ರಾಗ ಪೀಲು ಅಷ್ಟತಾಳ

ಮಾರುತ ಬಾರೊ ಚರಾಚರಭರಿತ | ಮೂರು ಲೋಕಗಳಿಗಾಧಾರ ಸಚ್ಚರಿತ ||
ಕಾರುಣ್ಯನಿಧಿ ನೀ ಸಂಚರಿಸದುಳಿದರೆ | ಆರಿಲ್ಲ ಲೋಕಕೆ ಕರ್ತರು ಬೇರೆ || ||೧೨೩||

ಉತ್ತಮರಿಗೆ ಕೋಪ ಚಿತ್ತದಿ ನಿಲದು | ಪೃಥ್ವಿಯ ಚಲಿಸುವ ಕರ್ತವ್ಯ ಉಳಿದು ||
ಸ್ವಸ್ಥದಿ ನೀನಿರೆ ಮೃತ್ಯುವು ಸುಳಿದು | ನಿತ್ಯವು ಜಗತಿಗಾಪತ್ತೊದಗುವುದು || ||೧೨೪||

ವಾರ್ಧಕ

ಹೊರವಳಯದಿಂದ ಪರಿಪರಿಯ ನೀತಿಯನುಸುರೆ
ಪೊರಟು ಬರುತಾ ಶವವ ಮುಂದಿರಿಸಿ ನುಡಿದೆನಿದ
ಪರಿಕಿಸಿರಿ ಹರಿಹರಬ್ರಹ್ಮಾದಿ ಸಕಲರಿಗೆ ಸರಸವೇ ಬಾಲನಳಿವು |
ಸರುವ ಲಕ್ಷಣಭರಿತನಿವನಳಿದ ಮೇಲಿನ್ನು
ಧರೆಯ ಸಂಚಾರವೇಕೆನಗೆ ವೈರಾಗ್ಯದಿಂ
ದಿರುವ ಗುಹೆಯೊಳಗನ್ಯರಿಂದ ನಡೆಸುವದಿದರನೆಂದು ಕಂಬನಿ ಸುರಿಸಲು || ||೧೨೫||

ರಾಗ ಕಾಂಭೋಜಿ ಝಂಪೆತಾಳ

ಮರುಗದಿರು ಕಾರ್ಯ ಮುಂದ್ವರಿದು ಪೋದುದಕೆ ಪರಿ |
ಹರಿಪಯತ್ನವ ಮಾಳ್ಪುದೆನುತ ||
ಹರಿಹರಾದ್ಯರು ಸಂತವಿಸೆ ಕಮಂಡಲಜಲವ |
ಸರಸಿರುಹಭವನು ಪ್ರೋಕ್ಷಿಸಲು || ||೧೨೬||

ಘಳಿಲನೆದ್ದೆಲ್ಲರಿಗೆ ತಲೆಬಾಗಿ ಕುಶಲದಿಂ |
ದಳಿದರಿಂ ಕುಶಲಾಂಗನಾಗಿ ||
ನೆಲಸು ಅಳಿಯದೆ ಮುಂದೆ ಹನುಮನೆಂಬಭಿಧಾನ |
ತಳೆದು ನೀನೆನುತ ವಿಧಿ ಪರಸೆ || ||೧೨೭||

ಹರನು ಎನ್ನೋಲ್ ಸತ್ವಭರಿತನಾಗೆನಲು ಶ್ರೀ |
ವರನು ಎನಗನುಯಾಯಿಯಾಗಿ ||
ಇರುವದೆನೆ ಸುರಪ ಸೌಭಾಗ್ಯಮಂ ತರಣಿ ಚಂ |
ದ್ರರು ತೇಜವಿತ್ತರಾತಂಗೆ || ||೧೨೮||

ಮರುತ ಗತಿ ಧನಪ ಸಿರಿ ತರಣಿಜಂ ಶಕ್ತಿಯಂ |
ವರುಣ ಗಾಂಭೀರ್ಯ ಮುನಿವರರು ||
ದೊರೆಯದಾಗಲಿ ಶಾಪಭಯವೆನಲು ಪೂಮಳೆಯ |
ಸುರಿಯೆ ಹರಸುತ ಪೋದರೆಲ್ಲ || ||೧೨೯||

ವಾರ್ಧಕ

ತನಯನಂ ಪಿಡಿದಪ್ಪಿ ಪೇಳ್ದ ಮಾರುತ ನಿನ್ನ
ಜನನಿ ಸುತನೇನಾದನೆಂದು ತರಹರಿಸುವಳ
ಘನವೇಗದಿಂದಲ್ಲಿ ಪೋಗಿ ಒದಗಿದ ಭಂಗವೆಲ್ಲವಂ ವಿಸ್ತರಿಸುತ |
ಜನನದಾಗಮ ತಿಳುಹಿ ಸಂತೈಸುತಾಕೆಯಿಂ
ದನುಮತಿಯ ಕೊಳುತ ನಿಗಮಾಗಮವ ಪಠಿಸಲ್ಕೆ
ದಿನಪನೆಡೆಗೈದೆನುತ ಬೀಳ್ಕೊಡಲು ಬಹ ಪಥದಿ ನೈಮಿಷಾವನ ಕಾಣುತ || ||೧೩೦||

ರಾಗ ಮಾರವಿ ಏಕತಾಳ

ಉತ್ತಮ ವನವೆನ್ನುತ್ತ ಪೊಕ್ಕು ಮರ | ಹತ್ತಿ ವಿನೋದದಲಿ ||
ಕಿತ್ತಳೆ ಜಂಬು ಕಪಿತ್ಥ ದ್ರಾಕ್ಷೆಗಳ | ಕಿತ್ತು ಮೆಲುತ್ತವನು || ||೧೩೧||

ಹಿಂಡು ಮುನೀಂದ್ರರ ತಂಡವಲ್ಲಿರ್ಪುದ | ನಂಡಲೆಯುತಲವರ ||
ಹೆಂಡಿರು ಮಕ್ಕಳ ಕಂಡೆಡೆಗೋಡಿಸಿ | ದಂಡಿಸಿ ಕೆಲವರನು || ||೧೩೨||

ಸೆಳೆಯುತ ಜಪಸರಗಳ ಹರಿದಿಡುಕುತ | ಎಳೆ ಪೆಣ್ಗಳ ಪಿಡಿದು ||
ಬಳಲಿಸಿ ಹೋಮಂಗಳ ಕೆಡಿಸುವ ಮ | ಕ್ಕಳ ಮುಳುಗಿಪ ಜಲದಿ || ||೧೩೩||

ಕಂದ

ಲೂಟಿಯನೆಸಗುತ ಮನದೊಳು
ಪಾಟಲ ಮೊಗದವನಿರಲ್ಕೆ ಮತ್ತಾಕಡೆಗಂ |
ಬೇಟೆಯನಾಡುವ ಶಬರರ
ಕೂಟವ ನೆರಹಿಸಿ ಸುಕೇತ ತಾನೈತಂದಂ || ||೧೩೪||

ರಾಗ ಮುಖಾರಿ ಏಕತಾಳ

ಬಂದು ಪೊಕ್ಕರು ಪುಣ್ಯಾಶ್ರಮಕೆ | ಬೇಟೆಯಾಡಲ್ಕೆ |
ಬಂದು ಪೊಕ್ಕರು ಪುಣ್ಯಾಶ್ರಮಕೆ ||
ಸಂದುಗೊಂದನರಸಲು ಮೃಗ ಕಾಣದೆ |
ಮುಂದೆ ನಡೆದು ತಪದಿಂದಿರ್ಪರ ನಿ |
ರ್ಬಂಧಪಡಿಸುತ ಪುಳಿಂದರು ನಾಲ್ದೆಸೆ |
ಯಿಂದ ಸುಳಿಯೆ ತಡೆದೆಂದನು ಹನುಮನು || ||೧೩೫||

ರಾಗ ಶಂಕರಾಭರಣ ಮಟ್ಟೆತಾಳ

ಫಡ ಪುಳಿಂದಕರಿರ ತೊಲಗಿ ದೃಢತೆಯಿಂದಲೆ |
ನಡೆಸಿ ತಪದೊಳಿರ್ಪ ಮೌನಿ ಗಡಣಕಿಂದಿಲಿ ||
ಬಿಡದೆ ಭಂಗಪಡಿಪ ದುಷ್ಟಕಾರ್ಯ ಸಲ್ಲದು |
ಬಡ ಮೃಗಂಗಳನ್ನು ಕೆಡಹಿದಂದವಲ್ಲಿದು || ||೧೩೬||

ಆರು ಕರೆದರಿಲ್ಲಿ ಕೀಶ ಪೋರ ನಿನ್ನನು |
ಏರಿ ಮರವ ದಿನವ ಕಳೆವ ಕೀಳ ನಮ್ಮನು ||
ಪಾರುಪತ್ಯ ಮಾಳ್ಪ ನಿನ್ನ ಕಾರ್ಯ ಸಲ್ಲದು |
ಮಾರಿ ಬಾಯ ಪೊಕ್ಕ ಕುರಿಯ ಬಾಳ್ವೆಯಪ್ಪುದು || ||೧೩೭||

ಕಿರಿಯನೆಂಬ ಎಣಿಕೆ ಬೇಡ ಘೋರ ವನವನು |
ಉರಿಯ ಕಿಡಿಯು ಸುಡುವ ತೆರದಿ ದಹಿಪೆ ಕುಲವನು ||
ಮರೆಗೆ ನಿಂದು ಶರವ ಬಿಡುವ ಶೌರ್ಯವೆನ್ನೊಳು |
ಮೆರೆಯಲರಿದು ಇರಿದು ನಿಂದು ಕಾದು ಧುರದೊಳು || ||೧೩೮||

ಮೊದಲೆ ಮಂಗ ಜಾತಿ ನೀನದರೊಳ್ಕಿರಿಯನು |
ಬದುಕುವಾಸೆ ಬಿಟ್ಟು ನುಡಿವೆ ಹಲವು ಮಾತನು ||
ಮದನವೈರಿ ಸುರಪಮುಖ್ಯ ತ್ರಿದಶರೆಮ್ಮೊಳು |
ಕದನಕಳುಕಿ ಭೀತಿಯಿಂದಲಿದಿರು ಬಾರರು || ||೧೩೯||

ಬಲುಹ ನೊಳ್ಪೆನೆನುತ ಮರದ ಕೊಂಬೆ ಕೀಳುತ |
ಹಲವರನ್ನು ಬಡಿದು ಇಳೆಗೆ ಕೆಡಹೆ ಕಾಣುತ ||
ಉಳಿದರೊಂದುಗೂಡೆ ಬಳಲಲ್ಯಾಕೆನುತ್ತಲಿ |
ಒಲಿಸಿ ಶಿಖಿಯನವರ ಬಲಕೆ ಕಳುಹೆ ಜವದಲಿ || ||೧೪೦||

ವಾರ್ಧಕ

ಬೀಸಲಾ ಉರಿಯ ಜತೆಯಿಂ ಮರುತ ಶಬರಕುಲ
ನಾಶವಾಗಲು ಕಂಡು ಮುನಿವರರು ಗೋಳಿಡುತ
ಮೂಷಿಕನ ದ್ವೇಷದೊಳು ಗೃಹಕೆ ಕಿಚ್ಚಿಟ್ಟ ತೆರವಾದುದೀತನ ಬಗೆಯಲಿ |
ಘಾಸಿಯಾಗುವೆವು ನಾವೆನುತ ಗೋಳಾಡುತಿರ
ಲಾ ಸಮಯಕೆಲ್ಲರಂ ಪೊತ್ತು ಹೊರಗಿಡೆ ಪ್ರಾಣ
ದಾಸೆಯಿಂದೋಡುತಿಹ ವ್ಯಾಧರ್ಗೆ ಕುದಿವ ಜಲ ಸುರಿಸಿದಂ ನಾಲ್ದೆಸೆಯಲಿ || ||೧೪೧||

ಆರ್ಯ ಸವಾರ್ಯ

ಉರಿಯಲು ವ್ಯಾಧರ ಪರಿಹಾರವು ಮುನಿ | ಪರರೀಕ್ಷಿಸಿ ಬಲಯುತ ನಿಮಗೆ ||
ಸರಿಯಲ್ಲವು ತಿಳಿದರೆ ಸತ್ವದಿ ಜಗ | ಉರಿಸದೆ ಬಿಡನದಕೀತನಿಗೆ ||
ಮರವೆಯಾಗಿ ಅಧಟಿರಲಿಯೆನುತ್ತವ | ರರುಹಲು ಪೊರಟು ಜವದಿ ಬರುತ ||
ತರಳನ ಕಾಣದೆ ಮರುಗುವ ಜನನಿಗೆ | ಎರಗಿ ಪೇಳ್ದ ನಡೆದಿಹ ಚರಿತ || ||೧೪೨||

ರಾಗ ಕಾಂಭೋಜಿ ಅಷ್ಟತಾಳ

ಶರಣಮ್ಮ ಜನನಿ ಬೇಸರಿಸದಿರೆನ್ನೊಳು | ತಾಯೆ ಕೇಳು | ಫಲ |
ತರುವಡೆ ನೀ ಪೋಗೆ ನಭ ಪರಿಕಿಸಿದೆ ನಾ | ತಾಯೆ ಕೇಳು ||
ತರಣಿ ಶೋಭಿಸುತಿರೆ ಹಣ್ಣೆಂದು ಭ್ರಮಿಸತ | ತಾಯೆ ಕೇಳು || ಒಡ |
ಲುರಿಯ ತಡೆಯದಲೆ ಭರದಿ ಲಂಘಿಸಿದೆ ನಾ | ತಾಯೆ ಕೇಳು || ||೧೪೩||

ಹತ್ತಿರಕೈದಲು ಮಿತ್ರನೆಂದರಿವಾಗಿ | ತಾಯೆ ಕೇಳು || ರಥ |
ಹತ್ತಿರ ರಾಹು ಸವಿತ್ರನೆಡೆಗೆಬಂದ | ತಾಯೆ ಕೇಳು ||
ಧೂರ್ತನ ತಡೆವುತ ನಿತ್ತಿರೆ ತ್ವರಿಯದಿ | ತಾಯೆ ಕೇಳು || ಆತ |
ನೊತ್ತಾಸೆ ಗೈದೆನ್ನ ಸುತ್ರಾಮ ಮಡುಹಿದ | ತಾಯೆ ಕೇಳು || ||೧೪೪||

ಚೇತನ ಕುಂದಿ ನಾ ಭೂತಳಕೊರಗಿರೆ | ತಾಯೆ ಕೇಳು | ಬಳಿ |
ಗಾತತೂಕ್ಷಣ ಬಂದು ತಾತ ಮಾರುತನೊಯ್ದ | ತಾಯೆ ಕೇಳು ||
ಆತನ ದೆಸೆಯಿಂದ ಹರಿಯಜಭವರೈದಿ | ತಾಯೆ ಕೇಳು | ಬಲು |
ಪ್ರೀತಿಯಿಂದೆಲ್ಲರು ಹರಸಿ ಪೋಗಿಹರೆನ್ನ | ತಾಯೆ ಕೇಳು || ||೧೪೫||

ರಾಗ ತೋಡಿ (ಸಾಂಗತ್ಯ) ರೂಪಕತಾಳ

ಎನಗೆ ಪೇಳಿದನಯ್ಯ ಸಿದ್ಧಯೋಗದಿ ನಿನ್ನ |
ಜನನಿಯ ಕೂಡಿದ ದಿನವೆ ||
ಜನಿಸಿದ ಮೋಹದ ತನಯ ನೀ ಚರಿತೆಯ |
ವಿನಯದಿ ಪೇಳೆಂದ ಹರಸಿ || ||೧೪೬||

ಕಳುಹಿರ್ಪ ನಡೆತಹ ಪಥದೊಳು ವ್ಯಾಧರ |
ಬಳಗವು ಮುನಿಗಳೆಲ್ಲರನು ||
ಬಳಲಿಪ ದುಷ್ಟರ ಬಳಗ ತೀರ್ಚಿದರಿಂದ |
ಬಲಯುತನಾದರು ಮುಂದೆ || ||೧೪೭||

ಮರವೆಯಾಗಲಿ ಸತ್ವವೆಂದು ಪೇಳ್ದುದರಿಂದ |
ತರಹರಿಸುವೆ ಮೇಘ ಕವಿದ ||
ತರಣಿಯ ತೆರನಾದೆ ಮತಿಮಲಿನತ್ವದೊ |
ಳಿರುವಂತಾದುದು ಬಾಳ್ವೆ ಜಗದಿ || ||೧೪೮||

ಬಾಲನಿಂತೆಂದುದ ಕೇಳಿ ಮಾರುತನಿಂದ |
ಹಾಳಾಯ್ತು ಧರ್ಮ ಯೋಚಿಸಲು ||
ಮೂಲೋಕಗಳ ಪ್ರಾಣರೂಪನಾಗಿರಲೆನ್ನ |
ಶೀಲಕ್ಕೆ ಕುಂದಿಲ್ಲವೆನುತ || ||೧೪೯||

ಕಂದ

ಪುತ್ರನ ನಡೆನುಡಿಗಂ ಹಿ
ಗ್ಗುತ್ತಲಿ ಪಿಡಿದಪ್ಪುತೆಂದಳಾ ಮುನಿಬಳಗಂ |
ಬಿತ್ತರಿಸಿದರಿಂ ನಿನ್ನ ಚ
ರಿತ್ರವು ಜಗಕಧಿಕಮಾಗಿ ಬೆಳಗಲಿ ಎನುತಂ || ೧೫೦ ||

ರಾಗ ಕೇತಾರಗೌಳ ಅಷ್ಟತಾಳ

ತೊಡಿಸುತ ರನ್ನದ ಉಡುದಾರ ಕೌಪೀನ |
ಉಡಿಸಿ ಕುಂಡಲವನಿಟ್ಟು ||
ಜಡಜನಾಭನು ರಾಮನವತಾರದಿಂದಲಿ |
ಪೊಡವಿಯೊಳುದಿಸುತಲಿ || || ೧೫೧ ||

ನಿನ್ನ ಕುರುಹ ಸೂಚಿಸುತ ಕರೆಯುವನಾತ |
ನನ್ನು ಸೇವಿಸು ನಿರತ ||
ಇನ್ನಾರಿಗದು ಗೋಚರಿಸದು ಎಂದುಪದೇಶ |
ವನ್ನಿತ್ತು ಹರಸಲೆಂದ || ೧೫೨ ||

ಕಳುಹೆನ್ನ ಹರಸುತ ಪಿತನಾಜ್ಞೆಯಂತೆ ನಾ |
ನಳಿನಾಪ್ತನೆಡೆಗೆ ಪೋಗಿ |
ತಿಳಿಯುವೆ ನಿಗಮಾಗಮಾದಿ ತತ್ವಗಳೆನೆ |
ನಲವಿಂದ ಬೀಳ್ಗೊಟ್ಟಳು || ೧೫೩ ||

ರಾಗ ಕಾಂಭೋಜಿ ಝಂಪೆತಾಳ

ಲಾಲಿಸೈ ರಘುನಾಥ ವಾಲಿಯನುಜನ ಕೂಡಿ |
ಕಾಳಗದಿ ಗೆದ್ದು ಹಲವರನು ||
ಮೇಲೆ ವಿಂಗಡವಾಗಿ ಇಂದ್ರಜ ಸುರಾಸುರರ |
ಪಾಲಾಬ್ಧಿ ಮಥಿಸುವೆಡೆಗೈದಿ || ೧೫೪ ||

ಇತ್ತಂಡವನು ನಿಂದಿಸುತ್ತಲೊರ್ವನೆ ಮಥಿಸೆ |
ಮತ್ತ ಕಾಶಿನಿ ತಾರೆಗಾಗಿ ||
ಶತ್ರುತ್ವದಿಂ ಶಶಿಯನಿದಿರಿಸಲ್ಕಾ ಸಮತೆ |
ವೆತ್ತವಳ ಸೃಜಿಸುತಲೆ ವಿಧಿಯು || ೧೫೫ ||

ತೋರಿ ದ್ವಯ ತಾರೆಯರೊಳೋರ್ವಳಂ ತಾರಕ ಕು |
ಮಾರಿ ಎನುತಲಿ ವಾಲಿಗಿತ್ತು ||
ಮಾರನಯ್ಯನ ಹಗೆಯನೆಚ್ಚರಿಸೆ ಸತಿಯೊಡನೆ |
ಸಾರಿದನು ತನ್ನ ಪುರವರಕೆ || ೧೫೬ ||

ದ್ಯುಮಣಿಯಾತ್ಮಜನತ್ತ ರುಮನೊಡನೆ ಒಂದಬ್ದ |
ಸಮರಗೈದವನ ಬಂಧಿಸುತ ||
ಕಮಲಮುಖಿಯವನಣುಗೆ ರುಮೆ ಎಂಬವಳ ಕೂಡಿ |
ಗಮಿಸಿದನು ತನ್ನ ಮಂದಿರಕೆ || ೧೫೭ ||

ವಾರ್ಧಕ

ಒತ್ತಿನಿಂ ನಡೆತಂದು ಪಿತಗೆ ಮಣಿಯುತ ಸಕಲ
ವೃತ್ತಾಂತ ಬಿನ್ನವಿಸೆ ಸಂತಸದೊಳುಭಯರಿಗೆ
ಉತ್ತಮದ ಲಗ್ನ ಪರಿಕಿಸುತ ಪಾಣಿಗ್ರಹಣ ವಿರಚಿಸುತ ವೈಭವದಲಿ |
ಮತ್ತೆ ಕೆಲಕಾಲ ಕಳೆದಧಿಕಾರ ತನಯರಿಂ
ಗಿತ್ತು ತಪಕೈದಲಾ ಮಹಿಷಸುತ ದುಂದುಭಿಯ
ಪುತ್ರ ಮಾಯಾವಿ ಪಾತಾಳಲೋಕದೊಳಿರ್ದು ತನ್ನವರೊಳಿಂತೆಂದನು ||೧೫೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿ ಸುಭಟರು ದಿತಿಜರನು ಸುರ |
ಪಾಲ ಕೊಲಿಸುತ ನಾಕಪದವಿಯ |
ನಾಳುವನು ನಮಗಿರುವಿಕೆಗೆ ಪಾ | ತಾಳವಾಯ್ತು || ೧೫೯ ||

ಮತ್ತವಾರಣ ಬಿದ್ದು ಕುಣಿಯೊಳು |
ಸತ್ವಗುಂದಿದ ತೆರದಿ ದೈತ್ಯರ |
ಮೊತ್ತ ಕಂಡೆಡೆಗೋಡಿ ಬಾಳುವೆ | ವ್ಯರ್ಥವಾಯ್ತು || ೧೬೦ ||

ಕೋಣ ಬಲು ಕೊಬ್ಬಿದರೆ ಜಗತಿಯೊ |
ಳಾನೆಗೆಣೆಯಾಗುವುದೆ ಬಡ ಗೀ |
ರ್ವಾಣರಿಗೆ ನಮ್ಮಿದಿರು ಕಾದುವ | ತ್ರಾಣವಿಹುದೆ || ||೧೬೧||

ಹೊತ್ತು ಕಳೆಯದೆ ಬಲದೊಡನೆ ಗಮಿ |
ಸುತ್ತ ಸುರರಂ ಗೆಲಿದವರ ಸ |
ದ್ವಸ್ತುಗಳ ಸೆಳೆದಾಳ್ವ ಸತಿಯರ | ಮೊತ್ತದೊಡನೆ || ||೧೬೨||

ಭಾಮಿನಿ

ಎಂದವನ ನುಡಿ ಕೇಳಿ ರಕ್ಕಸ
ವೃಂದ ಉಬ್ಬುತ ಪೊರಟುದಾಗಲೆ
ಸಿಂಧುವಿಂ ಮೇಲ್ವರಿವ ನೊರೆಗಳ ತೆರದಿ ಸುರಪುರಕೆ ||
ಮುಂದ್ವರಿದು ನಾಕದಲಿ ನಾಲ್ದೆಸೆ
ಯಿಂದ ಲೂಟಿಯನೆಸಗೆ ಭಯದಲಿ
ಇಂದ್ರನೆಡೆಗಾಗಮಿಸಿ ಚರರುಸುರಿದರು ನಡುನಡುಗಿ || ||೧೬೩||

ರಾಗ ಸಾರಂಗ ಅಷ್ಟತಾಳ

ಲಾಲಿಸು ನಿರ್ಜರರೆರೆಯ | ಖಳ |
ಜಾಲ ನಾಕಕೆ ಬಂದು ಮಾಳ್ಪಹಾವಳಿಯ ||
ಪೇಳಿ ತೀರದು ಎಲ್ಲ | ರಾಲಯಂಗಳ ಪೊಕ್ಕು |
ಗೋಳುಗುಟ್ಟಿಪ ಬಗೆ | ಶೂಲಿಯೆ ಬಲ್ಲನು || ||೧೬೪||

ನಾರಿಯರನು ಸೆರೆ ಪಿಡಿದು | ಸುಕು |
ಮಾರರ ಕಂಡ ಕಂಡೆಡೆಯೊಳು ಬಡಿದು ||
ಮಾರಿಯ ತೆರದೊಳು | ಊರೆಲ್ಲ ಸುಳಿಯುತ |
ಸಾರ ಸಂಪತ್ತನು | ಸೂರೆಗೈಯುವರೆಲ್ಲ || ||೧೬೫||

ರಾಗ ಭೈರವಿ ಅಷ್ಟತಾಳ

ಸಂತೈಸಿ ಕಳುಹುತಲಿ | ಸುರರ ಕರೆ | ದಿಂತೆಂದ ಹಗೆಯಿಂದಲಿ ||
ಪಂಥ ಪಿಡಿದು ಬಂದ ಖಳರಿಗೆ ತೋರ್ಪೆ ನಾ | ನಂತ್ಯವನಿಂದಿನಲಿ || ||೧೬೬||

ತಡೆಯದೆ ಪೋಪುದೆಂದು | ಕೂಡುತ ಸುರ | ಗಡವಣ ಭರದೊಳಂದು ||
ಅಡರುತ್ತ ದಂತಿಯ ನಡೆದು ಮಾಯಾವಿಯ | ತಡೆದೆಂದನಿದಿರು ನಿಂದು || ||೧೬೭||

ಹೇಡಿ ಖಳರೊಳಧಮ | ಸಂಗರವ ಬಿ | ಟ್ಟೋಡಿಯುಳಿದೆಯಮಮ ||
ಖೋಡಿ ವಿಕ್ರಮ ಸುಡು ಇಂದು ಎನ್ನೊಡನೆ ಕಾ | ದಾಡಿ ತೀರಿಪೆಯ ಜನ್ಮ || ||೧೬೮||

ಬಲ್ಲೆ ಸುರಪ ನಿನ್ನನು | ಇದಿರಿನೊಳು | ನಿಲ್ಲದೆ ದಿತಿಜರನು ||
ಕ್ಷುಲ್ಲಕ ಕೃತ್ಯದಿ ಕೊಲಿಸುತ್ತ ಲೋಕದಿ | ಬಲ್ಲಿದನಾದುದನು ||
ಹರಿಹರರೊಲಿದೆಮಗೆ | ಉತ್ತಮರೆಂಬು | ದರಿತು ಪಾಲಿಸಿದ ಬಗೆ ||
ಅರಿಯದೆ ನಿನ್ನಯ ಹಿರಿಯರಳಿದರದು | ಮರವೆಯಾದುದೆ ನಿನಗೆ || ||೧೬೯||

ಆ ದಿನ ಮಾಯೆಯಿಂದ | ಜಯವು ವಶ | ವಾದುದ ಬಲ್ಲೆನಿಂದ್ರ ||
ಕಾದಲಿಕೆನಗಿದಿರಾಗೆಂದು ಮುಸುಕಿದ | ಕ್ರೋಧದಿ ಶರಗಳಿಂದ || ||೧೭೦||

ವಾರ್ಧಕ

ತ್ರಾಣಗುಂದುತ ಸುರಪ ಸಮರ ಬಿಟ್ಟೋಡೆ ಶಿಖಿ
ಕೋಣನೇರ್ದವ ಮರುತವರುಣರಾಹವವೆಸಗೆ
ಕಾಣಿಸದೆ ಜಯವು ಪಿಂತಿರುಗೆ ಸದ್ವಸ್ತುಗಳ ವಶಪಡಿಸಿ ಕಳುಹಿ ಪುರಕೆ |
ದಾನವಂ ರಥವಡರಿ ಮರುಳುತಿರೆ ಸಾರಥಿಯ
ಜಾಣ್ಮೆ ಕುಗ್ಗುತ್ತ ಸ್ಯಂದನ ಸರಿದು ಋಕ್ಷನು
ದ್ಯಾನಕಂ ಪೊಗಲು ಶೋಭಿಸುವ ಅಂಜನೆಯಳಂ ಕಂಡು ಮರುಳಾಗುತೆಂದ || ||೧೭೧||

ರಾಗ ಬೇಹಾಗ್ ರೂಪಕತಾಳ

ನಾರಿ ಯಾರೀಕೆ ವೈಯಾರಿ ಸುಂದರಿ |
ಸೇರಿ ವನದೊಳೋರ್ವಳಿಹಳು ಕಂಬುಕಂಧರಿ ||
ಮೂರುಲೋಕ ಸೂರೆಗೊಂಬ ಮಾರನರಸಿಯೊ |
ವಾರಿಜಸಂಭವನ ಸತಿಯೊ ಸಿರಿಯೊ ಗೌರಿಯೊ || ||೧೭೨||

ಹಲವು ಜನ್ಮಗೈದ ಪುಣ್ಯಫಲಗಳಿಂದಲಿ |
ಚೆಲುವ ಜನಿಸಿ ಕುಲವ ಬೆಳಗಿಸುವಳ ಜತೆಯಲಿ ||
ನೆಲಸಿ ಸುಖದಿ ನಲಿವನಾವನೆಂಬ ವಳವನು |
ತಿಳಿವೆನೆಂದು ಬಳಿಗೆ ಸರಿದವಳೊಳು ನುಡಿದನು || ||೧೭೩||

ಜಾಣೆ ನಿನ್ನ ಸ್ಥಾನವೆಲ್ಲಿ ನೀನೀ ವಿಪಿನದಿ |
ಕಾಣಿಸುತಿಹೆ ಮೀನಕೇತನಾನೆಯಂದದಿ ||
ತ್ರಾಣ ಕುಗ್ಗಿಸಿದನು ಮದನ ಬಾಣವೆಸೆಯುತ |
ಪ್ರಾಣವುಳಿಸು ನೀನೆಂದೆನಲು ನುಡಿದಳ್ಕನಲುತ || ||೧೭೪||

ರಾಗ ಕೇತಾರಗೌಳ ಏಕತಾಳ

ಎಷ್ಟು ಮಾತ ನುಡಿವೆ ಸಾಕು ಭ್ರಷ್ಟ ತೊಲಗಾ ಕಡೆಗೆ |
ನಿಷ್ಠೂರವೇಕೆಂದು ಕುಳಿತರಿಷ್ಟು ಬಂತು ಸಲಿಗೆ ||
ಪಟ್ಟದರಸ ವನದೊಳಿಹ ಬಲಿಷ್ಠನಾ ಕೇಸರಿಯು |
ಥಟ್ಟನಿಲ್ಲಿ ಬರಲು ಪ್ರಾಣ ಕುಟ್ಟಿ ಕಳೆವ ಖರೆಯು || ||೧೭೫||

ಪೇಳಬೇಡ ವನದಿ ಬಾಳ್ವ ಕೀಳನವನ ಶೌರ್ಯ |
ಕೇಳಿ ಬಲ್ಲೆ ಗಾಳಿ ನಿನ್ನ ಮೇಳವಿಸಲು ಧೈರ್ಯ ||
ತೋಳ ಬಲುಹು ಪೋದುದೆಲ್ಲಿ ಏಳು ಬಾ ಬಾ ಸ್ಮರನ |
ಕಾಳಗದಲಿ ಸರಸಗೊಳಿಸಿ ಉಳಿಸು ಎನ್ನ ಹರಣ || ||೧೭೬||

ನಡೆ ದುರಾತ್ಮ ಋಕ್ಷ ಎನ್ನ ಪಡೆದ ಸಚ್ಚರಿತನು |
ಕಡು ಬಲಾಢ್ಯ ವಾಲಿ ಇನ್ನು ಜಡಜಸಖನ ಸುತನು ||
ಮೃಡಸಮಾನಬಲರಗ್ರಜರು ಪೊಡವಿಗಧಿಕರವರ |
ಕಡುಹ ತಿಳಿಯದ್ಯಾಕೆ ಪ್ರಾಣ ಕೊಡುವೆ ನುಡಿದೆ ವಿವರ || ||೧೭೭||

ವನಜಗಂಧಿ ಬಣ್ಣಿಸದಿರು ಬಿನುಗು ಕಪಿಗಳನ್ನು |
ಘನ ಬಲಿಷ್ಠ ತಾನು ಮುನಿಯೆ ಹರಿಹರಾದ್ಯರನ್ನು |
ಗಣಿಪನಲ್ಲ ಸುರತಕೊಮ್ಮೆ ಮನವ ಮಾಡಿ ಎನ್ನ ||
ತನುವನುಳುಹು ದೈನ್ಯದಿಂದ ಮಣಿದು ಕೇಳ್ವೆಚಿನ್ನ || ||೧೭೮||

ವಾರ್ಧಕ

ಖೂಳನಿವನೊಳು ನುಡಿದು ಫಲವಿಲ್ಲ ನೀತಿಯಂ
ಪೇಳಿ ದಣಿಯುವದ್ಯಾಕೆ ಇದಿರು ನಿಲೆನೆನುತಲಾ
ಲೋಲಲೋಚನೆ ನಿರ್ಧರಿಸಿ ಮುಂದಕಡಿಯಿಡಲ್ಕಾಲೋಚಿಸಿದ ಮನದಲಿ ||
ಕೇಳಿ ಗಾರ್ದಭನ ಮೇಲೇರಿಪುದೆ ಹೊರೆಯ ನಾ
ವೇಳೆಯಂ ಕಳೆಯದೊಯ್ಯುವೆನೆಂದು ಕೈಯಿಡಲು
ಗೋಳಿಡುವದಾಲಿಸುತ ಬಂದು ಕೇಸರಿ ನೃಕೇಸರಿಯಂತೆ ತಡೆದೆಂದನು || ||೧೭೯||

ರಾಗ ಮಾರವಿ ಅಷ್ಟತಾಳ

ಆರೆಲಾ ಮತಿಹೀನ ರಕ್ಕಸ | ಬಂದು | ನಾರಿ ಈಕೆಯ ಕೂಡೆ ಸಾಹಸ |
ತೋರುವೆ ಚೋರರ ತೆರದಲಿ | ಬಿಟ್ಟು | ಸಾರಿ ಬಾಳಿರು ಪೋಗಿ ಪುರದಲಿ || ||೧೮೦||

ಕೇಳುವನಾರೆಲೊ ಎನ್ನನು | ಕ | ಟ್ಟಾಳು ನಾನೆಣೆಯಾದಳಿವಳನು ||
ಮೇಲೆನ್ನಾಲಯಕೊಯ್ದು ಜವದಲಿ | ಅನು | ಗಾಲ ಪಾಲನೆ ಮಾಳ್ಪೆ ಸುಖದಲಿ || ||೧೮೧||

ಮತಿಹೀನ ಕೇಳೆನ್ನರಸಿ ಈಕೆ | ಪರ | ಸತಿನಿನಗಿವಳ ನುಡಿಸಿದೇಕೆ |
ದಿತಿಜರ ಕುಲದ ಸ್ವಭಾವವು | ದುಷ್ಟ | ಕೃತಿಯಿಂದ ಮಡಿವ ನಿರ್ಧಾರವು || ||೧೮೨||

ಕುರುಡಗೆ ದರ್ಪಣವೀಯಲು | ಫಲ | ವಿರುವುದೆ ವರಿಸಿ ನೀನಿವಳೊಳು ||
ಸರಸದಿ ಸುಖಿಸಲು ಬಲ್ಲೆಯ | ಯಾರು | ಕರೆದಿತ್ತರೈ ನಿನಗೀಕೆಯ || ||೧೮೩||

ಸರಸಿಜಭವನ ಘಟನೆಯಲಿ | ಪಟ್ಟ | ದರಸಿಯಾಗಿಹಳ ತುಡುಕಲಿಲ್ಲಿ ||
ಉರಿವಗ್ನಿಮೆಲಲು ಪತಂಗವು | ಪೋದ | ತೆರದೊಳಪ್ಪುದು ನಿನ್ನ ಮರಣವು || ||೧೮೪||

ಬಾಯ ಪೌರುಷನೋಳ್ಪೆನೆನ್ನುತ | ಖಳ | ರಾಯನು ಖಾತಿಯ ತಾಳುತ ||
ಸಾಯಕಂಗಳ ಮುಳಿದೆಸೆಯಲು | ಕಪಿ | ನಾಯಕ ಮೂರ್ಛೆಯೊಳೊರಗಲು || ||೧೮೫||

ಇನ್ನಾರು ತಡೆವವರೆನ್ನುತ | ಖಳ | ಪನ್ನಗವೇಣಿಯ ಪಿಡಿಯುತ್ತ ||
ತನ್ನಯ ರಥದೊಳೇರಿಸುತಲೆ | ಪೋಪೆ | ನೆನ್ನಲು ಮೊರೆಯಿಟ್ಟಳಾ ಬಾಲೆ || ||೧೮೬||

ರಾಗ ನೀಲಾಂಬರಿ ಏಕತಾಳ

ಇನ್ನೇನೆಸಗುವೆ ಖಳನು | ಬಲು | ಬನ್ನಬಡಿಸುತೊಯ್ಯುವನು ||
ಪುಣ್ಯಹೀನೆಯ ದಯೆ ತಂದು | ಮು | ಕ್ಕಣ್ಣ ಸಲಹೊ ಗುಣಸಿಂಧು || ||೧೮೭||

ಸುರಮನುಮುನಿಗಳೆ ನಿಮಗೆ | ಮನ | ಕರಗದೆ ಮತ್ತೀ ಬಗೆಗೆ ||
ಕರಗಳ ಮುಗಿಯುವೆನಯ್ಯ | ಪರಿ | ಹರಿಸಿರಿ ಕಷ್ಟ ದಮ್ಮಯ್ಯ || ||೧೮೮||

ರಣಗಲಿ ವಾಲಿಯನುಜೆಯ | ಆ | ಇನಜಾತನ ಸೋದರಿಯ |
ಹನುಮನ ಪಡೆದಂಜನೆಯ | ದು | ರ್ಜನನಿಂ ಬಿಡಿಸಿರಿ ಸತಿಯ || ||೧೮೯||

ವಾರ್ಧಕ

ಕೇಳಿಸಿತು ನಾಲ್ದೆಸೆಗೆ ಮರುತ ತಾನಾಲಿಸುತ
ಕಾಲಭೈರವನಂತೆ ಪೊರಡಲೊಂದೆಡೆ ಹನುಮ
ಖೂಳ ಖಳನಾತನ ಸಮೂಲವಳಿಸುವೆನೆಂದು ಉಗ್ರದಿಂದೇಳಲಾಗ |
ಮೂಲೋಕ ಉರಿವುದೆಂದವರ ರವಿ ತಡೆಯೆ ಎಳೆ
ಬಾಳೆ ಭಂಗಿಪ ಗಜದ ಬಳಿಗೆ ಬಹ ಸಿಂಹದೋಲ್
ಗಾಳಿ ವೇಗದಿ ಬಂದು ವೈರಿ ಕಾಲಗ್ರೀವ ಸುಗ್ರೀವ ತಡೆದೆಂದನು || ||೧೯೦||

ರಾಗ ಭೈರವಿ ಏಕತಾಳ

ಫಡ ಯಾಮಿನಿಚರ ನೀನು | ಕೈ | ಪಿಡಿದೆಳೆಯುತ ಸಾಧ್ವಿಯನು ||
ನಡೆವುದೆಲ್ಲಿಗೆ ಬಲವಿರಲು | ಧುರ | ಕೊಡು ಮಲೆತೆನ್ನಿದಿರಿನೊಳು || ||೧೯೧||

ಧರೆಗೊರಗಿಹನೋರುವನು | ತುಂ | ಡರಿಪೆ ನಿನ್ನ ಬಲಕಿನ್ನು ||
ಕರೆಸು ಬರಲಿ ಮಹದೇವ | ಬಳಿ | ಇರಿಸೈ ಸಂಜೀವನವ || ||೧೯೨||

ಬಲ ಕುಂದಲು ಗರಗಸಕೆ | ತರು | ಗಳ ಕುಲ ಉಳಿವುದೆ ಇದಕೆ ||
ಬಲು ಮಾತಿಲಿ ಫಲವೇನು | ನಿ | ನ್ನಳಿವಿಗೆ ಕಾರಣ ನಾನು || ||೧೯೩||

ಒದರದಿರೈ ಪೌರುಷವ | ತನು | ಭೇದಿಪ ಉತ್ತಮ ಶರವ ||
ಆಧರಿಸಿಕೊ ಎಂದೆಸೆದ | ಕಂ | ಡಾದಿತ್ಯಜನದ ಕಡಿದ || ||೧೯೪||

ಭಾಮಿನಿ

ಸತ್ತ್ವದಿಂ ಕಾದಾಡುತಿರಲಾ
ಪೃಥ್ವಿಯದುರಿತು ಗರ್ಜನೆಯ ಕೇ
ಳುತ್ತ ಸುರಪಜ ಶತ್ರುಗಳು ಯಾರೆಂದು ಪರಿಕಿಸಲು |
ಹತ್ತಿ ಕೋಟೆಯ ತಿಳಿಯುತಾಗಲೆ
ಕಿತ್ತು ಗಿರಿಕಲ್ಮರಗಳಂ ಧರಿ
ಸುತ್ತ ರಣದೆಡೆಗೈದೆ ಇನಜನ ನಿಲಿಸಿ ಖಳಗೆಂದ || ||೧೯೫||

ರಾಗ ಮಾರವಿ ಏಕತಾಳ

ದುರುಳ ಖಳನೆ ವಿಷಭರಿತ ಕಮಲ ಮಧು | ವರಸಿ ಮೆಲುವೆನೆಂದು ||
ಮರಿ ಭ್ರಮರವು ಮೇಲ್ವರಿದಂತಿವಳಿಗೆ | ಕರವಿಕ್ಕಿದೆ ಇಂದು || ||೧೯೬||

ಅರಿಯದು ನಿನಗಾ ಗರಳದ ನಳಿನಕೆ | ಗರುಡ ತುಂಬಿಯಾಗಿ ||
ಸರಸದಿ ಮೆಲುವಾತುರದಿ ಬಂದೆ ತಡೆ | ವರು ಯಾರೆನಲೆಂದ || ||೧೯೭||

ಖಗನಿರ್ಪರವಟ್ಟಿಗೆಗೆ ಪೊಕ್ಕು ಉರ | ಗಗಳು ಬಾಯ ಬಿಡುವ ||
ಬಗೆಯಾಯ್ತೆನ್ನಯ ಹಗೆಯೊಳುಳಿಯೆ ಬಿ | ಟ್ಟಗಲು ಮುಗುದೆಯಳನು || ||೧೯೮||

ಸಿಡಿಲಿನ ಭರಮಂ ತಡೆಯಲುಂಟೆ ಹುಲು | ಕೊಡೆಯು ಮರುಳರಂತೆ ||
ನುಡಿಯದೆ ಎನಗೀ ಹುಡುಗಿಯನೊಪ್ಪಿಸಿ | ನಡೆ ವನದೆಡೆಗೆಂದ || ||೧೯೯||