ರಾಗ ಭೈರವಿ ಅಷ್ಟತಾಳ

ಕೇಳುತಲಾ ನುಡಿಯ | ಪೇಳಿದನೆಲೆ | ಖೂಳನೆ ನಿನ್ನೆದೆಯ ||
ಸೀಳಿ ರಕ್ತದಿ ಗಣ | ಜಾಲವ ದಣಿಸುತ್ತ | ಪಾಲಿಪೆ ನಾನೀಕೆಯ || ||೨೦೦||

ನೀತಿಯ ಮಾತಿನೊಳು | ತಿಳಿಯೆ ಹುಲು | ಕೋತಿಯೆ ಸಮರದೊಳು ||
ಈ ತತೂಕ್ಷಣ ತೋರ್ಪೆನೆನುತಲೆಚ್ಚನು ಶರ | ವ್ರಾತವ ಮುನಿಸಿನೊಳು || ||೨೦೧||

ಬಿಟ್ಟ ಶರಂಗಳನು | ತುಂಡಿಸಿ ಕಲ್ಲು | ಬೆಟ್ಟ ವೃಕ್ಷಂಗಳನು ||
ಇಟ್ಟಡೆ ಶಿರಕೆ ಕಂಗೆಟ್ಟು ಮೂರ್ಛಿತನಾಗಿ | ಸೃಷ್ಟಿಯೊಳೊರಗಿದನು || ||೨೦೨||

ಕಂದ

ಖಳ ಮೂರ್ಛೆಯನಾಂತಿರಲಾ
ತಿಳುಹುತ ನಲು ಧೈರ್ಯದಿಂದಲಾ ಅಂಜನೆಯಂ
ನಿಳಯಕೆ ಕೇಸರಿಯಂ ಜತೆ
ಗೊಳಿಸುತ ಮರಳಿಸಲಿಕೆದ್ದು ದುರುಳಂ ಪೇಳ್ದಂ || ||೨೦೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಭಳಿರೆ ಮೆಚ್ಚಿದೆ ನಿನ್ನ ಸತ್ವಕೆ |
ಗೆಲಿದೆನೆನುತಲಿ ಹಿಗ್ಗದಿರು ರಣ |
ಕಳುಕುವೆನೆ ನಾ ತೋರಿಸೈ ಕೈ | ಚಳಕವೆಂದ || ||೨೦೪||

ಪ್ರಾಣಮಾತ್ರದಿ ಬಿಟ್ಟೆನೊಮ್ಮೆಗೆ |
ಜಾಣತನ ನುಡಿಯದಿರು ನಿನ್ನಯ |
ಸ್ಥಾನ ಸೇರುತ ಬಾಳು ಎನ್ನಯ | ಧ್ಯಾನದಿಂದ || ||೨೦೫||

ವೀರರಿಗೆ ಜಯವಪಜಯಂಗಳು |
ಸೇರುವಂದವು ಸಹಜ ಹಗೆಯಿದು |
ತೀರದೈ ಓರುವನ ಪ್ರಾಣವ | ಹೀರುವನಕ || ||೨೦೬||

ಒಳ್ಳಿತಾದುದು ನಿನ್ನೆಣಿಕೆಯೆ |
ನ್ನಲ್ಲಿ ಬಲ ತೋರೆನುತ ಬಲು ಬಗೆ |
ಯಲ್ಲಿ ಸೆಣಸಲು ದಣಿದ ಖಳ ರಣ | ಮಲ್ಲನಿದಿರು || ||೨೦೭||

ವಾರ್ಧಕ

ಸತ್ತ್ವವಂತನು ಇವನ ಗೆಲಲು ಯತ್ನದೊಳೊಂದು
ಕತ್ತಲೆಯ ಠಾಣದಲಿ ಹೀರುವೆನು ಪ್ರಾಣವೆ
ನ್ನುತ್ತ ಸುಳಿ ಸುಳಿದು ಹಿಂದೈದಿ ಪೊಕ್ಕನು ಮಹಾ ಗುಹೆವೊಂದ ತಿಳಿವುತದನು |
ಎತ್ತ ಪೋದರು ನಿನ್ನ ಬಿಡೆನೆನುತಲಾ ವಾಲಿ
ಒತ್ತಿನವಗೆಂದು ದುಷ್ಟನ ಸದೆದು ಬರುವನಕ
ನಿತ್ತುಕೊಂಡೆಚ್ಚರದೊಳಿರು ಓಡದಂದದಿಂದೆನುತುಸುರಿ ಒಳಪೊಕ್ಕನು || ||೨೦೮||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ಆತನೊಳ್ ಕೆಲಕಾಲ ಸೆಣಸಿ ಕೆಡಹಿ ನಾನಾ |
ರೀತಿಯಿಂ ಹಿಂಸಿಸುತಿರಲು ||
ಹಾ ತಮ್ಮ ಸುಗ್ರೀವ ಉಳಿವಿಲ್ಲವೆನ್ನುತ |
ಯಾತುಧಾನನು ಪ್ರಾಣ ಬಿಡಲು || ||೨೦೯||

ಈ ತೆರ ದುರ್ನುಡಿಯಾಲಿಸುತಲಿ ಭಾನು |
ಜಾತ ದುಃಖಿಸಿದನಗ್ರಜನ ||
ಘಾತಿಸಿದನೆ ತಂತ್ರದಿಂದ ಗುಹೆಯ ಒಳ |
ಗ್ಯಾತಕೈದಿದ ದುಷ್ಟನೊಡನೆ || ||೨೧೦||

ಮೇಲುವರಿಯೆ ಕ್ಷಣ ಕಾಲವಾದರು ಎನ್ನ |
ಬಾಳಲು ಬಿಡನೆಂದು ಜವದಿ ||
ಕೀಳುತ ಗಿರಿಯಿಂದ ಬಿಲದ್ವಾರ ಬಂಧಿಸು |
ತಾಲಯಕೈದೆಲ್ಲರ್ಗುಸುರಿ || ||೨೧೧||

ಚಿಂತೆಯೊಳಿರ್ಪರ ಸಂತವಿಸುತ್ತಲಾ |
ನಂತರ ಸಂಸ್ಕಾರ ನಡೆಸಿ ||
ಕಾಂತೆ ರುಮೆಯು ತಾರೆ ಸಹಿತಾತನಧಿಕಾರ |
ವಂ ತಾನು ನಡುಸುತಲಿರ್ದ || ||೨೧೨||

ರಾಗ ಮಾರವಿ ಏಕತಾಳ

ರಣವೆಸಗುತ ಬಲು | ದಣಿದ ವಾಲಿ ಕೆಲ |
ದಿನ ಸಂದರು ತಿಳಿ | ಯನು ಕತ್ತಲೆಯಲಿ |
ತನು ಮುರಿದೆದ್ದಾ | ಕ್ಷಣ ಮೇಲ್ವರಿಯುವೆ |
ನೆನುತಲಿರದೆ ಪಥ | ವನ್ನರಸುತ್ತಲೆ | ಸುತ್ತುತಿರ್ದ || ||೨೧೩||

ಬಳಲಿದುದಲ್ಲದೆ | ಇಳೆಗೈದುವ ಬಗೆ |
ತಿಳಿಯದಾಗಲಾ | ಮುಳಿಸಿಂದಲೆ ಸಿರ |
ಗಳನೋಲ್ ಕನಲುತ | ತುಳಿಯಲೊಂದು ಕಡೆ |
ಯೊಳು ಭರದಲಿ ಗಿರಿ | ಕಳಚಿದುದಾ ಕ್ಷಣ | ದ್ವಾರಮಾಗೆ || ||೨೧೪||

ವಾರ್ಧಕ

ಶರಧಿಯಿಂದೇಳ್ವ ವಡಬಾಗ್ನಿಯಂದದೊಳಾತ
ಪೊರಮಡುತಲೊಂದು ನೆಗೆತದಲಿ ಮಂದಿರದ ಬಳಿ
ಸರಿದು ತಾರೆ ರುಮೆಯರೊಡನಾನಂದದಿಂದಿನಜನಿರುತಿರಲ್ಕೆ |
ಉರಿವ ಪಾವಕಗೆ ಘೃತ ಸುರಿದಂತೆ ಖಾತಿ ಮೇ
ಲ್ವರಿಯೆ ವಿಷ್ಟರದೊಳಿಹ ತರಣಿತನಯಗೆ ಒದ್ದು
ಧರೆಗೆ ಕೆಡಹುತ ಭಂಗ ಬರಿಸೆ ತಡೆದರ ಜರೆದು ಸುಗ್ರೀವಗಿಂತೆಂದನು || ||೨೧೫||

ರಾಗ ಮಾರವಿ ಏಕತಾಳ

ಕುಲಕಂಟಕಿ ಎನ್ನಳಿವಿಗೆ ಯತ್ನಂ | ಗಳ ಯೋಚಿಸಿ ಕಡೆಗೆ ||
ಖಳನ ವಧೆಗೆ ಗುಹೆಯೊಳ ಪೊಗೆ ಪೊರಡದ | ಕೆಲಸಗೈದೆಯಧಮ || ||೨೧೬||

ಅನುಜನೆನುತಲನುದಿನ ಪ್ರೀತಿಯೊಳಿರೆ | ಕೆಣಕಲಂಜಿ ಗಜವ ||
ಕುಣಿಯೊಳು ಕೆಡಹಿಪುದನು ತಿಳಿದೆಸಗಿದೆ | ದಿನ ಕಡೆಯಿದು ನಿನಗೆ || ||೨೧೭||

ಭೇದವ ಸ್ವಪ್ನದೊಳಾದರೆಣಿಸದಾ | ರಾಧಿಸುವೆನು ನಿನ್ನ ||
ಕ್ರೋಧವಿದೇಕೆ ವಿರೋಧಿಯೆ ಎನ್ನೊಡ | ನಾದರವಿರಿಸಣ್ಣ || ||೨೧೮||

ರಾಗ ಕೇತಾರಗೌಳ ಝಂಪೆತಾಳ

ತುಸು ಮಾತ್ರ ಕರುಣವಿರಲು | ಗುಹೆಯ ಬಂ |
ಧಿಸುತ ಬಂದತಿ ಸುಖದೊಳು ||
ವಸುಧೆಗಧಿಕಾರಿಯೆನುತ | ನೆಲಸುವೆಯ |
ಶಶಿಮುಖಿಯರೊಡನೆ ಧೂರ್ತ || ||೨೧೯||

ಹಾ ತಮ್ಮ ಖಳನಿಂದಲಿ | ಕಡೆಯೆನುವ |
ಮಾತಾಲಿಸುತ ಭಯದಲಿ ||
ಆತ ಬರಲುಳಿಸನೆಂದು | ಇನಿತೆಸರಿ |
ನಾ ತಳುವ ಗೈದೆನಂದು || ||೨೨೦||

ತನುವಿನಾಸೆಯೊಳು ಓಡಿ | ಬಂದೆನ್ನೊ |
ಳಿನಿತು ಬೋಧಿಪೆಯ ಹೇಡಿ ||
ಕ್ಷಣಕಾಲ ಬಾಳಗೊಡೆನು | ಎಂದುಸುರಿ
ಕನಲುತವನೆಡೆಗೈದನು || ||೨೨೧||

ವಾರ್ಧಕ

ಆ ಸಮಯದಲಿ ಜಾಂಬವಾದಿಗಳು ಬೋಧಿಸಲು
ವಾಸವಾತ್ಮಜ ಜರೆಯೆ ಇರಗೊಡೆನು ಎಂದಿನಜ
ಸೂಸಿ ಕಂಬನಿಯ ಪೇಳಿದ ನಿನ್ನ ಮನಕೆ ಹಿತವಿಲ್ಲದಿರೆ ನಿಲೆನು ಮನದ |
ರೋಷ ಬಿಡು ಪೋಪೆ ಸತಿ ರುಮೆಯ ಕಳುಹಿಸು ನೀನು
ಲೇಸಾಗಿ ಅಧಿಕಾರ ನಡೆಸೆನಲು ಷಂಡ ನಿನ
ಗಾ ಸುದತಿ ಏಕೆಂದು ಜರೆದು ದಂಡಿಸುತಿರಲು ಓಡಿದಂ ಭೀತಿಯಿಂದ || ||೨೨೨||

ಆರ್ಯ ಸವಾಯ್

ಪ್ರಾಣದೊಳುಳಿದರೆ ಮಾನಿನಿಗೋಸುಗ | ತಾನೈತಹೆ ತೀರ್ಚುವೆನೆನುತ ||
ಭಾನುಸುತನ ಬೆನ್ನಟ್ಟಲು ಹಲವೆಡೆ | ತಾ ನಡೆವುತ ಬಳಲಿದನಾತ || ||೨೨೩||

ಕಾಣದೆ ಠಾವನು ಸಾರಿದ ಗುಪ್ತದೊ | ಳಾ ನಳಿನಾಪ್ತನ ಬಳಿಗಂದು ||
ತಾ ನಿಲಿಸಿದನು ಕಲಾಂಜಲಿಯೊಳಗವ | ಹಾನಿಯಪ್ಪ ಕಿರಣದೊಳೆಂದು || ||೨೨೪||

ಕಂದ

ಬಾರನು ತಾನಿಹ ಠಾವಿಗೆ
ಸಾರುತ್ತಲಿ ವೈರವಾಂತು ಹರನಂ ಸೇರ್ದರು |
ತೀರಿಸದುಳಿಯನೆನುತ್ತವ
ಭೋರನೆ ಮಂದಿರಕೆ ಸಾರ್ದು ಸುಖದಿಂದಿರ್ದಂ || ||೨೨೫||

ರಾಗ ಕಾಂಭೋಜಿ ಝಂಪೆತಾಳ

ಇತ್ತ ದುಂದುಭಿ ಸಭೆಯೊಳಿರೆ ಗುಪ್ತಚರರು ತವ |
ಪುತ್ರ ಸುರರಂ ಸದೆದನೆನಲು ||
ಮತ್ತೋರ್ವ ಬಂದು ಪೇಳಿದ ಪಗೆಗಳಾತನಂ |
ಪೃಥ್ವಿಯಲಿ ಸದೆದಿರ್ಪರೆಂದು || ||೨೨೬||

ಕೇಳಿ ಕನಲುತಲೆಂದು ಭೂಲೋಕದೊಳಗೆನ್ನ |
ಬಾಲಕನ ಗೆಲುವರಾರಿಲ್ಲ ||
ಕೀಳರಾ ಸುರರೆಮ್ಮ ಪಾಳಯವ ಸದೆದು ದಿವ |
ವಾಳುತ್ತಲಿಹರು ವೈಭವದಿ || ||೨೨೭||

ಎನ್ನ ಸೌಭಾಗ್ಯನಿಧಿ ಪೂರ್ಣ ಬಲಯುತ ಕೋಟಿ |
ಮನ್ಮಥರ ಧಿಕ್ಕರಿಪ ರೂಪ ||
ಬಣ್ಣಿಸಲಿಕಳವಲ್ಲ ಗುಣಗಳಾತಗೆ ಮೃತ್ಯು |
ವನ್ನೊದಗಿಸಿದರೆ ಅಕಟಕಟ || ||೨೨೮||

ಪಡೆದ ಪಿತನನು ಮೊದಲೆ ಮಡುಹಿದರು ಮೂಲ ಬೇ |
ರ್ಕಡಿದರೇ ಇಂದು ತಂತ್ರದಲಿ ||
ಬಡ ತ್ರಿದಶರಾತನನು ಪೊಡವಿಗಿಳಿಸುತಲಿ ಸದೆ |
ಬಡಿದರೇ ಒಡಲುರಿವುದಕಟ || ||೨೨೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸುತಗೆ ಬಲು ವಿಧ ಕೃತಕ ನಡೆಸುತ |
ಮೃತಿಗೆ ಕಾರಣನಾದ ನಿರ್ಜರ |
ಪತಿಯ ಶಿಕ್ಷಿಸದುಳಿದರೇನ್ಫಲ | ಕ್ಷಿತಿಯೊಳಾನು || ||೨೩೦||

ಖಂಡ ಪರಶುವಿನೆಡೆಯೊ ವಿಧಿಯ ಕ |
ಮಂಡಲವೊ ಎಲ್ಲಡಗಿ ಕುಳಿತರು |
ದಂಡಿಸದೆ ನಾ ಬಿಟ್ಟೆನಾದರೆ | ಗಂಡುಸಲ್ಲ || ||೨೩೧||

ಎಂದು ಶಪಥವ ನುಡಿದು ಸೇನಾ |
ವೃಂದ ಸಹ ತೆರಳುತಲಿ ಸುರರನು ||
ಹಿಂದಿರಿಸಿ ಇಂದ್ರನನು ತಡೆಯುತ | ಲೆಂದ ಮುಳಿದು || ||೨೩೨||

ರಾಗ ಭೈರವಿ ಏಕತಾಳ

ಫಡ ಸುರಪತಿ ಇಂದಿನಲಿ | ಧುರ | ತೊಡಗೈ ಎನ್ನಿದಿರಿನಲಿ ||
ನಡೆಸುತ ದುಷ್ಕೃತ್ಯವನು | ಇ | ನ್ನಡಗಲು ನಾನೆಡೆಗೊಡೆನು || ||೨೩೩||

ನಡನಡುಗುತ ಪೇಳಿದನು | ನಾ | ನಡೆಸಿದ ದ್ರೋಹಗಳೇನು ||
ಬಿಡು ಕ್ರೋಧಗಳಿನ್ನೇಕೆ | ಕೈ | ತುಡುಕದೆ ಸಲಹು ಪರಾಕೆ || ||೨೩೪||

ಎಲ್ಲವರರಿತಿಹರದನು | ಹಗೆ | ಇಲ್ಲದೆ ಸುಕುಮಾರನನು ||
ಕೊಲ್ಲಿಸಿ ಬಾಳ್ವೆಯ ಅಧಮ | ನಿ | ನ್ನಲ್ಲಿ ಇನ್ನೇತರ ಪ್ರೇಮ || ||೨೩೫||

ವಾರ್ಧಕ

ಎನಲೆಂದನಕಟ ಮಡಿದನೆ ವೀರನಳಿವಿಂಗೆ
ಕಿನಿಸ್ಯಾತಕೆನ್ನೊಡನೆ ಇಲ್ಲಿ ಗೈತರೆ ತಿಳಿದು
ಘನತರೋತ್ಸವದಿಂದ ಕರೆತಂದು ಕುಳ್ಳಿರಿಸಿ ಮನ್ನಿಸಿದೆ ಬಲು ವಿಧದಲಿ |
ಮನದಿ ಸಂತಸವಾಂತು ಭೂತಳಕ್ಕೈದಿಹಂ
ಹನನಗೈದವರಾರು ನಾಲ್ದೆಸೆಯ ಪರಿಕಿಸುವ
ಘನವಂತ ಹಿಮವಂತನಿಂದ ತಿಳಿದಪುದೆನಲು ಧರೆಗಿಳಿದು ತ್ವರಿತದಿಂದ || ||೨೩೬||

ರಾಗ ಶಂಕರಾಭರಣ ಮಟ್ಟೆತಾಳ

ಗಿರಿಯ ಬಳಿಗೆ ತೆರಳಿ ಪೇಳ್ದ ಎನ್ನ ತರಳನ
ಹರಣಗೊಂಡರಾರು ಅರುಹೆನಲ್ಕೆ ವರುಣನ ||
ಪರಿಕಿಸಿದರೆ ಖಚಿತವಪ್ಪುದೆನಲು ತ್ವರಿತದಿ ||
ಶರಧಿರಾಜನೊಡನೆ ಕೇಳೆ ನುಡಿದ ದೈನ್ಯದಿ || ||೨೩೭||

ತರಣಿ ಬಲ್ಲನೆನಲು ಪೋಗೆ ದಿನಪನೆಂದನು ||
ಬರವನರಿತೆ ವಾಲಿ ಸದೆದು ಎನ್ನ ಸುತನನು ||
ಇರಲು ಬಿಡದೆ ಪೊರಡಿಸುತ್ತ ಸತಿಯನಾಳ್ವನು |
ತ್ವರಿಯದಿಂದ ತೆರಳಿ ವಧಿಸು ಹಗೆಯನೆಂದನು || ||೨೩೮||

ಭಾಮಿನಿ

ಲಾಲಿಸುತಲಾ ನುಡಿಯ ಕಲ್ಪದ
ಕಾಲಭೈರವನಂತೆ ಕನಲುತ
ವಾಲಿಯಂ ಬಿಡೆನೆಂದು ಕಿಷ್ಕಿಂಧೆಯ ಪುರಕೆ ಬರಲು |
ಓಲಗದೊಳವನಿರಲು ನಡೆದಾ
ಖೂಳನೊದೆಯುತ್ತಿರಲು ಗಣಿಸದೆ
ಬಾಲೆಯರ ಸಂತೈಸಿ ಸುರಪಕುಮಾರ ಖಳಗೆಂದ || ||೨೩೯||

ರಾಗ ಭೈರವಿ ಏಕತಾಳ

ಮರುಳನೊ ಮೂರ್ಖನೊ ನೀನು | ಮೃತಿ | ಯರಸುತ ಬಂದೆಯೊ ಇನ್ನು ||
ಮರಳಿ ಪೋಗಿ ಮಂದಿರದಿ | ಬಾ | ಳಿರು ಕೆಲ ದಿನ ಬಲು ಸುಖದಿ || ||೨೪೦||

ಮತಿಗೆಡುಕರ ಗುರು ನಿನಗೆ | ಮಮ | ಸುತನಂ ತರಿದಿಹ ಬಗೆಗೆ ||
ಮಥಿಸಿ ಹಗೆಯ ತೀರ್ಚದಿರೆ | ಜನ | ತತಿ ನಿಂದಿಸದುಳಿಯುವುದೆ || ||೨೪೧||

ಅರಿಯೆಯ ಎನ್ನನುಜೆಯಳ | ಮೇಲ್ | ಕರವಿಕ್ಕಿದನಾ ಖೂಳ ||
ಮರಣ ಒದಗಿತದರಿಂದ | ನೀ | ನರಿಯೆ ತೊಲಗಿ ಬಾಳೆಂದ || ||೨೪೨||

ರಾಗ ಭೈರವಿ ಅಷ್ಟತಾಳ

ಆರೊಡನೊರೆವೆ ನೀನು | ಸುವ್ರತೆಯ ವಿ | ಚಾರವ ಬಲ್ಲೆ ನಾನು ||
ಮಾರುತನಾಕೆಯ ಸೇರಿ ಪುಟ್ಟಿರುವ ಕು | ಮಾರಕನೆಂಬುದನು || ||೨೪೩||

ಈರೇಳು ಭುವನದೊಳು | ಪ್ರಾಣಾಧಾರ | ಮಾರುತನಾಗಿರಲು ||
ಕ್ರೂರ ನೀನರಿತರೆ ಓರ್ವಳ ವ್ರತಕೆಟ್ಟ | ಕಾರಣವೇನು ಪೇಳು || ||೨೪೪||

ಕೀಳು ವಾನರ ಕುಲಕೆ | ಸದ್ಧರ್ಮದ | ಶೀಲ ತಿಳಿಯದದಕೆ ||
ಕಾಳಗಕಿದಿರಾಗೆ ತೋಳ ಬಲ್ಪಿಂದ ಸ | ಮೂಲ ತಿಳಿಪೆ ನಿನಗೆ || ||೨೪೫||

ಎಂದೆಚ್ಚ ಶರಗಳನು | ಗಣಿಸದೆಲ್ಲ | ಇಂದ್ರಜ ಪುಡಿಗೈದನು ||
ಮಂದಮತಿಯು ಬೆದರದೆ ಮಲ್ಲಯುದ್ಧಕೆ | ನಿಂದು ಕಾದಾಡಿದನು || ||೨೪೬||

ವಾರ್ಧಕ

ಸೆಣಸಿದರು ಬಲು ವಿಧದಿ ಜಯ ಕಾಣದಿರಲು ಖಳ
ಮನದೊಳೆಣಿಸಿದ ಮಾಯೆಯಿಂ ಗೆಲುವೆನೆನುತಲಾ |
ಕ್ಷಣ ಬೀರಲದರಿಂದ ಪೊರಟು ನಾನಾ ಜಾತಿ ಖಗಮೃಗಗಳಿದಿರಾಗಲು |
ಗಣಿಸುವನೆ ವಾಲಿ ಪರಿಹರಿಸಲಾ ಮಧ್ಯದೊಳು
ದನುಜ ಭೀಕರ ಮಹಿಷನಾಗಿ ಮುಂಬರಿಯೆ ಮೇ
ದಿನಿಯಿಂದ ಗಗನವರೆಗಿರ್ಪ ತನು ಪರಿಕಿಸುತ ಮೂಲೋಕ ಬೆರಗಾಗಲು || ||೨೪೭||

ರಾಗ ಭೈರವಿ ತ್ರಿವುಡೆತಾಳ

ನಡೆದು ಬರಲಾ ಕಣದ ಮಧ್ಯಕೆ |
ಪೊಡವಿಯದುರಿತು ವಾಲಿ ಪರಿಕಿಸಿ |
ಸಿಡಿಲಿನಂತಾರ್ಭಟಿಸಿ ಮುಂಬರ |
ಲೆಡೆಗೊಡದೆ ಗಿರಿ ಕಲ್ಮರಗಳಿಂ |
ಹೊಡೆಯುತಿರಲದು ಕೆಡೆಯೆ ಧರೆಯಲಿ |
ಬಿಡದೆ ಮುಸುಕಲು ಶಿರ ನೆಗಹಲಾ |
ಪಿಡಿದು ಶೃಂಗವ ತಿರುಹಿಸಲ್ಕಾ |
ಸಿಡಿದು ರುಧಿರ ಮತಂಗನಾಶ್ರಮ |
ದೆಡೆಯೊಳಂದು | ಬೀಳಲು | ನುಡಿದನಂದು || ||೨೪೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆರ ಪುಣ್ಯಾಶ್ರಮವಿದೆಂದು ವಿ |
ಚಾರಿಸದೆ ಇಂತೆಸಗಿದಧಮರು |
ಸಾರಿದರೆ ಈ ಕಡೆಗೆ ಮಡಿಯಲಿ | ಕ್ರೂರರೆಂದು || ||೨೪೯||

ಮುನಿದು ಶಪಿಸಿದುದರಿತು ಭಾಸ್ಕರ |
ತನಯನನು ಮುನಿವರನಿಗೊಪ್ಪಿಸಿ |
ಹನುಮ ನಳ ನೀಲಾದಿಗಳ ಜತೆ | ಯನುಗೊಳಿಸಿದ || ||೨೫೦||

ಅತ್ತ ಪುರವರಕೈದಿ ಸುರಪಜ |
ಮಿತ್ರಜನ ಬಗೆಯರಿತು ಪೊರಡಲು |
ಮತ್ತೆ ಜಾಂಬವ ತಡೆದ ಶಾಪದ | ವಾರ್ತೆ ತಿಳಿಸಿ || ||೨೫೧||

ವಾರ್ಧಕ

ಲಾಲಿಸೈ ರಘುಕುಲಲಲಾಮ ಸಂತೋಷದಲಿ
ಪಾಲಿಸುತಲಿರಲು ಕಿಷ್ಕಿಂಧಾಧಿಪತ್ಯ ಕೆಲ
ಕಾಲದೊಳು ತಾರೆಯಲಿ ಸುಕುಮಾರನೋರ್ವ ಸಂಜನಿಸಲಾ ವೈಭವದಲಿ |
ಬಾಲನಂ ಕರೆದನಂಗದನೆನುತಲನುದಿನವು
ಕಾಲ ಸಾಧಿಸುತ ನಿತ್ಯಾಹ್ನಿಕವ ನಡೆಸಿ ಬಲ
ಶಾಲಿ ಸಚ್ಚರಿತನವ ಪ್ರತಿಭಟಭಯಂಕರಂ ತಾನೆನಿಸಿ ಮೆರೆದಿರ್ದನು || ||೨೫೨||

ರಾಗ ಕಾಂಭೋಜಿ ಝಂಪೆತಾಳ

ಈ ತೆರದೊಳವನಿರಲು ದಶಶಿರನು ನಿರ್ಜರರ |
ವ್ರಾತ ದೆಸಗೆಡಿಸುತಲ್ಲಿರುವ ||
ನೂತನದ ವಸ್ತು ಕೊಳುತವರ ಸೇವೆಗೆ ನಿಲಿಸಿ |
ಭೂತಾಳಾಧಿಪರ ಸದೆಬಡಿದು || ||೨೫೩||

ಹೊರಿಸುತಲಿ ಕಪ್ಪವಂ ಉರಗಾದಿಗಳ ಸೊಕ್ಕ |
ಮುರಿದು ಪರಿಪರಿಯ ವೈಭವದಿ ||
ಶರಧಿ ಮಧ್ಯದ ಲಂಕೆಯಲಿ ತ್ರಿಜಗಪತಿ ಎನುತ |
ಮೆರೆದಿರ್ದನಧಿಕ ಗರ್ವದಲಿ || ||೨೫೪||

ಜಡಜಸಖನುದಯದಲಿ ನಿತ್ಯಕರ್ಮಂಗಳಂ |
ನಡೆಸುತಲಿ ಎಂದಿನಂದದಲಿ ||
ಅಡರಿ ವೈಮಾನ ಸಂಚರಿಪೆನೆನ್ನುತ ಕರೆಸು |
ತೊಡನೆ ಒತ್ತಿನ ವಿಭೀಷಣನ || ||೨೫೫||

ಸತ್ವಪೂರಿತ ಸುಭಟ ಮೊತ್ತ ಕೂಡುತ್ತಲೆ ಪ್ರ |
ಹಸ್ತಾದಿ ಸಚಿವರೊಗ್ಗಿನಲಿ ||
ಹತ್ತಿ ಪುಷ್ಪಕ ಗಗನಪಥದಿ ಮನಬಂದಂತೆ |
ಸುತ್ತುತಿರೆ ದಿಟ್ಟಿಸಲ್ಕಿಳೆಯ || ||೨೫೬||

ಕಂದ

ಶರಧಿಯ ತೀರದೊಳೊಂದೆಡೆ
ಸುರಪಾತ್ಮಜ ಭಕ್ತಿಯಿಂದ ಮಿಂದರ್ಘ್ಯವನುಂ |
ಧರಿಸಿ ಕರಾಂಜಲಿಯಲಿ ದಿನ
ಕರನಂ ಧ್ಯಾನಿಸುತಲಿರ್ಪುದದ ಕಂಡೆಂದಂ || ||೨೫೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಹಹ ಕಾಲದ ಮಹಿಮೆ ಕೆಟ್ಟಿತು |
ಬಹುತರದ ವರ್ಣಾಶ್ರಮದೊಳಾ |
ಮಿಹಿರಗರ್ಘ್ಯವನೀವ ಕಟ್ಟಳೆ | ಇಹುದು ಜಗದಿ || ||೨೫೮||

ಕಾಡನಲೆಯುತ ಜೀವಿಸುವಹುಲು |
ಕೋಡಗನು ಈ ಕೃತ್ಯಗೈವುದು |
ರೂಢಿಪರ ಹೀನೈಸುವಂದವು | ಮಾಡಲೇನು || ||೨೫೯||

ಕಾಲಕಾಲನ ಭಜಕ ಲೋಕದಿ |
ಮೇಲೆನಿಪ ಬ್ರಹ್ಮಕುಲಸಂಭವ |
ವೇಳೆ ಬಿಡದಾಹ್ನಿಕವ ನಡೆಸುವ | ಶೀಲವಂತ || ||೨೬೦||

ಕೀಳು ವಾನರರನ್ನು ಶಿಕ್ಷಿಪ |
ತೋಳ ಬಲ್ಪಿಗರಿಲ್ಲವೆನುತಲಿ |
ಪೇಳಿ ನಿಂದಿಪ ದುರ್ನುಡಿಯ ನಾ | ಕೇಳಲೆಂತು || ||೨೬೧||

ರಾಗ ಕೇತಾರಗೌಳ ಝಂಪೆತಾಳ

ನೀತಿಯಂ ಪೇಳ್ದರಿವಗೆ | ತಿಳಿಯುವುದೆ |
ಮಾತಿನಂತರ ಕೋತಿಗೆ ||
ಈತ ಚಂಚಲ ಮತಿಯಲಿ | ಬಾಳ್ವನೊಳು |
ನಾ ತಾಳಲೇತಕಿಲ್ಲಿ || ||೨೬೨||

ಪಿಡಿದೊಯ್ದು ಸೆರೆಮನೆಯೊಳು | ಭಂಗವಂ |
ಪಡಿಸಿದರೆ ಕೆಲದಿನದೊಳು ||
ದೃಢತೆ ಪುಟ್ಟುವದು ಮನಕೆ | ಮುನ್ನಡೆಯ |
ಗೊಡದೆ ಬಂಧಿಸುವೆ ಕ್ಷಣಕೆ || ||೨೬೩||

ಎಂದು ನಿರ್ಧರಿಸುತವನು | ಬಳಿ ಸರಿದು |
ಹಿಂದಿನಿಂ ಕರಗಳನ್ನು ||
ಇಂದ್ರಜನ ಕಂಕುಳಿನಲಿ | ತುರುಕಿಸಿದ |
ರಂದವರಿತಾಗಿ ವಾಲಿ || ||೨೬೪||

ವಾರ್ಧಕ

ಒತ್ತಿ ಪಿಡಿಯಲು ತೋಳುಗಳ ಬಿಡಿಸಲಾರದವ |
ಶಕ್ತಿಗುಂದುತ ತತ್ತರಿಸಲು ಬಂದಲ್ಲಿಗೆ ಪ್ರ
ಹಸ್ತಾದಿಗಳನೆ ಹಿಂದಿರಿಸಿ ದಶಶಿರನ ಕೊಂಡಾತ ನೆಗೆಯುತ ಶರಧಿಯ |
ಸುತ್ತಿ ನಾಲ್ದೆಸೆಗಳಲಿ ಮಿಂದು ಆಹ್ನಿಕವ ನಡೆ
ಸುತ್ತ ಮುನ್ನಡೆಯೆ ರಾವಣ ಬಳಲಿ ಬೆಂಡಾಗಿ |
ಗೊತ್ತಾಗದಿವಗೆ ಲಂಕಾಪುರದ ದೆಸೆಯಲ್ಲಿ ಬಿಟ್ಟು ಮುಂದ್ವರಿವೆನೆಂದು || ||೨೬೫||

ಕಂದ

ಸಾಗುತಲಾ ಲಂಕಾಪುರ
ಬಾಗಿಲ ಬಳಿ ಇರಿಸುತಾಗ ವಾಲಿಯು ಪೊರಡಲು |
ಪೋಗ ಬಿಡದೆ ಗರ್ವದಿ ಇದಿ |
ರಾಗುತ ಮೂದಲಿಸುತೆಂದ ಸುರಪಾತ್ಮಜಗಂ || ||೨೬೬||

ರಾಗ ಭೈರವಿ ಅಷ್ಟತಾಳ

ನಡೆವುದೆಲ್ಲಿಗೆ ವಾನರ | ಕಂಕುಳೊಳೆನ್ನ | ಪಿಡಿದಮರ್ಚಿದೆಯೊ ಚೋರ ||
ಬಿಡುವೆನೆ ಜೀವದಿ ನಡೆಸಿದ ಕೃತ್ಯಕೆ | ಕುಡಿಸುವೆ ಮದ್ದ ಕ್ರೂರ || ||೨೬೭||

ತಿಳಿಯದೆ ಪೋದೆ ನಾನು | ನೀನೆನ್ನ ಕಂ | ಕುಳೊಳಿರ್ಪ ಬಗೆಗಳನು ||
ಅಳಿದರೆ ಪಾತಕಗಳು ಬಪ್ಪುದೆನಗೆ ನೀ | ನುಳಿದು ತೊಲಗಿತೆಂದನು || ||೨೬೮||

ಪುಣ್ಯಪಾಪಂಗಳನು | ಬಲ್ಲಿದನಾಗೆ | ನಿನ್ನ ಸ್ವಭಾವವನು ||
ಎಣ್ಣದೆ ಭಾಸ್ಕರನನ್ನು ಧ್ಯಾನಿಸಿ ಅರ್ಘ್ಯ | ವನ್ನೀವ ನಡೆತೆಯೇನು || ||೨೬೯||

ಮೇಲು ಕೀಳೆಂಬ ವಾದ | ವ್ಯಾತಕೆ ಭಕ್ತ | ಜಾಲಕೆಲ್ಲಿಹುದು ಭೇದ ||
ಕಾಲ ಸಾಧಿಸುತನುಗಾಲ ಪೂಜಿಸುವೆ ನಾ | ಫಾಲಲೋಚನನ ಪಾದ || ||೨೭೦||

ನರರಿಗಿರುವ ಧರ್ಮವು | ಮಾಳ್ಪುದಕೆ ವಾ | ನರನಿಗೇನಧಿಕಾರವು ||
ನಿರತವಾಚರಿಸುತಲಿರುವೆಯಾದರೆ ನಾ | ವಿರಚಿಪೆ ಪರಿಹಾರವ || ||೨೭೧||

ವಾರ್ಧಕ

ಕಿತ್ತರೀ ಬಾಲ ವಾನರನಲ್ಲ ನರನಹೆ ಎ
ನುತ್ತ ತನ್ನವರಿಗಾಜ್ಞಾಪಿಸಿದ ಲಾಂಗೂಲ
ಕತ್ತರಿಸಿ ಹೊರತಳ್ಳಿರೆನಲು ಕೇಳುತ ಸುಭಟರೊಂದಾಗಿ ಖಾತಿಯಿಂದ |
ಸುತ್ತಮುತ್ತಲು ಮುಸುಕೆ ದೆಸೆಗೆಡಿಸೆ ದಶಶಿರನ
ಸುತ್ತಿ ವಾಲಾಗ್ರದಲಿ ಕೊಳುತೊಂದೆ ನೆಗೆತದಿಂ
ಸುತ್ರಾಮತನಯ ಕಿಷ್ಕಿಂಧೆ ಬಳಿ ತಂದಿರಿಸಿ ಮನದಿ ಯೋಚಿಸುತೆಂದನು || ||೨೭೨||

ರಾಗ ಕಾಂಭೋಜಿ ಝಂಪೆತಾಳ

ಹತ್ತು ಶಿರವಿದೆ ತನುವಿಗೊಂದಕ್ಕೆ ಎಣಿಕೆಗಿ |
ಪ್ಪತ್ತು ಕರ ಪರಿಕಿಪರ ಮನಕೆ ||
ಪೃಥ್ವಿಯೊಳು ಕಾಣದ ವಿಚಿತ್ರವೀ ಪ್ರಾಣಿ ಎ |
ನ್ನುತ್ತೆರಡು ದಿನ ದ್ವಾರಕಿರಿಸಿ || ||೨೭೩||

ಪುಟ್ಟ ಬಾಲಕನಧಿಕವಾಗಿ ಅಳುತಿಹನಿದನು |
ದಿಟ್ಟಿಸುತ ಸರಸ ತಾಳುವನು ||
ದೃಷ್ಟಿಯಪ್ಪುದಕೊಂದು ರಕ್ಷೆಯೆನ್ನುತ ಬಿಗಿದ |
ತೊಟ್ಟಿಲಿನ ನೇಣಿಗಾತನನು || ||೨೭೪||

ನಿತ್ಯ ಜೋಗುಳವ ಪಾಡುತ್ತ ತೂಗಲು ಬರುವ |
ಮತ್ತಕಾಶಿನಿಯರೊಂದೊಂದು ||
ತುತ್ತು ಆಹಾರವನ್ನಿತ್ತಪುದು ಎಂದಾಜ್ಞೆ |
ಇತ್ತು ಸುಖದಿಂದಿರ್ದ ಪುರದಿ || ||೨೭೫||

ಸಾಂಗತ್ಯ ರೂಪಕತಾಳ

ಇತ್ತಲಾ ಕೈಕಸೆ ಪುತ್ರನ ಕಾಣದ |
ಳುತ್ತಿರೆ ಪೌಲಸ್ತ್ಯನರಿತು |
ಮತ್ತೇಭಗಮನೆಯ ಸಂತೈಸಿ ಬರೆ ದಿವಿ |
ಜೋತ್ತಮನಣುಗನಿದ್ದೆಡೆಗೆ || ||೨೭೬||

ಚರಣಕಾನತನಾಗಿ ಕರೆತಂದು ಪೂಜೆಯ |
ವಿರಚಿಸಿ ಸುರಪಜ ನುಡಿದ ||
ಪರಮಪಾವನ ನಿನ್ನ ದರುಶನವಪರೂಪ |
ವರಿಯೆ ಕಾರಣವೆನಲೆಂದ || ||೨೭೭||

ತರಳ ರಾವಣನಿಲ್ಲಿ ಸೆರೆಯೊಳಿರ್ಪನು ಎಂಬು |
ದರಿತನ್ನಾಹಾರವ ತೊರೆದು ||
ಮರುಗುವಳವನವ್ವೆ ಮರೆದು ದ್ರೋಹವನು ಸ |
ತ್ಕರುಣದಿಂದೆನಗೀವುದೆನಲು || ||೨೭೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಜ್ಞಾನನಿಧಿ ಇಂತರುಹೆ ಬಿಡಿಸುತ |
ದಾನವನ ಸೆರೆಯಿಂದ ತಂದು ಕೃ |
ಶಾನುವಿನ ಸಾಕ್ಷಿಯಲಿ ಪೇಳ್ದ ದ | ಶಾನನಂಗೆ || ||೨೭೯||

ತಾನು ಪ್ರಾಣದೊಳಿರುವನಕ ನಿನ |
ಗೇನು ಕಷ್ಟಗಳೊದಗಿದರು ನಿ |
ನ್ನಾಣೆ ಹೊಣೆಯಾಗಿರುವೆನೆನುತಲೆ | ವಾನರೇಂದ್ರ || ||೨೮೦||

ಕಳುಹಲಾಗಲೆ ಬಂದು ಲಂಕಾ |
ನಿಳಯದಲಿ ದಶಕಂಠನಿರಲದ |
ತಿಳಿದು ಸುರಪತಿ ಸುತಗೆ ಎಚ್ಚರ | ಗೊಳಿಸಿ ತೆರಳಿ || ||೨೮೧||

ಸರಸದಿಂದಿರೆ ಮೊಳಗೆ ದುಂದುಭಿ |
ತರುಣಿಯರು ಆರತಿಯ ಬೆಳಗಲು |
ಧರೆಗೆ ಮಂಗಲವೆನುತ ಪೂಮಳೆ | ಸುರಿದುದಾಗ || ||೨೮೨||

ವಾರ್ಧಕ

ಸಲಿಲಜಾಪ್ತನ ಕುಲಲಲಾಮ ರಾಮಂಗೆ ಮುನಿ
ತಿಲಕ ಕುಂಭಜನೆಂದ ರಾಮಾಯಣಾಮೃತದ
ಜಲಧಿಯೊಳಗೊಂದು ಬಿಂದುವ ಬಣ್ಣಿಪನ ತೆರದಿ ಯಕ್ಷಗಾನದೊಳಿದರನು |
ಬಲಿಪ ನಾರಾಯಣಂ ಭಾಗವತಜನಶರಣ
ತಿಳಿದಂತೆ ರಚಿಸಿದುದ ಪೇಳಿ ಕೇಳುವ ಜನರಿ
ಗೊಲಿದು ಮನದಿಷ್ಟಾರ್ಥ ಕರುಣದಿಂ ಪಾಲಿಸುವ ಕಣ್ವಪುರ ಶ್ರೀಕೃಷ್ಣನು || ||೨೮೩||

|| ವಾನರಾಭ್ಯುದಯ ಪ್ರಸಂಗ ಮುಗಿದುದು ||