ನಾಟಕ ಸಾಹಿತ್ಯ ರಚನೆಯೊಂದಿಗೆ ಸಂಸರಿಗೆ ಅಂದಿನ ರಂಗಭೂಮಿಯ ನಟರ, ನಿರ್ದೇಶಕರ, ನಾಟಕ ಕಂಪನಿಯವರ ನಿಕಟ-ಸಂಪರ್ಕ ಇತ್ತೆನ್ನಬಹುದು. ಕೈಲಾಸಂ, ವರದಾಚಾರ್ಯ, ಮಹಮ್ಮದ ಪೀರ, ಎಚ್‌.ಎಲ್‌.ಎನ್‌.ಸಿಂಹ, ಬಿ.ಆರ್. ಪಂತಲು ಮುಂತಾದವರೊಂದಿಗೆ ಒಳ್ಳೆಯ ಸ್ನೇಹವಿತ್ತು. ಸಂಜೆ ಹೊತ್ತಿನಲ್ಲಿ ಮಾಡರ್ನ ಹಿಂದೂ ಹೋಟೆಲ್ಲಿನ ರೂಮೊಂದರಲ್ಲಿ ‘ಮಿತ್ರಗೋಷ್ಠಿ’ ನಡೆಯುತ್ತಿತ್ತು. ನಾಟಕ ಪ್ರಪಂಚಕ್ಕೆ ಸಂಬಂಧಿಸಿದ ನೂರಾರು ವಿಷಯಗಳ ಚರ್ಚೆ ಅಲ್ಲಿ ನಡೆಯುತ್ತಿತ್ತು ಅ.ನ. ಸುಬ್ರಹ್ಮಣ್ಯಂರವರ ಪ್ರಕಾರ ಕೈಲಾಸಂರೊಬ್ಬರೇ ಸಂಸರೊಂದಿಗೆ ಹೆಚ್ಚು ಸಲಿಗೆಯಿಂದ ವರ್ತಿಸಬಲ್ಲವರಾಗಿದ್ದರು, ಅವರ ದೌರ್ಬಲ್ಯಗಳನ್ನು ಬಲ್ಲವರಾಗಿದ್ದರು. ಸಂಸರು ನಾಟಕ ನಿರ್ದೇಶನವನ್ನೂ ಮಾಡುತ್ತಿದ್ದರು. ಅವರ ನಾಟಕಗಳಲ್ಲಿ ವಿಗಡವಿಕ್ರಮರಾಯ ಹೆಚ್ಚುಬಾರಿ ಪ್ರಯೋಗಿಸಲ್ಪಟ್ಟ ನಾಟಕ. ಶಾರದಾ ವಿಲಾಸ ಶಾಲೆಯಲ್ಲಿದ್ದಾಗ ‘ವಿಗಡವಿಕ್ರಮರಾಯ’ ಮೊದಲಬಾರಿಗೆ ಪ್ರದರ್ಶಿತವಾಯಿತು. ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರೇ ಗ್ರೀನರೂಮ್‌, ವೇಷಭೂಷಣ ಮುಂತಾದ ಸೌಕರ್ಯ ಮಾಡಿಕೊಟ್ಟರು. ಆಗಿನ ಕಾಲದಲ್ಲಿ ನಿರ್ದೇಶಕರನ್ನು ‘ಪ್ಯ್ರಾಕ್ಟೀಸ್‌ಮ್ಯಾನೆಜರ್’ ಎಂದು ಕರೆಯುತ್ತಿದ್ದರು. ವಿಗಡವಿಕ್ರಮರಾಯ ನಾಟಕದ ಪ್ರಾಕ್ಟೀಸ್‌ಮ್ಯಾನೆಜರ್ ಆಗಿದ್ದ ಸಂಸರು ಬಡಪೆಟ್ಟಿಗೆ ಯಾವುದನ್ನೂ ಒಪ್ಪಿಕೊಳ್ಳುವವರಲ್ಲ. ನಟರು ತಮ್ಮ ಅಭಿನಯದಿಂದ ಅವರನ್ನು ಮೆಚ್ಚಿಸುವುದು ಕಷ್ಟವೇ ಆಗಿತ್ತು. ಪ್ರದರ್ಶನ ಸಂಸರ ನಿರೀಕ್ಷೆಯ ಮಟ್ಟಕ್ಕೆ ಬಾರದೇ ಇದ್ದರೂ ಜನ ಮೆಚ್ಚಿಕೊಂಡರು. ಮತ್ತೊಮ್ಮೆ ಅದೇ ನಾಟಕ ರತ್ನಾವಳಿ ಶಾಲೆಯಲ್ಲಿ ಪ್ರದರ್ಶಿತವಾಯಿತು. ವರದಾಚಾರ್ಯರು, ಅಂದಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ರು ನೋಡಿ ಆನಂದ ಪಟ್ಟರು. ೧೯೩೦ ರಲ್ಲಿ ಚಿಕ್ಕಮಗಳೂರಿನ ಹೈಸ್ಕೂಲೊಂದರಲ್ಲಿಯೂ ಸಂಸರು ಅದೇ ನಾಟಕವನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಮತ್ತೊಮ್ಮೆ ಅರಮನೆಯಲ್ಲಿ ಪ್ರದರ್ಶಿತಗೊಂಡಾಗ ಸಂತಸಗೊಂಡ ಶ್ರೀ ಮನ್ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರು ಸಂಸರನ್ನು ಸನ್ಮಾನಿಸಬೇಕೆಂದಾಗ ಸಂಸರು ಅಲ್ಲಿ ಇರಲೇ ಇಲ್ಲವಂತೆ. ಕೊನೆಗೆ ಸುದ್ದಿ ತಿಳಿದಾಗ `Play is the thing’ ಎಂದರಂತೆ! ಸಂಸರು ತಮ್ಮ ನಾಟಕಗಳನ್ನಲ್ಲದೇ ಬೇರೆ ನಾಟಕಗಳನ್ನೂ ನಿರ್ದೇಶಿಸಿದ್ದು ತಿಳಿದು ಬರುತ್ತದೆ. ಉದಾಹರಣೆಗೆ ಮಹಮ್ಮದ ಪೀರರ ಸಲುವಾಗಿ ಗೌತಮ ಬುದ್ಧ ನಾಟಕವನ್ನು ನಿರ್ದೇಶಿಸಿ ಕೊಟ್ಟರಂತೆ. ಆದರೆ ಎಲ್ಲದರಲ್ಲಿಯೂ ಪೂರ್ಣತೆಯನ್ನು ಅಪೇಕ್ಷಿಸುವ ವ್ಯಕ್ತಿಯಾಗಿದ್ದರು ಎಂಬುದಂತೂ ದಿಟ.