ವಾರ್ಧಕ

ಗುರುವರಗೆ ಮಣಿದು ಕರಿಮುಖಗೆ ಜಯವೆಂದು ಹರಿ
ಹರ ಕಮಲ ಭವ ಗಿರಿಜೆ ಸಿರಿ ಸರಸ್ವತಿಯರಿಗೆ
ಕರಮುಗಿದು ಸಕಲ ಮುನಿವರರ ಗುಹ ಸುರಪಮುಖ್ಯಾಮರರಿಗಭಿವಂದಿಸಿ |
ಹಿರಿಯರಿಗೆ ಸುಜನರಿಗೆ ಕವಿಗಳಿಗೆ ಶಿರಬಾಗಿ
ಪರಶಿವಂ ಕರುಣಿಸಿದ ಬುದ್ಧಿಯಿಂದಂಜನೆಗೆ
ಮರುತನಿಂ ಸುತನು ಜನಿಸಿದ ಪುಣ್ಯಚರಿತೆಯಂ ಯಕ್ಷಗಾನದಿ ಪೇಳ್ವೆನು || ||೧||

ದುರುಳ ದಶಕಂಠಾದ್ಯರಂ ತರಿದು ಸತಿಸಹಿತ
ಪುರಕೆ ನಡೆತಂದು ರಾಜ್ಯವನಾಳುತಿರೆ ರಾಮ
ದರುಶನಕೆ ಬಂದಖಿಳ ಮುನಿವರರನುಪಚರಿಸಿ ರಾವಣಾದ್ಯರ ಚರಿತೆಯ |
ಅರಿತು ವಿಧಿಯಿಂದಲಾ ಋಕ್ಷರಾಜಂ ಜನಿಸಿ
ಭರಿತಬಲ ವಾಲಿಸುಗ್ರೀವರಂ ಪಡೆದುದಂ
ಪರಮಪಾವನೆ ಅಂಜನೇಯಳ ಚರಿತ್ರವರುಹೆನಲು ಕುಂಭಜನೆಂದನು || ||೨||

ಲಾಲಿಸೈ ರಾಮ ಕಲ್ಪಾವಸಾನದೊಳು ಶ್ರೀ
ಲೋಲ ವಟಪತ್ರದೊಳು ಪವಡಿಸಿರಲಾ ಕರ್ಣ
ಮೂಲದಿಂ ಕಿಲ್ಬಿಷವ ತೆಗೆದು ಶರಧಿಯೊಳಿಡಲು ಮಧುಕೈಟಭರು ಜನಿಸುತ |
ಕಾಳಗಕೆ ನಿಲಲವರ ಸದೆದು ಮೇದಿನಿ ಸೃಜಿಸಿ
ಗೋಳುಗುಟ್ಟುತ ಒಡಲೊಳಿರ್ಪ ವಿಧಿಯಂ ಕರೆದು
ಪಾಲಿಸಲು ಸೃಷ್ಟಿಯಧಿಕಾರಮಂ ಮೊದಲಿಗಾ ನವಬ್ರಹ್ಮರಂ ನಿರ್ಮಿಸಿ || ||೩||

ಒತ್ತಿನೊಳು ಜಾಂಬವಂತನು ಜನಿಸಿ ಬಳಿಯೊಳಿರ
ಲತ್ತಲು ಮರೀಚಿಯಿಂದುದಿಸಿರುವ ಕಶ್ಯಪಗೆ
ಪತ್ನಿಯಾಗಿಹ ದಕ್ಷಜೆಯರೊಳದಿತಿಗೆ ಸುರಪ ಮೊದಲಾದ ಸುತರುದಿಸಲು |
ವಿಸ್ತರಿಸಿ ಶತಯಾಗ ಮೂಲೋಕದಧಿಕಾರ
ಸುತ್ರಾಮ ಹರಿಹರಾದ್ಯರ ಮತದಿ ಕೈಗೊಳುತ
ಲರ್ತಿಯಿಂ ಮೆರೆದಿರಲು ಓಲಗದೊಳೊಂದು ದಿನ ದಿಕ್ಪಾಲಕರೊಳೆಂದನು || ||೪||

ರಾಗ ಭೈರವಿ ಝಂಪೆತಾಳ

ಕೇಳಿ ನಿರ್ಜರರು ದಿವ | ದಾಳ್ವಿಕೆಯ ಹರಿಹರರು |
ಪಾಲಿಸಿದರಿಂದ ಅನು | ಗಾಲ ಸುಖವೆಮಗೆ || ||೫||

ಸರಸಿರುಹ ಭವ ನಮಗೆ | ನೆರವಾದನದಕವನ |
ಚರಣಪೂಜೆಯ ಗೈದು | ಬರುವದೆನಲಾಗ || ||೬||

ಸುರಪಾಲ ನಿನ್ನೆಣೆಕೆ | ಸರಿ ಎಂದು ಸರಸದಿಂ |
ನೆರಹಿ ಸನ್ನಾಹ ಸಕ | ಲರು ಬರುತಲಂದು || ||೭||

ಯೋಗ ನಿದ್ರೆಯೊಳಿರಲು | ವಾಗೀಶನಡಿಗೆ ತಲೆ |
ಬಾಗಿ ಸ್ತುತಿಗೈದರೊಂ | ದಾಗಿಭಕ್ತಿಯಲಿ || ||೮||

ರಾಗ ಮಧ್ಯಮಾವತಿ ಆದಿತಾಳ

ಕರುಣಾಸಾಗರ ಶುಭಚರಿತ ವಾಣೀಶ | ಕರುಣಿಸೆಮಗೆ ಅನವರತ ಸಂತೋಷ ||
ಭರಿತ ಸೌಭಾಗ್ಯ ಸಂಪನ್ನನೆಂದೆನಿಸು | ದುರುಳರ ಭಯ ಸೋಕದಂದದಿ ನಡೆಸು || ||೯||

ಮೂರು ಲೋಕದ ಪಾರುಪತ್ಯ ನಿರ್ಜರರ | ಸೇರಿಕೊಂಡವರೊಳು ಮೇಲಧಿಕಾರ |
ಕಾರಣಕರ್ತ ನೀ ಸ್ಥಿರಗೊಳಿಸೆನಲು | ವಾರಿಜಭವ ಕಂಗಳ್ತೆರೆವನಿತರೊಳು || ||೧೦||

ರಾಗ ಜಂಜೂಟಿ ಏಕತಾಳ

ಭಲರೇ ಸುರಕುಲತಿಲಕನೆ ನಿನ್ನಯ | ಬಲುತರ ಭಕ್ತಿಗೊಲಿದೆನಯ್ಯ ||
ತಿಳಿದವ ಮೊದಲೇ ನಿನಗಾ ಹರಿಹರ | ರೊಲಿದಿತ್ತಿಹರು ಮಹಾಸಿರಿಯ ||
ಸಲಹೈ ಮನುಮನಿಗಳು ಇರುವನಕವು | ಬಲು ಸುಖದಿಂ ನಿನ್ನಾಳ್ತನಕೆ ||
ಖಳರಟ್ಟುಳಿ ಸೋಕಲು ಬಿಡದಂದದಿ | ನಳಿನಾಂಬಕನಿಹ ಬೆಂಬಲಕೆ || ||೧೧||

ಇದಕೋ ಪೂಜಿಸಿದುದಕೆ ಪ್ರಸಾದವು | ಮುದದಿಂ ಬಾಳಿರು ನೀನೆನುತ ||
ತ್ರಿದಶಾಧಿಪನಿಂಗೀವುತ ಕಳುಹಿಸಿ | ಮೊದಲಂದದಿ ಸೃಜಿಸುತ ಮತ್ತಾ ||
ವಿಧಿಯು ಕಮಂಡಲದುದಕವ ಪ್ರೋಕ್ಷಿಸೆ | ಉದಧಿ ಕುದಿದು ಧರೆ ನಡುಗಿದುದು ||
ಆದುಭುತ ಕಾಯದೊಳಿದಿರೊಳಗೋರುವ | ನುದಿಸಿ ಪೇಳ್ದ ರೌದ್ರವ ತಳೆದು || ||೧೨||

ರಾಗ ಮಾರವಿ ಏಕತಾಳ

ತಿಂಬೆನು ತ್ರೈಲೋಕ್ಯವ ಹಸಿವೆನಗೆ ಸ | ಪ್ತಾಂಬುಧಿಯನು ತೃಷೆಗೆ ||
ಕೊಂಬೆನು ಉದರಕೆ ಎನ್ನ ಪಡೆದರಾ | ರೆಂಬುದರಿಯೆನೆನುತ || ||೧೩||

ಸುತ್ತಲು ಪರಿಕಿಸಿ ಹತ್ತಿರದುಪವನ | ದತ್ತ ಹಾರಿ ಭರದಿ ||
ಉತ್ತಮ ಫಲತರು ಕಿತ್ತು ಕೆಡಹಿ ಮೆ | ಲ್ಲುತ್ತಿರಲಜ ಕಂಡು || ||೧೪||

ಕೊಡಲಿಯ ಕಾವೇ ಕೆಡಿಸಿತು ಕುಲವೆಂ | ದಡಚಿತಿಂದಿಗೆನುತ ||
ಬಿಡದೆ ಮಂತ್ರಜಲ ಜಡಜಜ ಪ್ರೋಕ್ಷಿಸ | ಲಡಿಗೆರೆಗುತಲೆಂದ || ||೧೫||

ರಾಗ ಕೇದಾರಗೌಳ ಝಂಪೆತಾಳ

ಗುಣವನಧಿ ನಿನ್ನಿಂದಲಿ | ಸಂಭವಿಸಿ | ತೆನಗೆ ಜನುಮವಿದಿಂದಿಲಿ ||
ಜನಕ ನೀನೆಂದ ತೆರದಿ | ನಡೆವೆ ನಾ | ನನವರತ ನೆಲೆಸಿ ಜಗದಿ || ||೧೬||

ಠಾವೆಲ್ಲಿ ತೋರಿಸೆನಗೆ | ಪೆಸರು ಇ | ನ್ನಾವುದೈ ಲೋಕದೊಳಗೆ ||
ಕೋವಿದನೆ ಪೇಳ್ದುದನ್ನು | ಮಾಳ್ಪೆನೆನ | ಲಾ ವಿರಿಂಚಿಯು ನುಡಿದನು || ||೧೭||

ಭಾಮಿನಿ

ಸುತನೆ ಕೇಳ್ಪೂರ್ವದೊಳು ದಕ್ಷನ
ಸುತೆ ಕುಶಸ್ಥಳಿಯಿಂದಲಾ ಮುನಿ
ಪತಿ ಮಹಾಕಾಶ್ಯಪಗೆ ಕಿಷ್ಕಿಯ ಪೆಸರ ವಾನರನು |
ಸುತನವನ ಇರಕಾಗಿ ಸೃಜಿಸಿರು
ವತಿಶಯದ ಕಿಷ್ಕಿಂಧೆ ಪಾಲಿಸು
ಅತುಳಬಲ ಋಕ್ಷಾಭಿಧಾನದಿ ಕೀಶಪತಿಯೆನಿಸಿ || ||೧೮||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ನವಬ್ರಹ್ಮರೊಡನೆ ಜಾಂಬವ ಪುಟ್ಟಿ ಇಲ್ಲಿರ್ಪ |
ನವನ ನಿಲ್ಲಿಪೆ ಮಂತ್ರಿತನಕೆ ||
ಅವನಿಯನಾಳೆಂದು ಋಕ್ಷಿ ಎನ್ನುವಳೋರ್ವ |
ಯುವತಿಯ ಸೃಜಿಸುತ್ತನವಗೆ || ||೧೯||

ತ್ವರಿತದಿ ಪಟ್ಟವ ರಚಿಸಿ ಬಾರೆನ್ನುತ |
ಸುರದೂತನನು ಜತೆಗೊಳಿಸಿ ||
ಧರೆಗಟ್ಟಲವರೊಂದುಗೂಡಿ ಇಳಿದು ಬಂದು |
ತೆರಳಿದರಾ ಗಿರಿಯೆಡೆಗೆ || ||೨೦||

ರಾಗ ಕಾಂಭೋಜಿ ಝಂಪೆತಾಳ

ಪರಿಕಿಸುತ ಬೆರಗಾದರಖಿಳಜಾತಿಯ ಫಲವು |
ಪರಿಪರಿಯ ಸುಮಗಳಿಹವಮಿತ ||
ನೆರೆದು ಖಗಮೃಗನಿಕರ ಚರಿಸುತ್ತಲಿರೆ ಕಂಡು |
ಶಿರವ ತೂಗುತಲಿ ವೈಭವಕೆ || ||೨೧||

ಪುಣ್ಯಫಲದಿಂ ಒದಗಿತೆನುತ ಪಟ್ಟವ ಕಟ್ಟಿ |
ಮನ್ನಣೆಯಗೊಳುತ ಚರ ತೆರಳೆ ||
ಇನ್ನಖಿಳ ಕಪಿವರ್ಗ ಕಾಣಿಕೆಯನಿತ್ತು ಸಂ |
ಪನ್ನನನು ಸೇವಿಸುತಲಿರಲು || ||೨೨||

ಸಲಹೆ ಕೆಲಕಾಲ ಧರ್ಮದಿ ಸಕಲ ಪ್ರಜೆಗಳಂ |
ನೆಲಸಿದುದು ಸರ್ವಸೌಭಾಗ್ಯ ||
ಕುಲವ ಬೆಳಗಿಸುವ ಸಂತತಿ ಇಲ್ಲದಿರೆ ಮನದ |
ಕಳವಳವ ಜಾಂಬವನೊಳೆಂದ || ||೨೩||

ರಾಗ ಪಂತುವರಾಳಿ ರೂಪಕತಾಳ

ಅರುಹಲರಿಯೆ ಹಿರಿಯ ಜಾಂಬವ | ಜನುಮವೇಕೆ |
ಕರುಣಿಸಿದನು ಜಲಜ ಸಂಭವ ||
ತೊರೆಯದಂತೆ ಧರ್ಮಮಾರ್ಗ | ಪೊರೆದ ಸಕಲ ಕೀಶವರ್ಗ ||
ಬರಿದೆಕೆಟ್ಟುದೆನ್ನ ಬಾಳ್ವೆ | ಪರಿಹರಿಸಲಿಕೇನ ಗೈವೆ || ||೨೪||

ಫಲಿಸದಿರುವ ತರುವಿನಂದದಿ | ಇಳೆಯೊಳುದಿಸಿ |
ಬೆಳೆದರೇನು ಧರ್ಮಮಾರ್ಗದಿ ||
ತಿಳಿದು ಪುಣ್ಯಕರ್ಮಗಳನು | ಹಲವನೆಸಗಿ ದಣಿದೆ ತಾನು |
ಕುಲವ ಬೆಳಗಿಸುವ ಸುಪುತ್ರ | ಫಲವ ಕಾಣೆನಿದು ವಿಚಿತ್ರ || ||೨೫||

ರಾಗ ಸುರುಟಿ ಏಕತಾಳ

ಇಂತೆನೆ ಜಾಂಬವನು | ಪೇಳಿದ |
ಚಿಂತಿಸಿ ಫಲವೇನು ||
ಸಂತಾಪವ ತೊರೆ | ದಂತಃಶುದ್ಧದಿ |
ನಿಂತು ಭಜಿಸು ಆ | ಕಂತುವಿರೋಧಿಯ || ||೨೬||

ಹತ್ತಿರ ರಂಜಿಸುವ | ಪಂಪಾ |
ಕ್ಷೇತ್ರದಿ ತಪಗೈವ ||
ಭಕ್ತರ ಮನದಿ | ಷ್ಟಾರ್ಥ ಸಿದ್ಧಿಪುದೆನೆ |
ಮತ್ತವನಾಜ್ಞೆ ಕೊ | ಳುತ್ತವನೈದಿದ || ||೨೭||

ಕಂದ

ಮಿಂದು ಭಸಿತ ರುದ್ರಾಕ್ಷಿಗ
ಳಂ ಧರಿಸುತ್ತಲಿ ಮಹೇಶನಂಘ್ರಿಯನಾತಂ |
ಒಂದೇ ಮನದಿಂ ಜಯ ಜಯ
ವೆಂದೆನುತಲಿ ಸ್ತುತಿಯ ಗೈದ ಕುಳಿತೊಂದೆಡೆಯೊಳ್ || ||೨೮||

ರಾಗ ತೋಡಿ ಆದಿತಾಳ

ಜಯ ಜಯ ಗೌರೀರಮಣ | ಕೃಪಾವರಣ || ಪಲ್ಲವಿ ||

ದಯೆದೋರೈ ಭವ | ಭಯಹರ ಸಜ್ಜನ |
ಪ್ರಿಯ ಪಾವನ ಶಿಖಿ | ನಯನ ವಿಶ್ವಂಭರ || ಜಯ || ||೨೯||

ಅಂಧಕಾರಿ ಮುನಿ | ವೃಂದ ವಂದ್ಯ ಶ್ರೀ |
ಚಂದ್ರಮೌಳಿ ಬ್ರ | ಹ್ಮೇಂದ್ರ ಸುರಾರ್ಚಿತ || ಜಯ || ||೩೦||

ವಾರ್ಧಕ

ಹರನು ಮೈದೋರದಿರೆ ಮರುದಿವಸದುದಯದೊಳ್
ವಿರಚಿಸುವೆ ಸ್ನಾನವೆಂದೆನುತ ಪರಿಶೋಭಿಸುವ
ಸರಸಿಯೊಳು ಮುಳುಗಿ ಮೇಲಡರೆ ಸ್ತ್ರೀಯಾಗೆ ನಾಚುತ ನಿಂದಿರುವ ವೇಳ್ಯದಿ ||
ಸುರಪಾಲನೆಂದಿನಂದದಿ ಬಂದು ಶಂಕರನ
ಚರಣಪೂಜೆಯ ಗೈದು ಮರಳುತಿರೆ ಪರಿಕಿಸುತ |
ಸ್ಮರಶರದಿ ಬಸವಳಿದು ಹತ್ತಿರಕೆ ತೆರಳಿಯವಳೊಡನೆ ನಸುನಗುತೆಂದನು || ||೩೧||

ರಾಗ ಘಂಟಾರವ ಏಕತಾಳ

ಸುಂದರಾಗಿ ಸುಮಗಂಧಿ ಚಂದ್ರವದನೆ | ಮಾ |
ತೊಂದಾಲಿಸು ಸುಗುಣೆ ||
ಬಂದೋರ್ವಳೆ ನೀ ನಿಂದುದೇನು ಜಾಣೆ ||
ತಂದೆ ತಾಯಿ ಸಂ | ಬಂಧಿಕರಿಲ್ಲವೆ |
ಸಂದೇಹದೊಳಿರು | ವಂದವನರಿಯೆನು || ||೩೨||

ತರುಣಿ ನಿನ್ನ ಸುಂದರತರ ರೂಪವನು | ಪರಿಕಿಸಿ ಭ್ರಮಿಸಿದೆನು |
ಸ್ಮರನುರುಬೆಯ ಪರಿಹರಿಸಲರಿಯೆನಿನ್ನು | ನಾನೇ ವಾಸವನು ||
ಸುರತದೊಳೆನ್ನನು ಸರಸಗೊಳಿಸು ನೀನು ||
ತೊರೆದು ಪುರಕೆ ಪಿಂ | ದಿರುಗೆನೆನುತ್ತಲಿ |
ಕರವಿಕ್ಕಲು ತಡೆ | ದರುಹಿದನವನೊಳು || ||೩೩||

ರಾಗ ಜಂಜೂಟಿ ಏಕತಾಳ

ತಡೆಯೈ ಎನ್ನೊಳ್ಯಾತಕಿನಿತು ನುಡಿವೆ ಹೀನ ಮಾತು |
ಬಡ ವಾನರರ ಹುಡುಗಿಯೊಡನೆ ದುಡುಕಬಹುದೆ ಇನಿತು ||
ಒಡೆಯ ಸುರರ್ಗೆ ಅಪ್ಸರೆಯರ ಬಿಡದೆ ರಮಿಪ ನೀನು |
ದೃಢವ ಮರೆದು ಅಲ್ಪ ಜನರ ನಡತೆ ನಡೆವುದೇನು || ||೩೪||

ಮನಕೆ ಹಿತವೆಂದೆನಿಸಲದಕೆ ಘನತೆಯಧಿಕ ಜಗದಿ |
ವನಚರನಾದರೆಯು ಬಿಡೆನೆಂದೆನುತ ಪಿಡಿವಾತುರದಿ ||
ಅನಿಮಿಷೇಂದ್ರ ಬಳಿಗೆ ಸರಿದಾ ಕ್ಷಣಕೆ ಓಡಲವನು |
ಗಣಿಸದೆ ಬೆಂಬಿಡಿದು ಮುದದಿ ತನುವ ಬಿಗಿದಪ್ಪಿದನು || ||೩೫||

ಭಾಮಿನಿ

ಅನಿತರಲಿ ಚಲಿಸುತ್ತ ರೇತಸು
ವನಚರನ ವಾಲಾಗ್ರದೆಸೆಯ
ನ್ನನುಸರಿಸಿ ಕೆಳಗಿಳಿಯಲದರಿಂದಾ ತತೂಕ್ಷಣದಿ |
ತನಯನಾಗಲು ದಿವ್ಯ ಮಾಲಿಕೆ
ಯನು ಗಳಕೆ ತೊಡಿಸುತ್ತ ಸುತನ |
ನ್ನನುಪಮೆಯ ಕೈಗಿತ್ತು ನಾಕಕೆ ನಡೆದನಮರೇಂದ್ರ || ||೩೬||

ರಾಗ ಆರ್ಯ ಸವಾಯ್ ಏಕತಾಳ

ತರಳನ ಬಗೆಗಚ್ಚರಿಗೊಂಡಿರೆ ಭಾ | ಸ್ಕರನಂಬರದಿಂದೀಕ್ಷಿಸುತ ||
ತರುಣಿಯ ರೂಪಕೆ ಮರುಳಾಗುತ್ತಲಿ | ಸರಿದು ಬಳಿಗೆ ನುಡಿಸಿದನಾತ || ||೩೭||

ರಾಗ ಬೇಗಡೆ ಅಷ್ಟತಾಳ

ಮತ್ತಕಾಶಿನಿ ವನದೊಳೋರ್ವಳೆ ನಿತ್ತಿರುವುದೇನು | ಶೋಭಿಪ |
ಪುತ್ರನಾವನು ವಿವರಿಸೆನಗೆ ಚರಿತ್ರವೆಲ್ಲವನು || ಬಂದ ವಿ |
ಪತ್ತು ಆರಿಂದೆನಲಿಕದರ ನಿವೃತ್ತಿ ಪಡಿಸುವೆನು | ಮನದೊಳು ||
ತತ್ತಳಿಸದಿರು ನಿರತ ಸುಖಸಂ | ಪತ್ತು ಒದಗುವ ವರವ ಪಾಲಿಪೆ |
ಉತ್ತರೋತ್ತರವಹುದು ಒಡಗೂ | ಡುತ್ತ ಮನ್ಮನಕರ್ತಿಪಡಿಸೆಲೆ || ||೩೮||

ತಿಳಿಯೆಯಾ ಹನ್ನೆರಡು ರಾಶಿಗಳೊಳು ಬೆಳಗುತಿಹೆನು | ಲೋಕಂ |
ಗಳಿಗೆ ಕಂಗಳ ತೆರದಿ ಜ್ವಲಿಸುವ ಪ್ರಭೆಯ ಬೀರುವೆನು | ಅಲ್ಲದೆ |
ಗಳಿಸಿ ತ್ರೈಮೂರ್ತಿಗಳೊಲುಮೆ ಬರ್ದಿಲರೊಳುತ್ತಮನು | ಶರಣರಿ |
ಗೊಲಿದು ಇಷ್ಟಾರ್ಥವನು ಪಾಲಿಪೆ | ಲಲನೆಯರ ಕುಲಮಣಿಯೆ ಸಂತಸ |
ಜಲಧಿಯಲಿ ಮುಳುಗಿಸುವೆ ಸುಮ್ಮನೆ | ಬಳಲಿಸದೆ ತನು ಉಳಿಸು ಒಮ್ಮೆಗೆ || ||೩೯||

ವಾರ್ಧಕ

ಇಂತು ಬಲು ವಿಧದಿಂದ ಬೋಧಿಸಿದರಾ ನುಡಿಗೆ |
ಕಾಂತೆ ಮೈಗೊಡದೆ ಯೋಚಿಸುತ ನಿಂದಿರೆ ರವಿಯು |
ತಾಂ ತವಕದಿಂದ ಪಿಡಿದಪ್ಪಲು ಮನೋಭೀಷ್ಟ ಸಂತು ಗ್ರೀವದ ಕಡೆಯಲಿ ||
ಕಂತು ಸನ್ನಿಭನೋರ್ವನುದಿಸಲು ತತೂಕ್ಷಣಕೆ
ಸಂತಸದಿ ತಡವರಿಸುತವಳ ಕೈಗಿತ್ತಾ ಕೃ
ತಾಂತಪಿತ ನಭಕಡರಿ ತೀವ್ರಗತಿಯಿಂ ತೆರಳೆ ಬೇಸರಿಸುತವನಾಗಲು || ||೪೦||

ವೃತ್ತ

ಕಾಣಿಸಲೆಂತೀ ವದನ ಮುಂದೆ ಜಗಕಂ ಪ್ರಾಣದಿಂದುಳಿಯೆನಿಂದು
ತಾನೀ ಬಾಲರನುಳಿದು ಶೋಭಿಪ ಕೊಳಕೆ ಧುಮುಕುತ್ತಲಳಿವೆನಿಂದು |
ಆನಂದ ಜಗಕಾಗಲೆನ್ನುತ ತ್ವರಿಯದಿಂದೈದಿ ಜಲಕಿಳಿಯಲು
ಧ್ಯಾನಾಸಕ್ತಿಯ ಪುರುಷನಾಗೆ ಬಂದಾ ಸ್ಥಾಣು ಪೇಳಿದವನೊಳು || ||೪೧||

ರಾಗ ಯಮುನಾಕಲ್ಯಾಣಿ ಅಷ್ಟತಾಳ

ಕರಗದಿರೈ ವೃಕ್ಷಂಚರ ನೀನು | ತಾ | ನೊರೆವೆ ವಿಸ್ತರಿಸುತೆಲ್ಲವನಿನ್ನು ||
ತರಳನುದಿಪ ಯೋಗ ನಿನಗಿಲ್ಲ | ಎಂಬ | ತೆರಕಾಗಿ ನಡೆದ ಘಟನೆಯೆಲ್ಲ || ||೪೨||

ಇಂದ್ರರೇತಸವು ಬಾಲದಿ ನಿಂದು | ಪುಟ್ಟಿ | ಕಂದನಾದಗೆ ವಾಲಿ ಎನುತಿಂದು ||
ಹೊಂದಿಕೆ ನಾಮ ಭಾಸ್ಕರನಿಂದ | ಗ್ರೀವ | ದಿಂದಾದ ಸುಗ್ರೀವ ಕಿರಿಕಂದ || ||೪೩||

ಜನಿಸುವಳೊರ್ವಳ್ಕುವರಿ ನಿನ್ನ | ಪ್ರಿಯ | ವನಿತೆ ಋಕ್ಷಿಯಲಿ ಸುಗುಣಪೂರ್ಣ ||
ಘನವಂತ ವೈಷ್ಣವರಧಿನಾಥ | ಪುಟ್ಟು | ವನು ಆಕೆಯಿಂದ ಶ್ರೀಶನ ದೂತ || ||೪೪||

ರಾಗ ಕಾಂಭೋಜಿ ಝಂಪೆತಾಳ

ಶೂಲಿ ಇಂತೆನಲವನ ಕಾಲಿಗೆರಗುತ್ತಲಾ |
ಬಾಲಕರ ಕೂಡಿ ಶೀಘ್ರದಲಿ ||
ಆಲಯಕೆ ಬಂದು ಗೋಲಾಂಗೂಲಪತಿ ವಾರ್ತೆ |
ಮೂಲದಿಂ ಜಾಂಬವನೊಳರುಹಿ || ||೪೫||

ಪುರವರದಿ ಸುಖದಿಂದಲಿರಲು ಸುತೆಯುದಿಸಲಾ |
ಕರೆದು ಅಂಜನೆ ಎನುತ ಮುದದಿ ||
ಮೆರೆಯಲಿತ್ತಲು ವಾಲಿ ಸುಗ್ರೀವರಾಡಿದರು |
ನೆರಹಿ ಗೆಳೆಯರ ಪಂಥ ಪಿಡಿದು || ||೪೬||

ರಾಗ ಮುಖಾರಿ ಆದಿತಾಳ

ಬಾಲರಾಟದ ಲೀಲೆಗಳನು | ತೋರ್ದರು ಪಿತಗೆ |
ಮೂಲೋಕ ಭ್ರಮಿಸುವಂದವನ್ನು || ಪಲ್ಲವಿ ||

ಮೇಲುವರಿದು ತಂತಮ್ಮೊಳು ಪಂಥ ವಿ |
ಶಾಲತೆಯಿಂದಲೆ ವಾಲಿಸುಗ್ರೀವರು || ಅ.ಪ ||

ಚಂಡವಿಕ್ರಮರು ಒಂದೊಂದು | ತಂಡವ ಮಾಡಿ |
ಕೊಂಡವರನ್ನು ಕೂಡಿಕೊಂಡು ||
ಚೆಂಡು ಬುಗರಿ ಗುಂಡಾಟ ಓಟ ಉ |
ದ್ದಂಡದಾಲ ಉಯ್ಯಾಲೆಯೊಳತಿಮುದ |
ಗೊಂಡವರೀರ್ವರು ದಂಡಿಸಿ ಹಲವರ |
ಅಂಡಲೆಯುತ್ತಲಿ ಪುಂಡರ ತೆರದೊಳು || ಬಾಲರಾಟದ || ||೪೭||

ವಾರ್ಧಕ

ತಾತಗೆಂದನು ಇನಜ ಬಡಿದನಗ್ರಜನವನ
ಘಾತಿಸದೆ ಬಿಡೆನೆನಲು ಉಗುರಿಂದ ಗೀರಿ ತನು
ಭೂತಳದಿ ಪೊರಳಾಡಿ ವಾಲಿ ತೋರ್ದನುಜನಂ ಶಿಕ್ಷಿಸುವೆನೆನಲೆಂದನು |
ನೀತಿಯಲ್ಲಿದು ಒಂದೆ ಮತದೊಳಿಹುದೆಂದವರ
ಪ್ರೀತಿಯಿಂ ಕಳುಹಲಂಜನೆ ಸ್ಮರನ ತಾಪದಿಂ |
ಕಾತರಿಸುತನ್ನಪಾನವ ತೊರೆದು ಕುಳ್ಳಿರಲು ದೂತಿ ಪರಿಕಿಸುತೆಂದಳು || ||೪೮||

ರಾಗ ಪೂರ್ವಿಕಲ್ಯಾಣಿ ಅಷ್ಟತಾಳ

ಎಂದಿನ ತೆರ ಕಾಣದು | ಮೊಗದ ಕಾಂತಿ |
ಕುಂದಿ ಬೆಂಡಾಗಿಹುದು ||
ಮಂದಗಾಮಿನಿ ಸುಖ | ದಿಂದ ರಂಜಿಪಳಿಗೆ |
ಬಂದಿಹ ದುಗುಡವೇ | ನೆಂದು ತಿಳಿಯೆನಮ್ಮ || ||೪೯||

ಅನ್ನಪಾನೀಯಗಳು | ತ್ಯಜಿಸಿ ಶೋಕ |
ವನ್ನಾಂತುದೇಕೆ ಪೇಳು ||
ಸ್ವರ್ಣಭೂಷಣ ಒಲ್ಲೆ | ಯೆನ್ನುವ ಬಗೆಯೇನು |
ಸನ್ನುತ ಸುಮಫಲ | ವನ್ನು ತೊರೆದೆ ಏಕೆ || ||೫೦||

ರಾಗ ಹನುಮತೋಡಿ ಆದಿತಾಳ

ವಿಸ್ತರಿಸುವದೇನಾಪತ್ತನು ನಿನಗೆ |
ವ್ಯರ್ಥ ವಿಧಿಯು ಜನ್ಮವಿತ್ತನೇಕೆನಗೆ ||
ನಿತ್ಯ ಭೋಗಿಸುತ ಸಮಸ್ತ ವೈಭವದಿ |
ಹೊತ್ತು ಕಳೆದರೇನು ಸಾರ್ಥಭೂತಳದಿ || ||೫೧||

ಹಾರ ಪದಕ ಬಲು ಭಾರ ತೋರುವುದು |
ಸೇರದನ್ನವು ನಿದ್ದೆ ದೂರವಾಗಿಹುದು ||
ಸಾರತರದ ಸುಮಗಂಧಗಳೆಲ್ಲ |
ವೈರ ಪಿಡಿದು ಎನ್ನ ಪೀಡಿಪುದಲ್ಲ || ||೫೨||

ಒರಗಿ ನಿದ್ರಿಸುತಿರೆ ಪುರುಷನೋರುವನು |
ನೆರೆದು ಕನಸಿನೊಳು ತೆರಳಿ ಪೋಗಿಹನು ||
ಸುರತ ಸಂದುದು ಗುಟ್ಟ ನರುಹಿದೆ ಸಖಿಯೆ |
ಅರುಹು ಸುಖದಿ ಬಾಳ್ವ ತೆರ ಶಶಿಮುಖಿಯೆ || ||೫೩||

ರಾಗ ನಾದನಾಮಕ್ರಿಯೆ ಅಷ್ಟತಾಳ

ಏನೆಂಬೆನಮ್ಮ ನಾನದಕೆ | ಕಷ್ಟ |
ತಾನಾಂತುದನ್ನು ಬಣ್ಣಿಸಲರಿದೆನಗೆ ||
ಧ್ಯಾನಿಸಿ ವರನ ನಿದ್ರಿಸಲು ಸ್ವಪ್ನದಿ ಸುಮ |
ಬಾಣದುರಿಗೆ ಎದ್ದು ಮೈನೆರಳಪ್ಪಿದೆ || ||೫೪||

ತತ್ತಳಿಸುವದೇತಕಿದಕೆ | ಪೋಗಿ |
ಪೆತ್ತವನಲಿ ನಿನ್ನ ಮುತ್ತಿನ ಸರಕೆ ||
ಉತ್ತಮವಾದೊಂದು ರತ್ನಪದಕ ಕೇಳು |
ಚಿತ್ತಚಂಚಲವ ನಿವೃತ್ತಿಪಡಿಸದಿರ || ||೫೫||

ಭಾಮಿನಿ

ಸರಸಿಜಾಂಬಕಿ ಇಂತೆನಲಿಕತಿ |
ಸರಸದಿಂ ಕರಕೊಳುತಲಾಕೆಯ
ತೆರಳಿದಳು ಪಿತಗರುಹಲಳುಕುತಲಂಜನಾದೇವಿ ||
ಮೆರೆದಿರಲು ಓಲಗದಿ ಋಕ್ಷನು
ಚರಣಕಾನತಳಾಗಿ ನಾಚುತ |
ಶಿರವ ನೆಗಹದೆ ನಿಂದವಳ ಹತ್ತಿರಕೆ ಕರೆದೆಂದ || ||೫೬||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ಬಾರವ್ವ ಮುದ್ದು ಕುಮಾರಿ ಮೌನವನಾಂತು |
ದೂರ ನಿಂದಿಹುದ್ಯಾತಕಿಂದು ||
ಆರು ನಿಂದಿಸಿ ನಿನ್ನ ಜರೆದರು ಬೇರೆ ವಿ |
ಚಾರವಿರಲು ಮಾಜದುಸುರು || ||೫೭||

ಎರಕದ ನೂತನಾಭರಣದೊಳಾಸೆಯೊ |
ಹರೆಯದಿ ರಂಜಿಪ ನೀನು |
ವರನಾಪೇಕ್ಷೆಯಲಿ ಬೇಸರಿಪೆಯೊ ಪೇಳೆನೆ |
ಶಿರಬಾಗುತೆಂದಳು ಪಿತಗೆ || ||೫೮||

ರಾಗ ನವರೋಜು ಏಕತಾಳ

ಲಾಲಿಪುದೆನ್ನಯ ಮಾತ | ಗುಣ |
ಶೀಲ ಸಜ್ಜನಪ್ರೀತ ||
ಬಾಲಕಿ ಇದಿರೊಳು ಮನಬಂದಂದದಿ |
ಪೇಳಿದಳೆನುತಲಿ ತಾಳದೆ ಕ್ರೋಧವ || ||೫೯||

ಸುಲಲಿತ ಉದ್ಯಾನದಲಿ | ಲತೆ |
ಬೆಳೆಸಿ ಸಂಪ್ರೀತಿಯಲಿ ||
ಫಲಿಸುವ ವೇಳೆಗೆ ಚೆಲುವ ತರುವ ಬೆಂ |
ಬಲವಿಲ್ಲದೆ ಸೊಗಸಿಲಿ ರಂಜಿಸುವುದೆ || ||೬೦||