ಬಾಲ್ಯದ ವಿದ್ಯಾಭ್ಯಾಸವನ್ನು ಸಂಸರು ಕುನಗನಹಳ್ಳಿ ಎಲಿಮೆಂಟರಿ ಶಾಲೆಯಲ್ಲಿ ಹಾಗೂ ಕೊಳ್ಳೆಗಾಲದ ಬೋರ್ಡ ಮಿಡಲ್‌ಸ್ಕೂಲಿನಲ್ಲಿ ಮಾಡಿದರು. ಅಕ್ಷರಾಭ್ಯಾಸ ಪಾಳ್ಯದ ಶ್ರೀಕಂಠ ಶಾಸ್ತ್ರಿಗಳಿಂದ ಆಯಿತು. ಒಂದೆರಡನೆಯ ತರಗತಿಯಲ್ಲಿರುವಾಗಲೇ ಪೋಸ್ಟ್‌ಮಾಸ್ಟರ್ ಶ್ರೀನಿವಾಸ ಶಾಸ್ತ್ರಿಗಳು ಕನ್ನಡ, ಸಂಸ್ಕೃತ ಓದಲು ಕಲಿಸಿದರು. ಹೈಸ್ಕೂಲ್‌ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲು ಸೇರಿದರು. ಎಸ್‌.ಎಸ್‌.ಎಲ್‌.ಸಿಯಲ್ಲಿ ಪಾಸಾಗದೇ ವಿದ್ಯೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಅವರಿಗೆ ಸಾಹಿತ್ಯ ರಚನೆಯ ಕಡೆಗೆ ಒಲವು ಮೂಡಿತ್ತು. ಅಷ್ಟರಲ್ಲೇ ಒಂದು ಕಾದಂಬರಿಯನ್ನೂ ಬರೆದಿದ್ದರು. ‘ಅರಗಿಳಿ’ ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಲು ಪ್ರಯತ್ನಿಸಿ ಸೋತಿದ್ದರು. ಜೊತೆಗೆ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಕರಿಬಸವ ಶಾಸ್ತ್ರಿಗಳ ಸಹಾಯದಿಂದ ಹಳಗನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದರು. ಭಾಷೆ ಹಾಗೂ ಛಂದಸ್ಸಿನ ಮೇಲೆ ಪ್ರಭುತ್ವವನ್ನು ಸಂಪಾದಿಸಿಕೊಂಡರು. ಈ ಹಂತದಲ್ಲಿಯೇ ಅವರು ಆಂಗ್ಲ ಸಾಹಿತ್ಯವನ್ನೂ ಓದಿ ಹೆಚ್ಚಿನ ಜ್ಞಾನವನ್ನು ಪಡೆದರು. ಓದುವಿಕೆ ಮತ್ತು ಪರ್ಯಟನ ಇವುಗಳ ಮೂಲಕ ಪ್ರಪಂಚ ಜ್ಞಾನವನ್ನು ಗ್ರಹಿಸಿದರು.

ಸಂಸರ ನಾಟಕಗಳಂತೆ ಅವರ ವೈಯಕ್ತಿಕ ಜೀವನವೂ ಅಷ್ಟೇ ಕುತೂಹಲವನ್ನು ಕೆರಳಿಸುತ್ತದೆ. ಅವರ ಬದುಕು ಹಾಗೂ ಬರಹ ಒಂದಕ್ಕೊಂದು ವಿರುದ್ಧವಾದವುಗಳು. ಯಾರೋ ತನಗೆ ಕಿರುಕುಳ ಕೊಡುತ್ತಿದ್ದಾರೆಂಬ ಹುಚ್ಚುಭಯ (Persecution Complex) ಅವರನ್ನು ಏಕೆ ಕಾಡಲಾರಂಭಿಸಿತು ಎನ್ನುವದು ಅನೇಕರನ್ನು ಕಾಡಿದೆ. ತಮ್ಮನ್ನು ತಾವೇ ಮಾನಸಿಕವಾಗಿ ಹಿಂಸಿಸಿಕೊಂಡ ಸಂಸರ ಒಳತೋಟಿಯನ್ನು ಅರ್ಥ ಮಾಡಿಕೊಳ್ಳುವುದು ಸುಲಭದ್ದಲ್ಲ. ಅವರ ಅಸ್ತವ್ಯಸ್ತವಾದ ಜೀವನವೇ ಅಚ್ಚುಕಟ್ಟಾದ ಸಾಹಿತ್ಯ ರಚನೆಗೆ ಪರೋಕ್ಷವಾಗಿ ಪ್ರೇರಣೆಯನ್ನು ನೀಡಿದ್ದರೆ ಆಶ್ಚರ್ಯವಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಸಂಸರು ಚಿಕ್ಕಪ್ಪನ ಆಶ್ರಯದಲ್ಲಿ ಕೆಲಕಾಲ ಕಳೆಯಬೇಕಾಗಿ ಬಂತು. ವಿದ್ಯೆಯನ್ನು ಹೇಗಾದರೂ ಮುಂದುವರೆಸಬೇಕೆಂಬ ಆಸೆ ಸಂಸರದ್ದು. ಆದರೆ ವಿದ್ಯೆಗಾಗಿ ಹೆಚ್ಚು ಹಣನೀಡಲು ತಯಾರಿಲ್ಲದ ಚಿಕ್ಕಪ್ಪನೊಂದಿಗಿನ ಅವರ ಸಂಬಂಧ ಈ ಕಾರಣಕ್ಕಾಗಿಯೇ ಬಿಗಡಾಯಿಸುತ್ತ ಬಂದಿತು. ತಾಯಿ ತೀರಾ ಚಿಕ್ಕವರಿರುವಾಗಲೇ ತೀರಿಕೊಂಡಿದ್ದರೂ ದೊಡ್ಡ ಅತ್ತಿಗೆ ಶೇಷಮ್ಮ ಇವರನ್ನು ಪ್ರೀತಿಯಿಂದ ನೋಡಿಕೊಂಡಿದ್ದರು. ೧೯೧೮ ರಲ್ಲಿ ಅವರು ತೀರಿಕೊಂಡಗ, ಒಂದು ರೀತಿಯಲ್ಲಿ ಪರದೇಶಿ ಬದುಕು ಇವರದಾಯಿತು. ಅಣ್ಣ ತಮ್ಮಂದಿರಲ್ಲಿ ಆಸ್ತಿಗಾಗಿ ಕಾದಾಟ ಜಗಳಗಳೂ ಪ್ರಾರಂಭವಾದವು. ಪಿತೂರಿಗಳು ಹುಟ್ಟಿಕೊಂಡವು. ಅಣ್ಣಂದಿರೊಂದಿಗಿನ ಸಂಸರ ಸಂಬಂಧವು ಮಧುರವಾಗಿ ಉಳಿಯದಾಯಿತು. ಅವರೊಂದಿಗಿನ ಆ ಕಾಲದ ಪತ್ರವ್ಯವಹಾರ ಈ ಮಾತನ್ನು ಸ್ಪಷ್ಟಗೊಳಿಸುತ್ತದೆ. ‘Dear Brother! ನಿಂದ ಆರಂಭವಾಗುವ ಪತ್ರ ವ್ಯವಹಾರ, ಬದಲಾದ ಭಾವಗಳಿಗೆ ತಕ್ಕಂತೆ ಸರ್, ತಿ|| ಅಣ್ಣನವರಿಗೆ ನಮಸ್ಕಾರಗಳು ಎಂಬ ಗೌರವ ಭಕ್ತಿಗಳೊಂದಿಗಿನ, ಕೆಲವೊಮ್ಮೆ `Brother!’ ಎಂಬ ಕೋಪದಿಂದ, ಮತ್ತೆ ಕೆಲವೊಮ್ಮೆ ‘ಶ್ರೀಮಾನ್‌ಅಗರದ…… ಗೆ’ ಎಂಬ ಇನ್ನಷ್ಟು ಕೋಪದ ಅಭಿವ್ಯಕ್ತಿಯೊಂದಿಗೆ, ಮಗದೊಮ್ಮೆ ತುಂಬ ಕೋಪದಲ್ಲಿ ಹೆಸರೇ ಇಲ್ಲದೆ ವ್ಯವಹರಿಸಲ್ಪಡುತ್ತಿತ್ತು. ‘ಎಲವೋ ನರಾಧಮಾ!’ ಎಂಬ ಒಕ್ಕಣಿಕೆಯಿಂದ ಪ್ರಾರಂಭವಾದದ್ದೂ ಉಂಟು. `Has that sowcar been Kollegal?’ ಎಂದು ಒರಟಾಗಿ ಕೇಳಿದ್ದೂ ಉಂಟು. `I regret see my brothers fighting disgracefully’ ಎಂದು ೫. ೧೧. ೧೯೧೮ ರಂದು ಅವರು ಪತ್ರ ಬರೆದವರು, ಅಂದಿನಿಂದ ಉದ್ಯೋಗವನ್ನರಸುತ್ತ ಊರೂರು ಅಲೆಯತೊಡಗಿದರು.