(ದೃಶ್ಯ ಒಂದು: ಮೋಟು ಮರ, ಬಂಡೆಗಳು, ಅಡುಗೆಮನೆ. ಬೆಳಗ್ಗಿನ ಹೊತ್ತು)

ರಂಗದ ನಡುವೆ ಒಂದು ದಪ್ಪನೆಯ ಮೋಟು ಮರ. ಮರದ ಎಡಗಡೆಯಲ್ಲಿ ಒಂದು ಶ್ರೀಮಂತ ಮನೆಯ ಅಡುಗೆ ಕೋಣೆ. ಅಡುಗೆ ಭಟ್ಟ ಕಾಯಿಸುವ ಬೇಯಿಸುವ ಕೆಲಸದಲ್ಲಿ  ವ್ಯಸ್ತನಾಗಿದ್ದಾನೆ. ಮರದ ಬುಡದಲ್ಲಿ ಬಲಗಡೆಗೆ ಒಂದು ಎತ್ತರದ ಬಂಡೆ ಮತ್ತು ಅದಕ್ಕೆ ತಾಗಿಕೊಂಡು ಒಂದು ತಗ್ಗಿನ ಬಂಡೆ. ಮೇಲಿನ ಬಂಡೆಯ ಮೇಲೆ ಒಂದು ಪಾರಿವಾಳ ಕುಳಿತಿದೆ. ಕೆಳಗಿನ ಬಂಡೆಯ ಮೇಲೆ ಒಂದು ಕಾಗೆ ಕುಳಿತಿದೆ. ಕಾಗೆ ಒಂದೆರಡು ಬಾರಿ ಕಾ ಕಾ ಎನ್ನುತ್ತದೆ. ಪಾರಿವಾಳ ಕುಟುರ್ ಕುಟುರ್ ಎನ್ನುತ್ತದೆ.

ಕಾ: ಭಟ್ಟ  ಏನೋ ಕಾಯಿಸ್ತಿದ್ದಾನೆ. ನೀರುಳ್ಳಿ ಬಜ್ಜಿ ಅಂತ ಕಾಣುತ್ತೆ. ಅಹ, ವಾಸನೆ ಎಷ್ಟು  ಸೊಗಸಾಗಿದೆ!

ಪಾ: ಏನು?

ಕಾ:ನೀರುಳ್ಳಿ ಬಜ್ಜಿ ವಾಸ್ನೆ!

ಪಾ: ನಿನ್ನ ಮೂಗು ಮತ್ತು ಕಣ್ಣು ಯಾವಾಗ್ಲೂ ಅವ್ನ ಅಡುಗೆ ಮನೆ ಕಡೆಗೇ. ತಿನ್ನೋ ವಿಚಾರ ಬಿಟ್ರೆ ಬೇರೆ ವಿಚಾರವೇ ಇಲ್ವ ನಿಂಗೆ?

ಕಾ: ನೀನು ಮಾಡೋಲ್ವ ತಿನ್ನೋ ವಿಚಾರ?

ಪಾ: ತಿನ್ನೋ ವಿಚಾರ ಮಾಡೋದೇನು? ಕಾಡಿಗೆ ಹೋಗಿ ಕಾಳು ಹೆಕ್ಕೋದು ತಿನ್ನೋದು! ತಿನ್ನುವುದರ ಬಗ್ಗೆ  ಯೊಚಿಸೋದು ಮತ್ತು ಮಾತಾಡೋದು ಮನುಷ್ಯರು ಮಾತ್ರ.

ಕಾ: ತಿನ್ನುವುದರ ಬಗ್ಗೆ ಮಾತಾಡಿದ್ರೆ ಏನು ತಪ್ಪು?

ಪಾ: ತಪ್ಪು! ಮನುಷ್ಯರಿಗೆ ಅದು ಸರಿ ಇರಬಹುದು. ನಮ್ಗೆ  ಸರಿ ಅಲ್ಲ.

ಕಾ: ನಂಗನಿಸುತ್ತೆ ಸರಿ ಅಂತ.

ಪಾ: ನಿಂಗೆ ಮನುಷ್ಯರ ಆಹಾರ ತಿಂದು ತಿಂದು ಅವರದೇ ಗುಣ ಬಂದ್ಬಿಟ್ಟಿದೆ. ಬಾ. ಅವ್ನು ಮಾಡ್ತಿರೋ ಅಡಿಗೆಯ ಚಿಂತೆ ಬಿಡು. ಚೆನ್ನಾಗಿ ಬೆಳಕಾಗಿದೆ. ಬಾ. ಕಾಡಿಗೆ ಹೋಗೋಣ. ಕಾಡಿನಲ್ಲಿ ಬೇರೆ ಬೇರೆ ತರದ ರುಚಿ ರುಚಿಯಾದ ಹಣ್ಣುಗಳಿವೆ.

ಕಾ:  ನಂಗದು ಬೇಡ. ಅವೆಲ್ಲ  ತುಂಬಾ ಸಪ್ಪೆ.

ಪಾ: ಬೇಯಿಸಿದ ಆಹಾರ ತಿಂದು ನಿನ್ನ ನಾಲಿಗೆ ರುಚಿ ಕೆಟ್ಟಿದೆ.

ಕಾ:  ನಿಂಗೆ ಮನುಷ್ಯರ ಆಹಾರದ ರುಚಿ ಏನು ಗೊತ್ತು? ಅವ್ರು ಹೊಸ ಹೊಸ ರುಚಿಗಳನ್ನ ಮಾಡ್ತಾ ಇರ‍್ತಾರೆ.

ಪಾ: ಹೊಸ ಹೊಸ ರುಚಿ ಜತೆ ಅವ್ರಿಗೆ ಹೊಸ ಹೊಸ ರೋಗಗಳು ಕೂಡ ಬರ‍್ತವೆ.

ಕಾ: ನಾನು ಅವ್ರ ಎಲ್ಲಾ ತಿಂಡಿಗಳನ್ನೂ ತಿಂದಿದ್ದೀನಿ. ನಂಗೇನೂ ರೋಗ ಬಂದಿಲ್ಲ. ನೀನು ಆ ಹುಲ್ಲಿನ ಬೀಜಗಳನ್ನು ಹೇಗೆ ತಿಂತಿಯೊ ನಿಂಗೇ ಗೊತ್ತು!

ಪಾ: ಮನುಷ್ಯರೂ ತಿನ್ನೋದು ಹುಲ್ಲಿನ ಬೀಜಗಳನ್ನೇ. ಅನ್ನವೂ ಹುಲ್ಲಿನ ಬೀಜದ್ದೇ. ಚಪಾತಿಯೂ ಹುಲ್ಲಿನ ಬೀಜದ್ದೇ. ನಿಂಗೆ ಮನುಷ್ಯರ ಆಹಾರ ತಿಂದು ತಿಂದು ಅದೆಲ್ಲ ಮರೆತು ಹೋಗಿದೆ! (ನಕ್ಕು) ಸಾಕು ಅವನ ಅಡಿಗೆ ಮನೆ ಕಡೆ ನೋಡಿದ್ದು.  ಬಾ ಕಾಡಿಗೆ. ನಿಂಗೆ ಸವಿ ಸವಿಯಾದ ಹಣ್ಣುಗಳನ್ನ ತೋರಿಸ್ತೀನಿ. (ಕೈ ಹಿಡಿದೆಳೆಯುತ್ತದೆ. ಕಾಗೆ ಅಡುಗೆಮನೆಯ ಆಕರ್ಷಣೆಯಿಂದ ಕಷ್ಟಪಟ್ಟು ಬಿಡಿಸಿಕೊಂಡು ಕಾಗೆಯ ಜೊತೆ ಹೊರಡುತ್ತದೆ.)

ದೃಶ್ಯ ಎರಡು: ಕಾಡು

(ಪಾರಿವಾಳ ಬೀಜಗಳನ್ನು ಹೆಕ್ಕಿ ತಿನ್ನುತ್ತಿದೆ. ಕಾಗೆ ನೋಡುತ್ತಾ ಕುಳಿತಿದೆ. ಒಮ್ಮೊಮ್ಮೆ ಯಾವುದೋ ಬೀಜವನ್ನು ಹೆಕ್ಕಿ ರುಚಿ ನೋಡಿ ಥೂ ಥೂ ಎಂದು ಉಗುಳುತ್ತದೆ)

ಕಾ: ಭಟ್ಟ ಈಗ ಏನಾದ್ರೂ ಸಿಹಿ ತಿಂಡಿ ಮಾಡ್ತಾ ಇರ‍್ಬಹುದು.

ಪಾ: ನಿಂಗೆ ಯಾವಾಗ್ಲೂ ಅವ ಮಾಡ್ತಿರೋ ಅಡಿಗೆಯದ್ದೇ ಯೊಚ್ನೆ!

ಕಾ: ಈ ಕಾಡಿನಲ್ಲಿ ಏನೂ ಇಲ್ಲ!

ಪಾ: ನೀನೀಗ ತಿಂದ ಕಾರೆ ಹಣ್ಣು ರುಚಿಯಾಗಿರ್ಲಿಲ್ವ?

ಕಾ:  ಏನು ರುಚಿ? ಬರೀ ಸಪ್ಪೆ!

ಪಾ: ನೀನು ಬಹುಶ: ಮನುಷ್ಯರು ತಿಂದು ಬಿಸಾಡಿದ್ದನ್ನೇ ತಿನ್ನೋಕೆ ಹುಟ್ಟಿದ್ದು. ಮನುಷ್ಯರಿಗಿಂತ ಕಡೆ ನೀನು.

(ಕಾಗೆ ಏನನ್ನೋ ಕೆದಕುತ್ತದೆ)

ಪಾ: ಅದೇನು ನೀನು ಕೆದಕ್ತಾ ಇರೋದು?

ಕಾ: ಸೆಗಣಿ.

ಪಾ:ಯಾಕೆ?

ಕಾ: ಸೆಗಣಿಯಲ್ಲಿ ಹುಳಗಳಿರ‍್ತವೆ.

ಪಾ: ಥೂ! ಸೆಗಣಿಹುಳಗಳನ್ನ ತಿನ್ಬೇಡ ಹೊಟ್ಟೆನೋವು ಬರುತ್ತೆ.

ಕಾ: (ತಿನ್ನುತ್ತಾ) ಈ ಹುಳಗಳು ತಂಬಾ ರುಚಿಯಾಗಿವೆ.

ಪಾ: ಥೂ ಗಲೀಜು! (ಮುಖ ಬೇರೆ ಕಡೆ ತಿರುಗಿಸುತ್ತದೆ)

ಕಾ: ಗಲೀಜೇನಿಲ್ಲ. ಚೆನ್ನಾಗಿವೆ. ತಿಂದು ನೋಡು!

ಪಾ: ನಂಗೆ ಹುಲ್ಲಿನ ಬೀಜ ತಿಂದು ಹೊಟ್ಟೆ ತುಂಬಿದೆ. ನೀನು ತಿನ್ನೋದನ್ನ ನಂಗೆ ನೋಡೋಕ್ಕಾಗ್ತಿಲ್ಲ. ನಾನು ಹೋಗ್ತೀನಿ. ನೀನು ಹುಳಗಳನ್ನ ಮುಗಿಸಿ ನಿಧಾನ ಬಾ.

(ಪಾರಿವಾಳ  ಹೋಗುತ್ತದೆ. ಕ್ಷಣದ ಬಳಿಕ ಕಾಗೆ ಅದನ್ನು ಹಿಂಬಾಲಿಸುತ್ತದೆ)

ಫೇಡ್ ಔಟ್

ದೃಶ್ಯ ಮೂರು:  ಒಂದನೆಯ ದೃಶ್ಯದಂತೆ

(ಮೋಟು ಮರದ ಬುಡದಲ್ಲಿ ಕಾಗೆ ಮತ್ತು ಪಾರಿವಾಳ)

ಪಾ: ಬೆಳಗಾಯಿತು. ಬಾ ಹೋಗೋಣ.

ಕಾ: ಎಲ್ಲಿಗೆ?

ಪಾ:ಕಾಡಿಗೆ. ಬೀಜ ಹೆಕ್ಕಲಿಕ್ಕೆ.

ಕಾ: ನೀನು ಹೋಗು. ನಾನು ಬರಲ್ಲ.

ಪಾ: ಯಾಕೆ ಬರಲ್ಲ? ಹಸಿವಿಲ್ವ?

ಕಾ: ಹೂಂ. ಒಂಥರಾ ಹೊಟ್ಟೆನೋವು!

ಪಾ: ಆ ಸೆಗಣಿಹುಳಗಳನ್ನು ಯಾಕೆ ತಿಂದೆ ಮತ್ತೆ? ಅದ್ರಿಂದ್ಲೇಹೊಟ್ಟೆನೋವು ಬಂದಿರ‍್ಬಹುದು. ಬಾ ಕಾಡಿನಲ್ಲಿ ಔಷಧಿ ಬೀಜಗಳಿವೆ. ಅವುಗಳನ್ನ ತಿಂದ್ರೆ ಹೊಟ್ಟೆನೋವು ವಾಸಿಯಾಗುತ್ತೆ.

ಕಾ: ನಂಗಿವತ್ತು ಕೈಕಾಲುಗಳಲ್ಲಿ ಶಕ್ತಿಯೆ ಇಲ್ಲ. ನೀನು ಹೋಗು. ನಾನು ಇವತ್ತು ಉಪವಾಸ ಮಾಡುತ್ತೇನೆ.

ಪಾ: ಅದೇ ಒಳ್ಳೆಯದು. ಹೊಟ್ಟೆನೋವಿಗೆ ಉಪವಾಸ ಒಳ್ಳೆಯ ಮದ್ದು.

ಪಾರಿವಾಳ ಹಾರಿಹೋಗುತ್ತದೆ.

ಫೇಡ್ ಔಟ್

(ಬೆಳಕು ಪುನ: ಬರುವಾಗ ಕಾಗೆ ಅಡುಗೆ ಕೋಣೆಯಲ್ಲಿ ಲಾಡು ಕದ್ದು ತಿನ್ನುತ್ತಿದೆ. ಮರೆಯಲ್ಲಿದ್ದ ಅಡುಗೆ ಭಟ್ಟ ಬಂದು ತಟ್ಟನೆ ಕಾಗೆಯನ್ನು ಹಿಡಿದುಕೊಳ್ಳುತ್ತಾನೆ)

ಅ: ಹಾಂ ಸಿಕ್ಕಿದೆ! ಕಳ್ಳ ಕಾಗೆ! ಎಷ್ಟು ದಿವ್ಸದಿಂದ ಕಾಯಾ ಇದ್ದೆ ನಿನ್ನನ್ನು ಹಿಡೀಬೇಕು ಅಂತ ಇವತ್ತು ಸಿಕ್ಕಿದೆ! ನಿಂಗೆ ತಿನ್ಲಿಕ್ಕಾ ನಾನು ಲಾಡು ಮಾಡಿಡೋದು?

ಕಾ:ಬಿಡು. ಬಿಡು ನನ್ನನ್ನು . ಇನ್ನು ಬರಲ್ಲ.

ಅ:ಇನ್ನು ಬರಲ್ಲ ಅಂದ್ರೆ ಆಯಾ? ಅಷ್ಟು ಕಾಲದಿಂದ ಮಾಡ್ತಿದ್ದ ಕಳ್ಳತನಕ್ಕೆ ತಕ್ಕ ಶಿಕ್ಷೆ ಆಗ್ಬೇಡ್ವಾ?

ಕಾ: ದಯಮಾಡಿ ನನ್ನನ್ನು ಬಿಟ್ಬಿಡು. ಇನ್ನು ಖಂಡಿತ ಬರಲ್ಲ.

ಅ: ಅಷ್ಟು ಸುಲಭದಲ್ಲಿ ಬಿಟ್ಬಿಡ್ತೀನಿ ಅಂದ್ಕೊಂಡ್ಯಾ? ನಿನ್ನ ಮೇಲೆ ಕಾದ ಎಣ್ಣೆ ಸುರೀತೀನಿ.

ಕಾ: ಅಯ್ಯಯೊ ಬೇಡ! ಬೇಡ! ನಿನ್ನ  ಕಾಲು ಹಿಡೀತೀನಿ. ಬಿಟ್ಬಿಡು ನನ್ನನ್ನು. ಇನ್ನು ಬರಲ್ಲ.

ಅ: ಏನು ನೀನು ನನ್ನ ಕಾಲು ಹಿಡೀತೀಯ? (ನಕ್ಕು) ಕೆಲಸ ಆಗ್ಬೇಕಾದ್ರೆ ಕಾಗೆ ಕಾಲು ಹಿಡೀಬೇಕು ಅಂತಾರೆ. ಹೇಗೆ? (ಕಾಗೆಯ ಕಾಲು ಹಿಡಿದು ಎತ್ತಿ) ಹೀಗೆ! ಹೀಗೆ ಹಿಡಿದು ಎಣ್ಣೆಯಲ್ಲಿ ಮುಳುಗಿಸೋದು! ಹ್ಹ ಹ್ಹ!  ಅದ್ರೆ ಎಣ್ಣೆ  ತಣ್ಣಗಾಗಿಬಿಟ್ಟಿದೆಯಲ್ಲ! ಬೆಂಕಿ ಉರಿಸುತ್ತೇನೆ. ಎಲ್ಲಿಡೋದು ನಿನ್ನನ್ನ? ನಾನು ಬೆಂಕಿ ಮಾಡುವಾಗ ಹಾರಿಹೋಗೋಲ್ವ ನೀನು?

ಕಾ: ಇಲ್ಲ ಇಲ್ಲ.  ಹಾರಿ ಹೋಗಲ್ಲ.

ಅ: ಏನು? ಎಣ್ಣೆ ಕಾಯಿಸುವಾಗ ನೀನು ಹಾರಿಹೋಗಲ್ವ? ಕಾದ ಎಣ್ಣೆಯಲ್ಲಿ ಮುಳುಗೋಕೆ ಕಾಯಾ ಇರ‍್ತೀಯಾ?  (ಜೋರಾಗಿ ನಕ್ಕು) ಇದಕ್ಕಿಂತ ದೊಡ್ಡ ಸುಳ್ಳು ಬೇರೆ ಉಂಟಾ? ಕಳ್ಳರ ಕಳ್ಳ! ಸುಳ್ಳರ ಸುಳ್ಳ! (ಅವಡು ಕಚ್ಚಿ) ನಿನ್ನನ್ನು ಹಾರಿಹೋಗದ ಹಾಗೆ ಮಾಡಿ ಆ ಮೇಲೆ ಕಾಯಿಸ್ತೇನೆ ನಿನ್ನ ಸ್ನಾನಕ್ಕೆ ಎಣ್ಣೆ! (ಕಾಗೆಯ ಒಂದೊಂದೇ ಪುಕ್ಕ ಕೀಳುತ್ತಾನೆ. ಕಾಗೆ ನೋವಿನಿಂದ ಅರಚುತ್ತದೆ. ಕೆಲವು ಪುಕ್ಕಗಳನ್ನು ಕಿತ್ತ ಬಳಿಕ ಪರಿಶೀಲಿಸಿ) ಸಾಕು. ಇನ್ನು ಹಾರ್ಲಿಕ್ಕೆ ಆಗ್ಲಿಕ್ಕಿಲ್ಲ. (ಕಾಗೆಯನ್ನು ಒಂದು ಮೇಜಿನ ಮೇಲಿರಿಸಿ) ಬೆಂಕಿ ಪೊಟ್ಟಣ ಎಲ್ಲಿ? (ಬೆಂಕಿ ಪೊಟ್ಟಣ ತೆಗೆದು ಒಲೆ ಉರಿಸುತ್ತಿರುವಾಗ ಕಾಗೆ ಜೀವಭಯದಿಂದ ತತ್ತರಿಸಿ ಕಷ್ಟಪಟ್ಟ್ಪು ಹಾರಿಹೋಗುತ್ತದೆ. ಅದನ್ನು ನೋಡಿ ಅಡುಗೆಭಟ್ಟ ಆಶ್ಚರ್ಯದಿಂದ) ಎಲಾ! ಕಾಗೆ ಹಾರಿಹೋಯ್ತಲ್ಲ! ಅಷ್ಟು ಪುಕ್ಕ ಸಾಕಾಯಾ ಅದ್ಕೆ ಹಾರ್ಲಿಕ್ಕೆ?  ಛೆ! ತಪ್ಪಾಯ್ತು! ಒಂದೂ ಬಿಡ್ದೆ ಎಲ್ಲಾ ಪುಕ್ಕಗಳನ್ನೂ ಕೀಳ್ಬೇಕಾಗಿತ್ತು! (ದೂರದಲ್ಲ್ಲಿ ಕಾಗೆಯ ನೋವಿನಿಂದ ಕೂಡಿದ ಕೂಗು)

ಫೇಡ್ ಔಟ್

ದೃಶ್ಯ ಮೂರು: ಆರಂಭದ ದೃಶ್ಯ

(ಕಾಗೆ ಹೊದ್ದು ಮಲಗಿಕೊಂಡಿದೆ. ಪಾರಿವಾಳದ ಆಗಮನ)

ಪಾ:ಅರೆ! ಇನ್ನೂ ಮಲಗಿಯೆ ಇದ್ದೀಯ ನೀನು? (ಕಾಗೆ ನರಳುತ್ತದೆ. ಕಾಗೆಯ ಬಳಿಯಲ್ಲಿ ಕುಳಿತುಕೊಂಡು) ಜ್ವರ ಜೋರಾಗಿದೆಯೆ?

ಕಾ: (ಜೋರಾಗಿ ನರಳುತ್ತಾ)ಹೌದು ಹೌದು.

ಪಾ: (ಕಾಗೆಯ ಹಣೆ ಮುಟ್ಟಿ ನೋಡಿ) ಹಣೆ ತಣ್ಣಗಿದೆಯಲ್ಲ?

ಕಾ: ಮೈ ಬಿಸಿ ಬಿಸಿ ಇದೆ.

ಪಾ: (ಮುಸುಕು ಸರಿಸಿಲು ಯತ್ನಿಸುತ್ತಾ) ಬಿಡು ನೋಡ್ತೀನಿ. ಸಿಡುಬೇನಾದ್ರೂ ಆಗಿದ್ರೆ…

ಕಾ: ಬೇಡ ಬೇಡ. ಸಿಡುಬು ನಿಂಗೂ ಬಂದೀತು!

ಪಾ: ಕಾಗೆ ಸಿಡುಬು ಕಾಗೆಗಳಿಗೆ ಬರೋದು. ಪಾರಿವಾಳಗಳಿಗೆ ಬರೋಲ್ಲ. ನೊಡೋಣ. ಮೈಯಲ್ಲಿ ಏನಾದ್ರೂ ತುರಿಕೆ ಆಗಿದ್ರೆ…

ಕಾ: ಅಂಥದೇನೂ ಇಲ್ಲ.

ಪಾ: ಹಾಗಾದ್ರೆ ಮನಷ್ಯರ ಆಹಾರ ತಿಂದು ಮನುಷ್ಯರ ಯಾವುದೋ ರೋಗ ನಿಂಗೆ ಬಂದಿದೆ! ಕೊಕ್ಕರೆ ಡಾಕ್ಟರನ್ನ ಕರ‍್ಕೊಂಡು ಬರ‍್ತೀನಿ.

ಕಾ: ಬೇಡ ಅಂದ್ರೆ ಬೇಡ. ನೀನು ಸುಮ್ನಿರು. (ನರಳಿಕೆ)

ಪಾ: ನಿಂಗೆ ಇಷ್ಟು ಕಾಯಿಲೆ ಇರುವಾಗ ನಾನು ಸುಮ್ಮನಿರುವುದು ಹೇಗೆ? (ಕಾಗೆಯ ಹೊದಿಕೆ  ತೆಗೆದುಬಿಡುತ್ತದೆ. ಪುಕ್ಕಗಳು ಉದುರಿಹೋಗಿರುವುದನ್ನು ಕಂಡು ಆಶ್ಚರ್ಯದಿಂದ) ಅಯೊ ಇದೇನಾಗಿದೆ ನಿಂಗೆ? (ಕಾಗೆ ಸುಮ್ಮನಿದೆ) ನಿನ್ನ ಪುಕ್ಕಗಳೆಲ್ಲ ಎಲ್ಲಿ ಹೋದವು?

ಕಾ: ಏನಾಗಿದೆ ಅಂತ್ಲೇ ತಿಳೀತಿಲ್ಲ. ಏನೋ ಆಗಿದೆ. ಪುಕ್ಕಗಳು ಮತ್ತೆ ಬರುತ್ವೆ ಅಲ್ವ?

ಪಾ:ಬರುತ್ವೆ. ತುಂಬಾ ಕಾಲ ಬೇಕಾಗುತ್ತೆ. ಆದ್ರೆ ನಿಂಗೆ ಆಗಿರೋದಾದ್ರೂ ಏನು? (ಗಾಯಗಳನ್ನು ನೋಡಿ) ಇದೇನು ಗಾಯ?

ಕಾ: ಗಾಯ ಏನಿಲ್ಲ. ಪುಕ್ಕಗಳು ಉದುರಿದಲ್ಲಿ ಕೆಂಪಗಾಗಿದೆ ಅಷ್ಟೆ.

ಪಾ: ಸುಮ್ಮನೆ ಪುಕ್ಕಗಳು ಹೇಗೆ ಉದುರ‍್ತವೆ? ಅಲ್ಲ. ಇದು ಯಾರೋ ಹೊಡೆದ ಗಾಯ. ಯಾರು ಹೊಡೆದ್ರು?

ಕಾ: ಯಾರೂ ಹೊಡೀಲಿಲ್ಲ.

ಪಾ:ಸರಿ ತಿಳೀತು ಬಿಡು. ಅಡುಗೆ ಭಟ್ಟ ಹೊಡೆದ ಅಲ್ವ? ನಿಜ ಹೇಳು.

ಕಾ: ಹೂಂ. ಹೌದು ಅವ್ನೆ.

ಪಾ: (ಆಶ್ಚರ್ಯದಿಂದ) ಹೇಗೆ ಸಿಕ್ಕಿಬಿದ್ದೆ ನೀನು ಅವ್ನ ಕೈಗೆ?

ಕಾ: ನಾನಿಲ್ಲಿ ಸುಮ್ನೆ ಮಲಕ್ಕೊಂಡಿದ್ದೆ. ಅವ್ನು ಬಂದು ಹೊಡ್ದ.

ಪಾ: ಸುಳ್ಳು ಯಾಕೆ ಹೇಳ್ತಿ? ನಂಗೊತ್ತು. ಏನೋ ಕದಿಯಲು ನೀನು ಅವ್ನ ಅಡುಗೆ ಮನೆಯೊಳಗೆ ಹೋದೆ. ಅವನು ಹಿಡ್ಕೊಂಡು ಹೊಡ್ದ ಅಲ್ವ? (ಕಾಗೆ ಸುಮ್ಮನಿದೆ) ಆದ್ರೆ ಅವ್ನ ಕೈಗೆ ನೀನು ಸಿಕ್ಕಿದ್ದಾದ್ರೂ ಹೇಗೆ?

ಕಾ: ಅವ್ನು ಹಾರಿ ನನ್ನನ್ನ ಹಿಡ್ಕೊಂಡ.

ಪಾ: ಹಾರ್ಲಿಕ್ಕೆ ಅವ್ನಿಗೇನು ರೆಕ್ಕೆ ಇದ್ಯೆ? ನಂಗೊತ್ತಾಯ್ತು ಬಿಡು. ನಾನು ಕಾಡಿಗೆ ಹೋದಾಗ ದಿನಾ ನೀನು ಅವ್ನ ಅಡುಗೆ ಮನೆಗೆ ಹೋಗಿ ಅದು ಇದು ಕದ್ದು ತಿನ್ತಾ  ಇದ್ದೆ. ಅದು ಅವ್ನಿಗೆ ಗೊತ್ತಾಗಿ ಬಾಗಿಲು ಬಂದ್ ಮಾಡಿ ಹಿಡ್ದ ಅಲ್ವ? (ಕಾಗೆ ಮನವಾಗಿದೆ) ನಿಜ ಹೇಳು. ಹೌದಾ ಅಲ್ವಾ?

ಕಾ: ಹೂಂ. ಹೌದು.

ಪಾ: ಇನ್ನಾದ್ರೂ ನನ್ಜೊತೆ ಕಾಳು ಹೆಕ್ಲಿಕ್ಕೆ ಕಾಡಿಗೆ ಬಾ. ಮನುಷ್ಯರ ಕೈಗೆ ಸಿಕ್ಕಿ ಸಾಯೆಡ!

ಕಾ: ಇಷ್ಟರ ವರೆಗೆ ಸತ್ತಿಲ್ಲ.

ಪಾ: ಆದ್ರಿಂದ್ಲೇ ಇನ್ನೂ ಸಾಯೊ ಅವ್ಕಾಶ ಇದೆ!  ಈ ಕಳೋ ಕಾಯೆ ಎಲ್ಲಕ್ಕಿಂತ ದೊಡ್ಡ ಕಾಯೆ! ಇನ್ನೊಂದ್ಸಲ ಎಲ್ಲಾದ್ರೂ ಅವ್ನ ಕೈಗೆ ಸಿಕ್ಕಿ ಬಿದ್ದೀಯೆ, ನಿನ್ನ ಕತೆ ಮುಗೀತು! (ಕಾಗೆ ಭಯದಿಂದ ನಡುಗುತ್ತಾ ನರಳುತ್ತದೆ) ನೋವು ಜೋರಾಗಿದ್ಯ?

ಕಾ: ಹೌದು.

ಪಾ: ಹಾಗೇ ಮಲಗಿರು. ನಾನು ಯಾವುದಾದ್ರೂ ಕಾಡಿನ ಔಷಧಿ ತರ‍್ತೇನೆ.  ಹಾರಿಹೋಗುತ್ತದೆ)

ಫೇಡ್ ಔಟ್