ಪಾತ್ರಗಳು ಮತ್ತು ಪ್ರಾಯ:
ಜಮಾಲುದ್ದೀನ್(೭೫): ರೊಸೆಟ್ಟಾ ರಾಜ್ಯದ ಅರಸ
ಸಲೀಮ(೨೫): ಜಲಾಲುದ್ದೀನನ ಮಗ
ನಜೀರ್(೬೫): ಪ್ರಧಾನಿ
ಮುಬಾರಕ್(೬೫): ಕೈರೋ ನಗರದ ವ್ಯಾಪಾರಿ
ಜಲೀಲ್(೬೦): ಅಲ್ಮನ್ಸೂರ ರಾಜ್ಯದ ಅರಸ
ಸಲಾಮ(೧೬): ಜಲೀಲನ ಮಗಳು
ಮುದುಕಿ, ಸೇವಕರು

ದೃಶ್ಯ ಒಂದು: ಅರಮನೆ

(ವೃದ್ಧನೂ ರೋಗಗ್ರಸ್ತನೂ ಆಗಿರುವ ಅರಸ ಜಮಾಲುದ್ದೀನ್. ಆರಾಮಾಸನದಲ್ಲಿ ಒರಗಿ ಕುಳಿತುಕೊಂಡಿದ್ದಾನೆ. ರಾಜಕುಮಾರ ಸಲೀಮನ ಪ್ರವೇಶ. ಸಲೀಮ ಬಹಳ ಆಡಂಬರದ ಪೋಷಾಕಿನಲ್ಲಿದ್ದಾನೆ)

ಜಮಾ: ಬಾ ಬಾ. ನಿನ್ನನ್ನೇ ನಿರೀಕ್ಷಿಸುತ್ತಿದ್ದೇನೆ.

ಸಲೀಮ:  (ತಂದೆಯನ್ನು ಆಲಿಂಗಿಸಿದ ಬಳಿಕ ಪಕ್ಕದಲ್ಲಿ ಕುಳಿತುಕೊಂಡು) ಏನಪ್ಪಾ ವಿಶೇಷ?

ಜಮಾ: ವಿಶೇಷವೇನೂ ಇಲ್ಲ. ನನ್ನ ಅನಾರೋಗ್ಯದ ವಿಚಾರ ನಿನಗೆ ತಿಳಿದೇ ಇದೆ.

ಸಲೀಮ: ಈಗ ಹೇಗಿದ್ದೀರಿ ಅಪ್ಪಾ?

ಜಮಾ: ಹಾಗೇ ಇದೀನಿ ಮಗಾ. ಇನ್ನೇನು ನನ್ನ ಕಾಲ ಮುಗೀತಾ ಬಂತು. ನಾನು ಇನ್ನು ಹೆಚ್ಚು ಕಾಲ ಬದುಕಿರುವ ಸಂಭವ ಇಲ್ಲ.

ಸಲೀಮ: ಹಾಗೆ ಹೇಳಬೇಡಿ ಅಪ್ಪಾ .

ಜಮಾ: ಹುಟ್ಟಿದ ಜೀವಿಗೆ ಮರಣ ಇದ್ದದ್ದೇ ಅಲ್ಲವೆ? ಆ ಬಗ್ಗೆ ನನಗೆ ಚಿಂತೆ ಇಲ್ಲ ಸಲೀಮ.

ಸಲೀಮ: ಬೇರೆ ಏನು ಚಿಂತೆ ಅಪ್ಪಾ?

ಜಮಾ: ಚಿಂತೆ ಏನೂ ಇಲ್ಲ. ಬರೀ ಯೊಚನೆ.

ಸಲೀಮ: ಯಾವುದರ ಕುರಿತು ಅಪ್ಪಾ?

ಜಮಾ: ರಾಜ್ಯದ ಭವಿಷ್ಯದ ಕುರಿತು ಸಲೀಮ.

ಸಲೀಮ: ಆ ಕುರಿತು ನೀವು ಚಿಂತಿಸುವ ಅಗತ್ಯ ಇಲ್ಲ. ನನ್ನ ಜವಾಬ್ದಾರಿಯ ಅರಿವು ನನಗೆ ಇದೆ ಅಪ್ಪಾ.

ಜಮಾ: ಹಾಗಾದರೆ ನಾನು ಸಂತೋಷದಿಂದ ಪ್ರಾಣ ಬಿಡುತ್ತೇನೆ ಮಗೂ. ರಾಜಕಾರಣದಲ್ಲಿ ಕಲಿಯಬೇಕಾದ್ದೆಲ್ಲ ನೀನು ಕಲಿತಿರುವೆ. ಬುದ್ಧಿವಂತನೂ ಆಗಿರುವೆ. ನಿನಗೆ ಪ್ರತ್ಯೇಕವಾಗಿ ಹೇಳಬೇಕಾದ್ದು ಏನೂ ಇಲ್ಲ. ಆದರೆ ನಿನ್ನಲ್ಲಿ ಹೇಳಲೇ ಬೇಕಾದ ಒಂದೆರಡು ವಿಚಾರಗಳಿವೆ ಸಲೀಮ.

ಸಲೀಮ: ಏನು? ಹೇಳಿ ಅಪ್ಪಾ.

ಜಮಾ: ಯಾವಾಗಲೂ ಒಳ್ಳೆಯವನಾಗಿಯೆ ಇರು. ಪ್ರಜೆಗಳಿಗೆ ಆಡಳಿತದಿಂದ ಯಾವ ತೊಂದರೆಯೂ ಆಗದಂತೆ ನೋಡಿಕೊ. ನಿನ್ನನ್ನು ಹೊಗಳುತ್ತಾ ಇರುವವರನ್ನು ಆದಷ್ಟು ದೂರ ಇಡು. ಅವರ ಮಾತನ್ನು ನಂಬಬೇಡ. ಯಾರನ್ನಾದರೂ ಶಿಕ್ಷೆಗೆ ಗುರಿಪಡಿಸುವ ಮೊದಲು ಸತ್ಯವನ್ನು ತಿಳಿದುಕೊ.

ಸಲೀಮ: ನಿಮ್ಮ ಮಾತಿನಂತೆ ನಡೆದುಕೊಳ್ಳುತ್ತೇನೆ ಅಪ್ಪಾ.

(ಜಮಾಲುದ್ದೀನ್ ಎದ್ದು ನಿಲ್ಲಲು ಪ್ರಯತ್ನಿಸಿ ಏಳಲಿಕ್ಕಾಗದೆ, ಏದುಸಿರು ಬಿಡುತ್ತಾ ಮರಳಿ ಕುಳಿತುಕೊಳ್ಳುತ್ತಾನೆ.

ಸಲೀಮ: (ಚಪ್ಪಾಳೆ ತಟ್ಟುತ್ತಾನೆ. ಸೇವಕ ಬರುತ್ತಾನೆ) ಕೂಡಲೇ ರಾಜವೈದ್ಯರನ್ನು ಕರೆದುಕೊಂಡು ಬಾ.

ಫೇಡ್ ಔಟ್

 

ದೃಶ್ಯ ಎರಡು: ಅರಮನೆ

(ರಾಜಕುಮಾರ ಸಲೀಮ ಅರಸನಾಗಿದ್ದಾನೆ. ಐಷಾರಾಮದಿಂದ ಜೀವಿಸುತ್ತಿದ್ದಾನೆ. ಪ್ರಧಾನಿ ನಜೀರನ ಪ್ರವೇಶ)

ಸಲೀಮ: ಬನ್ನಿ  ಪ್ರಧಾನಿಯವರೇ. ಏನು ಸಮಾಚಾರ?

ನಜೀರ್: ಸಮಾಚಾರ ಇನ್ನೇನೂ ಇಲ್ಲ. ಖಜಾನೆ ಖಾಲಿಯಾಗುತ್ತಾ ಬಂದಿದೆ. ಸೈನಿಕರಿಗೆ ಮುಂದಿನ ತಿಂಗಳ ಪಗಾರ ಕೊಡಲು ಬೇಕಾದಷ್ಟು ಹಣ ಇಲ್ಲ.

ಸಲೀಮ: ಖಜಾನೆ ಹೇಗೆ ಖಾಲಿಯಾಯಿತು ಪ್ರಧಾನಿಯವರೆ?

ನಜೀರ್: ನಿಮಗೇ ಗೊತ್ತು ಮಹಾಪ್ರಭು. ನಿಮ್ಮ ಸ್ನೇಹಿತರೇ ನಿಮಗೆ ಮೋಸ ಮಾಡಿದ್ದಾರೆ. ನಿಮ್ಮ ತಂದೆಯವರ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸುತ್ತೇವೆ ಎಂದು ಕೋಟ್ಯಂತರ ಹಣ ಒಯ್ದವರು ನಾಪತ್ತೆಯಾಗಿದ್ದಾರೆ. ಕಲ್ಯಾಣಕಾರ್ಯಗಳಿಗೆ ಹಣ ಒಯ್ದವರು ತಂತಮ್ಮ ಕಲ್ಯಾಣ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ  ಎಂದು ವಿಚಾರಿಸುವ ಪ್ರಯತ್ನವನ್ನು ಈ ಐದು ವರ್ಷಗಳಲ್ಲಿ ನೀವು ಮಾಡಲಿಲ್ಲ. ನಾನು ಏನಿದ್ದರೂ ನಿಮ್ಮ ತಂದೆಯವರ ಸಮಕಾಲೀನ. ಇನ್ನು ಹೆಚ್ಚು  ವರ್ಷ ಬದುಕುವ ಸಂಭವ ಇಲ್ಲ. ರಾಜ್ಯದ ಸ್ಥಿತಿ ಹೀಗೇ ಮುಂದರಿದರೆ, ಅಪಾಯ ಕಟ್ಟಿಟ್ಟ ಬುತ್ತಿ.

ಸಲೀಮ: ಕ್ಷಮಿಸಿ. ನನಗೆ ಏನೂ ತಿಳಿಯಲಿಲ್ಲ.  ತಂದೆಯವರ ಮಾತನ್ನು  ನಾನು ಮರೆತುಬಿಟ್ಟೆ. ಸಕಾಲದಲ್ಲಿ ಎಚ್ಚರಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಈಗ ಸಮಸ್ಯೆಯನ್ನು ಎದುರಿಸಲು ನೀವೇ ಸಹಾಯಮಾಡಬೇಕು ಪ್ರಧಾನಿಯವರೆ.

ನಜೀರ್: ನಾನು ಇಷ್ಟು ಹೇಳಿದ್ದೇ ನೀವಿನ್ನೂ ಚಿಕ್ಕವರು, ಪುತ್ರಸಮಾನರು ಎಂಬ ಕಾರಣದಿಂದ. ನನ್ನ ಬಳಿ ಸಮಸ್ಯೆಗೆ ಪರಿಹಾರ ಇಲ್ಲ ಮಹಾಪ್ರಭು.

ಸಲೀಮ: ನೀವು ನನ್ನನ್ನು ಮಹಾಪ್ರಭು ಎಂದು ಕರೆದರೆ ನನ್ನಿಂದ ಕೇಳಿಸಿಕೊಳ್ಳೋಕಾಗಲ್ಲ. ಆಸ್ಥಾನದಲ್ಲಿ ಹಾಗೆ ಕರೆಯಿರಿ. ಇಲ್ಲಿ ಬೇಡ. ಹಿಂದೆ ಏಕವಚನ ಉಪಯೊಗಿಸುತ್ತಿದ್ದಿರಲ್ಲಾ, ಹಾಗೇ ಕರೆಯಿರಿ. ಹಾಗಾದರೆ ಮಾತ್ರ ನನ್ನ ತಲೆ ನೆಟ್ಟಗಿರುತ್ತದೆ.

ನಜೀರ್: (ನಕ್ಕು) ಆಗಲಿ ಸಲೀಮ.

ಸಲೀಮ: (ಪ್ರಧಾನಿಯನ್ನು ಆಲಿಂಗಿಸಿ) ನೀವು  ಸಲೀಮ ಅಂತ ಕರೆಯೊದನ್ನ  ನಿಲ್ಲಿಸಿ ಮಹಾಪ್ರಭು ಅಂತ ಕರೆಯಲು ಶುರುಮಾಡಿದ್ದು ನಿಮ್ಮ ತಪ್ಪು.

ನಜೀರ್: (ಭಾವುಕತೆಯಿಂದ ಕಣ್ಣೊರಸಿಕೊಳ್ಳುತ್ತಾನೆ. ಮುಗುಳ್ನಕ್ಕು) ಇರಬಹುದು ಸಲೀಮ.

ಸಲೀಮ: ಈಗ ನನಗೆ ಹೊಸ ಪ್ರಾಣ ಬಂದಂತಾಯಿತು.

ನಜೀರ್: ನಿನ್ನ ಇಚ್ಛೆಯಂತೆಯೆ ನಡೆದುಕೊಳ್ಳುವೆ. ಆದರೆ ಒಂದು ಷರತ್ತು.

ಸಲೀಮ: ಹೇಳಿ ಪ್ರಧಾನಿಯವರೆ.

ನಜೀರ್: ನಿನ್ನ ಸ್ನೇಹಿತರನ್ನೆಲ್ಲ ದೂರವಿಡಬೇಕು. ಯಾವುದು ನಿಜವಾದ ಸುಖ ಮತ್ತು ಸಂತೋಷ ಅನ್ನುವುದು ಆಗ ನಿನಗೆ ತಿಳಿಯುತ್ತದೆ. ಯಾರು ನಿನ್ನನ್ನ್ನು ಹೊಗಳುತ್ತಾ  ಇರ‍್ತಾರೋ ಅವರನ್ನು ದೂರ ಅಟ್ಟಬೇಕು.

ಸಲೀಮ: ಸರಿ. ಹಾಗೇ ಮಾಡ್ತೇನೆ. ನೀವು ಯಾವಾಗಲೂ ನನ್ನ ಜೊತೆಯೆ ಇರ‍್ಬೇಕು.

ನಜೀರ್: ಆಗ್ಲಿ  ಇರ‍್ತೇನೆ.

ಸಲೀಮ: ಸಂತೋಷದಲ್ಲಿಯೂ ದು:ಖದಲ್ಲಿಯೂ.

ನಜೀರ್: (ನಕ್ಕು) ಆಗ್ಲಿ. ಆದರೆ ಈಗ ರಾಜ್ಯ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಹಿಡೀಬೇಕು. ಈ ಸಮಸ್ಯೆಗೆ ಪರಿಹಾರ ಸೂಚಿಸುವವರು ಯಾರಾದರೂ ಇದ್ರೆ ನಿನ್ನ  ತಂದೆಯ ಗುರು  ಉಸ್ತಾದ್ ನೂರುಲ್‌ಹಸನ್ ಮಾತ್ರ.

ಸಲೀಮ: ಅವರು ಈಗಲೂ ಇದ್ದಾರಾ?

ನಜೀರ್: ಹೌದು. ಅವರಿಗೆ ಈಗ ತೊಂಬತ್ತೈದು ವರ್ಷ. ಅವರು ನೈಲ್ ನದಿದಡದಲ್ಲಿ ಅಲ್‌ಖಾಹಿರಾ ಎಂಬಲ್ಲಿ ಒಂದು ಆಶ್ರಮದಲ್ಲಿ ವಾಸವಾಗಿದ್ದಾರೆ.

ಸಲೀಮ: ಅವರು ಇಲ್ಲಿಗೆ ಬರ‍್ತಾರೆಯೆ?

ನಜೀರ್: ಇಲ್ಲ. ನಾವು ಅಲ್ಲಿಗೆ ಹೋಗ್ಬೇಕು.

ಸಲೀಮ: ಸರಿ ನಾಳೆಯೆ ಅವರನ್ನು ಕಾಣೋಣ.

ಫೇಡ್ ಔಟ್

 

ದೃಶ್ಯ ಮೂರು: ಕಾಡು. ಗುಡಿಸಲು

(ಉಸ್ತಾದ್ ನೂರುಲ್ ಹಸನ್‌ನ ಆಶ್ರಮ. ಉಸ್ತಾದ್ ಎದುರು ಸಲೀಮ ಮತ್ತು ನಜೀರ್ ಕುಳಿತಿದ್ದಾರೆ)

ಉಸ್ತಾದ್: ಹೇಳುವುದೆಲ್ಲ ಆಯಾ , ಇನ್ನೂ ಹೇಳುವುದು ಇದೆಯಾ?

ಸಲೀಮ: ಆಯ್ತು ಗುರುಗಳೆ.

ಉಸ್ತಾದ್: ಕಷ್ಟ  ಎಲ್ಲಿಂದ ಬಂತು ಎಂದು ಅರ್ಥ ಆಯಾ?

ಸಲೀಮ: ಎಲ್ಲಿಂದ ಬಂತು ಅಂತ ತಿಳಿಯಲಿಲ್ಲ ಗುರುಗಳೆ.

ಉಸ್ತಾದ್: ಹಾಗಾದರೆ ಅಜ್ಞಾನದಿಂದ ಬಂತೆ?

ನಜೀರ್: ಇಲ್ಲ ಗುರುಗಳೆ. ತಿಳಿಯದೆ ಮಾಡಿದ ತಪ್ಪುಗಳಿಂದ ಬಂತು.

ಉಸ್ತಾದ್: ಅಂದರೆ, ಕಷ್ಟ ಒಳಗಿನಿಂದ ಬಂದದ್ದು . ಹೊರಗಿನಿಂದ ಬಂದದ್ದಲ್ಲ.

ಸಲೀಮ: ಹೌದು ಗುರುಗಳೆ.

ಉಸ್ತಾದ್: ಇನ್ನೊಮ್ಮೆ ತಪ್ಪುಗಳು ಆಗುವುದಿಲ್ಲ ಎಂಬ ವಿಶ್ವಾಸ ಇದೆಯೆ?

ಸಲೀಮ: ಇದೆ ಗುರುಗಳೆ.

ಉಸ್ತಾದ್: ಪರಿಹಾರ ಒಳಗೇ ಇದೆ. (ತುಸು ಹೊತ್ತು ಮನವಾಗಿದ್ದು) ನಿನ್ನ ತಂದೆ ಸಾಯುವ ಹೊತ್ತಿಗೆ ಇದ್ದ ಕೋಣೆಗೆ ಹೋಗು. ಪೂರ್ವ ದಿಕ್ಕಿನ ಗೋಡೆಯಲ್ಲಿ ಒಂದು ಗುಪ್ತವಾದ ಬಾಗಿಲು ಇದೆ. ಅದನ್ನು ತೆರೆ. ಪರಿಹಾರ ಸಿಗುತ್ತದೆ. ಆದರೆ ಕೇವಲ ಸಂಪತ್ತಿನಿಂದ ಮನುಷ್ಯನ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ.  ಮನುಷ್ಯನಿಗೆ ಮನುಷ್ಯನ ಪ್ರೀತಿ ಬೇಕು. ನಿಜವಾದ ಪ್ರೀತಿಯಿಂದಲೇ ಎಲ್ಲಾ ಸಮಸ್ಯೆಗಳಿಗೂ ಪರಿಹಾರ. ಅದರಲ್ಲೇ ಅಡಗಿರುವುದು ನಿಜವಾದ ಸಂತೋಷ. ಪ್ರಜೆಗಳನ್ನು ಸಂತೋಷದಲ್ಲಿಡುವುದು ಹೇಗೆ ಎಂಬುದನ್ನು ಕಲಿತುಕೊಳ್ಳಬೇಕು.

ಸಲೀಮ: ಕಲಿತುಕೊಳ್ಳುತ್ತೇನೆ ಗುರುಗಳೆ.

ಉಸ್ತಾದ್: ಸಂಪತ್ತು ಇರುವಾಗ ಎಲ್ಲರೂ ನೆಂಟರು. ದ್ವೇಷ, ಮೋಸ, ಸ್ವಾರ್ಥ ಎಲ್ಲವೂ ಪ್ರೀತಿಯ ವೇಷ ಹಾಕಿಕೊಂಡು ಬರುತ್ತದೆ. ನಿಜವಾದ ಪ್ರೀತಿ ನಾವು ಕುಳಿತಲ್ಲಿಗೆ ಬರುವುದಿಲ್ಲ. ನಾವೇ ಹುಡುಕಿಕೊಂಡು ಹೋಗಬೇಕು. ಪ್ರಜೆಗಳನ್ನು ಪ್ರೀತಿಸುವುದು ಹೇಗೆ ಎಂಬುದನ್ನು ಕಲಿತುಕೊಳ್ಳಬೇಕು.

ಸಲೀಮ: ಆಗಲಿ ಗುರುಗಳೆ.

ಉಸ್ತಾದ್: ಯಾವತ್ತೂ ವಿವೇಕಿಯಾಗಿರು.

ಸಲೀಮ:  ನಿಮ್ಮ ಆಶೀರ್ವಾದ ಗುರುಗಳೆ.

(ಉಸ್ತಾದ್ ಪಾದಕ್ಕೆ ವಂದಿಸುತ್ತಾನೆ)

ಫೇಡ್ ಔಟ್

 

ದೃಶ್ಯ ನಾಲ್ಕು: ಅರಮನೆ

(ರಂಗವನ್ನು ಎರಡು ಭಾಗಗಳಾಗಿ ವಿಂಗಡಿಸಿರಬೇಕು. ನಡುವೆ ಗೋಡೆ. ಬಲಗಡೆಯದು ಅರಸನ ಕೋಣೆ.  ಎಡಗಡೆಯದು ಗುಪ್ತವಾದ ಕೋಣೆ. ಗುಪ್ತವಾದ ಕೋಣೆಯಲ್ಲಿ ಬೆಳಕಿಲ್ಲದಿರುವುದರಿಂದ ಅದರೊಳಗಿರುವುದು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ. ಸಲೀಮ ಮತ್ತು ನಜೀರ್ ಗುಪ್ತವಾದ ಬಾಗಿಲು ತೆರೆಯುತ್ತಾರೆ. ಒಳಗಿನ ಕೋಣೆಯಲ್ಲಿ ಬೆಳಕು ಬರುತ್ತದೆ. ಒಳಗಡೆ ಹಲವು ಪೆಟ್ಟಿಗೆಗಳು  ಮತ್ತು ಒಂದು ದೊಡ್ಡ  ಕಪಾಟು ಇದೆ)

ಸಲೀಮ: (ಒಂದೊಂದೇ ಪೆಟ್ಟಿಗೆಯ ಮುಚ್ಚಳ ತೆಗೆದು ನೋಡಿ) ಎಲ್ಲದರಲ್ಲಿಯೂ ಚಿನ್ನದ ನಾಣ್ಯಗಳು ಪ್ರಧಾನಿಯವರೆ.

ನಜೀರ್: ಕಪಾಟಿನ ಬಾಗಿಲನ್ನು ತೆರಿ.

(ಸಲೀಮ  ಕಪಾಟಿನ ಬಾಗಿಲು ತೆರೆಯುತ್ತಾನೆ) ಕಪಾಟಿನ ಒಳಗೆ ಎಂಟು ರತ್ನಖಚಿತ ಚಿನ್ನದ ವಿಗ್ರಹಗಳು ಮತ್ತು ಒಂದು ದೊಡ್ಡ  ಖಾಲಿ  ಪೀಠವಿದೆ)

ಸಲೀಮ: ವಜ್ರ ವೈಢೂರ‍್ಯಗಳನ್ನು ಅಂಟಿಸಿರುವ ಚಿನ್ನದ ವಿಗ್ರಹಗಳು ಪ್ರಧಾನಿಯವರೆ. (ಒಂದು ಎರಡು ಎಂದು ಎಂಟರ ವರೆಗೆ ಲೆಖ್ಖ ಮಾಡಿ) ಎಂಟಿವೆ. (ಖಾಲಿ ಪೀಠವನ್ನು  ತೋರಿಸಿ ) ಒಂದು ಪೀಠ ಖಾಲಿಯಾಗಿದೆ. ಇದರ ಮೇಲಿದ್ದ ವಿಗ್ರಹ ಎಲ್ಲಿ  ಹೋಯಿತು? (ಪ್ರಶ್ನಾರ್ಥಕವಾಗಿ ಪ್ರಧಾನಿಯನ್ನು ನೋಡುತ್ತಾನೆ. ತಟ್ಟನೆ ಅವನ ಗಮನ ಪೀಠದ ಮೇಲಿನ ಬರಹದ ಕಡೆಗೆ ಹೋಗುತ್ತದೆ) ವಿಗ್ರಹದ ಮೇಲೆ ಏನೋ ಬರೆದಿದೆ.

ನಜೀರ್: ಏನು ಬರೆದಿದೆ?

ಸಲೀಮ: (ಓದುತ್ತಾನೆ) ಒಂಬತ್ತನೆಯ ವಿಗ್ರಹ ಅತ್ಯಂತ ಅಮೂಲ್ಯವಾದ ವಿಗ್ರಹ. ಅದು ಕೈರೋದಲ್ಲಿ ಮುಬಾರಕ್ ಎಂಬವನ ಬಳಿ ಇದೆ.

ನಜೀರ್: (ನಕ್ಕು) ಈಗ ಸಿಕ್ಕಿರುವ ಸಂಪತ್ತಿನಿಂದ ರಾಜ್ಯವನ್ನು ಎದುರಿಸುತ್ತಿರುವ ಆರ್ಥಿಕ ಸಂಕಟ ಪರಿಹಾರವಾಗುತ್ತದೆ. ಆ ಒಂಬತ್ತನೆಯ ವಿಗ್ರಹದ ಯೊಚನೆ ಬಿಟ್ಟುಬಿಡೋಣ ಆಗದೆ?

ಸಲೀಮ: ಪೀಠದ ಮೇಲಿನ ಬರಹದ ಪ್ರಕಾರ ಅದು ತಂದೆಯವರಿಗೆ ಸೇರಿದ್ದು. ಅಂದರೆ ನಮಗೆ ಸೇರಿದ್ದು. ಹಾಗಿರುವಾಗ, ನಾವು ಅದನ್ನು ಪಡೆಯಬೇಕಾದ್ದು ನ್ಯಾಯವಲ್ಲವೆ ಪ್ರಧಾನಿಯವರೆ? ನೋಡಿ. ಎಷ್ಟು ದೊಡ್ಡ ಪೀಠ! ಇದರ ಮೇಲಿದ್ದ ವಿಗ್ರಹ ಕೂಡ ತುಂಬಾ ದೊಡ್ಡದೇ ಇರಬೇಕು.

ನಜೀರ್: ಆ ಮುಬಾರಕ್ಯಾರೊ, ಜೀವಂತವಾಗಿದ್ದಾನೊ ಇಲ್ಲವೊ, ಆ ವಿಗ್ರಹ ಅವನ ಬಳಿ ಇದೆಯೊ ಇಲ್ಲವೊ…

ಸಲೀಮ: ಆದರೂ ಹುಡುಕುವುದು ನಮ್ಮ ಕರ್ತವ್ಯವಲ್ಲವೆ?

ನಜೀರ್: ನಿನ್ನ ತಂದೆಗೆ ಸೇರಿದ್ದು ಅಂದ ಮೇಲೆ, ಅದು ಎಲ್ಲಕ್ಕಿಂತಲೂ ಅಮೂಲ್ಯವಾದದ್ದು ಅಂದ ಮೇಲೆ. ಹುಡುಕಬೇಕು ಸಲೀಮ. ನಾಳೆಯೆ ಹೊರಡೋಣ.

ಸಲೀಮ: ಆಗಲಿ ಪ್ರಧಾನಿಯವರೆ. ಬಿಳಿ ಕುದುರೆಗಳ ಗಾಡಿ ಸಿದ್ಧವಾಗಿರಲಿ. (ನಜೀರ್ ತಲೆ ಬಾಗಿ ವಂದಿಸಿ ನಿರ್ಗಮಿಸುತ್ತಾನೆ)

ಫೇಡ್ ಔಟ್

 

ದೃಶ್ಯ ಐದು:  ಮನೆ. 

(ಮುಬಾರಕ್ ಎಂಬ ಶ್ರೀಮಂತ ವ್ಯಾಪಾರಿಯ ಮನೆ. ಮುಬಾರಕ್ ಲೆಖ್ಖ ಪುಸ್ತಕದಲ್ಲಿ ಲೆಖ್ಖ ಪರಿಶೋಧನೆ ನಡೆಸುತ್ತಿದ್ದಾನೆ.  ಸೇವಕನ ಪ್ರವೇಶ)

ಸೇವಕ: (ವಂದಿಸಿ) ನಿಮ್ಮನ್ನು ಕಾಣಲು ಯಾರೋ ಬಂದಿದ್ದಾರೆ.

ಮುಬಾ: ಯಾರು?

ಸೇವಕ: ಒಬ್ಬ  ಯುವಕ ಮತ್ತು ಒಬ್ಬ ಮುದುಕ.

ಮುಬಾ: ಕರೆದುಕೊಂಡು ಬಾ. (ರಾಜಕುಮಾರ ಮತ್ತು ನಜೀರ್‌ರ ಪ್ರವೇಶ. ನಮಸ್ಕರಿಸುತ್ತಾರೆ) ಬನ್ನಿ ಕುಳಿತುಕೊಳ್ಳಿ. ಯಾರು ನೀವು? ನನ್ನಿಂದ ಏನಾಗಬೇಕು?

ಸಲೀಮ: ನಾನು ರೊಸೆಟ್ಟಾ ರಾಜ್ಯದ ಅರಸ ಜಮಾಲುದ್ದೀನರ ಮಗ ಸಲೀಮ. ಇವರು ನಮ್ಮ ಪ್ರಧಾನಿ.

ಮುಬಾರಕ್: (ತಟ್ಟನೆ ಎದ್ದು ಬಂದು ನಜೀರನ್ನು ಆಲಿಂಗಿಸಿ, ಅನಂತರ ಸಲೀಮನನ್ನು ಆಲಿಂಗಿಸಿ, ಅತೀವ ಸಂತೋಷದಿಂದ) ನನ್ನ ಪ್ರಾಣಸ್ನೇಹಿತ ಜಮಾಲುದ್ದೀನನ ಮಗನೇ ನೀನು? ಬಹಳ ಸಂತೋಷ. (ವಿಷಾದದಿಂದ) ಜಮಾಲುದ್ದೀನ್ ತೀರಿಹೋದ ಸುದ್ದಿ ಸಿಕ್ಕಿತ್ತು. ಆದರೆ ಆಗ ನಾನು ಬಗ್ದಾದಿಗೆ ಹೋಗಿದ್ದೆ. (ಕ್ಷಣ ಕಾಲ ಮೇಲಕ್ಕೆ ನೋಡಿ. ತಟ್ಟನೆ ಅವರ ಕಡೆಗೆ ತಿರುಗಿ, ಬಾಗಿ) ದಯವಿಟ್ಟು ಕುಳಿತುಕೊಳ್ಳಿ. ಯಾವ ವಿಶೇಷ ಸಂದರ್ಭವು  ನಿಮ್ಮನ್ನು ಇಲ್ಲಿಗೆ ಬರಮಾಡಿದೆ?

ಸಲೀಮ:  ನನ್ನ ತಂದೆಯವರ ಬಳಿಯಿದ್ದ ಒಂದು ಚಿನ್ನದ ವಿಗ್ರಹ ನಿಮ್ಮ ಬಳಿ ಇದೆಯೆಂದು ತಿಳಿಯಿತು.

ಮುಬಾರಕ್: ನಿಜ. (ವಿಷಾದ ಮತ್ತು ಸ್ವಲ್ಪ ಹೊತ್ತಿನ ಮನ) ಒಮ್ಮೆ  ಜಮಾಲುದ್ದೀನ್ ಮತ್ತು ನಾನು ಪ್ರಯಾಣಿಸುತ್ತಿದ್ದ  ನೌಕೆ ಕೆಂಪು ಸಮುದ್ರದಲ್ಲಿ  ಅಪಘಾತಕ್ಕೆ ಗುರಿಯಾಗಿ ಮುಳುಗಿತು. ನಾವು ಹೇಗೋ ಈಜಿ ದಡ ಸೇರಿದೆವು. “ ನೀನೇ ನನ್ನ ಪ್ರಾಣ ಉಳಿಸಿದೆ”  ಎಂದು ನಾನು ಹೇಳಿದರೆ, “ನೀನೇ ನನ್ನ ಪ್ರಾಣ ಉಳಿಸಿದೆ”  ಎಂದು ಜಮಾಲುದ್ದೀನ್ ಹೇಳಿದ. “ನನ್ನ ನೆನಪಿಗಾಗಿ ನಿನ್ನ ಬಳಿ ಇರಲಿ“ ಎಂದು ಒಂದು ಚಿನ್ನದ ವಿಗ್ರಹವನ್ನು ನನಗೆ ಕೊಟ್ಟ. ಅದು ಮೊನ್ನೆ ಮೊನ್ನೆಯ ವರೆಗೂ ನನ್ನ ಬಳಿಯೆ ಇತ್ತು. ಆದರೆ ಈಗ ಅದು ನನ್ನ ಬಳಿ ಇಲ್ಲ. ಒಂದು ಕಾಲದಲ್ಲಿ ದರೋಡೆಕೋರರಿಂದ ನನ್ನನ್ನು ಬಿಡಿಸಿ ನನ್ನ ಪ್ರಾಣ ಉಳಿಸಿದ ಒಬ್ಬ  ಮನುಷ್ಯನಿಗೆ ನಾನು ಅದನ್ನು ಉಡುಗೊರೆಯಾಗಿ ಕೊಟ್ಟೆ. (ಸಲೀಮನ ಮುಖದಲ್ಲಿ ನಿರಾಶಾಭಾವ)ಆದರೆ ನಾವು ಅವನಲ್ಲಿಗೆ ಹೋಗಿ ವಿಷಯ ತಿಳಿಸುವ. ಅವನು ಕೊಟ್ಟರೆ ನೀನು ತೆಗೆದುಕೊಂಡು ಹೋಗಬಹುದು.

ಸಲೀಮ: ಯಾರು ಆತ?

ಮುಬಾರಕ್: ಆತನ ಹೆಸರು ಜಲೀಲ್. ಈಗ ಅಲ್ಮನ್ಸೂರ ರಾಜ್ಯದ ಅರಸ. ನಾನು ಅದನ್ನು ಆತನಿಗೆ ಕೊಟ್ಟ ಕಾಲದಲ್ಲಿ ಅವನು ನನ್ನಂತೆಯೆ ಒಬ್ಬ ಯುವಕ. ಆದರೆ ಅವನು ಯುವರಾಜ, ನಾನು ಒಬ್ಬ ಸಾಮಾನ್ಯ ವ್ಯಾಪಾರಿ.

ಸಲೀಮ: ಅವರು ಅದನ್ನು ಕೊಡಲು ಒಪ್ಪುವರೆ?

ಮುಬಾರಕ್: ಗೊತ್ತಿಲ್ಲ. ಪ್ರಯತ್ನಿಸೋಣ.

ಫೇಡ್ ಔಟ್

 

ದೃಶ್ಯ ಆರು: ಅರಮನೆ

(ಅರಸ ಜಲೀಲ್‌ಎತ್ತರದ ಕುರ್ಚಿಯಲ್ಲಿ ಕುಳಿತಿದ್ದಾನೆ. ಸೇವಕನ ಆಗಮನ)

ಸೇವಕ: (ವಂದಿಸಿ)ಯಾರೋ  ಮೂವರು ಅಪರಿಚಿತರು ತಮ್ಮನ್ನು ಕಾಣಲು ಬಂದಿದ್ದಾರೆ.

ಜಲೀಲ್: ಯಾರು?

ಸೇವಕ: ಒಬ್ಬ ಯುವಕ ಮತ್ತು ಇಬ್ಬರು ಮುದುಕರು. ಪ್ರವಾಸಿಗರ ಹಾಗಿದ್ದಾರೆ.

ಜಲೀಲ್: ಕರೆದುಕೊಂಡು ಬಾ. (ಸೇವಕ  ಸಲೀಮ ಮತ್ತು ಮುಬಾರಕನ್ನು ಕರೆದುಕೊಂಡು ಬರುತ್ತಾನೆ. ಮೂವರೂ ವಂದಿಸುತ್ತಾರೆ) ಯಾರು? (ಸಂಭ್ರಮದಿಂದ) ಮುಬಾರಕ್! ಬಾ ಬಾ. (ಕುಳಿತುಕೊಳ್ಳಲು ಆಸನ ತೋರಿಸುತ್ತಾನೆ. ಇಬ್ಬರೂ ಕುಳಿತುಕೊಳ್ಳುತ್ತಾರೆ) ಏನು ಸಮಾಚಾರ? ಇವರು ಯಾರು?

ಮುಬಾರಕ್: ಇದು ರೊಸೆಟ್ಟದ ಅರಸ ಜಮಾಲುದ್ದೀನರ ಮಗ ಸಲೀಮ, ಇವರು ಅವರ ಪ್ರಧಾನಿ ನಜೀರ್‌ಸಾಹೆಬ್. ನಾನು ನಿಮಗೆ ಕೊಟ್ಟಿರುವ ವಿಗ್ರಹದ ವಿಚಾರವಾಗಿ ಬಂದಿದ್ದಾರೆ. ಅದು ನನ್ನದಲ್ಲ. ಸಲೀಮನ ತಂದೆ ನನಗೆ ಕೊಟ್ಟ ವಿಗ್ರಹ ಎಂದು ನಿಮಗೆ ಗೊತ್ತು. ಈಗ ಸಲೀಮ ಬಂದಿರುವುದು ಯಾಕೆಂದರೆ, ಅದು ತನ್ನ ತಂದೆಗೆ ಸೇರಿದ್ದಾದ್ದರಿಂದ ಅದನ್ನು ನೀವು ಕೊಡೋದಾದರೆ…

ಸಲೀಮ: ಹಾಗಲ್ಲ ಮುಬಾರಕ್‌ಸಾಹೆಬ್. ತಂದೆಯವರು ಅದನ್ನು ಉಡುಗೊರೆಯಾಗಿ ನಿಮಗೆ ಕೊಟ್ರು. ನೀವು ಅದನ್ನು ಉಡುಗೊರೆಯಾಗಿ ಜಲೀಲ್‌ಸಾಹೆಬ್ರಿಗೆ ಕೊಟ್ಟಿದ್ದೀರಿ. ನಿಜವಾಗಿ ನನಗೆ ಅದರ ಮೇಲೆ ಹಕ್ಕು ಇಲ್ಲ. ನೀವು ಮನಸಾ ಕೊಟ್ಟರೆ ಮಾತ್ರ ನಾನು ಕೊಂಡ್ಹೋಗುತ್ತೇನೆ.

ಜಲೀಲ: ಅಹ, ಚಿನ್ನದಂಥಾ ಮಾತು! ನನಗೆ ಆ ವಿಗ್ರಹ ಬೇಕಾಗಿಲ್ಲ. ನಾನು ಅದನ್ನು ಕೊಡುತ್ತೇನೆ. ಆದರೆ ನನ್ನ ಒಂದು ಸಮಸ್ಯೆಯನ್ನು ನೀನು ಪರಿಹರಿಸಬೇಕು, ಜಲೀಲ್.

ಸಲೀಮ: ಏನು?

ಜಲೀಲ: ನನ್ನ ಅಮ್ಮನಿಗೆ ಒಬ್ಬಳು ಕೆಲಸದ ಹುಡುಗಿ ಬೇಕಾಗಿದ್ದಾಳೆ. ಆದರೆ ಆಕೆ ಯಾವತ್ತೂ ಸುಳ್ಳು ಹೇಳಿರಬಾರದು ಮತ್ತು ಯಾವತ್ತೂ ಸಿಟ್ಟುಮಾಡಿರಬಾರದು ಎನ್ನುವುದು ನನ್ನ ಅಮ್ಮನ ಷರತ್ತು. ಅಂಥವರು ಸಿಗುವುದಾದರೂ ಎಲ್ಲಿ? ಅಂಥವರಿಲ್ಲ ಅಂತ ಎಷ್ಟು ಹೇಳಿದರೂ ಅಮ್ಮ ಒಪ್ಪುವುದಿಲ್ಲ. ಅಂಥವಳೇ ಬೇಕು ಎಂದು ಅವಳ ಹಟ.

ಸಲೀಮ: ಅದ್ಯಾಕೆ ಅಂಥ ಷರತ್ತು?

ಜಲೀಲ: ಅದನ್ನು ಕೇಳಿದ್ರೆ ನೀವು ನಗಬಹುದು. (ನಕ್ಕು) ಅಂಥ ಹುಡುಗಿ ಬಳಿಯಲ್ಲಿದ್ರೆ ಯಾವುದೇ ದುಷ್ಟ ಶಕ್ತಿಗಳು ಬಳಿ ಸುಳಿಯುವುದಿಲ್ಲವಂತೆ.

ಸಲೀಮ: ಅಂಥವರಿದ್ರೂ ಅದನ್ನು ತಿಳಿದುಕೊಳ್ಳುವುದಾದ್ರೂ ಹೇಗೆ?

ಜಲೀಲ: ಅಮ್ಮನ ಬಳಿ ಒಂದು ಅಪೂರ್ವವಾದ ಕನ್ನಡಿ ಇದೆ. ಯಾವ ಹುಡುಗಿ  ಈ ತನಕ ಸುಳ್ಳು ಹೇಳಿರುವುದಿಲ್ಲವೋ ಮತ್ತು ಸಿಟ್ಟು ಮಾಡಿರುವುದಿಲ್ಲವೋ ಅವಳ ಮುಖವನ್ನು ಮಾತ್ರ ಆ ಕನ್ನಡಿ ಪ್ರತಿಬಿಂಬಿಸುತ್ತದೆ. ಇತರರಿಗೆ ಏನೂ ಕಾಣಿಸುವುದಿಲ್ಲ. ಎಷ್ಟೋ ದಿನಗಳಿಂದ ಅಂಥ ಒಬ್ಬಳು ಹುಡುಗಿಗಾಗಿ ಹುಡುಕುತ್ತಿದ್ದೇವೆ. ನಮಗೆ ಸಿಕ್ಕಿಲ್ಲ. ನೀನು ಪ್ರಯತ್ನಿಸುತ್ತೀಯ?

(ಸಲೀಮ ಮತ್ತು ಮುಬಾರಕ್ ಮುಖ ಮುಖ ನೋಡಿಕೊಳ್ಳುತ್ತಾರೆ. ಮುಬಾರಕ್ ಕಣ್ಣು ಸನ್ನೆ ಮಾಡಿ ಒಪ್ಪಿಕೊಳ್ಳಲು ಸೂಚಿಸುತ್ತಾನೆ)

ಸಲೀಮ: ಸರಿ. ಪ್ರಯತ್ನಿಸುತ್ತೇನೆ.

ಜಲೀಲ: ಸಂತೋಷ. ಕನ್ನಡಿ ತರುತ್ತೇನೆ. (ಜಲೀಲ ಒಂದು ಉರುಟಾದ ಒಂದು ಚಿಕ್ಕ ಕನ್ನಡಿ ತಂದು ಸಲೀಮನಿಗೆ ಕೊಟ್ಟು) ಈ ದಿನ ವಿಶ್ರಾಂತಿ ಮಾಡಿ. ನಾಳೆ ಬೆಳಗ್ಗೆ ನೀವು ಈ ಕೆಲಸ ಆರಂಭಿಸಬಹುದು.  ಮುಬಾರಕ್ ಮತ್ತು ಸಲೀಮ ಹೋದರೆ ಸಾಕು ಎಂದು ನನ್ನ ಅಭಿಪ್ರಾಯ ಪ್ರಧಾನಿಯವರು ಬಹಳ ಬಳಲಿರುವ ಹಾಗಿದೆ. ಅವರು ವಿಶ್ರಂತಿ ಗೃಹದಲ್ಲಿ ಆರಾಮ ಮಾಡಲಿ. ಆಗದೆ?

ಮುಬಾರಕ್: ಅದೇ ಒಳ್ಳೆಯದು.

ಒಳಗಿನಿಂದ ಮೃದುವಾಗಿ ಒಂದು ಸ್ತ್ರೀಧ್ವನಿ: ಜಲೀಲ್.

ಜಲೀಲ್: ಬಂದೆ ಅಮ್ಮ. (ಒಳ ಹೋಗುತ್ತಾನೆ)

ಸಲೀಮ: ನಿಜ ಪ್ರಧಾನಿಯವರೆ, ಈ ಬಿಸಿಲಿನಲ್ಲಿ ತಿರುಗಾಡುವುದು ನಿಮ್ಮ ಆರೋಗ್ಯಕ್ಕೆ ಒಗ್ಗುವಂಥ ಕೆಲಸವಲ್ಲ. ಸಾಯಂಕಾಲ ನಾವು ಮರಳುತ್ತೇವೆ.

ನಜೀರ್: (ಅಚ್ಚರಿಯಿಂದ) ಸಾಯಂಕಾಲದೊಳಗೆ ನಿಮ್ಗೆ  ಅಂಥ ಹುಡುಗಿ ಸಿಗುವಳೆ?

ಸಲೀಮ: ಸಾಕಂಕಾಲದೊಲಗಲ್ಲ, ಒಂದು ಶತಮಾನದಲ್ಲಿ ಸಿಗುವುದೂ ಕಷ್ಟ .  ಮೂರ್ತಿಯ ಆಸೆಯನ್ನು ಬಿಡುವುದೇ ಒಳ್ಳೆಯದು  ಎಂದು ನನಗನಿಸುತ್ತದೆ. ಮುಬಾರಕ್:  ಏನಾದರಾಗಲಿ. ಮಾಡುವ ಪ್ರಯತ್ನ ಮಾಡೋಣ. ನಾಳೆ ಆಗದಿದ್ದರೆ ನಾಡಿದ್ದು . ದೇವರ ಕೃಪೆಯಿದ್ದರೆ ಆದೀತು. ಅಲ್ಲವೆ ಸಲೀಮ?

ಸಲೀಮ: ನಿಜ.

ಜಲೀಲ್: (ಮರಳಿ ಬಂದು) ಬನ್ನಿ ವಿಶ್ರಾಂತಿ ಗೃಹಕ್ಕೆ ಹೋಗೋಣ.

ಫೇಡ್ ಔಟ್

 

ದೃಶ್ಯ ಏಳು: ರಸ್ತೆ

(ಸಲೀಮ ಮತ್ತು  ಮುಬಾರಕ್ ನಡೆದು ಬಳಲಿದ್ದಾರೆ. ಒಬ್ಬಳು ಮುದುಕಿ ಅವರನ್ನು ಹಿಂಬಾಲಿಸುತ್ತಿದ್ದಾಳೆ. ಅವರು ಆಯಾಸದಿಂದ ಒಂದು ಮರದ ಬುಡದಲ್ಲಿ ಕುಳಿತುಕೊಳ್ಳುತ್ತಾರೆ. ಮುದುಕಿಯೂ ಒಂದು ಕಡೆ ಕುಳಿತುಕೊಂಡು ದಣಿವಾರಿಸಿಕೊಳ್ಳುತ್ತಾಳೆ)

ಮುದುಕಿ: ಸೂರ್ಯ ಬೆಂಕಿಯ ಉಂಡೆಯ ಹಾಗೆ ಉರಿಯುತ್ತಿದ್ದಾನೆ. ಈ ಸುಡುವ ಬಿಸಿಲಿನಲ್ಲಿ ಎಲ್ಲಿಗೆ ಪ್ರಯಾಣ ಮಾಡುತ್ತಿದ್ದೀರಿ? ಒಂದು ಕಡೆ ಸ್ವಲ್ಪ ಹೊತ್ತು ಕುಳಿತು ವಿಶ್ರಮಿಸಬಾರದೆ?

ಸಲೀಮ: ನಮ್ಮ ಕೆಲಸ ಆಗದೆ ವಿಶ್ರಾಂತಿಯಿಲ್ಲ.

ಮುದುಕಿ: ಏನು ಕೆಲಸ?

ಮುಬಾರಕ್: ನಮ್ಮ ಅರಸರ ತಾಯಿಗೆ ಒಬ್ಬಳು ಕೆಲಸದ ಹುಡುಗಿ ಬೇಕಾಗಿದ್ದಾಳೆ.

ಮುದುಕಿ: ಅದಕ್ಕೇನು? ಅರಮನೆಯ ಕೆಲಸಕ್ಕೆ ಎಂದರೆ ಬೇಕಾದಷ್ಟು ಹುಡುಕಿಯರು ಸಿಗುತ್ತಾರೆ.

ಮುಬಾರಕ್: ಆದರೆ ಅಂಥಿಂಥ ಹುಡುಗಿಯಲ್ಲ. ಅರಸರ ತಾಯಿ ಅಪೇಕ್ಷಿಸುವ ಗುಣಗಳಿರುವಂಥ ಹುಡುಗಿ ಆಗಿರಬೇಕು.

ಮುದುಕಿ: ಅಂದರೆ ಎಂಥ ಹುಡುಗಿ?

ಸಲೀಮ: ಯಾವತ್ತೂ ಸುಳ್ಳು ಹೇಳದ ಮತ್ತು ಯಾವತ್ತೂ ಸಿಟ್ಟುಗೊಳ್ಳದ ಹುಡುಗಿ.

ಮುದುಕಿ: (ಹಗುರಾಗಿ ನಕ್ಕು)ಆದರೆ ಅದನ್ನು ಕಂಡು ಹಿಡಿಯುವುದು ಹೇಗೆ?

ಸಲೀಮ: ನಮ್ಮ ಬಳಿ ಒಂದು ಕನ್ನಡಿಯಿದೆ. ಅಂಥ ಹುಡುಗಿಯಾದರೆ ಅದರಲ್ಲಿ ಅವಳಿಗೆ ಅವಳ ಮುಖ ಕಾಣಿಸುತ್ತದೆ. ಅಲ್ಲವಾದರೆ ಕಾಣಿಸುವುದಿಲ್ಲ.

ಮುದುಕಿ: ನನ್ನ  ಮೊಮ್ಮಗಳು ಒಬ್ಬಳು ಹುಡುಗಿಯಿದ್ದಾಳೆ. ಅರಮನೆಯಲ್ಲಿ ಕೆಲಸ ಮಾಡಬೇಕು ಎಂದು ಅವಳಿಗೆ ಬಹಳ ಆಸೆ. ಅವಳು ಮುಖ ನೋಡಬಹುದೆ?

ಸಲೀಮ: (ಉತ್ಸಾಹದಿಂದ)ಖಂಡಿತವಾಗಿ. ಎಲ್ಲಿದ್ದಾಳೆ?

ಮುದುಕಿ: ಇಲ್ಲೇ ಹತ್ತಿರ ನನ್ನ ಗುಡಿಸಲಿದೆ. ಕರೆದುಕೊಂಡು ಬರುತ್ತೇನೆ. ನಿಮಗೆ ಬಾಯಾರಿಕೆಗೆ ಕುಡಿಯಲು ಏನಾದರೂ ಬೇಕೆ?

ಮುಬಾರಕ್: ನೀರು ಸಾಕು.

ಮುದುಕಿ: ಸಲಾಮಳ ಜೊತೆ ಕಳಿಸುತ್ತೇನೆ.

(ಸ್ವಲ್ಪ ಹೊತ್ತಿನಲ್ಲಿ ನೀರಿನ  ತಂಬಿಗೆ ಮತ್ತು ಲೋಟಗಳನ್ನು  ಹಿಡಿದುಕೊಂಡ ಹದಿನಾರರ ಚೆಲುವೆ  ಸಲಾಮ ಮತ್ತು  ಮುದುಕಿ ಬರುತ್ತಾರೆ. ಸಲಾಮ ತಲೆಯನ್ನು ಅವಕುಂಠನದಿಂದ ಮುಚ್ಚಿಕೊಂಡಿದ್ದಾಳೆ. ಹುಡುಗಿ ಲೋಟದಲ್ಲಿ ನೀರು ಸುರುವಿ ಕೊಡುತ್ತಾಳೆ. ಇಬ್ಬರೂ ಕುಡಿಯುತ್ತಾರೆ. ಸಲೀಮನ ಮೇಲೆ ಅವಳ ಅಪ್ರತಿಮ ಸೌಂದರ್ಯದ ಪ್ರಭಾವವುಂಟಾಗುತ್ತದೆ)

ಮುದುಕಿ: ಎಲ್ಲಿದೆ ನಿಮ್ಮ ಕನ್ನಡಿ? ಸಲಾಮಳ ಕೈಗೆ ಕೊಡಿ.

(ಸಲೀಮ ಕನ್ನಡಿಯನ್ನು ಅವಳ ಕೈಗೆ ಕೊಡುತ್ತಾನೆ. ಸಂಕೋಚದಿಂದ ಹುಡುಗಿ ತೆಗೆದುಕೊಂಡು ಅದನ್ನು ಮುಖದೆದುರು ಹಿಡಿಯುತ್ತಾಳೆ. )

ಸಲೀಮ: (ಉತ್ಸುಕತೆಯಿಂದ) ಮುಖ ಕಾಣಿಸುತ್ತಾ?

ಸಲಾಮ: ಕಾಣಿಸುತ್ತದೆ.

(ಸಲೀಮ ಮತ್ತು ಮುಬಾರಕ್ ನಂಬದವರಂತೆ) ನಿಜವಾಗಿಯೂ?

ಸಲಾಮ: ಹೌದು ನಿಜವಾಗಿಯೂ.

(ಸಲೀಮ  ಇಣುಕಿ ನೋಡಿ ಅವಳ ಮುಖವನ್ನು ಕಂಡು ಖಾತ್ರಿಪಡಿಸಿಕೊಳ್ಳುತ್ತಾನೆ)

ಸಲೀಮ: (ಜೋರಾಗಿ) ಹೌದು ನಿಜವಾಗಿಯೂ!

(ಸಲಾಮ ಕನ್ನಡಿ ಹಿಂದಕ್ಕೆ ಕೊಡುತ್ತಾಳೆ. ಸಲೀಮ ಮತ್ತು ಮುಬಾರಕ್ ಸಂತೋಷದಿಂದ ಕುಣಿಯುತ್ತಾರೆ)

ಸಲೀಮ: ಅಜ್ಜಿ , ದಯಮಾಡಿ ಇವಳನ್ನು ನಮ್ಮ ಜೊತೆ ಕಳಿಸಿಕೊಡಿ.

ಮುದುಕಿ: ಅರಸರ ತಾಯಿಗೆ ಬೇಕೆಂದರೆ ಖಂಡಿತ ಕಳಿಸಿಕೊಡುತ್ತೇನೆ. ಆದರೆ ಹಾಗೆ ಕಳಿಸಿಕೊಡುವುದು ಸರಿಯಲ್ಲ.

ಸಲೀಮ: ಮತ್ತೇನಾಗಬೇಕು?

ಮುದುಕಿ: ನೀನು ಸಲಾಮಳನ್ನು ಮದುವೆಯಾದರೆ ಕಳಿಸಿಕೊಡಬಹುದು.

(ಹುಡುಗಿ ನಾಚಿಕೆಯಿಂದ ಹೋಗಿಬಿಡುತ್ತಾಳೆ)

ಸಲೀಮ: ಈ ಷರತ್ತು ಯಾಕೆ?

ಮುದುಕಿ: ಮದುವೆ ಮಾಡಿಸದೆ ಬೇರೆ ಮನೆಗೆ ಹುಡುಗಿಯನ್ನು ಕಳಿಸಿಕೊಡುವುದು ನಮ್ಮ ಸಂಪ್ರದಾಯಕ್ಕೆ ವಿರುದ್ಧ.

(ಸಲೀಮ ಮತ್ತು ಮುಬಾರಕ್ ಇಬ್ಬರೂ ಗೊಂದಲದಲ್ಲಿ ಸಿಲುಕುತ್ತಾರೆ. ಸ್ವಲ್ಪ ಈಚೆಗೆ ಬಂದು)

ಸಲೀಮ: ಈಗೇನು ಮಾಡೋಣ ಮುಬಾರಕ್?

ಮುಬಾರಕ್: ಮಾಡೋದೇನು ಮದುವೆ ಆಗೋದು. ಇಂಥ ಗುಣದ ಹುಡುಗಿ ಲಕ್ಷಕ್ಕೊಬ್ಬರು ಕೂಡ ಇಲ್ಲ.  ಚಂದ ಕೂಡ ಇದ್ದಾಳೆ.

ಸಲೀಮ: ಅದೇನೋ ನಿಜ. ಆದರೆ ಅವಳನ್ನು ಅರಸನಿಗೆ ಕೊಟ್ಟು ಹೋಗಬೇಕಲ್ಲ?

ಮುಬಾರಕ್: ನಿಂಗೆ ನಿನ್ನ ತಂದೆಯ ವಿಗ್ರಹ ಬೇಕು ಮತ್ತು ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಬೇಕು ಎಂದಿದ್ದರೆ ಇರುವುದು ಇದೊಂದೇ ದಾರಿ.

ಸಲೀಮ: (ಸ್ವಲ್ಪ ಚಿಂತಿಸಿ, ಮುದುಕಿಯ ಬಳಿ ಹೋಗಿ) ಸರಿ. ಮದುವೆ ಆಗುತ್ತೇನೆ. ಆದರೆ ಕಾಯಲು ಸಾಧ್ಯವಿಲ್ಲ. ಇವತ್ತು ಸಾಯಂಕಾಲದೊಳಗೆ ಮದುವೆ ಆಗ್ಬೇಕು.

ಮುದುಕಿ: ಅದಕ್ಕೇನು? ಈಗಲೇ ಮಾಡುವ. ನಾನು ಈಗಲೇ ಗುರುಗಳನ್ನು ಕರೆದುಕೊಂಡು ಬರುತ್ತೇನೆ.

ಫೇಡ್ ಔಟ್

ದೃಶ್ಯ ಎಂಟು:

(ಅರಸ ಮತ್ತು ಪ್ರಧಾನಿ ನಜೀರ್‌ಸಾಹೆಬ್ ನಡುವೆ ಸರಸದ ಮಾತುಕತೆ ನಡೆಯುತ್ತಿದೆ. ಸಲಾಮಳ ಜೊತೆ ಸಲೀಮ ಮತ್ತು ಮುಬಾರಕರ ಪ್ರವೇಶ)

ಜಲೀಲ: ಸಿಕ್ಕಿದಳೆ ಹುಡುಗಿ?

ಮುಬಾರಕ್: ಸಿಕ್ಕಿದಳು. ಇವಳೇ. (ಹುಡುಗಿ ತಲೆ ಬಾಗಿಸಿಕೊಂಡು ನಿಂತಿದ್ದಾಳೆ.

ಅರಸ: ಇವಳಿಗೆ ಕನ್ನಡಿಯಲ್ಲಿ ಮುಖ ಕಾಣಿಸಿತಾ?

ಸಲೀಮ: (ಕನ್ನಡಿ ಹೊರತೆಗೆದು) ಹೌದು ಕಾಣಿಸಿತು.. (ಜಲೀಲನ ಕೈಗೆ ಕೊಡುತ್ತಾನೆ. ಜಲೀಲ ಅದನ್ನು ಸಲಾಮಳ ಕೈಯಲ್ಲಿಡುತ್ತಾನೆ. ಅವಳು ಮುಖ ನೋಡುವಾಗ, ಅವನೂ ಕನ್ನಡಿಯಲ್ಲಿ ಅವಳ ಮುಖ ನೋಡಿ, ಸಂತುಷ್ಟನಾಗಿ) ಬಹಳ ಸಂತೋಷ. (ಚಪ್ಪಾಳೆ ಬಡಿಯುತ್ತಾನೆ. ಒಬ್ಬಳು ಸೇವಕಿ ಬರುತ್ತಾಳೆ) ಇವಳನ್ನು ಅಮ್ಮನ ಬಳಿ ಕರೆದುಕೊಂಡು ಹೋಗು. (ಸಲೀಮ, ಪ್ರಧಾನಿ ಮತ್ತು ಮುಬಾರಕ್ ಕಡೆಗೆ ತಿರುಗಿ) ನೀವು ನಿಮ್ಮ ವಿಶ್ರಾಂತಿ ಗೃಹಕ್ಕೆ ತೆರಳಬಹುದು. ಯಾವಾಗ ಹೊರಡುತ್ತೀರಿ ಎಂದು ತಿಳಿಸಿದರೆ ಬೇಕಾದ ವ್ಯವಸ್ಥೆ ಮಾಡುತ್ತೇವೆ. ಸಲೀಮ: ನಾವು ನಾಳೆಯೆ ಹೊರಡುತ್ತೇವೆ.

ಮುಬಾರಕ್: ನಾನು ಇವತ್ತು ರಾತ್ರಿಯೆ ಹೊರಡುತ್ತೇನೆ.

ಜಲೀಲ: ಏನು ಅವಸರ ಮುಬಾರಕ್?

ಮುಬಾರಕ್: ತುರ್ತು ಕೆಲಸಗಳಿವೆ ಮಹಾಪ್ರಭು.

ಜಲೀಲ: ಮಹಾಪ್ರಭು ಅಂತಲ್ಲ ಕರೆಯಬೇಡ. ನಾನು ನಿನ್ನ ಮಿತ್ರ ಅಷ್ಟೆ. (ಆಲಿಂಗಿಸುತ್ತಾನೆ)ಸರಿ. ಈಗ ಎಲ್ಲರೂ ವಿಶ್ರಾಂತಿ ಪಡೆಯಿರಿ.

ಫೇಡ್ ಔಟ್

 

ದೃಶ್ಯ ಒಂಬತ್ತು: ಅರಮನೆ

(ಬೆಳಗ್ಗಿನ ಹೊತ್ತು. ಅರಸ ಜಲೀಲ ಕುರ್ಚಿಯಲ್ಲಿ ಕುಳಿತಿದ್ದಾನೆ. ಸಲೀಮನ ಪ್ರವೇಶ)

ಜಲೀಲ: ಬಾ ಸಲೀಮ. ಕುಳಿತುಕೊ.

ಸಲೀಮ. ನಾವು ಪ್ರಯಾಣವನ್ನು ಆರಂಭಿಸಬಹುದಷ್ಟೆ?

ಜಲೀಲ: ನೀನು ಏಳುವುದು ಬಹಳ ತಡವಾಯ್ತಲ್ಲ? ಪ್ರಧಾನಿ ನಜೀರ್‌ಸಾಹೆಬರ  ಪತ್ನಿಗೆ ಹುಷಾರಿಲ್ಲ ಎಂದು ಈ ದಿನ ಪ್ರಾತ:ಕಾಲದಲ್ಲಿ ಒಂದು ಪತ್ರ ಬಂತು. ಅವರು ಕೂಡಲೇ ಹೊರಟರು. ಸಲೀಮಮನನ್ನು ಎಬ್ಬಿಸುವುದು ಬೇಡ ನಿಧಾನವಾಗಿ ಬರಲಿ. ಆಯಾಸವಿದ್ದರೆ ಇನ್ನೂ ಒಂದೆರಡು ದಿನ ಆರಾಮ ಮಾಡಿಕೊಂಡು ಬರಲಿ ಎಂದರು. ಅವರನ್ನು  ಒಂದು ಪ್ರತ್ಯೆಕ ಕುದುರೆಗಾಡಿಯಲ್ಲಿ ಕಳಿಸಿದೆವು.  ವಿಗ್ರಹವನ್ನು   ಒಂದು  ದೊಡ್ಡ ಪೆಟ್ಟಿಗೆಯಲ್ಲಿ  ಅದೇ ಗಾಡಿಯಲ್ಲಿ  ಕಳಿಸಿದ್ದೇನೆ.  ರಕ್ಷಣೆಗೆ ಹನ್ನೆರಡು ಸೈನಿಕರು ಜೊತೆಯಲ್ಲಿ ಹೋಗಿದ್ದಾರೆ.

(ಸಲೀಮನಿಗೆ ಜಲೀಲನ ಮಾತಿನಲ್ಲಿ ಸಂದೇಹವುಂಟಾಗುತ್ತದೆ)

ಸಲೀಮ: ನಾನು ಕೂಡ ಈಗಲೇ ಹೊರಡುತ್ತೇನೆ.

ಜಲೀಲ: ಅವಸರ ಏನು? ಒಂದು ದಿನ ತಡೆದರೆ ನಾನು ಕೂಡ ನಿನ್ನ ಜೊತೆ ಬರಬಹುದು.

ಸಲೀಮ: (ಆಶ್ಚರ್ಯದಿಂದ) ನೀವು ನನ್ನ ಜೊತೆ ಬರುತ್ತೀರಾ?

ಜಲೀಲ: ಯಾಕೆ ಬರಬಾರದು? ನಾನು ನಿನ್ನ ರಾಜ್ಯವನ್ನು ನೋಡಿಯೆ ಇಲ್ಲ.

ಸಲೀಮ: ಖಂಡಿತ ಬನ್ನಿ.

ಜಲೀಲ: ಹಾಗಾದರೆ ನಾಳೆ ಹೊರಡೋಣ.

ಸಲೀಮ: (ಮನಸ್ಸಿಲ್ಲದ ಮನಸ್ಸಿನಿಂದ) ಆಗಲಿ. (ಸ್ವಲ್ಪ ತಡೆದು) ಆ ಹುಡುಗಿ ನಿಮ್ಮ ಅಮ್ಮನಿಗೆ ಇಷ್ಟವಾದಳೆ?

ಜಲೀಲ: ಇಷ್ಟ ಮಾತ್ರವಲ್ಲ. ಒಂದೇ ದಿನದಲ್ಲಿ ಸಲಾಮ ನಮ್ಮಮ್ಮನಿಗೆ ಸ್ವಂತ ಮಗಳ ಹಾಗೇ ಆಗಿಬಿಟ್ಟಿದ್ದಾಳೆ.  ನಿಂತಲ್ಲಿ ಸಲಾಮ, ಕೂತಲ್ಲಿ ಸಲಾಮ. ಅಂಥ ಒಬ್ಬಳು ಹುಡುಗಿಯನ್ನ ಹುಡುಕಿ ತಂದುದಕ್ಕೆ ನಿಮ್ಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. (ಸಲೀಮನ ಮುಖದಲ್ಲಿ ಸಂತೋಷವಿಲ್ಲ)

ಸಲೀಮ: ನಾನು ನಿಮ್ಮ ಅಮ್ಮನ ಭೇಟಿ ಮಾಡಬಹುದೆ?

ಜಲೀಲ: ಅಮ್ಮ ಏನೋ ವ್ರತ ಮಾಡ್ತಿದ್ದಾಳೆ. ಅದೆಂಥ ವ್ರತವೊ! ಏಳು ದಿನ ಗಂಡಸರ ಮುಖ ನೋಡ್ಬಾರದಂತೆ. ನಾನು ಕೂಡ ಅಮ್ಮನ ಮುಖ ನೋಡದೆ ಮೂರು ದಿನ ಆಯ್ತು. ಏನಾದರೂ ಮಾತಾಡಬೇಕಾದಾಗ ಪರದೆಯ ಹಿಂದಿನಿಂದ ಮಾತಾಡುತ್ತಾಳೆ ನೀನು ಇನ್ನೊಮ್ಮೆ ಬಂದಾಗ ಖಂಡಿತ ಭೇಟಿಯಾಗಬಹುದು.

(ಸಲೀಮ ಇನ್ನಷ್ಟು ಖಿನ್ನನಾಗುತ್ತಾನೆ)

ಫೇಡ್ ಔಟ್

 

ದೃಶ್ಯ ಹತ್ತು: ಸಲೀಮನ ಅರಮನೆಯ ಕೋಣೆ

(ಸಲೀಮ, ಪ್ರಧಾನಿ ನಜೀರ್ ಮತ್ತು ಅರಸ  ಜಲೀಲ ಒಟ್ಟಿಗೆ ಪ್ರವೇಶಿಸುತ್ತಾರೆ. ಕ್ಷಣದ ಬಳಿಕ ಸೇವಕನ ಪ್ರವೇಶ)

ಸಲೀಮ: ಬಾಗಿಲು ತೆರೆಯಲೆ ಪ್ರಧಾನಿಯವರೆ.

ನಜೀರ್: ಓಹೋ, ಧಾರಾಳವಾಗಿ.

ಸೇವಕ: ಯಾರೋ ಒಬ್ಬರು ಮಹಾಪ್ರಭುಗಳನ್ನು ಭೇಟಿಯಾಗಲು ಬಯಸುತ್ತಾರೆ.

ಸಲೀಮ: (ತುಸು ಅಸಹನೆಯಿಂದ) ಯಾರೆಂದು ನೋಡಿ ಪ್ರಧಾನಿಯವರೆ.

(ಪ್ರಧಾನಿ ಹೋಗಿ ಮುಬಾರಕ್ ಜೊತೆಯಲ್ಲಿ ಮರಳಿ ಬರುತ್ತಾನೆ)

ಜಲೀಲ: ಮುಬಾರಕ್! (ಆಲಿಂಗನ)

ಸಲೀಮ: ಮುಬಾರಕ್! ನೀವು! (ಆಲಿಂಗಿಸುತ್ತಾನೆ)

ಮುಬಾರಕ್: ನಾನು ಕೂಡ ರೊಸೆಟ್ಟಾ ರಾಜ್ಯವನ್ನು ನೋಡದೆ ಎಷ್ಟೋ ವರ್ಷಗಳಾದುವು. (ಸಲೀಮನೊಡನೆ) ನಿನ್ನ ತಂದೆಯವರೊಂದಿಗೆ ಕಳೆದ ಬಾಲ್ಯದ ದಿನಗಳು ನೆನಪಿಗೆ ಬರುತ್ತಿವೆ. (ಕಣ್ಣೀರು ಒರಸಿಕೊಳ್ಳುತ್ತಾನೆ)

ನಜೀರ್: (ಕ್ಷಣದ ಬಳಿಕ) ಸಲೀಮ ವಿಗ್ರಹವನ್ನು ನೋಡುವ ಕುತೂಹಲದಲ್ಲಿದ್ದಾನೆ.

ಜಲೀಲ: ಸ್ವಾಭಾವಿಕ. ನಾನು ಕಳಿಸಿದ್ದೇನೆಯೆ ಇಲ್ಲವೆ ಅನ್ನುವ ಸಂದೇಹ ಬೇರೆ ಇರಬಹುದು. (ಜೋರಾಗಿ ನಗುತ್ತಾನೆ)

ಸಲೀಮ: ಛೆ ಛೆ!

ಜಲೀಲ: ಇದ್ದರೂ ಸ್ವಾಭಾವಿಕ. ಯಾಕೆಂದರೆ ಅಂಥ ಅಮೂಲ್ಯವಾದ ವಸ್ತುವನ್ನು ಕೈಬಿಡಲು ಯಾರೂ ಸಿದ್ಧರಿರಲಿಕ್ಕಿಲ್ಲ. (ನಕ್ಕು) ಸರಿ. (ನಜೀರ್‌ನೊಡನೆ) ನಜೀರ್ ಸಾಹೆಬ್, ವಿಗ್ರಹವನ್ನು ಎಲ್ಲಿರಿಸಿದ್ದೀರಿ?

ನಜೀರ್: ಗುಪ್ತವಾದ ಕೋಣೆಯಲ್ಲಿ. ಅದರ ಪೀಠದ ಮೇಲೆ ನಿಲ್ಲಿಸಿದ್ದೇವೆ.

ಜಲೀಲ: ಗುಪ್ತವಾದ ಕೋಣೆ ಎಂದಾದರೆ ಮುಬಾರಕ್ ಮತ್ತು ನನಗೆ ಪ್ರವೇಶವಿಲ್ಲ.

ನಜೀರ್: ಛೆ ಛೆ! ನಮಗೆ ನಿಮಗಿಂತ ಆಪ್ತರು ಯಾರು? ನಿಮಗೆ ಇಲ್ಲಿ ಯಾವುದೂ ಗುಪ್ತವಲ್ಲ. ಅಲ್ಲವೆ ಸಲೀಮ?

ಸಲೀಮ: ನಿಜ ನಿಜ.

ನಜೀರ್: ಹಾಗಾದರೆ ಬಾಗಿಲು ತೆರೆ ಸಲೀಮ.

(ಸಲೀಮ ಗುಪ್ತವಾದ ಕೋಣೆಯ ಬಾಗಿಲು ತೆರೆಯುತ್ತಾನೆ. ಕೋಣೆಯಲ್ಲಿ ಮಂದವಾದ ಬಂಗಾರ  ಬಣ್ಣದ ಬೆಳಕು ಹರಡಿಕೊಳ್ಳುತ್ತದೆ. ಕೋಣೆಯ ನಡುವೆ ಹಿಂದುಗಡೆ ಪೀಠದ ಮೇಲೆ ನೃತ್ಯಭಂಗಿಯಲ್ಲಿ  ನಿಂತಿರುವ  ಆಭರಣಗಳಿಂದ ಅಲಂಕೃತವಾದ ಸುಂದರವಾದ ಸ್ತ್ರೀ ಮೂರ್ತಿ.   ಎಲ್ಲರೂ ಅದರ ಸೌಂದರ್ಯವನ್ನು  ಕಂಡು ಬೆರಗಾಗಿ ನಿಲ್ಲುತ್ತಾರೆ.

ಜಲೀಲ: (ಸಲೀಮನ ಭುಜ ತಟ್ಟಿ ಮೆತ್ತಗಿನ ದನಿಯಲ್ಲಿ) ತುಂಬಾ ಸುಂದರವಾಗಿದೆ ಅಲ್ಲವೆ?

ಸಲೀಮ: ಹೌದು ಬಹಳ ಸುಂದರವಾಗಿದೆ.

ಜಲೀಲ: (ಕಣ್ಣೀರು ಮಿಡಿಯುತ್ತಾ) ಇಷ್ಟು ಕಾಲ ನನ್ನ ಬಳಿ ಇತ್ತು. ಇದು ಸಾಧಾರಣ ವಿಗ್ರಹ ಅಲ್ಲ ಸಲೀಮ. ಒಂದು ಅಪೂರ್ವವಾದ ವಿಗ್ರಹ. ಇದು ಒಂದು ದಿನ ನಿನಗೆ ಸೇರಬೇಕಾದ್ದು ಅಂತ ಜೋಪಾನವಾಗಿ ಇಟ್ಟಿದ್ದೆ. ನೀನು ಕೂಡ ಅಷ್ಟೇ ಜೋಪಾನವಾಗಿಟ್ಟುಕೊ.(ಕಣ್ಣು ಒರಸಿಕೊಳ್ಳುತ್ತಾನೆ)

ಸಲೀಮ: ನಿಮ್ಮ ಆಶೀರ್ವಾದ. ನಿಮ್ಮ ಅಪೇಕ್ಷೆಯಂತೆ ನಡೆದುಕೊಳ್ಳುತ್ತೇನೆ.

ಮುಬಾರಕ್: ಸಲೀಮನ ತಂದೆಯ ಆಸೆಯನ್ನು ಪೂರೈಸಿದ ಹಾಗೆ ಆಯಿತು. ನಮಗೆ ತುಂಬಾ ಸಂತೋಷ ಆಗಿದೆ. ಕಣ್ಣೊರಸಿಕೊಳ್ಳುತ್ತಾನೆ.

ನಜೀರ್: (ಸಲೀಮನೊಡನೆ) ಮೂರ್ತಿಯ ಬಲಗೈ ಮುಷ್ಟಿಯೊಳಗೆ ಒಂದು ಪ್ರಕಾಶಮಾನವಾದ ವಜ್ರವಿದೆ. ನೋಡು.

(ಸಲೀಮ ಹೋಗಿ ಮೂರ್ತಿಯ ಕೈ ಮುಟ್ಟಿದೊಡನೆ, ಅದು ಜೀವ ತಳೆದು ಪೀಠದಿಂದ ಕೆಳಗಿಳಿಯುತ್ತದೆ)

ಸಲೀಮ:  ಸಲಾಮ!

(ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ)

ಜಲೀಲ: ಇದೇ ನಿನ್ನ ತಂದೆ ಹೇಳಿದ ಒಂಬತ್ತನೆಯ ವಿಗ್ರಹ.

ನಜೀರ್: ಉಳಿದ ಎಂಟು ಚಿನ್ನದ ವಿಗ್ರಹಗಳಿಗಿಂತ  ಹೆಚ್ಚು  ಅಮೂಲ್ಯವಾದ  ವಿಗ್ರಹ.

(ಪುನ: ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ)

ಫೇಡ್ ಔಟ್