ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗದಲ್ಲಿ ಹಿಂದೆ ನಡೆದ ಉಪ್ಪಿನ ಸತ್ಯಾಗ್ರಹ, ಕರಬಂದಿ ಸತ್ಯಾಗ್ರಹ ಈ ಎರಡು ಸಂಗತಿಗಳು ಗುಜರಾಥ ಪ್ರಾಂತದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಹಾಗೂ ಕರನಿರಾಕರಣೆ ಆಂದೋಲನಗಳಿಗಿಂತ ಹೆಚ್ಚು ಉಗ್ರವಾಗಿಯೂ ಹುರುಪಿನಿಂದಲೂ ನಡೆದು ಬಂದವುಗಳಾಗಿದ್ದವೆಂದು ಸರದಾರ ವಲ್ಲಭಭಾಯಿ ಪಟೇಲರಂಥ ಮಹನೀಯರೂ ಅಭಿನಂದಿಸಿರುವುದು ಕರ್ನಾಟಕಕ್ಕೂ ಉತ್ತರ ಕನ್ನಡ ಜಿಲ್ಲೆಗೂ ಹೆಮ್ಮೆಯ ವಿಷಯವಾಗಿವೆಯೆಂದು ನಾನು ಮನಃಪೂರ್ವಕವಾಗಿ ಹೇಳಬಯಸುತ್ತೇನೆ.

ಬ್ರಿಟಿಷರು ನೂರಾರು ವರ್ಷಕ್ಕಿಂತಲೂ ಹೆಚ್ಚಾಗಿ ಭಾರತದಲ್ಲಿ ದಬ್ಬಾಳಿಕೆಯಿಂದ ರಾಜ್ಯ ಮಾಡಿ ಭಾರತೀಯರನ್ನು ಕೇವಲ ಬಡರಾಷ್ಟ್ರವನ್ನಾಗಿ ಮಾಡಲು ಹೊಂಚು ಹಾಕಿದ್ದರು. ಈ ಪರಿಸ್ಥಿತಿನ್ನು ಕಂಡು ಮಹಾತ್ಮಾ ಗಾಂಧೀಜಿಯವರು ಭಾರತೀಯರನ್ನು ದಾಸ್ಯ ಶೃಂಖಲೆಯಿಂದ ಮುಕ್ತಗೊಳಿಸಿ ದಾರಿದ್ರ್ಯವನ್ನು ಹೋಗಲಾಡಿಸಲು ಪಣತೊಟ್ಟಿದ್ದರಿಂದ ಹಲವಾರು ಸತ್ಯಾಗ್ರಹಗಳು ಹಾಗೂ ಚಳವಳಿಗಳು ದೇಶಾದ್ಯಂತ ಅವರ ನೇತೃತ್ವದಲ್ಲಿ ನಡೆದವು. ಇಂತಹ ಸತ್ಯಾಗ್ರಹದಲ್ಲಿ ಬೆಳಾಂವ ಜಿಲ್ಲೆಯು ಯಾವ ರೀತಿಯಿಂದ ಭಾಗ ತೆಗೆದುಕೊಂಡಿತೆಂಬುದನ್ನು ಸ್ವಲ್ಪದರಲ್ಲಿ ವಿವರಿಸುತ್ತೇನೆ.

ನಮ್ಮ ಬೆಳಗಾಂವ ಜಿಲ್ಲೆಯಲ್ಲಿಯೂ ಸುಮಾರು ಎರಡು ನೂರು ಸತ್ಯಾಗ್ರಹಿಗಳು ತಾರಕಂಬ ಕಡಿಯುವುದು, ರೈಲ್ವೆ ಸ್ಟೇಶನ್ನ್‌ ಗಳನ್ನು ಸುಡುವುದು ಸರ್ಕಾರಿ ಕಟ್ಟಡಗಳನ್ನು ಶಾಲೆ ಕಚೇರಿಗಳನ್ನು ವಿಧ್ವಂಸ ಮಾಡುವುದು ಇವೇ ಮುಂತಾದ ಕಾರ್ಯಗಳನ್ನು ಮಾಡಿದ್ದಾರೆ.

ಈಗ ನಾನು ಕೆಲವು ಹಿಂದಿನ ಘಟನೆಗಳನ್ನು ಹೇಳಬಯಸುತ್ತೇನೆ. ಅವು ಹಳೇಕಾಲದ ಅಂದರೆ ಭಾರಕ್ಕೆ ಸ್ವರಾಜ್ಯ ಕೊಡಿಸುವುದಾಗಿಯೂ ಅದು ನಮ್ಮ ಜನ್ಮ ಸಿದ್ದ ಹಕ್ಕು ಎಂದು ಅನೇಕ ಸಲ ಹೇಳಿದ ಮತ್ತು ಹೇಳುತ್ತಿದ್ದ ಲೋಕಮಾನ್ಯ ತಿಲಕರ ಕಾಲದ ಪ್ರತ್ಯಕ್ಷ ನಡೆದ ಸಂಗತಿಗಳು. ಲೋಕಮಾನ್ಯ ತಿಲಕರಿಗೆ ಕಡೆಯ ಸಲ ೬ ವರ್ಷದ ಜೈಲುವಾಸದ ಶಿಕ್ಷೆ ಆದದ್ದು ರಂಗೂನದ ಹತ್ತಿರ ಮಂಡಾಲೆಯ ಸೆರೆಮನೆಯಲ್ಲಿ. ಅಲ್ಲಿ ದೊಡ್ಡ ಶಿಕ್ಷೆ ಭೊಗಿಸಿ ಮುಗಿಸಿದ ಮೇಲೆ ಅವರನ್ನು ಪುಣೆಗೆ ತಂದು ಸರ್ಕಾರ ಬಿಡುಗಡೆ ಮಾಡಿತು. ಆಗ ಇವರ ಸನ್ಮಾನ ಮಾಡಬೇಕೆಂದು ಅಲ್ಲಲ್ಲಿ ಪ್ರಯತ್ನ ನಡೆದವು. ಆಗ ಪುಣೆಯ ಕೇಸರಿ ಪತ್ರದ ಕೆಲ ಅವರ ಹಿತಚಿಂತಕರು ಬಂದು ಅವರ ಕಿವಿಯಲ್ಲಿ “ಲೋಕಮಾನ್ಯ ತಿಲಕರೇ ಇದೋ ನಿಮ್ಮ ಬಿಡುಗಡೆ ಆಗಿದೆ. ಅಲ್ಲಲ್ಲಿ ತಮ್ಮ ಭಾಷಣಕ್ಕಾಗಿ ಜನಜಂಗುಳಿಯು ಜಾತ್ರೆಯಂತೆ ಕೂಡಿ ನಿಮ್ಮ ಭಾಷಣ ಕೇಳಲು ಕುತೂಹಲದಿಂದ ಕೂಡುವುದುಂಟು, ಈ ಸದ್ಯ ನಾಶಿಕ ನಗರದಲ್ಲಿ ನಿಮ್ಮ ಸ್ವಾಗತಕ್ಕಾಗಿ ಜನ ಕಾದು ಕುಳಿತಿದೆ, ತಾವು ಅತ್ಯಂತ ಕಾಳಜಿಯಿಂದ ಭಾಷಣ ಮಾಡಬೇಕೆಂದು ನಾವು ಭಿನ್ನವಿಸುತ್ತೇವೆ. ಏಕೆಂದರೆ ಸರ್ಕಾರವು ಬಹಳಷ್ಟು ಸಿ.ಆಯ್.ಡಿ. ಪೊಲೀಸರನ್ನು ಭಾಷಣದ ರಿಪೋರ್ಟ್‌ ಬರೆದು ತಿಳಿಸಲು ಇಲ್ಲಿ ಕಳಿಸಿದ್ದಾರೆ. ಅವರೆಲ್ಲರೂ ಈ ತುದಿಗೆ ಕುಳಿತಿದ್ದಾರೆ. ಕಾರಣ ಒಳ್ಳೇ ಎಚ್ಚರಿಕೆಯಿಂದ ಭಾಷಣ ಮಾಡಿರಿ” ಎಂದು ಸೂಚಿಸಿದರು. ಆಗ ಸಿ.ಆಯ್.ಡಿ. ರಿಪೋರ್ಟರರು ಬಂದು ವೇದಿಕೆಯ ಹತ್ತಿರ ಕುಳಿತುಕೊಂಡರು. ಆಗ ತಿಲಕರು ಅವರಿಗೆ ನೀವು ಸರ್ಕಾರಿ ಕೆಲಸಕ್ಕಾಗಿ ಬಂದಿರುವಿರಿ. ನಿವೇನೂ ನನ್ನ ಶತ್ರುಗಳಲ್ಲ, ನನ್ನ ವಯಸ್ಸು ೬೦ ಮಿಕ್ಕಲು ಬಂದಿದೆ. ಕಾರಣ ನನ್ನ ಭಾಷಣ ತಮಗೆ ಆ ದೂರ ಸರಿಯಾಗಿ ಕೇಳಿಸಲಿಕ್ಕಿಲ್ಲ. ಅಂತೆಯೇ ನಿಮಗೆ ನನ್ನ ಸಮೀಪ ಬಂದು ಕೂಡಲು ಸೂಚಿಸಿದೆನು. ತಾವು  ತಪ್ಪು ತಿಳಿದುಕೊಳ್ಳಬೇಡಿರಿ ಎಂದು ಹೇಳಿ ಭಾಷಣ ಶುರು ಮಾಡಿದರು. ಆ ಭಾಷಣ ಹೀಗೆ ಇತ್ತು.

“ಬಂಧುಗಳೇ, ಭಗನೀಯರೇ, ನನ್ನ ಭಾಷಣ ಸರಿಯಾಗಿ ತಿಳಿದುಕೊಳ್ಳಿರಿ. ನಾನು ಮೊದಲಿಗೆ ನಮ್ಮ ಸ್ವರಾಜ್ಯವೆಂದರೇನು ಎಂಬುದನ್ನು ಹೇಳುವೆ. ಸವರಾಜ್ಯವೆಂದರೆ ಈ ಪರಕೀಯ ಆಳರಸರನ್ನು ಅವರಿಗೆ ಒದ್ದು ಏಳು ಸಮುದ್ರದ ಆಚೆಗೆ ನೂಕಬೇಕು.” ಎಂದು ಒಳ್ಳೇ ಗಂಭೀರವಾಗಿ ಎಲ್ಲರಿಗೂ ತಿಳಿಯುವಂತೆ ಕೇಳುವಂತೆ ಹೇಳಿದರು. ಅದನ್ನು ಕೇಳುತ್ತಲೇ ಲೋಕಮಾನ್ಯ ತಿಲಕರಿಗೆ ಜಲವಾಗಲಿ ಜಯವಾಗಲಿ ಎಂದು ಗರ್ಜನೆ ಮಾಡಿದರು. ಮತ್ತು ಆ ಸರ್ಕಾರಿ ರಿಪೋರ್ಟರರಿಗೆ ಕೇಳಿಸುವಂತೆ ಸ್ವರಾಜ್ಯದ ಅರ್ಥ ಹೀಗಲ್ಲ ಎಂದು ಎರಡು ಸಲ ಮೆಲ್ಲಗೆ ಸಣ್ಣ ಧ್ವನಿಯಲ್ಲಿ ಹೇಳಿದರು. ಮತ್ತು ನಾನು ಹೇಳಿದ ಎಲ್ಲ ವಾಕ್ಯಗಳನ್ನು ಸರಿಯಾಗಿ ಬರೆದುಕೊಂಡಿರೋ ಎಂದು ಆ ರಿಪೋರ್ಟ ತರಿಸಿ ಓದಿ ನೋಡಿದರು. ಆಗ ಸಿ.ಆಯ್.ಡಿ. ರಿಪೋರ್ಟರರು ಹುಚ್ಚ ರಂತೆ ಕುಳಿತುಕೊಂಡರು.

೧೯೪೨ನೇ ಆಂದೋಲನದಲ್ಲಿಯ ಕೆಲ ಸ್ವಾರಸ್ಯಮಯ ಸಂಗತಿಗಳು

ನಮ್ಮ ಜಿಲ್ಲೆಯಲ್ಲಿ ಆರಂಭಕ್ಕೆ ಹುರುಪಿನಿಂದ ಮುಂದೆ ಬಂದ ಜನತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಸಾವಕಾಶವಾಗಿ ತಮ್ಮ ತಮ್ಮ ಉದ್ಯೋಗ ವ್ಯವಸಾಯಕ್ಕೆ ಹತ್ತಿದರು. ನಿಷ್ಠಾವಂತ ಹಳೇ ಕಾರ್ಯಕರ್ತರು ಮಾತ್ರ ಸಂಘಟಿತ ರೂಪದಲ್ಲಿ ಗೈದ ಕಾರ್ಯಗಳಿಗೆ ಹುಚ್ಚು ಹಿಡಿದಂತಾಯಿತು. ಪೊಲೀಸರು ಗವರ್ನರರು ಈ ಸಂಘಟನೆ ನೋಡಿ ಭ್ರಮಿಷ್ಟರಾದಂತಾದರು. ಜನತೆಯೂ ಜೈಲಿನಲ್ಲಿಯ ಮುಖಂಡರು ಭಲೇ! ಭಲೇ!! ಶಾಬಾಸ್ !!! ಕ್ರಾಂತಿವೀರರೇ ಎಂದು ಹರ್ಷಾತಿರೇಕದಿಂದ ಕುಣಿದಾಡಿದರು.

) ಸುಲಧಾಳ ರೈಲ್ವೆ ಸ್ಟೇಶನ್ ಧಗಧಗಿಸಿತು ಈ ರೈಲ್ವೆ ಸ್ಟೇಶನ್‌ ಸುಡುವ ಕಾರ್ಯಕ್ರಮ ಪಾಚ್ಛಾಪುರ, ಅಕ್ಕತಂಗೇರಹಾಳ ಗುಂಪಿನವರದು. ಅದೇ ದಿನ ಹುದಲಿ ಗುಂಪಿನವರು ಸೂಳೇಭಾವಿ ಸ್ಟೇಶನ್‌ನ್ನು ಸುಟ್ಟು ಹಾಕಬೇಕೆಂದು ನಿಶ್ಚಿತವಾಗಿತ್ತು. ಆ ಪ್ರಕಾರ ಸಕಲ ಸಿದ್ಧತೆಗಳೂ ನಡೆದರು. ಕುಂದರನಾಡು ಎಂದರೆ ಹುದ್ಲಿ, ಅಕ್ಕತಂಗೇರಹಾಳ, ಪಾಚ್ಛಾಪೂರ ಭಾಗ. ಈ ಭಾಗದ ೪೪ ಹಳ್ಳಿಗಳು ಬೆಳಗಾವಿ ತಾಲೂಕ, ಗೋಕಾಕ ತಾಲೂಕ ಮತ್ತು ಹುಕ್ಕೇರಿ ತಾಲೂಕಗಳಲ್ಲಿ ಹಂಚಿ ಹೋಗಿವೆ. ಈ ಕುಂದರನಾಡು ಮೊದಲಿಂದಲೂ ರಾಜಕೀಯ ಚಳುವಳಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾ ಬಂದಿದೆ. ಸುಧಾಳ ಸ್ಟೇಶನ್ ಗುಜನಾಳದಿಂದ ೩ ಫರ್ಲಾಂಗು. ಅಲ್ಲಿ ಪೊಲೀಸರು ಕುಂದರನಾಡ ಕಾರ್ಯಕರ್ತರನ್ನು ಹಿಡಿಯುವ ಸಲುವಾಗಿ ಕ್ಯಾಂಪ್ ಹಾಕಿದ್ದರು. ಪೊಲೀಸರ ಸಮೀಪದಲ್ಲಿಯೇ ಇದ್ದ ಸುಲಧಾನ ಸ್ಟೇಶನ್‌ವನ್ನು ಸುಡಬೇಕೆಂದು ನಮ್ಮ ಕಾರ್ಯಕರ್ತರು ನಿಶ್ಚಯಿಸಿದರು. ಒಂದು ಸಂತೆಯ ದಿನ ಅಂದರೆ ಅಂಕಲಗಿಯ ಶುಕ್ರವಾರ ಸಂತೆಯ ದಿನ. ಆ ದಿವಸ ಇದನ್ನು ಸುಟ್ಟು ಹಾಕುವ ನಿಶ್ಚಯದಿಂದ ಮೂರು ಮೂರು ಜನರಂತೆ ಒಬ್ಬರ ಹಿಂದೆ ಒಬ್ಬರು ಬಂದು ಸುಲಧಾಳ ರೈಲ್ವೇ ಸ್ಟೇಶನ್‌ಕ್ಕೆ ಮುಂಜಾನೆ ೧೦ ಗಂಟೆಗೆ ಬಂದು ಜೋಳದ ಬೆಳೆಯಲ್ಲಿ ಅಡಗಿಕೊಂಡು ಕುಳಿತರು. ೪ ಜನ ಸ್ಟೇಶನ್ ಮಾಸ್ತರರನ್ನು ೪ ಜನರು ಪೋರ್ಟರರನ್ನು ಹಿಡಿದು ಒಂದು ಕೋಣೆಯಲ್ಲಿ ಹಾಕಿ ಕೀಲಿ ಹಾಕಿದರು. ಮೂವರು ರೇಲ್ಷೇ ಸ್ಟೇಶನ್‌ದಲ್ಲಿಯ ಟೆಲಿಫೋನ್‌ನ್ನು  ಒಡೆದರು. ತಾರುಗಳನ್ನು ಕತ್ತರಿಸಿದರು. ಅಷ್ಟರಲ್ಲಿ ಪಾಚ್ಛಾಪುರ ಕಡೆಯಿಂದ ಸೂಳೇಭಾವಿಯ ಕಡೆಯಿಂದ, ಹೀಗೆ ಎರಡು ಗಾಡಿಗಳು ಸ್ಟೇಶನ್‌ಕ್ಕೆ ಬರಹತ್ತಿದ್ದವು. ಇನ್ನೂ ಅನುಮಾನ ಮಾಡುವುದು ಸರಿಯಲ್ಲವೆಂದು ತಿಳಿದು, ನಮ್ಮ ಗುಂಪಿನ ಮುಖ್ಯಸ್ಥರಾದ ಶ್ರೀ ವಾಮನರಾವ ದೇಸಾಯಿ ಬಿದರಿ ಮತ್ತು ಅಣ್ಣು ಗುರೂಜಿ ದೇಶಪಾಂಡೆ ಇವರಿಬ್ಬರೂ ಸಂಜ್ಞೆ ಮಾಡಿದರು. ಸ್ಟೇಶನ್‌ನ್ನು ಸುಡಲಿಕ್ಕೆ ಎಂದು ೨ ಡಬ್ಬಿ ಚಿಮಣಿ ಎಣ್ಣಿ ಅಂಕಲಗಿಯಿಂದ ತಂದಿದ್ದೆವು. ನಮ್ಮ ಸುದೈವದಿಂದ ಅದೇ ಮುಂಚಿನ ದಿನ ರಾತ್ರಿ ೪೦ ಡಬ್ಬಿ ಚಿಮಣಿ ಎಣ್ಣಿ ಸ್ಟೇಶನ್ನಿಗೆ ಬಂದಿದ್ದವು. ಅವನ್ನೆಲ್ಲಾ ಪಟಪಟನೆ ಒಡೆದು ಎಣ್ಣಿ ಸುರುವಿದೆವು. ಆಗ ಸ್ಟೇಶನ್ ಕೋಣೆಯ ತುಂಬ ಚಿಮಣಿ ಎಣ್ಣೆ ಆಯಿತು. ಒಬ್ಬಿಬ್ಬರು ರೇಲ್ವೆ ಆಫೀಸಿನಲ್ಲಿಯ ಮಶಿನರಿ ಜಿನಸು ಮುರಿದು ಚೆಲ್ಲಿದರು. ಸ್ಟೇಶನ್ ಮಾಸ್ಟರರು ಗಾಬರಿಯಾಗಿ ಇದೇನು ಇದೇನು ಎಂದು ಕೂಗುತ್ತಿರುವಾಗಲೇ ಸ್ಟೇಶನ್ ಒಳಗೆ ಸಿಕ್ಕಿದ್ದ ಇಬ್ಬರು ಟಣಟಣನೆ ಕಿಡಕಿಯೊಳಗಿಂದ ಜಿಗಿದು ಹೊರಬಂದರು. ೮-೧೦ ಜನರು ಬೇರೆ ಬೇರೆ ಕಡೆಗೆ ಕಡ್ಡಿ ಕೊರೆದು ಚಿಮಣಿ ಎಣ್ಣಿಗೆ ಉರಿ ಹಚ್ಚಿದರು. ಹಾ ಹಾ ಅನ್ನುವುದರೊಳಗಾಗಿ ಬೆಂಕಿ ಹತ್ತಿ ಇಡೀ ಸ್ಟೇಶನ್ ಧಗಧಗಿಸಿ ಹೋಯಿತು. ನಾವೆಲ್ಲರೂ ಜೋಳದ ಬೆಳೆಯನ್ನು ದಾಟಿ ಗುಡ್ಡ ಹತ್ತಿ ಹೋದೆವು.

ಸುಲಧಾಳ ರೇಲ್ವೇ ಸ್ಟೇಶನ್ನಿಗೆ ಮತ್ತು ಗುಜನಾಳದ ಈ ಪೊಲೀಸ ಠಾಣೆಗೆ ಕೇವಲ ೩ ಫರ್ಲಾಂಗು ಅಂತರ. ಬಂದೂಕ, ಪಿಸ್ತೂಲಗಳೊಂದಿಗೆ ಜೀಪ ಮೋಟರುಗಳ ಸಹಾಯದಿಂದ ಪೊಲೀಸರು ನಮ್ಮ ಬೆನ್ನು ಹತ್ತಿದ್ದರು. ನಮ್ಮ ಕೈಯಲ್ಲಿ ಯಾವ ಶಸ್ತ್ರವು ಇದ್ದಿಲ್ಲ. ಶಸ್ತ್ರ ಹಿಡಿಯತಕ್ಕದ್ದಲ್ಲವೆಂಬ ಕಟ್ಟಪ್ಪಣೆ ನಮ್ಮ ಕಾರ್ಯಕರ್ತರಿಗಿತ್ತು.

) ತಂತಿ ಕತ್ತರಿಸುವ ಪ್ರಚಂಡ ಸಂಘಟನೆ: ತಂದಿ ಕತ್ತರಿಸುವುದು ಅದು ರೇಲ್ವೇ ಲಾಯಿನದ್ದೇ ಇರಲಿ ಲೈನ್ ದಾರಿಯ ಗುಂಡವೇ ಇರಲಿ ಆಗಸ್ಟ್ ಚಳವಳಿಯ ನಿತ್ಯ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮ ಸುಲಭವೂ ಆಗಿತ್ತು. ಇಬ್ಬರು ಮೂವರು ಕಾರ್ಯಕರ್ತರು ಕೂಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿತ್ತು. ಒಬ್ಬನು ಎರಡೂ ಕಡೆಗೆ ದೂರದ ವರೆಗೆ ನೋಡುತ್ತ ನಿಲ್ಲುವುದು, ಇನ್ನೊಬ್ಬನು ಕಂಬದ ಮೇಲೇರಿ ಕೊಡ್ಲಿಯಿಂದ ತಂತಿಯನ್ನು ಕಡಿಯುವುದು, ಮೂರನೆಯವರು ಹಗ್ಗ ಚೆಲ್ಲಿ ತಂತಿ ಜಗ್ಗುವುದು ಇಷ್ಟಾದರೆ ತೀರಿತು.

ಡಿಸೆಂಬರ್ ೧೬ನೇ ತಾರೀಖು ೧೯೪೨ರ ದಿವಸ ಎಲ್ಲ ಭಾಗದ ಕಾರ್ಯಕರ್ತರು ಗೊತ್ತು ಪಡಿಸಿದಂತೆ ಸಾತಾರಾ, ಕೊಲ್ಗಾಪುರ ಕಾರ್ಯಕರ್ತರು ಪುಣೆಯಿಂದ ಮೀರಜ್‌ವರೆಗೂ, ಬೆಳಗಾಂವಿಯ ಕಾರ್ಯರ್ತರು ಮೀರಜದಿಂದ ಲೋಂಡಾದವರೆಗೂ, ಧಾರವಾಡದ ಕಾರ್ಯಕರ್ತರು ಲೋಂಡಾದಿಂದ ಹರಿಹರದ ವರೆಗೂ. ವಿಜಾಪುರದವರು ಹುಬ್ಬಳ್ಳಿಯಿಂದ ಬಾಗಲಕೋಟಿನವರೆಗೂ ತಂತಿ ಕತ್ತಿರುಸುವ ಹೊಣೆ ಹತೊತಿದ್ದರು. ಪ್ರತಿ ಎರಡು ಸ್ಟೇಶನ್ನುಗಳ ನಡುವೆ ತಂತಿ ಕತ್ತಿರಬೇಕಾಗಿತ್ತು. ಅದನ್ನು ನಿಶ್ಚಿತವಾದ ಒಂದೇ ದಿನ ಮತ್ತು ಒಂದೇ ವೇಳೆಗೆ ಈ ಸಂಘಟನೆ ಮಾಡುವುದು ಸುಲಭವಾಗಿದ್ದಿಲ್ಲ. ಯಾರಾರು ಯಾವ ಯಾವ ಕಡೆಗೆ ತಂತಿ ಕತ್ತಿರಬೇಕೆಂಬ ಯಾದಿ ಸಿದ್ಧವಾದುವು, ೧೬ನೇ ದಿನಾಂಕ ಡಿಸೆಂಬರ್ ಮಧ್ಯಾಹ್ನ ೧ ಗಂಟೆಗೆ ಮೇಲೆ ಹೇಳಿದ ಎಲ್ಲ ಕಡೆಗೂ ತಂತಿಯನ್ನು ಕತ್ತರಿಸಲಾಯಿತು. ರೇಲ್ವೇ ಸ್ಟೇಶನ್‌ದ ನಡುವೆ ತಂತಿ ಕತ್ತಿರಿಸಿದ್ದರಿಂದ ಎಲ್ಲ ಸರ್ಕಾರಿ ಸಂಪರ್ಕಯಂತ್ರ ಎರಡು ಮೂರು ದಿನ ಪೂರ್ಣ ಸ್ಥಗಿತವಾಗಿ ಹೋಯಿತು. ರೇಲ್ವೆ ಗಾಡಿಗಳು ನಿಂತಲ್ಲಿಯೇ ನಿಂತವು, ಸ್ಟೇಶನ್‌ ಮಾಸ್ಟರರು ಶಂಖವಾದ್ಯ ಮಾಡಿದರು. ರೇಲ್ವೆ ಅಧಿಕಾರಿಗಳಿಗೆ ಹುಚ್ಚು ಹಿಡಿದಂತಾಯಿತು. ಪೊಲೀಸರು ಗವರ್ನರರು ಈ ಸಂಘಟನೆ ನೋಡಿ ಭ್ರಮಿಷ್ಟರಾದಂತಾದರು. ಜನತೆಯೂ ಜೇಲಿನಲ್ಲಿಯ ಮುಖಂಡರೂ “ಭಲೇ ಭಲೇ ಶಾಬಾಸ್ ಕ್ರಾಂತಿ ವೀರರೇ” ಎಂದು ಹರ್ಷಾತೀರೇಕದಿಂದ ಕುಣಿದಾಡಿದರು. ಏಕಕಾಲಕ್ಕೆ ಸುಮಾರು ನೂರು ಕಡೆ ತಂತಿ ಕತ್ತರಿಸುವ ಸಂಘಟನೆಗೆ ಅವರು ನಿಜವಾಗಿ ಹೆದರಿದರು. ಎಲ್ಲಿ ನೋಡಿದಲ್ಲಿ ಪೊಲೀಸರ ಓಡಾಟ, ರೇಲ್ವೇ ಸ್ಟೇಶನ್ನುಗಳಲ್ಲಿ, ಬಸ್‌ಸ್ಟ್ಯಾಂಡ್‌ನಲ್ಲಿ, ಸಿ.ಆಯ್.ಡಿ. ಗುಪ್ತ ಪೊಲೀಸರ ಸುಳಿದಾಟ, ಪ್ರತಿ ಊರಿನಲ್ಲಿಯೂ ಪಿತೂರಿಗಳ ಕಾಟ. ಇಷ್ಟೆಲ್ಲ ಇದ್ದರೂ ಈ ಹೋರಾಟಗಾರರು ಎಲ್ಲಿಯೋ ಕುಳಿತು ನಾಲ್ಕು ಜಿಲ್ಲೆಯ ಸೂತ್ರ ತಿರುವುತ್ತಿರುವುದನ್ನು ಕಂಡು ಸರ್ಕಾರಕ್ಕೆ ನಾಚಿಕೆಯಾಯಿತು.

) ಗೋಕಾಕ ತಾಲೂಕ ಕಚೇರಿಯ ಮೇಲೆ ಮಹಿಳೆಯರು ದಾಳಿ:- ಈ ಕೆಲಸವನ್ನು ಅಕ್ಕತಂಗೇರಹಾಳ ಮತ್ತು ಕೊಳವಿಯ ಕೆಲವು ಹೆಂಗಸರು ಕೂಡಿ ಮುಂಜಾನೆ ೧೧ ಘಂಟೆಗೆ ಸರಿಯಾಗಿ ಗೋಕಾಕ ಪೇಟೆಯೊಳಗಿಂದ ಹಾದು ಕಚೇರಿಯ ಕಡೆಗೆ ನಡೆದರು. ಹೆಣ್ಣು ಮಕ್ಕಳು ಕುತೂಹಲದಿಂದ ನೋಡುವುದಕ್ಕಾಗಿ ಗೋಕಾಕ ನಗರದಲ್ಲಿ ಈ ತಂಡ ಪ್ರವೇಶ ಮಾಡಿತು. ಅಲ್ಲಿಯೇ ಟ್ರೇಝರಿ ಮತ್ತು ಲಾಕಪ್ ಇರುವುದರಿಂದ ಒಬ್ಬ ಪೊಲೀಸನು ಬಂದೂಕು ಧಾರಿಯಾಗಿ ಕಾವಲು ಮಾಡುತ್ತಿದ್ದನು. ಜನರ ಗುಂಪನ್ನು ನೋಡುತ್ತಲೇ ಆ ಪೊಲೀಸನು ಜೈಲಿನಿಂದ ಬಂದೂಕನ್ನು ಗುರಿ ಇಡುವ ಗಡಿಬಿಡಿ ನಡೆಸಿದನು. ಇದನ್ನು ನೋಡುತ್ತಲೇ ತಂಡದೊಳಗಿನ ಒಬ್ಬ ಕಾರ್ಯಕರ್ತನು ಟಣ್ಣನೆ ಹಾರಿ, ಆ ಪೊಲೀಸನ ಮೇಲೆ ಜಿಗಿದು ಅವನನ್ನು ಎತ್ತಿ ಒಗೆದನು. ಕೆಳಗೆ ಬೀಳುತ್ತಲೇ ಪೊಲೀಸನು ಗಾಬರಿಯಾದನು. ಇತ್ತ ಉಳಿದವರು ಕಚೇರಿ ಹೊಕ್ಕು ಕೈಗೆ ಸಿಕ್ಕ ಸುಮಾರು ೨೧ ಪ್ರಕರಣಗಳನ್ನು ಪರಪರ ಹರಿದು ಚಲ್ಲಿ ಜೈಕಾರ ಹಾಕುತ್ತಾ ಹೊರಟು ಹೋದರು. ಹೆಣ್ಣು ಮಕ್ಕಳ ಈ ಶೌರ್ಯ ಸಾಹಸವನ್ನು ಕಂಡು ಗೋಕಾಕದ ಗಂಡಸರು ಬೊಟ್ಟು ಕಚ್ಚಿಕೊಂಡರಲ್ಲದೇ ತಮ್ಮ ಹೇಡಿತನಕ್ಕೆ ನಾಚಿ ತಲೆತಗ್ಗಿಸಿದರು.

) ಫಾರೆಸ್ಟ ಆಫೀಸ, ಕೋರ್ಟಿನ ಕಾಗದಗಳನ್ನೂ ಸುಟ್ಟರು: ೧೪-೧೨-೧೯೪೨ ರಂದು ಹಗಲು ಹಾಡೆ ಗೋಕಾಕದಲ್ಲಿಯ ಫಾರೆಸ್ಟ ಆಫೀಸಿನಲ್ಲಿ ಹೊಕ್ಕು ಜನಘೋಷದೊಂದಿಗೆ ಅಲ್ಲಿಯ ಕಾಗದ ಪತ್ರಗಳನ್ನು ಸುಟ್ಟರು.

ದಿನಾಂಕ: ೨೦-೧೧-೧೯೪೨ ರಂದು ಬೆಳಗಾಂವ ಕಿಲ್ಲೆ ಜೈಲಿನಲ್ಲಿ ಖಟ್ಲೆ ನಡೆಸುತ್ತಿದ್ದ ಸಿಟಿ ಮ್ಯಾಜಿಸ್ಟ್ರೇಟ್ ಅವರ ಕೋರ್ಟಿನ ಕಾಗದ ಪತ್ರಗಳನ್ನು ಖಟ್ಲೆಗೆ ಗುರಿಯಾದ ಹೋರಾಟಗಾರರೇ ಸುಟ್ಟು ಬಿಟ್ಟರು. ಗೋಕಾಕ ಮತ್ತು ಚಿಕ್ಕೋಡಿಯಲ್ಲಿಯೂ ಇಂಥ ಘಟನೆ ನಡೆಯಿತು.

) ಆಹ್ವಾನ ಸ್ವೀಕರಿಸಿ ಸಿಂದೀ ಪಿಪಾಯಿ ಒಡೆದರು:- ಗೋಕಾಕ ಮೊದಲಾದ ಊರುಗಳಿಗೆ ಸಿಂದೀ ಪೂರೈಸುವದು ನಡೆದಿತ್ತು. ಒಂದು ಚಕ್ಕಡಿಯ ಮೇಲೆ ಮೂರು ದೊಡಡ ಕಟ್ಟಿಗೆಯ ಪಿಪಾಯಿಗಳಲ್ಲಿ ಸಿಂದಿಯನ್ನು ತರುತ್ತಿದ್ದರು. ಅಲ್ಲಿಯ ಚಳವಳಿಗಾರರು ಸಿಂದೀ ಪಕಾಲಿ ಹರಿಯುವುದು. ಸಿಂದೀ ಅಂಗಡಿಗಳ ಮೇಲೆ ದಾಳಿ ಮಾಡುವುದು ಮುಂತಾದ ಚಟುವಟಿಕೆ ನಡೆಸಿದ್ದನ್ನು ಆ ಸಿಂದೀ ಮಾರುವ ಮಾಲೀಕನು ನೋಡಿದನು. ನಾಲ್ವರು ಕುಸ್ತಿ ಆಳುಗಳು ಕೈಯಲ್ಲಿ ಕುಡಗೋಲು ಕೊಡಲಿ ಹಿಡಿದುಕೊಂಡು ಮೀಸೆಗೆ ಹುರಿ ಹಾಕಿ ಈಚಲ ಮರದವನ ರಕ್ಷಣೆಗಾಗಿ ಚಕ್ಕಡಿಯಲ್ಲಿ ಯಾವಾಗಲೂ ಇರುತ್ತಿದ್ದರು. ಸಾಲದ್ದಕ್ಕೆ ಒಬ್ಬನ ಕೈಯಲ್ಲಿ ಬಂದೂಕು ಕೊಟ್ಟು ಅವನನ್ನು ಮುಖಂಡನನ್ನಾಗಿ ಮಾಡಿ ಚಕ್ಕಡಿ ರಕ್ಷಣೆಯ ಹೊಣೆ ಅವನಿಗೆ ಒಪ್ಪಿಸಲಾಗಿತ್ತು. ಈ ರೀತಿ ವೈಭವದಿಂದ ಅಂಗರಕ್ಷಕರೊಂದಿಗೆ ಈಚಲ ಮರದವ್ವ ಚಕ್ಕಡಿಯಲ್ಲಿ ಮೆರೆಯುತ್ತ ಬರುತ್ತಿದ್ದಳು. ಯಾರಾದರೂ ಗಂಡಸರು ಚಳವಳಿಗಾರರಿದ್ದರೆ ಅವರು ಬಂದು ತನ್ನ ಚಕ್ಕಡಿಯನ್ನು ತರಬಿ ನೋಡಬೇಕು ಎಂಬ ಬಿಂಕದ ಆಹ್ವಾನವನ್ನು ಸಿಂದೀ ಮಾಲೀಕನು ಕೊಟ್ಟಿದ್ದ. ಅಶ್ವಮೇಧ ಕುದುರೆಯಂತೆ ಸಿಂದೆವ್ವನ ಗಾಡಿ ದಿನಾಲು ನಾಲ್ಕು ಕಡೆಗೆ ಹಸಿರು ಗಡಿ ಹಚ್ಚಿಕೊಂಡು ಕುಣಿಯುತ್ತ ಕೇಕೆ ಹೊಡೆಯುತ್ತ ಬರುತ್ತಿತ್ತು.

ನಮ್ಮ ಅಕ್ಕ ತಂಗೇರಹಾಳ ಹಾಗೂ ಪಾಚ್ಛಾಪುರ ತಂಡದ ವೀರರು ಒಂದು ದಿನ ಸಿಂದೀ ಮಾಲೀಕನ ಆಹ್ವಾನವನ್ನು ಸ್ವೀಕರಿಸಿ ನಾಯಕರ ಆಜ್ಞೆಯಂತೆ ಒಂದು ಕಂಟಿಯಲ್ಲಿ ಅವಿತುಕೊಂಡು ಕುಳಿತು ಸಿಂದೀ ಬಂಡಿಯ ದಾರಿ ನೋಡ ಹತ್ತಿದರು. ನೋಡಿ ನೋಡಿ ಬೇಸತ್ತರೂ ತೀವ್ರ ಬಂಡಿ ಬರಲಿಲ್ಲ. ಎಲ್ಲರ ಹೊಟ್ಟೆಗಳು ಹಸಿವೆಯಿಂದ ತಳಮಳಗೊಳ್ಳುತ್ತಿದ್ದವು. ಇನ್ನೆಷ್ಟು ವೇಳೆ ದಾರಿಕಾಯಬೇಕೆನ್ನುವಷ್ಟರಲ್ಲಿ ಅಮ್ಮನ ಬಂಡಿ ಬರುತ್ತಿರುವುದು ಕಾಣಿಸಿತು. ನಮ್ಮ ಸೈನಿಕರು ಸಿದ್ಧರಾದರು. ಭಾರಿ ಕಿಮ್ಮತ್ತಿನ ಎರಡು ಹೋರಿಗಳನ್ನು ಬಂಡಿಗೆ ಹೊಡಲಾಗಿತ್ತು. ಕಾವಲುಗಾರರು ಹಾಡುತ್ತ ಕೇಕೆ ಹೊಡೆಯುತ್ತ ಬರುತ್ತಿದ್ದರು. ಬಂಡಿಯು ಬರುವುದೇ ತಡ ನಮ್ಮಲ್ಲಿಯ ಒಬ್ಬನು ಜಿಗಿದು ಹೋಗಿ ಹೋರಿಗಳ ಮೂಗದಾಣದಲ್ಲಿ ಕೈ ಹಾಕಿ ಬಂಡಿ ತರುಬಿದ. ಒಬ್ಬನು ಕೈಯೊಳಗಿನ ಪಿಸ್ತೂಲ (ತೋರಕೆಯದು) ತೋರಿಸುತ್ತ ಬಂದೂಕಿನವನ ಮುಂದೆ ನಿಂತ. ಉಳಿದವರು ಕೊಡ್ಲಿ ಭರ್ಚಿಗಳನ್ನು ಹಿಡಿದು ಬಂಡಿ ಹತ್ತಿದರು. ಈ ಆವೇಶದ ಆಕಸ್ಮಿಕ ದಾಳಿ ಕಂಡು ಬಂಡಿಯಲ್ಲಿಯ ಪೈಲವಾನರು ಕೈ ಮುಗಿದು ದೈನ್ಯದಿಂದ ಬೇಡಿಕೊಂಡರು. “ನಾವು ಹೇಳಿ ಕೇಳಿ ನವಕರರು ನಮ್ಮನ್ನು ಬಡೆಯಬೇಡಿರಿ ಕಾಲು ಬೀಳುತ್ತೇವೆ” ಎಂದು ಶರಣು ಎಂದರು. ಕೈಯೊಳಗಿನ ಕೊಡ್ಲಿ ಕುಡಗೋಲು ಬಂದೂಕ ಕೆಳಗೆ ಚಲ್ಲಿ, ಉಳಿಸಿರಿ ಎಂದು ಕೇಳಿಕೊಂಡರು. ಕುಸ್ತಿ ಆಳುಗಳು ಮೂರು ಪೀಪೆಗಳನ್ನು ಡಬ್ಬು ಸುರುವಿ ರಸ್ತೆಗೆ ಸುರಾಭಿಷೇಕ ಮಾಡಿದರು. ಕಾವಲಿಯಂತೆ ರಸ್ತೆಗುಂಟ ಸಿಂದಿ ಹರಿದು ಹೋಯಿತು. ಅವರ ಮೀಸೆಗಳ ಹುಡಿ ರಸ್ತೆ ಉಚ್ಚಿದವು. ಗಾಂಧೀ ಮಹಾರಾಜಕೀ ಜಯಕಾರ ಹಾಕಿದರು. ಗೋಕಾಕಕ್ಕೆ ಹೋಗಿ ತಮ್ಮ ಯಜಮಾನರಿಗೆ ನಡೆದ ಸಂಗತಿ ತಿಳಿಸಿದತು. ಸಿಂದಿ ಮಾಲಿಕ ಬೆಪ್ಪಾಗಿಬಿಟ್ಟ. ಅವರು ಬಾಡಿಗೆಯವರು. ನಮ್ಮವರು ತಾಯ್ನಾಡಿನ ಪ್ರೀತಿಯಿಂದ ಜೀವದ ಹಂಗುದೊರೆದವರು. ಇಂದು ಈ ನಮ್ಮ ವೀರರ ಎದುರಿಗೇ ನಮ್ಮ ಸರ್ಕಾರ ಸಿಂದೀ ಸೆರೆ ಮಾರಹತ್ತಿದೆ. ಇದು ನಮ್ಮ ಸ್ವರಾಜ್ಯ.

. ಪಾಚ್ಛಾಪುರದಲ್ಲಿ ಕುಲಕರ್ಣಿ ದಫ್ತರ ನಾಶ:- ಸುತ್ತಲಿನ ಹತ್ತೆಂಟು ಹಳ್ಳಿಗಳ ಕುಲಕರ್ಣಿಯವರು ಪಾಚ್ಛಾಪುರದಲ್ಲಿಯೇ ಇರುತ್ತಿದ್ದರು. ಅವರ ದಫ್ತರಗಳೆಲ್ಲ ಒಂದೇ ಕಡೆಯಲ್ಲಿ ಅಂದರೆ ದೇಶಪಾಂಡೆ ಓಣಿಯಲ್ಲಿ ಅಟ್ಟದ ಮೇಲೆ ಇವೆಯೆಂದು ನಮಗೆ ಗೊತ್ತಿತ್ತು. ದಫ್ತರ ನಾಶಮಾಡುವ ಕಾರ್ಯಕ್ರಮವನ್ನು ನಮ್ಮ ಗುಂಪಿನ ಜನರು ನಿಶ್ಚಯಿಸಿದರು.

ಒಂದು ದಿನ ದೀಪ ಹಚ್ಚುವ ವೇಳೆಗೆ ಸರಿಯಾಗಿ ನಮ್ಮ ಕಾರ್ಯಕರ್ತರು ವಠಾರದ ಹಿತ್ತಲ ಬಾಗಿಲಿನಿಂದ ಪಟಪಟ ಒಳಗೆ ಪ್ರವೇಶಿಸಿದರು. ಪೂರ್ವ ಸೂಚನೆಯಂತೆ ಪ್ರತಿಯೊಂದು ಬಾಗಿಲ ಹೊಸ್ತಿಲ ಮೇಲೆ ಒಬ್ಬೊಬ್ಬನಂತೆ ೮ ಜನರು ನಿಂತರು. ಇಬ್ಬರು ಅಟ್ಟದ ಮೇಲಿನ ಕೀಲಿ ಮುರಿದು ಮೇಲೆ ಹತ್ತಿದರು. ಉಳಿದವರು ಅವರನ್ನು ಹಿಂಬಾಲಿಸಿ ಮೇಲೆ ಹೋದರು ಎಲ್ಲ ಕಾಗದ ಪತ್ರಗಳನ್ನು ಚೀಲದಲ್ಲಿ ತುಂಬಿಕೊಂಡು ಮಿಂಚಿನಂತೆ ಊರ ಹೊರಗೆ ಒಯ್ದು ಹೊಲದಲ್ಲಿ ಸುಟ್ಟು ಬಿಟ್ಟರು. ವಠಾರದಲ್ಲಿಯ ಪ್ರತಿಯೊಬ್ಬರೂ ನಮ್ಮ ಪರಿಚಯದವರೇ. ನಾಳೆ ಮಾಮಲೇದಾರರು ಬಂದು ಕೇಳಿದರೆ ನಾವು ಏನು ಹೇಳಬೇಕು ಎಂದು ಹಿರಿಯರು ಕೇಳಿದರು. ನಮಗೆ ಗೊತ್ತಿಲ್ಲವೆಂದು ಹೇಳಿರಿ ಎಂದು ಉತ್ತರಿಸಿ ಹೊರಟೆವು. ಮರುದಿನ ಮಾಮಲೇದಾರರು ಬಂದರು, ಅವರ ಮುಂದೆ ೫೧-೬೦ ಜನರು ೬-೭ ಫೂಟ ಎತ್ತರದವರು ಮುಖದ ತುಂಬ ಉದ್ದುದ್ದ ಗಡ್ಡ ಮೀಸೆ ಬೆಳೆಸಿದವರು ಟೊಣಪರು ಬಂದಿದ್ದರು. ಅವರು ನಮ್ಮ ನಾಡಿನವರೇ ಅಲ್ಲ ಎಂದು ಸಾಕ್ಷಿ ನುಡಿದರು.

) ವೆಂಗುರ್ಲಾ ಟಪಾಲ ಮೋಟರ ಲೂಟಿ: ೧೯೪೨ ರ ನವೆಂಬರ್‌ದಲ್ಲಿ ಬೆಳಗಾಂವದಿಂದ ವೆಂಗುರ್ಲಾಕ್ಕೆ ಹೋಗುವ ಟಪಾಲ ಬಸ್ಸನ್ನು ಲೂಟಿ ಮಾಡುವ ಕಾರ್ಯಕ್ರಮವನ್ನೂ ನಮ್ಮ ಕಾರ್ಯಕರ್ತರು ಸಿದ್ಧಪಡಿಸಿದ್ದರು. ರಸ್ತೆಯ ಪೂರ್ಣ ಮಾಹಿತಿ ಬಸ್ಸು ಎಲ್ಲೆಲ್ಲಿ ನಿಲ್ಲುವುದು, ಎಲ್ಲಿ ಬಸ್ ನಿಲ್ಲಿಸುವುದು ಕ್ಷೇಮ ಮುಂತಾದ ವಿವರಗಳನ್ನು ನೋಡಿಕೊಂಡು ಬರಲು ನಮ್ಮ ಕಾರ್ಯಕರ್ತರಲ್ಲಿಯ ಒಬ್ಬನನ್ನು ಕಳಿಸಲಾಯಿತು. ಅವನು ಎರಡು ಸಾರೆ ಮೇಲ್ಬಸ್ಸಿನಲ್ಲಿ ಕುಳಿತು ವೆಂಗುರ್ಲಾದ ವರೆಗೆ ಹೋಗಿ ಕಾರ್ಯಕ್ರಮ ಕ್ಷೇತ್ರದ ಅಭ್ಯಾಸ ಮಾಡಿ ರಸ್ತೆಯ ಅಂಕುಡೊಂಕುಗಳನ್ನು ದಾರಿಯಲ್ಲಿಯ ಅನುಕೂಕ ಸ್ಥಳಗಳನ್ನು ನೋಡಿಕೊಂಡು ವಿವರ ಸಂಗ್ರಹಿಸಿ ವರದಿ ಕೊಟ್ಟನು. ಬೆಳಗಾಂವಿಯಿಂದ ೧೧ ಮೈಲಿನ ಮೇಳೆ ಒಂದು ಸ್ಥಳವನ್ನು ಗೊತ್ತುಮಾಡಿ ಅಲ್ಲಿ ಟಪಾಲ ಬಸ್ ನಿಲ್ಲುವುದು ಗೊತ್ತಾಯಿತು. ರಸ್ತೆಯ ಬದಿಗೆ ನಮ್ಮ ಸೈನಿಕರ ಒಂದು ಪಥಕ ಅವಿತುಕೊಂಡು ಕುಳಿತಿತ್ತು. ಮಧ್ಯಾಹ್ನ ೧ ಗಂಟೆಗೆ ಟಪಾಲ ಬಸ್ ಬೆಳಗಾಂವದಿಂದ ಬರುತ್ತಲೇ “ವೆಂಗುರ್ಲಾ, ವೆಂಗುರ್ಲಾ” ಎಂದು ನಮ್ಮ ಕಾರ್ಯಕರ್ತರು ಒಬ್ಬರು ಕೈ ಮಾಡಿದರು, ಪ್ರಯಾಣಿಕರೆಂದು ತಿಳಿದು ಬಸ್ ನಿಂತಿತು. ತತ್‌ಕ್ಷಣ ನಮ್ಮ ಕಾರ್ಯಕರ್ತನೊಬ್ಬನು ಕೊಡ್ಲಿಯಿಂದ ಟಾಯರ್ ಮೇಲೆ ಪೆಟ್ಟು ಹಾಕಿದನು. ಟಾಯರ ಒಡೆಯುವ ಭಯದಿಂದ ಡ್ರೈವರ್‌ನನ್ನುಇಂಜನ್ ಬಂದ ಮಾಡಿದನು. ಇಷ್ಟರಲ್ಲಿ ಉಳಿದವರು ಬಸ್ ಹತ್ತಿ ಭರಭರನೆ ಟಪಾಲ ಚೀಲ ಕೆಳಗೆ ಚೆಲ್ಲಿದರು. ಬಳಿಕ ಎಲ್ಲರೂ ಟಪಾಲ ಚೀಲಗಳನ್ನು ಅಡವಿಯಲ್ಲಿ ಒಯ್ಡ\ದು ಅದರಲ್ಲಿಯ ವಸ್ತು ಒಡವೆಗಳನ್ನು ತಕ್ಕೊಂಡು ಬೆಂಕಿ ಹಚ್ಚಿ ಸುಟ್ಟು ಬಿಟ್ಟರು.

) ಭಟ್ಟ ಫೌಜದಾರನು ಪಟ್ಟ ಪಜೀತಿ: ಬೆಳಗಾಂವ ತಾಲೂಕ ಠಾಣ್ಯದ ಭಟ್ಟ ಫೌಜದಾರನ ಮುಕ್ಕಾಂ ಕಿಣಿಯಲ್ಲಿತ್ತು. ಆ ಫೌಜದಾರನಿಗೆ ಒಂದು ಕೈ ತೋರಿಸುವ ಕಾರ್ಯಕ್ರಮವನ್ನು ನಮ್ಮ ಕಾರ್ಯಕರ್ತರು ಸಿದ್ಧ ಪಡಿಸಿದರು. ಹೆಬ್ಬಾಳ ತಂಡದವರು ಕೊಲ್ಹಾಪುರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ಪಾವನಗಡ ಪೊಲೀಸ ಠಾಣ್ಯದ ಮೇಲೆ ದಾಳಿ ಮಾಡಿ ಬಂದೂಕ, ಪೊಲೀಸ ಅಧಿಕಾರಿ ಹಾಗೂ ಇತರ ಪೊಲೀಸರ ಗಣವೇಷಗಳನ್ನೂ ಕಸಿದುಕೊಂಡಿದ್ದರು. ಅದೇ ಗಣವೇಷಗಳನ್ನು ಈ ತಂಡದ ಆರು ಜನರು ಹಾಕಿಕೊಂಡು ತಾವು ಒಂದು ಪೊಲೀಸ ಪಾರ್ಟಿಯವರೇ ಇದ್ದು ಚಳವಳಿಯ ಮುಖಂಡರನ್ನು ಹಿಡಿದುಕೊಂಡು ತಂದಿದ್ದೇವೆ ಎಂದು ಹೇಳುತ್ತ ಭಟ್ಟ ಫೌಜದಾರರ ಕ್ಯಾಂಪಿನಲ್ಲಿ ಪ್ರವೇಶಿಸಬೇಕೆಂದು ಯೋಜನೆ ಮಾಡಿದರು. ಆ ಪ್ರಕಾರ ಮೂವರು ಮುಖಂಡರಿಗೆ ಅವರ ಭುಜಗಳಿಗೆ ಹಗ್ಗ ಕಟ್ಟ ಈ ತಂಡದ ಜನರು ಭಟ್ಟ ಫೌಜದಾರರ ಮುಕ್ಕಾಂ ಇದ್ದ ಕಿಣಿಯನ್ನು ಪ್ರವೇಶಿಸಿದರು. ಆಗ ಅಂಗಳದಲ್ಲಿಯೇ ಇದ್ದ ಫೌಜದಾರರು ಪಾರ್ಟಿ ಕಹಾಂಸೆ ಆಯಿ? ಎಂದು ಹೇಳಿದರು. ಕಾರ್ವೇಕೆ ಜಂಗಲಮೇ ಈ ಮುಖಂಡರನ್ನು ಹಿಡಿದುಕೊಂಡು ಬಂದಿದ್ದೇವೆ ಎಂದು ಫೌಜದಾರರಂತೆ ವೇಷ ಹಾಕಿಕೊಂಡಿದ್ದ ನಮ್ಮ ಕಾರ್ಯಕರ್ತನು ಉತ್ತರ ಕೊಟ್ಟನು. ಉಳಿದ ಕಾರ್ಯಕರ್ತರನ್ನೂ ಆರೋಪಿಗಳನ್ನು ಮುಂದೆ ಮಾಡಿಕೊಂಡು ಕಿಣಿ ಊರಿನಲ್ಲಿ ಹೊಕ್ಕರು. ಚಳವಳಿಯ ಮೂವರು ಮುಂಖಂಡರು ಬಂಧಿತರಾದುದನ್ನು ಕೇಳಿ ಭಟ್ಟ ಫೌಜದಾರನ ಮುಖ ಅರಳಿತು. ವಿಶೇಷವಾಗಿ ವೆಂಗುರ್ಲಾ ಟಪಾಲ ಬಸ್ ಲೂಟಿಯ ಕಾರಣಕರ್ತರಾದ ಈ ಮೂವರು ಮುಂಖಂಡರು ಅವರಿಗೆ ಬೇಕಾಗಿದ್ದರು. ಆದುದರಿಂದ ಈ ಆರೋಪಿಗಳನ್ನು ಕಣ್ಣಾರೆ ನೋಡುವ ಆತುರದಿಂದ ಭಟ್ಟ ಸಾಹೇಬರು ಜನಳ ಬಿಟ್ಟು ನೋಡಲು ಹೋಗಲಾರಂಭಿಸಿದರು. ಆಗ ನಮ್ಮ ಕಾರ್ಯಕರ್ತರು ಸುತ್ತುವರೆದು ನಿಂತು ಗದರಿಸಿದರು. ಈ ಆಕಸ್ಮಿಕ ಗುಡಗಿನಿಂದ ಫೌಜದಾರರು ನಡುಗಹತ್ತಿದರು. ಉಳಿದ ಪೊಲೀಸರ ಬಂದೂಕುಗಳನ್ನು ಕಸಿದುಕೊಂಡರು. ಫೌಜದಾರರ ಪಿಸ್ತೂಲುಗಳನ್ನು ಕಸಿದುಕೊಂಡರು.

) ತೋಲಗಿಯ ಕಂದಾಯ ವಸೂಲಿ ಕೇಂದ್ರದ ಲೂಟಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ತೋಲಗಿ ಗ್ರಾಮವಿದೆ. ಎಲ್ಲ ಹಳ್ಳಿಯ ಜನರು ತಮ್ಮ ಕಂದಾಯದ ಹಣವನ್ನು ಅಲ್ಲಿ ತಂದು ಮುಟ್ಟಿಸುವ ಹುಕುಮ್ ಮಾಡಲಾಗಿತ್ತು. ತೋಲಗಿಯಲ್ಲಿ ಅಚ್ಚುಕಟ್ಟಾದ ಸಶಸ್ತ್ರ ಪೊಲೀಸರ ಕಾವಲು ಇತ್ತು. ಇಲ್ಲಿಯೇ ಒಂದು ಕೈ ತೋರಿಸಬೇಕೆಂದು ವಿಚಾರ ಮಾಡಿ ನಮ್ಮ ಕಾರ್ಯಕರ್ತರು ಕಾರ್ಯಕ್ರಮವನ್ನು ಹಾಕಿಕೊಂಡರು. ಈ ಯೋಜನೆಯ ಪ್ರಕಾರ ಕೆಲಸ ಒಪ್ಪಿಸಿಕೊಂಡ ಹೋರಾಟಗಾರರು ದಿನಾಂಕ: ೨೦-೧-೧೯೪೩ ರಂದು ಮಧ್ಯಾಹ್ನ ೨ ಗಂಟೆಯ ಸುಮಾರಿಗೆ ತೋಲಗಿ ವಸೂಲಿ ಕೇಂದ್ರದ ಮೇಲೆ ದಾಳಿ ಮಾಡಿದರು. ಕಂದಾಯ ತುಂಬುವ ನೆವ ಮಾಡಿ ಚಾವಡಿಯೊಳಗೆ ಹೊಕ್ಕುವರು. ಅಲ್ಲಿದ್ದ ಪೊಲೀಸರನ್ನು ಮಾತಿಗೆ ಹಚ್ಚಿದರು. ಹೊರಗಡೆ ಅಂಗಳದಲ್ಲಿ ಪಹರೆ ಮಾಡುತ್ತಿದ್ದ ಇಬ್ಬರು ಬಂದೂಕುದಾರಿ ಪೊಲೀಸರ ಬಂದೂಕುಗಳನ್ನು ಕಸಿದುಕೊಂಡು ಚಾವಡಿಯಲ್ಲಿದ್ದ ಎಲ್ಲ ಗ್ರಾಮ ದಫ್ತರಗಳನ್ನು ಸುಟ್ಟು ವಸೂಲಾಗಿದ್ದ ಕಂದಾಯದ ಹಣ ೨೨೦೦ ರೂಪಾಯಿ, ಪೊಲೀಸರ ೬ ಬಂದೂಕುಗಳು ಸಮವಸ್ತ್ರ ಮುಂತಾದವುಗಳನ್ನು ತಕ್ಕೊಂಡು ಜಯಕಾರ ಹಾಕುತ್ತ ನಮ್ಮ ಸೈನಿಕರು ಹೊರಟು ಹೋದರು

* ಇಲ್ಲಿ ಬೆಳಗಾಂವ ಜಿಲ್ಲೆಗೆ ಅನ್ವಯಿಸಿ ಮಾತ್ರ ವಿವರಿಸಿದೆ.