ಸಂಸರು ೧೯೧೯ ರಿಂದ ೧೯೩೫ರ ವರೆಗೆ ಸುಮಾರು ೧೬ ವರ್ಷಗಳ ಅವಧಿಯಲ್ಲಿ ಮಧ್ಯೆ ಮಧ್ಯೆ ಐದಾರು ವರ್ಷ ನಿರುದ್ಯೋಗಿಯಾಗಿದ್ದನ್ನು ಬಿಟ್ಟರೆ, ಉಳಿದ ಕಾಲದಲ್ಲಿ ಹೊಟ್ಟೆಪಾಡಿಗಾಗಿ ವಿವಿಧ ಬಗೆಯ ಉದ್ಯೋಗ ಮಾಡಿದಂತೆ ತೋರುತ್ತದೆ. ಆದರೆ ಎಲ್ಲಿಯೂ ಒಂದು ವರ್ಷಕ್ಕಿಂತ ಹೆಚ್ಚು ನೆಲೆನಿಂತಂತೆ ತೋರುವುದಿಲ್ಲ. ೧೯೧೯ರಲ್ಲಿ ಹೆಬ್ಬಾಲ್‌ರೂರಲ್‌ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಪ್ರಾರಂಭಿಸಿದರು. ಅಲ್ಲಿ ಇದ್ದದ್ದು ಕೇವಲ ಆರು ತಿಂಗಳು. ಅದನ್ನು ಬಿಟ್ಟವರು ಮುಂಬೈಗೆ ಹೋಗಿ ಬಿ.ಬಿ.ಸಿ.ಐ ನಲ್ಲಿ ರೇಲ್ವೆ ಗುಮಾಸ್ತರಾದರು. ಅಲ್ಲಿಯೂ ಅದು ಅವರಿಗೆ ಸರಿ ಅನ್ನಿಸದೆ, ಚಾಮರಾಜ ನಗರದ ನ್ಯಾಷನಲ್‌ಸ್ಕೂಲಿನಲ್ಲಿ ೧೯೨೦ ರಲ್ಲಿ ಉಪಾಧ್ಯಾಯರಾಗಿ ಸೇರಿದರು. ಐದು ತಿಂಗಳು ಕಳೆಯುತ್ತಲೇ ಪ್ಲೇಗ್‌ರೋಗಕ್ಕೆ ಬಲಿಯಾಗಿ ಕೆಲಸ ಮುದುವರೆಸುವುದು ಸಾಧ್ಯವಾಗಲಿಲ್ಲ. ತಮ್ ಆರೈಕೆ ಮಾಡಲು ದೊಡ್ಡತ್ತಿಗೆ ಶೇಷಮ್ಮನೂ ಇಲ್ಲದೇ ತಬ್ಬಲಿತನವನ್ನು ಅನುಭವಿಸುತ್ತೆ, ತಮ್ಮ ಬಾಳು ಕರ್ಣನ ತೆರದ್ದೆಂದು ಅನ್ನಿಸಿ, ಕಂದ ಪದ್ಯಗಳಲ್ಲಿ ಆತ್ಮ ಚರಿತ್ರೆ ಬರೆದರು. ಅದನ್ನು ಮೆಚ್ಚಿ ಮುದ್ರಿಸಿಬೇಕೆಂದಿದ್ದ ಪ್ರಬುದ್ಧ ಕರ್ಣಾಟಕದ ಸಂಪಾದಕ ಸ್ನೇಹಿತರಿಗೆ ಮರುದಿನ ಬರಲು ಹೇಳಿ, ಬಂದಾಗ ಬೂದಿಯ ಗುಡ್ಡೆಯನ್ನು ತೋರಿಸಿದರಂತೆ. ತಕ್ಷಣವೇ ನಿರಾಶೆಯಾಗಬಾರದೆಂದು ಮೋಕ್ಷ ಗುಂಡಂ ವಿಶ್ವೇಶ್ವರಯ್ಯನವರ ಬಗ್ಗೆ ಒಂದು ಸ್ತೋತ್ರ ಮಾಲಿಕೆಯನ್ನು ಬರೆದು ಕೊಟ್ಟರಂತೆ. ಅದು ಪ್ರಬುದ್ಧ ಕರ್ಣಾಟಕದಲ್ಲಿ ಅಚ್ಚಾಯಿತು. ಆರೋಗ್ಯ ಸ್ವಲ್ಪ ಸುಧಾರಿಸಿದ ಮೇಲೆ ೧೯೨೨ ರಲ್ಲಿ ಮೈಸೂರಿನ ಸಂಪದಭ್ಯುದಯ ಕಚೇರಿಯಲ್ಲಿ ನೌಕರರಾಗಿ ಸೇರಿದರು. ಕೆಲವೇ ದಿನಗಳಲ್ಲಿ ಅದನ್ನು ಬಿಟ್ಟು, ಮಂಗಳೂರಿಗೆ ಹೋಗಿ ಮಂಗಳೂರು ಪ್ರೆಸ್‌ನಲ್ಲಿ ಆಪರೇಟರಾಗಿ ಕೆಲವು ತಿಂಗಳು ದುಡಿದರು. ಮತ್ತೆ ಮೈಸೂರಿಗೆ ಬಂದು ‘ವಿಗಡವಿಕ್ರಮರಾಯ’ ನಾಟಕ ರಚಿಸಿದರು. ೧೯೨೪ರಲ್ಲಿ ಬೆಂಗಳೂರಿನಲ್ಲಿ ಕೆಲಕಾಲವಿದ್ದರು. ೧೯೨೫ರಲ್ಲಿ ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿದರು. ಅಲ್ಲೂ ಕೆಲವೇ ತಿಂಗಳು ದುಡಿದು ಹಿಂತಿರುಗಿ ಮೈಸೂರಿಗೇ ಬಂದರು. ೧೯೨೬ರಲ್ಲಿ ‘ವಿಜಯನಾರಸಿಂಹ’ ನಾಟಕ ರಚಿಸಿದರು. ಮೈಸೂರಿನ ಶಾರದಾ ವಿಲಾಸ ಶಾಲೆಯಲ್ಲಿ ಕನ್ನಡ ಉಪಾಧ್ಯಾಯರಾಗಿ ಸೇರಿಕೊಂಡರು. ಅಲ್ಲಿದ್ದಾಗಲೇ ಅವರ ‘ವಿಗಡವಿಕ್ರಮರಾಯ’ ನಾಟಕ ಪ್ರದರ್ಶನಗೊಂಡಿತು. ಅದನ್ನು ತಯಾರು ಮಾಡಿಸಿದವರೇ ಸಂಸರು. ತಮ್ಮ ನಿರೀಕ್ಷೆಯ ಮಟ್ಟಕ್ಕೆ ನಾಟಕ ಪ್ರಯೋಗ ಬರಲಿಲ್ಲವೆಂದು ಬೇಸರಗೊಂಡು ಶಾರದಾ ವಿಲಾಸ ಶಾಲೆಯ ಶಿಕ್ಷಕವೃತ್ತಿಯನ್ನೇ ತೊರೆದು ಹೋದರು. ಧಾರವಾಡಕ್ಕೆ ಹೋಗಿ ೧೯೨೮ರಲ್ಲಿ ‘ಸಂಸಪದಂ’ ಕಾವ್ಯ ರಚನೆ ಮಾಡಿದರು. ಮುಂದೆ ಯಾರ ಸಂಪರ್ಕ ಎಲ್ಲಿ ದೊರೆಯಿತೋ ತಿಳಿಯದು. ೧೯೨೮-೨೯ರಲ್ಲಿ ಡರ್ಬನ್‌, ನಾತಾಳಗಳಿಗೆ ಹೋದರು. ಅಲ್ಲಿ ಕೂಲಿಕಾರರಾಗಿ ದುಡಿದರೆಂದು ಹೇಳಲಾಗುತ್ತದೆ. ಅಧಿಕೃತ ಮಾಹಿತಿ ಈಗ ಲಭ್ಯವಿಲ್ಲದಿದ್ದರೂ ಕೂಡ ಪಾದ್ರಿಯೊಬ್ಬನ ಸ್ನೇಹಸಂಪಾದಿಸಿ ಕೂಲಿಗಳ ಮೇಲ್ವಿಚಾರಕರಾಗಿದ್ದರೆಂದೂ ಹಿಂತಿರುಗುವಾಗ ಹೇರಳ ಹಣ ಸಂಗ್ರಹಿಸಿಕೊಂಡು ಬಂದರೆಂದೂ ಅವರ ಅಣ್ಣನ ಮಗ, ಅ.ನ. ಸುಬ್ರಹ್ಮಣ್ಯಂ ಹೇಳುತ್ತಾರೆ. ಸುಮಾರು ೧೯೨೯-೩೦ರ ಸುಮಾರಿಗೆ ಕೊಚ್ಚೀನ್‌ಗೆ ಬಂದರೆಂದು ತೋರುತ್ತದೆ. ಮುಂದೆ ೧೯೩೦ ರಲ್ಲಿ ಸೇಂಟ್‌ಎಲೋಷಿಯಸ್‌ಶಾಲೆಯಲ್ಲಿ ಕೆಲಸಕ್ಕೆ ಸೇರಿದರೂ ಅದು ಸರಿಬರದೇ ೧೯೩೧ ರಲ್ಲಿ ಸರಸ್ವತಿ ಪ್ರಿಂಟಿಂಗ್‌ಪ್ರೆಸ್‌ನಲ್ಲಿ ಮ್ಯಾನೆಜರ್ ಆಗಿ ದುಡಿದರು. ೧೯೩೨ ರಲ್ಲಿ ಮತ್ತೆ ಮದರಾಸಿಗೆ ಹೋಗಿ ಅಲ್ಲಿ ಲಿಯೋಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿಕೊಂಡರು. ಅಲ್ಲಿಂದಲೇ ಕ್ವೆಟ್ಟಾಕ್ಕೆ ಹೋಗಿ ಕಂಟೋನ್ಮೆಂಟಿನಲ್ಲಿ ತಮಿಳು ಶಿಕ್ಷಕರಾಗಿ ಸೇವೆಸಲ್ಲಿಸತೊಡಗಿದರು. ಆದರೆ ೧೯೩೫ ರಲ್ಲಿ ಭೂಕಂಪವಾಗಿ ಕ್ವೆಟ್ಟಾ ಸರ್ವನಾಶವಾಯಿತು. ಹೇಗೋ ಬದುಕುಳಿದ ಸಂಸರು ವೈದ್ಯರೊಬ್ಬರ ನೆರವಿನಿಂದ ಕಲ್ಕತ್ತಾಕ್ಕೆ ಬಂದರು. ಅಲ್ಲಿ ಅವರು ಕ್ರಾಂತಿಕಾರರ ಸಂಪರ್ಕಕ್ಕೆ ಬಂದಿರಬೇಕೆಂದು ಊಹಿಸಲಾಗಿದೆ. ಒಂದು ಕೊಲೆಯ ಪ್ರಸಂಗದಲ್ಲಿ ಪೋಲೀಸರು ಕ್ರಾಂತಿಕಾರರಲ್ಲಿ ಕೆಲವರನ್ನು ಹಿಡಿದಾಗ ಅವರು ಸಂಸರನ್ನು ತೋರಿಸಿ ಪರಾರಿಯಾದರೆಂದೂ ಆ ಪೋಲಿಸನವರಿಂದ ಹೇಗೋ ತಪ್ಪಿಸಿಕೊಂಡು ಸಂಸರು ಬೆಂಗಳೂರಿಗೆ ಬಂದರೆಂದೂ ಕೆಲವರು ಹೇಳುತ್ತಾರೆ. ಪೋಲಿಸರು ತನ್ನ ಮೇಲೆ ಕಣ್ಣಿಟ್ಟಿದ್ದಾರೆಂಬ ಸಂಶಯದಿಂದ ಮಾನಸಿಕವಾಗಿ ಬಹಳೇ ಯಾತನೆಯನ್ನು ಅನುಭವಿಸಿದರು. ಸುಮಾರು ೩-೪ ವರ್ಷಗಳ ಪರದೇಶದ ತಿರುಗಾಟದ ಸಂದರ್ಭದಲ್ಲಿ ಎಲ್ಲಿ ಏನು ನಡೆಯಿತು ಎಂಬುದು ಸ್ಪಷ್ಟವಾಗಿ ಯಾರಿಗೂ ತಿಳಿಯದು. ೧೯೩೫ರಲ್ಲಿ ಇಜಿಪ್ತಿಗೆ ಹೋಗಿಬರಲು Multiple Journey Visa ಮಾಡಿಸಿಕೊಂಡಿದ್ದರು. ಆದರೆ ಅದನ್ನು ಬಳಸಲು ಸಾಧ್ಯವಾಗಿರಲಿಲ್ಲ.