ಪಾತ್ರಗಳು:
ರಾಣಿ, ಸೇವಕಿ, ಸೈನಿಕ, ಮುದುಕಿ
ಹನ್ನೆರಡು ಮಂದಿ ಹುಡುಗಿಯರು
ಹನ್ನೊಂದು ಮಂದಿ ರಾಜಕುಮಾರರು
ದೃಶ್ಯ ಒಂದು: ಅರಮನೆ
(ಒಂದು ದೊಡ್ಡ ಕೋಣೆ. ಹಿಂಬದಿಯ ಗೋಡೆಯಲ್ಲಿ ಎತ್ತರದಲ್ಲಿ ಸರಳುಗಳಿರುವ ಒಂದು ಸಣ್ಣ ಕಿಟಿಕಿ. ವಿಶಾಲವಾದ ಮಂಚದ ಮೇಲೆ ಸಾಲಾಗಿ ಹನ್ನೆರಡು ಹಾಸಿಗೆಗಳು. ಒಂದು ಕೊನೆಯಲ್ಲಿ ಒಂದು ದೊಡ್ಡ ಪೆಟ್ಟಿಗೆ. ಅದರ ಮುಚ್ಚಳ ತೆರೆದುಕೊಂಡಿದೆ. ಕೋಣೆಯೊಳಗೆ ಹನ್ನೆರಡು ರಾಜಕುಮಾರಿಯರು. ಒಬ್ಬಳು ಎಲ್ಲರಿಗಿಂತ ದೊಡ್ಡವಳು. ಮಲಗಲು ಅಣಿಗೊಳ್ಳುತ್ತಿದ್ದಾರೆ. ತಮ್ಮ ಪಾದರಕ್ಷೆಗಳನ್ನು ಅವಸರದಿಂದ ಕಳಚಿ ಹಾಕುತ್ತಿದ್ದಾರೆ)
೧: (ಹಿರಿಯವಳು) ಬೇಗ! ಬೇಗ! ಮಲಕ್ಕೊಳ್ಳಿ. ಆಗಲೇ ತುಂಬಾ ತಡವಾಗಿದೆ. (ಎಲ್ಲರೂ ಅವಸರವಸರವಾಗಿ ಹೊದ್ದು ಮಲಗುತ್ತಾರೆ)
೨: (ಮುಸುಕಿನೊಳಗಿಂದಲೇ) ಪೆಟ್ಟಿಗೆಯ ಮುಚ್ಚಳ ಹಾಕಿದೆಯೆ?
೩: (ಮುಸುಕು ತೆಗೆದು ನೋಡಿ) ಇಲ್ಲ. (ತಟಕ್ಕನೆದ್ದು ಪೆಟ್ಟಿಗೆಯ ಮುಚ್ಚಳ ಹಾಕಿ ಅಷ್ಟೇ ವೇಗದಲ್ಲಿ ಮೊದಲಿನಂತೆ ಮಲಗಿಕೊಳ್ಳುತ್ತಾಳೆ)
೪: ಹೊರಬಾಗಿಲು ಹಾಕಿದೆಯೆ?
೫: ಗೊತ್ತಿಲ್ಲ.
೪: ನೋಡಿ ಬಾ.
(೬ನೆಯಳು ತಟ್ಟನೆದ್ದು ಹೊರಗೆ ಓಡಿ ದಡಕ್ಕನೆದ್ದು ಬಾಗಿಲು ಹಾಕಿ ಬಂದು ಅದೇ ವೇಗದಲ್ಲಿ ಮಲಗಿಕೊಳ್ಳುತ್ತಾಳೆ)
೧ನೆ: ಯಾರಾದರೂ ಕಾಲಿನಿಂದ ಶೂ ತೆಗೆಯಲು ಮರೆತಿದ್ದೀರಾ?
೧೨ನೆ: ಹೌದು. (ಮುಸುಕಿನೊಳಗಿಂದಲೇ ಶೂ ಕಳಚಿ ಪಾದರಕ್ಷೆಗಳ ರಾಶಿಗೆ ಎಸೆದು ಮೊದಲಿನಂತೆ ಮಲಗಿಕೊಳ್ಳುತ್ತಾಳೆ)
(ಸ್ವಲ್ಪ ಹೊತ್ತಿನಲ್ಲಿ ಕೆಲಸದಾಕೆಯ ಪ್ರವೇಶ. ಶೂಗಳ ರಾಶಿಯ ಬಳಿ ಕುಳಿತುಕೊಳ್ಳುತ್ತಾಳೆ. ಶೂಗಳನ್ನು ತೆಗೆದು ಪರಿಶೀಲಿಸುತ್ತಾಳೆ. ಎಲ್ಲರ ಬಳಿ ಹೋಗಿ ಎಲ್ಲರಿಗೂ ನಿದ್ರೆ ಬಂದಿದೆ ಎಂದು ಖಾತ್ರಿ ಪಡಿಸಿಕೊಂಡು ಹೊರಟು ಹೋಗುತ್ತಾಳೆ)
೧ನೆ: ಕೆಲಸದವಳು ಹೋದಳಾ?(ಹನ್ನೊಂದು ಮಂದಿಯೂ ಒಂದೇ ಬಾರಿ ಮುಸುಕು ಸರಿಸಿ ಎದ್ದು ಕುಳಿತು ಕೆಲಸದಾಳು ಹದ ದಿಕ್ಕನ್ನು ನೋಡಿ, ಒಂದೇ ದನಿಯಲ್ಲಿ ‘ಹೋದಳು’ ಎನ್ನು ತ್ತಾರೆ) ಸರಿ. ಇನ್ನು ನಿದ್ದೆ ಮಾಡಿ.
ಫೇಡ್ ಔಟ್
ದೃಶ್ಯ ಎರಡು: ಅರಮನೆ
(ರಾಣಿಯ ಕೋಣೆ. ಕೆಲಸದಾಕೆಯ ಪ್ರವೇಶ)
ರಾಣಿ; ಮಕ್ಕಳಿನ್ನೂ ಎದ್ದಿಲ್ವ?
ಕೆಲ: ಇಲ್ಲ ಮಹಾರಾಣಿ.
ರಾಣಿ: ದಿವಸದಿಂದ ದಿವಸಕ್ಕೆ ಇವರ ನಿದ್ದೆ ಹೆಚ್ಚು ಹೆಚ್ಚು ಆಗ್ತಾ ಇದೆ!
ಕೆಲ: ಹೌದು ಮಹಾರಾಣಿ.
ರಾಣಿ: ಪಾದರಕ್ಷೆಗಳನ್ನು ನೋಡಿದೆಯ?
ಕೆಲ: ನೋಡಿದೆ ಮಹಾರಾಣಿ.
ರಾಣಿ: ಏನಾಗಿವೆ?
ಕೆಲ: ಎಂದಿನಂತೆಯೆ ಸವೆದಿವೆ ಮಹಾರಾಣಿ.
ರಾಣಿ: ನನ್ನ ತಲೆ ಕೆಟ್ಟು ಹೋಗಿದೆ. ಒಂದು ಜೊತೆ ಶೂ ಒಂದೇ ದಿನಕ್ಕೆ! ಪ್ರತಿ ದಿನ ಹನ್ನೆರಡು ಜೊತೆ ಅಂದರೇನು ತಮಾಷೆಯೆ? ಆ ಶೂಮೇಕರ್ ಗೋಧಿಹಿಟ್ಟಿನಲ್ಲಿ ಶೂ ತಯಾರಿಸಿ ಕೊಡುತ್ತಿಲ್ಲವಷ್ಟೆ?
ಕೆಲ: ಇಲ್ಲ. ಮಹಾರಾಣಿ. ಒಳ್ಳೆಯ ಗುಣಮಟ್ಟದ ಚರ್ಮದ್ದೇ ಶೂಗಳು.
ರಾಣಿ: ಆದರೂ ರಾತ್ರಿ ಬೆಳಗಾಗುವುದರೊಳಗೆ ಶೂಗಳು ಸವೆದು ತೂತುಗಳಾಗಿರುತ್ತವೆ. ಇದರ ರಹಸ್ಯವನ್ನು ಭೇದಿಸಲು ಯಾರಿಂದಲೂ ಆಗದಿರುವುದು ನನಗೆ ಬಹಳ ಆಶ್ಚರ್ಯವುಂಟುಮಾಡಿದೆ.
ಕೆಲ: ನನಗೂ ಆಶ್ಚರ್ಯ ಮಹಾರಾಣಿ.
ರಾಣಿ: ನಿನಗೆ ಆಶ್ಚರ್ಯ ಇದ್ದರೇನು ಇಲ್ಲದಿದ್ದರೇನು? ತಲೆನೋವು ಇಲ್ಲವಲ್ಲ? (ಸೇವಕಿ ಪೆಚ್ಚಾಗುತ್ತಾಳೆ) ಅರಮನೆಯೊಳಗೆ ಇಲಿ ಹೆಗ್ಗಣಗಳು ತುಂಬಿಕೊಂಡಿಲ್ಲವಷ್ಟೆ?
ಕೆಲ: ಇಲ್ಲ ಮಹಾರಾಣಿ.
(ಒಬ್ಬ ಸೇವಕನ ಪ್ರವೇಶ)
ಸೇವ: ಮಹಾರಾಣಿಯವರಿಗೆ ಪ್ರಣಾಮಗಳು. ಒಬ್ಬ ಯುವಕ ತಮ್ಮ ದರ್ಶನಕ್ಕಾಗಿ ಬಂದಿದ್ದಾನೆ.
ರಾಣಿ: ಯಾರಂತೆ?
ಸೇವ: ಯಾವುದೋ ರಾಜ್ಯದ ರಾಜಕುಮಾರನಂತೆ. ರಾಜಕುಮಾರಿಯರ ಶೂ ಸವೆಯುವ ಕಾರಣವನ್ನು ತಾನು ಪತ್ತೆ ಮಾಡುತ್ತೇನೆ ಎನ್ನುತ್ತಿದ್ದಾನೆ.
ಕೆಲ: ಹತ್ತು ಮಂದಿ ರಾಜಕುಮಾರರು ಪತ್ತೆ ಮಾಡಲು ಬಂದು ಕತ್ತೆಗಳ ಹಾಗೆ ಈಗಾಗಲೇ ಸೆರೆಮನೆಯಲ್ಲಿ ಕೊಳೀತಿದ್ದಾರೆ ಎಂದು ಹೇಳಿದೆಯ?
ಸೇವ: ಹೇಳಿದೆ ಮಹಾರಾಣಿ. ಆದರೂ ನಾನು ಈ ರಹಸ್ಯವನ್ನು ಭೇದಿಸುತ್ತೇನೆ ಎನ್ನುತ್ತಿದ್ದಾನೆ.
ರಾಣಿ: ಸರಿ ಕರೆದುಕೊಂಡು ಬಾ. (ರಾಣಿ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾಳೆ. ಸೇವಕನ ಜೊತೆಯಲ್ಲಿ ಬಹಳ ತೆಳ್ಳಗಿನ ಯುವಕನ ಪ್ರವೇಶ. ತಲೆಬಾಗಿ ವಂದಿಸುತ್ತಾನೆ. ಸೇವಕ ಹೋಗುತ್ತಾನೆ)
ರಾಣಿ: (ಆಶ್ಚರ್ಯದಿಂದ) ನೀನು ಯಾವ ರಾಜ್ಯದ ರಾಜಕುಮಾರ?
ಕೆಲ: ಕೇರಳಾಪುರದ ರಾಜಕುಮಾರ.
ರಾಣಿ: ನೀನು ಇಲಿ ಹಿಡಿಯಲು ಬಂದಿರುವೆಯ?
ರಾಕು: ನಾನು ರಾಜಕುಮಾರಿಯರ ಶೂ ಸವೆಯುವ ಕಾರಣವನ್ನು ಪತ್ತೆ ಮಾಡಲು ಬಂದಿರುವೆ.
ರಾಣಿ: ಹತ್ತು ಮಂದಿ ರಾಜಕುಮಾರರು ಸೆರೆಮನೆಯಲ್ಲಿದ್ದಾರೆ.
ರಾಕು: ಗೊತ್ತು ಮಹಾರಾಣಿ.
ರಾಣಿ: ನಿನ್ನಿಂದ ಆಗದಿದ್ದರೆ ನಿನಗೂ ಸೆರೆಮನೆಯೆ ಗತಿ.
ರಾಕು: ಆಗಲಿ ಮಹಾರಾಣಿ.
ರಾಣಿ: (ಸೇವಕಿಯೊಡನೆ) ಇವನನ್ನು ಕರೆದುಕೊಂಡು ಹೋಗಿ ಕುಮಾರಿಯರ ಹಿಂದಿನ ಕೋಣೆಯಲ್ಲಿ ಕುಳಿತುಕೊಳ್ಳಿಸು. (ರಾಜಕುಮಾರನೊಡನೆ) ನಾಳೆ ಬೆಳಿಗ್ಗಿನ ವರೆಗೆ ನಿನಗೆ ಉಪವಾಸ. ಯಾಕೆಂದರೆ, ಊಟ ಮಾಡಿದರೆ ನಿದ್ರೆ ಬರುತ್ತದೆ.
ರಾಕು: ಆಗಲಿ ಮಹಾರಾಣಿ.
ರಾಣಿ: ನಿನ್ನ ಕೋಣೆಯ ಬಾಗಿಲನ್ನು ಹೊರಗಿನಿಂದ ಭದ್ರಪಡಿಸಲಾಗುತ್ತದೆ. ಕಿಟಿಕಿಯ ಮೂಲಕ ನೀನು ರಾಜಕುಮಾರಿಯರ ಚಲನವಲನಗಳನ್ನು ಗಮನಿಸಬೇಕು. ಕೋಣೆಯೊಳಗೆ ಒಂದು ಗಂಟೆ ಇದೆ. ಏನಾದರೂ ಪತ್ತೆಯಾದರೆ ಗಂಟೆ ಬಾರಿಸು.
ರಾಕು: ಮಧ್ಯ ರಾತ್ರಿಯಾದರೂ ಬಾರಿಸಲೆ ಮಹಾರಾಣಿ?
ರಾಣಿ: ಮಧ್ಯ ರಾತ್ರಿಯಾದರೂ ಬಾರಿಸು. ಹೆದರಬೇಡ. (ಸೇವಕಿಯೊಡನೆ) ಕರೆದುಕೊಂಡು ಹೋಗು.
ಫೇಡ್ ಔಟ್
ದೃಶ್ಯ ಮೂರು:
(ಮೊದಲ ದೃಶ್ಯದ ರಾಜಕುಮಾರಿಯರ ಕೋಣೆ. ರಾಜಕುಮಾರಿಯರು ಮಲಗಲು ಅಣಿಯಾಗುತ್ತಿದ್ದಾರೆ. ಕಿಟಿಕಿಯಲ್ಲಿ ರಾಜಕುಮಾರನ ಮುಖ. ಎಲ್ಲರಿಗಿಂತ ಹಿರಿಯ ಹುಡುಗಿ ಅವನೊಡನೆ ಮಾತಾಡುತ್ತಾಳೆ)
೧ನೆ: ಹಸಿವಿಲ್ಲವೆ ರಾಜಕುಮಾರ?
ರಾಕು: ಇದೆ ರಾಜಕುಮಾರಿ.
೧ನೆ: ಊಟ ಮಾಡಿಲ್ಲವೆ?
ರಾಕು: ಇಲ್ಲ ರಾಜಕುಮಾರಿ.
೧ನೆ: ಯಾಕೆ?
ರಾಕು: ಊಟ ಮಾಡಿದರೆ ನಿದ್ದೆ ಬರುತ್ತದೆ ರಾಜಕುಮಾರಿ.
೧ನೆ: ಬಾಯಾರಿಕೆ ಇಲ್ಲವೆ ರಾಜಕುಮಾರ?
ರಾಕು: ಇದೆ ತುಂಬಾ ಇದೆ ರಾಜಕುಮಾರಿ.
೧ನ: ಬಾಯಾರಿಕೆ ಜಾಸ್ತಿಯಾದರೂ ನಿದ್ದೆ ಬಂದುಬಿಡುತ್ತದೆ.
ರಾಕು: ನಿಜ ರಾಜಕುಮಾರಿ.
೧ನೆ: ಬಾಯಾರಿಕೆಗೆ ಏನಾದರೂ ಕೊಡಲೆ?
ಸೈನಿ: ಏನಿದೆ ರಾಜಕುಮಾರಿ?
೧ನೆ: ನಾವು ಕುಡಿಯುವ ತಂಪು ಪಾನೀಯವಿದೆ. ಕೊಡಲೆ?
ಸೈನಿ: ಕೊಡಿ ರಾಜಕುಮಾರಿ.
೧ನೆ: (ಪಾನೀಯವಿರುವ ಒಂದು ತೆಳ್ಳಗಿನ ಲೋಟವನ್ನು ಕಿಟಕಿಯ ಸರಳುಗಳ ಎಡೆಯಿಂದ ಕೊಡುತ್ತಾಳೆ) ಲೋಟ ವಾಪಾಸು ಕೊಡು ರಾಜಕುಮಾರ. ಅವನು ಪಾನೀಯವನ್ನು ಕುಡಿದು ಖಾಲಿ ಲೋಟವನ್ನು ವಾಪಾಸು ಕೊಡುತ್ತಾನೆ. ಎಲ್ಲರೂ ಹಾಸಿಗೆ ಸೇರುತ್ತಾರೆ. ೧ನೆಯವಳೂ ಮಲಗುತ್ತಾಳೆ. ರಂಗದ ಮೇಲಿನ ಬೆಳಕು ನಿಧಾನವಾಗಿ ಆರುತ್ತದೆ. ನಿಧಾನವಾಗಿ ವಾಪಾಸು ಬೆಳಕು ಬರುವಾಗ ಗೊರಕೆಯ ಶಬ್ದ ಕೇಳಿಸುತ್ತದೆ. ಎಲ್ಲರೂ ಎದ್ದು ಕುಳಿತುಕೊಳ್ಳುತ್ತಾರೆ.)
೧ನೆ: (ನಗುತ್ತಾ) ಈ ಮಹಾಶಯನ ಗೊರಕೆ ಈ ವರೆಗೆ ಬಂದ ಹತ್ತು ರಾಜಕುಮಾರರ ಗೊರಕೆಗಿಂತಲೂ ಜೋರಾಗಿದೆ.
೨ನೆ: ದೂರದ ಕೇರಳಾಪುರದಿಂದ ಬಂದವನಲ್ಲವೆ? ತುಂಬಾ ಬಾಯಾರಿರಬೇಕು.
೧ನೆ: ಸಂಶಯವೇ ಬರಲಿಲ್ಲ. ಪಾಪ. ಪೂರ್ತಿ ಕುಡಿದು ಬಿಟ್ಟ.
೯ನೆ: ನಾಳೆ ಸಂಜೆಗೆ ಹನ್ನೊಂದನೆಯ ಬಂದಿಯಾಗುತ್ತಾನೆ.
೧ನೆ: ಸರಿ. ಡ್ರೆಸ್ ಮಾಡಿ. ಬೇಗ ಹೊರಡಿ.
೪ನೆ: ನಿನ್ನೆಯದೇ ದಾರಿಯಲ್ಲಿ?
೧ನೆ: ಬೇಡ ಮೊನ್ನೆಯ ದಾರಿಯಲ್ಲಿ ಹೋಗೋಣ.
೫ನೆ: ಅದು ತುಂಬಾ ದೂರ.
೧ನೆ: ಸೈನಿಕರ ಕೈಗೆ ಸಿಕ್ಕಿಬೀಳದಿರಬೇಕಾದರೆ ನಾವು ದಾರಿ ಬದಲಿಸುತ್ತಾ ಇರಬೇಕು.
೧೦ನೆ: ಬೇಗ ಬೇಗ ಇಳಿಯಿರಿ.
(ಎಲ್ಲರೂ ಎದ್ದು ನೃತ್ಯದ ಉಡುಪು, ಆಭರಣ ತೊಟ್ಟು ಶೃಂಗಾರ ಮಾಡಿಕೊಂಡು ಹೊರಡಲು ಸಿದ್ಧರಾಗುತ್ತಾರೆ. ಎಲ್ಲರೂ ಸೇರಿ ಮಂಚವನ್ನು ಓರೆಯಾಗಿ ನಿಲ್ಲಿಸುತ್ತಾರೆ. ಮಂಚದ ಅಡಿಯಲ್ಲಿರುವ ಸುರಂಗ ದ್ವಾರದಲ್ಲಿ ಕೆಳಗಿಳಿಯಲು ಸಾಲು ನಿಲ್ಲುತ್ತಾರೆ. ೨ನೆಯವಳು ಮೊದಲು ಇಳಿಯುತ್ತಾಳೆ. ಮೆಲ್ಲನೆ ಚೀರುತ್ತಾಳೆ.)
೧ನೆ: ಏನಾಯ್ತು?
೨ನೆ: ಒಂದು ಬಾವಲಿ.
೧ನೆ: ಬಾವಲಿಗೆ ಹೆದರಬೇಡ.
೩ನೆ: ಸುರಂಗದ ತುಂಬಾ ಬಾವಲಿಗಳಿವೆ.
೮ನೆ: ಸುರಂಗಗಳಿಲ್ಲದಿದ್ದರೆ ಬಾವಲಿಗಳು ಮತ್ತೆಲ್ಲಿ ಇರುವುದು? (ನಗುತ್ತಾಳೆ)
೧ನೆ: ಶ್ಶ್! ಗದ್ದಲ ಎಬ್ಬಿಸಬೇಡಿ. ಕೇರಳಾಪುರದವನಿಗೆ ಎಚ್ಚರವಾದೀತು!
೭ನೆ: ಅವನಿಗೆ ಎಚ್ಚರಾಗುವುದು ನಾಳೆ ಬೆಳಿಗ್ಗೆ ಸೂರ್ಯ ಎದ್ದ ಮೇಲೆ.
(ಒಬ್ಬೊಬ್ಬರೇ ಇಳಿಯುತ್ತಾರೆ. ಹತ್ತನೆಯವಳು ಚೀರುತ್ತಾಳೆ)
೧ನೆ: ಏನಾಯ್ತು?
೧೦ನೆ: ಏನಿಲ್ಲ . ಮತ್ತೊಂದು ಬಾವಲಿ.
೧ನೆ: (ಕೊನೆಯದಾಗಿ ಇಳಿಯುತ್ತಾ) ಬಾವಲಿಗಳಿಗೆ ಹೆದರ್ಬೇಡಿ ಅಂತ ದಿನಾ ಹೇಳ್ಬೇಕಾ ನಿಮ್ಗೆ?
ಫೇಡ್ ಔಟ್
ದೃಶ್ಯ ನಾಲ್ಕು: ಕಾಡಿನ ದಾರಿ
(ಒಬ್ಬ ಸೈನಿಕ ಅತ್ತಿತ್ತ ನೋಡುತ್ತಾ ನಡೆಯುತ್ತಿದ್ದಾನೆ. ಬೆನ್ನ ಮೇಲೆ ಒಂದು ಬಟ್ಟೆಯ ಮೂಟೆಯಿರಿಸಿಕೊಂಡಿರುವ ಒಬ್ಬಳು ಮುದುಕಿ ಎದುರಾಗುತ್ತಾಳೆ)
ಸೈನಿ: ಯಾರು ನೀನು?
ಮು: ಕಾಣಿಸ್ತಿಲ್ವ ನಿಂಗೆ? ನಾನೊಬ್ಬಳು ಬಡ ಮುದುಕಿ.
ಸೈನಿ:ಎಲ್ಲಿಗೆ ಹೋಗ್ತಾ ಇದ್ದಿ?
ಮು: ನನ್ನ ಮನೆಗೆ ಹೋಗ್ತಾ ಇದ್ದೇನೆ.
ಸೈನಿ: ಎಲ್ಲಿಗೆ ಹೋಗಿದ್ದೆ?
ಮು: ಬಟ್ಟೆ ಒಗೆಯಲು ಹೊಳೆಗೆ ಹೋಗಿದ್ದೆ. ನೀನು ಎಲ್ಲಿಗೆ ಹೋಗ್ತಾ ಇರುವೆ?
ಸೈನಿ: ನಾನು ಎಲ್ಲಿಗೂ ಹೋಗ್ತಾ ಇಲ್ಲ. ಹುಡುಕುತ್ತಿರುವೆ.
ಮು: ಏನನ್ನು?
ಸೈನಿ: ನಮ್ಮ ರಾಜಕುಮಾರಿಯರ ಪಾದರಕ್ಷೆ ಸವೆಯಲು ಕಾರಣವನ್ನು.
ಮು: ಇನ್ನೂ ಕಾರಣ ಸಿಕ್ಕಿಲ್ಲವೆ?
ಸೈನಿ: ಇಲ್ಲ. ನಿನ್ನೆ ಕೇರಳಾಪುರದಿಂದ ಬಂದ ಹನ್ನೊಂದನೆಯ ರಾಜಕುಮಾರನನ್ನು ಕೂಡ ಸೆರೆಮನೆಗೆ ಕಳಿಸಿದರು. ಅವನನ್ನು ಕೂಡ ಬೆಟ್ಟದ ಮೇಲಿನ ಸೆರೆಮನೆಯಲ್ಲಿ ಹಾಕಿ ಬಂದೆ.
ಮು: ಪಾಪ. ಅಲ್ಲಾ, ರಾಜಕುಮಾರಿಯರ ಪಾದರಕ್ಷೆ ಸವೆಯುವ ಕಾರಣವನ್ನು ಕಂಡು ಹಿಡಿದರೆ ನಿನಗೇನು ಸಿಗುತ್ತದೆ?
ಸೈನಿ: ಅರ್ಧ ರಾಜ್ಯ ಮತ್ತು ಒಬ್ಬಳು ರಾಜಕುಮಾರಿ ಸಿಗುತ್ತಾಳೆ.
ಮು: ನೀನು ಸಾಮಾನ್ಯ ಸೈನಿಕ. ನಿಂಗೆ ರಾಜಕುಮಾರಿಯನ್ನು ಕೊಡುತ್ತಾಳಾ ಆ ಜೋರಿನ ಮಹಾರಾಣಿ?
ಸೈನಿ: ಏಯ ಮುದುಕಿ. ಮೆತ್ತಗೆ ಮಾತಾಡು. ಕಾಡಿನ ಮರಗಳಿಗೂ ಕಿವಿಗಳಿವೆ.
ಮು: ಇರಲಿ ನನಗೇನು? ನೀನು ಕಾರಣ ಪತ್ತೆ ಹಚ್ಚಿದರೆ ನಿಂಗೂ ಸಿಗುತ್ತದಾ ಅರ್ಧ ರಾಜ್ಯ ಮತ್ತು ರಾಜಕುಮಾರಿ ಅಂತ ಕೇಳಿದೆ.
ಸೈನಿ: ಹೌದು. ಈಗ ಮಹಾರಾಣಿಯವರು ನಿಯಮಗಳನ್ನು ಸಡಲಿಸಿದ್ದಾರೆ. ರಹಸ್ಯವನ್ನು ಭೇದಿಸಲು ಹನ್ನೊಂದು ಮಂದಿಯೂ ಸೋತಿರುವುದರಿಂದ ಸಾಮಾನ್ಯರಿಗೂ ಅವಕಾಶ ಎಂದು ಘೋಷಿಸಿದ್ದಾರೆ.
ಮು: ಹಾಗಾದರೆ ನಿನಗೆ ನಾನು ಸಹಾಯ ಮಾಡುತ್ತೇನೆ. ನೀನು ಗೆದ್ದರೆ, ನನ್ನ ನೆನಪು ನಿನಗೆ ಇರುತ್ತದೆಯೆ? (ನಗುತ್ತಾಳೆ)
ಸೈನಿ: ಯಾಕೆ ಹಾಗೆನ್ನುತ್ತಿ? ಖಂಡಿತ ಇರುತ್ತದೆ.
ಮು: ಸರಿ ಹಾಗಾದರೆ. ನೀನು ಸವಾಲನ್ನು ಸ್ವೀಕರಿಸಬಹುದು. ನಿನ್ನನ್ನು ರಾಜಕುಮಾರಿಯರ ಕೋಣೆಯ ಹಿಂಬದಿಯ ಕೋಣೆಯಲ್ಲಿ ಕೂಡಿಹಾಕುತ್ತಾರಲ್ಲಾ. ರಾತ್ರಿ ನಿನಗೆ ಅವರು ಒಂದು ಪಾನೀಯವನ್ನು ಕೊಡುತ್ತಾರೆ. ಅದನ್ನು ತೆಗೆದುಕೊಂಡು ಕುಡಿದಂತೆ ನಟಿಸು. ಕುಡಿಯಬೇಡ. ಅನಂತರ ನಿದ್ದೆ ಬಂದಂತೆ ನಟಿಸು. ಹುಡುಗಿಯರು ಎದ್ದು ಹೊರಹೊರಡುವಾಗ (ತನ್ನ ಬಟ್ಟೆಯ ಗಂಟಿನೊಳಗಿಂದ ಒಂದು ಕಪ್ಪಗಿನ ನಿಲುವಂಗಿ ಹೊರಗೆ ತೆಗೆದು)ಈ ನಿಲುವಂಗಿಯನ್ನು ಹಾಕಿಕೊಂಡು ಅವರನ್ನು ಹಿಂಬಾಲಿಸು. ಇದನ್ನು ಧರಿಸಿದರೆ ನೀನು ಅವರ ಕಣ್ಣಿಗೆ ಕಾಣಿಸುವುದಿಲ್ಲ.
ಸೈನಿ: ಧನ್ಯವಾದಗಳು. ನೀನು ಹೇಳಿದ ಹಾಗೆಯೆ ಮಾಡುತ್ತೇನೆ.
ಫೇಡ್ ಔಟ್
ದೃಶ್ಯ ಐದು:
(ರಾಣಿ ಅಲಂಕೃತವಾದ ಆಸನದಲ್ಲಿ ಕುಳಿತಿದ್ದಾಳೆ. ಸೇವಕಿಯ ಪ್ರವೇಶ)
ಸೇವಕಿ: ಮಹಾರಾಣಿ. ಒಬ್ಬ ಸೈನಿಕ ಮಹಾರಾಣಿಯರನ್ನು ಕಾಣಲು ಬಂದಿದ್ದಾನೆ.
ರಾಣಿ: ಸೈನಿಕನೆ? ಏನು ವಿಚಾರ?
ಸೇವಕಿ: ಏನೂ ಹೇಳುತ್ತಿಲ್ಲ. ಮಹಾರಾಣಿಯವರೊಡನೆ ಹೇಳುವಂಥ ಮಹತ್ವದ ವಿಚಾರ ಎನ್ನುತ್ತಿದ್ದಾನೆ.
ರಾಣಿ: ಸರಿ ಕರೆದುಕೊಂಡು ಬಾ.
(ಸೇವಕಿ ಮತ್ತು ಸೈನಿಕನ ಪ್ರವೇಶ. ಸೈನಿಕ ತಲೆಬಾಗಿ ವಂದಿಸುತ್ತಾನೆ)
ಸೈನಿ: ಪ್ರಣಾಮಗಳು ಮಹಾರಾಣಿ.
ರಾಣಿ: ಯಾರು ನೀನು?
ಸೈನಿ: ನಾನು ಒಬ್ಬ ಸಾಮಾನ್ಯ ಸೈನಿಕ.
ರಾಣಿ: ಏನು ಮಹತ್ವದ ವಿಚಾರ? ಹೇಳು.
ಸೈ: ರಾಜಕುಮಾರಿಯರ ಪಾದರಕ್ಷೆಗಳು ಸವೆಯುವ ವಿಚಾರ.
ರಾಣಿ: ಸರಿ ಹೇಳು.
ಸೈನಿ: ಅಪ್ಪಣೆ ಕೊಟ್ಟರೆ ರಾಜಕುಮಾರಿಯರ ಪಾದರಕ್ಷೆ ಯಾಕೆ ಸವೆಯುತ್ತದೆ ಎಂಬುದನ್ನು ನಾನು ಪತ್ತೆ ಮಾಡುತ್ತೇನೆ.
ರಾಣಿ: ಏನು ನೀನು ಪತ್ತೆ ಮಾಡುತ್ತೀಯ?
ಸೈನಿ: ಹೌದು ಮಹಾರಾಣಿ.
ರಾಣಿ: ನೀನು? ಹನ್ನೊಂದು ರಾಜಕುಮಾರರಿಂದ ಅದು ಸಾಧ್ಯವಾಗಲಿಲ್ಲ! ಗೊತ್ತಾ ನಿನಗೆ?
ಸೈನಿ: ಗೊತ್ತು ಮಹಾರಾಣಿ.
ರಾಣಿ: ನೀನೊಬ್ಬ ಸಾಮಾನ್ಯ ಸೈನಿಕ.
ಸೈ: ಕೆಲವು ವಿಚಾರಗಳು ಒಬ್ಬ ಸಾಮಾನ್ಯ ಸೈನಿಕನಿಗೆ ಗೊತ್ತಿರುವಷ್ಟು ರಾಜಕುಮಾರರುಗಳಿಗೆ ಗೊತ್ತಿರುವುದಿಲ್ಲ ಮಹಾರಾಣಿ.
ರಾಣಿ: ಸರಿ ಹಾಗಾದರೆ. ಶರತ್ತುಗಳು ಗೊತ್ತಿವೆಯೆ?
ಸೇ: ಗೊತ್ತಿವೆ ಮಹಾರಾಣಿ. ಗೆದ್ದರೆ ಅರ್ಧ ರಾಜ್ಯ ಮತ್ತು ಒಬ್ಬಳು ರಾಜಕುಮಾರಿ.
ರಾಣಿ: ಸೋತರೆ ಆಜನ್ಮ ಸೆರೆಮನೆ ವಾಸ.
ಸೈ: ಆಗಲಿ ಮಹಾರಾಣಿ.
ರಾಣಿ: (ಸೇವಕಿಯೊಡನೆ) ಕರೆದುಕೊಂಡು ಹೋಗು. ರಾಜಕುಮಾರಿಯರ ಕೋಣೆಯ ಹಿಂದಿನ ಕೋಣೆಯಲ್ಲಿ ಕೂಡಿಹಾಕು. ನಾಳೆ ಬೆಳಿಗ್ಗಿನ ತನಕ ಯಾವುದೇ ಆಹಾರ ಇಲ್ಲ. ನೀರು ಕೂಡ ಇಲ್ಲ.
ಸೇ: ಅಪ್ಪಣೆ ಮಹಾರಾಣಿ.
(ಸೇವಕಿಯೊಡನೆ ಸೈನಿಕನ ನಿರ್ಗಮನ)
ಫೇಡ್ ಔಟ್
ದೃಶ್ಯ ಆರು: ರಾಜಕುಮಾರಿಯರ ಕೋಣೆ
(ಮೊದಲ ದೃಶ್ಯದ ರಾಜಕುಮಾರಿಯರ ಕೋಣೆ. ರಾಜಕುಮಾರಿಯರು ಮಲಗಲು ಅಣಿಯಾಗುತ್ತಿದ್ದಾರೆ. ಕಿಟಿಕಿಯಲ್ಲಿ ಸೈನಿಕನ ಮುಖ ಕಾಣಿಸುತ್ತಿದೆ. ಎಲ್ಲರಿಗಿಂತ ಹಿರಿಯ ಹುಡುಗಿ ಅವನೊಡನೆ ಮಾತಾಡುತ್ತಾಳೆ)
೧ನೆ: ಹಸಿವಿಲ್ಲವೆ ರಾಜಕುಮಾರ?
ಸೈನಿ: ನಾನು ರಾಜಕುಮಾರನಲ್ಲ. ನಾನು ಒಬ್ಬ ಸಾಮಾನ್ಯ ಸೈನಿಕ.
೧ನೆ: ಸಾಮಾನ್ಯ ಸೈನಿಕನೆ? ರಾಜಕುಮಾರರೆಲ್ಲ ಖಾಲಿಯಾದರೆ?
ಸೈನಿ: ಯಾಕೆ ರಾಜಕುಮಾರಿ? ಒಬ್ಬ ಸಾಮಾನ್ಯ ಸೈನಿಕನಿಗೆ ಇಂಥ ಸವಾಲನ್ನು ಸ್ವೀಕರಿಸುವ ಹಕ್ಕು ಇಲ್ಲವೆ?
೧ನೆ: ಖಂಡಿತ ಇದೆ. ನಿನಗೆ ಹಸಿವಿಲ್ಲವೆ ಸಾಮಾನ್ಯ ಸೈನಿಕ? (ನಗುತ್ತಾಳೆ)
ಸೈನಿ: ಇಲ್ಲ.
೧ನೆ: (ಆಶ್ಚರ್ಯದಿಂದ) ಇಲ್ಲವೆ? ಯಾಕಿಲ್ಲ್ಲ?
ಸೈನಿ: ಒಬ್ಬ ಸಾಮಾನ್ಯ ಸೈನಿಕನಿಗೆ ಒಬ್ಬ ರಾಜಕುಮಾರನಿಗಿರುವಂಥ ಹಸಿವುಗಳು ಇರುವುದಿಲ್ಲ.
೧ನೆ: (ತುಸು ಗಾಬರಿಯಿಂದ) ಬಾಯಾರಿಕೆ ಕೂಡ ಇಲ್ಲವೆ? (ಇತರರು ಕೂಡ ಆತಂಕದಿಂದ ಅವನ ಉತ್ತರಕ್ಕೆ ಕಾಯುತ್ತಾರೆ)
ಸೈನಿ: ಬಾಯಾರಿಕೆ ಇದೆ ರಾಜಕುಮಾರಿ. ತುಂಬಾ ಬಾಯಾರಿಕೆ ಇದೆ. (ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುತ್ತಾರೆ)
೧ನೆ: ಬಾಯಾರಿಕೆಗೆ ಏನಾದರೂ ಕೊಡಲೆ?
ಸೈನಿ: ಏನಿದೆ ರಾಜಕುಮಾರಿ?
೧ನೆ: ನಾವು ಕುಡಿಯುವ ತಂಪು ಪಾನೀಯವಿದೆ. ಕೊಡಲೆ?
ಸೈನಿ: ಕೊಡಿ ರಾಜಕುಮಾರಿ.
ಸೈನಿ: (ಪಾನೀಯವಿರುವ ಒಂದು ತೆಳ್ಳಗಿನ ಗಾಜಿನ ಲೋಟದಲ್ಲಿ ಬಾಟಲಿಯನ್ನು ಕಿಟಿಕಿಯ ಸರಳುಗಳ ಎಡೆಯಿಂದ ಕೊಡುತ್ತಾಳೆ) ಲೋಟವನ್ನು ವಾಪಾಸು ಕೊಡು ಸಾಮಾನ್ಯ ಸೈನಿಕ. (ನಗುತ್ತಾಳೆ)
೧ನೆ: ಆಗಲಿ ರಾಜಕುಮಾರಿ. (ಲೋಟವನ್ನು ತೆಗೆದುಕೊಳ್ಳುವಾಗಲೇ ಯಾರಿಗೂ ತಿಳಿಯದಂತೆ ಒಂದು ಜಿರಳೆಯನ್ನು ಕಿಟಕಿಯಿಂದ ಕೆಳ ಹಾಕುತ್ತಾನೆ. ಜಿರಳೆಯನ್ನು ಕಂಡು ಒಬ್ಬಳು ರಾಜಕುಮಾರಿ ಚೀರಿ ಓಡುತ್ತಾಳೆ. ಏನು ಏನು ಎಂದು ಎಲ್ಲರೂ ಚೆಲ್ಲಪಿಲ್ಲಿಯಾಗಿ ಓಡುತ್ತಾರೆ. ಸೈನಿಕ ಲೋಟದಲ್ಲ್ಲಿದ್ದ ಪಾನಕವನ್ನು ತಟ್ಟನೆ ಅತ್ತ ಚೆಲ್ಲಿ ಲೋಟವನ್ನು ವಾಪಾಸು ಕೊಡುತ್ತಾ) ಬಹಳ ಚೆನ್ನ್ನಾಗಿದೆ ರಾಜಕುಮಾರಿ. ಧನ್ಯವಾದಗಳು.
(ಎಲ್ಲರೂ ಹಾಸಿಗೆ ಸೇರುತ್ತಾರೆ. ಕೊನೆಗೆ ೧ನೆಯವಳೂ ಮಲಗುತ್ತಾಳೆ. ರಂಗದ ಮೇಲೆ ಬೆಳಕು ನಿಧಾನವಾಗಿ ಆರುತ್ತದೆ. ನಿಧಾನವಾಗಿ ವಾಪಾಸು ಬೆಳಕು ಬರುವಾಗ ಗೊರಕೆಯ ಶಬ್ದ ಕೇಳಿಸುತ್ತದೆ. ಎಲ್ಲರೂ ಎದ್ದು ಕುಳಿತುಕೊಳ್ಳುತ್ತಾರೆ.)
೧ನೆ: ಹಿಂದೆ ಬಂದ ಹನ್ನೊಂದು ಮಂದಿಯೂ ಇಷ್ಟು ಜೋರಾಗಿ ಗೊರಕೆ ಹೊಡೆಯಲಿಲ್ಲ.
೨ನೆ: ಇವನಿಗೆ ಕೂಡ ಸಂಶಯ ಬರಲಿಲ್ಲ. ಪಾಪ. ಪೂರ್ತಿ ಕುಡಿದು ಬಿಟ್ಟ.
೩ನೆ: ತುಂಬಾ ಬಾಯಾರಿಕೆಯಾಗಿರಬೇಕು.
೧ನೆ: ರಾಜಕುಮಾರರಿಗಿಂತ ಸೈನಿಕರಿಗೆ ಬಾಯಾರಿಕೆ ಜಾಸ್ತಿಯಿರಲೇ ಬೇಕು.
೧೨ನೆ: ಪಾಪ. ನಾಳೆ ಸಂಜೆಗೆ ಹನ್ನೆರಡನೆಯ ಬಂದಿಯಾಗುತ್ತಾನೆ.
೧ನೆ: ಸರಿ ಬೇಗ ಬೇಗ ಡ್ರೆಸ್ ಮಾಡಿ. ಹೊರಡಿ. (ಎಲ್ಲರೂ ಎದ್ದು ನೃತ್ಯದ ಉಡುಪು, ಆಭರಣ ತೊಟ್ಟು ಶೃಂಗಾರ ಮಾಡಿಕೊಳ್ಳುತ್ತಾರೆ. ಎಲ್ಲರೂ ಸಿದ್ಧರಾಗಿ ಒಟ್ಟು ಸೇರಿ ಮಂಚವನ್ನೆತ್ತಿ ಓರೆಯಾಗಿ ನಿಲ್ಲಿಸಿದಾಗ ಸೈನಿಕ ಗೊರಕೆಯ ಶಬ್ದ ಮಾಡುತ್ತಾ ಎದ್ದು ಕಿಟಕಿಯಿಂದ ನೋಡುತ್ತಾನೆ. ಎಲ್ಲರೂ ಹೊರಟುಹೋದ ಬಳಿಕ ಸೈನಿಕ ಬಲಹಾಕಿ ಕಿಟಕಿಯನ್ನು ಕಿತ್ತು ಅದರ ಮೂಲಕ ಕೋಣೆಯೊಳಗೆ ಜಿಗಿದು ಅವರು ಹೋದ ದಾರಿಯಲ್ಲಿ ಹೋಗುತ್ತಾನೆ)
ಫೇಡ್ ಔಟ್
ದೃಶ್ಯ ಏಳು: ವಿಶಾಲವಾದ ಕೋಣೆ
(ಕೋಣೆಯೊಳಗೆ ಕೈದಿಗಳ ಉಡುಪಿನಲ್ಲಿ ಹನ್ನೊಂದು ಮಂದಿ ರಾಜಕುಮಾರರು. ಸ್ವಲ್ಪ ಹೊತ್ತಿನಲ್ಲಿ ಹುಡುಗಿಯರ ಉತ್ಸಾಹದ ಮಾತಿನ ದನಿ. “ಬಂದರು! ಬಂದರು!” ಎಂದು ರಾಜಕುಮಾರರು ಸಂಭ್ರಮಗೊಳ್ಳುತ್ತಾರೆ.
ಹಿಂಬದಿಯ ಗೋಡೆಯಲ್ಲಿ ಒಂದು ದೊಡ್ಡ ತೂತು ಕೊರೆಯಲಾಗಿದೆ. ಅದರ ಮೇಲೆ ದಪ್ಪನೆಯ ಕಾಗದ ಅಂಟಿಸಿ ಮುಚ್ಚಲಾಗಿದೆ. ಒಬ್ಬ ರಾಜಕುಮಾರ ಅದನ್ನು ಕಿತ್ತು ತೆಗೆಯುತ್ತಾನೆ. ಆ ತೂತಿನಿಂದ ರಾಜಕುಮಾರಿಯರು ಒಬ್ಬೊಬ್ಬರಾಗಿ ಪ್ರವೇಶಿಸುತ್ತಾರೆ. ಸಂಭ್ರಮದ ಹಸ್ತ ಲಾಘವ. ವಾದ್ಯ ಸಂಗೀತ ಆರಂಭ. ಹನ್ನೊಂದು ರಾಜಕುಮಾರ ರಾಜಕುಮಾರಿ ಜೋಡಿಗಳ ನೃತ್ಯ ಆರಂಭ. ಗೋಡೆಯ ತೂತಿನ ಮೂಲಕ ಸೈನಿಕ ಒಳಬರುತ್ತಾನೆ. ಅವನು ಮುದುಕಿ ಕೊಟ್ಟ ಕಪ್ಪು ಅಂಗಿ ತೊಟ್ಟಿರುವುದರಿಂದ ಯಾರಿಗೂ ಕಾಣಿಸುವುದಿಲ್ಲ. ಎಲ್ಲರಿಗಿಂತ ಹಿರಿಯವಳು ಒಂದು ಕಡೆ ಕುಳಿತು ಭಾವರಹಿತಳಾಗಿ ನರ್ತನ ವೀಕ್ಷಿಸುತ್ತಾಳೆ. ಅವಳು ಒಂಟಿಯಾಗಿರುವುದನ್ನು ನೋಡಿ ಸೈನಿಕನಿಗೆ ಮರುಕವುಂಟಾಗುತ್ತದೆ. ಅವಳೊಡನೆ ನರ್ತಿಸಲು ಬಳಿ ಹೋಗಲು ಮನಸ್ಸಾಗುತ್ತದೆ. ಬಳಿ ಹೋಗಿ ಅವಳ ಶಲ್ಲೆಯ ತುದಿಯನ್ನು ಮೆಲ್ಲನೆ ಎಳೆಯುತ್ತಾನೆ. ಜಾರುತ್ತಿರುವ ಶಲ್ಲೆಯನ್ನು ಗಾಳಿಗೆ ಜಾರಿದ್ದಾಗಿರಬೇಕೆಂದುಕೊಂಡು ಎಳೆದು ಹಾಕಿಕೊಳ್ಳುತ್ತಾಳೆ. ಸೈನಿಕ ತಟ್ಟನೆ ಹಿಂದೆ ಸರಿಯುತ್ತಾನೆ. ಯಾರನ್ನೂ ಸ್ಪರ್ಶಿಸದಂತೆ ಜಾಗ್ರತೆ ವಹಿಸುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ನೃತ್ಯಕ್ಕ್ಯೆ ತಾತ್ಕಾಲಿಕ ವಿರಾಮವೀಯುತ್ತಾರೆ. ಮಾತುಕತೆ ನಡೆಯುತ್ತದೆ.)
೨ನೆ: ಸೆರೆಮನೆ ತುಂಬಾ ದೂರ. ಅರಮನೆಗೆ ಹತ್ತಿರವೇ ಇದ್ದರೆ ಚೆನ್ನಾಗಿತ್ತು.
೩ನೆ: ಬೆಟ್ಟ ಹತ್ತಿ ಬರುವಾಗ ಸಾಕೋ ಸಾಕಾಗುತ್ತದೆ.
೪ನೆ: ವಾಪಾಸು ಹೋಗಿ ಮುಟ್ಟಿದ್ದೇ ತಡ ಹಾಸಿಗೆಯಲ್ಲಿ ಹಾಗೇ ಬಿದ್ದು ಬಿಡೋಣ ಅನಿಸುತ್ತದೆ.
(ರಾಜಕುಮಾರರು ಅವರ ಮಾತನ್ನು ಮೋಜಿನಿಂದ ಆಲಿಸುತ್ತಿರುತ್ತಾರೆ)
೨ನೆ: ನೃತ್ಯಕ್ಕೆ ಸಂಗೀತ ಬೇಕಾಗಿತ್ತು.
೯ನೆ: ಸಂಗೀತವಿಲ್ಲದ ನೃತ್ಯ ಬೋರು.
ರಾಕು೯: ಸೆರೆಮನೆಯಲ್ಲಿ ಸಂಗೀತಕಾರರಿರುತ್ತಾರೆಯೆ? (ನಗುತ್ತಾನೆ)
೭ನೆ: ನನಗೆ ಕೊಳಲು ನುಡಿಸಲು ಬರುತ್ತದೆ. ಕೊಳಲು ತರಲೆ?
ರಾಕು೧: ಬೇಡ ಬೇಡ. ಕೊಳಲಿನ ಶಬ್ದ ಅರಮನೆಗೆ ಕೇಳಿಸಬಹುದು!
ರಾಕು೫: ಈ ನರ್ತನವೇ ಯಾವಾಗ ಮೃತ್ಯು ನರ್ತನವಾಗುತ್ತದೋ ಎಂಬ ಚಿಂತೆಯಿರುವಾಗ ಯಾರಿಗಿದೆ ವಾದ್ಯಸಂಗೀತದ ಚಿಂತೆ?
ರಾಕು೨: ನಿಮಗೆ ಈ ರೀತಿ ನರ್ತಿಸುವ ಅವಕಾಶ ಯಾವತ್ತೂ ಸಿಗಲಿಲ್ಲ ಅಂತ ಕಾಣುತ್ತದೆ.
೩ನೆ: ನಮಗೆ ಸಿಕ್ಕಿದ್ದು ಈ ರೀತಿ ನರ್ತಿಸುವ ಅವಕಾಶ ಮಾತ್ರ!
ರಾಕು೧: ಅಂದರೆ?
೩ನೆ: ಅಂದರೆ ಈ ರೀತಿ ಗುಟ್ಟಾಗಿ ನರ್ತಿಸುವ ಅವಕಾಶ.
ರಾಕು೩: ಅಂದರೆ ನರ್ತಿಸಲು ಕೂಡ ನಿಮಗೆ ಅನುಮತಿ ಇಲ್ಲವೆ?
೨ನೆ: ಇಲ್ಲ. ಅಮ್ಮ ಎಲ್ಲಾ ಬಗೆಯ ನೃತ್ಯಗಳನ್ನೂ ದ್ವೇಷಿಸುತ್ತಾಳೆ. ಅವಳ ಪ್ರಕಾರ ಎಲ್ಲಾ ನರ್ತನವೂ ಸೋಮಾರಿತನದ ಪರಾಕಾಷ್ಠೆ.
ರಾಕು೧: ಸಂಗೀತ?
೪ನೆ: ಸಂಗೀತ ಅಮ್ಮನ ಪ್ರಕಾರ ಸೋಮಾರಿಗಳ ಗೋಳು. (ನಗು)
೧ನೆ: ಗುನುಗುವುದು ಸಹ ಅಪರಾಧ.
೪ನೆ: ಅಮ್ಮನ ಪ್ರಕಾರ ಅದು ತಲೆ ಕೆಟ್ಟಿರುವ ಲಕ್ಷಣ. (ನಗು)
೫ನೆ: ಅರಮನೆಯ ಉದ್ಯಾನವನಕ್ಕೆ ಹೋಗುವುದಿದ್ದರೂ ಕುಣಿದುಕೊಂಡು ಹೋಗುವ ಹಾಗೆ ಜೊತೆಯಲ್ಲಿ ನಮ್ಮನ್ನು ಗಮನಿಸುತ್ತಲೇ ಇರುವ ಸೇವಕಿಯರಿರುತ್ತಾರೆ. ದೂರದಲ್ಲಿ ನಮ್ಮ ಮೇಲೆ ಕಣ್ಣಿರಿಸುವ ಸೈನಿಕರಿರುತ್ತಾರೆ.
೬ನೆ: ಆಟ ಆಡುವಲ್ಲಿಯೂ ಗಿಡ ಮರ ಗೋಡೆ ಗೋಪುರಗಳಲ್ಲಿ ಕಣ್ಣುಗಳಿರುತ್ತವೆ.
೫ನೆ: ಅರಮನೆ ಒಂದು ರೀತಿಯ ಸೆರೆಮನೆ.
೭ನೆ: ಯಾವುದಕ್ಕೂ ಸ್ವಾತಂತ್ರ್ಯವಿಲ್ಲ. ಊಟ ಮಾಡುವುದು, ನಿದ್ದೆ ಮಾಡುವುದು. ಇಷ್ಟೇ ನಮ್ಮ ಜೀವನ.
ರಾಕು೩: ಇಂತಹ ಕಟ್ಟುನಿಟ್ಟಿಗೆ ಕಾರಣವೇನು?
೮ನೆ: ಏನೂ ಇಲ್ಲ. ನಾವು ರಾಜಕುಮಾರರಾಗಿ ಹುಟ್ಟಲಿಲ್ಲ ಅಷ್ಟೆ .
೯ನೆ: ರಾಜಕುಮಾರರಾಗಿ ಹುಟ್ಟುತ್ತಿದ್ದರೆ ಊರೂರು ಸುತ್ತಬಹುದಾಗಿತ್ತ್ತು.
ರಾಕು ೫: ಮತ್ತೆ ಹೀಗೆ ಜೈಲು ಸೇರಬಹುದಾಗಿತ್ತು.
೪ನೆ: ನಮಗೆ ಜೈಲು ಸೇರುವ ಅವಕಾಶವೂ ಇಲ್ಲ.
೯ನೆ: ನಮ್ಮ ಮದುವೆಯ ಬಗ್ಗೆ ಕೂಡ ಅಮ್ಮನಿಗೆ ಯೊಚನೆ ಇದ್ದ ಹಾಗಿಲ್ಲ.
ರಾಕು೯: ನಾವು ಮದುವೆಯಾಗಲು ಸಿದ್ಧರಿದ್ದೇವೆ.
೧ನೆ: ಅದು ಅಷ್ಟು ಸುಲಭದಲ್ಲಿ ಆಗುವುದಿಲ್ಲ. ಅದಕ್ಕೆ ವಿಶೇಷವಾದ ಪರೀಕ್ಷೆಗಳು ಇರಬಹುದು. ಆಮಂತ್ರಿತ ರಾಜಕುಮಾರರು ಆ ಪರೀಕ್ಷೆಗಳಲ್ಲಿ ಗೆಲ್ಲಬೇಕು.
೧೧ನೆ: ಅಲ್ಲಿ ವರೆಗೆ ನಮಗಿರುವ ರಾತ್ರಿಗಳಲ್ಲಿ ನಾವಿಲ್ಲಿ ನರ್ತಿಸಬಹುದು.
೧೦ನೆ: ನಾವು ಪ್ರತಿ ರಾತ್ರಿಯೂ ಬರುತ್ತೇವೆ.
ರಾಕು೪: ಏನು ಪ್ರಯೊಜನ? ಒಂದು ದಿನ ಸಿಕ್ಕಿಬೀಳುತ್ತೀರಿ. ನಮ್ಮ ತಲೆ ಕಡಿಸುತ್ತಾರೆ.
೧೨ನೆ: ಹಾಗೇನೂ ಆಗಲಿಕ್ಕಿಲ್ಲ.
೧ನೆ: ನಾವೆಲ್ಲ ಆಶಾವಾದಿಗಳು. ನೀವು ಕೂಡ ಆಶಾವಾದಿಗಳಾಗಿರಿ.
೨ನೆ: ಹೊರಡುವುದಕ್ಕೆ ಮೊದಲು ಇನ್ನೂ ಸ್ವಲ್ಪ ಹೊತ್ತು ನರ್ತಿಸೋಣವೆ?
ಎಲ್ಲರೂ: ಹಾಂ. ನರ್ತಿಸೋಣ.
(ತಟ್ಟನೆ ಪುನ: ನೃತ್ಯ ಆರಂಭ)
ಫೇಡ್ ಔಟ್
ದೃಶ್ಯ ಎಂಟು: ಅರಮನೆ
(ರಾಣಿ ತನ್ನ ಆಸನದಲ್ಲಿಕುಳಿತಿದ್ದಾಳೆ. ಸೇವಕಿಯ ಪ್ರವೇಶ)
ರಾಣಿ: ರಾಜಕುಮಾರಿಯರ ಪಾದರಕ್ಷೆಗಳು ಇವತ್ತು ಕೂಡ ಸವೆದಿವೆಯೆ?
ಸೇವಕಿ: ಹೌದು ಮಹಾರಾಣಿ.
ರಾಣಿ: ಸೈನಿಕನನ್ನು ಕರೆದುಕೊಂಡು ಬಂದಿರುವೆಯ? ಹೊರಗಡೆ ನಿಂತಿದ್ದಾನೆ.
ರಾಣಿ: ಒಳಗೆ ಕರೆದುತಾ.
(ಸೇವಕಿ ಸೈನಿಕನನ್ನು ಕರೆದುಕೊಂಡು ಬರುತ್ತಾಳೆ)
ಸೈನಿ: ಪ್ರಣಾಮಗಳು ಮಹಾರಾಣಿ.
ರಾಣಿ: ರಾಜಕುಮಾರಿಯರ ಪಾದರಕ್ಷೆಗಳು ಸವೆಯುವ ರಹಸ್ಯವನ್ನು ಭೇದಿಸಿರುವೆಯ ಸೈನಿಕ?
ಸೈನಿ: ಹೌದು ಮಹಾರಾಣಿ.
ರಾಣಿ: (ಅತೀವ ಕುತೂಹಲದಿಂದ) ಏನದು ಹೇಳು.
ಸೈನಿ: ರಾಜಕುಮಾರಿಯರ ಶಯಾಗಾರದಲ್ಲಿ ಅವರ ಮಂಚದಡಿಯಿಂದ ಹೊರಗಡೆ ಹೋಗಲು ಒಂದು ಸುರಂಗಮಾರ್ಗವಿದೆ. ಅದರಿಂದ ಹೊರಬಂದ ರಾಜಕುಮಾರಿಯರು ಬೆಟ್ಟ ಹತ್ತಿ ರಾಜಕುಮಾರರು ಇರುವ ಸೆರೆಮನೆಗೆ ಹೋಗುತ್ತಾರೆ. ಸೆರೆಮನೆಯ ಗೋಡೆಯಲ್ಲಿ ಒಂದು ತೂತು ಇದೆ. ಅದರ ಮೂಲಕ ಎಲ್ಲರೂ ಒಳಗೆ ಹೋಗುತ್ತಾರೆ. ಬೆಳಗ್ಗೆ ನಾಲ್ಕು ಗಂಟೆಯವರೆಗ ಅವರ ಜೊತೆ ನರ್ತಿಸಿ ಅರಮನೆಗೆ ಮರಳುತ್ತಾರೆ.
ರಾಣಿ: ಹಾಗೊ ಸಮಾಚಾರ? (ಚಪ್ಪಾಳೆ ಬಡಿಯುತ್ತಾಳೆ. ಸೈನಿಕರಿಬ್ಬರು ಬರುತ್ತಾರೆ) ಹೋಗಿ ಸೆರೆಮನೆಯಲ್ಲಿರುವ ರಾಜಕುಮಾರರನ್ನು ಕರೆದುಕೊಂಡು ಬನ್ನಿ. (ಸೇವಕಿಯೊಡನೆ) ಹೋಗು ರಾಜಕುಮಾರಿಯರನ್ನು ಕರೆದುಕೊಂಡು ಬಾ. (ಸೇವಕಿಯ ನಿರ್ಗಮನ. ನಿಧಾನವಾಗಿ ಬೆಳಕು ಆರುತ್ತದೆ. ತುಸು ಹೊತ್ತು ಸಂಗೀತ. ಬೆಳಕು ಮರಳಿ ಬರುವಾಗ ರಾಣಿಯ ಬಲಗಡೆಗೆ ರಾಜಕುಮಾರರ ಸಾಲು, ಎಡಗಡೆಗೆ ರಾಜಕುಮಾರಿಯರ ಸಾಲು. ಸೈನಿಕ ರಾಣಿಯ ಪಕ್ಕದಲ್ಲಿ ಒಂದು ಕುರ್ಚಿಯಲ್ಲಿ ಕುಳಿತಿದ್ದಾನೆ)
ರಾಣಿ: (ರಾಜಕುಮಾರಿಯರೊಡನೆ) ನಿಮ್ಮ ಅಪರಾಧವನ್ನು ಈ ಸೈನಿಕ ಮಹಾಶಯ ಪತ್ತೆ ಮಾಡಿದ್ದಾನೆ. ನೀವು ರಾತ್ರಿ ಸುರಂಗಮಾರ್ಗದಲ್ಲಿ ಹೋಗಿ ಇವರೊಡನೆ ನರ್ತಿಸುತ್ತಿದ್ದಿರಿ ಎಂದು ತಿಳಿದುಬಂದಿದೆ. ನಿಜವೆ?
ರಾಜಕುಮಾರಿಯರು: (ತುಸು ಖುಷಿಯಿಂದಲೇ) ನಿಜ.
ರಾಣಿ: ರಾಜಕುಮಾರರ ಅಪರಾಧಕ್ಕಾಗಿ ಅವರಿಗೆ ಮರಣದಂಡನೆ ವಿಧಿಸಲಾಗುವುದು. ಇವರೆಲ್ಲರ ತಲೆ ಕಡಿಸುತ್ತೇವೆ. ಆ ಮೇಲೆ ನಿಮ್ಮನ್ನು ವಿಚಾರಿಸಿಕೊಳ್ಳಲಾಗುವುದು.
(ರಾಜಕುಮಾರಿಯರು ಆಘಾತಕ್ಕೊಳಗಾದ ದನಿ ಹೊರಡಿಸುತ್ತಾರೆ)
ರಾಣಿ: (ಸೈನಿಕನೊಡನೆ) ನಿನಗೆ ಅರ್ಧ ರಾಜ್ಯವನ್ನು ಕೊಟ್ಟಿದ್ದೇನೆ. ನಿನಗೆ ಇಷ್ಟವಿರುವ ರಾಜಕುಮಾರಿಯನ್ನು ಆರಿಸಿಕೊಳ್ಳಬಹುದು.
ಸೈನಿ: (ಎದ್ದುನಿಂತು ಎಲ್ಲರಿಗೂ ವಂದಿಸಿ) ನಾನು ಸಾಮಾನ್ಯ ಸೈನಿಕನಾದರೂ ಇಲ್ಲಿರುವ ಎಲ್ಲಾ ರಾಜಕುಮಾರರಿಗಿಂತಲೂ ವಯಸ್ಸಿನಲ್ಲಿ ಹಿರಿಯವನು. ಆದ್ದರಿಂದ ನಾನು ಎಲ್ಲರಿಗಿಂತ ಹಿರಿಯವಳನ್ನು ವರಿಸುತ್ತೇನೆ.
ರಾಣಿ: ಸರಿ. (೧ನೆ ರಾಜಕುಮಾರಿಯನ್ನು ಕರೆದು ಸೈನಿಕನ ಪಕ್ಕದಲ್ಲಿ ನಿಲ್ಲಿಸಿ ಅವರ ಕೈಗಳನ್ನು ಜೋಡಿಸಿ, ತಲೆಯ ಮೇಲೆ ಕೈಯಿರಿಸುತ್ತಾಳೆ) ನಾಳೆಯೆ ನಿಮ್ಮ ಮದುವೆಗೆ ಏರ್ಪಾಡು ಮಾಡುತ್ತೇನೆ.
ಸೈ: ಇವರೆಲ್ಲರಿಗೂ ಹಿರಿಯವನಾಗಿರುವ ನಾನು ನನ್ನ ಅತ್ತೆಯೂ ಆಗಿರುವ ಮಹಾರಾಣಿಯವರಲ್ಲಿ ಒಂದು ಅರಿಕೆಯನ್ನು ಮಾಡಿಕೊಳ್ಳಲು ಅಪ್ಪಣೆಯನ್ನು ಕೇಳುತ್ತಿದ್ದೇನೆ.
ರಾಣಿ: ಆಗಲಿ. ಏನು?
ಸೈನಿ: ಈ ಹನ್ನೊಂದು ಮಂದಿ ರಾಜಕುಮಾರರಿಗೆ ತಮ್ಮ ಆಯೆಯ ರಾಜಕುಮಾರಿಯನ್ನು ಮದುವೆಯಾಗಲು ಒಪ್ಪಿಗೆ ನೀಡುವುದೇ ಸೂಕ್ತವಾದ ಶಿಕ್ಷೆ ಎಂದು ನನ್ನ ಅಭಿಪ್ರಾಯ.
ರಾಣಿ: (ಕ್ಷಣ ಕಾಲ ಚಿಂತಿಸಿ, ಪ್ರಸನ್ನಮುಖಳಾಗಿ) ಹಾಗೆಯೆ ಆಗಲಿ. ಅದೇ ಸರಿ ಎಂದು ನನ್ನ ಅಭಿಪ್ರಾಯ.
(ರಾಜಕುಮಾರಿಯರು ಮತ್ತು ರಾಜಕುಮಾರರು ಸಂತೋಷದ ಉದ್ಗಾರ ಹೊರಡಿಸುತ್ತಾರೆ)
ರಾಣಿ: ಆದರೆ…… (ತಟ್ಟನೆ ಮನ ಮತ್ತು ಗಂಭಿರತೆ ನೆಲಸುತ್ತದೆ) ಆಯೆಯ ಅವಕಾಶವನ್ನು ಹುಡುಗಿಯರಿಗೆ ನೀಡುತ್ತೇನೆ.
ಸೈನಿಕ: ಅದು ಇನ್ನಷ್ಟು ಸೂಕ್ತ , ಮಹಾರಾಣಿ.
(ತಕ್ಷಣ ರಾಜಕುಮಾರಿಯರು ಅವರವರ ಆಯೆಯ ರಾಜಕುಮಾರನ ಬಳಿ ಧಾವಿಸಿ ಜೋಡಿಗಳಾಗಿ ನಿಲ್ಲುತ್ತಾರೆ)
ಒಬ್ಬ ರಾಜಕುಮಾರ: ಮಹಾರಾಣಿಗೆ ಜಯವಾಗಲಿ!
ಎಲ್ಲಾ ರಾಜಕುಮಾರರು: ಅತ್ತೆಯವರಿಗೆ ಜಯವಾಗಲಿ!
(ನಗು ಮೊಳಗುತ್ತದೆ. ಮಂಗಲ ವಾದ್ಯ ಆರಂಭವಾಗುತ್ತದೆ)
ಫೇಡ್ ಔಟ್
Leave A Comment