ಪಾತ್ರಗಳು:
ರಾಣಿ,ಮೀನು ಮಾರುವವಳು ರಾಜ, ಮಂತ್ರಿ, ಮಂತ್ರಿಯ ಮಗ,
ರೈತ, ರೈತನ ಹೆಂಡತಿ, ರೈತನ ಮಗಳು, ಹಲವು ರಾಣಿಯರು,
ಸೇವಕಿಯ ವೇಷದಲ್ಲಿರುವ ಗಂಡಸು, ರಾಜಕುಮಾರಿ
ದೃಶ್ಯ ೧: ಅರಮನೆಯ ಕಿಟಕಿ. ರಸ್ತೆ
(ಅರಮನೆ. ಕಿಟಕಿಯಲ್ಲಿ ರಾಣಿಯ ಮುಖ. ಕೆಳಗೆ ರಸ್ತೆಯಲ್ಲಿ ಮೀನು ಮಾರುವವಳು. ಅವಳ ತಲೆಯ ಮೇಲೆ ದೊಡ್ಡ ಬುಟ್ಟಿ)
ಮೀ: ಮೀನು ಬಂತು ಮೀನು! ಯಾರಿಗೆ ಬೇಕು ಮೀನು. ಜೀವ ಜೀವ ಮೀನು!
ರಾಣಿ: ಏಯ ಮೀನು! ಇಲ್ಲಿ ಬಾ. (ಮೀನು ಮಾರುವವಳು ಕಿಟಕಿಯ ಬಳಿ ಬರುತ್ತಾಳೆ)
ರಾಣಿ: ಏನಿದೆ ಇವತ್ತು?
ಮೀ: ಎಲ್ಲಾ ಇದೆ ರಾಣಿ ಸಾಹಿಬ್. ಬಂಗುಡೆ, ಬೂತಾಯಿ, ನಂಗ್, ಸಿಗಡಿ, ಮಾಂಜಿ, ಅಂಜಲ್ ಎಲ್ಲಾ ಇದೆ.
ರಾಣಿ: ಅದೆಲ್ಲ ಬೇಡ. ಒಂದು ದೊಡ್ಡ ಮೀನು ಬೇಕು.
ಮೀ: ಉಂಟು ಬೇಗಮ ಸಾಹಿಬ್. ಒಂದು ದೊಡ್ಡ ಮೀನು ಉಂಟು.
ರಾಣಿ: ಎಲ್ಲಿ ಸ್ವಲ್ಪ ತೋರಿಸು. (ಮೀನು ಮಾರುವವಳು ನಡುಬಗ್ಗಿಸಿ ಕಿಟಕಿಯಲ್ಲಿರುವ ರಾಣಿಗೆ ಬುಟ್ಟಿಯೊಳಗಿನ ಮೀನು ನೋಡಲು ಅನುಕೂಲ ಮಾಡಿಕೊಡುತ್ತಾಳೆ) ಬುಟ್ಟಿಯಲ್ಲಿರುವುದು ಒಂದು ಮೀನು ಮಾತ್ರ. ನೀನು ಬಂಗುಡೆ ಬೂತಾಯಿ ಅಂತ ಎಲ್ಲಾ ಮೀನಿನ ಹೆಸರು ಹೇಳ್ತಾ ಇದ್ದೆ!
ಮೀ: ಹಾಗೆ ಹೇಳಿ ಹೇಳಿ ಅಭ್ಯಾಸ ಆಗಿದೆ ಬೇಗಮ ಸಾಹಿಬ್. ಇವತ್ತಿರುವುದು ಒಂದೇ ಒಂದು ಮೀನು. ದೊಡ್ಡ ಮೀನು.
ರಾಣಿ: ಏನು ಅದರ ಹೆಸರು?
ಮೀ: ಅದರ ಹೆಸರು ಕೊಡ್ವಾಯಿ ರಾಣಿ ಸಾಹಿಬ್?
ರಾಣಿ: ಅದೇಕೆ ಒಂದೇ ಸವನೆ ಮಗ್ಗುಲು ಬದಲಾಯಿಸ್ತಾ ಇದೆ?
ಮೀ: ಅದು ಆ ಮೀನಿನ ಸ್ವಭಾವ ರಾಣಿ ಸಾಹಿಬ್. ಅದು ಜೀವ ಇರುವ ವರೆಗೆ ಮಗ್ಗುಲು ಬದಲಾಯಿಸ್ತಾ ಇರುತ್ತೆ.
ರಾಣಿ: ಅಂದ್ರೆ, ಅದಕ್ಕೆ ಜೀವ ಉಂಟಾ?
ಮೀ: (ಉಕ್ಕಿ ಬರುವ ನಗು ತಡೆದುಕೊಂಡು) ಉಂಟು ರಾಣಿ ಸಾಹಿಬ್.
ರಾಣಿ: ಯಾಕೆ ನಗ್ತಿ?
ಮೀ: ಇದೇನು ಹೊಸ್ದು ರಾಣಿ ಸಾಹಿಬ್? ನಿಮ್ಮ ಮಾತಿಗೆ ನಾನು ಯಾವಾಗ್ಲೂ ನಗ್ತೇನೆ.
ರಾಣಿ: ಯಾಕೆ?
ಮೀ: ನಿಮ್ಮ ದನಿ ನಂಗೆ ತುಂಬಾ ಇಷ್ಟ ರಾಣಿ ಸಾಹಿಬ್. ನಗು ಬಂದ್ಬಿಡ್ತದೆ.
(ನಗು ತಡೆದುಕೊಳ್ಳುತ್ತಾಳೆ. )
ರಾಣಿ: ರಾಜಾಸಾಹೆಬ್ ದನಿ ಕೇಳಿದ್ರೂ ನಗು ಬರುತ್ತಾ ನಿಂಗೆ?
ಮೀ: ಇಲ್ಲ ರಾಣಿಸಾಹಿಬ್. ರಾಜಾಸಾಹೆಬ್ ದನಿ ಕೇಳಿದ್ರೆ ತುಂಬಾ ಭಯ.
ರಾಣಿ: ಯಾಕೆ ಅವರ ದನಿ ನಿಂಗೆ ಇಷ್ಟ ಇಲ್ವ?
ಮೀ: ರಾಜಸಾಹೆಬ್ ದನಿ ಕೂಡ ನಂಗೆ ತುಂಬಾ ಇಷ್ಟ. ಆದ್ರಿಂದ ತುಂಬಾ ಭಯ.
ರಾಣಿ: (ನಕ್ಕು) ತುಂಬಾ ಜಾಣೆ ಇರುವಿ ನೀನು! ಆ ಮಗ್ಗುಲು ಬದಲಾಯಿಸುವ ಮೀನು ಗಂಡೊ ಹೆಣ್ಣೊ? ನಂಗೆ ಹೆಣ್ಣು ಮೀನು ಬೇಕು.
ಮೀ: ಅದು ಗಂಡು ರಾಣಿ ಸಾಹಿಬ್.
ರಾಣಿ: ಹಾಗಾದ್ರೆ ಬೇಡ ಹೋಗು. (ಮೀನು ಮಾರುವವಳು ನೆಟ್ಟಗೆ ನಿಂತು ಹೊರಡಲನುವಾದಾಗ) ತಡಿ ತಡಿ. ಅದೆಂಥದು ಬುಟ್ಟಿಯೊಳಗಿಂದ ನಗುವ ಶಬ್ದ?
ಮೀ: ಅದು ಮೀನು ನಕ್ಕ ಶಬ್ದ ರಾಣಿ ಸಾಹಿಬ್.
ರಾಣಿ: ಹೌದಾ? ಎಲ್ಲಿ ನೋಡ್ತೀನಿ.
(ಮೀನು ಮಾರುವವಳು ಪುನ: ಬಗ್ಗಿ ನಿಂತು ಬುಟ್ಟಿ ತೋರಿಸುತ್ತಾಳೆ)
ಮೀ: ನಗ್ತಾ ಇದೆಯಲ್ಲ ರಾಣಿ ಸಾಹಿಬ್?
ರಾಣಿ: ಹೌದು ನಗ್ತಾ ಇದೆ. ಆದ್ರೆ ಯಾಕೆ?
ಮೀ: ಹಲ್ಲು ಬಿಟ್ಕೊಂಡು ನಗ್ತಾ ಇದ್ಯಾ ರಾಣಿ ಸಾಹಿಬ್?
ರಾಣಿ: ಹೌದು ಹಲ್ಲು ಬಿಟ್ಕೊಂಡು ನಗ್ತಾ ಇದೆ!
ಮೀ: ನಿಮ್ಮ ಮಾತು ಕೇಳಿ ಅದಕ್ಕೆ ಕೂಡ ನಗು ಬಂದಿರ್ಬೇಕು ರಾಣಿ ಸಾಹಿಬ್.
ರಾಣಿ: (ಸಿಟ್ಟಿಗೆದ್ದು) ನಿನ್ನದು ತೀರಾ ಅತಿಯಾಯ್ತು. ತಮಾಷೆಗೂ ಒಂದು ಮಿತಿ ಇಲ್ವ?
ಮೀ: ನಾನೇನೂ ಹೇಳ್ಳಿಲ್ಲ ರಾಣಿ ಸಾಹಿಬ್. ಮೀನಿನ ನಗುವಿನ ಶಬ್ದವನ್ನ ನೀವೇ ಕೇಳಿಸ್ಕೊಂಡ್ರಿ ರಾಣಿ ಸಾಹಿಬ್. ಮೀನು ನಗೋದನ್ನ ನೀವೇ ನೋಡಿದ್ರಿ.
ರಾಣಿ: ಹೋಗು ಹೋಗು. ಸಾಕು ನಿನ್ನ ಮಾತು.
ಮೀ: ಖಂಡಿತವಾಗಿಯೂ ಮೀನು ನಕ್ಕದ್ದು ನಿಮ್ಮ ಮಾತಿಗೇ ರಾಣಿ ಸಾಹಿಬ್.
ರಾಣಿ: ಸಾಕು ನಿನ್ನ ಮಾತು ಅಂದ್ನಲ್ಲಾ? ನಡಿ ಇಲ್ಲಿಂದ.
(ಮೀನು ಮಾರುವವಳು ಬೇಸರದಿಂದ ನಿಧಾನವಾಗಿ ಹೋಗುತ್ತಾಳೆ)
ಫೇಡ್ ಔಟ್
ದೃಶ್ಯ ೨: ಅರಮನೆ
(ರಾಣಿ ಶತಪಥ ತುಳಿಯುತ್ತಿದ್ದಾಳೆ. ರಾಜನ ಆಗಮನ)
ರಾಜ: ರಾಣಿಯ ಅವಿಶ್ರಾಂತ ಸ್ಥಿತಿಯನ್ನು ಗಮನಿಸಿ) ಏನು ಮೈ ಚೆನ್ನಾಗಿಲ್ವೆ?
ರಾಣಿ: ಮೈ ಚೆನ್ನಾಗಿಲ್ಲದವರು ಮಲಕ್ಕೊಂಡಿರ್ತಾರೆ.
ರಾಜ: ಅದು ನಿಜ. ಮೈ ಚೆನ್ನಾಗಿಲ್ಲದವರು ಮಲ್ಕೊಂಡಿರ್ತಾರೆ. ಹೀಗೆ ಮೇಲೆ ಕೆಳಗೆ ಚಲಿಸುವುದಿಲ್ಲ.
ರಾಣಿ: ಇದು ಮೇಲೆ ಕೆಳಗೆ ಅಲ್ಲ. ಅತ್ತ ಇತ್ತ!
ರಾಜ: ಸರಿ. ಅತ್ತ ಇತ್ತ. ಹಾಗಾದ್ರೆ ಮನಸ್ಸು ಚೆನ್ನಾಗಿಲ್ವೆ? ಮೇಲೆ ಕೆಳಗೆ ಹೋಗ್ತಾ ಇದ್ಯಾ?
ರಾಣಿ: ಮನಸ್ಸು ಕೂಡ ಚೆನ್ನಾಗಿದೆ. ಆದ್ರೆ ಅದ್ಕೆ ಸಿಟ್ಟು ಬಂದಿದೆ.
ರಾಜ: ಯಾಕೆ ಎಂದು ಕೇಳಿದ್ರೆ ಸಿಟ್ಟು ಜಾಸ್ತಿಯಾಗುವ ಸಂಭವ ಇದೆಯೆ?
ರಾಣಿ: ಯಾಕೆ ಎಂದು ಕೇಳಬೇಕು! ಹಾಗೆ ಕೇಳಲಿಕ್ಕಾಗಿಯೆ ಹೀಗೆ ಅತ್ತ ಇತ್ತ ಚಲಿಸುವುದು.
ರಾಜ: ಅದ ಒಳ್ಳೆಯ ಅಭ್ಯಾಸ! ಸರಿ. ಯಾಕೆ?
ರಾಣಿ: ಬೆಳಿಗ್ಗೆ ಮೀನು ಮಾರುವವಳು ಬಂದಿದ್ದಳು.
ರಾಜ: ಆಗ್ಲೇ ಗೊತ್ತಾಯ್ತು ನಂಗೆ! ಮೀನಿನ ಸಾರಿನ ವಾಸ್ನೆ ಬರ್ತಾ ಇದೆ. ಊಟಕ್ಕೆ ಸಿದ್ಧವಾಗಿದ್ಯಾ?
ರಾಣಿ: ಊಟಕ್ಕೆ ಸಿದ್ಧವಾಗಿದೆ. ಆದ್ರೆ ಅದು ಮೀನಿನ ಸಾರಿನ ವಾಸ್ನೆ ಅಲ್ಲ. ಅದು ಬಾಳೆಕಾಯಿ ಸಾಂಬಾರಿನ ವಾಸ್ನೆ.
ರಾಜ: ಯಾಕೆ ಅವಳ ಬಳಿ ಮೀನು ಇರ್ಲಿಲ್ವ?
ರಾಣಿ: ಅವಳ ಬುಟ್ಟಿಯಲ್ಲಿ ಒಂದೇ ಒಂದು ದೊಡ್ಡ ಮೀನು ಇತ್ತು.
ರಾಜ: ಕೊಂಡ್ಕೋಬೇಕಾಗಿತ್ತು. ಅರಮನೆಗೆ ಎಷ್ಟು ದೊಡ್ಡ ಮೀನಾದರೇನು? ತಿನ್ನಲು ಜನ ಇಲ್ವ?
ರಾಣಿ: ಅದಲ್ಲ ವಿಚಾರ. ನನಗೆ ಹೆಣ್ಣು ಮೀನು ಬೇಕಾಗಿತ್ತು.
ರಾಜ: ಹೆಣ್ಣು ಮೀನು? (ಆಶ್ಚರ್ಯ) ಅದೇಕೆ?
ರಾಣಿ: ನಿನ್ನೆ ನಮ್ಮ ಮತ್ಸ ಸಚಿವರ ಹೆಂಡತಿ ಹೇಳಿದ್ಳು ದೊಡ್ಡ ಮೀನು ತೆಗೆದುಕೊಳ್ಳುವಾಗ ಹೆಣ್ಣು ಮೀನನ್ನೇ ತೆಗೆದುಕೊಳ್ಬೇಕು. ಗಂಡು ಮೀನು ಸಪ್ಪ್ಲೆ ಅಂತ.
ರಾಜ: ಸರಿ. ಆ ಮೇಲೆ?
ನಾನು ಮೀನು ಗಂಡೊ ಹೆಣ್ಣೊ ಅಂತ ಕೇಳಿದೆ.
ರಾಜ: ಸರಿ. ಆ ಮೇಲೆ?
ರಾಣಿ: ಅದು ಗಂಡು ಮೀನು ಅಂತ ಮೀನು ಮಾರುವವಳು ಹೇಳಿದ್ಳು.
ರಾಜ: ಪರ್ವಾಗಿಲ್ಲ. ನಾಳೆ ಒಂದು ಹೆಣ್ಣು ಮೀನನ್ನು ತರಿಸಿದ್ರಾಯ್ತು.
ರಾಣಿ: ಅದಲ್ಲ ವಿಷಯ.
ರಾಜ: ಮತ್ತೇನು?
ರಾಣಿ: ನನ್ನ ಪ್ರಶ್ನೆಯನ್ನು ಕೇಳಿ ಮೀನು ನಕ್ಕಿತು.
ರಾಜ: ಏನು ಮೀನು ನಕ್ಕಿತೆ?
ರಾಣಿ: ಹೌದು.
ರಾಜ: ಅಸಂಭವ! ಮೀನು ನಗುವುದು ಅಸಂಭವನೀಯ.
ರಾಣಿ: ಮೀನು ನಕ್ಕದ್ದನ್ನು ನಾನು ಕಿವಿಯಾರೆ ಕೇಳಿದೆ. ಕಣ್ಣಾರೆ ಕಂಡೆ. ನಾನು ಸುಳ್ಳು ಹೇಳ್ತಾ ಇಲ್ಲ.
ರಾಜ: ಸುಳ್ಳು ಅಂತ ನಾನನ್ಲಿಲ್ಲ. ಮೀನು ನಕ್ಕ ಹಾಗೆ ನಿಂಗೆ ಕಾಣಿಸಿರಬೇಕು. ದೊಡ್ಡ ಮೀನುಗಳ ಹಲ್ಲುಗಳು ಕೆಲವು ಸಲ ಹೊರಗಿರ್ತವೆ. (ನಗುತ್ತಾನೆ)
ರಾಣಿ: ನಗು ಯಾಕೆ?
ರಾಜ: ಯಾಕೋ ಸುಮ್ಮನೆ ನಗು ಬಂತು.
ರಾಣಿ: ನಾನು ಕಂಡದ್ದು ಮಾತ್ರ ಅಲ್ಲ. ನನ್ನ ಈ ಕಿವಿಗಳಿಂದ ಕೇಳಿದ್ದೇನೆ.
ರಾಜ: ಅದು ಭ್ರಮೆಯಾಗಿರ್ಬಹುದು.
ರಾಣಿ: ಹಾಗೆಲ್ಲ ಹೇಳಿದ್ರೆ ನಂಗೆ ವಿಪರೀತ ಸಿಟ್ಟು ಬರ್ತದೆ. (ಜೋರಾಗಿ ಶತಪಥ ತುಳಿಯತೊಡಗುತ್ತಾಳೆ)
ರಾಜ: ನಿಲ್ಲಿಸು ನಿಲ್ಲಿಸು! ಮತ್ಸ ಸಚಿವರನ್ನು ಕರೆಸಿ ವಿಚಾರಿಸುತ್ತೇನೆ.
ಪೇಡ್ ಔಟ್
ದೃಶ್ಯ ಮೂರು: ಮತ್ಸ ಸಚಿವನ ಮನೆ
(ಮತ್ಸ ಸಚಿವ ಚಿಂತಾಕ್ರಾಂತನಾಗಿದ್ದಾನೆ. ಸಚಿವನ ಮಗ (ಸುಮಾರು ಹದಿನಾರು ವರ್ಷ ಪ್ರಾಯ) ಬರುತ್ತಾನೆ)
ಮಗ: ಅಪ್ಪಾ.
ಸಚಿ: ಓ, ನಿನಾ? ಬಂದ್ಯಾ? ರಜಾ ಸಿಕ್ತಾ?
ಮಗ: ಹೌದಪ್ಪಾ. ಇನ್ನು ಮೂರು ತಿಂಗ್ಳು ರಜಾ. ಏನಪ್ಪಾ ತುಂಬಾ ಚಿಂತೆಯಲ್ಲಿರೋ ಹಾಗಿದೆ. ಅಮ್ಮ ಅಂದ್ಲು ಬೆಳಿಗ್ಗಿನಿಂದ ನೀನು ಊಟ ಕೂಡ ಮಾಡ್ಲಿಲ್ಲ ಅಂತ!
ಸಚಿ: ತಲೆಯೆ ಹೋಗೋದ್ರಲ್ಲಿರುವಾಗ ಊಟ ಮಾಡೋದು ಹ್ಯಾಗೆ ಮಗೂ?
ಮಗ: ಅಮ್ಮ ಹೇಳಿದ್ಲು ಏನೋ ತಲೆ ಹೋಗುವಂಥ ವಿಷಯ ಅಂತ. ಏನಪ್ಪಾ ಅದು ತಲೆ ಹೋಗುವಂಥ ವಿಷಯ?
ಸಚಿ: ಹೇಳಿ ಏನು ಪ್ರಯೊಜನ ತಲೆ ಹೋಗುವುದು ಖಂಡಿತವಿರುವಾಗ?
ಮಗ: ನಲ್ವತ್ತು ವರ್ಷ ಮೀನು ಮಂತ್ರಿಯಾಗಿ ಕೆಲಸ ಮಾಡಿದ್ದಿ. ನಿನ್ನ ತಲೆ ಅಷ್ಟು ಸುಲಭದಲ್ಲಿ ಹೋಗುವುದು ಹೇಗೆ?
ಸಚಿ: ಅದೇ ಈಗ ತೊಂದರೆಯಾಗಿರುವುದು.
ಮಗ:ಯಾವುದು?
ಸಚಿ: ಮೀನು ಮಂತ್ರಿಯಾಗಿರುವುದು.
ಮಗ: ಏನಾಯ್ತು?
ಸಚಿ: ಒಂದು ಮೀನಿನಿಂದ ಹುಟ್ಟಿದ ಸಮಸ್ಯೆ.
ಮಗ: ಎಂಥಾ ಸಮಸ್ಯೆ?
ಸಚಿ: ಒಂದು ದಿನ ಅರಮನೆಗೆ ಎಂದಿನಂತೆ ಮೀನು ಮಾರುವವಳು ಬಂದ್ಲಂತೆ. ಅವಳ ಬುಟ್ಟಿಯಲ್ಲಿ ಒಂದು ದೊಡ್ಡ ಮೀನು ಇತ್ತಂತೆ. ಆ ಮೀನು ಗಂಡೋ ಹೆಣ್ಣೋ ಅಂತ ಮಹಾರಾಣಿಯವರು ಕೇಳಿದ್ರಂತೆ. ಅದು ಗಂಡು ಎಂದು ಮೀನು ಮಾರುವವಳು ಅಂದ್ಲಂತೆ. ಮಹರಾಣಿಯವರ ಪ್ರಶ್ನೆ ಕೇಳಿ ಮೀನು ಪಕಪಕನೆ ನಕ್ಕಿತಂತೆ. ಅದು ತನ್ನನ್ನು ಅವಮಾನ ಮಾಡ್ತು ಅಂತ ಮಹಾರಾಣಿಗೆ ವಿಪರೀತ ಸಿಟ್ಟು ಬಂತು. ಮಹಾರಾಜರು ನನ್ನನ್ನು ಕರೆಸಿ ಮೀನು ನಕ್ಕದ್ದು ಯಾಕೆ ಎನ್ನುವುದನ್ನ ನಾಲ್ಕು ವಾರಗಳ ಒಳಗೆ ಪತ್ತೆ ಮಾಡಿ ಹೇಳಬೇಕು. ಇಲ್ಲದಿದ್ದರೆ ತಲೆ ತೆಗೆಯುತ್ತೇನೆ ಅಂದ್ರು. ಆಗಲೇ ಮೂರು ವಾರ ಕಳೆಯಿತು. ಇನ್ನೂ ಉತ್ತರ ಸಿಕ್ಕಿಲ್ಲ.
ಮಗ: ಮೀನು ನಗುವುದು ಅಸಂಭವ ಅಂತ ನೀನು ಹೇಳ್ಳಿಲ್ವೆ?
ಸಚಿ: ಆಯೊ! ಹಾಗೆ ಹೇಳೋದು ಹ್ಯಾಗೆ? ಮಹಾರಾಣಿಗೆ ಸಿಟ್ಟು ಬರೋದಿಲ್ವೆ? ಆಗ್ಲೇ ಹೋಗೋದಿಲ್ವೆ ನನ್ನ ತಲೆ?
ಮಗ: ಮಹಾರಾಜರಿಗೆ ತಲೆ ತೆಗೆಯೊದು ಬಹಳ ಸುಲಭ ಅಲ್ವಾ ಅಪ್ಪ?.
ಸಚಿ: ನಿಜ ಮಗೂ. ಸಮಸ್ಯೆ ಅವರದು. ಪರಿಹಾರ ಇನ್ನೊಬ್ಬರು ಕಂಡುಹಿಡೀಬೇಕು.
ಮಗ: ನಕ್ಕ ಮೀನು ಯಾರದೋ ಹೊಟ್ಟೆ ಸೇರಿರ್ಬಹುದು. ಹಾಗಿರುವಾಗ ಸತ್ಯ ಕಂಡು ಹಿಡಿಯೊದು ಹ್ಯಾಗೆ ಅಂತ ನೀನು ಯಾಕೆ ಕೇಳಲಿಲ್ಲ?
ಸಚಿ: ಮಹಾರಾಜರ ಹತ್ರ ಹಾಗೆಲ್ಲಾ ಹೇಳೋಕಾಗುತ್ಯೆ? ಮೀನು ನಗೋದು ಅಸಂಭವ ಅನ್ನೋದನ್ನ ಮಹಾರಾಜರೇ ಹೇಳಿದ್ರು. ಆದ್ದರಿಂದ ಮೀನು ನಗಲು ಏನೋ ಬಲವಾದ ಕಾರಣ ಇರಲೇ ಬೇಕು ಅನ್ನೋದು ಅವರ ಅಭಿಪ್ರಾಯ?
ಮಗ: ಅಹ, ಎಷ್ಟು ಸುಂದರವಾದ ಅಭಿಪ್ರಾಯ! (ನಗು)
ಸಚಿ: ಏನು ಮಾಡೋದು ಮಗೂ? ನಂಗೆ ದಿಕ್ಕೇ ತೋಚದಾಗಿದೆ.
ಮಗ: (ಚಿಂತಿಸಿ) ಚಿಂತಿಸ್ಬೇಡ ಅಪ್ಪಾ. ಇನ್ನೂ ಆರು ದಿನ ಇದೆಯಲ್ಲಾ . ನಾನು ದೇಶದಲ್ಲಿ ಸಂಚರಿಸಿ ಈ ಪ್ರಶ್ನೆಗೆ ಪರಿಹಾರ ಕಂಡುಕೊಂಡು ಬರುತ್ತೇನೆ.
ಸಚಿ: ಯಾರಿಗೆ ಗೊತ್ತಿರುತ್ತೆ ಮಗೂ ಇಂತಹ ವಿಚಿತ್ರ ಪ್ರಶ್ನೆಗೆ ಉತ್ತರ?
ಮಗ: ಕೆಲವು ಸಲ ಪ್ರಶ್ನೆಯಲ್ಲೇ ಉತ್ತರ ಇರುತ್ತೆ. ತಟ್ಟನೆ ನಮಗೆ ಅದು ಗೊತ್ತಾಗೋಲ್ಲ. ಇನ್ಯಾರಿಗೋ ಗೊತ್ತಾಗುತ್ತೆ. ಹೆದರ್ಬೇಡ. ಅವಧಿ ಮುಗಿಯುವುದರ ಒಳಗೆ ಉತ್ತರ ಕಂಡುಕೊಂಡು ಬರುತ್ತೇನೆ. (ಹೋಗುತ್ತಾನೆ)
ಫೇಡ್ ಔಟ್
ದೃಶ್ಯ ನಾಲ್ಕು: ರಸ್ತೆ
(ಅಂಕುಡೊಂಕು ದಾರಿ. (ಪೊದೆ ಪೊದರುಗಳನ್ನು ಮಾಡಿ ಉದ್ದನೆಯ ಅಂಕುಡೊಂಕು ದಾರಿ ಸೃಷ್ಟಿಸಬೇಕು) ಮಂತ್ರಿಯ ಮಗ ನಡೆದು ಬಹಳ ಬಳಲಿದ್ದಾನೆ. ದಾರಿನಡೆದು ಬಳಲಿದ ರೈತನೊಬ್ಬ ಒಂದು ಬಂಡೆಯ ಮೇಲೆ ಕುಳಿತುಕೊಂಡು ಕೈಯಲ್ಲಿರುವ ಶಾಲಿನಿಂದ ಗಾಳಿ ಹಾಕಿಕೊಳ್ಳುತ್ತಿದ್ದಾನೆ)
ಮಗ: ತುಂಬಾ ಬಾಯಾರಿಕೆ. ಇಲ್ಲಿ ಕುಡಿಯುವ ನೀರು ಎಲ್ಲಿ ಸಿಗುತ್ತದೆ?
ರೈತ: ಇಲ್ಲಿ ಹತ್ತಿರದಲ್ಲಿ ಎಲ್ಲಿಯೂ ಕುಡಿಯುವ ನೀರು ಇಲ್ಲ.
ಮಗ: ಹತ್ತಿರದಲ್ಲಿ ಕೆರೆ ಇಲ್ಲವೆ?
ರೈತ: ಇಲ್ಲಿ ಹತ್ತಿರದಲ್ಲಿ ಇದ್ದ ಕೆರೆ ಬತ್ತಿ ಹೋಗಿ ಎಷ್ಟೋ ವರ್ಷವಾಗಿದೆ.
ಮಗ: ಹಾಗಾದರೆ ಅದರಲ್ಲಿ ನೀರು ಇಲ್ವ?
ರೈತ: ಥತ್! ಇದೆಂಥಾ ಪ್ರಶ್ನೆ (ಹೋಗಲು ಏಳುತ್ತಾನೆ)
ಮಗ: ಕೆರೆಯಲ್ಲಿ ಮೀನುಗಳು ಕೂಡ ಇಲ್ವ?
ರೈತ: (ಸ್ವಗತ) ಇವನಿಗೆ ತಲೆ ಸರಿ ಇಲ್ಲ. (ಹೋಗುತ್ತಾನೆ)
ಮಗ: (ಅವನ ಹಿಂದೆಯೆ ಓಡುತ್ತಾ) ನಿಲ್ಲಿ ನಿಲ್ಲಿ. ನಾನೂ ಬರುತ್ತೇನೆ.
ರೈತ: (ತಡೆದು ನಿಂತು) ನೀವು ಯಾರು?
ಮಗ: ನಾನು ಒಬ್ಬ ಪ್ರವಾಸಿ.ತಾವು ಯಾರು?
ರೈತ: ನಾನು ಒಬ್ಬ ರೈತ.
ಮಗ: ತಾವು ಎಲ್ಲಿಗೆ ಹೋಗ್ತಾ ಇದ್ದೀರಿ?
ರೈತ: ನಾನು ನನ್ನ ಮನೆಗೆ ಹೋಗ್ತಾ ಇದ್ದೇನೆ.
ಮಗ: ತಾವು ಎಲ್ಲಿಂದ ಬರ್ತಾ ಇದ್ದೀರಿ?
ರೈತ: ನಾನು ಸಂತೆಯಿಂದ ಬರ್ತಾ ಇದ್ದೇನೆ.
ಮಗ: ಸರಿ. ನಡೀರಿ ಹೋಗೋಣ
ರೈತ: ನೀವು ಎಲ್ಲಿಗೆ ಹೋಗ್ತಾ ಇರೋದು?
ಮಗ: ನಾನು ಎಲ್ಲಿಗೆ ಹೋಗ್ಬೇಕೋ ಅಲ್ಲಿಂದ ಬರ್ತಾ ಇದ್ದೇನೆ. ಎಲ್ಲಿಂದ ಬರ್ಬೇಕೋ ಅಲ್ಲಿಗೆ ಹೋಗ್ತಾ ಇದ್ದೇನೆ.
(ಸಂಜ್ಞೆಯಲ್ಲಿ ಇವನಿಗೆ ಪೂರ್ತಿ ಹುಚ್ಚು ಎಂದುಕೊಳ್ಳುತ್ತಾ ಮುಂದೆ ನಡೆಯುತ್ತಾನೆ. ಇಬ್ಬರೂ ಸ್ವಲ್ಪ ದೂರ ನಡೆಯುತ್ತಾರೆ. ಇಬ್ಬರೂ ತುಂಬಾ ಬಳಲಿದ್ದಾರೆ)
ಮಗ: ತಾವು ತುಂಬಾ ಬಳಲಿದ್ದೀರಿ ಅಲ್ವೆ?
ರೈತ: ಹೌದು.
ಮಗ: ನಾವು ಹೀಗೆ ಬೇರೆ ಬೇರೆ ನಡೆಯುವ ಬದಲು, ಸ್ವಲ್ಪ ದೂರಕ್ಕೆ ನೀವು ನನ್ನನ್ನು ಎತ್ತಿಕೊಳ್ಳಿ. ಆಗ ನನ್ನ ಆಯಾಸ ಪರಿಹಾರವಾಗುತ್ತದೆ. ಆ ನಂತರ ಸ್ವಲ್ಪ ದೂರಕ್ಕೆ ನಿಮ್ಮನ್ನು ನಾನು ಎತ್ತಿಕೊಳ್ತೇನೆ. ಆಗ ನಿಮ್ಮ ಆಯಾಸ ಪರಿಹಾರವಾಗ್ತದೆ.
(ರೈತ ತಟ್ಟನೆ ಬೆರಗಿನಿಂದ ನಿಂತು ಅವನನ್ನೇ ನೋಡಿ, ಇದಕ್ಕಿಂತ ದೊಡ್ಡ ಹುಚ್ಚು ಇದೆಯೆ ಎಂಬ ಭಾವದಲ್ಲಿ ಏನೂ ಹೇಳದೆ ಮುಂದೆ ನಡೆಯುತ್ತಾನೆ. ಇಬ್ಬರೂ ಸ್ವಲ್ಪ ದೂರ ನಡೆಯುತ್ತಾರೆ. ತಟ್ಟನೆ ತಂಗಾಳಿ ಬೀಸತೊಡಗುತ್ತದೆ.)
ಮಗ: ಅಹ, ಎಷ್ಟು ಸಿಹಿಯಾದ ತಂಗಾಳಿ! (ಸುತ್ತಲೂ ನೋಡಿ) ಎಷ್ಟು ಸವಿಯಾದ ರಾಗಿಯ ಹೊಲ! ಒಂದೊಂದು ತೆನೆಯಲ್ಲಿ ಒಂದೊಂದು ಕಿಲೊ ರಾಗಿ ಇರಬಹುದು! (ರೈತನೊಡನೆ)ಹೊಲದಲ್ಲಿ ಸುಮಾರು ಹತ್ತು ಟನ್ ರಾಗಿ ಇರಬಹುದು. ಅಲ್ವೆ?
ರೈತ: (ಉದಾಸೀನ ಭಾವದಿಂದ) ಹೂಂ ಇರ್ಬಹುದು.
ಮಗ: ಈ ರಾಗಿಯನ್ನು ತಿಂದಾಗಿರ್ಬಹುದೆ?
(ರೈತ ತಟ್ಟನೆ ನಿಂತು ಮತ್ತೆ ಬೆರಗಿನಿಂದ ಅವನನ್ನೇ ದಿಟ್ಟಿಸಿ)
ರೈತ: ಗೊತ್ತಿಲ್ಲ. (ಸರಸರನೆ ಮುನ್ನಡೆಯುತ್ತಾನೆ. ಸಚಿವನ ಮಗ ಅವನನ್ನು ಹಿಂಬಾಲಿಸುತ್ತಾನೆ)
ಮಗ: (ತನ್ನ ಜೇಬಿನಿಂದ ಒಂದು ಚಾಕು ತೆಗೆದು) ನಡೆದು ನಡೆದು ಸುಸ್ತಾಗಿದೆ. ತಕ್ಕೊಳ್ಳಿ ಈ ಚಾಕು. ಎಲ್ಲಿಂದಾದರೂ ಎರಡು ಕುದುರೆಗಳನ್ನು ತನ್ನಿ. ನಮ್ಮ ಭಾರವನ್ನು ಕುದುರೆಗಳ ಮೇಲೆ ಹಾಕಿಕೊಂಡು ಹೋಗಬಹುದು. ಆದರೆ ನೆನಪಿನಲ್ಲಿ ಚಾಕು ವಾಪಾಸು ತನ್ನಿ. ಇದು ಬಹಳ ಅಮೂಲ್ಯವಾದ ಚಾಕು.
(ರೈತ ತಟ್ಟನೆ ತಿರುಗಿ ನಿಂತು ಬೆರಗಿನಿಂದ ಅವನನ್ನೇ ದಿಟ್ಟಿಸಿ. ಅವನು ತೋರಿಸಿದ ಚಾಕುವನ್ನು ಅವನ ಕಡೆಗೇ ತಳ್ಳಿ ಓಡಿಹೋಗುತ್ತಾನೆ)
ಫೇಡ್ ಔಟ್
ದೃಶ್ಯ ಐದು: ದಾರಿ ಬದಿಯಲ್ಲಿ ಒಂದು ಮರ
(ನಡೆದು ಬಳಲಿದ ರೈತ ಮರಕ್ಕೊರಗಿ ಕುಳಿತಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಸಚಿವನ ಮಗನೂ ಬಂದು ಒಂದೆಡೆ ಕುಳಿತುಕೊಳ್ಳುತ್ತಾನೆ. ರೈತ ಇಲ್ಲಿಗೂ ಬಂದೆಯ ಶನಿ ಎಂದು ಗೊಣಗಿಕೊಂಡು ಮುಖ ಬೇರೆ ಕಡೆಗೆ ತಿರುಗಿಸಿ ಕುಳಿತುಕೊಳ್ಳುತ್ತಾನೆ. ಒಬ್ಬನ ಮುಖ ಇತ್ತ , ಇನ್ನೊಬ್ಬನ ಮುಖ ಅತ್ತ )
ಮಗ: ಅಹ, ಅದೇನು ದೂರದಲ್ಲಿ ಕಾಣಿಸ್ತಾ ಇರೋದು? ಹೌದು. ಒಂದು ಚಲೋದಾದ ಸ್ಮಶಾನ!
ರೈತ: (ಸ್ವಗತ) ಏನು, ಸ್ಮಶಾನವೆ? ಇಷ್ಟು ಚೆಂದದ ಪಟ್ಟಣವನ್ನು ಸ್ಮಶಾನ ಅಂತಿದ್ದ್ದಾನಲ್ಲ! ಇಂಥ ಹುಚ್ಚನನ್ನು ನಾನು ಈ ತನಕ ಕಂಡಿಲ್ಲ.
ಮಗ: ಇದೇನು ಈ ಕಡೆಗೆ? ಹೌದು ಒಂದು ವಿಸ್ತಾರವಾದ ಪಟ್ಟಣ!
ರೈತ: (ಸ್ವಗತ) ನಿಜವಾದ ಹುಚ್ಚು ಅಂದರೆ ಇದು! ಪಟ್ಟಣವನ್ನು ಸ್ಮಶಾನ ಅಂತಿದಾನೆ, ಸ್ಮಶಾನವನ್ನು ಪಟ್ಟಣ ಅಂತಿದಾನೆ!
ಮಗ: ನಗರದಿಂದ ಯಾರೋ ಇಬ್ಬರು ಈ ದಾರಿಯಾಗಿ ಬರ್ತಿದಾರೆ.
(ಸ್ಮಶಾನದಿಂದ ಇಬ್ಬರು ಬರುತ್ತಾರೆ. ಅವರ ಕೈಯಲ್ಲಿ ರೊಟ್ಟಿಗಳಿವೆ. ಬಳಲಿ ಕುಳಿತ ರೈತನನ್ನು ನೋಡಿ ಅವನಿಗೆ ರೊಟ್ಟಿ ಕೊಡುತ್ತಾರೆ. ಅನಂತರ ಸಚಿವನ ಮಗನಿಗೆ ರೊಟ್ಟಿ ಕೊಡುತ್ತಾರೆ)
ಮಗ: ಎಲ್ಲಿಂದ ಈ ರೊಟ್ಟಿ?
೧ನೆ: ಇದು ನಾವು ಸತ್ತವರಿಗೆ ಅರ್ಪಿಸಿದ ರೊಟ್ಟಿ.
ಮಗ: ಸತ್ತವರಿಗೆ ಅರ್ಪಿಸಿದ ರೊಟ್ಟಿ ನಿಮ್ಮ ಕೈಗೆ ಹೇಗೆ ಬಂತು? ಅವರು ತಿನ್ನಲಿಲ್ವೆ?
೨ನೆ: ಸತ್ತ ಮೇಲೆ ಅವರು ಹೇಗೆ ತಿನ್ನುತ್ತಾರೆ?
ಮಗ: ಅಂದ್ರೆ, ಅವರು ಜೀವದಲ್ಲಿ ಇರುವಾಗ ನೀವು ಇದನ್ನು ಅವರಿಗೆ ಕೊಡಲಿಲ್ಲ.
೧ನೆ: ಇಲ್ಲ.
ಮಗ: ಸತ್ತ ಮೇಲೆ ಕೊಟ್ಟಿರಿ!
೨ನೆ: ಹೌದು.
ಮಗ: ಆದ್ದರಿಂದ ಅವರು ಇದನ್ನು ತಿನ್ನಲಿಲ್ಲ.
೧ನೆ: ಹೌದು.
ಮಗ: ಹಾಗಾಗಿ ಈಗ ಜೀವ ಇರುವ ನನಗೆ ಮತ್ತು (ರೈತನನ್ನು ತೋರಿಸಿ)ಅವರಿಗೆ ಇದು ಸಿಕ್ಕಿತು.
೨ನೆ: ಹೌದು.
ಮಗ: ತುಂಬಾ ಸಂತೋಷ. ಧನ್ಯವಾದಗಳು.
(ಇಬ್ಬರೂ ತಲೆಬಾಗಿ ವಂದಿಸಿ ನಿರ್ಗಮಿಸುತ್ತಾರೆ)
ರೈತ: (ರೊಟ್ಟಿ ತಿನ್ನುತ್ತಾ, ಸ್ವಗತ) ಹುಚ್ಚನಾದರೂ ಬುದ್ಧಿವಂತನಿರುವ ಹಾಗಿದ್ದಾನೆ. ಇವನ ಭಾಷೆ ಮಾತ್ರ ವಿಚಿತ್ರವಾಗಿದೆ. ಪಟ್ಟಣವನ್ನು ಸ್ಮಶಾನ ಅಂತಾನೆ. ಸ್ಮಶಾನವನ್ನು ಪಟ್ಟಣ ಅಂತಾನೆ. ಇನ್ನು? ನೀರನ್ನು ನೆಲ, ನೆಲವನ್ನು ನೀರು ಅಂದಾನು! ಕತ್ತಲೆಯನ್ನು ಬೆಳಕು ಬೆಳಕನ್ನು ಕತ್ತಲೆ ಅಂದಾನು! ಒಳ್ಳೆಯ ಜೋಕರ್! ನನ್ನ ಹೆಂಡತಿ ಮತ್ತು ಮಗಳು ಇವನ ಮಾತು ಕೇಳಿ ಹೊಟ್ಟೆ ತುಂಬಾ ನಗಬಹುದು! ಇಷ್ಟಕ್ಕೂ ಮನುಷ್ಯ ಅಪಾಯಕಾರಿಯಲ್ಲ ಅಂತ ತೋರುತ್ತೆ. ಓದಿದವನ ಹಾಗೂ ಇದ್ದಾನೆ. ನಡೆ ನುಡಿ ಉಡುಪಿನಲ್ಲಿ ಪರಿಷ್ಕಾರ ಇದೆ! (ಏಳುತ್ತಾನೆ. ಅಷ್ಟರಲ್ಲಿ ಸಚಿವನ ಮಗ ಎದ್ದು ರೈತನ ಬಳಿ ಬರುತ್ತಾನೆ)
ಮಗ: ಹೋಗೋಣ್ವ?
ರೈತ: (ಮೋಜಿನ ಮುಗುಳುನಗೆ) ಹೋಗೋಣ. ಕತ್ತಲಾಗ್ತಾ ಇದೆ. ಕತ್ತಲಾಗುವುದರೊಳಗೆ ಮನೆ ತಲಪಬೇಕು. ನೀವು ಎಲ್ಲಿ ತಂಗುತ್ತೀರಿ ಈ ರಾತ್ರಿ?
ಮಗ: ನಾನು ಐದು ದಿನಗಳಿಂದ ಹೋಗ್ತಾ ಇದ್ದೇನೆ. ಎಲ್ಲಿಯೂ ತಂಗಿಲ್ಲ.
ರೈತ: ಏನು? ಐದು ದಿನಗಳಿಂದ ಹೋಗ್ತಾ ಇದ್ದೀರಾ? ಯಾಕೆ?
ಮಗ: ಯಾಕೆ ಅಂದ್ರೆ ಹೋಗ್ತಾ ಇದ್ರೆ, ಒಂದು ದಿವ್ಸ ಎಲ್ಲಾದ್ರೂ ತಂಗ್ಬಹುದು. ಹೋಗ್ದೇ ಇದ್ರೆ ತಂಗೋದು ಹೇಗೆ?
ರೈತ: (ನಕ್ಕು) ಈ ರಾತ್ರಿ ನೀವು ನನ್ನ ಮನೆಯಲ್ಲಿ ತಂಗಬಹುದು.
ಮಗ: (ಚಿಂತಿಸಿ) ತಂಗಬಹುದು. ಆದ್ರೆ ನಿಮ್ಮ ಮನೆಯ ತೊಲೆ ಬಲವಾಗಿದೆಯೆ ಎಂದು ನೋಡಿಕೊಂಡು ಬನ್ನಿ. ತೊಲೆ ಬಲವಾಗಿದ್ದರೆ ಮಾತ್ರ ನಾನು ನಿಮ್ಮ ಮನೆಯನ್ನು ಪ್ರವೇಶಿಸುತ್ತೇನೆ.
ರೈತ: (ಸ್ವಗತ:) ಇದು ಶುದ್ಧ ಹುಚ್ಚು! (ಹೋಗಿಬಿಡುತ್ತಾನೆ)
ಫೇಡ್ ಔಟ್
ದೃಶ್ಯ ಆರು: ರೈತನ ಮನೆ
(ರೈತನ ಹೆಂಡತಿ ಮತ್ತು ಮಗಳು. ರೈತನ ಪ್ರವೇಶ. ಹೆಂಡತಿ ಮತ್ತು ಮಗಳು ಸಂಭ್ರಮಿಸುತ್ತಾರೆ. ರೈತನಿಗೆ ತಟ್ಟನೆ ನಗು ಬರುತ್ತದೆ. ಕುಳಿತುಕೊಂಡು ಮತ್ತಷ್ಟು ನಗುತ್ತಾನೆ)
ಹೆಂ: ಏನು, ಏನು ವಿಷಯ? ಯಾಕೆ ನಗ್ತಾ ಇದ್ದೀರಿ ಹೀಗೆ?
ಮಗಳು: ಬಹುಶ: ಈ ಬಾರಿ ವೆನಿಲ್ಲಾ ಬೀಜಗಳಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಅಲ್ವೇನಪ್ಪಾ?
ರೈತ: (ನಗು ತಡೆದುಕೊಂಡು) ಅದಕ್ಕಲ್ಲ.
ಹೆಂ: ಮತ್ತೆ?
ರೈತ: ನನ್ನ ಇಡೀ ದಿನದ ಪ್ರಯಾಣ ಬಹಳ ಸ್ವಾರಸ್ಯಕರವಾಗಿತ್ತು. ಅದಕ್ಕೆ.
ಹೆಂ: ಹೌದೆ? ಹೇಗೆ?
ರೈ: ನಗರದಿಂದ ಹೊರಟ ಕೂಡಲೇ ನನಗೊಬ್ಬ ಸ್ವಾರಸ್ಯಕರವಾದ ಸಹಪ್ರಯಾಣಿಕ ಸಿಕ್ಕಿದ.
ಹೆಂ: ಯಾರು?
ರೈತ: ಒಬ್ಬ ಹುಚ್ಚ..
ಹೆಂ: ಏನು, ಹುಚ್ಚನ ಜೊತೆ ಪ್ರಯಾಣ ಅಷ್ಟು ಸ್ವಾರಸ್ಯಕರವಾಗಿತ್ತೆ?
ರೈತ: ಸಾಮಾನ್ಯ ಹುಚ್ಚನಲ್ಲ. ಹುಚ್ಚರ ಹುಚ್ಚ.
ಮಗಳು: ಏನು ಅಂಥ ವಿಶೇಷ ಅವನಲ್ಲಿ?
ಹೆಂ: ಎಲ್ಲಿ ಹೋದ ಅವನು?
ರೈತ: ನೇರ ಇಲ್ಲಿಗೇ ಕರೆದುಕೊಂಡು ಬರುವವನಿದ್ದೆ. ನೀವು ಕೂಡ ಅವನ ಮಾತು ಕೇಳಿ ನಗಬಹುದು ಅಂತ. ಆದ್ರೆ ಅವನು ರಸ್ತೆಬದಿಯಲ್ಲೇ ಕುಳಿತಿದ್ದಾನೆ. ಮನೆಯ ತೊಲೆ ಬಲವಾಗಿದೆಯೆ ಅಂತ ಮನೆಯವರನ್ನು ಕೇಳಿಕೊಂಡು ಬನ್ನಿ. ಬಲವಾಗಿದ್ರೆ ಬರ್ತೇನೆ ಅಂದ. ಅವನ ಮಾತುಗಳೆಲ್ಲ ಬಹಳ ವಿಚಿತ್ರವಾಗಿವೆ! (ನಗು)
ಮಗಳು: ಅವ್ನು ಹಾಗಂದ್ನೆ? ಹಾಗಾದ್ರೆ ಅವ ಹುಚ್ಚ ಅಲ್ಲ.
ರೈತ: ಮತ್ತೆ?
ಮಗಳು: ಅವ ಬುದ್ಧಿವಂತನಿದ್ದಾನೆ. ಮನೆಯ ತೊಲೆ ಬಲವಾಗಿದೆಯೆ ಅಂದ್ರೆ ಮನೆಯವರಿಗೆ ಅತಿಥಿಯನ್ನು ಚೆನ್ನಾಗಿ ನೋಡಿಕೊಳ್ಳುವ ತಾಖತ್ತಿದೆಯೆ ಅಂತ ಅರ್ಥ. ಹಾಗೆ ಕೇಳ್ಬೇಕಿದ್ರೆ ಆತ ಯಾವುದೋ ಪ್ರತಿಷ್ಠಿತ ಮನೆತನದವನೇ ಇರಬೇಕು.
ಹೆಂ: ಹಾಗಾದ್ರೆ ಸರಿ. ಕರಕೊಂಡು ಬನ್ನಿ. ಮನೆಯ ತೊಲೆ ಬಲವಾಗಿದೆ ಅನ್ನಿ. (ನಗು)
ರೈತ: ಅಷ್ಟರಿಂದ್ಲೇ ಅವನು ಹುಚ್ಚ ಅಲ್ಲ ಅಂತ ತೀರ್ಮನಿಸುವುದು ಹೇಗೆ? ಅವನು ಆಡಿದ ಬೇರೆ ಮಾತುಗಳನ್ನು ಕೇಳಬೇಕು ನೀವು!
ಹೆಂ: ಏನಂದ?
ರೈತ: ಅವ್ನು ನಂಗೆ ಅರ್ಧ ದಾರಿಯಲ್ಲಿ ಸಿಕ್ಕಿದ. ಅವ್ನಿಗೂ ಸುಸ್ತಾಗಿತ್ತು. ನಂಗೂ ಸುಸ್ತಾಗಿತ್ತು. ಅವ್ನು ಏನಂದ ಗೊತ್ತಾ?
ಮಗಳು: ಏನಂದ?
ರೈತ: ನೀವು ನನ್ನನ್ನು ಸ್ವಲ್ಪ ದೂರದ ವರೆಗೆ ಎತ್ತಿಕೊಳ್ಳಿ ಆಗ ನನ್ನ ಆಯಾಸ ಪರಿಹಾರವಾಗುತ್ತೆ, ಆ ಮೇಲೆ ನಾನು ಸ್ವಲ್ಪ ದೂರ ನಿಮ್ಮನ್ನು ಎತ್ತಿಕೊಳ್ತೇನೆ ಆಗ ನಿಮ್ಮ ಆಯಾಸ ಪರಿಹಾರವಾಗುತ್ತೆ ಅಂದ. (ನಗು)
ಮಗಳು: ಹಾಗಂದ್ರೆ, ಮೊದಲು ನೀವು ಒಂದು ಕತೆ ಹೇಳಿ, ಆನಂತರ ನಾನು ಒಂದು ಕತೆ ಹೇಳ್ತೀನಿ. ನಮ್ಮ ಇಬ್ರ ಆಯಾಸಾನೂ ಪರಿಹಾರವಾಗುತ್ತೆ ಅಂತ ಅರ್ಥ.
ರೈತ: ಹೌದಾ? (ಆಶ್ಚರ್ಯ) ಆಮೇಲೆ ಕಟಾವಿಗೆ ಸಿದ್ಧವಾಗಿರುವ ಒಂದು ರಾಗಿ ಹೊಲವನ್ನು ನೋಡಿ ಇದನ್ನು ತಿಂದಿರಬಹುದೆ ಅಂದ.
ಮಗಳು: ಹಾಗಂದ್ರೆ, ರಾಗಿಯ ಬೆಳೆಯ ಮೇಲೆ ರೈತ ಸಾಲ ಮಾಡಿರಬಹುದೆ ಎಂದು ಅರ್ಥ.
ರೈತ: ಅನಂತರ ನನ್ನ ಕೈಗೆ ಒಂದು ಚಾಕು ಕೊಟ್ಟು ಎರಡು ಕುದುರೆಗಳನ್ನು ತನ್ನಿ , ಕುದುರೆಗಳ ಮೇಲೆ ನಮ್ಮ ಭಾರ ಹಾಕಿಕೊಂಡು ಪ್ರಯಾಣ ಮಾಡೋಣ ಅಂದ.
ಮಗಳು: ಹಾಗಂದ್ರೆ, ಎರಡು ಕೋಲುಗಳನ್ನು ತನ್ನಿ. ಕೋಲು ಹಿಡಿದುಕೊಂಡರೆ ನಡೆಯಲು ಆರಾಮಾಗುತ್ತೆ ಅಂತ ಅರ್ಥ.
ರೈತ: ಆ ಮೇಲೆ ಒಂದು ಪಟ್ಟಣವನ್ನು ನೋಡಿ ಸುಂದರವಾದ ಸ್ಮಶಾನ ಅಂದ. ಸ್ಮಶಾನವನ್ನು ನೋಡಿ ಚಲೋದಾದ ಪಟ್ಟಣ ಅಂದ.
ಮಗಳು: ನಿಜ. ಆದರಿಸದ ಸತ್ಕರಿಸದ ಪಟ್ಟಣ ಸ್ಮಶಾನಕ್ಕೆ ಸಮಾನ, ನಿರುಪದ್ರವಿಯಾದ ಸ್ಮಶಾನದ ಮಂದಿ ನಮ್ಮನ್ನು ಸದಾ ಸ್ವಾಗತಿಸುತ್ತಾರೆ. ಕೆಲವು ಸಲ ಹಸಿದು ಬಂದವರಿಗೆ ಅಲ್ಲಿ ಸತ್ತವರಿಗೆ ಸಮರ್ಪಿಸಿದ ರೊಟ್ಟಿ ಸಿಗಬಹುದು.
ರೈತ: ನಿಜ ನಿಜ. ನಮಗೆ ಅಲ್ಲಿ ರೊಟ್ಟಿ ಸಿಕ್ಕಿತು. ಹಾಗಾದ್ರೆ ಅವನು ಹುಚ್ಚನಲ್ಲ. ಬುದ್ಧಿವಂತ ಅನ್ನುವುದರಲ್ಲಿ ಸಂದೇಹವಿಲ್ಲ ಅಲ್ಲವೆ?
ಮಗಳು: ಸಂದೇಹವಿಲ್ಲ. ಅವನು ತುಂಬಾ ಬುದ್ಧಿವಂತ.
ಹೆಂ: ಬೇಗನೆ ಹೋಗಿ ಅವನನ್ನು ಕರೆದುಕೊಂಡು ಬನ್ನಿ. ಪಾಪ. ಬಹಳ ಹಸಿದಿರಬಹುದು. ನಾವು ಊಟಕ್ಕೆ ಸಿದ್ಧಪಡಿಸುತ್ತೇವೆ.
(ರೈತ ಹೋಗುತ್ತಾನೆ. ಹೆಂಡತಿ ಮಗಳು ತರಾತುರಿಯಿಂದ ಊಟಕ್ಕೆ ಸಿದ್ಧಪಡಿಸುತ್ತಾರೆ. ತುಸು ಹೊತ್ತು ಬೆಳಕು ಮಂದ. ಸಚಿವನ ಮಗನನ್ನು ಕರೆದುಕೊಂಡು ರೈತ ಬರುವಾಗ ಬೆಳಕು)
ರೈತ: ಬನ್ನಿ ಬನ್ನಿ.
ಮಗಳು: ಮನೆಯ ತೊಲೆ ಬಲವಾಗಿದೆ. ಒಳಗೆ ಬರಬಹುದು. (ನಗು)
(ಸಚಿವನ ಮಗ ಸಂಕೋಚಪಡುತ್ತಾನೆ. ಅವನನ್ನು ಕುರ್ಚಿಯಲ್ಲಿ ಕುಳ್ಳಿರಿಸುತ್ತಾರೆ)
ಹೆಂ: . ಊಟಕ್ಕೆ ಸಿದ್ಧಪಡಿಸುತ್ತೇವೆ. ನೀವು ತುಂಬಾ ಹಸಿದಿರಬಹುದು
ಮಗ: ಹೊಟ್ಟೆಯ ಹಸಿವೆಗಿಂತ ಜೀವದ ಹಸಿವೆ ಬಲವಾಗಿದೆ.
ರೈತ: ಹಾಗೆಂದರೇನು?
ಮಗಳು: ನಾನು ಪ್ರವಾಸಹೊರಟಿರುವುದು ಹೊಟ್ಟೆ ಹಸಿವನ್ನು ಹಿಂಗಿಸಲಿಕ್ಕಲ್ಲ, ಜೀವದ ಹಸಿವನ್ನು ಹಿಂಗಿಸಿಲು.
ರೈತ: ನಮಗೆ ನಗರದವರ ಮಾತುಗಳು ಅರ್ಥವಾಗುವುದಿಲ್ಲ.
ಮಗ: ಹಾಗಾದರೆ ನಾನು ಹೊಟ್ಟೆಯ ಹಸಿವಿಗೆ ಉತ್ತರ ಕೊಡುವ ಮೊದಲು ನಿಮಗೆ ನನ್ನ ಕಥೆಯನ್ನು ಹೇಳುವುದು ಒಳ್ಳೆಯದು.
ರೈತ: ಹೇಳಿ.
ಮಗ: ನಾನು ಈ ರಾಜ್ಯದ ಮತ್ಸ ಮಂತ್ರಿಯ ಮಗ. ಒಂದು ದಿನ ಅರಮನೆಗೆ ಎಂದಿನಂತೆ ಮೀನು ತರುವವಳು ಬಂದಳು. ಆ ದಿನ ಅವಳ ಬುಟ್ಟಿಯಲ್ಲಿ ಒಂದು ದೊಡ್ಡ ಮೀನು ಮಾತ್ರವೇ ಇತ್ತು. ತನಗೊಂದು ದೊಡ್ಡ ಹೆಣ್ಣು ಮೀನು ಬೇಕು, ಆ ಮೀನು ಗಂಡೋ ಹೆಣ್ಣೋ ಎಂದು ಮಹಾರಾಣಿ ಕೇಳಿದರಂತೆ. ಅದು ಗಂಡು ಮೀನು ಎಂದು ಮೀನು ಮಾರುವವಳು ಹೇಳಿದಳಂತೆ. ಮಹಾರಾಣಿಯ ಪ್ರಶ್ನೆಯನ್ನು ಕೇಳಿ ಮೀನು ನಕ್ಕಿತಂತೆ. ಅದನ್ನು ನೋಡಿ ಮಹಾರಾಣಿಗೆ ವಿಪರೀತ ಸಿಟ್ಟು ಬಂತು. ತನ್ನನ್ನು ಮೀನು ಅವಮಾನ ಮಾಡಿತು ಎಂದು ಮಹಾರಾಜರ ಬಳಿ ದೂರಿದರು. ಅದನ್ನು ಕೇಳಿ ಮಹಾರಾಜರು ನನ್ನ ಅಪ್ಪನನ್ನು ಮೀನು ನಕ್ಕದ್ದೇಕೆ ಎಂದು ಕೇಳಿದರು. ಅಪ್ಪನಿಗೆ ಉತ್ತರ ಗೊತ್ತಿರಲಿಲ್ಲ. ನಾಲ್ಕು ವಾರದೊಳಗೆ ಉತ್ತರ ಸಿಗಬೇಕು, ಇಲ್ಲದಿದ್ದರೆ ತಲೆದಂಡ ಎಂದರು. ಮೂರು ವಾರ ಅಪ್ಪ ದೇಶ ಸುತ್ತಿ ಸಾವಿರಾರು ಮೀನುಗಾರರನ್ನು, ಮತ್ಸ ಪಂಡಿತರನ್ನು ಮತ್ತು ಮತ್ಸ ವಿಜ್ಞಾನಿಗಳನ್ನು ವಿಚಾರಿಸಿದರು. ಯಾರಿಗೂ ಉತ್ತರ ಗೊತ್ತಿರಲಿಲ್ಲ. ಮೂರು ವಾರಗಳ ನಂತರ ವಿಷಯ ನನಗೆ ತಿಳಿಯಿತು. ಅಪ್ಪನ ಜೀವಕ್ಕೆ ಸಂಚಕಾರ ಬಂದಿರುವುದನ್ನು ಕಂಡು, ಈ ಪ್ರಶ್ನೆಗೆ ಎಲ್ಲಿಯಾದರೂ ಉತ್ತರ ಸಿಗುವುದೇ ನೋಡೋಣ ಎಂದು ನಾನು ದೇಶ ಸಂಚಾರಕ್ಕೆ ಹೊರಟೆ.
ಮಗಳು: (ನಗುತ್ತಾ) ಇದಕ್ಕೆ ಉತ್ತರ ಬಹಳ ಸುಲಭವಿದೆ.
ರೈತ, ಹೆಂಡತಿ ಮತ್ತು ಸಚಿವನ ಮಗ (ಬೆರಗಿನಿಂದ): ಏನು?
ಮಗಳು: ಮೀನು ನಕ್ಕಿದ್ದರ ಅರ್ಥ ಇಷ್ಟೆ. ಅರಮನೆಯಲ್ಲಿರುವ ಹೆಂಗಸರ ಪೈಕಿ ಹೆಣ್ಣು ವೇಷದಲ್ಲಿರುವ ಗಂಡೊಬ್ಬನಿದ್ದಾನೆ.
(ಮೂವರೂ ಆಶ್ಚರ್ಯದಿಂದ ಅವಳ ಮುಖವನ್ನೇ ನೋಡುತ್ತಾರೆ.)
ಮಗ: (ತಟ್ಟನೆ ಎದ್ದು) ನಿಮಗೆ ತುಂಬಾ ಕೃತಜ್ಞತೆಗಳು. ನಾನು ಈಗಲೇ ವಾಪಾಸು ಹೋಗುತ್ತೇನೆ. (ಹೊರಡುತ್ತಾನೆ)
ಹೆಂ: ನೀವು ತುಂಬಾ ಹಸಿದಿದ್ದೀರಿ. ಊಟ ಮಾಡಿದ ಮೇಲೆ ಹೊರಡಿ.
ಮಗ: ಇಲ್ಲ. ನನಗೆ ಈಗ ಹಸಿವೆಯೆ ಇಲ್ಲ. (ಹೊರಡುತ್ತಾನೆ)
ರೈತ: ಸ್ವಲ್ಪ ಹಾಲನ್ನಾದರೂ ಕುಡಿದುಕೊಂಡು ಹೋಗಿ.
ಮಗಳು: (ಓಡಿಹೋಗಿ ಒಂದು ದೊಡ್ಡ ಲೋಟದಲ್ಲಿ ಹಾಲು ತರುತ್ತಾ) ನೀವು ಮಹಾರಾಜರಿಗೆ ಅಷ್ಟು ಹೇಳಿಬಿಟ್ಟರೆ ಸಾಕಾಗುವುದಿಲ್ಲ. ಅವನನ್ನು ಪತ್ತೆ ಹಚ್ಚುವುದು ಹೇಗೆ ಎಂದು ಕೂಡ ಹೇಳಬೇಕಾಗುತ್ತೆ.)
ಮಗ: ನಿಜ. ಹೇಗೆ?
ಮಗಳು: ಮೊದಲು ಈ ಹಾಲು ಕುಡಿಯಿರಿ. ಆ ಮೇಲೆ ಹೇಳ್ತೇನೆ.
(ಅವನು ಹಾಲು ಕುಡಿಯುತ್ತಿರುವಾಗ)
ಫೇಡ್ ಔಟ್
ದೃಶ್ಯ ಏಳು: ಅರಮನೆ
(ರಾಜ ಮತ್ತು ರಾಣಿ ಗಂಭಿರವಾದ ಮಾತುಕತೆಯಲ್ಲಿದ್ದಾರೆ. ಮತ್ಸ ಸಚಿವನ ಪ್ರವೇಶ)
ರಾಜ: ಪ್ರಶ್ನೆಗೆ ಉತ್ತರ ದೊರೆಯಿತೆ?
ಮಂತ್ರಿ: ಇನ್ನೂ ಇಲ್ಲ ಮಹಾಪ್ರಭು.
ರಾಜ: ಇವತ್ತಿಗೆ ಕೊಟ್ಟ ಅವಥಿ ಮುಗಿಯಿತು. ಇನ್ನುಳಿದಿರುವುದು ಅರ್ಧ ದಿನ ಮಾತ್ರ!
ಮಂತ್ರಿ: ಹೌದು ಮಹಾಪ್ರಭು.
ರಾಜ: ನಾವು ನಿಮಗೆ ಕೊಟ್ಟ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಹುಡುಗನನ್ನು ಕಳಿಸಿರುವುದು ಸರಿ ಕಾಣುವುದಿಲ್ಲ.
ಸಚಿ: ನಾನು ಕಳಿಸಲಿಲ್ಲ ಮಹಾಪ್ರಭು. ಅವನೇ ಹೋಗಿದ್ದಾನೆ.
ರಾಣಿ: ಅವನಿನ್ನೂ ಹುಡುಗ. ಅವನಿಗೇನು ತಿಳಿಯುತ್ತದೆ? ನೀವು ಹೋಗಲು ಬಿಡಬಾರದಾಗಿತ್ತು. ಅವನಿಗೆ ಏನು ಗಂಡಾಂತರ ಒದಗಿದೆಯೊ ಏನೊ. ನೀವು ನಿಮ್ಮ ತಲೆಯನ್ನು ಕಳೆದುಕೊಳ್ಳುವುದರೊಂದಿಗೆ ನಿಮ್ಮ ಮಗನನ್ನು ಕೂಡ ಕಳೆದುಕೊಳ್ಳುತ್ತಿದ್ದೀರಿ! ಅಲ್ಲವೆ?
ಸಚಿ: (ತಲೆ ಬಾಗಿಸಿ ದು:ಖದಿಂದ) ನಿಜ ಮಹಾರಾಣಿ.
ರಾಜ: ಸೂಯಾಸ್ತಮಾನಕ್ಕೆ ಕೆಲವೇ ಗಂಟೆಗಳು ಉಳಿದಿವೆ. ಸೂಯಾಸ್ತಮಾನಕ್ಕೆ ಮೊದಲು ನಿಮ್ಮ ಉತ್ತರ ಸಿಗದಿದ್ದರೆ ನಿಮ್ಮ ತಲೆ ಉಳಿಯುವುದಿಲ್ಲ.
ಮಂತ್ರಿ: ತಮ್ಮ ಚಿತ್ತ ಮಹಾಪ್ರಭು.
(ಮತ್ಸ ಸಚಿವನ ಮಗನ ಪ್ರವೇಶ)
ರಾಜ: ಯಾರು? ಮಂತ್ರಿಕುಮಾರ!
ಮಗ: ಹೌದು ಮಹಾಪ್ರಭು. ಮಹಾರಾಜರ ಪ್ರಶ್ನೆಗೆ ಉತ್ತರ ಕಂಡುಕೊಂಡು ಬಂದಿದ್ದೇನೆ.
ರಾಣಿ: (ಅತೀವ ಕುತೂಹಲದಿಂದ) ಹೌದೆ? ಯಾಕೆ ಮೀನು ನಕ್ಕದ್ದು?
ಮಗ: ಅರಮನೆಯಲ್ಲಿರುವ ಹೆಂಗಸರ ಪೈಕಿ ಹೆಣ್ಣಿನ ವೇಷದಲ್ಲಿ ಒಬ್ಬ ಗಂಡಸು ಇದ್ದಾನೆ ಮಹಾರಾಣಿ.
ರಾಜ, ರಾಣಿ: ಏನು?
ರಾಣಿ: ನಮ್ಮ ನಡುವೆ ಒಬ್ಬ ಗಂಡಸು! ಅಸಾಧ್ಯ.
ಮಗ: ರಾಣಿಯರ ನಡುವೆ ಅಲ್ಲದಿದ್ದರೆ, ದಾಸಿಯರ ನಡುವೆ ಇರಬಹುದು ಮಹಾರಾಣಿ.
ರಾಜ: ಸರಿ. ನಿನ್ನ ಮಾತು ಸುಳ್ಳಾದರೆ, ನಿನ್ನ ತಲೆ ತೆಗೆಯಬೇಕಾಗುತ್ತದೆ.
ಮಗ: ಆಗಲಿ ಮಹಾಪ್ರಭು.
ರಾಣಿ: ಆದರೆ ಅವನನ್ನು ಪತ್ತೆ ಹಚ್ಚುವುದು ಹೇಗೆ?
ಮಗ: ಅರಮನೆಯ ಹೊರಗಿನ ಅಂಗಳದಲ್ಲಿ ಐದು ಅಡಿ ಅಗಲದ ಮತ್ತು ಅಷ್ಟೇ ಆಳದ ಒಂದು ಕುಳಿ ತೋಡಿಸಬೇಕು.
ರಾಜ: ಆ ಮೇಲೆ?
ಮಗ: ಅರಮನೆಯ ಹೆಂಗಸರೆಲ್ಲ ಒಬ್ಬೊಬ್ಬರಾಗಿ ಕುಣಿಯ ಈ ಕಡೆಯಿಂದ ಆ ಕಡೆಗೆ ಹಾರಬೇಕು.
ರಾಣಿ: ಏನು ಐದು ಅಡಿ ಅಗಲದ ಕುಣಿಯನ್ನು ಹಾರುವುದೆ? ಹೆಂಗಸರಿಂದ ಅಸಾಧ್ಯ!
ಮಗ: ಅದಕ್ಕೇ ಈ ಪಂದ್ಯ ಮಹಾರಾಣಿ. ಯಾರು ಹಾರುತ್ತಾನೋ ಅವನು ಗಂಡಸು!
ರಾಜ: ತಾನು ಕೂಡ ಹೆಂಗಸು ಎಂದು ತೋರಿಸಲು ಅವನು ಕೂಡ ಬೇಕೆಂದೇ ಕುಣಿಯೊಳಗೆ ಬಿದ್ದರೆ?
ಮಗ: ಗೆದ್ದವರಿಗೆ ಅವರು ಕೇಳಿದ್ದು ಸಿಗುತ್ತದೆ ಎಂದು ಮಹಾರಾಜರು ಹೇಳಬೇಕು.
ರಾಜ: ಅದು ಹೇಗಾಗುತ್ತೆ? ಅವನು ಅರ್ಧರಾಜ್ಯವನ್ನೇ ಕೇಳಬಹುದು.
ಮಗ: ಹಾಗೆ ಕೇಳಿದರೆ, ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆಯನ್ನು ಮೊದಲು ಅನುಭವಿಸಬೇಕು. ಇಂಥ ಘೋರ ಅಪರಾಧಕ್ಕೆ ತಲೆಕಡಿಯುವುದೇ ಈ ರಾಜ್ಯದಲ್ಲಿರುವ ಶಿಕ್ಷೆ, ಆ ಶಿಕ್ಷೆ ಜಾರಿಯಾದ ಮೇಲೆ ಅರ್ಧ ರಾಜ್ಯ ಕೊಡಲಾಗುತ್ತದೆ ಎಂದು ಹೇಳಬೇಕು.
ರಾಜ: (ಯೊಚಿಸಿ) ಅದೇ ಸರಿ. ನಾಳೆಯೆ ಪಂದ್ಯಕ್ಕೆ ಏರ್ಪಾಡು ಮಾಡಿ.
ಪ್ರಧಾನ ಮಂತ್ರಿ: ಆಗಲಿ ಮಹಾಪ್ರಭು.
ರಾಜ: (ತಟ್ಟನೆ) ಆದರೆ, ಮಂತ್ರಿಕುಮಾರ, ಈ ಪಂದ್ಯದ ನಂತರ ಅರಮನೆಯ ರಾಣಿಯರಲ್ಲಿ ಕೈಕಾಲು ಸರಿಯಿರುವವರು ಒಬ್ಬರೂ ಇರುವುದಿಲ್ಲವಲ್ಲಾ?
ಮಗ: ಮಹಾಪ್ರಭು. ಕುಳಿಯಲ್ಲಿ ನಾಲ್ಕು ಅಡಿಗಳ ವರೆಗೆ ಮರಳು ತುಂಬಿಸಬೇಕು.
ರಾಜ: ಹಾಂ. ಅದು ಸರಿ. ಹಾಗೇ ಮಾಡೋಣ. ಮೊದಲು ರಾಣಿಯರು ಹಾರಲಿ ಆ ಮೇಲೆ ಸೇವಕಿಯರು ಹಾರಲಿ.
ರಾಣಿ: ನಾನು ಮತ್ತು ರಾಜಕುಮಾರಿ ಕೂಡ ಹಾರಬೇಕೆ?
ರಾಜ: ಛೆ! ಇದೂ ಒಂದು ಕೇಳಬೇಕಾದ ಪ್ರಶ್ನೆಯೆ?
ಫೇಡ್ ಔಟ್
ದೃಶ್ಯ ಎಂಟು: ಬಯಲು
(ರಾಜ, ರಾಣಿ, ರಾಜಕುಮಾರಿ, ಪ್ರಧಾನ ಮಂತ್ರಿ, ಮತ್ಸ ಸಚಿವ, ಸಚಿವನ ಮಗ, ಇತರ ಮಂತ್ರಿಯರು. ಒಂದು ಪಕ್ಕದಲ್ಲಿ ಕುರ್ಚಿಯಲ್ಲಿ ಕುಳಿತುಕೊಂಡು ಕೆಲವು ರಾಣಿಯರು ಕಾಲು ತಿಕ್ಕಿಕೊಳ್ಳುತ್ತಿದ್ದಾರೆ. ಇನ್ನೊಂದು ಪಕ್ಕದಲ್ಲಿ ದಾಸಿಯರು ನಿಂತಿದ್ದಾರೆ. ಅವರಲ್ಲಿ ಒಬ್ಬ ಹೆಣ್ಣಿನ ಉಡುಪಿನಲ್ಲಿರುವ ಯುವಕ. ಒಂದು ಕಡೆ ರೈತ, ಅವನ ಹೆಂಡತಿ ಮತ್ತು ಮಗಳು ಕೂಡ ಇದ್ದಾರೆ)
ಪ್ರಧಾನಿ: ಎಲ್ಲಾ ಮಹಾರಾಣಿಯರ ಹಾರಾಟ ಮುಗಿಯಿತು ಮಹಾಪ್ರಭು. ಕೆಲವರ ಕಾಲು ಕೂಡ ಮುರಿಯಿತು.
ರಾಜ: ಸಾಕಷ್ಟು ಮಂದಿ ವೈದ್ಯರು ಇದ್ದಾರೆಯೆ?
ಪ್ರಧಾ: ಇದ್ದಾರೆ ಮಹಾಪ್ರಭು.
ರಾಜ: ಇನ್ನು ದಾಸಿಯರ ಹಾರಾಟ ಆರಂಭವಾಗಲಿ
(ದಾಸಿಯರು ಒಬ್ಬೊಬ್ಬರಾಗಿ ಬಂದು ಹಾರಿ ಕುಳಿಗೆ ಬಿದ್ದು ಕಾಲು ನೋಯಿಸಿ ಕೊಂಡು ಎದ್ದು ಹೋಗುತ್ತಾರೆ. ನೆರೆದವರು ನಗೆಗಡಲಲ್ಲಿ ಮುಳುಗುತ್ತಾರೆ. ಕೊನೆಯಲ್ಲಿ ಯುವಕ ಕುಣಿಯನ್ನು ಹಾರುತ್ತಾನೆ. ನೆರೆದ ಮಂದಿ ಸ್ತಬ್ಧರಾಗುತ್ತಾರೆ. ಸೈನಿಕರು ಬಂದು ಯುವಕನನ್ನು ಹಿಡಿದುಕೊಂಡು ಅವನ ವಿಗ್ ಮತ್ತು ಶಲ್ಲೆ ತೆಗೆದು ರಾಜನ ಮುಂದೆ ತಂದು ನಿಲ್ಲಿಸುತ್ತಾರೆ.)
ರಾಜ: ಯಾರು ನೀನು?
ಯುವ: ನಾನು ಉಜ್ಜೆ ನಿಯ ರಾಜಕುಮಾರ.
ರಾಜ: ಉಜ್ಜೆ ನಿಯ ಅರಸ. ವಿಕ್ರಮಸಿಂಹನ ಮಗ!
ರಾಜ: ಹೌದು ಮಹಾಪ್ರಭು.
ರಾಜ: ಅಂದರೆ ನಮ್ಮ ಶತ್ರುವಿನ ಪುತ್ರ!
ಯುವ: ಅದು ನನಗೆ ತಿಳಿಯದು ಮಹಾಪ್ರಭು.
ರಾಜ: ಈ ವೇಷದಲ್ಲಿ ಇಲ್ಲಿ ಬಂದು ಸೇರಿಕೊಂಡಿರುವ ನಿನ್ನ ಉದ್ದೇಶ?
ಯುವ: ಮಹಾರಾಜರು ಕೊಟ್ಟ ಮಾತಿನಂತೆ ಅರ್ಧರಾಜ್ಯ ಮತ್ತು ಮಗಳನ್ನು ಕೊಡಬೇಕು. ಅನಂತರ ಹೇಳುತ್ತೇನೆ.
ರಾಜ: ಕೊಡುತ್ತೇನೆ. ಆದರೆ ಅದಕ್ಕೆ ಮೊದಲು ನೀನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ಆಗಬೇಕು. ಅದಕ್ಕೆ ಸಿದ್ಧನಾಗು.
ಯುವ: ಸರಿ ಮಹಾಪ್ರಭು.
ರಾಜ: (ಸೈನಿಕರೊಡನೆ) ಕೊಂಡುಹೋಗಿ ಇವನ ತಲೆ ಕಡಿಯಿರಿ. (ರಾಜಕುಮಾರನ ಕಡೆಗೆ ತಿರುಗಿ) ಅನಂತರ ಇಲ್ಲಿಗೆ ಬಂದು ಅರ್ಧ ರಾಜ್ಯ ಮತ್ತು ರಾಜಕುಮಾರಿಯನ್ನು ಕರೆದುಕೊಂಡು ಹೋಗು.
(ಹಾಹಾಕಾರ. ತಟ್ಟನೆ ರಾಜಕುಮಾರಿ ಓಡಿ ಬಂದು ತಂದೆಯ ಕಾಲಿಗೆ ಬಿದ್ದು)
ರಾಕು: ಅವನ ತಲೆ ಕಡಿಯುವ ಮೊದಲು ನನ್ನ ತಲೆ ಕಡಿಯಿರಿ.
ರಾಜ: ಯಾಕೆ?
ರಾಕು: ಈ ಶಿಕ್ಷೆಯಲ್ಲಿ ನನಗೂ ಪಾಲು ಇದೆ. ಅವನು ನನಗೋಸ್ಕರ ಈ ತಪ್ಪು ಮಾಡಿದ್ದಾನೆ.
ರಾಜ: ಯಾಕೆ?
ರಾಕು: ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ.
ರಾಜ: (ಚಿಂತಿಸಿ, ಪ್ರಧಾನಿಯೊಡನೆ) ಈ ಸಮಸ್ಯೆಗೆ ಒಂದು ಪರಿಹಾರ ಸೂಚಿಸಿ ಪ್ರಧಾನಿಯವರೆ.
ಪ್ರಧಾ: ಮಹಾಪ್ರಭುಗಳು ಒಪ್ಪುವುದಾದರೆ ಪರಿಹಾರ ಬಹಳ ಸುಲಭ.
ರಾಜ: ಏನು?
ಪ್ರಧಾ: ಇಬ್ಬರಿಗೂ ಮದುವೆ ಮಾಡಿಬಿಡೋಣ. ಒಳ್ಳೆಯ ಜೋಡಿ.
ರಾಜ: ಇದು ಸರಿ ಎಂದು ನಿಮ್ಮ ಅಭಿಪ್ರಾಯವೆ?
ಪ್ರಧಾ: ಹೌದು ಮಹಾಪ್ರಭು. ಹೌದು ಮಹಾಪ್ರಭು. ಎರಡು ದೃಷ್ಟಿಯಲ್ಲಿ.
ರಾಜ: ಹೇಗೆ?
ಪ್ರಧಾ: ಒಂದು: ರಾಜಕುಮಾರಿಗೆ ತನಗಾಗಿ ಪ್ರಾಣವನ್ನೇ ಪಣವಿಟ್ಟ ರಾಜಕುಮಾರ ಸಿಗುತ್ತಾನೆ. ಎರಡು: ಶತ್ರುವಾಗಿರುವ ವಿಕ್ರಮಸಿಂಹ ಮಹಾಪ್ರಭುಗಳ ಬೀಗನಾಗುತ್ತಾನೆ.
ರಾಜ: (ಯೊಚಿಸಿ) ನಿಜ. ಕೂಡಲೇ ವಿಕ್ರಮಸಿಂಹನಿಗೆ ಓಲೆ ಕಳಿಸಿ. (ಮತ್ಸ ಸಚಿವನ ಕಡೆಗೆ ತಿರುಗಿ) ಮತ್ಸ ಸಚಿವರೆ, ನಿಮ್ಮ ಪುತ್ರನಿಂದ ದೊಡ್ಡ ಸಮಸ್ಯೆಯೊಂದು ಪರಿಹಾರವಾಗಿದೆ. ಅವನಿಗೆ ಒಂದು ಉಡುಗೊರೆಯನ್ನು ಕೊಡಬೇಕು. ಅವನನ್ನು ಕರೆಯಿರಿ. (ಮತ್ಸ ಸಚಿವ ಮಗನನ್ನು ಕರೆದುಕೊಂಡು ಬರುತ್ತಾನೆ. ಮಗ ಮಹಾರಾಜನಿಗೆ ತಲೆಬಾಗುತ್ತಾನೆ) ನಿನ್ನಿಂದ ದೊಡ್ಡ ಸಮಸ್ಯೆಯೊಂದು ಬಗೆ ಹರಿದ ಹಾಗಾಗಿದೆ. ನಿನಗೆ ಬೇಕಾದ ಉಡುಗೊರೆಯನ್ನು ಕೇಳು.
ಮಗ: ಮಹಾಪ್ರಭುಗಳು ಕೊಟ್ಟ ಸಮಸ್ಯೆಗೆ ಉತ್ತರ ಕಂಡುಹಿಡಿದವನು ನಾನಲ್ಲ.
ರಾಜ: (ಆಶ್ಚರ್ಯದಿಂದ) ಮತ್ಯಾರು?
ಮಗ: (ದೂರದಲ್ಲಿ ತನ್ನ ತಂದೆ ತಾಯಿಯರ ಜೊತೆ ನಿಂತಿರುವ ರೈತನ ಮಗಳನ್ನು ತೋರಿಸಿ) ಆ ಹುಡುಗಿ ಮೀನು ನಕ್ಕದ್ದರ ಅರ್ಥವನ್ನು ನನಗೆ ಹೇಳಿದವಳು.
ರಾಜ: ಹೌದೆ? ಕರೆದುಕೊಂಡು ಬಾ ಅವಳನ್ನು.
(ಮಗ ಕರೆದುಕೊಂಡು ಬರುತ್ತಾನೆ)
ರಾಜ: ಮೀನು ನಕ್ಕದ್ದು ಯಾಕೆ ಎಂದು ಹೇಳಿದ್ದು ನೀನೇ ಏನು?
ಮಗಳು: ಹೌದು ಮಹಾಪ್ರಭು.
ರಾಜ: ಬಹಳ ಸಂತೋಷ. ನೀನು ಬೇಕಾದ್ದು ಕೇಳು.
ಮಗಳು: ನನಗೇನೂ ತಿಳಿಯುವುದಿಲ್ಲ.
ಮಗ: ಅವಳು ತಿಳಿದಿದ್ದೂ ಹೇಳುತ್ತಿಲ್ಲ. ಅವಳ ಪರವಾಗಿ ನಾನು ಕೇಳಬಹುದೆ ಮಹಾಪ್ರಭು?
ರಾಜ: (ನಸುನಕ್ಕು) ಕೇಳು.
ಮಗ: ಮಹಾಪ್ರಭುಗಳು ನಮಗಿಬ್ಬರಿಗೂ ಮದುವೆ ಮಾಡಿಸಬೇಕು.
ರಾಜ: (ಸಂತೋಷದಿಂದ) ಬಹಳ ಸಂತೋಷ. ರಾಜಕುಮಾರಿಯ ಮದುವೆಯ ಜೊತೆಯಲ್ಲಿಯೆ ನಿಮ್ಮ ಮದುವೆಯೂ ನಡೆಯುವುದು. ಆಗಬಹುದಲ್ಲವೆ ಪ್ರಧಾನಿಯವರೆ?
ಪ್ರಧಾ: ಅಪ್ಪಣೆ ಮಹಾಪ್ರಭು.
ರಾಜ: ಘೋಷಣೆ ಮಾಡಿ.
ಪ್ರಧಾ: ಅಪ್ಪಣೆ ಮಹಾಪ್ರಭು.
ಫೇಡ್ ಔಟ್
Leave A Comment