ಪಾತ್ರಗಳು:
ಸಚಿವ
ಅರಸ (ಗೋಗೊನ ತಂದೆ)
ಇಬ್ಬರು ರಾಣಿಯರು (ತುಂಬಿ ಮತ್ತು ನಿಂಬಿ)
ಹತ್ತು ವರ್ಷದ ಹುಡುಗ ಮತ್ತು ಇಪ್ಪತ್ತು ವರ್ಷದ ತರುಣ-(ಗೋಗೊ)
ಹತ್ತು ವರ್ಷದ ಹುಡುಗಿ ಮತ್ತು ಇಪ್ಪತ್ತು ವರ್ಷದ ತರುಣಿ- (ಓಯೊ)
ದ್ವಾರಪಾಲಕ/ಸೇವಕ-ಸಿಂಬು
ಇಬ್ಬರು ಕಥೆ ಹೇಳುವ ಹೆಂಗಸರು
ನಾಲ್ವರು ಕಥೆ ಕೇಳುವ ಹೆಂಗಸರು
(ಗೋಗೊ, ಹತ್ತು ವರ್ಷದ ಹುಡುಗನೇ ಮತ್ತೆ ಇಪ್ಪತ್ತು ವರ್ಷದ ಹುಡುಗನಾಗುತ್ತಾನೆ
ಓಯೊ, ಹತ್ತು ವರ್ಷದ ಹುಡುಗಿಯೆ ಮತ್ತೆ ಇಪ್ಪತ್ತು ವರ್ಷದ ಹುಡುಗಿಯಾಗುತ್ತಾಳೆ)
ದೃಶ್ಯ ಒಂದು: ಹೊಲ
(ಹೊಲದಲ್ಲಿ ದುಡಿಯುತ್ತಿರುವ ಹೆಂಗಸರು ವಿಶ್ರಾಂತಿಯಲ್ಲಿ . ಅರ್ಧ ಚಂದ್ರಾಕೃತಿಯಲ್ಲಿ ಕುಳಿತ ಹೆಂಗಸರ ಎದುರು ಇಬ್ಬರು ಹೆಂಗಸರು ತುಸು ಎತ್ತರದಲ್ಲಿ ಕುಳಿತಿದ್ದಾರೆ. ಅವರು ಹಾಡುವವರು/ಕತೆ ಹೇಳುವವರು. ಕುಳಿತವರಲ್ಲಿ ಒಬ್ಬಳು ಮಾತು ಆರಂಭಿಸುತ್ತಾಳೆ)
ಹೆಂ ೧: ತಡ ಯಾಕೆ? ಶುರು ಮಾಡಿ.
ಕ೧: ಯಾರ ಕಥೆ ಹೇಳಲಿ? ನಮ್ಮಂಥವರ ಕಥೆ ಆದೀತಾ?
ಹೆಂ೨: ನಮ್ಮಂಥವರ ಕಥೆ ಕೇಳಿ ಕೇಳಿ ಸಾಕಾಗಿದೆ. ರಾಜನ ಕಥೆ ಹೇಳಿ.
(ಪದ್ಯರೂಪದಲ್ಲಿ)
ಕ೧: ಇದ್ದನು ಒಬ್ಬ ರಾಜ.
ಕ೨: ಅವನಿಗೆ ಇಬ್ಬರು ಹೆಂಡಿರು.
ಕ೧: ಒಬ್ಬಳ ಹೆಸರು ತುಂಬಿ.
ಕ೨: ಇನ್ನೊಬ್ಬಳ ಹೆಸರು ನಿಂಬಿ.
ಕ೧: ಇಬ್ಬರೂ ಹೆರಲೇ ಇಲ್ಲ.
ಹೆಂ೩: ಇಬ್ಬರೂ ಹೆರ್ಲಿಲ್ವ?
ಹೆಂ೧: ಸುಮ್ನಿರು. ರಾಜನ ಕಥೆಯೆ ಹಾಗೆ. ಸರಿ. ಮುಂದರಿಸಿ
ಕ೧: ಇಬ್ಬರೂ ಹೆರಲೇ ಇಲ್ಲ.
ಕ೨: ದತ್ತಕೆ ತಕ್ಕೊಂಡ ಮೊದಲನೇ ಹುಡುಗ.
ಕ೧: ಹಾವು ಕಚ್ಚಿ ಸತ್ತೇ ಹೋದ
ಕ೨: ದತ್ತಕೆ ತಕ್ಕೊಂಡ ಎರಡನೇ ಹುಡುಗ.
ಕ೧: ಸಿಡುಬು ಬಂದು ಸತ್ತೇ ಹೋದ
ಕ೨:ದತ್ತಕೆ ತಕ್ಕೊಂಡ ಮೂರನೇ ಹುಡುಗ.
ಕ೧: ಮರದಿಂದ ಬಿದ್ದು ಸತ್ತೇ ಹೋದ
(ಹೆಂಗಸರೆಲ್ಲರೂ ತ್ಚು ತ್ಚು ಎಂದು ವಿಷಾದದ ದನಿ ಹೊರಡಿಸುತ್ತಾರೆ)
ಹೆಂ೨: ಆ ಮೇಲೇನಾಯ್ತು?
(ಗದ್ಯ)
ಕ೨: ರಾಜ ಪುನ: ದತ್ತಕ್ಕೆ ಮಗುವನ್ನು ಪಡೆಯಲು ರಾಜ್ಯವಿಡೀ ಸುತ್ತಾಡಿದ. ಯಾರೂ ಅವನಿಗೆ ಮಕ್ಕಳನ್ನು ಕೊಡಲು ಸಿದ್ಧರಿರಲಿಲ್ಲ.
ಕ೧: ಗಾಡಿ ತುಂಬ ಚಿನ್ನ ಕೊಡಲು ರಾಜ ಸಿದ್ಧನಿದ್ದ. ಆದರೂ ಯಾರೂ ಮಕ್ಕಳನ್ನು ಕೊಡಲಿಲ್ಲ. (ಹೆಂಗಸರೆಲ್ಲರೂ “ಪಾಪ!” ಎಂದು ಉದ್ಗರಿಸುತ್ತಾರೆ)
ಕ೨: ರಾಜನಿಗೆ ಮಕ್ಕಳೆಂದರೆ ಎಷ್ಟು ಪ್ರೀತಿ ಗೊತ್ತಾ? ಮಕ್ಕಳನ್ನು ನೋಡಲಿಕ್ಕಾಗಿಯೆ ನಗರದ ಬೀದಿ ಬೀದಿ ಅಲೆಯುತ್ತಿದ್ದ.
ಹೆಂ೩: (ಆಶ್ಚರ್ಯದಿಂದ) ಹೌದಾ? ರಾಜ ಬೀದಿ ಬೀದಿ ಅಲೆಯುತ್ತಿದ್ದನೆ?
ಹೆಂ೨: ನಂಬುವುದು ಕಷ್ಟ ಅಲ್ಲವೆ?
ಹೆಂ೧: ರಾಜರ ಕತೆಗಳಲ್ಲಿ ಇರುವುದನ್ನೆಲ್ಲ ನಂಬಬೇಕು. ಇಲ್ಲದಿದ್ರೆ ಕತೆ ಇಲ್ಲ.
ಕ೧: ಪುಟ್ಟ ಪುಟ್ಟ ಮಕ್ಕಳನ್ನು ಕಾಣುವಾಗ ತನಗಿಂಥ ಒಂದೇ ಒಂದು ಮಗು ಕೂಡ ಇಲ್ಲವಲ್ಲಾ ಎಂದು ಕಣ್ಣೀರಿಳಿಸುತ್ತಿದ್ದ.
ಕ೨: ರಾಜನಿಗೆ ಮಕ್ಕಳನ್ನು ಕೊಟ್ಟರೆ ಮಕ್ಕಳು ಸತ್ತೇಹೋಗುತ್ತಾರೆ ಎಂದು ಜನರು ಭಾವಿಸಿದರು.
ಹೆಂ೨: ಆ ಮೇಲೆ?
(ಪದ್ಯರೂಪದಲ್ಲಿ )
ಕ೧: ಹತ್ತಾರು ವರ್ಷ ಕಳೆದ ಮೇಲೆ.
ಕ೨: ಹೆತ್ತಳು ತುಂಬಿ ಒಂದು ಚೆಂದದ ಮಗುವನು.
ಹೆಂ೩: ಗಂಡೋ ಹೆಣ್ಣೊ?
ಕ೧: ಗಂಡು.
ಕ೨: ಹೆಸರಿಟ್ಟರವನಿಗೆ ಗೋಗೊ ಎಂದು. ಗೋಗೊ ತುಂಬಾ ಚೆಂದದ ಹುಡುಗ.
ಕ೧:ಗೋಗೊ ತುಂಬಾ ಬುದ್ಧಿವಂತ ಹುಡುಗ.
ಕ೨: ಗೋಗೊ ತುಂಬಾ ಧೈರ್ಯದ ಹುಡುಗ
ಕ೧: ರಾಜನ ಸಂತೋಷಕ್ಕೆ ಪಾರವೇ ಇಲ್ಲ.
ಕ೨: ರಾಜ್ಯದ ಜನರಿಗು ಅಚ್ಚು ಮೆಚ್ಚು
ಕ೧: ತುಂಬಿಗೆ ಗೋಗೊ ಪಂಚ ಪ್ರಾಣ
ಕ೨: ನಿಂಬಿಗೆ ಮಾತ್ರ ಹೊಟ್ಟೆಲಿ ಬೆಂಕಿ.
ಕ೧: (ಗದ್ಯ) ಗೋಗೊಗೆ ಹತ್ತು ವರ್ಷ ತುಂಬಿದಾಗ, ಒಂದು ದಿನ ನಿಂಬಿ ತನ್ನ ನಂಬಿಕೆಯ ಸೇವಕನಾದ ದ್ವಾರಪಾಲಕ ಸಿಂಬುವಿಗೆ ಒಂದು ಚೀಲ ಬಂಗಾರದ ನಾಣ್ಯಗಳನ್ನು ಕೊಟ್ಟು , “ಗೋಗೊಗೆ ಕಾಡು ಎಂದರೆ ತುಂಬಾ ಪ್ರೀತಿ. ನೀನು ಅವನನ್ನು ಪುಸಲಾಯಿಸಿ ಕಾಡಿಗೆ ಕರೆದುಕೊಂಡು ಹೋಗಿ ಕೊಂದುಬಿಡು. ಅವನನ್ನು ಕೊಂದದಕ್ಕೆ ಸಾಕ್ಷಿ ತೋರಿಸಬೇಕು. ನಿನಗೆ ಇನ್ನೊಂದು ಚೀಲ ಬಂಗಾರದ ನಾಣ್ಯಗಳನ್ನು ಕೊಡುತ್ತೇನೆ.” ಎಂದಳು. ಸಿಂಬು ಒಪ್ಪ್ಪಿಕೊಂಡು, ಮಧ್ಯಾಹ್ನದ ಹೊತ್ತು ಅರಮನೆಯಲ್ಲಿ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ, ಸಾರಂಗಗಳನ್ನು ತೋರಿಸುತ್ತೇನೆ ಎಂದು ಹೇಳಿ ಗೋಗೊವನ್ನು ಕಾಡಿಗೆ ಕರೆದುಕೊಂಡು ಹೋದ.
ಫೇಡ್ ಔಟ್
ದೃಶ್ಯ ಎರಡು: ಕಾಡು
(ಗೋಗೊ ಹತ್ತು ವರ್ಷದ ಹುಡುಗ. ಜೊತೆಯಲ್ಲಿ ಸಿಂಬು)
ಗೋಗೊ: ಎಲ್ಲಿವೆ ಸಾರಂಗಗಳು?
ಸಿಂಬು: ಇನ್ನು ಸ್ವಲ್ಪ ದೂರ. ಅವುಗಳು ಕಾಡಿನ ಮಧ್ಯೆ ಪೊದೆಗಳಲ್ಲಿ ಅವಿತುಕೊಂಡಿರುತ್ತವೆ. ಸದ್ದು ಮಾಡದೆ ನಡೆಯೊಣ.
(ಸ್ವಲ್ಪ ದೂರ ನಡೆದ ಬಳಿಕ )
ಗೋಗೊ: ಇನ್ನೂ ಎಷ್ಟು ದೂರ ನಡೆಯಬೇಕು? ನಂಗೆ ಕಾಲು ನೋಯುತ್ತಿದೆ.
ಸಿಂಬು: ಕಾಲು ನೋಯುವುದಿದ್ದರೆ, ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಂಡು ಮತ್ತೆ ಹೋಗೋಣ. ಆಗದೆ?
ಗೋಗೊ: ಆಗಲಿ.
(ಆಯಾಸದಿಂದ ಕುಳಿತುಕೊಳ್ಳುತ್ತಾನೆ. ಸಿಂಬು ಕೂಡ ಕುಳಿತುಕೊಳ್ಳುತ್ತಾನೆ. ತುಸು ಹೊತ್ತಿನಲ್ಲಿಯೆ ಗೋಗೋ ಆಯಾಸದಿಂದ ಸಿಂಬುವಿನ ತೊಡೆಯ ಮೇಲೆ ತಲೆಯಿರಿಸಿ ಮಲಗುತ್ತಾನೆ. ಅವನನ್ನು ಕೊಲ್ಲಲು ಕರೆದುಕೊಂಡು ಬಂದಿರುವ ಸಿಂಬುವಿಗೆ ಧರ್ಮಸಂಕಟವುಂಟಾಗುತ್ತದೆ. ಆದರೂ ಚಿನ್ನದ ಆಸೆಯಿಂದ ಹುಡುಗನನ್ನು ಕೆಳಗೆ ಮಲಗಿಸಿ, ಕತ್ತಿ ತೆಗೆದು ಹುಡುಗನನ್ನು ಕೊಲ್ಲಲು ಕತ್ತಿ ಎತ್ತುತ್ತಾನೆ. ಎರಡೆರಡು ಬಾರಿ ಪ್ರಯತ್ನಿಸಿದರೂ ಮನಸ್ಸು ಬರದೆ, ಹುಡುಗನನ್ನು ಅಲ್ಲಿಯೆ ಬಿಟ್ಟು ಸ್ವಲ್ಪ ಮುಂದೆ ಹೋಗಿ ದಾರಿಯಲ್ಲಿ ಸಿಕ್ಕಿದ ಒಂದು ಮೊಲವನ್ನು ಕೊಂದು ಅದರ ರಕ್ತವನ್ನು ತಲೆಗೆ ಸುತ್ತಿದ ರುಮಾಲಿನ ಅಡಿಯಲ್ಲಿ ಅಡಗಿಸಿಟ್ಟುಕೊಂಡಿದ್ದ ಬಿಳಿ ಟವೆಲಿಗೆ ಹಚ್ಚಿ ಮಡಚಿ ಮುಂಡಾಸಿನಡಿಯಲ್ಲಿಟ್ಟುಕೊಳ್ಳುತ್ತಾನೆ)
ಫೇಡ್ ಔಟ್
ದೃಶ್ಯ ಮೂರು: ಕೆಂಪು ಅರಮನೆ
(ನಿಂಬಿ ಆತಂಕದಿಂದ ಸಿಂಬುವಿನ ನಿರೀಕ್ಷೆಯಲ್ಲಿ. ಸಿಂಬುವಿನ ಪ್ರವೇಶ)
ನಿಂಬಿ: ಹೇಳಿದ ಹಾಗೆ ಮಾಡಿದ್ಯಾ?
ಸಿಂಬು: ಹೌದಮ್ಮ ಮಾಡಿದೆ.
ನಿಂಬಿ: ಎಲ್ಲಿದೆ ಕೊಂದ ಕುರುಹು?
ಸಿಂಬು: ಇಲ್ಲಿದೆ. (ರಕ್ತಸಿಕ್ತವಾದ ಬಟ್ಟೆಯನ್ನು ತೋರಿಸುತ್ತಾನೆ. ನಿಂಬಿ ಚಿನ್ನದ ನಾಣ್ಯಗಳ ಚೀಲ ಕೊಡುತ್ತಾಳೆ)
ನಿಂಬಿ: ಈ ವಿಷಯ ಯಾವಾಗಲೂ ರಹಸ್ಯವಾಗಿರಬೇಕು.
ಸಿಂಬು:ಆಗಲಮ್ಮ.
ನಿಂಬಿ: ರಹಸ್ಯ ಬಯಲಾದರೆ, ನಿನಗೆ ಮರಣ ದಂಡನೆ ಖಂಡಿತ. ನಿನ್ನ ವಿಚಾರಣೆ ನಡೆಯುವ ಮೊದಲೇ ನಿನ್ನ ತಲೆಯನ್ನು ನಾನೇ ತೆಗೆಸುತ್ತೇನೆ. ನೆನಪಿರಲಿ.
ಸಿಂಬು: ರಹಸ್ಯ ಯಾವತ್ತೂ ಬಯಲಾಗುವುದಿಲ್ಲ ಅಮ್ಮ.
ನಿಂಬಿ: ಸರಿ. ಹೋಗು.
(ಸಿಂಬುವಿನ ನಿರ್ಗಮನ)
ಫೇಡ್ ಔಟ್
ದೃಶ್ಯ ನಾಲ್ಕು: ಕಾಡು
(ಗೋಗೊ ಎಚ್ಚರಗೊಳ್ಳುತ್ತಾನೆ. ಸಿಂಬುವನ್ನು ಕರೆಯುತ್ತಾನೆ. ಹುಡುಕುತ್ತಾನೆ. ಹತ್ತಿರದಲ್ಲಿದ್ದ ತೋಡಿನ ಬಳಿ ಹೋಗುತ್ತಾನೆ. ಪುನ: ಕರೆಯುತ್ತಾನೆ. ಅಳತೊಡಗುತ್ತಾನೆ. ಆಗ ಒಂದು ಗಂಭಿರವಾದ ಧ್ವನಿ ಕೇಳಿಸುತ್ತದೆ)
ಧ್ವನಿ: ಅಳಬೇಡ. ಓಯೊ ಓಯೊ ಎಂದು ಕೂಗು.
ಗೋಗೊ: ಓಯೊ ಯಾರು?
ಧ್ವನಿ: ಓಯೊ ನದಿಗಳ ರಾಜಕುಮಾರಿ. ಅವಳು ನಿನ್ನನ್ನು ರಕ್ಷಿಸುತ್ತಾಳೆ.
ಗೋಗೊ: ಓಯೊ
(ಹುಡುಗನ ದ್ವನಿ ಕ್ಷೀಣವಾಗಿದೆ)
ಧ್ವನಿ: ಜೋರಾಗಿ ಕೂಗು.
ಗೋಗೊ: ಓಯೊ ಓಯೊ
(ಹತ್ತು ವರ್ಷ ಪ್ರಾಯದ, ಚೆಂದದ ಲಂಬಾಣಿ ಉಡುಪು ಧರಿಸಿದ ಹುಡುಗಿ ಬರುತ್ತಾಳೆ. ಗೋಗೊವನ್ನು ನೋಡಿ ನಕ್ಕು ಬಳಿ ಬಂದು ಕೈಹಿಡಿದುಕೊಂಡು ಬಾ ಎನ್ನುತ್ತಾಳೆ)
ಓಯೊ: ನಿನ್ನ ಹೆಸರೇನು?
ಗೋಗೊ: ಗೋಗೊ
ಓಯೊ: ಬಾ ಹೋಗೋಣ
ಗೋಗೊ: ಎಲ್ಲಿಗೆ?
ಓಯೊ:ಎಲ್ಲಿಗೆ ಹೋಗಬೇಕು ನಿನಗೆ?
ಗೋಗೊ: ಅಮ್ಮನಲ್ಲಿಗೆ.
ಓಯೊ: ಅಮ್ಮನಲ್ಲಿಗೇ. ಬಾ ಹೋಗೋಣ. (ನೀರಿಗಿಳಿಯುತ್ತಾಳೆ)
ಗೋಗೊ: ನೀರಿನಲ್ಲಿ ?(ಭಯ)
ಓಯೊ: ಹೆದರಬೇಡ. ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನದಿಯ ಅಡಿಯಿಂದ ಹೋದರೆ ಬೇಗನೆ ಮುಟ್ಟುತ್ತೇವೆ.
(ಗೋಗೊ ಹೆದರುತ್ತಾ ಓಯೊಳ ಕೈಹಿಡಿದುಕೊಂಡು ನೀರಿಗಿಳಿಯುತ್ತಾನೆ)
ಫೇಡ್ ಔಟ್
ದೃಶ್ಯ ಐದು: ಹಸಿರು ಅರಮನೆ
(ಚಿಕ್ಕ ಕುಟೀರದಂತಿರುವ ಹೂ ಬಳ್ಳಿ ಬಿಳಲುಗಳಿಂದ ಸುಂದರವಾಗಿ ಅಲಂಕರಿಸಿರುವ ಅರಮನೆ)
ಗೋಗೊ: ಇದು ನನ್ನ ಮನೆ ಅಲ್ಲ. ಯಾರ ಮನೆ?
ಓಯೊ: ಇದು ನಮ್ಮ ಮನೆ.
ಗೋಗೊ: ಅಮ್ಮನ ಮನೆಗೆ ಕರೆದುಕೊಂಡು ಹೋಗುತ್ತೇನೆ ಅಂದೆಯಲ್ಲಾ?
ಓಯೊ: ಹೌದು. ಇದು ನನ್ನ ಅಮ್ಮನ ಮನೆ.
ಗೋಗೊ: (ದು:ಖಿಸುತ್ತಾ) ನಾನು ಅಂದುಕೊಂಡೆ ನೀನು ನನ್ನನ್ನು ನನ್ನ ಅಮ್ಮನ ಮನೆಗೆ ಕರೆದುಕೊಂಡು ಹೋಗುತ್ತಿ ಅಂತ.
ಓಯೊ: (ಸಂತೈಸುತ್ತಾ) ನಾನು ಹೇಳಿದ್ದು ಅಮ್ಮನಲ್ಲಿಗೆ ಕರೆದುಕೊಂಡು ಹೋಗುತ್ತೇನೆ ಅಂತ. ನಿನ್ನ ಮನೆಯ ದಾರಿ ನನಗೆ ಗೊತ್ತಿಲ್ಲ. ಚಿಂತಿಸ್ಬೇಡ. ನನ್ನ ಅಮ್ಮ ಕೂಡ ತುಂಬಾ ಒಳ್ಳೆಯವಳು. ನಿನ್ನನ್ನು ನಿನ್ನ ಅಮ್ಮನ ಹಾಗೆಯೆ ನೋಡಿಕೊಳ್ಳುತ್ತಾಳೆ. ಅನಂತರ ನಿನ್ನ ಅಮ್ಮನಲ್ಲಿಗೆ ಹೋಗುವೆಯಂತೆ. ಬಾ.
ಗೋಗೊ: ಯಾವಾಗ?
ಓಯೊ: ಬೇಗನೆ. ನಿನ್ನ ಅಪ್ಪ ಅಮ್ಮ ಯಾರು?
ಗೋಗೊ: ನನ್ನ ಅಪ್ಪ ಪರ್ವತಗಳ ರಾಜ, ನನ್ನ ಅಮ್ಮ ರಾಣಿ. ನಮಮ ಅರಮನೆಯ ಹೆಸರು ಕೆಂಪು ಅರಮನೆ.
ಓಯೊ: ನನ್ನ ಅಪ್ಪನೂ ರಾಜ, ನದಿಗಳ ರಾಜ. ನನ್ನ ಅಮ್ಮನೂ ರಾಣಿ. ನಮ್ಮ ಅರಮನೆಯ (ಕುಟೀರವನ್ನು ಉದ್ದೇಶಿಸಿ) ಹೆಸರು ಹಸಿರು ಅರಮನೆ.
ಗೋಗೊ: ನಿಮ್ಮ ರಾಜ್ಯ ಯಾವುದು? ನಿನ್ನ ಅಪ್ಪ ಅಮ್ಮ ಎಲ್ಲಿದ್ದಾರೆ?
ಓಯೊ: ನದಿಗಳೇ ನಮ್ಮ ರಾಜ್ಯ. ನನ್ನ ಅಪ್ಪ ಅಮ್ಮ ನದಿಗಳ ಸುಖದು:ಖವನ್ನು ವಿಚಾರಿಸಿಕೊಳ್ಳಲು ಹೋಗಿದ್ದಾರೆ. ಒಮ್ಮೆ ಹೋದರೆ ಹತ್ತು ವರ್ಷಗಳ ಕಾಲ ನದಿಗಳಲ್ಲಿ ಸಂಚರಿಸುತ್ತಾರೆ.
ಗೋಗೊ: ಈಗ ಅವರು ಹೋಗಿ ಎಷ್ಟು ವರ್ಷಗಳಾಗಿವೆ?
ಓಯೊ: ಒಂದು ವರ್ಷವಾಗಿದೆ. ಇನ್ನು ಒಂಬತ್ತು ವರ್ಷಗಳಲ್ಲಿ ಬರುತ್ತಾರೆ. ಅವರು ಬಂದ ಮೇಲೆ ನಿನ್ನನ್ನು ನಿನ್ನ ಕೆಂಪು ಅರಮನೆಗೆ ಕರೆದುಕೊಂಡು ಹೋಗುತ್ತಾರೆ.
ಗೋಗೊ: ಇಲ್ಲ. ನಾನು ಈಗಲೇ ಹೋಗಬೇಕು.
ಓಯೊ: ಈಗ ಹೋಗುವುದು ಹೇಗೆ ಗೋಗೊ? ನನಗೆ ದಾರಿ ಗೊತ್ತಿಲ್ಲ. ನಿನಗೆ ಗೊತ್ತಿದೆಯೆ?
ಗೋಗೊ: ಇಲ್ಲ. ನೀನು ನನ್ನನ್ನು ನೀರಿನಡಿಯಿಂದ ಕರೆದುಕೊಂಡು ಬಂದಿರುವೆ.
ಓಯೊ: (ಸಂತೈಸುತ್ತಾ) ಚಿಂತಿಸ್ಬೇಡ ಗೋಗೊ. ನನ್ನ ಅಪ್ಪ ಅಮ್ಮನ ಬಳಿ ಹಾರುವ ಕುದುರೆಯಿದೆ. ಅದಕ್ಕೆ ಗೊತ್ತಿಲ್ಲದ ದಾರಿಯಿಲ್ಲ. ನೀನದರ ಮೇಲೆ ಕೂತ್ಕೊಂಡ್ರಾಯ್ತು. ಅದು ನಿನ್ನನ್ನು ಕೊಂಡ್ಹೋಗಿ ನಿನ್ನ ಅರಮನೆಯಲ್ಲಿ ಇಳಿಸ್ತದೆ.
ಗೋಗೊ: ಆದ್ರೆ ಯಾವಾಗ?
ಓಯೊ: ಅದೆಲ್ಲ ಈಗ ಯೊಚಿಸ್ಬೇಡ. ನಾಳೆ ನಾಳೆ ಅನ್ನುವುದರಲ್ಲಿ ಒಂಬತ್ತು ವರ್ಷ ಆಗಿಬಿಡುತ್ತದೆ ಅಂತ ಅಪ್ಪ ಹೇಳಿದ್ದಾರೆ. ನಿಂಗೀಗ ಹಸಿವಾಗ್ತಿದೆಯೆ?
ಗೋಗೊ: ಹೌದು.
ಓಯೊ: ಕೂತ್ಕೊ.ಹಾಲು ಹಣ್ಣು ಕೊಡ್ತೇನೆ.
(ಒಳ ಹೋಗಿ ಹಾಲು ಹಣ್ಣು ತಂದಿರಿಸುತ್ತಾಳೆ)
ಗೋಗೊ: (ಹಣ್ಣು ತಿನ್ನುತ್ತಾ) ಇಲ್ಲಿ ಬೇರೆ ಯಾರಿದ್ದಾರೆ?
ಓಯೊ: ನನ್ನನ್ನು ನೋಡಿಕೊಳ್ಳಲು ಸೇವಕರಿದ್ದಾರೆ.
ಗೋಗೊ: ನೀನು ಹೇಗೆ ಸಮಯ ಕಳೆಯುತ್ತಿ?
ಓಯೊ: ನಾನು ದಿನವಿಡೀ ಕಾಡಿನಲ್ಲೇ ಇರ್ತೇನೆ. ಕಾಡಿನಲ್ಲಿರುವ ಸಣ್ಣ ಸಣ್ಣ ನದಿಗಳ ಸುಖದು:ಖ ವಿಚಾರಿಸುತ್ತೇನೆ.
ಗೋಗೊ: ಹಸಿವಾದರೆ?
ಓಯೊ: ಹಸಿವಾದರೆ ಕಾಡಿನಲ್ಲಿರುವ ಹಣ್ಣುಗಳನ್ನು ತಿನ್ನುತ್ತೇನೆ. ಬೇಜಾರಾದರೆ ಕಾಡಿನಲ್ಲಿ ಸಾರಂಗಗಳೊಡನೆ, ಕೋಗಿಲೆ ಕಾಜಾಣಗಳೊಡನೆ ಮಾತಾಡುತ್ತೇನೆ.
ಗೋಗೊ: ನನಗೆ ಸಾರಂಗಗಳೆಂದರೆ ತುಂಬಾ ಇಷ್ಟ. ಸಾರಂಗಗಳನ್ನು ತೋರಿಸುತ್ತೇನೆ ಅಂತ ಸಿಂಬು ನನ್ನನ್ನು ಕರೆದುಕೊಂಡು ಬಂದ. (ಅಳುತ್ತಾನೆ)
ಓಯೊ: ಸಿಂಬು ಯಾರು?
ಗೋಗೊ: ಅರಮನೆಯ ಬಾಗಿಲು ಕಾಯುವವನು.
ಓಯೊ: ಬಾ ನಮ್ಮ ಮನೆಯ ಹಿಂದೆಯೆ ಜುಳುಜುಳು ಹರಿಯುವ ತೊರೆಯಿದೆ. ಅಲ್ಲಿಗೆ ಸಾರಂಗಗಳು ನೀರು ಕುಡಿಯಲು ಬರುತ್ತವೆ. ನಿನಗೆ ಸಾರಂಗಗಳೆಂದರೆ ತುಂಬಾ ಇಷ್ಟವೆ?
ಗೋಗೊ: ಹೌದು ತುಂಬಾ ಇಷ್ಟ. ನಾನು ಅವುಗಳನ್ನು ಮುಟ್ಟಬಹುದಾ?
ಓಯೊ: ಬಾ. ನೀನು ಅವುಗಳನ್ನು ಮುಟ್ಟಬಹುದು. ಅಷ್ಟೇ ಅಲ್ಲ; ನೀನು ಅವುಗಳೊಡನೆ ಮಾತಾಡಬಹುದು.
(ಓಯೊ ಗೋಗೊನ ಕೈ ಹಿಡಿದು ಕರೆದೊಯ್ಯುತ್ತಾಳೆ)
ಫೇಡ್ ಔಟ್
ದೃಶ್ಯ ಆರು: ಬಯಲು
(ಕಥೆ ಹೇಳುವ ದೃಶ್ಯ)
ಹೆಂ೧: ಆ ಮೇಲೇನಾಯ್ತು?
ಕ೧: ಗೋಗೋ ಓಯೊ ನೀರಿನಲ್ಲಿ ಆಡಿದರು, ಕಾಡಿನಲ್ಲಿ ಸುತ್ತಾಡಿದರು, ಸಾರಂಗಗಳೊಡನೆ ಮಾತಾಡಿದರು. ಕೋಗಿಲೆ ಕಾಜಾಣಗಳ ಹಾಡನ್ನು ಕೇಳಿದರು, ಕಾಡಿನ ಹಣ್ಣುಗಳನ್ನು ಕೊಯ್ದು ತಿಂದರು, ತೊರೆಯ ನೀರನ್ನು ಕುಡಿದರು. ಅವರಿಗೆ ಕಾಲ ಹೋದದ್ದೇ ತಿಳಿಯಲಿಲ್ಲ.
ಹೆಂ೧: ಗೋಗೊಗೆ ತನ್ನ ತಂದೆ ತಾಯಿ ನೆನಪು ಆಗಲಿಲ್ಲವೆ?
ಕ೨: ಒಮ್ಮೊಮ್ಮೆ ನೆನಪು ಆಗುತ್ತಿತ್ತು. ಒಮ್ಮೊಮ್ಮೆ ಮುಖ ಬಾಡಿಸಿಕೊಂಡು ಕುಳಿತುಕೊಳ್ಳುತ್ತಿದ್ದ. ಆದರೆ ಓಯೊ ಆಡುತ್ತಾ ಮಾತಾಡುತ್ತಾ ಪದ್ಯ ಹೇಳುತ್ತಾ ಅವನನ್ನು ಸಂತೋಷವಾಗಿಡುತ್ತಿದ್ದಳು. ಹಾಗೆಯೆ ಒಂಬತ್ತು ವರ್ಷ ಕಳೆಯಿತು.
ಹೆಂ೧: ಒಂಬತ್ತು ವರ್ಷ!
ಕ೧: ಹೌದು ಒಂಬತ್ತು ವರ್ಷ.
ಹೆಂ೧: ಅದು ತುಂಬಾ ಜಾಸ್ತಿ.
ಕ೨: ಅದೆಲ್ಲಾ ಮಕ್ಕಳಿಗೆ ಗೊತ್ತಾಗಲ್ಲ.
ಕ೧: ನಮ್ಮ ಕಣ್ಣಿಗೆ ಕಾಲ ಕಾಣಿಸೋ ಹಾಗೆ ಅವರ ಕಣ್ಣಿಗೆ ಕಾಣಿಸಲ್ಲ.
ಕ೨: ಗೋಗೊ ಈಗ ಒಬ್ಬ ಸುಂದರ ತರುಣ.
ಕ೧: ಓಯೊ ಈಗ ಒಬ್ಬಳು ಸುಂದರ ತರುಣಿ.
ಕ೨: ಒಂದು ದಿನ ಓಯೊನ ಅಪ್ಪ ಅಮ್ಮ ಬಂದರು. ಗೋಗೋನ ಕಥೆಯನ್ನು ಕೇಳಿ ಅವರಿಗೆ ಬಹಳ ದು:ಖವಾಯಿತು. ಅವನನ್ನು ತಮ್ಮ ಹಾರುವ ಕುದುರೆಯ ಮೇಲೆ ಕುಳ್ಳಿರಿಸಿ ಅವನ ತಾಯಿ ತಂದೆಯ ಬಳಿ ಕಳಿಸಲು ಸಿದ್ಧರಾದರು. ಆದರೆ ಓಯೊ ಗೋಗೊ ಒಬ್ಬನನ್ನೇ ಕಳಿಸಲು ಸಿದ್ಧಳಿಲ್ಲ. ತಾವು ಒಬ್ಬರನ್ನೊಬ್ಬರು ಎಷ್ಟು ಪ್ರೀತಿಸುತ್ತೇವೆ ಎಂದರೆ ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದಳು. ಸರಿ ಅಂತ ಓಯೊಳ ಅಪ್ಪ ಅಮ್ಮ ಸಂತೋಷದಿಂದ ಅವರಿಬ್ಬರ ಮದುವೆ ಮಾಡಿಸಿ ಹಾರುವ ಕುದುರೆಯ ಮೇಲೆ ಕೂತ್ಕೊಳ್ಳಿಸಿ ಗೋಗೊನ ಅರಮನೆಗೆ ಕಳಿಸಿದರು.
ಹೆಂ೧: ಮುಗೀತಾ ಕಥೆ?
ಹೆಂ೨:ಇಷ್ಟು ಬೇಗ?
ಕ೨: ಇಲ್ಲ . ಇನ್ನೂ ಸ್ವಲ್ಪ ಇದೆ.
ಕ೧: ಒಂಬತ್ತು ವರ್ಷ ಗೋಗೋನ ತಾಯಿ ತಂದೆ ಎಂಥಾ ದು:ಖದಲ್ಲಿ ಮುಳುಗಿದ್ದರು ಎಂದರೆ..
ಕ೨: ರಾಜನಿಗೆ ರಾಜ್ಯ ಆಳುವ ಮನಸ್ಸೇ ಇರಲಿಲ್ಲ. ಪ್ರಜೆಗಳೆಲ್ಲ ದು:ಖಿತರಾಗಿದ್ದರು.
ಕ೧: ಗೋಗೊನ ತಾಯಿ ತುಂಬಿ ಶೋಕದಿಂದ ಕಾಯಿಲೆ ಬಿದ್ದು ಹಾಸಿಗೆ ಹಿಡಿದಿದ್ದಳು.
ಹೆಂ೨: ನಿಂಬಿ?
ಕ೨: ಅವಳಿಗೇನು ಧಾಡಿ? ರಾಕ್ಷಸಿ ಕಾಯಿಲೆ ಬೀಳ್ತಾಳಾ?
ಹೆಂ೨: ಆ ಮೇಲೇನಾಯ್ತು?
ಕ೧: ಗೋಗೊ ಮತ್ತು ಓಯೊ ಹಾರುವ ಕುದುರೆಯಲ್ಲಿ ಕುಳಿತು ಕೆಂಪು ಅರಮನೆಗೆ ಹತ್ತಿರ ಇಳಿದರು. ಗೋಗೋ ಓಯೊಳನ್ನು ಒಂದು ಪೊದರಿನ ಹಿಂದೆ ಕುಳ್ಳಿರಿಸಿ ಅರಮನೆಯ ಗೇಟಿನ ಬಳಿ ಬಂದ.
ಫೇಡ್ ಔಟ್
ದೃಶ್ಯ ಏಳು: ಅರಮನೆ
(ಅರಮನೆಯ ದ್ವಾರ. ದ್ವಾರಪಾಲಕ ಸಿಂಬು. ಗೋಗೊ ಅವನನ್ನು ಗಮನಿಸಿಕೊಳ್ಳದೆ ಒಳ ಹೋಗುವುದರಲ್ಲಿದ್ದಾನೆ)
ಸಿಂಬು: ಏಯ, ಯಾರೊ ನೀನು? ಎಲ್ಲಿಗೆ ನುಗ್ಗ್ಗುತ್ತಾ ಇದ್ದಿ?
ಗೋಗೊ: ನುಗ್ಗುತ್ತಿಲ್ಲ. ಮಹಾರಾಜರನ್ನು ಕಾಣಲು ಹೋಗುತ್ತಿದ್ದೇನೆ.
ಸಿಂಬು: ಮಹಾರಾಜರನ್ನು ಕಾಣುವುದು ಅಷ್ಟು ಸುಲಭ ಅಲ್ಲ ಅಂತ ಗೊತ್ತಿಲ್ವ ನಿಂಗೆ?
ಗೋಗೊ: ಗೊತ್ತಿಲ್ಲ. ಆದ್ರೆ ನಾನು ಮಹಾರಾಜರನ್ನು ಕಾಣಲೇ ಬೇಕು.
ಸಿಂಬು: ಆಗುವುದಿಲ್ಲ. ಮಹಾರಾಜರು ನಿದ್ದೆ ಮಾಡುತ್ತಿದ್ದಾರೆ. ನಿಂಗೇನಾದ್ರೂ ಹೇಳುವುದಿದ್ದರೆ ಹೇಳು. ನಾನು ಮಹಾರಾಜರಿಗೆ ತಿಳಿಸುತ್ತೇನೆ.
ಗೋಗೊ: ಇಲ್ಲ . ಮಹಾರಾಜನನ್ನು ನಾನೇ ಕಾಣಬೇಕು. ಮೋಮೊ ಎನ್ನುವ ಹೆಸರಿನವನೊಬ್ಬ ತಮ್ಮನ್ನು ಭೇಟಿಯಾಗಲು ಬಂದಿರುವನೆಂದು ಹೇಳು.
ಸಿಂಬು: ನಂಗೆ ಈಗ ಪುರುಸೊತ್ತಿಲ್ಲ. ನಾಳೆ ಬಾ.
ಗೋಗೊ:ನಾನು ಈಗಲೇ ಮಹಾರಾಜರನ್ನು ಕಾಣಬೇಕು.
ಸಿಂಬು: ಹೋಗ್ತೀಯೊ ಇಲ್ವೊ? ಇನ್ನು ಒಂದು ನಿಮಿಷ ಇಲ್ಲೇ ಇದ್ರೆ ನಿನ್ನ ಕಾಲು ಮುರೀತೇನೆ. ಓಡು! (ಕೋಲು ಎತ್ತಿಕೊಂಡು ಬರುತ್ತಾನೆ. ಅಷ್ಟರಲ್ಲಿ ಓಯೊ ಓಡಿಬಂದು ಸಿಂಬುವಿನ ಕೈಹಿಡಿದುಕೊಳ್ಳುತ್ತಾಳೆ)
ಓಯೊ: ಎಂಥ ರಾಜಸೇವೆಯೊ ನಿನ್ನದು? ಮಹಾರಾಜನನ್ನು ಕಾಣಲು ಬಂದಿರುವ ಒಬ್ಬ ಪ್ರಜೆಯ ಮೇಲೆ ಕೈಮಾಡುತ್ತೀಯ? ನಾಚಿಕೆಯಾಗುವುದಿಲ್ಲವೆ ನಿಂಗೆ? ಹೋಗು ಮಹಾರಾಜರಿಗೆ ಹೇಳು. (ಅಧಿಕಾರವಾಣಿಯಿಂದ ಅವಳು ಆಡಿದ ಮಾತಿನಿಂದ ಸಿಂಬು ಅಪ್ರತಿಭನಾಗುತ್ತಾನೆ. ಆಗಲಿ ಎಂಬಂತೆ ತಲೆಯಾಡಿಸಿಕೊಂಡು ಒಳಹೋಗುವಾಗ ದಾರಿಗೆದುರಾಗಿ ಒಬ್ಬ ಸೇವಕ ಬೊಗಸೆ ತುಂಬಾ ಬಾಳೆಹಣ್ಣನ್ನು ಕದ್ದಿರುವಂತೆ ಅಡಗಿಸಿ ಹಿಡಿದುಕೊಂಡು ತಿನ್ನುತ್ತಾ ಬರುತ್ತಾನೆ. ಸಿಂಬು ಅವನ ಕೈಯಿಂದ ಬಾಳೆಯ ಹಣ್ಣು ಕಿತ್ತು ತಿನ್ನುತ್ತಾನೆ. ಅವರ ಸಂಭಾಷಣೆಯನ್ನು ಗೋಗೊ ಮತ್ತು ಓಯೊ ಕೇಳಿಸಿಕೊಂಡು ಆಶ್ಚರ್ಯಪಡುತ್ತಾರೆ)
ಸಿಂಬು: ರಾಜ ಏನು ಮಾಡುತ್ತಿದ್ದಾನೆ?
ಸೇವ: ಮಲಗಿದ್ದಾನೆ.
ಸಿಂಬು: ಮಲಗಿ ಏನು ಮಾಡುತ್ತಿದ್ದಾನೆ?
ಸೇವ: ಗೊರಕೆ ಹೊಡೆಯುತ್ತಿದ್ದಾನೆ.
ಸಿಂಬು: ಗೊರಕೆ ನಿಲ್ಲುವುದು ಯಾವಾಗ?
ಸೇವ: ಸಾಯುವಾಗ.
ಸಿಂಬು: ಸತ್ತ ಮೇಲೆ?
ಸೇವ: ನಾನೂ ರಾಜ ನೀನೂ ರಾಜ.
(ಇಬ್ಬರೂ ನಗುತ್ತಾರೆ. ನಗುವಿನ ನಡುವೆಯೆ ಸಿಂಬು ಸೇವಕನಿಗೆ ಒದೆಯುತ್ತಾನೆ. ಸೇವಕ ಓಡಿಹೋಗುತ್ತಾನೆ. ಸಿಂಬು ಬಾಳೆ ಹಣ್ಣು ತಿನ್ನ್ನುತ್ತಾ ಗೇಟಿಗೆ ಮರಳಿ)
ಸಿಂಬು: (ಉಪೇಕ್ಷೆಯಿಂದ)ಮಹಾರಾಜರು ನಿದ್ದೆ ಮಾಡುತ್ತಿದ್ದಾರೆ. ಇನ್ನೂ ಎದ್ದಿಲ್ಲ.
(ಅಷ್ಟರಲ್ಲಿ ಒಂದು ಮುದಿನಾಯಿ ಗೋಗೊನನ್ನು ನೋಡಿ ಬಳಿ ಬಂದು ಅವನನ್ನು ಮೂಸಿ ಕುಂಯ್ಗುಟ್ಟುತ್ತಾ ಅವನಿಗೆ ಒತ್ತಿ ಕೊಂಡು ನಿಲ್ಲುತ್ತದೆ)
ಸಿಂಬು: ಏನು ಈ ಮುದಿನಾಯಿಗೆ ನಿನ್ನ ಪರಿಚಯವಿದೆಯೆ?
ಗೋಗೊ: ನಾಯಿಯ ಹತ್ತಿರವೇ ಕೇಳು. (ನಾಯಿಯ ಮೈದಡವಿ, ತನ್ನ ಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಕರವಸ್ತ್ರದಲ್ಲಿ ಸುತ್ತಿ ಅದರ ಬಾಯಲ್ಲಿರಿಸಿ ಅದರ ಕಿವಿಯಲ್ಲಿ ಏನೋ ಹೇಳುತ್ತಾನೆ. ನಾಯಿ ಸರಕ್ಕನೆ ಗೇಟಿನೊಳಗೆ ಓಡಿಹೋಗುತ್ತದೆ. ಸಿಂಬು ಅದನ್ನು ತಡೆಯಲು ಹೋಗಿ ನಿರಾಶನಾಗಿ, ಗೋಗೊನೊಡನೆ)
ಸಿಂಬು: ಏನು ಹೇಳಿದ್ದು ನೀನು ನಾಯಿಯ ಕಿವಿಯಲ್ಲಿ?
ಗೋಗೊ: ನಾನು ಹೇಳಿದ್ದು ಮಹಾರಾಜರ ಹತ್ತಿರ ಹೋಗಿ, ನಿನ್ನ ಕೆಲಸವನ್ನು ನನಗೆ ಕೊಡು ಅಂತ ಹೇಳು ಅಂತ.
ತುಂಬಿ: (ಗೊಂದಲದಲ್ಲಿ) ನಿನಗೆ?
ಗೋಗೊ: ನನಗಲ್ಲ, ನಾಯಿಗೆ.
ಸಿಂಬು: ಏನಂದೆ? (ಗೋಗೊ ಮತ್ತು ಓಯೊರನನ್ನು ಓಡಿಸಿಕೊಂಡು ಹೋಗುತ್ತಾನೆ. ಅವರು ಸಿಗದೆ ತಪ್ಪಿಸಿಕೊಳ್ಳುತ್ತಿರುವಾಗ ಮರಳಿಬರುತ್ತಿರುವ ನಾಯಿಯನ್ನು ಕಂಡು ಅದಕ್ಕೆ ಹೊಡೆಯಲು ಹೋಗುತ್ತಾನೆ. ಗೋಗೊ ಮತ್ತು ಓಯೊ ಅಡಗಿಕೊಳ್ಳುತ್ತಾರೆ. ನಾಯಿಯೂ ಅಡಗಿಕೊಳ್ಳುತ್ತದೆ.)
ಫೇಡ್ ಔಟ್
ದೃಶ್ಯ ಎಂಟು: ಕೆಂಪು ಅರಮನೆ
(ಮಹಾರಾಜ ಮತ್ತು ಸಚಿವ. ಮಹಾರಾಣಿ ತುಂಬಿ ಮತ್ತು ನಿಂಬಿ ಮತ್ತು ದ್ವಾರಪಾಲಕ ಸಿಂಬು)
ರಾಜ: ಉಂಗುರವನ್ನು ನಾಯಿಯ ಬಾಯಿಯಲ್ಲಿಟ್ಟು ಕಳಿಸಿಕೊಟ್ಟವರು ಇನ್ನೂ ಸಿಗಲಿಲ್ವ?
ಸಿಂಬು: ಇಲ್ಲ ಮಹಾಪ್ರಭೂ. ಅವರು ಓಡಿಹೋದರು.
ರಾಜ: ಅವರು ಎಂದರೆ ಯಾರು?
ಸಿಂಬು: ಯಾರೋ ಒಬ್ಬ ಹುಡುಗ ಮತ್ತು ಒಬ್ಬಳು ಹುಡುಗಿ.
ರಾಜ: ಯಾಕೆ ಓಡಿಹೋದರು?
ಸಿಂಬು: ನಾನು ಅವರನ್ನು ಓಡಿಸಿದೆ.
ರಾಜ: ಯಾಕೆ ಓಡಿಸಿದೆ?
ಸಿಂಬು: ಅವರು ನಿದ್ರೆಯಲ್ಲಿರುವ ಮಹಾರಾಜರನ್ನು ಎಬ್ಬಿಸು ಎಂದರು. ಏನು ಕೊಬ್ಬು ಅವರಿಗೆ?
ರಾಜ: ಅವರಿಗೆ ಎಷ್ಟೇ ಕೊಬ್ಬು ಇರಲಿ, ಸಚಿವರೆ, ಅವರನ್ನು ಹುಡುಕಿ ಹಿಡಿಯಲೇ ಬೇಕು.
ಸಚಿವ: ಹುಡುಕಾಟ ಮುಂದರಿದಿದೆ ಮಹಾಪ್ರಭೂ.
(ಗದ್ದಲ ಕೇಳಿಸುತ್ತದೆ. ಗೋಗೊ ಮತ್ತು ಓಯೊರನ್ನು ಬಂಧಿಸಿ ತರುತ್ತಾರೆ)
ರಾಜ: (ಗೋಗೊನೊಡನೆ) ನೀನು ಯಾರು?
ಗೋಗೊ: ಉಂಗುರ ನೋಡಿ ತಿಳಿಯಲಿಲ್ವೇ ಅಪ್ಪಾ? ಅದು ನನ್ನ ಹತ್ತನೇ ಬರ್ತ್ಡೇಯಲ್ಲಿ ನೀವು ಕೊಟ್ಟ ಉಂಗುರ. ನಾನು ಗೋಗೊ, ನಿಮ್ಮ ಗೋಗೊ.
ನಿಂಬಿ: (ಸಂಭ್ರಮಾತಿಶಯದಿಂದ ಓಡಿಬಂದು ತಬ್ಬಿಕೊಂಡು) ಗೋಗೊ.ನನ್ನ ಗೋಗೊ.
ರಾಜ: (ಗೋಗೊವನ್ನು ತಬ್ಬಿಹಿಡಿದುಕೊಂಡು) ತಿಳೀತು ಮಗಾ. ಆದ್ರೆ ಈ ಉಂಗುರ ಕೊಟ್ಟವನು ನೀನೇ ಅಂತ ನನಗೆ ಹೇಗೆ ತಿಳೀಬೇಕು? ನೀನು ಸತ್ತೇ ಹೋಗಿರುವಿ. ಉಂಗುರ ಯಾರಿಗೋ ಸಿಕ್ಕಿದೆ ಅಂದ್ಕೊಂಡೆ. ಗೋಗೊ, ನೀನು ಬದುಕಿರುವಿ ಅಂತ ನನಗೆ ಹೇಗೆ ತಿಳೀಬೇಕು ?
ತುಂಬಿ: ನನ್ನ ಮಗು ಬದುಕಿದೆ. ಸತ್ತಿಲ್ಲ ಎಂಬ ನನ್ನ ನಂಬಿಕೆ ಸತ್ಯವಾಯ್ತು
ರಾಜ: ನಂಗೆ ನಿನ್ನ ಗುರುತು ಸಿಗಲಿಲ್ಲ ಹತ್ತು ವರ್ಷ ಕಳೀತಲ್ಲಾ? ಕಣ್ಣು ಮಂಜಾಗಿದೆ (ಕಣ್ಣೊರಸಿಕೊಳ್ಳುತ್ತಾನೆ) ನೀನು ಇಷ್ಟು ಕಾಲ ಎಲ್ಲಿದ್ದೆ ಮಗಾ? ನೀನು ಕಾಣೆಯಾದದ್ದು ಹೇಗೆ?
ಗೋಗೊ: ಈ ಸಿಂಬುವನ್ನು ಕೇಳಿ ಅಪ್ಪಾ . ಎಲ್ಲಾ ತಿಳಿಯುತ್ತದೆ.
ಸಿಂಬು: (ರಾಜನ ಕಾಲಿಗೆ ಬಿದ್ದು) ನಾನು ಏನೂ ಮಾಡಿಲ್ಲ. ನಿಂಬಿ ಮಹಾರಾಣಿ ಹೇಳಿದ ಹಾಗೆ ನಾನು ಮಾಡಿದೆ… ಮಾಡಲಿಲ್ಲ.
ರಾಜ: (ಆಶ್ಚರ್ಯದಿಂದ) ಮಾಡಿದೆ, ಮಾಡಲಿಲ್ಲ ! ಏನು ಹಾಗೆಂದರೆ?
ಸಿಂಬು: ಗೋಗೊವನ್ನು ಕಾಡಿಗೆ ಕರೆದುಕೊಂಡುಹೋಗಿ ಕೊಂದುಬರಲು ಹೇಳಿದರು. ಕಾಡಿಗೆ ಕರೆದುಕೊಂಡು ಹೋದೆ. ಕೊಲ್ಲಲಿಲ್ಲ. (ನಿಂಬಿ ಓಡಲಣಿಯಾಗುತ್ತಾಳೆ.)
ರಾಜ: ಹಿಡಿಯಿರಿ ಅವಳನ್ನು! ಇಬ್ಬರನ್ನೂ ಸೆರೆಮನೆಯಲ್ಲಿ ಹಾಕಿ. ವಿಚಾರಣೆಯೆಲ್ಲಾ ಆ ಮೇಲೆ. (ಸೈನಿಕರು ನಿಂಬಿಯನ್ನು ಮತ್ತು ಸಿಂಬುವನ್ನು ಹಿಡಿದುಕೊಂಡು ಹೋಗುತ್ತಾರೆ. ಓಯೊವನ್ನು ತೋರಿಸಿ) ಈ ಹುಡುಗಿ ಯಾರು?
ಗೋಗೊ: ಇವಳು ನದಿಗಳ ರಾಜನ ಮಗಳು ಓಯೊ. ಇವಳೇ ಕಾಡಿನಲ್ಲಿದ್ದ ನನ್ನನ್ನು ರಕ್ಷಿಸಿದ್ದು. ಇವಳ ತಾಯಿತಂದೆ ನಿನ್ನೆಯಷ್ಟೇ ಅವರ ದೇಶದ ರಿವಾಜಿನಂತೆ ನಮ್ಮ ಮದುವೆ ನಡೆಸಿದರು.
ರಾಜ: ಬಹಳ ಸಂತೋಷ ಬಹಳ ಸಂತೋಷ.
ತುಂಬಿ: ಎಷ್ಟು ಚೆಂದದ ಹುಡುಗಿ! (ಓಯೊಳ ಬಳಿ ಬಂದು ಅವಳನ್ನು ಬಳಸಿಹಿಡಿದುಕೊಂಡು) ಬಾ ಮಗಳೆ.
ರಾಜ: ಸಚಿವರೆ, ನಾಳೆ ಅರಮನೆಯಲ್ಲಿ ಪರ್ವತ ರಾಜಕುಮಾರ ಗೋಗೊ ಮತ್ತು ನದಿಗಳ ರಾಜಕುಮಾರಿ ಓಯೊ ಇವರಿಗೆ ನಮ್ಮ ರಾಜ್ಯದ ರಿವಾಜಿನಂತೆ ಮತ್ತೆ ಮದುವೆ ನಡೆಯುತ್ತದೆ ಎಂದು ಘೋಷಿಸಿರಿ!
ಸಚಿವ: ಅಪ್ಪಣೆ ಮಹಾಪ್ರಭು.
ಗಂಡು ಧ್ವನಿಗಳು: ಪರ್ವತ ಮಹಾರಾಜರಿಗೆ ಜಯವಾಗಲಿ! ನದಿಗಳ ಮಹಾರಾಜನಿಗೆ ಜಯವಾಗಲಿ!
ಹೆಣ್ಣು ಧ್ವನಿಗಳು: ಪರ್ವತರಾಜಕುಮಾರನಿಗೆ ಜಯವಾಗಲಿ! ನದಿಗಳ ರಾಜಕುಮಾರಿಗೆ ಜಯವಾಗಲಿ!
ಫೇಡ್ ಔಟ್
Leave A Comment