ಭಾರತವು ಹಾಲು ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಸ್ಥಾನವನ್ನು ಗಳಿಸಿದೆ. ಆಕಳು ಎಮ್ಮೆಗಳ ಸರಾಸರಿ ಉತ್ಪಾದನಾ ಮಟ್ಟವು ತೀರಾ ಕಡಿಮೆ ಇದ್ದರೂ ಒಟ್ಟು ಹಾಲಿನ ಉತ್ಪಾದನೆ ಗಮನಾರ್ಹವಾಗಿದ್ದು ಸರಾಸರಿ ೪೪೫ ಲೀ. ಹಾಲು ಆಕಳುಗಳಲ್ಲಿ ೮೧೧ ಲೀ. ಹಾಲು ಎಮ್ಮೆಗಳಲ್ಲಿ ದೊರಕುತ್ತಿದೆ. ಇದು ನಮ್ಮ ದೇಶದ ಸುಮಾರು ಏಳು ಕೋಟಿ ಗ್ರಾಮೀಣ ಕುಟುಂಬಗಳ ಸಾಧನೆ. ಹಾಲು ಉತ್ಪಾದನೆ ಮತ್ತು ಮಾರುಕಟ್ಟೆಯ ವ್ಯವಸ್ಥೆಯಲ್ಲಿನ ಸಹಕಾರಿ ಆಂದೋಲನ ಈ ದಿಶೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಎನ್ನುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಹಾಲು ಉತ್ಪಾದನಾ ವ್ಯವಸಾಯವು ಗ್ರಾಮೀಣ ಜನತೆಯ ಆರ್ಥಿಕ ಉನ್ನತಿ ಮತ್ತು ಉದ್ಯೋಗ ಅವಕಾಶಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಎನ್ನುವುದೇ ಸಂತಸದ ಸಂಗತಿ.

ಹಾಲು, ಹೈನು ಉದ್ಯಮದ ಪ್ರಗತಿಯ ಬೆನ್ನೆಲುಬುಗಳೆಂದರೆ:

  • ವ್ಯವಸಾಯಕ್ಕೆ ಹೆಗಲುಕೊಟ್ಟು ನಿಂತಿರುವ ದನಕರುಗಳು. ಇವು ಬಡಬಗ್ಗರಿಗೆ ಒಂದು ದೊಡ್ಡ ಆಸ್ತಿ, ಸಾಮಾಜಿಕ ಭದ್ರತೆ ಕೂಡ.
  • ಹಾಲು ಉತ್ಪಾದನೆ ನಿರುದ್ಯೋಗ ನಿವಾರಣೆಗೆ ಸಹಾಯವಾಗುವುದಲ್ಲದೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇದರಿಂದ ಹೆಚ್ಚಿನ ಲಾಭವಾಗಿದೆ ಹಾಗೂ ಅವರ ಸ್ವಾವಲಂಬನೆಗೆ ಕಾರಣವಾಗಿದೆ. ಈ ಹೆಣ್ಣುಮಕ್ಕಳು ದನಕರು ಸಾಕಣೆಯಲ್ಲಿ ಸುಮಾರು ಶೇ. ೭೦ ರಷ್ಟು ಕೆಲಸಗಳನ್ನು ನಿರ್ವಹಿಸುತ್ತಾರೆ.

ಎಮ್ಮೆಗಳು ಭಾರತದ ಕ್ಷೀರೋತ್ಪಾದನಾ ಯಂತ್ರಗಳಿದ್ದಂತೆ. ಒಟ್ಟು ಹಾಲು ಉತ್ಪಾದನೆಯ ಶೇ. ೫೦ಕ್ಕೂ ಹೆಚ್ಚು ಭಾಗ ಈ ಮೂಲದಿಂದಲೇ ಬರುತ್ತದೆ.

ಇನ್ನೊಂದು ವಿಶೇಷವೆಂದರೆ, ವ್ಯವಸಾಯ ಮೂಲದ ತ್ಯಾಜ್ಯ ವಸ್ತುಗಳಾದ ಹುಲ್ಲು, ಹೊಟ್ಟು, ತೌಡು, ಹಿಂಡಿಯನ್ನೇ ಹೆಚ್ಚು ಉಪಯೋಗಿಸಿಕೊಂಡು ಧಾನ್ಯ ಉಳಿತಾಯ ಪದ್ಧತಿಯಿಂದ ಹಾಲು ಉತ್ಪಾದನೆ ಮಾಡುವುದು.

ಆದರೆ ಇದರಲ್ಲಿ ಕೆಲವು ತೊಂದರೆಗಳೂ ಇವೆ. ಮೇವಿನ ಕೊರತೆ ವರ್ಷದ ಅನೇಕ ತಿಂಗಳಲ್ಲಿರುವುದರಿಂದ ಹಾಲು ಉತ್ಪಾದನೆಯಲ್ಲಿ ಖೋತಾ, ಹಾಲಿನ ಉತ್ಪಾದನೆ ಮತ್ತು ಹೆಚ್ಚಿಗೆ ಇರುವ ರಾಸುಗಳ ಕೊರತೆ ನೀಗಿಸಲು ಕೃತಕ ಗರ್ಭಧಾರಣಾ ವ್ಯವಸ್ಥೆಯ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿಯೇ ಇದೆ. ಕೇವಲ ಶೇಕಡಾ ೧೦ ರಷ್ಟು ಆಕಳು ಎಮ್ಮೆಗಳಿಗೆ ಈ ಸೌಲಭ್ಯ ಸಿಗುತ್ತಿದೆ.

ಆರೋಗ್ಯ ರಕ್ಷಣೆ ಮತ್ತು ಔಷಧ ಸೌಲಭ್ಯಗಳಿಗೆ ಸಾಕಷ್ಟು ಹಣದ ಕೊರತೆ ಇದೆ. ಮಾರುಕಟ್ಟೆ ಸೌಲಭ್ಯವು ದೂರದ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ತಲುಪಿಲ್ಲ ಉತ್ಪಾದನೆಗೆ ತಕ್ಕಂತೆ ಸಂಸ್ಕರಣಾ ಸೌಲಭ್ಯಗಳು ಹೆಚ್ಚಾಗಿಲ್ಲ.

ಹೈನುಗಾರಿಕೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಮಹಿಳೆಯರು ಸರಿಯಾದ, ಸಾಕಷ್ಟು ತರಬೇತಿ ಮತ್ತು ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಇಷ್ಟೆಲ್ಲಾ ತೊಂದರೆ ಇದ್ದರೂ ಸಹ ಹೈನೋದ್ಯಮಕ್ಕೆ ಇರುವ ಉತ್ತಮ ಅವಕಾಶಗಳು ಹೇರಳವಾಗಿದ್ದು ಅವು ಕೆಳಗಿನಂತಿವೆ.

  • ಉದ್ಯಮಕ್ಕೆ ಬೇಕಾಗಿರುವ ಮೂಲ ಸೌಲಭ್ಯಗಳು ವೃದ್ಧಿಯಾಗುತ್ತಲಿವೆ.
  • ಹಾಲು ಉತ್ಪಾದನಾ ವೆಚ್ಚ ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಬಹಳ ಕಡಿಮೆ. ನಮ್ಮ ಸುತ್ತಮುತ್ತ ಕ್ಷೀರೋತ್ಪಾದನೆಯಲ್ಲಿ ಬಹಳ ಹಿಂದೆ ಇರುವ ರಾಷ್ಟ್ರಗಳೇ ಇರುವುದರಿಂದ ರಫ್ತಿಗೆ ಪುಷ್ಕಳ ಅವಕಾಶ ಇದೆ.
  • ಹೇರಳವಾಗಿ ದೊರೆಯುವ ಕೃಷಿ ತ್ಯಾಜ್ಯ ವಸ್ತುಗಳನ್ನು ಉಪಚರಿಸಿ ಉಪಯೋಗಿಸಲು ವಿಪುಲ ಅವಕಾಶವಿದೆ.
  • ಒಟ್ಟಿನಲ್ಲಿ ಅಳತೆ ಮೀರಿ ತಿನ್ನುವ ಆರ್ಥಿಕವಾಗಿ ಲಾಭದಾಯಕವಲ್ಲದ ಮತ್ತು ಉತ್ತಮ ಉತ್ಪಾದನಾ ಸಾಮರ್ಥ್ಯವುಳ್ಳ ರಾಸುಗಳ ಸಾಕಣೆಗೆ ಅಡ್ಡಗಾಲಿಡುವ ದನಕರುಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಪಶುಪಾಲಕರಿಗೆ ಅವಶ್ಯವಿರುವ ಸಾಲ ಸೌಲಭ್ಯಗಳು ಸುಲಭವಾಗಿ ಅಗ್ಗದ ದರದಲ್ಲಿ ಸಿಗಬೇಕು. ದೊಡ್ಡರೋಗ ಮತ್ತು ಕಾಲು ಬಾಯಿ ಬೇನೆ ಮುಂತಾದ ಮಾರಕ ರೋಗಗಳ ನಿರ್ಮೂಲನೆಯಾಗಬೇಕು.