ದೃಶ್ಯ ಒಂದು: ಸಂತೆ

(ತರಕಾರಿ, ಹಣ್ಣು ಮತ್ತಿತರ ವಸ್ತುಗಳನ್ನು ಮಾರುವವರು. ಗಿರಾಕಿಗಳು ಮತ್ತು ಅತ್ತಿತ್ತ ಹೋಗುತ್ತಿರುವ ಜನರು. ಒಂದು ಕಡೆ ಕುಂಬಾರ ಹಲವು ಮಡಕೆಗಳನ್ನಿರಿಸಿಕೊಂಡು ಕುಳಿತಿದ್ದಾನೆ. ನಡುವೆ ಇರುವ ಮಡಕೆಯೊಳಗೆ ಒಂದು ಪಿಟೀಲು ಇದೆ. ಒಬ್ಬ ಗಿರಾಕಿ ಬರುತ್ತಾನೆ)

ಗಿ೧: ಏನದು ಮಡಕೆಯ ಒಳಗೆ?

ಕು: ಅದು ಪಿಟೀಲು.

ಗಿ೧: ಮಡಕೆಯೊಳಗೆ ಪಿಟೀಲು ಯಾಕಿಟ್ಟುಕೊಂಡಿದ್ದಿ?

ಕು: ನೀವು ಇವತ್ತು ಈ ಸಂತೆಗೆ ಮೊದಲ ಬಾರಿಗೆ ಬಂದಿದ್ದೀರಿ ಅಂತ ಕಾಣಿಸುತ್ತೆ.

ಗಿ೧: ಹೌದು. ಯಾಕೆ?

ಕು: ನಾನು ಪ್ರತಿ ವಾರ ಮಡಕೆ ಮಾರುತ್ತೇನೆ. ಈ ಪಿಟೀಲಿನ ವಿಚಾರ ಎಲ್ಲರಿಗೂ ಗೊತ್ತು.

ಗಿ೧: ಏನು ಪಿಟೀಲಿನ ವಿಚಾರ?

ಕು: ಅದು ಸಾಮಾನ್ಯ ಪಿಟೀಲಲ್ಲ. ಅದು ನಿಮಗೆ ಬೇಕಾದ ಸಂಗೀತವನ್ನು ನುಡಿಸುತ್ತದೆ.

ಗಿ೧: ಬೇಕಾದ ಸಂಗೀತ ಅಂದ್ರೆ?

ಕು: ಬೇಕಾದ ಸಂಗೀತ ಅಂದ್ರೆ ನಮ್ಮ ದೇಶದ ಸಂಗೀತ, ಬೇರೆ ದೇಶದ ಸಂಗೀತ, ಶಾಸ್ತ್ರೀಯ  ಸಂಗೀತ, ಸುಗಮ ಸಂಗೀತ, ಜನಪದ ಸಂಗೀತ, ಸಿನಿಮಾ ಸಂಗೀತ…

ಗಿ೧: ದಾಸರ ಹಾಡು?

ಕು: ದಾಸರ ಹಾಡು ಕೂಡ.

ಗಿ೧: ಹಾಗಾದ್ರೆ ಒಂದು ದಾಸರ ಹಾಡು ನುಡಿಸಲು ಹೇಳು.

ಕು: ನೀವು ಮಡಕೆ ಕೊಂಡ್ಕೊಳ್ತೀರಾ?

ಗಿ೧: ಹೂಂ. ಕೊಂಡ್ಕೊಳ್ತೀನಿ.

ಕು: ಸರಿ. ಮಾಯಾ ಪಿಟೀಲೆ ಮಾಯಾ ಪಿಟೀಲೆ, ಒಂದು ದಾಸರ ಹಾಡು ನುಡಿಸು.

(ಒಂದು ದಾಸರ ಹಾಡು ನುಡಿಸುತ್ತದೆ. (ಪರದೆಯ ಹಿಂದೆ ಕುಳಿತು ಪಿಟೀಲು ಬಾರಿಸಬೇಕು) ಗಿರಾಕಿ ಹರ್ಷಚಿತ್ತನಾಗಿ ಆಲಿಸುತ್ತಾನೆ. ಹಾಡಿನ ನಡುವೆ ಮೂಕಾಭಿನಯದಲ್ಲಿ  ಗಿರಾಕಿ ಮಡಕೆಯ ಬೇಲೆ ಕೇಳುವುದು, ಕುಂಬಾರ ಬೆಲೆ ಹೇಳುವುದು, ಗಿರಾಕಿ ಹಣ ಕೊಟ್ಟು ಮಡಕೆ ತೆಗೆದುಕೊಳ್ಳುವುದು ನಡೆಯುತ್ತದೆ. ಮಡಕೆಯನ್ನು ತೆಗೆದುಕೊಂಡ ಗಿರಾಕಿ ಹೋಗುತ್ತಾನೆ. ಮತ್ತೊಬ್ಬ ಗಿರಾಕಿ ಬರುತ್ತಾನೆ)

ಗಿ೨: (ಒಂದು ಮಡಕೆಯನ್ನು ತೋರಿಸಿ) ಅದಕ್ಕೆ ಎಷ್ಟು?

ಕು: ನಿಮ್ಗೆ ಯಾವ ಹಾಡು ಬೇಕು?

ಗಿ೨: ನಂಗೆ ಶಾಸ್ತ್ರೀಯ ಸಂಗೀತ. ಉತ್ತರಾದಿ.

ಕು: ಮಾಯಾ ಪಿಟೀಲೆ, ಮಾಯಾ ಪಿಟೀಲೆ. ಉತ್ತರಾದಿಯಲ್ಲಿ ಒಂದು ಹಾಡು ನುಡಿಸು.

(ಪಿಟೀಲು ಉತ್ತರಾದಿಯಲ್ಲಿ ಹಾಡು ನುಡಿಸತೊಡಗುತ್ತದೆ. ಮೊದಲಿನ ಗಿರಾಕಿಯ ಹಾಗೆಯೆ ಮಡಕೆ ಕೊಳ್ಳುವ ವ್ಯವಹಾರ ನಡೆಯುತ್ತದೆ. ಗಿರಾಕಿ ಹೊರಟು ಹೋದಾಗ ಹಾಡು ನಿಲ್ಲುತ್ತದೆ. ಇನ್ನೊಬ್ಬ ಗಿರಾಕಿ (ಹೆಂಗಸು)ಯ ಆಗಮನ)

ಗಿ೩: ನನಗೆ ಒಂದು ಜಾನಪದ ಹಾಡು ಮತ್ತು ಒಂದು ಚಿಕ್ಕ ಮಡಕೆ.

ಕು: ಮಾಯಾ ಪಿಟೀಲೆ, ಮಾಯಾ ಪಿಟೀಲೆ. ಒಂದು ಜಾನಪದ ಹಾಡು ನುಡಿಸು.

(ಹಿಂದಿನ ಗಿರಾಕಿಗಳಂತೆಯೆ ವ್ಯವಹಾರ ನಡೆಯುತ್ತಿರುವಾಗ ಒಬ್ಬ ವ್ಯಕ್ತಿ ಬರುತ್ತಾನೆ.  (ಅವನಷ್ಟಕ್ಕೇ)ಅದ್ಭುತ!  ಸಂಗೀತವನ್ನು ಆಲಿಸುತ್ತಾ ಆಶ್ಚರ್ಯದಿಂದ  ಪಿಟೀಲನ್ನು ಮತ್ತು ಕುಂಬಾರನನ್ನು  ಮಿಕಿ ಮಿಕಿ ನೋಡುತ್ತಾ ನಿಲ್ಲುತ್ತಾನೆ. “ತನ್ನಿಂದ ತಾನೇ ಹಾಡುವ ಪಿಟೀಲು!” ಎನ್ನುತ್ತಾನೆ. ಹೆಂಗಸು ಮಡಕೆ ತೆಗೆದುಕೊಂಡು ಹೋಗುತ್ತಾಳೆ. ಸಂಗೀತ ನಿಲ್ಲುತ್ತ್ತದೆ. ವ್ಯಕ್ತಿ  ಕೂಡಲೇ ಕುಂಬಾರನ ಬಳಿಗೆ ಬರುತ್ತಾನೆ)

ವ್ಯ: ನಂಗೆ ಒಂದು ಸಿನಿಮಾ ಹಾಡು.

ಕು: ನಿಮಗೆ ಯಾವ ಮಡಕೆ ಕೊಡಲಿ?

ವ್ಯ: ನಂಗೆ ಮಡಕೆ ಬೇಡ.

ಕು: (ನಯವಾಗಿ)  ಹಾಡು ಮಡಕೆ ಕೊಂಡುಕೊಳ್ಳುವವರಿಗೆ ಮಾತ್ರ.

ವ್ಯ: ನಂಗೆ ಮಡಕೆಯ ಅಗತ್ಯ ಇಲ್ಲ. ಹಾಡಿಗೆ ನಾನು ಹಣ ಕೊಡುತ್ತೇನೆ.

ಕು: ಹಾಡಿಗೆ ನಾನು ಹಣ ತೆಗೆದುಕೊಳ್ಳುವುದಿಲ್ಲ. ನಾನು ಹಣ ತೆಗೆದುಕೊಳ್ಳುವುದು ಮಡಕೆಗೆ ಮಾತ್ರ.

ವ್ಯ: (ವ್ಯಕ್ತಿ ಸ್ವಲ್ಪ ಹೊತ್ತು ಯೊಚಿಸಿ) ಆ ಚಿಕ್ಕ ಮಡಕೆ ಕೊಡು.

ಕು: ನಿಮ್ಗೆ ಯಾವ ಹಾಡು ಅಂದ್ರಿ?

ವ್ಯ: ಸಿನಿಮಾ ಹಾಡು.

ಕು: ಮಾಯಾ ಪಿಟೀಲೆ, ಮಾಯಾ ಪಿಟೀಲೆ. ಒಂದು ಸಿನಿಮಾ ಪದ್ಯ ನುಡಿಸು.

(ಪಿಟೀಲು ಒಂದು ಸಿನಿಮಾ ಹಾಡು ನುಡಿಸುವಾಗ ವ್ಯಕ್ತಿ ದೊಡ್ಡ ದನಿಯಲ್ಲಿ ಬೆಲೆ ಕೇಳುತ್ತಾನೆ. ಕುಂಬಾರ ಎರಡು ರೂಪಾಯಿ ಎನ್ನುತ್ತಾನೆ. ವ್ಯಕ್ತಿ ಮಡಕೆಯನ್ನು ತೆಗೆದುಕೊಂಡು  ಹೆಚ್ಚು ಹೊತ್ತು  ಹಾಡನ್ನು ಆಲಿಸುತ್ತಾ ನಿಲ್ಲುತ್ತಾನೆ. ಹೋಗಲನುವಾದಾಗ ಹಾಡುನಿಲ್ಲುತ್ತದೆ. ವ್ಯಕ್ತಿ ಮಡಕೆಯನ್ನು ಕುಂಬಾರ ಮಡಕೆಗಳ ಜೊತೆಯಲ್ಲಿಯೆ ಇರಿಸುತ್ತಾನೆ)

ವ್ಯ: ಮಡಕೆ ನೀನೇ ಇಟ್ಟುಕೊ.(ಕುಂಬಾರ ಬೆರಗಿನಿಂದ ವ್ಯಕ್ತಿಯ ಮುಖವನ್ನೇ ದಿಟ್ಟಿಸುತ್ತಾನೆ) ನಂಗೆ ಪಿಟೀಲು ಬೇಕು. ಎಷ್ಟು ತೆಗೆದುಕೊಳ್ಳುತ್ತಿ?

ಕು: ಪಿಟೀಲು ಮಾರುವುದಿಲ್ಲ.

ವ್ಯ: ನೀನು ಹೇಳಿದಷ್ಟು ಕೊಡುತ್ತೇನೆ.

ಕು: ನೀವು ಎಷ್ಟು ಕೊಟ್ಟರೂ ಪಿಟೀಲು ಮಾರುವುದಿಲ್ಲ.

ವ್ಯ: ಇದು ಎಲ್ಲಿ ಸಿಕ್ಕಿತು ನಿಂಗೆ?

ಕು: ನಂಗೊತ್ತಿಲ್ಲ. ನಂಗೆ ನನ್ನಪ್ಪನಿಂದ ಬಂತು. ನನ್ನ ಅಪ್ಪ ಕೂಡ ಹೀಗೇ ಮಡಕೆ ಮಾರ‍್ತಿದ್ದ.

(ವ್ಯಕ್ತಿ  ಸ್ವಲ್ಪ ಹೊತ್ತು ಯೊಚಿಸುತ್ತಾನೆ. ನಿಂತಲ್ಲೇ ಕುಸಿದುಕೊಳ್ಳುತ್ತಾನೆ)

ಕು: (ಗಾಬರಿಗೊಂಡು) ಏನಾಯ್ತು?

ವ್ಯ: ಯಾಕೋ ತುಂಬಾ ನಿಶ್ಶಕ್ತಿ. ತುಂಬಾ ದೂರದಿಂದ ನಡೆದುಕೊಂಡು ಬಂದೆ. (ಏಳಲು ಪ್ರಯತ್ನಿಸುತ್ತಾನೆ. ಏಳಲಿಕ್ಕಾಗುವುದಿಲ್ಲ. ಕುಂಬಾರ ಬಂದು ಆಧರಿಸಿಹಿಡಿದುಕೊಳ್ಳುತ್ತಾನೆ. ವ್ಯಕ್ತಿ ಜೇಬಿನಿಂದ ಹಣ ತೆಗೆದು) ತುಂಬಾ ಬಾಯಾರಿಕೆ. ಏನಾದ್ರೂ ಕುಡಿಯಲು ತಂದುಕೊಡು.

ಕು: (ಹಣ ತೆಗೆದುಕೊಳ್ಳದೆ) ಬೇರೇನೂ ಬೇಡ. ನೀರು ಕುಡಿದ್ರೆ ಸರಿಹೋದೀತು.

ವ್ಯ: ನೀರು ಎಲ್ಲಿದೆ?

ಕು: ಪಕ್ಕದಲ್ಲೇ ಹೋಟೆಲಿದೆ. ಅಲ್ಲಿ ಕೇಳಿದ್ರೆ ಸಿಗುತ್ತದೆ. (ವ್ಯಕ್ತಿ ಎದ್ದು ನಿಲ್ಲಲು ಪ್ರಯತ್ನಿಸುತ್ತಾನೆ. ಆಗುವುದಿಲ್ಲ) ಹಾಗೆ ಕುಂತ್ಕೊಳ್ಳಿ. ನಾನು ನೀರು ತರ‍್ತೇನೆ. (ಕುಂಬಾರ ಹೋಗುತ್ತನೆ. ಅವನು ಮರೆಯಾದೊಡನೆ ವ್ಯಕ್ತಿ ಪಿಟೀಲನ್ನು ತೆಗೆದುಕೊಂಡು ಓಡಿಹೋಗುತ್ತಾನೆ. ಮರುಕ್ಷಣ ನೀರು ತೆಗೆದುಕೊಂಡು ಬಂದ ಕುಂಬಾರ ವ್ಯಕ್ತಿಯನ್ನು ಕಾಣದೆ, ಪಿಟೀಲು ಅದೃಶ್ಯವಾಗಿರುವುದನ್ನು ಕಂಡು ಅಚ್ಚರಿಯಿಂದಲೂ ವಿಷಾದದಿಂದಲೂ ಮೂಕನಾಗಿ ನಿಂತುಬಿಡುತ್ತಾನೆ)

ಫೇಡ್ ಔಟ್

ದೃಶ್ಯ ಎರಡು: ಒಂದು ಸ್ಟಾಲಿನಂಥ ರಚನೆ

(ವ್ಯಕ್ತಿ ಒಂದು ಕಡೆ ಕುರ್ಚಿಯಲ್ಲಿ ಕುಳಿತಿದ್ದಾನೆ. ಹತ್ತಿರದಲ್ಲಿ  ಅಲಂಕೃತವಾದ ಇನ್ನೊಂದು ಕುರ್ಚಿಯಲ್ಲಿ  ಪಿಟೀಲು ಇದೆ. ಪಿಟೀಲಿಗೆ ಒಂದು ಹೂವಿನ ಹಾರ ಹಾಕಲಾಗಿದೆ)

ವ್ಯ: ಬನ್ನಿ ಬನ್ನಿ. ಮಾಯೆಯ ಪಿಟೀಲಿನ ಅದ್ಭುತ ಸಂಗೀತವನ್ನು ಕೇಳಿ. ಒಂದು ಹಾಡಿಗೆ ಎರಡು ರೂಪಾಯಿ, ಎರಡು ಹಾಡಿಗೆ ನಾಲ್ಕು ರೂಪಾಯಿ, ಮೂರು ಹಾಡಿಗೆ ಐದು ರೂಪಾಯಿ, ನಾಲ್ಕು ಹಾಡಿಗೆ ಏಳು ರೂಪಾಯಿ. ಐದು ಹಾಡಿಗೆ ಒಂಭತ್ತು ರೂಪಾಯಿ.

(ಕೆಲವು ಜನರು ಸೇರುತ್ತಾರೆ)

ಜ೧: ಎರಡು ಹಾಡು, ಶಾಸ್ತ್ರೀಯ.

ಜ೨: ಮೂರು ಹಾಡು, ಜಾನಪದ.

ಜ೩: ಎರಡು ಹಾಡು, ಭಕ್ತಿ.

ಜ೪: ನಾಲ್ಕು ಹಾಡು, ಸಿನಿಮಾ.

ಜಪಿ೫: ಎರಡು ಹಾಡು, ಸಿನಿಮಾ.

ಜ೬: ಎರಡು ಸಾಡು, ಭಕ್ತಿ.

(ಎಲ್ಲರಿಂದಲೂ ಹಣ ತೆಗೆದುಕೊಂಡು ಅವರ ಆಯೆಯ ಸಂಗೀತದ ಪ್ರಕಾರ ನಾಲ್ಕು  ಗುಂಪು ಮಾಡುತ್ತಾನೆ)

ವ್ಯ: ಸರಿ. ಈಗ ಮೊದಲಿಗೆ ಸಿನಿಮಾ ಹಾಡುಗಳು, ಆ ಮೇಲೆ ಶಾಸ್ತ್ರೀಯ ಸಂಗೀತ, ಅನಂತರ ಭಕ್ತಿ ಸಂಗೀತ, ಕೊನೆಗೆ ಜಾನಪದ. ನಿಮ್ಮ ಆಯೆಯ ಸಂಗೀತ ಕೇಳಿದ ಮೇಲೆ ನೀವು ಹೋಗಬಹುದು. (ಪಿಟೀಲಿನ ಮುಂದೆ ನಿಂತು) ಮಾಯಾ ಪಿಟೀಲೆ, ಮಾಯಾ ಪಿಟೀಲೆ. ಎರಡು ಸಿನಿಮಾ ಹಾಡುಗಳನ್ನು ನುಡಿಸು. (ಪಿಟೀಲು ಎರಡು ಹಾಡುಗಳ ಎರಡೆರಡು ಸಾಲುಗಳನ್ನು ಮಾತ್ರ ನುಡಿಸುತ್ತದೆ)

ಜ೪: ಒಂದು ಹಾಡಿನ ಎರಡು ಸಾಲುಗಳು ಮಾತ್ರ!

ವ್ಯ: ಹೌದು ಅಷ್ಟೆ.

ಜ೪: ಇಡೀ ಹಾಡನ್ನು ಕೊಡುತ್ತೀರಿ ಎಂದು ನಾನೆಣಿಸಿದ್ದೆ.

ವ್ಯ: (ಎಲ್ಲರನ್ನೂ ಉದ್ದೇಶಿಸಿ) ಒಂದು ಪಿಟೀಲು ಅದರಷ್ಟಕ್ಕೇ ಹಾಡುವುದು ಒಂದು ಪವಾಡ ಎಂದು ನಿಮಗನಿಸುವುದಿಲ್ವ?

ಎಲ್ಲರೂ: ಹೂಂ. ಅನಿಸುತ್ತೆ.

ವ್ಯ: ನೀವು ಹಣ ಕೊಡುವುದು ಮುಖ್ಯವಾಗಿ ಆ ಪವಾಡವನ್ನು ನೋಡುವುದಕ್ಕೆ.

ಜ೫: ಆದರೆ ಸಂಗೀತ ಆ ಪವಾಡದ ಒಂದು ಭಾಗ.

ವ್ಯ: ನಿಜ. ನಿಮಗೆ ಬೇಕಾದ್ದು ಕೇವಲ ಸಂಗೀತ ಎಂದಾದರೆ, ಅದನ್ನು  ನೀವು ಎಲ್ಲಿಯೂ ಪಡೆಯಬಹುದು. ಇಲ್ಲಿ ತೋರಿಸುವುದು ತೊಂಬತ್ತೊಂಬತ್ತು ಪರ್ಸೆಂಟ್ ಪವಾಡ, ಒಂದು ಪರ್ಸೆಂಟ್ ಸಂಗೀತ.

(ಜನರು ಅವರೊಳಗೇ ಗುಸು ಗುಸು ಮಾತಾಡಿಕೊಳ್ಳುತ್ತಾರೆ. ಸರಿ, ಮೋಸ ಮುಂತಾದ ಶಬ್ದಗಳು ಕೇಳಿಸುತ್ತವೆ)

ಜ೧: ಪವಾಡವೋ ಸಂಗೀತವೊ, ನಮಗೆ ನಿಂತು ಕೇಳಿ ಅಭ್ಯಾಸವಿಲ್ಲ.

ಜ೨: ಹೌದು. ಸಂಗೀತವನ್ನು ಸವಿಯಬೇಕಾದರೆ ಕುಳಿತುಕೊಂಡು ಕೇಳಬೇಕು, ನಿಂತುಕೊಂಡಲ್ಲ.

ವ್ಯ: ಕುಳಿತುಕೊಳ್ಳಿ,

ಜ೩: ಎಲ್ಲಿ?

ವ್ಯ: ನೆಲದಲ್ಲಿ.

ಜ೪: ನಮಗೆ ನೆಲದ ಮೇಲೆ ಕುಳಿತುಕೊಂಡು ರೂಡಿsಯಿಲ್ಲ. ಕುರ್ಚಿಗಳನ್ನು ಹಾಕಿ.

ವ್ಯ: ಅದಕ್ಕೆ ತುಂಬಾ ಖರ್ಚಾಗುತ್ತೆ.

ಜ೫: ಇಷ್ಟರಲ್ಲೇ ಸಾಕಷ್ಟು ಸಂಪಾದಿಸಿದ್ದೀರಿ! ಅದೇನಾಯ್ತು?

ವ್ಯ: ಒಂದು ಮನೆ ಕಟ್ಟಿಸುತ್ತಿದ್ದೇನೆ.

ಜ೧: ನಾಲ್ಕೆ ದು ಕುರ್ಚಿಗಳನ್ನು ಹಾಕಲು ಅಷ್ಟೇನೂ ಬೇಡ.

ವ್ಯ: (ಚಿಂತಿಸಿ) ಆ ಬಗ್ಗೆ ಯೊಚಿಸುತ್ತಿದ್ದೇನೆ. ಇವತ್ತಿನ ಮಟ್ಟಿಗೆ ದಯವಿಟ್ಟು ಸಹಕರಿಸಿ. ಕೆಳಗೆ ಕುಳಿತುಕೊಳ್ಳಿ. (ಎಲ್ಲರೂ ನೆಲದ ಮೇಲೆ ಕುಳಿತುಕೊಳ್ಳುತ್ತಾರೆ) ಈಗ ಶಾಸ್ತ್ರೀಯ ಸಂಗೀತ. ಅಥವಾ  ಸಿನಿಮಾ ಹಾಡುಗಳನ್ನೇ ಮತ್ತೆ ನುಡಿಸಲು ಹೇಳಲೆ?

ಜ೪: ಆಗಬಹುದು. ಆದರೆ ಅದೇ ಹಾಡುಗಳು ಬೇಡ. ಹೊಸ ಹಾಡುಗಳನ್ನು ನುಡಿಸಲಿ.

ವ್ಯ: ಆಗಲಿ. ಮಾಯಾ ಪಿಟೀಲೆ, ಮಾಯಾ ಪಿಟೀಲೆ. ಬೇರೆ ಎರಡು ಸಿನಿಮಾ ಹಾಡುಗಳನ್ನು ನುಡಿಸು.(ಪಿಟೀಲು ನುಡಿಸತೊಡಗುತ್ತದೆ)

ಫೇಡ್ ಔಟ್

ದೃಶ್ಯ ಮೂರು: ಅಂಗಡಿ

(ಸ್ಟ್ಟಾಲಿನಂತಿದ್ದ ರಚನೆ ಈಗ ಅಂಗಡಿಯಾಗಿದೆ. ಕೆಲವು ಕುರ್ಚಿಗಳು. ವ್ಯಕ್ತಿ ಈಗ ಶ್ರೀಮಂತನಾಗಿದ್ದಾನೆ. ಶ್ರೀಮಂತನಾಗಿರುವ ಲಕ್ಷಣಗಳು. ಅಂಗಡಿಗೆ ಸಂಗೀತದ ಅಂಗಡಿ ಎಂಬ ನಾಮಫಲಕ)

ವ್ಯ: ಬನ್ನಿ ಬನ್ನಿ ಮಾಯಾಪಿಟೀಲಿನ ಹಾಡನ್ನು ಕೇಳಿ! ನಿಮಗೆ ಬೇಕಾದ ಹಾಡು! ಭಾರತೀಯ ಸಂಗೀತ, ಇಂಗ್ಲಿಷ್ ಸಂಗೀತ! ಅಮೆರಿಕನ್ ಸಂಗೀತ! ಯುರೋಪಿನ ಸಂಗೀತ! ಜಪಾನೀ ಸಂಗೀತ! ಚೀನಾ ಸಂಗೀತ!

(ಒಬ್ಬ ಗಿರಾಕಿ ಬರುತ್ತಾನೆ)

ಗಿ೧: ನಂಗೆ ಅಮೆರಿಕನ್  ಜಾನಪದ ಹಾಡು.

ವ್ಯ: ಅಮೆರಿಕನ್  ಜಾನಪದ ಸಂಗೀತಕ್ಕೆ ಬೆಲೆ ಜಾಸ್ತಿ.

ಗಿ೧: ಎಷ್ಟು?

ವ್ಯ: ಒಂದು ಹಾಡಿಗೆ ಐದು ರುಪಾಯಿ.

(ಗಿರಾಕಿ ಹಣ ಕೊಟ್ಟು ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾನೆ)

ವ್ಯ: ಮಾಯಾಪಿಟೀಲೆ ಮಾಯಾಪಿಟೀಲೆ. ಒಂದು ಅಮೆರಿಕನ್ ಜಾನಪದ ಹಾಡು ನುಡಿಸು.

(ಪಿಟೀಲು ಎರಡು ಸಾಲು ಅಮೆರಿಕನ್ ಜಾನಪದ ಹಾಡು ನುಡಿಸುತ್ತದೆ.  ಗಿ೧ ಆಲಿಸಿ ಸಂತುಷ್ಟನಾಗಿ ಎದ್ದು  ಹೋಗುತ್ತಾನೆ)

ವ್ಯ: (ಸ್ವಗತ) ಈಗ ಜನರು ಪವಾಡವನ್ನು ಮಾತ್ರ ನೋಡಿ ಸಂತುಷ್ಟರಾಗಿ ಹೋಗುತ್ತಿದ್ದಾರೆ. ಸಂಗೀತ ಯಾವುದೆಂದು ಯಾರಿಗೆ ಗೊತ್ತು? (ಜೋರಾಗಿ ನಗುತ್ತಾನೆ)

(ಇನ್ನೊಬ್ಬ ಗಿರಾಕಿ ಬರುತ್ತಾನೆ)

ಗಿ೨: ಜಪಾನೀ ಜಾನಪದ ಹಾಡಿಗೆ ಎಷ್ಟು?

ವ್ಯ: ಜಪಾನಿ ಜಾನಪದ ಹಾಡಿಗೆ ಆರು ರೂಪಾಯಿ.

ಗಿ೨: ಅದು ತುಂಬಾ ಜಾಸ್ತಿಯಾಯ್ತು. ಚೀನಿ ಹಾಡಿಗೆ ಎಷ್ಟು?

ವ್ಯ: ಚೀನಿ ಹಾಡಿಗೆ ಮೂರು ರುಪಾಯಿ ಮಾತ್ರ.

ಗಿ೨: ಹಾಗಾದ್ರೆ ನಂಗೆ ಚೀನಿ ಹಾಡಾಗಬಹುದು.

(ಹಣ ಕೊಡುತ್ತಾನೆ. ಚೀನಿ ಹಾಡು ಮುಗಿದು ಅವನು ಎದ್ದು ಹೋಗುವಾಗ ೩ನೆಯ ಗಿರಾಕಿ (ಮಾರುವೇಷದಲ್ಲಿರುವ ಕುಂಬಾರ) ಬರುತ್ತಾನೆ. ಕುಂಬಾರ ಗಡ್ಡ ಮೀಸೆ ಧರಿಸಿಕೊಂಡಿದ್ದಾನೆ. ತಲೆಯ ಮೇಲೆ ಮಡಕೆಯಾಕಾರದ ಹ್ಯಾಟ್)

೩ನೆ: ನಂಗೆ ಒಂದು  ಸಂಗೀತ ಚಿಕಿತ್ಸೆಯ ಹಾಡು.

ವ್ಯ: ಸಂಗೀತ ಚಿಕಿತ್ಸೆಯ ಹಾಡು! ಅದೆಂಥ ಹಾಡು.

೩ನೆ: ಕಾಯಿಲೆ ವಾಸಿ ಮಾಡುವ ಹಾಡು.

ವ್ಯ: ಎಂಥ ಕಾಯಿಲೆ?

೩ನೆ: ನಂಗೆ ಒಂಥರಾ ಹುಚ್ಚು ಹಿಡಿದಿದೆ. ಯಾವ ಡಾಕ್ಟರಿಂದಲೂ ಗುಣ ಮಾಡ್ಲಿಕ್ಕೆ ಆಗ್ಲಿಲ್ಲ. ಸಂಗೀತ ಚಿಕಿತ್ಸೆಯಿಂದ ಗುಣವಾಗ್ಬಹುದು ಅಂತ ಒಬ್ರು ಡಾಕ್ಟರು ಹೇಳಿದ್ರು.

ವ್ಯ:  ಮಾಯಾ ಪಿಟೀಲು ಇಷ್ಟರ ವರೆಗೆ ಅಂಥ ಹಾಡು ನುಡಿಸಿಲ್ಲ.  ಇಪ್ಪತ್ತು ರೂಪಾಯಿ ಕೊಡಿ.

೩ನೆ: ಇಪ್ಪತ್ತು ತುಂಬಾ ಜಾಸ್ತಿಯಾಯ್ತು. ಹತ್ತು ರುಪಾಯಿ ಕೊಡ್ತೇನೆ. ಒಂದಲ್ಲ ಒಂದು ಥರದ ಹುಚ್ಚು  ಇರೋರು ಸಾವಿರಾರು ಮಂದಿ ಇದ್ದಾರೆ.  ನನ್ನ ಕಾಯಿಲೆ ಗುಣವಾದ್ರೆ ಜನ ಸಾಲುಗಟ್ಟಿ ಬರುತ್ತಾರೆ. ನಿಮ್ಕಡೆಗೆ ಹಣದ ಹೊಳೇನೇ ಹರೀತದೆ.

(ತುಂಬಾ ಹಣ ಮಾಡುವ  ದಾರಿ ಕಂಡುಕೊಂಡ ವ್ಯಕ್ತಿ  ಬಹಳ ಹರ್ಷಿತನಾಗಿ, ಹಣವನ್ನು ಜೇಬಿನಲ್ಲಿರಿಸಿ ಯೊಚಿಸುತ್ತಾನೆ)

೩ನೆ: ಏನು ಯೊಚಿಸ್ತಾ ಇದೀರಿ?

ವ್ಯ:  ನಿಮ್ಗೆ ಬೇಕಾದ ಸಂಗೀತಕ್ಕೆ ಪಿಟೀಲಿನ ಬಳಿ  ಏನು ಕೇಳ್ಬೇಕು ಅಂತ ಯೊಚಿಸ್ತಾ ಇದೀನಿ.

೩ನೆ: ನಾನೇ ಹೇಳ್ಳಾ?

ವ್ಯ: ಬೇಡ ಬೇಡ. ಹೇಗೆ ಹೇಳ್ಬೇಕು ಅಂತ ಹೇಳಿ. ಹಾಗೆ ನಾನೇ ಹೇಳ್ತೀನಿ.

೩ನೆ: ನಿಮ್ಮ ಮಾತಿನಲ್ಲಿ ಎಲ್ಲಾದರೂ ತಪ್ಪಾದರೆ ತೊಂದರೆಯಾದೀತು. ನಾನೇ ಹೇಳುವುದು ಒಳ್ಳೆಯದು. (ತಟ್ಟನೆ ಪಿಟೀಲಿನ ಬಳಿ ಹೋಗಿ) ಮಾಯಾ ಪಿಟೀಲೆ ಮಾಯಾ ಪಿಟೀಲೆ. ಹುಚ್ಚು ಬಿಡಿಸುವ ಸಂಗೀತವನ್ನು ನಿಲ್ಲಿಸದೆ ನುಡಿಸು.

(ನಿಧಾನವಾಗಿ ಆರಂಭವಾದ ಮೈಕೆಲ್ ಜಾಕ್ಸನನ ಹಾಡಿನ ರೀತಿಯ ಸಂಗೀತ ಜೋರು ಜೋರಾಗಿ ಕಿವಿ ತಮಟೆ ಹರಿದುಹೋಗುವಷ್ಟು ಬಲವಾಗುತ್ತದೆ. ಆದರೆ ಕುಂಬಾರ ಅದನ್ನು ಆನಂದದಿಂದ ಆಲಿಸುತ್ತಿದ್ದಾನೆ. ವ್ಯಕ್ತಿ ಕಿವಿ ಮುಚ್ಚಿಕೊಂಡು ಅತ್ತಿತ್ತ ಓಡುತ್ತಾ “ನಿಲ್ಲಿಸು ನಿಲ್ಲಿಸು!” ಎಂದು ಕೂಗುತ್ತಾನೆ. ಸಂಗೀತದ ಆರ್ಭಟ ಮುಂದರಿಯುತ್ತದೆ. ವ್ಯಕ್ತಿ ಕುಂಬಾರನನ್ನು ರಂಗದ ಎದುರಿಗೆ ಎಳೆದುಕೊಂಡು ಬರುತ್ತಾನೆ)

ವ್ಯ:  (ದೊಡ್ಡ್ಡ ದನಿಯಲ್ಲಿ) ನೀವು ಏನು ಹೇಳಿದಿರಿ? ಹುಚ್ಚು ಬಿಡಿಸುವ ಅನ್ನೋ ಬದಲು ಹುಚ್ಚು ಹಿಡಿಸುವ ಸಂಗೀತ ಅಂತ ಹೇಳಿದಿರಾ?

೩ನೆ: ಹುಚ್ಚು ಹಿಡಿಸುವ ಸಂಗೀತ ಅಂತ ಹೇಳಿಲ್ಲ. ಹುಚ್ಚು ಬಿಡಿಸುವ ಸಂಗೀತ ಅಂತ್ಲೇ ಹೇಳಿದೆ.

ವ್ಯ:  ಆದ್ರೆ ಇದು ಹುಚ್ಚು ಹಿಡಿಸುವ ಸಂಗೀತದ ಹಾಗಿದೆಯಲ್ಲ?

೩ನೆ: ಇದು ಹುಚ್ಚಿರುವವನ ಹುಚ್ಚನ್ನು ಬಿಡಿಸುವ ಸಂಗೀತ. ನನ್ನ ಹುಚ್ಚು ಬಿಡ್ತಾ ಇದೆ! (ನಗುತ್ತಾನೆ)

ವ್ಯ: ನಂಗೆ ಹುಚ್ಚು ಹಿಡೀತಾ ಇದೆ! ಅಯೊ ಕೇಳೋಕಾಗ್ತಾ  ಇಲ್ಲ!

೩ನೆ: ನೀವ್ಯಾಕೆ ಕೇಳ್ತೀರಿ? ಇದು ನಂಗೆ ಬೇಕಾಗಿರೋ ಸಂಗೀತ.

ವ್ಯ: ಆದ್ರೆ ನಂಗೂ ಕಿವಿಯಿದೆಯಲ್ಲಾ. ಕೇಳದಿರೋದು ಹ್ಯಾಗೆ? (ಪಿಟೀಲಿನ ಕಡೆಗೆ ತಿರುಗಿ) ನಿಲ್ಲಿಸು! (ಹಾಡು ಜೋರಾಗುತ್ತದೆ) ದಯಮಾಡಿ ನಿಲ್ಲಿಸು! (ಹಾಡು ಹಾಗೇ ಮುಂದರಿಯುತ್ತದೆ. ಕುಂಬಾರ ಅವನ ಪಾಡನ್ನು ನೋಡಿ ನಸುನಕ್ಕು ಹೊರಟು ಹೋಗುತ್ತಾನೆ. ವ್ಯಕ್ತಿ ಪಿಟೀಲಿನೊಡನೆ  ಹಾಡನ್ನು ನಿಲ್ಲಿಸಲು ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವಾಗ)

ಫೇಡ್ ಔಟ್

ದೃಶ್ಯ ನಾಲ್ಕು: ಸಂತೆ

ಕುಂಬಾರ ಮಡಕೆಗಳನ್ನು ಮಾರಲು ಕುಳಿತಿದ್ದಾನೆ. ದೂರದಿಂದ ಕೇಳಿಸುತ್ತಿರುವ ಪಿಟೀಲಿನ (ವ್ಯಕ್ತಿಗೆ ಹುಚ್ಚು ಹಿಡಿಸಿದ ಸಂಗೀತ) ಸಂಗೀತ ಹತ್ತಿರ ಹತ್ತಿರ ಹತ್ತಿರವಾಗುತ್ತದೆ. ಭೋರ್ಗರೆಯುತ್ತಿರುವ ಸಂಗೀತದೊಂದಿಗೆ ಪಿಟೀಲು ಹಿಡಿದುಕೊಂಡ ವ್ಯಕ್ತಿಯ ಪ್ರವೇಶ)

ವ್ಯ: ಕುಂಬಾರ ಮಹಾಶಯ. ನಿನ್ನ ಪಿಟೀಲಿನ ಸಂಗೀತವನ್ನು ಒಮ್ಮೆ ನಿಲ್ಲಿಸು. ತಪ್ಪಾಯ್ತು. ಕ್ಷಮಿಸು. ನಿನ್ನ ಪಿಟೀಲನ್ನು ತೆಗೆದುಕೊ.

ಕು: ನೀವು ಎಲ್ಲಿಂದ ತೆಗೆದಿರುವಿರೋ ಅಲ್ಲೇ ಇಟ್ಟುಬಿಡಿ.

(ವ್ಯಕ್ತಿ  ಪಿಟೀಲನ್ನು ಅದೇ ಮಡಕೆಯೊಳಗೆ ಇರಿಸುತ್ತಾನೆ. ಆದರೆ ಹಾಡು ಅದೇ ರೀತಿ ಕರ್ಕಶವಾಗಿ ಮುಂದರಿಯುತ್ತದೆ)

ವ್ಯ: ದಯಮಾಡಿ ಆ ಹಾಡನ್ನು ಒಮ್ಮೆ ನಿಲ್ಲಿಸಿ.

ಕು: ಹಾಡು ನಿಲ್ಲುತ್ತದೆ. ನೀವು ಮನೆಗೆ ಹೋಗಿ .

ವ್ಯ: ಇಲ್ಲ. ಹಾಡು ನನ್ನ ಕಿವಿಯಿಂದ ತೊಲಗುವುದಿಲ್ಲ. ನಾನು ಊರೂರು ಅಲೆದಿದ್ದೇನೆ. ವೈದ್ಯರುಗಳು ಕೊಟ್ಟ  ಔಷಧಿಯನ್ನೆಲ್ಲ ಕಿವಿಗಳಿಗೆ ಹಾಕಿದ್ದೇನೆ. ಕಿವಿಗಳಿಗೆ ಸಿಮೆಂಟ್ ಹಾಕಿದರೂ ನನ್ನ ಕಿವಿಗಳಲ್ಲಿ ಆಗುವ ಶಬ್ದ ನಿಲ್ಲಲಿಕ್ಕಿಲ್ಲ.  ಈ ಕಾಯಿಲೆಯ ಮೂಲ ತಿಳಿಯದೆ ಔಷಧಿ ಕೊಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ

ಕು: ಕಾಯಿಲೆಯ ಮೂಲ ನಿಮ್ಮ ಕಿವಿಯಲ್ಲಿ ಅಲ್ಲದೆ ಬೇರೆಲ್ಲಿ  ಇದ್ದೀತು?

ಕು: (ಪಿಟೀಲನ್ನು ತೋರಿಸಿ) ಈ ಕಾಯಿಲೆಯ ಮೂಲ ಅಲ್ಲಿದೆ. ದಯಮಾಡಿ ಅದರ ಸಂಗೀತವನ್ನು ನಿಲ್ಲಿಸು. ನನ್ನಿಂದ ಇನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ನಾನು ಸತ್ತೇ ಹೋಗುತ್ತೇನೆ.

ಕು: (ನಸುನಕ್ಕು) ಮಾಯಾಪಿಟೀಲಿನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ “ಮಾಯಾ ಪಿಟೀಲೆ, ಮಾಯಾ ಪಿಟೀಲೆ. ನನ್ನನ್ನು ಕ್ಷಮಿಸು. ನಾನು ತಪ್ಪು ದಾರಿಯಲ್ಲಿ ಸಂಗ್ರಹಿಸಿದ ಹಣದಿಂದ ಊರಿಗೊಂದು ಸಂಗೀತ ಶಾಲೆ ಕಟ್ಟಿಸಿಕೊಡುತ್ತೇನೆ. ದಯಮಾಡಿ ಈ ಸಂಗೀತವನ್ನು ನಿಲ್ಲಿಸಿ ಮೃದು ದನಿಯಲ್ಲಿ ನಿಂಗೆ ಇಷ್ಟವಾದ ಒಂದು ಹಾಡನ್ನು ನುಡಿಸು” ಎಂದು ಹೇಳಿ.

(ವ್ಯಕ್ತಿ ಮಾಯಾಪಿಟೀಲಿನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, “ಮಾಯಾ ಪಿಟೀಲೆ, ಮಾಯಾ ಪಿಟೀಲೆ. ನನ್ನನ್ನು ಕ್ಷಮಿಸು. ನಾನು ತಪ್ಪು ದಾರಿಯಲ್ಲಿ ಸಂಗ್ರಹಿಸಿದ ಹಣದಿಂದ ಊರಿಗೊಂದು ಸಂಗೀತ ಶಾಲೆ ಕಟ್ಟಿಸಿಕೊಡುತ್ತೇನೆ. ದಯಮಾಡಿ ಈ ಸಂಗೀತವನ್ನು ನಿಲ್ಲಿಸಿ ಮೃದು ದನಿಯಲ್ಲಿ ನಿಂಗೆ ಇಷ್ಟವಾದ ಒಂದು ಹಾಡನ್ನು ನುಡಿಸು”  ಎಂದು ಹೇಳುತ್ತಾನೆ. ಪಿಟೀಲಿನ ಹಾಡು ತಟ್ಟನೆ ನಿಲ್ಲತ್ತದೆ. ಮರುಕ್ಷಣವೇ  ಮೃದು ಧ್ವನಿಯಲ್ಲಿ  ಅತ್ಯಂತ ಮೋಹಕವಾಗಿ ಶಾಸ್ತ್ರೀಯ ಸಂಗೀತ ರಾಗ ಆರಂಭವಾಗುತ್ತದೆ. ವ್ಯಕ್ತಿ ಸ್ವಸ್ಥತೆಗೆ ಮರಳುತ್ತಿರುವಾಗ, ಕುಂಬಾರ ಹರ್ಷಚಿತ್ತನಾಗಿ ಹಾಡನ್ನು ಆಲಿಸುತ್ತಿರುವಾಗ)

ಫೇಡ್ ಔಟ್