ಪಾತ್ರಗಳು ಮತ್ತು ಪ್ರಾಯ:
ಸಿರಿವಂತ (೬೦)
ಸಿರಿವಂತನ ಪತ್ನಿ (೫೦)
ವ್ಯಕ್ತಿ (೩೦)
ಕೂಲಿಯಾಳು

 

ದೃಶ್ಯ ಒಂದು: ಮನೆ, ಮನೆಯ ಮುಂದೆ ಮರ

(ಸಿರಿವಂತನ ಮನೆ. ಮನೆಯ ಅಂಗಳದಲ್ಲಿ (ರಂಗದ ಎದುರಿನ ಒಂದು ಮೂಲೆಯಲ್ಲಿ) ಒಂದು ದೊಡ್ಡ ಮರ.  ಅದರ ನೆರಳು ಒಂದು ಕಡೆ ಚಾಪೆಯಷ್ಟಗಲ ಬಿದ್ದಿದೆ. ನಡೆದು ಬಳಲಿದ ಸುಮಾರು ಮೂವತ್ತು ವರ್ಷ ಪ್ರಾಯದ ಒಬ್ಬ ವ್ಯಕ್ತಿಯ ಆಗಮನ. ಮರದ ನೆರಳನ್ನು ನೋಡಿ ಸಂತೋಷಪಡುತ್ತಾನೆ. ನೆರಳಿನಲ್ಲಿ  ವಿಶ್ರಾಂತಿ ಪಡೆಯುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಸಿರಿವಂತ ಬರುತ್ತಾನೆ. ಮರದ ನೆರಳಿನಲ್ಲಿ ಮಲಗಿದಾತನನ್ನು ನೋಡಿ ಸಿಡಿಮಿಡಿಗೊಳ್ಳುತ್ತಾನೆ)

ಸಿರಿವಂತ: ಏಯ ಏಯ ಯಾರಯ್ಯ ನೀನು?

ವ್ಯಕ್ತಿ; (ನಿಧಾನವಾಗಿ ಎದ್ದು ಕುಳಿತುಕೊಂಡು) ನಾನು ಒಬ್ಬ ಪ್ರಯಾಣಿಕ.

ಸಿರಿ: ನಿಂಗಿಲ್ಲಿ ಮಲಗಲು ಯಾರು ಅನುಮತಿ ಕೊಟ್ಟೋರು?

ವ್ಯಕ್ತಿ; (ಮೇಲೆ ಕೆಳಗೆ ನೋಡಿ) ಮರ!

ಸಿರಿ: ಏನು ಮರ ನಿಂಗೆ ಅನುಮತಿ ಕೊಟ್ಟಿತಾ?

ವ್ಯಕ್ತಿ; ಹೌದು.

ಸಿರಿ: ಹೇಗೆ? ಮರ ಮಾತಾಡಿತಾ?

ವ್ಯಕ್ತಿ; ಇಲ್ಲ. ಮರ ಕಂಡೆ, ಮರದ ನೆರಳು ಕಂಡೆ. ಮರದಡಿ ಮಲಗಿಕೊಂಡೆ.

ಸಿರಿ: ಹಾಗೆ ಮಲ್ಕೊಳ್ಳೋಕೆ  ಇದು ರಸ್ತೆ ಬದಿ ಮರ ಅಲ್ಲ. ಅನುಮತಿ ನಾನು ಕೊಡ್ಬೇಕು. ಇದು ನನ್ನ ಮರ.

ವ್ಯಕ್ತಿ; ಅದು ಯಾರ ಮನೆ?

ಸಿರಿ: ಅಷ್ಟೂ ತಿಳಿಯೊಲ್ವ? ಅದು ನನ್ನ ಮನೆ. ಇದು ನನ್ನ ಮರ.

ವ್ಯಕ್ತಿ; ತಿಳಿಯಲಿಲ್ಲ, ಕ್ಷಮಿಸಿ. ಆದರೆ ನಂಗೆ ದಾರಿ ನಡೆದು ತುಂಬಾ ಆಯಾಸ ಆಗಿತ್ತು. ನೆರಳಿನಲ್ಲಿ ಮಲಕ್ಕೊಂಡೆ.

ಸಿರಿ: ಸಾಕಾ? ಇನ್ನೂ ಮಲ್ಕೋಬೇಕಾ?

ವ್ಯಕ್ತಿ; ಇವತ್ತಿಗೆ ಸಾಕು.

ಸಿರಿ: ಮತ್ತೆ ಇನ್ಯಾವತ್ತಿಗೆ?

ವ್ಯಕ್ತಿ; ನಾನು ದಿನಾ ಈ ದಾರಿಯಾಗಿ ಹೋಗ್ತೀನಿ.  ಒಂದಿಷ್ಟು ಹೊತ್ತು ಮಲ್ಕೊಳ್ಳೋಕೆ ಬಿಟ್ರೆ ತುಂಬಾ ಉಪಕಾರವಾಗುತ್ತೆ.

ಸಿರಿ: ಯಾಕೆ? ದಾರಿಯಲ್ಲಿ ಬೇರೆ ಮರಗಳಿಲ್ವೆ?

ವ್ಯಕ್ತಿ: ಈ ಮರದ ನೆರಳಿನಲ್ಲಿ ಅದೇನೋ ವಿಶೇಷವಾದ ತಂಪು ಇದೆ.

ಸಿರಿ: ಅದು ನಿನ್ನ ಭ್ರಮೆ. ಎಲ್ಲಾ ಮರಗಳ ನೆರಳಿಗೆ ಇರುವುದು ಒಂದೇ ರೀತಿಯ ತಂಪು.

ವ್ಯಕ್ತಿ; ಆದ್ರೂ ನಂಗ್ಯಾಕೋ ಈ ನೆರಳು ತುಂಬಾ ಇಷ್ಟವಾಯ್ತು.  ದಿನಾ ಇದರ ನೆರಳಿನಲ್ಲಿ  ಒಂದು ಗಂಟೆ ಹೊತ್ತು ಮಲಗಲಿಕ್ಕೆ ಅನುಮತಿ ಕೊಡ್ತೀರಾ?

ಸಿರಿ: ಆಗಲ್ಲ, ಹೋಗು.

ವ್ಯಕ್ತಿ; ಪುಕ್ಕಟೆ ಬೇಡ.

ಸಿರಿ: ಮತ್ತೇನು ಮರದ ನೆರಳನ್ನು ಕೊಂಡ್ಕೊಳ್ತೀಯ?

(ವ್ಯಕ್ತಿ  ಯೊಚನಾಮಗ್ನನಾಗುತ್ತಾನೆ)

ಸಿರಿ: ಏನು ಯೊಚಿಸ್ತಾ ಇದ್ದಿ?

ವ್ಯಕ್ತಿ: ಯಾಕಾಗ್ಬಾರ‍್ದು ಅಂತ ಯೊಚಿಸ್ತಾ ಇದೀನಿ.

ಸಿರಿ: ಏನು, ಮರದ ನೆರಳನ್ನ ಕೊಂಡ್ಕೊಳ್ತೀಯ?

ವ್ಯಕ್ತಿ; ನೀವು ಮಾರೋದಾದ್ರೆ ಯಾಕೆ ಕೊಂಡ್ಕೋಬಾರ‍್ದು ? ಹೇಳಿ. ಎಷ್ಟು ಕೊಡ್ಬೇಕು?

ಸಿರಿ: (ನಕ್ಕು, ಉದಾಸೀನಭಾವದಿಂದ) ಕೊಡು ಒಂದೈದು ಸಾವಿರ.

ವ್ಯಕ್ತಿ; (ತಟ್ಟನೆ ತನ್ನ ಅಂಗಿಯ ಜೇಬಿನಿಂದ ಹಣ ತೆಗೆದು ಲೆಖ್ಖ ಮಾಡಿ, ಸಿರಿವಂತನ ಕೈಗೆ ತುರುಕಿ) ತೆಕ್ಕೊಳ್ಳಿ ಐದು ಸಾವಿರ. (ತಟ್ಟನೆ ಎದ್ದು  ಗಡಿಬಿಡಿಯಿಂದ) ಮಾತಿನಲ್ಲಿ ಹೊತ್ತು ಹೋದದ್ದೇ ಗೊತ್ತಾಗ್ಲಿಲ್ಲ. ಸಂತೆಯಲ್ಲಿ ಒಬ್ರು ನನ್ನ ಕಾಯಾ ಇರ‍್ತಾರೆ. ನಾಳೆ ಬರ‍್ತೀನಿ. (ಹೋಗಿಬಿಡುತ್ತಾನೆ. ಸಿರಿವಂತ ಹಣ ಲೆಖ್ಖ ಮಾಡುತ್ತಾನೆ. ತಟ್ಟನೆ ವ್ಯಕ್ತಿ ಮರಳಿ ಬಂದು) ಐದು ಸಾವಿರ ಇದೆಯಲ್ಲ?

ಸಿರಿ: ಇದೆ.

ವ್ಯಕ್ತಿ; ಐದು ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ನಂಗೆ ಬೇಡ. ಬೇರೆ ಕಡೆ ಬೇಕಾದಷ್ಟು ನೆರಳು ಸಿಗ್ತದೆ. ನಂಗೆ ಈ ಮರದ ನೆರಳ್ಯಾಕೋ ತುಂಬಾ ಇಷ್ಟವಾಯ್ತೂಂತ ನೀವು ಕೇಳಿದಷ್ಟು ಕೊಟ್ಟೆ.

ಸಿರಿ: ಪರ‍್ವಾಗಿಲ್ಲ. ಐದು ಸಾವಿರ ಸಾಕು.

ವ್ಯಕ್ತಿ: ದಯವಿಟ್ಟು ಒಂದು ಚೀಟಿಯಲ್ಲಿ ಬರೆದುಕೊಡಿ.

ಸಿರಿ: ಏನಂತ?

ವ್ಯಕ್ತಿ:  ಇಷ್ಟೇ. ಬಿಟ್ಟೇನಹಳ್ಳಿ ಬಿಳೇರಾಯರ ಮಗನಾದ ಬಾಬುರಾಯ ಎಂಬ ನಾನು ಸಿಕ್ಕೇನಹಳ್ಳಿ ಸಿದ್ದಪ್ಪನ ಮಗನಾದ ಶೀನಪ್ಪ ಎಂಬವರಿಗೆ ಐದು ಸಾವಿರ ರುಪಾಯಿಗೆ ನನ್ನ ಮರದ ನೆರಳನ್ನು ಮಾರಾಟ ಮಾಡಿದ್ದೇನೆ ಎಂದು ಬರೆಯಿರಿ ಸಾಕು.

ಸಿರಿ:  ಕಾಗದ ಮತ್ತು ಪೆನ್ನು ತರ‍್ತೀನಿ.

ವ್ಯಕ್ತಿ: ನನ್ನ ಬಳಿ ಇದೆ ತಕ್ಕೊಳ್ಳಿ. (ತಟ್ಟನೆ ಜೇಬಿನಿಂದ ಕಾಗದ ಮತ್ತು ಪೆನ್ನು ತೆಗೆದುಕೊಡುತ್ತಾನೆ)

ಸಿರಿ: (ಬರೆದುಕೊಟ್ಟು ) ಇಷ್ಟು ಸಾಕಾ?

ವ್ಯಕ್ತಿ: ಧಾರಾಳ ಸಾಕು.  ವಾಸ್ತವದಲ್ಲಿ , ಅಗತ್ಯವೇನೂ  ಇಲ್ಲ . ಆದ್ರೂ ಸುಮ್ನೇ ಇರ್ಲಿ ಅಂತ ಅಷ್ಟೆ. (ತೆಗೆದು ಜೇಬಿನಲ್ಲಿರಿಸಿಕೊಳ್ಳುತ್ತಾನೆ) ಧನ್ಯವಾದಗಳು. (ಕೈಕುಲುಕಿ ಹೋಗಿಬಿಡುತ್ತಾನೆ)

ಸಿರಿ: ಹುಚ್ಚ! ಖಂಡಿತವಾಗಿಯೂ ಹುಚ್ಚ! ಯಾರಾದ್ರೂ ಮರದ ನೆರಳನ್ನು ಕೊಂಡ್ಕೊಳ್ತಾರ? (ನಕ್ಕು) ಈ ರೀತಿ ಮರದ ನೆರಳನ್ನು ಕೊಂಡ್ಕೊಳ್ಳೋರು ಇದ್ರೆ ಕೋಟಿಗಟ್ಟಲೆ ಸಂಪಾದಿಸ್ಬಹುದು.

 

ದೃಶ್ಯ ಎರಡು: ಮನೆ, ಮರ

(ಅದೇ ಮನೆ. ಸಿರಿವಂತ ಹಜಾರದಲ್ಲಿ ಆರಾಮಾಸನದಲ್ಲಿ ಕುಳಿತಿದ್ದಾನೆ. ಮರದ ನೆರಳು ಹಜಾರದಲ್ಲಿರುವ ಸೋಫಾದ ಮೇಲೆ ಬಿದ್ದಿದೆ. ದೂರ ಪ್ರಯಾಣ ಮಾಡಿದ ಸಿರಿವಂತನ ಪತ್ನಿಯ ಆಗಮನ.  ಭಾರವಾದ ಸೂಟುಕೇಸು ಹೊತ್ತುಕೊಂಡು ಕೂಲಿಯಾಳು. ಕೂಲಿಯಾಳು ಪೆಟ್ಟಿಗೆ ಕೆಳಗಿರಿಸುತ್ತಾನೆ. ಹೆಂಡತಿ ಕೂಲಿಯವನಿಗೆ ಹಣ ಕೊಡುತ್ತಾಳೆ)

ಕೂಲಿ: (ಕೈಯಲ್ಲಿ ರಿಸಿಕೊಂಡು) ಇದೇನಮ್ಮ, ಬರೀ ಐದು ರುಪಾಯಿ?

ಹೆಂಡತಿ: ನಾನು ಯಾವಾಗ್ಲೂ ಐದೇ ರುಪಾಯಿ ಕೊಡೋದು.

ಕೂಲಿ: ಒಂದು ಮೈಲಿ ಇದೆ. ಇನ್ನು ಐದು ರುಪಾಯಿ ಕೊಡಿ.

ಸಿರಿ: (ಎದ್ದು ಬಂದು) ಏನು? ಇನ್ನು ಐದು ರುಪಾಯಿಯ? ಹತ್ತು ರುಪಾಯಿಗೆ ನೀನು ಯಾಕೆ? ಕುದುರೆಗಾಡೀಲೇ ಬರ‍್ಬಹುದು.

ಹೆಂಡತಿ: ನಾನು ಕುದುರೆ ಗಾಡೀಲೇ ಬರೋಣಾಂತಿದ್ದೆ. ನೀವೇ ಹೇಳಿದ್ರಿ ನಡ್ಕೊಂಡೇ ಬಾ ಅಂತ.

ಸಿರಿ: (ಹೆಂಡತಿಯೊಡನೆ, ತಗ್ಗಿದ ದನಿಯಲ್ಲಿ) ಸುಮ್ನಿರು! (ಕೂಲಿಯೊಡನೆ)ಹೂಂ. ತಗೊ.

ಕೂಲಿ: (ಅದನ್ನು ಕೈಯಲ್ಲಿ ಹಿಡಿದುಕೊಂಡು) ಒಂದು ರುಪಾಯಿ! ಇನ್ನು ಒಂದು ರುಪಾಯಿಯಾದ್ರೂ ಕೊಡಿ ಅಣ್ಣಾ.

ಸಿರಿ: ಇಷ್ಟು ಸಾಕು. ಹೋಗು ಹೋಗು. (ಕೂಲಿಯವನು ಮುಖ ಬಾಡಿಸಿಕೊಂಡು ಹೋಗುತ್ತಾನೆ)

ಹೆಂ: (ಜಗಲಿಯಲ್ಲಿ ಕುಳಿತುಕೊಂಡು, ಸೆರಗಿನಿಂದ ಗಾಳಿ ಹಾಕಿಕೊಳ್ಳುತ್ತಾ) ಕುದುರೆಗಾಡಿಯಾಗಿದ್ರೆ ನಂಗೂ ಅದ್ರಲ್ಲೇ ಬರ‍್ಬಹುದಾಗಿತ್ತು.

ಸಿರಿ: ಕುದುರೆ ಗಾಡಿಗೆ ಹತ್ತು ರುಪಾಯಿ ಕೊಡ್ಬೇಕಾಗುತ್ತೆ. ಈಗ ಬರೀ ಆರು ರುಪಾಯಿಯಲ್ಲಿ  ಆಯ್ತಲ್ಲ?

ಹೆಂಡತಿ: ನಂಗೆ ಅಷ್ಟು ದೂರ ನಡೀಬೇಕಾಯ್ತಲ್ಲ? ಸುಡುವ ಬಿಸಿಲು ಬೇರೆ.

ಸಿರಿ: ನಿನ್ನ ಈ ತೂಕಕ್ಕೆ ಸ್ವಲ್ಪ ನಡೆದ್ರೆ ಒಳ್ಳೇದೆ.

ಹೆಂಡತಿ: (ಅಸಮಾಧಾನದಿಂದ) ನನ್ನ ತೂಕ ಅಷ್ಟೇನೂ ಜಾಸ್ತಿ ಇಲ್ಲ.

ಸಿರಿ: ಒಂದು ವಾರ ತಾಯಿಮನೆಯಲ್ಲಿ ಕೂತು ಕಾಯ್ಸಿದ್ದು ಕರ‍್ದದ್ದು  ಎಲ್ಲಾ  ತಿಂದು ಇನ್ನಷ್ಟು ದಪ್ಪ ಆಗಿ ಬಂದಿದ್ದಿ! ಇನ್ನು ಈ ಬೊಜ್ಜು ಇಳಿಸಲು ವಾಕಿಂಗ್ ಮಾಡ್ತಿ! ಈ ಪೆಟ್ಟಿಗೇನ ನೀನೇ ಎತ್ಕೊಂಡು ಬರ‍್ತಿದ್ರೆ ಆರು ರುಪಾಯಿ ಉಳೀತಿತ್ತು! ಏನಿದೆ ಇದ್ರೊಳ್ಗೆ?

ಹೆಂಡತಿ: ಬರೀಬಟ್ಟೆ ಬರೆ.

ಸಿರಿ: ಪ್ರತಿಸಲ ತಾಯಿಮನೆಗೆ ಹೋಗುವಾಗ್ಲೂ ಯಾಕೆ ಇಷ್ಟೊಂದು ಬಟ್ಟೆಬರೆ ಹೊತ್ತುಕೊಂಡು ಹೋಗ್ತಿ? ಕೆಲವನ್ನ ಅಲ್ಲೇ ಬಿಟ್ಟುಬರ‍್ಬಾರ‍್ದಾ? ಹೇಗಿದ್ರೂ ಟೀವಿ ಮೇಲೆ ಹೊಸ ರುಚಿ ಕಾಣಿಸಿದಾಗ್ಲೆಲ್ಲಾ  ಹೋಗ್ತಾ ಇರ‍್ತಿ. (ನಗುತ್ತಾನೆ)

ಹೆಂಡತಿ: ಹೊಸ ರುಚಿ ಬಿಟ್ಟು ಹಳೆ ರುಚಿಗೆ ಬೇಕಾದ ಸಾಮಾನುಗಳಿಗೆ ತಕ್ಕಷ್ಟು ಹಣ ನೀವು ಕೊಡದೇ ಇದ್ರೆ ಮತ್ತೇನ್ಮಾಡ್ಲಿ? ಅಮ್ಮನ ಕೈಲಾದ್ರೂ ಮಾಡಿಸಿ ತಿಂತೀನಿ.

ಸಿರಿ: ತುಂಬಾ ಒಳ್ಳೆಯ ಅಭ್ಯಾಸ!

(ವ್ಯಕ್ತಿಯ ಪ್ರವೇಶ. ಯಾವುದನ್ನೂ ಗಮನಿಸದೆ ನೇರವಾಗಿ ಒಳ ಹೋಗಿ ಹಜಾರದಲ್ಲಿ ಸೋಫದ ಮೇಲೆ ಇರುವ ಮರದ ನೆರಳಿನಲ್ಲಿ ಮಲಗಿಕೊಂಡು ಕಣ್ಣು ಮುಚ್ಚಿಕೊಳ್ಳುತ್ತ್ತಾನೆ. ಸಿರಿವಂತ ಗೊಂದಲ ಮತ್ತು ಅಚ್ಚರಿಯಿಂದ ನೋಡುತ್ತಾನೆ. ಸಿರಿವಂತನ ಹೆಂಡತಿ ವಿಸ್ಮಯ ಮತ್ತು ಗಾಬರಿಯಿಂದ ಬಿಟ್ಟ ಬಾಯಿ ಮುಚ್ಚದೆ ನೋಡುತ್ತಾಳೆ)

ಹೆಂ: (ಮೆಲ್ದನಿಯಲ್ಲಿ) ಯಾರ್ರೀ ಅದು?

ಸಿರಿ: (ಹೆಂಡತಿಯನ್ನು  ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ) ಛೆ! ಹೀಗಾದೀತು ಅನ್ನೋ ಕಲ್ಪನೆಯೆ ನನಗಾಗ್ಲಿಲ್ಲ್ಲ! (ಹಣೆ ಬಡಿದುಕೊಳ್ಳುತ್ತಾನೆ)

ಹೆಂಡತಿ: ಏನು?

ಸಿರಿ: ಈ ಮನುಷ್ಯ ನಿನ್ನೆ ಮಧ್ಯಾಹ್ನ  ಆ ಮರದ ನೆರಳು ಇಲ್ಲಿ ಬಿದ್ದಿರುವಾಗ ಇಲ್ಲಿ ಬಂದು ಮಲಗಿಕೊಂಡಿದ್ದ.  “ಎದ್ದು ಹೋಗು” ಎಂದೆ. “ನನಗೆ ಈ ಮರದ ನೆರಳು ತುಂಬಾ ಇಷ್ಟವಾಗಿದೆ. ದಿನಾ ಒಂದು ಗಂಟೆ  ಇದರ ನೆರಳಿನಲ್ಲಿ ಮಲಗಲಿಕ್ಕೆ ಅನುಮತಿ ಕೊಡಿ” ಅಂದ. “ಆಗುವುದಿಲ್ಲ” ಅಂದೆ. “ಮರದ ನೆರಳನ್ನು ಕೊಂಡ್ಕೊಳ್ತೇನೆ” ಅಂದ. ನೆರಳನ್ನು ಹೇಗೆ ಕೊಂಡುಕೊಳ್ಳೋದಕ್ಕಾಗುತ್ತೆ? ನಂಗೆ ತಮಾಷೆ ಎನಿಸಿತು.  “ನೀವು ಹೇಳಿದಷ್ಟು ಕೊಡ್ತೇನೆ” ಅಂದ. “ಐದು ಸಾವಿರ ಕೊಡು” ಅಂದೆ. ಅವ್ನು ಕೂಡ್ಲೇ ಐದು ಸಾವಿರ ತೆಗೆದು ಕೊಟ್ಟುಬಿಟ್ಟ. “ಅದಕ್ಕೊಂದು ರಶೀದಿ ಕೇಳಿದ. ಬರ‍್ಕೊಟ್ಟೆ.

ಹೆಂ: ರಶೀದೀನೂ ಬರ‍್ಕೊಟ್ರಾ? (ಹಣೆ ಬಡಿದುಕೊಂಡು) ಅಲ್ರಿ, ಮರದ ನೆರಳು ಒಂದೊಂದು ದಿನ ಒಂದೊಂದು ಕಡೆ ಬೀಳುತ್ತೆ. ಅಲ್ದೆ , ಉತ್ತರಾಯಣದಲ್ಲಿ ಈ ಕಡೆ ಬಿದ್ರೆ ದಕ್ಷಿಣಾಯನದಲ್ಲಿ ಆ ಕಡೆ ಬೀಳುತ್ತೆ. ಈಗ ಹಜಾರದಲ್ಲಿ ಬಿದ್ದಿದೆ. ಇನ್ನೊಂದೆರಡು ವಾರದಲ್ಲಿ ಇದೇ ಹೊತ್ತಿನಲ್ಲಿ ನಮ್ಮ ಮಲಗೋ ಕೋಣೆಯಲ್ಲಿ ಬೀಳುತ್ತೆ. ಇವನು ಬಂದು ಅಲ್ಲೇ ಮಲಕ್ಕೊಂಡ್ರೆ?

ಸಿರಿ: ಹೌದಲ್ಲ? ನಿನ್ನೆ ನಂಗದು ಹೊಳೀಲೇ  ಇಲ್ಲ!

ಹೆಂ: ನಿಮ್ಗೆ ಹಣದ ಆಸೆ ಜಾಸ್ತಿಯಾಯ್ತು! ಐದು ಸಾವಿರ ನೋಡಿ ಬಾಯಲ್ಲಿ ನೀರು ಬಂತು. ಅಲ್ವ? ಈಗೇನು ಮಾಡ್ತೀರಿ?

ಸಿರಿ: (ಸ್ವಲ್ಪ ಹೊತ್ತು ಯೊಚಿಸಿ, ಸೋಫದ ಬಳಿಗೆ ಹೋಗಿ) ಶೀನಪ್ಪ ಅವ್ರೆ, ಸ್ವಲ್ಪ ಏಳ್ತೀರಾ?

ವ್ಯಕ್ತಿ: (ಕಣ್ಣು ತಿಕ್ಕಿಕೊಳ್ಳುತ್ತಾ ಎದ್ದು) ಏನು?

ಸಿರಿ: ಇದ್ರಿಂದ ನಮ್ಗೆ ತುಂಬಾ ತೊಂದ್ರೆ ಆಗ್ತಾ ಇದೆ.

ವ್ಯಕ್ತಿ: ಯಾವ್ದರಿಂದ?

ಸಿರಿ: ನೀವು ನಮ್ಮ ಸೋಫದಲ್ಲ್ಲಿ ಮಲಗಿರೋದ್ರಿಂದ.

ವ್ಯಕ್ತಿ: ನಾನು ಮಲಗಿರೋದು ನನ್ನ ಮರದ ನೆರಳಿನಲ್ಲಿ.

ಸಿರಿ: ಆದ್ರೆ ಅದು ನನ್ನ ಸೋಫದ ಮೇಲೆ ಬಿದ್ದಿದೆ.

ವ್ಯಕ್ತಿ: ಹಾಗೊ? (ಎದ್ದು ಸೋಫವನ್ನು ಅತ್ತ ತಳ್ಳಿ ನೆಲದ ಮೇಲೆ ಮಲಗಿಕೊಳ್ಳುತ್ತಾನೆ)

ಹೆಂ: (ಹತ್ತಿರ ಬಂದು, ಸಿಟ್ಟಿನಿಂದ) ಏಳ್ರಿ! ಇದು ನನ್ನ ಮನೆ!

ವ್ಯಕ್ತಿ: (ಎದ್ದು ಕುಳಿತುಕೊಂಡು) ಸರಿ ಅದಕ್ಕೇನಾಗಬೇಕು?

ಹೆಂ; ನೀವು ಮಲಗಿರೋದು ನಮ್ಮ ಮನೆಯಲ್ಲಿ.

ವ್ಯಕ್ತಿ: ನಿಮ್ಮ ಮನೆ ನಂಗೆ ಬೇಡ. ನಾನು ಮಲಗಿರೋದು ನನ್ನ ಮರದ ನೆರಳಿನಲ್ಲಿ.

ಹೆಂ: ನನ್ನ ಮರ! ಯಾರು ಹೇಳಿದ್ರು ಅದು ನಿಮ್ಮ ಮರ ಅಂತ? ಅದು ನಮ್ಮ ಮರ! (ಗಂಡನೊಡನೆ) ಕಡಿದು ಹಾಕ್ಬಿಡಿ ಮರವನ್ನ. ನೋಡೋಣ ಇವ್ರು ಎಲ್ಲಿ ಮಲಗ್ತಾರೆ ಅಂತ?

ವ್ಯಕ್ತಿ: (ನಕ್ಕು) ಕಡಿದುಹಾಕಿ. ಅದರ ನೆರಳು ನನಗೆ ಸೇರಿದ್ದು. ನೆರಳು ನನಗೆ ಕೊಟ್ಟ ಮೇಲೆ ನೀವು ಕಡೀಬಹುದು.

ಸಿರಿ: ಮರವೇ ಇಲ್ಲದ ಮೇಲೆ ನೆರಳು ಎಲ್ಲಿಂದ?

ವ್ಯಕ್ತಿ: ಆ ಪ್ರಶ್ನೆ ನಾನು ಕೇಳಬೇಕಾದ್ದು! ನೀವಲ್ಲ. ಆದ್ದ್ದರಿಂದ ನೀವು ಮರ ಕಡಿಯೊ ಹಾಗಿಲ್ಲ. ಒಂದು ವೇಳೆ ನೀವು ಕಡಿದ್ರೆ, ನನಗಾಗೋ ನಷ್ಟವನ್ನ ನೀವು ತುಂಬಿ ಕೊಡಬೇಕಾಗುತ್ತೆ.

ಹೆಂ: (ರೇಗಿ) ಹೇಳಿ. ಎಷ್ಟಾಗುತ್ತೆ ಅದು?

ವ್ಯಕ್ತಿ: ಎಷ್ಟೂ ಆಗ್ಬಹುದು. ಆದ್ರೆ ಮರ ಕಡಿದ್ಮೇಲೆ ತಾನೆ? ಎಷ್ಟೂಂತ ಆಗ ಹೇಳ್ತೀನಿ. ಈಗ್ಯಾಕೆ ಬಿಡಿ.

ಸಿರಿ: ನೀವು ಕೊಟ್ಟಿರೋ ಐದು ಸಾವಿರಕ್ಕೆ ಐದು ಸಾವಿರ ಸೇರಿಸಿ ಹತ್ತು ಸಾವಿರ ಕೊಡ್ತೀನಿ. ನೆರಳು ವಾಪಾಸು ಕೊಟ್ಬಿಡಿ.

ವ್ಯಕ್ತಿ: ಇಲ್ಲ. ಹತ್ತು ಲಕ್ಷ ಕೊಟ್ರೂ ಕೊಡೋಲ್ಲ. ಈ ಮರದ ನೆರಳು ನನ್ನದು. ಅದು ಕೂಡ ಇಡೀ ದಿವ್ಸ ಬೇಡ. ದಿನ್ದಲ್ಲಿ ಒಂದು ಗಂಟೆ ಮಾತ್ರ!

(ಮಲಕ್ಕೊಳ್ಳುತ್ತಾನೆ)

ಫೇಡ್ ಔಟ್

ದೃಶ್ಯ ಮೂರು: ಮನೆ, ಮರ

(ಸಿರಿವಂತ ಮತ್ತು ಅವನ ಹೆಂಡತಿ. ಮನೆಯ ಜಗಲಿಯಲ್ಲಿ ಕುಳಿತು ಚಿಂತೆಯಲ್ಲಿ  ಮುಳುಗಿದ್ದಾರೆ)

ಹೆಂ: ಸಾಕಾಗಿ ಹೋಯ್ತು.  ಮೂರು ತಿಂಗಳು ಮೂರು ವರ್ಷದ ಹಾಗೆ ಕಳೀತು. ಆತ ಹೊತ್ತು ಗೊತ್ತು ಇಲ್ದೆ  ಬರ‍್ತಾನೆ.  ಹೋಗಿ ನೋಡಿ. ಅಡಿಗೆ ಕೋಣೆಯಲ್ಲಿ ಮಲ್ಕೊಂಡಿದ್ದಾನೆ!

ಸಿರಿ: ಆದ್ರೆ ಒಂದು ಸಮಾಧಾನ. ಹಗಲು ಮಾತ್ರ!

ಹೆಂ: ಸಾಲ್ದ? ಅಡಿಗೆ ಕೋಣೆ ಮತ್ತು  ನಮ್ಮ ಮಲಗುವ ಕೋಣೆ ಬಿಟ್ಟು ಅವ್ನು ಎಲ್ಲಾ ಕಡೆ ಮಲಗಿ ಆಯ್ತು. ಈಗ ಉತ್ತರಾಯಣ. ಇನ್ನು ನೆರಳು ಪೂರ್ವಾಹ್ನ ಅಡಿಗೆ ಕೋಣೆಯಲ್ಲಿರತ್ತೆ, ಅಪರಾಹ್ನ ಮಲಗೋ ಕೋಣೆಯಲ್ಲಿರತ್ತೆ.

ಸಿರಿ: ನಿಜ. ಏನ್ಮಾಡೋದು?

ಹೆಂ: ನಂಗೆ ಈ ಮನೇನೇ ಬೇಡಾನ್ಸಿದೆ. ಮನೇನ ಇವ್ನಿಗೇ ಮಾರಿ ಬಿಡಿ.

ಸಿರಿ: ಮಾರಿದ್ಮೇಲೆ?

ಹೆಂ: ಪಟ್ಟಣದಲ್ಲಿ ಬಾಡಿಗೆಗೆ ಕೊಟ್ಟಿರೋ ನಮ್ಮನೇನ ಖಾಲಿ ಮಾಡ್ಸಿ. ನಾವು ಅಲ್ಲಿಗೇ ಹೋಗೋಣ.

ಸಿರಿ: ಛೆ ಛೆ! ಅದು ಹ್ಯಾಗಾಗುತ್ತೆ?

ಹೆಂ: ಮತ್ತೇನ್ರಿ ಮಾಡೋದು? ನಿಮ್ಮ ಹತ್ರ ಹಣಕ್ಕೆ ಕಡಿಮೆ ಇಲ್ಲ. ಒಂದು ಹೊಸ ಮನೆ ಕಟ್ಸಿ.

ಸಿರಿ: ಹೊಸ ಮನೆ ಅಂದ್ರೆ ತುಂಬಾ ಖರ್ಚಾಗುತ್ತೆ.

ಹೆಂ: ಹಾಗಾದ್ರೆ ನೀವೇ ಈ ಮನುಷ್ಯನ ಜೊತೆ ಸಂಸಾರಮಾಡಿ. ನಾನು ತಾಯಿಮನೆಗೆ ಹೋಗ್ತೇನೆ.

ಸಿರಿ: ತಡಿ ತಡಿ. ಗಡಿಬಿಡಿ ಮಾಡ್ಬೇಡ. ಈ ಮನೆಯನ್ನ ಅವ್ನೇ ಕೊಂಡ್ಕೊಳ್ತಾನೊ ಕೇಳಿ ನೋಡೋಣ.

ಹೆಂ: ಸರಿ. ಹಾಗೆ ಮಾಡಿ.

ಸಿರಿ: (ಒಳ ಹೋಗಿ) ಶೀನಪ್ಪ ಅವ್ರೆ, ಸ್ವಲ್ಪ ಹೊರಗಡೆ ಬರ‍್ತೀರಾ?

ವ್ಯಕ್ತಿ: (ಎದ್ದು ಕಣ್ಣೊರಸಿಕೊಂಡು ಬರುತ್ತಾನೆ) ಏನು?

ಸಿರಿ: (ಕೈಹಿಡಿದು ಹೊರಗಡೆ ಕರೆದುಕೊಂಡು ಬಂದು) ನಾವು ಒಂದು ತೀಮಾನ ಮಾಡಿದ್ದೇವೆ.

ವ್ಯಕ್ತಿ: (ಆಕಳಿಸುತ್ತಾ) ಏನು?

ಸಿರಿ: ದಯವಿಟ್ಟು ಈ ಮನೆಯನ್ನ ನೀವೇ ಕೊಂಡ್ಕೊಳ್ಳಿ.

ಹೆಂ: ಹೌದು. ಮರದ ನೆರಳಿನ ಜೊತೆ ಮನೆ ಕೂಡ ನಿಮ್ಮದೇ ಅನ್ನೋ ಹಾಗಾಗಿದೆ!

ವ್ಯಕ್ತಿ;  ಇಲ್ಲ ಇಲ್ಲ! ಮನೆ ನಿಮ್ಮದೇ. ಹಗಲು ಹೊತ್ತು ಕೇವಲ ಒಂದು ಗಂಟೆ ಮರದ ನೆರಳಿನಲ್ಲಿ  ಮಲಗ್ತೀನಿ ಅಷ್ಟೆ!  ನನ್ನ  ಮನೆ ಹೇಗಾಗುತ್ತೆ?

ಸಿರಿ: ಅದೇನೇ ಇರ್ಲಿ. ಈ ಮನೇನ ನೀವೇ ಕೊಂಡ್ಕೊಳ್ಳಿ. ನಾವು ನಮ್ಮ ಪಟ್ಟಣದ ಮನೆಗೆ ಹೋಗ್ತೀವಿ.

ವ್ಯಕ್ತಿ: (ನಕ್ಕು) ನಂಗೆ ಮನೆ ಬೇಡ. ನಂಗೆ ಬೇಕಾದ್ದು ಮರದ ನೆರಳು ಮಾತ್ರ!

ಹೆಂ: ಬೇರೆ ಮರದ ನೆರಳು ಕೊಡೋಣ.

ಸಿರಿ: ಇದಕ್ಕಿಂತ ದೊಡ್ಡ ಮರದ ನೆರಳು ತಕ್ಕೊಳ್ಳಿ .

ವ್ಯಕ್ತಿ: ನನಗೆ ಬೇರೆ ಮರದ ನೆರಳು ಬೇಡ. ಇದೇ ಮರದ ನೆರಳು ಬೇಕು.

ಸಿರಿ: ಅದೇನು ಈ ನೆರಳಿನ ಮೇಲೆ ಅಷ್ಟೊಂದು ಮೋಹ ನಿಮಗೆ?

ವ್ಯಕ್ತಿ: ಮೋಹವಲ್ಲ ಪ್ರೀತಿ. ಇದು ನಾನು ಒಮ್ಮೆ ಕಳಕೊಂಡ ನೆರಳು.

ಸಿರಿ: ಅಂದ್ರೆ?

ವ್ಯಕ್ತಿ: ನಾನು ಮತ್ತು ನನ್ನ ಪುಟ್ಟ ತಂಗಿ ಈ ಮರದ ನೆರಳಿನಲ್ಲಿ ಆಡ್ತಾ ಇದ್ವಿ. ನನ್ನ ಅಪ್ಪ್ಫನಿಗೆ ಬಡತನ ಬಂತು. ಮನೇನ ಬಿಟ್ಟೇನಹಳ್ಳಿ ಬಿಳೇರಾಯರ ಬಳಿ ಅಡವಿಟ್ಟು ಐದು ಸಾವಿರ ರುಪಾಯಿ ತಕ್ಕೊಂಡ್ರು. ಬಡ್ಡಿಯೆ ಬೆಳೆದು ಬೆಳೆದು ಐವತ್ತು ಸಾವಿರವಾಯ್ತು. ಅಪ್ಪನಿಂದ ಮನೆ ಬಿಡಿಸಿಕೊಳ್ಳಿಕ್ಕೆ ಆಗ್ಲಿಲ್ಲ. ಅಪ್ಪ ತೀರ‍್ಕೊಂಡ. ಮನೆ ಬಿಳೇರಾಯರ ಮಗ ಬಾಬುರಾಯರ ವಶಕ್ಕೆ ಬಂತು.

ಸಿರಿ: ಇದೆಲ್ಲಾ ನಂಗೆ ಗೊತ್ತಿಲ್ಲ.

ವ್ಯಕ್ತಿ: ನಂಗೂ ಗೊತ್ತಿರ್ಲಿಲ್ಲ. ಆ ಮೇಲೆ ತಿಳೀತು. ನೀವೇ ಆ ಬಾಬುರಾಯ ಅಂತ.

ಹೆಂ: ನಿಮ್ಮ ತಂಗಿ ಎಲ್ಲಿದ್ದಾಳೆ?

ವ್ಯಕ್ತಿ: ಈ ಮರದ ನೆರಳಿನಲ್ಲಿ ಇದ್ದಾಳೆ. ಉಹುಂ ಈಗ ಅವಳು ಬರೀ ನೆರಳು! (ದು:ಖಿಸುತ್ತಾನೆ)

ನಾನು ನಿಮಗೆ ಕೊಟ್ಟಿರೋ ಐದು ಸಾವಿರ ನನ್ನಪ್ಪನಿಂದ ನಿಮ್ಮಪ್ಪನಿಗೆ ಸಲ್ಲಬೇಕಾಗಿದ್ದ ಅಸಲು ಮಾತ್ರ. ಬಡ್ಡಿಗೆ ಮನೆ ನಿಮಗೇ ಇರಲಿ. ನಂಗೆ ಮರದ ನೆರಳು ಮಾತ್ರ ಸಾಕು. ಇದು ಬರೀ ನೆರಳಲ್ಲ. ಇದು ನನ್ನ ತಂಗಿಯ ನೆನಪು! (ವ್ಯಕ್ತಿ ದು:ಖಿಸುತ್ತಿರುವುದನ್ನು ಕಂಡು ಸಿರಿವಂತ ಮತ್ತು ಅವನ ಹೆಂಡತಿಯ ಮನ ಕರಗುತ್ತದೆ)

ಸಿರಿ: (ವ್ಯಕ್ತಿಯ ಬಳಿ ಬಂದು ಸಂತೈಸುತ್ತಾ) ನಿಮ್ಮ ಪ್ರೀತಿಯ ನೆರಳು ಇರೋ ಜಾಗ ನಿಮ್ಗೇ ಇರ್ಲಿ. ನಾವು ನಮ್ಮ ಪಟ್ಟಣದ ಮನೆಗೆ ಹೋಗ್ತೀವಿ.

ವ್ಯಕ್ತಿ: (ಭಾವುಕತೆಯಿಂದ)ನಂಗೆ ಜಾಗ ಬೇಡ. ನೆರಳು ಸಾಕು.

ಸಿರಿ: ಆಗ್ಲಿ ನೆರಳಾದ್ರೆ ನೆರಳು. ಇಟ್ಕೊಳ್ಳಿ.

ವ್ಯಕ್ತಿ: ಬರೀ ಮರದ ನೆರಳು.

ಹೆಂ: ಆಗ್ಲಿ ಬರೀ ಮರದ ನೆರಳು. ಇನ್ನು ಎಲ್ಲಾ ನಿಮ್ಮದೇ.

ವ್ಯಕ್ತಿ: ಎಲ್ಲಾ ಬೇಡ. ಬರೀ ಮರದ ನೆರಳು.

ಸಿರಿ: ಆಗ್ಲಿ ಬರೀ ಮರದ ನೆರಳು.

ವ್ಯಕ್ತಿ: ಬರೀನೆರಳು.

ಸಿರಿ: ಸರಿ. ಬರೀ ನೆರಳು.

ವ್ಯಕ್ತಿ: ನೆರಳು.

ಫೇಡ್ ಔಟ್