ಸಾಹಿತ್ಯವೆಂದರೇನು ಎಂಬ ಪ್ರಶ್ನೆಗೆ ಬಹುಮಂದಿ ತೀರ ಸಹಜವಾಗಿ ಕೊಡುವ ಉತ್ತರವೆಂದರೆ “ಸಾಹಿತ್ಯ ಜೀವನದ ಪ್ರತಿಬಿಂಬ”- ಎನ್ನುವುದು. ಅದು ಕಂಠ ಪಾಠವಾಗಿರುವಷ್ಟು ಮಟ್ಟಿಗೆ ಬಳಕೆಯಾಗಿದೆ. ಆದರೆ ಈ ಸೂತ್ರ ಬಳಸಿ ಬಳಸಿ ಹಳೆಯದು ಮಾತ್ರವಲ್ಲ ಹಳಸಲೂ ಆಗಿದೆ. ಸಾಹಿತ್ಯ ಜನಜೀವನದ “ಪ್ರತಿಬಿಂಬ” ಮಾತ್ರವಲ್ಲ; ಅದು ಪ್ರತಿಬಿಂಬವಾಗುವುದು ಅಪೇಕ್ಷಣೀಯವೂ ಅಲ್ಲ. ಏಕೆಂದರೆ ಜನಜೀವನ ಹೇಗಿದೆಯೋ ಹಾಗೆ, ಯಥಾವತ್ತಾಗಿ ಅದನ್ನು ಸಾಹಿತಿಯ ಮನಸ್ಸು ಪ್ರತಿಬಿಂಬಿಸುತ್ತದೆ ಎನ್ನುವುದಾದರೆ, ಸಾಹಿತಿಯ ಮನಸ್ಸೊಂದು ನಿರ್ಜೀವವಾದ ಕನ್ನಡಿ ಮಾತ್ರ ಎನ್ನಬೇಕಾಗುತ್ತದೆ; ಆದರೆ ಸಾಹಿತಿಯ ಮನಸ್ಸು ಲೋಕಾನುಭವಗಳನ್ನು ಯಥಾವತ್ತಾಗಿ ಪ್ರತಿಬಿಂಬಿಸದೆ, ಅದನ್ನು ಪರಿವರ್ತಿಸಿ ಬೇರೊಂದೆಂಬಂತೆ ರೂಪಿಸಿ ತೋರುತ್ತದೆ. ಹೀಗಿರುವಾಗ ಇಂಥ ಸೃಜನಶೀಲ ಮನಸ್ಸಿನ ಅಭಿವ್ಯಕ್ತಿಯಾದ ಸಾಹಿತ್ಯವನ್ನು “ಜೀವನದ ಪ್ರತಿಬಿಂಬ” ಎಂದು ಕರೆಯುವುದು ಅಸಮರ್ಪಕವಾಗುತ್ತದೆ.

ಈ ಸೂತ್ರದಲ್ಲಿ ‘ಪ್ರತಿಬಿಂಬ’ ಎಂಬ ಮಾತನ್ನು ಪರಿಶೀಲಿಸಿದರೆ, ಅದೆಷ್ಟು ಅಸಮರ್ಪಕವಾಗಿದೆ ಎಂಬುದು ತಿಳಿಯುತ್ತದೆ : “ ‘ಪ್ರತಿಬಿಂಬ’ ‘ಬಿಂಬ’ವನ್ನು ಅವಲಂಬಿಸಿದ್ದು ; ಎಲ್ಲಾ  ದೃಷ್ಟಿಗಳಿಂದಲೂ ಅದಕ್ಕೆ ‘ಪ್ರತಿ’ಯಾದದ್ದು ; ಎಂದರೆ ಜನಜೀವನದ ತದ್ವತ್ತಾದುದು, ತದ್ರೂಪವಾದುದು-ಎಂದು ಹೇಳಿದಂತಾಯಿತು. ಆದರೆ ಸಾಹಿತ್ಯ ಹೀಗೆ ಕೇವಲ ತದ್ರೂಪವಷ್ಟೆ ಎಂಬುದನ್ನು-ಪಂಡಿತರ ಮಾತಿರಲಿ- ಬಾಲಕನಾದವನು ಕೂಡ ಒಪ್ಪುವುದಿಲ್ಲ. ಎಂದಮೇಲೆ ಜನಜೀವನಕ್ಕೂ , ಸಾಹಿತ್ಯಕ್ಕೂ  ಇರಬೇಕೆಂದು ಕೋರುವ, ಇರಬೇಕಾದ, ಎಂತಹ ಕೀಳ್ತರದ ಸಾಹಿತ್ಯಕ್ಕೂ ಕೂಡ ಈಗಲೂ ಇರುವ ಈ ಅನಿವಾರ‍್ಯವಾದ ಸಂಬಂಧವನ್ನು ಸೂಚಿಸುವುದಕ್ಕೆ ಈ ‘ಪ್ರತಿಬಿಂಬ’ ಶಬ್ದ ಸಮರ್ಥವಲ್ಲ, ಅನ್ಯಾರ್ಥಕೊಡುವಂತಹುದು, ಆ ಕಾರಣದಿಂದ ಯುಕ್ತವಲ್ಲ.”[1]

“ಈ ಪ್ರತಿಬಿಂಬ ಎಂಬ ಭ್ರಮಾತ್ಮಕವಾದ ಶಬ್ದ ಆ ಅರ್ಥದಲ್ಲಿ ಬಂದುದಕ್ಕೆ ಕಾರಣ ಬಹುಮಟ್ಟಿಗೆ ಅದಕ್ಕೆ ಮೂಲವಾಗಿ ಇಂಗ್ಲಿಷ್‌ನಲ್ಲಿ ಬಳಸುವ `Reflection’ ಎಂಬ ಶಬ್ದ ಎಂದು ನನಗೆ ತೋರುತ್ತದೆ. ಆದರೆ ಇಂಗ್ಲೀಷಿನ `Reflection’ ಎಂಬ ಶಬ್ದ  ಬಿಂಬದ ಪ್ರತಿಬಿಂಬವನ್ನು ಸೂಚಿಸುವುದಷ್ಟೇ ಅಲ್ಲ; ‘ಮಾನವನ ಬುದ್ಧಿ ಹೃದಯಗಳ ಸರ್ವಚೇಷ್ಟೆ’ ಎಂಬ ಅರ್ಥವಿಸ್ತಾರವನ್ನೂ ತನ್ನಲ್ಲಿ ಆಡಕಮಾಡಿಕೊಂಡಿದೆ. ಈ ಅರ್ಥಗರ್ಭವನ್ನು ‘ಪ್ರತಿಬಿಂಬ’ ಶಬ್ದ ಇದುವರೆಗೂ ಧರಿಸಿದ್ದು ಇಲ್ಲ, ಸದ್ಯಕ್ಕೆ ಧರಿಸುವಂತೆಯೂ ಇಲ್ಲ.”[2]

ಆದಕಾರಣ ಇದಕ್ಕಿಂತಲೂ ಹೆಚ್ಚು ಅರ್ಥಪೂರ್ಣವಾದ ಸೂತ್ರವೊಂದನ್ನು ಮಾಡುವುದಾದರೆ “ಸಾಹಿತ್ಯ ಜೀವನದ ಗತಿಬಿಂಬ” ಎನ್ನಬಹುದು. ಇಲ್ಲಿ ಬಳಸಿರುವ ‘ಗತಿ’ ಮತ್ತು ‘ಬಿಂಬ’ಈ ಎರಡು ಮಾತುಗಳ ಅರ್ಥವನ್ನು ವಿವರಿಸಿದರೆ ಈ ಸೂತ್ರದ ಅರ್ಥ ಹೆಚ್ಚು ಸ್ಪಷ್ಟವಾದೀತು.

ಮೊದಲನೆಯದಾಗಿ ‘ಗತಿ’ ಎಂಬ ಮಾತಿಗೆ, ಈ ಹೊಸ ಸೂತ್ರದ ವಿವರಣೆಯ ದೃಷ್ಟಿಯಿಂದ ಮೂರು ಬಗೆಯ ಅರ್ಥವನ್ನು ಇಟ್ಟುಕೊಳ್ಳಬಹುದು.[3] ಅರ್ಥಸ್ಪಷ್ಟತೆಗೆ ಸಮಾನವಾದ ಇಂಗ್ಲಿಷ್ ಪದಗಳನ್ನು ಇಲ್ಲಿ ಸೂಚಿಸಲಾಗಿದೆ;

೧. ‘ಗತಿ’ ಎಂದರೆ ಚಲನೆ ನಡಿಗೆ (Movement).

೨. ‘ಗತಿ’ ಎಂದರೆ, ದಿಕ್ಕು, ಗುರಿ, ಉದ್ದೇಶ (Direction, Purpose).

೩. ‘ಗತಿ’ ಎಂದರೆ ಸದ್ಯದ ಸ್ಥಿತಿ, ಅವಸ್ಥೆ (The State of life : Condition).

ಎಂದರೆ, ಸಾಹಿತ್ಯ, ಅಂದಂದಿನ ಜನಜೀವನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಅದರ ಚಲನೆ ಹೇಗಿದೆ, ಕೇವಲ ಸಾಂಪ್ರದಾಯಿಕವೋ ಅಥವಾ ಪ್ರಗತಿಪರವೋ ಎಂಬ ಮನೋವ್ಯಾಪಾರಗಳ ವಿವರವನ್ನು, ಅಂದಂದಿನ ಜನಜೀವನದ ದಿಕ್ಕು, ಗುರಿ, ಉದ್ದೇಶಗಳೇನು, ಅದರ ಮೌಲ್ಯಗಳೇನು, ಎಂಬುದನ್ನೂ ಮತ್ತು ಅಂದಂದಿನ ಜನಜೀವನದ ಸದ್ಯದ ಸಾಮಾಜಿಕ-ನಾಗರಿಕ-ಸಾಂಸ್ಕೃತಿಕ ಅವಸ್ಥೆಗಳೇನು-ಎಂಬುದನ್ನೂ ಬಿಂಬಿಸುತ್ತದೆ. ಪಂಪನ ಕಾಲದ ಜನಜೀವನ ಕ್ಷಾತ್ರದ, ತ್ಯಾಗದ-ಭೋಗದ ಗತಿಯಲ್ಲಿ ಸಾಗಿದರೆ, ಹನ್ನೆರಡು ಹದಿನೈದನೆಯ ಶತಮಾನಗಳಲ್ಲಿ ಅದರ ಗತಿ ‘ಭಕ್ತಿಯ’ ಪಾತ್ರದಲ್ಲಿ ಪ್ರವಹಿಸಿರುವುದರ ‘ಬಿಂಬ’ವನ್ನು ಆಯಾ ಕಾಲದ ಸಾಹಿತ್ಯಕೃತಿಗಳೇ ಬಿಂಬಿಸುತ್ತವೆ. ಇಲ್ಲಿ ಕೇವಲ ಜೀವನದ ಗತಿ ಮಾತ್ರವಲ್ಲ, ಆಯಾ ಪರಿಸರದಿಂದ ಪ್ರಭಾವಿತವಾದ ಕವಿ ಮನೋಧರ್ಮದ ಗತಿಯೂ ಅಂದಂದಿನ ಸಾಹಿತ್ಯದಲ್ಲಿ ಬಿಂಬಿತವಾಗಿದೆ. ಸಾಹಿತ್ಯ ಚಳುವಳಿಯ ಪ್ರಮುಖ ಘಟ್ಟಗಳನ್ನೂ ಈ ‘ಗತಿ’ ಎಂಬ ಪದ ಒಳಕೊಳ್ಳುತ್ತದೆ. ಹತ್ತನೆಯ ಶತಮಾನದ ‘ಚಂಪೂ’ ಯುಗದ ‘’ ‘ಗತಿ’ಗೂ ಅನಂತರದ ರಗಳೆ, ವಚನಗಳ ‘ಗತಿ’ಗೂ, ತದನಂತರ ಷಟ್ಪದೀ ಸಾಂಗತ್ಯದ ‘ಗತಿ’ಗೂ ವ್ಯತ್ಯಾಸವಿದೆ. ಕವಿಕೃತಿಯಲ್ಲಿ ವ್ಯಕ್ತವಾಗಿರುವ ಭಾವಗತಿಯಲ್ಲಿ, ಭಾಷಾಗತಿಯಲ್ಲಿ, ಛಂದೋಗತಿಯಲ್ಲಿ ಅಂದಂದಿನ ಬದಲಾದ ಪರಿಸರದ ‘ಗತಿಬಿಂಬ’ವನ್ನು ಗುರುತಿಸಬಹುದು. ಜನಜೀವನಕ್ಕೆ ಒಂದು ‘ಗತಿ’ ಉಂಟು ಎನ್ನುವುದೂ ಅಂದಂದಿನ ಸಾಹಿತ್ಯ ಆ ‘ಗತಿ’ ಯನ್ನು ಬಿಂಬಿಸುತ್ತದೆ ಎನ್ನುವುದೂ ಸಾಹಿತ್ಯ ಚರಿತ್ರೆಯ ಅವಲೋಕನದಿಂದ ಎಲ್ಲರಿಗೂ ತಿಳಿಯುವ ಸಂಗತಿಯಾಗಿದೆ.

ಇನ್ನು ‘ಬಿಂಬ’ ಎಂಬ ಮಾತನ್ನು ಪರಿಶೀಲಿಸೋಣ : ಸಾಹಿತ್ಯ ‘ಬಿಂಬ’ ವೇನೋ ಹೌದು ; ಆದರೆ ‘ಪ್ರತಿ-ಬಿಂಬ’ ಅಲ್ಲ. ಸಾಹಿತಿಯಲ್ಲಿ ನಡೆಯುವ ಈ ಬಿಂಬನಕ್ರಿಯೆ ಎಂಥದು ಎಂಬುದನ್ನು ತಿಳಿದರೆ ಈ ‘ಬಿಂಬ’ದ ಅರ್ಥ ಸ್ಪಷ್ಟವಾಗಬಹುದು. ಸಾಹಿತಿಯ ಮನಸ್ಸು ಕನ್ನಡಿಯ ಹಾಗೆ ಅಥವಾ ನೀರಿನ ಹಾಗೆ ಸುತ್ತಣ ಜೀವನವನ್ನು ಯಥಾವತ್ತಾಗಿ ಬಿಂಬಿಸುವುದಿಲ್ಲ ; ಹಾಗೆ ಕಂಡದ್ದನ್ನೆಲ್ಲ ಪ್ರತಿಬಿಂಬಿಸುವುದು ಸಾಹಿತ್ಯದ ಕೆಲಸವಲ್ಲ. ಹಾಗೆ ಪ್ರತಿಬಿಂಬಿಸುವುದು ಸಾಹಿತ್ಯವಾಗದೆ, ಕೇವಲ ವರದಿಯಾದೀತು. ಆದರೆ ಸಾಹಿತ್ಯದ ನಿಲುವಿನಲ್ಲಿ ‘ಬಿಂಬನ’ ಎಂದರೆ ಇದ್ದುದನ್ನು ಇದ್ದ ಹಾಗೆ ಪಡಿಮೂಡಿಸುವುದು ಎಂದು ಅರ್ಥವಲ್ಲ ; ಇರುವುದನ್ನು ತನ್ನ ಮಾಧ್ಯಮದ ಮೂಲಕ ಅದು ಬೇರೊಂದೆಂಬಂತೆ ಪರಿವರ್ತಿಸಿ ಅಭಿವ್ಯಕ್ತಗೊಳಿಸುವುದು ಎಂದು ಅರ್ಥ. ಚಂದ್ರಬಿಂಬ  ಎನ್ನುವ ಮಾತನ್ನು ಗಮನಿಸಿ. ಚಂದ್ರನಲ್ಲಿ ಬಿಂಬಿತವಾಗಿರುವುದು ಸೂರ‍್ಯನ ಬೆಳಕೇ ಆದರೂ ಅದು ಚಂದ್ರಮಂಡಲದ ಮಾಧ್ಯಮದ ಮೂಲಕ ಪರಿವರ್ತಿತವಾಗಿ, ಚಂದ್ರಕಾಂತಿಯಾಗಿ, ಬೆಳುದಿಂಗಳಾಗಿ ಬರುತ್ತದೆ. ಸಣ್ಣದೊಂದು ಮಂಜಿನ ಹನಿಯೂ ಸಹ ಸೂರ‍್ಯ ರಶ್ಮಿಯನ್ನು ಕಾಮನಬಿಲ್ಲನ್ನಾಗಿ ಬಿಂಬಿಸಿ ತೋರಿಸುತ್ತದೆ. ಪ್ರತಿಯೊಂದು ವ್ಯಕ್ತಿತ್ವಕ್ಕೂ, ತನ್ನ ಶಕ್ತಿ-ಸಂಸ್ಕಾರಾನುಸಾರಿಯಾದ ಬಿಂಬನ ಶಕ್ತಿ ಇದೆ ; ಅದರಲ್ಲೂ ಕವಿಯಂಥ ವಿಶಿಷ್ಟ ವ್ಯಕ್ತಿತ್ವ ಲೋಕಾನುಭವಗಳನ್ನು ‘ಬಿಂಬಿಸು’ವಲ್ಲಿ, ಅಲ್ಲಿ ಬೇರೊಂದು ಪರಿವರ್ತನ ಕ್ರಿಯೆ ನಡೆದೇ ನಡೆಯುತ್ತದೆ. ಲೋಕಾನುಭವಗಳನ್ನು ಹೀಗೆ ಕಾವ್ಯಾನುಭವವನ್ನಾಗಿ ಪರಿವರ್ತಿಸಿ ಅಭಿವ್ಯಕ್ತಪಡಿಸುವ ಶಕ್ತಿಯನ್ನೆ ನಾವು ಇಲ್ಲಿ ಬಿಂಬನ ಶಕ್ತಿ ಎಂದು ಇರಿಸಿಕೊಳ್ಳಬಹುದು.

ಈ ಮೇಲಿನ ವಿವರಣೆಯ ದೃಷ್ಟಿಯಿಂದ ‘ಸಾಹಿತ್ಯ ಜೀವನದ ಗತಿಬಿಂಬ’ ಎನ್ನುವ ಈ ಸೂತ್ರ, ಹೆಚ್ಚು ಸಮರ್ಪಕ ಎನ್ನುವುದಕ್ಕಿಂತ ಹೆಚ್ಚು ಅರ್ಥಪೂರ್ಣವಾಗಬಹುದು.

ಗತಿಬಿಂಬ-೧೯೬೯


[1] ಜಿ. ಪಿ. ರಾಜರತ್ನಂ : ಜನಜೀವನವನ್ನು ಪ್ರತಿಬಿಂಬಿಸುವ ಸಾಹಿತ್ಯ ; ಪ್ರಬುದ್ಧ  ಕರ್ಣಾಟಕ. ಸಂ, ೨೯- ಸಂಚಿಕೆ ೧, ಪು. ೩೯.

[2] ಅಲ್ಲೇ, ಪು. ೪೦.

[3] ಶ್ರೀ ಆಪ್ಟೆಯವರ ನಿಘಂಟಿನಲ್ಲಿ ‘ಗತಿಃ’ಎಂಬ ಶಬ್ದಕ್ಕೆ ಇರುವ ಕೆಲವು ಅರ್ಥಗಳು ಹೀಗಿವೆ : 1. Motion, Going, Moving; 4. Turn, Course; 6. Fate; 7. State, Condition ; 8. Position, Station, Situation, mode of existence; 12. A way, Path; 13. A  march ; 15. The course of events.-The practical Sanskrit-English Dictionary, P. 399. (V.S. Apte, 1924 Edn.)