ಆರಡಿ ಎತ್ತರದ ೧೬೦ ಪೌಂಡಿನ ಕಪ್ಪು ಬಣ್ಣದ ಭೀಮಕಾಯದ ವ್ಯಕ್ತಿ ಸಂಸ. ಮೀಸೆಯನ್ನು ಬೋಳಿಸಿದ, ಸಿಡುಬಿನ ಕಲೆಯಿಂದ ಕೂಡಿದ ಮುಖ, ವಿಶಾಲವಾದ ನುಣ್ಣನೆಯ ಹಣೆ, ಕಪ್ಪಾದ ಗಂಟಿಕ್ಕಿದ ಹುಬ್ಬುಗಳು, ಅವುಗಳ ಕೆಳಗೆ ಥಳ ಥಳಿಸುವ ಕಪ್ಪಾಲಿಗಳ ಕಣ್ಣುಗಳು. ಮೆಳ್ಳೆಗಣ್ಣಾದರೂ ತೀಕ್ಷ್ಣನೋಟ ಯಾರನ್ನಾದರೂ ದಂಗುಬಡಿಸುವಂತಹುದು. ಆದರೆ ತೀರಾ ಸಾದಾವ್ಯಕ್ತಿ. ಬದುಕಿ ಉಳಿಯಲಿಕ್ಕೆ ಅನಿವಾರ್ಯವಾದುದನ್ನು ಮಾತ್ರ ಬಯಸಿದಂಥವರು. ದಟ್ಟಿಸುತ್ತಿದ ಪಂಚೆ, ಕಾಲರಿಲ್ಲದ ಅರೆ ತೋಳಿನ ಬನಿಯನ್ನು. ಹೊರಗೆ ಹೋಗುವಾಗ ಒಂದು ಕೋಟು. ಇಷ್ಟೇ ಉಡುಗೆ-ತೊಡುಗೆ. ಮಲಗಲು ಒಂದು ಚಾಪೆ, ದಿನಕ್ಕೊಂದು ಪ್ಲೇಟ್‌ಊಟ. ಅವರಿಗೆ ಬೀಡಿ ಸೇದುವ ಚಟ ಮಾತ್ರವಿತ್ತು. ಸೋಡಾ ಮತ್ತು ಪುರಿ ತಿಂದು ದಿನ ಕಳೆಯುವದೂ ಇತ್ತು ಎನ್ನಲಾಗಿದೆ.

ಹಿರಿಯರು ಮದುವೆ ಮಾಡುತ್ತೇನೆಂದಾಗ ಒಪ್ಪದೇ, ತಾವು ಮದುವೆಯಾಗಬೇಕಂದಾಗ ಹಿರಿಯರು ಒಪ್ಪದೇ, ಒಟ್ಟಿನಲ್ಲಿ ಗೃಹಸ್ಥ ಜೀವನವನ್ನು ಅವರು ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ಅಲೆಮಾರಿ ಜೀವನವನ್ನೇ ರೂಢಿಮಾಡಿಕೊಂಡಿದ್ದರು. ಕೊನೆ ಕೊನಗೆ ಸಿಡುಕಿನ ವ್ಯಕ್ತಿಯಾಗಿದ್ದರೂ ಬಾಲ್ಯದಲ್ಲಿ ಹಾಸ್ಯ ಪ್ರವೃತ್ತಿಯವರಾಗಿದ್ದರು. ಅವರಿಗೆ ಇಂಪಾದ ಕಂಠಶ್ರೀ ಇದ್ದು, ಮದುವೆಯ ಹಾಡುಗಳನ್ನು ಕಟ್ಟಿಹಾಡುತ್ತಿದ್ದರಂತೆ. ಹೆಣ್ಣು ಮಕ್ಕಳ ಕೈಲಿ ಕುಹಕದ ಹಾಡು ಕಟ್ಟಿ ಹೇಳಿಸಿ ಗುಲ್ಲೆಬ್ಬಿಸುತ್ತಿದ್ದರಂತೆ. ಬೀಗರ ಹಾಡು ಕಟ್ಟಿ ಮರೆಯಲ್ಲಿ ಕುಳಿತು ಹಾಡುತ್ತಿದ್ದರಂತೆ. ಆದರೆ ಇಂಥ ವ್ಯಕ್ತಿ ಕೊನೆ ಕೊನೆಯಲ್ಲಿ ಸಹಜ ಮಾತನ್ನಾಡಿದರೂ ರೇಗಿಕೊಳ್ಳುವ ಸ್ಥಿತಿಗೆ ಬಂದಿದ್ದರೆನ್ನುವುದು ಗಮನಿಸಬೇಕಾದ ಅಂಶ. ಹೀಗಾಗಿ, ಆ ಕಾಲದಲ್ಲಿ ಇವರ ಸಹವಾಸದಲ್ಲಿ ಬಂದವರೆಲ್ಲ ಒಂದಲ್ಲ ಒಂದು ರೀತಿಯ ಕಷ್ಟಕ್ಕೆ ಸಿಲುಕಿಕೊಂಡವರೇ. ಸಂಸರಿಗೆ ಯಾವಾಗಲೂ ಹಣದ ಅಡಚಣೆ ಇರುತ್ತಿತ್ತು. ಆದರೆ ಪರಿಚಯಸ್ಥರು ಯಾರನ್ನಾದರೂ ಅವರು ಕೇಳಿದರೆ, ಕೇಳಿದಷ್ಟು ಮಾತ್ರ ಹಣಕೊಡಬೇಕು. ಇಲ್ಲವೆಂದು ಕಡಿಮೆ ಕೊಟ್ಟರೂ ಕಷ್ಟ, ಪಾಪ ಕೆಲವು ದಿನ ಸುಖವಾಗಿ ಜೀವಿಸಲಿ ಎಂದು ಹೆಚ್ಚು ಹಣಕೊಟ್ಟರೂ ಕಷ್ಟ. ಸಲಿಗೆ ತೋರಿಸಿದರೆ, ಹೆಚ್ಚು ವಿಚಾರಿಸಿಕೊಂಡರೆ, ಸಿ.ಐ.ಡಿ ಕೆಲಸ ಮಾಡುತ್ತಿದ್ದಾರೆಂದು ಗದರಿಸಿ ದೂರ ತಳ್ಳಿಬಿಡುತ್ತಿದ್ದರು. ತಮ್ಮ ಪಾಡಿಗೆ ತಾವು ಉಳಿದು ಬಿಟ್ಟರೆ ತನ್ನನ್ನು ಕಂಡರೆ ಅಸೂಯೆ, ಪ್ರತಿಷ್ಠೆ ಎಂದು ಬಗೆಯುತ್ತಿದ್ದರು. ಆ ಕಾಲದ ಅನೇಕ ಸಾಹಿತಿಗಳಿಗೆ ಅವರ ಸಹವಾಸದ ಅನುಭವವಾಗಿತ್ತು. ಗೋವಿಂದ ಪೈ, ಪಂಜೆ ಮಂಗೇಶರಾಯ, ಜಿ.ಪಿ, ರಾಜರತ್ನಂ,ಎನ್‌.ಎಸ್‌. ಸೀತಾರಾಮಶಾಸ್ತ್ರಿ, ಆನಂದ (ಎ. ಸೀತರಾಂ) ಮುಂತಾದವರು ಸಂಸರೊಂದಿಗಿನ ತಮ್ಮ ಅನುಭವವನ್ನು ದಾಖಲಿಸಿದ್ದಾರೆ. ನಿಟ್ಟೂರು ಶ್ರೀನಿವಾಸರಾಯರು, ಎಸ್‌.ಜಿ. ಶಾಸ್ತ್ರಿಗಳು, ಜಿ.ಪಿ. ರಾಜರತ್ನಂ ಮುಂತಾದವರಿಗೆ, ಪ್ರತಿಭಾವಂತರಾದ ಹಾಗೂ ಅರಮನೆಯ ಒಳಹೊರಗನ್ನು ಕೂಲಂಕುಷವಾಗಿ ಬಲ್ಲ ಸಂಸರನ್ನು ಹೇಗಾದರೂ ಮಾಡಿ ನಾಟಕ ಸಾಹಿತ್ಯ ರಚನೆಯಲ್ಲಿ ತೊಡಗಿಸಬೇಕು, ಮೈಸೂರು ಅರಸರ ಚರಿತ್ರೆಯನ್ನು ನಾಟಕವಾಗಿಸಬೇಕು, ಎಂಬ ತೀವ್ರವಾದ ಹಂಬಲವಿತ್ತು. ಅದಕ್ಕಾಗಿಯೇ ತಮ್ಮ ಕೈಲಾದ ಸಹಾಯ ಮಾಡಲು, ಸಂಸರಿಗೆ ಆರ್ಥಿಕ ನೆರವನ್ನೀಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಆದರೆ ಸಂಸರ ಮೊಂಡುತನ, ಸಂಶಯ ಪ್ರವೃತ್ತಿ ಅವರ ಆಶೆಯನ್ನು ಈಡೇರಿಸಗೊಡಲಿಲ್ಲ. ‘ಮಂತ್ರಶಕ್ತಿ’ ನಾಟಕದ ಹಸ್ತಪ್ರತಿಯನ್ನು ದೇವರಾಜ ಬಹಾದ್ದೂರ್ ಪಾರಿತೋಷಕದ ಸ್ಪರ್ಧೆಗೆ ಕಳಿಸಬೇಕೆಂದು ಆನಂದರು ಪ್ರಯತ್ನಿಸಿದರೂ ಸಂಸರು ಅದನ್ನು ಆಗುಗೊಡಲಿಲ್ಲ.

ಇಂಥ ವಿಚಿತ್ರ ಸನ್ನಿವೇಶಗಳ ಮಧ್ಯೆಯೂ ಸಂಸರ ನಾಟಕ ರಚನೆಯಲ್ಲಿ ತೊಡಗಿದ್ದುದು ಒಂದು ವಿಶೇಷ. ಇವನ್ನೆಲ್ಲ ಮೀರಿ ಬಾಳಲು ಅವರು ನಾಟಕ ರಚಿಸುತ್ತಿದ್ದರೋ ಅಥವಾ ನಾಟಕ ರಚಿಸುವಾಗ ಮೈಸೂರು ಅರಮನೆ ಒಳಡಾಳಿತ, ಯುದ್ಧ, ಪಿತೂರಿ ಮುಂತಾದವುಗಳಿಗೆ ಸಂಬಂಧಿಸಿದ ಮಾಹಿತಿಗಳ ಸಂಗ್ರಹದಿಂದ, ಸಂತತವಾಗಿ ಮನಸ್ಸನ್ನು ಇಂಥ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದರಿಂದ ಅವರ ವರ್ತನೆ ಆ ರೀತಿ ಆಗುತ್ತಿತ್ತೋ ತಿಳಿಯದು. ಆದರೆ ಅಸಾಧಾರಣ ಪ್ರತಿಭೆಯ ವ್ಯಕ್ತಿ ಎಂಬುದರಲ್ಲಿ ಸಂಶಯವಿಲ್ಲ. ಅಧಿಕೃತ ಮಾಹಿತಿ ಸಂಗ್ರಹಗಳಿಗಾಗಿ ಅವರು ಮೈಸೂರಿನ ಓರಿಯಂಟಲ್‌ರಿಸರ್ಚ ಇನಸ್ಟಿಟ್ಯೂಟ ಮತ್ತು ಅರಮನೆಯ ಸರಸ್ವತಿ ಭಂಡಾರಗಳನ್ನು ಸಂಪೂರ್ಣ ಬಳಸಿಕೊಂಡಿರುವುದಲ್ಲದೇ ಮೈಸೂರು ಅರಸರ ಇತಿಹಾಸವನ್ನು ಕುರಿತು ರಚಿತವಾಗಿರುವ ಗ್ರಂಥಗಳನ್ನೆಲ್ಲ ಪರಾಮರ್ಶಿಸಿದ್ದಾರೆ. ‘ವಂಶಾವಳಿ’ ‘ವಂಶರತ್ನಾಕರ’ ‘ಕಂಠೀರವನರಸರಾಜವಿಜಯ’ ‘ಚಿಕ್ಕದೇವರಾಜ ವಿಜಯ’ ‘ರಾಜಾವಳೀಕತೆ’ ‘ಕೆಳದಿನೃಪ ವಿಜಯ’ ಮುಂತಾದಚಾರಿತ್ರಿಕ ಕೃತಿಗಳನ್ನಲ್ಲದೇ ಮೈಸೂರು ಗೆಜೆಟಿಯರ್, ‘ಎಪಿಗ್ರಾಫಿಕಾ ಕರ್ನಾಟಿಕಾ’ ‘ಆರ್ಕ್ಯಾಲಾಜಿಕಲ್‌ರಿಪೋರ್ಟ್ಸ,’ ವಿಲ್ಕನ ‘ಮೈಸೂರಿನ ಇತಿಹಾಸ’ ಮುಂತಾದ ಅನೇಕ ಆಕರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ತಮ್ಮ ಅಲೆಮಾರಿ ಜೀವನದಲ್ಲಿಯೂ ಮೈಸೂರಿಗೆ ಆಗಾಗ ಭೆಟ್ಟಿ ನೀಡಿ, ಹೆಚ್ಚಿನ ಸಮಯವನ್ನು ಲೈಬ್ರರಿಗಳಲ್ಲಿ ಕಳೆಯುತ್ತಿದ್ದರೆಂದು ಸ್ನೇಹಿತರು ಹೇಳುತ್ತಾರೆ.

ಸಂಸರ ಹಸ್ತಾಕ್ಷರ ತುಂಬಾ ಆಕರ್ಷಕವಾದುದು. ಇಂಗ್ಲೀಷೇ ಆಗಿರಲಿ, ಕನ್ನಡವೇ ಆಗಿರಲಿ, ಮುದ್ದಾದ ಅಕ್ಷರಗಳು ಪೂರ್ಣತೆಯನ್ನು ಬಯಸುವ ವ್ಯಕ್ತಿ ಎಂಬುದನ್ನು ಸಾರಿ ಹೇಳುತ್ತಿದ್ದವು. ಅವರು ಜ್ಯೋತಿಷ, ಸಾಮುದ್ರಿಕ, ರಮಲ ಶಾಸ್ತ್ರವನ್ನು ಕಲಿತವರು. ಕರಾರುವಾಕ್ಕಾಗಿ ಎಲ್ಲವನ್ನೂ ಹೇಳುತ್ತಿದ್ದರಂತೆ.

ಸಂಸರಿಗೆ ಯಾವ ಧರ್ಮದಲ್ಲಿಯೂ ನಿಜವಾದ ನಂಬಿಕೆ ಇರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಧರ್ಮಗಳಿಗೆ ಅಂದರೆ ಒಮ್ಮೆ ಇಸ್ಲಾಂ. ಒಮ್ಮೆ ಕ್ರಿಶ್ಚಿಯನ್‌ಮತ್ತೊಮ್ಮೆ ಬೌದ್ಧಧರ್ಮಕ್ಕೆ ಪರಿವರ್ತನೆ ಹೊಂದಬೇಕೆಂದು ಮನಸ್ಸು ಮಾಡಿದ್ದರೂ ಹಾಗೆ ಮತಾಂತರ ಹೊಂದಲಿಲ್ಲ. ಸಾಯುವಾಗಂತೂ ‘ಯಾವ ಧರ್ಮದಲ್ಲಿಯೂ ನನಗೆ ನಂಬಿಕೆ ಇಲ್ಲ. ನನ್ನ ಶವವನ್ನು ಬಯಲಿನಲ್ಲಿ ಸುಟ್ಟು ಬಿಡಿ. ನಾಲ್ಕು ದಿಕ್ಕಿಗೂ ಗಾಳಿಯಲ್ಲಿ ನನ್ನ ಬೂದಿ ಚದುರಿ ಹೋಗಲಿ’ ಎಂದು ನಿರೀಶ್ವರವಾದಿಗಳಂತೆ ಬರೆದಿಟ್ಟು ಸತ್ತರು.

ಸಂಸರು ಕೆಲವೊಮ್ಮೆ ಹಣಕ್ಕಾಗಿ ತಮ್ಮ ಹಸ್ತ ಪ್ರತಿಗಳನ್ನು ಮಾರುತ್ತಿದ್ದರು. ಅಥವಾ ಒತ್ತೆ ಇಡುತ್ತಿದ್ದರು. ನಿಟ್ಟೂರು ಶ್ರೀನಿವಾಸರಾಯರಿಗೆ ತಮ್ಮ ‘ಮಂತ್ರಶಕ್ತಿ’ ನಾಟಕವನ್ನು ಮಾರಿದ ಕತೆ ಸ್ವಾರಸ್ಯಕರವಾಗಿದೆ. ಜಿ.ಪಿ. ರಾಜರತ್ನಂ ಅವರು ಸಂಸರನ್ನು ಮೊಟ್ಟಮೊದಲು ನೋಡಿದ್ದು, ಅವರು ಅಂಗಡಿ ಮಾಲಿಕರೊಬ್ಬರಿಗೆ ಹಸ್ತಪ್ರತಿಯೊಂದನ್ನು ಮಾರಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿಯೇ. ಕೆಲವು ಬಾರಿ ಒಪ್ಪಂದವಾದ ಮೇಲೂ ಸಂಸರು ಹಸ್ತಪ್ರತಿಯನ್ನು ಹಿಂದಕ್ಕೆಕ ಒಯ್ದುದುಂಟು. ಸಂಸರು ಒಟ್ಟು ಇಪ್ಪತ್ಮೂರು ನಾಟಕಗಳನ್ನು ಬರೆದಿದ್ದಾರೆನ್ನಲಾಗುತ್ತಿದ್ದು. ನಮಗೆ ದೊರೆತಿದ್ದು ಆರು ಮಾತ್ರ. ಉಳಿದವನ್ನು ಗಿರವಿ ಇಟ್ಟು ಮರೆತು ಕಳೆದುಕೊಂಡಿರಬಹುದು ಅಥವಾ ಯಾರ ಮೇಲಾದರೂ ಕೋಪಗೊಂಡು ಸುಟ್ಟು ಅಥವಾ ಹರಿದು ಹಾಕಿರಬಹುದು. ಅಥವಾ ಬರೆಯುತ್ತೇನೆಂದು ಟಿಪ್ಪಣೆಮಾಡಿಟ್ಟುಕೊಂಡು ಬರೆಯದೆಯೂ ಇದ್ದಿರಬಹುದು. ಅವರು ಅಷ್ಟೂ ನಾಟಕಗಳನ್ನು ರಚಿಸಿ, ಅವು ಈಗ ಇಲ್ಲವಾಗಿದ್ದಲ್ಲಿ ಕನ್ನಡ ನಾಟಕ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎನ್ನಬಹುದು. ಜಿ.ಪಿ. ರಾಜರತ್ನಂ ನೀಡಿರುವ ೨೩ ನಾಟಕಗಳ ವಿಷಯ ವಿವರಗಳನ್ನು ಓದಿದರೆ, ಆ ನಾಟಕಗಳಿಂದ ಮೈಸೂರು ಅರಸರ ರಾಜಕೀಯ ಸಾಂಸ್ಕೃತಿಕ ಜೀವನದ ಸ್ವರೂಪ ಸಮಗ್ರವಾಗಿ ದೊರೆಯುತ್ತಿತ್ತೆಂದು ಅನ್ನಿಸುತ್ತದೆ. ಅಂತ ಒಂದು ಲಾಭ ಸದ್ಯಕ್ಕೆ ಇಲ್ಲವಾದರೂ ಲಭ್ಯವಿರುವ ಆರು ನಾಟಕಗಳಾದರೂ ಮೈಸೂರು ಅರಸರ ಕಾಲದ ಸಾಂಸ್ಕೃತಿಕ ಜೀವನವನ್ನು ಅರಿಯಲು ಸಹಾಯ ಮಾಡುವಂತಿವೆ. ಸಂಸರ ಆಪಾರ ಶ್ರಮದಿಂದ ಮತ್ತೆಲ್ಲೂ ದೊರೆಯದ ಆ ಕಾಲದ ಜನ ಜೀವನದ ವಿಪುಲ ಸಾಮಗ್ರಿ ಅವುಗಳಲ್ಲಿ ಹುದುಗಿದೆ.