ಪಾತ್ರಗಳು:
ರಾಜ, ರಾಣಿ, ಮಂತ್ರಿ, ಯುವರಾಜ, ಐದು ಮಂದಿ ಪಂಡಿತರು
ರಾಜಕುಮಾರಿ, ಮುದುಕಿ, ಮುದುಕಿಯ ಮಗ
ನಾಯಿಮರಿ, ಮಿಂಚುಳ್ಳಿ, ಇಬ್ಬರು ಸೈನಿಕರು

ದೃಶ್ಯ ಒಂದು: ರಾಜನ ಆಸ್ಥಾನ.

(ರಾಜ, ರಾಣಿ, ಯುವರಾಜ, ಮಂತ್ರಿಗಳು, ಪಂಡಿತರು, ಸಭಾಸದರು)

ರಾಜ: ಇವತ್ತಿನ ಆಡಳಿತ ಸಮಾಲೋಚನೆಗಳು ಮುಕ್ತಾಯಗೊಂಡಿವೆ. ಈಗ ಎಂದಿನಂತೆ ನಮ್ಮ ಯುವರಾಜ ಕೆಲವು ಕವಿತೆಗಳನ್ನು ಸಾದರಪಡಿಸುತ್ತಾನೆ.

(ಯುವ ರಾಜನದು ಬಹಳ ಮಧುರವಾದ ಕಂಠ. ಅವನ ಮಾತಿನ ರೀತಿ ಬಹಳ ವಿನಯದಿಂದ ಕೂಡಿದ್ದು. ಅವನ ನಡೆನುಡಿ ಎಲ್ಲವೂ ಬಹಳ ಆಕರ್ಷಕ)

ಯುವ: (ಎದ್ದು ನಿಂತು) ಹೂವಿನಿಂದ  ಬೀಜ ಬೀಜದಿಂದ ಹೂವು
ಚಿಟ್ಟೆಯಿಂದ ಹುಳು ಹುಳುವಿನಿಂದ ಚಿಟ್ಟೆ
ಗಾಳಿಯಿದ್ದರೆ ಗಾಳಿಪಠ ನೀರು ಇದ್ದರೆ ದೋಣಿ
ಅನ್ನವೇ ಇಲ್ಲದಿರಲೇಕೆ ಚಿನ್ನದ ತಟ್ಟೆ?

(ಯುವರಾಜ ಕುಳಿತುಕೊಳ್ಳುತ್ತಾನೆ)

ರಾಜ: ಇನ್ನು ಈ ಕವಿತೆಯನ್ನು  ಪಂಡಿತರು ವಿಮರ್ಶಿಸಬಹುದು.

ಪಂ೧: ಇದು ಒಂದು ಸಾಮಾನ್ಯವಾದ ಕವಿತೆ.

ಪಂ೨: ಇದು ನಮ್ಮನ್ನು ಚಿಂತನೆಗೆ ಹಚ್ಚುವ ಕವಿತೆ

ಪಂ೩: ಈ ಕವಿತೆಯಲ್ಲಿ ಧ್ವನಿ ಇಲ್ಲ. ಧ್ವನಿ ಇಲ್ಲದೆ ಕವಿತೆಯಾಗುವುದಿಲ್ಲ.

ಪಂ೪: ಇದು ಗದ್ಯದಂತೆಯೆ ಇದೆ.

ಪಂ೫: ಇದರ ಭಾಷೆ ತುಂಬಾ ಸರಳ. ಆದುದರಿಂದ ಇದನ್ನು ಕವಿತೆಯೆಂದು ಪರಿಗಣಿಸಲು ಸಾಧ್ಯವಿಲ್ಲ.

ರಾಜ: ಇನ್ನು ಕವಿಯ ಪ್ರತಿಕ್ರಿಯೆ.

ಯುವ: ಇದು ಕವಿತೆಯೆಂದು ನಾನು ಹೇಳಲಿಲ್ಲ. ಕವಿತೆ ಎಂದು ನೀವೇ ಕರೆದು ನೀವೇ ಕವಿತೆ ಅಲ್ಲ ಎನ್ನುತ್ತಿದ್ದೀರಿ.

ಪಂ೧: ಇದು ಕವಿತೆಯಲ್ಲದಿದ್ದರೆ ಬೇರೆ ಏನು?

ಯುವ: ಕವಿತೆಯಿರುವುದು ಶಬ್ದಗಳಲ್ಲಿ ಅಲ್ಲ;
ಕವಿತೆಯಿರುವುದು ಶಬ್ದವಿಲ್ಲದ ನಿಶ್ಶಬ್ದದಲ್ಲಿ.
ಅರ್ಥವಿರುವುದು ಮಾತುಗಳಲ್ಲಿ ಅಲ್ಲ;
ಅರ್ಥವಿರುವುದು ಮಾತು ಮೀರಿದ ಮನದಲ್ಲಿ.
ನಾವಿರುವುದು ಇರುವುದರಲ್ಲಿ ಅಲ್ಲ;
ನಾವಿರುವುದು ಇಲ್ಲದಿರುವುದರಲ್ಲಿ .

ಪಂಡಿತರು: ಅಹ, ಇದು ಕವಿತೆ!

(ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ)

ಯುವ: ಇದನ್ನು ನೀವು ಕವಿತೆಯೆಂದು ಒಪ್ಪುತ್ತೀರಾ?

ಪಂಡಿತರು: ಹೌದು ಒಪ್ಪುತ್ತೇವೆ.

ರಾಜ: ಇದು ನಿಮಗೆಲ್ಲರಿಗೂ ಅರ್ಥವಾಯಿತೆ?

ಪಂ೧: ಅರ್ಥವಾದರೆ ಕವಿತೆಯಲ್ಲ. ಅರ್ಥವಾಗದ್ದಿದ್ದರೆ ಮಾತ್ರ ಕವಿತೆ.

(ಇಡೀ ರಾಜಸಭೆ ನಗೆಗಡಲಲ್ಲಿ ಮುಳುಗುತ್ತದೆ)

ಫೇಡ್ ಔಟ್

ದೃಶ್ಯ ಎರಡು: ಕಾಡು

(ಯುವರಾಜ ಮರಗಿಡಗಳನ್ನು ವೀಕ್ಷಿಸುತ್ತಾ ನಡೆಯುತ್ತಿದ್ದಾನೆ. ಒಬ್ಬಳು ಮದುಕಿ ಒಂದು ಸೌದೆಯ ಕಟ್ಟನ್ನು  ಬೆನ್ನ ಮೇಲೇರಿಸಿಕೊಂಡು ಆಗಾಗ ಬೀಳುತ್ತಾ ನಡೆಯುತ್ತಿದ್ದಾಳೆ. ಅದನ್ನು ನೋಡಿ ಯುವರಾಜನಿಗೆ ಕನಿಕರವುಂಟಾಗುತ್ತದೆ)

ಯುವ: ಅಜ್ಜಿ , ಕೊಡಿ ನಾನು ಎತ್ತಿಕೊಳ್ಳುತ್ತೇನೆ. ಎಲ್ಲಿ ನಿಮ್ಮ ಮನೆ?

ಮು: ಇಲ್ಲೇ ಹತ್ತಿರ. (ಸೌದೆಯ ಕಟ್ಟು ಕೆಳ ಹಾಕಿ ಬಳಲಿ ಕುಳಿತುಕೊಳ್ಳುತ್ತಾಳೆ. ಅವನನ್ನು ನೋಡಿ)

ಮು: ನೀವು ಯುವರಾಜರ ಹಾಗೆ ಕಾಣಿಸುತ್ತಿದ್ದೀರಿ!

(ಯುವರಾಜ ಸೌದೆಯ ಕಟ್ಟನ್ನು ಎತ್ತಿ ತಲೆಯ ಮೇಲಿರಿಕೊಳ್ಳುತ್ತಾನೆ)

ಯುವ: ಹೌದು. ನಾನು ಯುವರಾಜ.

ಮು: ಛೆ ಛೆ! ಯುವರಾಜರು ಸೌದೆ ಹೊರುವುದೆ?

ಯುವ: (ನಕ್ಕು) ಯಾಕೆ ಹೊರಬಾರದು? ಯುವರಾಜರಿಗೆ ಸೌದೆ ಹೊರುವ ಅನುಭವ ಕೂಡ ಬೇಕು.

ಮು: ನಿಮ್ಮಂಥ  ಗುಣವಂತರು ಲಕ್ಷಕ್ಕೊಬ್ಬರು. (ಎದ್ದು ನಡೆಯುತ್ತಾ) ನಿಮ್ಮ ದನಿ ಎಷ್ಟು ಸವಿ?  ಜನರು ನಿಮ್ಮ ದನಿಯ ಬಗ್ಗೆ ಮಾತಾಡುತ್ತಾ ಇರುತ್ತಾರೆ.

ಯುವ: ಅದು ನನ್ನ ದನಿಯಲ್ಲ , ಅದು ಹುಟ್ಟಿನಿಂದಲೇ ನಾನು ಪಡೆದು ಬಂದ ದನಿ.

ಮು: ಎಂಥ ದೊಡ್ಡ ಮಾತು! ನೀವು ಕವಿ ಕೂಡ ಆಗಿರುವಿರಿ ಅಲ್ಲವೆ ಯುವರಾಜ?.

ಯುವ: ಕವಿಯಲ್ಲ. ಕವಿತೆ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೆ.

ಮು: ಅಹ, ಎಂಥ ವಿನಯ! ನಿಮ್ಮ ದನಿ ಬಹಳ ಸವಿಯಾಗಿದೆ ಯುವರಾಜರೆ. ಇನ್ನೂ ಇನ್ನೂ ಕೇಳಬೇಕು ಅನಿಸುತ್ತದೆ. ಮಾತಾಡಿ.

ಯುವ: (ನಕ್ಕು) ಏನು ಮಾತಾಡಲಿ?

ಮು: ಏನಾದರೂ ಮಾತಾಡಿ. ಸುಮ್ಮನೆ ಮಾತಾಡಿ.

ಯುವ: ಮಾತಿಗೆ ಅರ್ಥ ಬೇಡವೆ?

(ಒಂದಷ್ಟು ದೂರ ನಡೆದಾಗ ಮುದುಕಿಯ ಗುಡಿಸಲು ಸಿಗುತ್ತದೆ. ಗುಡಿಸಲಿನ ಬಾಗಿಲಿನಲ್ಲಿ ಒಬ್ಬ ಯುವರಾಜನ ಪ್ರತಿರೂಪದಂತಿರುವ ಯುವಕನೊಬ್ಬ ಕಾಣಿಸುತ್ತಾನೆ. ಆದರೆ ಅವನ ಉಡುಪು ಅಂದವಾಗಿಲ್ಲ. ಕೂದಲು ಒಪ್ಪವಾಗಿಲ್ಲ. ಅವನ ಧ್ವನಿ ಒರಟಾಗಿದೆ)

ಮು: ಇದೇ ನನ್ನ ಮನೆ. ಇವನು ನನ್ನ ಮಗ ಅರುಣೋದಯ. (ಯುವರಾಜನ ತಲೆಯ ಮೇಲಿದ್ದ  ಸೌದೆಯ ಕಟ್ಟನ್ನು ಕೆಳಗಿಳಿಸಲು ಸಹಕರಿಸುತ್ತಾಳೆ)

ಮಗ: (ಗೊಗ್ಗರು ಸ್ವರ)ಯಾರು?

ಮು: ಇವನು ಯುವರಾಜ.

ಮಗ: ಯುವರಾಜ?

ಮು: ಹೌದು ತುಂಬಾ ಒಳ್ಳೆಯವನು. ನನ್ನ ಸೌದೆಯ ಕಟ್ಟನ್ನು ಅಷ್ಟು ದೂರದಿಂದ ಹೊತ್ತು ತಂದ. ತುಂಬಾ ಕಷ್ಟ ಪಟ್ಟ.

ಯುವ: ನನಗೆ ಕಷ್ಟವಾಗಿಲ್ಲಮ್ಮ.

ಮಗ: ಯುವರಾಜರು ಇಂಥ ಕೆಲಸವನ್ನೂ ಮಾಡುತ್ತಾರಾ?

ಮು: ಇಂಥ ಯುವರಾಜರು ಲಕ್ಷಕ್ಕೊಬ್ಬರು! (ಅಚ್ಚೆಯಿಂದ ಯುವರಾಜನ ಬೆನ್ನು ಸವರಿ) ಬಹಳ ಬಳಲಿದ್ದಿ . ಕುಳಿತುಕೊ. ನಿಂಗೆ ಕುಡಿಯಲು ಹಣ್ಣಿನ ರಸದ ಶರಬತ್ತು ತರುತ್ತೇನೆ. (ಒಳಹೋಗಿ ಒಂದು ಲೋಟದಲ್ಲಿ ಶರಬತ್ತು ತಂದು ಯುವರಾಜನಿಗೆ ಕೊಡುತ್ತಾಳೆ. ಯುವರಾಜ ಅದನ್ನು ಕುಡಿದು ಬಹಳ ಸವಿಯಾಗಿದೆ ಎನ್ನುತ್ತಾ ಲೋಟದಲ್ಲಿದ್ದ ಪಾನೀಯವನ್ನು ಕುಡಿದು ಮುಗಿಸುತ್ತಾನೆ. ಅವನು ಲೋಟದಲ್ಲಿದ್ದ ಪಾನೀಯವನ್ನು ಕುಡಿಯಲಾರಂಭಿಸಿದಾಗ ರಂಗದ ಬೆಳಕು ಆರತೊಡಗುತ್ತದೆ. ಲೋಟ ಖಾಲಿಯಾದಾಗ ಪೂರ್ತಿ ಕತ್ತಲಾಗಿ ಮರಳಿ ನಿಧಾನವಾಗಿ ಬೆಳಕು ಬರುವಾಗ ಯುವರಾಜ ಒಂದು ಪುಟ್ಟ ನಾಯಿಯಾಗಿ ಬದಲಾಗಿರುತ್ತಾನೆ.  ಮುದುಕಿ ನಗುತ್ತಾಳೆ. ಮಗನೊಡನೆ) ಮಗಾ, ಈಗ ನೀನು ಮಾತಾಡು.

ಮಗ: ಯಾಕಮಾ? (ಈಗ ಅವನ ಧ್ವನಿ, ನಡೆ ನುಡಿ ಎಲ್ಲವೂ ಯುವರಾಜನದು)

ಮು: ನೋಡು. ಯುವರಾಜನ ದನಿಯನ್ನು ನಿನಗೆ ಕೊಟ್ಟಿದ್ದೇನೆ. ಅವನನ್ನು ನೋಡು ಇಲ್ಲಿ!  ಅವನನ್ನು  ಒಂದು ನಾಯಿ ಮಾಡಿದ್ದೇನೆ. (ನಗುತ್ತಾಳೆ)ನಮ್ಮ ಅದೃಷ್ಟ ಖುಲಾಯಿಸಿತು!

ಮಗ: ಅದೃಷ್ಟ ಖುಲಾಯಿಸಿತೆ? ಹೇಗಮ್ಮ?

ಮು: ಹೇಳುತ್ತೇನೆ. ಹೋಗು. ಚೆನ್ನಾಗಿ ಸ್ನಾನ ಮಾಡಿಕೊಂಡು ಬಾ. ಅರಮನೆಗೆ ಹೋಗೋಣ..

ಮಗ: ಯಾವ ಅರಮನೆಗಮಾ? ಈ ಯುವರಾಜನ ಅರಮನೆಗಾ?

ಮು: ಅಲ್ಲ. ಬೇರೊಂದು ಅರಮನೆಗೆ. ಅಲ್ಲಿ ಒಬ್ಬಳು ರಾಜಕುಮಾರಿಯಿದ್ದಾಳೆ. ಅವಳನ್ನು ನೀನು ಕಾಣಬೇಕು. ಅವಳೊಡನೆ ಮಾತಾಡಬೇಕು.

ಮಗ: (ಖುಷಿಯಿಂದ) ಏನು ಮಾತಾಡಬೇಕು?

ಮು: ಅದೆಲ್ಲಾ  ನಾನು ಹೇಳಿಕೊಡುತ್ತೇನೆ. ನೀನು ಮೊದಲು ಸ್ನಾನ ಮಾಡಿಕೊಂಡು ಬಾ.

(ಮಗನ ನಿರ್ಗಮನ. ಮುದುಕಿ ಕುಣಿಯುತ್ತಾ ಹಾಡುತ್ತಾಳೆ.) ಅಹ ಎಂಥ ಭಾಗ್ಯವಿದುನಮಗೊಲಿದ ಭಾಗ್ಯವಿದುಎಂಥ ಭಾಗ್ಯವಿದು (ನಾಯಿಮರಿಯನ್ನು ಎತ್ತಿಕೊಂಡು) ನಾಯಿ ಮರಿ ನಾಯಿಮರಿ ತಿಂಡಿ ಬೇಕೆ? ಮೂಕ ಮರಿ ಯುವರಾಜ ಮರಿ ನನ್ನ ಮನೆಯ ನೀನು ಕಾಯುತಿರುವೆಯ? (ನಾಯಿಮರಿ ಛಂಗನೆ ಕೆಳಹಾರುತ್ತದೆ. ಜೋರಾಗಿ ಬೊಗಳುತ್ತಾ ಕಚ್ಚಲು ಬರುತ್ತದೆ) ಏನು ನಂಗೆ ಕಚ್ಚಲು ಬರುತ್ತೀಯ? ಚೋಟುದ್ದ ಇರುವಿ ನೀನು! ಅಷ್ಟು ಧೈರ್ಯವೆ ನಿಂಗೆ? (ಕಲ್ಲು ಎತ್ತಿ ಬೀಸುತ್ತಾಳೆ. ನಾಯಿ ಹೆದರಿ ಓಡಿಹೋಗುತ್ತದೆ)

ಫೇಡ್ ಔಟ್

ದೃಶ್ಯ ಮೂರು: ಅರಮನೆ

(ಇದು ಬೇರೊಂದು ಅರಮನೆ. ಅರಮನೆಯ ಬಾಲ್ಕನಿಯಲ್ಲಿ (ಮೇಜಿನ ಮೇಲೆ ಕುರ್ಚಿ ಇರಿಸಿ ಮಾಡಬಹುದು) ರಾಜಕುಮಾರಿ ಕುಳಿತುಕೊಂಡು ಹಾಡು ಗುಣುಗುಣಿಸುತ್ತಿದ್ದಾಳೆ. ಮುದುಕಿ ಮತ್ತು ಅವನ ಮಗನ ಪ್ರವೇಶ. ಸಂಭ್ರಮದಿಂದ ನೋಡುತ್ತಾರೆ. ಮುದುಕಿ ಅವನ ಕಿವಿಯಲ್ಲಿ  ಮಾತಾಡಿ ಮೆಲ್ಲನೆ ನಿರ್ಗಮಿಸುತ್ತಾಳೆ)

ಮಗ: (ಸಿನೀಮೀಯವಾದ ರೀತಿಯಲ್ಲಿ ರಾಜಕುಮಾರಿಯ ಕಡೆಗೆ ಕೈ ಚಾಚಿ)
ಓ ನನ್ನ ಚೆಲುವೆ ಬಾರೆ ಬಳಿಗೆ ನನ್ನ ಒಲವೆ

(ರಾಜ ಕುಮಾರಿ ಅವನ ಕಡೆಗೆ ತಿರುಗುತ್ತಾಳೆ. ಅವನು ಪುನ: ಹಾಡುತ್ತಾನೆ)
ಓ ನನ್ನ ಚೆಲುವೆ ಬಾರೆ ಬಳಿಗೆ ನನ್ನ ಒಲವೆ

(ರಾಜಕುಮಾರಿ ಅವನ ಹಾಡಿನ ದನಿಗೆ ಮೋಹಗೊಂಡು ಕೆಳಗಿಳಿದು ಬರುತ್ತಾಳೆ)

ರಾಕು: ಯಾರು ನೀನು ಸುಂದರ ತರುಣ?

ಮಗ: ನಾನು ಪುಷ್ಪನಗರದ ಯುವರಾಜ.

ರಾಕು: ಪುಷ್ಪನಗರದ ಯುವರಾಜ! ನಿನ್ನ ಬಗ್ಗೆ ನಾನು ಬಹಳ ಕೇಳಿದ್ದೇನೆ. ನಿನ್ನ  ನಡೆನುಡಿಯ ಚೆಂದದ ಬಗ್ಗೆ,  ನಿನ್ನ ದನಿಯ ಇಂಪಿನ ಬಗ್ಗೆ  ಕೇಳಿದ್ದೇನೆ ,  ನಿನ್ನ ಕವಿತೆಗಳ ಬಗ್ಗೆ  ಬಹಳ ಕೇಳಿದ್ದೇನೆ. ಒಂದು ಕವಿತೆಯನ್ನು ಹಾಡುವೆಯ?

ಮಗ: ಬಿಸಿಲು ಬೆಳದಿಂಗಳಾಗಿ ಹಬ್ಬಿದೆ ನೋಡು
ಅದು ಬೆಳದಿಂಗಳಲ್ಲ ನಿನ್ನ ಮುಖದ ಬೆಳಕು
ಕೋಗಿಲೆ ಕಾಜಾಣಗಳು ಹಾಡುತಿವೆ ನೋಡು
ನಿನ್ನದೇ ದನಿಯಲ್ಲಿ ನಿನ್ನಿಂದ ಮಾತು ಕಲಿತು

ರಾಕು: ಅಹ, ಚೆನ್ನಾಗಿದೆ! ಇದು ಕವಿತೆಯೆ ಅಥವಾ ಬರಿ ಒಂದು ಪದ್ಯವೆ?

ಮಗ: ಎರಡೂ ಹೌದು ರಾಜಕುಮಾರಿ.

ರಾಕು:  ಕವಿತೆ ಮತ್ತು ಪದ್ಯ ಎರಡೂ ಒಂದರಲ್ಲೆ? ನಿಜಕ್ಕೂ ಅದ್ಭುತ! ಬಹಳ ಚೆನ್ನಾಗಿದೆ! ನಾನು ನಿನ್ನನ್ನೇ ಮದುವೆಯಾಗುತ್ತೇನೆ.

ಮಗ: ಯಾವಾಗ ಚೆಲುವೆ, ನನ್ನ ಒಲವೆ?

ರಾಕು: ಅವಸರವಿದೆಯೆ ರಾಜಕುಮಾರ?

ಮಗ: ಇಲ್ಲ . ನಾಳೆ ಆದೀತು.

ರಾಕು: (ತುಸು ಚಿಂತಿಸಿ) ಆಗಲಿ ನಾಳೆ.

ಮಗ: ಎಲ್ಲಿ?

ರಾಕು: (ಪುನ: ತುಸು ಚಿಂತಿಸಿ) ಬೆಟ್ಟದ ಮೇಲೆ ನನಗಾಗಿ ನಿರ್ಮಿಸಿದ ಪುಟ್ಟ ಅರಮನೆಯೊಂದಿದೆ. ಅದರ ಮುಂದೆ ದೇವಿಯ ಗುಡಿಯಿದೆ. ನಾಳೆ ಬೆಳಿಗ್ಗೆ  ಸೂರ್ಯ ಇಷ್ಟು  ಮೇಲೆ (ಬಾನಿಗೆ ಬೊಟ್ಟುಮಾಡಿ) ಬಂದಾಗ ಅಲ್ಲಿಗೆ ಬಾ. ದೇವಿಯ ಮುಂದೆ ನಮ್ಮ ಮದುವೆ.

ಮಗ: ಆಗಲಿ ಬರುತ್ತೇನೆ ಚೆಲುವೆ.

ಫೇಡ್ ಔಟ್

ದೃಶ್ಯ ನಾಲ್ಕು: ಅರಮನೆ

(ಬಲಗಡೆಗೆ ರಾಜಕುಮಾರಿಯ ಅರಮನೆ.  ರಾಜಕುಮಾರಿ ಬಾಲ್ಕನಿಯಲ್ಲಿದ್ದಾಳೆ. ಎಡಗಡೆಗೆ ಒಂದು ಚಿಕ್ಕ ಕೊಳ. ಕೊಳದ ಬಳಿ ನಾಯಿಮರಿ  ಆಗಾಗ ನೀರಿನಲ್ಲಿ ಮುಖ ನೋಡುತ್ತಾ ಬಹಳ ಬೇಸರದಿಂದ ಕುಳಿತಿದೆ. ಹತ್ತಿರದಲ್ಲಿ ತುಸು ಎತ್ತರದಲ್ಲಿ  ಮೋಟು ಮರದ ಮೇಲೆ ಒಂದು ಮಿಂಚುಳ್ಳಿ ಕುಳಿತಿದೆ)

ಮಿಂ: ಯುವರಾಜ, ನೀನು ಹೀಗೆ ದು:ಖಿಸುತ್ತಾ ಕುಳಿತರೆ ಏನು ಪ್ರಯೊಜನ? ನಾಯಿ ಮರಿಯಾಗಿಯೆ ಇರುತ್ತಿ ಅಷ್ಟೆ.

(ಕೆಳಗಿನ ಸಂಭಾಷಣೆಯಲ್ಲಿ ನಾಯಿಮರಿಯ ಉತ್ತರ ಮಾತಿನಂತಿರುವ ಬೊಗಳಿಕೆಯ ರೂಪದಲ್ಲಿ ಇರುತ್ತದೆ)

ನಾಯಿಮರಿ: (ಬೇಸರದಲ್ಲಿ) ನಾನು ಏನು ಮಾಡಲಿ? ನಾಯಿಮರಿಯಾಗಿಬಿಟ್ಟೆ.

ಮಿಂಚುಳ್ಳಿ: ಅರ್ಥವಾಯಿತು. ನಂಗೆ ಗೊತ್ತು ನಿಂಗೆ ಯಾರದಾದರೂ ಸಹಾಯ ಬೇಕು. ಅಲ್ವ?

ನಾಯಿಮರಿ: ಹೌದು.

ಮಿಂಚುಳ್ಳಿ; ನಾನು ಬರೀ ಮಿಂಚುಳ್ಳಿ. ಆದರೆ ನನ್ನಿಂದಾಗುವ ಸಹಾಯವನ್ನು ಮಾಡುವೆ.

ನಾಯಿಮರಿ: ಆಗಲಿ.

ಮಿಂಚುಳ್ಳಿ: ನೋಡು. ಈಗ ಆ ಮಂತ್ರವಾದಿನಿಯ ಮಗ ಬರುತ್ತಾನೆ. ಅವನ ತಾಯಿ ಹೇಳಿದ ಮಾತುಗಳನ್ನು ಆಡುತ್ತಾನೆ ಆದರೆ ಅವನ ಧ್ವನಿ ನಿನ್ನದು, ಅಲ್ವ?

ನಾಯಿಮರಿ: ಹೌದು.

ಮಿಂಚುಳ್ಳಿ: ನಾನು ಆ ಧ್ವನಿಯನ್ನು ಗಾಳಿಯಲ್ಲಿ ಹಿಡಿದು ನಿನ್ನ ಗಂಟಲೊಳಗೆ ಹಾಕುತ್ತೇನೆ.

ನಾಯಿಮರಿ: (ತುಂಬಾ ಸಂತೋಷದಿಂದ)ಥ್ಯಾಂಕ್ಸ್. ತುಂಬಾ ಥ್ಯಾಂಕ್ಸ್.

(ಮುದುಕಿಯ ಮಗ ಬರುತ್ತಾನೆ. ರಾಜಕುಮಾರಿಯನ್ನು ನೋಡಿ ಕೈಚಾಚಿ)

ಮಗ: ಗಗನದಲ್ಲಿ ಹೊಳೆವ ನನ್ನ ಬಂಗಾರ ಕೆಳಗಿಳಿದು ಬಾ ನನ್ನ ಸಿಂಗಾರ

(ಮಿಂಚುಳ್ಳಿ ಕತ್ತು ಉದ್ದ ಮಾಡಿ ಅವನ ಮಾತನ್ನು  ಹಿಡಿದುಕೊಳ್ಳುತ್ತದೆ)

ರಾಕು: ಇಷ್ಟು ಬೇಗನೆ ಯಾಕೆ ಬಂದೆ? ಇನ್ನೂ ಸರಿಯಾಗಿ ಬೆಳಕಾಗಿಲ್ಲ. ದೇವಿಯ ಗುಡಿಯ ಬಾಗಿಲು ತೆರೆಯಲು ಇನ್ನೂ ಹೊತ್ತಿದೆ. ನೀನು ಗುಡಿಗೆ ಬಾ ಅಂದೆನಲ್ಲಾ , ಇಲ್ಲಿಗೇಕೆ ಬಂದೆ?

ಮಗ: ಜೊತೆಯಲ್ಲಿ  ಹೋಗೋಣ ನನ್ನ ಬಂಗಾರ.

ರಾಕು: ಜೊತೆಯಲ್ಲಿ ಹೋಗುವುದು ಮದುವೆ ಆದ ಮೇಲೆ. ಹೋಗು ಗುಡಿಯ ಬಾಗಿಲಲ್ಲಿ ಕಾಯು. ನನಗೆ ಹೊರಡಲು ಸ್ವಲ್ಪ ಹೊತ್ತು ಬೇಕು.

(ಮಗ ಆನಂದದಿಂದ  ಅವನು ಈಗ ಹಾಡಿದ ಹಾಡು ಗುಣುಗುಣಿಸುತ್ತಾ ನಲಿಯುತ್ತಾ ಹೋಗುತ್ತಾನೆ)

ಮಿಂಚುಳ್ಳಿ: (ನಾಯಿ ಮರಿಯೊಡನೆ) ಬಾಯಿ ತೆರಿ. (ನಾಯಿಮರಿಯ ತೆರೆದ ಬಾಯಿಯೊಳಗೆ ಮಾತನ್ನು ತುರುಕುತ್ತದೆ. ನಾಯಿಮರಿಯ ಬಾಯಿಂದ “ಗಗನದಲ್ಲಿ ಹೊಳೆವ ನನ್ನ ಬಂಗಾರ ಕೆಳಗಿಳಿದು ಬಾ ನನ್ನ ಸಿಂಗಾರ”  ಎಂಬ ಮಾತು ಹೊರಬರುತ್ತದೆ. ನಾಯಿಮರಿ ಸಂತೋಷದಿಂದ ಕುಣಿಯುತ್ತದೆ. ಆದರೆ ಬೇಸರದಿಂದ ತಟ್ಟನೆ )

ಯುವ: ಇದರಿಂದ ನನಗೆ ಏನು ಪ್ರಯೊಜನ? ನಾನು ಮನುಷ್ಯನಾಗದೆ ಮನುಷ್ಯನಂತೆ ಮಾತಾಡುವ ನಾಯಿ ಮಾತ್ರ ಆಗಿದ್ದೇನೆ.

ಮಿಂ: ನಿನ್ನ ಧ್ವನಿ ಸಿಕ್ಕಿತಲ್ಲ? ಇನ್ನು ಆ ಮಂತ್ರವಾದಿನಿಯ ಮಂತ್ರ ಶಕ್ತಿಯನ್ನು ಮುರಿಯೊಣ ಬಾ. (ಅಷ್ಟರಲ್ಲಿ ಇಬ್ಬರು ಸೈನಿಕರು ಆ ದಾರಿಯಾಗಿ ಬರುತ್ತಾರೆ) ಆ ಮಂತ್ರವಾದಿನಿಯ ಮಗ ಅಲ್ಲಿಗೆ ತಲಪುವ ಮೊದಲೇ ನಾವು ಅಲ್ಲಿಗೆ ತಲಪಬೇಕು. ರಾಜಕುಮಾರಿಗೆ ನಾಯಿಮರಿ ಅಂದ್ರೆ ಪ್ರಾಣ. ನಿನ್ನನ್ನು ಕಂಡದ್ದೇ ಅವಳು ನಿನ್ನನ್ನು ಎತ್ತಿ ಮುದ್ದಾಡುತ್ತಾಳೆ. ಆ ಕೂಡಲೇ ನೀನು ಮೊದಲಿನಂತೆ ರಾಜಕುಮಾರನಾಗುತ್ತಿ!  ತಾಳು. ಈ ಸೈನಿಕರು ಎಲ್ಲಿಗೆ ಹೊರಟಿದ್ದಾರೆ ಎಂದು ತಿಳಿದುಕೊಳ್ಳೋಣ.

(ಸೈನಿಕರು ನಾಯಿಮರಿಯನ್ನು ಬೆದರಿಸುತ್ತಾರೆ. ಅದು ಬೆದರಿ ಮರೆಯಲ್ಲಿ  ಕುಳಿತುಕೊಳ್ಳುತ್ತದೆ. ಮಿಂಚುಳ್ಳಿ ನಾಯಿ ಮರಿಯ ಹಿಂದುಗಡೆ ಕುಳಿತುಕೊಳ್ಳುತ್ತದೆ.)

ಸೈನಿ೧: ನಮ್ಮ ಕವಿ ರಾಜಕುಮಾರ ಈ ದೇಶದ ರಾಜಕುಮಾರಿ ಒಬ್ಬರನ್ನೊಬ್ಬರು ಯಾವಾಗ ಎಲ್ಲಿ ಮತ್ತು ಹೇಗೆ ಭೇಟಿಯಾದರು ಎಂದು ನಿನಗೆ ಗೊತ್ತಿದೆಯೆ?

ಸೈನಿ೨: ಪುಷ್ಪನಗರ ಮತ್ತು  ಶ್ರೀಗಂಧನಗರದ ನಡುವಿನ ಕಾಡಿನಲ್ಲಿರುವ ಕಲ್ಯಾಣಿಯ ದಡದಲ್ಲಿ ಭೇಟಿಯಾದರಂತೆ. ರಾಜಕುಮಾರಿ ಮತ್ತು ಸಖಿಯರು ಓಡಿ ಆಡಿ ಸುಸ್ತಾಗಿ ನಿದ್ದೆ ಹೋಗಿದ್ದರಂತೆ. ನಮ್ಮ ಯುವರಾಜ ತಿರುಗಾಡುತ್ತಾ ಅಲ್ಲಿಗೆ ಬಂದನಂತೆ. ನಿದ್ರಿಸುವ ರಾಜಕುಮಾರಿ ಎಚ್ಚರಗೊಂಡು ಯುವರಾಜನನ್ನು ಕಂಡಳಂತೆ. ಯುವರಾಜನ ಧ್ವನಿಯನ್ನು ಕೇಳಿದ್ದೇ ತಡ, ರಾಜಕುಮಾರಿ ಅವನಲ್ಲಿ ಅನುರಕ್ತಳಾದಳಂತೆ.

ಮಿಂ: (ನಾಯಿಮರಿಯೊಡನೆ) ಸುಮ್ಸುಮ್ನೇ ಕತೆ ಕಟ್ಟುತ್ತಿದ್ದಾರೆ. ಅಲ್ವ?

ಯುವ: ಹೂಂ. ಅವರ ಮುಖ್ಯ ಕೆಲಸವೇ ಅದು!

ಸೈ೨: ಅಹ, ಆ ರಾಜಕುಮಾರನಿಗಿದ್ದಂಥ ದನಿ ನಂಗೂ ಇದ್ದಿದ್ದರೆ?

ಸೈ೧: ಕೇಳಿದ್ದೀಯ ನೀನು ರಾಜಕುಮಾರನ ದನಿಯನ್ನು?

ಸೈ೨: ಕೇಳಿಲ್ಲ. ಬೇರೆಯವರು ಹೇಳುವುದನ್ನು ಕೇಳಿದ್ದೇನೆ.

ಸೈ೧: ಬರೀ ದನಿಯಿಂದ  ಏನು ಪ್ರಯೊಜನ? ರಾಜ ಅಥವಾ ಯುವರಾಜ ಆಗಿದ್ದರೆ ಮಾತ್ರ ಆ ದನಿಯಿಂದ ಉಪಯೊಗ.

ಸೈ೨: ಏನೂ ಉಪಯೊಗ ಇಲ್ಲಾಂತೀಯ?

ಸೈ೨: ಏನು ಉಪಯೊಗ? ರಾಜ್ಯ ಆಳೋಕ್ಕಾಗುತ್ತಾ? ಹೆಚ್ಚೆಂದ್ರೆ ಹೆಂಡತಿ ಮಕ್ಕಳನ್ನು ಬಯ್ಯಬಹುದು. (ನಕ್ಕು) ಉದಾಹರಣೆಗೆ, ನೋಡು, ನನ್ನ ಧ್ವನಿಗೆ ಏನಾಗಿದೆ?

ಸೈ೨: ನಿನ್ನ ದನಿ ಕುದುರೆಯ ಧ್ವನಿಯ ಹಾಗಿದೆ. (ನಗುತ್ತಾನೆ)

ಸೈ೧: ಅದು ಒಳ್ಳೆಯ ದನಿಯೆ ಸರಿ. ಆದರೆ ನಿನ್ನ ದನಿ ನೋಡು, ಅಲ್ಲಿ ಕುಳಿತಿದೆಯಲ್ಲಾ ಬೀದಿನಾಯಿ. ಅದರ ಧ್ವನಿಯಹಾಗಿದೆ.

ಸೈ೨: (ನಾಯಿಯನ್ನು ನೋಡಿ ಅಣಕದಲ್ಲಿ ಬೊಗಳುತ್ತಾನೆ. ನಾಯಿ “ಗಗನದಲ್ಲಿ ಹೊಳೆವ ನನ್ನ ಬಂಗಾರ ಕೆಳಗಿಳಿದು ಬಾ ನನ್ನ ಸಿಂಗಾರ” ಎನ್ನುತ್ತದೆ. ಅದನ್ನು ಕೇಳಿದ ಸೈನಿಕರಿಬ್ಬರೂ ಸ್ಮ ತಿಹೀನರಾಗಿ ಕೆಳಗುರುಳುತ್ತಾರೆ)

ಮಿಂ: (ನಕ್ಕು) ಸೈನಿಕರೆಂದರೆ ಇವರು! ಎಂಥ ಧೈರ್ಯ! (ನಗುತ್ತದೆ)

ಯುವ: ಇವರು ಬಹುಶ: ನನ್ನನ್ನು ಹುಡುಕಿಕೊಂಡು ಅಲೆಯುತ್ತಿದ್ದಾರೆ.

ಮಿಂ: ಓಡು ದೇವಿ ಬೆಟ್ಟದ ತುದಿಗೆ! ನೀನು ತಲಪುವ ಮೊದಲೇ ನಾನು ಅಲ್ಲಿರ‍್ತೇನೆ.

ಫೇಡ್ ಔಟ್

ದೃಶ್ಯ ಐದು: ದೇವಿಯ ಗುಡಿ

(ಗುಡಿಯ ಮುಂದೆ ಮುದುಕಿಯ ಮಗ ಕಾತರದಿಂದ ಕಾಯುತ್ತಿದ್ದಾನೆ. ಮಿಂಚುಳ್ಳಿ ತುಸು ದೂರ ಒಂದು ಬಂಡೆಯ ಮೇಲೆ ಕುಳಿತಿದೆ. ಬಂಡೆಯ ಕೆಳಗೆ ನಾಯಿಮರಿ ಮಲಗಿದೆ. ಇಬ್ಬರು ಸೈನಿಕನ ಜೊತೆಯಲ್ಲಿ ರಾಜಕುಮಾರಿ ಬರುತ್ತಾಳೆ. ನಾಯಿಮರಿಯನ್ನು ನೋಡಿ “ಅಹಾ ಎಷ್ಟು ಚೆಂದದ ನಾಯಿಮರಿ”ಎಂದು ಎತ್ತಿ  ಅದರ ಮೂತಿಯನ್ನು ಮುದ್ದಿಸುತ್ತಾಳೆ. ಒಂದು ಕ್ಷಣ ರಂಗದ ಮೇಲಿನ ಬೆಳಕು ಆರುತ್ತದೆ. ಬೆಳಕು ಬಂದಾಗ ನಾಯಿಮರಿಯಿದ್ದ ಜಾಗದಲ್ಲಿ ಯುವರಾಜನಿದ್ದಾನೆ. ರಾಜಕುಮಾರಿ ಒಮ್ಮೆ ಆ ಕಡೆ ನಿಂತಿರುವವ (ಮುದಿಯ ಮಗ)ನನ್ನು ಮತ್ತು ಈ ಹೊಸಬ(ಯುವರಾಜ)ನನ್ನು ನೋಡಿ ಬೆರಗಾಗುತ್ತಾಳೆ. ಯುವರಾಜ ಮನವಾಗಿ ನಿಂತಿದ್ದಾನೆ)

ರಾಕು: (ಮುದುಕಿಯ ಮಗನೊಡನೆ) ಇದುಯಾರು?

ಮಗ: ಅದು ನಾಯಿ. (ಗೊಗ್ಗರು ದ್ವನಿ)

ರಾಕು: (ಯುವರಾಜನ ಮೈಮುಟ್ಟಿ) ಇದು ನಾಯಿ ಆಗಿತ್ತು ನಿಜ. ಆದರೆ ಈಗಲ್ಲ.

ಯುವ: ನಿಜ ರಾಜಕುಮಾರಿ ನಾನು ಪುಷ್ಪನಗರಿಯ ರಾಜಕುಮಾರ. ಇವನು ಕಾಡಿನಲ್ಲಿರುವ ಮಂತ್ರವಾದಿನಿಯ ಮಗ. ಅವಳು ನನ್ನ ಧ್ವನಿಯನ್ನು ಇವನಿಗೆ ಕೊಟ್ಟು  ನನ್ನನ್ನ್ನ್ನು ನಾಯಿ ಮಾಡಿದಳು. ಅಲ್ಲಿ ನೋಡು ಆ ಮಿಂಚುಳ್ಳಿಯ ಸಹಾಯದಿಂದ ನಾನು ಮತ್ತೆ ರಾಜಕುಮಾರನಾಗಿದ್ದೇನೆ.

ಮಿಂ: ಗಗನದಲ್ಲಿ ಹೊಳೆವ ನನ್ನ ಬಂಗಾರ ಕೆಳಗಿಳಿದು ಬಾ ನನ್ನ ಸಿಂಗಾರ

(ಮಿಂಚುಳ್ಳಿಯ ಹಾಡು ಕೇಳಿ ರಾಜಕುಮಾರಿ ಮತ್ತು ಯುವರಾಜ ನಗುತ್ತಾರೆ)

ರಾಕು: ಹಾ ರಾಜಕುಮಾರ. (ಅವನ ಕೈ ಹಿಡಿದುಕೊಂಡು) ಎಷ್ಟು ಕಾಲದಿಂದ ನಿನಗಾಗಿ ನಾನು ಕಾಯುತ್ತಿದ್ದೆ! ಬಾ. ಗುಡಿಯಲ್ಲಿ ನಮ್ಮ ಮದುವೆಗೆ ಎಲ್ಲ ಸಿದ್ಧವಾಗಿದೆ. (ಸೈನಿಕರ ಕಡೆಗೆ ತಿರುಗಿ) ಈ ವಂಚಕನನ್ನು ಬಂಧಿಸಿ ಸೆರೆಮನೆಯಲ್ಲಿ ಹಾಕಿ.

ಯುವ: ಬೇಡ ರಾಜಕುಮಾರಿ. ಅವನದೇನೂ ತಪ್ಪಿಲ್ಲ. ತಪ್ಪೆಲ್ಲ ಅವನ ತಾಯಿ ಆ ಮಾಟಗಾತಿಯದು.

ಮಿಂ: ಹೌದು ಅವಳೇ. ಅವಳು ದೊಡ್ಡ ಮಾಟಗಾತಿ!

ರಾಕು: ಹಾಗಾದರೆ ಏನು ಮಾಡೋಣ? (ಯೊಚಿಸಿ)ಇವನ ಗುಣ ಹೇಗೆ?

ಯುವ: ಗುಣ ಅಷ್ಟೇನೂ ಕೆಟ್ಟದಲ್ಲ ಅಂತನಿಸುತ್ತೆ ರಾಜಕುಮಾರಿ. ಧ್ವನಿ ಮಾತ್ರ ಗೊಗ್ಗರಾಗಿದೆ.

ರಾಕು: ಹಾಗಾದರೆ ಏನು ಶಿಕ್ಷೆ ಕೊಡೋಣ ಇವನಿಗೆ?

ಯುವ: ನಿನಗೆ ತೋರಿದಂತೆ, ಸೂಕ್ತವಾದ ಶಿಕ್ಷೆಯನ್ನು ನೀಡು ರಾಜಕುಮಾರಿ.

ರಾಕು: (ತುಸು ಚಿಂತಿಸಿ) ನನ್ನ ಪ್ರಧಾನ ಸೇವಕಿಗೆ ಇವನನ್ನು ಕೊಟ್ಟು ಮದುವೆ ಮಾಡೋಣ.

ಮಿಂ: ನಿಜ. ಅದು ಅವನಿಗೆ ಸರಿಯಾದ ಶಿಕ್ಷೆ!

ಯುವ: (ನಕ್ಕು) ಅದು ಸರಿಯಾದ ಶಿಕ್ಷೆ! ಇವನನ್ನು ಅವಳಿಗೆ ಕೊಟ್ಟು ಮದುವೆ ಮಾಡಿದರೆ, ಮದುವೆಗೆ ಮದುವೆಯೂ ಆಯಿತು ಶಿಕ್ಷೆಗೆ ಶಿಕ್ಷೆಯೂ ಆಯಿತು.

ರಾಕು: ನಾವು ಅರಮನೆಗೆ ಹೋಗುವ ವರೆಗೆ ಸೆರೆಮನೆಯಲ್ಲಿ ಇರಲಿ, ಅವನ ತಾಯಿಯನ್ನು ಹುಡುಕಿ. ನಿಜವಾದ ಶಿಕ್ಷೆ ಅವಳಿಗೆ ಸಿಗಬೇಕು. ಅಲ್ವ ರಾಜಕುಮಾರ?

ಯುವ: ಹೌದು ರಾಜಕುಮಾರಿ.

ರಾಕು: (ಚಪ್ಪಾಳೆ ಬಡಿಯುತ್ತಾಳೆ. ಇಬ್ಬರು ಸೈನಿಕರು ಬರುತ್ತಾರೆ) ಈತನನ್ನು  ಸೆರೆಮನೆಗೆ ಹಾಕಿ. ತಿನ್ನಲು ಏನೂ ಕೊಡಬೇಡಿ. ನಾವು ಬರುವ ವರೆಗೆ ಸೆರೆಮನೆಯ ರುಚಿ ನೋಡಲಿ. (ಯುವರಾಜನೊಡನೆ) ನಡಿ ರಾಜಕುಮಾರ ಗುಡಿಯೊಳಗೆ. (ಮಂಗಳ ವಾದ್ಯಾರಂಭ)

ಫೇಡ್ ಔಟ್