೧೯೩೫ ರಿಂದ ಯಾವ ಕಾರಣಕ್ಕೋ ಅವರ ಒಳಪ್ರವೇಶಿಸಿದ ಖಾಕಿಭೂತ ಅವರು ಸಾಯುವವರೆಗೂ ಸುಮಾರು ಮೂರುವರೆ ವರ್ಷಗಳ ಕಾಲ ಅವರನ್ನು ಕಾಡುತ್ತಲೇ ಇತ್ತು. ೧೯೩೬ ರಲ್ಲಿ ಸಂಸರು ಬೆಂಗಳೂರಿನಿಂದ ಮೈಸೂರಿಗೆ ಬಂದರು. ನೂರಡಿರಸ್ತೆಯಲ್ಲಿ ಚಿಕ್ಕಯ್ಯನ ಮಹಡಿಯಲ್ಲಿ ಬಾಡಿಗೆ ಕೋಣೆಯೊಂದನ್ನು ಹಿಡಿದು ಉಳಿಯ ತೊಡಗಿದರು. ಅಲ್ಲಿಯೂ ಸುರಕ್ಷಿತವೆನ್ನಿಸದೇ ಅಲೆದಾಡಿ, ಕೊನೆಯಲ್ಲಿ ಸದ್ವಿದ್ಯಾಪಾಠಶಾಲೆಯ ಆವರಣದಲ್ಲಿರುವ ಕೊಠಡಿಯೊಂದಕ್ಕೆ ಬಂದರು. ಕೋಣೆಯ ಕಿಡಕಿ-ಬಾಗಿಲುಗಳನ್ನೆಲ್ಲಾ ಕಪ್ಪು ಬಟ್ಟೆಯಿಂದ ಮುಚ್ಚಿ, ಪೋಲಿಸರ ಭಯದಲ್ಲಿ ಹಗಲುಗತ್ತನಲ್ಲಿಯೇ ಜೀವಿಸತೊಡಗಿದರು. ಆದರೆ ಈ ಅವಧಿಯಲ್ಲಿ ‘ಬಿರುದಂಥೆಂಬರಗಂಡ’ ‘ಬೆಟ್ಟದರಸು’ ನಾಟಕಗಳನ್ನು ಬರೆದರು. ೧೯೩೨ ರಲ್ಲಿ ಧಾರವಾಡಕ್ಕೊಮ್ಮೆ ಹೋದಾಗ ಮಿತ್ರರ ಅಪೇಕ್ಷೆಯಂತೆ ‘ಅಸತಿ’ ಎಂಬ ಏಕಾಂತ ನಾಟಕವನ್ನು ‘ಪ್ರೇಮ’ ಪತ್ರಿಕೆಯ ನಾಟಕಾಂಕದ ವಿಶೇಷ ಸಂಚಿಕೆಗಾಗಿ ಬರೆದು ಕೊಟ್ಟರು. ೧೯೩೭ ರಲ್ಲಿ ಮೈಸೂರಿನಲ್ಲಿಯೇ ‘ಮಂತ್ರಶಕ್ತಿ’ ನಾಟಕ ಬರೆದರು. ಒಟ್ಟಿನಲ್ಲಿ ಎಲ್ಲಿಯೂ ಹೆಚ್ಚುಕಾಲ ನೆಲೆನಿಲ್ಲದೇ ಪರ್ಯಟನ ಮಾಡುತ್ತಲೇ ಇದ್ದ ಜೀವ ಸಂಸರದು. ಸಂಸರ ‘ಪೋಲೀಸ್‌ಭಯ’ ಕೇವಲ ಭ್ರಮಾಸ್ವರೂಪದ್ದು, ಅನಗತ್ಯವಾದದ್ದು-ಎಂಬುದು ಅನೇಕರ ಅನ್ನಿಸಿಕೆ. ಆಪ್ತರಾದವರನೇಕರು ಸಂಸರಿಗೆ ತಿಳಿಸಿ ಹೇಳಿ ಭಯಮುಕ್ತರನ್ನಾಗಿ ಮಾಡಲು ಪ್ರಯತ್ನಿಸಿದರು. ಪೋಲಿಸ್‌ಇಲಾಖೆಯಿಂದ ಅವರ ಮೇಲೆ ಯಾವ ಕೇಸೂ ಇಲ್ಲದ ಆಧಾರ ಕಾಗದ ಪತ್ರತಂದು ತೋರಿಸಿದರೂ ಸಂಸರು ನಂಬಲಿಲ್ಲ. ಉಳಿದವರಿಗೆ ಭ್ರಮೆ ಎನ್ನಿಸುವ ಅಂಶ ಸಂಸರ ಮಟ್ಟಿಗೆ ಸತ್ಯವೇ ಆಗಿತ್ತು. ಎಂಬುದು ಮಹಾರಾಜರಿಗೆ ಬರೆದಿಟ್ಟಿದ್ದ ೧೮೩ ಪುಟಗಳ ಅಪೀಲಿನಿಂದ ಹಾಗೂ ಅವರ ಸ್ನೇಹಿತರ ಹೇಳಿಕೆಗಳಿಂದ ತಿಳಿದು ಬರುತ್ತದೆ. ಯಾರು ಸಮಾಧಾನ ಹೇಳಿದರೂ ನಂಬದೇ ಪೋಲಿಸ್‌ಭಯದಿಂದಲೇ ೧೪-೨-೧೯೩೯ ರಂದು ಸದ್ವಿದ್ಯಾಪಾಠಶಾಲೆಯ ಕೊಠಡಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಸಂಸರು ಎಲ್ಲರಿಂದ ಎಲ್ಲದರಿಂದ ತಮ್ಮನ್ನು ನೀಗಿಸಿಕೊಂಡರು. ೧೯೩೫ ಕ್ಕೂ ಮುಂಚೆಯೇ ನಾಲ್ಕೈದು ಬಾರಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದರೂ ಸಫಲವಾಗಿರಲಿಲ್ಲ ಆದರೆ ಕೊನೆಗೂ ಅವರೇ ಗೆಲ್ಲುವಂತಾಯಿತು.