ದೃಶ್ಯ ಒಂದು: ಒಂದು ಮರಗಳ ತೋಪು. ಬೆಳಗ್ಗಿನ ಹೊತ್ತು.

(ಹಲವು ಮರಗಳಿರುವ ತೋಪಿನ ಮಧ್ಯದಲ್ಲಿ ಇತರ ಮರಗಳಿಗಿಂತ ಎತ್ತರವಾಗಿರುವ ಒಂದು ದೊಡ್ಡ ಮರ. (ರಟ್ಟಿನಿಂದ ಮಾಡಿದ ಕಾಂಡಗಳನ್ನು  ಮತ್ತು ಹಸಿರು ಗೆಲ್ಲುಗಳನ್ನು ಕಟ್ಟಿಕೊಂಡು  ಮರಗಳ ವೇಷದಲ್ಲಿರುವ ಮಕ್ಕಳು) ಹಕ್ಕಿಗಳ ಹಾಡಿನ ದನಿ, ಕೋಗಿಲೆಯ ಹಾಡು ಇತ್ಯಾದಿ. ಗರಗಸಗಳನ್ನು ಹಿಡಿದುಕೊಂಡು ಮೂರ‍್ನಾಲ್ಕು ಮಂದಿ ಬರುತ್ತಾರೆ)

೧ನೆ: ಇಲ್ಲಿಂದ  ಆರಂಭಿಸೋಣವೆ?

೨ನೆ: ಇಲ್ಲಿಂದ ಬೇಡ. ಆ ಕಡೆಯಿಂದ ಆರಂಭಿಸಣ.

೩ನೆ: ಅದೇ ಒಳ್ಳೆಯದು. ಅದು ರಸ್ತೆಗೆ ಹತ್ತಿರ. ಲಾರಿಗೆ ಹಾಕಲು ಅನುಕೂಲ.

೧ನೆ: ಈ ದೊಡ್ಡ ಮರವನ್ನು ಬಿಟ್ಟು ಉಳಿದ ಎಲ್ಲಾ ಮರಗಳನ್ನು ಕೊಯ್ಯಲು ಯಜಮಾನರು ಹೇಳಿದ್ದಾರೆ.

೨ನೆ: ದೊಡ್ಡ ಮರವನ್ನು ಹೀಗೇ ಬಿಡುತ್ತಾರಾ?

೩ನೆ: ಇಲ್ಲ. ಉಳಿದ ಮರಗಳನ್ನು ಕಡಿದಾದ ಬಳಿಕ ಕೊನೆಗೆ ಕಡಿಸುತ್ತಾರಂತೆ. ಯಜಮಾನರು ತಮ್ಮ  ಸ್ವಂತಕ್ಕೆ ಒಂದು ದೊಡ್ಡ  ಮನೆ ಕಟ್ಟಿಸುತ್ತಿದ್ದಾರೆ.

೨ನೆ: ಹೌದು. ತೊಲೆ ಪಕ್ಕಾಸುಗಳಿಗೆ ಈ ಮರ ಚೆನ್ನಾಗಿದೆ.

(ಮಾತಾಡುತ್ತಾ ತೋಪಿನ ಹಿಂದುಗಡೆಗೆ ಹೋಗುತ್ತಾರೆ. ದೊಡ್ಡ ಮರ ಇತರ ಮರಗಳೊಡನೆ ಮಾತಾಡುತ್ತ್ತದೆ)

ಮರ: ನೀವೆಲ್ಲ ಭಾಗ್ಯವಂತರು.

ಮ೧: ಏನು? ನಾವು ಭಾಗ್ಯವಂತರೆ?

ಮ೨: ಹೇಗೆ ನಾವು ಭಾಗ್ಯವಂತರು? ನಮ್ಮನ್ನು ಕೊಯ್ದು ಉರುಳಿಸಲು ಮನುಷ್ಯರು ಬಂದಿದ್ದಾರೆ!

ಮರ: ನೀವು ನಗರಕ್ಕೆ ಹೋಗುತ್ತೀರಿ! ಕೆಲವರು ರೈಲು, ಬಸ್ಸು, ಹಡಗುಗಳಿಗೆ ಹೋಗುತ್ತೀರಿ. ಇನ್ನು ಕೆಲವರು ನಗರದ ಶ್ರೀಮಂತರ ಚೆಂದ ಚೆಂದದ ದೊಡ್ಡ ದೊಡ್ಡ ಮನೆಗಳಲ್ಲಿ  ಮೇಜು, ಕುರ್ಚಿ, ಕಪಾಟಾಗುತ್ತೀರಿ.

ಮ೩: (ವಿಷಾದದಿಂದ ನಕ್ಕು) ಅದನ್ನು ಭಾಗ್ಯ ಅಂತ ಹೇಳ್ತೀಯ? ಅವರು ನಮ್ಮನ್ನು ಕಡಿದು ಉರುಳಿಸಿ ತುಂಡು ತುಂಡು ಮಾಡಿ ಅಡ್ಡ ಉದ್ದ ಕೊಯ್ಯುತ್ತಾರೆ. ಆ ಚಿತ್ರಹಿಂಸೆಯನ್ನು ನೀನು ಕಣ್ಣಾರೆ ನೋಡ್ಲಿಕ್ಕೆ ಇರುವಿ. ಆಗ ಹೇಳು ಇದು ನಮ್ಮ ಭಾಗ್ಯ ಹೌದೊ ಅಲ್ಲವೊ ಅಂತ. ಕೊನೆಗೊಂದು ದಿನ ನಿನಗೂ ಅದೇ ಗತಿ ಒದಗುವುದು.

ಮ೧: ನೀನು ನಮ್ಮ ಹಿರಿಯಣ್ಣ. ನಿನಗೆ ಆಗುವ ನೋವನ್ನು ಎಣಿಸಿ ನನಗೆ ಈಗಲೇ ದು:ಖವಾಗುತ್ತದೆ.

ಮರ: ಮರವಾಗಿ ಹುಟ್ಟಿದ ಮೇಲೆ ಆ ನೋವು ಇದ್ದದ್ದೇ. ಈ ಮನುಷ್ಯರು ನಮ್ಮನ್ನು ಆಯುಷ್ಯ ಮುಗಿಯುವ ತನಕ ಬದುಕಲು ಬಿಡುವುದಿಲ್ಲ ಎಂದು ನನಗೆ ಗೊತ್ತಿದೆ. ನಾನು ಹೇಳುತ್ತಿರುವುದು ಅನಂತರದ ವಿಚಾರ.

ಮ೨: ಸತ್ತ  ನಂತರದ ಸಂತೋಷದ ಬದುಕಿನ ವಿಚಾರ. (ಜೋರಾಗಿ ನಗುತ್ತದೆ)

ಮರ: ಹೌದು. ಮನುಷ್ಯರು ಕೂಡ ಸತ್ತ ನಂತರದ ಬದುಕಿನ ಕುರಿತು ಮಾತಾಡುತ್ತಾರೆ. ನಾನು ಬಹಲ ಸಲ ಕೇಳಿದ್ದೇನೆ.

ಮ೪: ಎಲ್ಲಿ?

ಮರ: ಇಲ್ಲೇ ನನ್ನ ನೆರಳಿನಲ್ಲಿ.

ಮ೧: ಅದು ಅವರ ಮರಣದ ನಂತರದ ಬದುಕಿನ ವಿಚಾರ. ನಮ್ಮ  ಮರಣದ ನಂತರದ ಬದುಕಿನ ವಿಚಾರ ಅಲ್ಲ.

ಮರ: ಹೇಗಿದ್ದರೂ ನಮಗೆ ಮನುಷ್ಯರ ಕೈಯಿಂದ ಬರುವ ಸಾವನ್ನು ತಪ್ಪಿಸಲಿಕ್ಕಾಗ್ತದಾ?

ಮ೩: ನಮ್ಮಂಥ ಸಣ್ಣವರಿಂದ ಸಾಧ್ಯವಿಲ್ಲ. ನಿನ್ನಿಂದಾದೀತೆ ಅಂತ ನೋಡು. ಸಾಧ್ಯವಾದರೆ ನೀನು ಇನ್ನೂ ಮುನ್ನೂರು ವರ್ಷ ಬದುಕಬಹುದು.

ಮ೨: ಹೌದು. ಜೀವಂತವಾಗಿ ಬದುಕಿರಬಹುದು. ನಮ್ಮ ಹಾಗೆ ಸತ್ತು ಎಲ್ಲೆಲ್ಲೋ ಬಿದ್ದಿರುವುದಲ್ಲ.

ಮರ: ಅದು ಸಾಧ್ಯವೆ?

ಮ೧: ಪ್ರಯತ್ನಿಸು. ಆದರೆ ಆಗುತ್ತದೆ. ಪ್ರಯತ್ನಿಸುವುದಕ್ಕೇನು ಅಡ್ಡಿ?

ಮರ: ನೀವು ಕೂಡ ಯಾಕೆ ಪ್ರಯತ್ನಿಸಬಾರದು?

ಮ೨: ನಾವು ಬಹಳ ಸಲ ಪ್ರಯತ್ನಿಸಿದ್ದೇವೆ. ನಮ್ಮಿಂದ ಸಾಧ್ಯವಾಗಲಿಲ್ಲ.

ಮ೩: ನೀನಾದರೂ ಪ್ರಯತ್ನಿಸು. ದೇವರು ನಿಮಗೆ ಒಳ್ಳೆಯದು ಮಾಡಲಿ.

ಫೇಡ್ ಔಟ್

ದೃಶ್ಯ ಎರಡು: ಮೊದಲ ದೃಶ್ಯದ ಜಾಗ. ಸಾಯಂಕಾಲದ ಹೊತ್ತು

(ರಂಗದ ಮಧ್ಯದಲ್ಲಿ ದೊಡ್ಡ ಮರ ಮಾತ್ರ ಇದೆ)

ಮರ: ಎಲ್ಲರೂ ಹೋದರು. ಮನುಷ್ಯರು ನನ್ನ ಎಲ್ಲ ತಮ್ಮಂದಿರನ್ನೂ ಕೊಂದರು. ಅಯೊ ಎಂಥಾ ಚಿತ್ರಹಿಂಸೆ! ಹಗಲು ರಾತ್ರಿ ಅಳು, ಚೀರಾಟ! ಮರವಾಗಿ ಹುಟ್ಟಿದವರು ಕಣ್ಣಿನಿಂದ ನೋಡಬಾರದು; ಕಿವಿಯಿಂದ ಕೇಳಬಾರದು!  ಆದರೆ ಮನುಷ್ಯರಿಗೆ ಅದು ಕೇಳಿಸುವುದಿಲ್ಲ! ಅವರಿಗೆ ಕಿವಿಗಳಿದ್ದರೂ ಕೇಳಿಸುವುದಿಲ್ಲ! ನಮಗೆ ಮನುಷ್ಯರಿಗಿರುವಂಥ ಕಿವಿ ಕಣ್ಣುಗಳು ಇಲ್ಲ. ಆದರೆ ನಮಗೆ ಎಲ್ಲವೂ ಕಾಣಿಸುತ್ತದೆ, ಎಲ್ಲವೂ ಕೇಳಿಸುತ್ತದೆ. ಮನುಷ್ಯರ ಮಾತು ಕೂಡ ಕೇಳಿಸುತ್ತದೆ. (ನರಳಾಟದ ದನಿ. ಮರ ಅದನ್ನು ತುಸು ಹೊತ್ತು ಆಲಿಸಿ) ಸತ್ತವರ ಬೇರುಗಳು ಕೂಡ ಅಳುತ್ತಿವೆ! ಮನುಷ್ಯರಾಗುತ್ತಿದ್ದರೆ ರಕ್ತದ ನದಿಯೆ ಹರಿಯುತ್ತಿತ್ತು. ನಮಗೆ ರಕ್ತವಿಲ್ಲ ನಿಜ. ಆದರೆ ನೋವಿಲ್ಲವೆ? ಇನ್ನೊಂದು ಹತ್ತು  ದಿನದಲ್ಲಿ ನನ್ನನ್ನೂ ಕಡಿಯುತ್ತಾರಂತೆ. ನೋವು ಕಂಡು ಕಂಡು ಸಾಕಾಗಿದೆ. ಆ ನೋವನ್ನು ನನ್ನಿಂದ ಸಹಿಸಿಲು ಸಾಧ್ಯವಿಲ್ಲ. ನಾನು ಇಲ್ಲಿಂದ ಹೋಗಬೇಕು. ದೂರ ಹೋಗಬೇಕು. ಪ್ರಯತ್ನಿಸುತ್ತೇನೆ. (ಮರ ಬೇರುಗಳನ್ನು ಎಳೆದು ಚಲಿಸಲು ಪ್ರಯತ್ನಿಸುತ್ತದೆ. ಬಹಳ ಪ್ರಯತ್ನದ ಬಳಿಕ ಸಫಲವಾಗುತ್ತದೆ) ಹಾ! ನಾನು ಚಲಿಸುತ್ತಿದ್ದೇನೆ!  ನಾನು ಚಲಿಸುತ್ತಿದ್ದೇನೆ! ನಂಬಲಿಕ್ಕೇ ಆಗುತ್ತಿಲ್ಲ!   ನನ್ನ ಸಹೋದರರ ಸಲಹೆಯಲ್ಲದಿದ್ದರೆ ನಾನು ಈ ಪ್ರಯತ್ನಕ್ಕೆ ಕೈ ಹಾಕುತ್ತಿರಲಿಲ್ಲ. (ದು:ಖದಿಂದ)ನನ್ನ ಮೃತ ಸಹೋದರರಿಗೆ ನಾನು ಕೃತಜ್ಞನಾಗಿರಬೇಕು.  ನಾನು ಇಲ್ಲಿಂದ ಕೂಡಲೇ ಹೊರಡಬೇಕು. ಚೆನ್ನಾಗಿ ಕತ್ತಲಾಗಿದೆ. ಬೆಳಗಾಗುವುದರಲ್ಲಿ ನಾನು ದೂರ ಹೋಗಿಬಿಡಬೇಕು.

ಫೇಡ್ ಔಟ್

ದೃಶ್ಯ ಮೂರು:  ರಸ್ತೆ. ಬೆಳಗ್ಗಿನ ಹೊತ್ತು

(ಬೆಳಕು ಬರುವಾಗ ಮರ ರಸ್ತೆಯ ಬದಿಯಲ್ಲಿ ನಿಂತಿರುವುದು ಕಾಣಿಸುತ್ತದೆ. ಜನರು ಅತ್ತಿತ್ತ ಹೋಗುತ್ತಿದ್ದಾರೆ. (ಸಾಧ್ಯವಿದ್ದರೆ ಕೆಲವು ಮಕ್ಕಳು ವಾಹನಗಳ ರೂಪದಲ್ಲಿ ವೇಗವಾಗಿ ಅತ್ತಿತ್ತ  ಹೋಗಬಹುದು) ಒಬ್ಬಳು ಹೆಂಗಸು ಮರದಡಿಯಲ್ಲಿ ಹಣ್ಣಿನ ಬುಟ್ಟಿಯಿರಿಸಿ ಮಾರಾಟಕ್ಕೆ ಕುಳಿತಿದ್ದಾಳೆ. ಪೊಲೀಸರವನು ಬರುತ್ತಾನೆ)

ಪೊ: ಏಯ, ಇದು ಸಂತೆ ಅಲ್ಲ! ಏಳು. ಹೊರಡು!

ಹೆಂ: ನಾನು ಬಡವಳು. ಒಂದೈದು ನಿಮಿಷ ಇರಲು ಬಿಡು ಪೊಲೀಸಪ್ಪ.

ಪೊ: ನಾನು ನಿನ್ನ ಪೊಲೀಸಪ್ಪ ಅಲ್ಲ!  (ಅವಳ ಬುಟ್ಟಿಯಿಂದ ಒಂದು ಹಣ್ಣು ಎತ್ತಿಕೊಳ್ಳುತ್ತಾನೆ) ಬೇಗ ಹೊರಡು! ಹೊರಡುತ್ತೀಯ ಅಲ್ಲ ಎರಡು ಬಾರಿಸಲೊ? (ಬೆತ್ತ ಎತ್ತುತ್ತಾನೆ)

ಹೆಂ: ಆಯ್ತು ಪೊಲೀಸಪ್ಪ. ಹೋಗ್ತೀನಿ.

ಮರ: ಏನೇನೋ ನಿಯಮಗಳು ಇಲ್ಲಿ! ಬಹುಶ: ನಗರವೇ ಹೀಗೆ! ರಸ್ತೆ ಬದಿಯಲ್ಲಿ ಯಾರೂ ಕುಳಿತುಕೊಳ್ಳಬಾರದು! ಬಡವರು ಸಹ ಕುಳಿತುಕೊಳ್ಳಬಾರದು! ನನ್ನನ್ನು ಇರಲು ಬಿಡುತ್ತಾರೊ ಇಲ್ಲವೊ. ಸದ್ಯ ಮರಗಳ ಸಾಲಿನಲ್ಲಿ ಖಾಲಿ ಬಿದ್ದಿರೋ ಜಾಗದಲ್ಲಿ ನಾನು ಬಂದು ನಿಂತಿರುವುದು ಯಾರಿಗೂ ಗೊತ್ತಾಗಿಲ್ಲ! ಆದರೆ ಇಲ್ಲೇ ಇರುವುದು ಕೂಡ ಕಷ್ಟ. ಈ ವಾಹನಗಳ ಹೊಗೆ! ಈ ಚರಂಡಿ ವಾಸನೆ! ಈ ಶಬ್ದ! ಮನುಷ್ಯರು ಮಾಡಿದ ನಿಯಮವನ್ನು ಮನುಷ್ಯರೇ ಪಾಲಿಸುವ ಹಾಗೆ ಕಾಣಿಸುತ್ತಿಲ್ಲ! ಎಲ್ಲಾ ಕಡೆ ಕೊಳೆ ಕೊಚ್ಚೆ ಗಲೀಜು! ಇವತ್ತು ರಾತ್ರಿಯೆ ಇಲ್ಲಿಂದ ಹೊರಟುಬಿಡಬೇಕು.

ಫೇಡ್ ಔಟ್

ದೃಶ್ಯ ನಾಲ್ಕು: ಬೆಳಗ್ಗಿನ ಹೊತ್ತು. ಹಳೆಯ ಮನೆ

(ಮರ ಮನೆಗೆ ಸಮೀಪ ನಿಂತಿದೆ. ಮನೆಯಿಂದ ಹೊರಬಂದ ಗಂಡಸು ಬೆರಗಾಗಿ ಮರವನ್ನು ನೋಡಿ ಗಾಬರಿಯಿಂದ ಹೆಂಡತಿಯನ್ನು ಕರೆಯುತ್ತಾನೆ)

ಗಂ: ಹೋ ಹೊಯ! ಇದು ಎಂಥದು ವಿಚಿತ್ರ?

ಹೆಂ: (ಮನೆಯೊಳಗಿಂದ) ಏನ್ರಿ? ಏನು?

ಗಂ: ಹೊರಗೆ ಬಂದು ನೋಡು!

ಹೆಂ: (ಹೊರಗಡೆ ಬಂದು) ಮರ! ಇದೆಲ್ಲಿಂದ ಬಂತು ಇಲ್ಲಿ! ನಿನ್ನೆ ರಾತ್ರಿ ಜೋರಾಗಿ ಗಾಳಿ ಬೀಸಿತಲ್ಲಾ, ಗಾಳಿ ಹೊಡ್ಕೊಂಡು ಬಂತೊ ಏನೊ.

ಗಂ: ಆಷ್ಟು ದೊಡ್ಡ ಮರ ಗಾಳಿಗೆ ಬರುತ್ತಾ?

ಹೆಂ: ಬಿರುಗಾಳಿಗೆ ದೊಡ್ಡ ದೊಡ್ಡ ಕಟ್ಟಡಗಳೇ ಗಾಳಿಗೆ ಹಾರಿ ಹೋಗ್ತವಲ್ಲ?

ಗಂ: ಅಂಥ ಗಾಳಿಯೆನೂ ನಿನ್ನೆ ರಾತ್ರಿ ಬಂದಿಲ್ಲ. ಅಲ್ಲದೆ ಗಾಳಿಗೆ ಹಾರಿಕೊಂಡು ಬಂದ್ರೆ ಬೇರುಗಳು ಕಾಣಿಸಬೇಕಲ್ಲ? ಇದು ಇಲ್ಲೇ ಹುಟ್ಟಿ ಬೆಳೆದಿರೋ ಹಾಗಿದೆ!

ಹೆಂ:  ಅಲ್ರೀ  ಮರ ನಾವು ಹೊಸ ಮನೆ ಕಟ್ಟಲು ಜಾಗ ಗುರುತಿಸಿದಲ್ಲಿಯೆ ನಿಂತುಬಿಟ್ಟಿದೆ!

ಗಂ: ನಿಜ ನಿಜ.

ಹೆಂ: ಇದು ಯಾವ ಕ್ಷಣ ನಮ್ಮ ಮನೆ ಮೇಲೆ ಬೀಳುತ್ತೊ ಅಂತ ಭಯವಾಗ್ತಿದೆ! ಎಲ್ಲಾದ್ರೂ ನಮ್ಮ  ಈ ಹಳೇ ಮನೆ ಮೇಲೆ ಬಿದ್ರೆ, ಮನೆಯೂ ಪುಡಿ ಪುಡಿ, ನಾವೂ ಪುಡಿ ಪುಡಿ. ನಮ್ಮ ಮಕ್ಕಳೂ ಪುಡಿ ಪುಡಿ!

ಗಂ: ನಿಜ ನಿಜ.

ಹೆಂ: ನಿಜ ನಿಜ ಅಂದ್ರಾಯಾ? ಈಗೇನ್ಮಾಡೋದು?

ಗಂ: ಇವತ್ತೇನೂ ಮಾಡೋಕಾಗಲ್ಲ. ನಂಗೆ ಇವತ್ತು ಕೋರ್ಟಿಗೆ ಹೋಗಲಿಕ್ಕಿದೆ. ಇವತ್ತು ರಾತ್ರಿ ಗಾಳಿ ಬರೋದು ಬೇಡ ಅಂತ ದೇವರನ್ನ ಪ್ರಾರ್ಥಿಸೋಣ. ನಾಳೆ  ಜನ ಕರೆಸಿ ಕಡಿಸಿಬಿಡುವ.

ಹೆಂ: ನಮ್ಮ ಹೊಸ ಮನೆಗೆ ಬೇಕಾದಷ್ಟು ಮರ ಇದ್ರಲ್ಲೇ ಸಿಗುತ್ತದೆ.

ಗಂ: ಬೇಕಾದಷ್ಟಲ್ಲ. ಹೆಚ್ಚೇ ಇದೆ. ಮೇಜು ಕುರ್ಚಿ ಎಲ್ಲಾ ಮಾಡ್ಕೋಬಹುದು. ಇದೊಂದು ರೀತಿಯಲ್ಲಿ ಬಯಸದೇ ಬಂದ ಭಾಗ್ಯ ಏನಂತಿ?

ಹೆಂ: ನಂಗನಿಸುತ್ತೆ ದೇವರೇ ಕಳಿಸಿರೋದು ಅಂತ. ಆದ್ರೆ ಈ ಅದ್ಭುತಾನ ನೋಡೋಕೆ ಜನ ಬರೋಕ್ಸುರು ಮಾಡಿದ್ರೇನು ಮಾಡೋದು?

ಗಂ: ಯಾರಿಗ್ಗೊತ್ತಾಗುತ್ತೆ ಈ ನಗರದಲ್ಲಿ? ಯಾರೂ ಅತ್ತ ಇತ್ತ ನೋಡೋದಿಲ್ಲ. ಅಕಸ್ಮಾತ್ ನೋಡಿದ್ರೂ ಮೊದ್ಲೇ ಇತ್ತು ಅಂದ್ಕೊಳ್ತಾರೆ.

ಹೆಂ: ಆದ್ರೂ ಒಬ್ರಿಬ್ರು ವಿಚಾರಿಸದೆ ಇರ್ಲಿಕ್ಕಿಲ್ಲ.

ಗಂ: ಹಾಗೇನಾದ್ರೂ ವಿಚಾರಿಸಿದ್ರೆ, ಮೊದ್ಲೇ ಇತ್ತಲ್ಲ? ನೀವು ಇವತ್ತೇ ನೋಡಿದ್ದಾ ಅಂತ ಅವರನ್ನ ಫೂಲ್ ಮಾಡಿಬಿಡು. ಇಂಥ ವಿಚಾರದಲ್ಲಿ ಜನರನ್ನ ಫೂಲ್ ಮಾಡೋದು ಸುಲಭ. ಏನಂತಿ?

ಹೆಂ: ನಿಜ ನಿಜ.

ಗಂ: ನಾವು ಹೊರಗೆ ನಿಲ್ಲುವುದು ಬೇಡ. ಜನ ಸುಮ್ಸುಮ್ನೆ ಈ ಕಡೆ ನೋಡ್ತಾರೆ. ನಡಿ ಒಳಗೆ ಹೋಗೋಣ.

ಮರ: ಇಲ್ಲಿ ಕೂಡ ನಿಲ್ಲೋ ಹಾಗಿಲ್ಲ. ಇಲ್ಲಿ  ಮನೆಗಳ ಆವರಣ  ನನ್ನಂಥ ಮರಗಳಿಗೆ ಸುರಕ್ಷಿತ ಅಲ್ಲಾಂತ ಕಾಣಿಸುತ್ತದೆ. ಆದ್ರಿಂದ್ಲೇ ಎಲ್ಲಾ ಕಡೆ ಚಿಕ್ಕ ಚಿಕ್ಕ ಹೂಗಿಡಗಳು ಮತ್ತು ಹಸಿರು ಹಸಿರು ಹುಲ್ಲು ಬೆಳೆದಿದ್ದಾರೆ. ಈ ಜನರು ಕೂಡ ತುಂಬಾ ಚುರುಕಿದ್ದಾರೆ. ಬಹಳ ಅಪಾಯಕಾರಿ ಬುದ್ಧಿವಂತರು.  ಬಹುಶ: ನಗರದ ಜನಗಳೇ ಹೀಗೆ.

ಫೇಡ್ ಔಟ್

ದೃಶ್ಯ ಐದು: ಬೆಳಗ್ಗಿನ ಹೊತ್ತು. ಸರಕಾರಿ ಕಚೇರಿ.

(ಮರ ಸರಕಾರಿ ಕಚೇರಿಯಿಂದ ತುಸು ದೂರದಲ್ಲಿ ನಿಂತಿದೆ. ಸರಕಾರಿ ಕಚೇರಿಗೆ ಬರುತ್ತಿರುವ ಅಧಿಕಾರಿ ಬೆರಗಿನಿಂದ ಮರವನ್ನು ನೋಡಿ ನಿಲ್ಲುತ್ತಾನೆ. ಪೇದೆಯನ್ನು ಕೂಗುತ್ತಾನೆ. ಕಚೇರಿಯೊಳಗಿಂದ ಪೇದೆ  ಹೊರಬರುತ್ತಾನೆ)

ಅಧಿ: ಈ ಮರ ನಿನ್ನೆ ಇಲ್ಲಿ ಇತ್ತಾ?

ಪೇದೆ: ಇರಲಿಲ್ಲ ಸಾ.

ಅಧಿ: ನೀನು ಆಫೀಸಿಗೆ ಬರುವಾಗ ಇತ್ತಾ?

ಪೇದೆ: ಇತ್ತು ಸಾ.

ಪೇದೆ: ಇದನ್ನು ನೋಡಿ ನಿಂಗೆ  ಏನೂ ಅನಿಸ್ಲಿಲ್ವ?

ಮರ: ಇದು ಎಂಥಾ ಪ್ರಶ್ನೆ!

ಪೇದೆ: ಅನಿಸಿತು ಸಾ.

ಅಧಿ: ಏನು ಅನಿಸಿತು?

ಪೇದೆ: ಇದು ಒಂದು ಮರ ಅಂತ ಅನಿಸಿತು.

ಮರ: ಇದು ಎಂಥಾ ಉತ್ತರ!

ಅಧಿ: ಆ ಮೇಲೆ?

ಪೇದೆ: ಇದು ನಿನ್ನೆ  ಇಲ್ಲಿ ಇರಲಿಲ್ಲ ಅಂತ ಅನಿಸಿತು ಸಾ.

ಅಧಿ: ಆಶ್ಚರ್ಯ ಆಗಲಿಲ್ವ?

ಪೇದೆ: ಆಯಿತು ಸಾ.

ಅಧಿ: ಆಶ್ಚರ್ಯ ಆಗಿ ಮುಗಿದು ಹೋಯಿತಾ?

ಪೇದೆ: ಹೌದು ಸಾ. ಆಶ್ಚರ್ಯ ಆಗಿ ಮುಗಿದುಹೋಯಿತು ಸಾ.

(ಅಧಿಕಾರಿ ಹಣೆ ಬಡಿದುಕೊಳ್ಳುತ್ತಾನೆ)

ಅಧಿ: ಇನ್ನೂ ಆಫೀಸಿಗೆ ಬೇರೆ ಯಾರೂ ಬಂದಿಲ್ವ?

ಪೇದೆ: ಇಲ್ಲ ಸಾ. ಅವರೆಲ್ಲ ಬರೋದು ತಡ ಸಾ.

ಅಧಿ: ನೀನ್ಯಾಕೆ ಬೇಗ ಬಂದೆ?

ಪೇದೆ: ಇವತ್ತು ಮಾತ್ರ ಬೇಗ ಬಂದೆ ಸಾ.

ಅಧಿ: ಯಾಕೆ?

ಪೇದೆ: ನಿನ್ನೆ ಸಂಜೆ ಮನೆಗೆ ಹೋಗುವಾಗ ಮೇಜಿನ ಮೇಲೆ ಒಂದು ಐನೂರು ರೂಪಾಯಿ ನೋಟು ಮರೆತುಹೋಗ್ಬಿಟ್ಟೆ ಸಾ.

ಅಧಿ: ಅಲ್ಲೇ ಇತ್ತಾ?

ಪೇದೆ: ಇತ್ತು  ಸಾ.

(ಆಪಿsಸರುಗಳು (ಗಂಡಸರು ಮತ್ತು ಹೆಂಗಸರು)ಮತ್ತು ಗುಮಾಸ್ತರುಗಳ ಆಗಮನ. ಎಲ್ಲರೂ ಮರವನ್ನು ನೋಡಿ ಆಶ್ಚರ್ಯದಿಂದ ನಿಲ್ಲುತ್ತಾರೆ )

ಅಧಿ: (ಆಪಿsಸರುಗಳೊಡನೆ, ಸಿಟ್ಟಿನಿಂದ) ಏನು ಶೀತಲೀಕರಣಗೊಂಡ ಕೋತಿಗಳ ಹಾಗೆ ನೋಡ್ತಾ ನಿಂತಿದ್ದೀರಿ! ಬರೀ ಮರ! ಕಾಣಿಸ್ತಾ ಇಲ್ವ?

ಆ೧: ಅಲ್ಲಾ ಸಾರ್. ಮರ…

ಅಧಿ: ಹೌದು ಮರ. ನಂಗೂ ಗೊತ್ತು ನಿಮ್ಗೂ ಗೊತ್ತು. ಹೋಗಿ ಹೋಗಿ! ಕೆಲಸ ಮಾಡಿ. ಆಗ್ಲೇ ತಡ ಮಾಡಿ ಬಂದಿದ್ದೀರಿ!

ಆ೨: ಈ ಮರ…

ಅಧಿ: ಹೌದು ಈ ಮರ. ಏನಾಗ್ಬೇಕದಕ್ಕೀಗ?

ಆ೨: ಇದು ನಿನ್ನೆ ಇಲ್ಲಿ ಇರಲಿಲ್ಲ ಸಾರ್.

ಅಧಿ: ಹೌದು ನಿನ್ನೆ ಇರಲಿಲ್ಲ. ಇವತ್ತು ಇದೆ.

ಆ೨: ಸಾರ್ ಆದ್ದರಿಂದ..

ಅಧಿ: ಆದ್ದರಿಂದ, ನಾಳೆ ಇದು ಇಲ್ಲಿ ಇರ‍್ಕೂಡ್ದು! (ಮರ ಭೀತಿಗೊಳಗಾಗುತ್ತದೆ) ಬೇಗ ಹೋಗಿ ಚೀಫ್ ಇಂಜಿನಿಯರನ್ನ ಕರ‍್ಕೊಂಡು ಬನ್ನಿ. ಈಗ್ಲೇ ಇದನ್ನ ಕಡಿದು ಹಾಕಿ. (ಮರ ಭಯದಿಂದ ಕಂಪಿಸುತ್ತದೆ) ಇದು ಹೊಸ ರಸ್ತೆಗೆ ಮಾರ್ಕ್ ಮಾಡಿರೋ ಜಾಗ.

ಆ೧: ಸಾರ್ ಚೀಫ್ ಇಂಜಿನಿಯರ್ ಇವತ್ತು ರಜೆಯ ಮೇಲಿದ್ದಾರೆ.

ಅಧಿ: ಹಾಗಾದ್ರೆ ನಾಳೆ ಕಡಿಸಲು ತಿಳಿಸಿ. ಎಲ್ಲಿದ್ದಾರೆ ಅವರು?

ಆ೨: ಕಲ್ಯಾಣ ಮಂಟಪದಲ್ಲಿರ‍್ಬೇಕು ಸಾರ್. ಇವತ್ತು ಅವರ ಮಗಳ ಮದುವೆ.

ಅಧಿ: ತಥ್! ಎಲ್ಲೆಲ್ಲಿಂದಲೋ ಮರ ಬಂದು ಡೀಸೀ ಕಚೇರಿ ಎದುರು ನಿಂತಿರುವಾಗ ಈ ಇಂಜಿನಿಯರಿಗೆ ಮಗಳ ಮದುವೆ!

ಮರ: ಇದು ಎಲ್ಲಕ್ಕಿಂತ ಅಪಾಯಕಾರಿಯಾದ ಜಾಗ! ಈ ಅಧಿಕಾರಿ ತುಂಬಾ ತುಂಬಾ ಚುರುಕಿದ್ದಾನೆ. ಆದ್ರೆ ನನ್ನಷ್ಟು ಕೂಡ ಇವ್ನಿಗೆ ತಲೆ ಇಲ್ಲ.  ಮರ ಸಂಚಾರಕ್ಕೆ ಹೊರಟಿದ್ದು ಇವ್ನಿಗೆ ಗೊತ್ತಾಗೇ ಇಲ್ಲ. ಮರ ಸಂಚಾರಕ್ಕೆ ಹೊರಟ ದಿನ ಚೀಫ್ ಇಂಜಿನಿಯರ್ ಮಗಳ ಮದುವೆ ಮಾಡ್ಕೂಡ್ದು ಅಂತ ಬೇರೆ ಹೇಳ್ತಾನೆ! ವಿಚಿತ್ರ! ಬಹುಶ: ಈ ಅಧಿಕಾರಿಗಳು ಇರೋದೇ ಹೀಗೆ. ಫೇಡ್ ಔಟ್

ದೃಶ್ಯ ಆರು: ಶಾಲೆಯ ಆಟದ ಮೈದಾನ

(ಮರ ಮೈದಾನದ ಅಂಚಿನಲ್ಲಿ ನಿಂತಿದೆ. ಮರದ ಬುಡದಲ್ಲಿ  ಒಂದು ಉದ್ದನೆಯ ಹುಲ್ಲು ನಿಂತಿದೆ. ಮೈದಾನದಲ್ಲಿ ಮಕ್ಕಳು ಆಟ ಆಡುತ್ತಿದ್ದಾರೆ. ಅತ್ತ ಇತ್ತ  ಓಡುತ್ತಿದ್ದಾರೆ)

ಮರ: ಮೈದಾನದ ಅಂಚಿನಲ್ಲಿ ನಿಂತದ್ದು ಒಳ್ಳೆಯದಾಯ್ತು. ನಡುವಿನಲ್ಲಿ ನಿಲ್ತಿದ್ರೆ ಈ ಮಕ್ಕಳ  ಓಡಾಟದಲ್ಲಿ ಕೆಳಗೆ ಬೀಳ್ತಿದ್ದೆನೋ ಏನೊ.

(ಮರದ ಮಾತು ಕೇಳಿಸಿಕೊಂಡ ಹುಲ್ಲಿಗೆ ನಗು ಬರುತ್ತದೆ)

ಮರ: ಯಾಕೆ ನಗ್ತಿ?

ಹುಲ್ಲು: ಮಕ್ಕಳು ಓಡಿಯಾಡಿದ್ರೆ ನಿಂಗೇನೂ ತೊಂದರೆಯಾಗುವುದಿಲ್ಲ.

ಮರ: ನಿಂಗೆ?

ಹುಲ್ಲು: ನನ್ನ ಮೇಲೆ ಅವ್ರು ಕುಣಿದ್ರೂ ನಂಗೇನೂ ಆಗುವುದಿಲ್ಲ.  ಅವ್ರು ಹೋದ ಮೇಲೆ  ನಾನು ಮತ್ತೆ ಎದ್ದು ನಿಲ್ಲುತ್ತೇನೆ.

ಮರ: ನೀನು ಎಷ್ಟು ಕಾಲದಿಂದ ಇಲ್ಲಿದ್ದಿ?

ಹುಲ್ಲು:  ಸಾವಿರಾರು ವರ್ಷಗಳಿಂದ ಇಲ್ಲೇ ಇದ್ದೇನೆ.

ಮರ: ನೀನು ಹುಟ್ಟಿದ ನಂತರ ಸಾಯಲೇ ಇಲ್ವ?

ಹುಲ್ಲು:  ಸಾಯಲೇ ಇಲ್ಲ.

ಮರ: ದನಕರು ತಿನ್ನಲಿಲ್ವ?

ಹುಲ್ಲು: ದನಕರು ತಿಂದರೂ ನಾನು ಸಾಯುವುದಿಲ್ಲ.

ಮರ: ಬರಗಾಲ ಬಂದಾಗ ಸಾಯಲಿಲ್ವ?

ಹುಲ್ಲು:ಬರಗಾಲ ಬಂದಾಗ ಬೇರಿನಲ್ಲಿ ಜೀವ ಇಟ್ಟೆ. ಮಳೆ ಬಂದ ಕೂಡಲೇ ಮೇಲಕ್ಕೆ ಬಂದೆ.

ಮರ: (ನಿಟ್ಟುಸಿರು ಬಿಟ್ಟು) ನೀನು ತುಂಬಾ ಅದೃಷ್ಟವಂತ.

ಹುಲ್ಲು: ಯಾಕೆ?

ಮರ: ನೀನು ಸಾಯದೆ ಮತ್ತೆ ಮತ್ತೆ ಹುಟ್ಟಬಲ್ಲೆ.

ಹುಲ್ಲು: ಇಲ್ಲೇ ಇರುವ ವರೆಗೆ ನೀನು ಕೂಡ ಕೂಡ ಅದೃಷ್ಟವಂತನೇ. ಸಾಯುವ ಬಗ್ಗೆ ಮತ್ತು ಮತ್ತೆ ಹುಟ್ಟುವ ಬಗ್ಗೆ ಯೊಚಿಸಬೇಕಾಗಿಯೆ ಇಲ್ಲ.

ಮರ: ಯಾಕಿಲ್ಲ?

ಹುಲ್ಲು: ನಂಗೊತ್ತಿದೆ. ಈ ಭೂಮಿಯ ಮೇಲೆ ಅತ್ಯಂತ ಸುರಕ್ಷಿತವಾದ ಜಾಗವೆಂದರೆ ಇದೇ. ಇಲ್ಲಿ ನಿನ್ನನ್ನು ಕೊಯ್ದು ಹಾಕಲು ಯಾರೂ ಬರುವುದಿಲ್ಲ.  ಕೋಗಿಲೆ ಕಾಜಾಣಗಳು ಬಂದು ನಿನ್ನ ಮೇಲೆ ಕುಳಿತುಕೊಳ್ಳುತ್ತವೆ. ಅವುಗಳ ದನಿ ಎಷ್ಟು ಸವಿ! ಮರ: ಅದಕ್ಕಿಂದ ಸವಿ ಮಕ್ಕಳು ಆಟವಾಡುವ ದೃಶ್ಯ! ಹುಲ್ಲು: ಶಾಲೆಯ ಗಂಟೆಯ ದನಿ ಕೂಡ ಅಷ್ಟೇ ಸವಿ! (ಇಬ್ಬರು ಚಿಕ್ಕ ಹುಡುಗಿಯರು ಓಡಿಕೊಂಡು ಬಂದು ಮರದ ನೆರಳಿನಲ್ಲಿ ಕುಳಿತುಕೊಳ್ಳುತ್ತಾರೆ. ಒಬ್ಬಳು ಪುಸ್ತಕ ತೆರೆದು ತಾನು ಬರೆದಿರುವ ಚಿತ್ರಗಳನ್ನು ಇನ್ನೊಬ್ಬಳಿಗೆ ತೋರಿಸುತ್ತಾಳೆ)

ಹು೧: ಇದು ಒಂದು ಕೊಳ. ಇದು ಕೊಳದಲ್ಲಿ ತಾವರೆ

ಹು೨: ಬಹಳ ಚೆಂದ ಆಗಿದೆ!

ಹು೧: ಇದು ಒಂದು ಮರ. ಇದು ಮರದಲ್ಲಿ ಒಂದು ಹಕ್ಕಿ.

ಹು೨: ಇದು ಕೂಡ ಬಹಳ ಚಂದ ಆಗಿದೆ.

ಹು೧: ಇದು ಹುಲ್ಲು.

ಹು೨: ಹುಲ್ಲಾ? ಇಷ್ಟು ಎತ್ತರ?

ಹು೧: ನೋಡು ಇದು ಆ ಹುಲ್ಲು. (ಹುಲ್ಲನ್ನು ತೋರಿಸುತ್ತಾಳೆ) ಶಾಲೆಯ ಗಂಟೆ ಕೇಳಿಸುತ್ತಾದೆ.

ಹು೧: ಓಹ್! ಈಗ ಸಯನ್ಸ್! ಬಾ. ಇನ್ನು ನಾಳೆ ನೋಡುವ. (ಓಡುತ್ತಾರೆ)

ಮರ: (ಬಹಳ ಆನಂದ ಮತ್ತು ಹೆಮ್ಮೆಯಿಂದ)ಈ ಮಕ್ಕಳು ನಮ್ಮ ಚಿತ್ರಗಳನ್ನು ಕೂಡ ಬರೀತಾರೆ!

ಹುಲ್ಲು: ಅವರು ನಮ್ಮ  ಮೇಲೆ ಹಾಡುಗಳನ್ನು ಕೂಡ ಬರೀತಾರೆ. ಅವುಗಳನ್ನು ಕೂಡ  ನೀನು ಕೇಳಬಹುದು.

ಮರ: ಎಲ್ಲಕ್ಕಿಂತ ಚೆಂದ ಈ ಮಕ್ಕಳ ಆಟ.

ಹುಲ್ಲು: ಶಾಲೆಯ ಗಂಟೆಯ ದನಿ ಕೂಡ ಅಷ್ಟೇ ಚೆಂದ.

ಮರ: ನಾನು ನಿನ್ನೆ ಇರಲಿಲ್ಲ  ಎಂದು ಮಕ್ಕಳಿಗೆ ಗೊತ್ತೇ ಆಗಿಲ್ಲ!

ಹುಲ್ಲು: ನಿನ್ನೆ ಇರಲಿಲ್ಲ ಎನ್ನುವುದೂ ಮಕ್ಕಳಿಗೆ ತಿಳಿಯುವುದಿಲ್ಲ. ನೀನು ಇವತ್ತು ಇಲ್ಲಿ ಇರುವುದು ಕೂಡ ಮಕ್ಕಳಿಗೆ ತಿಳಿಯುವುದಿಲ್ಲ. ಅವರು ಅವರದೇ ಲೋಕದಲ್ಲಿರ‍್ತಾರೆ.

(ಇಬ್ಬರು ಮಕ್ಕಳು ಬಂದು ಮರದ ಬುಡದಲ್ಲಿ  ಕುಳಿತುಕೊಳ್ಳುತ್ತಾರೆ)

ಹು೩: (ಹರ್ಷೋಲ್ಲ್ಲಾಸದಿಂದ)ನಮ್ಗೆ ಗಣಿತಕ್ಕೆ ಇವತ್ತು ಹೊಸ ಮಿಸ್ ಬಂದಿದ್ದಾರೆ!

ಹು೪: ಪೆಟ್ಟು ಕೊಡ್ತಾರಾ?

ಹು೩: ಇಲ್ಲ. ತುಂಬಾ ಒಳ್ಳೇವ್ರು.

ಹು೩: (ಮರದ ಕಡೆಗೆ ತಿರುಗಿ) ಈ ಮರ ಎಷ್ಟು ಚೆಂದ ಅಲ್ವಾ?

ಹು೪: ಮರವನ್ನು ನೋಡಿ ಆಶ್ಚರ್ಯದಿಂದ) ಎಷ್ಟು ಬೇಗನೆ ಇಷ್ಟೆತ್ತರ ಬೆಳೆದುಬಿಟ್ಟಿದೆ?

(ಗಂಟೆ ಬಾರಿಸುತ್ತದೆ. ಮಕ್ಕಳು ಎದ್ದು ಓಡುತ್ತಾರೆ)

ಮರ: ಏನದು ಗಂಟೆಯ ಶಬ್ದ?

ಹುಲ್ಲು: ಅದು ಇವತ್ತಿನ ಶಾಲೆ ಮುಗಿಯಿತು ಅಂತ ಅರ್ಥ. ನಾಳೆ ಬೆಳಿಗ್ಗೆ  ಹೀಗೆಯೆ ಮತ್ತೊಮ್ಮೆ ಗಂಟೆ ಬಾರಿಸುತ್ತದೆ. ಆಗ ಶಾಲೆ ಆರಂಭವಾಗುತ್ತದೆ.

ಮರ: ತುಂಬಾ ತಿಳಿದುಕೊಂಡಿದ್ದಿ ನೀನು!

ಹುಲ್ಲು: (ನಕ್ಕು) ಶಾಲೆ ಹುಟ್ಟು ವ ಮೊದಲೇ ನಾನು ಇಲ್ಲಿದ್ದೆ. ಇಲ್ಲಿಗೆ ಮೇಸ್ಟ್ರ ಪಾಠ   ಕೂಡ ಕೇಳಿಸುತ್ತದೆ. ಕೇಳಿ ಕೇಳಿ ಇಡೀ ಶಾಲೆಯ ಎಲ್ಲಾ ಪಾಠಗಳೂ ನನಗೆ ಕಂಠಪಾಠ ಆಗಿವೆ. ಮಕ್ಕಳ ಎಲ್ಲಾ ಆಟಗಳನ್ನೂ ಕಂಡಿದ್ದೇನೆ. ಅವರ ಎಲ್ಲಾ ಹಾಡುಗಳನ್ನೂ ಕೇಳಿದ್ದೇನೆ.

ಮರ: ಮಕ್ಕಳೆಲ್ಲಾ  ಹೊರಟೇ ಹೋದರಲ್ಲಾ?

ಹುಲ್ಲು: ಹೌದು ಇನ್ನು ನಾಳೆ ಬೆಳಿಗ್ಗಿನ ವರೆಗೆ ಇಲ್ಲಿ ನಿಶ್ಶಬ್ದ. ಇಷ್ಟು ದಿವಸ ತುಂಬಾ ಬೇಜಾರಾಗ್ತಿತ್ತು. ನೀನು ಬಂದಿರುವುದು ತುಂಬಾ ಸಂತೋಷ. ಇನ್ನು ಇಲ್ಲೇ ಇರ‍್ತೀಯ?

ಮರ: ಹೌದು.  ಇನ್ನು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರ‍್ತೇನೆ. ಮಕ್ಕಳ ಹಾಡಿನಲ್ಲಿ ನಿಂಗೆ ಇಷ್ಟವಾದ ಒಂದು ಹಾಡನ್ನು ಹಾಡು

ಹುಲ್ಲು:

ವಿಜಯ ನಮ್ಮದೇ ವಿಜಯ ನಮ್ಮದೇ
ವಿಜಯ ನಮ್ಮದೇ ವಿಜಯ ನಮ್ಮದೇ

ಸತ್ಯ ನಮ್ಮ ದಾರಿ ಧರ್ಮ ನಮ್ಮ ಬೆಳಕು
ಕರುಣೆಯಲ್ಲಿ ಶಾಂತಿ  ಪ್ರೀತಿಯಲ್ಲಿ ಬದುಕು
ಭೂಮಿ ನಮ್ಮ ತಾಯಿ ಗಗನ ನಮ್ಮ ತಂದೆ
ನೀತಿಯಲ್ಲಿ  ಪ್ರಾಣ ನಡತೆಯಲ್ಲಿ ಮಾನ
ವಿಜಯ ನಮ್ಮದೇ ವಿಜಯ ನಮ್ಮದೇ
ವಿಜಯ ನಮ್ಮದೇ ವಿಜಯ ನಮ್ಮದೇ

ದುಡಿಮೆಯಿಂದ ಬಲವು ಕಲಿಕೆಯಿಂದ ಗೆಲುವು
ಛಲದಿ ಮುಂದೆ ಮುಂದೆ ನಾವು ಎಲ್ಲರೊಂದೆ
ನಮ್ಮ ರಕ್ತವೊಂದೆ ನಮ್ಮ ಉಸಿರು ಒಂದೆ
ನಮ್ಮ ಹಾದಿ ಒಂದೆ ನಮ್ಮ ಗುರಿಯು ಒಂದೆ

ಮರ, ಹುಲ್ಲು:

ವಿಜಯ ನಮ್ಮದೇ ವಿಜಯ ನಮ್ಮದೇ
ವಿಜಯ ನಮ್ಮದೇ ವಿಜಯ ನಮ್ಮದೇ

ಫೇಡ್ ಔಟ್