ಪಾತ್ರಗಳು:
ಜಾರಪ್ಪ  , ಈರಮ್ಮ್ಮ (ಜಾರಪ್ಪನ ಹೆಂಡತಿ)
ನರಿ, ಹಲವು ರೈತರು

 

ದೃಶ್ಯ ಒಂದು: ಜಾರಪ್ಪನ ಮನೆ, ಮುಂಜಾವದ ಹೊತ್ತು

(ಜಾರಪ್ಪ ಮತ್ತು ಜಾರಪ್ಪನ ಹೆಂಡತಿ ಈರಮ್ಮ. ಜಾರಪ್ಪ ಮುಸುಕು ಹಾಕಿ ಆರಾಮವಾಗಿ ಮಲಗಿಕೊಂಡಿದ್ದಾನೆ. ಈರಮ್ಮ ಮನೆಯ ಕೆಲಸದಲ್ಲಿ ಬಹಳ ವ್ಯಸ್ತಳಾಗಿದ್ದಾಳೆ. ಈರಮ್ಮ ಗಯಾಳಿಯಲ್ಲ. ಜಾರಪ್ಪನ ಸೋಮಾರಿತನದ ಕಾರಣದಿಂದ ರಂಭದಲ್ಲಿ ರೇಗಿ ಮಾತಾಡುತ್ತಾಳೆ)

ಈರಮ್ಮ: (ನೆಲ ಗುಡಿಸುತ್ತಾ) ಕೆಲ್ಸ!  ಕೆಲ್ಸ! ಕೆಲ್ಸ!  ಈ ಕೆಲ್ಸ ಮುಗೀತು   ಅಂತಿಲ್ಲ . ದಿನಾ ಕೆಲ್ಸ! ಮತ್ತೆ ಅದೇ ಕೆಲ್ಸ! (ಗುಡಿಸುವುದನ್ನು ನಿಲ್ಲಿಸಿ) ಅಲ್ಲಾ, ನೀ ಹಿಂಗ ಸೋಮಾರಿಯಾಗಿ ಮನೆಯಲ್ಲಿ ಮಲ್ಕೊಂಡ್ರ ಹ್ಯಾಂಗ? ಎಲ್ರೂ ಹೊಲ್ದಾಗ ಕೆಲ್ಸ ಮಾಡ್ಲಿಕ್ಕ ಶುರು ಮಾಡ್ಯಾರ. ನಮ್ಮ ಹೊಲ್ದಾಗ ಈ ಸಾರಿ ಶೇಂಗಾ ಬೆಳೆಯೂದು ಬೇಡ್ವೇನು?

ಜಾರಪ್ಪ: (ಮುಸುಕಿನೊಳಗಿಂದಲೇ) ಇನ್ನ್ನಾ  ಒಂದು ಹನಿ ಮಳೀನೂ ಬಿದ್ದಿಲ್ಲ.

ಈರಮ್ಮ: ನೀ ಹೀಂಗ ಮಲಕ್ಕೊಂಡಿದ್ರ ಮಳಿ ಬರೋದೇ ಇಲ್ಲ ನೋಡು!

(ಹೊರಗಿನಿಂದ ಎತ್ತುಗಳನ್ನು ಹೊಡೆದುಕೊಂಡು ಹೋಗುವ ಶಬ್ದ)

ಧ್ವನಿ: ಜಾರಪ್ಪ, ಏ ಜಾರಪ್ಪ. ಬಾರ‍್ಲಾ ಹೊಲಕ್ಕ!

ಈರಮ್ಮ: ಕೇಳಿಸ್ತಾ? ಎತ್ತು ಹೊಡ್ಕೊಂಡು ಚೆನ್ನ ಹೊಲಕ್ಕೆ ಹೊಂಟ್ಯಾನ.

ಧ್ವನಿ: ನಾವೆಲ್ಲ ಹೊಲಕ್ಕೆ ಹೊಂಟೀವಿ.ಏ ಜಾರಪ್ಪ, ಬಾರ‍್ಲ.

ಈರಮ್ಮ:(ಹೊರಗಡೆ ಹೋಗಿ)ಅಂವ ಈಗ ಬತ್ತಾನೆ. ನೀವು ಹೋಗ್ರಿ. (ವಾಪಾಸು ಬಂದು) ಏಳು ಆಗ್ಲೇ ಚೆನ್ನಾಗಿ ಬೆಳಗಾಗ್ಯೇದ.

ಜಾರಪ್ಪ: ಅಲ್ಲಾ ಎದ್ದು ಏನ್ಮಾಡೂಂತಿ? ಅವ್ರಿಗೆ ಬುದ್ಧಿ ಇಲ್ಲ. ಹೊಲ ಒಣ್ಗಿ ರಸ್ತೆ ಹಂಗಾಗ್ಯದ. ಅದ್ರಾಗ ಶೇಂಗಾ ಬೀಜ ಹಾಕಿದ್ರ ಇರುವೆ ತಿಂತದ. ಮಳಿ ಬರ್ಲಿ. ಆ ಮೇಲೆ ನಮ್ಮ ಹೊಲ್ದಾಗ ಶೇಂಗಾಬೀಜ ಹಾಕೋಣು.

ಈರಮ್ಮ: ಮಳಿ  ಇವತ್ತು  ಅಥ್ವಾ ನಾಳೆ ಬತ್ತೈತಿ.

ಜಾರಪ್ಪ: (ಹೆಂಡತಿ ಮಾತನ್ನು ಅಣಕಿಸಿ) ಮಳಿ  ಇವತ್ತು  ಅಥ್ವಾ ನಾಳೆ ಬತ್ತೈತಿ. ನಿಂಗ ಇಂದ್ರನಿಂದ ಫೋನ ಬಂದಿತ್ತೇನು?

ಈರಮ್ಮ: ಇಂದ್ರನಿಂದ ಫೋನ ಯಾಕ? ಆಕಾಶ ನೋಡಿದ್ರೆ ತಿಳೀದಿಲ್ಲೇನು? (ಗುಡುಗಿನ ಶಬ್ದ) ನೋಡು ಗುಡುಗು ಶುರುವಾತು.

ಜಾರಪ್ಪ: ಗುಡುಗು ಬಂದ್ರೆ ಸಾಕಾ ಶೇಂಗಾ ಬೀಜ ಮೊಳ್ಕೆ ಒಡ್ಯೋಕೆ?

(ತಟ ಪಟ ಮಳೆ ಹನಿ ಶಬ್ದ)

ಈರಮ್ಮ:ಹಾಂ. ಮಳೀನೂ ಶುರು!

ಜಾರಪ್ಪ: ನಾಲ್ಕು ಹನಿ ಬಿದ್ರ ಅದ್ಕೆ ಮಳಿ ಅಂತಾರಾ? ಮಳಿ ಚೆನ್ನಾಗಿ ಹೊಯೆಕು. ನೆಲ ಒದ್ದೆ ಆಗ್ಬೇಕು.

ಈರಮ್ಮ:ಆಗ್ಲಿ. ಚೆನ್ನಾಗಿ ಒದ್ದೆ ಆಗ್ಲಿ! ಅಲ್ಲಿ ತನ್ಕ ನೀ ಮುಸ್ಕ ಹಾಕ್ಕೊಂಡು ಮಲ್ಕ! (ಪೊರಕೆ ಕೆಳಹಾಕಿ ಹೋಗುತ್ತಾಳೆ. ಮಳೆಯ ಶಬ್ದ  ಜೋರಾಗುತ್ತದೆ)

ಜಾರಪ್ಪ: (ಮುಸುಕಿನೊಳಗಿಂದಲೇ) ಒಂದ್ಲೋಟ ಬಿಸಿ ಬಿಸಿ ಕಾಪಿs ಮಾಡ್ಕೊಡು. ಏಳ್ತೀನಿ.

ಈರಮ್ಮ: (ಒಳಗಿಂದಲೇ) ಕಾಪಿs ಕುದೀತೈತಿ. ಕುಡಿ ಗಂಟ್ಲು ಸುಟ್ಕೊ. (ಹೆಂಡತಿ ಕಾಪಿs ಲೋಟ ಕೈಯಲ್ಲಿ ಹಿಡದುಕೊಂಡು ಬಂದು ಅವನ ಮುಸುಕನ್ನು ಈಚೆಗೆಳೆದು ತೆಗೆಯುತ್ತಾಳೆ. ಜಾರಪ್ಪ ತಟ್ಟನೆದ್ದು ಕುಳಿತುಕೊಳ್ಳುತ್ತಾನೆ.  ಹೆಂಡತಿ ಕಾಪಿs  ಲೋಟ ಅವನ  ಕೈಯಲ್ಲಿ ಡುತ್ತಾಳೆ)

ಜಾರಪ್ಪ: (ಕಾಫೀಯನ್ನೊಮ್ಮೆ ಹೀರಿ) ನಂಗೊಂದು ಯೊಚ್ನೆ ಬಂದದ.

ಈರಮ್ಮ:ಏನು?

ಜಾರಪ್ಪ: ಈ ಸಾರಿ ಹಸಿ ಶೇಂಗಾ ಬೀಜ ಬಿತ್ತೋದು ಬ್ಯಾಡ.

ಈರಮ್ಮ: ಮತ್ತ?

ಜಾರಪ್ಪ: ಶೇಂಗಾ ಬೇಯಿಸಿ ಬಿತ್ತೋಣ. ಬರೋ ಬೆಳೆ ಬೆಂದೇ ಇರುತ್ತೆ. ಅಗ್ದು ತಂದು ತಿನ್ನೋದು. ಬೇಯಿಸೋ ಕೆಲ್ಸ ಇಲ್ಲ. ಹೇಗೂ ಉರುವಲಿಗೆ ತತ್ವಾರ ಆಗ್ಯೇದ.

ಈರಮ್ಮ: (ಆಶ್ಚರ್ಯದಿಂದ)ಬೇಯಿಸಿದ ಶೇಂಗಾ ಬೀಜ ಹುಟ್ಟತ್ತೇನು?

ಜಾರಪ್ಪ: ಹೂಂ. ಚೆನ್ನಾಗಿ ಹುಟ್ಟತ್ತೆ. ಹಸಿ ಬೀಜದ ಗಿಡಕ್ಕಿಂತ ಬೆಂದ ಬೀಜದ ಭಾಳ ಚಲೋ   ಬರತ್ತೆ . ಬೆಳೇನೂ ಡಬಲ್!

ಈರಮ್ಮ: ಮತ್ಯಾಕ ಯಾರೂ ಬೇಯಿಸಿದ ಶೇಂಗಾ ಬೆಳೆಯಲ್ಲ?

ಜಾರಪ್ಪ:  ಇನ್ನಾ ಯಾರಿಗೂಗೊತ್ತಿಲ್ಲ. ಗೊತ್ತಾದ್ರೆ ಬಿಡ್ತಾರಾ? ನೀನು ಯಾರ ಹತ್ರಾನೂ ಬಾಯ್ಬಿಟ್ಟಿ ಮತ್ತ?

ಈರಮ್ಮ: ನೀನ ಬೆಂದ ಬೀಜ ಹಾಕೋದು ಬೇರೆಯವ್ರು ಕಾಣೋಲ್ವೇನು?

ಜಾರಪ್ಪ: ರಾತ್ರಿ ಹೊತ್ನಾಗ ಬಿತ್ತಿ ಬತ್ತೀನಿ. ಇವತ್ತೇ ಸಂಜೀಮುಂದ ಒಂದು ಚೀಲ ಶೇಂಗಾ ಬೀಜ ಬೇಯಿಸಿಕೊಡು.

ಈರಮ್ಮ: ಹೊಲ ಉಳೋದು ಬೇಕಿಲ್ಲೇನು?

ಜಾರಪ್ಪ: ಏನೂ ಬೇಡ. ಕತ್ತಲ್ದಾಗ ಹೊಲ ಉತ್ರ ಎಲ್ರಿಗೂ ಏನಾರೂ ಸಂಶಯ ಬರ‍್ತದ. ಹೊಲ್ದಾಗ  ಸಾಲಾಗಿ ತೂತು ಕೊರ‍್ದು  ಒಂದೊಂದು ತೂತಿನಲ್ಲಿ ಒಂದೊಂದು ಬೀಜ ಹಾಕಿ ತೂತು ಮುಚ್ಚಿಬಿಡ್ತೀನಿ.

ಫೇಡ್ ಔಟ್

 

ದೃಶ್ಯ ಎರಡು: ಜಾರಪ್ಪನ ಮನೆ.

(ಜಾರಪ್ಪ ಹೆಗಲ ಮೇಲೆ ಶೇಂಗಾ ಚೀಲ ಇಟ್ಟುಕೊಂಡು ಹೊರಟಿದ್ದಾನೆ. ಅವನದು ಸ್ಪೆ ಡರ್ಮಾನ್ ಉಡುಪು. ಕೈಯಲ್ಲಿ ಒಂದು ಕೊನೆ  ಚೂಪಾಗಿರುವ ಸರಳು ಇದೆ)

ಈರಮ್ಮ: (ನಕ್ಕು) ನೀನೀಗ ಥೇಟ್ ಒಂದು ಜೇಡದ ಹಾಗೆ ಕಾಣಿಸ್ತಿ!

ಜಾರಪ್ಪ: ನಿಜ್ವಾ?

ಈರಮ್ಮ: ನಿಜ.ಜೇಡ ಭೂತ! (ಜೋರಾಗಿ ನಗುತ್ತಾಳೆ)

ಜಾರಪ್ಪ: ಹೆಂಗಾದರಿರ್ಲಿ.  ಯಾರೂ ಗುರುತು ಹಿಡಿದು ಮಾತಾಡೋ ಸಂಭವಾನೇ ಇಲ್ಲ ನೋಡು! ಜೇಡ ಭೂತ ಅಂದ್ಕೊಂಡು ಓಡಿಹೋದ್ರೆ ಸಾಕು.

ಈರಮ್ಮ: ಈ ಸರಳು  ಸಾಕಾಗತ್ತೇನು? ಗುದ್ಲಿ  ಪಿಕಾಸಿ ಏನೂ ಬೇಡ್ವ?

ಜಾರಪ್ಪ: ಬೇಡ. ಮಳೆ ಬಂದು ನೆಲ ಮಣ್ಣು ಮೆತ್ತಗಾಗಿದ್ಯಲ್ಲ? (ಸರಳು ಮೊನೆ ಪರಿಶೀಲಿಸಿ) ಇದು ಬರಾಬರಿ ಆತು.

ಈರಮ್ಮ: ಇವತ್ತೇ ಎಲ್ರೂ ಶೇಂಗಾ ಬೀಜ ಹಾಕಿಬಿಟ್ಟಾರಂತ. ನೀವೂನು ಹಾಕಲ್ಲೇನು ಅಂತ ಕೇಳಾಕ ಹತ್ಯಾರಾ?

ಜಾರಪ್ಪ: ಅವರಿಗೇನ? ನಮ್ಮ ಬಳಿ ಎತ್ತು ಇಲ್ಲ. ಉಳಬೇಕಂದ್ರ  ಬಾಡ್ಗಿ ಎತ್ತು  ತರ‍್ಬೇಕಾಗ್ತದ ಒಂದಷ್ಟು ಬಾಡ್ಗಿ  ಬ್ಯಾರೆ ಕೇಳ್ತಾರ. ಬೇಕಂದಾಗ ಸಿಗೂದು ಕಷ್ಟ. ಅದೆಲ್ಲ ರಗಳೆ ಬ್ಯಾಡಾಂತ ನಾನು ಈ ಯೊಚ್ನೆ ಮಾಡೀನಿ. ಹೊಲ ಉಳೋದು ಬ್ಯಾಡ, ಗೊಬ್ರಹಾಕೋದು ಬ್ಯಾಡ. ಶೇಂಗಾ ಬೇಯೊದು ಕೂಡ ಬ್ಯಾಡ.

ಈರಮ್ಮ: ನಾ ಬರ‍್ಲೇನು ನಿನ್ ಜತಿ?

ಜಾರಪ್ಪ: ಬೇಡ. ಹೊಲ ಏನು ಹತ್ತಿರ ಐತಾ? ಭರ್ತಿ ಮೂರು ಮೈಲಿ ಐತೆ. ನಿಂಗೆ ಗೊತ್ತಿದ್ಯಲ್ಲ? ಇಷ್ಟು ಬೀಜ ಹಾಕಿ ಮುಗಿಸೋವಷ್ಟರಲ್ಲಿ  ನಡು ರಾತ್ರಿ ಆಗಿರ‍್ತದ. ನೀನ್ಯಾಕ ಸುಮ್ಕೆ ಮೂರು ಮೂರು ಆರು ಮೈಲಿ ನಡೀತಿ? ನೀನು ಮಲ್ಕ. ನಾನು ಲಗೂ ಬಂದ್ಬಿಡ್ತೀನಿ.

ಈರಮ್ಮ: ಇಷ್ಟು ಬೀಜ ಇಡೀ ಹೊಲಕ್ಕೆ ಸಾಕಾಗ್ತದೇನ?

ಜಾರಪ್ಪ: ಹೂಂ. ಸಾಕಾಗ್ತದ. ಒಂದು ತೂತಿನಲ್ಲಿ ಒಂದೇ ಬೀಜ. ಮಂದಿ ಬುದ್ಧಿ ಇಲ್ದೆ ಒಂದಷ್ಟು ಬೀಜಾನ ಯದ್ವಾತದ್ವಾ ಎಸ್ದು ನಷ್ಟ ಮಾಡ್ತಾರ. ಒಂದಷ್ಟು  ಬೀಜ ಮಣ್ಣಿನ್ಮೇಲೇನೇ ಬಿದ್ದು ಹಕ್ಕಿಗಳ ಹೊಟ್ಟೆ ಸೇರ‍್ತದ. ತೂತು ಕೊರ‍್ದು ಹಾಕಿದ್ರ, ಬೀಜ ಹಾಕಿದ್ದು ಗೊತ್ತಾಗೋದು ಗಿಡ ಬಂದ ಮೇಲೇನೆ.

ಫೇಡ್ ಔಟ್

 

ದೃಶ್ಯ ಮೂರು: ಹೊಲ

(ರಾತ್ರಿಯ ಹೊತ್ತು. ಜಾರಪ್ಪ ಕೆಳಗೆ ಕುಳಿತು ಚೀಲ ಬಿಚ್ಚಿ  ಶೇಂಗಾ ಬೀಜವನ್ನು ಒಂದೊಂದೇ ತಿಂದು ನೆಲದಲ್ಲಿ ತೂತು ಕೊರೆದು ಅದರಲ್ಲಿ ಸಿಪ್ಪೆಯನ್ನು ಹಾಕುತ್ತಿದ್ದಾನೆ. ಒಂದು ನರಿ ಹತ್ತಿರ ಬರುತ್ತದೆ)

ನರಿ: ನೀನು ಜಾರಪ್ಪ ಅಲ್ವ?

ಜಾರಪ್ಪ: ಹೌದು. ಗೊತ್ತಿದ್ರೂ ಯಾಕೆ ಕೇಳ್ತೀಯ?  ನರಿ: ಅದು ಮಾತಾಡ್ಸೋ ರೀತಿ ಅಷ್ಟೆ. (ನಕ್ಕು) ಏನು ಮಾಡ್ತಾ ಇರೋದು ನೀನು?

ಜಾರಪ್ಪ: ಕಾಣಿಸ್ತಾ ಇಲ್ವ ನರಿಯಪ್ಪಾ?

ನರಿ: ಕಾಣಿಸ್ತಿದೆ. ಶೇಂಗಾ ತಿಂದು ಅದರ ಸಿಪ್ಪೆಯನ್ನ ಮಣ್ಣಿನ ಅಡಿಯಲ್ಲಿ ಹಾಕ್ತಾ ಇದೀಯ.

ಜಾರಪ್ಪ: ಹೂಂ. ಅದೇ ನಾನು ಮಾಡ್ತಿರೋದು. ಕತ್ಲಾಗ ಕೆಲ್ಸ ಮಾಡೋ ನಿಂಗೆ ಚೆನ್ನಾಗಿ ಕಾಣಿಸತ್ತಲ್ಲಾ ? ಆದ್ರೂ  ಕೇಳ್ತಿದೀಯಲ್ಲ ಏನು ಮಾಡ್ತಿರೋದು ಅಂತ?

ನರಿ: ಅದ್ನಿಜ. ಆದ್ರೆ ನೀ ಯಾಕ ರಾತ್ರಿ ಹೊತ್ತು ಶೇಂಗಾ ಬೀಜ ಹಾಕ್ತಿದೀಯ?

ಜಾರಪ್ಪ: ಹಗಲು ಬಿತ್ತೋ ಬದ್ಲು ರಾತ್ರಿ ಬಿತ್ತಿದ್ರೆ ಫಸಲು ಡಬಲ್.

ನರಿ: ಹಾಗಾ? ಆದ್ರ  ನೀನು ಬೀಜ ಬಿತ್ತೋ ಬದ್ಲು ಸಿಪ್ಪೆ ಬಿತ್ತುತ್ತಾ ಇದೀಯಲ್ಲಾ?

ಜಾರಪ್ಪ: (ನಕ್ಕು) ಮಂದಿ ಏನ್ಮಾಡ್ತಾರ?

ನರಿ: ಬೀಜ ಬಿತ್ತಾರ.

ಜಾರಪ್ಪ: ಬರೀ ಬೀಜ ಅಲ್ಲ. ಬೀಜ ಮತ್ತು ಸಿಪ್ಪೆ ಎರಡನ್ನೂ ಬಿತ್ತಾರ. ಅಲ್ವ?

ನರಿ: ಅಂದ್ರ?

ಜಾರಪ್ಪ: ಅಂದ್ರಾ, ಬೀಜದ್ಜೊತೆಗೇ ಸಿಪ್ಪೇನೂ ಬಿತ್ತಾರ.

ನರಿ: ನಿಜ.

ಜಾರಪ್ಪ: (ನಕ್ಕು) ಸಿಪ್ಪೆ ಮಾತ್ರ ಬಿತ್ತಿದ್ರೂನೂ ಗಿಡ ಬರುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕ ಬೀಜ ಮತ್ತು ಸಿಪ್ಪೆ ಎರಡನ್ನೂ ಬಿತ್ತಾರ.

ನರಿ: ಹಂಗಾ? ಒಂದ್ ವ್ಯಾಳೆ  ಸಿಪ್ಪೆಯಿಂದ ಗಿಡ ಬರ‍್ದೇ ಇದ್ರಾ?

ಜಾರಪ್ಪ:  ಕೆಲವ್ಸಲ ಬೀಜದಿಂದ್ಲೂ  ಗಿಡ ಬರಲ್ಲ್ಲ. ಅಲ್ವ ನರಿಯಪ್ಪ?

ನರಿ: ಅದೂ ನಿಜಾನ್ನು.

ಜಾರಪ್ಪ: ನಿಜ ನಿಜ. ಇವತ್ತು ನಿನ್ನ ಹೊಟ್ಟೆ ಬರೋಬರಿ ತುಂಬ್ಕೊಂಡಿರ ಹಾಗಿದ್ಯಲ್ಲ? ಒಂದ್ಸೇರು ಬೀಜನಾದ್ರೂ ಹೆಕ್ಕಿ ತಿಂದಿದ್ದೀಯ! ಇನ್ನ ಒಂದಷ್ಟು ಹಕ್ಕಿಪಿಕ್ಕಿ ಇರುವೆ ಇಲಿ ಮೊಲ ತಿಂದಿರ‍್ತವ. ಹಾಕಿದ ಎಲ್ಲಾ ಬೀಜಗಳೂ ಹುಟ್ಟೋದಿದ್ಯಾ?

ನರಿ: ರೈತ್ರು ಅದೆಲ್ಲ ಲೆಕ್ಕ ಹಾಕಿ ಹೆಚ್ಚು ಬೀಜಗಳನ್ನ ಹಾಕ್ತಾರ.

ಜಾರಪ್ಪ: ಅದ್ಕೇ ನಾನು ಹೊಸ ಲೆಕ್ಕ ಹಾಕ್ಕೊಂಡೀನಿ. ಯಾರಿಗೂ ಒಂದು ಬೀಜಾನೂ ಸಿಕ್ಕಲ್ಲ. ನಡಿ ನಡಿ.

ನರಿ: ಆದ್ರೆ, ಅದೇನು ಶೇಂಗಾ ಬೀಜ ಒಂಥರಾ ವಾಸ್ನೆ?

ಜಾರಪ್ಪ: ಯಾಕಂದ್ರೆ, ಅದು ಬೇಯಿಸಿದ ಬೀಜ. (ಜೋರಾಗಿ ನಗುತ್ತಾನೆ)

ನರಿ: ನಂಗೊಂದು ಬೀಜ ಕೊಡು. ರುಚಿ ನೋಡ್ತೀನಿ.

ಜಾರಪ್ಪ: ಏನು? ರುಚಿ ನೋಡ್ತೀಯ? ಬಾ, ಇದು ಅದ್ಕಿಂತ ರುಚಿ ಇದೆ. (ಸರಳು ಎತ್ತುತ್ತಾನೆ. ನರಿ ಓಡಿ ಹೋಗುತ್ತದೆ)

ಫೇಡ್ ಔಟ್

 

ದೃಶ್ಯ ನಾಲ್ಕು: ಜಾರಪ್ಪನ ಮನೆ

(ಬೆಳಿಗ್ಗಿನ ಹೊತ್ತು. ಜಾರಪ್ಪ  ಮುಸುಕು ಹಾಕಿ ಮಲಗಿದ್ದಾನೆ. ಎಂದಿನ ಕೆಲಸದಲ್ಲಿ ವ್ಯಸ್ತಳಾಗಿರುವ ಈರಮ್ಮ ಹಾಸಿಗೆಯ ಬಳಿ ಬಂದು ಮಾತಾಡುತ್ತಾಳೆ)

ಈರಮ್ಮ: ಎಲ್ರೂ ಶೇಂಗಾ ಕೀಳ್ಳಿಕ್ಕ ಹತ್ಯಾರ. ನೀ ಹೋಗಲ್ವ?

ಜಾರಪ್ಪ; ಹೋಗತೀನಿ. ಸಂಜೀಮುಂದ.

ಈರಮ್ಮ: ಅದ್ಯಾಕ ಸಂಜೀಮುಂದ?

ಜಾರಪ್ಪ: ಬಿಸಿಲು ಅಂದ್ರ ನಂಗಾಗಲ್ಲ. ತಲಿಶೂಲಿ ಬರ‍್ತದ. ರಾತ್ರಿ ಹವಾ ತಣ್ಣಗಿರ‍್ತದ. ತಣ್ಣಗಿನ ಹವಾದಲ್ಲಿ ಕೆಲಸ ಮಾಡಕ್ಕ ಖುಷಿಯಾಗ್ತದ. ಆಯಾಸಾನೇ ಆಗಲ್ಲ.

ಈರಮ್ಮ: ನಾನೂ ಬರ‍್ಲಾ ನಿನ್ಜತಿ?

ಜಾರಪ್ಪ: ಬೇಡ. ನೀ ಮನ್ಯಾಗ  ಇರು.

ಫೇಡ್ ಔಟ್

 

ದೃಶ್ಯ ಐದು: ಜಾರಪ್ಪನ ಮನೆ

(ಅರೆಗತ್ತಲೆ.ಜಾರಪ್ಪ ಹೆಗಲ ಮೇಲೆ ಶೇಂಗಾ ತುಂಬಿದ  ಚೀಲ ಹೊತ್ತುಕೊಂಡು ಬರುತ್ತಾನೆ. ಅವನು ಜೇಡನಂತೆ ಕಾಣುವ ಉಡುಪಿನಲ್ಲಿದ್ದಾನೆ. ಈರಮ್ಮ ಎದುರುಗೊಳ್ಳುತ್ತಾಳೆ)

ಈರಮ್ಮ: ತುಂಬಾ ವಜನ ಐತೇನು?

ಜಾರಪ್ಪ : (ಚೀಲ ಕೆಳಗಿಡುತ್ತಾ) ಹೂಂ. ಐವತ್ತು ಕೇಜಿ ಇರ‍್ಬಹುದು.

ಈರಮ್ಮ: ಹಂಗಾರೆ ಒಳ್ಳೆ ಬೆಳೆ!

ಜಾರಪ್ಪ: ಹೂಂ ಒಳ್ಳೇ ಬೆಳೇನೆ.

ಈರಮ್ಮ: ಇನ್ನು ಎಷ್ಟಿದೆ?

ಜಾರಪ್ಪ: ಇನ್ನೂ ಎರಡು ಮೂರು ದಪಾ ಇಷ್ಟೇ ಸಿಗ್ಬಹುದು.

ಈರಮ್ಮ:  ನಿಜ್ವಾ? ಹಂಗಾರೆ ತುಂಬಾ ಒಳ್ಳೇ ಬೆಳೆ ಈ ವರ್ಷ!

ಜಾರಪ್ಪ: ಹೂಂ. ಒಳ್ಳೇ ಬೆಳೆ.

ಈರಮ್ಮ: ಮುಂದಿನ್ಸಾರೀನೂ ಬೇಯಿಸಿದ ಬೀಜಾನೇ ಹಾಕೋಣ ಅಲ್ವ?

ಜಾರಪ್ಪ: ಹೌದೌದು ಬೇಯಿಸಿದ ಬೀಜಾನೇ ಹಾಕೋಣ.

ಈರಮ್ಮ: ಅಂದಂಗೆ, ಈ ಬೀಜ ಬೆಂದಿರತ್ತಾ?

ಜಾರಪ್ಪ: ಇಲ್ಲ. ಬೇಯಾಕೆ ಇನ್ನೂ ಒಂದು ವಾರ ಬೇಕಾಗತ್ತೆ. ಬೇಯಾಕೆ ಬಿಟ್ರ ಕಾಗೆ ನರಿ ತಿಂದು ಮುಗ್ಸಿಬಿಡ್ತವ. ಮೂರ‍್ನ್ನಾಕು ದಿವ್ಸದೊಳ್ಗ ಎಲ್ಲಾ ಕಿತ್ತು ಬಿಡ್ಬೇಕು. ಈಗ ಇದನ್ನ ಒಳಗ ಇಡೋಣ. (ಇಬ್ಬರೂ ಸೇರಿ ಚೀಲವನ್ನು ಒಳಗಡೆ ಎಳೆದುಕೊಂಡು ಹೋಗುತ್ತಾರೆ)

ಫೇಡ್ ಔಟ್

 

ದೃಶ್ಯ ಆರು: ಬಯಲು

(ಹಲವು ರೈತರು ಹೊಲವನ್ನು ನೋಡುತ್ತಾ ನಿಂತಿದ್ದಾರೆ)

ರೈತ೧: ನಮ ಹೊಲದ ಶೇಂಗಾ ಏನಾಯ್ತು?

ರೈತ೨: ಆಗೋದೇನು? ಯಾರೋ ಕಿತ್ಬಿಟ್ಟಿದಾರ!

ರೈತ೧: ಯಾರ ಕೆಲಸ ಇದು?

ರೈತ೨: ನಮ್ಮ ಹಳ್ಳಿಯವರದ್ದೇ ಆಗಿರ‍್ಬಹುದಾ?

ರೈತ೩: ಯಾರು ನಮ್ಮ ಹಳ್ಳೀಲಿ ಅಂಥ ಕಳ್ರು?

ರೈತ೧: ಎಂಥ ಕಳ್ರು?

ರೈತ೨: ರಾತ್ರಿ ಬಂದು ಇಡೀ ಹೊಲದ ಶೇಂಗಾ ಕೀಳುವಂತ ಕಳ್ರು.

(ಶ್ರೀಮಂತ ರೈತ ಹನುಮಪ್ಪ ಬರುತ್ತಾನೆ)

ಹನುಮಪ್ಪ: ಏನು ಎಲ್ಲಾ  ಇಲ್ಲಿ ನಿಂತ್ಕೊಂಡೀರಿ?

ರೈತ೧: ಶೇಂಗಾ ಎಲ್ಲಾ ಕಿತ್ಬಿಟ್ಟಿದಾರೆ ಹನುಮಪ್ನೋರೆ.

ಹನುಮಪ್ಪ: ಯಾವಾಗ ನಡೀತು ಇದು?

ರೈತ೨: ಮೂರು ದಿನ್ದಿಂದ ನಾವು ಯಾರೂ ಈ ಕಡೆ ಬಂದಿಲ್ಲರಿ. ಎರಡು ಮೂರು ರಾತ್ರಿ ಕಳ್ರು ಬಂದು ಕಿತ್ಕೊಂಡು ಹೋಗ್ಯಾರ.

ಹನುಮಪ್ಪ: ಇದು ಒಬ್ಬನ್ದೇ ಕೆಲಸ ಅಂತೀರಾ?

ರೈತ೩: ಒಬ್ರು ಅಥ್ವಾ ಇಬ್ರು.

ರೈತ೧: ಅಥ್ವಾ  ಇಡೀ ರಾತ್ರಿ ಒಬ್ನೇ ಮಾಡಿರ‍್ಬಹುದು ಹನುಮಪ್ನೋರೆ.

ರೈತ೨: ಕಳ್ಳ ಯಾರೂಂತ ಕಂಡುಹಿಡೀಲೇ ಬೇಕು.

ರೈತ೩: ಹೇಗೆ?

ಹನುಮಪ್ಪ: (ಸ್ವಲ್ಪ ಹೊತ್ತು ಚಿಂತಿಸಿ) ಒಂದು ಕೆಲಸ ಮಾಡಿ. ನಾನು ಎರಡು ಬಾಲ್ದಿ  ರಬ್ಬರ್ ಹಾಲು ಕೊಡ್ತೀನಿ.  ರಾತ್ರಿ ಒಂಬತ್ತು ಗಂಟೆ  ಹೊತ್ತಿಗೆ ರಬ್ಬರ್ ಹಾಲನ್ನ  ಚೆನ್ನಾಗಿ ಬೆಳೆ ಬಂದಿರೋ ಹೊಲ್ದಲ್ಲಿ  ಎಲ್ಲಾ ಕಡೆ ಚೆಲ್ಲಿ. ನಾವೆಲ್ಲಾ  ಆ ಪೊದರುಗಳ ಹಿಂದೆ ಕಾದು ಕೂತ್ಕೊಳ್ಳೋಣ.

ರೈತರು: ಒಳ್ಳೇ ಉಪಾಯ. ಹಾಗೇ ಮಾಡೋಣ.

ಫೇಡ್ ಔಟ್

 

ದೃಶ್ಯ ಏಳು: ಬಯಲು

(ರೈತರು ಪೊದರುಗಳ ಹಿಂದೆ ಅಡಗಿ ಕುಳಿತಿದ್ದಾರೆ. ಜೇಡನಂತೆ ಕಾಣುವ ಉಡುಪು ಹಾಕಿಕೊಂಡಿರುವ ಜಾರಪ್ಪ  ಖಾಲಿ ಚೀಲ ಹಿಡಿದುಕೊಂಡು ಹೊಲಕ್ಕೆ ಇಳಿಯುತ್ತಾನೆ.

ರೈತ೧: ಯಾರಿರಬಹುದು?

ರೈತ೨: ಒಂದು ದೊಡ್ಡ ಜೇಡದ ಹಾಗೆ ಕಾಣಿಸ್ತದೆ.

ರೈತ೩: ಇಷ್ಟು ದೊಡ್ಡ ಜೇಡ ಈ ಭೂಮಿ ಮೇಲಂತೂ ಇಲ್ಲ.

ರೈತ೨: ಜೇಡ ಶೇಂಗಾ ತಿನ್ತದ?

ಹನುಮಪ್ಪ: ಸುಮ್ಮನಿರಿ. ಜೇಡ ಅಲ್ಲ ಮನುಷ್ಯನೇ. ತುಸು ತಾಳಿ. ನೋಡಿ ಮಜಾ.

(ಜಾರಪ್ಪ ಹೊಲಕ್ಕೆ ಅಂಟುತ್ತಾನೆ. ಬಿಡಿಸಿಕೊಳ್ಳಲಿಕ್ಕಾಗದೆ ಕಿರುಚುತ್ತಾನೆ. ಬಿಡಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ನೆಲಕ್ಕೆ ಅಂಟಿಕೊಂಡು ಬಲೆಯಲ್ಲಿರುವ ಜೇಡದಂತೆ ಕಾಣಿಸುತ್ತಾನೆ)

ರೈತ೧: ಜೇಡ ಅಲ್ಲ, ಸ್ಪೆ ಡರ್ಮಾನ್.

ಜಾರಪ್ಪ : ಅಯೊ ಬಿಡಿಸಿ!

ರೈತ೨: ಅದು ಜಾರಪ್ಪನ ಸ್ವರ ಅಲ್ವ?

ರೈತ೩:  ಹೌದು ಜಾರಪ್ಪನದೇ ಸ್ವರ!

ರೈತ೧: ಏಯ ಸ್ಪೆ ಡರ್ಮಾನ್, ಅಲ್ಲೇ ಯಾಕ ಕುಂತಿ? ಇತ್ತ ಬಾ.

ಜಾರಪ್ಪ: ಅಯೊ ಬಿಡಿಸಿ!

ಹನುಮಪ್ಪ: ಹೋಯ ಜಾರಪ್ಪ, ಏನಾತೊ?

ಜಾರಪ್ಪ: ಹೊಲ ನಂಗೆ ಅಂಟ್ಕೊಂಡಿದೆ!  ಬಿಡಿಸಿ!

ರೈತ೧: ಇಲ್ಲ ಜಾರಪ್ಪ, ಹೊಲಕ್ಕ ನೀ ಅಂಟ್ಕೊಂಡಿದೀ.

ಹನುಮಪ್ಪ: ನೀ ಜೇಡ ಆಗ್ಬಿಟ್ಟಿಯಪಾ. ಇನ್ನು ನಿನ್ನ ವಾಸ ಹೊಲ್ದಾಗ!

ರೈತ೧: ಭೂತ ಜೇಡ!

ರೈತ೨: ಅಲ್ಲ .  ಜೇಡ ಭೂತ!

ರೈತ೩: ಅಲ್ಲ. ಜಾರಪ್ಪ ಭೂತ!

ರೈತ೧: ಅಲ್ಲ. ಭೂತ ಜಾರಪ್ಪ!

ಹನುಮಪ್ಪ: ಯಾವುದೂ ಅಲ್ಲ, ಸ್ಪೆ ಡರ್ಮಾನ್!

ರೈತ೨: ಅಲ್ಲ! ರಬ್ಬರ್ಮಾನ್!

ರೈತ೩: ಶೇಂಗಾ ಕಳ್ಳ ರಬ್ಬರ್ಮಾನ್!

ರೈತ೧: ಮೈಗಳ್ಳರ ರಾಜ ಸ್ಪೆ ಡರ್ಮಾನ್!

ರೈತ೨: ರಬ್ಬರ್ಮಾನ್ ಜಾರಪ್ಪ!

ರೈತ೩: ಅಲ್ಲೇ ಹಂಗೇ ಕೂರಪ್ಪ!

ರೈತ೧: ಜಾರಪ್ಪ ಜಾರಪ್ಪ!

ಮೂವರೂ: ರಬ್ಬರ್ಮಾನ್ ಜಾರಪ್ಪ!
ರಬ್ಬರ್ಮಾನ್  ಜಾರಪ್ಪ!
ರಬ್ಬರ್ಮಾನ್  ಜಾರಪ್ಪ!

ಫೇಡ್ ಔಟ್