ಭಾಮಿನಿ

ತನುಜೆ ಇಂತೆನೆ ಪೇಳ್ದ ನಿನ್ನಯ
ಮನದೆಣಿಕೆಯನ್ನರಿತೆ ಚೆಲುವಿಕೆ
ಗೆಣೆಯ ವರನನ್ನರಸಿ ಪರಿಣಯ ಗೈವೆ ತಾನೆನುತ ||
ವನಜನೇತ್ರೆಯ ಕಳುಹಲಲ್ಲಿಗೆ
ಮನುಮಥೋಪಮ ಕೇಸರಿಯು ಬರೆ
ವನಚರಾಧಿಪನವನ ಸತ್ಕರಿಸುತ್ತಲಿಂತೆಂದ || ||೬೧||

ರಾಗ ಸಾವೇರಿ ಆದಿತಾಳ

ಎತ್ತಣಿಂದ ಇತ್ತ ಬಂದೆ | ವಾನರೇಂದ್ರ | ನಿನ್ನ |
ಪೆತ್ತ ಜನನಿಜನಕರಾರು | ವಾನರೇಂದ್ರ ||
ಬಿತ್ತರಿಸು ನಿನ್ನಾಗಮವ | ವಾನರೇಂದ್ರ | ವಾಸಿ |
ಸುತ್ತಿರುವ ಪುರವಿನ್ನೆಲ್ಲಿ | ವಾನರೇಂದ್ರ || ||೬೨||

ಹರಿಹರಬ್ರಹ್ಮೇಂದ್ರಾದಿಗಳು | ವಾನರೇಂದ್ರ | ಆಜ್ಞೆ |
ಹೊರತು ಒಳ ಸರಿಯರಿಲ್ಲಿ | ವಾನರೇಂದ್ರ ||
ತರಳತನದ ಮರುಳಾಟದೊಳು | ವಾನರೇಂದ್ರ | ಬಲು |
ತ್ವರಿತ ಬರವೇನೆನಲು ಪೇಳ್ದ | ವಾನರೇಂದ್ರ || ||೬೩||

ರಾಗ ಕೇದಾರ ಅಷ್ಟತಾಳ

ಲಾಲಿಸು ಕಪಿಕುಲಪಾಲ ಮತ್ಕಥನ |
ಪೇಳಲರಿದು ಕೇಳಿದರೆ ಬಲುವ್ಯಸನ || ಪಲ್ಲವಿ ||

ಮೇಲಾದ ಸತ್ಯದಿ ಪಿತ ಧರ್ಮಕೇಸರಿ |
ಪಾಲಿಸುತಿರ್ದನು ಸಿತದ್ವೀಪವವಗನು |
ಕೂಲೆ ಚಿತ್ತಿಣಿದೇವಿಗೆ | ಜನಿಸಿ ಪುಟ್ಟ |
ಬಾಲನಾಗಿರಲವರ್ಗೆ | ವೈರಾಗ್ಯವು |
ಮೇಲುವರಿದು ಕಡೆಗೆ | ಅಗಲಿದರಲ್ಲಿ |
ಶೂಲಿಸತಿಯೊಡನೈದಿ ಕಾರುಣ್ಯದೊಳಗೆ || ಲಾಲಿಸು || ||೬೪||

ಕರೆಯುತ ಕೇಸರಿ ಎನ್ನುವ ನಾಮದಿ |
ಪೊರೆದುಕೊಂಡಿರು ಎಂದು ಕ್ಷಿತಿ ಎಂಬ ವೃದ್ಧೆಯ |
ಕರಕಿತ್ತು ಪೋದರೆನ್ನ | ರಕ್ಷಿಸೆ ಪ್ರಾಯ |
ಸರಿದಾಕೆ ಮಡಿಯೆ ಮುನ್ನ | ಆಕೆಯ ಕರೆ |
ಕರೆದರಸುತಲಜನ | ಕೇಳಲು ವಾಣಿ |
ವರನಿಲ್ಲಿ ಕಳುಹಲೈತಂದೆ ಸಂಪನ್ನ || ಲಾಲಿಸು || ||೬೫||

ಇನ್ನೊಂದನುಸುರಿದ ನಿನ್ನಯ ತನುಜೆ ಸಂ |
ಪನ್ನೆ ಅಂಜನೆ ಎಂಬಳನ್ನುವರಿಸಿ ಸುಖ |
ವನ್ನನುಭವಿಪುದೆಂದು | ಕಳುಹೆ ಬಂದೆ |
ಎನ್ನಲಿ ಕರುಣ ತಂದು | ಲಗ್ನದೊಳಿತ್ತು |
ಮನ್ನಿಸು ಸುಗುಣಸಿಂಧು | ಇಲ್ಲಿಯೆ ನೆಲೆ |
ಯನ್ನೆಸಗುತಲಿರ್ಪೆ ಅಗಲದೆಂದೆಂದು || ಲಾಲಿಸು || ||೬೬||

ರಾಗ ಕಾನಡ ಝಂಪೆತಾಳ

ನಿಧಿ ಕಂಡ ಭಿಕ್ಷುಕನೊ ಸ್ವಾತಿಯಂ ನೆನೆದ ಮು |
ತ್ತಿದುವೊ ತೊರೆದಿನಿಯನಂ ಕಂಡಬ್ಜಮುಖಿಯೊ ||
ಮಧುಮಾಧವಿಯನಾಂತ ವತ್ಸರವೊ ಎಂಬಂತೆ |
ಮುದವ ತಾಳುತ ಋಕ್ಷನದಕೆ ಅವಗೆಂದ || ||೬೭||

ಬಳಲಿ ರೋಗದಿ ವೈದ್ಯನೊಲವರಿಯದವನೆಡೆಗೆ |
ಸುಳಿವುತೌಷಧವು ಕಾಲ್ಗಳ ಸುತ್ತಿದಂತೆ ||
ನಲಿನಾಕ್ಷಿಗೆಣೆಯಾದ ಚೆಲುವನಂ ಕಾಣದಿರೆ |
ಒಲಿದಿತ್ತ ಶಿವ ನಿನಗವಳನೀವೆನೆನುತ || ||೬೮||

ಪರಿಕಿಸುತ ಶುಭಲಗ್ನ ಪುರವ ಸಿಂಗರಿಸುತಲಿ |
ಬರಿಸುತೆಲ್ಲರನು ಸುತೆಯಳ ಅಲಂಕರಿಸಿ ||
ಪರಿಣಯವನೆಸಗೆ ಭೂ | ಸುರರು ಪರಸುತ್ತಿರಲು |
ತರುಣಿಯರು ಪಾಡುತಾರತಿಯ ಬೆಳಗಿದರು || ||೬೯||

ವಾರ್ಧಕ

ನೆರೆದಖಿಳ ಬಂಧು ಬಾಂಧವರ ಸತ್ಕರಿಸಿ ವಧು
ವರರಿಗೀಯುತ ವಿವಿಧತರಮಾದ ಬಳುವಳಿಯ
ಪುರದಿ ನಿಲಿಸುತ ಸಕಲರಂ ಬೀಳುಗೊಂಡಾತನಿರಲು ಬಲು ವೈಭವದಲಿ ||
ಸುರಪಾತ್ಮಜಂ ತರಣಿಸುತನೊಡನೆ ಒಮ್ಮತದಿ
ಚರಿಸಿನಾಲ್ದೆಸೆಯ ಲೋಕಾಧಿಪಾಲರ ಗೆದ್ದು
ಧುರಧುರಂಧರನೆನಿಸಬೇಕೆನುತ ನಿರ್ಧರಿಸಿ ಕರೆದನುಜಗಿಂತೆಂದನು || ||೭೦||

ರಾಗ ಭೈರವಿ ಅಷ್ಟತಾಳ

ತಮ್ಮ ಕೇಳೀ ಪ್ರಾಯದಿ | ಉಂಡಾಡುತ | ಸುಮ್ಮನಿರ್ಪುದೆ ಜಗದಿ |
ಹಮ್ಮಿನಿಂ ನಲಿದಾಡುವರ ಗೆಲ್ದು ಬಾಳ್ವುದು | ಒಮ್ಮತದಿಂ ಪುರದಿ || ||೭೧||

ತಕ್ಕುದು ನಿನ್ನೆಣಿಕೆ | ವೀರರ ಮುರಿ | ದಿಕ್ಕದ ಜನ್ಮವೇಕೆ ||
ಮುಕ್ಕಣ್ಣ ಪೊಗಳುವಂದದಿ ತೋರ್ಪೆ ಎನ್ನಯ | ವಿಕ್ರಮವನು ಜಗಕೆ || ||೭೨||

ಸರಿ ಮಾತ ನುಡಿದೆ ನೀನು | ತಾತನೊಳಿದ | ನರುಹುತ್ತ ಪೋಪುದಿನ್ನು ||
ಬರಿದೇಕಿದಕೆ ಕಾಲ | ಹರಣವೆನ್ನುತ ಪೋಗಿ | ಪೇಳಿದರದನವಗೆ || ||೭೩||

ರಾಗ ಕೇತಾರಗೌಳ ಝಂಪೆತಾಳ

ಅವಧರಿಸು ನುಡಿಯ ಜೀಯ | ಮನದೆಣಿಕೆ | ವಿವರಿಸಲು ಬಂದೆವಯ್ಯ ||
ಅವನಿಯನು ಚರಿಸುತ್ತಲಿ | ಭೂಭುಜರ | ಜವಗೆಡಿಸಿ ಬರುವೆವಿಲ್ಲಿ || ||೭೪||

ನಲಿಯುತಿದೆ ಭುಜದಿ ಬಲವು | ಮಂದಿರದಿ | ಕುಳಿತರಿನ್ನೇನು ಫಲವು ||
ಕಳುಹೆಮ್ಮ ಪೋಪೆವೆನಲು | ಸಮ್ಮತಿಸಿ | ಕೊಳುಗುಳಕೆ ಮುಂದ್ವರಿಯಲು || ||೭೫||

ಕಂದ

ಆ ಸಮಯದಿ ಒದಗಿದು ಮಧು
ಮಾಸಂ ಕಾಮಿಗಳಿಗಾಯ್ತು ಹೃದಯಕೆ ಶೂಲಂ |
ಕೇಸರಿ ಕುದಿಯುತ ವಿರಹದೊ
ಳಾ ಶಶಿಮುಖಿಯಂಜನೆಯಳ ಪರಿಕಿಸುತೆಂದಂ || ||೭೬||

ರಾಗ ಘಂಟಾರವ ಆದಿತಾಳ

ನಾರಿ ರತುನೆ ಕಾಂತೆ | ಪೇಳ್ವೆ ವಿ | ಚಾರ ಸುಗುಣವಂತೆ ||
ವಾರಿಜಾಕ್ಷಿ ಮದವಾರಣಗಮನೆಯೆ |
ಮಾರನ ಶರದುರಿ ಏರಿಹುದಿಂದಿಗೆ || ಪಲ್ಲವಿ ||

ಚಂದ್ರನ ಕಿರಣದೊಳು | ಭಾಸ್ಕರ |
ನಿಂದ ಉರಿಯ ಮಿಗಿಲು | ತೋರ್ಪುದು |
ಕುಂದುತ ಸತ್ವಗಳು | ಹಶುತೃಷೆ |
ಯೊಂದಿಲ್ಲವು ಕೇಳು ||
ಗಂಧ ಕುಸುಮಗಳನೊಂದನೊಲ್ಲೆ ಕೊಲೆ |
ಗೆಂದು ಸುಳಿವನಾ ಮರಳುವುದೆನಲೆಂದಳು || ನಾರಿ ರತುನೆ || ||೭೭||

ತೆರಳಿ ನಮ್ಮುಪವನವ | ಸುತ್ತುತ |
ಸರಸಿಗಿಳಿದು ದಣಿವ | ನೀಗುವ |
ತೆರದೊಳಾಡಿ ಮನವ | ತಣಿಸುತ |
ಸ್ಮರನಾಟದಿ ಪಣವ ||
ಮೆರೆಸುತ್ತಲಿ ನಾವಿರುತ ಕೆಲವು ದಿನ |
ಸರಿದ ಮೇಲೆ ಮರಳುವುದೆನಲೆಂದಳು || ನಾರಿ ರತುನೆ || ||೭೮||

ಸ್ಮರನು ಶರವ ನಿನಗೆ | ಪಿಡಿದರು |
ಗುರಿಯು ತಪ್ಪಿತೆನಗೆ | ನಾಟುತ |
ಉರಿಯುವ ತನುವ ಬಗೆ | ಬಣ್ಣಿಸ |
ಲರಿಯೆ ಪೇಳ್ದ ನುಡಿಗೆ ||
ಸರಸವಾಂತೆ ಬೇಸರ ಬಿಡಿಸುತ ಉ |
ದ್ಧರಿಸೆನ್ನನು ನಡೆ ತರುವೆನು ಜತೆಯಲಿ || ನಾರಿ ರತುನೆ || ||೭೯||

ಆರ್ಯ ಸವಾಯ್ ಏಕತಾಳ

ಅರಿತವಳೊಡನೈತರುತಾ ಉಪವನ | ಚರಿಸುತ ತೋರ್ದಾಕೆಗೆ ಬಂದು |
ಸರಸಿಯ ಬಳಿಯಲಿ ವಸನಾಭರಣವ | ನಿರಿಸಿ ಜಲದೊಳಾಡಿದರಂದು || ||೮೦||

ರಾಗ ಪೂರ್ವಿ ಏಕತಾಳ

ಜಲದೊಳಗಾಡಿದರು | ಬಲುವಿಧ | ಒಲವಿಂದೀರುವರು || ಪಲ್ಲವಿ ||
ಮುಳುಗಿ ಕುಳಿತು ಬಹು ಚಳಕದಿ ಕೈಕಾ |

ಲ್ಗಳ ಪಿಡಿದೆಳೆಯುತ | ತಳಮಳಗೊಳ್ಳದೆ || ಜಲದೊಳ || ||೮೧||

ಹತ್ತುತ ಪೆಗಲಂ | ಮತ್ತೆ ಕೆಳಕೆ ಹಾ |
ರುತ್ತ ಹೊತ್ತೊತ್ತಿಗೆ | ಮುತ್ತ ನೀಡುತ್ತಲಿ || ಜಲದೊಳ || ||೮೨||

ವಾರ್ಧಕ

ರಘುನಾಥ ಲಾಲಿಸೈ ಜಲಕೇಳಿಯನ್ನಡೆಸಿ
ಮಿಗೆ ವಹಿಲದಿಂ ಮೇಲಡರಿ ಲತಾಮಂಟಪದಿ
ಬಗೆ ಬಗೆಯ ರೂಪುಗಳ ತಾಳಿ ರಮಿಸುತ ಸ್ಮರನ ಶರದುರಿಯ ಪರಿಹರಿಸುತ |
ಅಗಣಿತಾನಂದವನ್ನಾಂತು ಒಂದೆಡೆ ಕುಳಿತು
ಪಗಡೆಯಾಟವನಾಡುತಿರೆ ಸೂರ್ಯನಸ್ತಮಿಸೆ
ಗಗನ ಪರಿಕಿಸುತಲಂಜನೆಯು ಕುಳ್ಳಿರಲು ಕೇಸರಿಯು ನಿದ್ರಿಸಲಿತ್ತಲು || ||೮೩||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಾನೆ ಸಕಲ ಚರಾಚರಂಗಳ |
ಪ್ರಾಣರೂಪನೆನುತ್ತಲಾ ಪವ |
ಮಾನ ಚರಿಸುತ ಬರಲು ಋಕ್ಷನು | ದ್ಯಾನದೆಡೆಗೆ || ||೮೪||

ಬಳಲಲೇತಕೆ ವೇಗದಿಂದದ |
ರೊಳಪೊಗುತ ನಾ ಮಂದಗತಿಯಿಂ |
ಸುಳಿವೆನೆನುತೈತರಲು ಮನಭ್ರಮೆ | ಗೊಳುತಲೆಂದ || ||೮೫||

ರಾಗ ಬೇಗಡೆ ಅಷ್ಟತಾಳ

ಏನು ಸೊಬಗಿನೊಳಿರುವುದೀ ವನವು | ತ್ರೈಜಗದೊಳಿದಕೆ ಸ |
ಮಾನವಿನ್ನೊಂದಿಲ್ಲ ನಿಶ್ಚಯವು ||
ಕಾಣಿಪುದು ನಾಲ್ದೆಸೆಗಳಲಿ ನಾ | ನಾ ಕುಸುಮ ಫಲವೆನುತ ಮುಂಬರ |
ಲಾ ನಳಿನಮುಖಿಯಂಜನೆಯ ಪವ | ಮಾನನೀಕ್ಷಿಸಿ ತನ್ನೊಳೆಂದನು || ಪಲ್ಲವಿ ||

ಮಾನಿನಿಯು ಯಾರಿವಳ ಪೋಲ್ವರ ಕಾಣೆನೀವರೆಗೆ | ಸುಂದರ |
ದಾನನವ ಬಣ್ಣಿಸಲಿಕಸದಳ ಸ್ಥಾಣು ಮುಖ್ಯರಿಗೆ | ಬಂದು |
ದ್ಯಾನದಲಿ ನೆಲಸಿರ್ಪ ಕಾರಣವೇನರಿಯದೆನಗೆ | ನಾಕದಿ |
ಗಾನನರ್ತನ ಗೈವರಿಹರು ಸಮಾನವಲ್ಲಿವಳ್ಗೆ | ಸರಸದಿ ||
ಈ ನಿತಂಬಿನಿಯೊಡನೆ ಸುಖಿಪ ಮ | ಹಾನುಭಾವನಿನ್ನಾರೊ ಚೆಲುವೆಯು |
ಮೀನಕೇತನ ಸಿಂಗರದ ಮದ | ದಾನೆಯೋ ಫಣಿವೇಣಿ ಸುಂದರಿ || ಏನು || ||೮೬||

ನಾರಿಮಣಿಯಂ ಕಂಡು ತನುಮನ ಸೂರೆಯಾಯ್ತಿನ್ನು | ರಮಿಸದೆ |
ಸಾರಲಸದಳ ಮುಂದೆ ಇದಕೇನ್ ದಾರಿ ಎಸಗುವೆನು | ಬಳಿಯಂ |
ಸೇರಿ ಕೈ ತುಡುಕಿದರೆ ನಾ ಅವಿಚಾರಿಯಾಗುವೆನು | ನಿದ್ರಿಪ |
ವೀರನೆಚ್ಚರವಾಗಿ ಮನನಿರ್ಧಾರ ಕೆಡಿಸುವನು | ಜಗಕಾ |
ಧಾರನಾಗಿರ್ಪವಗೆ ಸಕಲರು | ದೂರುವರು ಏನ್ಗೈವೆ ಮತ್ತೀ |
ಸಾರಸಾಕ್ಷಿಯ ಕೂಡೆ ರಮಿಸಲು | ಬೇರೆ ಯತ್ನದಿ ಕಾರ್ಯನಡೆಸುವೆ || ಏನು || ||೮೭||

ಭಾಮಿನಿ

ಅಂತರಂಗದಿ ತಿಳಿದು ಹದನವ
ಕಾಂತೆಯಳಿಗರಿವಾಗದಂದದಿ
ತಾಂತವಕದಿಂದೊಲಿದು ರಮಿಸಿದ ಸಿದ್ಧಯೋಗದಲಿ |
ದಂತಿಗಾಮಿನಿಗಾ ತತೂಕ್ಷಣ
ಕಂತುಹರನ ಸಮಾನಲಕ್ಷಣ
ವಂತ ಸುತನುದಿಸಲ್ಕೆ ಕಂಡಚ್ಚರಿಗೊಳುತಲೆಂದ || ||೮೮||

ಆರ್ಯ ಸವಾಯ್

ತನುಮರೆದಿಹಳೆನ್ನನು ಕಂಡರೆ ಏ | ನೆನುವಳೋ ಶಪಿಪಳೊ ಬಾಲನನು ||
ಘನತೆಯೊಳರಿವಳೆಂದನಿಲ ತೆರಳೆ ತನ | ಯನು ಕರೆಕರೆಯುತ್ತುಸುರಿದನು || ||೮೯||

ರಾಗ ಸಾರಂಗ ಅಷ್ಟತಾಳ

ಏಳಮ್ಮ ಜನನಿ ನೀನು | ನಿದ್ದೆಯೊಳೆಷ್ಟು |
ಕಾಲವ ಕಳೆವೆ ಇನ್ನು ||
ತಾಳಲಾರೆನು ಹಸಿವೆಂದೊಡಲುರಿವುದು |
ಹಾಲು ಸಕ್ಕರೆ ದ್ರಾಕ್ಷಿ ಬಾಳೆ ಹಣ್ಣನು ಕೊಡು || ||೯೦||

ಎತ್ತಿ ಮುದ್ದಿಸಿ ಉಣಿಸು | ನೇರಳೆ ಜಂಬು |
ಕಿತ್ತಳೆಗಳ ತಿನಿಸು ||
ಉತ್ತಮವಾದ ಸಮಸ್ತ ಫಲಂಗಳು |
ಸುತ್ತಮುತ್ತಲು ಕಾಣಿಸುತ್ತಿವೆ ತಾರವ್ವ || ||೯೧||

ಕಂದ

ಎಚ್ಚರಗೊಂಡೀಕ್ಷಿಸಿ ತಾ
ನಚ್ಚರಿಗೊಂಡಳು ಕುಮಾರ ಪುಟ್ಟಿದನೆಂತೋ |
ಹೆಚ್ಚಿನ ತನುಕಾಂತಿಯೊಳಿಹ
ಸಚ್ಚರಿತಂಗುಣಿಪೆನೆಂದು ಮುದ್ದಿಸುತೆಂದಳ್ || ||೯೨||

ರಾಗ ಬಿಲಹರಿ ಅಷ್ಟತಾಳ

ಕಂದ ಅಳಲದಿರು ಒಂದರೆ ಕ್ಷಣದಿ |
ತಂದೀವೆ ಫಲ ಧೈರ್ಯದಿಂದಿರು ಮನದಿ ||
ಸಂದೇಹಗೊಳದಿರು ಸುಂದರ ರೂಪ |
ಚಂದದಿಂದುಣಿಸುವೆ ಮಮಕುಲದೀಪ | ಸತ್ಕೀರ್ತಿ ಕಲಾಪ || ||೯೩||

ತಾತ ನಿದ್ರೆಯೊಳಿರ್ಪನಾತನ ಬಳಿಗೆ |
ನೀ ತೆರಳುತ್ತ ಎಚ್ಚರಗೊಳಿಸವಗೆ ||
ಪ್ರೀತಿಯಿಂದಲಿ ನಾನಾ ಜಾತಿಯ ಫಲವ |
ಸಾತಿಶಯದೊಳಿತ್ತು ಸರಸಗೊಳಿಸುವ | ತಾಳದಿರು ಬೇಸರವ || ||೯೪||

ಪರಿಪರಿಯಿಂದೊಡಂಬಡಿಸಿ ಬಾಲಕನ |
ಸರಸದೊಳಲ್ಲಿ ಕುಳ್ಳಿರಿಸಿ ಉದ್ಯಾನ |
ಚರಿಸಿ ಸುಫಲಗಳ ತರುವೆ ತಾನೆನುತ |
ತರುಣಿ ಪೋಗಲು ನಭ ಪರಿಕಿಸಲಾತ || ಭಾಸ್ಕರನ ಕಾಣುತ್ತ || ||೯೫||

ರಾಗ ಕಾಂಭೋಜಿ ಝಂಪೆತಾಳ

ಬರಿದೆ ದಣಿವಳೊ ಜನನಿ ಸುರಗಂಗೆ ಇರಲು ಜಲ |
ವರಸಿ ತುಹಿನಾಚಲಕೆ ಪೋದ ||
ತೆರವಾಯ್ತು ಸುರಭಿ ಇರೆ (ಅರಸುವೆನೆ) ಬಡತುರುವ |
ಮರುಳಾಟ ಗೈದೆನಾನಿದಕೆ || ||೯೬||

ಉತ್ತಮದ ಫಲವು ಕಾಣುತ್ತಿಹುದು ಮೇಲೆ ನಾ |
ಹತ್ತುತದ ಮೆಲಲು ಹಿತವಹುದು ||
ಹೊತ್ತು ಕಳೆಯದೆ ಸಾಧಿಸುವೆನೆನುತ ಹಾರಿದನು |
ಮಿತ್ರನ ವರೂಥವಿದ್ದೆಡೆಗೆ || ||೯೭||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಾರಿ ಗಣಿಸದೆ ಕಿರಣದುರಿಯನು |
ಏರಿ ಧ್ವಜದಲ್ಲಿರಲು ಗ್ರಹಣದ |
ತಾರೆಗಾ ಸ್ವರ್ಭಾನು ದಿನಪನ | ವೈರದಿಂದ || ||೯೮||

ನುಡಿದನುಬ್ಬುತ ಹರಿಹರರ ಮತ |
ವಿಡಿದು ತಾನೀ ಸಮಯ ತರಣಿಯ |
ತುಡುಕಿ ಪೀಡಿತ ಕಾಲವಲ್ಲಿಗೆ | ನಡೆವೆನೆನುತ || ||೯೯||

ಆತ ಬರಲಾ ರವಿಯು ಬಳಿಯೊಳು |
ವಾತಸಂಭವ ತಡೆದವನ ನಿ |
ರ್ಭೀತಿಯಿಂದಿರೆ ಕಂಡು ನುಡಿದನು | ಖಾತಿಯಿಂದ || ||೧೦೦||

ರಾಗ ಭೈರವಿ ಏಕತಾಳ

ಎಲೆ ನೀನಾರೈ ಶಿಶುವೆ | ಎನ | ಗಳುಕದಿದಿರು ನಿಂದಿರುವೆ ||
ಸಲಹುವನಾವನು ನಿನ್ನ | ನಡೆ | ಛಲದಿಂದಳಿಯುವೆ ಚಿಣ್ಣ || ||೧೦೧||

ಆರಾದರೆ ನಿನಗೇನು | ಬಹ | ಕಾರಣವೇನಹುದಿನ್ನು ||
ಸಾರಲು ಬಿಡೆ ತಾನೆನುತ | ಉ | ಬ್ಬೇರಿ ತಡೆದನವಗಾತ || ||೧೦೨||

ನಡೆಯೆಂದಡಿ ಮುಂದಿಡಲು | ಎಡೆ | ಗೊಡದೆ ತುಳಿಯೆ ಕ್ರೋಧದೊಳು ||
ಉಡುಗಿ ಸತ್ವ ಸ್ವರ್ಭಾನು | ಭಯ | ಪಡುತ ಹಿಂಜರಿದುಸುರಿದನು || ||೧೦೩||

ಕಂದ

ನಿಂದು ಛಲದಿ ಕಾದುವನೊಳು
ಮುಂದ್ವರಿವುದು ಉಚಿತವಲ್ಲ ಬಾಲಕನೀತಂ |
ಕುಂದದೆ ಮನದೊಳು ಸುರಪನಿ
ಗೆಂದಪೆನಿದನೆನುತ ಪೋಗಿಪೇಳಿದನವನೊಳ್ || ||೧೦೪||

ರಾಗ ಮುಖಾರಿ ಏಕತಾಳ

ಕೇಳು ನಿರ್ಜರರಧಿನಾಥ | ಎನಗಾದ ಭಂಗ |
ಪೇಳಲರಿದು ಲೋಕ ವಿಖ್ಯಾತ ||
ಪಾಲಾಬ್ಧಿಯ ಮಥನದಿ ನೀವೆಲ್ಲರು |
ಪಾಲಿಸಿದಾಜ್ಞೆಯ ಹಾಳಾಯ್ತಿಂದಿಗೆ | ||೧೦೫||

ಎಂದಿನ ತೆರದೊಳಾ ಭಾಸ್ಕರನ | ಬಳಿಗೈಯೆ ರಥದಿ |
ನಿಂದಿಹನವನಂತಿಹ ನಿಸ್ಸೀಮ ||
ಮುಂದ್ವರಿಯದ ತೆರದಿಂದಲಿ ತಡೆಯುತ |
ಹಿಂದಟ್ಟಿದನಾರೆಂದು ತಿಳಿಯದೆ || ||೧೦೬||

ರಾಗ ಭೈರವಿ ಏಕತಾಳ

ಇನಿತಾದುದೆ ಭಂಗಗಳು | ಆ | ದಿನಪನ ಪಿಡಿವನಿತರೊಳು ||
ನಿನಗೆ ತಡೆದ ಬಾಲಕನ | ತೋ | ರೆನಗೆ ಬಾಳಗೊಡೆಯವನ || ||೧೦೭||

ಜತೆ ಪಿಡಿದೈತಹೆನೆಂದು | ಸುರ | ಪತಿ ಕರಿಯಡರುತಲಂದು ||
ಅತಿ ತ್ವರಿತದಿ ನಡೆ ತರುತ | ಮಾ | ರುತಜನ ಕಾಣಿಸಲಾತ || ||೧೦೮||

ನುಡಿದನು ಸ್ವರ್ಭಾನುವಿಗೆ | ನೀ | ನಡೆ ನಡೆ ಭಾಸ್ಕರನೆಡೆಗೆ ||
ತಡೆಯುವನಾರವ ಬರಲಿ | ಶಿರ | ಕಡಿದಿಡುಕುವೆ ನಿಮಿಷದಲಿ || ||೧೦೯||

ಕಂದ

ಕೇಳುತಲಾ ನುಡಿ ಧೈರ್ಯವ
ತಾಳುತ ರವಿಯೆಡೆಗೆ ಮುಂದೆ ನಡೆಯಲ್ಕಾತನ |
ಬೀಳಗೆಡಹೆ ಕಂಡಾ ಸುರ |
ಪಾಲಂ ಕುಲಿಶದಿ ವಿಭಾಡಿಸುತಲಿಂತೆಂದಂ || ||೧೧೦||

ರಾಗ ಶಂಕರಾಭರಣ ಮಟ್ಟೆತಾಳ

ಫಡ ಫಡೆಲವೊ ತರಳ ರವಿಯ | ಪಿಡಿವೆನೆಂದು ಎಂದಿನಂತೆ |
ನಡೆವನಿವನ ಪೋಗಗೊಡದೆ | ತಡೆದುದೇನೆಲ ||
ಕಡೆಯ ಕಾಳವಿದರೊಳ್ನಿನಗೆ | ನುಡಿವೆ ಧರ್ಮ ಮಾರ್ಗಗಳು |
ಮಡಿವೆ ಯಾಕೆ ಪೋಗಿ ಬಾಳು | ಪೊಡವಿ ತಳದಲಿ || ||೧೧೧||

ಭೂತಳವನು ಬೆಳಗಿಸುವ ಪ್ರ | ಖ್ಯಾತ ಪುರುಷ ಲೋಕನಯನ |
ನೀತನಿಂಗೆ ಕಷ್ಟಕೊಡುವ | ರೀತಿ ವಿಹಿತವೆ ||
ಪಾತಕಿಗಳ ಪರಮಮಿತ್ರ | ಮಾತ ನುಡಿದ ಮರು ಕ್ಷಣದಲಿ |
ಘಾತಿಸುತ್ತಲುಣಿಪೆ ಸಕಲ | ಭೂತ ಬಳಗಕೆ || ||೧೧೨||

ಕಡಗಲಿತ್ವಕಿವಗೆ ಮದ್ದು | ಕೊಡದೆ ಬೆದರನೆಂದು ತ್ರಿದಶ |
ರೊಡೆಯ ಕುಲಿಶದಿಂದ ಮೊಗಕೆ | ಹೊಡೆಯಲಾಕ್ಷಣ ||
ಒಡೆದು ರಕ್ತ ಸುರಿಯೆ ಪ್ರಾಣ | ವಡಗಿ ಬೀಳಲಾ ಸ್ವರ್ಭಾನು |
ನಡೆಯೆ ಮುಂದೆ ಸುರಪ ನಾಕ | ದೆಡೆಗೆ ಪೋಗಲು || ||೧೧೩||

ಕಂದ

ಸುತ್ತುತಲಿರಲಾ ಮಾರುತ
ಪುತ್ರನಿಗೊದಗಿದ ವಿಪತ್ತ ಪರಿಕಿಸುತಾಗಂ |
ಮಸ್ತಕ ತೊಡೆ ಮೇಲಿರಿಸುತ
ಮತ್ತಾತನ ಗುಣಗಣಂಗಳೆಣ್ಣಿಸುತಳಲ್ದಂ || ||೧೧೪||

ರಾಗ ನೀಲಾಂಬರಿ ರೂಪಕತಾಳ

ಈ ತೆರ ದುರ್ಮರಣವು ತನು | ಜಾತನಿಗೊದಗಿಸಿದನೆ ಸುರ |
ನಾಥನು ಯೋಚಿಸದೊಂದ ದು | ರಾತುಮನಿಂಗಾಗಿ ||
ಮಾತೆಯು ತನಯನನಗಲಿದ | ಳೇತಕೆ ಪುಟ್ಟಿದ ದಿನವೇ |
ಈತಗೆ ಮೃತಿಯೆಂದೆನುತ ವಿ | ಧಾತನ ಲಿಪಿಯಾಯ್ತೆ || ||೧೧೫||

ಬಿತ್ತರಿಸನು ಸ್ಪಷ್ಟದಿ ನುಡಿ | ನೆತ್ತಿ ಬಲಿಯಲಿಲ್ಲವು ಹಾ |
ವೃತ್ರಾರಿಯ ಹಗೆಯಾದನೆ | ಪುತ್ರರತ್ನ ನಿನಗೆ ||
ಚಿತ್ತಜವೈರಿಯ ಮನಕೀ | ಕೃತ್ಯವು ಹಿತವೇ ಎನಗೀ |
ಪೃಥ್ವಿಯ ಚಲಿಸುತ ಬಳಲುವ | ವೃತ್ತಿಯು ಸಾಕೆನುತ || ||೧೧೬||

ವಾರ್ಧಕ

ಆ ಸದಾಗತಿ ಹಲವು ಹಂಬಲಿಸಿ ಮಡಿದಿರುವ
ಕೂಸ ಪೆಣದೊಡನೆ ನಡೆತರುವಾಗ ಹಿಮಗಿರಿಗೆ |
ವಾಸಿಸಿದ ಗುಹೆಯೊಂದರಲಿ ಗುಪ್ತದಿಂ ಜಗದ ಶ್ವಾಸಸಂಚಾರವಡಗಿ |
ನಾಶವಾಗಲು ತೊಡೆಗೆ ಸಚರಾಚರಂಗಳದ
ವಾಸವನು ತಿಳಿದು ದೋಷವ ಗೈದೆನೆನುತ ಕಮ
ಲಾಸನನ ಕೂಡಿ ಕ್ಷೀರಾಬ್ಧಿ ತಡಿಯಲಿನಿಂದು ಹರಿಯ ಸಂಸ್ತುತಿಗೈದರು || ||೧೧೭||

ರಾಗ ಕಾಂಭೋಜಿ ತ್ರಿವುಡೆತಾಳ

ಜಯತು ಜಯತು ಗೋವಿಂದ | ನಿತ್ಯಾನಂದ |
ಜಯತು ಜಯತು ಗೋವಿಂದ |
ಜಯ ಜಗನ್ಮಯ ಸಜ್ಜನಪ್ರಿಯ |
ಭಯನಿವಾರಣ ವಿಶ್ವಧಾರಣ |
ದಯದೊಳಾಶ್ರಯವಿತ್ತು ಪೊರೆಯಹಿ |
ಶಯನ ತೋಯಜನಯನ ಮಾಧವ || ||೧೧೮||

ವಾರಿಜಾಪ್ತನ ತೇರನು | ಏರಿರ್ದನಾ | ಮಾರುತ ಸುಕುಮಾರನು ||
ಸಾರಗೊಡ ರವಿ ಬಳಿಗೆನ್ನುತ್ತಲಿ | ದೂರಲಾ ಸ್ವರ್ಭಾನುಗೋಸುಗ |
ತೀರಿಸಲು ಪವಮಾನಚರಿಸದೆ | ಸೇರಿದನು ಹಿಮಗಿರಿಯ ಗುಹೆಯಲಿ || ||೧೧೯||

ಆರ್ಯ ಸವಾಯ್

ಗಾಳಿಯು ಸುಳಿಯದೆ ಹಾಳಾಯಿತು ಜಗ | ಪೇಳಿ ನೀತಿ ನೀ ಬರಿಸೆನುತ ||
ಗೋಳಿಡಲೆಂದನು ಶೂಲಿಗರುಹಿ ಕರು | ಣಾಳು ಬರಲಿ ಮುನಿಜನ ಸಹಿತ || ||೧೨೦||

ಶ್ರೀಲಲಾಮನಂ ಬೀಳ್ಕೊಳುತಾ ಶಶಿ | ಮೌಳಿಗುಸುರೆ ಬಲುತ್ವರ್ಯದಲಿ ||
ಮೇಳವಿಸುತ ಸಕಲರು ಬರೆ ಪಥದೊಳು | ನೀಲಾಂಗನ ಜತೆ ಸೇರುತಲಿ || ||೧೨೧||

ವೃತ್ತ

ಹರಿಯಂ ಕಾಣುತ ಪುರಹರಂ ಮನದೊಳತ್ಯಾನಂದವಂ ತಾಳುತ
ಪರಮೇಷ್ಠ್ಯಾದಿ ಸಮಸ್ತದೇವತತಿಯಂ ಮುನಿಗಳನ್ನೊಡಗೂಡುತ |
ಅರಸುತ್ತೆಲ್ಲರ ಮಾರುತಂ ನೆಲಸಿರ್ಪ ಗುಹೆಯ ಬಾಗಿಲೊಳು ನಿಂದು
ಪರಿಪರಿಯಿಂ ಸ್ತುತಿಸುತ್ತಲಾ ಪವನನಂ ಕರೆಕರೆದು ಪೇಳ್ದರಂದು || ||೧೨೨||