ಜನಪದ ಹೆಣ್ಣು ದೈವಗಳ ಲಕ್ಷಣಗಳು ತುಂಬಾ ವಿಶಿಷ್ಟವಾಗಿವೆ. ಶಿಷ್ಟ ದೈವಗಳಿಗಿಂತ ಜನಪದ ದೈವಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ. ಜನಪದ ದೈವಗಳ ವಿಶಿಷ್ಟ ಲಕ್ಷಣಗಳನ್ನು ಗುರುತಿಸುವುದೆಂದರೆ ಜನಪದರ ಬದುಕಿನ ವಿಶಿಷ್ಟ ಲಕ್ಷಣಗಳನ್ನು ಗುರುತಿಸಿದಂತೇ ಆಗುತ್ತದೆ. ಜನಪದರಿಂದಲೇ ಈ ದೈವಗಳು ಸೃಷ್ಟಿಯಾಗಿರುವುದರಿಂದ ಅವರ ಪ್ರಭಾವ ಈ ದೈವಗಳ ಮೇಲೆ ದಟ್ಟವಾಗಿರುವುದನ್ನು ಕಾಣಬಹುದಾಗಿದೆ.

ಪ್ರಾರಂಭದಲ್ಲಿ ಈ ಜನಪದ ಹೆಣ್ಣುದೈವಗಳಿಗೆ ಗುಡಿಗಳೇ ಇರಲಿಲ್ಲ. ನೆರಳು ನೀಡುವ ಬೇವಿನಮರ, ಆಲದಮರ ಅಥವಾ ಯಾವುದೇ ಮರಗಳ ಗುಂಪಿನಲ್ಲಿ ಒಂದು ಕಲ್ಲು ಗುಂಡನ್ನೊ, ಮೂರು ಕಲ್ಲು ಗುಂಡುಗಳನ್ನೋ ಇಟ್ಟು ದೇವತೆಯೆಂದು ಪೂಜಿಸಲು ಪ್ರಾರಂಭಿಸಿದರು. ಕೆಲವು ಕಡೆ ಬಯಲಲ್ಲಿರುವ ಕಲ್ಲು ಬಂಡೆಯೇ ದೇವತೆಯಾಯಿತು. ಇನ್ನು ಕೆಲವು ಕಡೆ ನೆಲದಲ್ಲಿ ತ್ರಿಶೂಲವನ್ನಿಟ್ಟು ಇಲ್ಲವೆ ಒಂದು ಈಟಿಯನ್ನಿಟ್ಟು ಅದನ್ನೇ ದೇವತೆಯೆಂದು ತಿಳಿದು ನಡೆದದ್ದುಂಟು. ನಂತರದ ದಿನಗಳಲ್ಲಿ ಅಲ್ಲಲ್ಲಿ ಈ ಹೆಣ್ಣು ದೈವಗಳಿಗೂ ಗುಡಿಗಳು ನಿರ್ಮಾಣಗೊಂಡವು. ಆದರೆ ಈ ಗುಡಿಗಳು ಶಿಷ್ಟ ದೈವಗಳ ಗುಡಿಗಳಂತೆ ವೈಭವದಿಂದ ಕೂಡಿರದೆ ಬಹಳ ಸೀದಾಸಾದಾ ಇರುತ್ತವೆ. ಗರ್ಭಗುಡಿ, ಪ್ರಾಕಾರ, ಪೌಳಿ, ಈ ಮುಂತಾದ ಅನುಕೂಲತೆಗಳು ಜನಪದ ದೈವಗಳಿಗಿರುವುದು ಕಡಿಮೆ. ಗ್ರಾಮದೈವಗಳಂತೂ ಈಗಲೂ ಬಯಲಲ್ಲಿವೆ, ಈ ಪ್ರಾಂತ ದೈವಗಳು, ನಾಡ ದೈವಗಳಿಗೆ ಗುಡಿಗಳಿವೆ. ಅನೇಕ ಕಡೆ ಹುತ್ತ ಅಥವಾ ಮಣ್ಣಿನ ಗದ್ದುಗೆ ಅಥವಾ ನೆಲದಲ್ಲಿಯೇ ಎದ್ದ ದುಂಡುಗಲ್ಲು ಇವೇ ದೇವತೆಗಳಾಗಿವೆ.

“ಮರ ದೈವ ಮಡಿಕೆ ದೈವ ಕಲ್ಲು ದೈವ ಮಣ್ಣು ದೈವ…..” ಎನ್ನುವ ಬಸವಣ್ಣನ ವಚನದಲ್ಲಿ ಈ ಜನಪದ ದೈವಗಳ ಸ್ವರೂಪ ಸ್ಪಷ್ಟವಾಗಿವೆ ಮೂಡಿದೆ. ಅನೇಕ ಗ್ರಾಮದೇವತೆ ಗಳು ಊರಿನ ಗಡಿ ರಕ್ಷಣೆಯ ಜವಾಬ್ದಾರಿ ಹೊತ್ತು ಊರ ಹೊರಗೇ ನೆಲೆಸಿರುತ್ತವೆ. ಇಂತಹ ದೇವತೆಗಳಿಗೆ ರಕ್ಷಣಾ ದೇವತೆಗಳೆಂದು ಕರೆಯುತ್ತಾರೆ. ಶಿಷ್ಟ ದೇವತೆಗಳಂತೆ ಸುಂದರವಾದ ಶಿಲ್ಪ ಸೌಂದರ್ಯವಾಗಲಿ, ವೈಭವೀಕರಣವಾಗಲಿ ಜನಪದ ದೈವಗಳಿಗಿಲ್ಲ ವೆಂಬುದನ್ನು ಗಮನಿಸಬಹುದಾಗಿದೆ.

ಅನೇಕ ಹೆಣ್ಣು ದೈವಗಳಿಗೆ ದಿನನಿತ್ಯ ಸ್ನಾನ-ಪೂಜೆಗಳೇ ಇರುವುದಿಲ್ಲ. ಬಹಳಷ್ಟು ದೈವಗಳಿಗೆ ಪೂಜಾರಿಗಳಿರುವುದಿಲ್ಲ. ಹೆಣ್ಣು ದೈವಗಳಿಗೆ ಸ್ತ್ರೀರೂಪದ ಆಕೃತಿಯಿರ ಬೇಕೆಂದೇನೂ ಇಲ್ಲ. ಒಂದು ಕಲ್ಲು ಗುಂಡಿಗೆ ಹಸಿರು ಸೀರೆ ಸುತ್ತಿದರಾಯಿತು, ಒಂದು ಹೆಣ್ಣು ದೈವ ಸಿದ್ಧವಾಗುತ್ತದೆ. ಇಂತಹ ಗುಡಿಗಳನ್ನು ಸೂಚಿಸುವುದಕ್ಕಾಗಿ ಎದುರಿಗಿರುವ ಮರದ ಮೇಲೆ ಕೆಂಪು ಅಥವಾ ಕೇಸರಿ ಬಣ್ಣದ ಧ್ವಜಗಳನ್ನು, ಪತಾಕೆಗಳನ್ನು ಕಟ್ಟಿರುತ್ತಾರೆ. ಅನೇಕ ಹೆಣ್ಣುದೈವಗಳು ಮುಂಡವಿಲ್ಲದೆ ಬರೀ ರುಂಡದ ಮೂಲಕವೇ ಪೂಜೆಗೊಳ್ಳುತ್ತವೆ. ಜಮದಗ್ನಿಯ ಅಪ್ಪಣೆಯಂತೆ ಪರುಶರಾಮ ಎಲ್ಲಮನ ರುಂಡವನ್ನು ಹಾರಿಸಿದ ಕತೆ ಜನಜನಿತವಾಗಿದೆ. ಆ ರುಂಡಗಳೇ ಗ್ರಾಮದೇವತೆಗಳಾಗಿ ಇಂದಿಗೂ ಪೂಜೆಗೊಳ್ಳುತ್ತಿವೆಯೆಂಬ ಪ್ರತೀತಿ ಇದೆ.

ಈ ಜನಪದ ದೈವಗಳ ವಾಸಸ್ಥಾನ ತುಂಬಾ ಸರಳವಾದುದೆಂಬ ಮಾತಂತೂ ಸತ್ಯ. ಶಿಷ್ಟ ದೈವಗಳಂತೆ ಇವು ಏರ್‌ಕಂಡೀಷನ್ ದೇವಾಲಯಗಳಲ್ಲಿರದೆ, ಸಾಮಾನ್ಯ ಜನ ವಾಸಿಸುವ ಹಾಗೆ ಹರಕು, ಮುರುಕು ಗುಡಿಗಳಲ್ಲಿ ವಾಸ ಮಾಡುತ್ತವೆ. ಜನಪದ ದೈವಗಳಲ್ಲಿ ವ್ಯಕ್ತಿ ದೈವಗಳೂ ಸೇರಿಕೊಂಡಿವೆ. ಸತಿ ಹೋದವರು, ತ್ಯಾಗ-ಬಲಿದಾನ ಮಾಡಿದವರು ಪೂಜ್ಯರಾಗಿ ನಮ್ಮ ಜನಪದರಿಗೆ ಕಂಡಿದ್ದಾರೆ. ಅಂತವರನ್ನೂ ಅವರು ದೈವಗಳೆಂದೇ ಪರಿಗಣಿಸಿ ಪೂಜಿಸುತ್ತಾರೆ. ಇಂತಹ ಮಾಸ್ತ್ಯಮ್ಮಗಳು ಊರ ಹೊರಗೆ ನೆಟ್ಟಿರುವ ಒಂದು ಕಲ್ಲಿನಲ್ಲಿ ಆಕೃತಿ ಪಡೆದು ಆಗಾಗ್ಗೆ ಪೂಜೆಗೊಳಪಡುತ್ತವೆ. ಮಾಸ್ತ್ಯಮ್ಮಗಳಿಗೆ ಗುಡಿಗಳಿರುವುದಿಲ್ಲ.

ಕೆಲವು ಹೆಣ್ಣು ದೈವಗಳಿಗೆ ಪೂಜಾರಿಗಳುಂಟು. ಆದರೆ ಇವರೆಲ್ಲಾ ಕೆಳವರ್ಗದಿಂದ ದುಡಿವ ವರ್ಗದಿಂದ ಬಂದವರೇ ಆಗಿರುತ್ತಾರೆ. ಜನಪದ ದೈವಗಳಿಗೆ ಬ್ರಾಹ್ಮಣೇತರರೇ ಪೂಜಾರಿಗಳಾಗಿರುತ್ತಾರೆ. ಈ ಪೂಜಾರಿಗೆ ಗುಡ್ಡ, ತಮ್ಮಡಿ ಎಂದು ಕರೆಯುತ್ತಾರೆ. ಗ್ರಾಮದೇವತೆಯ ಹೆಸರಿನಲ್ಲಿ ಬಿಡುವ ಹೋರಿಕರಕ್ಕೆ ಬಸವನೆಂದು ಕರೆದರೆ, ಕೋಷಕ್ಕೆ ದೇವರಕ್ವಾಣಯೆಂದು ಕರೆಯುತ್ತಾರೆ. ಅಮ್ಮನ ಜಾತ್ರೆಯಲ್ಲಿ ಗುಡಿಯನ್ನು ಸಿಂಗರಿಸಿ ತೋರಣ ಕಟ್ಟುತ್ತಾರೆ. ಜನಪದರು ತಮ್ಮ ಕಾವ್ಯದಲ್ಲಿ ಅಮ್ಮನ ಗುಡಿಯನ್ನು, ಆಕೆಯ ವಾಸಸ್ಥಾನವನ್ನು ವರ್ಣನಾತ್ಮಕವಾಗಿ ವಿಶ್ಲೇಷಿಸಿದ್ದಾರೆ.

“ಗಚ್ಚೀನ ಗುಡಿಯಾಕಿ ಗಜನ ಮಂಟಪದಾಕಿ –
ಇದ್ದವರ ಮಗಳ ಏಸಾದನಂತೆ | ಜಗದಂಬಾ”

“ಅಲ್ಲ್ಯಾಳ ಇಲ್ಲ್ಯಾಳ ಎಲ್ಲ್ಯಾಳ ಎಲ್ಲಮ್ಮ
ಕಲ್ಲ ಗುಡ್ಡದಲ್ಲಿ ಬೆರುದಾಳೆ ಬೆರುದಾಳೆ”

“ನಿನ್ನ ಸುತ್ತಮುತ್ತ ಏಳುಕೊಳ್ಳಮಾದೇವಿ
ನಿನ್ನ ನಟ್ಟ ನಡುವೆ ಗಚ್ಚಿನ ಗುಡಿಯೆ ಮಾದೇವಿ
ನಿನ್ನ ಗುಡಿಯು ಮ್ಯಾಲ ಬಂಗಾರಕಳಸ ಮಾದೇವಿ”

“ಏಳು ಕೊಳದಾಗ ಬಂದ ನೆನೆದಾಳೊ ರೇಣುಕಾ ಜಗದಂಬ
ನಾಕು ಮೂಲಿ ಮ್ಯಾಲಗಂಭ ಮ್ಯಾಲಕೆ ಸಿಡಿಗಂಭ”

“ಮುತ್ತಿನ ಮೂಗುತಿ ನಕ್ಕರೆ ಸುಲಿಹಲ್ಲ
ಅಕ್ಕ ನೀನ್ಯಾರ ಮಗಳವ್ವ – ಹಗರಟಗಿ
ಗಚ್ಚಿನ ಗುಡಿಯs ದ್ಯಾಮವ್ವ ||”

“ಎಲ್ಲಾ ದೇವರಿಗೂ ನೆಲ್ಲುಲ್ಲ ಮಾಳಿಗೆ
ನಮ್ಮಪ್ಪಾನ ಮನೆಯಾ ಕುಲತಾಯಿ | ಚೌಡಮ್ಮಗೆ
ಜಂತೀವುಲ್ಲಿನ ಅರಮನೆ || ”

“ಹಳ್ಳಿಮನೆಯೊಳೆ ಬೆಳ್ಳಿಯ ಮಕದೋಳೆ
ಹನ್ನೆರಡಂಕಣ ಗುಡಿಯೋಳೆ ಚೌಡಮ್ಮ
ಬಟ್ಟು ಹೊಳೆದಾವು ಬಿಸಲಿಗೆ ||”

ಜನಪದ ಗರತಿಯ ಈ ಹಾಡುಗಳಲ್ಲಿ ದೇವಿಯ ಜಂತೀಹುಲ್ಲಿನ ಗುಡಿಯೇ ಅರಮನೆ ಯಾಗಿ ಕಂಡಿದೆ. ಇದ್ದುದರಲ್ಲಿಯೇ ಸೌಂದರ್ಯವನ್ನು ಕಂಡುಕೊಳ್ಳುವುದು ಜನಪದರ ಗುಣ. ಇಲ್ಲಿಯ ಗರತಿ ಹನ್ನೆರಡಂಕಣದ ಗುಡಿಯಲ್ಲಿಯೇ ಸಕಲ್ವೆಶ್ವರ್ಯವನ್ನು ಕಂಡಿದ್ದಾಳೆ. ಗಚ್ಚಿನ ಗುಡಿಯಲ್ಲಿ, ಕಲ್ಲುಗುಡ್ಡದಲ್ಲಿ ವಾಸಿಸುತ್ತಿರುವ ದೇವಿಯ ನೆಲೆಯನ್ನು ಇಲ್ಲಿ ಜನಪದ ಗರತಿ ಕಾವ್ಯಮಯವಾಗಿ ಕಟ್ಟಿಕೊಟ್ಟಿದ್ದಾಳೆ. ದೇವಿಯ ವಾಸಸ್ಥಾನದ ವಿವಿಧ ಬಗೆಗಳನ್ನು ಜನಪದರು ತಮ್ಮ ಸೃಜನಶೀಲ ಹಾಡುಗಳಲ್ಲಿ ಕಂಡುಕೊಂಡಿದ್ದಾರೆ. ನಾಕು ಮೂಲಿಯ ಮ್ಯಾಲಗಂಭ, ಗುಡಿಯ ಕಳಸ ಇವುಗಳನ್ನೂ ಬಿಡದೆ ಚಿತ್ರಿಸಿದ್ದಾರೆ. ದೇವಿ ಮರದವ್ವನಾಗಿ ­- ಗಿಡದವ್ವನಾಗಿ – ಬನದವ್ವನಾಗಿ ವಾಸಿಸುವ ಪರಿಯನ್ನು ಈ ಕೆಳಗಿನ ನುಡಿಗಳಲ್ಲಿ ಕಾಣಬಹುದಾಗಿದೆ.

“ಸೌದತ್ತಿ ದಾರ್ಯಾಗ ಸಾಲು ಟೆಂಗಿನಮರ
ಒಂಭೈನೂರ ಎಳಮಾವಿನ ಸರ | ರಂಭಿ
ನಡದಾಳ ಎಲ್ಲವ್ವ ||”

“ಎಲ್ಲಾ ದೇವರ ಗುಡಿ ಕಲ್ಲಲಿ ಕಟ್ಟಿ
ಬಲ್ಲಿದ ಎಲ್ಲವ್ವನ ಹೊಸಗುಡಿ | ಗಗ್ಗರಗಟ್ಟಿ
ಮಲ್ಲಿಗೆ ಹೂವಿನಲಿ ಮುಗಿದಾವು ||”

“ನಾಲ್ವಾರದ ದಾರೀಗಿ ಸಾಲ ಹುಣಚಿಯ ಗಿಡ
ಸಾರಿ ಹೊಂಟಾಳ ಮರಿಯಮ್ಮನ | ಗುಡಿಮುಂದ
ಲಗ್ಗಿ ಹೂಡ್ಯಾವ ಕುರಿಕ್ವಾಣ ||”

“ಊರೂ ಮುಂದೊಂದು ಎಳೆಯಾ ಬೇವಿನ ಮರ
ಹೋಗಿ ನಿಲ್ಲಾಕೆ ನೆರಳಿಲ್ಲಾ | ದೊಡ್ಡಮ್ಮ
ಈ ಬೇವಿನ ಮರವ ನಂಬ್ಕೋಳೆ ||”

“ಹೆಣ್ಣುಮಕ್ಕಳಲ್ಲಿ ಪುಣ್ಯವಂತೆ ಮಾಯವ್ವ
ಹಣ್ಣು ಹಲಸಿನ ಮರದಡೀಲಿ | ಕೂತಗೊಂಡು
ವಾಲುತಾಳೆ ತಾಯಿ ಜೋಲುತಾಳೆ ||”

“ಹತ್ತು ರೂಪಾಯಿ ಸೀರಿ  ಮುತ್ತೀನ ಉಡಿಯಕ್ಕಿ
ಹೊತ್ತೆಲ್ಲ ನಮಗ ಮುಳುಗ್ಯಾವ | ಮಾಪುರತಾಯಿ
ಹತ್ತು ಸಾವಿರದ ಗಿಡದಾಗ ||”

“ಗಂಗೆ ತಡೆಯಲ್ಲಿ ಯಾಕ್ನಿಂತೆ ಕಾಳಮ್ಮ
ಸೀತಾಳಗಾನ ಸುಳಿಗಾನ | ಕಾಳಮ್ಮ
ತೋಪೊಳ್ಳೆದೆಂದು ನೆಲೆಗೊಂಡೆ ||”

ಈ ತ್ರಿಪದಿಗಳಲ್ಲಿ ಜನಪದ ಗರತಿ ಹೆಣ್ಣು ದೈವಗಳನ್ನು ಹಸಿರಿನ ಐಸಿರಿಯಲ್ಲಿ ಕಂಡುಕೊಂಡಿದ್ದಾಳೆ. ಗಿಡ-ಮರ-ಬಳ್ಳಿ-ನೆಲ-ಜಲಗಳನ್ನೇ ದೈವಗಳೆಂದು ಆರಾಧಿಸುವ ಜನಪದ ಸಂಸ್ಕೃತಿ ತುಂಬಾ ವಿಶಿಷ್ಟವಾದುದು. ಟೆಂಗಿನ ಮರಗಳಲ್ಲಿ, ಮಾವಿನ ಮರಗಳಲ್ಲಿ, ಬನ್ನಿಯ ಮರಗಳಲ್ಲಿ, ಬೇವಿನ ಮರಗಳಲ್ಲಿ, ಹಲಸಿನ ಮರಗಳಲ್ಲಿ, ಹುಣಸಿಯ ಮರಗಳಲ್ಲಿ ದೇವಿಯ ವಾಸಸ್ಥಾನವನ್ನು ಗುರುತಿಸುವಲ್ಲಿ ಮಹತ್ವದ ಸಂಗತಿಯಡಗಿದೆ. ಫಲಗಳ ನಡುವಿದ್ದು ಫಲಗಳನ್ನು ಕೊಡುವುದರಿಂದಲೇ ಜನಪದ ದೈವಗಳು ಫಲದೇವತೆಗಳಾಗಿವೆ. ಗಂಗೆಯ ತಡೆಯಲ್ಲಿ, ತುಂಗೆಯ ಬದಿಯಲ್ಲಿ ನೆಲಸಿರುವ ಈ ದೈವಗಳು ಜಲದೇವತೆಗಳೂ ಆಗಿವೆ. ಪ್ರಕೃತಿಯೇ ವಿವಿಧ ರೂಪಗಳಲ್ಲಿ ಜನಪದ ದೈವವಾಗಿ ಕಂಡಿದ್ದಾಳೆ.

ಜನಪದ ಹೆಣ್ಣು ದೈವಗಳು ರೂಪ, ಸ್ವರೂಪದಲ್ಲಿ ತುಂಬಾ ವಿಶಿಷ್ಟವಾಗಿ ಕಾಣಿಸುತ್ತವೆ. ಗ್ರಾಮದೈವಗಳಿಗೆ ಮಣ್ಣು-ಮರ-ಕಲ್ಲುಗಳಿಂದ ಮಾಡಿದ ವಿಗ್ರಹಗಳಿರುತ್ತವೆ. ಎಲ್ಲಮ್ಮನ ಪರಂಪರೆಯ ದೈವಗಳು ಆಕರ್ಷಕವಾದ ಕಪ್ಪು ಮುಖವನ್ನು ಹೊಂದಿರುತ್ತವೆ. ನೀಳವಾದ ಮೂಗು, ಅಗಲವಾದ ಕಣ್ಣುಗಳಿಂದ ಕಂಗೊಳಿಸುತ್ತವೆ. ಮಾರೆಮ್ಮನ ಪರಂಪರೆಯ ದೈವಗಳು ಭಯಂಕರವಾಗಿದ್ದು ಕೆಂಪು ವರ್ಣದಿಂದ ಕೂಡಿಕೊಂಡಿದ್ದು ರಕ್ತವರ್ಣದ ಕಣ್ಣುಗಳಿಂದ ಭಯ ಹುಟ್ಟಿಸುತ್ತವೆ. ಕೋರೆಹಲ್ಲು, ಕೋರೆಮೀಸೆ ಮುಖ ಭಾಗದಲ್ಲಿರುತ್ತವೆ. ಚತುರ್ಭುಜ ಗಳಿಂದ ಕೂಡಿದ ಈ ದೇವತೆ ಒಂದು ಕೈಯಲ್ಲಿ ಕುಂಕುಮ, ಇನ್ನೊಂದರಲ್ಲಿ ಖಡ್ಗ, ಮತ್ತೊಂದರಲ್ಲಿ ಢಮರುಗ ಹಾಗೂ ನಾಲ್ಕನೇ ಕೈಯಲ್ಲಿ ತ್ರಿಶೂಲ ಹಿಡಿದು ವೀರಾಗ್ರಣಿಯಂತೆ ಕಾಣಿಸುತ್ತಾಳೆ. ಈಕೆಯ ತಲೆಯ ಮೇಲೆ ಕಿರೀಟವಿರುತ್ತದೆ. ಮಾಸ್ತೆಮ್ಮನ ಪರಂಪರೆಯ ದೈವಗಳ ಸ್ವರೂಪ ಸಾಮಾನ್ಯವಾಗಿ ಒಂದೇಯಾಗಿರುತ್ತದೆ. ಒಂದು ಕಲ್ಲಿನಲ್ಲಿ ಕೇವಲ ತೋಳು ಇದ್ದ ಶಿಲ್ಪವಿರಬಹುದು, ಆಕೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವ ಚಿತ್ರವಿರಬಹುದು ಇವೆಲ್ಲಾ ಮಾಸ್ತ್ಯಮ್ಮಗಳಾಗಿರುತ್ತವೆ. ಮಾಸ್ತ್ಯಮ್ಮಗಳು ಹೆಚ್ಚಾಗಿ ಊರ ಹೊರಗಿನ ಶಿಲೆಗಳಲ್ಲಿ ಶಿಲ್ಪಗಳ ರೂಪದಲ್ಲಿ ಪೂಜೆಗೊಳ್ಳುತ್ತವೆ.

ಎಲ್ಲಮ್ಮನ ಪರಂಪರೆಯ ಹಾಗೂ ಮಾರೆಮ್ಮನ ಪರಂಪರೆಯ ಎಲ್ಲ ಹೆಣ್ಣು ದೈವಗಳು ಅಗಲವಾದ ಕುಂಕುಮದ ಬೊಟ್ಟನ್ನು ಹಣೆಗಿಟ್ಟುಕೊಂಡು, ಕೈಗಳ ತುಂಬ ಬಳೆಗಳನ್ನು ಧರಿಸಿರುತ್ತವೆ. ಎಲ್ಲವ್ವ – ದ್ಯಾಮವ್ವ ಹಸಿರು ಬಳೆಗಳನ್ನು ಧರಿಸಿದ್ದರೆ, ಉಗ್ರ ದೈವಗಳಾದ ಮಾರೆಮ್ಮ – ಪ್ಲೇಗಮ್ಮ ದೈವಗಳು ಕೆಂಪು ಬಳೆಗಳನ್ನು ಧರಿಸಿರುತ್ತವೆ. ಸಾಮಾನ್ಯವಾಗಿ ಈ ಗ್ರಾಮದೇವತೆಗಳು ಊರಿನ ದಕ್ಷಿಣದ ಗಡಿಭಾಗದಲ್ಲಿ ಪೂರ್ವಾಭಿಮುಖವಾಗಿರುತ್ತವೆ. ಕೆಲವು ದೇವತೆಗಳು ಕುಳಿತಿರುತ್ತವೆ, ಕೆಲವು ದೇವತೆಗಳು ನಿಂತಿರುತ್ತವೆ. ಕೆಲವು ಕಡೆ ಎರಡು ಮೂರು ವಿಗ್ರಹಗಳು ಒಂದೇ ಕಡೆ ನೆಲೆನಿಂತು ಪೂಜೆಗೊಳ್ಳುತ್ತವೆ. ಹೀಗೆ ರೂಪದಲ್ಲಿ ವೈವಿಧ್ಯಮಯವಾಗಿರುವ ಈ ಹೆಣ್ಣು ದೈವಗಳನ್ನು ಕುರಿತಂತೆ ಜನಪದ ಗರತಿಯರು ತುಂಬ ವರ್ಣರಂಜಿತವಾಗಿ ಹಾಡುಕಟ್ಟಿ ಹಾಡಿದ್ದಾರೆ. ಅವುಗಳಲ್ಲಿ ಕೆಲವು ಹಾಡುಗಳನ್ನಿಲ್ಲಿ ಗಮನಿಸಬಹುದು.

“ಎಲ್ಲಾ ದೇವರ ಮುಂದೆ ಕಲ್ಲೀನ ವಲೆಗುಂಡ
ಹೊನ್ಯಾದ ಹುಲಿಗವ್ವ ಬಾಳಾದು | ನಿಜವಂತೆ
ಸಲ್ಲೇದ ಮೂರೇ ನಲೆಗುಂಡ ಹುಲಿಗವ್ವ”

“ನಡುವೊಂದು ಹಿಡಿಯಲ್ಲೆ ಜಡೆಯೊಂದು ಮಾರಲ್ಲೆ
ಗಡಿಯಾರದೆಣ್ಣೆ ಚೌಡಮ್ಮ | ಉಜ್ಜನಿಯ
ಗಡೀಗೆ ತನಿಯ ಎರದಾಳೆ”

“ಕೈಯ್ಯ ಕಂಕಣದೋಳೆ ಮನ್ಯು ಬಾಸಣದೋಳೆ
ವೈಯಾರಿ ಸಣ್ಣ ದನಿಯೋಳೆ | ಚೌಡಮ್ಮ
ಉಯ್ಯಲೆಯನಿಳಿದು ಬಂದ್ಹೋಗೆ”

“ಕೆಂಜೆಡೆಯನ್ನು ಬಿಟ್ಟು ಮುಂದಕ್ಕೆ ಸಾಗುತ
ಕೆಂಡದಂತೆ ಕಣ್ಣ ಕಿಡಿಕಿಡಿ ಸೂಸೂತ
ಕರಕರ ಹಲ್ಲು ಕಡಿದು ದೇವಿ ಬರುತಾಳ”

ಈ ತ್ರಿಪದಿಗಳಲ್ಲಿ ಜನಪದ ಹೆಣ್ಣು ದೈವಗಳ ರೂಪ ಕಲಾತ್ಮಕವಾಗಿ ಮೂಡಿಬಂದಿರು ವುದನ್ನು ಕಾಣಬಹುದಾಗಿದೆ. ಕಲ್ಲಿನ ವಲೆಗುಂಡಗಳ ರೂಪದ, ಸಣ್ಣ ನಡುವಿನ ಉದ್ದ ಜಡೆಯುಳ್ಳ ದೇವಿ, ಕಂಕಣದ ಕೈಯವಳು – ಸಣ್ಣ ದನಿಯವಳು ಅಮ್ಮ, ಕೆಂಜೆಡೆಯುಳ್ಳವಳು, ಕೆಂಗಣ್ಣ ಬಿಟ್ಟವಳು, ಕರಕರ ಹಾಲು ಕರಿಯುವ ಹೆಮ್ಮಾರಿ ದೈವ ಹೀಗೆ ಈ ದೈವಗಳ ರೂಪ-ಸ್ವರೂಪಗಳಿಗೆ ಸಂಬಂಧಿಸಿದಂತೆ ಜನಪದ ಗರತಿಯರು ವರ್ಣಮಯವಾದ ಕಾವ್ಯ ಕಟ್ಟಿದ್ದಾರೆ. ಆಯಾ ಪ್ರದೇಶಗಳಿಗೆ ತಕ್ಕಂತೆ ಅಲ್ಲಿಯ ವೈಶಿಷ್ಟ್ಯತೆಗಳನ್ನು ಸಾರುವ ದೇವಿಯ ಸ್ವರೂಪ ಜನಪದ ಕಾವ್ಯದಲ್ಲಿ ವೈವಿಧ್ಯಮಯವಾಗಿ ಮೂಡಿಬಂದಿದೆ.

“ಬನ್ನೀಯ ಮರದಾಕಿ ಬೆಳ್ಳಿಯ ಮಕದಾಕಿ”
“ಎಳೆ ಸೂಸಿ ಎಲೆಯೋಳೆ ಮಳೆಪೈರ ಮುಡಿಯೋಳೆ”
“ಪಚ್ಚೆನು ಮುಡಿಯೋಳೆ ಪಾಲೀಸಿ ಮೆರಿಯೋಳೆ”
“ಕಂಕಣ ಕೈಯ್ಯೋಳೆ ಕಸ್ತೂರಿ ಮೈಯ್ಯವಳೆ”
“ಚಿರತೆ ರೂಪವ ತೊಟ್ಟು ಮಾರೆಮ್ಮ ಬಂದಾಳೊ”
“ಕಣ್ಣಬಟ್ಟ ತೊಟ್ಟವಳೆ ಕ್ವಾರಮೀಸೆ ಮುಖದವಳೆ”

ಇಂತಹ ನುಡಿಗಳಲ್ಲಿ ಈ ಹೆಣ್ಣು ದೈವಗಳ ರೂಪ ನಿಚ್ಚಳವಾಗಿ ಮೂಡಿರುವುದನ್ನು ಕಾಣಬಹುದಾಗಿದೆ. ರೂಪ-ಸ್ವರೂಪದ ದೃಷ್ಟಿಯಿಂದಲೂ ಇಲ್ಲಿಯ ಲಕ್ಷಣಗಳು ವಿಶಿಷ್ಟ ವಾಗಿವೆ.

ಪ್ರಾರಂಭದಲ್ಲಿ ಈ ಜನಪದ ದೈವಗಳು ಅಲಂಕಾರ ಪ್ರಿಯರಾಗಿರಲಿಲ್ಲ. ನಂತರದ ದಿನಗಳಲ್ಲಿ ಈ ದೈವಗಳ ವೇಷಭೂಷಣಗಳಲ್ಲಿ ಉಡಿಗೆ ತೊಡಿಗೆಗಳಲ್ಲಿ ಅನೇಕ ಬೆಳವಣಿಗೆ ಗಳಾದವು. ಎಲ್ಲವ್ವ-ದ್ಯಾಮವ್ವ ದೇವತೆಗಳು ಹಸಿರು ಸೀರೆಯನ್ನುಟ್ಟರೆ, ಮಾರೆಮ್ಮ – ಸಿಡುಬಮ್ಮ ದೇವತೆಗಳು ಕೆಂಪು ಸೀರೆಯನ್ನೂಟ್ಟಿರುತ್ತವೆ. ತಲೆಯ ಮೇಲೆ ಹೂವಿನ ದಂಡಿ, ಕಿವಿಯಲ್ಲಿ ಮುತ್ತಿನ ವಾಲೆ, ಕೊರಳಲ್ಲಿ ಕವಡೆ ಸರ ಧರಿಸಿರುವ ತೊಡಿಗೆಗಳನ್ನು ಕುರಿತಾದ ವರ್ಣನೆಯನ್ನು ಜನಪದ ಗರತಿಯಿಂದಲೇ ಕೇಳಬೇಕು.

“ನಿನ್ನ ತೆಲಿಯ ಮ್ಯಾಲ ಮುತ್ತಿನದಂಡಿ ಮಾದೇವಿ
ನಿನ್ನ ಹಣೆಯ ಮ್ಯಾಲ ಕೂಕುಮರೇಖ ಮಾದೇವಿ
ನಿನ್ನ ಕಿವಿಯಲ್ಲಿ ಮುತ್ತಿನವಾಲ್ಯ ಮಾದೇವಿ
ನಿನ್ನ ಮೂಗಿನಲ್ಲಿ ರಾಗೋಡಿನತ್ತು ಮಾದೇವಿ
ನಿನ್ನ ಕೊರಳಲ್ಲಿ ಕವಡೆಯ ಸರವೈತಿ ಮಾದೇವಿ
ನಿನ್ನ ಟೊಂಕದಲ್ಲಿ ಮಕ್ಮಲ್‌ಡಾಬ ಮಾದೇವಿ
ನೀ ಉಡುವಂತ ಹಿರಿಯ ಝಗ  ಮಾದೇವಿ
ನಿನ್ನ ಕೈಯಲಿ ಉರಿಯಪತ್ತಿ ಮಾದೇವಿ
ನಿನ್ನ ಕೈದೊಳಗ ಭಂಡಾರ ಪರಡಿ ಮಾದೇವಿ
ನಿನ್ನ ಕಾಲಲ್ಲಿ ಗಿಲ್‌ಗಿಲ್‌ಗೆಜ್ಜಿ ಮಾದೇವಿ”

ಎಲ್ಲಮ್ಮನ ಉಡಿಗೆ ತೊಡಿಗೆಗಳನ್ನು ಕುರಿತಂತೆ ಎಲ್ಲಮ್ಮನ ಜೋಗತಿಯರು, ಭೂತೇರು ಹಾಡುವ ಹಾಡು ಇದು. ಕಾಳಮ್ಮನ ಉಡಿಗೆತೊಡುಗೆಗಳನ್ನು ಕುರಿತು ಕಾಳಮ್ಮನ ಭಕ್ತರು ಈ ರೀತಿ ಹಾಡುತ್ತಾರೆ.

“ಸಣ್ಣಾನೆ ಎದಿಮ್ಯಾಲ ನೊಸಲಲ್ಲೆ ಹಚ್ಚಿಕೊಂಡು
ಕನ್ನಡಿ ಹಿಡಿದು ತಾನು ನಗುತಾಳೆ
ಉಂಗರ ಕೂದಲ ನಕ್ಕರs ಕರಿಹಲ್ಲ
ಚಿಕ್ಕ ಮಲಕೀನ ತುಂಬಾ ಹೆಡಕಿಲ್ಲೇಳಮ್ಮ
ಅವಳಿಸರ ಗವಳಿಸರ ಜೋಡು ಮುತ್ತಿನ ಹಾರ
ಹಾರ ಕವಡೆಯಸರ ಕೊರಳಿಗೇಳಮ್ಮ
ಮಕರ ಮಲ್ಲಿಗಿ ಹೂವು ತುರಬಿಗೇಳಮ್ಮ”

ಈ ಹಾಡಿನಲ್ಲಿ ಕಾಳಮ್ಮನ ಅಲಂಕೃತ ಮೂರ್ತಿ ಕಣ್ಣಿಗೆ ಕಟ್ಟಿದಂತೆ ಚಿತ್ರಿತವಾಗಿದೆ. ಉಡಿಯಲ್ಲಿ ಭಂಡಾರ ತುಂಬಿಕೊಂಡು, ಹಣೆಯಲ್ಲಿ ಕುಂಕುಮ ಹಚ್ಚಿಕೊಂಡಿರುವ ಈ ದೈವಗಳ ವೇಷಭೂಷಣಗಳು ಅದ್ಭುತವಾಗಿ ಕಾಣಿಸುತ್ತವೆ.

ಈ ದೈವಗಳು ಉಡುವ ಸೀರೆಯ ಪರಿಯನ್ನು ಕುರಿತಂತೆ ಜನಪದ ಗರತಿ ಹೀಗೆ ಹೇಳುತ್ತಾಳೆ.

“ಎಲ್ಲಮ್ಮ ಉಡುವುದು ಎಳ್ಳ ಹೂವಿನ ಸೀರಿ
ಬಡಿವಾರದಾಕೆ ದ್ಯಾಮವ್ವ | ಉಡುವ ಸೀರಿ
ಎಳಿಎಳಿಗೆಲ್ಲ ಬಿಳಿಮುತ್ತು”

“ಕಾಳಮ್ಮ ಉಟ್ಟಾಳ ಕಾಡಿಗಣ್ಣಿನ ಸೀರಿ
ಕಾಲಗ್ಹಾಕ್ಯಾಳ ರುಳಿಕಡಗ | ಹಳಕಟ್ಟಿ
ಈರಣ್ಣಗ ವೀಳ್ಯಾಮಡಚ್ಯಾಳ”

“ಎಲ್ಲಮ್ಮ ಉಡುವಾದು ಎಳ್ಳ ಹೂವಿನ ಸೀರಿ
ಜಗದುಂಬುಡುವಾದು ಜರತಾರಿ | ಚಿಂಚೂರು
ಮಾಪೂರುಡುವಾದು ಎಲಿಬೇವು”

“ನಾಗರಗಂಬಿ ಸೀರೆ ನಾಕ್ವಾರದ್ಹೊನ್ನೋಲೆ
ಪಂಚ ಮಕದ ಗಿಂಡಿ ಬಲಗೈಲಿ | ಹಿಡ್ಕೊಂಡು
ಪಂಚಮಿಯ ಮಾಡ್ಯಾಳ ಮಾಕಾಳಿ”

ಈ ತ್ರಿಪದಿಗಳಲ್ಲಿ ಎಲ್ಲಮ್ಮ, ಕಾಳಮ್ಮ, ಮಾಪೂರತಾಯಿ, ಮಾಕಾಳಿ ಈ ದೈವಗಳು ಉಡುವ ಸೀರೆಗಳ ಸ್ವರೂಪದ ಬಗೆಗೆ ತಿಳಿಸಿದರೆ, ಕೆಳಗಿನ ತ್ರಿಪದಿಗಳಲ್ಲಿ ಆಭರಣಗಳ ವಿಶಿಷ್ಟತೆ ಕುರಿತು ಹೇಳುತ್ತಾಳೆ.

“ಉಂಗುರದ ಕಾಲ ಊರೂತ ಜಾರೂತ
ಬಂಗಾರದ ನಡುವ ಬಳಕೂಂತ | ಚೌಡಮ್ಮ
ಬಂದಾಳು ಬಲೆಯ ಹಸುರಾಕೆ

ಪಿಲ್ಲಿಕಾಲೋಳೆ ಪಿರಿಯಾಪಟ್ಟಣದೋಳೆ
ಕಲ್ಲ ಮೇಲೆ ಪಾದ ತೊಳೆಯೋಳೇ ಮಾಕಾಳಮ್ಮ
ಪಿಲ್ಲಿ ಸಾವಿರಕ್ಕೆ ಬೆಲೆಯಾದೊ”

ಎನ್ನುವಲ್ಲಿ ಕಾಲುಂಗರ, ಕಾಲಪಿಲ್ಲಿ, ಹಸಿರು ಬಳೆಗಳ ಪ್ರಸ್ತಾಪ ಬರುತ್ತದೆ. ಜನಪದ ಗರತಿಯ ಭಾವನೆಯಲ್ಲಿ ಈ ಹೆಣ್ಣು ದೈವಗಳು ಸಕಲಾಲಂಕಾರಭೂಷಿತೆಯರಾಗಿ ಕಂಡಿವೆ. ಕಸ್ತೂರಿ ಸೀರೆಯವಳು, ಕಣ್ಣಕಪ್ಪ ಮುಖದೋಳು, ಚಿತ್ತಾರವನುಟ್ಚವಳು, ಬೈತಲೆಯ ಬಿಟ್ಟವಳು, ಅಂಚಿನ ಸೀರೆಯವಳು, ಕಂಚು ಕಸ್ತೂರಿಯವಳು – ಇಂತಹ ಪದಗಳಲ್ಲಿ ಕಾಣಿಸುವ ವರ್ಣನೆ ಗಮನ ಸೆಳೆಯುತ್ತದೆ. ಈ ದೈವಗಳ ವೇಷಭೂಷಣಗಳನ್ನು, ಉಡಿಗೆ ತೊಡಿಗೆಗಳನ್ನು ಕುರಿತು ಎಷ್ಟು ವರ್ಣಿಸಿದರೂ ಜನಪದರಿಗೆ ತೃಪ್ತಿಯಿಲ್ಲವೆಂಬುದು ಜನಪದ ಕಾವ್ಯವನ್ನು ನೋಡಿದಾಗ ಸ್ಪಷ್ಟವಾಗುತ್ತದೆ.

ಈ ಹೆಣ್ಣು ದೈವಗಳ ವಾದ್ಯಗಳು – ವಾಹನಗಳು ವಿಶಿಷ್ಟವಾಗಿವೆ. ಹುಲಿ, ಕುದರೆ, ಸಿಂಹ, ಗರುಡ ಪ್ರಾಣಿಗಳು  ಈ ದೈವಗಳ ವಾಹನಗಳಾಗಿರುತ್ತವೆ. ಕ್ರೂರ ಪ್ರಾಣಿಗಳನ್ನು ಪಳಗಿಸಿ ತನ್ನ ವಾಹನಗಳನ್ನಾಗಿ ಮಾಡಿಕೊಂಡು ಮೆರೆಯುವ ಅಮ್ಮನವರ ಪ್ರಭಾವವನ್ನು ಇಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ದುಷ್ಟರನ್ನು ಸಂಹರಿಸಲು ಅಮ್ಮ ಕ್ರೂರ ಪ್ರಾಣಿಗಳನ್ನೇ ತನ್ನ ವಾಹನಗಳನ್ನಾಗಿ ಉಪಯೋಗಿಸಿಕೊಳ್ಳುತ್ತಿರುವುದು ಗಮನೀಯ ಸಂಗತಿಯಾಗುತ್ತದೆ. ಕೆಲವು ದೇವತೆಗಳು ದೊಡ್ಡ ರಥದ ವಾಹನಗಳನ್ನೇ ತಮ್ಮ ವಾಹನಗಳನ್ನಾಗಿ ಮಾಡಿಕೊಂಡಿ ರುತ್ತವೆ. ಜಾತ್ರೆಯ ದಿವಸ ಅಮ್ಮನವರ ಈ ವಾಹನಗಳ ಪೂಜೆ ಮೆರವಣಿಗೆ ನಡೆಯುತ್ತದೆ. ಈ ಅಮ್ಮ ಭಯಂಕರವಾದ ಪ್ರಾಣಿಗಳ ಮೇಲೆ ಕೂತು ಸವಾರಿ ಬರುವುದನ್ನು ಜನಪದ ಗರತಿ ಹೀಗೆ ವರ್ಣಿಸಿದ್ದಾಳೆ.

“ಹೈದೆನ್ನದೇವಿ ಗರಡಾನೇರ್ಯಾಳ ರಾಮನತಾಯಿ
ಆನಂದಮಾಯಿ ಕುದರಿಯೇರ್ಯಾಳ ರಾಮನತಾಯಿ
ಬಂಗಾರದ ಕುಪ್ಪೆಬ್ಯಾರಿ ಮ್ಯಾಲ ಜಗದಂಬಾ
ಕುಂತಾಳ ಹುಲಿಯೇರಿ”

“ಏರಿಮ್ಯಾಲೆ ನಿಂತವ್ಳೆ ನೀರಾಳ ನೋಡ್ತವ್ಳೆ
ಏರಿಗು ನೀರಿಗು ಸಮನೆಂದು | ಕಾಳಮ್ಮ
ಏರವ್ಳೆ ಹೊನ್ನ ಕುದುರೇಯ”

“ದೇವರ ನೋಡಬೇಕೊ
ಚಿರತೆಯ ಅಮ್ಮನ ನೋಡಬೇಕೊ”

ಈ ಮೊದಲಾದ ಹಾಡುಗಳಲ್ಲಿ ಈ ದೈವಗಳ ವಾಹನಗಳನ್ನು ಕುರಿತಂತೆ ವಿವರವಾಗಿ ಹೇಳಲಾಗಿದೆ. ಶಿಷ್ಟದೈವಗಳು ಸಾಧು ಪ್ರಾಣಿಗಳ ಮೇಲೆ ಸವಾರಿ ಮಾಡಿದರೆ ಈ ಶಕ್ತಿ ದೈವಗಳು ಕ್ರೂರ ಪ್ರಾಣಿಗಳ ಮೇಲೆ ಸವಾರಿ ಮಾಡುವುದು ವಿಶಿಷ್ಟವಾಗಿ ಕಾಣಿಸುತ್ತದೆ. ಹುಲಿಯ ಮೇಲೆ ಕುಳಿತು ಸದಾ ಸವಾರಿ ಮಾಡುತ್ತಲೇ ಇರುವ ಸವಾರೆಮ್ಮನೆಂಬ ದೇವತೆ ರಾಯಚೂರಿನ ಮಡ್ಡೀಪೇಟೆಯಲ್ಲಿದ್ದಾಳೆ.

ಚರ್ಮದಿಂದ ಮಾಡಿದ ವಾದ್ಯಗಳೇ ಈ ಶಕ್ತಿದೇವತೆಗಳ ಜಾತ್ರೆಗಳಲ್ಲಿ – ಉತ್ಸವಗಳಲ್ಲಿ ಬಳಕೆಯಾಗುತ್ತವೆ. ತಮಟೆ, ಹಲಗೆ, ಕಹಳೆ, ಚೌಡಿಕಿ, ತಿಂತಿಣಿಯಂತಹ ವಾದ್ಯಗಳನ್ನು ಇಲ್ಲಿ ಉಲ್ಲೇಖಿಸಬಹುದು. ನಾಜೂಕಿನ ದೇವತೆಗಳಿಗೆ ಇಂತಹ ವಾದ್ಯಗಳಿಂದ ಕಿವಿ ಗಡು ಚಿಕ್ಕಬಹುದಾದರೂ, ಅಮ್ಮನಿಗೆ ಮಾತ್ರ ಇಂತಹ ವಾದ್ಯಗಳೇ ಪ್ರಿಯವಾಗಿವೆ.

ಈ ಶಕ್ತಿ ದೈವಗಳ ಆಹಾರ ಪದ್ಧತಿಯಲ್ಲೂ ವಿಶಿಷ್ಟತೆಯಿದೆ. ಇವು ಸಾಮಾನ್ಯವಾಗಿ ಮಾಂಸಾಹಾರಿ ದೈವಗಳು. ಶಾಖಾಹಾರಿ ಭಕ್ತರು ನೈವೇದ್ಯ ಸಲ್ಲಿಸಿದರೂ, ಮಾಂಸಾಹಾರಿ ಭಕ್ತರು ಸಲ್ಲಿಸಿದ ಮಾಂಸಾಹಾರವೇ ಈ ದೇವಿಗೆ ಅಚ್ಚುಮೆಚ್ಚು. ಸಜ್ಜಿ ರೊಟ್ಟಿ, ಹಿಂಡಿಪಲ್ಲೆ, ಎಣ್ಣೆಬದನಿಕಾಯಿ, ಉಳ್ಳಾಗಡ್ಡಿ ಇಂತಹ ಸಸ್ಯಹಾರವನ್ನೂ ದೇವಿ ಸ್ವೀಕರಿಸುತ್ತಾಳೆ. ಕುರಿ-ಕೋಣದ ಆಹಾರ ಮಾತ್ರ ಈಕೆಗೆ ಸಂತೃಪ್ತಿ ನೀಡಬಲ್ಲ ಆಹಾರವಾಗಿದೆ. ಇನ್ನು ಕೆಲವು ಶಕ್ತಿದೈವಗಳು ಖಂಡಾತಿಂದು ಹೆಂಡಾ ಕುಡಿಯುತ್ತವೆ. ಹೆಂಡದ ಮಾರೆವ್ವ ದೇವತೆಗೆ ಆಹಾರವಿರದಿದ್ದರೂ ನಡೆದೀತು ಆದರೆ ಹೆಂಡ ಮಾತ್ರ ನಿತ್ಯಬೇಕು.

ಅಮ್ಮನವರ ಜಾತ್ರೆ-ಉತ್ಸವ-ಬಲಿ ಪ್ರಸಂಗಗಳು ಕುತೂಹಲಕಾರಿಯಾಗಿರುತ್ತವೆ. ಮಂಗಳವಾರ ಮತ್ತು ಶುಕ್ರವಾರ ಇವು ಶಕ್ತಿದೇವತೆಯ ವಾರಗಳಾಗಿವೆ. ಮಂಗಳವಾರ ರೋಗರುಜಿನಗಳನ್ನು ಗುಣಪಡಿಸುವ ವಾರವಾದರೆ, ಶುಕ್ರವಾರ ಮಳೆ-ಬೆಳೆ ಕೇಳುವ ದಿನ ವಾಗಿದೆ.

“ಮಂಗಳವಾರ ದಿನದಲ್ಲಿ ಮನಿಮಾರು ಸಾರಸ್ಯಾಳ
ಗಂಧದ ಸೀಗಿ ತಾ ಬರದಾಳು | ಜಗದಂಬ
ಕೂಕಮ ಛಳಯ ತಾ ಹೊಡದಾಳು”

ಎಂಬಂತಹ ತ್ರಿಪದಿಗಳಲ್ಲಿ ಅಮ್ಮನವರ ನಿರ್ದಿಷ್ಟ ವಾರಗಳನ್ನು ಗುರುತಿಸಲಾಗಿದೆ.

ಈ ದೇವತೆಗಳ ಹಬ್ಬ-ಜಾತ್ರೆಗಳು ವಿಶಿಷ್ಟವಾಗಿವೆ. ಹಬ್ಬ ಪ್ರತಿ ವರ್ಷ ಸುಗ್ಗಿಯ ನಂತರ ಯುಗಾದಿಗೆ ಮೊದಲು ನಡೆದರೆ, ದೇವಿ ಜಾತ್ರೆ – ಕೋಣನ ಬಲಿ ಮಾತ್ರ ಮೂರು ಐದು ವರ್ಷಕ್ಕೆ, ಇಲ್ಲವೆ ಒಂಬತ್ತು ವರ್ಷಕ್ಕೆ ಇಲ್ಲವೆ ಹನ್ನೊಂದು ವರ್ಷಕ್ಕೊಮ್ಮೆ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಹಬ್ಬದಲ್ಲಿ ಜನಪದ ಕಲೆಗಳೆಲ್ಲ ಪ್ರದರ್ಶನ ಗೊಳ್ಳುತ್ತವೆ. ಹಬ್ಬದ ದಿನ ಊರಿಗೆ ಊರೇ ಸಂಭ್ರಮದಿಂದಿರುತ್ತದೆ. ಚುಂಚೂರಮಾಪುರ ತಾಯಿಯ ಹಬ್ಬ ಮಳೆಗಾಲ ಮತ್ತು ಬೇಸಿಗೆ ಕಾಲ ಹೀಗೆ ವರ್ಷಕ್ಕೆರಡು ಬಾರಿ ನಡೆಯುತ್ತದೆ. ಅನೇಕ ದೇವತೆಗಳ ಹಬ್ಬ ಉತ್ಸವಗಳು ವರ್ಷಕ್ಕೊಮ್ಮೆ ನಡೆಯುತ್ತವೆ.

“ವರುಸಕ ಬರುವಾದು ದೊಡ್ಡ ದಸರಿಹಬ್ಬ
ಬೀಸಿ ತುಂಬ್ಯಾಳ ಅರಿಸೀನ | ಜಗದಂಬ
ಆರತೀಲೇರ್ಯಾಳ ಜಗಲೀಗೆ”

ಹೀಗೆ ವರ್ಷಕ್ಕೊಮ್ಮೆ ಹಬ್ಬವಾದರೆ, ಮೂರು ವರ್ಷಕ್ಕೊಮ್ಮೆ ಅಥವಾ ಐದು ವರ್ಷ ಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸಾಮಾನ್ಯವಾಗಿ ಈ ಶಕ್ತಿದೇವತೆಗಳ ಜಾತ್ರೆ ಬಯಲಿನಲ್ಲಿಯೇ ನಡೆಯುವಂತಹದ್ದಾಗಿದೆ.

“ಬನ್ನಿಯ ಮರದಾಕಿ ಬೆಳ್ಳಿಯs ಮಕದಾಕಿ
ಹೊನ್ನಮಾಪೂರಿ ಹೊರಹೊಂಟು | ಬರುವಾಗ
ಮುತ್ತೀನ ಪರಸಿ ಎದುರಾಗೆ”

“ಎಲ್ಲವ್ವ ನಿಮ್ಮ ತೇರು ಕಲ್ಲಾಗಿ ಎಳೆದಾವು
ಬಲ್ಲೀದ – ಬಡವ ಒಂದಾಗಿ | ಕೂಡ್ಯಾರ
ಎಲ್ಲವ್ವನ ಜಾತ್ರಿ ಮಾಡ್ಯಾರ”

“ಹೂವ ನೋಡ ಹೂವಿನ ಮಾಲೆಯ ನೋಡ
ಗೋಕಾವಿ ಲಕ್ಕವ್ವನ ಪೂಜೆಯ ನೋಡ
ತೇರವ ನೋಡ ತೇರಿನ ಗಾಲಿಯ ನೋಡ
ಗೋಕಾವಿ ಲಕ್ಕವ್ವನ ಪಾಲಕಿಯ ನೋಡ”

ಇಂತಹ ಅನೇಕ ಹಾಡುಗಳಲ್ಲಿ ಶಕ್ತಿದೇವತೆಯ ಜಾತ್ರೆಗಳ ವರ್ಣನೆಗಳನ್ನು ಕಾಣಬಹು ದಾಗಿದೆ. ಜಾತ್ರೆಯಲ್ಲಿ ದೇವಿಗೆ ಭಕ್ತರು ಕುರಿ-ಕೋಣಗಳ ಬಲಿ ಕೊಡುತ್ತಾರೆ.

“ಕರಿಯ ಕೋಣನ ತಂದು ಕಲ್ಲು ಕಂಬಕೆ – ಕಟ್ಟಿ
ಎಲ್ಲಿಗೆ ಹೋಗಿದ್ದೆ ಕಬ್ಬಾಳ | ಕರಿದುರ್ಗಿ
ನಿನ ಮರೆತವರ ಮನೆಯ ಮುರಿಯೋಕೆ”

“ಗೋಕಾವಿ ದ್ಯಾಮವ್ವ ಲೋಕಕ ಪರಸಿದ್ದಿ
ಕುಡಗೋಲ ಕೊಡ್ಲಿ ಹಿಡಿದಾಳೋ | ದ್ಯಾಮವ್ವ
ಕ್ವಾಣನ ಗೋಣ ಕಡದಾಳೊ”

ಎಂಬಂತಹ ತ್ರಿಪದಿಗಳಲ್ಲಿ ಬಲಿಯ ಪ್ರಸಂಗಗಳನ್ನು ವಿವರಿಸಲಾಗಿದೆ. ಹೀಗೆ ಈ ಅಮ್ಮನವರ ಜಾತ್ರೆ-ಬಲಿ ಪ್ರಸಂಗಗಳು ವಿಚಿತ್ರವಾಗಿ ಕಂಡರೂ ಅವುಗಳಲ್ಲಿ ದ್ರಾವಿಡ ಜನಾಂಗದ ಆಹಾರ ಪದ್ಧತಿ ಮತ್ತು ವರ್ಷಕ್ಕೊಮ್ಮೆ ಸಂಭ್ರಮಿಸುವ ಅವಕಾಶವಿರುವುದನ್ನು ಕಾಣಬಹುದಾಗಿದೆ. ಬಲಿಯ ಪ್ರಸಂಗಗಳು ಮಾಂಸಾಹಾರ ಪದ್ಧತಿಗೆ ಸಂದ ಗೌರವಗಳಾಗಿವೆ. ಜನಪದರ ಆಹಾರ-ಪಾನೀಯಗಳೇ ಇಲ್ಲಿ ಅವರು ನಂಬಿಕೊಂಡಿರುವ ಅವರ ದೈವಗಳ ಆಹಾರ ಪಾನೀಯಗಳೂ ಆಗಿರುವುದು ಗಮನಿಸುವ ಅಂಶವಾಗಿದೆ.

ಈ ದೈವಗಳ ಆಚರಣೆಗಳಲ್ಲಿ ವಿಶಿಷ್ಟವಾದ ಲಕ್ಷಣಗಳಿವೆ. ಹಬ್ಬದ ಆಚರಣೆಗಳು – ಜಾತ್ರೆಯ ಆಚರಣೆಗಳು, ಹರಕೆಗಳು, ಸೇವೆಗಳು, ಇಂತಹ ಅನೇಕ ಆಚರಣೆಗಳಲ್ಲಿ ಶಕ್ತಿದೇವತೆಗಳ ವೈಶಿಷ್ಟ್ಯತೆ ಎದ್ದು ಕಾಣುತ್ತದೆ. ಉತ್ಸವದ ಅಂಗವಾಗಿ ನಡೆಯುವ ಆಚರಣೆಗಳಲ್ಲಿ ಕೆಂಡ ತುಳಿಯುವುದು, ಸಿಡಿಯಾಡುವುದು, ಚಾಟಿನಿಂದ ಮೈಗೆ ಹೊಡೆದು ಕೊಳ್ಳುವುದು, ನಾಲಗೆ-ಗಲ್ಲಗಳ ನಡುವೆ ತಾಮ್ರದ ತಂತಿ ಚುಚ್ಚಿಕೊಳ್ಳುವುದು, ಎದೆ-ಹಣೆಗೆ ಖಡ್ಗದಿಂದ ತಿವಿದು ರಕ್ತ ಚಿಮ್ಮಿಸಿಕೊಳ್ಳುವುದು, ಈಟಿಯಿಂದ ಹೊಟ್ಟೆಗೆ ಚುಚ್ಚಿಕೊಳ್ಳುವುದು, ಕರಗ ಹೊರುವುದು, ಗಾವು ಸಿಗಿಯುವುದು, ಬಾಯಿಗೆ ಬೀಗ ಹಾಕಿಕೊಳ್ಳುವುದು, ತಲೆ ನೀಡಿ ಮುಡಿ ಸೇವೆ ಮಾಡುವುದು, ಉರುಳು ಸೇವೆ ಮಾಡುವುದು,  ಅಲಗು ಸೇವೆ ಮಾಡುವುದು,  ಬಸವಿ ಬಿಡುವುದು, ಬೆತ್ತಲೆಸೇವೆ ಮಾಡುವುದು, ಒಡಲು ತುಂಬುವುದು, ಘಟೆ ಕೊಡುವುದು, ನಡೆ-ಮುಡಿ ಹಾಸುವುದು ಹೀಗೆ ವಿವಿಧ ರೀತಿಯ ಆಚರಣೆಗಳಲ್ಲಿ ಈ ದೈವಗಳ ವಿಶಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಏಕತೆಯಲ್ಲಿ ಅನಂತತೆಯನ್ನು ಕಾಣುವ ವಿಶಿಷ್ಟ ಆಚರಣೆಗಳನ್ನು ಹಟ್ಟಿಮಾರಮ್ಮನ ಜಾತ್ರೆಯಲ್ಲಿ ಮತ್ತು ಹುಲಿಗೆಮ್ಮನ ಜಾತ್ರೆಯಲ್ಲಿ ಕಾಣಬಹುದಾಗಿದೆ. ಮಧುಗಿರಿಯ ದಂಡಿನಮಾರೆಮ್ಮೆ, ಜಾತ್ರೆಯ ಸಂದರ್ಭದಲ್ಲಿ ಪ್ರತಿ ಹಟ್ಟಿಗಳಲ್ಲೂ ಹುಟ್ಟಿ ಮೆರವಣಿಗೆ ಗೊಳ್ಳುತ್ತಾಳೆ. ಸಿದ್ಧನಾಯಕನ ಹಟ್ಟಿ ಮಾರಮ್ಮ, ದೊಡ್ಡಟ್ಟಿ ಮಾರಮ್ಮ, ಕುಲುಮೆ ಬೀದಿ ಹಟ್ಟಿಮಾರಮ್ಮ, ದೇವದಾಸಿಯರ ಬೀದಿ ಹಟ್ಟಿಮಾರಮ್ಮ, ಹೂವಾಡಿಗರಬೀದಿ ಹಟ್ಟಿ ಮಾರಮ್ಮ – ಹೀಗೆ ಆಯಾ ಹಟ್ಟಿಗಳ – ಬೀದಿಗಳ ಹೆಸರಿನ ಮೂಲಕ ಈ ದೇವಿ ಬೆಳೆದು ನಿಂತು ಅನಂತ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಇದೇ ರೀತಿ ರಾಯಚೂರ ಜಿಲ್ಲೆಯ ಮುನಿರಾಬಾದ ಹುಲಿಗೆಮ್ಮನ ಜಾತ್ರೆಯಲ್ಲಿ ಭಕ್ತರು ಹುಲಿಗೆಮ್ಮನ ಮೂಲ ಗುಡಿಯ ದೇವಿಯನ್ನು ತಾವಿದ್ದಲ್ಲಿಯೇ ಸೃಷ್ಟಿಸಿಕೊಳ್ಳುತ್ತಾರೆ. ಹೀಗಾಗಿ ಜಾತ್ರೆಯ ದಿನ ಸಾವಿರಾರು ಹುಲಿಗೆಮ್ಮಗಳು ಕಾಣಿಸಿಕೊಳ್ಳುತ್ತವೆ. ಇಂತಹ ವಿಶಿಷ್ಟ ಲಕ್ಷಣಗಳನ್ನು ಶಿಷ್ಟ ದೈವಗಳಲ್ಲಿ ಕಾಣಲಾಗುವುದಿಲ್ಲ.

ಗ್ರಾಮದೇವತೆಗಳೆಲ್ಲಾ ಫಲಾಫಲವನ್ನು ನೀಡುವ, ಮಳೆ-ಬೆಳೆ ಕೊಡುವ ದೈವಗಳಾಗಿವೆ. ಮಳೆಯನ್ನು ತರುವುದು, ಬೆಳೆಯನ್ನು ರಕ್ಷಿಸುವುದು, ಹೈನು ಹೆಚ್ಚಿಸುವುದು, ಒಡ್ಡುಗಳನ್ನು ಸಂರಕ್ಷಿಸುವುದು, ರೋಗ ಹರಡದಂತೆ ನೋಡುವುದು, ಶಿಶುಮರಣವನ್ನು ನಿಲ್ಲಿಸುವುದು, ಜಗಳ ಬಗೆಹರಿಸುವುದು, ಬಂಜೆಯರಿಗೆ ಮಕ್ಕಳನ್ನು ಕೊಡುವುದು, ಹೊಲ ಊರಿನ ಗಡಿಗಳನ್ನು ನಿರ್ಧರಿಸುವುದು, ಭೂತ-ಪ್ರೇತಗಳನ್ನು ನಿವಾರಿಸುವುದು, ಗ್ರಾಮವನ್ನು ಸಂರಕ್ಷಣೆ ಮಾಡು ವುದು ಹೀಗೆ ನೂರಾರು ಕಾರ್ಯಗಳನ್ನು ಈ ದೇವತೆಗಳು ಮಾಡಬೇಕಾಗುತ್ತದೆ. ಹೀಗಾಗಿ ಇವು ಆಲಸಿಗಳಾಗದೆ ನಿರಂತರ ಕ್ರಿಯಾಶೀಲವಾಗಿರುತ್ತವೆ. ಈ ದೇವತೆಗಳಿಗೆ ಮೈತುಂಬ ಕೆಲಸಗಳಿದ್ದುದರಿಂದ ವಿಶ್ರಾಂತಿ ಪಡೆಯಲು ಪುರಸೊತ್ತೇ ಇರುವುದಿಲ್ಲ.

ಕೆಲವೊಮ್ಮೆ ಬೇಸತ್ತು ನಿರ್ಲಕ್ಷ ಮಾಡಿದರೆ ಈ ದೇವತೆಗಳು ಸತ್ವಪರೀಕ್ಷೆಗೊಳಗಾಗುತ್ತವೆ. ಗ್ರಾಮದ ಭಕ್ತರು ದೇವತೆ ಫಲ ಕೊಡದಿದ್ದರೆ, ಒತ್ತಾಯ ಮಾಡುತ್ತಾರೆ. ಸತ್ಯಾಗ್ರಹ ಹೂಡುತ್ತಾರೆ, ಮೆಣಶಿನಕಾಯಿ ಪುಡಿಯ ಘಾಟ ಹಾಕುತ್ತಾರೆ, ಕೆಲವೊಂದು ಕಡೆ ಕಸಬರಗೆ ಯಿಂದ ಹೊಡೆಯುತ್ತಾರೆ. ಅಷ್ಟಕ್ಕೂ ದೇವತೆ ಒಲೆಯದಿದ್ದರೆ ಈಕೆಯನ್ನು ಕೈಬಿಟ್ಟು ಮತ್ತೊಬ್ಬ ದೇವತೆಯ ಹತ್ತಿರ ಹೋಗುತ್ತಾರೆ. ಜಾತ್ರೆ ಮಾಡುವುದನ್ನು ಬಿಡುತ್ತಾರೆ. ಪ್ರತಿಭಟನೆ ಮಾಡುತ್ತಾರೆ. ಹೀಗಾಗಿ ಈ ದೇವತೆಗಳು ಬಹಳ ಜಾಗರೂಕತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಭಕ್ತರು ಸತ್ವಪರೀಕ್ಷೆಗಳನ್ನೊಡ್ಡುತ್ತಾರೆ. ಆಗ ಈ ದೇವತೆ ಆ ಸತ್ವಪರೀಕ್ಷೆಯಲ್ಲಿ ಪಾಸಾಗಿ ಬರಬೇಕಾಗುತ್ತದೆ. ಇಲ್ಲದಿದ್ದರೆ ಊರಲ್ಲಿ ಈಕೆಗೆ ಕವಡೆಯ ಕಿಮ್ಮತ್ತೂ ಇರುವುದಿಲ್ಲ. ಹೀಗಾಗಿ ಭಕ್ತರ ಅಗ್ನಿ ಪರೀಕ್ಷೆಗಳಿಗೆ ಅನೇಕ ಗ್ರಾಮದೇವತೆಗಳು ಭಯಭೀತರಾಗಿರುತ್ತವೆ. ಹರಕೆ ಹೊತ್ತ ಭಕ್ತರ ಸಮಸ್ಯೆಗಳನ್ನಂತೂ ಈ ದೇವತೆಗಳು ಪರಿಹರಿಸಲೇಬೇಕು. ಹರಕೆ ಹೊತ್ತವರ ತಂಡವೆಂದರೆ ಅದು ಎಮರ್ಜಿನ್ಸಿ ವಾರ್ಡ್ ಇದ್ದಂತೆ. ಅವರಿಗೆ ಪ್ರಥಮ ಆದ್ಯತೆ ಕೊಟ್ಟು ಈ ದೇವತೆಗಳು ಫಲ ನೀಡುತ್ತವೆ. ಇಲ್ಲದಿದ್ದರೆ ಹರಕೆ ಹೊತ್ತವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಶಿಷ್ಟ ಸಂಸ್ಕೃತಿಯಲ್ಲಿ ಶಿಷ್ಟ ದೇವತೆಗಳು ಭಕ್ತರಿಗೆ ಶಾಪ ಕೊಟ್ಟರೆ, ಜನಪದ ಸಂ್ಕೃತಿಯಲ್ಲಿ ಭಕ್ತರೇ ದೇವತೆಗಳಿಗೆ ಶಾಪ ಕೊಡುತ್ತಾರೆ.

ಇಂದಿನ ಕಾಲದಲ್ಲಿ ಒಂದೊಂದು ರೋಗಕ್ಕೆ ಒಬ್ಬೊಬ್ಬ ವಿಶೇಷ ವೈದ್ಯನಿರುವಂತೆ, ಹಿಂದೆ ಈ ಕಾರ್ಯವನ್ನು ಈ ಶಕ್ತಿ ದೇವತೆಗಳೇ ಮಾಡುತ್ತಿದ್ದವು. ಗಂಟಲ ಮಾರಿ ರೋಗಕ್ಕೆ ಗದ್ವಾಲಮ್ಮನೇ ಬೇಕು. ಈ ರೋಗದಲ್ಲಿ ಕೆನ್ನೆಗಳು ಬಾತುಕೊಂಡು ಗಂಟಲದವರೆಗೂ ಹಬ್ಬುತ್ತವೆ. ಆಗ ಗದ್ವಾಲಮ್ಮನ ಹತ್ತಿರ ಹೋದ ಭಕ್ತರು ದೇವಿಯ ಹೆಸರಿನಲ್ಲಿ ತುಂಬೇ ಎಲೆಗಳನ್ನು ಬೆಲ್ಲದಲ್ಲಿ ಅರೆದು ರಸ ಮಾಡಿ ಅದಕ್ಕೆ ಹಸಿಸುಣ್ಣ ಬೆರಸಿ ಹಚ್ಚಿಕೊಳ್ಳುತ್ತಾರೆ. ಆಗ ಬಾವು ಇಳಿದು ಆರಾಮಾಗುತ್ತದೆ. ಇನ್ನು ಸಿಡುಬು ರೋಗಕ್ಕೆ ಸಿಡುಬಮ್ಮನೇ ಬೇಕು. ಬೇವಿನ ಸೊಪ್ಪನ್ನು ಅರೆದು ಅರಿಷಿಣದಲ್ಲಿ ಕಲೆಸಿ ಅಮ್ಮನ ಹೆಸರು ಹೇಳಿ ಹಚ್ಚಿಕೊಂಡರೆ ಸಿಡುಬು ಹೋಗಲೇಬೇಕು. ಬೆನ್ನುಪಣೆ ಅಥವಾ ರಾಜಣ್ಣು ನಿವಾರಣೆಗೆ, ಮೇಕೆ ಮಾಂಸವನ್ನು ರಸಬಾಳೆ ಹಣ್ಣಿನೊಂದಿಗೆ ಜಜ್ಜಿ ಅಮ್ಮನ ಹೆಸರಿನಲ್ಲಿ ಗಾಯಕ್ಕೆ ಕಟ್ಟುತ್ತಾರೆ.

‘ಪ್ಲೇಗು’ದಂತಹ ದೊಡ್ಡ ರೋಗ ನಿವಾರಣೆಗೆ ಪ್ಲೇಗಮ್ಮ ಪ್ರಸಿದ್ಧಳು. ಅದೇ ರೀತಿ ‘ಕಾಲರಾ’ ರೋಗಕ್ಕೆ ಕಾಲರಮ್ಮ ಬೇಕೇ ಬೇಕು. ಕುರುವಿಗೆ ಕುರವತ್ತಿ ಮಾರಮ್ಮ ಎತ್ತಿದ ಕೈ. ಹೀಗೆ ಬೆಂಕಿ ರೋಗ, ಸೀಡೆರೋಗ, ಸಪ್ಪೇರೋಗ, ಚರ್ಮರೋಗ ಈ ಎಲ್ಲ ರೋಗಗಳಿಗೂ ಸಿದ್ಧೌಷಧಿ ಶಕ್ತಿದೇವತೆಗಳಲ್ಲಿದೆ. ಇಡೀ ಸಸ್ಯ ಸಂಕುಲ-ಪ್ರಾಣಿಸಂಕುಲ-ಪಕ್ಷಿಸಂಕುಲಗಳನ್ನು ರಕ್ಷಿಸುವ ಈ ಅಮ್ಮ ಮನುಷ್ಯ ಸಂಕುಲದ ರಕ್ಷಣೆಯನ್ನೂ ಹೊತ್ತಿದ್ದಾಳೆ.

ಶಿಷ್ಟ ಸಂಸ್ಕೃತಿಯಲ್ಲಿ, ಶಿಷ್ಟ ದೈವಗಳಲ್ಲಿ ಹೆಣ್ಣಿಗೆ ಪ್ರಾಧಾನ್ಯತೆ ಕಡಿಮೆ. ಆದರೆ ಜಾನಪದ ಸಂಸ್ಕೃತಿಯಲ್ಲಿ-ಜನಪದ ದೈವಗಳಲ್ಲಿ ಹೆಣ್ಣೇ ಪ್ರಮುಖ ಸ್ಥಾನದಲ್ಲಿದ್ದಾಳೆ. ಮಾತೃಪ್ರಧಾನ ಸಂಸ್ಕೃತಿಯ ಅನೇಕ ಆಚರಣೆಗಳನ್ನು ಈ ಜನಪದ ಹೆಣ್ಣು ದೈವಗಳ ಆಚರಣೆಗಳಿಗೆ ಹೋಲಿಸಿ ನೋಡಬಹುದಾಗಿದೆ. ಈ ದೈವಗಳಲ್ಲಿ ಬಹುವಚನದ ಬಳಕೆಯಿಲ್ಲ. ಇಲ್ಲಿಯ ಭಕ್ತರು ಮತ್ತು ದೇವತೆಗಳು ಏಕವಚನದಲ್ಲಿಯೇ ಮಾತನಾಡುತ್ತವೆ. ಭಕ್ತ-ದೇವತೆಯೆಂಬ ತಾರತಮ್ಯ ವಿಲ್ಲ. ಅನೇಕ ವ್ಯಕ್ತಿಗಳೇ ಇಲ್ಲಿ ದೈವಗಳಾಗಿ ಬೆಳೆದು ನಿಂತಿರುವುದರಿಂದ ಈ ಜನಪದ ದೈವಗಳ ಪರಂಪರೆ ಮನುಷ್ಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ.