ಮಾನವನ ಸಂಸ್ಕೃತಿ ಹೆಚ್ಚಲು, ಹೃದಯದ ಕಲ್ಮಶ ಕಳೆದು ಹೋಗಿ, ಸಂವೇದನಾ ಶಕ್ತಿ ಹೆಚ್ಚಲು ಸಂಗೀತದಲ್ಲಿ ರುಚಿ ಅತ್ಯಗತ್ಯ. ಈ ರುಚಿ ಮೂಡದಿದ್ದರೆ ಮಾನವನು ಬಾಲ, ಕೊಂಬುಗಳಿಲ್ಲದ ಪಶುವಾಗಿಯೇ ಉಳಿಯುತ್ತಾನೆ. ಈ ದೃಷ್ಠಿಯಿಂದ ಸಂಗೀತದಲ್ಲಿ ‘ಸದ್ರುಚಿ’ಯನ್ನು ಸಂಪಾದಿಸುವುದು ಮಾನವನ ಕರ್ತವ್ಯಗಳಲ್ಲೊಂದು, ಸಂಗೀತದಲ್ಲಿ ಸದ್ರುಚಿಯನ್ನು ಹೆಚ್ಚಿಸುವ ವಿವಿಧ ಆಯಾಮಗಳು ಸಂಗೀತಾನುಭವದ ಅಂಗಗಳು-ಇವುಗಳೆಲ್ಲದರ ವಿವರಣೆಯೊಂದಿಗೆ ಸದ್ರುಚಿ ಸಂವರ್ಧನೆಗಳು ಈ ಲೇಖನದಲ್ಲಿ ಅಡಕವಾಗಿವೆ.

ಶಾಸ್ತ್ರೀಯ ಸಂಗೀತದ ವಿಷಯದಲ್ಲಿ ಕೆಲವರು ಹೇಳುವುದುಂಟು; ‘ನನಗೆ ಸಂಗೀತವೆಂದರೆ ಬಲು ಇಷ್ಟ: ಆದರೆ ಆ ವಿಷಯದಲ್ಲಿ ಏನೂ ತಿಳಿಯದು’ ಇಂತಹವರಲ್ಲಿ ನೀವೂ ಒಬ್ಬರೇ?

ಈ ಮಾತು ಚಲನಚಿತ್ರ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಜನಪದ ಸಂಗೀತ ಇತ್ಯಾದಿಗಳ ವಿಷಯದಲ್ಲಿ ಬರುವುದಿಲ್ಲ.

ಪ್ರಶ್ನೆ: ಊಟ ಮಾಡಿದ ಮೇಲೆ ಅಡುಗೆ ಚೆನ್ನಾಗಿತ್ತು ಅಥವಾ ಇಲ್ಲ ಎನ್ನಲು ಪಾಕ ಶಾಸ್ತ್ರದ ಪ್ರವೀಣರಾಗಿರಬೇಕೆ? ಹೂ, ಚೆನ್ನಾಗಿದೆ ಎನ್ನಬೇಕಾದರೆ ಅದರ ಬಣ್ಣ, ಪರಿಮಳ ವಿಷಯದ ರಸಾಯನ ಶಾಸ್ತ್ರದಲ್ಲಿ ಪಾಂಡಿತ್ಯವಿರಬೇಕೆ? ಆಕ್ಷೇಪಣೆ ಹೋಲಿಕೆ ಸರಿಯಾಗಿಲ್ಲ; ನಾಲಗೆಯ ರುಚಿ-ಕೇಲವು ಮಿತಿಗಳಲ್ಲಿ ಎಲ್ಲರಿಗೂ ಒಂದೆ; ಒಬ್ಬರಿಗೆ ಉಪ್ಪಾದದು ಇನ್ನೊಬ್ಬರಿಗೆ ಹುಳಿಯಾಗಿರುವುದಿಲ್ಲ. ಸಂಗೀತದಲ್ಲಿ ಹಾಗಲ್ಲ; ಒಬ್ಬೊಬ್ಬರ ರುಚಿ, ಪ್ರತಿಕ್ರಿಯೆ ಬೇರೆ ಬೇರೆ.

ಇಲ್ಲಿ ಪ್ರಶ್ನೆ ಇದು ಶಾಸ್ತ್ರೀಯ ಸಂಗೀತದ ಅನುಭವ ಹೆಚ್ಚು ತೃಪ್ತಿಕರ ಎನ್ನಿಸಬೇಕಾದರೆ ಅದರ ಶಾಸ್ತ್ರಜ್ಞರ ಅಗತ್ಯವೇ? ಅಗತ್ಯವಾದರೆ ಎಷ್ಟು? ಅದಿರದಿದ್ದರೆ ಸಂಗೀತಾನುಭವದ ಗುಣ ಕಡಿಮೆಯಾಗುತ್ತದೆಯೇ? ಲಘು ಶಾಸ್ತ್ರೀಯ ಸಂಗೀತ ಮುಂತಾದವುಗಳಿಗೂ ಈ ಮಾತು ಅನ್ವಯಿಸುತ್ತದೆಯೆ?

ಒಂದಂತೂ ನಿಜ; ದ್ರಾಕ್ಷಿಯ ರುಚಿಯನ್ನು ಅನುಭವಿಸಲು ಬೇಕಾಗುವ ಪ್ರಯತ್ನಕ್ಕಿಂತ ಎಳನೀರಿನ, ಬಾದಾಮಿಯ ರುಚಿಯನ್ನು ಅನುಭವಿಸಲು ಹೆಚ್ಚು ಪ್ರಯತ್ನ ಬೇಕು ಎಂದ ಮಾತ್ರಕ್ಕೆ ಈಗ ಕೇಳುತ್ತಿರುವ ರಾಗದ ಹೆಸರು ಕಾಂಭೋಜಿ, ಅದರ ಸ್ವರ ಸಂಚಾರಗಳು ಇಂತಹವು; ಈ ತಾಳದ ಹೆಸರು ರೂಪಕ, ಅದರ ಅಂಗ ಹೀಗಿದೆ, ಈ ಹಾಡಿಗೆ ಕೃತಿಯೆಂದು ಹೆಸರು, ಕೃತಿ ಇಂತಹ ವಿಭಾಗಳಿರುತ್ತವೆ; ಇದು ತ್ಯಾಗರಾಜರ ಕೃತಿ, ತ್ಯಾಗರಾಜರ ಜೀವನ….. ಕಾಲ ಇಂತು ಎಂದು ತಿಳಿದುಕೊಂಡು….. ಕೇಳುವ ಸವಿ ಹೆಚ್ಚುವುದಿಲ್ಲ.

ಮೊದಲನೆಯದಾಗಿ ರುಚಿ (ಊಟದಲ್ಲಾಗಲಿ ಕಲೆಯಲ್ಲಾಗಲಿ) ಅನುವಂಶಿಕವಾಗಿ ಅಥವಾ ಆಯಾ ಮಾನವ ಸಮಾಜದ ಸಾಮುದಾಯಿಕ ಪ್ರಜ್ಞೆಯ ಇತಿಹಾಸಕ್ಕೆ ಅನುಗುಣವಾಗಿರುತ್ತದೆ. ಸಂಗೀತ, ನೃತ್ಯ, ಸಾಹಿತ್ಯ, ಚಿತ್ರ, ಶಿಲ್ಪ ಇತ್ಯಾದಿ ಸಾಂಸ್ಕೃತಿಕ ಅಭಿವ್ಯಕ್ತಿ ಪ್ರಕಾರಗಳಲ್ಲಿ ಪ್ರತಿಯೊಂದರಲ್ಲಿಯೂ ಒಂದು ಸಮಾಜದ ರುಚಿ ಇನ್ನೊಂದಕ್ಕಿಂತ ಬೇರೆಯಾಗಿರುತ್ತದೆ. ಎರಡನೇಯದಾಗಿ ಆಯಾ ಸಮಾಜದಲ್ಲಿ ಇಂತಹ ರುಚಿ ಇಲ್ಲದರಲ್ಲಿಯೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಒಂದೇ ಸಮನಾಗಿ ಇರುವುದಿಲ್ಲ. ಅದು ಹೆಚ್ಚಾಗಬೇಕಾದರೆ ಸ್ವಪ್ರಯತ್ನದಿಂದಾಗಬೇಕು. ಇದು ಹೆಚ್ಚಾಗಬೇಕಾದರೆ ಏನು ಪ್ರಯೋಜನ? ಆಗದಿದ್ದರೆ ಏನು ನಷ್ಟ?

ಹೆಚ್ಚಾದರೆ ಮನಸ್ಸಿನ ಸಂಸ್ಕಾರ ಹೆಚ್ಚುತ್ತದೆ. ಕಲ್ಮಶ ಕಳೆದುಹೋಗುತ್ತದೆ. ಹೃದಯದ ಸಂವೇದನಾಶಕ್ತಿ ಹೆಚ್ಚುತ್ತದೆ, ದೃಷ್ಟಿ ವಿಶಾಲವಾಗುತ್ತದೆ ಅನುಭವದ ಆಳ ಅಗಲಗಳು ಹೆಚ್ಚುತ್ತವೆ. ಪ್ರತಿಯೊಬ್ಬರಲ್ಲೂ ಒಳಮುಖ ಒಂದು ಹೊರಮುಖ ಒಂದು ಇರುತ್ತವೆ. ಮೊದಲನೆಯದು ಭಾವ, ರಸ, ಸಂವೇದನೆ ಇತ್ಯಾದಿಗಳಿಗೆ ಸಂಬಂಧಿಸಿದ್ದು, ಎರಡನೆಯದು ಬುದ್ಧಿ, ವಿಚಾರ, ವಿಜ್ಞಾನ, ಜಿಜ್ಞಾಸೆಗಳಿಗೆ ಸಂಬಂಧಿಸಿದ್ದು, ಇವುಗಳಲ್ಲಿ ಸಮತೂಕವಿದ್ದರೆ ಜೀವನದಲ್ಲಿ ಸಮರಸ, ಸಮಂಜಸ, ಒಳ್ಳೆಯ ರುಚಿ ಒಳಮುಖದ ಸಾಧನೆ, ವ್ಯಕ್ತಿಯ ಅಂತರಂಗವನ್ನು ಸಂವರ್ಧಿಸುತ್ತದೆ. ಬಹಿರಂಗದೊಡನೆ ವ್ಯವಹರಿಸುವದಕ್ಕೆ – ಎಂದರೆ ವ್ಯಕ್ತಿಯೂ ಸಮಾಜವೂ ಜೊತೆ ಜೊತೆಯಲ್ಲಿ ಬೆಳೆಯುವುದಕ್ಕೆ ನೆರವಾಗುತ್ತದೆ. ಇದು ಪ್ರಯೋಜನ.

ಈ ರುಚಿ ಮೂಡದಿದ್ದರೆ ಮಾನವನು ಬಾಲ, ಕೊಂಬುಗಳಿಲ್ಲದ ಪಶುವಾಗಿಯೇ ಉಳಿಯುತ್ತಾನೆ; ಇದು ನಷ್ಟ, ಸದ್ರುಚಿಯನ್ನು ಎಲ್ಲರೂ ಸಂಪಾದಿಸಿಕೊಂಡಿರಬೇಕು. ಅದು ಸಂಸ್ಕೃತಿಯ ಮುಖ್ಯ ಲಕ್ಷಣ.

ಭಾರತೀಯ ಸಂಗೀತ ಸ್ವರೂಪ

ಸಂಗೀತವು ಸಾಮುದಾಯಿಕ ಸಂಸ್ಕೃತಿಯ ಅಭಿವ್ಯಕ್ತ ರೀತಿ; ಬೇರೆ ಬೇರೆ ಜನಾಂಗಗಳಲ್ಲಿ ಬೇರೆ ಬೇರೆಯ ತೆರನಾಗಿರುತ್ತದೆ. ಭಾರತೀಯ ಸಂಗೀತದ ಸ್ವರೂಪ ಎಂತಹುದು? ಅದು ಜಗತ್ತಿನ ಇತರೆಲ್ಲ ಸಂಗೀತ ಪದ್ಧತಿಗಳಿಗಿಂತ ನಾಲ್ಕು ಮೂಲಭೂತ ಕಲ್ಪನೆಗಳಲ್ಲಿ ಭಿನ್ನವಾಗಿದೆ. ರಾಗ, ತಾಳ, ಪ್ರಬಂಧ (ಹಾಡು) ಮತ್ತು ವಾದ್ಯ, ಭಾರತೀಯ ಸಂಗೀತದ ಯಾವುದೇ ಪ್ರಕಾರವನ್ನು ಕೇಳಿರುವ ಮತ್ತು ವಾದ್ಯ, ಭಾರತೀಯ ಸಂಗೀತದ ಯಾವುದೇ ಪ್ರಕಾರವನ್ನು ಕೇಳಿರುವ ಎಲ್ಲರಿಗೂ ರಾಗದ ಪರಿಚಯವಿರುತ್ತದೆ; ಆದರೆ ಅದನ್ನು ವರ್ಣಿಸುವುದು ಕಷ್ಟ. ಎರಡು ದುಷ್ಟಾಂತಗಳಿಂದ ಅದನ್ನು ವಿವರಿಸಲು ಯತ್ನಿಸಬಹುದು. ಅಕ್ಷರಗಳ ರಾಶಿಯಿಂದ ಬೇಕಾದವುಗಳನ್ನು ಆರಿಸಿಕೊಂಡು ಪದಗಳನ್ನು ನಿರ್ಮಾಣ ಮಾಡುವ ವರ್ಡಬಿಲ್ಡಿಂಗ್ ಗೇಮ್ ನಿಮಗೆ ಗೊತ್ತಿರಬಹುದು. ಈ ಆಟವನ್ನು ಮುಂದುವರಿಸಿ ಅಕ್ಷರಗಳಿಂದ ಪದಗಳು, ಪದಗಳಿಂದ ಸಮುಚ್ಚಯಗಳು, ಅವುಗಳಿಂದ ವಾಕ್ಯಗಳು, ವಾಕ್ಯಗಳಿಂದ ಒಂದು ಪ್ರಬಂಧವನ್ನು ನಿರ್ಮಿಸಿದೆ ಎಂದಿಟ್ಟುಕೊಳ್ಳೋಣ. ಇಲ್ಲಿ ಆಟಗಾರನು ಗಾಯಕ/ವಾದಕ ಅಕ್ಷರಗಳು, ಸ್ವರಗಳು, ಪದಗಳು (ಸಂಗೀತದ) ವರ್ಣಾಲಂಕಾರಗಳು ವಾಕ್ಯಗಳು ರಾಗದ ಅವಯವಗಳು ಪ್ರಬಂಧವು ರಾಗ, ಅದಕ್ಕೆ ನಿರ್ದಿಷ್ಟವಾದ, ಸ್ವಂತವಾದ ಅಥವಾ ವ್ಯಕ್ತಿತ್ವ ಇರುತ್ತದೆ. ಅಥವಾ ಕುಶಲಿಯಾದ ನೇಕಾರನೊಬ್ಬನು ಬಣ್ಣ ಬಣ್ಣಗಳ ನೂಲುಗಳಿಂದ ಸುಂದರವಾದ ಬಿಡಿ ಮಾದರಿಗಳನ್ನು ನೇಯುತ್ತಾನೆ. ಈ ಮಾದರಿಗಳು ಒಟ್ಟುಗೂಡಿ ಏಕಾರ್ಥವುಳ್ಳ ಸಮಗ್ರವಾದ ಒಂದು ಚಿತ್ರವಾಗುತ್ತದೆ. ಈ ಚಿತ್ರದಲ್ಲಿ ಏಕತನವಾದ ಒಂದು ಮುಖ್ಯಭಾವವಿರುತ್ತದೆ. ಇಲ್ಲಿ ನೇಕಾರನು ಗಾಯಕ/ವಾದಕ; ಬಣ್ಣಗಳು ಸ್ವರಗಳು; ಮಾದರಿಗಳು, ವರ್ಣಾಲಂಕಾರಗಳು, ಛಾಯಗಳು, ಗಮಕಗಳು, ಎಂದರೆ ಸ್ವರದ ಕೊಂಕು, ವಾದರಿಗಳ ಗುಂಪು ರಾಗದ ಅವಯವ (ಸಂಗತಿ); ಚಿತ್ರವು ರಾಗ; ಏಕತಾನವಾದ ಮುಖ್ಯಭಾವವೇ ಆ ರಾಗದ ‘ರಸ’, ಸೌಂದರ್ಯ ಭಾವದ ಮೊತ್ತ.

ರಾಗವನ್ನು ಮಾತಿಲ್ಲದೆ, ತಾಳವಿಲ್ಲದೆ, ಆಶುಸ್ಫೂರ್ತಿಯಿಂದ ವಿಸ್ತರಿಸಿ ಹಾಡಿ ನುಡಿಸಿದರೆ ಅದು ಅಲಾಪನೆ; ಮಾತು, ತಾಳ, ಲಯಗಳಲ್ಲಿ ಕಟ್ಟಿದರೆ. ಅದು ಹಾಡು ಎನ್ನಿಸಕೊಳ್ಳುತ್ತವೆ. ತಾಲವು ಹಾಡನ್ನಾಗಲಿ ನರ್ತನವನ್ನಾಗಲಿ ಕಾಲದಲ್ಲಿ ಅಳೆಯುವ ಸಾಧನ-ಮೀಟರ್ ನಂತೆ. ಅದರ ಅಂಗರಚನೆ ಒಂದೊಂದು ತಾಲದಲ್ಲಿಯೂ ಬೇರೆ. ಹಾಡಿನ/ನರ್ತನದ ಮೊದಲಿನಿಂದ ಕೊನೆಯವರೆಗೆ ಅದು ಪುನಃ ಎಡೆಬಿಡದೆ ಜರುಗುತ್ತದೆ. ಯಾವುದೇ ಕ್ಷಣದಲ್ಲಿ ಅದು ಅಂಶವನ್ನೂ ಸಾಮ್ಯವನ್ನು ತೋರಿಸುತ್ತದೆ. ಪ್ರಬಂಧವೆಂದರೆ (ಇಲ್ಲಿ) ಹಾದು; ಉದಾ: ಹಿಂದೂಸ್ತಾನಿ ಸಂಗೀತದಲ್ಲಿ ಖ್ಯಾಲ್, ದ್ರುಪದ್; ಠುಮ್ರಿ, ತರಾನಾ ಇತ್ಯಾದಿ. ವಾದ್ಯಕ್ಕೆ ಉದಾಹರಣೆ ತಂಬೂರಿ, ವೀಣೆ, ಪಿಟೀಲು, ಕೊಳಲು, ಮೃದಂಗ, ಸಿತಾರ್, ಸಾರಂಗಿ, ಸರೋದ್, ತಬಲಾ ಇತ್ಯಾದಿ. ಪಿಟೀಲು ರೂಪದಲ್ಲಿ (ಆಧುನಿಕ ರೂಪದಲ್ಲಿ) ಸ್ಯಾಕ್ಲೊಫೋನ್ ಕ್ಲಾರಿನೆಟ್, ಮ್ಯಾಂಡೋಲಿನ್ ಮೊದಲಾದ ಕೆಲವನ್ನು ಬಿಟ್ಟರೆ ಭಾರತೀಯ ಸಂಗೀತದ ವಾದ್ಯಗಳು ಭಾರತಕ್ಕೆ ಮೀಸಲು.

ಸಂಗೀತಾನುಭವದ ಅಂಗಗಳು

ಮುಂದಿನ ಪ್ರಶ್ನೆ: ಸಂಗೀತಾನುಭವದ ಅಂಗಗಳು ಯಾವುವು?

ಭಾರತೀಯ ಸಂಗೀತದಲ್ಲಿ ಮುಖ್ಯವಾಗಿ ಎರಡು ಅಂಶಗಳಿರುತ್ತವೆ – ಮಾತು, ಧಾತು (ಸ್ವರ-ರಾಗ-ತಾಳ-ಲಯಗಳ ಅಂಶ) ಇವೆರಡನ್ನು ರಚಿಸುವವನಿಗೆ ವಾಗ್ಗೇಯಕಾರ ಎಂದು ಹೆಸರು. ಮಾತುವಿನಲ್ಲಿ (ಮಾತುಗಳಲ್ಲಿ) ಬೌದ್ಧಿಕ ಹಾಗೂ ರಸಾತ್ಮಕ ಸಾಮಾಗ್ರಿಯಿರುತ್ತದೆ. ಇದು ಭಕ್ತಿ, ನೀತಿ, ತತ್ವ ಮೊದಲಾದವುಗಳ ಬೋಧನೆಯನ್ನೋ ಶ್ರಂಗಾರವೀರ ಕರುಣಾದಿ ನವರಸವಳ ಪ್ರತೀರಿಯನ್ನೋ ನಾದ ಲಯಗಳ ಸೌಂದರ್ಯಾಕೃತಿ ಎಂದರೆ ಗೇಯಾರ್ಥವು ಇರುವುದು; ಉದಾ. ರಾಗಾಲಾಪನೆ, ತಾನ, ಸಂಗತಿ. ನೆರವಲು ಕಲ್ಪನಾ ಸ್ವರ, ಸಂಗೀತದ ಸ್ವತಂತ್ರ ಶ್ರದ್ಧಭಿವ್ಯಕ್ತಿಯಿರುವುದು ಧಾತುವಿನಲ್ಲಿಯೇ ಪ್ರಬಂಧದಲ್ಲಿ ಧಾತು ಮಾತುಗಳ ಮಿಶ್ರಣವೂ ಸಂಕೀರ್ಣಾನುಭವವೂ ಇರುತ್ತವೆ. ಕೆಲವು ಹಾಡುಗಳಲ್ಲಿ ಮಾತು ಪ್ರಧಾನ, ಕೆಲವದರಲ್ಲಿ ಧಾತು; ಇತರವುಗಳಲ್ಲಿ ಎರಡೂ, ಮೊದಲನೆಯದು ಸಾಹಿತ್ಯ ದೃಷ್ಟಿಯಿಂದಲೂ, ಎರಡನೆಯದು ಸಂಗೀತದ ದೃಷ್ಟಿಯಿಂದಲೂ ಮೂರನೆಯದು ವಾಗ್ಗೇಯಕಾರನ ದೃಷ್ಟಿಯಿಂದಲೂ ಮುಖ್ಯ.

ಶ್ರೋತೃವಿಗೆ ಸಂಗೀತಾನುಭವವು ಮುಖ್ಯವಾಗಿ ನಾಲ್ಕು ಸ್ತರಗಳಲ್ಲಿ ಉಂಟಾಗುತ್ತದೆ.

. ದೈಹಿಕ ಪ್ರತಿಕ್ರಿಯೆ : ತಲೆತೂಗುವುದು, ತಾಳ ಹಾಕುವುದು, ಚಪ್ಪಾಳೆ ತಟ್ಟುವುದು, ಸಂತೋಷ, ಮೆಚ್ಚುಗೆಗಳ ಉದ್ಗಾರ ಇತ್ಯಾದಿ

. ಮಾನಸಿಕ ಪ್ರತಿಕ್ರಿಯೆ: ಇದು ರಸಾತ್ಮಕ; ಹಾಡಿನ ಮಾತುಗಳಲ್ಲಿರುವ ಶೋಕ, ಕರುಣ, ಶೃಂಗಾರ ಇತ್ಯಾದಿ ರಸಗಳಲ್ಲಿ ಮಗ್ನವಾಗುವುದು.

. ಬೌದ್ಧಿಕ ಪ್ರತಿಕ್ರಿಯೆ: ಇದು ವಿಶ್ಲೇಷಣಾತ್ಮಕ; ಧಾತುಮಾತುಗಳಲ್ಲಿರುವ ಸುಖ, ತಂತ್ರ, ಚಮತ್ಕಾರ ಮುಂತಾದವುಗಳನ್ನು ಬೌದ್ಧಿಕವಾಗಿ ಗ್ರಹಿಸಿ ಆನಂದಿಸುವುದು.

. ಸೌಂದರ್ಯಾನುಭೂತಿ: ಇಡೀ ಸಂಗೀತದ ಅಂತಿಮ ಗುರಿ, ಅತ್ಯುಚ್ಚ, ಪರಿಶುದ್ಧ ಅನುಭವ, ಆದರೆ ಉಳಿದ ಮೂರನ್ನು ದಾಟಿಯೇ ಇದನ್ನು ತಲಪಬೇಕು.

ಶ್ರೋತೃ ವೈವಿಧ್ಯ

ಶ್ರೋತೃಗಳಲ್ಲಿ ಹಲವು ವಿಧ; ೧) ಸಂಗೀತದ ಇಂದ್ರಿಯ ಸುಖದಿಂದಲೆ ತೃಪ್ತಿಯಾಗುವವರು; ಇವರಿಗೆ ನಾದ ಮಾಧುರ್ಯವಿದ್ದರೆ ಸಾಕು ಎಂದರೆ ಇಂಪಾದ ಶಾರೀರ, ನುಣುಪಾದ, ಕಾಂತಿಯುಕ್ತವಾದ, ಪ್ರಸನ್ನ ಲಲಿತವಾದ, ಅನುರಣವುಳ್ಳ ವಾದ್ಯ ಧ್ವನಿಗಳಷ್ಟೇ ಸುಖಪ್ರದ. ಇವರು ಸಂಗೀತದ ಭೌತಿಕ ಅಯಾಮಗಳನ್ನು ದಾಟಿಹೋಗರು. ಬೇಲೂರು ಹಳೆಯಬೀಡು ದೇವಾಲಯಗಳ ಹೊರಗೋಡೆಗಳನ್ನು ನೋಡಿ ಹಿಂತಿರುಗುವಂತೆ.

೨) ಸಂಗೀತವನ್ನು ಲಘುವಾಗಿ ಕಾಣುವವರು; ರೇಡಿಯೋ, ಟೇಪ್ ರಿಕಾರ್ಡರಗಳ ಸಂಗೀತವನ್ನು ಹಿನ್ನೆಲೆಯಲ್ಲಿ ಕೇಳುತ್ತ ಬೇರೆ ಕೆಲಸಗಳಲ್ಲಿ ತೊಡಗುತ್ತಾರೆ ಕೆಲಸದ ನಡುವೆ ಕಾಫಿ, ಚಹಾ, ನಶ್ಯ, ಸಿಗರೇಟುಗಳನ್ನು ಸೇವಿಸುವಂತೆ.

೩) ಸಂಗೀತವನ್ನು ಮನರಂಜನೆಗೆಂದು ಮಾತ್ರ-ಸಿನೆಮಾ ನೋಡುವಂತೆ- ಕೇಳಿ ಬಿಟ್ಟುಬಿಡುವವರು, ಅವರಿಗೆ ಸಂಗೀತವು ಕಾಲಕ್ಷೇಪ ಸಾಧನವಷ್ಟೇ.

೪) ಸಂಗೀತವನ್ನು ಷೋಕಿಗಾಗಿ ಅಥವಾ ಸಾಮಾಜಿಕ ಪ್ರತಿಷ್ಠೆಗಾಗಿ ಕೇಳುವವರು (ಕೇಳುವಂತೆ ನಟಿಸುವವರು)  ಪ್ರಖ್ಯಾತ ಸಂಗೀತ ವಿದ್ವಾಂಸರ ಕಛೇರಿಗಳಲ್ಲಿ ಮುಂದಿನ ಸಾಲುಗಳಲ್ಲಿ ಕುಳಿತು, ತಲೆದೂಗಿ, ಚಪ್ಪಾಳೆ ತಟ್ಟಿ, ಜೋರಾಗಿ ಉದ್ಗರಿಸಿ ಇದನ್ನೆಲ್ಲ ಇತರರ-ಮುಖ್ಯವಾಗಿ ವೇದಿಕೆಯ ಮೇಲಿನ ವಿದ್ವಾಂಸರು ಗಮನಿಸುತ್ತಿದ್ದಾರೆಂದು ಖಾತ್ರಿ ಮಾಡಿಕೊಳ್ಳುತ್ತಾರೆ.

೫) ಮಾತುಗಳ ಅರ್ಥಕ್ಕಾಗಿ ಮಾತ್ರ ಸಂಗೀತವನ್ನು ‘ಸಹಿಸಿಕೊಳ್ಳುವವರು. ಇಂತಹವರಿಗೆ ರಾಗಾಲಾಪನೆ ಮುಂತಾದ ಸಂಗೀತ ದೃಷ್ಟಿಯೆಲ್ಲ ‘ಬೋರು’

೬) ಮಾತುಗಳ ಅರ್ಥಕ್ಕಾಗಿ ಮಾತ್ರ ಮಾತುಗಳನ್ನು ‘ಸಹಿಸಿಕೊಳ್ಳುವವರು. ಇವರಿಗೆ ‘ದೋಸೆ ತಾರೆ ತಿಂಬೋಕೆ – ಒಂದು, ಎರಡು, ಮೂರು, ನಾಲ್ಕು ಅಥವಾ ‘ತರಿಕೇರೆ’ ಕೆರೆ ಏರಿ ಮೇಲೆ ಎರಡು ಕುರಿಮರಿ (ಓ)ಯ್ತಿತ್ತು’ ಎಂಬ ಮಾತುಗಳಲ್ಲಿ ಪ್ರೌಢಪಲ್ಲವಿಯನ್ನು ಹಾಡಿದರೂ ಆಕ್ಷೇಪವಿಲ್ಲ.

೭) ಅಂಧಪ್ರೇಮಿಗಳು; ಎಲ್ಲರ ಎಲ್ಲ ಬಗೆಯ ಸಂಗೀತವನ್ನು ನಿಷ್ಪಕ್ಷಪಾತದಿಂದ, ‘ಭಕ್ತಿ’ಯಿಂದ ಕೇಳುವವರು. ಇವರಿಗೆ ರುಚಿಯಿದೆ; ಆದರೆ ಅದು ಸಂಸ್ಕಾರಗೊಂಡಿಲ್ಲ.

೮) ತಮ್ಮ ಮೆಚ್ಚಿನ ಏಕೈಕ ಸಂಗೀತಗಾರರ ಸಂಗೀತವೇ ಶ್ರೇಷ್ಠ. ಉಳಿದವರೆಲ್ಲ, ಉಳಿದದ್ದೆಲ್ಲ ಕನಿಷ್ಠ ಎನ್ನುವರು. ಒಂದನ್ನು ಮಾತ್ರ ತಿಳಿದವರಿಗೆ ಏನೂ ತಿಳಿದಿಲ್ಲ. ಎಂಬುದು ಅವರಿಗೆ ತಿಳಿದಿಲ್ಲ.

೯) ಸಂಗೀತವನ್ನು ವಿಮರ್ಶಾತ್ಮಕವಾಗಿ ಆಲಿಸಿ ಗುಣದೋಷಗಳೆರಡನ್ನೂ ಗ್ರಹಿಸುವವರು. ಸಂಗೀತಗಾರರು ಇನ್ನೊಬ್ಬರ ಸಂಗೀತವನ್ನು ಆಲಿಸುವಾಗ ರಂಧ್ರಾನ್ವೇಷಕರೂ ಇರುವುದುಂಟು. ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ವಾಸಿಸುವವರು ಇವರು.

೧೦) ಸದ್ದು ಗದ್ದಲ ಮಾಡದೆ ಮೌನದಿಂದ ಸಂಗೀತವನ್ನು ಆಲಿಸಿ ಪ್ರೀತಿಸುವವರು; ಈ ಪ್ರೀತಿ ಅವರಿಗೆ ಉಸಿರನಷ್ಟು ಅವರಿಗೆ ಸಹಜ; ಇದನ್ನು ನೀವು ಹೇಳಿದರೆ ಅವರಿಗೆ ಆಶ್ಚರ್ಯವೆನ್ನಿಸಿತು! ಇವರು ತಮ್ಮ ನೆಚ್ಚಿನ ಎಲ್ಲ ಬಗೆಯ ಸಂಗೀತದ-ನೂರಾರು, ಕೆಲವೊಮ್ಮೆ ಸಾವಿರಾರು ಧ್ವನಿಮುದ್ರಿಕೆಗಳನ್ನು ಸಂಗ್ರಹಿಸುತ್ತಾರೆ. ಸಂಗೀತ ಕಚೇರಿಯಲ್ಲಿ ಇವರು ಎಲ್ಲಿಯೋ ಅಜ್ಞಾತ ಮೂಲೆಯಲ್ಲಿ ಕುಳಿತಿದ್ದು, ತಾಳ, ಚಪ್ಪಾಳೆ, ಪ್ರಶಂಸೆಗಳನ್ನು ಅಬ್ಬರಿಸದೆ ಆಲಿಸುತ್ತಾರೆ. ಇವರಿಗೆ ಸಂಗೀತವು ಆರಾಧನಾ ಮಾರ್ಗ, ಆತ್ಮಾನ್ವೇಷಣ ಸಾಧನ, ಆನಂದ ಪರವಶತೆಗೆ ಇನ್ನೊಂದು ವರ್ಗದ ಜನವೂ ಅಪರೂಪವಾಗಿ-ಉಂಟು; ಸಂಗೀತದಲ್ಲಿ ರುಚಿಯೇ ಇರದ ಅರಸಿಕರು. ಅವರಿಗೆ ಸಂಗೀತವು ನಿರರ್ಥಕವಾದ ಗದ್ದಲ, ಕೂಗಾಟ, ಬೊಬ್ಬೆ.

ಸದ್ರುಚಿ ಸಂವರ್ಧನ ಸಲಹೆಗಳು

ಸಂಗೀತದಲ್ಲಿ ಸದ್ರುಚಿಯನ್ನು ಹೆಚ್ಚಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಕೆಲವು ಸಲಹೆಗಳನ್ನು ನೀಡಬಹುದು:

೧) ಅತ್ಯಂತ ಮುಖ್ಯ ಸಲಹೆ; ಸಂಗೀತವನ್ನು ಕುರಿತ ಪುಸ್ತಕ, ಲೇಖನ, ವಿಮರ್ಶೆ, ಮುಂತಾದವುಗಳನ್ನು ಓದಿದ ಮಾತ್ರಕ್ಕೆ ಸಂಗೀತದಲ್ಲಿ ರುಚಿ ಹುಟ್ಟುವುದಿಲ್ಲ. ಅಥವಾ ಹೆಚ್ಚುವುದಿಲ್ಲ. ಇವು ಅದಕ್ಕೆ ದಿಕ್ಕನ್ನು ಸೂಚಿಸಬಹುದು ಅಷ್ಟೇ.

೨) ಸಂಗೀತ ಕಚೇರಿಗಳಿಗೆ ಹೋಗುವುದು, ಬಾನುಲಿ ಧ್ವನಿಮುದ್ರಿಕೆಗಳನ್ನು ಇವುಗಳ ಸಂಗೀತವನ್ನು ಆಲಿಸುವುದು ಇದನ್ನು ಅಭ್ಯಾಸ ಮಾಡಿಕೊಳ್ಳಿ

೩) ಹೀಗೆ ಕೇಳಿಸಿಕೊಂಡ ಸಂಗೀತದ ದಿನಚರಿಯೊಂದನ್ನು ಆಕರ, ಗಾಯಕ/ವಾದಕ, ಹಾಡಿನ ಮೊದಲ ಮಾತುಗಳು, ರಾಗ, ತಾಳ, ವಾಗ್ಗೇಯಕಾರರು ಎಂಬ ಶೀರ್ಷೀಕೆಗಳಲ್ಲಿ ಬರೆದಿಡಿ; ಮಕ್ಕಳಲ್ಲೂ ಈ ಹವ್ಯಾಸಗಳನ್ನೂ ಪ್ರೋತ್ಸಾಹಿಸಿ.

೪) ಸಂಗೀತ ಕಚೇರಿಯ ಸಭಾಮರ್ಯಾದೆಯನ್ನು, ಎಂದರೆ ಸಂಗೀತ ವಿದ್ವಾಂಸರು-ಶ್ರೋತೃಗಳು-ವ್ಯವಸ್ಥಾಪಕರು ಇವರುಗಳ ನಡುವಣ ಸಮಾಜಿಕ ಸಂಬಂಧಗಳನ್ನು ಗಮನಿಸಿ.

೫) ಸಂಗೀತ ಕಚೇರಿಯಲ್ಲಿ ಕಲ್ಪಿತ ಸಂಗೀತ (ಬೇರೆಯವರು ಹಿಂದೆಯೇ ರಚಿಸಿರುವ ಸಂಗೀತ) ಸಂಗೀತ ವಿದ್ವಾಂಸನ ಆಶ್ರುಸೃಷ್ಟಿ, ಪಕ್ಕ ವಾದ್ಯ ವಿದ್ವಾಂಸರು-ಇವಕ್ಕೆ ಎಷ್ಟೆಷ್ಟು ಕಾಲವನ್ನು ವಿನಿಯೋಗಿಸಲಾಗುತ್ತದೆಂಬುದನ್ನು ಗಮನಿಸಿ.

೬) ಸಂಗೀತ ಕಚೇರಿಯ ಅಂಗರಚನೆಯನ್ನು ಗಮನಿಸಿ; ಶ್ರೋತೃವಿನ ಚಿತ್ರವನ್ನು ಸಂಗೀತದ ವಾತಾವರಣಕ್ಕೆ ಪ್ರವೇಶಗೊಳಿಸಿ, ಪರಾಕಾಷ್ಟೆಗೆ ಒಯ್ದು ನಂತರ ವಿಶ್ರಾಂತಿಗೆ ತರಬೇಕಾದರೆ ಯಾವ ಯಾವ ರಚನೆಗಳನ್ನು ಎಷ್ಟೆಷ್ಟು ಕಾಲದಲ್ಲಿ ಪ್ರಯೋಗಿಸಲಾಗುತ್ತದೆ, ಯಾವ ಯಾವ ತಂತ್ರಗಳನ್ನು ಬಳಸಲಾಗುತ್ತದೆ. ಎಂಬ ವಿವರಗಳು ಸಂಗೀತ ವಿದ್ವಾಂಸನ ವಾಸ್ತು ಶಿಲ್ಪ ಕೌಶಲ್ಯವನ್ನು ಸೂಚಿಸುತ್ತದೆ.

೭) ತಾಳವನ್ನು ‘ಹಾಕು’ವುದು ತುಂಬಾ ಸುಲಭ; ಬಹು ಬೇಗ ಕಲಿಯಬಹುದು. ಕಚೇರಿಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ತಾಳಗಳನ್ನು ಕಲಿತು ವೇದಿಕೆಯ ಮೇಲೆ ನಡೆಯುತ್ತಿರುವ ತಾಳವನ್ನು ಸದ್ದಿಲ್ಲದೆ ಅನುಸರಿಸುವುದನ್ನು ಕಲಿಯಿರಿ.

೮) ರಾಗಗಳನ್ನು ಪರಿಚಯಿಸಿಕೊಳ್ಳೂವುದು ಇಷ್ಟು ಸುಲಭವಲ್ಲ. ಆದರೆ ಅಸಾಧ್ಯವಲ್ಲ. ನಿಮಗೆ ಇಷ್ಟವಾದ ಶಾಸ್ತ್ರೀಯ ಸಂಗೀತದ ಹಾಡಿನ ಧ್ವನಿ ಮುದ್ರಿಕೆಯನ್ನು ಆಯ್ದುಕೊಂಡು ಮತ್ತೆ ಮತ್ತೆ ಅದನ್ನು ಗಮನವಿಟ್ಟು ಕೇಳಿ. ಇದು ಮನಸ್ಸಿನಲ್ಲಿ ನಿಂತ ಮೇಲೆ ಅದೇ ರಾಗದ ಇನ್ನೊಂದು ಕೃತಿಯನ್ನು ಹಾಗೆಯೇ ಕೇಳಿ ಮೊದಲಿನ ಕೃತಿಗೇ ಮರಳಿ ಬನ್ನಿ. ಅದೇ ರಾಗದ ಇನ್ನೊಂದು ಕೃತಿಯನ್ನು ಕೇಳಿದಾಗ ರಾಗವನ್ನು ಗುರುತಿಸಲು ತಕ್ಕ ಮಟ್ಟಿಗೆ ಸಾಧ್ಯವಾಗುತ್ತದೆ. ಮೊದಮೊದಲು ಇದು ನಿಧಾನ; ನಿಮ್ಮ ರಾಗ ಸಂಗ್ರಹವು ಬೆಳೆದ ಹಾಗೆಲ್ಲ ರಾಗ ಪರಿಚಯದ ವೇಗವೂ ಹೆಚ್ಚಾಗುತ್ತದೆ. ನಿರಾಸೆಯಿಂದ ಎದೆಗುಂದಬೇಡಿ.

೯) ಹಾಡಿನ ಪ್ರಕಾರಗಳಾದ ವರ್ಣ, ಕೃತಿ, ಪದ, ಜಾವಳಿ, ತಿಲ್ಲಾನ, ಅಷ್ಟಪದಿ, ದೇವರನಾಮ, ಇತ್ಯಾದಿಗಳನ್ನು ಗುರುತಿಸಲು ಕಲಿತು; ಅವುಗಳ ಬೇರೆ ಬೇರೆ ಖಂಡಗಳು ಎಲ್ಲಿ ಮೊದಲಾಗಿ ಎಲ್ಲಿ ಮುಗಿಯುತ್ತವೆಂಬುದನ್ನು ತಿಳಿಯುವುದು ಬಹು ಸುಲಭ.

ಗಮನವಿಟ್ಟು ಕೇಳಿಸಿಕೊಂಡರೆ ಸಾಕು. ಇವುಗಳಲ್ಲಿ ಪುನರುಕ್ತಿಯಾಗುವ, ಮೊದಲು ಬರುವ ಅಂಶಕ್ಕೆ ಪಲ್ಲವಿಯೆಂದು ಹೆಸರು. ಗೀತದೇಹಕೆ ಚರಣ ಅಥವಾ ನುಡಿಯೆಂದು ಹೆಸರು. ಇವುಗಳನ್ನು ಸೇರಿಸುವ ಮಧ್ಯಭಾಗಕ್ಕೆ ಅನುಪಲ್ಲವಿಯೆಂದು ಹೆಸರು. (ಅಷ್ಟಪಲ್ಲವಿಯೊಂದರಲ್ಲಿ ಮಾತ್ರ ಎರಡನೆಯ ಖಂಡವು ಪುನರುಕ್ತವಾಗುತ್ತದೆ; ವರ್ಣದ ಎರಡನೆಯ ಭಾಗದಲ್ಲಿ ಒಂದೊಂದು ಖಂಡವು ಪುನರುಕ್ತವಾಗುತ್ತದೆ; ವರ್ಣದ ಎರಡನೆಯ ಭಾಗದಲ್ಲಿ ಒಂದೊಂದು ಖಂಡವು ನಂತರವೂ ಚರಣವು ಪುರರುಕ್ತಿಗೊಳ್ಳುತ್ತದೆ) ಚರಣದ ಕೊನೆಯ ಭಾಗವನ್ನು ಮನಸ್ಸಿಟ್ಟು ಕೇಳಿ; ಇದರಲ್ಲಿ ಸಾಮಾನ್ಯವಾಗಿ ವಾಗ್ಗೇಯಕಾರನ ರಚನೆಯೆಂಬುದು ತಿಳಿಯುತ್ತದೆ. ವಾಗ್ಗೇಯಕಾರನ ಶೈಲಿ, ವೈಶಿಷ್ಟ್ಯಗಳನ್ನು ತಿಳಿಯಲು ಅನುಕೂಲಿಸುತ್ತದೆ. (ತುಂಬಾ ಅಪರೂಪವಾಗಿ, ಮುತ್ತುಸ್ವಾಮಿ ದೀಕ್ಷಿತ್‌ರ ರಚನೆಯಲ್ಲಿ ಇರುವುದೂ ಊಂಟು) ಆಯಾ ವಾಗ್ಗೇಯಕಾರನ ಶೈಲಿಯನ್ನು ಪರಿಚಯಸಿಕೊಂಡರೆ, ಅಂಕಿತವಿಲ್ಲದಿರುವ ಅವನ ಬೇರೆ ಕೃತಿಯನ್ನೂ ಗುರುತಿಸಲು ತಕ್ಕ ಮಟ್ಟಿಗೆ ನೆರವಾಗುತ್ತದೆ.

೧೦) ಪ್ರಮುಖ ವಾಗ್ಗೇಯಕಾರರ ಜೀವನ ಸಾಧನಗಳನ್ನು ಸ್ಥೂಲವಾಗಿ ಪರಿಚಯಿಸಿಕೊಳ್ಳಿ, ಏಕೆಂದರೆ ಅವರ ರಚನೆಗಳಿಗೂ ಅವರ ಉದ್ದೇಶ ಸ್ಪೂರ್ತಿಗಳಿಗೂ ಇದೇ ಉಗಮ ಸ್ಥಾನಗಳು; ನಿಮ್ಮ ಒಳನೋಟ ಇದರಿಂದ ದೃಡವಾಗುತ್ತದೆ.

೧೧) ಸಂಗೀತ ಕಚೇರಿಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ತಂಬೂರಿ, ವೀಣೆ, ಗೋಟುವಾದ್ಯ, ಪಿಟೀಲು, ಕೊಳಲು, ನಾಗಸ್ವರ, ಮೃದಂಗ, ಕಂಜಿರ, ಘಟ, ಮೋರ್ಸಿಂಗ್, ಸ್ಯಾಕ್ಸೋಫೋನ್, ಮ್ಯಾಂಡೋಲಿನ್ ಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳಿ.

೧೨) ವೇಳೆ, ಹಣಗಳ ಸೌಕರ್ಯವಿದ್ದರೆ ಸ್ವಲ್ಪವಾದರೂ ಹಾಡುವುದನ್ನು, ಸ್ವರವು ಚೆನ್ನಾಗಿಲ್ಲದಿದ್ದರೆ ನಿಮಗಿಷ್ಟವಾದ ವಾದ್ಯವೊಂದನ್ನು ನುಡಿಸುವುದನ್ನು ಕಲಿತುಕೊಳ್ಳಿ. ಇದಕ್ಕೆ ಸಂಕೋಚಬೇಡ. ಸಂಗೀತ ಕಲಿಕೆಗೆ ವಯೋಮಿತಿ ಇಲ್ಲ; ಸಣ್ಣ ವಯಸ್ಸಿನ ಮಗುವಿದ್ದರೆ ಅದಕ್ಕೆ ತಪ್ಪದೆ ಸಂಗೀತ ಕಲಿಕೆಗೆ ವಯೋಮಿತಿ ಇಲ್ಲ; ಸಣ್ಣ ವಯಸ್ಸಿನ ಮಗುವಿದ್ದರೆ ಅದಕ್ಕೆ ತಪ್ಪದೆ ಸಂಗೀತ ಶಿಕ್ಷಣವನ್ನು ಕೊಡಿಸಿ, ಅದರ ಶಿಕ್ಷಣದಲ್ಲಿ ನೀವೂ ಸಕ್ರಿಯವಾಗಿ ಭಾಗವಹಿಸಿ; ಇದರಿಂದ ಮಗುವಿನ, ಉಪಾಧ್ಯಾಯರ ಜವಾಬ್ದಾರಿ, ಶ್ರದ್ಧೆ, ಆಸಕ್ತಿಗಳು ಹೆಚ್ಚುತ್ತವೆ; ನಿಮಗೂ ಸಂಗೀತದ ಮೂಲಭೂತ ಸಂಗತಿಗಳು ಉದಾ. ಶೃತಿ ಸೇರುವುದು ಶೃತಿ ತಪ್ಪುವುದು, ತಾಳ ತಪ್ಪುವುದು, ಅಪಸ್ವರ ಇತ್ಯಾದಿಗಳು ಶ್ರಮವಿಲ್ಲದೆ ತಿಳಿಯುತ್ತವೆ.

೧೩) ಬಾನುಲಿ, ದೂರದರ್ಶನಗಳಲ್ಲಿ ಪ್ರಸಾರವಾಗುವ ವಿಶೇಷ ಸಂಗೀತ ರೂಪಕಗಳನ್ನು ತಪ್ಪದೇ ಕೇಳಿ; ಹತ್ತಾರು ಪುಸ್ತಕಗಳನ್ನು ಓದಿ ತಿಳಿಯುವ ಶ್ರಮ ಉಳಿಯುತ್ತದೆ.

೧೪) ಶಾಸ್ತ್ರೀಯ ಸಂಗೀತವೊಂದನ್ನೇ ಕೇಳಿಸಿಕೊಳ್ಳುತ್ತಿದ್ದರೆ ಅದರ ರುಚಿ ಸಂಪೂರ್ಣವಾಗುವುದಿಲ್ಲ. ಹಿಂದೂಸ್ತಾನಿ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಚಲನಚಿತ್ರ ಸಂಗೀತ, ಜನಪದ ಸಂಗೀತ ಇವುಗಳನ್ನು ಆಗಾಗ ಕೇಳಿಸಿಕೊಳ್ಳುತ್ತಿರಿ; ಇದರಿಂದ ನಿಮ್ಮ ಕರ್ನಾಟಕ ಸಂಗೀತದ ಅನುಭವವು ಸಮೃದ್ಧವಾಗುತ್ತದೆ.

೧೫) ನಿಮ್ಮ ಇಷ್ಟ, ನಿಮ್ಮ ರುಚಿ, ನಿಮ್ಮ ಅಭಿಪ್ರಾಯ ನಿಮ್ಮದೇ; ಅವು ನಿಮ್ಮ ಹಕ್ಕು; ಇವನ್ನು ನೀವೇ ರೂಪಿಸಿಕೊಳ್ಳಿ. ಬೇರೆಯವರನ್ನು ಅವಲಂಬಿಸಬೇಡಿ. ಪತ್ರಿಕಾ ಸಂಗೀತ ವಿಮರ್ಶಕರು ನಮ್ಮ ಹಾಗೆಯೇ ಬಿಡಿವ್ಯಕ್ತಿಗಳು; ಅವರಿಗೂ ಇಷ್ಟ. ಅನಿಷ್ಟ, ಅಭಿಪ್ರಾಯ, ಪೂರ್ವಗ್ರಹ, ಅನಿಸಿಕೆಗಳು ನಿಮ್ಮಂತೆಯೇ ಇರುತ್ತವೆ. ಕೆಲವು ವೇಳೆ ಇವು ಶ್ರೋತೃಗಳ ಸಮುದಾಯಿಕ ಅಭಿಪ್ರಾಯಕ್ಕಿಂತ ಭಿನ್ನವಾಗಿರುವುದೂ ಉಂಟು. ನೀವೇನೂ ಅವರೊಡನೆ ವಾದಿಸಿ ವಿಜಯ ಗಳಿಸಬೇಕಾಗಿಲ್ಲವಲ್ಲ! ಅಲ್ಲದೆ ಮಾತು ಎಲ್ಲಿ ಸೋತು ಮೂಕವಾಗುತ್ತದೋ ಅಲ್ಲಿ ಸಂಗೀತ ಮೊದಲಾಗುತ್ತದೆ.

ನೀವು ಸದ್ರುಚಿಯನ್ನು ಬೆಳಸಿಕೊಳ್ಳಬೇಕು. ಅದು ನಿಮ್ಮ ಜವಾಬ್ದಾರಿಯೂ ಹೌದು. ಕರ್ತವ್ಯವೂ ಹೌದು. ಏಕೆಂದರೆ, ಸದ್ರುಚಿಯುಳ್ಳ ಶ್ರೋತೃಗಳಿದ್ದರೆ ಸಂಗೀತ ವಿದ್ವಾಂಸರು ಜವಾಬ್ದಾರಿ, ಹುರುಪುಗಳಿಂದ ಹಾಡಿ ನುಡಿಸುತ್ತಾರೆ. ಅವರಲ್ಲಿ ಅತ್ಯುತ್ತಮವಾಗಿರುವ ಸುಪ್ತಕಲೆ ಹೊರಬರುತ್ತದೆ. ಇದರಿಂದ ಅವರೂ ಬೆಳೆಯುತ್ತಾರೆ. ನೀವೂ ಬೆಳೆಯುತ್ತೀರಿ. ನಮ್ಮ ಸಂಗೀತವೂ ಬೆಳೆಯುತ್ತದೆ.