ವಾಣಿಜ್ಯ ಮಟ್ಟದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವ ವಿವಿಧ ವಿಧಾನಗಳನ್ನು ಪರಾಮರ್ಶಿಸುವ ಮೊದಲು ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಾಗುತ್ತದೆ. ಅವುಗಳೆಂದರೆ : ಬಂಡವಾಳ ತೊಡಗಿಸುವುದು, ನಿವೇಶನ, ಕಟ್ಟಡ, ನೀರಿನ ಪೂರೈಕೆ, ಕಾರ್ಯನಿರ್ವಾಹಕರು, ಕಾರ್ಮಿಕರು ಮುಂತಾದವುಗಳು. ಡಬ್ಬಿಯಲ್ಲಿ ಆಹಾರ ಸಂಸ್ಕರಿಸುವ ಕಾರ್ಯವು ದೊಡ್ಡ ಪ್ರಮಾಣದಲ್ಲಿ ಉತ್ತಮ ಸ್ಥಿತಿಯಲ್ಲಿ ನಡೆಯಬೇಕಾದರೆ ಇವೆಲ್ಲ ಗಮನಿಸಬೇಕಾದ ಮುಖ್ಯ ಅಂಶಗಳಾಗಿರುತ್ತವೆ.

ಕಾರ್ಖಾನೆ :

ಬಂಡವಾಳ : ನಿವೇಶನ, ಕಾರ್ಖಾನೆ, ಕಟ್ಟಡ ಮತ್ತು  ಯಂತ್ರೋಪಕರಣಗಳಲ್ಲಿ ತೊಡಗಿಸಿದ ಹಣವು ಪ್ರಧಾನ ಬಂಡವಾಳವೆನಿಸಿಕೊಳ್ಳುವುದು. ಕಚ್ಚಾವಸ್ತು, ಕೂಲಿ, ಸಂಸ್ಕರಣೆ ದಾಸ್ತಾನು ಮಾಡುವಿಕೆ, ಸಾರಿಗೆ ಮತ್ತು ವಿತರಣೆ ಕಾರ್ಯಗಳಿಗೆ ತಗಲುವ ಖರ್ಚು ಕಾರ್ಖಾನೆ ನಡೆಸುವ ಅಥವಾ ಕಾರ್ಯ ನಿರ್ವಹಣೆಯಲ್ಲಿ ಸೇರಿಕೊಳ್ಳುತ್ತದೆ. ಬಂಡವಾಳ ತೊಡಗಿಸುವವನು ಯಾವ ಮಾದರಿಯ ಮತ್ತು ಎಷ್ಟು ಪ್ರಮಾಣದ ಉತ್ಪಾದನೆಯು ಹೆಚ್ಚು ಪ್ರಯೋಜನಕಾರಿಯೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಇದಾದ ನಂತರ ಯಂತ್ರೋಪಕರಣ ಮತ್ತು ಇನ್ನಿತರ ಅವಾಶ್ಯಕತೆಗಳ ಬಗ್ಗೆ ಪರಾಮರ್ಶೆ ನಡೆಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕು.

ಕಾರ್ಖಾನೆಯ ನಿವೇಶನಗಳನ್ನು ಆರಿಸುವಾಗ ಈ ಕೆಲಗೆ ಕಾಣಿಸಿದ ಕೆಲವು ಅಂಶಗಳನ್ನು ಗಮನಿಸಬೇಕು:

  • ಪರಿಸರದಲ್ಲಿ ಯೋಗ್ಯ ರೀತಿಯ ಹಣ್ಣು ಮತ್ತು ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಕೂಡಲೇ ದೊರಕುವಂತಿರಬೇಕು. ಏಕೆಂದರೆ ಹಣ್ಣು ಮತ್ತು ತರಕಾರಿಗಳು ಕ್ಷಿಪ್ರವಾಗಿ ಹಾಳಾಗತಕ್ಕ ವಸ್ತುಗಳು, ಅಲ್ಲದೆ ಬಹುದೂರ ರವಾನಿಸುವಾಗ ಬೇಗನೇ ಕೆಡುತ್ತವೆ.
  • ಕಚ್ಚಾವಸ್ತು  ಮತ್ತು ಸಿದ್ಧ ಪದಾರ್ಥಗಳ ಸಾಗಾಣಿಕೆಗೆ ಸರಿಯಾದ ಸಾರಿಗೆ ಸೌಕರ್ಯ ವ್ಯವಸ್ಥೆ ಇರಬೇಕು.
  • ಪರಿಸರವು ಚೊಕ್ಕಟವಾಗಿರಬೇಕು. ಕಸ, ಧೂಳು, ಇತ್ಯಾದಿಗಳಿಂದ ಆದಷ್ಟುಮಟ್ಟಿಗೆ ಮುಕ್ತವಾಗಿರಬೇಕು. ಅಲ್ಲದೆ, ಆಯ್ಕೆ ಮಾಡಿದ ನಿವೇಶನವು ಮಸಿ, ಹೊಗೆ ಮತ್ತು ಕೆಟ್ಟ ವಾಸನೆ ಹರಡುವ ಕೈಗಾರಿಕಾ ಕಾರ್ಖಾನೆಗಳಿಂದ ಸಾಕಷ್ಟು ದೂರ ಇರಬೇಕು. ಇವು ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥಗಳ ಗುಣಮಟ್ಟಕ್ಕೆ ಪ್ರತಿಕೂಲವಾಗಿ ವರ್ತಿಸುತ್ತವೆ. ಆಹಾರವನ್ನು ಡಬ್ಬಿಯಲ್ಲಿ ಸಂಸ್ಕರಿಸುವಾಗ ದೊರಕುವ ನಿರುಪಯೋಗಿ ವಸ್ತುಗಳ ವಿನಿಯೋಗಕ್ಕೆ ಸುವ್ಯವಸ್ಥೆ ಇರಬೇಕು.
  • ಮುಂದೆ ಕಾರ್ಖಾನೆಯು ಸುವ್ಯವಸ್ಥಿತವಾಗಿ ಬೆಳೆಯಲು ಒಳ್ಳೆಯ ಅವಕಾಶಗಳಿರಬೇಕು.

ಕಾರ್ಖಾನೆಯ ಕಟ್ಟಡ :

ಕಾರ್ಖಾನೆಯ ಕಟ್ಟಡ ಒಂದು ಮಹಡಿ ಅಥವಾ ಅನೇಕ ಮಹಡಿಯದಾಗಿರಬಹುದು. ಕಾರ್ಖಾನೆಯು ಸಾಮಾನ್ಯವಾಗಿ ಸಣ್ಣ ಪ್ರಮಾಣದ್ದಾಗಿದ್ದು, ವರ್ಷದಲ್ಲಿ ಸ್ವಲ್ಪ ಸಮಯ ಮಾತ್ರ ಕೆಲಸ ಮಾಡುವುದಾಗಿದ್ದರೆ ಲಘುವಾಗಿ ಕಟ್ಟಿದ ಒಂದೇ ಮಹಡಿಯ ಕಟ್ಟಡ ಸಾಕು. ದೊಡ್ಡ ಯಂತ್ರೋಪಕರಣಗಳನ್ನೊಳಗೊಂಡು ವರ್ಷದಾದ್ಯಮತ ಕೆಲಸ ಮಾಡುವುದಾದರೆ ಹೆಚ್ಚು ಮಹಡಿಯಿರುವ ಕಟ್ಟಡ ಬೇಕಾಗುತ್ತದೆ. ದೊಡ್ಡ ಕಟ್ಟಡವಾದರೆ ಮೂಲವಸ್ತು ಮತ್ತು ಸಿದ್ಧ ಪದಾರ್ಥಗಳ ಚಲಾವಣೆಗೆ ಅನುಕೂಲವಾಗುವುದಲ್ಲದೆ ತಗಲುವ ಖರ್ಚು ಕಡಿಮೆಯಾಗುವುದು. ನೆಲಭಾಗವು ದೃಢವಾಗಿದ್ದು ಉತ್ತಮ ಗುಣಮಟ್ಟದ ಸಿಮೆಂಟಿನಿಂದ ಮಾಡಿರಬೇಕು. ಕಾರ್ಖಾನೆಗಳಲ್ಲಿಯ ನೆಲಭಾಗವು ಸತತವಾಗಿ ಉಪಯೋಗಿಸಲ್ಪಡುವುದರಿಂದ ಮತ್ತು ಟ್ರಕ್ಕುಗಳ ಭಾರವಾದ ಚಕ್ರಗಳು ಚಲಿಸುವುದರಿಂದ ಸಾಕಷ್ಟು ಗಟ್ಟಿಯಾಗಿರಬೇಕು. ಪ್ರತಿ ಅಡಿ ನೆಲಕ್ಕೆ ೧/೪ ಅಂಗುಲದಷ್ಟು ಇಳಿಜಾರು ಕೊಟ್ಟರೆ ನೀರು ಸರಾಗವಾಗಿ ಹರಿದುಹೋಗುತ್ತದೆ. ಬಾಗಿಲು, ಕಿಟಕಿ, ಗವಾಕ್ಷ ಮೊದಲಾದವುಗಳ ಮೂಲಕ ನೊಣ, ಕಣಜದ ಹುಳು ಮತ್ತು ಇತರ ಕೀಟಗಳು ಒಳಸೇರದಂತೆ ಕಿರಿದಾದ ತಂತಿ ಬಲೆಯನ್ನು ಜೋಡಿಸಿರಬೇಕು. ಕಟ್ಟಡದ ಮೇಲ್ಛಾವಣಿಯು ಎತ್ತರವಾಗಿರಬೇಕಲ್ಲದೆ, ಗಾಳಿಯ ಸುಗಮ ಸಂಚಾರಕ್ಕೆ ಅವಕಾಶವಿರಬೇಕು. ಇದರಿಂದ ಉಗಿ ಮತ್ತು ಆವಿಯು ಸರಾಗವಾಗಿ ಹೊರಗೆ ಹೋಗುತ್ತದೆ. ಕಿಟಕಿಗಳಿಗೆ ದೊಡ್ಡದಾದ ಗಾಜಿನ ಫಲಕ ಜೋಡಿಸಿರಬೇಕು. ಮೇಲ್ಛಾವಣಿಯಿಂದ ಸೌಮ್ಯವಾಗಿ ಬೆಳಕು ಬರಲು ದಪ್ಪಗಾಜನ್ನು ಭಾಗಶಃ ಹೊಂದಿಸಿರಬೇಕು. ಡಬ್ಬಿಯಲ್ಲಿ ಸಂಸ್ಕರಿಸುವುದನ್ನು ಅನೇಕ ವೇಳೆ ರಾತ್ರಿಕಾಲದಲ್ಲೂ ಮಾಡಬೇಕಾಗುತ್ತದೆ. ಇದಕ್ಕೆ ತಕ್ಕಟು ಕೃತಕ ಬೆಳಕಿನ ವ್ಯವಸ್ಥೆಯೂ ಇರಬೇಕು.

ಸ್ತ್ರಿ ಮತ್ತು ಪುರುಷ ಕೆಲಸಗಾರರಿಗೆ ಪ್ರತ್ಯೇಕವಾಗಿ ಉಡುಪು ಧರಿಸುವ ಮತ್ತು ಸ್ನಾನದ ಕೊಠಡಿ ಹಾಗೂ ಕಕ್ಕಸುಗಳ ವ್ಯವಸ್ಥೆಯಿರಬೇಕು. ಕಾರ್ಖಾನೆಯ ಆವರಣದೊಳಗೆ ಇವು ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿರಬೇಕು.  ಕಾರ್ಮಿಕರಿಗೆ ಸ್ವಂತ ಆರೋಗ್ಯದ ಪ್ರಾಮುಖ್ಯತೆಯ ಬಗ್ಗೆ ಸಾಕಷ್ಟು ಜ್ಞಾನವನ್ನು ಕೊಡಬೇಕು. ಇವೆಲ್ಲ ಮಾನವ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಗಮನಿಸಬೇಕಾದ ಮುಖ್ಯಾಂಶಗಳು.

ನೀರಿನ ಪೂರೈಕೆ ಮತ್ತು ಚರಂಡಿ ವ್ಯವಸ್ಥೆ :

ಕಾರ್ಖಾನೆಯಲ್ಲಿ ಕುಡಿಯಲು ಯೋಗ್ಯವಾದ ನೀರಿನ ಪೂರೈಕೆ ಹೆಚ್ಚಿನ ಪ್ರಮಾಣದಲ್ಲಿರಬೇಕು. ಹಣ್ಣು ಮತ್ತು ತರಕಾರಿಗಳನ್ನು ತೊಳೆಯುವುದು, ಸಕ್ಕರೆ ಪಾಕ ಮತ್ತು ಉಪ್ಪಿನ ದ್ರಾವಣ ತಯಾರಿಸುವುದು, ನೆಲ ಮತ್ತು ಯಂತ್ರೋಪಕರಣಗಳನ್ನು ತೊಳೆಯುವುದು ಇವೇ ಮುಂತಾದ ಕಾರ್ಯಗಳಿಗೆ ನೀರು ಅಧಿಕ ಪ್ರಮಾಣದಲ್ಲಿ ಬೇಕಾಗುತ್ತದೆ. ನೀರೂ ಸಹ ಹೆಚ್ಚಿನ ಒತ್ತಡದಲ್ಲಿ ಬರುತ್ತಿರಬೇಕು. ಇದರಿಂದ ಡಬ್ಬಿಯಲ್ಲಿ ಸಂಸ್ಕರಿಸುವ ಕಾಖಾನೆಯ ಎಲ್ಲ ಭಾಗಗಳಿಗೆ ನೀರಿನ ಪೂರೈಕೆಯು ನಿರಂತರ ಆವಿ ಆಗುತ್ತಿರಲು ಸಾಧ್ಯ. ಈ ನೀರು ಕ್ಷಾರಯುಕ್ತ ಅಥವಾ ಕಠಿಣ (ಗಡುಸು) ನೀರಾಗಿರಬಾರದು; ಸಾವಯವ ಪದಾರ್ಥಗಳನ್ನು ಹೊಂದಿರಬಾರದು. ಕಬ್ಬಿಣ ಅಥವಾ ಗಂಧಕ ಮಿಶ್ರಿತ ನೀರು ಸಕ್ಕರೆ ಪಾಕ ಮತ್ತು ಉಪ್ಪಿನ ದ್ರಾವಣ ತಯಾರಿಸಲು ಯೋಗ್ಯವಲ್ಲ. ಉಪ್ಪು ನೀರು ಪದಾರ್ಥದ ರುಚಿಯನ್ನು ಕೆಡಿಸುವುದು. ಆದುದರಿಂದ ಅದನ್ನು ಬಳಸುವುದು ಯೋಗ್ಯವಲ್ಲ. ಅಗತ್ಯ ಗುಣಮಟ್ಟವಿರುವ ನೀರು ಸಿಗದಿದ್ದಲ್ಲಿ ನೀರನ್ನು ಮೃದು ಮಾಡುವ ಯಂತ್ರವನ್ನಿಟ್ಟುಕೊಳ್ಳಬೇಕು. 

 ಕಾರ್ಮಿಕರು :

ಕಾಖಾನೆಯಲ್ಲಿ ಕ್ರಮಬದ್ಧವಾಗಿ ಕೆಲಸಕ್ಕೆ ನೇಮಿಸಿರುವವರೇ ಆಗಲಿ ಅಥವಾ ಹಂಗಾಮಿಯಲ್ಲಿ ಕೆಲಸಕ್ಕೆ ಸಢೇರಿದವರೇ ಆಗಲಿ ಎಲ್ಲರೂ ಆರೋಗ್ಯವಂತರಾಗಿರಬೇಕು.  ಕೆಲಸ ಮಾಡುವಾಗ ನಿರ್ಮಲ ಬಟ್ಟೆ ಮತ್ತು ಏಪ್ರನ್ (ಮುಂಗವಚ, ಧೂಳುಪಾವಡ) ಗಳನ್ನು ಧರಿಸಬೇಕು. ಸಾಂಕ್ರಾಮಿಕ ರೋಗಗಳ ವಿರುದ್ಧ ನಿಶ್ಚಿತ ಸಮಯಗಳಲ್ಲಿ ಮುಂಜಾಗ್ರತೆಯ ಕ್ರಮವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಆಹಾರ ಪದಾರ್ಥ ತಯಾರಿಸುವ ವಿವಿಧ ಹಂತಗಳಲ್ಲಿ  ರಾಸಾಯನಿಕ ಮತ್ತು ಸೂಕ್ಷ್ಮ ಜೀವಿಗಳನ್ನು ನಿಯಂತ್ರಿಸಬೇಕು. ಇದಕ್ಕೆ ತಕ್ಕ ವ್ಯವಸ್ಥೆ ಕಾರ್ಖಾನೆಯಲ್ಲಿರಬೇಕು. ಇದರಿಂದ ಆಹಾರ ಕಲುಷಿತಗೊಳ್ಳುವುದು ಮತ್ತು ವಿಷಬೆರಕೆಯಾಗುವುದನ್ನು ತಡೆಯಬಹುದು. ಉತ್ಪಾದಿಸಿದ ಆಹಾರವು ಉತ್ತಮ ಗುಣಮಟ್ಟದಲ್ಲಿರುವಂತೆ ಸದಾ ಎಚ್ಚರಿಕೆ ವಹಿಸಬೇಕು. ಇದಕ್ಕೆ ಒಬ್ಬ ತರಬೇತಿ ಪಡೆದ ರಾಸಾಯನಿಕ ಶಾಸ್ತ್ರಜ್ಞ  ಮತ್ತು ಇತರ ಸಹಾಯಕರ ಅವಶ್ಯಕತೆಯಿರುತ್ತದೆ. 

ಯಂತ್ರೋಪಕರಣಗಳು :

ಯಂತ್ರೋಪಕರಣ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಆರಿಸುವಾಗ ಅತ್ಯಂತ ಜಾಗರೂಕತೆ ವಹಿಸಬೇಕು. ಈ ಯಂತ್ರೋಪಕರಣಗಳು ವಿವಿಧ ಪರಿಮಾಣಗಳಲ್ಲಿ ದೊರಕುವವು. ಪ್ರತಿಯೊಬ್ಬ ತಯಾರಕನು ತನ್ನ ಅವಶ್ಯಕತೆಗಳನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಒಂದು ಸಣ್ಣ ಹಣ್ಣು ಸಂಸ್ಕರಿಸುವ ಕಾರ್ಖಾನೆಯ ನೆಲದ ನಕಾಶೆಯ ಸ್ಥೂಲರೂಪವನ್ನು ಮಾರ್ಗದರ್ಶನಕ್ಕಾಗಿ ಚಿತ್ರ ೧, ೨ ಮತ್ತು ೩ ರಲ್ಲಿ ವಿವರಿಸಿದೆ. ಈ ಕಾರ್ಖಾನೆಯಲ್ಲಿ ದಿನ ಒಂದಕ್ಕೆ ಸಾಧಾರಣ ೨೦೦೦ A ೨ ಗಾತ್ರದ ಡಬ್ಬಿಗಳನ್ನು ಸಂಸ್ಕರಿಸಬಹುದಲ್ಲದೆ ೧೦೦೦ ಸೀಸೆಗಳಲ್ಲಿ ರಸವನ್ನು ತುಂಬಬಹುದು.

ಕಾರ್ಖಾನೆಯ ಯಂತ್ರೋಪಕರಣಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿರಬೇಕು. ಇದರಿಂದ ಸಿದ್ಧ ಆಹಾರ ತಯಾರಿಸುವ ವಿವಿಧ ಹಂತಗಳಲ್ಲಿ ತಗಲುವ ಶ್ರಮ ಮತ್ತು ಪ್ರಯತ್ನ ಬಹು ಕಡಿಮೆಯಾಗುತ್ತದೆ. ಕಚ್ಚಾ ಪದಾರ್ಥವು ಕಾರ್ಖಾನೆಯ ಒಳಸೇರಿ ಚೀಟಿ ಹಚ್ಚಲು ಮತ್ತು ಪ್ಯಾಕ್ ಮಾಡಲು ಸಿದ್ಧ ಪದಾರ್ಥವಾಗಿ ಹೊರಬರುವವರೆಗೆ ಅದು ನೇರಪಥದಲ್ಲಿ ಚಲಿಸುತ್ತಿರಬೇಕು. ಕೆಲವು ಋತುಗಳಲ್ಲಿ ಕಾರ್ಖಾನೆಗೆ ಕೆಲಸವಿರುವುದಿಲ್ಲ. ಆಗ ಯಂತ್ರ ಸಾಮಗ್ರಿಗಳನ್ನೆಲ್ಲ ಬಿಚ್ಚಿ, ಸರಿಪಡಿಸಿ, ಗ್ರೀಸ್ ಮತ್ತು ಬಣ್ಣ ಹಚ್ಚಬೇಕು.

ಡಬ್ಬಿಯಲ್ಲಿ ಸಂಸ್ಕರಿಸುವ ವಿಧಾನ ಮತ್ತು ಹಂತಗಳು

ಡಬ್ಬಿಯಲ್ಲಿ ಸಂಸ್ಕರಿಸುವ ಹಣ್ಣು ಮತ್ತು ತರಕಾರಿಗಳನ್ನು ಆಗತಾನೆ ಕಿತ್ತಿರಬೇಕು. ‘ಹೊಲದಿಂದ ಡಬ್ಬಿಗೆ ಒಂದು ಗಂಟೆ’ ಎಂಬುದು ಸಮ್ಮತವಾದ ಆದರ್ಶ.

ಬಲಿತ, ದೃಢವಾದ ಮತ್ತು ಏಕಪ್ರಕಾರವಾಗಿ ಮಾಗಿದ ಹಣ್ಣನ್ನೇ ಉಪಯೋಗಿಸಬೇಕು. ಅವುಗಳಲ್ಲಿ ಯಾವುದೇ ರೀತಿಯ ನ್ಯೂನತೆಗಳೂ ಇರಬಾರದು. ಅಲ್ಲದೆ ಕೀಟಗಳಿಂದ ಪೀಡಿತವಾಗಿರಬಾರದು. ಉತ್ತಮ ರೀತಿಯ ಆಕಾರ ಮತ್ತು ಗಾತ್ರದ ಹಣ್ಣುಗಳನ್ನೇ ಆರಿಸಿಕೊಳ್ಳಬೇಕು. ಅತಿ ಮಾಗಿದ ಹಣ್ನು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳಿಂದ ಬಾಧಿತವಾಗಿರುವುದು. ಈ ರೀತಿಯ ಹಣ್ಣುಗಳಿಂದ ತಯಾರಿಸಿದ ಸಿದ್ಧ ಪದಾರ್ಥವು ಕೆಳಮಟ್ಟದ್ದಾಗಿರುತ್ತದೆ. ಹಣ್ಣುಗಳು ಸಂಪೂರ್ಣ ಮಾಗಿರದಿದ್ದರೆ ಡಬ್ಬಿಗಳಲ್ಲಿ ಸಂಸ್ಕರಿಸುವಾಗ ಸಾಮಾನ್ಯವಾಗಿ ಸುಕ್ಕುಗಟ್ಟಿ ಬಿರುಸಾಗುತ್ತವೆ. ಟೊಮೆಟೊ ಹೊರತಾಗಿ ಮಿಕ್ಕ ಎಲ್ಲ ತರಕಾರಿಗಳು ಮೃದುವಾಗಿರಬೇಕು. ಟೊಮೆಟೊ ಮಾತ್ರ ಗಟ್ಟಿಯಾಗಿದ್ದು, ಸಂಪೂರ್ಣ ಮಾಗಿರಬೇಕು. ಬಣ್ಣವೂ ಕಡು ಕೆಂಪಾಗಿರಬೇಕು. ಮಣ್ಣು ಕೊಳೆ ಮುಂತಾದವುಗಳಿರಬಾರದು.

ಹಣ್ಣು ಮತ್ತು ತರಕಾರಿಗಳು ಡಬ್ಬಿಯಲ್ಲಿ ಸಂಸ್ಕರಿಸಿದ ಸಿದ್ಧ ಪದಾರ್ಥಗಳಾಗಿ ಮಾರ್ಪಡುವವರೆಗೆ ಅನೇಕ ಸಂಸ್ಕರಣಾ ಹಂತಗಳಿಗೆ ಒಳಪಡಬೇಕಾಗುತ್ತದೆ. ಇವುಗಳಲ್ಲಿ ಮುಖ್ಯವಾದವುಗಳನ್ನು ಈ ಕೆಳಗೆ ವಿವರಿಸಲಾಗಿದೆ :

) ಹಣ್ಣು ಮತ್ತು ತರಕಾರಿಗಳ ಆಯ್ಕೆ ಮತ್ತು ವರ್ಗಿಕರಣ : ಹಣ್ಣು ಮತ್ತು ತರಕಾರಿಗಳನ್ನು ಪೂರ್ವಭಾವಿಯಾಗಿ ಆಯ್ದುಕೊಳ್ಳುವುದು ಮುಖ್ಯ. ಅನಂತರ ಅವುಗಳನ್ನು ದರ್ಜೆವಾರು ವಿಂಗಡಿಸಬೇಕು. ಇದರಿಂದ ಒಂದೇ ರೀತಿಯ ಗಾತ್ರ, ಬಣ್ಣ ಇತ್ಯಾದಿ ಗುಣಮಟ್ಟವುಳ್ಳ ಪ್ಯಾಕ್  ಪಡೆಯಲು ಸಾಧ್ಯ. ಕೈಯಿಂದಾಗಲಿ ಇಲ್ಲವೇ ದರ್ಜಿಕರಣ ಯಂತ್ರಗಳ ಸಹಾಯದಿಂದಾಗಲಿ ಹಣ್ಣುಗಳನ್ನು ದರ್ಜೆವಾರು ವಿಂಗಡಿಸಬೇಕು. ದರ್ಜಿಕರಣ ಯಂತ್ರಗಳಲ್ಲಿ ಅನೇಕ ಬಗೆಯವುಗಳಿವೆ. ಜಾಲರಿ,ಉರುಳೆ, ಹಗ್ಗ ಅಥವಾ ಕೇಬಲ್ ದರ್ಜಿಕರಣ ಯಂತ್ರ ಇವೇ ಮೊದಲಾದವುಗಳು, ವೃತ್ತಾಕಾರದ ರಂಧ್ರಗಳಿರುವ, ತಾಮ್ರದ ಜಾಲರಿಗಳಿಂದ ಮಾಡಿದ ದರ್ಜಿಕರಿಸುವ ಸಾಧನಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ. ಇದರಲ್ಲಿ ವಿವಿಧ ಗಾತ್ರದ ಸುಮಾರು ಆರು ಜಾಲರಿಗಳುಓಡಿಸಲ್ಪಟ್ಟಿರುತ್ತವೆ. ಮೃದುವಾದ ಮತ್ತು ಬೆರ್ರಿ‍ ಜಾತಿಯ ಹಣ್ಣುಗಳನ್ನು ಕೈಯಿಂದಲೇ ವರ್ಗಿಕರಿಸಬೇಕು.

ಸಣ್ಣ ಹಣ್ಣುಗಳು, ದ್ವೀಪ್ರಾಕ್ಷಿ (ಪ್ಲಮ್), ಚೆರ್ರ‍ರಿ ಮತ್ತು ಆಲಿವ್ ಮುಂತಾದವುಗಳನ್ನು ಇಡೀ ಹಣ್ಣುಗಳ ರೂಪದಲ್ಲಿಯೇ ವಿಂಗಡಿಸಬೇಕು. ಆದರೆ, ಪೀಚ್ಚ, ಏರ್ಪಿಕಾಟ್, ಪೇರು, ಮಾವಿನಹಣ್ಣು ಇತ್ಯಾದಿಗಳನ್ನು ಇಬ್ಭಾಗ ಮಾಡಿ ಅಥವಾ  ಹೋಳುಗಳಾಗಿ  ಕತ್ತರಿಸಿ ಅನಂತರ ವಿಂಗಡಿಸಬಹುದು.

) ಹಣ್ಣುತರಕಾರಿಗಳನ್ನು ತೊಳೆಯುವುದು : ವರ್ಗಿಕರಿಸಿದ ಬಳಿಕ ಹಣ್ಣು ಮತ್ತು ತರಕಾರಿಗಳನ್ನು  ತೊಳೆಯಬೇಕು. ಇದಕ್ಕೆ ನೀರಿನಲ್ಲಿ ಮುಳುಗಿಸುವುದು ಇಲ್ಲವೇ ಕಲಕುವುದು ಅಥವಾ ತುಂತುರಾಗಿ ತಣ್ಣೀರು ಅಥವಾ ಬಿಸಿನೀರು ಚಿಮುಕಿಸುವುದು. ಇವೇ ಮುಂತಾದ ವಿವಿಧ ಕ್ರಮಗಳನ್ನು ಅನುಸರಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ಸರಿಯಾಗಿ ತೊಳೆಯುವುದು ಅತಿ ಅಗತ್ಯ. ರೋಗದಿಂದ ಕೆಟ್ಟಿರದ ತರಕಾರಿಗಳನ್ನು ಪೊಟ್ಯಾಸಿಯಂ ಪರಮಾಂಗನೇಟ್‌ದ ದುರ್ಬಲ ದ್ರಾವಣದಲ್ಲಿ ಮುಳುಗಿಸಬೇಕು. ತೊಳೆಯುವಾಗ ನೀರನ್ನು ಕಲಕಲು ಒತ್ತಡದ ಗಾಳಿ ಇಲ್ಲವೇ ರಭಸದ ಪಂಪು ಅಥವಾ ಪ್ರೊಪೆಲ್ಲರ್ ಮಾದರಿಯ ಉಪಕರಣಗಳನ್ನು ಉಪಯೋಗಿಸಬಹುದು. ತುಂತುರು ಹನಿಯಿಂದ ತೊಳೆಯುವುದು ಎಲ್ಲಕ್ಕಿಂತಲೂ ಉತ್ತಮ ವಿಧಾನ.

) ಸಿಪ್ಪೆ ತೆಗೆಯುವುದು : ಹಣ್ಣು ಮತ್ತು ತರಕಾರಿಗಳನ್ನು ತೊಳೆದ ಮೇಲೆ ಸಂಸ್ಕರಿಸಲು ಸಿದ್ಧಪಡಿಸಬೇಕು. ಇದಕ್ಕೆ ಇವುಗಳ ಸಿಪ್ಪೆ ತಗ್ಗಿನ ಭಾಗ ಮುಂತಾದವುಗಳನ್ನು ಮೊದಲು ತೆಗೆಯಬೇಕು. ಕೆಲವು ವೇಳೆ ಕ್ಷಿಪ್ರವಾಗಿ ಸ್ವಲ್ಪ ಬೇಯಿಸುವ ಅಗತ್ಯವೂ ಇರುತ್ತದೆ. ಹಣ್ಣು ಮತ್ತು ತರಕಾರಿಗಳ ಸಿಪ್ಪೆಗಳನ್ನು (೧) ಕೈಯಿಂದ ಅಥವಾ ಚಾಕುವಿನಿಂದ, (೨) ಯಂತ್ರದಿಂದ, (೩) ಶಾಖದ ಕ್ರಿಯೆಯಿಂದ ಮತ್ತು (೪) ಕ್ಷಾರ ದ್ರಾವಣದಿಂದ ತೆಗೆಯಬಹುದು. ಹಣ್ಣುಗಳ ತಿರುಳು ಮತ್ತು ತಗ್ಗಿನ ಭಾಗಗಳನ್ನು ಕೈಯಿಂದ ಇಲ್ಲವೇ ಯಂತ್ರದ ನೆರವಿನಿಂದ ತೆಗೆಯಬಹುದು. 

ಕೈಯಿಂದ ಸಿಪ್ಪೆ ತೆಗೆಯುವದು : ಅನೇಕ ಬಗೆಯ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ತೆಗೆಯುವುದು, ಹೋಳು ಮಾಡುವುದು ಮುಂತಾದವುಗಳನ್ನು ಕೈಯಿಂದಲೇ ನೆರವೇರಿಸಬಹುದು. ಇದಕ್ಕಾಗಿ ಒಂದು ವಿಶಿಷ್ಟ ರೀತಿಯ ಚಾಕು ಬಳಕೆಯಲ್ಲಿದೆ (ಚಿತ್ರ೪) ಸಿಪ್ಪೆ ತೆಗೆಯುವ ಈ ಚಾಕು ಬಹು ಕುತೂಹಲಕಾರಿಯಾಗಿದೆ. ಇದರ ಅಲಗು ಬಾಗಿರುವುದಲ್ಲದೆ, ಇದರಿಂದ ಸಿಪ್ಪೆಯ ಆಳವನ್ನು ಒಂದು ವಿಶಿಷ್ಟವಾದ ರಕ್ಷೆಯಿಂದ ನಿಯಂತ್ರಿಸಬಹುದು. ಈ ಚಾಕುವಿನಿಂದ ಅನೇಕ ಬಗೆಯ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ತೆಗೆಯಬಹುದು. ತಿರುಳು ತೆಗೆಯುವ, ತಗ್ಗು ತೆಗೆಯುವ ಮತ್ತು ಸಿಪ್ಪೆ ತೆಗೆಯುವ ಮಾದರಿ ಚಾಕುಗಳನ್ನು ಚಿತ್ರ ೪ರಲ್ಲಿ ಕೊಟ್ಟಿದೆ.

ಸಿಪ್ಪೆ, ದಿಂಡು ಮತ್ತು ತಗ್ಗುಭಾಗವನ್ನು ತೆಗೆಯುವ ಯಂತ್ರಗಳು : ಪೇರು, ಸೇಬು ಮುಂತಾದ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತು ತಿರುಳು ತೆಗೆಯುವ ಯಂತ್ರಗಳು ಇತ್ತೀಚೆಗೆ ಬಳಕೆಗೆ ಬಂದಿವೆ. ಇವುಗಳಿಂದ ಘನಾಕಾರದ ತುಮಡುಗಳನ್ನು ಮಾಡಬಹುದು. ಪೀಚ್ ಮತ್ತು ಚೆರ‍್ರಿ ಹಣ್ಣುಗಳ ಸಿಪ್ಪೆ ತೆಗೆಯಲು ಸ್ವಯಂ ಚಾಲಿತ ಯಂತ್ರಗಳಿವೆ. ಗೆಡ್ಡೆ ತರಕಾರಿಗಳಾದ ಗಜ್ಜರಿ, ಟರ್ನಿಪ್, ಆಲೂಗಡ್ಡೆ ಮುಂತಾದವುಗಳ ಸಿಪ್ಪೆಯನ್ನು ಯಾಂತ್ರಿಕವಾಗಿ ತೆಗೆಯಬಹುದು.

ಶಾಖದಿಂದ ಸಿಪ್ಪೆ ತೆಗೆಯುವುದು : ಕೆಲವು ಹಣ್ಣು ಮತ್ತು ತರಕಾರಿಗಳ ಅದರಲ್ಲೂ ವಿಶೇಷವಾಗಿ ಕೆಲವು ಜಾತಿಯ ಪೀಚ್ ಮತ್ತು ಆಲೂಗಡ್ಡೆಗಳ ಸಿಪ್ಪೆ ತೆಗೆಯಲು ಉಗಿ ಅಥವಾ ಕುದಿಯುವ ನೀರಿನಲ್ಲಿ ಸ್ವಲ್ಪ ಕಾಲ ಬೇಯಿಸಬೇಕು. ಇದರಿಂದ ಮೇಲ್ಭಾಗದ ಸಿಪ್ಪೆ ಮೃದುವಾಗುವುದಲ್ಲದೆ, ಸಡಿಲವೂ ಆಗುತ್ತದೆ. ಈ ಸಿಪ್ಪೆಯನ್ನು ಕೈಯಿಂದ ನಿರಾತಂಕವಾಗಿ ತೆಗೆಯಬಹುದು. ಹಣ್ಣು ಮತ್ತು ತರಕರಿಗಳನ್ನು ಅತಿ ಹೆಚ್ಚಿನ ಉಷ್ಣತೆ ಎಂದರೆ ೧೦೫ ಡಿಗ್ರಿ ಸೆ. ನಲ್ಲಿ ೧೦ ರಿಂದ ೬೦ ಸೆಕೆಂಡುಗಳ ಕಾಲ ಉಪಚರಿಸುವುದು ಇತ್ತಿಚಿನ ಪ್ರಗತಿ ಎನ್ನಬಹುದು. ಇದರಿಂದ ಸಿಪ್ಪೆಯು ಬಿರಿಯುವುದಲ್ಲದೆ, ಮುದುರಿಕೊಳ್ಳುವುದೂ ಕಂಡು ಬರುತ್ತದೆ. ಅನಂತರ ಒತ್ತಡದಿಂದ ಸಿಂಪಡಿಸುವ ಸಾಧನವನ್ನುಪಯೋಗಿಸಿ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು. ದೊಡ್ಡ ಪ್ರಮಾಣದಲ್ಲಾದರೆ ಒಂದು ಒಲೆಗೆ ವೇಗವನ್ನು ಬದಲಾಯಿಸುವ ಚಲಿಸುವ ಸಾಗಣಿಕೆಯ ಸಾಧನವನ್ನು ಅಳವಡಿಸುತ್ತಾರೆ. ಶಾಖವನ್ನು ಹತೋಟಿಯಲ್ಲಿಡಲು ಇದರಲ್ಲಿ ತಕ್ಕ ವ್ಯವಸ್ಥೆಯಿರುತ್ತದೆ. ಒಂದೇ ಗಾತ್ರದ  ಮತ್ತು ಏಕಪ್ರಕಾರವಾಗಿ ಮಾಗಿದ ಹಣ್ಣು ಅಥವಾ ತರಕಾರಿಗಳನ್ನು ಉಪಯೋಗಿಸಿದ್ದೇ ಆದರೆ ಉತ್ತಮ ಫಲಿತಾಂಶ ಸಿಗುತ್ತದೆ. ಈ ವಿಧಾನದಲ್ಲಿ ವಾಸನೆಯು ಹೆಚ್ಚು ನಷ್ಟವಾಗುವುದಿಲ್ಲ.  ಪದಾರ್ಥದ ಬಣ್ಣವೂ ಒಂದೇ ರೀತಿ ರುತ್ತದೆ. ಮತ್ತು ಯಾವುದೇ ನ್ಯೂನತೆಗಳು ಕಂಡುಬರುವುದಿಲ್ಲ. ಶಾಖೋಪಚಾರದಿಂದ ಸಿಪ್ಪೆ ತೆಗೆದ ಹಣ್ಣು ಇತರ ವಿಧಾನಗಳನ್ನನುಸರಿಸಿ ಸಿಪ್ಪೆ ತೆಗೆದ ಹಣ್ಣಿಗಿಂತ ಸುಲಭವಾಗಿ ಸಕ್ಕರೆಯನ್ನು ಹೀರಿಕೊಳ್ಳುತ್ತದೆ.

ಕ್ಷಾರದ್ರವದಿಂದ ಸಿಪ್ಪೆ ತೆಗೆಯುವುದು : ಪಿಚ್, ಏಪ್ರಿಕಾಟ್, ಕ್ವಿನ್‌ಸೆನ್, ಸಿಹಿಕಿತ್ತಳೆ ಮತ್ತು ಟೇಂಜೆರಿಯನ್ನ ಭಾಗಗಳು, ಗಜ್ಜರಿ, ಸಿಹಿಗೆಣಸು ಇವೇ ಮೊದಲಾದ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ತೆಗೆಯಲು ಒಂದು ಪ್ರತ್ಯೇಕ ವಿಧಾನ ಬಳಕೆಯಲ್ಲಿದೆ. ಇದರಲ್ಲಿ ಶೇಕಡಾ ೧-೨ರ ಸಾಂದ್ರತೆಯ ಕುದಿಯುವ ಕಾಸ್ಟಿಕ್‌ಸೋಡಾ ಅಥವಾ ತೀವ್ರಕ್ಷಾರ (ಲೈ) ದ್ರಾವಣವನ್ನು  ಉಪಯೋಗಿಸಲಾಗುತ್ತದೆ. ಮೇಲೆ ಹೇಳಿರುವ ಹಣ್ಣು ಅಥವಾ ತರಕಾರಿಗಳನ್ನು ೩೦ ಸೆಕೆಂಡಿನಿಂದ ೨ ನಿಮಿಷಗಳ ಕಾಲ ಮುಳುಗಿಸಿ, ಅನಂತರ ತೀವ್ರಕ್ಷಾರ (ಲೈ) ದ್ರಾವಣದಲ್ಲಿ ಮುಳುಗಿಸಿಡಬೇಕಾದ  ಅವಧಿಯು ವ್ಯತ್ಯಾಸವಾಗುತ್ತದೆ. ಕುದಿಯುವ ಕ್ಷಾರ ದ್ರಾವಣದ ಸಾಂದ್ರತೆಯನ್ನು  ಪದೇ ಪದೇ ಸರಿದೂಗಿಸುತ್ತಿರಬೇಕು. ಬಿಸಿ ಕ್ಷಾರ ದ್ರಾವಣವು ಸಿಪ್ಪೆಯ ಒಳಭಾಗವನ್ನು ಅದರ ತಿರುಳಿನಿಂದ ಸಡಿಲವಾಗಿಸುತ್ತದೆ. ಇದರಿಂದ ಸಿಪ್ಪೆಯನ್ನು ಸುಲಭವಾಗಿ ಕೈಯಿಂದಲೇ ತೆಗೆಯಬಹುದು. ಅನಂತರ ಹಣ್ಣು ಮತ್ತು ತರಕಾರಿಗಳನ್ನು ಹರಿಯುತ್ತಿರುವ ತಣ್ಣೀರಿನಲ್ಲಿ ಅದ್ದಿ, ಅವುಗಳಲ್ಲಿ ಉಳಿದಿರುವ ಕ್ಷಾರದಂಶವನ್ನು ತೆಗೆಯಬೇಕು. ಇದಕ್ಕಿಂತಲೂ ಉತ್ತಮ ವಿಧಾನವೆಂದರೆ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲ ದ್ರಾವಣದಲ್ಲಿ ಇಲ್ಲವೇ ಸಿಟ್ರಿಕ್ ಆಮ್ಲ ದ್ರಾವಣದಲ್ಲಿ ಕೆಲವು ಸೆಕೆಂಡು ಮುಳುಗಿಸಿಡುವುದು. ಈ ವಿಧಾನವನ್ನು ಅನುಸರಿಸಿದರೆ ಸಿಪ್ಪೆ ತೆಗೆಯಲು ಸ್ವಲ್ಪವೇ ಸಮಯ ಸಾಕಾಗಬಹುದು. ಅಲ್ಲದೆ, ಇದಕ್ಕೆ ತಗಲುವ ಖರ್ಚು ಮತ್ತು ಸಿಪ್ಪೆ ತೆಗೆಯುವಾಗ ಸಂಭವಿಸುವ ನಷ್ಟವೂ ಕಡಿಮೆಯಾಗುತ್ತದೆ.

ಕ್ಷಾರ ದ್ರಾವಣದಲ್ಲಿ ಮುಳುಗಿಸಲು ಸರಳರೀತಿಯಿಂದ ಮೊದಲ್ಗೊಂಡು ಸ್ವಯಂಚಾಲಿತ ಯಂತ್ರಗಳವರೆಗೆ ಅನೇಕ ಮಾದರಿಯ ಉಪಕರಣಗಳು ಬಳಕೆಯಲ್ಲಿವೆ. ದ್ರಾವಣವನ್ನು ತೆರೆದ ಕಬ್ಬಿಣದ ಕಡಾಯಿಗಳಲ್ಲಿ ಹಾಕಬೇಕು. ಅನಂತರ ಹಣ್ಣುರಸ ಮತ್ತು ತರಕಾರಿಗಳನ್ನು ಕಬ್ಬಿಣದ  ಬುಟ್ಟಿಗಳಲ್ಲಿಟ್ಟು ದ್ರಾವಣದೊಲಗೆ ಮುಳುಗಿಸಬೇಕು. ಇದು ಅತೀ ಸರಳ ರೀತಿಯ ವಿಧಾನವೆನ್ನಬಹುದು. ಅಲ್ಯೂಮಿನಿಯಂ ಲೋಹವು ಸೋಡಿಯಂ ಹೈಡ್ರಾಕ್ಸೈಡಿನ ಜೊತೆ ಪ್ರತಿಕ್ರಿಯೆ ನಡೆಸುತ್ತದೆ. ಆದುದರಿಂದ ಕ್ಷಾರ ದ್ರಾವಣದಲ್ಲಿ ಮುಳುಗಿಸುವಾಗ ಅಲ್ಯೂಮಿನಿಯಂ ಲೋಹದ ಉಪಕರಣಗಳನ್ನು ಬಳಸಬಾರದು.

ಕ್ಷಿಪ್ರವಾಗಿ ಸ್ವಲ್ಪ ಬೇಯಿಸಿ, ಸಿಪ್ಪೆ ತೆಗೆಯುವುದು : ಹಣ್ಣು ಮತ್ತು ತರಕಾರಿಗಳನ್ನು ಡಬ್ಬಿಯಲ್ಲಿ ಸಂಸ್ಕರಿಸುವ ಮೊದಲು ಕುದಿಯುವ ನೀರು ಅಥವಾ ಉಗಿಯಲ್ಲಿ ಕ್ಷಿಪ್ರವಾಗಿ ಸ್ವಲ್ಪಕಾಲ ಬೇಯಿಸಿ ತಣ್ಣಗೆ ಆರಿಸಬೇಕು. ಇದರಿಂದ ಸಿಪ್ಪೆಯು ಸಡಿಲವಾಗುತ್ತದೆ. ಬೀಟ್‌ರುಟ್ ಮತ್ತು ಟೊಮೆಟೊಗಳಲ್ಲಿ ಇದು ವಿಶೇಷವಾಗಿ ಉಪಯುಕ್ತವೆನಿಸಿದೆ. ಆಹಾರವನ್ನು ಡಬ್ಬಿಗಳಲ್ಲಿ ಒತ್ತೊತ್ತಾಗಿ ತುಂಬಲೂ ಸಾಧ್ಯವಾಗುತ್ತದಲ್ಲದೆ, ಹಣ್ಣು ತರಕಾರಿಗಳ ಊತಕ (ಅಂಗಾಂಶ)ಗಳಲ್ಲಿರುವ ಗಾಳಿಯೂ ಹೊರದೂಡಲ್ಪಡುತ್ತದೆ. ಇದು ಆಹಾರ ಪದಾರ್ಥಗಳನ್ನು ಶುಚಿಮಾಡುವುದಲ್ಲದೆ, ಸೂಕ್ಷ್ಮ ಜೀವಿಗಳನ್ನು ಬೇರ್ಪಡಿಸುತ್ತದೆ. ಶಾಖದ ಕ್ರಿಯೆಯಿಂದ ಕಿಣ್ವಗಳೂ ನಿಷ್ಕ್ರಿಯೆಗೊಳ್ಳುವವು.  ಹಣ್ಣು ಮತ್ತು ತರಕಾರಿಗಳು ಬಣ್ಣ ಬದಲಾಗುವುದನ್ನೂ ಇದು ತಡೆಯಬಲ್ಲದು. ಅಹಿತಕರವಾದ ರುಚಿಯನ್ನುಂಟುಮಾಡುವ ಮೂಲವಸ್ತುಗಳು ಮತ್ತು ಒಗಚನ್ನು ತೆಗೆಯುವುದಲ್ಲದೆ ಪರಿಮಳವೂ ಸಹ ಇದರಿಂದ ಉತ್ತಮಗೊಳ್ಳುವುದು.

ಸಣ್ಣ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವಲ್ಲಿ ಕ್ಷಿಪ್ರವಾಗಿ ಸ್ವಲ್ಪ ಬೇಯಿಸಬೇಕಾದ ಹಣ್ಣು ಮತ್ತು ತರಕಾರಿಗಳನ್ನು ಒಂದು ತಂತಿಯ ಬುಟ್ಟಿಯಲ್ಲಿಡುತ್ತಾರೆ. ಈ ಬುಟ್ಟಿಗಳನ್ನು ಸ್ವಲ್ಪ ಸಮಯ ಅಂದರೆ ೨-೫ ನಿಮಿಷಗಳ ಕಾಲ ಬಿಸಿನೀರಿನಲ್ಲಿ ಮುಳುಗಿಸಿಡುತ್ತಾರೆ. ಇದಾದ ನಂತರ ತಣ್ಣೀರಿನಲ್ಲಿಟ್ಟು ತೆಗೆಯುತ್ತಾರೆ. ಕ್ಷಿಪ್ರವಾಗಿ ಸ್ವಲ್ಪ ಕಾಲ ಬೇಯಿಸುವ ವಿಧಾನಕ್ಕೆ ಕಠಿಣ (ಗಡಸು) ನೀರನ್ನು ಉಪಯೋಗಿಸಬಾರದು. ಇದರಿಂದ ಹಣ್ಣು ಮತ್ತು ತರಕಾರಿಗಳ ಅಂಗಾಂಶಗಳು ಬಿರುಸುಗೊಳ್ಳುವುದಲ್ಲದೆ ಪದಾರ್ಥದ ಸಹಜ ರಚನಾಕ್ರಮವೂ ನಾಶವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವಾಗ ಒಂದು ಚಲಿಸುವ ಪಟ್ಟಿಯ ಮೂಲಕ ಹಣ್ಣು ಮತ್ತು ತರಕಾರಿಗಳು ಒಯ್ಯಲ್ಪಡುತ್ತವೆ. ಈ ಪಟ್ಟಿಯು ಕುದಿಯುವ ನೀರು ಅಥವಾ ಉಗಿಯಲ್ಲಿ ಹಾದು ಹೋಗುತ್ತದೆ. ಆಗ ಹಣ್ಣು ಮತ್ತು ತರಕಾರಿಗಳು ಕ್ಷಿಪ್ರವಾಗಿ ಸ್ವಲ್ಪ ಬೇಯುತ್ತವೆ.

) ಡಬ್ಬಿಗಳಲ್ಲಿ ತುಂಬುವುದು : ಡಬ್ಬಿಯಲ್ಲಿರುವ ಬಾಹ್ಯವಸ್ತುಗಳಾದ ಧೂಳು ಮೊದಲಾದವುಗಳನ್ನು ತೆಗೆಯಲು ನೀರಿನಲ್ಲಿ ತೊಳೆಯಬೇಕು. ಅದಿಲ್ಲದಿದ್ದರೆ ಉಗಿಯ ಚಿಮ್ಮುವಿಕೆಗೆ ಒಳಪಡಿಸಬೇಕು. ದೊಡ್ಡ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವಾಗ ಡಬ್ಬಿಯನ್ನು ಒತ್ತಡದಿಂದ ಬಿಟ್ಟ ಗಾಳಿ ಇಲ್ಲವೇ ತುಂತುರಾಗಿ ಚಿಮ್ಮುವ ನೀರಿನಿಂದ ತೊಳೆಯಬಹುದು. ನಮ್ಮ ದೇಶದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವ ಕಾರ್ಖಾನೆಗಳು ಹೆಚ್ಚಿಗೆ ಅಭಿವೃದ್ಧಿ ಹೊಂದಿಲ್ಲ. ಆದುದರಿಂದ ಅಧಿಕ ಬೆಲೆಯ ಯಂತ್ರೋಪಕರಣಗಳನ್ನು ಉಪಯೋಗಿಸುವುದೂ ಸಾಧ್ಯವಿಲ್ಲ. ಇದಕ್ಕೆ ಬದಲಾಗಿ ತೊಟ್ಟಿಗಳಲ್ಲಿ ಬಿಸಿನೀರಿಟ್ಟು ಅದರಲ್ಲಿ ಖಾಲಿಡಬ್ಬಿಗಳನ್ನು ತೊಳೆಯುತ್ತಾರೆ. ಕೇವಲ ಕೆಲವು ಕಾರ್ಖಾನೆಗಳಲ್ಲಿ ಮಾತ್ರ ಉಗಿಯನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಸಾದಾ ಡಬ್ಬಿಗಳನ್ನೇ ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು. ಆದರೆ ಕೆಂಪುದ್ವೀಪ, ದ್ರಾಕ್ಷಿ (ಪ್ಲಂ), ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ ಇವೇ ಮೊದಲಾದ ಬಣ್ಣದ ಹಣ್ಣುಗಳ ಮಟ್ಟಿಗೆ ಅರಗಿನ ಲೇಪನವಿರುವ ಡಬ್ಬಿಗಳನ್ನು ಉಪಯೋಗಿಸುವುದು ಅಪೇಕ್ಷಣೀಯ. ಡಬ್ಬಿಯಲ್ಲಿ ತುಂಬಲು ಸ್ವಯಂ ಚಾಲಿತ ಯಂತ್ರಗಳು ಅನೇಕ ದೇಶಗಳಲ್ಲಿ ಪ್ರಚಾರದಲ್ಲಿವೆ. ಇವುಗಳನ್ನು ಹೆಚ್ಚಾಗಿ ದೊಡ್ಡ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವ ಕಾರ್ಖಾನೆಯಲ್ಲಿ ಕಾಣಬಹುದು. ಆಯ್ಕೆ ಮಾಡಿದ ಉತ್ತಮ ಮಟ್ಟದ ಹಣ್ಣುಗಳನ್ನು ಕೈಯಿಂದ ತುಂಬುವುದೇ ಒಳ್ಳೆಯದು. ಇದರಿಂದ ಹಣ್ಣುಗಳು ಜಜ್ಜಿ ಹೋಗುವುದಿಲ್ಲ. ಅಲ್ಲದೆ, ಸರಿಯಾಗಿ ವಿಂಗಡಣೆಗೊಂಡ ಪ್ಯಾಕನ್ನು ಪಡೆಯಬಹುದು. ನಮ್ಮ ದೇಶದಲ್ಲಿ ಕೈಯಿಂದ ತುಂಬುವುದೇ ವಾಡಿಕೆಯಾಗಿದೆ.

ಸಕ್ಕರೆ ಪಾಕ ಅಥವಾ ಉಪ್ಪಿನ ದ್ರಾವಣ ಸೇರಿಸುವುದು : ಡಬ್ಬಿಗಳಲ್ಲಿ ತುಂಬುವಾಗ ಹಣ್ಣುಗಳಿಗೆ ಬಿಸಿ ಸಕ್ಕರೆ ಪಾಕವನ್ನೂ ತರಕಾರಿಗಳಿಗೆ ಉಪ್ಪಿನ ದ್ರಾವಣವನ್ನೂ ಸೇರಿಸುವುದರಿಂದ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥದ ರುಚಿಯು ಸುಧಾರಿಸುತ್ತದೆ.  ಇದಲ್ಲದೆ ಡಬ್ಬಿಯ ಒಳಭಾಗದಲ್ಲಿ ಹಣ್ಣು ಅಥವಾ ತರಕಾರಿಗಳ ಮಧ್ಯೆ ಬಿಟ್ಟಿರುವ ಖಾಲಿ ಜಾಗವೂ ತುಂಬುತ್ತದೆ. ಇದರಿಂದ ಸಂಶ್ಕರಿಸಲೂ ಸಹ ಅನುಕೂಲವಾಗುತ್ತದೆ. ಸಕ್ಕರೆಪಾಕ ಅಥವಾ ಉಪ್ಪಿನ ದ್ರಾವಣವನ್ನು ೧೭೫ -೧೮೦  ಫ್ಯಾ. ಉಷ್ಣತೆಯಲ್ಲಿ ತುಂಬಬೇಕು. ಡಬ್ಬಿಯ ಮುಚ್ಚಳದಡಿ ಸಾಕಷ್ಟು ಖಾಲಿ ಜಾಗವನ್ನು ಬಿಟ್ಟಿರಬೇಕು. ಡಬ್ಬಿಯನ್ನು ತುಂಬಿ ಸಂಪೂರ್ಣ ಮುಚ್ಚಿದ್ದಾಗ ಮುಚ್ಚಳದಡಿ ೧/೮ – ೩/೧೬ ದಷ್ಟು ಖಾಲಿ ಜಾಗವಿರಬೇಕು.

ದೊಡ್ಡ ಪ್ರಮಾಣದಲ್ಲಿ ಡಬ್ಬಿಯಲ್ಲಿ ಸಂಸ್ಕರಿಸುವ ದೇಶಗಳಲ್ಲಿ ಸಕ್ಕರೆಪಾಕ ಅಥವಾ ಉಪ್ಪಿನ ದ್ರಾವಣವನ್ನು ಸ್ವಯಂಚಾಲಿತ ಯಂತ್ರಗಳಿಂದಲೇ ತುಂಬುತ್ತಾರೆ.  ಈ ಯಂತ್ರಗಳ ಗಾತ್ರ ಮತ್ತು ಮಾದರಿಗಳಲ್ಲಿ ವೈವಿದ್ಯತೆಯಿರುತ್ತದೆ. ಸಕ್ಕರೆಪಾಕ ತುಂಬುವ ಈ ಸರಳಯಂತ್ರದ ಗಾತ್ರವು ೫೦ ಗ್ಯಾಲನ್ ಇರುತ್ತದೆ. ಇದು ಸ್ಟೇನ್‌ಲೇಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂನಿಂದ ತಯಾರಿಸಿದ ತೊಟ್ಟಿಯಂತಿರುತ್ತದೆ. ಇನ್ನೊಂದು ಮಾದರಿಯ ಯಂತ್ರದಲ್ಲಿ ಸಕ್ಕರೆಪಾಕ ತುಂಬಲು ಸಮಮಟ್ಟದಲ್ಲಿ ಜೋಡಿಸಿದ ಕೊಳವೆಗಳಿರುತ್ತವೆ. ಈ ಕೊಳವೆಯಲ್ಲಿರುವ ಸಾಲಾದ ರಂಧ್ರಗಳಿಂದ ಸಕ್ಕರೆಪಾಕ ಹರಿದುಬಂದು ಡಬ್ಬಿಗಳಲ್ಲಿ ತುಂಬುತ್ತದೆ. ಪಾಕದ ಕೊಳವೆಯ ಕೆಳಗೆ ಒಂದು ಪಟ್ಟಿ ನಿರಂತರವಾಗಿ ಚಲಿಸುತ್ತಿರುತ್ತದೆ. ಅದರ ಮೇಲೆ ಡಬ್ಬಿಗಳು ಓರೆಯಾಗಿ ಚಲಿಸುತ್ತಿರುವಾಗ ತುಂಬಿಕೊಳ್ಳುತ್ತವೆ. ಡಬ್ಬಿಗಳಲ್ಲಿ ತುಂಬಿ ಹರಿದ ಸಕ್ಕರೆ ಪಾಕವನ್ನು ಕೇಂದ್ರಾಪಗಾಮಿ ಪಂಪಿನಿಂದ ಸಕ್ಕರೆಪಾಕದ ತೊಟ್ಟಿಗೆ ರವಾನಿಸಲಾಗುತ್ತದೆ.

) ಮುಚ್ಚಳ ಹಾಕುವುದು : ಹಿಂದಿನ ಕಾಲದಲ್ಲಿ ಆಹಾರಪದಾರ್ಥಗಳನ್ನು ಡಬ್ಬಿಗಳಲ್ಲಿ ತುಂಬಿದ ನಂತರ ಅದರ ಮುಚ್ಚಳವನ್ನು ಸಡಿಲವಾಗಿರಿಸಿ ನಿರ್ವಾತಗೊಳಿಸಲಾಗುತ್ತಿತ್ತು. ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸುವಾಗ ಒಳಗಿನ ಪದಾರ್ಥ ಹೊರಗೆ ಚೆಲ್ಲುವುದು, ಮುಚ್ಚಳ ಜೋಡಿಸಲು ಕ್ಲಿಂಚಿಂಗ್ ಎಂಬ ನವೀನ ವಿಧಾನ ಬಳಕೆಗೆ ಬಂದಿದೆ.  ಈ ವಿಧಾನದಲ್ಲಿ ಮುಚ್ಚಳದ ಅಂಚನ್ನು ದ್ವಿಅಂಚು ಸೇರಿಸುವ ಯಂತ್ರದ ಒಂದನೇ ಉರುಳೆಯಿಂದ ಭಾಗಶಃ ಸೇರಿಸಬೇಕು. ಆಹಾರದ ಮಧ್ಯ ಹರಡಿರುವ ಮತ್ತು ಕರಗಿರುವ ಗಾಳಿ ಹೊರಗೆ ತಪ್ಪಿಸಿಕೊಂಡು ಹೋಗಲು ಮುಚ್ಚಳದಲ್ಲಿ ಸಾಕಷ್ಟು ಅವಕಾಶವಿರುತ್ತದೆ. ಡಬ್ಬಿಯನ್ನು ನಿರ್ವಾತಗೊಳಿಸುವಾಗ ಉಂಟಾಗುವ ಆವಿಯೂ ಇದರ ಮೂಲಕವೇ ಹೊರಗೇ ಹೋಗುವುದು. ಕ್ಲಿಂಚಿಂಗ್ ಯಂತ್ರದಲ್ಲಿ ಲೆಕ್ಕ ಮಾಡುವ ಮತ್ತು ಸಂಕೇತ ಸೂಚಿಸುವ ಯೋಗ್ಯ ರಚನೆಗಳನ್ನು ಸಾಧಾರಣವಾಗಿ ಅಳವಡಿಸಲಾಘುತ್ತದೆ.

) ನಿರ್ವಾತಗೊಳಿಸುವುದು : ಡಬ್ಬಿಗಳನ್ನು ಮುಚ್ಚುವ ಮೊದಲು ಒಳಗಿನ ಪದಾರ್ಥಗಳಲ್ಲಿರುವ ಗಾಳಿಯನ್ನು ಹೊರದೂಡಬೇಕು. ಇದಕ್ಕೆ ನಿರ್ವಾತಗೊಳಿಸುವುದು ಎನ್ನುತ್ತಾರೆ. ಧಾರಕಗಳಲ್ಲಿರುವ ಗಾಳಿಯನ್ನು ಹೊರಗೆ ದೂಡಿದರೆ ತವರದ ತಗಡಿಗೆ ತುಕ್ಕು ಹಿಡಿಯುವ ಅಪಾಯವಿರುವುದಿಲ್ಲ. ಅಲ್ಲದೆ ದಾಸ್ತಾನಿನಲ್ಲಿ ಸೂಜಿಗಾತ್ರದ ರಂಧ್ರಗಳಾಗುವುದು ಮತ್ತು ಪದಾರ್ಥದ ಬಣ್ಣ ಬದಲಾಗುವುದು ಕಡಿಮೆಯಾಗುತ್ತದೆ. ಗಾಳಿಯ ಸಂಪರ್ಕವಿಲ್ಲದಿದ್ದರೆ ಉತ್ಕರ್ಷಣ ಕ್ರಿಯೆ ಸ್ಥಗಿತಗೊಳ್ಳುತ್ತದೆ. ಡಬ್ಬಿಯಲ್ಲಿರುವ ಸಕ್ಕರೆಪಾಕ ಅಥವಾ ಉಪ್ಪಿನ ದ್ರಾವಣದ ಉಷ್ಣತೆ  ೧೭೫ -೧೮೦  ಫ್ಯಾ. ಗೆ ತಲುಪಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಗಾಳಿಯನ್ನು ಹೊರದೂಡುವುದರಿಂದ ವಿಟಮಿನ್‌ಗಳಿಗೆ ಹೆಚ್ಚಿನ ಧಾರಣಶಕ್ತಿ ಬರುತ್ತದೆ.  ಅದರಲ್ಲೂ ವಿಶೇಷವಾಗಿ ವಿಟಮಿನ್ ‘ಸಿ’ ಗೆ ಹೆಚ್ಚು ಸಹಕಾರಿಯಾಗಿದೆ. ಕೆಲವು ಹಣ್ಣು ಮತ್ತು ತರಕಾರಿಗಳು ಬಿಸಿಯಾದಾಗ ಉಬ್ಬುತ್ತವೆ. ಇಲ್ಲವೆ ಸುಕ್ಕುಗಟ್ಟುತ್ತವೆ. ಡಬ್ಬಿಗಳನ್ನು ನಿರ್ವಾತಗೊಳಿಸುವುದರಿಂದ ಅವುಗಳಲ್ಲಿ ಆಹಾರ ಪದಾರ್ಥಗಳನ್ನು ಸರಿಯಾಗಿ ತುಂಬಬಹುದು. ಉದಾ : ಮೆಕ್ಕೆ ಜೋಳ ಮತ್ತು ಬಟಾಣಿಗಳನ್ನು ಉಪ್ಪಿನ ದರಾವಣದಲ್ಲಿ ಕುದಿಸಿದಾಗ ಹಿಗ್ಗುತ್ತವೆ. ಸ್ಟ್ರಾಬೆರಿಯನ್ನು ಸಕ್ಕರೆ ಪಾಕದಲ್ಲಿ ಬಿಸಿ ಮಾಡಿದಾಗ ಸುಕ್ಕುಗಟ್ಟುತ್ತದೆ. ನಿರ್ವಾತಗೊಳಿಸುವುದರಿಂದ ಇತರ ಅನುಕೂಲತೆಗಳೆಂದರೆ ಡಬ್ಬಿಗಳನ್ನು ಎತ್ತರ ಪ್ರದೇಶಗಳಲ್ಲಿ ಮತ್ತು ಬಿಸಿಯಾದ ವಾತಾವರಣದಲ್ಲಿ ದಾಸ್ತನು ಮಾಡಿದಾಗ ಉಬ್ಬದಂತೆ ತಡೆಯುವುದು. ಧಾರಕ ಮತ್ತು ತುಂಬಿದ ಆಹಾರದೊಡನೆ ಆಗುವ ರಾಸಾಯನಿಕ ಪ್ರತಿಕ್ರಿಯೆಯನ್ನು ಕಡಿಮೆ ಮಾಡುವುದು ಮತ್ತು ಸೂಕ್ಷ್ಮ ಜೀವಿ ನಾಶಕ್ರಿಯೆಯಲ್ಲಾಗುವ ಅತಿಯಾದ ಒತ್ತಡ ಮತ್ತು ಶ್ರಮವನ್ನು ತಡೆಯುವುದರಿಂದಾಗಿರುತ್ತದೆ. ಹಣ್ಣು ಮತ್ತು ತರಕಾರಿಗಳು ಕೆಲವು ವೇಳೆ ಡಬ್ಬಿಯ ಲೋಹದೊಡನೆ ಪ್ರತಿಕ್ರಿಯೆ ನಡೆಸುವವು. ಇದರಿಂದ ಜಲಜನಕ ಅನಿಲವು ಉತ್ಪಾದನೆಯಾಗುತ್ತದೆ. ತತ್ಫಲವಾಗಿ ಡಬ್ಬಿಯ ಒಳಗಿನ ಒತ್ತಡವು ಹೆಚ್ಚುತ್ತದೆ. ಡಬ್ಬಿಯ ಒಳಗ ಗಾಳಿಯಿದ್ದರೆ ಉಬ್ಬುವುದು ಬಹು ಬೇಗನೇ ವ್ಯಕ್ತವಾಗುತ್ತದೆ. ಇದರಿಂದ ಡಬ್ಬಿಯಲ್ಲಿ ಸಂಸ್ಕರಿಸಿದ ಪದಾರ್ಥದ ಗುಣಮಟ್ಟ ದೋಷಪುರಿತವಾಗಿ ಮಾರುವುದಕ್ಕೆ ಅಯೋಗ್ಯವೆಂದು ಪರಿಗಣಿಸಲ್ಪಡುತ್ತದೆ.

ಡಬ್ಬಿಯನ್ನು ನಿರ್ವಾತಗೊಳಿಸಿದ ಅನಂತರವೂ ಅದರಲ್ಲಿಯ ಗಾಳಿಶೂನ್ಯತೆಯು ಅನೇಕ ಅಂಶಗಳನ್ನು ಎಂದರೆ ನಿರ್ವಾತಗೊಳಿಸಲು ಬೇಕಾದ ಸಮಯ ಮತ್ತು ಉಷ್ಣತೆ, ಡಬ್ಬಿಯ ಮುಚ್ಚಳದಡಿಯ ಖಾಲಿಜಾಗ, ಪ್ರದೇಶದ ಎತ್ತರ ಇವೇ ಮೊದಲಾದವುಗಳನ್ನು ಅವಲಂಬಿಸಿರುತ್ತದೆ. ನಿರ್ವಾತಗೊಳಿಸುವ ಉಷ್ಣತೆ ಅಧಿಕವಾದಷ್ಟು ಡಬ್ಬಿಯೊಳಹೆ ನೀರಿನ ಆವಿಯ ಪರಿಣಾಮವೂ ಹೆಚ್ಚಾಗುತ್ತದೆ. ಇದರಿಂದ ಡಬ್ಬಿಯೊಳಗಿನ ಉಂಟಾಗುತ್ತದೆ. ಡ್ಬಿಗಳನ್ನು ಕಡಿಮೆ ಉಷ್ಣತೆಯಲ್ಲಿ ಹೆಚ್ಚು ಸಮಯ ನಿರ್ವಾತಗೊಳಿಸುವುದು ಒಳ್ಳೆಯದು.ಇದರಿಂದ ಒಳಗಿನ ಆಹಾರ ಏಕಪ್ರಕಾರವಾಗಿ ಉಷ್ಣತೆಯನ್ನು ಪಡೆಯುತ್ತವೆ. ಒಳಗಿನ ಪದಾರ್ಥವ ತಿರುಳಿನಂತೆ ಮೆದುವಾಗುವುದೂ ಇಲ್ಲ. ಡಬ್ಬಿಗಳನ್ನು ಮುಚ್ಚಿದ ಮೇಲೆ ಮುಚ್ಚಳದಡಿಯಲ ಖಾಲಿಜಾಗ ನಿರ್ವಾತದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಮುಚ್ಚಳದಡಿಯ ಖಾಲಿಜಾಗ ಕಡಿಮೆಯಾದಷ್ಟು  ಒಳಗಿನ ನಿರ್ವಾತವೂ ಹೆಚ್ಚುತ್ತದೆ. ಡಬ್ಬಿಯ ಒಳಗಿನ ನಿರ್ವಾತವು ಮತ್ತು ಹೊರಗಿನ ವಾತಾವರಣದ ಒತ್ತಡದ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಒಂದು ಪ್ರದೇಶದ ಎತ್ತರವೂ ಕೂಡ ಡಬ್ಬಿಯ ನಿರ್ವಾತದ ಮೇಲೆ ಪರಿಣಾಮವನ್ನುಂಟುಮಾಡಬಲ್ಲದು. ತಗ್ಗಾದ ಪ್ರದೇಶದಲ್ಲಿ ಮುಚ್ಚಿದ ಡಬ್ಬಿಯನ್ನು ಎತ್ತರ ಪ್ರದೇಶಕ್ಕೆ ಒಯ್ದಾಗ ಕಡಿಮೆ ನಿರ್ವಾತ (ಶೂನ್ಯತೆ) ಯನ್ನು ತೋರಿಸುತ್ತದೆ. ಹಾಗೆಯೇ ಎತ್ತರ ಪ್ರದೇಶದಲ್ಲಿ ಮುಚ್ಚಿ ಮೊಹರು ಮಾಡಿದ ಡಬ್ಬಿಯನ್ನು ತಗ್ಗುಪ್ರದೇಶಕ್ಕೆ ತಂದಾಗ ಹೆಚ್ಚಿನ ಶೂನ್ಯತೆ ಕಂಡು ಬರುತ್ತದೆ. ಶೂನ್ಯತೆ ಕಡಿಮೆಯಿರುವ ಡಬ್ಬಿಗಳು ಎತ್ತರಪ್ರದೇಶದಲ್ಲಿ ‘ಸ್ಟ್ರಂಗರ್ಸ್’ ಆಗುತ್ತವೆ. ಆದರೂ ಡಬ್ಬಿಯ ಒಳಗಿನ ಪದಾರ್ಥಗಳು ಮಾತ್ರ ಖಾದ್ಯಯೋಗ್ಯವಾಗಿರುತ್ತವೆ.