ಪಾತ್ರಗಳು:
. ಇಬ್ಬರು ಗಂಡಸರು, ಇಬ್ಬರು ಮಕ್ಕಳು, ಮೂವರು ಹೆಂಗಸರು

ಪರಿಕರಗಳು:
ಮನೆಯೊಳಗಿನ ಸಾಧನಗಳು, ಅಡುಗೆ ಸಾಮಗ್ರಿಗಳು, ರಟ್ಟಿನ ಸೋರೆ ಬುರುಡೆಗಳು, ಮಸಾಲೆ ರುಬ್ಬುವ ಕಲ್ಲು ಮತ್ತು  ರುಬ್ಬುಗುಂಡು, ಬುಟ್ಟಿ , ಸಿಹಿಕುಂಬಳಗಳು ಮತ್ತು ಸಿಹಿಕುಂಬಳದ ಬಳ್ಳಿ

 

ದೃಶ್ಯ ಒಂದು: ಕಾಡಿನಲ್ಲಿ ಒಂದು ಗುಡಿಸಲು

(ದೂರದಲ್ಲಿ ಮರ ಕಡಿಯುವ ಸದ್ದು . ಅಂಗಳದಲ್ಲಿ  ಒಬ್ಬ ಸುಮಾರು ಹನ್ನೆರಡು ವರ್ಷದ ಹುಡುಗ ಮತ್ತು  ಹತ್ತು ವರ್ಷದ ಹುಡುಗಿ (ಅಣ್ಣ ಮತ್ತು ತಂಗಿ)ಆಟವಾಡುತ್ತಿದ್ದಾರೆ. ಅವರ ಮುದಿ ತಾಯಿ  ಮನೆಯ ಕೆಲಸದಲ್ಲಿ ನಿರತಳಾಗಿದ್ದ್ದಾಳೆ.)

ತಾ: ಅಪ್ಪ ಊಟಕ್ಕೆ ಬರುವ ಹೊತ್ತಾಯ್ತು. ಮನೆಯಲ್ಲಿ ನೀರಿಲ್ಲ. ಅಬ್ಬು, ಒಂದು ಕೊಡ ನೀರು ತಾ.

ಅಬ್ಬು; ನನ್ನಿಂದ ಸಾಧ್ಯವಿಲ್ಲ.

ತಾ: ಅಮ್ಮಿ, ನೀನು ತಾ.

ಅಮ್ಮಿ: ಸಣ್ಣ ಪಾತ್ರೆಯಲ್ಲಿ ತಂದರೆ ಸಾಕಾ ಅಮ್ಮ. ದೊಡ್ಡದನ್ನು ನನ್ನಿಂದ ಎತ್ಲಿಕ್ಕಾಗುವುದಿಲ್ಲ.

ತಾ: ಸಾಕು. ಸಣ್ಣ ಪಾತ್ರೆಯಲ್ಲಿಯೆ ತಾ. (ಹುಡುಗಿ ಸೋರೆ ಬುರುಡೆ ಎತ್ತಿಕೊಂಡು ನೀರಿಗೆ ಹೋಗುತ್ತಾಳೆ. ಹುಡುಗ ಆಟ ಮುಂದರಿಸುತ್ತಾನೆ. ತಾಯಿ ಅಡಿಗೆ ಕೆಲಸ ಮಾಡುತ್ತಾ  ಮಾತಾಡುತ್ತಾಳೆ)

ತಾ: ಅಬ್ಬು, ಈಗೀಗ ನಿನ್ನ ಸೋಮಾರಿತನ ಜಾಸ್ತಿಯಾಗಿದೆ. ಏನು ಕೆಲಸ ಹೇಳಿದ್ರೂ ನನ್ನಿಂದಾಗದು ಅಂತಿ! ನಿನ್ನಿಂದ ಆಗುವುದು ಏನು?

ಅಬ್ಬು: ನೀರು ತರುವುದು ಹುಡುಗಿಯರು ಮಾಡುವ ಕೆಲಸ.

ತಾ: ಹೌದು. ನೀರು ತರುವುದು ಹುಡುಗಿಯರ ಕೆಲಸ, ಗುಡಿಸುವುದು ಹುಡುಗಿಯರ ಕೆಲಸ, ಬಟ್ಟೆ ಒಗೆಯುವುದು ಹುಡುಗಿಯರ ಕೆಲಸ, ಅಡಿಗೆ ಮಾಡುವುದು ಹುಡುಗಿಯರ ಕೆಲಸ. ಹುಡುಗರ ಕೆಲಸ ಯಾವುದು? ತಿನ್ನುವುದು ಮಾತ್ರವಾ?

ಅಬ್ಬು: ಅಪ್ಪ  ಮಾಡುವ ಕೆಲಸ ನಾನು ಮಾಡ್ತೇನೆ.

ತಾ: ಯಾವುದು ಮರ ಕಡಿದು ಸೌದೆ ಮಾಡುವುದಾ?

ಅಬ್ಬು: ಹೌದು.  ಮತ್ತು  ಸೌದೆ  ಮಾರಿ ಹಣ ತರುವುದು.

ತಾ: ಅದೆಲ್ಲ ನಿನ್ನಿಂದ ಈಗ್ಲೇ ಆಗ್ಲಿಕ್ಕಿಲ್ಲ. ಇನ್ನೂ ಕೆಲವು ವರ್ಷ ಬೇಕು. ಅಲ್ಲಿಯ ವರೆಗೆ ನೀನು ಹೀಗೆ ಆಟ ಆಡಿಕೊಂಡು ಇರುವುದಾ? ಅಪ್ಪ ಒಡೆದು ಹಾಕಿದ ಸೌದೆಯನ್ನಾದ್ರೂ ತಂದ್ಹಾಕ್ಬಾರ‍್ದಾ? ಅದನ್ನು ಕೂಡ ಅಪ್ಪನೇ ತಂದು ಹಾಕ್ಬೇಕು! ನೀನು ಯಾವ ಕೆಲಸವನ್ನೂ ಕಲ್ತುಕೊಂಡಿಲ್ಲ . ಯಾವಾಗ ಅದ್ನೆಲ್ಲ ಕಲ್ತುಕೊಳ್ಳೋದು?

ಅಬ್ಬು: ದೊಡ್ಡದಾದ ಮೇಲೆ.

ತಾ: ಹಾಗೆ ಹೇಳ್ತಾ ಇದ್ರೆ ನೀನು ದೊಡ್ಡದಾಗ್ಲಿಕ್ಕೇ ಇಲ್ಲ.

(ಅಷ್ಟರಲ್ಲಿ ಅಮ್ಮಿ ನೀರು ತಂದಿರಿಸುತ್ತಾಳೆ)

ಅಮ್ಮಿ: ಅಮ್ಮ, ಹೊಳೆಯಲ್ಲಿ ನೀರು ತುಂಬಾ ಕಡಿಮೆಯಾಗಿದೆ.

ತಾ: ಇನ್ನೇನು ಮಳೆ ಆರಂಭವಾಗ್ತದೆ. ಆಕಾಶ ತುಂಬಾ ಮೋಡ ಇದೆ.

(ಹೆಗಲ ಮೇಲೆ ಕೊಡಲಿಯಿರಿಸಿಕೊಂಡು ತಂದೆಯ ಆಗಮನ. ಉಸ್ಸಪ್ಪಾ ಎಂದು ಜಗಲಿಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಾನೆ)

ತಂ: ಏನು ಸೆಖೆ?

ತಾ: ಇನ್ನೇನು ಇವತ್ತು ನಾಳೆಯಲ್ಲಿ ಮಳೆ ಬರ‍್ಬಹುದು.

(ತಾಯಿ ಒಂದು ತಂಬಿಗೆಯಲ್ಲಿ ನೀರು ತಂದಿರಿಸುತ್ತಾಳೆ. ಅವನು ಅದನ್ನು  ಗಟಗಟನೆ ಕುಡಿಯುತ್ತಾನೆ. ಕುಳಿತಲ್ಲಿ ಹಾಗೆಯೆ ಒರಗಿಕೊಂಡು ನರಳುತ್ತಾನೆ)

ತಾ: (ಗಾಬರಿಯಿಂದ) ಏನು ಏನಾಯ್ತು?

ತಂ: ಅಯೊ (ಎದೆ ನೀವಿಕೊಳ್ಳುತ್ತಾ)ಎದೆಯಲ್ಲಿ ಎಂಥದೋ ನೋವು. (ತಂದೆ ಮತ್ತಷ್ಟು ನರಳುತ್ತಾನೆ. ತಾಯಿ ಉಪಚರಿಸುತ್ತಾಳೆ. ಮಕ್ಕಳು ಆತಂಕದಿಂದ ಅಪ್ಪನ ಬಳಿ ಬಂದು ಕುಳಿತುಕೊಳ್ಳುತ್ತಾರೆ. ತಂದೆ ತುಂಬಾ ಸಂಕಟಪಡುತ್ತಾ) ಇಲ್ಲ! ನೋವು ಜಾಸ್ತಿಯಾಗ್ತಾ ಇದೆ! ಪ್ರಾಣ ಹೋಗ್ತಾ ಇದೆ! ಮಕ್ಕಳೆ ಹತ್ತಿರ ಬನ್ನಿ! ಇಷ್ಟರ ತನಕ ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದೀನಿ. ನೀವು ನಿಮ್ಮ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ನಾನು ಒಂದಿಷ್ಟು ಆಸ್ತಿಪಾಸ್ತಿ ಮಾಡಿಟ್ಟಿದ್ದೇನೆ. ಅದನ್ನು ನೋಡಿಕೊಳ್ಳೋರು ಯಾರು? (ಮಲಗಿಕೊಳ್ಳುತ್ತಾನೆ. ತುಸು ಆರಾಮವಾಗಿ ಮಾತಾಡುತ್ತಾನೆ) ಜಾಸ್ತಿ ಇಲ್ಲ. ಅದು ನಿಮ್ಮಿಬ್ಬರಲ್ಲಿ  ಯಾರಾದರೂ ಒಬ್ಬರಿಗೆ ಸಾಕಾಗುವಷ್ಟು ಮಾತ್ರ ಇದೆ. ಆದ್ದರಿಂದ ಒಬ್ಬರಿಗೆ ಸಂಪತ್ತು ;  ಇನ್ನೊಬ್ಬರಿಗೆ ನನ್ನ ಆಶೀರ್ವಾದ ಮಾತ್ರ.

ತಾ: ಛೆ! ನಿಮ್ಗೆ ಏನೂ ಆಗಿಲ್ಲ. ನೀವು ಹೀಗೆಲ್ಲ ಮಾತಾಡ್ಬಾರ‍್ದು.

ತಂ: ಇಲ್ಲ. ನಾನು ಇನ್ನು ಹೆಚ್ಚು ಹೊತ್ತು ಇರೋಲ್ಲ. ನನ್ನ ಪ್ರಾಣ ಹೋಗ್ತಾ ಇದೆ. ಹೇಳು ಅಬ್ಬು, ನಿಂಗೆ ಏನಾದೀತು, ಸಂಪತ್ತಾ ಆಶೀರ್ವಾದವಾ?

ಅಬ್ಬು: ನನಗೆ ಸಂಪತ್ತಾದೀತು.

ಅಮ್ಮಿ: ನಂಗೆ ನಿಮ್ಮ ಆಶೀರ್ವಾದ ಸಾಕು ಅಪ್ಪಾ.

ತಂ: ಹಾಗೇ ಆಗ್ಲಿ.  ಆಸ್ತಿಪಾಸ್ತಿ ಎಲ್ಲಾ ಅಬ್ಬುವಿಗೆ, ಆಶೀರ್ವಾದ ಅಮ್ಮಿಗೆ. (ಅಮ್ಮಿಯ ತಲೆಯ ಮೇಲೆ ಕೈಯಿರಿಸುತ್ತಾನೆ. ಮರುಕ್ಷಣವೇ ಕೊನೆಯುಸಿರೆಳೆಯುತಾನೆ. ತಾಯಿ ಎದೆಬಡಿದುಕೊಂಡು ಕೆಳಗುರುಳುತ್ತಾಳೆ. ಅವಳು ಕೂಡ ಸತ್ತುಹೋಗುತ್ತಾಳೆ. ಮಕ್ಕಳು ಜೋರಾಗಿ ಅಳುತ್ತಿರುವಾಗ ಮೂವರು ಮುದುಕಿಯರು ಬಂದು ಮಕ್ಕಳನ್ನೂ ಸತ್ತು ಬಿದ್ದವರನ್ನೂ ನೋಡಿ “ಎಂಥ ಸಾವಪ್ಪೊ ಇದು,  ಇದು ಎಂಥ ಸಾವು? ಎಂಥ ಸಾವಪ್ಪೋ ಇದು, ಎಂಥಾ ಸಾವು” ಎಂದು ಹಾಡಿನ ರೀತಿಯಲ್ಲಿ ಹೇಳಿ ಹೇಳಿ ರೋದಿಸುತ್ತಿರುವಾಗ)

ಫೇಡ್ ಔಟ್

ದೃಶ್ಯ ಎರಡು: ಗುಡಿಸಲು

(ಅಮ್ಮಿ  ಮಸಾಲೆ ರುಬ್ಬುತ್ತಿದ್ದಾಳೆ. ಪಕ್ಕದಲ್ಲಿ ಒಂದು ಮಣ್ಣಿನ ಮಡಿಕೆಯಿದೆ. ಅಬ್ಬು ಠಾಕುಠೀಕಾಗಿ ಉಡುಪು ಹಾಕಿಕೊಂಡು ಹೊರಟಿದ್ದಾನೆ)

ಅಮ್ಮಿ : ಅಣ್ಣಾ , ಎಲ್ಲಿಗೆ ಹೋಗ್ತಿರೋದು ನೀನು?

ಅಬ್ಬು: ಪೇಟೆಗೆ.

ಅಮ್ಮಿ : ದಿನಾ ಯಾಕೆ ಪೇಟೆಗೆ ಹೋಗೋದು?

ಅಬ್ಬು: ಮನೆಯಲ್ಲಿದ್ದರೆ ಹೊತ್ತು ಹೋಗುವುದಿಲ್ಲ.

ಅಮ್ಮಿ : ಏನಾದ್ರೂ ಕೆಲಸ ಮಾಡು.

ಅಬ್ಬು: ಏನು ಕೆಲಸ?

ಅಮ್ಮಿ : ನೀರು ತಾ. ಬಾಳೆಗಳಿಗೆ ನೀರು ಹಾಕು.

ಅಬ್ಬು: ಅದು ಹುಡುಗಿಯರು ಮಾಡುವ ಕೆಲಸ.

ಅಮ್ಮಿ : ಹಾಗಾದರೆ  ಕಾಡಿನಿಂದ ಸೌದೆ ತಾ.

ಅಬ್ಬು:  ಅದೆಲ್ಲಾ ನಾನು ಮಾಡುವುದಿಲ್ಲ.

ಅಮ್ಮಿ : ಅದನ್ನು ಯಾರು ಮಾಡುವುದು?

ಅಬ್ಬು:  ಕೆಲಸದವರಿಂದ ಮಾಡಿಸುತ್ತೇನೆ. ಅಷ್ಟೆಲ್ಲ ವಿಚಾರಣೆ ಮಾಡ್ಬೇಡ. ಇಲ್ಲಿರುವುದೆಲ್ಲಾ ನನಗೆ ಸೇರಿದ್ದು ಅಂತ ನೆನಪಿಟ್ಕೊ. ನಿಂಗೆ ಅಪ್ಪ ಕೊಟ್ಟಿರೋದು ಆಶೀರ್ವಾದ ಮಾತ್ರ.  ಈ ಮನೆ ಬೇಕಿದ್ರೆ ಸದ್ಯಕ್ಕೆ ನಿಂಗೆ ಬಿಡ್ತೀನಿ. ನಾನು ಇವತ್ತು ಪೇಟೆಗೆ ಹೋಗ್ತಿರೋದು ಗಾಡಿ ತರೋದಕ್ಕೆ. ಇನ್ನೊಂದು ಗಂಟೆಯಲ್ಲಿ ಗಾಡಿ ಬರುತ್ತೆ. ಈ ಮನೆಯಲ್ಲಿ ಏನೇನಿದೆಯೊ ಅದನ್ನೆಲ್ಲಾ ಗಾಡಿಯಲ್ಲಿ ತುಂಬಿಸುವ ಕೆಲಸ ನಿನ್ನದು.

ಅಮ್ಮಿ : (ಆತಂಕದಿಂದ) ಎಲ್ಲಿ ಕೊಂಡ್ಹೋಗ್ತಿ  ಅದನ್ನೆಲ್ಲಾ?

ಅಬ್ಬು:  ನಾನು ಪಕ್ಕದ ಹಳ್ಳಿಯಲ್ಲಿಯ ಒಬ್ಬ ಶ್ರೀಮಂತನ ಮಗಳನ್ನು ಮದುವೆಯಾಗ್ತೀನಿ. ಸಾಮಾನೆಲ್ಲ  ಅಲ್ಲಿಗೆ ಕೊಂಡ್ಹೋಗ್ತೀನಿ.

ಅಮ್ಮಿ : ಈ ಮನೆ ಸಾಮಾನು ಅವ್ರಿಗೆ ಯಾಕೆ? ಅವ್ರ ಹತ್ರ ಇಲ್ವ?

ಅಬ್ಬು: ಇದೆಲ್ಲ ಅವ್ರಿಗಲ್ಲ. ನಾನು ಅಲ್ಲಿಯೆ ಬೇರೆ ಒಂದು ಮನೆ ಮಾಡ್ತೀನಿ.

ಅಮ್ಮಿ : ನನ್ನನ್ನೂ ಕರ‍್ಕೊಂಡು ಹೋಗು.

ಅಬ್ಬು: ನೀನು ಇಲ್ಲಿಯೆ ಇರು.  ಅಲ್ಲಿ ನಾವು ಗಂಡ ಹೆಂಡ್ತಿ ಮಾತ್ರ ಇರ‍್ತೀವಿ. ನೀನು ಬಂದ್ರೆ ಜಗಳ ಶುರುವಾಗುತ್ತೆ. ಅಲ್ದೆ , ಇದೆಲ್ಲವೂ ನಂಗೆ ಸೇರಿದ್ದು. ನಿಂಗೆ ಅಪ್ಪ ಕೊಟ್ಟಿರೋದು ಆಶೀರ್ವಾದ ಮಾತ್ರ.  ಗಾಡಿ ಈಗ ಬರುತ್ತೆ. ಸಾಮಾನೆಲ್ಲಾ ಒಂದೊಂದಾಗಿ ಕೊಂಡ್ಹೋಗಿ ಅಂಗಳದ ಹೊರಗೆ ಇಡು. ಗಾಡಿ ಇಲ್ಲಿ ವರೆಗೆ ಬರೋಲ್ಲ. (ಹೋಗುತ್ತಾನೆ)

ಅಮ್ಮಿ : (ಅಳುತ್ತಾ) ಅಣ್ಣಾ  ಹಾಗಾದ್ರೆ ನಂಗೆ ಏನೂ ಇಲ್ವ?

ಅಬ್ಬು: ನಿಂಗೆ ಏನೂ ಇಲ್ಲ, ನಿಂಗೆ ಅಪ್ಪನ ಆಶೀರ್ವಾದ ಮಾತ್ರ.

ಅಮ್ಮಿ : ನಾನು ಬದ್ಕೋದು ಹ್ಯಾಗೆ?

ಅಬ್ಬು: ಅದೆಲ್ಲ ನಂಗೊತ್ತಿಲ್ಲ. (ತುಸು ಯೊಚಿಸಿ) ಬೇಕಿದ್ರೆ ಆ ಮಡಿಕೆ, ರುಬ್ಬುವ ಕಲ್ಲು ಮತ್ತು ರುಬ್ಬುಗಂಡು ನೀನಿಟ್ಕೊ. ಇನ್ನೇನೂ ಕೇಳ್ಬೇಡ. (ಹೊರಟು ಹೋಗುತ್ತಾನೆ. ಅಮ್ಮಿ ಕಣ್ಣೀರು ಸುರಿಸುತ್ತಾ ರುಬ್ಬುವುದನ್ನು ಮುಂದರಿಸುತ್ತಾಳೆ)

ಫೇಡ್ ಔಟ್

ದೃಶ್ಯ ಮೂರು: ಗುಡಿಸಲು

(ಗುಡಿಸಲಿನ ಮುಂದೆ ಅಮ್ಮಿ ದು:ಖಿತಳಾಗಿ ಕುಳಿತಿದ್ದಾಳೆ. ಅವಳ ಬಳಿ ಮಣ್ಣಿನ ಮಡಿಕೆ, ರುಬ್ಬುವ ಕಲ್ಲು ಮತ್ತು ರುಬ್ಬುಗುಂಡು ಮಾತ್ರ ಇದೆ. ಮೂವರು ಮುದುಕಿಯರು ಬರುತ್ತಾರೆ)

ಮು೧: ಹೋಗೇ ಬಿಟ್ನಾ ನಿನ್ನ ಅಣ್ಣ? ಎಲ್ಲಾ ಕೊಂಡ್ಹೋದ್ನಾ?

ಅಮ್ಮಿ : ಇದನ್ನು ಮಾತ್ರ ಬಿಟ್ಟುಹೋಗಿದ್ದಾನೆ.

(ಮೂವರು ಮುದಕಿಯರೂ  ರಾಗವಾಗಿ ಎಂಥ ಅಣ್ಣನೊ ಎಂಥ ಅಣ್ಣನೊ ಎಂಥ ಅಣ್ಣನೊ ಇವನು ಎಂಥ ಅಣ್ಣನೊ ಎಂದು ದು:ಖಿತರಾಗಿ ಹಾಡುತ್ತಾರೆ)

ಮು೨: ನಾವಾದ್ರೂ ನಿಮ್ಗೆ ಏನಾದ್ರೂ ಸಹಾಯ ಮಾಡೋಣ ಅಂದ್ರೆ ನಾವು ನಿಂಗಿಂತ ದರಿದ್ರರು.

ಮು೩: ನಿನ್ನ ಹತ್ರ ರುಬ್ಬುವ ಕಲ್ಲು ಇದೆ. ನಮ್ಮ ಹತ್ರ ಅದೂ ಇಲ್ಲ.

ಮು೧: ಒಂದು ಕೆಲಸ ಮಾಡೋಣ. ನಾವು ರುಬ್ಬಲು ನಿನ್ನ ಕಲ್ಲು ಕೊಂಡ್ಹೋಗ್ತೇವೆ. ಅದ್ಕೆ ಬದಲಾಗಿ ನಿಂಗೆ ಊಟ ತಂದ್ಕೊಡ್ತೇವೆ.

ಮು೨: ಮೂರು ಹೊತ್ತಿಗೆ ಮೂವರು. ಬೆಳಿಗ್ಗೆ ನಾನು. ಮಧ್ಯಾಹ್ನ ಇವಳು, ರಾತ್ರಿಗೆ ಇವಳು.

ಮು೩: ಆದೀತಾ? ರುಬ್ಬುಕಲ್ಲು ಮತ್ತು  ಗುಂಡು ಬೆಳಿಗ್ಗೆ ಕೊಂಡ್ಹೋಗಿ ಸಾಯಂಕಾಲ ತಂದಿಡ್ತೀವಿ.

ಅಮ್ಮಿ : ಆದೀತು. ನೀವು ಎಷ್ಟು ಒಳ್ಳೆಯವರು!

ಮು೧: (ರುಬ್ಬುವ ಕಲ್ಲು ತೆಗೆದುಕೊಂಡು)  ನಾನು ಅಕ್ಕಿ ರುಬ್ಬಿ ದೋಸೆ ಮಾಡಿ ತರ‍್ತೀನಿ.ನೀನು ಇಲ್ಲಿಯೆ ಇರು.  ನಿನ್ನ ಅಣ್ಣನ ಕಣ್ಣಿಗೆ ಬೀಳದೆ ಏನಾದ್ರೂ ಉಳಿದಿದ್ಯ ಅಂತ ನೋಡು. (ಮೂವರೂ ಹೋಗುತ್ತಾರೆ. ಅಮ್ಮಿ  ಹೋಗಿ ಎಲ್ಲಾ ಕಡೆ ಹುಡುಕುತ್ತಾಳೆ. ಹಲಿಗೆಯ ಮೇಲೆ ಒಂದು ಕುಂಬಳದ ಬೀಜ ಸಿಗುತ್ತದೆ)

ಅಮ್ಮಿ: ಕುಂಬಳಕಾಯಿ ಬೀಜ! ಸಿಹಿಕುಂಬಳಕಾಯಿ! (ಉತ್ಸಾಹದಿಂದ ಹೊರ ಬಂದು ಅಂಗಳದ ಬದಿಯಲ್ಲಿ ಒಂದು ಕಡೆ ಮಣ್ಣು ಕೆದಕಿ ಅದನ್ನು  ಮಣ್ಣಿನಡಿಯಲ್ಲಿ ಹಾಕಿ) ಇದಕ್ಕೆ ನೀರು ಹಾಕುವುದು ಹೇಗೆ? (ಪುನ: ಒಳಹೋಗಿ ಹುಡುಕಿದಾಗ ಒಂದು ಅರೆಮುರಿದ ಸೋರೆ ಪಾತ್ರೆ ಸಿಗುತ್ತದೆ) ಸದ್ಯಕ್ಕೆ ಇದು ಸಾಕು. (ಹೊಳೆಯಿಂದ ನೀರು ತಂದು ಹಾಕುತ್ತಾಳೆ)

ಫೇಡ್ ಔಟ್

ದೃಶ್ಯ ನಾಲ್ಕು: ಗುಡಿಸಲು

(ಗುಡಿಸಲು ಮೊದಲಿನ ಹಾಗೆ ಇಲ್ಲ್ಲ. ಕೆಲವು ಪಾತ್ರೆಗಳು, ಒಂದೆರಡು ಸೋರೆ ಪಾತ್ರೆಗಳು. ಅಮ್ಮಿ ಅದೇ ಉಡುಪಿನಲ್ಲಿ ಇದ್ದಾಳೆ. ಅಂಗಳದಲ್ಲಿರುವ ಸಿಹಿಕುಂಬಳ ಬಳ್ಳಿ ಸೊಂಪಾಗಿ ಬೆಳೆದು ಅದರಲ್ಲಿ ಒಂದು ಭಾರಿ ಗಾತ್ರದ ಕಾಯಿ ಆಗಿದೆ. ಮುದುಕಿ೧ ರುಬ್ಬುಕಲ್ಲು, ರುಬ್ಬುಗುಂಡು ತಂದಿರಿಸಿ ಹೋಗುತ್ತಾಳೆ. ಹೋಗುವಾಗ ಸಿಹಿಕುಂಬಳದ ಬಳ್ಳಿಯನ್ನು ನೋಡಿ)

ಮು೧: ಒಂದೇ ಒಂದು ಕಾಯಿ ಆಗಿದೆ. ಅಬ್ಬಾ ಎಷ್ಟು ದೊಡ್ಡ ಕಾಯಿ. ನಿನ್ನದು ಭಾಗ್ಯದ ಕೈ. ಸ್ವಲ್ಪ ಹಟ್ಟಿ ಗೊಬ್ಬರ ಹಾಕಿದ್ರೆ ಇನ್ನೂ  ತುಂಬಾ ಕಾಯಿಗಳಾಗ್ಬಹುದು.

ಅಮ್ಮಿ: ಹಟ್ಟಿ ಗೊಬ್ಬರಕ್ಕೆ ಎಲ್ಲಿಗೆ ಹೋಗಲಿ?

ಮು೧: ನೀನು ಯೊಚಿಸ್ಬೇಡ. ನಾನು ಎಲ್ಲಿಂದಾದರೂ ಕೇಳಿ ತರುತ್ತೇನೆ. ಒಂದು ಸಣ್ಣ ಬುಟ್ಟಿ ಗೊಬ್ಬರ ಯಾರಾದರೂ ಪುಣ್ಯಾತ್ಮರು ಕೊಟ್ಟಾರು. (ಹೋಗುತ್ತಾಳೆ. ಅಮ್ಮಿ ಮನೆಯೊಳಗೆ ಹೋಗುತ್ತಾಳೆ. ಅಬ್ಬು ಬರುತ್ತಾನೆ. ಅಂಗಳದಲ್ಲಿ ನಿಂತು ಆಗಿರುವ ಒಳ್ಳೆಯ ಬದಲಾವಣೆಗಳನ್ನು ನೋಡುತ್ತಾನೆ. ಒಳಗಿಂದ ಬಂದ ಅಮ್ಮಿ ಸಂತೋಷ ಸಂಭ್ರಮಗಳಿಂದ  ಅಣ್ಣನನ್ನು ನೋಡಿ ಅಣ್ಣಾ ಎನ್ನುತ್ತಾಳೆ. ಅವನು ತಟಕ್ಕನೆ ರುಬ್ಬುಕಲ್ಲು ಮತ್ತು ರುಬ್ಬುಗುಂಡು ತೆಗೆದುಕೊಂಡು, ಹೋಗುತ್ತಾನೆ. ಹೋಗುವಾಗ ಕುಂಬಳ ಬಳ್ಳಿಯ ಬಳಿ ಒಂದು ಕ್ಷಣ ನಿಂತು, ಬಳ್ಳಿಯನ್ನು ಕಾಲಿನಿಂದ ಕಿತ್ತುಹಾಕಿ ಹೋಗುತ್ತಾನೆ. ಅದೇ ಹೊತ್ತು ಒಂದು ಬುಟ್ಟಿಯಲ್ಲಿ  ಗೊಬ್ಬರ ತುಂಬಿಕೊಂಡು ಬಂದ ಮುದುಕಿ ಅಬ್ಬು ಮಾಡಿದ್ದನ್ನು ನೋಡಿ ದಿಙ್ಮೂಢಳಾಗಿ ನಿಂತುಬಿಡುತ್ತಾಳೆ. ಅಮ್ಮಿ  ಕುಸಿದು ಕುಳಿತುಕೊಂಡುಬಿಕ್ಕಿ ಅಳುತ್ತಾಳೆ)

ಮು೧: (ಶೋಕಭರಿತಳಾಗಿ, ರಾಗವಾಗಿ ಹಾಡುತ್ತಾಳೆ)ಎಂಥ ಮನುಷ್ಯನಪ್ಪೊ ಇವನು ಎಂಥ ಮನುಷ್ಯ! ಎಂಥ ಮನುಷ್ಯನಪ್ಪೊ ಇವನು ಎಂಥ ಮನುಷ್ಯ! (ಅಮ್ಮಿಯ ಬಳಿ ಬಂದು ಅವಳನ್ನು ಸಂತೈಸಿ) ದು:ಖಿಸಬೇಡ ಮಗಳೆ, ಈ ಒಂದು ಕುಂಬಳಕಾಯಿಯ ಬೀಜಗಳನ್ನು ಹಾಕಿ ನೂರಾರು ಬಳ್ಳಿಗಳನ್ನು ಬೆಳೆಸೋಣ.

ಫೇಡ್ ಔಟ್

 

ದೃಶ್ಯ ಐದು: ವಾರದ ಸಂತೆ

(ಅಮ್ಮಿ ಹೊಸ ಉಡುಪು ತೊಟ್ಟಿದ್ದಾಳೆ. ಸಿಹಿಕುಂಬಳಗಳನ್ನು ಮಾರಲು ಇರಿಸಿದ್ದಾಳೆ. ಭಾರೀ ಗಾತ್ರದ ಕುಂಬಳಕಾಯಿಗಳು. ಅವಳು ಹೇಳಿದ ಬೆಲೆ ಕೊಟ್ಟು ಕೊಂಡುಕೊಳ್ಳುತ್ತಾರೆ. ಒಬ್ಬಳು ಗಿರಾಕಿ ಹೆಂಗಸು ಬರುತ್ತಾಳೆ. ಒಂದನ್ನು ತೋರಿಸಿ)

ಗಿರಾಕಿ: ಎಷ್ಟಿದಕ್ಕೆ?

ಅಮ್ಮಿ:  ಎರಡು ರುಪಾಯಿ. ( ಗಿರಾಕಿ ಹಣ ಎಣಿಸುತ್ತಿರುವಾಗ) ನೀವು ಕಳೆದ ವಾರ  ಕೊಂಡುಹೋದ ಕುಂಬಳ  ಹೇಗಿತ್ತು?

ಗಿರಾಕಿ: ತುಂಬಾ ಚೆನ್ನಾಗಿತ್ತು. ಇಷ್ಟು ರುಚಿಯಾದ ಕುಂಬಳಕಾಯಿ ಯಾವ ಊರಿನಲ್ಲಿಯೂ ಇಲ್ಲ ಮಗಳೆ. ಎಲ್ಲರೂ ಇದರ ಬೀಜ ಸಂಗ್ರಹಿಸಿ ಬೀಜ ಹಾಕುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ನಿನ್ನ ಕುಂಬಳಕಾಯಿಗಳಿಗೆ ಬೇಡಿಕೆ ಕಡಿಮೆಯಾಗಬಹುದು.

ಅಮ್ಮಿ: ಪರವಾಗಿಲ್ಲಮ್ಮ.  ನಾನು ಬೆಳೆದ ಕಾಯಿಗಳಿಂದ ನನ್ನ ಅನ್ನ ಬಟ್ಟೆಗೆ ಬೇಕಾಗುವಷ್ಟು ಬಂದರೆ ಸಾಕು.

ಗಿರಾಕಿ: ಮಗಳೆ, ನೀನು ತುಂಬಾ  ಒಳ್ಳೆಯವಳು. ದೇವರು ನಿನ್ನನ್ನು ಚೆನ್ನಾಗಿಟ್ಟಿರಲಿ.  (ಹೋಗುತ್ತಾರೆ. ಒಬ್ಬಳು ಚಿಕ್ಕವಯಸ್ಸಿನ ಹೆಂಗಸು ಬರುತ್ತಾಳೆ)

ಹೆಂ: ನಿನ್ನ ಹೆಸರೇನು?

ಅಮ್ಮಿ: ನನ್ನ ಹೆಸರು ಅಮ್ಮಿ.

ಹೆಂ: ಇಡೀ ಊರಿನಲ್ಲಿ ಎಲ್ಲರೂ ನೀನು ಬೆಳೆಸಿದ  ಸಿಹಿಕುಂಬಳಕಾಯಿ ಬಗ್ಗೆಯೆ ಮಾತಾಡುತ್ತಿದ್ದಾರೆ. ಇಷ್ಟು ರುಚಿಯಾದ ಕುಂಬಳವನ್ನು ಯಾರೂ ಇಲ್ಲಿಯ ತನಕ ತಿಂದಿಲ್ಲ ಅನ್ತಿದಾರೆ. ಅದ್ಕೇ ನನ್ನ ಧನಿಯ ಹೆಂಡತಿ ನಿನ್ನಿಂದ ಒಂದು ಕುಂಬಳಕಾಯಿ ಕೊಂಡ್ಕೊಂಡು ಬಾ ಅಂತ ಕಳಿಸಿದ್ದಾರೆ. (ದೊಡ್ಡದೊಂದು ಕುಂಬಳವನ್ನು ತೆಗೆದುಕೊಂಡು) ಎಷ್ಟಿದಕ್ಕೆ?

ಅಮ್ಮಿ: ಅದಕ್ಕೆ ಮೂರು ರುಪಾಯಿ. ಯಾರು ನಿನ್ನ ಧನಿ?

ಹೆಂ: ಅಬ್ಬುರಾಯರು ಅಂತ, ಈ ಊರಿನ ಅತ್ಯಂತ ದೊಡ್ಡ ಶ್ರೀಮಂತರು.

ಅಮ್ಮಿ: (ಸಂಭ್ರಮದಿಂದ) ಅಬ್ಬುವೆ? ಅವರು ನನ್ನ ಅಣ್ಣ!  ಹಾಗಾದರೆ ಹಣ ಬೇಡ. ಇದು ನನ್ನ ಅತ್ತಿಗೆಗೆ ನನ್ನ ಪ್ರೀತಿಯ ಉಡುಗೊರೆ ಎಂದು ಹೇಳು.

ಹೆಂ: (ಖುಷಿಯಿಂದ) ಆಗಲಿ, ಹೇಳುತ್ತೇನೆ.

ಫೇಡ್ ಔಟ್

 

ದೃಶ್ಯ ಆರು: ಗುಡಿಸಲು

(ಕುಂಬಳಕಾಯಿ ಬಳ್ಳಿಗಳನ್ನೆಲ್ಲ ಕಿತ್ತು ಹಾಕಲಾಗಿದೆ. ಹಳ್ಳಿಯ ಹೆಂಗಸರು ದು:ಖಿತೆಯರಾಗಿ ಕುಳಿತಿದ್ದಾರೆ. ಅಮ್ಮಿ ಸಂತೆಯಿಂದ ಬರುತ್ತಾಳೆ. ಕಿತ್ತುಹಾಕಿದ ಬಳ್ಳಿಗಳನ್ನು ನೋಡಿ ಬೆರಗಾಗಿ ನಿಲ್ಲುತ್ತಾಳೆ)

ಅಮ್ಮಿ: ಯಾರ ಕೆಲಸ ಇದು?

ಮು೧: ಬೇರೆ ಯಾರದು ಕೆಲಸ ಮಗಳೆ! ನಿನ್ನ ಅಣ್ಣನ ಕೆಲಸ. ನಾವು ಬೇಡ ಬೇಡ ಎಂದು ತುಂಬಾ ಬೇಡಿಕೊಂಡೆವು ಆದರೆ ಅವನು ನಮ್ಮ ಮಾತು ಕೇಳಲಿಲ್ಲ. ಅವನು ಮತ್ಸರದಿಂದ ಕುದಿಯುತ್ತಿದ್ದ.

ಮು೨: ನೀನು ಅವನ ಕೆಲಸದವಳಿಗೆ ಪುಕ್ಕಟೆಯಾಗಿ ಕುಂಬಳ ಕೊಟ್ಟೆಯಾ?

ಅಮ್ಮಿ: ಹೌದು.

ಮು೨: ಅದಕ್ಕೇ ಅವನಿಗೆ  ಅಷ್ಟು  ಸಿಟ್ಟು ಬಂದಿದೆ.  “ಭಾರಿ ಶ್ರೀಮಂತಳಾಗಿಬಿಟ್ಟದ್ದಾಳೆ. ಅವಳ ಸೊಕ್ಕು ಮುರೀಬೇಕು“ ಅನ್ತಾ ಇದ್ದ.

(ಅಮ್ಮಿ ಕುಸಿದು ಕುಳಿತುಕೊಂಡು ಬಿಕ್ಕಿ ಬಿಕ್ಕಿಅಳುತ್ತಾಳೆ)

ಮು೧: ದು:ಖಿಸಬೇಡ ಮಗಳೆ. ನಾವು ಪುನ: ಬೀಜ ಹಾಕಿ ಬಳ್ಳಿಗಳನ್ನು ಬೆಳೆಸೋಣ.

ಅಮ್ಮಿ: ಬೇಡ! ಇನ್ನು ನಾನು ಇಲ್ಲಿರಲಾರೆ. ನನಗೆ ಈ ಮನೆಯೂ ಬೇಡ, ಈ ಊರೂ ಬೇಡ. ನಾನು ಎಲ್ಲಿಯಾದ್ರೂ ದೂರ ಹೋಗಿ ಬದುಕುತ್ತೇನೆ.

ಮು೩: ಹೋಗಬೇಡ ಮಗಳೆ. ಇರು. ನಾವೆಲ್ಲ ಇಲ್ಲವೆ?

ಅಮ್ಮಿ: ನಾನು ಇಲ್ಲಿರುವಷ್ಟು ದಿನವೂ ನನ್ನ ಅಣ್ಣನ ಮತ್ಸರ ಕಡಿಮೆಯಾಗುವುದಿಲ್ಲ. ಎಲ್ಲವೂ ಅವನಿಗೇ ಇರಲಿ. ನಾನು ಹೋಗುತ್ತೇನೆ.

ಮು೧:  (ಹೋಗುತ್ತಿರುವವಳನ್ನು ತಡೆದು) ಸ್ವಲ್ಪ ತಡಿ. ನೀನು ಮೊನ್ನೆ ಕೊಟ್ಟ ಕುಂಬಳದ ಬೀಜಗಳಿವೆ. ಅವುಗಳನ್ನು ಕೊಡುತ್ತೇನೆ. ಯಾವತ್ತಾದರೂ ಉಪಯೊಗಕ್ಕೆ ಬರಬಹುದು. (ಓಡಿಹೋಗಿ ಬೀಜಗಳನ್ನು ತಂದುಕೊಡುತ್ತಾಳೆ)

ಅಮ್ಮಿ: (ಬೀಜಗಳನ್ನು ತೆಗೆದುಕೊಂಡು) ನೀವೆಲ್ಲ ಎಷ್ಟು ಒಳ್ಳೆಯವರು! ನಿಮ್ಮ ಉಪಕಾರವನ್ನು ನಾನು ಯಾವತ್ತೂ ಮರೆಯುವುದಿಲ್ಲ. (ದು:ಖ ತಡೆದುಕೊಂಡು ಹೊರಟು ಹೋಗುತ್ತಾಳೆ)

ಫೇಡ್ ಔಟ್

 

ದೃಶ್ಯ ಏಳು: ಕಾಡು, ಕಾಡಿನ ದಾರಿ

(ಅಮ್ಮಿ ನಡೆದು ನಡೆದು ಒಂದು ಕಡೆ ಬಳಲಿ ಒಂದು ಮರದಡಿಯಲ್ಲಿ ಕುಳಿತುಕೊಂಡು ದಣಿವಾರಿಸಿಕೊಳ್ಳುತ್ತಿರುವಾಗ ಜನರ ದನಿ ಕೇಳಿಸಿ, ಗಾಬರಿಯಿಂದೆದ್ದು  ಓಡಲು ಕಾಲೇಳದೆ, ಏನು ಮಾಡುವುದೆಂದು ತಿಳಿಯದೆ, ಹತ್ತಿರದಲ್ಲಿದ್ದ  ಮರ ಹತ್ತಿ ಕುಳಿತುಕೊಳ್ಳುತ್ತಾಳೆ. ಜನರ ದನಿ ನಿಲ್ಲುತ್ತದೆ. ಅಮ್ಮಿ ಮರದ ಕೊಂಬೆಯ ಮೇಲೆ ನಿಂತು ತಲೆಯೆತ್ತಿ ನೋಡುತ್ತಾಳೆ)

ಅಮ್ಮಿ: ಎಷ್ಟು  ಸುಂದರವಾದ ಪಟ್ಟಣ!  ಹೆಚ್ಚು ದೂರವಿಲ್ಲ. ಕತ್ತಲಾಗುವುದರೊಳಗೆ ಮುಟ್ಟಬಹುದು. ಅಲ್ಲಿಗೂ ಅಣ್ಣ ಬಂದು ಕಾಡಬಹುದೆ? ಅಲ್ಲಿ ನನ್ನ  ನಿಜವಾದ ಹೆಸರು ಹೇಳುವುದು ಬೇಡ. ಬೇರೆ ಹೆಸರು ಹೇಳುತ್ತೇನೆ. (ಇಳಿಯಲು ತೊಡಗುವಷ್ಟರಲ್ಲಿ ಪುನ: ಜನರ ದನಿ. ಪುನ: ಮೇಲಕ್ಕೆ ಹೋಗಿ ಕುಳಿತುಕೊಳ್ಳುತ್ತಾಳೆ. ಸೈನಿಕರ ಉಡುಪಿನಲ್ಲಿರುವ ಇಬ್ಬರು  ಬರುತ್ತಾರೆ. ಅವರಲ್ಲಿ ಒಬ್ಬನು ರಾಜಕುಮಾರ)

ರಾಕು: ನಡೆದು ಸಾಕಾಯ್ತು. ಈ ಮರದ ಕೆಳಗೆ ಕುಳಿತು ದಣಿವಾರಿಸಿಕೊಳ್ಳೋಣ.

ಸೈನಿ: ಹಾಗೇ ಆಗಲಿ ರಾಜಕುಮಾರ. (ಇಬ್ಬರೂ  ಮರಕ್ಕೆ ಒರಗಿ ಕುಳಿತುಕೊಳ್ಳುತ್ತಾರೆ)

ರಾಕು: ಈ ಬಾರಿ ಒಂದು ಜಿಂಕೆಯೂ ಸಿಗಲಿಲ್ಲ.

ಸೈನಿ:  ತುಂಬಾ ಚಳಿಯಿದೆ ರಾಜಕುಮಾರ. ಈ ಚಳಿಯಲ್ಲಿ ಜಿಂಕೆಗಳು ಪೊದರುಗಳಿಂದ ಹೊರಬರುವುದಿಲ್ಲ.

ರಾಕು: ಹಾಗಾದರೆ ಇವತ್ತಿಗೆ ಬೇಟೆ ಸಾಕು. ಹೋಗೋಣವೆ?

ಸೈನಿ: ಆಗಲಿ ರಾಜಕುಮಾರ.

(ಅಮ್ಮಿ ಮನವಾಗಿ ದು:ಖಿಸುತ್ತಾಳೆ. ಅವಳ ಕಣ್ಣೀರು ರಾಜಕುಮಾರನ ಕೆನ್ನೆಯ ಮೇಲೆ ಬೀಳುತ್ತದೆ)

ರಾಕು: (ಕೆನ್ನೆ ಒರಸಿಕೊಂಡು) ಇದೇನು ಮಳೆ ಬರುತ್ತಿದೆಯೆ?

ಸೈನಿ: ಇಲ್ಲವಲ್ಲಾ ರಾಜಕುಮಾರ. ಆಕಾಶದಲ್ಲಿ ಮೋಡ ಕೂಡ ಇಲ್ಲ!

ರಾಕು: ಹಾಗಾದರೆ ಈ ನೀರ ಹನಿಗಳು ಎಲ್ಲಿಂದ? (ಕೈಗೆ ಅಂಟಿದ  ನೀರ ಹನಿಯನ್ನು ತೋರಿಸುತ್ತಾನೆ. ಸೈನಿಕ ಮೇಲಕ್ಕೆ ನೋಡುತ್ತಾನೆ)

ಸೈನಿ: ರಾಜಕುಮಾರ, ಮರದ ಮೇಲೆ ಯಾರೋ ಇದ್ದಾರೆ.

ರಾಕು: ಯಾರು? ನಮ್ಮ ಶತ್ರುಸೈನಿಕರಲ್ಲ ತಾನೆ?

ಸೈನಿ: ಸೈನಿಕನಲ್ಲ. ಒಬ್ಬಳು ಹುಡುಗಿ!  ಅಳುತ್ತಿದ್ದಾಳೆ. ನಿಮ್ಮ ಕೆನ್ನೆಯ ಮೇಲೆ ಬಿದ್ದದ್ದ್ದು ಅವಳ ಕಣ್ಣೀರು! ಏಯ ಹುಡುಗಿ, ಮರದ ಮೇಲೇಕೆ ಹತ್ತಿ ಕುಳಿತಿದ್ದಿ? ಇಳಿ ಕೆಳಗೆ. (ಅಮ್ಮಿ ಹೆದರುತ್ತಾ ಕೆಳಗಿಳಿಯುತ್ತಾಳೆ)

ರಾಕು: (ಸ್ವಗತ) ಎಷ್ಟು ಚೆಂದ ಇದ್ದಾಳೆ!

ಸೈನಿ: ಯಾರು ನೀನು?

ಅಮ್ಮಿ: ನಾನು… ನಾನು…

ರಾಕು: ಹೆದರಬೇಡ ಹೇಳು. ನಾವು ನಿನಗೇನೂ ತೊಂದರೆ  ಮಾಡುವುದಿಲ್ಲ. ಏನು ನಿನ್ನ ಹೆಸರು? ಯಾವ ಊರಿನಿಂದ ಬಂದೆ? ಎಲ್ಲಿಗೆ ಹೋಗ್ತಾ ಇರುವೆ? ನಿನ್ನ ತಾಯಿತಂದೆಯ ಹೆಸರೇನು?

ಅಮ್ಮಿ: ನನ್ನ ಹೆಸರು ಪಮ್ಮಿ. ನಾನು ಅನಾಥಳು. ನಾನು ಆಶ್ರಯ ಹುಡುಕಿಕೊಂಡು ಹೋಗುತ್ತಿದ್ದೇನೆ. ನಂಗೆ ತಾಯಿತಂದೆ ಇಲ್ಲ.  (ಅಳುತ್ತಾಳೆ)

ರಾಕು: ಅಳಬೇಡ. ನಾನು ನಿನಗೆ ಆಶ್ರಯ ಕೊಡುತ್ತೇನೆ. ನಮ್ಮ ಜೊತೆ ಬಾ.

ಅಮ್ಮಿ: ಆಗಲಿ ರಾಜಕುಮಾರ.

ರಾಕು: ರಾಜಕುಮಾರ! ನಿಂಗೆ ಹೇಗೆ ತಿಳಿಯಿತು ನಾನು ರಾಜಕುಮಾರ ಅಂತ?

ಅಮ್ಮಿ: ನೀವು ಮಾತಾಡುತ್ತಿದ್ದುದನ್ನು ಕೇಳಿ ತಿಳಿಯಿತು ರಾಜಕುಮಾರ. ಕ್ಷಮಿಸಬೇಕು.

ರಾಕು: ಕ್ಷಮಿಸಲಿಕ್ಕೇನಿದೆ? ನೀನು ತಪ್ಪೇನೂ ಮಾಡಿಲ್ಲ. ಬಾ ನಮ್ಮ ಜೊತೆ. ನಿನಗೆ ಮದುವೆಯಾಗಿದೆಯೆ?

ಅಮ್ಮಿ: ಇಲ್ಲ ರಾಜಕುಮಾರ.

ರಾಕು: ನನಗೂ ಮದುವೆಯಾಗಿಲ್ಲ. ನಾನು ನಿನ್ನನ್ನು ಮದುವೆಯಾಗುತ್ತೇನೆ.

ಅಮ್ಮಿ: ಏನು ನೀವು ನನ್ನನ್ನು ಮದುವೆಯಾಗುವುದೆ? ನಾನೊಬ್ಬಳು ಅನಾಥ ಹುಡುಗಿ. ನನಗೆ ಯಾರೂ ಇಲ್ಲ.

ರಾಕು: ಅನಾಥ ಹುಡುಗಿಯನ್ನು ಮದುವೆಯಾಗುವುದು ಈ ದೇಶದ ಸಂಪ್ರದಾಯ. ನಿಜವಾಗಿಯೂ ನಿನ್ನವರು ಎನ್ನುವವರು ನಿನಗೆ ಯಾರೂ ಇಲ್ಲವೆ?

ಅಮ್ಮಿ: (ತನ್ನ್ನ ಉಡಿಯಲ್ಲಿ ಕಟ್ಟಿಕೊಂಡಿದ್ದ  ಕುಂಬಳದ ಬೀಜಗಳನ್ನು ತೋರಿಸಿ) ನನ್ನದಾಗಿ ಇರುವುದು ಈ ಸಿಹಿಕುಂಬಳದ ಬೀಜಗಳು ಮಾತ್ರ.

ರಾಕು: (ನಕ್ಕು ಅವುಗಳನ್ನು ಪರಿಶೀಲಿಸಿ) ಇವುಗಳು ಯಾಕೆ?

ಅಮ್ಮಿ: ಇವು ಸಾಮಾನ್ಯವಾದ  ಸಿಹಿಕುಂಬಳದ ಬೀಜಗಳಲ್ಲ ರಾಜಕುಮಾರ. ಚೆನ್ನಾಗಿ ಬೆಳೆದರೆ, ಒಂದೇ ಬಳ್ಳಿಯಲ್ಲಿ  ಒಬ್ಬನಿಂದ ಎತ್ತಲಾಗದಷ್ಟು ದೊಡ್ಡ  ಹತ್ತಿಪ್ಪತ್ತು  ಕುಂಬಳಕಾಯಿಗಳಾಗುತ್ತವೆ.  ನೀವು ನನಗೆ  ಒಂದು ಗುಡಿಸಲು ಮತ್ತು  ಸ್ವಲ್ಪ ಜಾಗ ಕೊಡಿ. ನಾನು ಕುಂಬಳಕಾಯಿ ಬೆಳೆದು ಬದುಕುತ್ತೇನೆ.

ರಾಕು: (ನಕ್ಕು) ನಿನಗೆ ಕುಂಬಳಕಾಯಿ ಬೆಳೆಯಲು ಒಂದು ಜಿಲ್ಲೆಯನ್ನೇ ಕೊಡೋಣ. ಆದರೆ  ನೀನು ಗುಡಿಸಲಿನಲ್ಲಿರಬೇಕಾಗಿಲ್ಲ. ನೀನು ನನ್ನ ಜೊತೆ ಅರಮನೆಯಲ್ಲಿಯೆ  ಇರುತ್ತಿ. ನಡಿ ಹೋಗೋಣ.

ಫೇಡ್ ಔಟ್

ದೃಶ್ಯ ಎಂಟು: ಅರಮನೆ

(ಅಮ್ಮಿ ಈಗ ತಾಯಿಯಾಗಿದ್ದಾಳೆ. ಅಮ್ಮಿ ಮತ್ತು  ಪುಟಾಣಿ ಮಗು  ಪುಟ್ಟ ಆಟವಾಡುತ್ತಿದ್ದಾರೆ. ರಾಜಕುಮಾರ ಬರುತ್ತಾನೆ. ತಂದೆಯನ್ನು ಕಂಡೊಡನೆ ಮಗು ಓಡಿ ಹೋಗಿ ಹಿಡಿದುಕೊಳ್ಳುತ್ತದೆ)

ರಾಕು: (ಮಗುವನ್ನು ಮುದ್ದುಮಾಡುತ್ತಾ) ಅಮ್ಮಿ, ರಾಜಕಾರ್ಯದ ನಿಮಿತ್ತ ನಾನು ದೂರ ಪ್ರಯಾಣ ಮಾಡಬೇಕಾಗಿದೆ.

ಅಮ್ಮಿ: ಯಾವಾಗ?

ರಾಕು: ಈಗಲೇ ಹೊರಡುತ್ತಿದ್ದೇನೆ.

ಅಮ್ಮಿ:  ವಾಪಾಸು ಬರುವುದು ಯಾವಾಗ?

ರಾಕು: ಹತ್ತು ದಿನಗಳಾಗಬಹುದು.

ಅಮ್ಮಿ: ಹತ್ತು ದಿನಗಳು!

ರಾಕು: ಹೌದು. ದೇಶದ ಉತ್ತರ ಭಾಗದಲ್ಲಿ ಬರಗಾಲ ಬಂದಿದೆ. ಬರ ಪರಿಹಾರಕಾರ್ಯ ಆರಂಭಿಸಬೇಕಾಗಿದೆ. ಹತ್ತು ದಿನಗಳೇನೂ ಹೆಚ್ಚಲ್ಲ. ನಾಳೆ ನಾಳೆ ಎನ್ನುವಷ್ಟರಲ್ಲಿ ಮುಗಿದುಹೋಗುತ್ತದೆ.

ಅಮ್ಮಿ: (ಪಕ್ಕನೆ ನೆನಪಿಸಿಕೊಂಡು) ಈ ಸಲ ನಾನು ಹಾಕಿದ ಬೀಜದಿಂದ ಸಾವಿರಾರು ಕುಂಬಳಕಾಯಿಗಳಾಗಿವೆ. ಅವುಗಳನ್ನು ಈಗಲೇ ಕೊಯ್ಯಬಹುದು. ಅವುಗಳನ್ನು ಬರಗಾಲಪೀಡಿತರಿಗೆ ಹಂಚಿರಿ. ಸಿಹಿಕುಂಬಳದ ಬೀಜಗಳನ್ನು  ಬರಗಾಲ ಪೀಡಿತ ಪ್ರದೇಶದಲ್ಲಿ ಹಾಕಿರಿ. ಜನರ ಬವಣೆ ನಿವಾರಣೆಯಾಗುವುದು.

ರಾಕು: ಬಹಳ ಒಳ್ಳೆಯ ಸಲಹೆ. ಹಾಗೆಯೆ ಮಾಡುತ್ತೇನೆ. (ರಾಜಕುಮಾರನ ತಂದೆ ತಾಯಿ ಬರುತ್ತಾರೆ)

ರಾಜ: (ಮಗನೊಡನೆ) ಗಾಡಿಗಳು ಸಿದ್ಧವಾಗಿವೆ. ಬೇಗನೆ ಹೋದರೆ ಕತ್ತಲಾಗುವ ಮೊದಲು ತಲಪಬಹುದು.

ರಾಕು: ಸರಿ ಹೊರಡುತ್ತೇನೆ. ನಾಳೆಯೆ ನೂರು ಗಾಡಿ  ಕುಂಬಳಕಾಯಿಗಳನ್ನು ನಾನಿರುವಲ್ಲಿಗೆ ಕಳಿಸಿರಿ.

ರಾಣಿ: ಅವುಗಳು  ಬೆಳೆದಿವೆಯೆ? ಇನ್ನ್ನೂ ಹಸಿರು ಹಸಿರಾಗಿವೆ.

ಅಮ್ಮಿ: ಬೆಳೆದಿವೆ ಅಮ್ಮ. ಹಸಿರಾಗಿದ್ದರೆ ಒಳ್ಳೆಯದು. ನೀರಿನ ಅಂಶ ಜಾಸ್ತಿಯಿರುತ್ತದೆ.

ರಾಜ: ಸರಿ ಕಳಿಸುತ್ತೇನೆ.

(ರಾಜಕುಮಾರ ತಾಯಿತಂದೆಗೆ ವಂದಿಸಿ ಮಗುವನ್ನು ಮುದ್ದಿಸಿ ಅಮ್ಮಿಯೊಡನೆ ‘ಹೋಗುತ್ತೇನೆ’ ಎಂದು ಹೇಳಿ ಹೋಗುತ್ತಾನೆ)

ರಾಣಿ: ನೀನು ಬೆಳೆಸಿದ ಕುಂಬಳಕಾಯಿ ಒಳ್ಳೆಯ ಉಪಯೊಗಕ್ಕೆ ಬಂತು. ಈ ಸಲ ಬೆಳೆದಿರುವ ಕಾಯಿಗಳು ಬಹಳ ದೊಡ್ಡದು! ಒಂದು ಮನೆಗೆ ಒಂದು ಕುಂಬಳಕಾಯಿ ಒಂದು ವಾರಕ್ಕೆ ಸಾಕು!

ರಾಜ: (ಅಮ್ಮಿಯೊಡನೆ) ನಿನ್ನಿಂದ ದೇಶಕ್ಕೆ ಬಹಳ ಒಳ್ಳೆಯದಾಯಿತು ಮಗಳೆ.

(ರಾಜ ಮತ್ತು ರಾಣಿ  ಪುಟ್ಟನನ್ನು ಮುದ್ದಿಸುತ್ತಾ ಮಾತಾಡುತ್ತಿರುವಾಗ ಸೇವಕ ಬರುತ್ತಾನೆ)

ಸೇವ: ಯಾರೋ ಒಬ್ಬರು ನಿಮ್ಮನ್ನು ಕಾಣಲು ಬಂದಿದ್ದಾರೆ ಮಹಾಪ್ರಭು.

ರಾಜ: ಸರಿ. ಕರೆದುಕೊಂಡು ಬಾ. (ರಾಣಿ, ಅಮ್ಮಿ ಮತ್ತು ಪುಟ್ಟನೊಡನೆ) ನೀವು ಒಳಗೆ ಹೋಗಿ.  (ಅವರು ಹೋದ ಬಳಿಕ ಸೇವಕ ಆಗಂತುಕನನ್ನು ಕರೆದುಕೊಂಡು ಬರುತ್ತಾನೆ. ಅವನು ಅಮ್ಮಿಯ ಅಣ್ಣ ಅಬ್ಬು. ರಾಜನ ಕಾಲಿಗೆ ವಂದಿಸುತ್ತಾನೆ. ರಾಜ ಆಸನ ತೋರಿಸಿ) ಕುಳಿತುಕೊಳ್ಳಿ. ಯಾರು ನೀವು?

ಅಬ್ಬು: ನನ್ನ ಹೆಸರು ಬುರಾಯ ಅಂತ. ನಾನು ಮಹಾಪ್ರಭುಗಳಲ್ಲಿ ಒಂದು ಮುಖ್ಯವಾದ ವಿಚಾರವನ್ನು ಅರಿಕೆ ಮಾಡಿಕೊಳ್ಳಲು ಬಂದಿದ್ದೇನೆ.

ರಾಜ: ಏನು?

ಅಬ್ಬು: ವಿಚಾರ ತುಂಬಾ ದು:ಖಕರವಾದುದಾಗಿದೆ ಮಹಾಪ್ರಭು.

ರಾಜ: ಪರವಾಗಿಲ್ಲ ಹೇಳಿ.

ಅಬ್ಬು: ಮಹಾಪ್ರಭು, ರಾಜಕುಮಾರ ಮದುವೆಯಾಗಿರುವುದು ಕಾಡಿನಲ್ಲಿ ಸಿಕ್ಕಿದ ಒಂದು ಹುಡುಗಿ ಎಂಬ ವಿಚಾರ ತಿಳಿಯಿತು.

ರಾಜ: ಹೌದು.

ಅಬ್ಬು: ಅವಳು ಅನಾಥಳು ಎಂದು ಹೇಳಿಕೊಂಡಳು. ಅಲ್ಲವೆ ಮಹಾಪ್ರಭು?

ರಾಜ: ಹೌದು. ಅನಾಥ ಬಾಲಿಕೆಯನ್ನು ಮದುವೆಯಾಗುವುದು ನಮ್ಮ ರಾಜಸಂಪ್ರದಾಯವಾಗಿದೆ.

ಅಬ್ಬು: ಅದು ಶ್ರೇಷ್ಠವಾದ ಸಂಪ್ರದಾಯ ಮಹಾಪ್ರಭು. ಆದರೆ ಅವಳು ಒಬ್ಬಳು ಮಾಟಗಾತಿ.

ರಾಜ: ಏನು ಮಾಟಗಾತಿಯೆ? ಅವಳು ಮಾಟಗಾತಿಯ ಹಾಗೆ ಇಲ್ಲ.

ಅಬ್ಬು: ಮಾಟಗಾತಿಯರು ತಮ್ಮ ಮಂತ್ರಶಕ್ತ್ತಿಯಿಂದ ಬೇಕಾದ ರೂಪವನ್ನು ಪಡೆದುಕೊಳ್ಳಬಲ್ಲರಲ್ಲವೆ ಮಹಾಪ್ರಭು?

ರಾಜ:  ಅದು ನಿಜ  ಆದರೆ ನಿಮ್ಮ  ಮಾತಿಗೆ ಏನು ಆಧಾರ?

ಅಬ್ಬು: ಅವಳ ಬಳಿಯಿದ್ದ ಕುಂಬಳದ ಬೀಜಗಳೇ ಆಧಾರ ಮಹಾಪ್ರಭು. ಒಂದೇ ಬಳ್ಳಿಯಲ್ಲಿ ನೂರಾರು ಕಾಯಿಗಳು! ಎಲ್ಲಿಯಾದರೂ ಉಂಟೆ?  ಅದೂ ಅಲ್ಲದೆ, ಒಂದೊಂದು ಕುಂಬಳಕಾಯಿಗಳನ್ನು ಎತ್ತಲು ಇಬ್ಬಿಬ್ಬರು ಬೇಕು. ಅವುಗಳು ಮಂತ್ರದ ಕುಂಬಳಕಾಯಿಗಳು.

ರಾಜ: ಏನೇ ಆದರೂ ಅವುಗಳು ಬಹಳ ರುಚಿಯಾಗಿವೆ.

ಅಬ್ಬು: ಆ ಮಾಟಗಾತಿ ಅವುಗಳಲ್ಲಿ ಪ್ರಪಂಚದಲ್ಲಿ ಇಲ್ಲದ ರುಚಿ ತುಂಬಿದ್ದಾಳೆ. ಆ ಕುಂಬಳಕಾಯಿಯನ್ನು  ತಿಂದವರ ಆಯುಷ್ಯ ಅರ್ಧಕ್ಕರ್ಧ ಕಡಿಮೆಯಾಗುತ್ತದೆ. ಸ್ವಲ್ಪ ದಿನಗಳಲ್ಲಿ ಅದು ತಮಗೆ ಗೊತ್ತಾಗುತ್ತದೆ. ಮಕ್ಕಳು ಮತ್ತು ಚಿಕ್ಕ ವಯಸ್ಸಿನವರು ಮೊದಲು ಸಾಯುತ್ತಾರೆ.

ರಾಜ: ಅವಳು ಕೂಡ ಅದನ್ನು ತಿಂದಿದ್ದಾಳಲ್ಲಾ?

ಅಬ್ಬು: ಅವಳು ಮಾಟಗಾತಿ. ಅವಳಿಗೆ ಏನೂ ಆಗುವುದಿಲ್ಲ. ಅವಳ ಮಗು ಇದೆಯಲ್ಲ? ಅದು ಕೂಡ ಮಗು ಅಲ್ಲ. ಅದು ಒಂದು ರಾಕ್ಷಸ. ಒಂದು ದಿವಸ ಅದು ಒಂದು ಪರ್ವತಾಕಾರದ ಕುಂಬಳವಾಗಿ ಉರುಳಲು ತೊಡಗುತ್ತದೆ. ಎಲ್ಲರೂ ಅದರಡಿಗೆ ಬಿದ್ದು ಅಪ್ಪಚ್ಚಿಯಾಗಿ ಸಾಯುತ್ತಾರೆ.

ರಾಜ: ಏನು ಅವಳ ಉದ್ದೇಶ?

ಅಬ್ಬು:ಎಲ್ಲರನ್ನೂ ನಾಶ ಮಾಡಿ, ರಾಜ್ಯವನ್ನು  ವಶಪಡಿಸಿಕೊಂಡು, ತನ್ನ ಮಗನನ್ನು ರಾಜನನ್ನಾಗಿ ಮಾಡುವುದು ಮಹಾಪ್ರಭು.

ರಾಜ: (ಆಶ್ಚರ್ಯದಿಂದ) ಹಾಗಿರಬಹುದೆ?

ಅಬ್ಬು: ಖಂಡಿತ ಮಹಾಪ್ರಭು. ಅವಳನ್ನು ಮತ್ತು ಆ ಮಗುವನ್ನು ಆದಷ್ಟು ಬೇಗ ಕಾಡಿಗೆ ಅಟ್ಟುವುದು ಕ್ಷೇಮ. ನಾನು ಹೋಗುತ್ತೇನೆ. ನನಗೆ ಅಪ್ಪಣೆಯಾಗಲಿ.

ರಾಜ: ಆಗಲಿ. ನೀವು ಹೋಗಬಹುದು. ನಿಮ್ಮಿಂದ ತುಂಬಾ ಉಪಕಾರವಾಯಿತು. ನೀವು ಅಪೇಕ್ಷಿಸುವ ಉಡುಗೊರೆಯನ್ನು ನಿಮಗೆ ನೀಡಲಾಗುವುದು. (ಚಪ್ಪಾಳೆ  ತಟ್ಟುತ್ತಾನೆ. ಸೇವಕನ ಆಗಮನ) ಇವರನ್ನು ಮುಖ್ಯಮಂತ್ರಿಯ ಬಳಿ ಕರೆದುಕೊಂಡು ಹೋಗು. ಇವರು ಅಪೇಕ್ಷಿಸಿದ ಉಡುಗೊರೆಯನ್ನು ಇವರಿಗೆ ನೀಡಲು ತಿಳಿಸು.

ಸೇವ: ಅಪ್ಪಣೆ ಮಹಾಪ್ರಭು. ಹಾಗೆಯೆ ಮುಖ್ಯ ಮಂತ್ರಿಯನ್ನು ಕರೆದುಕೊಂಡು ಬಾ.

(ಅಬ್ಬು ಮತ್ತು ಸೇವಕರ ನಿರ್ಗಮನ. ಸ್ವಲ್ಪ ಹೊತ್ತಿನಲ್ಲಿ  ಮುಖ್ಯ ಮಂತ್ರಿಯ ಆಗಮನ)

ರಾಜ: ಯುವರಾಜರು ಹೋದರೆ?

ಮಂ: ಹೋದರು ಮಹಾಪ್ರಭು.

ರಾಜ: ಕುಂಬಳಕಾಯಿಯ ಗಾಡಿಗಳು ಹೊರಟಿವೆಯೆ?

ಮಂ: ಇಲ್ಲ ಮಹಾಪ್ರಭು. ಹೊರಡಲು ಸಿದ್ಧವಾಗಿವೆ.

ರಾಜ: ಅವುಗಳನ್ನು ತಡೆಹಿಡಿಯಿರಿ.

ಮಂ: ಅಪ್ಪಣೆ ಮಹಾಪ್ರಭು.

ರಾಜ: ನಮ್ಮ ಸೊಸೆ ಪಮ್ಮಿ ಮತ್ತು ಪುಟ್ಟನನ್ನು  ಇಬ್ಬರು ಸೈನಿಕರ ಜೊತೆ ಕಳಿಸಿ ಕಾಡಿನಲ್ಲಿ ಬಿಟ್ಟು ಬರಲು ಹೇಳಿ.

ಮಂ: ಅಪ್ಪಣೆ ಮಹಾಪ್ರಭು.

(ನಿರ್ಗಮನ)

ಫೇಡ್ ಔಟ್

ದೃಶ್ಯ ಒಂಬತ್ತು: ಕಾಡು

(ಅಮ್ಮಿ ಮತ್ತು ಇಬ್ಬರು ಸೈನಿಕರು. ನಡೆದು ನಡೆದು ಸುಸ್ತಾಗಿದ್ದಾರೆ. ಪುಟ್ಟ ತಾಯಿಯ ಹೆಗಲ ಮೇಲೆ ನಿದ್ರಿಸಿದ್ದಾನೆ)

ಸೈನಿ೧: ಕಾಡಿನಲ್ಲಿ  ಬಿಡಲು ಹೇಳಿದ್ದಾರೆ. ಆದರೆ ಎಲ್ಲಿ  ಬಿಡಬೇಕು ಎಂದು ನಮಗೆ ಗೊತ್ತಿಲ್ಲ. ನಾವು ಬಹಳ ದೂರ ಬಂದಿದ್ದೇವೆ. ಇನ್ನು  ನಾವು ಇಲ್ಲಿಯೆ ನಿಮ್ಮನ್ನು  ಬಿಟ್ಟುಹೋಗುತ್ತೇವೆ.

ಸೈನಿ೨: ನಾವು ನಿಮ್ಮನ್ನು ಬಿಟ್ಟುಹೋಗಲೇಬೇಕು. ಯಾಕೆಂದರೆ,ನಾವು ನಿಮ್ಮನ್ನು ಬಿಟ್ಟು ಹೋಗಲೇಬೇಕು.

ಅಮ್ಮಿ: ಆಗಲಿ ನೀವು ನಮ್ಮನ್ನು ಬಿಟ್ಟುಹೋಗಿ. ನಾವು ಒಂದೋ ಸಾಯುತ್ತೇವೆ ಅಥವಾ ಬದುಕುತ್ತೇವೆ. ನಮಗೆ ಎರಡೂ ಒಂದೇ.

ಸೈನಿ೧: ನೀವು ಸಾಯಬಾರದು.

ಸೈನಿ೨: ನೀವು ಸಾಯಬಾರದು. ಯಾಕೆಂದರೆ, ನೀವು ಬದುಕಬೇಕು.

ಸೈನಿ೧: ಧೈರ್ಯ ತಂದುಕೊಳ್ಳಿ. ದೇವರಿದ್ದಾನೆ.

ಸೈನಿ೨: ಧೈರ್ಯ ತಂದುಕೊಳ್ಳಿ. ಯಾಕೆಂದರೆ, ದೇವರಿದ್ದಾನೆ.

ಸೈನಿ೧: ನೀವು ಹೀಗೆಯೆ ಮುಂದೆ ನಡೆದು ಕಾಡನ್ನು ದಾಟಿದರೆ ನಿಮಗೆ ಒಂದು ಊರು ಸಿಗಬಹುದು.

ಸೈನಿ೨: ನೀವು ಹೀಗೆಯೆ ಮುಂದೆ ನಡೆಯಿರಿ. ಯಾಕೆಂದರೆ, ನಿಮಗೆ ಒಂದು ಊರು ಸಿಗಬಹುದು.

ಅಮ್ಮಿ: ಸರಿ. ನೀವು ಹೋಗಿ.

(ಸೈನಿಕರು ಹೋಗುತ್ತಾರೆ. ಸ್ವಲ್ಪ ಹೊತ್ತಿನಲ್ಲಿ  ಅಬ್ಬು ಒಂದು ಕತ್ತಿಹಿಡಿದುಕೊಂಡು ಪ್ರತ್ಯಕ್ಷನಾಗುತ್ತಾನೆ)

ಅಮ್ಮಿ: ಅಣ್ಣಾ , ನೀನು!

ಅಬ್ಬು: ಅವರು ನಿನ್ನನ್ನು ಕೊಲ್ಲದೆ ಬಿಟ್ಟಿದ್ದಾರೆ! ಆದರೆ ನಾನು ಬಿಡುವುದಿಲ್ಲ.

ಅಮ್ಮಿ: ಯಾಕಣ್ಣಾ?

ಅಬ್ಬು: ಯಾಕೆಂದರೆ, ನಿನ್ನ ಬಳಿ ಇರಬೇಕಾದ್ದು ಅಪ್ಪನ ಆಶೀರ್ವಾದ ಮಾತ್ರ!  ನಿನ್ನ ಬಳಿ ಯಾವುದೇ ಸಂಪತ್ತು ಇರಬಾರದು.

ಅಮ್ಮಿ: ನನ್ನ ಬಳಿ ಯಾವ ಸಂಪತ್ತೂ ಇಲ್ಲ.

ಅಬ್ಬ: ನೀನೀಗ ಯುವರಾಜನ ಹೆಂಡತಿ.

ಅಮ್ಮ್ಮಿ:  ಅದರರ್ಥ ನನ್ನ ಬಳಿ ಸಂಪತ್ತಿದೆ ಎಂದು ಹೇಗಾಗುತ್ತದೆ?

ಅಬ್ಬು: ನಿನ್ನ ಕುಂಬಳ ಬೀಜಗಳಿಂದ ನೀನು ಎಲ್ಲರನ್ನೂ ವಶೀಕರಿಸುತ್ತಿ!

ಅಮ್ಮಿ: ಹಾಗಂದರೇನು?

ಅಬ್ಬು: ನೀನು ಹೋಗುವಲ್ಲಿಗೆಲ್ಲಾ ಆ ಬೀಜಗಳನ್ನು ಒಯ್ಯುತ್ತಿ. ಅಲ್ವ?

ಅಮ್ಮಿ: ಹೌದು. ಅದರಲ್ಲೇನು ತಪ್ಪು?

ಅಬ್ಬು: ಈಗಲೂ ನಿನ್ನ ಬಳಿ  ಇರಬೇಕಲ್ಲವೆ  ಆ ಬೀಜಗಳು?

ಅಮ್ಮಿ: ಇವೆ.

ಅಬ್ಬು: ಎಲ್ಲಿವೆ?

ಅಮ್ಮಿ: ಯಾಕೆ?

ಅಬ್ಬು: ನನಗೂ ಕೆಲವು ಬೀಜಗಳನ್ನು ಕೊಡು.

ಅಮ್ಮಿ: ಖಂಡಿತ ಕೊಡ್ತೇನೆ. (ಸಂತೋಷದಿಂದ ಬೀಜದ ಕಟ್ಟನ್ನು ಹೊರತೆಗೆಯುತ್ತಾಳೆ)

ಅಬ್ಬು: ಇವುಗಳಿಂದ ನೀನು ಪುನ: ಸಂಪತ್ತನ್ನು ಸೃಷ್ಟಿಸುತ್ತಿ ಅಲ್ವ? ಆ ಎಲ್ಲ ಬೀಜಗಳು ನನಗೆ ಬೇಕು. ಕೊಡು ಇಲ್ಲಿ.

ಅಮ್ಮಿ:  ಇಲ್ಲ. ನನ್ನ ಮಗುವನ್ನು ಉಳಿಸಲು ನನಗೆ   ಈ ಬೀಜಗಳು ಬೇಕು.

ಅಬ್ಬು: ಹಾಗೊ? ನೀನು ಹೇಗೆ ಉಳಿಯುತ್ತಿ ನೋಡುತ್ತೇನೆ. (ಕತ್ತಿ ತೆಗೆದು ಅವಳ ಬಲಗೈಯನ್ನು  ಕತ್ತರಿಸಿಹಾಕುತ್ತಾನೆ. ಅಮ್ಮಿ ಚೀರಿ ಕೆಳಗುರುಳುತ್ತಾಳೆ. ನಿದ್ದೆಯಲ್ಲಿದ್ದ ಪುಟ್ಟನೂ ಎಚ್ಚೆತ್ತು ಕಿರುಚುತ್ತಾನೆ. ಅವನನ್ನು ಅಬ್ಬು ಕಡಿಯಲು ಕತ್ತಿಯೆತ್ತುವಾಗ ಒಂದು  ದೊಡ್ಡ ಹಾವು (ಹಾವಿನ ದೇಹ ಮನುಷ್ಯನ ತಲೆ) ಕಾಣಿಸಿಕೊಳ್ಳುತ್ತದೆ. ಅಬ್ಬು ಹಾವನ್ನು ಕಂಡು ಹೆದರಿ ಓಡಿಹೋಗುತ್ತಾನೆ. ಹಾವು ಬಳಿ ಬಂದು ಸ್ಮ ತಿತಪ್ಪಿ ಬಿದ್ದ ಅಮ್ಮಿಯನ್ನು  ಆರೈಕೆ ಮಾಡುತ್ತದೆ. ಕತ್ತರಿಸಲ್ಪಟ್ಟ ಕೈಗೆ ಮದ್ದಿನ ಹಸಿರೆಲೆ ಹುಡುಕಿ ತಂದು ಅರೆದು ಹಚ್ಚುತ್ತದೆ. ಅಳುವ ಮಗುವನ್ನು ಸಂತೈಸುತ್ತದೆ. ಅಮ್ಮಿ ಎಚ್ಚರಗೊಳ್ಳುತ್ತಾಳೆ.)

ಹಾವು: (ಇಬ್ಬರನ್ನೂ ಎಬ್ಬಿಸಿ) ಬನ್ನಿ . ನಾನು ನಿಮ್ಮನ್ನು  ನನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ. (ಅವರನ್ನು ಆಧರಿಸಿಹಿಡಿದು ನಡೆಸಿಕೊಂಡು ಹೋಗುತ್ತದೆ)

ಫೇಡ್ ಔಟ್

 

ದೃಶ್ಯ ಹತ್ತು: ಕಾಡು

(ಕಾಡಿನ ದಾರಿ. ಅಮ್ಮಿ, ಪುಟ್ಟ ಮತ್ತು ಹಾವು ಮೂವರೂ ನಡೆದು ಬಳಲಿದ್ದಾರೆ)

ಪುಟ್ಟ: ಇನ್ನು ಎಷ್ಟು ದೂರ ನಡೆಯಬೇಕು?

ಹಾವು: ಇನ್ನೂ ಸ್ವಲ್ಪ ದೂರ ಹೋಗಬೇಕು. ನಾವು ಇಲ್ಲಿ  ಸ್ವಲ್ಪ ಕುಳಿತು ದಣಿವಾರಿಸಿಕೊಳ್ಳೋಣ. (ಅಮ್ಮಿಯೊಡನೆ) ನಿನ್ನ ಹೆಸರೇನು?

ಅಮ್ಮಿ: (ತುಂಬಾ ಕ್ಷೀಣವಾದ ದನಿಯಲ್ಲಿ) ಅಮ್ಮಿ.

ಹಾವು: ಅಮ್ಮಿ. ಒಳ್ಳೆಯ ಹೆಸರು. ನನ್ನ ಹೆಸರು ನಾಗ. ನೋಡು ಅಲ್ಲಿ  ಒಂದು ಕೊಳ ಇದೆ. ಹೋಗಿ ಕೈಕಾಲು ತೊಳೆದುಕೊಂಡು ನೀರು ಕುಡಿದುಕೊಂಡು ಬನ್ನಿ. ನಾನು ಈ ಮರದ ಕೆಳಗೆ ಮಲಗುತ್ತೇನೆ.

(ಇಬ್ಬರೂ ಅಲ್ಲಿಯೆ ಬಳಿಯಲ್ಲಿದ್ದ ಕೊಳದ ಬಳಿಗೆ ಹೋಗುತ್ತಾರೆ. ಅಮ್ಮಿ ಕೈಕಾಲು ತೊಳೆದು ನೀರು ಕುಡಿಯುತ್ತಿರುವಾಗ ಪುಟ್ಟ ಕೊಳಕ್ಕೆ ಇಳಿದು ನೀರಿನಲ್ಲಿ ಆಟವಾಡುತ್ತಾನೆ. ಆಡುತ್ತಾ ಆಡುತ್ತಾ   ಆಳದ ನೀರಿಗೆ ಹೋಗುತ್ತಾನೆ)

ಅಮ್ಮಿ: ಪುಟ್ಟ  ದೂರ ಹೋಗ್ಬೇಡ. ಅಲ್ಲಿ ಆಳ ಇದೆ. ಈ ಕಡೆ ಬಂದುಬಿಡು. (ಹಾಗೆ ಹೇಳುತ್ತಿರುವಾಗಲೇ ಪುಟ್ಟ ನೀರಿನಲ್ಲಿ ಮುಳುಗಿಹೋಗುತ್ತಾನೆ. (ಚೀರುತ್ತಾಳೆ) ಅಯೊ ಪುಟ್ಟ ಮುಳುಗಿಹೋದ! ಏನು ಮಾಡಲಿ? (ಅವಳು ಕೂಡ ನೀರಿಗಿಳಿಯುತ್ತಾಳೆ)

ಹಾವು: (ಆ ಕಡೆ ನೋಡದೆ, ತಲೆಯೆತ್ತದೆ,  ಮಲಗಿದಲ್ಲಿಂದಲೇ) ಅಮ್ಮಿ, ನೀನು ಮುಂದೆ ಹೋಗಬೇಡ! ಅಲ್ಲಿಯೆ ನಿಂತು ಎರಡು ಕೈಯನ್ನು  ನೀಡಿ  ಬಾ ಎನ್ನು.  ಅವನು ಬರುತ್ತಾನೆ.

ಅಮ್ಮಿ: ಎರಡು ಕೈಗಳನ್ನೂ ಹೇಗೆ ನೀಡಲಿ? ನನಗಿರುವುದು ಒಂದೇ ಕೈ.

ಹಾವು:  ಒಂದೇ ಕೈ ಅಂತ ಭಾವಿಸಕೊಳ್ಳಬೇಡ. ನಾನು ಹೇಳಿದ ಹಾಗೆ ಮಾಡು! ಎರಡು ಕೈಯನ್ನೂ ನೀಡಿ ಬಾ ಮಗೂ ಎನ್ನು.  (ಅಮ್ಮಿ ಎರಡುಕೈಯನ್ನೂ ನೀಡಿ ಬಾ ಮಗೂ ಎನ್ನುತ್ತಾಳೆ.  ನಿಧಾನವಾಗಿ  ಅವಳಿಗೆ ಬಲಗೈ ಬರುತ್ತದೆ) ಹಾ! ನನಗೆ ಕೈಬಂತು! ಪುಟ್ಟ ಬಾ. (ಪುಟ್ಟ ನೀರಿನಿಂದ ಈಚೆಗೆದ್ದು ಬರುತ್ತಾನೆ. ಇಬ್ಬರೂ ಹಾವಿನ ಬಳಿಗೆ ಬರುತ್ತಾರೆ)

ಅಮ್ಮಿ: ನಿನ್ನ ಉಪಕಾರವನ್ನು ನಾನು ಯಾವತ್ತೂ ಮರೆಯುವುದಿಲ್ಲ.

ಹಾವು: ಅದಿರಲಿ. ನಾವು ಇನ್ನು ಹೋಗೋಣ. ನನ್ನ ಮನೆ ಇನ್ನು ಹೆಚ್ಚು ದೂರವಿಲ್ಲ. ನನ್ನ ಹೆಂಡತಿ ನಾಗಿ ಕಾಯುತ್ತಿರುತ್ತಾಳೆ. ನಿಮ್ಮ ಯೊಗ ಕ್ಷೇಮವನ್ನು ಅವಳು ನೋಡಿಕೊಳ್ಳುತ್ತಾಳೆ.

(ಮುಂದಕ್ಕೆ ನಡೆಯುತ್ತಾರೆ)

ಫೇಡ್ ಔಟ್

 

ದೃಶ್ಯ ಹನ್ನೊಂದು:  ಚೆಂದದ ಪುಟ್ಟ ಮನೆ

(ಹಾವು ನಾಗ, ಅವನ ಹೆಂಡತಿ ನಾಗಿ, ಅಮ್ಮಿ ಮತ್ತು ಪುಟ್ಟ ಮನೆಯಂಗಳದಲ್ಲಿ ಕುಳಿತಿದ್ದಾರೆ.  ಎಲ್ಲರೂ ಬಹಳ ಸಂತೋಷವಾಗಿದ್ದಾರೆ)

ಅಮ್ಮಿ: ನಾವು ಇಲ್ಲಿರುವುದು ತಿಂಗಳ ಮೇಲಾಯಿತು.

ನಾಗ: ಏನಾಯ್ತು? ನೀವು ನಮಗೇನೂ ಭಾರ ಎನಿಸಲಿಲ್ಲ.

ನಾಗಿ: ಎಲ್ಲ ತುಂಬಾ ಚೆನ್ನ್ನಾಗಿತ್ತು. ನೀವು ನಮ್ಮ ಜೊತೆಯಲ್ಲಿಯೆ ಇರಿ.

ನಾಗ: ನಿಮಗೆ ಇಲ್ಲೇ ಒಂದು ಚೆಂದದ ಮನೆಯನ್ನು ನಿರ್ಮಿಸೋಣ.

ಅಮ್ಮಿ: ನಿಮ್ಮ  ಉಪಕಾರವನ್ನು ಮತ್ತು ಪ್ರೀತಿಯನ್ನು ನಾವು ಮರೆಯಲಾರೆವು. ಎಷ್ಟು ಸಂತೋಷದಲ್ಲಿ ಇಷ್ಟು ಕಾಲ ಕಳೆಯಿತು!  ಆದರೆ ನಾವು ಇಲ್ಲಿಯೆ ಇರುವುದು ಸರಿಯಲ್ಲ. ನನಗಾದರೋ ಕಾಡು ಕೂಡ ಆದೀತು.   ಆದರೆ ನನ್ನ ಮಗು ಮನುಷ್ಯರ ನಡುವೆಯೆ ಬೆಳೆದು ದೊಡ್ಡವನಾಗಬೇಕು.  ಇಲ್ಲದಿದ್ದರೆ ಮುಂದೆ ಅವನಿಗೆ ಬದುಕಲು ಕಷ್ಟವಾದೀತು.  ಆದ್ದರಿಂದ ನಾವು ಎಲ್ಲಿಯಾದರೂ ಸ್ವತಂತ್ರವಾಗಿ ಜೀವಿಸಬೇಕು. ನಾನು ನನ್ನ  ಕುಂಬಳದ ಬೀಜಗಳನ್ನು ಕೂಡ ಕಳೆದುಕೊಂಡೆ. ನೀವು ಏನು ಬೆಳೆಸುತ್ತೀರಿ?  ಅದರ ಬೀಜಗಳನ್ನು ಕೊಡಿ. ನಾನು ಅದನ್ನು ಬೆಳೆಯುತ್ತೇನೆ.

ಹಾವು: ನಾವು ಜೇನು ಬೆಳೆಯುತ್ತೇವೆ.  ಅದು ನಿನ್ನಿಂದಾಗಲಿಕ್ಕಿಲ್ಲ. ನಾನು ನಿನಗೆ ಒಂದು ಸಂದೂಕವನ್ನು ಕೊಡುತ್ತೇನೆ. ನಿನಗೆ ಇಷ್ಟವಾದ ಒಂದು ಜಾಗಕ್ಕೆ ಹೋಗಿ, ನೀನು ಬೇಕಾದ್ದನ್ನು ಬೇಡು. ನೀನು ಏನು ಕೇಳುತ್ತೀಯೊ ಅದನ್ನು ಅದು ನಿನಗೆ  ಕೊಡುತ್ತದೆ. (ಹಾವು ನಾಗ ಒಂದು ಸಂದೂಕವನ್ನು ಕೊಡುತ್ತಾನೆ)

ಅಮ್ಮಿ: (ಕಂಬನಿ ಮಿಡಿಯುತ್ತಾ) ನೀವು ತುಂಬಾ ಒಳ್ಳೆಯವರು. ನಿಮ್ಮನ್ನು ನಾವು ಯಾವತ್ತೂ ಮರೆಯುವುದಿಲ್ಲ.

ಹಾವು: ನಿನಗೆ ಏನು ತೊಂದರೆಯಾದರೂ ನಮಗೆ ನಮ್ಮನ್ನು ಕರೆಯಲು ಸಂದೂಕದೊಡನೆ ಹೇಳು. ತಕ್ಷಣ ನಾವು ಬರುತ್ತೇವೆ.

ಅಮ್ಮಿ:  ಆಗಲಿ. (ಅವರಿಗೆ ವಂದಿಸಿ ಸಂದೂಕವನ್ನು ತೆಗೆದುಕೊಂಡು ಅಮ್ಮಿ ಮತ್ತು ಪುಟ್ಟ ಹೊರಡುತ್ತಾರೆ)

ಫೇಡ್ ಔಟ್

 

ದೃಶ್ಯ ಹನ್ನೆರಡು: ಅರಮನೆ

(ರಾಜ, ರಾಣಿ ಮತ್ತು ರಾಜಕುಮಾರ)

ರಾಕು: ಅಪ್ಪಾ, ನೀವು ದೊಡ್ಡ ತಪ್ಪು ಮಾಡಿದಿರಿ! ಯಾರದೋ ಮಾತು ಕೇಳಿ ಅವರನ್ನು ಕಾಡಿಗೆ ಕಳಿಸಬಾರದಾಗಿತ್ತು.

ರಾಣಿ: ನಿನ್ನ ಅಪ್ಪ ನನ್ನ ಮಾತನ್ನು ಕೂಡ ಕೇಳಲಿಲ್ಲ.  ಅಮ್ಮಿ ಮಾಟಗಾತಿ ಎಂದು ನಾನು ನಂಬುವುದಿಲ್ಲ.

ರಾಕು: ನಾನು ಕೂಡ ನಂಬುವುದಿಲ್ಲ. ನಾನು ಅವರನ್ನು ಹುಡುಕಲೇಬೇಕು. ಕಾಡಿನಲ್ಲಿ ದಾರಿ ಕಾಣದೆ ಎಲ್ಲಿ ಹೋದರೊ ಏನೊ.

ರಾಣಿ: ಈಗಷ್ಟೇ ಬಂದಿದ್ದಿ. ದಣಿವಾರಿಸಿಕೊಂಡು ಹೋಗು.

ರಾಕು: ಇಲ್ಲ ನಾನು ಈಗಲೇ ಹೊರಡಬೇಕು. ಅಮ್ಮಿ ಮಾಟಗಾತಿ ಎಂದು ಹೇಳಿದ ಮನುಷ್ಯ ಈಗೆಲ್ಲಿದ್ದಾನೆ?

ರಾಣಿ: ಅವನು ಇಲ್ಲಿಯೆ ನಗರದಲ್ಲಿ ಇದ್ದಾನೆ. ಅವನಿಗೆ ನಿನ್ನ ಅಪ್ಪ ಕೊಟ್ಟ ಉಡುಗೊರೆಯಿಂದ ದೊಡ್ಡ ಶ್ರೀಮಂತನಾಗಿ ಮೆರೆಯುತ್ತಿದ್ದಾನಂತೆ.

ರಾಜ: ನಾನು ಮೋಸಹೋದೆ ಎಂದು ನನಗೆ ಆ ಮೇಲೆ ಅನಿಸಿತು. ಆದರೆ ಅಷ್ಟರಲ್ಲಿ ಕಾರ್ಯ ಮಿಂಚಿತ್ತು.

ರಾಕು: ನೀವು  ದುಡುಕಿದಿರಿ. ನಾನು ಬರುವ ವರೆಗೆ ಯಾಕೆ ಕಾಯಲಿಲ್ಲ?

ರಾಜ: ನನಗೆ ತುಂಬಾ ಪಶ್ಚಾತ್ತಾಪವಾಗುತ್ತಿದೆ.

ರಾಣಿ: ಎಲ್ಲಾ  ಅರಸರೂ ಹೀಗೆಯೆ. ಇತರರು ಬಂದು ಹೇಳಿದ್ದನ್ನು  ನಂಬುವುದು.

ರಾಕು: ನೀವು ಆ ಮನುಷ್ಯನ್ನು  ನಾನು ಬರುವ ವರೆಗೆ ಬಂಧನದಲ್ಲಿಡಿ.

ರಾಜ: ಆಗಲಿ ಹಾಗೆಯೆ ಮಾಡುತ್ತೇನೆ.

(ರಾಜಕುಮಾರ ಹೋಗುತ್ತಾನೆ. ರಾಜ ಚಪ್ಪಾಳೆ ಹೊಡೆಯುತ್ತಾನೆ. ಇಬ್ಬರು ಸೇವಕರು ಬರುತ್ತಾರೆ)

ರಾಜ: ಅ  ಬುರಾಯನನ್ನು  ಎಳೆದು ತಂದು ಸೆರೆಮನೆಯಲ್ಲಿಡಿ.

ಸೇ: ಅಪ್ಪಣೆ ಮಹಾಪ್ರಭು.

ಫೇಡ್ ಔಟ್

ದೃಶ್ಯ ಹದಿಮೂರು: ಕಾಡು

(ರಾಜಕುಮಾರ ಮತ್ತು ಇಬ್ಬರು ಸೈನಿಕರು)

ರಾಕು: (ಒಬ್ಬ ಸೈನಿಕನೊಡನೆ) ನೀನು ಒಂದು ಎತ್ತರದ ಮರ ಹತ್ತಿ  ಯಾವುದಾದರೂ ಊರು ಕಾಣಿಸುತ್ತದೆಯೊ ಅಂತ ನೋಡು. (ಒಬ್ಬನು ಹೋಗುತ್ತಾನೆ. ರಾಜಕುಮಾರ ಒಂದು ಮರದ ಬುಡದಲ್ಲಿ ಮಲಗುತ್ತಾನೆ. ಇನ್ನೊಬ್ಬ ಸೈನಿಕ ಪಹರೆ ಕುಳಿತುಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನ ನಂತರ ಅವನು ತಟ್ಟನೆ ಎದ್ದು ಮರ ನೋಡುತ್ತಾನೆ)

ರಾಕು: ಯಾಕೆ ಮರ ನೋಡುತ್ತಿ? ಏನಿದೆ ಮರದ ಮೇಲೆ?

ಸೈನಿ೧: ಮರದ ಮೇಲೆ ಹುಡುಗಿ ಉಂಟಾ ಅಂತ ನೋಡಿದೆ.

ರಾಕು: ಯಾವ ಹುಡುಗಿ?

ಸೈನಿ೧: ಅವತ್ತಿತ್ತಲ್ಲಾ, ಅಂಥದೇ ಯಾವುದಾದರೂ ಒಂದು ಹುಡುಗಿ.

ರಾಕು: ನಾವು ಹುಡುಕುತ್ತಿರುವುದು ಅಮ್ಮಿಯನ್ನು! ಯಾವುದಾದರೂ ಒಂದು ಹುಡುಗಿಯನ್ನು ಅಲ್ಲ. ತಿಳೀತಾ?

ಸೈನಿ೧: ತಿಳೀತು ರಾಜಕುಮಾರ. ಕ್ಷಮಿಸಬೇಕು.

(ಹೋದ  ಸೈನಿಕ ಮರಳಿ ಬಂದು)

ಸೈನಿ೨: ನಾನು ಒಂದು ಎತ್ತರದ ಮರ ಹತ್ತಿ ಸುತ್ತಲೂ ನೋಡಿದೆ. ಸ್ವಲ್ಪ ಮುಂದೆ ಕಾಡಿನ ನಡುವೆ ಒಂದು ಅರಮನೆ ಕಾಣಿಸುತ್ತ್ತಿದೆ!

ರಾಕು:  ಏನು?  ಕಾಡಿನ ನಡುವೆ ಅರಮನೆಯೆ?

ಸೈನಿ೨: ಹೌದು ರಾಜಕುಮಾರ ಅರಮನೆ! ಕಾಡಿನಲ್ಲಿ  ಸ್ವಲ್ಪ ದೂರದಲ್ಲಿ ಸೌದೆ ಆರಿಸುತ್ತಿದ್ದವನೊಬ್ಬ ಸಿಕ್ಕಿದ.  ಅದು ಯಾರ ಅರಮನೆ ಎಂದು ಕೇಳಿದೆ. ಅದಕ್ಕೆ ಅವನು ಯಾರದು ಅಂತ ಗೊತ್ತಿಲ್ಲ. ನಿನ್ನೆ ಅದು ಅಲ್ಲಿರಲಿಲ್ಲ ಎಂದು ಹೇಳಿದ.

ರಾಕು: ವಿಚಿತ್ರ! ಯಾರ ಅರಮನೆಯಾಗಿರಬಹುದು?

ಸೈನಿ೨: ಯಾರೋ ಮಾಂತ್ರಿಕನ ಅರಮನೆಯಾಗಿರಬಹುದೆ?

ರಾಕು: ಯಾರದೇ ಆಗಿರಲಿ. ಇದು ನಮ್ಮ ಸಾಮಾಜ್ಯವಾದುದರಿಂದ ನಾವು ವಿಚಾರಿಸಲೇ ಬೇಕು. ನಡೆಯಿರಿ. (ಹೋಗುತ್ತಾರೆ)

ಫೇಡ್ ಔಟ್

 

ದೃಶ್ಯ ಹದಿನಾಲ್ಕು: ಅಮ್ಮಿಯ ಅರಮನೆ

(ರಾಜಕುಮಾರನ್ನು ನೋಡಿ ಅಮ್ಮಿಯೆ ಎದುರುಗೊಳ್ಳಲು ಬರುತ್ತಾಳೆ. ಜೊತೆಗೆ ಪುಟ್ಟನೂ ಇದ್ದಾನೆ. ರಾಜಕುಮಾರ ಆಶ್ಚರ್ಯ ಚಕಿತನಾಗಿದ್ದಾನೆ)

ರಾಕು: ಪಮ್ಮಿ! ನೀನು, ಇಲ್ಲಿ! ಇದು ಯಾರ ಮನೆ?

ಅಮ್ಮಿ: ಇದು ನನ್ನದೇ ಮನೆ.

ರಾಕು: ಏನು ನಿನ್ನ ಮನೆಯೆ? ಹೇಗೆ?

ಅಮ್ಮಿ: ಬನ್ನಿ ಹೇಳುತ್ತೇನೆ. ಈ ಅವಾಂತರವೆಲ್ಲ ನನ್ನ ಅಣ್ಣನಿಂದಾಯಿತು.ನನಗೆ ಒಬ್ಬ ಕೆಟ್ಟ ಅಣ್ಣನಿದ್ದಾನೆ ಎಂಬ ವಿಚಾರವನ್ನು ನಾನು ನಿಮ್ಮಿಂದ ಬಚ್ಚಿಟ್ಟೆ. ಯಾಕೆಂದರೆ, ನಾನು ಎಲ್ಲಿದ್ದರೂ ಅವನು ನನ್ನನ್ನು ಸಂತೋಷದಿಂದಿರಲು ಬಿಡುವವನಲ್ಲ. ನನ್ನನ್ನು ಮಹಾರಾಜರು ಕಾಡಿಗೆ ಕಳಿಸಲು ಅವನೇ ಕಾರಣ.

ರಾಕು: ಯಾರು  ಆ ಬುರಾಯನೆ?

ಅಮ್ಮಿ: ಹೌದು. ಅವನಿಗೆ ಗೊತ್ತಾಗಬಾರದೆಂದು ನಾನು ಅವತ್ತು ನಿಮ್ಮ ಹತ್ತಿರ ನನ್ನ   ನಿಜವಾದ ಹೆಸರು ಹೇಳದೆ,  ಪಮ್ಮಿ ಎಂದು ಹೇಳಿದೆ. ಆದರೆ ಅವನು ಹೇಗೋ ಪತ್ತೆ ಮಾಡಿದ. ನನ್ನನ್ನು ಅನಾಥಳನ್ನಾಗಿ ಮಾಡಿದ್ದೂ ಅವನೇ. ಕಾಡಿನಲ್ಲಿ ನಿಮ್ಮ ಸೈನಿಕರು ನನ್ನನ್ನು ಬಿಟ್ಟು ಹೋದ ಮೇಲೆ, ಅಲ್ಲಿಗೂ ಬಂದ ನನ್ನ ಅಣ್ಣ ನನ್ನ ಬಲಗೈಯನ್ನು  (ತೋಳು ಮುಟ್ಟಿ ತೋರಿಸಿ) ಇಲ್ಲಿಂದ ಕತ್ತರಿಸಿ ಹಾಕಿದ.

ರಾಕು: ಏನು? ಬಲಗೈಯನ್ನು ಕತ್ತರಿಸಿ ಹಾಕಿದನೆ? (ಅವಳ ಬಲಗೈ ಹಿಡಿದುಕೊಂಡು ನೋಡಿ) ಕೈ ಹಾಗೆಯೆ ಇದೆ!

ಅಮ್ಮಿ:  ಕಾಡಿನಲ್ಲಿ ಬಿದ್ದಿದ್ದ ನನ್ನನ್ನು  ಒಂದು ಹಾವು ಬದುಕಿಸಿತು.  ಆ ಹಾವು ನನ್ನ ಕೈ ಮತ್ತೆ ಬರುವಂತೆ ಮಾಡಿತು.

ರಾಕು: ನಿಜವೆ? ಅದು ಹೇಗೆ? ಕತ್ತರಿಸಿದ ಕೈ ಮತ್ತೆ ಬೆಳೆಯುವುದುಂಟೆ?

ಅಮ್ಮಿ: ನಾನು ಮಾಟಗಾತಿ ಅಂತ ನಿಮಗೂ ಸಂದೇಹವೆ?

ರಾಕು: ನೀನು ಮಾಟಗಾತಿ ಅಲ್ಲ ಎಂದು ನನಗೆ ಗೊತ್ತಿದೆ. ಆದರೆ ಈ ಕತ್ತರಿಸಿದ ಕೈ ವಾಪಾಸು ಬರುವ ವಿಚಾರ ಮಾತ್ರ ತುಂಬಾ ವಿಚಿತ್ರವಾಗಿದೆ. ನಂಬಲಿಕ್ಕೆ ಕಷ್ಟ. ಅದು ಹೇಗೆ ಆಯಿತು ಎಂದು ವಿವರವಾಗಿ ಹೇಳು.

ಅಮ್ಮಿ: ಹಾವು ಮತ್ತು ಅದರ ಹೆಂಡತಿಯ ಬಾಯಿಯಿಂದಲೇ ನೀವು ಉಳಿದ ಕತೆಯನ್ನು ಕೇಳಬಹುದು. ನಾನು ಮಾಟಗಾತಿ ಅಲ್ಲ ಎಂದು ನಿಮಗೆ ಆಗ ತಿಳಿಯುತ್ತದೆ.

ರಾಕು: ಎಲ್ಲಿದ್ದಾರೆ ಅವರು?

ಅಮ್ಮಿ: ಕರೆಯುತ್ತೇನೆ. (ಮೇಜಿನ ಮೇಲಿದ್ದ ಸಂದೂಕವನ್ನು ತೋರಿಸಿ) ಈ ಸಂದೂಕವನ್ನು  ಹಾವು ಮತ್ತು ಅವನ ಹೆಂಡತಿ ನನಗೆ ಕೊಟ್ಟರು. ನಾವು ಬೇಡಿದ್ದನ್ನು ಈ ಸಂದೂಕ ಕೊಡುತ್ತದೆ. ನಾನು ನಮಗೆ ಬೇಕಾದ ಆಹಾರ ಮತ್ತು ಮನೆಯನ್ನು ಬೇಡಿ ಪಡೆದೆ. ಹಾಗೆ ಪಡೆದ ಮನೆ ಇದು. ನಾನು ಈಗ ಹಾವನ್ನು ಮತ್ತು ಅದರ ಹೆಂಡತಿಯನ್ನು, ಕರೆಯುತ್ತೇನೆ. (ಕಣ್ಣುಮುಚ್ಚಿ  ಕೈಜೋಡಿಸಿ, ಏನೋ ಮಂತ್ರ ಹೇಳುತ್ತಾಳೆ. ಹಾವು ಮತ್ತು ಅದರ ಹೆಂಡತಿ ಕಾಣಿಸಿಕೊಳ್ಳುತ್ತಾರೆ)

ಹಾವು: ವಂದನೆಗಳು ರಾಜಕುಮಾರರಿಗೆ. ನಾನು ನಾಗ. ಇವಳು ನನ್ನ ಹೆಂಡತಿ ನಾಗಿ. ನಿಮ್ಮ ಹೆಂಡತಿ ಹೇಳಿದ್ದೆಲ್ಲ ಸತ್ಯ.

ರಾಕು: ನಿಮಗೆ ನಾನು ಕೃತಜ್ಞನಾಗಿದ್ದೇನೆ.  (ಅಮ್ಮಿಯೊಡನೆ) ನಾನು ಬುರಾಯನನ್ನು ಸೆರೆಮನೆಯಲ್ಲಿಡಲು ಹೇಳಿದ್ದೇನೆ. ಅವನ ತಲೆ ಕತ್ತರಿಸಬೇಕು.

ಅಮ್ಮಿ: ಬೇಡ. ಅವನನ್ನು ಇಲ್ಲಿಗೆ ಕರೆಸಿರಿ. ಅವನು ಮಾಡಿದ ಪಾಪಕ್ಕೆ ಸರಿಯಾದ ಶಿಕ್ಷೆಯನ್ನು ನಾನೇ ಅವನಿಗೆ ನೀಡಬೇಕು.

ರಾಕು: ಸರಿ. (ಸೈನಿಕರೊಡನೆ) ಹೋಗಿ. ಬುರಾಯನನ್ನು ಇಲ್ಲಿಗೆ ಕರೆದುಕೊಂಡು ಬನ್ನಿ. (ಪುಟ್ಟನನ್ನು ಎತ್ತಿಕೊಳ್ಳುತ್ತಾನೆ. ಸೈನಿಕರ ನಿರ್ಗಮನ)

ಅಮ್ಮಿ: ನಾನು ಮಹಾರಾಜರನ್ನು ಮತ್ತು ಮಹಾರಾಣಿಯನ್ನು  ಕೂಡ ಇಲ್ಲಿಗೇ ಕರೆಯಲು ಸಂದೂಕದ ಹತ್ತಿರ ಹೇಳುತ್ತೇನೆ. ಅವರು ಕೂಡ  ಇಲ್ಲಿಯೆ ಸತ್ಯವನ್ನು ತಿಳಿದುಕೊಳ್ಳಲಿ.  (ಕಣ್ಣುಮುಚ್ಚಿ  ಕೈಜೋಡಿಸಿ, ಏನೋ ಮಂತ್ರ ಹೇಳುತ್ತಾಳೆ. ಮಹಾರಾಜ ಮತ್ತು ಮಹಾರಾಣಿ ಕೂಡ ಬರುತ್ತಾರೆ)

ರಾಜ,ರಾಣಿ: ಅಮ್ಮಿ ! (ಅಮ್ಮಿ ಬಂದು ಮಾವ ಅತ್ತೆಯರಿಗೆ ವಂದಿಸುತ್ತಾಳೆ. ರಾಣಿ ಅಮ್ಮಿ ಮತ್ತು ಪುಟ್ಟನನ್ನು ಬಳಸಿಹಿಡಿದುಕೊಂಡು ಸಂತೋಷದ ಕಣ್ಣೀರು ಸುರಿಸುತ್ತಾಳೆ. ರಾಜ ನಾಗ ನಾಗಿಯರನ್ನು ನೋಡಿ) ಇವರು ಯಾರು?

ಅಮ್ಮಿ; ಇವರೇ ನನ್ನ  ಮತ್ತು ಪುಟ್ಟನ ಪ್ರಾಣವನು  ಉಳಿಸಿದವರು. ನಾಗ ಮತ್ತು ನಾಗಿ. (ನಾಗ ಮತ್ತು ನಾಗಿ ರಾಜನಿಗೆ  ವಂದಿಸುತ್ತಾರೆ)

ರಾಜ: ಬಹಳ ಸಂತೋಷ! ಬಹಳ ಸಂತೋಷ!  ನಿಮಗೆ ಬೇಕಾದ ಉಡುಗೊರೆಯನ್ನು ಕೇಳಿಕೊಳ್ಳಿ. ಅರ್ಧ ರಾಜ್ಯ ಕೊಡಲಿಕ್ಕೂ ಸಿದ್ಧ.

ಅಮ್ಮಿ: ಅವರಿಗೆ ಯಾವ ಉಡುಗೊರೆಯ ಅಗತ್ಯವೂ ಇಲ್ಲ.

ರಾಜ: (ಆಶ್ಚರ್ಯದಿಂದ) ಯಾಕಿಲ್ಲ?

ರಾಕು: ಯಾಕೆಂದರೆ, ಅವರ ಬಳಿ … (ಅವನ ಮಾತಿನ ನಡುವೆ ಸೈನಿಕರು ಅಬ್ಬುವನ್ನು ಕರೆದುಕೊಂಡು ಬರುತ್ತಾರೆ)

ರಾಕು: ಇವನು ಮಹಾ ಪಾಪಿ!  ಇವನ ತಲೆಯನ್ನು ಕಡಿಯಬೇಕು!  ಅದೇ  ಇವನಿಗೆ ಸರಿಯಾದ ಶಿಕ್ಷೆ!

ಅಮ್ಮಿ: ಬೇಡ!  ಇವನಿಗೆ ನೀಡಬೇಕಾದ ಶಿಕ್ಷೆ ಬೇರೆ ಇದೆ. (ಅಬ್ಬು) ಅಣ್ಣಾ , ಅಷ್ಟೆಲ್ಲಾ ಅನ್ಯಾಯ ಮಾಡಿಯೂ ನಿನಗೆ ತೃಪ್ತಿಯಾಗಲಿಲ್ಲ. ನನ್ನನ್ನು ಕಾಡಿಗೆ ಕಳಿಸುವ ಹಾಗೆ ಮಾಡಿ, ನನ್ನ ಕೈ ಕತ್ತರಿಸಿದೆ. ಪುಟ್ಟನನ್ನು ಕೊಲ್ಲಲು ಪ್ರಯತ್ನಿಸಿದೆ.  ಈ ಹಾವು ನಾಗ ಸಕಾಲದಲ್ಲಿ ಬರದಿರುತ್ತಿದ್ದರೆ, ನೀನು ನಮ್ಮಿಬ್ಬರನ್ನೂ  ಕೊಂದುಹಾಕುತ್ತಿದ್ದೆ  ಅಲ್ಲವೆ? (ಅಬ್ಬು ಮನವಾಗಿ ತಲೆ ತಗ್ಗಿಸಿ ನಿಂತಿದ್ದಾನೆ) ಅಪ್ಪನ ಆಶೀರ್ವಾದ ಸಾಕು ಎಂದು ನಾನು ಕುಂಬಳ ಬೆಳೆದು ಬದುಕಲು ಪ್ರಯತ್ನಿಸಿದೆ. ಆದರೆ ನೀನು ನನ್ನನ್ನು ಬದುಕಲು ಬಿಡಲಿಲ್ಲ. ನಿನಗೆ ಸರಿಯಾದ ಶಿಕ್ಷೆಯನ್ನು ನಾನು ನೀಡುತ್ತೇನೆ (ಸಂದೂಕದೆದುರು ಕುಳಿತು ಕಣ್ಣು ಮುಚ್ಚಿ , ಕೈಜೋಡಿಸಿ ಏನೋ ಗುಣುಗುಣಿಸಿ., ಅದರೊಳಗೆ ಕೈಹಾಕುತ್ತಾಳೆ. ಅವಳ ಕೈಗೆ ಒಂದು ಚಿಕ್ಕ ಬಟ್ಟೆಯ ಗಂಟು ಬರುತ್ತದೆ) ಇದರಲ್ಲಿ  ಸಿಹಿಕುಂಬಳದ ಬೀಜಗಳಿವೆ. ಇದನ್ನು  ತೆಗೆದುಕೊಂಡು ಅತ್ತಿಗೆ ಮತ್ತು ಮಕ್ಕಳನ್ನು ಕರೆದುಕೊಂಡು ಬರಗಾಲ ಪೀಡಿತ ಪ್ರದೇಶಕ್ಕೆ ಹೋಗು (ಅವನ ಕೈಯಲ್ಲಿ  ಬಟ್ಟೆಯ ಗಂಟು ಇರಿಸುತ್ತಾಳೆ). ಅಪ್ಪನ ಆಶೀರ್ವಾದ ನಿನಗೂ ಇರಲಿ.

ರಾಜ: ಸರಿಯಾದ ಶಿಕ್ಷೆ  ! ಸರಿಯಾದ ಶಿಕ್ಷೆ !

ರಾಕು: (ಸೈನಿಕರೊಡನೆ) ಬರಗಾಲ ಪ್ರದೇಶಕ್ಕೆ ಕುಂಬಳಕಾಯಿ ಕೊಂಡುಹೋಗಲು ಗಾಡಿಗಳು ಸಿದ್ಧವಾಗಿವೆಯೆ?

ಸೈನಿ೨: ಹೌದು ರಾಜಕುಮಾರ.

ರಾಕು:  ಇವನನ್ನು ಒಂದು  ಕುಂಬಳಕಾಯಿ ಗಾಡಿಯಲ್ಲಿ ಕುಳ್ಳಿರಿಸಿ ಬರಗಾಲ ಪೀಡಿತ ಪ್ರದೇಶಕ್ಕೆ ಕಳಿಸಿರಿ. (ಸೈನಿಕರು ಅಬ್ಬುವನ್ನು ಒಯ್ಯುತ್ತಾರೆ)

ಅಮ್ಮಿ: (ಸಂದೂಕವನ್ನು ನಾಗನ ಕೈಯಲ್ಲಿರಿಸಿ) ಇದು ನಿಮ್ಮದು. ನನಗೆ ಇದರ ಅಗತ್ಯವಿಲ್ಲ. ನಿಮ್ಮ ಉಪಕಾರಕ್ಕೆ ನಾನು ಕೃತಜ್ಞಳಾಗಿದ್ದೇನೆ. (ನಾಗ ನಾಗಿಯರ ಕೈಗಳನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ಕೃತಜ್ಞತೆ ವ್ಯಕ್ತಪಡಿಸುತ್ತಾಳೆ) ಸರಿ. ಇನ್ನು ಹೊರಡೋಣವೆ?

ರಾಕು: ಹೊರಡೋಣ.

ಫೇಡ್ ಔಟ್