ಪಾತ್ರಗಳು:
ನಾಲ್ವರು ಹುಡುಗಿಯರು, ಹುಡುಗಿಯರ ತಂದೆಯಂದಿರು
ರಾಜ, ಮಂತ್ರಿ, ಇತರ ಮಂತ್ರಿಗಳು, ಸೇವಕರು

ದೃಶ್ಯ ಒಂದು: ರಸ್ತೆ. ರಸ್ತೆಯ ಬದಿಯಲ್ಲಿ ಒಂದು ಮನೆ

(ಬಡ ಪ್ರಯಾಣಿಕರ ವೇಷದಲ್ಲಿರುವ ಅರಸ ಮತ್ತು ಮಂತ್ರಿ. ಮನೆಯಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿರುವ ನಾಲ್ಕು ಮಂದಿ ಸುಮಾರು ಹದಿನಾರು ವರ್ಷ ಪ್ರಾಯದ ಹುಡುಗಿಯರು. ರಾಜ ಮತ್ತು ಮಂತ್ರಿ ಮಾತಾಡುವಾಗ ಅವರ ಮಾತು ಕೇಳಿಸುವುದಿಲ್ಲ. ರಾಜ ಮತ್ತು ಮಂತ್ರಿಯ ಸಂಭಾಷಣೆ ನಿಂತಾಗ ಅವರ ಸಂಭಾಷಣೆ ಕೇಳಿಸುತ್ತದೆ.)

ರಾಜ: ಈ ಹುಡುಗಿಯರು ಎಷ್ಟು ಆನಂದವಾಗಿದ್ದಾರೆ ನೋಡು. ಅವರ ಅಪ್ಪಂದಿರು ತುಂಬಾ ಧನಿಕರಾಗಿರಬಹುದು, ಅಲ್ವಾ?

ಮಂ: ಹಾಗೆ ಹೇಳಲಿಕ್ಕಾಗುವುದಿಲ್ಲ ಮಹಾಪ್ರಭು. ಈ ಪ್ರಾಯದ ಹುಡುಗಿಯರು ಆನಂದವಾಗಿಯೆ ಇರುತ್ತಾರೆ.

ರಾಜ: ಮಾತಿನಲ್ಲಿ ಪ್ರಪಂಚವನ್ನೇ ಮರೆತಿದ್ದಾರೆ!

ಮಂ: ನಿಜ ಮಹಾಪ್ರಭು. ಈ ಪ್ರಾಯದಲ್ಲಿ ಹರಟೆಗಿಂತ ಸವಿಯಾದ್ದು ಬೇರೊಂದಿಲ್ಲ.

ರಾಜ: ಇವತ್ತಿನ ನಮ್ಮ ಸಂಚಾರದಲ್ಲಿ ದು:ಖಕರವಾದ್ದು ಏನೂ ಕಾಣಿಸಲಿಲ್ಲ . ಪ್ರಜೆಗಳು ನೆಮ್ಮದಿಯಿಂದಿದ್ದಾರೆ ಎಂದು ಅನಿಸುತ್ತದೆ, ಅಲ್ವ?

ಮಂ: ನಿಜ ಮಹಾಪ್ರಭು.

ರಾಜ: ಈ ಹುಡುಗಿಯರು ಮಾತಾಡುತ್ತಿರುವ ವಿಷಯ ಏನಾಗಿರಬಹುದು ಎಂದು ನನಗೆ ಕುತೂಹಲವಾಗಿದೆ. ಸ್ವಲ್ಪ ಮರೆಯಲ್ಲಿ ನಿಂತು ಕೇಳೋಣವಾ?

ಮಂ: ಆಗಲಿ ಮಹಾಪ್ರಭು. ಆ ಗೋಡೆಯ ಮರೆಯಲ್ಲಿ ನಿಲ್ಲೋಣ.

(ರಾಜ ಮತ್ತು ಮಂತ್ರಿ ಗೋಡೆಯ ಹಿಂದೆ ಕಿಟಕಿಗೆ ಕಿವಿ ಹಚ್ಚಿ ನಿಲ್ಲುತ್ತಾರೆ) ಹುಡುಗಿಯರ ಮಾತು ಸ್ಪಷ್ಟವಾಗುತ್ತದೆ)

ಹು೧: ಮದುವೆಯ ವಿಷಯ ಅಲ್ದೆ  ನಿಮ್ಗೆ ಮಾತಾಡ್ಲಿಕ್ಕೆ ಬೇರೆ ವಿಷಯ ಇಲ್ವ?

ಹು೨: ಮದುವೆಯ ವರೆಗೆ ಮದುವೆಯ ವಿಷಯ. ಮದುವೆ ಆದ ಮೇಲೆ ಬೇರೆ ವಿಷಯ ಹೇಗೂ ಉಂಟಲ್ಲ? (ನಗು)

ಹು೩:  ಏನು ಬೇರೆ ವಿಷಯ?

ಹು೪: ಮಕ್ಕಳು ಮರಿ ಸಂಸಾರ…

ಹು೧: ಮತ್ತೆ ಪುನ: ಉಂಟಲ್ಲ ಅವರ ಮದುವೆಯ ವಿಷಯ.

ಹು೨: ನಮ್ನಮ್ಮ  ಮದುವೆಯ ವಿಷಯದಷ್ಟು ಸ್ವಾರಸ್ಯ ಅದ್ರಲ್ಲಿ ಏನಿರುತ್ತ್ತೆ?

ಹು೧: ಅಂತೂ ಈ ಮದುವೆಯ ಟಾಪಿಕಿಗೆ ಕೊನೆ ಅಂತ ಇಲ್ಲ! ನಮ್ಮ ಮದುವೆ, ನಮ್ಮ ಮಕ್ಕಳ ಮದುವೆ, ನಮ್ಮ ಮೊಮ್ಮಕ್ಕಳ ಮದುವೆ.

ಹು೩: ನಿಜ.

ಹು೧: ಇವತ್ತು ಅದು ಬೇಡ. ಬೇರೆ ವಿಚಾರ ಮಾತಾಡೋಣ. ಆಗ್ದಾ?

ಹು೪: ನಿಜ. ದಿನಾ ಮದುವೆಯ ಕುರಿತೇ ಮಾತಾಡಿ ಬೋರಾಗಿ ಹೋಯ್ತು.

ಹು೩: ಬೇರೆ ಏನು ವಿಚಾರ ಮಾತಾಡೋಣ? (ಯೊಚನೆಯಲ್ಲಿ ಮುಳುಗುತ್ತಾಳೆ)

ಹು೧: ಉದಾಹರಣೆಗೆ, ನಾನು ಒಂದು ಪ್ರಶ್ನೆ ಕೇಳ್ತೇನೆ. ನೀವು ಅದಕ್ಕೆ ಉತ್ರ ಹೇಳಿ.

ಹು೨: ಹೂಂ. ಕೇಳು.

ಹು೧:(ಚಿಂತಿಸಿ) ಪ್ರಪಂಚದಲ್ಲಿ ಅತ್ಯಂತ ಸವಿಯಾದ ವಸ್ತು ಯಾವುದು?

ಹು೩: ಮೊದಲು ನಿನ್ನ ಉತ್ತರ ಹೇಳು.

ಹು೧: ನನ್ನ ಪ್ರಕಾರ ಪ್ರಪಂಚದಲ್ಲಿ  ಅತ್ಯಂತ ಸವಿಯಾದ ವಸ್ತು ಮಾಂಸ.

ಹು೨:ನನ್ನ ಪ್ರಕಾರ ಮದ್ಯ

ಹು೩: ನನ್ನ ಪ್ರಕಾರ ಪ್ರೇಮ.

ಹು೪: ನನ್ನ ಪ್ರಕಾರ ಪ್ರಪಂಚದಲ್ಲಿ  ಅತ್ಯಂತ ಸವಿಯಾದ ವಸ್ತು  ಸುಳ್ಳು.

(ಅಷ್ಟರಲ್ಲಿ ಮಂತ್ರಿಯ ಕೈ ಅಚಾತುರ್ಯದಿಂದ ಕಿಟಕಿಗೆ ತಾಗಿ ಸದ್ದಾಗುತ್ತದೆ)

ಹು೧: ಯಾರು?

(ಹುಡುಗಿಯರು ಯಾರು ಯಾರು ಎನ್ನುತ್ತಾ ಎದ್ದು ಓಡಿಬರುತ್ತಾರೆ. ರಾಜ ಮತ್ತು ಮಂತ್ರಿ ಓಡಿಹೋಗುತ್ತಾರೆ)

ಹು೧: ಯಾರೋ ಕುಡುಕರು ಅಂತ ತೋರುತ್ತೆ.

ಹು೨: ಇತ್ತೀಚೆಗ ಕುಡುಕರ ಸಂಖ್ಯೆ ಜಾಸ್ತಿಯಾಗಿದೆ.

ಹು೧: ಕತ್ತಲಾಯಿತು. ಬನ್ನಿ . ಒಳಗಡೆ ಕುಳಿತುಕೊಳ್ಳೋಣ.

(ರಾಜ ಮತ್ತು ಮಂತ್ರಿ ರಸ್ತೆಯ ಮೇಲೆ ಕಾಣಿಸಿಕೊಳ್ಳುತ್ತಾರೆ)

ರಾಜ: ಹುಡುಗಿಯರ ಮಾತು ವಿಚಿತ್ರವಾಗಿದೆಯಲ್ಲ?

ಮಂತ್ರಿ: ಹೌದು ಮಹಾಪ್ರಭು.

ರಾಜ: ಅವರ ಅಭಿಪ್ರಾಯಕ್ಕೆ ಕಾರಣವೇನು ಎಂದು ತಿಳಿಯುವ ಕುತೂಹಲವಾಗಿದೆ.

ಮಂತ್ರಿ: ನಾಳೆಯೆ  ಸೈನಿಕರನ್ನು ಕಳಿಸಿ ಹುಡುಗಿಯರನ್ನು ಅರಮನೆಗೆ ಕರೆಸಿ ವಿಚಾರಿಸೋಣ ಮಹಾಪ್ರಭು.

ರಾಜ: ಹುಡುಗಿಯರನ್ನೇ ನೇರವಾಗಿ ಕರೆಸುವುದು ಚೆನ್ನಾಗಿರುವುದಿಲ್ಲ. ಅವರ ಅಪ್ಪಂದಿರನ್ನು ಕರೆಸಿ, ಅವರೊಡನೆ ಹೇಳಿ ಅವರ ಮೂಲಕವೇ ಕರೆಸುವುದು ಒಳ್ಳೆಯದು.

ಮಂತ್ರಿ: ಸರಿ ಹಾಗೇ ಮಾಡೋಣ.

ಫೇಡ್ ಔಟ್

ದೃಶ್ಯ ಎರಡು: ಅರಮನೆ

(ರಾಜ ಮತ್ತು ಮಂತ್ರಿ ಗಂಭಿರವಾದ ಯೊಚನೆಯಲ್ಲಿ . ಸೈನಿಕನ ಪ್ರವೇಶ)

ಸೈನಿಕ: ಅಪ್ಪಂದಿರು ಬಂದಿದ್ದಾರೆ ಮಹಾಪ್ರಭು. ಒಬ್ಬೊಬ್ಬರನ್ನೇ ಕರೆದುತರಲೇ, ಎಲ್ಲರನ್ನೂ ಒಟ್ಟಿಗೇ ಕರೆದು ತರಲೇ?

ರಾಜ: ಎಲ್ಲರನ್ನೂ ಒಟ್ಟಿಗೇ ಕರೆದುಕೊಂಡು ಬಾ.

(ನಾಲ್ಕು ಮಂದಿ  (ಅರ್ಚಕ, ಮಲ್ವಿ, ಪಾದ್ರಿ, ಕವಿ) ಮಧ್ಯಮ ವಯಸ್ಸಿನ ಗಂಡಸರ ಪ್ರವೇಶ.  ರಾಜನಿಗೆ ವಂದಿಸಿ ನಿಲ್ಲುತ್ತಾರೆ)

ಮಂತ್ರಿ: ಮಹಾರಾಜರು ನಿಮ್ಮ ಮಕ್ಕಳನ್ನು ಕಾಣಲು ಅಪೇಕ್ಷಿಸುತ್ತಾರೆ.

೧ನೆ: ನನಗೆ ಒಂಬತ್ತು  ಮಕ್ಕಳಿದ್ದಾರೆ. ಯಾರನ್ನು ಎಂದು ತಿಳಿಯಲಿಲ್ಲ ಮಹಾಪ್ರಭು.

ಮಂತ್ರಿ: ನಿಮಗೆ ನಾಲ್ವರಿಗೂ ಹದಿನಾರು-ಹದಿನೇಳು ವರ್ಷ ಪ್ರಾಯದ ಹೆಣ್ಣುಮಕ್ಕಳಿದ್ದಾರೆ. ಹೌದಲ್ವಾ?

ಎಲ್ಲರೂ: ಹೌದು.

ಮಂತ್ರಿ: ಮಹಾರಾಜರು ಅವರನ್ನು ಕಾಣಲು ಇಚ್ಛಿಸುತ್ತಾರೆ.

(ನಾಲ್ವರೂ ಭಿತರಾಗಿದ್ದಾರೆ)

ಮಂತ್ರಿ: ಭಯಪಡಬೇಕಾಗಿಲ್ಲ. ನಿಮ್ಮ ಮಕ್ಕಳಿಗೆ ಏನೂ ತೊಂದರೆಯಾಗುವುದಿಲ್ಲ. ಮಹಾರಾಜರು ಅವರೊಡನೆ ಮಾತಾಡಲು ಅಪೇಕ್ಷಿಸುತ್ತಾರೆ.

ರಾಜ: ಅವರ ಬಗ್ಗೆ ನಿಮಗೆ ಚಿಂತೆ ಬೇಡ. ನಾನು ಅವರೊಡನೆ ಕೆಲವು ಪ್ರಶ್ನ್ನೆಗಳನ್ನು ಕೇಳುವವನಿದ್ದೇನೆ.  ನೀವು ಅವರನ್ನು ಗುಟ್ಟಾಗಿ ಕರೆದುಕೊಂಡು ಬರಬೇಕು. ಪ್ರಶ್ನೋತ್ತರ ಕಾರ್ಯಕ್ರಮ ಹತ್ತು-ಹದಿನೈದು ನಿಮಿಷಗಳ ಕಾಲ ನಡೆಯುವುದು. ನೀವು ಅರಮನೆಯಲ್ಲಿಯೆ ಒಂದು ಕೋಣೆಯಲ್ಲಿ ಕುಳಿತು ಈ ಕಾರ್ಯಕ್ರಮವನ್ನು ಕ್ಲೋಸ್ಡ್ ಸರ್ಕಿಟ್ ಟೀವಿಯಲ್ಲಿ ವೀಕ್ಷಿಸಬಹುದು. ಈ ವಿಶೇಷವಾದ ಸಂದರ್ಶನದಲ್ಲಿ ಭಾಗವಹಿಸಿದ್ದಕ್ಕೆ ನಿಮ್ಮ ಹುಡುಗಿಯರಿಗೆ ಸೂಕ್ತವಾದ ಬಹುಮಾನವನ್ನು ನೀಡಲಾಗುವುದು.

ಮಂತ್ರಿ: ನಾಳೆ ರಾತ್ರಿ ಹತ್ತು ಗಂಟೆಗೆ ಈ ಕಾರ್ಯಕ್ರಮವನ್ನು ದೇಶಾದ್ಯಂತ ಟೀವಿಯಲ್ಲಿ ಪ್ರಸಾರ ಮಾಡಲಾಗುವುದು.

(ನಾಲ್ವರೂ ಹರ್ಷಚಿತ್ತರಾಗುತ್ತಾರೆ)

ಮಂತ್ರಿ: ಸರಿ. ನೀವಿನ್ನು ಹೋಗಬಹುದು. ನಾಳೆ ಬೆಳಿಗ್ಗೆ ಎಂಟು ಗಂಟೆಗೆ ನೀವೆಲ್ಲರೂ ಇಲ್ಲಿರಬೇಕು.

ನಾಲ್ವರೂ: ಅಪ್ಪಣೆ ಮಹಾಪ್ರಭು. (ನಿರ್ಗಮನ)

ಫೇಡ್ ಔಟ್

ದೃಶ್ಯ ಮೂರು: ಅರಮನೆ

(ರಾಜ ರಾಣಿ  ಮತ್ತು ಮಂತ್ರಿ. ೧ನೆಯಹುಡುಗಿಯನ್ನು ಸೇವಕಿ ಕರೆದುಕೊಂಡು ಬರುತ್ತಾಳೆ. ಹುಡುಗಿ ಬಂದು ವಂದಿಸಿ ತಲೆಬಾಗಿ ನಿಲ್ಲುತ್ತಾಳೆ. (ಕಾರ್ಯಕ್ರಮವು ಟೀವಿಯಲ್ಲಿ ಪ್ರಸಾರವಾಗುವುದು ಎಂಬ ವಿಚಾರ ಎಲ್ಲರಿಗೂ ತಿಳಿದಿರುವುದರಿಂದ ಎಲ್ಲರೂ ಆಡಂಮರದ ಉಡುಪು ಧರಿಸಿರುತ್ತಾರೆ) ಹುಡುಗಿಯ ಮುಖದ ಮೇಲೆ ಆತಂಕದ ಛಾಯೆ.ರಾಜ, ರಾಣಿ ಮತ್ತು ಮಂತ್ರಿಯಿಂದ ತುಸುದೂರದಲ್ಲಿ  ಒಂದು ಆಸನವಿದೆ. ಅದರಲ್ಲಿ  ಕುಳಿತುಕೊಳ್ಳಲು ರಾಜ ಸೂಚಿಸುತ್ತಾನೆ. ಹುಡುಗಿ ಸಂಕೋಚದಿಂದ ಕುಳಿತುಕೊಳ್ಳುತ್ತಾಳೆ) ಎರಡು ಟೀವೀ ಕ್ಯಾಮರಾಗಳು ಚಿತ್ರೀಕರಣ ನಡೆಸುತ್ತವೆ)

ರಾಜ: ಏನಮಾ ನಿನ್ನ ಹೆಸರು?

ಹು೧: ನನ್ನ ಹೆಸರು ಸರಿತ

ರಾಜ: ಒಳ್ಳೆಯ ಹೆಸರು. ನೀನು ಭಯಪಡಬೇಕಾಗಿಲ್ಲ. ನಾವು ನಿನ್ನ ಒಳ್ಳೆಯದನ್ನೇ ಬಯಸುತ್ತೇವೆ.

ಮಂತ್ರಿ: ಮೊನ್ನೆ ನೀನು ಮತ್ತು ನಿನ್ನ ಮೂವರು ಗೆಳತಿಯರು ಮಾತಾಡುತ್ತಿದ್ದುದನ್ನು ನಾವು ಕಂಡೆವು. ಆಗ ನೀನು ಈ ಪ್ರಪಂಚದಲ್ಲಿ ಅತ್ಯಂತ ಸವಿಯಾದುದು ಮಾಂಸ ಎಂದು ಹೇಳಿದೆ ಹೌದೆ?

ಹು೧: ಹೌದು ಮಹಾಪ್ರಭು.

ರಾಜ:ನಿನ್ನ ತಂದೆಯ ಹೆಸರು ಏನು?

ಹು೧: ನನ್ನ ತಂದೆಯ ಹೆಸರು ಮಹಾಬಲೇಶ್ವರ ಭಟ್ಟ.

ರಾಜ: ನಿನ್ನ ತಂದೆ ಏನು ಕೆಲಸ ಮಾಡ್ತುತಾರೆ?

ಹು೧: ನನ್ನ ತಂದೆ ದೇವಾಲಯದ ಅರ್ಚಕ.

ರಾಜ: ಏನು ದೇವಾಲಯದ ಅರ್ಚಕರೆ? ನಿನಗೆ ಮಾಂಸ ಭಕ್ಷಿಸಿ ಗೊತ್ತಿದೆಯೆ?

ಹು೧: ಇಲ್ಲ ಮಹಾಪ್ರಭು.

ರಾಜ: ಹಾಗಿದ್ದರೆ, ಮಾಂಸ ಅತ್ಯಂತ ಸವಿಯಾದ ವಸ್ತು ಎಂದು ಹೇಗೆ ಹೇಳಿದೆ?

ಹು೧: ಮಹಾಪ್ರಭು. ನಮ್ಮ ಮನೆಯ ಹಿಂದುಗಡೆ ಒಂದು ಕಟುಕನ ಅಂಗಡಿಯಿದೆ.  ಅವನ ಅಂಗಡಿಯಿಂದ ಮಾಂಸವನ್ನು ಕೊಂಡುಕೊಳ್ಳಲು ದಿನವಿಡೀ ಜನರು ಬರುತ್ತಾ ಇರುತ್ತಾರೆ. ಮಾಂಸದ ಮೇಲೆ ಮತ್ತು ಮಾಂಸದಿಂದ ಬಿದ್ದ  ರಕ್ತದ ಹುಂಡುಗಳ ಮೇಲೆ ನೊಣಗಳ ಹಿಂಡು ಎರಗುತ್ತದೆ. ಕೆಳಬಿದ್ದ  ಮಾಂಸ ಮತ್ತು ಎಲುಬಿನ ಚೂರುಗಳನ್ನು ಹೆಕ್ಕಲು ಬೆಕ್ಕುಗಳು, ನಾಯಿಗಳು, ಕಾಗೆಗಳು ನುಗ್ಗುತ್ತವೆ. ಎತ್ತರದಲ್ಲಿ ಹದ್ದುಗಳು ಕೂಡ ಹೊಂಚುಹಾಕುತ್ತಿರುತ್ತವೆ. ಜನರು ಮಾಂಸವನ್ನು ಭಕ್ಷಿಸಿದ ಮೇಲೆ ಬಿಸಾಡಿದ ಎಲುಬುಗಳನ್ನು ಸಹ ನಾಯಿ, ಬೆಕ್ಕು, ಕಾಗೆ, ಹದ್ದುಗಳು ಎತ್ತಿಕೊಂಡು ಹೋಗುತ್ತವೆ. ಅದನ್ನು ನೋಡುವಾಗ ಮಾಂಸದಷ್ಟು  ಸವಿಯಾದ ವಸ್ತು ಬೇರೆ ಇಲ್ಲ ಎಂದು ನನಗೆ ಅನಿಸಿತು.

(ಹುಡುಗಿಯ ಉತ್ತರದಿಂದ ಎಲ್ಲರೂ ಸಂಪ್ರೀತರಾಗಿ ತಲೆದೂಗುತ್ತಾರೆ)

ರಾಜ: ನಿನ್ನ ಉತ್ತರವು ನಮಗೆಲ್ಲರಿಗೂ ಒಪ್ಪಿಗೆಯಾಗಿದೆ.

ಮಂತ್ರಿ: ಮಹಾರಾಜರ ಪರವಾಗಿ ಉಡುಗೊರೆಯನ್ನು ನಿನಗೆ ನೀಡಲಾಗುತ್ತದೆ.

(ಒಬ್ಬಳು ಚೆಲುವೆ ಹರಿವಾಣದಲ್ಲಿ ಉಡುಗೊರೆ ತಂದು ರಾಜನ ಬಳಿ ನಿಲ್ಲುತ್ತಾಳೆ. ರಾಜ ಅದನ್ನು  ಸರಿತಳಿಗೆ ನೀಡುತ್ತಾನೆ. ಸರಿತ ರಾಜನಿಗೆ ತಲೆಬಾಗಿ ವಂದಿಸಿ ನಿರ್ಗಮಿಸುತ್ತಾಳೆ)

ಮಂತ್ರಿ: (ಸೇವಕನೊಡನೆ) ಎರಡನೆಯ ಹುಡುಗಿ ಬರಲಿ.

*

(ಹುಡುಗಿ ಬಂದು ವಂದಿಸಿ ತಲೆಬಾಗಿ ನಿಲ್ಲುತ್ತಾಳೆ. ಮುಖದ ಮೇಲೆ ಆತಂಕದ ಛಾಯೆ.ರಾಜ, ರಾಣಿ ಮತ್ತು ಮಂತ್ರಿಯಿಂದ ತುಸುದೂರದಲ್ಲಿ  ಒಂದು ಆಸನವಿದೆ. ಅದರಲ್ಲಿ  ಕುಳಿತುಕೊಳ್ಳಲು ರಾಜ ಸೂಚಿಸುತ್ತಾನೆ. ಹುಡುಗಿ ಸಂಕೋಚದಿಂದ ಕುಳಿತುಕೊಳ್ಳುತ್ತಾಳೆ) ಎರಡು ಟೀವೀ ಕ್ಯಾಮರಾಗಳು ಚಿತ್ರೀಕರಣ ನಡೆಸುತ್ತವೆ)

ರಾಜ: ಏನಮಾ ನಿನ್ನ ಹೆಸರು?

ಹು೨: ನನ್ನ ಹೆಸರು ಬಬಿತ.

ರಾಜ: ಒಳ್ಳೆಯ ಹೆಸರು. ನೀನು ಭಯಪಡಬೇಕಾಗಿಲ್ಲ. ನಾವು ನಿನ್ನ ಒಳ್ಳೆಯದನ್ನೇ ಬಯಸುತ್ತೇವೆ.

ಮಂತ್ರಿ:ಮೊನ್ನೆ ನೀನು ಮತ್ತು ನಿನ್ನ ಮೂವರು ಗೆಳತಿಯರು ಮಾತಾಡುತ್ತಿದ್ದುದನ್ನು ನಾವು ಕಂಡೆವು. ಆಗ ನೀನು ಈ ಪ್ರಪಂಚದಲ್ಲಿ ಅತ್ಯಂತ ಸವಿಯಾದುದು ಮದ್ಯ ಎಂದು ಹೇಳಿದೆ ಹೌದೆ?

ಹು೨: ಹೌದು ಮಹಾಪ್ರಭು.

ರಾಜ: ನಿನ್ನ ತಂದೆಯ ಹೆಸರು ಏನು?

ಹು೨: ನನ್ನ ತಂದೆಯ ಹೆಸರು ಹಾಜಿ ಅಬ್ದುಲ್‌ಖಾದರ್.

ರಾಜ: ನಿನ್ನ ತಂದೆ ಏನು ಕೆಲಸ ಮಾಡ್ತುತಾರೆ?

ಹು೨: ನನ್ನ ತಂದೆ ಮಲ್ವಿ ಆಗಿದ್ದಾರೆ.

ರಾಜ: ನಿನಗೆ ಮದ್ಯ ಕುಡಿದು ಗೊತ್ತಿದೆಯೆ?

ಹು೨: ಇಲ್ಲ ಮಹಾಪ್ರಭು.

ರಾಜ: ಹಾಗಿದ್ದರೆ, ಮದ್ಯ ಅತ್ಯಂತ ಸವಿಯಾದ ವಸ್ತು ಎಂದು ಹೇಗೆ ಹೇಳಿದೆ?

ಹು೨: ನಮ್ಮ ಮನೆಯ ಹಿಂದುಗಡೆ ಒಂದು ಮದ್ಯದಂಗಡಿಯಿದೆ. ಮದ್ಯ ಸೇವಿಸಲು ಜನ ಸಾಲುಗಟ್ಟಿ ಬರುತ್ತಿರುತ್ತಾರೆ. ಕೆಲವರು ಕುಡಿದು ಹೊಡೆದಾಡಿಕೊಳ್ಳುತ್ತಾರೆ. ಹಾಗೆ ಹೊಡೆದಾಡಿಕೊಂಡ ಮೇಲೆ ಅವರು ಮತ್ತೆ ಬರುವುದಿಲ್ಲ ಅಂತ ಯಾವಾಗಲೂ ಅಂದುಕೊಳ್ಳುತ್ತೇನೆ. ಆದರೆ ಅವರು ಮತ್ತೆ ಮತ್ತೆ ಬರುತ್ತಾ ಇರುತ್ತಾರೆ. ಕುಡಿಯುತ್ತಾರೆ. ಹೊಡೆದಾಡುತ್ತಾರೆ. ಕೆಲವರು ಕುಡಿದು ರಸ್ತೆಯಲ್ಲಿ ಚರಂಡಿಯಲ್ಲಿ ಬೀಳುತ್ತಾರೆ. ಆದರೆ ಅವರು ಕೂಡ ಮತ್ತೆ ಮತ್ತೆ ಬರುತ್ತಾ ಇರುತ್ತಾರೆ. ಮತ್ತೆ ಚರಂಡಿಯಲ್ಲಿ ಬೀಳುತ್ತಾರೆ. ಮತ್ತೆ ಬರುತ್ತಾರೆ. ಆದ್ದರಿಂದ ಮದ್ಯ ಅತ್ಯಂತ ಸವಿಯಾದ ವಸ್ತು ಎಂದು ನನಗೆ ಅನಿಸಿತು.

(ಹುಡುಗಿಯ ಉತ್ತರದಿಂದ ಎಲ್ಲರೂ ಸಂಪ್ರೀತರಾಗಿ ತಲೆದೂಗುತ್ತಾರೆ)

ರಾಜ: ನಿನ್ನ ಉತ್ತರವು ನಮಗೆಲ್ಲರಿಗೂ ಒಪ್ಪಿಗೆಯಾಗಿದೆ.

ಮಂತ್ರಿ: ಮಹಾರಾಜರ ಪರವಾಗಿ ಉಡುಗೊರೆಯನ್ನು ನಿನಗೆ ನೀಡಲಾಗುತ್ತದೆ.

(ಒಬ್ಬಳು ಚೆಲುವೆ ಹರಿವಾಣದಲ್ಲಿ ಉಡುಗೊರೆ ತಂದು ರಾಜನ ಬಳಿ ನಿಲ್ಲುತ್ತಾಳೆ. ರಾಜ ಅದನ್ನು  ಬಬಿತಳಿಗೆ ನೀಡುತ್ತಾನೆ. ಬಬಿತ ರಾಜನಿಗೆ ತಲೆಬಾಗಿ ವಂದಿಸಿ ನಿರ್ಗಮಿಸುತ್ತಾಳೆ)

ಮಂತ್ರಿ: (ಸೇವಕನೊಡನೆ) ಮೂರನೆಯ ಹುಡುಗಿ ಬರಲಿ.

*

(ಹುಡುಗಿ ಬಂದು ವಂದಿಸಿ ತಲೆಬಾಗಿ ನಿಲ್ಲುತ್ತಾಳೆ. ಮುಖದ ಮೇಲೆ ಆತಂಕದ ಛಾಯೆ.ರಾಜ, ರಾಣಿ ಮತ್ತು ಮಂತ್ರಿಯಿಂದ ತುಸುದೂರದಲ್ಲಿ  ಒಂದು ಆಸನವಿದೆ. ಅದರಲ್ಲಿ  ಕುಳಿತುಕೊಳ್ಳಲು ರಾಜ ಸೂಚಿಸುತ್ತಾನೆ. ಹುಡುಗಿ ಸಂಕೋಚದಿಂದ ಕುಳಿತುಕೊಳ್ಳುತ್ತಾಳೆ) ಎರಡು ಟೀವೀ ಕ್ಯಾಮರಾಗಳು ಚಿತ್ರೀಕರಣ ನಡೆಸುತ್ತವೆ)

ರಾಜ: ಏನಮಾ ನಿನ್ನ ಹೆಸರು?

ಹು೩: ನನ್ನ ಹೆಸರು ಮಮತ.

ರಾಜ: ಒಳ್ಳೆಯ ಹೆಸರು. ನೀನು ಭಯಪಡಬೇಕಾಗಿಲ್ಲ. ನಾವು ನಿನ್ನ ಒಳ್ಳೆಯದನ್ನೇ ಬಯಸುತ್ತೇವೆ.

ಮಂತ್ರಿ:ಮೊನ್ನೆ ನೀನು ಮತ್ತು ನಿನ್ನ ಮೂವರು ಗೆಳತಿಯರು ಮಾತಾಡುತ್ತಿದ್ದುದನ್ನು ನಾವು ಕಂಡೆವು. ಆಗ ನೀನು ಈ ಪ್ರಪಂಚದಲ್ಲಿ ಅತ್ಯಂತ ಸವಿಯಾದುದು ಪ್ರೇಮ ಎಂದು ಹೇಳಿದೆ ಹೌದೆ?

ಹು೩: ಹೌದು ಮಹಾಪ್ರಭು.

ರಾಜ: ನಿನ್ನ ತಂದೆಯ ಹೆಸರು ಏನು?

ಹು೩: ನನ್ನ ತಂದೆಯ ಹೆಸರು ಶ್ರೀ ಶಶಿಕುಮಾರ ಸೂರ್ಯವಂಶಿ.

ರಾಜ:  ಸುಪ್ರಸಿದ್ಧ ಕವಿ ಶಶಿಕುಮಾರ ಸೂರ್ಯವಂಶಿಯ ಮಗಳೇ ನೀನು?

ಹು೩: ಹೌದು ಮಹಾಪ್ರಭು.

ರಾಜ: ನಿನ್ನ ತಂದೆಯ ಕಾವ್ಯವನ್ನು ನಾನು ಓದಿದ್ದೇನೆ. ಅವರು ಬಹಳ ಪ್ರೇಮಕವಿತೆಗಳನ್ನು ಬರೆದಿದ್ದಾರೆ. ನೀನು ನಿನ್ನ ತಂದೆಯ ಕಾವ್ಯದಿಂದ ಪ್ರೇಮದ ಕುರಿತು ತಿಳಿದುಕೊಂಡೆಯ? ಅಥವಾ ಯಾರನ್ನಾದರೂ ಪ್ರೇಮಿಸಿ ತಿಳಿದುಕೊಂಡೆಯ?

ಹು೩:  ಎರಡೂ ಅಲ್ಲ  ಮಹಾಪ್ರಭು.

ರಾಜ: ಹಾಗಿದ್ದರೆ, ಪ್ರೇಮ ಅತ್ಯಂತ ಸವಿಯಾದ ವಸ್ತು ಎಂದು ಹೇಗೆ ತಿಳಿದುಕೊಂಡೆ?

ಹು೩: ನಮ್ಮ ಮನೆಯ ಬಳಿ ಒಂದು ಪ್ರಾರ್ಥನಾ ಮಂದಿರವಿದೆ. ಅಲ್ಲಿ ಕಸ ಗುಡಿಸುವ ಹೆಂಗಸೊಬ್ಬಳಿದ್ದಾಳೆ. ಮರಿಯ ಅಂತ ಅವಳ ಹೆಸರು. ಮರಿಯ ಒಂದಾದ ಮೇಲೊಂದು ನಾಲ್ಕು ಮಕ್ಕಳನ್ನು ಹೆತ್ತಿದ್ದಾಳೆ. ಪ್ರತಿ ಸಲ ಹೆರಿಗೆಯಾಗುವಾಗಲೂ ತನಗಿನ್ನು ಮಗು ಬೇಡ ಎಂದು ಬೊಬ್ಬೆ ಹಾಕುತ್ತಾಳೆ. ಗಂಡನ್ನು ಸಿಕ್ಕಾಬಟ್ಟೆ ಬಯ್ಯುತ್ತಾಳೆ. ನಾಲ್ಕನೆಯ ಮಗು ಆದ ಮೇಲೆ ತನಗಿನ್ನು ಮಗು ಬೇಡ ಎಂದು ಗಂಡನ ಜೊತೆ ಜಗಳಾಡಿ ಅವನನ್ನು ಮನೆಯಿಂದ ಓಡಿಸಿಬಿಟ್ಟಳು. ಆದರೆ ಸ್ವಲ್ಪ ಸಮಯದ ನಂತರ ಅವನನ್ನ ಹುಡುಕಿ ಕರೆದುಕೊಂಡು ಬಂದಳು. ಈಗ ಅವಳು ಪುನ: ಗಭಿಣಿ. ಆದ್ದರಿಂದ ಪ್ರೇಮವೇ ಅತ್ಯಂತ ಸವಿಯಾದ ವಸ್ತು ಎಂದು ನನಗೆ ಅನಿಸಿತು.

(ಹುಡುಗಿಯ ಉತ್ತರದಿಂದ ಎಲ್ಲರೂ ಸಂಪ್ರೀತರಾಗಿ ತಲೆದೂಗುತ್ತಾರೆ)

ರಾಜ: ನಿನ್ನ ಉತ್ತರವು ನಮಗೆಲ್ಲರಿಗೂ ಒಪ್ಪಿಗೆಯಾಗಿದೆ.

ಮಂತ್ರಿ: ಮಹಾರಾಜರ ಪರವಾಗಿ ಉಡುಗೊರೆಯನ್ನು ನಿನಗೆ ನೀಡಲಾಗುತ್ತದೆ.

(ಒಬ್ಬಳು ಚೆಲುವೆ ಹರಿವಾಣದಲ್ಲಿ ಉಡುಗೊರೆ ತಂದು ರಾಜನ ಬಳಿ ನಿಲ್ಲುತ್ತಾಳೆ. ರಾಜ ಅದನ್ನು  ಮಮತಳಿಗೆ ನೀಡುತ್ತಾನೆ. ಮಮತ ರಾಜನಿಗೆ ತಲೆಬಾಗಿ ವಂದಿಸಿ ನಿರ್ಗಮಿಸುತ್ತಾಳೆ)

ಮಂತ್ರಿ: (ಸೇವಕನೊಡನೆ) ನಾಲ್ಕನೆಯ ಹುಡುಗಿ ಬರಲಿ.

*

(ಹುಡುಗಿ ಬಂದು ವಂದಿಸಿ ತಲೆಬಾಗಿ ನಿಲ್ಲುತ್ತಾಳೆ. ಮುಖದ ಮೇಲೆ ಆತಂಕದ ಛಾಯೆ.ರಾಜ, ರಾಣಿ ಮತ್ತು ಮಂತ್ರಿಯಿಂದ ತುಸುದೂರದಲ್ಲಿ  ಒಂದು ಆಸನವಿದೆ. ಅದರಲ್ಲಿ  ಕುಳಿತುಕೊಳ್ಳಲು ರಾಜ ಸೂಚಿಸುತ್ತಾನೆ. ಹುಡುಗಿ ಸಂಕೋಚದಿಂದ ಕುಳಿತುಕೊಳ್ಳುತ್ತಾಳೆ) ಎರಡು ಟೀವೀ ಕ್ಯಾಮರಾಗಳು ಚಿತ್ರೀಕರಣ ನಡೆಸುತ್ತವೆ)

ರಾಜ: ಏನಮಾ ನಿನ್ನ ಹೆಸರು?

ಹು೪: ನನ್ನ ಹೆಸರು ಕವಿತ.

ರಾಜ: ಒಳ್ಳೆಯ ಹೆಸರು. ನೀನು ಭಯಪಡಬೇಕಾಗಿಲ್ಲ. ನಾವು ನಿನ್ನ ಒಳ್ಳೆಯದನ್ನೇ ಬಯಸುತ್ತೇವೆ.

ಮಂತ್ರಿ:ಮೊನ್ನೆ ನೀನು ಮತ್ತು ನಿನ್ನ ಮೂವರು ಗೆಳತಿಯರು ಮಾತಾಡುತ್ತಿದ್ದುದನ್ನು ನಾವು ಕಂಡೆವು. ಆಗ ನೀನು ಈ ಪ್ರಪಂಚದಲ್ಲಿ ಅತ್ಯಂತ ಸವಿಯಾದುದು ಸುಳ್ಳು ಎಂದು ಹೇಳಿದೆ ಹೌದೆ?

ಹು೪: ಹೌದು ಮಹಾಪ್ರಭು.

ರಾಜ: ನಿನ್ನ ತಂದೆಯ ಹೆಸರು ಏನು?

ಹು೪: ನನ್ನ ತಂದೆಯ ಹೆಸರು ಥಾಮಸ್ ಅರವಿಂದ ದೇಸಾಯಿ.

ರಾಜ: ಅವರು ಏನು ಕೆಲಸ ಮಾಡುತ್ತಾರೆ?

ಹು೪: ಅವರು ಪ್ರೀಸ್ಟ್  ಆಗಿದ್ದಾರೆ.

ರಾಜ: ನಿನ್ನ ತಂದೆ ಯಾವತ್ತಾದರೂ ಸುಳ್ಳು ಹೇಳಿದ್ದನ್ನು ನೀನು ಕೇಳಿದ್ದೀಯ?

ಹು೪: ಇಲ್ಲ ಮಹಾಪ್ರಭು. ಅವರು ಸುಳ್ಳು ಹೇಳುವವರಲ್ಲ.

ರಾಜ: ಹಾಗಿದ್ದರೆ, ಸುಳ್ಳು ಅತ್ಯಂತ ಸವಿಯಾದ ವಸ್ತು ಎಂದು ಹೇಗೆ ಹೇಳಿದೆ?

ಹು೪: ನನಗೆ ಗೊತ್ತಿದೆ ಮಹಾಪ್ರಭು. ಪುರಾಣದ ತುಂಬ ದೇವದೇವತೆಯರು ಸುಳ್ಳು ಹೇಳಿದ ಕಥೆಗಳಿವೆ. ಚಕ್ರವರ್ತಿಗಳು ಸುಳ್ಳು ಹೇಳಿರುವ ಬಗ್ಗೆ ನಾನು ಇತಿಹಾಸದಲ್ಲಿ  ಓದಿದ್ದೇನೆ. ಸುಳ್ಳು ಹೇಳದ ಅರಸರೇ ಇಲ್ಲ. ಮಂತ್ರಿಗಳಂತೂ ಪ್ರತಿ ದಿನ ಸುಳ್ಳು ಹೇಳುತ್ತಾರೆ.

(ರಾಜ ಮತ್ತು ಮಂತ್ರಿಯ ಮುಖದಲ್ಲಿ ಮುಗುಳ್ನಗು)

ರಾಜ: ಅಂದರೆ ನಾನು ಕೂಡ ಸುಳ್ಳು ಹೇಳುತ್ತೇನೆ ಎಂದು ನೀನು ಹೇಳ್ತೀಯ?

ಹು೪: ತಾವು ಸುಳ್ಳು ಹೇಳ್ತೀರಿ ಎಂದು ನಾನು ಹೇಳಲಿಲ್ಲ. ಆದರೆ  ಸಂದರ್ಭ ಬಂದರೆ ಮಹಾರಾಜರು ಕೂಡ ಸುಳ್ಳು ಹೇಳ್ತಾರೆ ಅಂತ ಹೇಳಿದೆ.

ರಾಜ: ನಾನು ಮಹಾರಾಜ.

ಹು೪: ಹೌದು ಮಹಾಪ್ರಭು.

ರಾಜ: ಅಂದರೆ ಸಂದರ್ಭ ಬಂದರೆ ನಾನು ಕೂಡ ಸುಳ್ಳು ಹೇಳುವೆ ಎಂದು ನಿನ್ನ ಮಾತಿನ ಅರ್ಥವೆ?

ಹು೪: ಹೌದು ಮಹಾಪ್ರಭು.

ರಾಜ: ಏನು ನಿನ್ನ ಮಾತಿಗೆ ಸಾಕ್ಷಿ?

ಹು೪: ನನಗೆ ಸ್ವಲ್ಪ  ಸಮಯ ಮತ್ತು ಹಣ ಕೊಟ್ಟರೆ ನಾನು ಸಾಕ್ಷಿ ತೋರಿಸುತ್ತೇನೆ. ಮಹಾಪ್ರಭು.

ರಾಜ: ಎಷ್ಟು ಸಮಯ ಮತ್ತು ಹಣ ಬೇಕು ನಿನಗೆ?

ಹು೪: ಆರು ತಿಂಗಳು ಮತ್ತು  ಐದು ಲಕ್ಷ ರೂಪಾಯಿ.

ರಾಜ: ಆಗಲಿ. ಪ್ರಧಾನ ಮಂತ್ರಿಯವರೆ, ಈಕೆಗೆ ಕೂಡಲೇ ಐದು ಲಕ್ಷ ರೂಪಾಯಿ ಕೊಡಿ.

ಹು೪: ಧನ್ಯವಾದಗಳು ಮಹಾಪ್ರಭು.

ರಾಜ: ಸರಿಯಾಗಿ ಆರು ತಿಂಗಳಲ್ಲಿ  ಸಾಕ್ಷಿ ಒದಗಿಸದಿದ್ದರೆ ನಿನ್ನ ತಲೆ ಹೋಗುವುದು.

ಹು೪:  ಆಗಲಿ ಮಹಾಪ್ರಭು.

ಫೇಡ್ ಔಟ್

ದೃಶ್ಯ ನಾಲ್ಕು: ಅರಮನೆ

(ರಾಜ ಮತ್ತು ಮಂತ್ರಿ. ನಾಲ್ಕನೆಯ ಹುಡುಗಿ ಕವಿತ ಬರುತ್ತಾಳೆ. ವಂದಿಸಿ ತಲೆಬಾಗಿ ನಿಲ್ಲುತ್ತಾಳೆ)

ಹು೪: ಮಹಾಪ್ರಭುಗಳು ನೀಡಿದ ಗಡುವು ನಾಳೆಗೆ ಕೊನೆಗೊಳ್ಳುತ್ತದೆ. ನಾಳೆ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಮಹಾಪ್ರಭುಗಳು ದೇವರನ್ನು ನೋಡಲು ನನ್ನ ಮನೆಗೆ ಬರಬೇಕು.

ರಾಜ: ಏನು,  ದೇವರನ್ನು ನೋಡಲು ನಿನ್ನ ಮನೆಗೆ ಬರಬೇಕೆ?

ಹು೪:  ನನ್ನ ಮನೆ ಅಲ್ಲ ಮಹಾಪ್ರಭು. ಮಹಾರಾಜರು ಕೊಟ್ಟ ಹಣದಲ್ಲಿ ಮಹಾರಾಜರಿಗೆ ದೇವರನ್ನು ಕಾಣಿಸಲಿಕ್ಕಾಗಿಯೆ ನಾನು ಒಂದು ಮನೆಯನ್ನು ನಿರ್ಮಿಸಿದ್ದೇನೆ. ಆ ಮನೆಯೊಳಗೆ ಒಂದು ಕೋಣೆಯಲ್ಲಿ  ದೇವಪೀಠವನ್ನು ನಿರ್ಮಿಸಿದ್ದೇನೆ. ದೇವರು ಬಂದು ಅದರಲ್ಲಿ  ಕುಳಿತಿದ್ದಾನೆ. ಮಹಾಪ್ರಭುಗಳು ದೇವರನ್ನು ಕಂಡರೆ, ನನ್ನ  ಮಾತಿಗೆ ಸಾಕ್ಷಿಯು ದೊರೆಯುವುದು.

ರಾಜ: (ಮಂತ್ರಿಯೊಡನೆ) ನಿಮ್ಮ ಅಭಿಪ್ರಾಯವೇನು ಮಂತ್ರಿ?

ಮಂತ್ರಿ: ನಾವು ದೇವರನ್ನು ಕಾಣಲು ಹೋಗುವುದೇ ಸರಿ ಮಹಾಪ್ರಭು.

ರಾಜ: ಇತರ ಮಂತ್ರಿಗಳಿಗೂ ದೇವರನ್ನು ಕಾಣುವ  ಆಸೆ ಇರಬಹುದು.  ಅವರು ಕೂಡ ಬರಲಿ ಅಲ್ವ?

ಹು೪: ಅಗತ್ಯವಾಗಿ ಬರಲಿ ಮಹಾಪ್ರಭು.

ರಾಜ: (ಮಂತ್ರಿಯೊಡನೆ) ನಿನ್ನ ಅಭಿಪ್ರಾಯವೇನು ಮಂತ್ರಿ?

ಮಂತ್ರಿ:  ಇತರ ಮಂತ್ರಿಗಳು ಹೋಗಿ ಬಂದ ಮೇಲೆ ಹೋಗೋಣ ಮಹಾಪ್ರಭು.

ರಾಜ: ಯಾಕೆ ದೇವರ ಬಗ್ಗೆ ಭಯವಿದೆಯೆ?

ಮಂತ್ರಿ: ಹಾಗಲ್ಲ. ಒಂದು ವೇಳೆ  ಅಲ್ಲಿ ದೇವರಿರುವುದು ಸುಳ್ಳು ಎಂದಾದರೆ, ಮಹಾಪ್ರಭುಗಳು ಹೋಗಬೇಕಾದ ಅಗತ್ಯವಿಲ್ಲ.

ರಾಜ: (ಹುಡುಗಿಯೊಡನೆ) ಆಗಬಹುದಲ್ವ?

ಹು೪: ಹಾಗೇ ಆಗಲಿ ಮಹಾಪ್ರಭು. ನಾನು ಮೊದಲೇ ಹೋಗಿ ಮಹಾಪ್ರಭುಗಳು ದೇವರನ್ನು ವೀಕ್ಷಿಸಲು ತಕ್ಕ ಏರ್ಪಾಡು ಮಾಡುತ್ತೇನೆ. ಮಹಾಪ್ರಭುಗಳ ಅಪ್ಪಣೆಯಾಗಬೇಕು.

ರಾಜ: ಸರಿ. ನೀನು ಹೋಗಬಹುದು.

ಫೇಡ್ ಔಟ್

ದೃಶ್ಯ ಐದು: ೪ನೆ ಹುಡುಗಿ ನಿರ್ಮಿಸಿದ ಮನೆ

(ರಂಗವನ್ನು  ಎರಡು ಭಾಗವಾಗಿ ವಿಂಗಡಿಸಿರಬೇಕು. ನಡುವೆ ಗೋಡೆ. ಗೋಡೆಯಲ್ಲಿ ಒಂದು ಚಿಕ್ಕ ಬಾಗಿಲು. ಬಾಗಿಲಿಗೆ ಪರದೆ. ಬಲಗಡೆಯಲ್ಲಿನ ಚಿಕ್ಕ ಕೋಣೆ ಅಲಂಕೃತವಾಗಿದೆ. ದಟ್ಟನೆಯ ಕೆಂಪು ಬಣ್ಣದ ದೀಪ. ಕೋಣೆಯ ನಡುವೆ ಒಂದು ಸಿಂಹಾಸನದಂತಹ ಪೀಠ. ರಾಜ ಮತ್ತು ಮಂತ್ರಿಯ ಪ್ರವೇಶ. ಹು೪ ಅವರನ್ನು ಸ್ವಾಗತಿಸಿ ಎಡಗಡೆಯ ಕೋಣೆಯಲ್ಲಿ ಕುರ್ಚಿಗಳಲ್ಲಿ  ಕುಳ್ಳಿರಿಸುತ್ತಾಳೆ)

ಹು೪: ಮಹಾಪ್ರಭುಗಳಲ್ಲಿ ಒಂದು ಅರಿಕೆ. ದೇವರು ಪಕ್ಕದ ಕೋಣೆಯಲ್ಲಿ ಪೀಠದ ಮೇಲೆ ಕುಳಿತಿದ್ದಾನೆ. ದೇವರ ಸನ್ನಿಧಿಯಲ್ಲಿ ಯಾವುದೇ ಹೊತ್ತಿನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಇರುವಂತಿಲ್ಲ. ಆದುದರಿಂದ ಒಬ್ಬೊಬ್ಬರಾಗಿಯೆ ಒಳಹೋಗಬೇಕು.

ರಾಜ: ಸರಿ. ಮಂತ್ರಿಗಳೆಲ್ಲ  ದೇವರನ್ನು ಕಂಡರೆ?

ಹು೧: ಕಂಡರು ಮಹಾಪ್ರಭು.

ಹು೪: ಎಲ್ಲರೂ ಸತ್ಕುಲಪ್ರಸೂತರಾಗಿದ್ದರು ಮಹಾಪ್ರಭು. ಆದ್ದರಿಂದ ಎಲ್ಲರಿಗೂ ದೇವರು ಕಾಣಿಸಿದ.

ರಾಜ: ಹಾಗಂದರೆ?

ಹು೪: ಮಹಾಪ್ರಭು, ಯಾರು ಪತಿವ್ರತೆಯಾದ ತಾಯಿಯ ಹೊಟ್ಟೆಯಲ್ಲಿ  ಹುಟ್ಟಿರುತ್ತಾರೋ ದೇವರು ಅವರಿಗೆ ಮಾತ್ರ ಕಾಣಿಸುತ್ತಾನೆ.

(ರಾಜ ಯೊಚನೆಯಲ್ಲಿ ಮುಳುಗುತ್ತಾನೆ)

ರಾಜ: (ಮಂತ್ರಿಯೊಡನೆ) ಮಂತ್ರಿ, ನೀನು ಮೊದಲು ಹೋಗಿ ಬಾ. ಅನಂತರ ನಾನು ಹೋಗುತ್ತೇನೆ.

ಮಂತ್ರಿ: ಆಗಲಿ ಮಹಾಪ್ರಭು.

(ಮಂತ್ರಿ ಆತಂಕಪಟ್ಟುಕೊಂಡು ದೇವರ ಕೋಣೆಯನ್ನು ಪ್ರವೇಶಿಸುತ್ತಾನೆ. ಪೀಠವನ್ನು ನೆಟ್ಟ ನೋಟದಿಂದ ನೋಡುತ್ತಾನೆ. ಏನೂ ಕಾಣಿಸದೆ ಸುತ್ತ ಮುತ್ತ ನೋಡುತ್ತಾನೆ. ನಿರಾಶನಾಗಿ, ಗಲಿಬಿಲಿಗೊಂಡು, ಏನು ಹೇಳುವುದು ಎಂದು ಚಿಂತಿಸಿ, ದೇವರನ್ನು ನೋಡಿದೆ ಎಂದು ಹೇಳುವುದು ಎಂದು ನಿರ್ಧರಿಸಿ ಮರಳುತ್ತಾನೆ)

ರಾಜ: ದೇವರನ್ನು ನೋಡಿದೆಯ ಮಂತ್ರಿ?

ಮಂತ್ರಿ: ನೋಡಿದೆ ಮಹಾಪ್ರಭು.

ರಾಜ: ದೇವರು ಏನು ಹೇಳಿದ?

ಮಂತ್ರಿ: (ಗಲಿಬಿಲಿಗೊಂಡು) ದೇವರು ಹೇಳಿದ್ದನ್ನು ಪುನರುಚ್ಚರಿಸಲು ದೇವರ ಅನುಮತಿಯಿಲ್ಲ ಮಹಾಪ್ರಭು. ತಾವದನ್ನು ದೇವರ ಬಾಯಿಂದಲೇ ಕೇಳಬೇಕಾಗುತ್ತದೆ.

ರಾಜ: ಸರಿ. (ಕೋಣೆಯನ್ನು ಪ್ರವೇಶಿಸುತ್ತಾನೆ. ಪೀಠದ ಮೇಲೆ ಏನೂ ಕಾಣಿಸದೆ ಅತ್ತ ಇತ್ತ ಪರಿಶೀಲನ ದೃಷ್ಟಿಯಿಂದ ನೋಡುತ್ತಾನೆ. ನಿರಾಶನಾಗಿ, ಗೊಂದಲಕ್ಕೊಳಗಾಗುತ್ತಾನೆ. ಏನು ಹೇಳುವುದು ಎಂದು ಚಿಂತಿಸಿ, ದೇವರನ್ನು ನೋಡಿದೆ ಎಂದು ಹೇಳುವುದು ಎಂದು ನಿರ್ಧರಿಸಿ ಮರಳುತ್ತಾನೆ)

ಹು೪: (ಆತುರದಿಂದ) ದೇವರು ಕಾಣಿಸಿದನೆ ಮಹಾಪ್ರಭು?

ರಾಜ: ಕಾಣಿಸಿದ.

ಹು೪: ನಿಜವಾಗಿಯೂ ಕಾಣಿಸಿದನೆ?

ರಾಜ: ಹೌದು ನಿಜವಾಗಿಯೂ ಕಾಣಿಸಿದ.

ಹು೪: ಹಾಗಾದರೆ ನನ್ನ ಪ್ರಯತ್ನ ಸಾರ್ಥಕವಾಯ್ತು.

ಮಂತ್ರಿ: ದೇವರು ಏನು ಹೇಳಿದ ಮಹಾಪ್ರಭು?

ರಾಜ: ನಿನ್ನ ಬಳಿ ಹೇಳಿದ್ದನ್ನೇ ನನ್ನ ಬಳಿಯೂ ಹೇಳಿದ. (ರಾಜ ಸಿಟ್ಟಿನಿಂದಿದ್ದಾನೆ. ಮಂತ್ರಿಯೊಡನೆ) ನಡಿ ಹೋಗೋಣ. (ಹುಡುಗಿಯ ಕಡೆಗೆ ತಿರುಗಿ) ನೀನು ಕೂಡಲೇ ಅರಮನೆಗೆ ಬರಬೇಕು.

ಹು೪: ಅಪ್ಪಣೆ ಮಹಾಪ್ರಭು.

(ರಾಜ ಮತ್ತು ಮಂತ್ರಿ ನಿರ್ಗಮನ)

ಫೇಡ್ ಔಟ್

ದೃಶ್ಯ ಆರು: ಅರಮನೆ

(ರಾಜ ಮತ್ತು ಮಂತ್ರಿ ಆಸನಗಳಲ್ಲಿ ಕುಳಿತಿದ್ದಾರೆ. ಒಬ್ಬ ಸೈನಿಕ ಬರುತ್ತಾನೆ)

ಸೈನಿ: ಹುಡುಗಿ ಬಂದಿರುವಳು ಮಹಾಪ್ರಭು.

ರಾಜ: ಕಳಿಸು ಒಳಗೆ.

(ಹು೪ ಪ್ರವೇಶಿಸಿ ವಂದಿಸಿ ನಿಲ್ಲುತ್ತಾಳೆ)

ರಾಜ: ನೀನು ನಮಗೆ ಮೋಸ ಮಾಡಿರುವೆ.

ಹು೪: ನಾನು ಏನು ಮೋಸ ಮಾಡಿದೆ ಮಹಾಪ್ರಭು?

ರಾಜ: ನಮಗೆ ದೇವರು ಕಾಣಿಸಲಿಲ್ಲ.

ಹು೪: ನಿಜ. ದೇವರು ಯಾರಿಗೂ ಕಾಣಿಸಲಿಲ್ಲ. ತಮಗೂ ಕಾಣಿಸಲಿಲ್ಲ  ಮಹಾಪ್ರಭು. ಆದರೂ ಕಾಣಿಸಿದೆ ಎಂದು ನೀವು ಹೇಳಿದಿರಿ. ಸುಳ್ಳೇ ಎಲ್ಲಕ್ಕಿಂತ ಸವಿಯಾದ ವಸ್ತು. ತಾವು ಕೂಡ ಒಂದು ದಿನ ಸುಳ್ಳು ಹೇಳುತ್ತೀರಿ ಎಂದು ನಾನು ಹೇಳಿದೆ. ನಾನು ಆಡಿದ ಮಾತಿಗೆ ಸಾಕ್ಷಿ ಒದಗಿಸಿದ್ದೇನೆ. ಮೋಸ ಮಾಡಿಲ್ಲ ಮಹಾಪ್ರಭು. ದೇವರು ಕಾಣಿಸಲಾರ ಎಂದು ತಮಗೆ ಗೊತ್ತಿಲ್ಲದ ವಿಚಾರವೆ ಮಹಾಪ್ರಭು? ಆದರೂ ತಾವು ಸುಳ್ಳು ಹೇಳಿದಿರಿ! (ರಾಜ ಅವಳ ಮಾತಿಗೆ ತಲೆದೂಗಿ ಹಸನ್ಮುಖಿಯಾಗುತ್ತಾನೆ) ನಾವು ಬಡವರು. ನಾವು  ಯಾವುದೋ ಭಯದಿಂದ  ಆಗೊಮ್ಮೆ ಈಗೊಮ್ಮೆ ಚಿಕ್ಕ ಚಿಕ್ಕ ಸುಳ್ಳುಗಳನ್ನು ಹೇಳುತ್ತೇವೆ. ಆದರೆ ತಾವು ಮಹಾರಾಜರು. ತಮಗೆ ಯಾವ ಭಯ? ತಾವು ಯಾಕೆ ಸುಳ್ಳು ಹೇಳಬೇಕು? ಮಹಾರಾಜರು ಕೂಡ ಸುಳ್ಳು ಹೇಳಬೇಕಾದರೆ ಸುಳ್ಳಿನಲ್ಲಿ ಅದೇನೋ ಆಕರ್ಷಣೆ, ಅದೇನೋ ಸವಿ ಇರಲೇ ಬೇಕು.

(ರಾಜನಿಗೆ ಅವಳು ಸ್ವೀಕರಿಸಿದ ಸವಾಲು ನೆನಪಿಗೆ ಬರುತ್ತದೆ. ಗಟ್ಟಿಯಾಗಿ ನಗುತ್ತಾನೆ. ಎದ್ದು ಬಂದು  ಅಭಿಮಾನದಿಂದ ಅವಳ ಹಸ್ತವನ್ನು ಹಿಡಿದುಕೊಳ್ಳುತ್ತಾನೆ)

ರಾಜ: ನೀನು ಗೆದ್ದಿರುವೆ ಮಗಳೆ. ನಿನಗೆ ಏನು ಉಡುಗೊರೆ ಕೊಡಲಿ?

ಹು೪: ನನಗೆ ಏನೂ ಬೇಡ ಮಹಾಪ್ರಭು.

ರಾಜ: ನಿನಗೆ ಉಡುಗೊರೆ ಕೊಡುವುದಿಲ್ಲ. ನಿನ್ನನ್ನು ಮಂತ್ರಿಯಾಗಿ ನೇಮಿಸಿದ್ದೇನೆ.

ಹು೪: ಏನು ನಾನು ಮಂತ್ರಿಯೆ?

ರಾಜ: ಹೌದು ಮಗಳೆ, ನಿನ್ನಂಥವರು ನನ್ನ ಮಂತ್ರಿಮಂಡಲದಲ್ಲಿ ಇರಬೇಕು.

ಹು೪: ನಾನು ಯಾವ ಮಂತ್ರಿ ಮಹಾಪ್ರಭು?

ರಾಜ: ನೀನು ನಮ್ಮ  ಸಚಿವ ಸಂಪುಟದಲ್ಲಿ  ಮಂತ್ರಾಲೋಚನಾ ಮಂತ್ರಿ.

ಮಂತ್ರಿ: ಹಾಗೊಂದು ಮಂತ್ರಿ ಪದವಿ ಇದೆಯೆ ಮಹಾಪ್ರಭು?

ರಾಜ: ಯೊಗ್ಯತೆಯಿರುವ ವ್ಯಕ್ತಿಗಳನ್ನು ತೆಗೆದುಕೊಳ್ಳುವುದಕ್ಕೋಸ್ಕರ ಹೊಸ ಮಂತ್ರಿಪದವಿಗಳನ್ನು ಸೃಷ್ಟಿಸಲಿಕ್ಕೆ ಆಗುವುದಿಲ್ಲವೆ?

ಮಂತ್ರಿ: ಖಂಡಿತವಾಗಿಯೂ ಆಗುತ್ತದೆ ಮಹಾಪ್ರಭು.

ರಾಜ: ನಮಗೆ ಒಬ್ಬ ಮಂತ್ರಾಲೋಚನಾ ಮಂತ್ರಿಯ ಅಗತ್ಯ ಇದೆ. ಆದ್ದರಿಂದ ಒಂದು ಹೊಸ ಮಂತ್ರಿ ಪದವಿಯನ್ನು ಸೃಷ್ಟಿಸಿದ್ದೇನೆ. ಹೇಗೆ ಆಗದೆ?

ಮಂತ್ರಿ: ಆಗಲಿ ಮಹಾಪ್ರಭು.

ರಾಜ: ನಿನಗೆ ಒಪ್ಪಿಗೆಯೆ ಮಗು?

ಹು೪: ಒಪ್ಪಿಗೆ ಮಹಾಪ್ರಭು.

ಮಂತ್ರಿ: (ಸ್ವಗತ, ಅಚ್ಚರಿಯಿಂದ) ಮಂತ್ರಿ! ಮಗು!

ಫೇಡ್ ಔಟ್