ರಾಗ ಕಲ್ಯಾಣಿ ಏಕತಾಳ

ರಾಘವ ಬಿನ್ನಹ | ಕೈಕಾ ದೇವಿಯ ಮನ |
ದಾಗಮ ಬೇರಿದೆ | ಹೋಗಿ ನೋಡಿದೆನು || ಪಲ್ಲವಿ ||

ಬಾಗಿಲುಗಳನೆಲ್ಲ | ಹಾಕಿ ಮಂಚದ ಮೇಲೆ |
ರೋಗ ಬಂದವರಂತೆ | ಬಹಳ ದುಃಖದಲಿ || ||೭೯||

ಮಲಗಿದಿರೇಕೆಂದು | ಮಾತನಾಡಿಸಿದರೂ |
ಒಳವ ಎನ್ನೊಳು ಪೇಳ | ಲಿಲ್ಲ ಆ ಜನನಿ || ||೮೦||

ದಶರಥ ಪಿತನೊಳು | ಮಾತುಗಳುಂಟಂತೆ |
ವಸುಧೇಶನನು ಬರ | ಹೇಳ್ದಳಾ ಕಾಂತೆ || ||೮೧||

ಲಕ್ಷ್ಮಣನಿಂತೆಂದು | ಪೇಳೆ ಭೂಪಾಲಕ |
ಆ ಕ್ಷಣದಲಿ ಬಂದು | ಕೈಕೆಯ ಕಂಡ || ||೮೨||

ರಾಗ ತೋಡಿ ಏಕತಾಳ

ಏನಾಯಿತಂಬುಜನೇತ್ರೆ | ಮಾನಿನಿಯರ ಮೌಲೇ |
ನೀನೇಕೆ ಚಿಂತಿಸುತಿರ್ಪೆ | ಪೇಳಬೇಕಿಂದೆನಗೆ || ಪಲ್ಲವಿ ||

ಆನನವೇಕೆ ಬಾಡಿತು | ಅಂಬುಜದಳಾಕ್ಷಿ |
ಈ ನಿರೋಧಗಳಿಂದೇಕೆ | ಕೋಮಲಾಂಗಿ ಪೇಳೆ || ||೮೩||

ವಲ್ಲಭ ಕೇಳೆನ್ನ ಮನ | ದಲ್ಲಿರುವ ಕ್ಲೇಶ |
ಎಲ್ಲವ ನೀನ್ನೊಡನೆ ಪೇಳ್ವೆ | ಕಲ್ಯಾಣಾಂಗ ಕೇಳು || ||೮೪||

ಪಿಂತೆ ನೀ ಕೊಟ್ಟ ಮಾತೆರ | ಡುಂಟು ನಿನ್ನ ಮೇಲೆ |
ಸಂತೋಷವ ಮಾಡಿಕೊಡು | ಸಂದೇಹವಬಿಟ್ಟು || ||೮೫||

ಕಾಂತೆ ಕೇಳಿಷ್ಟೊಂದು ಮಾತಿ | ಗಿಂಥದೊಂದು ಸಿಟ್ಟೇ |
ಅಂತರಂಗ ಶುದ್ಧವಾಗಿ | ಬೇಡಿಕೊ ನಾ ಕೊಟ್ಟೆ || ||೮೬||

ನೇಮವೆಂದೆನುತ್ತ ಕೈಯ | ಮೇಲೆ ಕೈಯ ತಟ್ಟು |
ಕಾಮರೂಪ ಸಿದ್ಧವೆಂದು | ಕೊರಳ ನೀನು ಮುಟ್ಟು || ||೮೭||

ಅಂಬುಜಲೋಚನೆ ಇನಿ | ತೆಂಬ ಮಾತ ಕೇಳಿ |
ಕುಂಭಿನೀಪಾಲಕ ಕೈಕೆಗೆ | ನಂಬುಗೆಯ ಕೊಟ್ಟ || ||೮೮||

ವಚನ || ಇಂತಾ ದಶರಥಂ ದೃಢನಂಬುಗೆಯಂ ಕೊಡಲಾಗಿ ಕೈಕೆಯು
ಸಂತೋಷ ಮನಸ್ಸಿನಿಂದ ಏನೆಂದಳು ಎಂದರೆ –
ಭೂಮಿಯ ನೀನೆನ್ನ ಪುತ್ರ | ಭರತನಿಂಗೆ ಕೊಟ್ಟು |
ರಾಮಚಂದ್ರನನ್ನೀಹೊತ್ತೇ | ವನವಾಸಕ್ಕೆ ಅಟ್ಟು || ||೮೯||

ವಾರ್ಧಕ

ಕುಶನೆ ಕೇಳಿಂತು ಮನುಜರು ನೆನೆದುದೊಂದು ವಿಧಿ
ವಶದೊಳೊಂದಾಯ್ತು ಮಿರುವರಾರು ಕಲ್ಪಿತವ
ವಸುಧೇಶ ಕೊಟ್ಟ ನಂಬುಗೆಗೆ ಮೂರ್ಛಿತನಾಗಿ ಹಮ್ಮೈಸಿ ಬಿದ್ದಿರ್ದನು |
ಉಸುರಲಾರದೆ ಮೂರುಗಳಿಗೆ ಪರ್ಯಂತ ತನು
ವಶವಿಲ್ಲದಂತಾಯ್ತು ಸರ್ವೇಂದ್ರಿಯಂಗಳುಂ
ಬಿಸಜಲೋಚನೆ ಕೈಕೆಯಿಯನೋಡಿ ದೈನ್ಯದಿಂ ದಶರಥೇಂದ್ರಂ ಪೇಳ್ದನು || ||೯೦||

ರಾಗ ನೀಲಾಂಬರಿ ಝಂಪೆತಾಳ

ಕಂಬುಕಂಠಿನಿ ಚಾರುಶೀಲೆ | ಕಮಲಮುಖಿ |
ಕುಂಭಕುಚೆ ಪುತ್ಥಳಿಯ ಬೊಂಬೆ ಪ್ರತಿರಂಭೆ || ಪಲ್ಲವಿ ||

ಮಕ್ಕಳಿಲ್ಲದೆ ಬಹಳ ಕಾಲ | ನಾನಿರಲು |
ದುಃಖದೊಳಗಾಗ ಮುನಿ ಪಾಲ | ಬಂದೆನಗೆ |
ಅಕ್ಕರಿಂದುಪದೇಶವಿತ್ತನಿದು ಮೂಲ || ||೯೧||

ಕ್ರತುಮುಖದಿ ಪಡೆದ ಸುಕುಮಾರ | ರೂಪಿನಲಿ |
ರತಿಪತಿಯ ಪೋಲ್ವ ರಘುವೀರ | ಆರಣ್ಯ |
ಗತಿಯೊಳಿರತಕ್ಕವನೆ ಶ್ರುತಿವಚನದೂರ || ||೯೨||

ಅರೆನಿಮಿಷ ಮಾತ್ರ ರಾಘವನ | ನಾ ಬಿಟ್ಟು |
ಇರಲಾರೆನಯ್ಯೊ ಮೋಹನನ | ಇನ್ನೆಂತು |
ಕರೆದು ವಿಪಿನಕೆ ಕಳುಹಲೀಗ ಸಣ್ಣವನ || ||೯೩||

ಮತ್ತೇಭವಿಕ್ರೀಡಿತ

ಛಲದಿಂ ಕೈಕೆ ಇರುತ್ತಿರಲ್ ದಶರಥಂ ಶೋಕಾಬ್ಧಿಯಿಂದಾಳುತಂ
ಸಲೆ ಹೃತ್ಪಂಕಜ ಬಾಡಿತುಗ್ರಹತಿಯೊಳ್ ಕಣ್ಣೊಳ್ ಜಲಂ ಸೂಸುತ |
ಕಳುಹಲ್ ಕಂದನನಿಲ್ಲಿ ಬೇಗ ಬರಲೆಂದಾ ವಾಕ್ಯಮಂ ಕೇಳುತ
ಖಳಸಂಹಾರಕುಲಾಬ್ಧಿಚಂದ್ರ ಬಳಿಗಂ ಬಂದಾಗಳಿಂತೆಂದನು || ||೯೪||

(ರಾಮನ ಪ್ರವೇಶ)
ರಾಗ ತೋಡಿ ಅಷ್ಟತಾಳ

ತಾತ ನಿಮಗೀಗ ಬಂದು | ದೇತರ ಚಿಂತೆ |
ಭೂತಳದೊಳಿದ್ದಂಥಾದ್ದ | ನಾ ತರುವೆ ನಿಮ್ಮ ಮನದ |
ಭೂತನಾಥನಡ್ಡಬಂದ | ರಾತುಕೊಂಬೆನು ತಾನೆಂದ || ಪಲ್ಲವಿ ||

ಅಷ್ಟದಿಕ್ಪಾಲಕರ ಕೂಡೆ | ಕಷ್ಟ ಬಂದರಂಜೆ ನಾನು |
ಸೃಷ್ಟಿಗೀಶ ನಿಮ್ಮ ಮನದ | ಭೀಷ್ಟವ ಪೇಳಿ ಸುಳ್ಳಲ್ಲ || ||೯೫||

ದೇಶದೇಶದರಸರ್ಗೆಲ್ಲ | ಬೇಸರಿಕೆ ಪುಟ್ಟಿತಲ್ಲ |
ಈಸುದಿನವಿಲ್ಲದಪ | ಹಾಸದ ಮಾತು ಬಂತಲ್ಲ || ||೯೬||

ಅಲ್ಲಿ ಕೂಡಿದವರೆಲ್ಲ | ಸೊಲ್ಲಿಸುತ್ತ ನಗುವರಲ್ಲ |
ಎಲ್ಲ ರಾಯರೂ ಸಾಗುವ | ರಲ್ಲ ಬುದ್ದಿವಂತರೆಂದು || ||೯೭||

ವಚನ || ಇಂತೆಂಬ ಮಗನ ಮಾತಿಗೆ ದಶರಥನು ಉತ್ತರಮಂ ಕೊಡದೆ
ಸುಮ್ಮನೆ ಅಳುತ್ತಿರಲು ಕೈಕೇಯಿ ಏನೆಂದಳು ಎಂದರೆ –

ರಾಗ ಶಂಕರಾಭರಣ ತ್ರಿವುಡೆತಾಳ

ಕೇಳು ರಾಘವ ನಿನ್ನ ಪಿತ ಮಾ |
ತಾಡದಿರುವಾ ಪರಿಯನು |
ಪೇಳುವೆನು ಸಿಟ್ಟಾಗದಿರು ಇನ | ವಂಶಜಾತ || ||೯೮||

ಭರತಗಿತ್ತನು ರಾಜ್ಯವೆಲ್ಲವ |
ಧರಣಿಪಾಲನು ನಿನ್ನನು |
ಕರೆದು ಗಹನಕೆ ಕಳುಹಲಾರದೆ | ಮರುಗುತಿಹನು || ||೯೯||

ಇನ್ನು ಯೋಚನೆ ಏಕೆ ರಾಘವ |
ಚಿಂತೆ ಬೇಡವು ದಿಟವಿದು |
ಮುನ್ನ ನೀನಾರಣ್ಯವಾಸಕೆ | ಪಯಣವಾಗು || ||೧೦೦||

ರಾಗ ಬಿಲಹರಿ ಏಕತಾಳ

ಲೇಸನಾಡಿದೆಯವ್ವ | ಈ ಸ್ವಲ್ಪ ಕೆಲಸಕ್ಕೆ |
ಈಸು ಚಿಂತೆಗಳೇಕೆ | ಹೇ ಸುಗುಣಾಢ್ಯೆ ||
ಏಸು ದಿನಾರಣ್ಯ | ವಾಸದೊಳಿರಬೇಕು |
ಆ ಸುದ್ದಿಯೆನಗೀಯೆ | ಹೇ ಶಶಿವದನೆ || ||೧೦೧||

ಈರೇಳು ವರುಷ ನೀ | ಸೇರಿ ಅರಣ್ಯವ |
ಬಾರಾಯೋಧ್ಯೆಗೆ ಮತ್ತೆ | ಶ್ರೀರಾಮಚಂದ್ರ ||
ಬೇರೇನು ಸಂದೇಹ | ಇದರೊಳು ಮಾಡಬೇಡ |
ಸಾರು ತಂದೆಯ ಮನಸು | ಈ ರೀತಿ ಎನಲು || ||೧೦೨||

ಜನಕ ನೀವ್ ಚಿಂತಿಸ | ದಿರಿ ಕೈಕಾದೇವಿಯ |
ಮನಸಿನ ವ್ರತವನು | ಸಲಿಸಿ ಬರುವೆನು ||
ಎನುತ ಕೈಮುಗಿದ ಬಾ | ಲನ ಕಂಡು ದಶರಥ |
ಮನಕರಗಲು ಚಿಂತಾ | ಮನದೊಳಿಂತೆಂದ || ||೧೦೩||

ಸಣ್ಣವ ನೀನೆಂತಾ | ರಣ್ಯದೊಳಿರುವೆಯೊ |
ಪುಣ್ಯ ಹೀನನಾನೆಂದ | ಕಣ್ಣನೀರಿಂದ ||
ಚಿಣ್ಣನನಪ್ಪಿ ಮು | ದ್ದಿಸಿ ದಶರಥ ಬಲು |
ಬಣ್ಣಿಸಿ ಮರುಗಿ ಕಾ | ರ್ಪಣ್ಯದೊಳ್ಬಿಡದೆ || ||೧೦೪||

ದುಷ್ಟಾತ್ಮ ನಾನಯ್ಯೊ | ಏಕೆನ್ನ ಜಠರದಿ |
ಪುಟ್ಟಿದೆ ರಾಮಚಂದ್ರ | ರವಿಕೋಟಿಸಾಂದ್ರ ||
ಎಷ್ಟು ಹೇಳಿದರೇನು | ವಿಧಿ ಫಣೆಯೊಳು ಬರೆ |
ದಿಟ್ಟುದಲ್ಲದೆ ಇವಳ | ನಿಷ್ಠುರವಲ್ಲ || ||೧೦೫||

ತಂದೆ ನೀವೇಕೆನ್ನ | ನೆನೆದು ಮರುಗುವಿರಿ |
ಕಂದರ್ಪಾಂತಕನಾಣೆ | ಭಯವಿಲ್ಲ ತನಗೆ ||
ಮುಂದೆ ರಾಜ್ಯವನೆಲ್ಲ | ಭರತಗೆಕೊಟ್ಟು ನೀವ್ |
ಚಂದದಿ ಸುಖವಾಗಿ | ರೆಂದು ಕೈಮುಗಿದ || ||೧೦೬||

ವಂದಿಸಿ ಜನಕನ | ಬಳಿಯಿಂದ ಶ್ರೀರಾಮ |
ಬಂದ ತನ್ನರಮನೆ | ಗಂದು ಶೀಘ್ರದಲಿ ||
ಅಂದಾ ಕೌಸಲ್ಯಾದೇವಿ | ಗೆರಗಿ ಬಿನ್ನೈಸಿದ |
ತಂದೆ ಕೈಕೆಯ ಮಾತ | ನೊಂದೂ ಮರೆಯದೆ || ||೧೦೭||

ಚರಿತೆ (ಸಾಂಗತ್ಯ) ತೋಡಿ ರೂಪಕತಾಳ
ಶರಣಮ್ಮ ತಾಯೆ ನಾನಿಂದು ಕೈಕೆಯ ಮನ |
ದ್ಹರಕೆಗೋಸುಗ ಒಂದು ಕಾರ್ಯ ||
ಮರುಗದಿರೀರೇಳು ವರ್ಷ ಅರಣ್ಯದಿ |
ಚರಿಸಿ ಬರುವೆ ನಿಮ್ಮ ಬಳಿಗೆ || ||೧೦೮||

ಧರಣಿಪಾಲಕ ಭಾಷೆ ಕೊಟ್ಟ ಕಾರಣದಿಂದ |
ಭರತಗಾಯಿತು ರಾಜ್ಯವೆಲ್ಲ ||
ವರ ಕೈಕಾಮ್ಮನ ಮನವ ಮೆಚ್ಚಿಸಿಕೊಂಡು |
ಸ್ಥಿರವಾಗಿ ಬಾಳಿ ನೀವೆಲ್ಲ || ||೧೦೯||

ನೀಡಿರಪ್ಪಣೆಯನ್ನು ಸತ್ಯವಿದ್ದರೆ ಕಾಡು |
ನಾಡಾಗಿ ಮನಕೆ ರಂಜಿಪುದು ||
ಬೇಡ ಮತ್ತೊಂದು ಯೋಚನೆ ಪುಣ್ಯವಿದ್ದರೆ |
ನೋಡುವೆ ನಿಮ್ಮ ಪಾದವನು || ||೧೧೦||

ನುಡಿದ ಮಾತನು ಕೇಳಿ ಸಿಡಿಲೆರಗಿದಂದದಿ |
ಮಡದಿ ಮೂರ್ಛಿತೆಯಾದಳಾಗ ||
ಬಿಡಲಾರದಪ್ಪಿ ಮುದ್ದಿಸಿ ತನ್ನ ಕುವರನ |
ತಡವರಿಸುತ್ತೆಂದಳಾ ಜನನಿ || ||೧೧೧||

ರಾಗ ನೀಲಾಂಬರಿಗೌಳ ಏಕತಾಳ

ಏನು ಬುದ್ದಿ ನೆನೆದೆಯಯ್ಯೊ | ರಾಮ ರಾಮ |
ನೀ | ಎನ್ನ ಕೊಂದು |
ಕಾನನಕ್ಕೆ ಮತ್ತೆ ಹೋಗೊ | ರಾಮ ರಾಮ ||
ದಾನವರು ತಿನ್ನರೇನೊ | ರಾಮ ರಾಮ |
ನಿನ್ನ | ಕೈವಿಡಿದ |
ಮಾನಿನಿಗಿನ್ನೇನು ಗತಿಯೊ | ರಾಮ ರಾಮ || ||೧೧೨||

ಒಂದು ಗಳಿಗೆ ನಿನ್ನ ಬಿಟ್ಟು | ರಾಮ ರಾಮ |
ಇರ | ಲಾರದಾ ನ |
ರೇಂದ್ರನೇನು ಭ್ರಾಂತನಾದ | ರಾಮ ರಾಮ ||
ಇಂದು ಕೈಕೆಯೇ ಬೇಕಾಯ್ತೆ | ರಾಮ ರಾಮ |
ಹಾ | ಗಾದರು ನಿ |
ನ್ನಿಂದ ಕೈಕೆಗೇನು ಬಾಧೆ | ರಾಮ ರಾಮ || ||೧೧೩||

ಭರತನಾಳಲಯ್ಯೊ ರಾಜ್ಯ | ರಾಮ ರಾಮ |
ನಾವ್ | ಬಡವರಂತೆ |
ಶರೀರಮಾತ್ರವಾಗಿರುವ | ರಾಮ ರಾಮ ||
ತರವಲ್ಲ ಪೋಗುವದಿಂತು | ರಾಮ ರಾಮ |
ಸೀ | ತಾಂಗನೆ ಬಲು |
ಕರಗಿ ಸೊರಗಿ ಮರುಗದಿಹಳೆ | ರಾಮ ರಾಮ || ||೧೧೪||

ಒಂದು ಎರಡು ದಿವಸವಲ್ಲ | ರಾಮ ರಾಮ |
ಈ | ರೇಳು ವರ್ಷ |
ಎಂದಿಗೆ ತೀರುವದಯ್ಯೊ | ರಾಮರಾಮ ||
ತಂದು ಕಂಡವರ ಮಗಳ | ರಾಮ ರಾಮ |
ನಂ | ಬಿಸಿಯವರ |
ನಿಂದು ಕೊರಳ ಕೊಯ್ವುದೇನೊ | ರಾಮ ರಾಮ || ||೧೧೫||

ರಾಗ ಕೇದಾರಗೌಳ ಅಷ್ಟತಾಳ

ಕಣ್ಣನೀರಬುಧಿಯೊಳಾಳುವ ಜನನಿಯ |
ಪುಣ್ಯಪುರುಷ ನೋಡುತ್ತ ||
ಬಣ್ಣಗಾರಿಕೆಯಲ್ಲ ತಾಯ್ತಂದೆಯರ ಮಾತ |
ನುಣ್ಣಗಳೆಯಬಾರದು || ||೧೧೬||

ಜಾನಕಿ ಲಕ್ಷ್ಮಣರರಿಯರು ಬುದ್ದಿಯ |
ನೀನಿದ್ದು ತಿಳುಹಿಸಮ್ಮ |
ತಾವ್ ನೊಂದುಕೊಂಬರರಿತರೆ ಪೋಗುವ ಸುದ್ದಿ |
ನೀನಾಗಿ ಅರುಹಬೇಡ || ||೧೧೭||

ಧಾರಿಣೀಪತಿ ಮುಪ್ಪಿನವನು ಲಕ್ಷ್ಮಣ ಬಾಲ |
ನಾರಿ ಸಣ್ಣವಳು ಸೀತೆ ||
ಬೇರೆ ಬೇರವರ ರಕ್ಷಿಸಿಕೊಳ್ಳೆನುತ ಬಿಲ್ಲ |
ನೂರಿ ಕೈಮುಗಿದು ನಿಂದ || ||೧೧೮||

ವಾರ್ಧಕ

ತರಳನಾರಣ್ಯವಾಸವ ಕೇಳಿ ಕೌಸಲ್ಯೆ
ತರಹರಿಸಲಾರದಾದಿತ್ಯನುರುತರಕಿರಣ
ದುರಿಯೊಳಗೆ ಬಾಡಿದೆಳಲತೆಯಂತೆ ಮೊಗಕುಂದಿ ದೆಸೆದೆಸೆಗೆ ಬಾಯ್ಬಿಡುತಲಿ |
ಪರಿಪರಿಯ ದುಃಖದಲಿ ಮರುಗುತಿಹ ಜನನಿಗು
ತ್ತರವಿತ್ತು ಕೈಕೆಯಾ ಹರಕೆಯಂ ಕೈಕೊಂಡು
ಪೊರಮಡಲು ದೂರದಿಂ ಕಂಡು ಜಾನಕಿ ಪತಿಯ ಸೆರಗ ಪಿಡಿದಿಂತೆಂದಳು || ||೧೧೯||

ರಾಗ ಸಾವೇರಿ ತ್ರಿವುಡೆ ಅಷ್ಟತಾಳ

ರಘುವೀರ ನೀ ಎನ್ನನಗಲಿ ಪೋಗುವೆಯಾ | ಈ |
ಜಗದೊಳೆನ್ನನು ಬಿಟ್ಟು ಕೊರಳಕೊಯ್ಯುವೆಯ ||
ಅಗಜೆಯರಸನ ಬಿಲ್ಲೆತ್ತಿದಂದಿಂದ |
ನ್ನಗಣಿತಾಶ್ರಯ ಬಿಟ್ಟು ಇರಲಿಲ್ಲವಯ್ಯ ||
ಪೋಗುವುದುಚಿತವೇನೈ | ನೀನೆನ್ನಗಲಿ |
ಪೋಗುವುದುಚಿತವೇನೈ || ||೧೨೦||

ಕಳಕೀರವಾಣಿ ಕೇಳ್ ಕಾಂತೆ | ಮಮ ಪ್ರಿಯೆ |
ಸುಲಲಿತಮಂಜುಳಕರರೂಪೆ ||
ನಳಿನಲೋಚನೆ ಬಹೆ ಕಿರಿದು ದಿನಕಿಲ್ಲಿಹೆ |
ಬಳಲಬೇಡವೆ ಕಾಮನರಗಿಣಿಯೆ
ಸುಮ್ಮನೆ ಮರುಗದಿರೆ | ಜಾನಕಿ ನೀನು |
ಸುಮ್ಮನೆ ಮರುಗದಿರೆ || ||೧೨೧||

ತರವಲ್ಲ ನಿನ್ನನೊಂದರೆನಿಮಿಷವೂ ಬಿಟ್ಟು |
ಇರಲಾರೆ ಕಾಂತಶಿರೋಮಣಿಯೆ ||
ಕರವ ಮುಗಿವೆನೆನ್ನ ಕರೆದೊಯ್ಯೊ ಮೋಹನ್ನ |
ಕರುಣಸಾಗರಸ್ವಾಮಿ ಭಕುತಸುಪ್ರೇಮಿ || ಪೋಗುವ || ||೧೨೨||

ಛಲವೇನೆ ನಿನಗಿಲ್ಲಿ ಇರು ಎಂದರೆನ್ನೊಳು |
ನಳಿನಾಕ್ಷಿ ನೀ ಬಂದು ಬಳಲಲೇಕೆ ||
ಬಲುಕಾಡಿನೊಳುದಿನ ಕಳೆವದು ಬಲುಘನ |
ಖಳರ ಊರದು ಕಾಣೆ ಕಾಂತೆ ನಿನ್ನಾಣೆ || ಸುಮ್ಮನೆ || ||೧೨೩||

ಬಿಸಜಾಕ್ಷ ಎನ್ನ ವಂಚಿಸಿ ಪೋದೆಯಾದರೆ |
ವಿಷವ ಕುಡಿದು ಸಾವುದಲ್ಲದೆ ಬೇರೆ ||
ಹುಸಿದರೆ ನಿನ್ನಾಣೆ ಜನಕನ ಪದದಾಣೆ |
ದಶರಥ ನೃಪನಾಣೆ ಅಸುರವೈರಿ || ಪೋಗುವ || ||೧೨೪||

ವಾರ್ಧಕ

ಬೇಡವೆಂದಾ ಮಾತ ಕೇಳದುರೆ ಬಿದ್ದು ಹೊರ
ಳಾಡಿ ಸೆರಗಂ ಬಿಡದೆ ಬಳಲುತಿಹ ಜಾನಕಿಯ
ನೋಡಿ ರಾಘವನೊಡಂಬಡಿಸುತಿಹ ವಾರ್ತೆಯಂ ನಾಡಜನರಿಂದ ಕೇಳ್ದು |
ರೂಢಿಪಾಲಕರಾಮ ರಾಜ್ಯಮಂ ಬಿಟ್ಟೆನ್ನ
ಜೋಡಗಲಿ ಪೋಪನೆಂಬುದನರಿತು ಲಕ್ಷ್ಮಣಂ
ಕೇಡಾದಳೀ ಕೈಕೆ ಎಂದು ಬಂದಗ್ರಜನ ಕೂಡೆ ಬಳಿಕಿಂತೆಂದನು || ||೧೨೫||

ರಾಗ ಮರವಿ ಮಟ್ಟೆತಾಳ

ಅಣ್ಣದೇವ ನೀನಯ್ದುವದೆಲ್ಲಿ |
ಪುಣ್ಯವಾರಿಧೇ ಪುರುಷರತ್ನವೆ || ||೧೨೬||

ಇನಕುಲೇಂದ್ರನೆ | ಏನು ಭಾವನೆ |
ಮನಸಿದೇನಯ್ಯ | ಮನಸಿಜನಯ್ಯ || ||೧೨೭||

ಪೊಡವಿ ಕೈಕೆಗೆ | ಮಾರಿಹೋಯಿತೆ |
ದೃಢವ ಪಾಲಿಸೊ | ದುಷ್ಟಮರ್ದನ || ||೧೨೮||

ರಾಗ ಕಾಂಭೋಜಿ ಏಕತಾಳ

ತಮ್ಮ ಇನಿತೇಕೊ ಕೋಪ | ಸುಮ್ಮನೆ ಇರಪ್ಪ |
ಸಮ್ಮತವಲ್ಲವಿದು ಸತ್ಯ | ಧರ್ಮವ ಮಿರುವದು || ||೧೨೯||

ತಾತನು ಪೇಳಿದ್ದುದೊಂದು | ಮಾತ ಮಿರಲಿಂದು |
ಪಾತಕ ಹೊದ್ದುವದಯ್ಯ | ನೀ ತಿಳಿದು ನೋಡು || ||೧೩೦||

ನಾರಿ ಜಾನಕಿಯ ಸಹಿತ | ಅರಣ್ಯದೊಳಿದ್ದು |
ಈರೇಳು ವರ್ಷದ ಮೇಲೆ | ಊರಿಗೆ ಬರುವೆನು || ||೧೩೧||

ರಾಗ ಪಂತುವರಾಳಿ ಪಂಚಘಾತಮಟ್ಟೆತಾಳ

ರಾಘವ ನೀನಿಂದು ವನಕೆ | ಪೋಗುವದೇ ಬದ್ಧವಾದರೆ |
ಈಗ ನಾನೂ ಸಹಿತ ಬರುವೆ | ಪೋಗುವ ಮೂವರು || ||೧೩೨||

ವನಜನಯನ ನಿನ್ನಬಿಟ್ಟು | ದಿನವ ಕಳೆಯಲಾರೆ ನಾನು |
ಅನುಜನಾದರೆನ್ನಕೂಡಿ | ವನಕೆ ಪೋಗೆಲೊ || ||೧೩೩||

ಮೇದಿನೀಶ ರಾಮನಿನ್ನ | ಪಾದಕಮಲವನ್ನು ಬಿಟ್ಟು |
ಮೇದಿನಿಯೊಳಿರೆನು ತಾಯ | ಪಾದದಾಣೆಗು || ||೧೩೪||

ಎನುತ ಲಕ್ಷ್ಮಣನು ಬಂದು | ಧನುಶರಗಳ ತೆಗೆದುಕೊಂಡು |
ಜನನಿಯಂಘ್ರಿಗೆರಗಿ ಪೇಳ್ದ | ಮನದೊಳಿದ್ದುದ || ||೧೩೫||

ಅಮ್ಮ ರಾಮಚಂದ್ರನು ಸೀ | ತಮ್ಮನವರ ಕೂಡಿಕೊಂಡು |
ನಿರ್ಮಲದೊಳು ವನಕೆ ಪೋಪ | ನಂತೆ ಶೀಗ್ರದಿ || ||೧೩೬||

ಕಳೆಯಲಾರೆ ಬಿಟ್ಟು ದಿನವ | ನಳಿನನೇತ್ರನೆರಡು ಪದವ |
ತಿಳುಹಿ ರಾಮನೊಡನೆ ಮಾತೆ | ಕಳುಹು ಎನ್ನನೂ || ||೧೩೭||

ರಾಗ ನವರೋಜು ಮಟ್ಟೆತಾಳ

ಲೇಸು ಮಗನೆ | ರಾಮ ವನಕೆ | ಪೋಪನಾದರೆ |
ಐಸೆ ಕಾರ್ಯ | ವಿದು ಮುಹೂರ್ತ | ಬೇಸರಿಲ್ಲದೆ || ||೧೩೮||

ದೃಢಮನಸ್ಸಿ | ನಲ್ಲಿ ರಾಮ | ನೊಡನೆ ಪೋಗೆಲೊ |
ಅಡವಿಯೇ | ರಾಜ್ಯ ನಾಲ್ಕು | ಕಡೆಯೊಳಾಹುದು || ||೧೩೯||

ಸೀತೆಯನ್ನು | ಮನದಿ ಎನ್ನ | ರೀತಿ ನೋಡಿಕೊ |
ತಾತ ರಾಮ | ಚಂದ್ರನೆಂದು | ಮಾತನಾಡಿಕೊ || ||೧೪೦||

ಕಂದ

ಕಂದಗೆ ಬುದ್ಧಿಯ ಪೇಳ್ದಾ
ಚಂದ್ರಾನನೆ ಬೇಗ ರಾಮನಲ್ಲಿಗೆ ಬಂದು |
ನಿಂದಿರ್ದಾಕೆಯ ಕಾಣುತ
ವಂದಿಸೆ ರಾಘವನೊಳೆಂದಳಂಬುಜನಯನೆ || ||೧೪೧||

ರಾಗ ಕಾಂಭೋಜಿ ಏಕತಾಳ

ಧಾರಿಣಿಯಧಿಪತಿತ್ವ | ಭರತಗಿತ್ತು ನೀನೀಗ |
ನಾರಿ ಜಾನಕಿಯ ಸಹಿತ | ಆರಣ್ಯಕೆ ಪೋಗುವೆಯ || ||೧೪೨||

ಲಕ್ಷ್ಮಣ ನೀನನ್ನ ಬಿಟ್ಟು ಒಂ | ದೇ ಕ್ಷಣವೂ ನಿಲುವನಲ್ಲ |
ರಕ್ಷಿಸಿಕೊ ನೀ ಪೋದಲ್ಲಿ | ಅಕ್ಷಯ ಆಯುಷ್ಯವಿರಲಿ || ||೧೪೩||

ಸ್ವಸ್ತಿಯಾಗಲೆಂದು ತನ್ನ | ಪುತ್ರನಾದ ಲಕ್ಷ್ಮಣನ್ನ |
ಭಕ್ತಿಯಿಂದ ಶ್ರೀರಾಮನ | ಹಸ್ತದೊಳಿತ್ತಳು ಮಗನ || ||೧೪೪||

ವಚನ || ಇಂತು ಸುಮಿತ್ರೆಯಂ ಬೀಳ್ಕೊಂಡು ಜಾನಕೀಲಕ್ಷ್ಮಣರನೊಡಗೊಂಡು ಪಿತನಾದ ದಶರಥನ ಬಳಿಗಂ ಬಂದು ರಾಮನು ಏನೆಂದನು ಎಂದರೆ –

ರಾಗ ಘಂಟಾರವ ಏಕ (ಝಂಪೆ)ತಾಳ
ತಾತ ಬಿನ್ನಹ ಎನ್ನ | ಮಾತ ಲಾಲಿಸಬೇಕು || ಪಲ್ಲವಿ ||

ನಾರಿ ಜಾನಕಿ ತಮ್ಮ | ಲಕ್ಷ್ಮಣ ಸಹಿತಾಗಿ |
ಆರಣ್ಯದೊಳಿರುವೆವೆಂ | ದಳುತಲೈದಾರೆ || ||೧೪೫||

ಏನು ಮಾಡುವುದು ವಿಧಿ | ಬರೆದುದಾಯಿತು ಮುಂದೆ |
ನೀನು ಸುಖದೊಳಿರೈ | ಧಾರಿಣೀಪಾಲ || ||೧೪೬||

ವಚನ || ಇಂತು ರಾಮ ಪೇಳಲಾಗಿ ದಶರಥನು ಮನನೊಂದುಕೊಂಡವನಾಗಿ ಏನೆಂದನು ಎಂದರೆ –

ರಾಗ ನೀಲಾಂಬರಿ ತ್ರಿವುಡೆತಾಳ

ರಾಘವ ವಿಪಿನಕ್ಕೆ ಜಾನಕಿ | ಸಹಿ |
ತೀಗಲೀ ಲಕ್ಷ್ಮಣ ಮೊದಲಾಗಿ ||
ಹೀಗೆ ಮೂವರು ನೀವು ಮಾತಾಡಿ | ಕೊಂಡು |
ಪೋಗುವದಡವಿಗೆ ಬದ್ಧವೆ || ||೧೪೭||

ಕಾಡಿನೊಳಗೆ ಬಲು ಮೃಗಗಳು | ನಿಮ್ಮ |
ಪೀಡಿಸದಿರುವವೆ ನೀ ಪೇಳು ||
ಗಾಢರಕ್ಕಸರಿಪ್ಪ ಠಾವಲ್ಲಿ | ಸೀತೆ |
ನೋಡಿ ಅಂಜದೆ ತಾನೆಂತಿಹಳಲ್ಲಿ || ||೧೪೮||

ಹಸಿವಾಗಲಡವಿಯೊಳೇನುಂಟು | ನಿದ್ರೆ |
ಮುಸುಕೆ ಕಾಡೊಳು ಮಲಗುವಿರೆಂತು ||
ಬಿಸಿಲು ಮಳೆಯನೆಂತು ತಡೆವಿರಿ | ಹಾಲು |
ಮೊಸರು ಬೆಣ್ಣೆಯನೆಂತು ಬಿಡುವಿರಿ || ||೧೪೯||

ಸಾವಕಾಲಕೆ ಕಂಡೆ ಭಾಗ್ಯವ | ಕೊಟ್ಟ |
ದೇವರಿಂದೆನಗೆ ಅಯೋಗ್ಯವ ||
ಯಾವ ಮುಹೂರ್ತಕೀ ಕೈಕೆಯ | ತಂದೆ |
ಜೀವಕ್ಕೆ ಮುತ್ತಾದಳೀಕೆಯ || ||೧೫೦||

ಚರಿತೆ (ಸಾಂಗತ್ಯ) ರೂಪಕತಾಳ

ವನವಾಸಕೆಯ್ದಿ ಬರುವೆವೆಂದು ಮೂವರು |
ಜನಕನ ಪಾದಕ್ಕೆ ನಮಿಸಿ ||
ವನಿತೆಕೈಕಾದೇವಿಗಭಿವಂದಿಸಲು ಕಂಡು |
ಮನದೊಳಿದ್ದುದನರುಹಿದಳು || ||೧೫೧||

ಆರಣ್ಯದೆಡೆಗೆ ಶೃಂಗಾರವಲ್ಲೆನುತ ಭಂ |
ಗಾರವಸ್ತುವನೆಲ್ಲ ಕಳಚಿ ||
ಬೇರೆ ಬೇರವರಿಗೆ ವಿಂಗಡಿಸುತ ಮತ್ತೆ |
ನಾರಿನಂಬರ ಕೊಟ್ಟಳಾಗ || ||೧೫೨||

ಪಟ್ಟೆಸೀರೆಯ ಬಿಚ್ಚಿ ಚಿನ್ನವ ತೆಗೆದಾಕೆ |
ಕೊಟ್ಟ ವಲ್ಕಲವ ಕಾಣುತ್ತ ||
ಸೃಷ್ಟಿದೇವಿಯೆ ನೀ ನೋಡೆಂದು ಕಂಬನಿದುಂಬಿ |
ಉಟ್ಟಳು ಜನಕನ ಪುತ್ರಿ || ||೧೫೩||