ಶಾರ್ದೂಲವಿಕ್ರೀಡಿತ

ಶ್ರೀರಾಮಂ ಸುರಮೌಳಿವಂದಿತಪದಂ ಖದ್ಯೋತವಂಶೋದ್ಭವಂ
ಪಾರಾವಾರ ಗಭೀರಮಾದಿಪುರುಷಂ ತ್ರೈಲೋಕ್ಯನಾಥಂ ಪ್ರಭುಂ |
ಮಾರೀಚಾದಿ ಮಹಾಸುರೌಘಮಥನಂ ಮಾಂಗಲ್ಯರೂಪಾನ್ವಿತಂ
ಕಾರುಣ್ಯಾಂಬುಧಿಜಾನಕೀಸತಿಪದಂ ಧ್ಯಾಯಾಮಿ ಚಿತ್ತೇ ಸದಾ || ||೧||

ರಾಗ ನಾಟಿ ಝಂಪೆತಾಳ

ಜಯ ಜಾನಕೀಕಾಂತ | ಜಯ ಸಕಲ ವೇದಾಂತ |
ಜಯತು ಮಂಗಳರೂಪ | ಜಯ ಸುಪ್ರತಾಪ || ಪಲ್ಲವಿ ||

ದಶರತಾತ್ಮಜವೀರ | ದಶಕಂಠಸಂಹಾರ |
ಪಶುಪತೀಶ್ವರಮಿತ್ರ | ಪಾವನಚರಿತ್ರ ||
ಕುಸುಮುಬಾಣಸ್ವರೂಪ | ಕುಶಲಕೀರ್ತಿಕಲಾಪ |
ಅಸಮರಾಕ್ಷಸಶಿಕ್ಷ | ಅಂಬುಜದಳಾಕ್ಷ || ||೨||

ಸಾಮಗಾನವಿಲೋಲ | ಭಕ್ತಜನಪರಿಪಾಲ |
ಕಾಮಿತಾರ್ಥವಿಧಾತ | ಕೀರ್ತಿವಿಖ್ಯಾತ ||
ಸೋಮಸೂರ್ಯಪ್ರಕಾಶ | ಸರ್ವಲೋಕಾಧೀಶ |
ಶ್ರೀಮಹಾರಘುವೀರ | ಸಿಂಧುಗಂಭೀರ || ||೩||

ಸಕಲಶಾಸ್ತ್ರವಿಚಾರ | ಶರಣಜನಮಂದಾರ |
ವಿಕಸಿತಾಂಬುಜವದನ | ವಿಶ್ವಮಯಸದನ ||
ಸುಕೃತಮೋಕ್ಷವಿಲಾಸ | ಸಾಕೇತಪುರವಾಸ |
ಭಕುತವತ್ಸಲರಾಮ | ಭಳಿರೆ ನಸ್ಸೀಮ || ||೪||

ಮತ್ತೇಭವಿಕ್ರೀಡಿತ

ಹರಿಗಂಭೀರ ಗಣಾಧಿಪಂಗೆ ಶಿವಗಂ ಗೌರೀಂದಿರಾವಾಣಿಗಂ
ಕರುಣಾಕಾರ ವಸಿಷ್ಠನಾರದರಿಗಂ ಸಾಕ್ಷಾತ ಸದ್ಗುರುವಿಗಂ |
ಪರಮೇಷ್ಠ್ಯಾದಿ ಮುನೀಂದ್ರದೇವತತಿಗಂ ಸಾತ್ವೀಕಸನ್ಮಾರ್ಗಿಗಂ
ಪರಮೋಲ್ಲಾಸದೊಳೆಲ್ಲರಿಂಗೆರಗುತೀ ಕೃತಿ ಪೇಳ್ವೆ ಸಂತೋಷದಿಂ || ||೫||

ಶಾರ್ದೂಲವಿಕ್ರೀಡಿತ

ಧಾತ್ರೀಗುತ್ತಮ ಕಣ್ವನಾಮ ಪುರದೀ ನಿಂತಿರ್ದ ಶ್ರೀಕೃಷ್ಣನಾ
ತತ್ಪಾದಾಂಬುಜ ದಿವ್ಯನಾಮವರದಿಂದೀ ಪಾರ್ವತೀನಂದನಂ |
ಬತ್ತೀಸಾಕೃತಿ ತಾಳರಾಗವಿಧದಿಂ ರಾಮಾಯಣಂ ಪೇಳ್ವುದಾ
ಭಕ್ತಿಧ್ಯಾನದಿ ಕೇಳ್ದು ಪುಣ್ಯಕಥೆಯಂ ಸಂತೋಷಮಂ ಮಾಳ್ಪುದು || ||೬||

ದ್ವಿಪದಿ

ವಾಲ್ಮೀಕಿ ಮಾಮುನಿಪನೊಲಿದು ಕುಶಲವರ್ಗೆ |
ರಾಮಾಯಣಾಮೃತವ ಪೇಳುತಿರಲವರ್ಗೆ || ||೭||

ಮುನಿರಾಯ ಕೇಳಯ್ಯ ಮೊದಲೆಂದ ಕಥೆಯ |
ಮನಸಿನಲಿ ಗ್ರಹಿಸಿದೆವು ಮತ್ತೆ ಸಂಗತಿಯ || ||೮||

ಸೀತಾಸ್ವಯಂವರದ ಮುಂದೆ ಮತ್ತೇನು |
ತಾತನಾಜ್ಞೆಯ ರಘುಜ ತಾಳ್ದ ಪರಿಗಳನು || ||೯||

ರಾಮಲಕ್ಷ್ಮಣರೇಕೆ ರಾಜ್ಯವನು ಬಿಟ್ಟು |
ಗ್ರಾಮ ಭೂಮಿಯನೆಲ್ಲ ಭರತನಿಗೆ ಕೊಟ್ಟು || ||೧೦||

ಕಾನನಾಂತರದಿ ದಿನ ಕಳೆದರವರೆಂತು |
ಜಾನಕಿಯುಸಹಿತ ಘೋರಡವಿಯಲಿ ನಿಂತು || ||೧೧||

ದುರುಳೆ ಶೂರ್ಪನಖಿಗಪಮಾನವದು ಹೇಗೆ |
ಖರದೂಷಣಾದಿಗಳ ತರಿದ ಬಗೆ ಹೇಗೆ || ||೧೨||

ಪೇಳಬೇಕೆಮಗೆನುತ ಪಾದಕಭಿನಮಿಸಿ |
ಕೇಳಿದರು ಬಾಲಕರು ಬಹುದೈನ್ಯವೆರಸಿ || ||೧೩||

ತರಳರಾಡಿದ ನುಡಿಗೆ ಮುನಿಪ ನಸುನಗುತ
ಎರಡುಕೈ ದಣಿಯಲಪ್ಪಿದನು ಭಳಿರೆನುತ || ||೧೪||

ಅರುಹುವೆನು ನಿಮಗೆ ಮುಂದಾದ ಕಾರಣವ |
ತರಳರಿರ ಕೇಳಿರೈ ತಿಳಿದು ಓರಣವ || ||೧೫||

ರಾಗ ಮಧ್ಯಮಾವತಿ ತ್ರಿವುಡೆತಾಳ

ವೀರದಶರಥ ನೃಪತಿ ಇನಕುಲ |
ವಾರಿಧಿಗೆ ಪ್ರತಿ ಚಂದ್ರನು |
ಧಾರಿಣಿಯನಾಳ್ದಿರಲು ಕುಶಿಕ ಕು |
ಮಾರಕನು ಕರೆದೊಯ್ಯಲು | ಯಜ್ಞಕೆಂದು || ||೧೬||

ಮುನಿಯ ಯಾಗವ ಕಾಯ್ದು ರಾಘವ |
ಜನಕರಾಯನ ಧನುವನೆತ್ತಿಯೆ |
ಜನಕಜೆಯು ಸಹಿತಾಗಯೋಧ್ಯೆಗೆ |
ಘನಪರಾಕ್ರಮಿ ಬಂದನು | ಚಂದದಿಂದ || ||೧೭||

ಒಂದು ದಿನ ಕೇಕಯದ ರಾಜನ |
ಕಂದನೊರ್ವ ನೃಪಾಲನು |
ಬಂದಯೋಧ್ಯಾಪುರಕೆ ಭಕ್ತಿಯೊ |
ಳಂಘ್ರಿಗೆರಗಲು ಕಂಡನು | ದಶರಥೇಂದ್ರ || ||೧೮||

ರಾಗ ಘಂಟಾರವ ಝಂಪೆತಾಳ

ಜಯಜಯ ಮಹೀಪತೇ | ದಶರಥ ನೃಪಾಲ || ಪಲ್ಲವಿ ||

ಕ್ಷೇಮವೇನೃಪತಿಲಕ | ಪರಿವಾರಗಳಿಗೆಲ್ಲ |
ರಾಮ ಲಕ್ಷ್ಮಣರುಗಳು | ಬಂದರೇ ಪುರಕೆ || ||೧೯||

ತಂದೆ ಕಳುಹಿದರಿಂದ | ಬಂದೆನಿಲ್ಲಿಗೆ ನಿಮ್ಮ |
ಕಂದ ಭರತ ಶತ್ರುಘ್ನ | ರಿಂದೊಯ್ಯಲೆನುತ || ||೨೦||

ಶಾಸ್ತ್ರ ವಿದ್ಯಾಭ್ಯಾಸ | ವನು ಕಲಿಸಿದಾ ಮೇಲೆ |
ಪುತ್ರರನುಕರೆದು ತಂ | ದೊಪ್ಪಿಸುವೆನೆಂದ || ||೨೧||

ಶಾರ್ದೂಲವಿಕ್ರೀಡಿತ

ಎಂದಾ ರಾಯನ ಮಾತಕೇಳ್ದು ನೃಪತೀ ಸಂದೇಹವಂ ಮಾಡುತಾ
ಇಂದೀ ಬಾಲರ ಬುದ್ಧಿಸಾಲದವರಂ ಬಿಟ್ಟೆಂತು ನಾನಿಲ್ವೆನೋ |
ಕಂದರ್ಪೋಪಮರೂಪರಿಬ್ಬರುಗಳಂ ತಾನಪ್ಪಿ ಮುದ್ದಾಡುತಾ
ಒಂದಾಗಿರ್ವರು ವಿದ್ಯೆಯಂ ಪಠಿಸಬೇಕೆಂದಾಗಳಿಂತೆಂದನು || ||೨೨||

ರಾಗ ತೋಡಿ ಏಕತಾಳ

ಪುತ್ರನೀ ಬಾರೊ ಭರತ | ಶತ್ರುಘ್ನ ನೀನಿತ್ತ |
ಅರ್ತಿಯಿಂದ ಕೇಳಿ ಕಾರ್ಯ | ದುತ್ತಮಂಗಳನ್ನು || ||೨೩||

ಕೇಕಯ ನೃಪಾಲ ನಿಮ್ಮ | ಕಾಣಬೇಕೆಂದೆನುತ |
ಬೇಕಾದಂಥ ವಸ್ತುಗಳ | ತಾ ಕಳುಹಿಸಿಹನು || ||೨೪||

ಪೋಗಿ ಬೇಗ ಬನ್ನಿರೆನ್ನು | ತ್ತಾಗ ಮಕ್ಕಳನ್ನು |
ಬೇಗದಿಂದ ಕಳುಹಿಸಿದ | ನಾಗ ಧರಣೀಪಾಲ || ||೨೫||

ಕಂದ

ಬಾಲಕರಿರ್ವರನಾ ಭೂ
ಪಾಲನ ಕೈಗೆತ್ತಿ ಕೊಟ್ಟನುಡುಗೊರೆ ಸಹಿತಾ |
ಶೀಲರ್ನಡೆಯಲ್ಕಂದಾ
ವೇಳೆಯೊಳೇ ಕಾರ್ಯವೊಂದ ಮಂತ್ರಿಗೆ ಪೇಳ್ದಂ || ||೨೬||

ರಾಗ ರೇಗುಪ್ತಿ ಝಂಪೆತಾಳ

ಮಂತ್ರಿ ಮಹಾವೀರ ಸು | ಮಂತ್ರ ಬಹುಧೀರ |
ಅಂತರಂಗದಿ ಪೇಳ್ವೆ | ನೀಂ ತಿಳಿದು ಪೇಳು || ||೨೭||

ಒಡಲು ನೆಲೆಯೆಂದು ಬಹು | ಕಾಲ ಪರ್ಯಂತ |
ಪೊಡವಿಯಾಳಿದೆನಿನ್ನು | ಕಡುವೃದ್ಧನಾದೆ || ||೨೮||

ಪೊಡವಿಯನು ರಾಘವಗೆ | ಕೊಡುವೆ ನಾನದಕೆ |
ಪೊಡವಿಪತಿಗಳ ಕರೆಸು | ಪುರವ ಶೃಂಗರಿಸು || ||೨೯||

ಇಂತಾ ವಸಿಷ್ಠಮುನಿ | ಮಂತ್ರಿಯರ ಕೂಡೆ |
ಅಂತರಂಗದಿ ದಶರ | ಥೇಂದ್ರ ಮಾತಾಡೆ || ||೩೦||

ರಾಗ ಪುನ್ನಾಗ ಅಷ್ಟತಾಳ

ನಾಳೆ ರಾಮಚಂದ್ರಗಭಿ | ಷೇಕವದಾಗುವದೆಂದು |
ಕೇಳಿದಳು ಮರೆಯಲ್ಲಿ ನಿಂದು | ಮಂಥರೆ ಪೋಗಿ |
ಪೇಳಿದಳು ಕೈಕೆಯೊಳಿಂತೆಂದು || ||೩೧||

ರಾಗ ಕಾಂಭೋಜಿ ಏಕತಾಳ, ತಿತ್ತಿತ್ತೈ

ಬಾಲೆ ಕೇಳ್ಪೂಮಾಲೆ ಚಾರು | ಶೀಲೆ ಇಂದು ನಿನ್ನ ಕಾಂತ |
ಭೂಲೋಕವ ರಾಮನಿಗೆ | ಪಾಲಿಸಬೇಕೆಂದು ಹೀಗೆ || ||೩೨||

ಮಂತ್ರಿ ವಸಿಷ್ಠರ ಕೂಡೆ | ಅಂತರಂಗದಲಿ ಮಾತಾಡೆ |
ನಿಂತು ಕೇಳಿರುವೆನಾ ಮಾತ | ಕಾಂತೆ ಕೇಳಿದಾವನೀತ || ||೩೩||

ಮಂಥರೆ ಕೇಳೊಳ್ಳಿತಾಯ್ತು | ಚಂದವಾಯಿತದಕಿನ್ನೇನು |
ಕಂದ ರಾಮಚಂದ್ರನ ಆ | ನಂದವ ನೋಡುವ ನಾಳೆ || ||೩೪||

ರಾಗ ಕಲ್ಯಾಣಿ ಏಕತಾಳ

ಧರಣಿಯಾಧಿಪತಿತ್ವ | ರಾಮಗಾದರೆ ನಿನ್ನ |
ಭರತಗಾತನಲಿ ಚಾ | ಕರಿಯಹುದಮ್ಮ || ಪಲ್ಲವಿ ||

ತರುಣಿ ಜಾನಕಿ ಪಟ್ಟ | ದರಸಿಯಾಗುವಳು ನೀ |
ನಿರತ ಸೇವಕವೃತ್ತಿ | ಪರಿಚಾರಿಯಾದೆ || ||೩೫||

ಆಡಿಕೊಂಡರೆ ಮುನ್ನ | ಚಾಡಿಯೆಂಬರು ಎನ್ನ |
ನಾಡ ಮಾಡತಲ್ಲ ನೀ | ನೋಡಿಕೋ ಮನದಿ || ||೩೬||

ರಾಗ ಘಂಟಾರವ ಏಕತಾಳ

ಈ ಮಾತಾಡುವರೆ ಕೇಳಿ | ಏ ಹುಚ್ಚು ಮೂಳಿ |
ಕಾಮಿನಿಯರೊಳ್ನಿವಾಳಿ ||
ರಾಮನು ಹಿರಿಯವನಾದ ಮೇಲೆ ಈ |
ಸೀಮೆಯ ಭರತನಾಳುವುದಿದು ಲೋಕಕೆ |
ಸರಿಯೆ | ಗುಣ | ಮೆರೆಯೆ | ಹೊಸ | ಪರಿಯೆ | ನೀನೇನರಿಯೆ || ||೩೭||

ಮಕ್ಕಳು ನಾಲ್ವರೊಳಗೆ | ತಮ್ಮೊಳು ಭೇದ |
ವಿಕ್ಕಿ ನಡೆವರೆ ಹೀಗೆ ||
ಇಕ್ಕೆಲ್ಲದವರಿದ ಕೇಳ್ದರೆ ನಿನ್ನಯ |
ಸೊಕ್ಕ ಮುರಿದು ಬಾ ಹೊಯ್ವರು ಸುಮ್ಮನೆ |
ಹೋಗೆ | ಮುದಿ | ಗೂಗೆ | ಸತ್ತ | ಹಾಗೆ | ಚಾಡಿಯೆ ಹೀಗೆ || ||೩೮||

ಕಂದ

ಸೊಕ್ಕಿದ ಹೆಣ್ಣೆಂದಿವಳಂ
ಜಕ್ಕುಲಿಸಿಯೆ ಹೋಗು ನಾಯಿ ಸುಮ್ಮನೆ ಎನಲಾ |
ಹೊಕ್ಕಳು ಹೃದಯವ ಮಾಯಾ
ರಕ್ಕಸಿ ಕದಡಿದಳು ಕೈಕೆಯಂತಃಕರಣಂ || ||೩೯||

ರಾಗ ಕಾಂಭೋಜಿ ಏಕತಾಳ

ಸಖಿ ನೀ ಪೇಳಿದ ಮಾತು | ಸಕಲವು ಲೇಸಾಯ್ತು |
ಯುಕುತಿ ಏನಿದಕಿನ್ನು | ಎನ್ನೊಳ್ ಪೇಳು ಕಂಡುದನ್ನು || ||೪೦||

ಎಂದರೆ ಆ ಮಾತ ಕೇಳಿ | ಮಂಥರೆ ಧೈರ್ಯವ ತಾಳಿ |
ಮಂದಗಜಗಮನೆ ಕೇ | ಳೊಂದು ಯುಕ್ತಿಯುಂಟದಕೆ || ||೪೧||

ಹಿಂದೆ ಮೆಚ್ಚಿ ನಿನಗೆ ಆ ನ | ರೇಂದ್ರ ಕೊಟ್ಟ ಮಾತೆರಡ |
ಇಂದು ಕೇಳು ಕೊಟ್ಟಮೇಲೆ | ಮುಂದೆ ಹೇಳು ಕಾರ್ಯ ಬಾಲೆ || ||೪೨||

ಈರೇಳು ವರ್ಷ ರಾಮ | ಆರಣ್ಯದೊಳಿರಬೇಕು |
ಧಾರಿಣಿಯ ನಿನ್ನ ಪುತ್ರ | ಭರತನಿಗೆ ಕಟ್ಟಬೇಕು || ||೪೩||

ಎಂದು ಕೇಳು ಕಾಂತನೊಳು | ಸಂದೇಹವ ಮಾಡಬೇಡ |
ಮುಂದೆ ಕಾರ್ಯವೆಲ್ಲ ಲೇಸು | ಇಂದೀವರಾಕ್ಷಿ ಲಾಲಿಸು || ||೪೪||

ರಾಗ ಶಂಕರಾಭರಣ ತ್ರಿವುಡೆತಾಳ

ಸುತಗೆ ಪಟ್ಟವ ಕಟ್ಟಬೇಕೆಂಬ |
ಮತದೊಳಂದೂ ಕೈಕೇಯಿ |
ಅತಿಶಯದ ಛಲದಿಂದ ತೆಗೆದಾ | ಭರಣಗಳನು || ||೪೫||

ತೊಟ್ಟ ತೊಡಿಗೆಗಳೆಲ್ಲವನು ತೆಗೆ |
ದಿಟ್ಟು ಕಡೆಗಾ ಮಾನಿನಿ |
ಇಟ್ಟ ಕಸ್ತುರಿ ತಿಲಕವನು ಕೈ | ಗೊಟ್ಟು ಕೆದರಿ || ||೪೬||

ಮಾಸಿದೊಸನವ ಮುಸುಕಿ ಮಂಚದಿ |
ಹಾಸಿದುದನೇ ಪಸರಿಸಿ |
ಶ್ರೀ ಸದಾಶಿವ ನೀನೆ ಗತಿಯೆಂದು | ಮರುಗುತಿಹಳು || ||೪೭||

ಬಣ್ಣಗುಂದಿದಳಬಲೆ ಬಲುಬಲು |
ಕ್ಲೇಶದಿಂದಾ ಕರಗುತ |
ಕಣ್ಣ ನೀರನು ತುಂಬಿ ದುಗುಡದಿ | ಪವಡಿಸಿದಳು || ||೪೮||

ವಚನ || ಇತ್ತಲಾ ಕೈಕೆ ಮಹಾಕ್ಲೇಶದಿಂ ಚಿಂತಿಸುತ್ತಿರಲಾಗಿ ಅತ್ತಲಾ
ಪಟ್ಟಾಭಿಷೇಕಕ್ಕೆ ಸಕಲ ಸನ್ನಾಹವಂ ಮಾಡಿದರದೆಂತೆನೆ –

ಚರಿತೆ (ಸಾಂಗತ್ಯ) ರೂಪಕತಾಳ

ಪಟ್ಟಾಭಿಷೇಕವ ಮಾಡಬೇಕೆನುತಲೆ |
ಪಟ್ಟಣ ಶೃಂಗರಿಸಲ್ಕೆ ||
ಸೃಷ್ಟಿಪಾಲಕನ ಅಪ್ಪಣೆಯಿಂದ ಕರೆಸಿದ |
ರಷ್ಟದಿಕ್ಕಿಂದ ಚಿತ್ರಕರ || ||೪೯||

ಬಣ್ಣಗಾರರು ಬಂದು ನೆರೆದರು ಆಮೇಲೆ |
ಮಣ್ಣಿನೊಡ್ಡರ ಕರೆಸಿದರು ||
ಚಿನ್ನದ ಕೆಲಸ ಕೆತ್ತಿಗೆಯ ಪಾಂಚಾಲರು |
ಹನ್ನೊಂದು ನೂರು ಕೂಡಿದರು || ||೫೦||

ಅಗೆದು ಪೆಟ್ಟಿಸಿದರು ನೆಲಗಳ ಸಮನಾಗಿ |
ಜಗಲಿ ಗೋಡೆಗಳ ಸಾರಣೆಯ ||
ಸೊಗಸಾದ ಚಪ್ಪರ ಮೇಲುಗಟ್ಟುಗಳಿಂದ |
ನಗರವ ಶೃಂಗರಿಸಿದರು || ||೫೧||

ಮುತ್ತಿನುಪ್ಪರಿಗೆ ಚಾವಡಿ ಕೋಣೆ ಚೌಕಿಯ |
ಸುತ್ತಲು ಬಿಗಿದ ಪಚ್ಚೆಗಳ ||
ಪುತ್ಥಳಿ ಬೊಂಬೆ ಬಾಗಿಲ ದಾರಂದದ ಮನೆ |
ಹತ್ತು ಸಾವಿರವ ಮಾಡಿದರು || ||೫೨||

ತೋರಣ ಕುರುಜು ಮೇರುವೆ ತೋಟ ಕೆರೆಭಾವಿ |
ಕೇರಿಕೇರಿಯ ಮನೆ ಮನೆಯ ||
ಭೇರಿ ಡಮಾಮಿ ಮದ್ದಳೆ ತಾಳ ಗತಿಯಿಂದ |
ಸಾರಿ ಡಂಗುರವ ಹೊಯ್ಸಿದರು || ||೫೩||

ಅಷ್ಟದಿಕ್ಕಿನೊಳಿರ್ದ ಅರಸು ಬಲ್ಲಾಳರ್ಗೆ |
ಕಟ್ಟಿದರುಡುಗೊರೆಗಳನು ||
ಪಟ್ಟಾಭಿಷೇಕಕ್ಕೆ ಪಯಣದಿ ಬರಲೆಂದು |
ಸೃಷ್ಟಿಪಾಲಕ ಕಳುಹಿದನು || ||೫೪||

ಛಪ್ಪನ್ನ ದೇಶದ ಭೂಮಿಪಾಲರು ನಡೆ |
ತಪ್ಪ ಸಂಭ್ರಮವೇನನೆಂಬೆ ||
ಇಪ್ಪತ್ತು ಲಕ್ಷಾನೆ ಕುದುರೆ ದಂಡಿಗೆಯಿಂದ |
ಒಪ್ಪಿದರಂದು ಸಂದಣಿಸಿ || ||೫೫||

ವಸುಧಾಪಾಲಕರೆಲ್ಲ ತೆರಳಿ ಬಂದವರನ್ನು |
ದಶರಥ ನೃಪನಿದಿರ್ಗೊಂಡು ||
ಎಸೆವ ಬಿಡಾರವಿತ್ತವರವರಿಗೆ ತಕ್ಕ |
ಉಪಚಾರಂಗಳನು ಮಾಡಿಸಿದ || ||೫೬||

ವಾರ್ಧಕ

ಕುಶನೆ ಕೇಳಿಂತಯೋಧ್ಯಾಪುರದ ಸಂಭ್ರಮವ
ವಶವಲ್ಲ ಹೇಳಿ ತುದಿಗಾಣಿಸುವಡರಿದೆಮಗೆ
ಪಸರಿಸಿತು ಮಂದಿ ಕುದುರೆಗಳ ಸಂದಣಿಯಿಂದ ನಾನಾರವಂಗಳಿಂದ ||
ವಸುಧೆ ಹಿಗ್ಗಿದಳು ಕೆಂಧೂಳೆದ್ದು ನಭಗಳಂ
ಮುಸುಕಿ ದಿಗ್ಗಜ ಬೆದರೆ ಕೂರ್ಮನೆದೆಗೆಟ್ಟ ಫಣಿ
ಕುಸಿದ ಸುರರಾಕಾಶದಲ್ಲಿ ಜಯಜಯಯೆಂದು ದೇವದುಂದುಭಿ ಮೊಳಗಿತು || ||೫೭||

ರಾಗ ಭೈರವಿ ಝಂಪೆತಾಳ

ಪನ್ನೀರ ರಾಮನಿಗೆ | ಪಂಕಜಾಕ್ಷಿಯರೆರೆದು |
ಚಿನ್ನಗಳ ತೊಡಿಸಿದರು | ಚಿನ್ಮಯಾತ್ಮಕಗೆ || ||೫೮||

ಅಗರು ಚಂದನ ಗಂಧ | ಕಸ್ತೂರಿ ಲೇಪನವ |
ಸೊಗಸಾಗಿ ರಚಿಸಿದರು | ಶೃಂಗಾರವಾಗಿ || ||೫೯||

ಸಿಂಹಾಸನವನೇರು | ಶ್ರೀರಾಮ ನೀನೆನುತ |
ಬ್ರಾಹ್ಮಣರು ಪರಸಿದರು | ಬಹಳ ಬಗೆಯಿಂದ || ||೬೦||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸೃಷ್ಟಿಯಧಿಪತಿತನಕೆ ಜನರೊಡ |
ಬಟ್ಟು ಚಿನ್ನದ ಕಲಶದಲ್ಲಿ ವ |
ಸಿಷ್ಠ ಮುನಿ ಮಂತ್ರೋದಕಕೆ ಕೈ | ಗೊಟ್ಟು ನಿಂದ || ||೬೧||

ಮೊಳಗಿದವು ಬಹುವಾದ್ಯ ತಿಂಥಿಣಿ |
ಗಳ ರವಂಗಳ ಮೇಳದಿಂದಾ |
ನಳಿನಲೋಚನನೆದ್ದು ಗುರುವಿಗೆ | ಕರವ ಮುಗಿದ || ||೬೨||

ಸುರವರರು ಕೊಂಡಾಡೆ ಗಾಯಕ |
ರಿರದೆ ಗೀತವ ಪಾಡೆ ನಾಟ್ಯದ |
ತರುಣಿಯರು ಕುಣಿದಾಡೆ ವಾದ್ಯಗ | ಳ್ಮೊರೆಯೆ ಕೂಡೆ || ||೬೩||

ಭಾಮಿನಿ

ಜನಕಜನನಿಯರಿಂಗೆ ರಾಘವ
ನನುನಯದಿ ಕೈಮುಗಿದು ತನ್ನಯ
ಮನೆಯ ದೈವವ ಬೇಡಿ ಗುರುಹಿರಿಯರಿಗೆ ತಲೆವಾಗಿ |
ನೆನಸಿ ಪೊಡಮಟ್ಟನು ಸುಮಿತ್ರೆಯ
ಜನನಿ ಕೈಕೆಯ ಕಾಣದಿರೆ ಲ
ಕ್ಷ್ಮಣನನೀಕ್ಷಿಸಿ ತಂದೆ ದಶರಥರಾಯಗಿಂತೆಂದ || ||೬೪||

ರಾಗ ಭೈರವಿ ಝಂಪೆತಾಳ

ಜನಕ ಕಿರುಜನನಿಯಹ | ವನಜಮುಖಿ ಕೈಕೆ ಈ |
ಜನರ ಸಭೆಯೊಳಗೆಲ್ಲಿ | ಕಾಣೆನಾನವಳ || ||೬೫||

ಏಕೆ ಭರತನ ಮಾತೆ | ಈ ಕಡೆಗೆ ಬರಲಿಲ್ಲ |
ನೀ ಕರೆದುತಾರನುಜ | ಲಕ್ಷ್ಮಣನೆ ವೀರ || ||೬೬||

ತಿಳಿಯಲಿಲ್ಲವೆ ಮೊದಲೆ | ತಾಯಿ ಕೈಕಾದೇವಿ |
ಬಲುಬೇಗ ಕರಕೊಂಡು | ಬಾರಯ್ಯ ತಮ್ಮ || ||೬೭||

ರಾಗ ಸೌರಾಷ್ಟ್ರ ಮಟ್ಟೆತಾಳ

ಎನಲು ಲಕ್ಷ್ಮಣ | ಘನದಿ ಬಂದನು |
ಜನನಿಯಾಗಿಹ | ಕೈಕೆಯಲ್ಲಿಗೆ || ||೬೮||

ಜಯಜಯಾ ಮಹಾ | ಕಮಲಲೋಚನೆ |
ಭಯ ನಿವಾರಿಣೀ | ಭಾಗ್ಯಶಾಲಿನಿ || ||೬೯||

ಚಿಂತೆ ಏಕವ್ವ | ನಿಮ್ಮ ಮನಸಿಗೆ |
ಸಂತಸದಿಂದ | ಅಣ್ಣ ರಾಮಗೆ || ||೭೦||

ಪೊಡವಿಪತಿತನ | ಕೊಡುವ ಭೂಪತಿ |
ತಡೆಯದಲ್ಲಿಗೆ | ತೆರಳಿ ಶೀಘ್ರದಿ || ||೭೧||

ಭೂಮಿಪಾಲರು | ಸಹಿತ ಕಾವರು |
ಭಾಮಿನೀಮಣೀ | ಭ್ರಮರಕುಮತಳೆ || ||೭೨||

ಲಗ್ನಕೈದಿದೆ | ಶೀಘ್ರದಿಂದಲೆ |
ವಿಘ್ನವಾಗಿದೆ | ನೀವು ಬಾರದೆ || ||೭೩||

ಅಗ್ರಗಣ್ಯನು | ಅಣ್ಣ ರಾಘವ |
ವ್ಯಗ್ರನಾಗುವ | ಪೋಗದಿದ್ದರೆ || ||೭೪||

ರಾಗ ಪಂತುವರಾಳಿ ತ್ರಿವುಡೆ(ಧ್ರುವ)ತಾಳ

ಲಕ್ಷ್ಮಣ ಮಹಾ ವೀರ | ನಿನ್ನೊಳಾಡುವದೇನು |
ಲಕ್ಷವಾದರು ಬಾರೆ | ಕಾರಣ ಬೇರೆ || ||೭೫||

ಹುಡುಗ ನೀನರಿಯೆ ಹೋ | ಗತಿ ಬೇಗದಲಿ ನಮ್ಮ |
ಪೊಡವಿಪಾಲಕನಿಲ್ಲಿ | ಬರಲು ಹೇಳಯ್ಯ || ||೭೬||

ತಡವ ಮಾಡುವುದೇಕೆ | ತರಳ ಪೋಗುವುದಕ್ಕೆ |
ನಡೆ ನಡೆ ಬರಲೆನ್ನ | ಕಾಂತ ಮೋಹನ್ನ || ||೭೭||

ಎನಲು ಲಕ್ಷ್ಮಣನಂದು | ಘನ ಬೇಗದಲಿ ಬಂದು |
ಜನಕನಿದಿರಲಿ ನಿಂದು | ಸಭೆಯೊಳಿಂತೆಂದ || ||೭೮||