ಪಾತ್ರಗಳು:
ಒಂಬತ್ತು ಮಕ್ಕಳು, ರಾಕ್ಷಸಮಾಮ, ಕಾವಲಿನವನು

 

ದೃಶ್ಯ ಒಂದು: ಹೂವಿನ ತೋಟ

(ಹೂಗಳಿಂದ ತುಂಬಿರುವ ಕೆಲವು ಮರಗಳು. ಒಂಬತ್ತು ಮಕ್ಕಳು ಓಡೋಡಿಕೊಂಡು ಬರುತ್ತಾರೆ. ಒಂಬತ್ತನೆಯವನು ತುಂಬಾ ಚಿಕ್ಕವನು. ಮಕ್ಕಳು ಹೂವುಗಳನ್ನು ನೋಡಿ ಆನಂದಿಸುತ್ತಾರೆ. ವೃತ್ತಾಕಾರದಲ್ಲಿ  ನಿಂತು ಹಾಡಲು ತೊಡಗುತ್ತಾರೆ. ಎಂಟು ಮಂದಿ ಆಡುವಾಗ, ಹಾಡುವಾಗ ಒಂಬತ್ತನೆಯವನು ಒಂದು ಮುಲೆಯಲ್ಲಿ ಕುಳಿತು ನೋಡುತ್ತಾನೆ. ಒಮ್ಮೊಮ್ಮೆ ಅವರ ಹಾಡಿಗೆ ಸರಿಯಾಗಿ ಅವನ ತುಟಿಗಳು ಅಲ್ಲಾಡುತ್ತವೆ. ಒಮ್ಮೊಮ್ಮೆ ಅನಿಯಂತ್ರಿತವಾಗಿ ಎದ್ದು ಅವರ ಹಾವಭಾವವನ್ನು ಅನುಕರಿಸುತ್ತಾನೆ)

ಹಾಡು:

ಹುಡುಗಿ೧: ಹಕ್ಕಿ ಹಕ್ಕಿ ಬಣ್ಣದ ಹಕ್ಕಿ

ಹುಡುಗ೧: ಎತ್ತರ ಎತ್ತರ ಹಾರುವ ಹಕ್ಕಿ

ಹುಡುಗಿ ೨: ಹಾರುವ ಹಕ್ಕಿ ಹಾಡುವ ಹಕ್ಕಿ

ಹುಡುಗ೨: ಹೂವಿನ ಜೇನು ಹೀರುವ ಹಕ್ಕಿ

ಹುಡುಗಿ೩: ಮರಗಳ  ಮೇಲೆ ಕೂರುವ ಹಕ್ಕಿ

ಹುಡುಗ೩: ಮೋಡದ ಮೇಲೆ ಜಾರುವ ಹಕ್ಕಿ

ಹುಡುಗಿ೪: ಹಾಡಲು ಕಲಿಸು ಹಾರಲು ಕಲಿಸು

ಹುಡುಗ೪: ಹಾಡಲು ಕಲಿಸು ಹಾರಲು ಕಲಿಸು

(ಎರಡನೆಯ ಬಾರಿಗೆ ಕುಣಿಯುತ್ತಾ  ಹಾಡುತ್ತಾರೆ. ಹಾಡು ಕೊನೆಗೊಳ್ಳುವಷ್ಟರಲ್ಲಿ  ತೋಟದ ರಾಕ್ಷಸ ಬರುತ್ತಾನೆ. ಅವನನ್ನು ನೋಡಿ ಮಕ್ಕಳು ಮುದ್ದೆಯಾಗಿ ನಿಲ್ಲುತ್ತಾರೆ)

ರಾಕ್ಷಸ: ಇದು ನನ್ನ ತೋಟ ಅಂತ ನಿಮಗೆ ಗೊತ್ತಿಲ್ಲವಾ?

ಎಲ್ಲಾ ಮಕ್ಕಳು: ಗೊತ್ತಿಲ್ಲ  ಮಾಮ.

ರಾಕ್ಷಸ: ಏಯ ಮಕ್ಕಳೆ, ನಾನು ನಿಮ್ಮ ಮಾಮ ಅಲ್ಲ.

ಹುಡುಗ೧: ಮತ್ತೆ ನಿನ್ನನ್ನ ಹೇಗೆ ಕೂಗೋದು ಮಾಮ?

ರಾಕ್ಷಸ: ಕೂಗೋದೂ ಬೇಡ ಅಳೋದೂ ಬೇಡ. ಹೇಗೆ ಬಂದಿರಿ ಒಳಗೆ?

ಹುಡುಗಿ೧: ಗೇಟು ತೆರೆದಿತ್ತು.

ರಾಕ್ಷಸ: ಗೇಟು ತೆರೆದಿದ್ರೆ ಒಳಗೆ ಬಂದೇ ಬಿಡೋದಾ?

ಹುಡುಗಿ೨: ನಮಗೆ ಆಡಲು ಬೇರೆ ಜಾಗ ಇಲ್ಲ ಮಾಮ.

ಹುಡುಗ೨: ಜಾಗವೇ ಇಲ್ಲ. ಎಲ್ಲಾ ಕಡೆ ಮನೆ.

ರಾಕ್ಷಸ: ಮನೆಯ ಒಳಗೇ ಆಡಿ. ನನ್ನ ತೋಟದ ಒಳಗೆ ಬರಬೇಡಿ. ಎಷ್ಟು ಸಮಯದಿಂದ ಬರ‍್ತಾ ಇದ್ದೀರಿ?

ಹುಡುಗಿ೩: ಆರು ತಿಂಗಳಿಂದ ಬರ‍್ತಾ ಇದ್ದೀವಿ.

ರಾಕ್ಷಸ: ಆರು ತಿಂಗಳಿಂದ! ಅದ್ಕೇ ತೋಟ ಇಷ್ಟೊಂದು ಹಾಳಾಗಿದೆ.

ಹುಡುಗ೩: ನಾವು ಏನೂ ಮಾಡಿಲ್ಲ.

ಹುಡುಗಿ೪: ಒಂದು ಹೂವನ್ನು ಕೂಡ ಮುಟ್ಟಿಲ್ಲ.

ಹುಡುಗ೪: ನಾವು ಆಟ ಆಡಿದ್ದು ಮಾತ್ರ. ಬೇರೇನೂ ಮಾಡಿಲ್ಲ.

ರಾಕ್ಷಸ: ನಡೀರಿ ಹೊರಗೆ! ಇನ್ನು ಒಳಗೆ ಬಂದ್ರೆ ನಿಮ್ಮನ್ನೆಲ್ಲ ಎತ್ತಿ ಹೊಳೆಗೆ ಎಸೀತೇನೆ! (ಮಕ್ಕಳ ಹತ್ತಿರ ಹೋಗುತ್ತಾನೆ. ಮಕ್ಕಳು ಹೆದರಿ ಓಡಿಹೋಗುತ್ತಾರೆ. ರಾಕ್ಷಸ ಗೇಟು ಹಾಕುತ್ತಾನೆ. ಗೇಟು ಹಾಕುವಾಗ ಪುಟ್ಟ ಹುಡುಗ ಒಳಗೆ ಉಳಿದುಹೋಗುತ್ತಾನೆ. ಅವನು ಹೆದರಿ ಅಳತೊಡಗುವಾಗ) ಅಳಬೇಡ. ಏನು ನಿನ್ನ ಹೆಸರು?

ಹುಡುಗ೯: (ಬಿಕ್ಕುತ್ತಾ) ಚಿನ್ನ.

ರಾಕ್ಷಸ: (ನಕ್ಕು) ಏನು ಚಿನ್ನವಾ? ಉಳಿದವರೆಲ್ಲ ಏನು? ಬೆಳ್ಳಿ, ಕಬ್ಬಿಣ, ತಾಮ್ರ… (ಜೋರಾಗಿ ನಕ್ಕು ಅವನ ಕೆನ್ನೆ ಹಿಂಡಿ) ಸರಿ. ಹೋಗಿ ಸೇರಿಕೊ ಉಳಿದ ಲೋಹಗಳ ಜೊತೆ. (ಗೇಟಿನೆಡೆಯಿಂದ ಹೊರ ಕಳಿಸುತ್ತಾನೆ. ಗೇಟು ಹಾಕುತ್ತಾನೆ. ಒಂಬತ್ತನೆಯವನನ್ನು ಕಂಡ  ಮಕ್ಕಳ ಸಂತಸದ ಕೂಗು ಕೇಳಿಸುತ್ತದೆ. “ಹಕ್ಕಿ ಹಕ್ಕಿ ಬಣ್ಣದ ಹಕ್ಕಿ” ಎಂದು ಹಾಡುತ್ತಾ ಹೋಗುತ್ತಾರೆ)

ಫೇಡ್ ಔಟ್

 

ದೃಶ್ಯ ಎರಡು: ಮೈದಾನು

(ಕೋಟೆಯ ಹೊರಗಡೆ ಮೈದಾನು. ಎಂಟು ಮಕ್ಕಳು ಗುಂಪಾಗಿ ನಿಂತಿದ್ದಾರೆ. ಒಂಬತ್ತನೆಯವನಿಲ್ಲ)

ಹುಡುಗಿ೧: ನಮ್ಮ ಚಿನ್ನ ಎಲ್ಲಿ ಹೋದ?

ಹುಡುಗ೧: ಅವನು ಬರುವುದಿಲ್ಲ ಅಂತ ಹೇಳಿದ.

ಹುಡುಗಿ೨: ರಾಕ್ಷಸಮಾಮ ಅವ್ನನ್ನ ಹಿಡ್ಕೊಂಡ್ನಲ್ಲಾ, ಅದ್ಕೇ ಬಂದಿಲ್ಲ, ತುಂಬಾ ಭಯವಾಗಿರ‍್ಬೇಕು.

ಹುಡುಗ೧: ಆದ್ರೆ ಚಿನ್ನನನ್ನು ಬಿಡ್ತಾ  ರಾಕ್ಷಸ ಮಾಮ ಜೋರಾಗಿ ನಕ್ಕ ಅಲ್ಲ?

ಹುಡುಗಿ೩: ರಾಕ್ಷಸರು ನಗೋಲ್ವ?

ಹುಡುಗಿ೪: ರಾಕ್ಷಸರು ಜೋರಾಗಿಯೆ ನಗೋದು.

ಹುಡುಗ೧: ಎಲ್ಲಿ ನೋಡಿದ್ದು ನೀನು?

ಹುಡುಗಿ೪; ನಾಟಕದಲ್ಲಿ.

ಹುಡುಗಿ೨: ಇವನು ನಿಜವಾದ ರಾಕ್ಷಸ. ನಾಟಕದ ರಾಕ್ಷಸ ಅಲ್ಲ!

(ಎಲ್ಲರೂ ನಗುತ್ತಾರೆ)

ಹುಡುಗಿ೧: ಇವತ್ತು ಇಲ್ಲಿ ಆಡೋಣ. ಆಗ್ದಾ?

ಎಲ್ಲರೂ: ಆದೀತು.

(ವೃತ್ತಾಕಾರವಾಗಿ ನಿಂತು ಹಾಡುತ್ತಾರೆ)

ಹಾಡು:

ಹುಡುಗಿ೧: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೧: ನೋಡೋರಿಲ್ಲ  ಹಾಡೋರಿಲ್ಲ ಕಾಡಿಗೆ ಹೋಗಿದ್ದೆ.

ಹುಡುಗಿ೨: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೨: ಮಳೆಯೂ ಇಲ್ಲ ಬೆಳೆಯೂ ಇಲ್ಲ ನೀರಿಗೆ ಹೋಗಿದ್ದೆ.

ಹುಡುಗಿ೩: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೩: ಕರೆಯೊರಿಲ್ಲ ಬೆರೆಯೊರಿಲ್ಲ ಬೆಟ್ಟಕೆ ಹೋಗಿದ್ದೆ.

ಹುಡುಗಿ೪: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೪: ಮರವೂ ಇಲ್ಲ ನೆರಳೂ ಇಲ್ಲ ಸುಮ್ಮನೆ ಮಲಗಿದ್ದೆ.

ಹುಡುಗಿ೫: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೫: ನೀರೂ ಇಲ್ಲ ಮುಗಿಲೂ ಇಲ್ಲ ಕಡಲಿಗೆ ಬಿದ್ದಿದ್ದೆ.

ಹುಡುಗಿ೬: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೬: ನೋಡೋರಿಲ್ಲ  ಹಾಡೋರಿಲ್ಲ ಕಾಡಿಗೆ ಹೋಗಿದ್ದೆ.

ಹುಡುಗಿ೭: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೭: ಮಳೆಯೂ ಇಲ್ಲ ಬೆಳೆಯೂ ಇಲ್ಲ ನೀರಿಗೆ ಹೋಗಿದ್ದೆ.

ಹುಡುಗಿ೮: ಕಾಮನ ಬಿಲ್ಲೆ ಕಾಮನ ಬಿಲ್ಲೆ  ಎಲ್ಲಿಗೆ ಹೋಗಿದ್ದೆ?

ಹುಡುಗ೮: ಕರೆಯೊರಿಲ್ಲ ಬೆರೆಯೊರಿಲ್ಲ ಬೆಟ್ಟಕೆ ಹೋಗಿದ್ದೆ.

(ಹಾಡು ಹಾಗೆಯೆ ಸ್ವಲ್ಪ ಹೊತ್ತು ಮುಂದರಿಯುತ್ತಿರುವಾಗ ಒಂದು ಸಿಳ್ಳು ಕೇಳಿಸುತ್ತದೆ. ಹಾಡು ತಟ್ಟನೆ ನಿಲ್ಲುತ್ತದೆ)

ಹುಡುಗ೮, ಹುಡುಗಿ೮: (ವಿಪರೀತ ಭಯದಲ್ಲಿ , ಜೋರಾಗಿ)ಯಾರದು?

ಹುಡುಗ೧: ಕಾವಲುಗಾರ. ರಾಕ್ಷಸಮಾಮ ಗೇಟಿನಲ್ಲಿ ಕಾವಲುಗಾರರನ್ನು  ಇರಿಸಿದ್ದಾನೆ. ಇದು ಅವನ ಸಿಳ್ಳು.

ಹುಡುಗಿ೨: ಕಾವಲುಗಾರನೂ ರಾಕ್ಷಸನೆ?

ಹುಡುಗ೧: ಕಾವಲುಗಾರ ರಾಕ್ಷಸನ ಹಾಗೆ ಇಲ್ಲ.

ಹುಡುಗಿ೩: ನೋಡಲು ಹೇಗಿದ್ದಾನೆ?

ಹುಡುಗ೧: ಮನುಷ್ಯನ ಹಾಗೆ ಇದ್ದಾನೆ.

ಹುಡುಗಿ೪: ರಾಕ್ಷಸಮಾಮ ಕೂಡ ನೋಡಲು ಮನುಷ್ಯನ ಹಾಗೇ ಇದ್ದಾನೆ.

ಹುಡುಗ೪: ಹೂಂ. ಸ್ವಲ್ಪ ಮನುಷ್ಯ ಸ್ವಲ್ಪ ರಾಕ್ಷಸ.

ಹುಡುಗ೩: ಸ್ವಲ್ಪ ಮನುಷ್ಯ ಹೆಚ್ಚು ರಾಕ್ಷಸ.

ಹುಡುಗ೨: ಕಾವಲುಗಾರ ಹೇಗಿದ್ದಾನೆ ಎಂದು ನೋಡಿಕೊಂಡು ಬರೋಣ.

ಹುಡುಗಿ೨: ರಾಕ್ಷಸಮಾಮ ದೂರ ಹೋಗಿದ್ರೆ, ಕಾವಲುಗಾರ ಗೇಟು ತೆರೆದ್ರೆ, ತೋಟದ ಒಳಗೆ ಆಡಬಹುದು.

ಹುಡುಗಿ೧: ಬೇಡ ಬೇಡ. ರಾಕ್ಷಸರ ಗೇಟು ಕಾಯುವವರು ಕೂಡ ರಾಕ್ಷಸರ ಹಾಗೇನೇ. ಅವ್ರಿಗೂ ಕರುಣೆ ಇರೋಲ್ಲ.

ಹುಡುಗ೨: ನಿಜ. ಮನುಷ್ಯರ ನೆರಳು ಕಂಡ್ರೆ ಸಾಕು ದೊಣ್ಣೆ  ಹಿಡ್ಕೊಂಡು ಅಟ್ಟಿಸಿಕೊಂಡು ಬರ‍್ತಾರೆ!

ಹುಡುಗ೧: ನಿಜ ನಿಜ. ಕೈಗೆ ಸಿಕ್ಕರೆ  ಹೊಡ್ದು ಸಾಯಿಸಿಬಿಡ್ತಾರೆ.

ಹುಡುಗಿ೧: ಬನ್ನಿ . ಆಟ ಸಾಕು. ಮನೆಗೆ ಹೋಗೋಣ.

ಫೇಡ್ ಔಟ್

ದೃಶ್ಯ ಮೂರು: ತೋಟ

(ರಾಕ್ಷಸ ತೋಟದ ಒಳಗಿದ್ದಾನೆ. ಹೆಗಲಿನಲ್ಲಿ ಬೈನಾಕುಲರ್ಸ್ ಜೋತು ಹಾಕಿಕೊಂಡಿದ್ದಾನೆ. ಮರಗಳು ಬೋಳು ಬೋಳಾಗಿವೆ. ಗೇಟು ಮುಚ್ಚಿಕೊಂಡಿದೆ. ಕಾವಲುಗಾರ ಗೇಟಿನ ಮುಂದೆ ಒಂದು ಸ್ಟೂಲಿನ ಮೇಲೆ ಕುಳಿತು ನಿದ್ರೆ ತೂಗುತ್ತಿದ್ದಾನೆ)

ರಾಕ್ಷಸ: (ಮರಗಳನ್ನು ನೋಡುತ್ತಾ) ಏನಾಯ್ತು? ಈ  ವರ್ಷ ವಸಂತಕಾಲವೇ ಇಲ್ಲವೆ? ಏಯ,  ಚಿಂಪಾಂಜಿ, ತೆರಿ ಗೇಟು!

(ಕಾವಲಿನವನು ಬೆಚ್ಚಿ ಹಾರಿಬಿದ್ದು ಗೇಟು ತೆರೆಯುತ್ತಾನೆ. ರಾಕ್ಷಸ ಗೇಟಿನಿಂದ ಹೊರಗೆ ಬರುತ್ತಾನೆ)

ರಾಕ್ಷಸ: ನನ್ನ ತೋಟದ ಮರಗಳಲ್ಲಿ ಹೂವೇ ಇಲ್ಲವಲ್ಲ? ಏನಾಯಿತು? ಈ ಸಲ ವಸಂತಕಾಲ ಇಲ್ಲವೆ?

ಕಾವ: ಉಂಟಲ್ಲಾ  ಧನಿಗಳೆ? ತೋಟದ ಹೊರಗಿನ ಮರಗಳಲ್ಲಿ ಹೂಗಳಿವೆ.

ರಾಕ್ಷಸ: ಹಾಗಾದರೆ ನನ್ನ ತೋಟದ ಮರಗಳಿಗೆ ಈ ಸಲ ಏನಾಯ್ತು?

ಕಾವ: ಬಹುಶ: ಮರಗಳಿಗೆ ಗೊಬ್ಬರ ಹಾಕಬೇಕು!

ರಾಕ್ಷಸ: ಥತ್ ಪೆದ್ದ! ನಿಜವಾದ ಚಿಂಪಾಂಜಿ ನೀನು! ಮರಗಳಿಗೆ ಯಾರಾದ್ರೂ ಗೊಬ್ಬರ ಹಾಕ್ತಾರಾ? ಆ ರಸ್ತೆಬದಿ ಮರಗಳಿಗೆ ಯಾರು ಗೊಬ್ಬರ ಹಾಕಿದ್ದಾರೆ?

ಕಾವ: ನಿಜ. ಮರಗಳಿಗೆ ಯಾರೂ ಗೊಬ್ಬರ ಹಾಕಲ್ಲ. ರಸ್ತೆಬದಿಯ ಎಲ್ಲಾ ಮರಗಳಲ್ಲಿಯೂ ಹೂ ಆಗಿದೆ.

ರಾಕ್ಷಸ: (ಬೈನಾಕುಲರ‍್ಸಿನಲ್ಲಿ ನೋಡುತ್ತಾ) ಮರಗಳಿಗೆ ಏನಾದ್ರೂ ರೋಗ ಬಂದಿರ‍್ಬಹುದಾ?

ಕಾವ: ನಂಗೂ ಅದೇ ಸಂಶಯ. ಮರಗಳಿಗೆ ಏನಾದ್ರೂ ರೋಗ ಬಂದಿರ‍್ಬಹುದಾ?

ರಾಕ್ಷಸ: ಅಥ್ವಾ ಯಾವುದಾದ್ರೂ ಹುಳಗಿಳದ ಕಾಟ ಇರ‍್ಬಹುದಾ?

ಕಾವ: ನಂಗೂ ಅದೇ ಸಂಶಯ. ಯಾವುದಾದ್ರೂ ಹುಳಗಿಳದ ಕಾಟ ಇರ‍್ಬಹುದಾ?

ರಾಕ್ಷಸ: (ಸಿಟ್ಟಿನಿಂದ ಅವನನ್ನು ನೋಡಿ) ಮುಚ್ಚು ಬಾಯಿ! ಯಾರು ನೀನು ನನ್ನ ಸಂಶಯಾನೇ ನಿಂಗೂ ಬರೋಕೆ? (ಪುನ: ಬೈನಾಕುಲರ‍್ಸಿನಲ್ಲಿ ಸುತ್ತ ನೋಡುತ್ತಾನೆ. ನೋಡುತ್ತಾ ನೋಡುತ್ತಾ ಗೇಟಿನ ಒಳಗೆ ಹೋಗುತ್ತಾನೆ) ಅದ್ಯಾವ ಮರ? ಅದೊಂದರಲ್ಲಿ ಮಾತ್ರ  ಹೂಗಳಿವೆ! ಏಯ ಚಿಂಪಾಂಜಿ, ಇಲ್ಲಿ ಬಾ.

ಕಾವ: (ಓಡಿಕೊಂಡು ಬಂದು) ಧನಿಗಳೆ.

ರಾಕ್ಷಸ: (ಬೈನಾಕುಲರ‍್ಸಿನಲ್ಲಿ ಕಣ್ಣಿರಿಸಿಕೊಂಡೇ) ಅದ್ಯಾವ ಮರ?

ಕಾವ: (ಕತ್ತು ಉದ್ದ ಮಾಡಿ ನೋಡಿ)ಯಾವ ಮರ ಧನಿಗಳೆ? ನಂಗೆ ಕಾಣಿಸ್ತಿಲ್ಲ.

ರಾಕ್ಷಸ: ಇದರಲ್ಲಿ ನೋಡು. (ಬೈನಾಕುಲರ‍್ಸ್ ಕೊಡುತ್ತಾನೆ. ಅವನು ಅದನ್ನು ತಿರುಗುಮುರುಗಾಗಿ ಹಿಡಿದು ನೋಡುವಾಗ) ಹಾಗಲ್ಲ  ಚಿಂಪಾಂಜಿ. ಹೀಗೆ! (ಸರಿಯಾಗಿ ಹಿಡಿದು ತೋರಿಸುತ್ತಾನೆ)

ಕಾವ: (ನೋಡುತ್ತಾ) ಅದಾ? ಅದರ ಹೆಸರು ಗೊತ್ತಿಲ್ಲ ಧನಿಗಳೆ. ಗೋಡೆಯ ಒಳಗಡೇನೇ ಇದೆ.

ರಾಕ್ಷಸ:  ಅದನ್ನು ನೀನು ಹೇಳ್ಬೇಕಾಗಿಲ್ಲ. ಹೋಗಿ ನೋಡಿಕೊಂಡು ಬಾ.

ಕಾವ: ಅಯ್ಯಯೊ! ಅಲ್ಲಿಗೆ ಯಾರೂ ಹೋಗಲಿಕ್ಕಿಲ್ಲ ಧನಿಗಳೆ.

ರಾಕ್ಷಸ: ಯಾಕೆ?

ಕಾವ: ಅಲ್ಲಿ ಒಂದು ಹಳ್ಳ ಇದೆ. ಹಳ್ಳ ದಾಟಿ ಹೋಗ್ಬೇಕು. ಹಳ್ಳದಲ್ಲಿ  ಹಾವುಗಳಿವೆ.

ರಾಕ್ಷಸ: ಸುಳ್ಳು ಹೇಳ್ಬೇಡ! ನಿಂಗೆ ಉದಾಸೀನ ಜಾಸ್ತಿ ಆಗಿದೆ! ಹೊಟ್ಟೆ ತುಂಬಾ ತಿಂದು ಕೂತ್ಕೊಂಡು ನಿದ್ರೆ ಮಾಡಿ ಅಭ್ಯಾಸ ಆಗ್ಬಿಟ್ಟಿದೆ. ಹಳ್ಳ ದಾಟಿ ಹೋಗೋಕಾಗಲ್ವ ನಿಂಗೆ?

ಕಾವ: ಖಂಡಿತ ಆಗಲ್ಲ ಧನಿಗಳೆ. ಹಳ್ಳದಲ್ಲಿ ವಿಷ ಸರ್ಪಗಳಿವೆ. ಕ್ಷಮಿಸಬೇಕು ಧನಿಗಳೆ. ಹೆಂಡತಿ ಮಕ್ಕಳು ಇದ್ದಾರೆ.

ರಾಕ್ಷಸ: ಯಾರಿಗೆ ವಿಷಸರ್ಪಗಳಿಗಾ?

ಕಾವ: ಅಲ್ಲ ಧನಿಗಳೆ ನಂಗೆ.

ರಾಕ್ಷಸ: ಸರಿ ಹಾಗಾದರೆ. ನಾನೇ ಹೋಗಿ ನೋಡ್ತೇನೆ. ನೀನು ಹೇಳಿದ್ದು ಸುಳ್ಳಾದರೆ ನಾಳೆಯಿಂದ ನಿನಗೆ ಇಲ್ಲಿ ಕೆಲಸ ಇಲ್ಲ. ಹೆಂಡತಿ ಮಕ್ಕಳ ಜೊತೆ ಆರಾಮವಾಗಿ ಇರು.

ಫೇಡ್ ಔಟ್

ದೃಶ್ಯ ನಾಲ್ಕು: ತೋಟದ ಮೂಲೆ. ಹೂವುಗಳಿಂದ ತುಂಬಿದ ಒಂಟಿ ಮರ

(ರಾಕ್ಷಸ ಬರುತ್ತಾನೆ. ಹೂವುಗಳಿಂದ ತುಂಬಿದ ಮರವನ್ನು ನೋಡಿ ಆಶ್ಚರ್ಯಪಡುತ್ತಾನೆ. ರಾಕ್ಷಸನನ್ನು ಕಂಡು ಹೆದರಿ ಮರದ ಹಿಂದೆ ಅಡಗಿ ಕುಳಿತಿದ್ದ ಚಿನ್ನನ ತಲೆ ಪ್ರೇಕ್ಷಕರಿಗೆ ಕಾಣಿಸುತ್ತದೆ. ಕ್ಷಣದ ಬಳಿಕ ರಾಕ್ಷಸನಿಗೆ ಕಾಣಿಸುತ್ತದೆ. ರಾಕ್ಷಸ ಓಡಿ ಹೋಗಿ ಚಿನ್ನನನ್ನು ಹಿಡಿದುಕೊಳ್ಳುತ್ತಾನೆ. ಚಿನ್ನ ಭಯದಿಂದ ಬಿಕ್ಕುತ್ತಾನೆ. ಮರದ ಬುಡದಲ್ಲಿ ಕೆಲವು ಗೊಂಬೆಗಳಿವೆ)

ರಾಕ್ಷಸ: ಅಳಬೇಡ. ಹೇಗೆ ಒಳಗೆ ಬಂದದ್ದು ನೀನು? (ಚಿನ್ನ ಗೋಡೆಯಲ್ಲಿರುವ ಒಂದು ಚಿಕ್ಕ ತೂತನ್ನು ಮನವಾಗಿ ತೋರಿಸುತ್ತಾನೆ)

ಚಿನ್ನ: ಬಿಡಿ. ನಾನು ಹೊಗ್ತೇನೆ! ಇನ್ನು ಬರಲ್ಲ.

ರಾಕ್ಷಸ: ಹೆದರ‍್ಬೇಡ. ನನ್ನ ಜೊತೆ ಬಾ. ನಿಂಗೆ ದೊಡ್ಡ ದೊಡ್ಡ ಗೊಂಬೆಗಳನ್ನು ಕೊಡ್ತೇನೆ.

ಚಿನ್ನ: ಬೇಡ.

ರಾಕ್ಷಸ: ಯಾಕೆ ಬೇಡ?

ಚಿನ್ನ: ನೀನು ಕೆಟ್ಟವನು!

ರಾಕ್ಷಸ: ನಾನು ಕೆಟ್ಟವನಲ್ಲ. ಹೋಗು ನಿನ್ನ ಗೆಳೆಯರನ್ನು ಕರೆದುಕೊಂಡು ಬಾ.

ಚಿನ್ನ: ಅವರನ್ನ ಹೊಳೆಗೆ ಎಸೀತಿಯ?

ರಾಕ್ಷಸ: ಇಲ್ಲ. ನನ್ನ ಮನೆಯಲ್ಲಿ ದೊಡ್ಡ ದೊಡ್ಡ ಗೊಂಬೆಗಳಿವೆ. ಬೇರೆ ಆಟದ ಸಾಮಾನುಗಳಿವೆ. ಎಲ್ಲಾ ನಿಮ್ಗೆ ಕೊಡ್ತೇನೆ. ಅವ್ರನ್ನ್ನ ಕರ‍್ಕೊಂಡು ಬಾ.

ಚಿನ್ನ: (ಪ್ರಫುಲ್ಲಿತನಾಗಿ) ನಿಜವಾ?

ರಾಕ್ಷಸ: ನಿಜ.

ಚಿನ್ನ; (ಕೈನೀಡಿ) ಪ್ರಾಮಿಸ್?

ರಾಕ್ಷಸ: (ಅವನ ಕೈ ಹಿಡಿದು ಕೆನ್ನೆ ಹಿಂಡಿ)ಪ್ರಾಮಿಸ್!

ಚಿನ್ನ: ನಾನು ಹೋಗುತ್ತೇನೆ.

ರಾಕ್ಷಸ: ಆಗಲಿ. ನನ್ನ ಹೆಗಲ ಮೇಲೆ ಕುಳಿತುಕೊ. ಗೇಟಿನಿಂದ್ಲೇ ಬಿಡ್ತೇನೆ.

ಚಿನ್ನ: ಬೇಡ. ನಾನು ಆ ದಾರಿಯಿಂದ್ಲೇ ಹೋಗುತ್ತೇನೆ. (ಚಿನ್ನ ಗೋಡೆಯಲ್ಲಿರುವ ತೂತಿನಿಂದ ಹೊರ ನುಸುಳಿ ಹೋಗುತ್ತಾನೆ. ರಾಕ್ಷಸ ಅವನು ಹೋದ ದಾರಿಯನ್ನೂ ಆ ಮೇಲೆ ಹೂವು ತುಂಬಿದ ಮರವನ್ನೂ ಭಾವಪರವಶತೆಯಿಂದ ನೋಡಿ ನಿಲ್ಲುತ್ತಾನೆ. ಅವನ ಕಣ್ಣಿನಿಂದ ಕಣ್ಣೀರು ಹರಿಯುತ್ತದೆ)

ಫೇಡ್ ಔಟ್

 

ದೃಶ್ಯ ಐದು: ತೋಟ

(ರಂಗದ ಮೂರನೆಯ ಒಂದು ಭಾಗ ಮಾತ್ರ ತೆರವಾಗಿದೆ. ಅದರ ಹಿಂದೆ ನೀಲಿ ಪರದೆ. ನೀಲಿ ಪರದೆಯ ಹಿಂದೆ ಹೂವುಗಳಿಂದ ತುಂಬಿರುವ ಮರಗಳಿವೆ. (ರಾಕ್ಷಸನಿಗೆ ಹಾಡು ಕಲಿಸುವ ದೃಶ್ಯ ಆರಂಭವಾಗುವಾಗ ಪರದೆ ಬಹಳ ನಿಧಾನವಾಗಿ ಮೇಲೇಳತೊಡಗುತ್ತದೆ. ಹಾಡು ಕಲಿಸುವುದು ಮುಗಿದು  ಕುಣಿತಕ್ಕೆ ಸಿದ್ಧವಾಗುವಷ್ಟರಲ್ಲಿ ಪರದೆ ಪೂರ್ತಿಯಾಗಿ ಮೇಲೆ ಹೋಗಿರುತ್ತದೆ) ಗೇಟು ತೆರೆದಿದೆ. ರಾಕ್ಷಸ ಮಕ್ಕಳ ಬರುವಿಕೆಯನ್ನು ಕಾಯುತ್ತಾ ಇದ್ದಾನೆ. ಮಕ್ಕಳು ಬರುತ್ತಾರೆ)

ರಾಕ್ಷಸ: ಬನ್ನಿ ಮಕ್ಕಳೆ, ಬನ್ನಿ. ಇನ್ನು ಇದು ನಿಮ್ಮದೇ ತೋಟ.

ಎಲ್ಲರೂ: (ಆಶ್ಚರ್ಯ  ವ್ಯಕ್ತಪಡಿಸುವ ದನಿ ಮಾಡಿ) ಏನು? ನಮ್ಮ ತೋಟವೆ?

ರಾಕ್ಷಸ: ಹೌದು. ನೀವು ಯಾವಾಗ ಬೇಕಿದ್ದರೂ ಬರ‍್ಬಹುದು, ಎಷ್ಟು ಹೊತ್ತು ಬೇಕಿದ್ರೂ ಆಡ್ಬಹುದು.(ಚಿನ್ನ್ನನನ್ನು ಎತ್ತಿಕೊಳ್ಳಲು ಬರುತ್ತಾನೆ. ಚಿನ್ನ ತುಸು ದೂರ ಹೋಗಿ ನಿಲ್ಲುತ್ತಾನೆ) ಏನು ಚಿನ್ನ್ನ, ಭಯವೆ? (ಚಿನ್ನ  ಹೌದೆಂದು ತಲೆಯಾಡಿಸುತ್ತಾನೆ)

ಹುಡುಗಿ: ಹೌದು ನಮ್ಗೆಲ್ಲರಿಗೂ ನಿನ್ನ ಕಂಡರೆ ಭಯ.

ರಾಕ್ಷಸ: (ನಕ್ಕು) ಇದು ನಿಮ್ಮದೇ ತೋಟ ಅಂತ ಹೇಳಿದೆ. ನನ್ನ ಕಂಡರೆ ಭಯವಾಗೋದಾದ್ರೆ ನಾನು ದೂರ ಹೋಗಿಬಿಡುತ್ತೇನೆ.

ಹುಡುಗಿ೧: ದೂರ ಹೋಗುವುದು ಬೇಡ.

ರಾಕ್ಷಸ: ಮತ್ತೇನು ಮಾಡ್ಬೇಕು?

ಹುಡುಗ೧: ನಮ್ಮ ಜೊತೆಯಲ್ಲಿ ಹಾಡ್ಬೇಕು.

ರಾಕ್ಷಸ: ಆಗ್ಲಿ . ಹಾಡ್ತೀನಿ.

ಹುಡುಗಿ೧: ನಮ್ಮ ಜೊತೆಯಲ್ಲಿ ಕುಣೀಬೇಕು.

ರಾಕ್ಷಸ: ಆಗ್ಲಿ ಕುಣೀತೀನಿ.

(ಮಕ್ಕಳು ತಕ್ಷಣ ವೃತ್ತಾಕಾರದಲ್ಲಿ ನಿಲ್ಲುತ್ತಾರೆ. ರಾಕ್ಷಸ  ಚಿನ್ನನನ್ನೂ ಕರೆದುಕೊಂಡು ಆ ವೃತ್ತದಲ್ಲಿ ಸೇರಿಕೊಳ್ಳುತ್ತಾನೆ)

ಹುಡುಗಿ೧: (ರಾಕ್ಷಸನೊಡನೆ) ಮೊದಲು ಹಾಡು ಕಲ್ತುಕೋಬೇಕು.

ರಾಕ್ಷಸ: ಸರಿ.

(ನೀಲಿ ಪರದೆ ಪ್ರೇಕ್ಷಕರ ಅರಿವಿಗೆ ಬಾರದಷ್ಟು ನಿಧಾನವಾಗಿ ಮೇಲೇಳಲು ಆರಂಭ)

ಹುಡುಗಿ೧: ಹಕ್ಕಿ ಹಕ್ಕಿ ಬಣ್ಣದ ಹಕ್ಕಿ

ರಾಕ್ಷಸ: ಹಕ್ಕಿ ಹಕ್ಕಿ ಬಣ್ಣದ ಹಕ್ಕಿ

(ಎರಡು ಸಾಲು ಮುಗಿಸುವ ವರೆಗೆ ರಾಕ್ಷಸನ ಗೊಗ್ಗರು ಸ್ವರ ಕೇಳಿ ಮಕ್ಕಳು ಬಿದ್ದು ಬಿದ್ದು ನಗುತ್ತಾರೆ. ಮೂರನೆಯ ಸಾಲಿನ ನಂತರ ರಾಕ್ಷಸನ ಸ್ವರ ಸರಿಯಾಗುತ್ತದೆ. ಮತ್ತರಡು ಸಾಲುಗಳ ನಂತರ ಅವನ ಸ್ವರ ಅತ್ಯಂತ ಸುಶ್ರಾವ್ಯವಾಗಿ ಮಕ್ಕಳು ಮಂತ್ರ ಮುಗ್ಧರಾಗುತ್ತಾರೆ)

ಹುಡುಗ೧: ಎತ್ತರ ಎತ್ತರ ಹಾರುವ ಹಕ್ಕಿ

ರಾಕ್ಷಸ: ಎತ್ತರ ಎತ್ತರ ಹಾರುವ ಹಕ್ಕಿ

ಹುಡುಗಿ ೨: ಹಾರುವ ಹಕ್ಕಿ ಹಾಡುವ ಹಕ್ಕಿ

ರಾಕ್ಷಸ:  ಹಾರುವ ಹಕ್ಕಿ ಹಾಡುವ ಹಕ್ಕಿ

ಹುಡುಗ೨: ಹೂವಿನ ಜೇನು ಹೀರುವ ಹಕ್ಕಿ

ರಾಕ್ಷಸ: ಹೂವಿನ ಜೇನು ಹೀರುವ ಹಕ್ಕಿ

ಹುಡುಗಿ೩: ಮರಗಳ  ಮೇಲೆ ಕೂರುವ ಹಕ್ಕಿ

ರಾಕ್ಷಸ: ಮರಗಳ  ಮೇಲೆ ಕೂರುವ ಹಕ್ಕಿ

ಹುಡುಗ೩: ಮೋಡದ ಮೇಲೆ ಜಾರುವ ಹಕ್ಕಿ

ರಾಕ್ಷಸ: ಮೋಡದ ಮೇಲೆ ಜಾರುವ ಹಕ್ಕಿ

ಹುಡುಗಿ೪:ಹಾಡಲು ಕಲಿಸು ಹಾರಲು ಕಲಿಸು

ರಾಕ್ಷಸ: ಹಾಡಲು ಕಲಿಸು ಹಾರಲು ಕಲಿಸು

(ನೀಲಿ ಪರದೆ ಪೂರ್ತಿಯಾಗಿ ಮೇಲೆ ಹೋಗಿದೆ. ಎಲ್ಲರೂ  ಕುಣಿಯುತ್ತಾ ಹಾಡುತ್ತಾ   ವೃತ್ತಾಕಾರವನ್ನು ಹಿಗ್ಗಿಸುತ್ತಾರೆ. ಒಂದು ಹೂವು ತಂಬಿದ ಮರ ವೃತ್ತದ ನಡುವೆ ಬರುವಂತೆ ವೃತ್ತ ನಿಧಾನವಾಗಿ ಹಿಗ್ಗಿಕೊಳ್ಳುತ್ತದೆ. ಮೊದಲಿನ ದೃಶ್ಯದ ವಿಧಾನದಲ್ಲಿ ಹಾಡು ಮತ್ತು ಕುಣಿತ ಮುಂದರಿಯುತ್ತದೆ)

ಫೇಡ್ ಔಟ್

* * *