ಕೆ “ಗಾಂಜಾಳೇರ ತಾಂಡೋ” ಎಂದು ಕರೆಯುವ ಬದಲಿಗೆ “ಮಾಣೋತೇರ ತಾಂಡೋ” ಎಂದು ಕರೆಯಬೇಕಾಗಿತ್ತು. ಏಕೆಂದರೆ ಆ ತಾಂಡಾದಲ್ಲಿ “ಮಾಣೋತ” ಪಂಗಡದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ “ಮಾಣೋತೇರ ತಾಂಡಾ” ಎಂದು ಕರೆಯುವ ಬದಲಿಗೆ “ಗಾಂಜಾಳೇರ ತಾಂಡೋ” ಎಂದು ಕರೆಯುತ್ತಾರೆ. ಏಕೆಂದರೆ ಆ ತಾಂಡಾದ ಜನರು ಹೆಚ್ಚಿನ ಸಂಖ್ಯೆಯಲ್ಲಿ “ಗಾಂಜಾ ತಂಬಾಕ” ಸೇದುತ್ತಿದ್ದರಿಂದ ಆ ಹೆಸರು ಬಳಕೆಯಲ್ಲಿ ಬಂದಿದೆ ಎಂದು ವಕ್ತೃಗಳ ಹೇಳಿಕೆ.

ಆ) ಮತ್ತೊಂದು ಉದಾಹರಣೆ ಹೀಗಿದೆ- “ರಾಜನಾಳ ತಾಂಡಾ ನಂ-೨ರ ಹೆಸರನ್ನು ಗಮನಿಸಿದಾಗ “ವೋಡ್ಯಾಳೇರ ತಾಂಡೋ” ಎಂದು ಕರೆಯುತ್ತಾರೆ. ಈ ತಾಂಡಾದಲ್ಲಿ “ಝರಪಲಾ” ಪಂಗಡದವರು ಅಧಿಕ ಸಂಖ್ಯೆಯಲ್ಲಿದ್ದರು. “ಝರಪಲಾ ತಾಂಡೋ” ನಂ.-೨ ಎಂದು ಕರೆಯದೆ “ವೋಡ್ಯಾಳೇರ ತಾಂಡೋ” ಎಂದು ಕರೆಯುತ್ತಾರೆ. ಏಕೆಂದರೆ ಪೂರ್ವದಲ್ಲಿ ಈ ತಾಂಡಾಗೆ ವಡ್ಡರ ತಮ್ಮ ವೃತ್ತಿ ಕೆಲಸಕ್ಕೆ ಬರುತ್ತಿದ್ದಾಗ, ಆ ತಾಂಡಾದ ಜನರು ಅವರ ಗಾಡಿಯಲ್ಲಿ ಕುಳಿತುಕೊಂಡು ಬಂದರಂತೆ. ಕೀಳರಿಮೆಯಿಂದ ಕಂಡ ಅವರನ್ನು ಬೇರೆ ತಾಂಡಾದ ಜನರು (ವಡ್ಡರ ಗಾಡಿಯಲ್ಲಿ ಕುಳಿತು ಬಂದವರನ್ನು ವೋಡ್ಯಾಳೇರ (ವಡ್ಡರ) ತಾಂಡೋ ಎಂದು ಕರೆದರಂತೆ.) ಇಂದಿಗೂ ವೋಡ್ಯಾಳೇರ ತಾಂಡೋ ಎಂದು ಕರೆಯುವುದು ರೂಢಿಯಲ್ಲಿದೆ.

[28]    ವಿವರಣೆ ನೋಡಿ : “ಕರ್ನಾಟಕದ ಹೆಳವರು – ಒಂದು ಜಾನಪದೀಯ ಅಧ್ಯಯನ” ಡಾ. ಹರಿಲಾಲ ಪವಾರ, ಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ, ೧೯೯೫, ಪುಟ ೮೩-೮೫

[29]    “ತಾಂಡೂರ” ಎನ್ನುವುದು ಹೈದರಾಬಾದಿಗೆ ಸಮೀಪ ಒಂದು ಊರು ಇದೆ. ಅಲ್ಲಿ ೧೦೦ಕ್ಕೆ ೮೦ರಷ್ಟು ಕನ್ನಡ ಮಾತನಾಡುವ ಜನರಿದ್ದಾರೆ. ಆದರೆ ಲಂಬಾಣಿ ಭಾಷೆ ಕನ್ನಡದಡಿಯಲ್ಲಿ ಸಿಕ್ಕು ಹೋಗಿರಬೇಕು ಎಂದು ಊಹಿಸಬಹುದು. ಹೈದರಾಬಾದಿನ ಜನರ ರಾಜಭಾಷೆ ಉರ್ದು ಅಂತು ಸರಿಯೇ, ಆದರೆ ಅದರ ಜೊತೆಗೆ ಮರಾಠಿ, ಕನ್ನಡ, ಲಂಬಾಣಿ ಭಾಷೆಗಳನ್ನು ಆಡುತ್ತಿದ್ದರೆಂದು ಹೇಳಬಹುದು. ಏಕೆಂದರೆ “ಭಾಗಾಮತಿ ನಗರ”ದ ಒಂದು ಕಥೆಯನ್ನು ಹಿಡಿದು ವಿಚಾರ ಮಾಡಿದರೆ ಇದು ಹೀಗೇ ಇರಬೇಕೆಂದು ಊಹಿಸಬಹುದು. ಕನ್ನಡ ಈ ಪ್ರದೇಶದ ಬಹುಸಂಖ್ಯಾತರ ಭಾಷೆ ಆಗಿತ್ತು. ಗುಲಬರ್ಗಾ ಇತ್ಯಾದಿ ನಗರಗಳಿಗೆ ಜನರು ಹೋಗುವುದು ರೂಢಿಯಲ್ಲಿತ್ತು. ಆದ್ದರಿಂದ ಕನ್ನಡ ಭಾಷೆಯ ಒತ್ತಡದಲ್ಲಿ “ಲಂಬಾಣಿ ಭಾಷೆ” ಒಂದು ವೇಳೆ ತಳಕ್ಕೆ ಹೋಗಿದ್ದರೆ ಆಶ್ಚರ್ಯವಿಲ್ಲ. ತಾಂಡೆಗಳ ಊರು “ತಾಂಡೂರು”, ಅಲ್ಲಿ ಅಕ್ಕಪಕ್ಕದಲ್ಲಿ ತಾಂಡೆಗಳೇ ಹೆಚ್ಚಾಗಿವೆ. ಚಿಂಚೋಳಿಯಿಂದ ಹಿಡಿದು ಶಹಬಾದ್, ಗುಲಬರ್ಗಾ, ಭಂಯ್ಯಾರ ಕಮಲಾಪುರ, ಹೈದರಾಬಾದವರೆಗೆ. ಈ ಕಾರಣದಿಂದ ತಾಂಡಾ ಎನ್ನುವ ಶಬ್ದದಿಂದ “ತಾಂಡೂರ” ಎನ್ನುವಂಥ ಹೆಸರು ಬಂದಿರಬೇಕು. ಮತ್ತು “ತಾಂಡಾ ಸಂಸ್ಕೃತಿ” ಹರಡಲು ಕಾರಣವಾಗಿರಬೇಕು. ಈ ಕಾರಣದಿಂದ “ತಾಂಡಾ ಸಂಸ್ಕೃತಿ”ಯನ್ನು ಅಧ್ಯಯನ ಮಾಡುವ ಅವಶ್ಯಕತೆ ಇದೆ.