ಪಾತ್ರಗಳು:
೧. ಮಾಂತ್ರಿಕ
೨. ಹಲವು ಹುಡುಗಿಯರು
೩. ಊರಿನ ಮಂದಿ

ಪರಿಕರಗಳು:
ಒಂದು ದೊಡ್ಡ ಡೋಲು, ಒಂದು ಬಣ್ಣದ ಕೋಲು, ಬಣ್ಣಬಣ್ಣದ ಚಿಪ್ಪುಗಳು

 

ದೃಶ್ಯ ಒಂದು: ಕಡಲ ದಂಡೆ

(ಕಡಲಿಗೆ ಸಮೀಪದ ಕಡಲದಂಡೆ. ಮರಳಿನ  ಮೇಲೆ ಎಲ್ಲಾ ಕಡೆ  ಬಣ್ಣಬಣ್ಣದ ಚಿಪ್ಪುಗಳು ಬಿದ್ದುಕೊಂಡಿವೆ. ಒಂದು ಕಡೆ ಒಂದು ಮರಳದಿಣ್ಣೆ. ಅದರ ತುದಿಯಲ್ಲಿ ಮರಳಲ್ಲಿ ಅರ್ಧ ಹುದುಗಿರುವ ಒಂದು ಬಂಡೆ. ಒಮ್ಮೆಲೇ ಸುಮಾರು ಇಪ್ಪತ್ತು ಚಿಕ್ಕ ಚಿಕ್ಕ ಹುಡುಗಿಯರ ಪ್ರವೇಶ. ಅಪೂರ್ವವಾದ  ಉಲ್ಲಾಸ  ಮತ್ತು ಉತ್ಸಾಹ. ಒಬ್ಬಳು ಹುಡುಗಿ ಎಲ್ಲರಿಗಿಂತ ದೊಡ್ಡವಳು. ಮಕ್ಕಳು ಓಡುತ್ತಾಡುತ್ತಾ ಚಿಪ್ಪು ಹೆಕ್ಕುತ್ತಾ ಇರುತ್ತಾರೆ. ಹೆಕ್ಕಿ ಒಬ್ಬರಿನ್ನೊಬ್ಬರಿಗೆ ತೋರಿಸುತ್ತಾ ಸಿಕ್ಕಿದ  ಚಿಪ್ಪಿನ ಬಗ್ಗೆ ಮಾತಾಡುತ್ತಾರೆ. ಹೆಕ್ಕಿದ ಚಿಪ್ಪನ್ನು  ಪ್ರತ್ಯಪ್ರತ್ಯೇಕವಾಗಿ ಗುಡ್ಡೆ ಹಾಕುತ್ತಾರೆ. ಮಕ್ಕಳು ಸಮುದ್ರದ ತೀರಾ ಹತ್ತಿರಕ್ಕೆ  ಹೋದಾಗ  ದೊಡ್ಡ ಹುಡುಗಿ  ಇತರ ಹುಡುಗಿಯರನ್ನು  ಎಚ್ಚರಿಸುತ್ತಾ  ಗದರಿಸುತ್ತಾ   ಇರುತ್ತಾಳೆ)

ಹು: ಸಮದ್ರದ ಹತ್ತಿರಕ್ಕೆ ಹೋಗಬೇಡಿ. ತೆರೆ ಬಂದು ಎಳೆದುಕೊಂಡು ಹೋಗುತ್ತದೆ.

ಒಂದು: ತೆರೆ ಎಳೆದುಕೊಂಡು ಹೋಗಿ ಏನು ಮಾಡುತ್ತದೆ?

ಹು: ಸಮುದ್ರದ ಅಡಿಗೆ ಕೊಂಡು ಹೋಗಿ ಅಲ್ಲಿ ನಿನ್ನನ್ನು  ಬಚ್ಚಿಟ್ಟುಕೊಳ್ಳುತ್ತದೆ.

ಒಂದು: ಬಚ್ಚಿಟ್ಟುಕೊಂಡು ಏನುಮಾಡುತ್ತದೆ?

ಹು: ನಿಂಗೆ ಕೆಲಸ ಕೊಡುತ್ತದೆ. ಮತ್ತೆ ನಿನ್ನನ್ನು ಮನೆಗೆ ಹೋಗಲು ಬಿಡುವುದಿಲ್ಲ.

ಒಂದು: ಏನು ಕೆಲಸ?

ಹು:  ಸಮುದ್ರರಾಜನ ಸ್ನಾನಕ್ಕೆ ನೀರು ಕಾಯಿಸುವ  ಕೆಲಸ.

ಎರಡು: ಸಮುದ್ರದಲ್ಲಿ ಷಾರ್ಕ್ ಮೀನುಗಳಿವೆ, ಅವು ಮನುಷ್ಯರನ್ನು ತಿಂದುಬಿಡುತ್ತವೆ ಅಂತ ಅಪ್ಪ ಹೇಳುತ್ತಾರೆ. ಹೌದಾ?

ಹು: ಹೌದು. ನೀವು ತೆರೆಗಳ ಬಳಿ ಹೋಗಬೇಡಿ. ಷಾರ್ಕ್‌ಗಳು ನಿಮ್ಮನ್ನು ಎಳೆದುಕೊಂಡು ಹೋಗುತ್ತವೆ.

ಮೂರು: ಅಕ್ಕಾ ಅಕ್ಕಾ. ಸಮುದ್ರದಲ್ಲಿ  ಒಟ್ಟು ಎಷ್ಟು ತೆರೆಗಳಿವೆ?

ಹು: ಸಮುದ್ರದಲ್ಲಿ   ಒಂದು ಸಾವಿರ ಲಕ್ಷ  ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ತೆರೆಗಳಿವೆ.

ಮೂರು: ನಂಗೆ ಒಂದು ಶಂಖ ಸಿಕ್ಕಿತು!

ನಾಲ್ಕು: ಎಲ್ಲಿ ತೋರಿಸು.

ಐದು: ಅಲ್ಲಿ ತುಂಬಾ ಇದೆ. (ಸಮುದ್ರದ ಅಂಚಿಗೆ ಓಡುತ್ತಾಳೆ)

ಹು:(ಅವಳನ್ನು ತಡೆದು ನಿಲ್ಲಿಸಿ) ಅಷ್ಟು ಬದಿಗೆ ಹೋಗ್ಬಾರ‍್ದು ಅಂತಲ್ವ ಹೇಳಿದ್ದು?

ಸೂಸಿ: ನಂಗೆ ಒಂದು ಚಿನ್ನದ ಬಣ್ಣದ ಚಿಪ್ಪು ಸಿಕ್ಕಿತು! ( ಸೂಸಿ ಎಂಬ ಹುಡುಗಿಗೆ ಒಂದು ದೊಡ್ಡ ಚಿಪ್ಪು ಸಿಕ್ಕಿದ್ದು   ಸಂತೋಷದಿಂದ ಕುಣಿದಾಡುತ್ತಾಳೆ.  ಎಲ್ಲಿ ಎಲ್ಲಿ  ಎಂದು ಎಲ್ಲರೂ ಅದನ್ನು ನೋಡಲು ಅವಳ ಸುತ್ತ  ಸೇರುತ್ತಾರೆ. ಎಲ್ಲರೂ ಅದರ ಚೆಂದವನ್ನು ಹೊಗಳಿ ಮತ್ತೆ ಚಿಪ್ಪು ಹೆಕ್ಕಿ ಗುಪ್ಪೆ ಹಾಕುವುದರಲ್ಲ್ಲಿ ಮಗ್ನರಾಗುತ್ತಾರೆ.  ಸೂಸಿ ತನಗೆ ಸಿಕ್ಕಿದ ಚಿಪ್ಪಿನ  ಅಂದವನ್ನು ಒಂದಷ್ಟು ಹೊತ್ತು ವೀಕ್ಷಿಸಿ, ಎಲ್ಲಿ ಜೋಪಾನವಾಗಿಡಲಿ ಎಂದು ಅತ್ತಿತ್ತ ನೋಡಿ, ಮರಳ ದಿಣ್ಣೆಯ ಮೇಲಿರುವ ಬಂಡೆಯ ಮೇಲೆ ಇರಿಸುತ್ತಾಳೆ. ಆ ಮೇಲೆ ಅದನ್ನು ಮರೆತು, ಚಿಪ್ಪು ಹೆಕ್ಕುವುದರಲ್ಲಿ  ನಿರತಳಾಗುತ್ತಾಳೆ.  ಮತ್ತೆ ತುಸು ಹೊತ್ತು ಚಿಪ್ಪು ಹೆಕ್ಕುವಿಕೆ ಮುಂದರಿಯುತ್ತದೆ)

ಹು: ಇನ್ನು ಹೋಗೋಣ. ತಡಮಾಡಿದರೆ ಮನೆಯಲ್ಲಿ ಜೋರು ಮಾಡುತ್ತಾರೆ.

(ಎಲ್ಲರೂ ಹೊರಡುತ್ತಾರೆ.  ಚಿಪ್ಪುಗಳನ್ನು  ಕೆಲವರು  ಉಟ್ಟ ಲಂಗದಲ್ಲಿ  ಸುತ್ತಿಟ್ಟುಕೊಳ್ಳುತ್ತಾರೆ. ಕೆಲವರು ಕರವಸ್ತ್ರದಲ್ಲ್ಲಿ  ಕಟ್ಟಿಕೊಳ್ಳುತ್ತಾರೆ)

ಫೇಡ್ ಔಟ್

 

ದೃಶ್ಯ ಎರಡು: ಸಮುದ್ರದ ದಂಡೆ. ಬೇರೊಂದು ಸ್ಥಳ

(ಮಕ್ಕಳು ಮಾತಾಡುತ್ತಾ ನಡೆಯುತ್ತಿದ್ದಾರೆ. ತಟ್ಟನೆ ಸೂಸಿ ನಿಂತುಬಿಡುತ್ತಾಳೆ)

ಸೂಸಿ: ನಾನು ನನ್ನ ಚಿಪ್ಪು ಮರೆತು ಬಂದುಬಿಟ್ಟೆ.

ಹು: ಯಾವ ಚಿಪ್ಪು?

ಸೂಸಿ: ಆ ದೊಡ್ಡ ಚಿಪ್ಪು.  ಹುಣ್ಣಿಮೆ ಚಂದ್ರನ ಹಾಗಿತ್ತು.  ಹುಣ್ಣಿಮೆ ಚಂದ್ರನಂತೆಯೆ ಬೆಳ್ಳಗಿತ್ತು.

ಹು: ಎಲ್ಲಿಟ್ಟೆ  ಸೂಸಿ?

ಸೂಸಿ: ಮರಳ ರಾಶಿಯ ಮೇಲೆ  ಒಂದು ಬಂಡೆ ಇತ್ತಲ್ಲ? ಅದರ ಮೇಲೆ ಇಟ್ಟೆ.

ಹು: ಯಾಕೆ ಅಲ್ಲಿಟ್ಟೆ?

ಸೂಸಿ: ಯಾರದಾದ್ರೂ ಕಾಲಿನಡಿ ಬಿದ್ದು ಹುಡಿಯಾಗಬಹುದು ಅಂತ ಅಲ್ಲಿ ಇಟ್ಟೆ. ಹೋಗೋಣ. ಅದನ್ನು ತೆಗೆದುಕೊಂಡು ಬರೋಣ.

ಹು: ಇನ್ಯಾರು ಪುನ: ಅಷ್ಟು ದೂರ ನಡೆಯೊದು? ಹೋಗಲಿ ಅದು. ಇನ್ನೊಂದು ದಿವಸ ಹೋದ್ರಾಯ್ತು. ಬೇರೆ ಬೇಕಾದಷ್ಟು ಚಿಪ್ಪುಗಳು ಸಿಗುತ್ತವೆ.

ಸೂಸಿ: ಇಲ್ಲ . ನಂಗೆ ಅದೇ ಬೇಕು.

ಹು:  ನಿನ್ನ ಹತ್ರ ಬೇಕಾದಷ್ಟು ಇದೆಯಲ್ಲ? ಅದನ್ನ ನಾಳೆ ಹೋಗಿ ತರೋಣ.

ಸೂಸಿ: ಬೇರೆ ಯಾರಾದ್ರೂ ಕೊಂಡ್ಹೋದ್ರೆ?

ಹು: ಅಂಥ ಚಿಪ್ಪು ಬೇರೆ ಕೂಡ ಇರುತ್ತೆ.

ಸೂಸಿ: ನಂಗೆ ಅದೇ ಬೇಕು!

ಹು:  ಈಗ ತಡ ಆಯ್ತು . ಕತ್ತಲಾಗ್ತಾ ಇದೆ ಸೂಸಿ. ನಾಳೆ ಹೋಗೋಣ.

ಸೂಸಿ: ಅದು ನನಗೆ  ಈಗಲೇ ಬೇಕು. ಇವ್ರೆಲ್ಲಾ ಇಲ್ಲೇ ಇರ್ಲಿ . ನಾವಿಬ್ರು ಹೋಗಿಬರೋಣ. ಬಾ.

ಹು: ಬೇಡ ಸೂಸಿ. ಈಗ್ಲೇ ತುಂಬಾ ತಡವಾಗಿದೆ. ಇನ್ನೂ ತಡಮಾಡಿದ್ರೆ, ಮನೆಯಲ್ಲಿ  ಗದರಿಸ್ತಾರೆ.

ಸೂಸಿ: ಹಾಗಿದ್ರೆ ನಾನೊಬ್ಳೇ ಹೋಗ್ತೀನಿ.

ಹು: ಬೇಡ ಸೂಸಿ. ನಾಳೆ ಹೋಗಿ ಹುಡುಕೋಣ.

ಸೂಸಿ: ಇಲ್ಲ ನಂಗದು ಈಗ್ಲೇ ಬೇಕು. ನೀವು ಬರ‍್ದಿದ್ರೆ ಬೇಡ ನಾನು ಒಬ್ಳೇ ಹೋಗ್ತೇನೆ. (ಓಡುತ್ತಾ ಹೋಗುತ್ತಾಳೆ. ಇತರರು ನೋಡುತ್ತಾ ನಿಲ್ಲುತ್ತಾರೆ. ಸೂಸಿ “ಚಿಪ್ಪೂ ಚಿಪ್ಪೂ  ನನ್ನಾ ಚಿಪ್ಪೂ  ಹುಣ್ಣಿಮೆ ಚಂದ್ರನ  ಚೆಂದದ ಚಿಪ್ಪು   ” ಎಂದು ಹಾಡುತ್ತಾ ಹೋಗುತ್ತಾಳೆ.

ಫೇಡ್ ಔಟ್

ದೃಶ್ಯ ಮೂರು: ಮೊದಲ ದೃಶ್ಯದ ಕಡಲದಂಡೆ

(ಮರಳು ದಿಣ್ಣೆಯ ಮೇಲೆ ಮಾಂತ್ರಿಕ ಕುಳಿತಿದ್ದಾನೆ. ದೊಡ್ಡ ದೇಹ. ಕೈಯಲ್ಲಿ ಮಂತ್ರದ ಕೋಲು. ಅವನ ಪಕ್ಕದಲ್ಲಿ ಒಂದು ದೊಡ್ಡ ಡೋಲು ಇದೆ.ಅವನ ಕೈಯಲ್ಲಿ ಸೂಸಿ ಅವಿತಿಟ್ಟುಹೋದ ಚಿಪ್ಪು ಇದೆ. ಸೂಸಿ ಬಂದು ಅವನ ಮುಂದೆ ನಿಂತು ಅವನ ಕೈಯಲ್ಲಿರುವ ಚಿಪ್ಪನ್ನು ನೋಡಿ ನಿಲ್ಲುವಾಗ ಮಾಂತ್ರಿಕನ ಮುಖ ಅರಳುತ್ತದೆ)

ಸೂಸಿ: ಅದು ನನ್ನ ಚಿಪ್ಪು.

ಮಾಂ: ಹೌದಾ? ಇದು ನಿನ್ನ ಚಿಪ್ಪಾ? ಅಹ ಎಷ್ಟು ಚೆಂದ! ಇದು ಬೇಕೇ ಬೇಕಾ ನಿಂಗೆ?

ಸೂಸಿ: ಹೌದು. ಬೇಕು. (ಕೈ ನೀಡುತ್ತಾಳೆ)

ಮಾಂ: ತಡಿ ತಡಿ. ನೀನು ತುಂಬಾ ಚೆನ್ನಾಗಿ ಹಾಡ್ತಿ. ನೀನು ಹಾಡ್ತಾ ಬಂದಿಯಲ್ಲ? ಏನದು ಹಾಡು?  ಒಮ್ಮೆ ಹಾಡು ನೋಡೋಣ.

ಸೂಸಿ: ಮೊದಲು ನನ್ನ ಚಿಪ್ಪು ಕೊಡು

ಮಾಂ: ಮೊದಲು ನೀನು ಹಾಡಬೇಕು. ಅನಂತರ ಚಿಪ್ಪು.

ಸೂಸಿ: ಚಿಪ್ಪೂ ಚಿಪ್ಪೂ  ನನ್ನಾ ಚಿಪ್ಪೂ  ಹುಣ್ಣಿಮೆ ಚಂದ್ರನ ಚೆಂದದ ಚಿಪ್ಪು

ಮಾಂ: ಅಹ, ನೀನು ತುಂಬಾ ಚೆನ್ನಾಗಿ ಹಾಡ್ತಿ !

ಸೂಸಿ: ನನ್ನ ಚಿಪ್ಪು ಕೊಡು.

ಮಾಂ: ಇನ್ನೊಮ್ಮೆ ಹಾಡು. ಕೊಡ್ತೀನಿ.

ಸೂಸಿ: ಖಂಡಿತ ಕೊಡ್ತೀಯ?

ಮಾಂ: ಖಂಡಿತ ಕೊಡ್ತೀನಿ.

ಸೂಸಿ: ಚಿಪ್ಪೂ ಚಿಪ್ಪೂ  ನನ್ನಾ ಚಿಪ್ಪೂ  ಹುಣ್ಣಿಮೆ ಚಂದ್ರನ ಚೆಂದದ ಚಿಪ್ಪು  ಕೊಡು ನನ್ನ ಚಿಪ್ಪು.

ಮಾಂ: ಇಕೊ ತೆಗೆದುಕೊ. (ಸೂಸಿ ಬಳಿ ಬಂದು ಚಿಪ್ಪಿಗಾಗಿ ನೀಡಿದ ಕೈಯನ್ನು ಮಾಂತ್ರಿಕ ಹಿಡಿದುಕೊಳ್ಳುತ್ತ್ತಾನೆ) ಹಾಂ ಸಿಕ್ಕಿದಿ! ಈಗ ನಾನು ಹೇಳಿದ ಹಾಗೆ ಕೇಳು. ನಿನ್ನನ್ನು ಈ ಡೋಲಿನ ಒಳಗೆ ಇಡುತ್ತೇನೆ. ನಾನು ಡೋಲಿಗೆ ಈ ಕೋಲಿನಿಂದ ಬಡಿದಾಗಲೆಲ್ಲಾ ನೀನು ನಿನ್ನ ಚಿಪ್ಪು ಹಾಡನ್ನು ಹಾಡಬೇಕು.

ಸೂಸಿ: (ಅಳುತ್ತಾ) ನನ್ನನ್ನು ಹೋಗಲು ಬಿಡು. ನನಗೆ ನನ್ನ ಚಿಪ್ಪು ಕೊಡು.

ಮಾಂ: (ಸೂಸಿಗೆ ಕೋಲಿನಿಂದ ಒಂದು ಪೆಟ್ಟು ಕೊಟ್ಟು) ಸುಮ್ಮನಿರು. ನಾನು ಹೇಳಿದ ಹಾಗೆ ಕೇಳದಿದ್ರೆ ಇದೇ ರೀತಿ ಪೆಟ್ಟು ತಿನ್ತಿ. ಬಾ ಇಲ್ಲಿ. ಕೂತ್ಕೊ ಈ ಡೋಲಿನೊಳಗೆ. (ಅವಳನ್ನು  ಎತ್ತಿ ಡೋಲಿನೊಳಗೆ ಇಟ್ಟು ಅದನ್ನು ಮುಚ್ಚಿ ಕೋಲಿನಿಂದ ಬಡಿಯುತ್ತಾನೆ. ಅದರೊಳಗಿಂದ ಸೂಸಿ ಹಾಡುತ್ತಾಳೆ) ಹಾಗೆ! (ಪುನ: ಬಡಿಯುತ್ತಾನೆ. ಹಾಡು ಬರುವುದಿಲ್ಲ. ಸೂಸಿಯ ಅಳು ಕೇಳಿಸುತ್ತದೆ) ಹಾಡು! ಇಲ್ಲದಿದ್ದರೆ ಈ ಪೆಟ್ಟು ನಿನ್ನ ಬೆನ್ನ ಮೇಲೆ ಬೀಳುತ್ತದೆ . (ಕೋಲಿನಿಂದ ಜೋರಾಗಿ ಬಾರಿಸುತ್ತಾನೆ. ಸೂಸಿಯ ಹಾಡು ಆರಂಭವಾದಾಗ ಸಂತೋಷದಿಂದ ಡೋಲನ್ನು ಎತ್ತಿ ಹೆಗಲಿಗೇರಿಸಿಕೊಂಡು ಹೋಗುತ್ತಾನೆ)

ಹಾಡಿನೊಂದಿಗೆ ಫೇಡ್ ಔಟ್

 

ದೃಶ್ಯ ನಾಲ್ಕು: ಒಂದು ಹಳ್ಳಿ. ವಾರದ ಸಂತೆ

(ಮಾಂತ್ರಿಕ ಒಂದು ಕಡೆ ಡೋಲನ್ನಿರಿಸಿ ಕುಳಿತುಕೊಂಡಿದ್ದಾನೆ. ಸುತ್ತ ಜನ  ಸೇರಿದ್ದಾರೆ)

ಮಾಂ: ಬನ್ನಿ ಬನ್ನಿ!  ಹಾಡುವ ಡೋಲನ್ನು ನೋಡಿ! ಡೋಲಿನ  ಹಾಡನ್ನು ಕೇಳಿ!

ಒಬ್ಬ: ಏನು ಡೋಲು ಹಾಡುತ್ತದೆಯೆ?

ಮಾಂ: (ಡೋಲನ್ನು ತೋರಿಸಿ) ಇದು ಮಂತ್ರದ ಡೋಲು! (ಕೈಯಲ್ಲಿರುವ ಕೋಲು ತಿರುಗಿಸುತ್ತಾ ) ಇದು ಮಂತ್ರದ ಕೋಲು! ಕೇಳಿ! (ಡೋಲಿಗೆ ಜೋರಾಗಿ ಹೊಡೆಯುತ್ತಾನೆ. ಸೂಸಿ ಹಾಡುತ್ತಾಳೆ)

ಇನ್ನೊಬ್ಬ: ಅದ್ಭುತ!

ಒಬ್ಬ: ಎಷ್ಟು ಚೆನ್ನಾಗಿ ಹಾಡುತ್ತದೆ! ಎಷ್ಟು ಒಳ್ಳೆಯ ಸ್ವರ!

ಇನ್ನೊಬ್ಬ: ಇನ್ನೊಂದು ಸಲ ಹಾಡಿಸು! (ಹಲವು ಮಂದಿ “ಇನ್ನೊಂದು ಸಲ ಹಾಡಿಸು” ಎಂದು ಹೇಳುತ್ತಾರೆ)

ಮಾಂ: ಹಣ ಕೊಟ್ರೆ ಹಾಡಿಸುತ್ತೇನೆ. (ಟೊಪ್ಪಿಗೆ ತೆಗೆದು ಎಲ್ಲರ ಮುಂದೆ ಹಿಡಿಯುತ್ತಾನೆ. ಎಲ್ಲರೂ ಹಣ ಹಾಕುತ್ತಾರೆ. ಸಂಗ್ರಹವಾದ ಹಣವನ್ನು ಜೇಬಿಗೆ ಹಾಕಿಕೊಂಡು ಡೋಲಿಗೆ ಜೋರಾಗಿ ಬಡಿಯುತ್ತಾನೆ. ಸೂಸಿ ಹಾಡುತ್ತಾಳೆ. ಹಾಡಿನ ಕೊನೆಗೆ ಅಳು)

ಒಬ್ಬ: ಚಿಕ್ಕ ಹುಡುಗಿಯ ಸ್ವರದ ಹಾಗೆ ಇದೆ.

ಇನ್ನೊಬ್ಬ:  ನಿಂಗೆ ಹಾಡಿನ ಕೊನೆಗೆ ಅಳುವಿನ ಶಬ್ದ ಕೇಳಿಸಿತೆ?

ಒಬ್ಬ: ಇಲ್ಲ. ನಂಗೆ ಕೇಳಿಸಲಿಲ್ಲ.

ಇನ್ನೊಬ್ಬ: ಇನ್ನೊಮ್ಮೆ ಹಾಡಿಸು!

ಮಾಂ: ಈಗ ಇಷ್ಟೇ. ಮುಂದಿನ ವಾರ ಮತ್ತೆ ಬರುತ್ತೇನೆ. (ಅವಸರವಸರವಾಗಿ ಡೋಲು ಹೆಗಲಿಗೇರಿಸಿಕೊಂಡು ಹೋಗುತ್ತಾನೆ.  ಕೊನೆಯಲ್ಲಿ ಹುಡುಗಿಯ ಅಳುವಿನ ಧ್ವನಿ)

ಫೇಡ್ ಔಟ್

 

ದೃಶ್ಯ ಐದು: ಮೊದಲನೆಯ ದೃಶ್ಯದ ಜಾಗ

(ಮಾಂತ್ರಿಕ ಡೋಲಿನ ಸಹಿತ ಮರಳು ದಿಣ್ಣೆಯ ಮೇಲೆ ಕುಳಿತಿದ್ದಾನೆ. ಅವನ ಮುಂದೆ ತಟ್ಟೆಯ ತುಂಬಾ ಆಹಾರ ಇದೆ. ಗಬಗಬ ತಿನ್ನುತ್ತಿದ್ದಾನೆ. ಡೋಲಿನೊಳಗಿಂದ ಸೂಸಿಯ ಮಾತು)

ಸೂಸಿ: ನಂಗೆ ಹಸಿವಾಗ್ತಿದೆ.

ಮಾಂ: ಸುಮ್ನಿರು! ನಾನು ತಿಂದು ಉಳಿದ್ರೆ ಮಾತ್ರ ನಿಂಗೆ!

ಸೂಸಿ: ನನ್ನನ್ನು ಹೋಗಲು ಬಿಡು!

ಮಾಂ: ಏನು ನಿನ್ನನ್ನು ಹೋಗಲು ಬಿಡುವುದಾ? ಬಾಯಿಮುಚ್ಚಿ ಕೊಂಡು ಸುಮ್ಮನಿರು!

(ಸೂಸಿಯ ಅಳು. ಮಾಂತ್ರಿಕ ಎಲ್ಲವನ್ನೂ ತಿಂದು ಮುಗಿಸಿ ತೇಗಿ, ಕೈನೆಕ್ಕುತ್ತಾನೆ. ಸೋರೆ ಬುರುಡೆಯಿಂದ ಮದ್ಯ ಕುಡಿದು ಬಾಯಿ ಚಪ್ಪರಿಸುತ್ತಾನೆ. ಮೊದಲ ದೃಶ್ಯದಲ್ಲಿದ್ದ ಎಲ್ಲಾ ಮಕ್ಕಳು ಬರುತ್ತಾರೆ. ಯಾರ ಮುಖದಲ್ಲಿಯೂ ಗೆಲುವಿಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಚಿಪ್ಪು ಹೆಕ್ಕಿ  ಕೈಯಲ್ಲಿ ಹಿಡಿದು ತಿರುಗಿಸಿ ಮುರುಗಿಸಿ ನೋಡಿ ಒಂದೂ ಚೆನ್ನಾಗಿಲ್ಲ ಎಂಬ ಭಾವದಲ್ಲಿ ಪುನ: ನೆಲಕ್ಕೆ ಎಸೆಯುತ್ತಾರೆ. ಎಲ್ಲರೂ ಬೇಸರದಿಂದ ಒಂದು ಕಡೆ ಕುಳಿತುಕೊಳ್ಳುತ್ತ್ತಾರೆ)

ಹು: ನಮ್ಮ ಸೂಸಿ ಸಿಗಲೇ ಇಲ್ಲ. ಇವತ್ತಿಗೆ ಒಂದು ವಾರ ಆಯ್ತು.

ಒಂದು: ಅವಳ ಅಪ್ಪ ಅಮ್ಮ ಎಲ್ಲಾ ಕಡೆ ಹುಡುಕಿದ್ರು.

ಎರಡು: ಪಾಪ. ಅವರ ದು:ಖವನ್ನು  ನೋಡ್ಲಿಕ್ಕಾಗಲ್ಲ. (ದು:ಖಿಸುತ್ತಾಳೆ. ಇತರರೂ ದುಖಿಸುತ್ತಾ ಕಣ್ಣೊರಸಿಕೊಳ್ಳುತ್ತಾರೆ)

ಮೂರು: ಸೂಸಿ ಚಿಪ್ಪನ್ನು  ಅವಿತಿಟ್ಟ  ಮರಳ ದಿಣ್ಣೆಯ ಮೇಲೆ ಯಾರೋ ಕುಳಿತಿದ್ದಾರೆ.

ನಾಲ್ಕು: ಐಂದ್ರಜಾಲಿಕನ ಹಾಗೆ ಕಾಣಿಸ್ತಿದಾನೆ.

ಐದು: ಸೂಸಿಯನ್ನು ಕಂಡು ಹಿಡಿಯಲು ಅವನಿಂದ ಏನಾದ್ರೂ ಪ್ರಯೊಜನವಾಗ್ಬಹುದೊ ಏನೊ?

ಆರು: ಕೇಳಿ ನೋಡುವ. (ಎಲ್ಲರೂ ‘ಕೇಳಿ ನೋಡುವ ಕೇಳಿ ನೋಡುವ ’ಎಂದುಕೊಂಡು ಅವನ ಬಳಿ ಹೋಗುತ್ತಾರೆ)

ಹು: ನೀನು ಯಾರು?

ಮಾಂ: ನಾನು ಮಹಾ ಐಂದ್ರಜಾಲಿಕ.

ಹು: ನಿನ್ನಿಂದ ನಮಗೆ ಒಂದು ಉಪಕಾರ ಆಗ್ಬೇಕು.

ಮಾಂ: ಏನು?

ಹು: ನಮ್ಮ ಸ್ನೇಹಿತೆಯೊಬ್ಬಳು ಕಾಣೆಯಾಗಿದ್ದಾಳೆ. ನಿಮ್ಮ ಇಂದ್ರಜಾಲದ ಸಹಾಯದಿಂದ ಅವಳನ್ನು ಹುಡುಕಿಕೊಡಬೇಕು.  (ಈ ಮಾತು ಕೇಳಿ ಮಾಂತ್ರಿಕ ತುಸು  ಆತಂಕಗೊಳ್ಳುತ್ತಾನೆ. ಆದರೆ ತೋರಿಸಿಕೊಳ್ಳದೆ)

ಮಾಂ: ಅಂಥ ಕೆಲಸವೆಲ್ಲ ನಾನು ಮಾಡಲ್ಲ.

ಹು: ಮತ್ತೆ ನಿನ್ನಿಂದಾಗುವುದು ಎಂಥ ಕೆಲಸ?

ಮಾಂ: ಇಂದ್ರಜಾಲ! ಮಹೇಂದ್ರಜಾಲ!

ಒಂದು: ಒಂದು ಇಂದ್ರಜಾಲ ಮಾಡಿ ತೋರಿಸು.

ಎರಡು: ಈ ಮರಳಿನ ರಾಶಿಯನ್ನು ಚೆಂದಚೆಂದದ ಚಿಪ್ಪಿನ ರಾಶಿ ಮಾಡು!

ಮೂರು: ಆ ಸಮುದ್ರದ ತೆರೆಯನ್ನು  ಸ್ವಲ್ಪ ಹೊತ್ತು ನಿಲ್ಲಿಸು!

ನಾಲ್ಕು: ತೆರೆಗಳನ್ನು ಆಚೆ ದೂಡಿ ಸಮುದ್ರದ ಅಡಿಯಲ್ಲಿ ಏನಿದೆ ಅಂತ ತೋರಿಸು.

ಮಾಂ: ಅದನ್ನೆಲ್ಲ ನಾನು ಮಾಡುವುದಿಲ್ಲ.

ಹು: ಮತ್ತೇನು ಮಾಡ್ತಿ ನೀನು?

ಮಾಂ: ಐಂದ್ರಜಾಲ ಮತ್ತು  ಮಹೇಂದ್ರಜಾಲ ಮಾತ್ರ!

ಹು: (ಡೋಲನ್ನು ತೋರಿಸಿ) ಈ ಡೋಲು ಯಾಕೆ?

ಮಾಂ: ಅದು ಜನರನ್ನು ಸೇರಿಸಲಿಕ್ಕೆ.

ಮೂರು: ನಾವು ತುಂಬಾ ಜನ ಇದ್ದೀವಿ. ನಮ್ಗೆ ಇಂದ್ರಜಾಲ ಮಹೇಂದ್ರಜಾಲ ತೋರಿಸು!

ಮಾಂ: ಈಗಾಗಲ್ಲ. ಈಗ ನನಗೆ ವಿಶ್ರಾಂತಿ. (ಈ ನಡುವೆ ಅವನ ಪಕ್ಕದಲ್ಲಿದ್ದ ಕೋಲನ್ನು ಒಬ್ಬಳು ಹುಡುಗಿ ಹೆಕ್ಕಿಕೊಂಡು ಅದನ್ನು ಪರಿಶೀಲಿಸುತ್ತಿರುತ್ತಿರುವಾಗ ಅವಳ ಕೈಯಿಂದ ಅದನ್ನು ಇನ್ನೊಬ್ಬಳು ಹುಡುಗಿ ತೆಗೆದುಕೊಳ್ಳುತ್ತಾಳೆ. ಹಾಗೆ ಅದು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆಹೋಗುತ್ತದೆ. ಒಬ್ಬಳು ಅದನ್ನು ತನ್ನ ಲಂಗದ ಮರೆಯಲ್ಲಿ ಬಚ್ಚಿಟ್ಟುಕೊಳ್ಳುತ್ತಾಳೆ. ಮಾಂತ್ರಿಕ ಅತ್ತಿತ್ತ  ನೋಡುತ್ತಾನೆ. ಕೋಲನ್ನು ಕಾಣದೆ) ಎಲ್ಲಿ ಹೋಯಿತು ನನ್ನ ಮಂತ್ರದ ಕೋಲು?

ಮಕ್ಕಳು: ನಮ್ಗೆ ಗೊತ್ತಿಲ್ಲ.

ಮಾಂ: (ಎದ್ದು ಬರುತ್ತಾ) ಕೊಡಿ ನನ್ನ ಮಂತ್ರದ ಕೋಲು! ಇಲ್ಲದಿದ್ರೆ ನಿಮ್ಮನ್ನೆಲ್ಲ ಸಮುದ್ರಕ್ಕೆ ಬಿಸಾಡ್ತೇನೆ!

ಹು: ಕೋಲು ಕೊಡ್ತೀವಿ. ನಮ್ಗೆ  ನಿನ್ನ  ಇಂದ್ರಜಾಲ ತೋರಿಸು.

ಮಾಂ: ಇಂದ್ರಜಾಲ ತೋರಿಸಲು ತುಂಬಾ ಜನ ಬೇಕು.

ಒಂದು: ನೀನೇ ಹೇಳಿದೆಯಲ್ಲವೆ, ಡೋಲಿಗೆ ಬಡಿದ್ರೆ ಜನ ಸೇರ‍್ತಾರೆ ಅಂತ?

ಮಾಂ: ಕೋಲು ಕೊಡಿ. ಬಾರಿಸ್ತೇನೆ.

ಹು: ನಾನು ಬಾರಿಸ್ತೇನೆ. (ಹುಡುಗಿ ಪಕ್ಕದಲ್ಲಿರುವ ಹುಡುಗಿಯ ಕೈಯಿಂದ ಕೋಲು ತೆಗೆದುಕೊಂಡು ಡೋಲಿಗೆ ಬಡಿಯುತ್ತಾಳೆ. ಕೂಡಲೇ ಸೂಸಿ ಹಾಡುತ್ತಾಳೆ (ಹಾಡಿನಲ್ಲಿ ದು:ಖ ತುಂಬಿದೆ) ಮಾಂತ್ರಿಕ ಗಾಬರಿಗೊಂಡು ನಿಂತುಬಿಡುತ್ತಾನೆ.  ಎಲ್ಲರೂ ತನ್ಮಯತೆಯಿಂದ  ನಿಂತು (ಮೈಮ) ಹಾಡನ್ನು ಆಲಿಸುತ್ತಾರೆ. ಹಾಡು ನಿಂತಾಗ ಮಾಂತ್ರಿಕ ಕೋಲನ್ನು ಅವಳ ಕೈಯಿಂದ ಕಿತ್ತುಕೊಳ್ಳಲು ಬರುತ್ತಾನೆ. ಹುಡುಗಿ ತಪ್ಪಿಸಿಕೊಳ್ಳುತ್ತಾಳೆ)

ಹು: ಅದು ನಮ್ಮ ಸೂಸಿಯ ಸ್ವರ ಅಲ್ವ?

ಒಂದು: ಹೌದು ನಮ್ಮ ಸೂಸಿಯ ಸ್ವರದ ಹಾಗೇ ಇದೆ!

ಎಲ್ಲರೂ: ಅದು ನಮ್ಮ ಸೂಸಿಯದೇ ಸ್ವರ!.

(ಮಾಂತ್ರಿಕ ಡೋಲನ್ನು ಎತ್ತಿಕೊಳ್ಳಲು ಬರುತ್ತಾನೆ. ಮಕ್ಕಳು ಅವನನ್ನು ತಳ್ಳುತ್ತಾರೆ. ಅವನು ಮರಳ ದಿಣ್ಣೆಯ ಮೇಲಿಂದ ಕೆಳಗುರುಳುತ್ತಾನೆ. ಹುಡುಗಿಯರು ಡೋಲನ್ನು ಹರಿಯುತ್ತಾರೆ. ಸೂಸಿ ಹೊರಬರುತ್ತಾಳೆ. ಎಲ್ಲರೂ ಸೇರಿ ಮಾಂತ್ರಿಕನಿಗೆ ಅವನ ಕೋಲಿನಿಂದ ಮತ್ತು ಕೈಯಿಂದ ಬಡಿಯುತ್ತಾರೆ)

ಹು: ಇವನನ್ನು ಹೀಗೇ ಬಿಡಬಾರದು. ಇವ್ನು ಹೀಗೇ ಮಕ್ಕಳನ್ನು ಕಳವು ಮಾಡುತ್ತಾ ಇರ‍್ತ್ತಾನೆ. ಎಲ್ರೂ ಸೇರಿ ಇವ್ನನ್ನು ಎಳೆದು ತೆರೆಯ ಬಳಿ ಹಾಕೋಣ,

(ಮಕ್ಕಳೆಲ್ಲ ಸೇರಿ ಮಾಂತ್ರಿಕನನ್ನು ತೆರೆಯ ಬಳಿಗೆ ಎಳೆಯುತ್ತಾರೆ)

ಒಂದು: ಇವ್ನನ್ನು  ಷಾರ್ಕ್ ತಿನ್ನಲಿ!

ಎರಡು: ಇವ್ನನ್ನು ತಿಮಿಂಗಿಲ ತಿನ್ನಲಿ!

ಮೂರು: ಇವ್ನಿಗಿನ್ನು ಸಮುದ್ರರಾಜನಿಗೆ ಬಿಸಿನೀರು ಕಾಯಿಸಿಕೊಡುವ ಕೆಲಸ.

(ಮಕ್ಕಳು ಮಾಂತ್ರಿಕನನ್ನು ಎಳೆದೊಯ್ಯುತ್ತಿರುವಾಗ ಸೂಸಿ ಅವಳ ಚಿಪ್ಪನ್ನು ಕೈಯಲ್ಲಿರಿಸಿಕೊಂಡು ಅವಳ ಹಾಡು ಹಾಡುತ್ತಿರುವಾಗ)

ಫೇಡ್ ಔಟ್