ಕಳೆದ ಆರು-ಏಳು ದಶಕಗಳ ಕನ್ನಡ ಕಾವ್ಯ, ಅಧ್ಯಯನದ ದೃಷ್ಟಿಯಿಂದ ಗುರುತಿಸಬಹುದಾದ, ನವೋದಯ, ಪ್ರಗತಿಶೀಲ ನವ್ಯ, ದಲಿತ-ಬಂಡಾಯಗಳೆಂಬ ಸಾಹಿತ್ಯಕ ಚಳುವಳಿಗಳ ಮೂಲಕ ತನ್ನ ನಿರಂತರತೆಯನ್ನು ಪ್ರಕಟಿಸಿಕೊಂಡಿದೆ. ಈ ದಿನ ಆ ಮಾತುಗಳನ್ನು ಕುರಿತು, ಅಂದಂದಿನ ಸಾಹಿತ್ಯ ಚಳುವಳಿಗಳಲ್ಲಿನ ಸಂದರ್ಭದ ಹಾಗೆ ಯಾರೂ ತಲೆ ಕೆಡಿಸಿಕೊಳ್ಳಲಾರರು. ಆದರೆ ಆ ಒಂದೊಂದು ಸಾಹಿತ್ಯ ಚಳುವಳಿಯಿಂದ ರೂಪುಗೊಂಡ ಬರವಣಿಗೆಯ ಕ್ರಮಗಳು ಅಥವಾ ಸಂಪ್ರದಾಯಗಳು, ಒಂದು ಮತ್ತೊಂದಕ್ಕೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಗಳಿಂದಾಗಿಯೆ ಹೊಸಗನ್ನಡ ಕಾವ್ಯ ವೈವಿಧ್ಯತೆಯನ್ನೂ ಚಲನಶೀಲತೆಯನ್ನೂ ಪಡೆದುಕೊಂಡಿದೆ. ಈ ಹಲವು ಸಾಹಿತ್ಯ ಚಳುವಳಿಗಳು ಅಂದಂದಿನ ಸಂದರ್ಭದ ವೇಗವರ್ಧಕಗಳಂತೆ ವರ್ತಿಸಿರುವುದಲ್ಲದೆ, ಅಂದಂದಿನ ಸಾಹಿತ್ಯದ ತಾತ್ವಿಕ ಹಿನ್ನೆಲೆಯನ್ನೂ, ಸಾಹಿತ್ಯ ತತ್ವಗಳನ್ನು ಕುರಿತ ಚರ್ಚೆಯನ್ನೂ ಹುಟ್ಟಿಸುವುದರ ಮೂಲಕ, ಸೃಜನಾತ್ಮಕ ಸಾಹಿತ್ಯದ ಜತೆಗೆ ಸಾಹಿತ್ಯ ವಿಮರ್ಶೆಯ ಪರಂಪರೆಯೊಂದನ್ನೂ ಸಮಾನಂತರವಾಗಿ ಬೆಳೆಯಿಸಿವೆ. ಇದೀಗ ಈ ಎಲ್ಲ ಸಾಹಿತ್ಯ ಚಳುವಳಿಗಳ ಅಬ್ಬರ ತಣ್ಣಗಾಗಿ, ಒಂದು ವಸ್ತುನಿಷ್ಠ ನೆಲೆಗೆ ನಾವು ನಿಂತಿರುವ ಇಂದಿನ ಸಂದರ್ಭದಲ್ಲಿ, ಈ ಎಲ್ಲ ಸಾಹಿತ್ಯ ಚಳುವಳಿಗಳನ್ನೂ, ಅವುಗಳ ಕೊಡುಗೆಗಳನ್ನೂ ಗಂಭೀರವಾಗಿ ಸಮೀಕ್ಷಿಸುವ ಅಗತ್ಯವಿದೆ.

ಹೊಸಗನ್ನಡ ಕಾವ್ಯದ ಮೊದಲ ಉತ್ಕರ್ಷಕಾಲವನ್ನು ಈ ದಿನ ನಾವು ನವೋದಯ ಸಾಹಿತ್ಯ ಚಳುವಳಿ ಎಂದು ಗುರುತಿಸುತ್ತೇವೆ. ಈ ಕಾಲದ ಕಾವ್ಯವನ್ನು ‘ನವೋದಯಕಾವ್ಯ’ ಎಂದು ಕರೆದದ್ದು ಈಚೆಗೆ, ಬಹುಶಃ ನವ್ಯ ಸಾಹಿತ್ಯ ಚಳುವಳಿ ಪ್ರಾರಂಭವಾದ ಕಾಲಕ್ಕೆ. ಇಪ್ಪತ್ತರ ದಶಕದಲ್ಲಿ ಪ್ರಾರಂಭವಾಗಿ ನಲವತ್ತು-ಐವತ್ತನೆ ದಶಕದ ವೇಳೆಗೆ ಪ್ರಕರ್ಷಾವಸ್ಥೆಯನ್ನು ತಲುಪಿದ ಈ ಕಾಲದ ಕಾವ್ಯವನ್ನು ‘ಹೊಸಗನ್ನಡ ಕಾವ್ಯ’ ಎಂದು, ಆ ಕಾಲದ ಸಾಹಿತ್ಯವನ್ನು-ಅದು ಕಾವ್ಯವಾಗದಲಿ, ಕತೆಯಾಗಲಿ, ಕಾದಂಬರಿಯಾಗಲಿ-‘ಹೊಸಗನ್ನಡ ಸಾಹಿತ್ಯ’ವೆಂದೂ ಕರೆಯಲಾಗುತ್ತಿತ್ತು. ಆದರೆ ೧೯೫೦ ವೇಳೆಗೆ ನವ್ಯಕಾವ್ಯ ತನ್ನನ್ನು ತಾನು ಕನ್ನಡ ಸಾಹಿತ್ಯ ಪರಿಸರದಲ್ಲಿ ನೆಲೆಗೊಳಿಸಿಕೊಳ್ಳಲು ಹವಣಿಸುತ್ತಿದ್ದಾಗ, ತಮಗೆ ತತ್‌ಕ್ಷಣಕ್ಕೆ ಹಿಂದಿನ ಹೊಸಗನ್ನಡ ಕಾವ್ಯವನ್ನು ನವ್ಯ ಕಾವ್ಯ ಚಳುವಳಿಯ ವಕ್ತಾರರು, ಇದ್ದಕ್ಕಿದ್ದ ಹಾಗೆ, ‘ರೊಮ್ಯಾಂಟಿಕ್ ಕಾವ್ಯ’ ಎಂದೂ ‘ರಮ್ಯ ಕಾವ್ಯ’ ಎಂದೂ ಕರೆಯತೊಡಗಿದರು. ಈ ನವ್ಯರು, ತಮಗೆ ಸಮೀಪಕಾಲದ ಹೊಸಗನ್ನಡ ಕಾವ್ಯವನ್ನು ‘ರೊಮ್ಯಾಂಟಿಕ್ ಕಾವ್ಯ’ ಎಂದು ಕರೆದದ್ದು ಆದರ ಮೇಲಿನ ಗೌರವದಿಂದ ಖಂಡಿತ ಅಲ್ಲ. ಹಾಗೆ ಅವರು ಕರೆದದ್ದು, ಹೊಸಗನ್ನಡ ಕಾವ್ಯ ಪಶ್ಚಿಮದ ರೊಮ್ಯಾಂಟಿಕ್ ಕವಿಗಳ ಕಾವ್ಯದ ಅನುಕರಣೆ ಹಾಗೂ ಅನುಸರಣೆಯಾಗಿದೆ ಎಂಬ ತಪ್ಪು ಕಲ್ಪನೆಯಿಂದ ಅಥವಾ ಆ ತಪ್ಪು ಕಲ್ಪನೆಯನ್ನು ತಿಳಿಯದವರಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಎಂದು ಕಾಣುತ್ತದೆ. ಹೊಸಗನ್ನಡ ಕಾವ್ಯವನ್ನು, ಹೀಗೆ ರೊಮ್ಯಾಂಟಿಕ್ ಕಾವ್ಯ ಎಂದು ಕರೆದ ಜನ, ತಾವು ಯಾಕೆ ಹಾಗೆ ಕರೆದೆವೆಂಬುದನ್ನಾಗಲೀ, ರೊಮ್ಯಾಂಟಿಕ್ ಎಂಬ ಪದ ಏನೇನನ್ನು ಒಳಗೊಳ್ಳುತ್ತದೆ ಎಂಬುದನ್ನಾಗಲೀ ವಿಚಾರಪೂರ್ವಕವಾಗಿ ತಾವೇ ತಿಳಿದುಕೊಳ್ಳಲು ಅಥವಾ ತಿಳಿಯಪಡಿಸಲು ಯಾವುದೇ ಪ್ರಯತ್ನ ಮಾಡದೆ, ತಮಗೆ ತತ್ ಪೂರ್ವದ ಹೊಸಗನ್ನಡ ಕಾವ್ಯ ಅನ್ನುವುದು ನಿವಾರಿಸಿಕೊಳ್ಳಬಹುದಾದ ಒಂದು ಅವಲಕ್ಷಣವೆಂಬಂತೆ ನಡೆದುಕೊಂಡರು. ಈ ಒಂದು ಧೋರಣೆಗೆ ತೀವ್ರವಾದ ಪ್ರತಿಕ್ರಿಯೆ ಎಂಬಂತೆ, ‘ನವೋದಯ’ ಎಂಬ ಪದವನ್ನು ಬಳಸಿ, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಅನುಸರಣವಾಗಲೀ, ಅನುಕರಣೆಯಾಗಲೀ ಅಲ್ಲದ ಹೊಸಗನ್ನಡ ಕಾವ್ಯಕ್ಕೆ ನವೋದಯ ಕಾವ್ಯ, ಎಂಬ ಹೆಸರನ್ನು ಕೊಟ್ಟವರು ನಮಗೆ ತಿಳಿದ ಮಟ್ಟಿಗೆ ಶ್ರೀ ಕುವೆಂಪು ಅವರು. ‘ನವೋದಯ’ ಎಂಬ ಈ ಪದ, ಹತ್ತೊಂಬತ್ತು-ಇಪ್ಪತ್ತನೇ ಶತಮಾನದಲ್ಲಿ ಪಶ್ಚಿಮದ ಪ್ರೇರಣೆಯಿಂದ ಇಡೀ ಭಾರತೀಯ ಪರಿಸರದಲ್ಲಿ ಯಾವ ಒಂದು ಪುನರುಜ್ಜೀವನ ಅಥವಾ ಬದಲಾವಣೆ ಕಾಣಿಸಿಕೊಂಡಿತೋ ಅದನ್ನು ಸಮರ್ಪಕವಾಗಿ ಸೂಚಿಸುವ ಪದವಾಗಿದೆ. ‘ನವೋದಯ’ ಎನ್ನುವುದು ವಿಶಾಲಾರ್ಥದಲ್ಲಿ, ಪಾಶ್ಚಿಮಾತ್ಯ ವಸಾಹತುಷಾಹಿ ಹಾಗೂ ಅದರ ಪರಿಣಾಮವಾದ ಇಂಗ್ಲಿಷ್ ಶಿಕ್ಷಣದಿಂದ, ಇಡೀ ಭಾರತೀಯ ಜೀವನದಲ್ಲಾದ, ಹೊಸ ವಿಚಾರಗಳ ಉತ್ಕರ್ಷವನ್ನು ಹೇಗೋ ಹಾಗೆ, ಇಲ್ಲಿನ ಹಳೆಯ ಹಾಗೂ ಹೊಸ ಮನೋಧರ್ಮಗಳ ಘರ್ಷಣೆಯ ಪರಿಣಾಮವನ್ನು ಸೂಚಿಸುತ್ತದೆ. ಭಾರತದ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಒಟ್ಟಾರೆಯಾಗಿ ಸಾಂಸ್ಕೃತಿಕ ಪುನರುಜ್ಜೀವನವನ್ನು ‘ನವೋದಯ’ ಎಂಬ ಪದ ಸೂಚಿಸುತ್ತದೆ. ಈ  ಭಾರತೀಯ ನವೋದಯ, ಎಲ್ಲಾ ಪ್ರಾದೇಶಿಕ ಭಾಷಾ ಸಾಹಿತ್ಯದ ಮೇಲೆ ಉಂಟುಮಾಡಿದ ಪ್ರಭಾವದಿಂದಾಗಿ ಅಲ್ಲಲ್ಲಿನ ಸಾಹಿತ್ಯವೂ ಹೊಸ ಹುಟ್ಟನ್ನು ಪಡೆದುಕೊಂಡಿತು. ಇದರಿಂದಾಗಿ ಪಶ್ಚಿಮದ, ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಪ್ರೇರಣೆಯಿಂದ ಭಾರತದ ವಿವಿಧ ಪ್ರಾದೇಶಿಕ ಭಾಷಾ ಸಾಹಿತ್ಯಗಳು, ತಮ್ಮೊಳಗಿನ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ಸತ್ವಕ್ಕೆ ಅನುಸಾರವಾಗಿ ‘ನವೋದಯ’ವನ್ನು ಪಡೆದುಕೊಂಡವು. ಹಾಗೆ ನವೋದಯಕ್ಕೆ ಒಳಗಾದ ಸಾಹಿತ್ಯದಲ್ಲಿ ಕನ್ನಡವೂ ಒಂದು. ಪಶ್ಚಿಮದ ಸಾಹಿತ್ಯದ ಪ್ರೇರಣೆಯಿಂದ ಮೊಟ್ಟಮೊದಲಿಗೆ ಬದಲಾದ ಈ ಪುನರುಜ್ಜೀವನ ಕಾಲದ ಸತ್ವವನ್ನು ಭಾರತದ ಪ್ರತಿಯೊಂದು ಭಾಷಾ ಸಾಹಿತ್ಯವೂ ಸ್ವೀಕರಿಸಿದಾಗ, ಬದಲಾದ ಸಾಹಿತ್ಯವನ್ನು ನಿರ್ದೇಶಿಸಲು, ಭಾರತದ ವಿವಿಧ ಪ್ರಾದೇಶಿಕ ಸಾಹಿತ್ಯಗಳು ಬೇರೆ ಬೇರೆಯ ಪಾರಿಭಾಷಿಕಗಳನ್ನು ಬಳಸಿವೆ. ಮಲೆಯಾಳಂ ಸಾಹಿತ್ಯ ‘ಕಾಲ್ಪನಿಕಮ್’ ಎಂಬುದನ್ನೂ; ಗುಜರಾತಿ ಸಾಹಿತ್ಯ ‘ಮಸ್ತ್’ ಎಂಬುದನ್ನೂ; ಅಸ್ಸಾಮೀ ಸಾಹಿತ್ಯ ‘ನವನ್ಯಾಸ್’ ಎಂಬುದನ್ನೂ; ತೆಲುಗು ಸಾಹಿತ್ಯ ‘ಭಾವ ಕವಿತ್ವ’ ಎಂಬುದನ್ನೂ; ತಮಿಳು ಸಾಹಿತ್ಯ ‘ಕರ್ಪನೈ’ ಎಂಬುದನ್ನೂ; ಹಿಂದಿ, ಮರಾಠಿಗಳು ‘ಸ್ವಚ್ಛಂದ’  ಎಂಬುದನ್ನೂ ಬಳಸಿವೆ. ಇದರ ಜತೆಗೆ ಇನ್ನೂ ಕೆಲವು ಭಾಷೆಗಳು, ‘ರೊಮಾನಿ’ (ಪಂಜಾಬಿ, ಒರಿಯಾ)-ಎಂಬ ಪದಗಳನ್ನು ಬಳಸಿವೆ. ಅಂತೂ ಪಶ್ಚಿಮದ ಪ್ರೇರಣೆಯಿಂದ, ಹೊಸ ರೂಪಗಳನ್ನು ತಾಳಿದ ಭಾರತೀಯ ಪ್ರಾದೇಶಿಕ ಸಾಹಿತ್ಯಗಳು, ಹೊಸ ಸಾಹಿತ್ಯ ಚಳುವಳಿಗಳನ್ನು ಸೂಚಿಸಲು ನಿರ್ಮಿಸಿಕೊಂಡ ಈ ಪದಗಳಲ್ಲಿ ಒಂದು ಏಕರೂಪತೆಯಿಲ್ಲ. ಆದರೆ ಕನ್ನಡದಲ್ಲಿ, ಈ ಹೊಸ ಕಾವ್ಯವನ್ನು ಅವಿಚಾರಿತವಾಗಿ ‘ರೊಮ್ಯಾಂಟಿಕ್’ ಅಥವಾ ‘ರಮ್ಯ’ವೆಂದು ಕರೆಯಲು ಪ್ರಾರಂಭಿಸಿದ ಪದ್ಧತಿಯನ್ನು ನಿರಾಕರಿಸಿ, ಶ್ರೀ ಕುವೆಂಪು ಅದಕ್ಕೆ ‘ನವೋದಯ ಸಾಹಿತ್ಯ’ ಎಂದು ಕರೆದದ್ದು ಅತ್ಯಂತ ಸಮರ್ಪಕವಾಗಿದೆ ಮತ್ತು ಈ ಕಾಲದ ಕನ್ನಡೇತರ ಭಾರತೀಯ ಪ್ರಾದೇಶಿಕ ಭಾಷಾ ಸಾಹಿತ್ಯಗಳೆಲ್ಲಕ್ಕೂ ಸಲ್ಲುವ ಅರ್ಥವಂತಿಕೆಯನ್ನು ಪಡೆದುಕೊಂಡಿದೆ.

ಹಾಗೆ ನೋಡಿದರೆ, ಇಪ್ಪತ್ತರ ದಶಕದಿಂದ ಇಂದಿನವರೆಗೆ ಹೊಸಗನ್ನಡದಲ್ಲಿ ಗುರುತಿಸಬಹುದಾದ ಸಾಹಿತ್ಯ ಚಳುವಳಿಗಳೆಲ್ಲಾ, ಹೆಚ್ಚು ಕಡಿಮೆ ಪಶ್ಚಿಮದ ವಿವಿಧ  ಸಾಹಿತ್ಯ ಚಳುವಳಿಗಳಿಂದ ಪ್ರೇರಣೆ ಪಡೆದವುಗಳೇ ಆಗಿವೆ. ಹಾಗೆಂದ ಮಾತ್ರಕ್ಕೆ ಕನ್ನಡದಲ್ಲಿ ಮೂಡಿದ ಆಧುನಿಕ ಸಾಹಿತ್ಯವೆಲ್ಲವೂ, ಪಶ್ಚಿಮದ ಅನುಕರಣೆ ಅಥವಾ ಅನುಸರಣೆಯಾಗಿದೆಯೆಂದು ಅರ್ಥವಲ್ಲ. ನವೋದಯ ಸಾಹಿತ್ಯವನ್ನೇ ತೆಗೆದುಕೊಂಡರೆ, ನವೋದಯ ಮುಂಬೆಳಗಿನ ಸಮಸ್ಯೆಗಳೇನಿದ್ದರೂ, ಕನ್ನಡದಲ್ಲಿ ಆ ವೇಳೆಗೆ, ಸುಮಾರು  ಎರಡು ಶತಮಾನಗಳ ಕಾಲ ಸ್ಥಗಿತಗೊಂಡಿದ್ದ ಕನ್ನಡ ಕಾವ್ಯಕ್ಕೆ ಚಲನಶೀಲತೆಯನ್ನು ತಂದು ಹೊಸ ರೂಪಗಳನ್ನು ಆವಿಷ್ಕಾರ ಮಾಡುವುದು ಹೇಗೆ ಎನ್ನುವುದೇ ಆಗಿತ್ತು. ಈ ಪ್ರಯತ್ನದ ಪ್ರೇರಣೆಯಾಗಿ ವಿವಿಧ ಭಾರತೀಯ ಭಾಷೆಗಳಿಂದ ಹೇಗೋ ಹಾಗೆಯೆ ಇಂಗ್ಲಿಷ್ ಸಾಹಿತ್ಯದಿಂದಲೂ, ಕೃತಿಗಳನ್ನು ಭಾಷಾಂತರ ಮಾಡುವ ಕಾರ‍್ಯವೊಂದು ಭರದಿಂದ ನಡೆದಿತ್ತು. ಹಾಗೆಯೇ ಕನ್ನಡ ಕಾವ್ಯಭಾಷೆಯನ್ನು, ಅನುವಾದ ಪ್ರಯತ್ನಗಳ ಮೂಲಕ ಮುರಿದುಕಟ್ಟುವ ಪ್ರಯೋಗಗಳಲ್ಲಿ ನಿಜವಾದ ಸಫಲತೆ ಪ್ರಾಪ್ತವಾದದ್ದು ಶ್ರೀಯವರ ಇಂಗ್ಲಿಷ್ ಗೀತಗಳ ಮೂಲಕವೇ. ಶ್ರೀಯವರು, ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಕೆಲವು ಕವನಗಳನ್ನಾರಿಸಿಕೊಂಡು, ಅವುಗಳನ್ನು ಕನ್ನಡಕ್ಕೆ ತರುವ ಸೃಜನಾತ್ಮಕ ಅನುವಾದ ಪ್ರಯತ್ನಗಳಿಂದಾಗಿ, ಕನ್ನಡದಲ್ಲಿ ಅದುವರೆಗೂ ಇಲ್ಲದ, ಹಾಗೂ ಇಂಗ್ಲಿಷ್ ಕಾವ್ಯದಲ್ಲಿ ಮಾತ್ರ ಕಾಣುತ್ತಿದ್ದ ಆಕೃತಿಗಳು ಮತ್ತು ತತ್ಪರಿಣಾಮವಾಗಿ ರೂಪುಗೊಂಡ ಹೊಸ ಛಂದಸ್ಸಿನ ಲಯಗಳು, ಕನ್ನಡ ನವೋದಯಕ್ಕೆ ಕಾರಣವಾದವು. ಶ್ರೀಯವರ ಶಿಷ್ಯರಾದ ಶ್ರೀ ಕುವೆಂಪು, ಕೆ.ಎಸ್.ನ. ಮೊದಲಾದವರು ಮುಂದುವರಿಸಿದ ಕಾವ್ಯ ಪ್ರಯೋಗಗಳು, ಸ್ವಲ್ಪ ಮಟ್ಟಿಗೆ ಪಶ್ಚಿಮದ ಕವಿಗಳನ್ನು ನೆನಪಿಗೆ ತರುವಂತೆ ತೋರಿದರೂ, ಅವರಿಗೆ ಇದ್ದ ಭಾರತೀಯ ಸಾಹಿತ್ಯ ಪರಂಪರೆ ಹಾಗೂ ವೈಯಕ್ತಿಕ ಪ್ರಯೋಗ ಪರಿಣತಿ ಇವುಗಳು, ಈ ಹೊಸ ಕಾವ್ಯ ಈ ನೆಲದ್ದೆ ಹೊರತು ಬೇರೆ ಅಲ್ಲವೆಂಬುದನ್ನು ಖಚಿತಪಡಿಸಿದವು. ಇದೇ ಕಾಲದ ಇದೇ ಪರಿಸರದಲ್ಲಿ ಬರೆದ ಶ್ರೀ, ಪು.ತಿ.ನ. ಹಾಗೂ ಬೇಂದ್ರೆಯವರ ಕಾವ್ಯಗಳಂತೂ, ಯಾವುದೇ ಪಶ್ಚಿಮದ ಕವಿಗಳನ್ನು ನೆನಪಿಗೆ ತಾರದಷ್ಟು ಬೇರೆಯಾಗಿವೆ. ಪು.ತಿ.ನ. ಅವರ ಕಾವ್ಯದ ಮೂಲ ದ್ರವ್ಯ ಭಾರತೀಯ ಸಂಸ್ಕೃತಸಾಹಿತ್ಯ ಹಾಗೂ ಭಾಗವತ ಪರಂಪರೆಯಿಂದ ಬಂದುದಾಗಿದೆ. ಬೇಂದ್ರೆಯವರ ಕಾವ್ಯದ ಮಾದರಿಗಳನ್ನಂತೂ ಇಂಗ್ಲಿಷ್ ಕಾವ್ಯ ಸಂಪ್ರದಾಯದಲ್ಲಿ ಹುಡುಕುವುದು ವ್ಯರ್ಥ.  ಅವರ ಕವನಗಳ ಬೇರು ಇರುವುದು ಕನ್ನಡ ಜಾನಪದ ಹಾಗೂ ಕರ್ನಾಟಕದ ಸಂತ ಸಾಹಿತ್ಯ ಸಂಪ್ರದಾಯದಲ್ಲಿ. ಬೇಂದ್ರೆಯವರು, ತಮ್ಮ  ಗೆಳೆಯರ ಜತೆಗೆ ನಡೆಸಿದ ಜನಪದ ಗೀತೆಗಳ ಸಂಪಾದನಾಕಾರ್ಯ ಮತ್ತು ಪರಿಣಾಮವಾಗಿ ಅವರು ಪ್ರಕಟಿಸಿದ ‘ಗರತಿಯ ಹಾಡು’ ಮತ್ತು ‘ಮಲ್ಲಿಗೆ ದಂಡೆ’ ಎಂಬ ಸಂಕಲನದ ಹಿಂದಿರುವ ಈ ಪ್ರಯತ್ನ ಕನ್ನಡ ಜಾನಪದ ದೃಷ್ಟಿಯಿಂದ ಮಾತ್ರವಲ್ಲ, ಅವರ ಸ್ವಂತ ಕಾವ್ಯದ ಬೆಳವಣಿಗೆಯ ದೃಷ್ಟಿಯಿಂದಲೂ ಮಹತ್ವದ್ದಾಗಿತ್ತು. ಹೀಗಾಗಿ ಬೇಂದ್ರೆಯವರ ಕಾವ್ಯ ಅವರೇ ಹೇಳಿಕೊಂಡಿರುವಂತೆ, “ತುಂಗಭದ್ರೆಯ ಉತ್ತರಾಪಥದ ‘ದೇಶಿ’ಯ ಮಾರ್ಗವನ್ನು ಹುಡುಕುವ ಹಾಗೆಯೆ ಹುಟ್ಟಿಸುವ” (‘ಗರಿ’ ಸಂಗ್ರಹದ ಮುನ್ನುಡಿಯಲ್ಲಿ) ಉದ್ದೇಶದ್ದಾಗಿದೆ.ಇದರ ಜೊತೆಗೆ ಕನ್ನಡದ ಅನುಭಾವೀ ಹಾಗೂ ಸಂತ ಸಾಹಿತ್ಯದಿಂದ ಬೇಂದ್ರೆ ಪಡೆದುಕೊಂಡ ಪ್ರೇರಣೆಯೂ ದೊಡ್ಡದು. ಬೇಂದ್ರೆಯವರು ತಮ್ಮ ಕವನಗಳಲ್ಲಿ ‘ಅಂಕಿತ’ವನ್ನಾಗಿ ತಮ್ಮ ‘ಕಾವ್ಯನಾಮ’ವನ್ನು ಬಳಸುವ ಕ್ರಮವೂ ಇದನ್ನೇ ಸೂಚಿಸುತ್ತದೆ. ಕುವೆಂಪು ಅವರ ಕಾವ್ಯವಂತೂ, ಪಶ್ಚಿಮದ ಸಮಸ್ತ ಕಾವ್ಯ ಪ್ರಕಾರಗಳನ್ನು ಕನ್ನಡಕ್ಕೆ ತರುವ ಒಂದು ಸವಾಲಿನಂತೆ ತೋರಿದರೂ ಅವರ ಕಾವ್ಯ ಇಡೀ ಕನ್ನಡ ಸಾಹಿತ್ಯ ಪರಂಪರೆಯ ಭಾಷೆ ಹಾಗೂ ಛಂದಸ್ಸಿನ ಸತ್ವಗಳನ್ನು ಅನನ್ಯವಾದ ರೀತಿಯಲ್ಲಿ ಪುನರಭಿನಯಿಸುತ್ತದೆ; ಹಾಗೂ ಪುನರ್ಭವಗೊಳಿಸುತ್ತದೆ.

ಈ ಸಂಗತಿಗಳನ್ನು ಗಮನಿಸಿದರೆ, ಕನ್ನಡ ಕಾವ್ಯ ಕೇವಲ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದಿಂದ ಪ್ರೇರಣೆ ಪಡೆದದ್ದಲ್ಲ. ಅದಕ್ಕೂ ಮಿಗಿಲಾಗಿ ಅದರಲ್ಲಿ ಇಡೀ ಭಾರತೀಯವಾದದ್ದು, ಪ್ರಾದೇಶಿಕವಾದದ್ದು, ಹಳತು-ಹೊಸತು ಎಲ್ಲವೂ ಸಮಾವೇಶಗೊಂಡಿರುವುದು ಕಾಣುತ್ತದೆ. ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ನವರಲ್ಲಿಯೆ ನಾವು ಈ ‘ನವೋದಯ’ದ ನಿಜವಾದ ವ್ಯಾಖ್ಯಾನವನ್ನು ಕಾಣುತ್ತೇವೆ. ಅವರು, ಅಂದು ಬಳಸಿದ ಪದ ‘ಪುನರುಜ್ಜೀವನ’ ಅನ್ನುವುದು. ಅವರ ಮಾತಿನಲ್ಲಿ ಹೇಳುವುದಾದರೆ-

“ಪುನರುಜ್ಜೀವನ ಎಂದರೆ ಪುನರುತ್ಥಾನವಲ್ಲ. ಮೊದಲಿಗಿಂತಲೂ ಪ್ರಬುದ್ಧವಾದ ಆತ್ಮವಾಗಿ, ಹೆಚ್ಚು ಶಕ್ತಿಯಿಂದ, ಹೆಚ್ಚು ಮುಕ್ತಿಯಿಂದ ಕಾಣಿಸಿಕೊಳ್ಳುವುದು. ಪುನರುಜ್ಜೀವನವೆನ್ನುವುದು ಜೀರ್ಣೋದ್ಧಾರವಲ್ಲ. ಅನುಸರಣವಲ್ಲ, ಅನುಕರಣವಲ್ಲ. ಏನೋ ಒಂದು ಧೈರ್ಯದಿಂದ ಕೂಡಿದ ವಿಚಾರ. ಹೊಸ ನಿರ್ಮಾಣ. ಮರುಹುಟ್ಟು. ಆಳವಾದ ಸಮನ್ವಯ.” (ಶ್ರೀ ಸಾಹಿತ್ಯ: ಪು.೨೮೫).

ನವೋದಯದ ಲಕ್ಷಣವನ್ನು ಹಾಗೂ ನಿರ್ದೇಶನವನ್ನು ಇದಕ್ಕಿಂತ ಸೊಗಸಾಗಿ ವ್ಯಾಖ್ಯಾನಿಸಿದವರು ಇಲ್ಲ. ೧೯೩೫ ರಷ್ಟು ಹಿಂದೆಯೆ ಶ್ರೀಯವರು ವಿವರಿಸಿರುವ ಈ ಪುನರುಜ್ಜೀವನದ ಲಕ್ಷಣವನ್ನು, ೧೯೫೦ ವೇಳೆಗೆ ನೆಲೆನಿಂತ ಕಾವ್ಯಕ್ಕೆ ಅನ್ವಯಿಸಿ ನೋಡುವುದು ಅತ್ಯಂತ ಅಗತ್ಯವಾಗಿದೆ-ವಿಮರ್ಶೆಯ ದೃಷ್ಟಿಯಿಂದ.ಕುವೆಂಪು ಅವರು ‘ನವೋದಯ ಕಾವ್ಯ’ ಎಂದು ಕರೆದ ಕಾವ್ಯನಿರ್ಮಿತಿ, ಶ್ರೀ ಅವರ ಈ ವರ್ಣನೆಯನ್ನು ನಿಜ ಮಾಡಿದೆ.

ನವೋದಯದ ವಿಶೇಷತೆ ಎಂದರೆ, ಶ್ರೀ ಅವರು ಹೇಳುವ ಹಾಗೆ, “ಅನುಕರಣವಲ್ಲ, ಅನುಸರಣವಲ್ಲ. ಏನೋ ಒಂದು ಧೈರ್ಯದಿಂದ ಕೂಡಿದ ವಿಚಾರ. ಹೊಸ ನಿರ್ಮಾಣ. ಮರುಹುಟ್ಟು. ಆಳವಾದ ಸಮನ್ವಯ.” ಸೂತ್ರಪ್ರಾಯವಾದ ಈ ಒಂದೊಂದು ಮಾತೂ ದಾರ್ಶನಿಕನೊಬ್ಬನ ಮಂತ್ರಗಳಂತಿವೆ. ನಿಜವಾದ ಪುನರುಜ್ಜೀವನ, ಅನುಕರಣ ಅನುಸರಣದಿಂದ ಹುಟ್ಟುವುದಿಲ್ಲವೆಂದ ಮಾತ್ರಕ್ಕೆ, ತಮಗಿಂತ ಹಿಂದೆ ಇರುವ ಸಾಹಿತ್ಯ ಪರಂಪರೆಯ ಅರಿವು ಸಾಹಿತಿಗೆ ಇರಬಾರದೆಂದೇನೂ ಅಲ್ಲ. ನಿಜವಾದ ಪುನರುಜ್ಜೀವನ ನಡೆದು ಬಂದ ದಾರಿಯ ಕಡೆ ಕಣ್ಣನ್ನು ಹೊರಳಿಸದೆ ಇರುವ ಮನೋಧರ್ಮದಿಂದ ಹೊಮ್ಮುವುದಿಲ್ಲ; ಅದರ ಬದಲು “ಹಿರಿಯರು ಹೇಳಿದ ಮಾತೂ ಇರಲಿ. ನಾವೂ ವಿಚಾರ ಮಾಡೋಣ, ಅನ್ನುವುದೆ ಪುನರುಜ್ಜೀವನದ ಲಕ್ಷಣ” (ಶ್ರೀ ಸಾಹಿತ್ಯ ಪು. ೨೮೬)-ಎನ್ನುತ್ತಾರೆ ಶ್ರೀಯವರು. ಪುನರುಜ್ಜೀವನ ಅನ್ನುವುದು ಪರಂಪರೆಯ ಅನುಕರಣರಾಗಲಿ, ಅನುಸರಣವಾಗಲಿ ಅಲ್ಲ; ಅದರ ಅರಿವು ಮತ್ತು ಅದರ ಅರಿವನ್ನಿರಿಸಿಕೊಂಡೂ ಸ್ವತಂತ್ರವಾಗಿ ವಿಚಾರ ಮಾಡುವ ಸಾಮರ್ಥ್ಯ. ಈ ಕಾರಣದಿಂದಲೆ ನವೋದಯ ಸಾಹಿತಿಗಳು, ಪರಂಪರೆಯಿಂದ ತಾವು ಪಡೆಯಬಹುದಾದ ಸತ್ವದಿಂದ ಎಂದೂ ವಿಮುಖರಾಗಲಿಲ್ಲ. ಪರಂಪರೆಯನ್ನು ಕುರಿತು ಟಿ.ಎಸ್. ಇಲಿಯಟ್ ಮಾಡಿದ ವ್ಯಾಖ್ಯಾನವಾಗಲಿ, ಅದನ್ನು ಸೃಜನಶೀಲ ಸಾಹಿತಿ ಅರಗಿಸಿಕೊಳ್ಳುವುದು ಬಹು ಮುಖ್ಯವಾದ ಒಂದು ಸಾಂಸ್ಕೃತಿಕ ಜವಾಬ್ದಾರಿ ಎನ್ನುವ ಅವನ ನಿಲುವುಗಳಾಗಲಿ, ಸಾರ್ಥಕವಾದದ್ದು ನವೋದಯ ಕವಿಗಳಲ್ಲಿಯೆ ಹೊರತು ನವ್ಯಕವಿಗಳಲ್ಲಿ ಅಲ್ಲ, ಅನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ನವೋದಯ ಸಂದರ್ಭದಲ್ಲಿ ನಡೆದ ಹಳಗನ್ನಡ ಗ್ರಂಥಸಂಪಾದನಾ ಕಾರ್ಯಗಳಾಗಲೀ, ಜಗತ್ತಿನ ಎಲ್ಲ ಸಾಹಿತ್ಯಗಳ ತಿಳಿವಿನ ಹಿನ್ನೆಲೆಯಲ್ಲಿ ನಡೆದ ತೌಲನಿಕ ವಿಮರ್ಶೆಯ ಪ್ರಯತ್ನಗಳಾಗಲೀ, ನಿಜವಾದ ಹಾಗೂ ಸಮಗ್ರವಾದ ವ್ಯಕ್ತಿತ್ವ ನಿರ್ಮಾಣಕ್ಕೆ ಮತ್ತು ಸೃಜನಶೀಲತೆಗೆ ಪರಂಪರೆಯ ವ್ಯಾಪಕವಾದ ಅರಿವು ಎಷ್ಟೊಂದು ಅಗತ್ಯವಾದದ್ದು ಎನ್ನುವ ಎಚ್ಚರಕ್ಕೆ ಸಾಕ್ಷಿಯಾಗಿವೆ. ಇದೇ ಕಾರಣದಿಂದ, ನವೋದಯ ಕವಿಗಳು, ನವ್ಯಕವಿಗಳಂತೆ ತಮಗಿಂತ ಹಿಂದಿನ ಕಾವ್ಯ ಪರಂಪರೆಯನ್ನು ತಿರಸ್ಕಾರದಿಂದ ನೋಡುವುದರಿಂದ ಪ್ರಾಪ್ತವಾಗುವ ಸ್ಫೂರ್ತಿಯನ್ನು ಅವಲಂಬಿಸಿದವರಲ್ಲ. ನವೋದಯ ಕವಿಗಳಿಗೆ, ತಮಗಿಂತ ಹಿಂದಿನ ಕನ್ನಡ ಕಾವ್ಯ, ಎದುರಿಸಬೇಕಾದ ಒಂದು ಸವಾಲಾಗಿತ್ತೆ ಹೊರತು, ಒಂದು ಪ್ರತಿಪಕ್ಷವಾಗಿರಲಿಲ್ಲ. ಆದರೆ ನವ್ಯರಿಗಾದರೋ ನವೋದಯಕಾವ್ಯ ನಿವಾರಿಸಿಕೊಳ್ಳಬೇಕಾದ ಪ್ರತಿಪಕ್ಷವಾಗಿತ್ತು. ಅದುದರಿಂದಲೇ ನವೋದಯಕಾವ್ಯವನ್ನು ಆವಿಚಾರಿತವಾಗಿ ‘ರೊಮ್ಯಾಂಟಿಕ್ ಕಾವ್ಯ’ ಎಂದು ಕರೆದು, ರೊಮ್ಯಾಂಟಿಕ್ ಕಾವ್ಯದ ಸಮಸ್ತ ದೋಷ-ದೌರ್ಬಲ್ಯಗಳನ್ನೂ ‘ನವೋದಯಕಾವ್ಯ’ದಲ್ಲಿ ತೋರಿಸುವ ಬಗ್ಗೆ ಅವರು ಉತ್ಸಾಹಿತರಾದದ್ದು. ನವೋದಯಕಾವ್ಯದ ಸಾಧನೆಗಳನ್ನು ಕುರಿತು ನಾನು ಪ್ರಸ್ತಾಪಿಸಬೇಕಾಗಿಲ್ಲ. ಕಾವ್ಯದ ವಸ್ತುವನ್ನು ಐತಿಹಾಸಿಕ ಪೌರಾಣಿಕ ನೆಲೆಗಳಿಂದ, ದೈನಂದಿನ ಸರಳ ಸಾಧಾರಣದ ಹಾಗೂ ನಿಸರ್ಗ ರಮ್ಯತೆಯ ನೆಲೆಗೆ ಸ್ಥಳಾಂತರಿಸಿದ್ದು; ಅದುವರೆಗಿನ ಪರನಿಷ್ಠ ಕಾವ್ಯಧೋರಣೆ ಇಹನಿಷ್ಠ ಧೋರಣೆಗೆ ಪರಿವರ್ತಿತವಾದದ್ದು; ಹಿಂದಿನ ಮತ-ಧರ್ಮದ ಚೌಕಟ್ಟಿಗೆ ಬದ್ಧವಾದ ಧಾರ್ಮಿಕದೃಷ್ಟಿ, ತನ್ನ ‘ಇಷ್ಟ ದೈವ’ದ ಸಂರ್ಪಕವನ್ನು ಕಳಚಿಕೊಂಡು ಅಮೂರ್ತವೂ ಸಾರ್ವತ್ರಿಕವೂ ಆದ ಉದಾರ ಮಾನವತಾಧಾರ್ಮಿಕ ನಿಲುವನ್ನು ಪಡೆದುಕೊಂಡದ್ದು, ಮನುಷ್ಯ ಮತ್ತು ನಿಸರ್ಗಗಳ ಸಂಬಂಧವನ್ನು ಪ್ರತಿಪಾದಿಸುವ ಮೂಲಕ ಜೀವನ ಪ್ರೀತಿಯ ವಿಸ್ತರಣೆಯನ್ನು ಸಾಧಿಸಿದ್ದು; ಸಾಮಾನ್ಯ ಮನುಷ್ಯನೊಳಗಣ ಅಸಾಧಾರಣತೆಗಳನ್ನು ಎತ್ತಿ ಹಿಡಿದದ್ದು; ಕವಿಯೇ ಕಾವ್ಯದ ಕೇಂದ್ರವಾಗುತ್ತಾ ಅನುಭವಗಳ ಶೋಧನೆಗೆ ತೊಡಗಿದ್ದು, ಹಿಂದಿನ ಕಾವ್ಯಕ್ಕಿಂತ ಮತ್ತಷ್ಟು ದೂರಕ್ಕೆ ಅರಿವಿನ ಪರಿಧಿಯನ್ನು ವಿಸ್ತರಿಸಿದ್ದು-ನವೋದಯ ಕಾವ್ಯದ ಕೆಲವು ವಿಕ್ರಮಗಳಾಗಿವೆ.

ಕಡೆಯದಾಗಿ ಪಾಶ್ಚಿಮಾತ್ಯ ರೊಮ್ಯಾಂಟಿಕ್ ಕಾವ್ಯಪರಿಸರಕ್ಕೂ, ಕನ್ನಡ ನವೋದಯ ಕಾವ್ಯಪರಿಸರಕ್ಕೂ ಇರುವ ಬಹು ಮುಖ್ಯವಾದ ವ್ಯತ್ಯಾಸವೊಂದರ ಕಡೆ ಓದುಗರ ಗಮನವನ್ನು ಸೆಳೆಯಲು ಆಪೇಕ್ಷಿಸುತ್ತೇನೆ. ಅದೇನೆಂದರೆ, ಪಶ್ಚಿಮದಲ್ಲಿ ರೊಮ್ಯಾಂಟಿಕ್ ಕಾವ್ಯ, ಅಭಿಜಾತ ಮಹಾಕಾವ್ಯ ಪರಂಪರೆಯ ಮೃತ್ಯುಪತ್ರವನ್ನು ಪ್ರಕಟಿಸಿತು. ಕಾರಣ ಅದು ಪ್ರತಿಪಾದಿಸಿದ ಭಾವಗೀತಾ ಸಿದ್ಧಾಂತ ಮೂಲತಃ ಮಹಾಕಾವ್ಯಕ್ಕೆ ವಿರೋಧಿಯಾದದ್ದು. ಹೀಗಾಗಿ ಅಲ್ಲಿಂದ ಮುಂದೆ ಪಾರಂಪರಿಕ ಮಹಾಕಾವ್ಯ ನಿರ್ಮಿತಿಯೇ ನಷ್ಟವಾಯಿತು. ಆದರೆ ಭಾರತೀಯ ಪರಿಸರದಲ್ಲಿ, ಅದರಲ್ಲೂ ಕನ್ನಡದಲ್ಲಿ ನವೋದಯ ಕಾವ್ಯ ಮಹಾಕಾವ್ಯದ ಪ್ರಾದುರ್ಭಾವಕ್ಕೆ ಮಾರಕವಾಗಿಲಿಲ್ಲ. ಹಾಗೆ ನೋಡಿದರೆ ನವೋದಯ ಕಾವ್ಯ ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ತನ್ನ ಶಿಖರವನ್ನು ಮುಟ್ಟಿತು ಮತ್ತು ವಿನಾಯಕರ ‘ಭಾರತ ಸಿಂಧುರಶ್ಮಿ’, ಭೂಸನೂರುಮಠ ಅವರ ‘ಭವ್ಯಮಾನವ’ ಮತ್ತು ಪು.ತಿ.ನ. ಅವರ ‘ಶ್ರೀ ಹರಿಚರಿತೆ’ ಇಂಥ ಮಹಾಕಾವ್ಯ ನಿರ್ಮಿತಿಗಳ ಮೂಲಕ ತನ್ನ ಮಹತ್ವಾಕಾಂಕ್ಷೆಯನ್ನು ಮುಂದುವರಿಸಿಕೆಂಡು ಬಂದಿತು.

ಬೆಡಗು-೧೯೮೯