ಪಾತ್ರಗಳು:
ದರ್ಜಿ, ದರ್ಜಿಯ ಹೆಂಡತಿ
ಇಬ್ಬರು ಕಿನ್ನರ ಬಾಲಕರು

 

ದೃಶ್ಯ ಒಂದು: ದರ್ಜಿಯ ಮನೆ

(ಮನೆಯ ಚಾವಡಿ. ಹೊಲಿಗೆಗಿರುವ ಬಟ್ಟೆ ರಾಶಿ, ಮಕ್ಕಳ ಉಡುಪುಗಳು, ಕತ್ತರಿ ಇತ್ಯಾದಿ. ಎಡಗಡೆಗೆ ಮಲಗುವ ಕೋಣೆ. ಮಲಗುವ ಕೋಣೆ ಮತ್ತು  ಚಾವಡಿಯ ನಡುವೆ ಇರುವ ಗೋಡೆಯಲ್ಲಿ ಒಂದು ಕಿಟಕಿ)

ಹೆಂ: ಈ ಅಂಗಿ ಚೆಡ್ಡಿಗಳು ನಾಳೆಯ ಸಂತೆಗೆ ಸಿದ್ಧ ಆಗೋ ಹಾಗೆ ಕಾಣಿಸ್ತಾ ಇಲ್ಲ!

ದರ್ಜಿ: ಆಗ್ಲಿಲ್ಲಾಂದ್ರೆ ಏನ್ಮಾಡೋದು. ಸಂತೆ ಬೇಡ. ನಾಡಿದ್ದು  ಸೆಟ್ಟಿ ಅಂಗ್ಡಿಗೆ ಕೊಂಡ್ಹೋಗೋದು.

ಹೆಂ: ಅವ್ನು ಕೊಡೋ ಬೆಲೆ ಕಡಿಮೆ.

ದರ್ಜಿ: ಸಂತೇಲೂ ಅಷ್ಟೆ. ಈಗ ಹೊಸ ಹೊಸ ಡಿಸೈನಿನ ಮಕ್ಕಳ ಡ್ರೆಸ್‌ಗಳು ಬಂದಿವೆ. ದಿವ್ಸದಿಂದ ದಿವ್ಸಕ್ಕೆ ನಾವು ಹೊಲ್ದದ್ದನ್ನ   ಕೊಂಡ್ಕೊಳ್ಳೋರ ಸಂಖ್ಯೆ ಕಡಿಮೆ ಆಗ್ತಿದೆ.

ಹೆಂ: ಹಾಗಂತ ಹೊಲಿಯದೆ ಇರೋಕ್ಕಾಗುತ್ಯೆ?

ದರ್ಜಿ: (ನಕ್ಕು) ದರ್ಜಿಯಾಗಿ ಹುಟ್ಟಿದ್ಮೇಲೆ ಬಟ್ಟೆ ಹೊಲಿಯದೆ ಊಟ ಮಾಡೋಕ್ಕಾಗುತ್ಯೆ? ನಮ್ಮಿಂದಾಗೋದನ್ನ  ಮಾಡೋದು.

ಹೆಂ: ಕೆಲವು ಹೊಸ ಡಿಸೈನ್‌ಗಳನ್ನ ಕಲಿತುಕೊಂಡರೆ ಹೇಗೆ?

ದರ್ಜಿ: ಹೊಸ ಡಿಸೈನ್ ಕಲಿಯೊ ಪ್ರಾಯವೇ ಇದು? ಅಲ್ದೆ , ಕಲಿಸೋರು ಯಾರು? ಅದ್ಕೆ ಒಂದಷ್ಟು  ಪಿsಸು ಬೇರೆ ಕೇಳ್ತಾರೆ!

ಹೆಂ: ಮಕ್ಕಳ ಡ್ರೆಸ್ ಎಲ್ಲಾ ಈಗ ಕಂಪೆನಿಗಳಿಂದ್ಲೇ ಬರ‍್ತವೆ. ದೊಡ್ಡವರ ಉಡುಪು ಹೊಲೀಬಹುದು.

ದರ್ಜಿ: ಇಷ್ಟು ವರ್ಷ ಮಕ್ಕಳ ಉಡುಪು ಹೊಲ್ದದ್ದಾಯ್ತು. ಇನ್ನು ಹೊಸ್ದಾಗಿ ಕಲಿತು ದೊಡ್ಡವರ ಉಡುಪು ಹೊಲಿಯೊಕ್ಕಾಗುತ್ಯೆ? ಏನಿದ್ರೂ ಮಕ್ಕಳ ಉಡುಪೇ ಒಳ್ಳೇದು. ಯಾಕೆ ಗೊತ್ತಾ?

ಹೆಂ: ಯಾಕೆ?

ದರ್ಜಿ: ಮಕ್ಕಳು ಬೆಳೀತಾ ಹೋದ ಹಾಗೆ ಅವರ ಉಡುಪಿನ್ದು  ಕೂಡ ಸೈಜು ಬದಲಾಗೋದ್ರಿಂದ ಹೊಸ ಹೊಸ ಉಡುಪು ಹೊಲಿಸ್ಕೋತಾರೆ. ಐವತ್ತು ವರ್ಷಗಳ ಹಿಂದೆ ರೆಡಿ ಮೇಡ್ ಅಂದ್ರೆ ಮಕ್ಕಳ ಉಡುಪೇ ಅನ್ನೋ ಹಾಗಿತ್ತು.

ಹೆಂ: ಈಗ್ಲೂ  ಬಟ್ಟೆ ಅಂಗ್ಡೀಲಿ ಮಕ್ಕಳ ಡ್ರೆಸ್ಸೇ ಜಾಸ್ತಿ. ಮಕ್ಕಳ್ದೇ ಡ್ರೆಸ್ಸಿನ ಅಂಗ್ಡಿಗಳು ಬೇರೆ!

ದರ್ಜಿ: ಅಂತೂ ನಮ್ಮಂಥ ದರ್ಜಿಗಳ ಕಾಲ ಹೋಯ್ತು.

ಹೆಂ: ಇಬ್ಬರ ಹೊಟ್ಟೆಗೇ ಇಷ್ಟು ಬೇಕಾಗುತ್ತಲ್ಲಾ? ಇನ್ನು ಮಕ್ಕಳು ಮರಿ ಇರೋ ದರ್ಜಿಗಳ ಗತಿ ಏನು?

ದರ್ಜಿ: ಮಕ್ಕಳು ಮರಿ ಇರೋರು ಏನ್ಮಾಡ್ತಾರೆ?  ಇರೋದನ್ನ  ಹಂಚಿಕೊಳ್ತಾರೆ.

ಹೆಂ: ಈ ಮಿಣಿಮಿಣಿ ದೀಪದ ಬೆಳಕಿನಲ್ಲಿ ಕಣ್ಣೇ ಕಾಣ್ಸೋಲ್ಲ.

ದರ್ಜಿ: ಇವತ್ತಿಗೆ ಸಾಕು.  ಗಂಟೆ ಹತ್ತೂವರೆ.

ಹೆಂ: ಎಲ್ಲಾ ಅರ್ಧ ಅರ್ಧ ಆಗಿದೆ ಅಷ್ಟೆ.

ದರ್ಜಿ: ನಾಳೆಯ ಮಾರ್ಕೆಟಿನ ಯೊಚನೆ ಬಿಡೋಣ. ನಾಡಿದ್ದು ಸೆಟ್ಟಿ ಅಂಗ್ಡಿಗೆ ಕೊಟ್ರಾಯ್ತು.

ಹೆಂ: ಸರಿ. ಹಾಗೆ ಮಾಡೋಣ. ಬೇರೇನು ಮಾಡೋದು.

(ದೀಪ ಮಬ್ಬಾಗುತ್ತದೆ. ಒಳಹೋಗಿ ಮಲಗಿಕೊಳ್ಳುತ್ತಾರೆ. ದೀಪ ಇನ್ನಷ್ಟು ಮಬ್ಬಾದಾಗ ಇಬ್ಬರು ಕಿನ್ನರ ಬಾಲಕರ ಪ್ರವೇಶ.  ರೆಕ್ಕೆಗಳಿವೆ. ಅವರ ಅಂಗಿ ಚೆಡ್ಡಿ ಹರಕು ಹರಕಾಗಿದೆ. ದರ್ಜಿ ದಂಪತಿಯ ಬಟ್ಟೆಯ ರಾಶಿ  ಮತ್ತು ಹೊಲಿಗೆ ಸಾಮಗ್ರಿಗಳನ್ನು ಪರಿಶೀಲಿಸುತ್ತಾರೆ. ಒಂದನೆಯವನು ತುಸು ದೊಡ್ಡವನು)

ಒಂ: ( ಅರ್ಧ ಹೊಲಿದ ಬಟ್ಟೆಯನ್ನು ಎತ್ತಿ ನೋಡಿ)ಎಲ್ಲಾ ಅರ್ಧಂಬರ್ಧ.

ಎರ: ಪಾಪ. ಇಬ್ರಿಗೂ  ಪ್ರಾಯ ಆಯ್ತು . ಮೊದಲಿನ ಹಾಗೆ ಕೆಲಸ ಮಾಡ್ಲಿಕ್ಕೆ ಆಗ್ತಿಲ್ಲ.

ಒಂ: (ಹೊಲಿದಿರಿಸಿದ ಅಂಗಿಯನ್ನು ಎತ್ತಿ ನೋಡಿ) ಹಳೆಯ ಫ್ಯಾಷನ್.

ಎರ: ಅವರಿಗೆ ಗೊತ್ತಿರೋದೇ ಅಷ್ಟು.

ಒಂ: ಸ್ವಲ್ಪ ಕಲ್ತುಕೋಬಾರ‍್ದಾ?

ಎರ: ಪ್ರಾಯ ಆಯ್ತಲ್ಲ?

ಒಂ: ಪ್ರಾಯ ಆದ್ರೇನು? ಕಲ್ತುಕೊಳ್ಳೋ ಮನಸ್ಸು ಇದ್ರೆ ಯಾವಾಗ್ಲೂ ಕಲೀಬಹುದು.

ಎರ: (ನಕ್ಕು) ಬಹುಶ: ಅವರ ಹತ್ರ ಯಾರೂ ಹಾಗೆ ಹೇಳ್ಳಿಲ್ಲ.

ಒಂ: ನಾವು ಒಂದು ಕೆಲಸ ಮಾಡೋಣ. ಅರ್ಧಂಬರ್ಧ ಹೊಲಿದಿರೋದನ್ನ ಎಲ್ಲಾ ಇಡೀ ಹೊಲಿದುಬಿಡೋಣ.

ಎರ: ಸರಿ. ಹಾಗೇ ಮಾಡೋಣ.

ಒಂ: ಕತ್ತರಿ ಎಲ್ಲಿದೆ?

ಎರ: (ಕತ್ತರಿ ತೆಗೆದುಕೊಂಡು) ಇಲ್ಲಿದೆ.

ಒಂ: ಅಲ್ಲಿ ಇಲ್ಲಿ ಕತ್ತರಿಸಿ ಸ್ವಲ್ಪ ಡಿಸೈನ್ ಬದಲಾಯ್ಸಿಬಿಡೋಣ.

ಎರ: ಹೌದು ಅದೇ ಒಳ್ಳೇದು. ಹೊಸ ಡಿಸೈನ್ ಕಂಡ್ಕೂಡ್ಲೇ ಜನ ಕೊಂಡ್ಕೊಳ್ತಾರೆ.

ಒಂ: ಸರಿ.ಬೇಗ ಬೇಗ ಕೆಲಸ ಮುಗೀಬೇಕು.

(ವೇಗವಾಗಿ ಕೆಲಸ ಮಾಡುತ್ತಾರೆ)

ಫೇಡ್ ಔಟ್

ದೃಶ್ಯ ಎರಡು: ದರ್ಜಿಯ ಮನೆ

(ಬೆಳಗ್ಗಿನ ಹೊತ್ತು. ಮೊದಲು ಎದ್ದ ದರ್ಜಿಯ ಹೆಂಡತಿ ಸಿದ್ಧಗೊಂಡು ಒಪ್ಪವಾಗಿ ಮಡಚಿಟ್ಟ ಉಡುಪನ್ನು ನೋಡುತ್ತಾಳೆ. ಅದೇ ಬೆರಗಿನಲ್ಲಿ ಒಂದೆರಡನ್ನು ಎತ್ತಿ ನೋಡುತ್ತಾಳೆ)

ಹೆಂ: ಏಳಿ ಏಳಿ. ಇದೇನಾಗಿದೆ ನೋಡಿ!

ದರ್ಜಿ: (ಒಳಗಿಂದಲೇ) ಏನು?

ಹೆಂ: ಬಂದು ನೋಡಿ!

ದರ್ಜಿ: (ಎದ್ದು ಬರುತ್ತಾ) ಏನು? ಏನಾಗಿದೆ?

ಹೆಂ: (ಅಂಗಿ ಚೆಡ್ಡಿಗಳನ್ನು ತೋರಿಸಿ) ನಾವು ಅರ್ಧ ಅರ್ಧ ಹೊಲಿದಿಟ್ಟಿರೋದನ್ನೆಲ್ಲಾ ಯಾರೋ ಹೊಲಿದು ಪೂರ್ತಿ ಮಾಡಿದ್ದಾರೆ.

ದರ್ಜಿ: ಯಾರೋ ಎಂದರೆ ಯಾರು? ನೀನೇ ಮಾಡಿರ‍್ಬಹುದು.

ಹೆಂ: ಅಯೊ ನನ್ನಿಂದಾಗೋ ಕೆಲಸವೇ ಇದು? ಇಷ್ಟೊಂದು ಡ್ರೆಸ್!

ದರ್ಜಿ: (ಉಡುಪುಗಳನ್ನು ತೆಗೆದು ನೋಡಿ) ಆಶ್ಚರ್ಯ! ಆಶ್ಚರ್ಯ!

ಹೆಂ: ಆಶ್ಚರ್ಯ ಅಲ್ಲ! ಪವಾಡ!

ದರ್ಜಿ: ಹೀಗೊಂದು ಈ ತನಕ ಕೇಳಿ  ಕೂಡ ಗೊತ್ತಿಲ್ಲ.

ಹೆಂ: ನಿಜ. ಕತೆಯಲ್ಲಿ ಸಹ ಇಂಥದನ್ನ ನಾನು ಕೇಳಿಲ್ಲ!

ದರ್ಜಿ: ಯಾರ ಕೆಲಸವಾಗಿರ‍್ಬಹುದು ಇದು?

ಹೆಂ: ಬೇರೆ ಯಾರ ಕೆಲಸ? ಮನುಷ್ಯರು ಇಂಥ ಕೆಲಸ ಮಾಡ್ತಾರೆಯೆ?

ದರ್ಜಿ: ಮನುಷ್ಯರು ಮಾಡೋದಾದ್ರೂ ಹೇಗೆ? ಮನೆ ಬಾಗಿಲು ಹಾಕಿದ ಹಾಗೇನೇ ಇದೆ!

ಹೆಂ: ನೀನೊಬ್ಬಳು! ಮನುಷ್ಯರು ಅಲ್ಲ ಅಂದ್ಮೇಲೆ ಅಲ್ಲ!

ದರ್ಜಿ: ಅಲ್ಲಾ, ಒಂದು ವೇಳೆ ಬಾಗಿಲು ತೆರೆದಿಟ್ರೆ ಅರ್ಧ ಹೊಲಿದ ಬಟ್ಟೆಯನ್ನ ಪೂರ್ತಿ ಹೊಲಿದಿಟ್ಟು  ಹೋಗೋ ಮನುಷ್ಯರು ಇದಾರ?

ಹೆಂ: ಹಾಗಾದ್ರೆ ಇದು ದೇವರದ್ದೇ ಆಟ. ನಮ್ಮ ಕಷ್ಟ ನೋಡಿ ಅವನ ಮನಸ್ಸು ಕರಗಿದೆ. (ಉಡುಪನ್ನ ಪರಿಶೀಲಿಸುತ್ತಾ) ಅಷ್ಟೇ ಅಲ್ಲಾರೀ. ನೋಡಿ! ಹೊಸ ಹೊಸ ಡಿಸೈನ್!

ದರ್ಜಿ: (ಪರಿಶೀಲಿಸಿ)ಹೌದಲ್ಲ!  ಎಲ್ಲಾ ಈಗಿನ ಡಿಸೈನುಗಳೇ.

ಹೆಂ: ದೇವ್ರಿಗೆ ಇತ್ತೀಚೆಗಿನ ಡಿಸೈನುಗಳು ಕೂಡ ಗೊತ್ತಿದೆ ಅಂದ ಹಾಗಾಯ್ತು!

ದರ್ಜಿ: ಅದ್ಕೇ ಅಲ್ವಾ ಅವ್ನನ್ನ ದೇವ್ರು ಅನ್ನೋದು! ಅಷ್ಟೇ ಅಲ್ಲ! ಇಲ್ನೋಡು! ಇದು ದೇವರದ್ದೇ ಡಿಸೈನು! ಈ ಡಿಸೈನನ್ನ ನಾನು ಈ ವರೆಗೆ ಎಲ್ಲಿಯೂ ನೋಡಿಲ್ಲ.

ಹೆಂ: (ಪರಿಶೀಲಿಸಿ) ಹೌದೂರೀ. ನಾನು ಕೂಡ ನೋಡಿಲ್ಲ! ಇದು ದೇವರದ್ದೇ ಆಟ.

ದರ್ಜಿ: ದೇವರೇ ಸ್ವತ: ಮಾಡಿರ್ಲಿಕ್ಕಿಲ್ಲ. ಯಾರನ್ನಾದ್ರೂ ಕಳಿಸಿರ‍್ಬಹುದು.

ಹೆಂ: ಎಲ್ಲಿಂದ?

ದರ್ಜಿ: ದೇವರಿಗೇ ಗೊತ್ತು. ಭೂಮಿಯ ಮೇಲಿಂದಂತೂ ಖಂಡಿತ ಅಲ್ಲ!

ಹೆಂ: ನಿಜ. ಇದು ಭೂಮಿ ಮೇಲಿರೋರು ಮಾಡಿದ್ದಂತೂ ಅಲ್ಲ. ನೋಡಿ. ಈ ಥರಾ ಸ್ವಲ್ಪ  ಹೊಲಿಯೊಕ್ಕಾಗುತ್ತಾ  ನಿಮ್ಮಿಂದ?

ದರ್ಜಿ: (ಪರಿಶೀಲಿಸಿ) ಸ್ವಲ್ಪ ಕಷ್ಟ .

ಹೆಂ: (ಪರಿಶೀಲಿಸಿ)ನಂಗನಿಸುತ್ತೆ ಪ್ರಯತ್ನಿಸಿದ್ರೆ ಇದೇ ರೀತಿ ನಾವು ಕೂಡ ಹೊಲೀಬಹುದು ಅಂತ.

ದರ್ಜಿ: ಹೂಂ ಪ್ರಯತ್ನ ಮಾಡೋಣ. ಈ ಡ್ರೆಸ್‌ಗಳನ್ನ  ಏನ್ಮಾಡೋಣ? ಸೆಟ್ಟಿಗೆ ಕೊಡೋಣ್ವೆ ಅಥ್ವಾ ಸಂತೆಗೆ ಕೊಂಡ್ಹೋಗೋಣ್ವೆ?

ಹೆಂ: ಇದೇನು ಹೀಗೆ ಇದೇನು ಹಾಗೆ ಅಂತ ಸೆಟ್ಟಿ ತಗಾದೆ ಎಬ್ಬಿಸಿ ಬೆಲೆ ಕಡಿಮೆ ಮಾಡ್ಲಿಕ್ಕೆ ನೋಡ್ತಾನೆ. ಇವತ್ತೇ ಸಂತೆಗೆ ಕೊಂಡ್ಹೋಗೋಣ.

ದರ್ಜಿ: ಸರಿ. ಹಾಗೇ ಮಾಡೋಣ. ಸಂತೆಯಿಂದ ಬರ‍್ತಾ ಅಲ್ಲಿಂದ್ಲೇ ಹೊಸ ಬಟ್ಟೆ ತರೋಣ. ಸೆಟ್ಟಿ ಅಂಗಡೀದು ಬೇಡ.

ಫೇಡ್ ಔಟ್

 

ದೃಶ್ಯ ಮೂರು: ಮೊದಲನೆಯ ದೃಶ್ಯದ ಮನೆ 

(ದರ್ಜಿ ಮತ್ತು ಹೆಂಡತಿ ಈಗ ಅನುಕೂಲಸ್ಥ್ಥರಾಗಿರುವ ಲಕ್ಷಣಗಳು. ಒಂದಷ್ಟು ಸಿದ್ಧ ಉಡುಪುಗಳನ್ನು ಒಪ್ಪವಾಗಿಡಲಾಗಿದೆ)

ಹೆಂ: ಇವತ್ತಿಗೆ ಮೂವತ್ತು ದಿನ ಆಯ್ತು. ಇಷ್ಟರ ವರೆಗೂ ರಾತ್ರಿ ಹೊತ್ತು ಬಂದು ನಾವು ಅರ್ಧ ಅರ್ಧ ಹೊಲಿದಿರೋದನ್ನ  ಪೂರ್ತಿ ಹೊಲಿದಿಟ್ಟು ಹೋಗೋರು ಯಾರೂಂತ ತಿಳೀಲೇ ಇಲ್ವಲ್ಲ?

ದರ್ಜಿ: ದೇವರು. ಬೇರೆ ಯಾರು?

ಹೆಂ: ಅಲ್ಲಾ ಯಾರಾಗಿರ‍್ಬಹುದು ಅಂತ?

ದರ್ಜಿ: ಅದನ್ನ ತಿಳ್ಕೊಂಡು ಏನಾಗ್ಬೇಕು? ದೇವರು ಅಂದ್ಮೇಲೆ ದೇವರು!

ಹೆಂ: ಆದ್ರೆ ನಿಜವಾಗಿ ಹೊಲಿಯೊರು ಯಾರು?

ದರ್ಜಿ: ಮಾಡೋನು ದೇವರಂದ ಮೇಲೆ ಮುಗೀತು. ಯಾರಾದ್ರೇನು?

ಹೆಂ: ಅವ್ರು ಹೇಗಿದಾರೆ? ಯಾವಾಗ ಬರ‍್ತಾರೆ? ಯಾಕೆ ಈ ಕೆಲಸ ಮಾಡ್ತಾರೆ ಅಂತ ತಿಳ್ಕೋಬೇಡ್ವೆ?

ದರ್ಜಿ: ಯಾಕೆ ಅಂತ ನಾನು ಕೇಳ್ತಿರೋದು!

ಹೆಂ: ಅಲ್ಲಾ , ದೇವರು ಮಾಡಿದ ಅಂತ ಅವನು ಕೊಟ್ಟಿರೋದನ್ನು ತಕ್ಕೊಂಡು ಸುಮ್ನಿದ್ರೆ ಸರಿಯ? ಯಾರೇ ಆಗಿರ್ಲಿ ನಮ್ಗೆ ಇಷ್ಟು ದೊಡ್ಡ ಉಪ್ಕಾರ ಮಾಡಿರೋರನ್ನ ನಾವು ನೋಡೋದರಲ್ಲಿ ಏನು ತಪ್ಪು? ಸಾಧ್ಯವಾದ್ರೆ, ಅವರಿಗೆ ನಮ್ಮ ಕೃತಜ್ಞತೆಯನ್ನ ಹೇಳ್ಬೇಕು.

ದರ್ಜಿ: (ಸ್ವಲ್ಪ ಚಿಂತಿಸಿ) ಅದಾದ್ರೆ ಸರಿ.

ಹೆಂ: ಎಷ್ಟೋ ದಿವ್ಸದಿಂದ ಯೊಚ್ನೇ ಮಾಡ್ತಿದ್ದೆ.  ಇಷ್ಟೆಲ್ಲಾ ಕೆಲಸ ಆಗುವಾಗ  ಒಂದು ಸಣ್ಣ ಸಪ್ಪಳ ಆಗದಿರ್ಲಿಕ್ಕಿಲ್ಲ. ಎದ್ದು ನೋಡ್ಬಹುದು ಅಂತ. ಆದ್ರೆ ಅದೆಂಥ ಮಾಯವೋ, ಒಂದಿನಾನೂ ರಾತ್ರಿ ಎಚ್ರ ಆಗ್ಲೇ ಇಲ್ಲ.

ದರ್ಜಿ: ನಂಗೂ ಹಾಗೇನೇ. ರಾತ್ರಿ ಮಲಗಿದವ್ನಿಗೆ ಬೆಳಗ್ಗೇನೇ ಎಚ್ಚರ!

ಹೆಂ: ಅದಕ್ಕೆ ಏನು ಮಾಡ್ಬೇಕೂಂದ್ರೆ, ಕಣ್ಣು ಮುಚ್ಚಿ ಮಲ್ಕೋಬೇಕು ನಿದ್ದೇನೇ ಮಾಡ್ಬಾರ‍್ದು.

ದರ್ಜಿ: ನಿದ್ದೆ ಹೇಳದೆ ಕೇಳದೆ ಬಂದ್ಬಿಡುತ್ತೆ.

ಹೆಂ: ಇವತ್ತು ನಾನು ಎಚ್ಚರವಾಗೇ ಇರ‍್ತೀನಿ. ಅದೇನು ನಡೆಯುತ್ತೆ ಅಂತ ನಾನು ತಿಳ್ಕೊಳ್ಳೇ ಬೇಕು.

ದರ್ಜಿ: ಆಗ್ಲಿ. ನಿಂಗೇನಾದ್ರೂ ಕಾಣಿಸಿದ್ರೆ ನನ್ನನ್ನ ಎಬ್ಬಿಸು.

ಹೆಂ: ಸರಿ.

ಫೇಡ್ ಔಟ್

 

ದೃಶ್ಯ ನಾಲ್ಕು: ದರ್ಜಿಯ ಮನೆ

(ರಾತ್ರಿ. ಮಬ್ಬುಗತ್ತಲೆ. ದರ್ಜಿ ಮತ್ತು ದರ್ಜಿಯ ಹೆಂಡತಿ ಮಲಗುವ ಕೋಣೆಯಲ್ಲಿ ಮಂಚದಲ್ಲಿ ಮಲಗಿದ್ದಾರೆ.  ಕಿನ್ನರ ಬಾಲಕರ ಪ್ರವೇಶ. ಬಟ್ಟೆ ಹೊಲಿಯತೊಡಗುತ್ತಾರೆ. ದರ್ಜಿಯ ಹೆಂಡತಿ ಗಂಡನನ್ನ್ನು ಎಚ್ಚರಗೊಳಿಸುತ್ತಾಳೆ. ಇಬ್ಬರೂ ಮೆಲ್ಲನೆ ಎದ್ದು  ಕಿಟಕಿಯಲ್ಲಿ ಮುಖವಿರಿಸಿ ನೋಡುತ್ತಾರೆ)

ಒಂ: (ಅರ್ಧ ಹೊಲಿದ ಒಂದು ಅಂಗಿಯನ್ನು ತೋರಿಸಿ) ನೋಡು ನೋಡು ಡಿಸೈನಿನಲ್ಲಿ ಆಗಿರೋ ಬದಲಾವಣೆ.

ಎರ: (ನೋಡಿ) ಹೌದು.

ಒಂ: ಈ ಪ್ರಾಯದಲ್ಲಿ ಕಲೀಲಿಕ್ಕಾಗುವುದಿಲ್ಲ ಅನ್ನೋದು ಬರೀ ಭ್ರಮೆ!

ಎರ: ನಿಜ ನಿಜ. ಕಲಿಯೊದು ಮನಸ್ಸು. ಕೈಯೂ ಅಲ್ಲ, ಕಾಲೂ ಅಲ್ಲ.

ಒಂ: ಈಗ ಚೆನ್ನಿದಾರೆ ಅಲ್ವ?

ಎರ: ಹೂಂ ಸಂತೋಷವಾಗಿದಾರೆ.

ಒಂ: ಈಗ ಗೊಣಗಾಟ ಇಲ್ಲ.

ಎರ: ನಿಜ. ಈಗ ಗೊಣಗಾಟ ಇಲ್ಲ.

ಒಂ: ಇಬ್ರೂ ಒಳ್ಳೆಯವ್ರು. ಅಲ್ವ?

ಎರ: ನಿಜ. ಒಳ್ಳೆಯವ್ರು. ಒಳ್ಳೆಯ ಮನಸ್ಸು.

ಒಂ: ತುಂಬಾ ಕಷ್ಟ ಬಂದ್ರೆ ಒಳ್ಳೆಯವರ ಮನಸ್ಸು ಕೂಡ ಸ್ವಲ್ಪ ಕೆಟ್ಟದಾಗ್ತದೆ ಅಲ್ವ?

ಎರ: ನಿಜ ನಿಜ.

ಒಂ: ತುಂಬಾ ಕಷ್ಟ ಬರ‍್ದೆ ಇರ‍್ಬೇಕಾದ್ರೆ ಏನು ಮಾಡ್ಬೇಕು?

ಎರ: (ನಕ್ಕು) ಸ್ವಲ್ಪ ಕಷ್ಟ ಪಡ್ಬೇಕು.

ಒಂ: ಬೇಗ ಬೇಗ ಕೆಲಸ ಮುಗಿಸ್ಬಿಡೋಣ. (ಬಾಲಕರು ಕೆಲಸದಲ್ಲಿ ತಲ್ಲೀನರಾಗುತ್ತಾರೆ. ದರ್ಜಿ ಮತ್ತು  ದರ್ಜಿಯ ಹೆಂಡತಿ ಸದ್ದಿಲ್ಲದೆ ಹೋಗಿ ಮಲಗಿಕೊಳ್ಳುತ್ತಾರೆ. ಬಾಲಕರಿರುವ ಕೋಣೆಯಲ್ಲಿ ಬೆಳಕು ತುಂಬಾ ಮಬ್ಬಾಗುತ್ತದೆ. ದರ್ಜಿ ದಂಪತಿಗಳಿರುವ ಕೋಣೆಯಲ್ಲಿ ಅಧಿಕವಾಗುತ್ತದೆ. ದರ್ಜಿ ದಂಪತಿ ಮೆತ್ತಗಿನ ದನಿಯಲ್ಲಿ ಮಾತಾಡುತ್ತಾರೆ)

ಹೆಂ: ಚಿಕ್ಕ ಮಕ್ಕಳು.

ದರ್ಜಿ: ಹೌದು. ಚಿಕ್ಕ ಮಕ್ಕಳು.

ಹೆಂ: ಎಷ್ಟು ವೇಗವಾಗಿ ಕೆಲಸ ಮಾಡ್ತಾರೆ! ಅಲ್ವ?

ದರ್ಜಿ: ನಿಜ. ಬಹಳ ವೇಗ. ಯಾರಿಂದ್ಲೂ  ಇಷ್ಟು ವೇಗವಾಗಿ ಹೊಲಿಯೊದು ಸಾಧ್ಯವೇ ಇಲ್ಲ!

ಹೆಂ: ದೇವರೇ ಕಳಿಸಿದ್ದಾನೆ ಅನ್ನೋದ್ರಲ್ಲಿ  ನಂಗೆ ಸಂಶಯ ಇಲ್ಲ.

ದರ್ಜಿ: ನಂಗೂ ಇಲ್ಲ.

ಹೆಂ: ಆದ್ರೆ  ಪಾಪ. ಅವರ ಬಟ್ಟೆ ಹರಕು ಹರಕಾಗಿದೆ.

ದರ್ಜಿ: ಹೌದು. ತುಂಬಾ ಹರಕಾಗಿದೆ.

ಹೆಂ: ಬೇರೆಯವರ ಬಟ್ಟೆ ಹೊಲಿಯೊದರ ನಡುವೆ ತಮ್ಗೇ ಹೊಲ್ಕೊಳ್ಳೋಕೆ ಅವ್ರಿಗೆ ಸಮಯವೇ ಸಿಕ್ಕಿಲ್ಲವೊ ಏನೊ.

ದರ್ಜಿ: ಹೌದು ನಾವೇ ಒಂದು ಜೊತೆ ಉಡುಪು ಹೊಲಿದು ಕೊಡೋಣ ಆಗದೆ?

ಹೆಂ: ಹೌದು. ಹಾಗೇ ಮಾಡೋಣ. ತುಂಬಾ ಚೆಂದ ಆಗ್ಬೇಕು. ಮತ್ತೆ ನಿಮ್ಮ ಆ ಹಳೆ ಡಿಸೈನುಗಳು ಬೇಡ. ಒಂದೊಳ್ಳೆಯ ಹೊಸ ಡಿಸೈನ್ ಹಾಕಿ ಹೊಲೀರಿ.

ದರ್ಜಿ: ಆಗ್ಲಿ. ಆದ್ರೆ ಅದನ್ನ ಅವ್ರಿಗೆ ಕೊಡೋದು ಹ್ಯಾಗೆ?

ಹೆಂ: ಅದೇನು ಕಷ್ಟ? ಬಟ್ಟೆಗಳ ರಾಶಿ ಮೇಲೆ ಇಟ್ಟುಬಿಟ್ಟರಾಯ್ತು. ಏನ್ಮಾಡ್ತಾರೆ ನೋಡೋಣ. ನಾಳೆಯೆ ಹೊಲೀರಿ.

ದರ್ಜಿ: ಆಗ್ಲಿ. ಈಗ ನಾವು ನಿದ್ದೆ ಮಾಡೋಣ. ಅವರು ಕೆಲಸ ಮುಂದರಿಸಲಿ.

ಫೇಡ್ ಔಟ್

 

ದೃಶ್ಯ ಐದು: ದರ್ಜಿಯ ಮನೆ

(ರಾತ್ರಿ. ಮಬ್ಬುಗತ್ತಲೆ. ದರ್ಜಿ ಮತ್ತು ದರ್ಜಿಯ ಹೆಂಡತಿ ಮಲಗುವ ಕೋಣೆಯಲ್ಲಿ ಮಂಚದಲ್ಲಿ ಮಲಗಿದ್ದಾರೆ.  ಕಿನ್ನರ ಬಾಲಕರ ಪ್ರವೇಶ. ಅದೇ ಹಳೆಯ ಉಡುಪಿನಲ್ಲಿದ್ದಾರೆ. ಹೆಚ್ಚು ಹರಕಾಗಿದೆ. ಬಟ್ಟೆಯ ರಾಶಿಯ ಮೇಲಿದ್ದ  ಉಡುಪು ಕಾಣಿಸುತ್ತದೆ. ದರ್ಜಿ ಮತ್ತು ಅವನ ಹೆಂಡತಿ ಮೆಲ್ಲನೆ ಎದ್ದು  ಕಿಟಕಿಯ ಮರೆಯಲ್ಲಿ ನಿಂತು ಬಾಲಕರಿಗೆ  ಕಾಣಿಸದಂತೆ ನೋಡುತ್ತಾರೆ)

ಒಂ: (ಉಡುಪನ್ನು ತೋರಿಸಿ) ನೋಡು ನೋಡು. ಹೊಸ ಡ್ರೆಸ್! (ಎರಡನೆಯ ಬಾಲಕ ಬಳಿ ಬರುತ್ತಾನೆ) ಬೇರೆ ಯಾವುದನ್ನೂ ಹೊಲಿದಿಲ್ಲ. ಇವತ್ತು ಅರ್ಧ ಅರ್ಧ ಹೊಲಿದದ್ದೂ ಇಲ್ಲ!

ಎರ: ಎರಡು ಜೊತೆ. ನೋಡು ಇದು ನನಗೆ ಸರಿಯಾಗಿದೆ.

ಒಂ: (ಇನ್ನೊಂದು ಜೊತೆ ತೆಗೆದುಕೊಂಡು) ಇದು ನನಗೆ ಸರಿಯಾಗಿದೆ.

ಎರ: ಬಹುಶ: ನಮಾಗಿಯೆ ಹೊಲಿದಿದ್ದಾರೆ.

ಒಂ: ಖಂಡಿತ ನಮ್ಗಂತ್ಲೇ ಹೊಲಿದಿಟ್ಟಿದ್ದಾರೆ.

ಎರ: ಹಾಗಾದ್ರೆ, ಅವ್ರು ನಮ್ಮನ್ನ ಕಂಡಿದ್ದಾರೆ!

(ಇಬ್ಬರೂ ತಮ್ಮ ಹರಕು ಉಡುಪು ಕಳಚಿ ಹಾಕಿ ಹೊಸ ಉಡುಪು ಧರಿಸುತ್ತಾರೆ. ಪರಸ್ಪರ ನೋಡಿಕೊಳ್ಳುತ್ತಾರೆ)

ಒಂ: ತುಂಬಾ ಚೆಂದ ಇದೆ. ಅಲ್ವ?

ಎರ: ಹೌದು ತುಂಬಾ ಚೆಂದ ಇದೆ.

ಒಂ: ಹಾಗಾದ್ರೆ, ಇನ್ನು ಇವ್ರಿಗೆ ನಮ್ಮ ಸಹಾಯದ ಅಗತ್ಯ ಇಲ್ಲ.

ಎರ: ಖಂಡಿತ ಇಲ್ಲ.

(ಇಬ್ಬರೂ ಸಂತೋಷದಿಂದ ಕುಣಿದು ಕುಪ್ಪಳಿಸಿ ಹಾಡುತ್ತಾ ನಿರ್ಗಮಿಸುತ್ತಾರೆ)

ಹೆಂ: (ವ್ಯಾಕುಲತೆಯಿಂದ)ಛೆ! ಹೋಗೇ ಬಿಟ್ಟರು!

ದರ್ಜಿ: ಅವರ ಡ್ರೆಸ್ ತಯಾರಿಸುವುದರಲ್ಲಿ ನಾವು ಬೇರೆ ಕೆಲಸ ಮಾಡೋದನ್ನೇ ಮರ‍್ತುಬಿಟ್ಟೆವು.

ಹೆಂ: ಅರ್ಧ ಅರ್ಧ ಹೊಲ್ದಿರೋ ಒಂದು ಉಡುಪು ಕೂಡ ಇರ್ಲಿಲ್ಲ.

ದರ್ಜಿ: ಒಂದೆರಡಾದ್ರೂ ಇರ‍್ತಿದ್ರೆ, ಅವ್ರು ಸ್ವಲ್ಪ ಹೊತ್ತು ಇರ‍್ತಿದ್ರೋ ಏನೊ.

ಹೆಂ: ಸ್ವಲ್ಪ ಹೊತ್ತು ಇರ‍್ತಿದ್ರೆ ಕೃತಜ್ಞತೆಯ ಮಾತು ಹೇಳ್ಬಹುದಾಗಿತ್ತು.

ದರ್ಜಿ: ಅವರು ನಮ್ಮನ್ನು ಕಂಡ್ರೆ ನಮ್ಮ ಮಾತು ಕೇಳ್ಳಿಕ್ಕೆ ನಿಲ್ತಿದ್ರೊ ಇಲ್ವೊ. ನಾವು ದೇವರಿಗೇ ಕೃತಜ್ಞತೆ ಹೇಳಿದ್ರಾಯ್ತು.

ಹೆಂ: ಅದೂ ಸರಿ. ಯಾಕಂದ್ರೆ, ಅವ್ರು ದೇವರ ಮಕ್ಕಳೇ.

(ಇಬ್ಬರೂ ಹಜಾರಕ್ಕೆ ಬರುತ್ತಾರೆ. (ಬೆಳಕು ಸ್ವಲ್ಪ  ಜಾಸ್ತಿ)ದರ್ಜಿಯ ಹೆಂಡತಿಗೆ ಬಾಲಕರ ಹರಕು ಉಡುಪು ಸಿಗುತ್ತದೆ)

ಹೆಂ: ಇಲ್ನೋಡಿ! ಅವರ ಉಡುಪು!

ದರ್ಜಿ: (ಬಂದು ಮುಟ್ಟಿ ನೋಡುತ್ತಾನೆ) ಇದು ಸಾಮಾನ್ಯವಾದ ಬಟ್ಟೆಯಲ್ಲ!

ಹೆಂ: ಹೌದು. ನಮ್ಮ ಪಾಲಿಗೆ ಇದು ಭಾಗ್ಯದ ಬಟ್ಟೆ. (ಜತನದಿಂದ ಮಡಚಿ ಒಂದು ಪೆಟ್ಟಿಗೆಯಲ್ಲಿ ಹಾಕುತ್ತಾಳೆ)

ಫೇಡ್ ಔಟ್