ಬಾರಪ್ಪ ಬಾ ನನ್ನ ಗೆಜ್ಜಿ ಕಾಲ ರಾಮಣ್ಣ
ಬಾ ನನ್ನ ಮಗನ ಮಲಿ ಉಣ್ಣ ರಾಮಣ್ಣ
ಮಲಿಗಳು ತೊರೆದಾವ ಹೇರುಗಳಾಗ್ಯಾವ
ಬೆನ್ನಿಲಿ ಹಾಲ ಎಸದಾವ ರಾಮಾ
ಬಾ ನನ್ನ ಮಗನ ಮಲಿ ಉಣ್ಣೊ ರಾಮಣ್ಣ
ನಿನ್ನ ಹಾಲ ಕುಡ್ದು ಏಳುದಿನವಾಯ್ತು
ನಿನ್ನ ಹಾಲಗ ನನಗ ಯಿಸವಾತ ಯಲ್ಲಮ್ಮ
ಹಾದರಗಿತ್ತಿ ಹಾಲ ನಾ ಹ್ಯಾಂಗ ಕುಡಿಯಲಿ
ಹಾದಿಗಿ ಹೋಗಿ ಚಲ್ಲೋಗ ಯಲ್ಲಮ್ಮಾ
ನಾಯಿ ಬೆಕ್ಕಿಗಿ ಉಣಸ್ಹೋಗ ಯಲ್ಲಮ್ಮಾ
ಗಂಡಯಿಲ್ಲದ ಅವ್ವಗ ಗಂಜಿಯ ಶಾಲ್ಯಾಕ
ಗಂಧ ಚಾರಮ್ಮ ಬಳಿಯ್ಯಾಕ ಯಲ್ಲಮ್ಮಾ
ಗಂಡಿದ್ದರೆಷ್ಟು ಉರದೇಳ ಯಲ್ಲಮ್ಮ
ಗಂಧವ ಹಚ್ಚಿಲ್ಲ ಹೊಂದಿಲಿ ನಾ ಕುಳಿತಿಲ್ಲ
ಗಂಧದಿಳೇವ ಮೆಲಿದಿಲ್ಲೊ ರಾಮಾ
ಗಂಡರ ಗುರುತು ನನಗಿಲ್ಲೊ ರಾಮಾ
ಅರಸಯಿಲ್ಲದವ್ವಗ ಅರಿಷಿಣ ಶಾಲ್ಯಾಕ
ಶಿರಸಂಗಿನಾಡ ಬಳಿ ಯಾಕ ಯಲ್ಲಮ್ಮಾ
ಅರಸಿದ್ದರೆಷ್ಟು ಉರದೇಳ ಯಲ್ಲಮ್ಮಾ
ಅರಿಷಿಣ ಹಚ್ಚಿಲ್ಲ ಸರಸಿ ನಾ ಕುಂತಿಲ್ಲೋ
ಅರಸರ ಗುರುತ ನನಗಿಲ್ಲೊ ರಾಮಾ
ಪುಣ್ಯದ ಫಲದಿಂದ ನಿನ್ನ ಹಡದೇನೊ ರಾಮಾ
ನನ ಒಂದ ಹಡದ್ಹಂಗ ಇನ್ನೊಂದು ಹಡಿಯವ್ವ
ತಂಗಿ ಯಮ್ಮನೆಂದ ಕರೆದೇನೆ ಯಲ್ಲಮ್ಮಾ
ನಿನ್ನ ಹಡದಂಗ ಇನ್ನೊಂದು ಹಡಿಯಾಕ
ಹುಲ್ಲು ಬೀಜ ಏನೋ ಹುಟ್ಲಾಕ ರಾಮಾ
ಮಲ್ಲಡದ ಮದಿಯ ಗಡ್ಡೆನೊ ಜಿಗಿಯಾಕ
ಹಾಲ ಕುಡಿವ ಮಗಗ ನೀರ‍್ಯಾಕ ಕುಡಿಸ್ಯಾರ
ಯಾವ ಚಂಡಾಳೀ ಕಲಸ್ಯಾಳೊ ರಾಮಾ
ಯಾವ ನೀ ಚಂಡಾಳಿ ಕಲಸ್ಯಾಳು ಶಿರಸಂಗಿ
ಕಾಳವ್ವ ಕಲಿಸ್ಯಾಳೋ ನನ ಮಗ್ಗ ರಾಮಾ
ತುಂಬಿದ ಹುಣ್ಣಿವಿ ಬಂತೊ ನನ್ನ ಕಂದ ಪರಶುರಾಮಣ್ಣಗ
ಪುರುಷ ರಾಮಣ್ಣಗ ಕಂಕಣ ಕಟ್ಟಬಾರೋ
ಕಂಕಣ ಅದರ ಕಟ್ಟಲಾಕ ಗಂಡರಿದ್ದಾರವ್ವ ಏನ
ಗಂಡರಿಲ್ಲದ ರಂಡಿಮುಂಡಿ ಗುಂಡಕಲ್ಲ ಕುಣಸುವ ಮುಂಡಿ
ಮೂರ ದಿನದ ಮೂಳ ರಾಮನ
ಮಾಸಾ ಹಾಕಿ ಕೊಲ್ಲಲಿಲ್ಲ
ಮಲಿ ವತ್ತಿ ರಾಮನ ಕೊಲ್ಲಲಿಲ್ಲಾ
ಮಳಲಾಗ ಚಲ್ಲಲಿಲ್ಲಾ ಕಲ್ಲಪಡ್ಯಾಗ ತುರಕಲಿಲ್ಲಾ
ಹುಟ್ಟ ಬಂಜಿಯಾಗಲಿಲ್ಲಾ
ರಾಮಾ ನಿನ್ನ ಹಡಿವುದಕಿನ್ನ ಬೇವು ನಾನು ಕುಡಿಯಲಿಲ್ಲ
ಬಾರಪ್ಪ ಬಾರ ನನ್ನ ಗೆಜ್ಜಿ ಕಾಲ ರಾಮಣ್ಣಾ
ಬಾ ನನ್ನ ಮಗನ ಮಲಿವುಣ್ಣೊ ರಾಮಾ
ಮಲಿಗಳು ತೊರೆದಾವ ಹೇರುಗಳಾಗ್ಯಾವ
ಬೆನ್ನೀಲಿ ಹಾಲು ಎಸದಾವ ರಾಮಾ
ಬಾ ನನ್ನ ಮಗನ ಮಲಿವುಣ್ಣೊ ರಾಮಾ