ಪಾತ್ರಗಳು:
ಕಮಾರ, ಕಮಾರನ ಮಗ, ಕಮಾರನ ಹೆಂಡತಿ, ರಾಜ, ದೂತ, ಪಂಡಿತ, ವಿಜ್ಞಾನಿ, ಕವಿ, ಹುಚ್ಚ,
ದೃಶ್ಯ ಒಂದು: ಕಮಾರನ ಮನೆ
(ರಂಗದ ಬಲ ಅರ್ಧ ಕಮಾರನ ಮನೆ. ಎಡ ಅರ್ಧ ಅವನ ಕೆಲಸದ ಕೊಟ್ಟಿಗೆ. ಕೊಟ್ಟಿಗೆಯಲ್ಲಿ ತಿದಿ ಮತ್ತು ಕುಲುಮೆ. ಕಮಾರನ ಮಗ ಹತ್ತು ವರ್ಷದ ಹುಡುಗ ತಿದಿಯೊತ್ತುತ್ತಿದ್ದಾನೆ.ಕಮಾರ ಕತ್ತಿ ಕಾಯಿಸಿ ಸುತ್ತಿಗೆಯಿಂದ ಬಡಿಯುತ್ತಿದ್ದಾನೆ)
ಕಮಾ: ಸುಮಾರು ಹತ್ತು – ಹದಿನೈದು ಸಾವಿರ!
ಕ.ಮ: ಹತ್ತು – ಹದಿನೈದು ಸಾವಿರ!
ಕಮಾ: ಯಾಕೆ ನಂಬ್ಲಿಕ್ಕಾಗ್ತಿಲ್ವ?
ಕ.ಮ: ಇಲ್ಲಪ್ಪ ,ನಂಬ್ಲಿಕ್ಕಾಗ್ತಿಲ್ಲ.
ಕಮಾ: ನೋಡು, ನಿಂಗೀಗ ಹತ್ತು ವರ್ಷ. ನೀನು ಇಷ್ಟರ ವರೆಗೆ ತಿಂದ ಅನ್ನ ಎಷ್ಟಾಗಿರ್ಬಹುದು ಗೊತ್ತಾ? ಕಡಿಮೆ ಎಂದರೆ ಒಂದು ಗಾಡಿ ಆಗ್ಬಹುದು. (ನಗುತ್ತಾನೆ)
ಕ.ಮ: ಒಂದು ಗಾಡಿ!
ಕಮಾ: ಹೌದು ಒಂದು ಗಾಡಿ. ನನ್ನಷ್ಟು ಪ್ರಾಯವಾಗುವಾಗ ನೀನು ಊಟ ಮಾಡಿದ ಅನ್ನ ಒಟ್ಟು ಐವತ್ತು ಗಾಡಿಯಾಗುತ್ತದೆ. (ನಕ್ಕು) ನೋಡು, ಈ ಊರಿನಲ್ಲಿ ಇರುವುದು ನಾನೊಬ್ಬನೇ ಕಮಾರ. ನಲ್ವತ್ತು ವರ್ಷಗಳಿಂದ ನಾನು ದಿನಾ ಕತ್ತಿಗಳನ್ನ ಮಾಡ್ತಾ ಇದ್ದೇನೆ. ಈ ಊರಿನಲ್ಲಿ ಹತ್ತು ಸಾವಿರ ಮನೆಗಳಿವೆ. ಪ್ರತಿಯೊಂದು ಮನೆಯಲ್ಲಿಯೂ ಕಡಿಮೆ ಎಂದರೆ ಒಂದು ಕತ್ತಿಯಾದರೂ ಇದೆ. ಕೆಲವು ಮನೆಗಳಲ್ಲಿ ಮೂರ್ನಾಲ್ಕಿರ್ತವೆ.
(ಕಮಾರನ ಮಗ ಬೆರಳುಗಳನ್ನು ಉಪಯೊಗಿಸಿ ಮನಸ್ಸಿನಲ್ಲಿಯೆ ಗುಣಾಕಾರ ಮಾಡುತ್ತ್ತಾ ಇರುತ್ತಾನೆ. ಕಮಾರನ ಹೆಂಡತಿಯ ಪ್ರವೇಶ)
ಕ.ಹೆ: ರೀ, ನಿಮ್ಮನ್ನ ಕಾಣೋಕೆ ಯಾರೋ ಬಂದಿದ್ದಾರೆ.
ಕ.ಮ: (ಚಿಂತಿಸಿ)ಯಾರಿರಬಹುದು ಇಷ್ಟು ಬೆಳಿಗ್ಗೆ? (ಹೆಂಡತಿಯೊಡನೆ) ಯಾರು?
ಕ.ಹೆ: ಯಾರೋ ಗೊತ್ತಿಲ್ಲ.
ಕಮಾ: ಹೆಸರು ಕೇಳ್ಳಿಲ್ವ ನೀನು?
ಕ.ಹೆ: ಕೇಳಿದೆ. ರಾಜದೂತ ಅಂತಂದ.
ಕಮಾ: ರಾಜದೂತ!
(ಕಮಾರನ ಮಗ ಬೆರಗಿನಿಂದ ನೋಡುತ್ತಾನೆ. ಕಮಾರನ ಕೈಕಾಲು ಕೆಲಸ ಎಲ್ಲಾ ಸ್ತಬ್ಧ. )
ಕ.ಹೆ: ರಾಜದೂತ ಅಂದ್ರೆ ಯಾರು?
ಕಮಾ: (ತಲೆ ಬಡಿದುಕೊಳ್ಳುತ್ತಾ) ಅಷ್ಟೂ ಗೊತ್ತಿಲ್ವ ನಿಂಗೆ? (ಹಲ್ಲುಕಚ್ಚಿ, ತಗ್ಗಿದ ದನಿಯಲ್ಲಿ)ರಾಜದೂತ ಅಂದ್ರೆ ರಾಜನ ಅಪ್ಪ!
ಕ.ಹೆ: (ದೊಡ್ಡ ದನಿಯಲ್ಲಿ)ಏನು ರಾಜನ ಅಪ್ಪನೆ? (ಕಮಾರ ಟಪ್ಪನೆ ಅವಳ ಬಾಯಿಮುಚ್ಚಿದ್ದರಿಂದ ಅಪ್ ಎಂಬಲ್ಲಿಗೆ ಅವಳ ಮಾತು ನಿಲ್ಲುತ್ತದೆ. ಬಾಯಿ ಬಿಟ್ಟು)
ಕ.ಮ: ಅಪ್ಪಾ ರಾಜನಿಗೂ ಅಪ್ಪ ಇರ್ತಾನಾ?
ಕಮಾ: (ಭೀತನಾಗಿ) ಮುಚ್ಚುಬಾಯಿ! ಅಧಿಕಪ್ರಸಂಗಿ! (ಹೆಂಡತಿಯೊಡನೆ) ರಾಜದೂತರು ಇಬ್ರಿದ್ದಾರಾ?
ಕ.ಹೆ: ಇಲ್ಲ. ಒಬ್ಬನೇ.
ಕಮಾ: ಹಾಗಿದ್ರೆ ಗಂಡಾಂತರ ಇಲ್ಲ ಅಂತಾಯ್ತು. ಅಬ್ಬ ಬದುಕಿದೆ!
ಕ.ಹೆ: ಯಾಕೆ? ಇಬ್ರಿದ್ರೆ ಏನು ವ್ಯತ್ಯಾಸ?
ಕಮಾ: ಒಬ್ರಿದ್ರೆ ಮಾತ್ರ ದೂತ ಅಂತ ಅರ್ಥ. ಇಬ್ರಿದ್ರೆ ಯಮದೂತರು ಅಂಥ ಅರ್ಥ.
ಕ.ಹೆ: (ಆಶ್ಚರ್ಯದಿಂದ) ಹೌದಾ?
(ಕಮಾರ ಎದ್ದು ಹೊರಡುವಷ್ಟರಲ್ಲಿ ರಾಜದೂತ ಅಲ್ಲಿಗೇ ಬಂದುಬಿಡುತ್ತಾನೆ)
ದೂತ: ನಮಸ್ಕಾರ ಕಮಾರಶ್ರೇಷ್ಠರಿಗೆ.
ಕಮಾ: ನಮಸ್ಕಾರ ರಾಜದೂತಶ್ರೇಷ್ಠರಿಗೆ. ಏನು ಸಮಾಚಾರ?
ದೂತ: ಮಹಾರಾಜರಿಂದ ಅಪ್ಪಣೆಯಾಗಿದೆ.
ಕಮಾ: (ಭಯದಿಂದ ತೊದಲುತ್ತಾ) ಏನ್-ಏನಪ್ಪಣೆ?
ದೂತ: ಅರಮನೆಗೆ ಬರಬೇಕಂತೆ.
ಕಮಾ: ಯಾಕೆ?
ದೂತ: ನನಗೇನು ಗೊತ್ತು? ಕರ್ಕೊಂಡು ಬಾ ಅಂತ ಮಹಾರಾಜರು ಅಪ್ಪಣೆ ಮಾಡಿದ್ರೆ ಯಾಕೆ ಅಂತ ಕೇಳೋಕಾಗುತ್ತಾ?
ಕಮಾ: ನಿಜ. ಕೇಳೋಕಾಗಲ್ಲ.
ದೂತ: ಸರಿ ಬೇಗನೆ ಹೊರಡು.
ಕ.ಮ: ನಾನಿನ್ನೂ ತಿಂಡಿ ತಿಂದಿಲ್ಲ.
ದೂತ: ಅದಕ್ಕೆಲ್ಲಾ ಪುರುಸೋತ್ತಿಲ್ಲ.
ಕ.ಹೆ: (ವಿನಯದಿಂದ) ಇಡ್ಲಿ ಸಿದ್ಧವಾಗಿದೆ ಯಮದೂತರೆ. ಕ್ಷಮಿಸಿ. ರಾಜದೂತರೆ, ಚಟ್ನಿಯೊಂದು ಅರೆದುಬಿಟ್ಟರಾಯ್ತು. ನೀವು ಕೂಡ ತಿಂಡಿ ತಿಂದುಕೊಂಡು ಹೋಗಿ.
ದೂತ: (ಸಂತುಷ್ಟನಾಗಿ) ಹಾಗಾದ್ರೆ ಸರಿ.
ಕ.ಹೆ: (ಮಗನೊಡನೆ) ಏಯ ಕಿಟ್ಟು, ತೋಟದಿಂದ ಎರಡು ತುಂಡು ಎಲೆ ತಾ.
ಕಿಟ್ಟು : ಆಯ್ತಮ್ಮ. (ಟಪ್ಪನೆ ಎದ್ದು ಓಡುತ್ತಾನೆ)
ಕ.ಹೆ: (ರಾಜದೂತನೊಡನೆ) ನೀವು ಕೈಕಾಲು ತೊಳೆದುಕೊಂಡು ಬನ್ನಿ.
ದೂತ: ಆಗಲಿ. (ನಿರ್ಗಮನ)
ಕಮಾ: ನನ್ನ ಕೋಟು ಒಗೆದಿದ್ದೀಯ?
ಕ.ಹೆ: ಇಲ್ಲರೀ. ಮೊನ್ನೆ ಡೀಕಯ್ಯ ಗೌಡ್ರ ಮಗಳ ಮದುವೆಗೆ ಹಾಕ್ಕೊಂಡು ಹೋಗಿದ್ರಲ್ಲಾ , ಇನ್ನೂ ಒಗೀಲಿಲ್ಲ.
ಕಮಾ: ಪರ್ವಾಗಿಲ್ಲ. ಕೋಟಲ್ವೆ, ಎರಡು ವರ್ಷಕ್ಕೆ ಒಂದ್ಸಲ ಒಗೆದ್ರೆ ಸಾಕು.
ಕ.ಹೆ: ಆದ್ರೆ ಅದ್ರ ಹೊಲಿಗೆಗಳೆಲ್ಲ ಅಲ್ಲಲ್ಲಿ ಬಿಟ್ಟುಕೊಂಡಿವೆ. ಮಹಾರಾಜರ ಕಾಲಿಗೆ ಬೀಳುವಾಗ ಜಾಗ್ರತೆ ಮಾಡಿ. ಹೊಲಿಗೆ ಪೂರ್ತಿ ಬಿಚ್ಚಿಕೊಂಡೀತು ಮತ್ತೆ!
(ದೂತ ಕೈ ಒರಸಿಕೊಂಡು ಒಳಬರುತ್ತಾನೆ ಮಣೆಯ ಮೇಲೆ ಕಮಾರ, ದೂತ ಮತ್ತು ಕಮಾರನ ಮಗ ತಿಂಡಿ ತಿನ್ನಲು ಕುಳಿತುಕೊಳ್ಳುತ್ತಾರೆ. ತಿಂಡಿ ತಿನ್ನುತ್ತಿರುವಾಗ)
ಕಮಾ: ದೂತಶ್ರೇಷ್ಠರೆ, ಹೀಗೆ ಕೇಳುತ್ತಿದ್ದೇನೆ ಎಂದು ಸಿಟ್ಟಾಗಬೇಡಿ. ಸತ್ಯಕ್ಕೂ ನಿಮಗೆ ಗೊತ್ತಿಲ್ಲವೆ?
ದೂ: ಏನು?
ಕಮಾ: ಮಹಾರಾಜರು ನನ್ನನ್ನು ಬರಹೇಳಿರುವುದು ಯಾಕೆ ಎಂದು?
ದೂ: ಗೊತ್ತಿದೆ.
ಕಮಾ: (ಅತೀವ ಕುತೂಹಲದಿಂದ) ಹಾಗಾದರೆ ಹೇಳಿಬಿಡಿ. ನೀವು ಹೇಳಿದಿರಿ ಅಂತ ನಾವು ಯಾರಿಗೂ ಹೇಳುವುದಿಲ್ಲ.
ಕ.ಹೆ: ಇನ್ನೊಂದು ಇಡ್ಲಿ ಹಾಕಲೆ?
ದೂ: ಹಾಕಿ. ಸ್ವಲ್ಪ ಚಟ್ನಿ ಕೂಡ ಹಾಕಿ. (ನಕ್ಕು) ತಲೆಹೋಗುವಂತಹ ವಿಚಾರವೇನೂ ಇಲ್ಲ ಕಮಾರ ಶ್ರೇಷ್ಠರೆ. ಮಹಾರಾಜರು ನಿನಗೆ ಏನೋ ಮಹತ್ವದ ಕೆಲಸ ಕೊಡುವವರಿದ್ದಾರೆ.
ಕಮಾ: ಏನಿರಬಹುದು? (ಯೊಚಿಸುತ್ತಾನೆ)
ದೂ: ಕೋಟೆಯ ಮಹಾದ್ವಾರದ ಬಿಜಾಗರಿಗಳಿಗೆ ತುಕ್ಕು ಹಿಡಿದಿದೆ. ಹೊಸ ಬಿಜಾಗರಿ ತಯಾರಿಸಲಿಕ್ಕಿರಬಹುದು.
ಕಮಾ: ಹಾಗೊ? (ಸಂತೋಷದಿಂದ ಹಿಗ್ಗುತ್ತಾನೆ. ತಿಂಡಿ ಮುಗಿಸಿ, ಬಿಸಿಯಾದ ಚಹವನ್ನು ನಾಲಿಗೆ ಸುಟ್ಟುಕೊಳ್ಳುತ್ತಾ ವೇಗವಾಗಿ ಕುಡಿದು ಮುಗಿಸುತ್ತಾನೆ. ಕಮಾರನ ಮಗ ದೂತನಿಗೆ ಕೈ ತೊಳೆಯಲು ನೀರಿನ ತಂಬಿಗೆ ಕೊಡುತ್ತಾನೆ. ಕಮಾರ ಹೆಂಡತಿಯೊಡನೆ) ಎಲ್ಲಿದೆ ನನ್ನ ಕೋಟು? (ಹೆಂಡತಿ ಕೋಟು ತಂದು ತೊಡಿಸುತ್ತಾಳೆ. ದೂತನ ಜೊತೆ ಹೊರಡುತ್ತಾನೆ) ಮನೆಯ ಮೆಟ್ಟಲಿಳಿಯುವಾಗಲೇ ಕಮಾರ ಹಾಡತೊಡಗುತ್ತಾನೆ)
ಕರೆ ಬಂದಿದೆ ನನಗೆ ಮಹಾರಾಜರಿಂದ ಕರೆ ಬಂದಿದೆ
ದೊಡ್ಡ ಕೆಲಸದ ಕರೆ ನನಗೆ ಮಾತ್ರ ಕರೆ
ಕರೆ ಬಂದಿದೆ ನನಗೆ ಮಹಾರಾಜರಿಂದ
ಶುಭಾಶಯಗಳನ್ನು ಕೋರಿರಿ ನನಗೆ
ನೀವೆಲ್ಲಶುಭಾಶಯ
(ಬೀದಿಯ ಎರಡು ಕಡೆಯಿಂದ ಜನರು ಜೋರಾಗಿ ಕೂಗಿ ಪ್ರತಿಕ್ರಿಯಿಸುತ್ತಾರೆ)
ಜನ: ಶುಭಾಶಯ ಕಮಾರಶಿರೋಮಣಿಗೆ ಶುಭಾಶಯ
ಶುಭಾಶಯ ಶುಭಾಶಯ ಶುಭಾಶಯ
ಶುಭಾಶಯ ಕಮಾರಶಿರೋಮಣಿಗೆ ಶುಭಾಶಯ
ಫೇಡ್ ಔಟ್
ದೃಶ್ಯ ಎರಡು: ಅರಮನೆ
(ರಾಜ ಎತ್ತರದ ಕುರ್ಚಿಯಲ್ಲಿ ಕುಳಿತಿದ್ದಾನೆ. ಪಕ್ಕದಲ್ಲಿ ತಗ್ಗಿನ ಕುರ್ಚಿಯಲ್ಲಿ ಮಂತ್ರಿ. ದೂತನ ಜೊತೆಯಲ್ಲಿ ಬಂದ ಕಮಾರ ರಾಜನಿಗೆ ತಲೆ ಬಾಗಿ ವಂದಿಸುತ್ತಾನೆ. ದೂತನ ನಿರ್ಗಮನ)
ಕಮಾ: ಪ್ರಣಾಮಗಳು ಮಹಾಪ್ರಭು.
ರಾಜ: ಹೂಂ. ಕ್ಷೇಮವೇ ಕಮಾರಶ್ರೇಷ್ಠ?
ಕಮಾ: ತಮ್ಮ ದಯೆಯಿಂದ ಕ್ಷೇಮವಾಗಿದ್ದೇನೆ ಮಹಾಪ್ರಭು.
ರಾಜ: ನಿನ್ನಿಂದ ಒಂದು ಮುಖ್ಯವಾದ ಕೆಲಸವಾಗಬೇಕಾಗಿದೆ ಕಮಾರ.
ಕಮಾ: ಅಪ್ಪಣೆಯಾಗಲಿ ಮಹಾಪ್ರಭು.
ರಾಜ: ನೀನು ಕಬ್ಬಿಣದಿಂದ ಹತ್ತು ಅಡಿ ಎತ್ತರದ ಒಂದು ಮನುಷ್ಯನನ್ನು ತಯಾರು ಮಾಡಿಕೊಡಬೇಕು. ಅದಕ್ಕೆ ಬೇಕಾದಷ್ಟು ಕಬ್ಬಿಣ ಸಿದ್ಧವಿದೆ.
ಕಮಾ: ಅಪ್ಪಣೆ ಮಹಾಪ್ರಭು (ಬೆರಗು, ಅಧಿರತೆ)
ರಾಜ: ಬರೀ ಮನುಷ್ಯನಲ್ಲ. ಉಸಿರಾಡುವ ಮನುಷ್ಯ. ರಕ್ತ ಮಾಂಸಗಳಿರುವ ಮನುಷ್ಯ. ಅವನ ನರಗಳಲ್ಲಿ ರಕ್ತ ಹರೀಬೇಕು. ಅವ್ನು ನಡೀಬೇಕು ಓಡ್ಬೇಕು, ಹಾಡ್ಬೇಕು. ಮಾತ್ರವಲ್ಲ, ಅವನು ಯೊಚಿಸ್ಬೇಕು. ನಮ್ಮ ಸಮಸ್ಯೆಗಳಿಗೆ ಪರಹಾರ ಸೂಚಿಸ್ಬೇಕು.
ಕಮಾ: (ಭಯದಿಂದ ಬಹಳ ತೊದಲುತ್ತಾ) ಮಹಾಪ್ರಭು.
ರಾಜ: ಸಾಧ್ಯವಿದೆಯೆ ಇಲ್ಲವೆ ಹೇಳು.
ಕಮಾ: (ತೊದಲುತ್ತಾ, ನಡುಗುತ್ತಾ) ಸಾಧ್ಯ.. ಇದೆ.. ಮಹಾ…ಪ್ರಭು.
ರಾಜ: ಒಂದು ತಿಂಗಳೊಳಗೆ ಮನುಷ್ಯ ಸಿದ್ಧವಾಗಬೇಕು.
ಕಮಾ: ಮಹಾಪ್ರಭು.
ರಾಜ: (ಆಜ್ಞಾಪಿಸುವ ಸ್ವರದಲ್ಲಿ) ಹಾಗಂದರೇನು? ಮಾಡುತ್ತೀಯ ಇಲ್ವ?
ಕಮಾ: (ತೊದಲುತ್ತಾ)ಮಾಡುತ್ತೇನೆ ಮಹಾಪ್ರಭು.
ರಾಜ: ಸರಿ. ನೀನಿನ್ನು ಹೊರಡಬಹುದು. ನಿನ್ನ ಹಿಂದೆಯೆ ಗಾಡಿಯಲ್ಲಿ ಕಬ್ಬಿಣ ಬರುತ್ತದೆ.
ಕಮಾ: ಅಪ್ಪಣೆ ಮಹಾಪ್ರಭು.
ಫೇಡ್ ಔಟ್
ದೃಶ್ಯ ಮೂರು: ಕಮಾರನ ಮನೆ
(ಕಮಾರನ ಹೆಂಡತಿ ಮತ್ತು ಮಗ. ಚಿಂತಾಕ್ರಾಂತನಾದ ಕಮಾರನ ಪ್ರವೇಶ)
ಕ.ಹೆ: ಏನಾಯ್ತು? ಮಹಾರಾಜರು ಕರೆಸಿದ್ದು ಯಾಕೆ? ಯಾಕೆ ಇಷ್ಟೊಂದು ಸೊರಗಿಬಿಟ್ಟಿದ್ದೀರಿ?
ಕಮಾ: ಸೊರಗುವುದಲ್ಲ. ಎದೆಯೊಡೆದುಹೋಗದ್ದು ದೇವರ ದಯೆ ಎನ್ನು.
ಕ.ಹೆ: ಯಾಕೆ? ಏನಾಯ್ತು?
ಕಮಾ: ನೇಣು!
ಕ.ಹೆ: ಎಲ್ಲಿ?ಯಾರಿಗೆ?
ಕಮಾ: (ಮೇಲಕ್ಕೆ ತೋರಿಸಿ) ಅಲ್ಲಿ!
(ತಾಯಿ ಮಗ ಮೇಲಕ್ಕೆ ನೋಡುತ್ತಾರೆ)
ಕ.ಹೆ: ಎಲ್ಲಿ?
ಕಮಾ: (ತನ್ನ ಕತ್ತು ತೋರಿಸಿ) ಸ್ವಲ್ಪ ಹೊತ್ತಿ ಬಳಿಕ ಇಲ್ಲಿ!
ಕ.ಹೆ.: ನನಗೇನೂ ಅರ್ಥವಾಗ್ತಿಲ್ಲ.
ಕಮಾ: ಹತ್ತಡಿ ಎತ್ತರದ ಒಂದು ಕಬ್ಬಿಣದ ಮನುಷ್ಯನನ್ನು ಮಾಡಿಕೊಡಬೇಕೆಂದು ಮಹಾರಾಜರು ಅಪ್ಪಣೆ ಮಾಡಿದ್ದಾರೆ.
ಕ.ಹೆ: ಅದಕ್ಕೇನು? ಮಾಡಬಹುದಲ್ಲ? ಎಷ್ಟು ಸಮಯ ಕೊಟ್ಟಿದ್ದಾರೆ?
ಕಮಾ: ಬರೀ ಮನುಷ್ಯ ಅಲ್ಲ. ಜೀವಂತ ಮನುಷ್ಯ! ಉಸಿರಾಡುವ ಕಬ್ಬಿಣದ ಮನುಷ್ಯ!
ಕ.ಹೆ: (ಪರಮಾಶ್ಚರ್ಯಭರಿತಳಾಗಿ)ಉಸಿರಾಡುವ ಕಬ್ಬಿಣದ ಮನುಷ್ಯ!
ಕಮಾ: ಹೌದು ಒಂದು ತಿಂಗಳಲ್ಲಿ ಸಿದ್ಧವಾಗಬೇಕು. ಇಲ್ಲದಿದ್ದರೆ ಮಹಾರಾಜರು ನನ್ನ ಜೀವ ತೆಗೆಯುತ್ತಾರೆ.
ಕ.ಹೆ: (ದು:ಖಿಸುತ್ತಾ) ನೀವ್ಯಾಕೆ ಒಪ್ಪಿಕೊಂಡ್ರಿ?
ಕಮಾ: ಒಪ್ಪಿಕೊಳ್ಳುವ ಮಾತೆಲ್ಲಿ? ಇದು ರಾಜನ ಆಜ್ಞೆ.
ಕ.ಮ: ಏನಪ್ಪಾ, ಉಸಿರಾಡುವ ಕಬ್ಬಿಣದ ಮನುಷ್ಯನೆ? ಆಗುತ್ತಾ ಮಾಡೋಕೆ?
ಕಮಾ: ಆಗುತ್ತೆ. ನಾನೇ ಕಬ್ಬಿಣದ ಮನುಷ್ಯ ಆಗ್ಬೇಕು! (ತಲೆಗೆ ಕೈಹೊತ್ತು ಕುಳಿತುಕೊಳ್ಳುತ್ತಾನೆ)
ಕ.ಹೆ: ಈಗೇನು ಈ ಸಮಸ್ಯೆಗೆ ಪರಿಹಾರ?
ಕಮಾ: ನಂಗೆ ತಿಳೀತಿಲ್ಲ. ನಿಂಗೆ ತಿಳಿದಿದ್ರೆ ಹೇಳು
ಕ.ಹೆ: ನಂಗೇನೂ ತಿಳೀತಿಲ್ಲ. ಯಾರಾದರೂ ಪಂಡಿತರ ಬಳಿ ಕೇಳಿ. ಏನಾದ್ರೂ ಪರಿಹಾರ ಹೇಳಿಯಾರು.
ಕ.ಮ: ಇಂಥ ಸಮಸ್ಯೆಗೆಲ್ಲಾ ಪಂಡಿತರುಗಳ ಹತ್ರ ಪರಿಹಾರ ಇರುತ್ತಾ?
ಕ.ಹೆ: ಸತ್ತ ಮನುಷ್ಯನನ್ನು ಮಂತ್ರದಿಂದ ಬದುಕಿಸ್ತಾರೆ ಅಂತ ಕತೆಗಳಲ್ಲಿದೆಯಲ್ಲಾ ? ಪಂಡಿತರಿಗೆ ಅಂಥ ಮಂತ್ರವೇನಾದ್ರೂ ಗೊತ್ತಿರ್ಬಹುದು. (ಒಂದು ಭಾರೀ ಗಾಡಿ ಬಂದು ನಿಂತ ಶಬ್ದ.ಗಾಬರಿಯಿಂದ) ಅದೇನು ಶಬ್ದ?
ಕಮಾ: ಉಸಿರಾಡುವ ಮನುಷ್ಯನನ್ನು ತಯಾರಿಸಲು ಬೇಕಾದ ಕಬ್ಬಿಣದ ಶಬ್ದ!
ಕ.ಹೆ: ಅಬ್ಬಾ! ಅದರ ಶಬ್ದಕ್ಕೆ ನನ್ನ ಉಸಿರೇ ನಿಂತ ಹಾಗಾಯ್ತು!
ಫೇಡ್ ಔಟ್
ದೃಶ್ಯ ನಾಲ್ಕು: ಪಂಡಿತನ ಮನೆ
(ಪಂಡಿತ ಭಾರೀ ಗಾತ್ರದ ಪುಸ್ತಕವನ್ನು ಓದುತ್ತಿದ್ದಾನೆ. ಕಮಾರನ ಪ್ರವೇಶ)
ಕಮಾ: ಪ್ರಣಾಮಗಳು ಪಂಡಿತಶ್ರೇಷ್ಠರಿಗೆ.
ಪಂ: ಬನ್ನಿ ಬನ್ನಿ ಕಮಾರ ಶ್ರೇಷ್ಠರೆ. ಏನು ವಿಶೇಷ?
ಕಮಾ: ಒಂದು ದೊಡ್ಡ ಸಮಸ್ಯೆ ಎದುರಾಗಿದೆ ಪಂಡಿತರೆ.
ಪಂ: ಎದುರಿಗೆ ಆಗಿರುವ ಸಮಸ್ಯೆಗೆ ಹಿಂದಿನಿಂದ ಬಡೀಬೇಕು! ಏನು ಸಮಸ್ಯೆ?
ಕಮಾ: ಮಹಾರಾಜರು ಒಂದು ಜೀವಂತ ಕಬ್ಬಿಣದ ಮನುಷ್ಯನನ್ನು ಮಾಡಿಕೊಡಬೇಕೆಂದು ಅಪ್ಪಣೆ ಮಾಡಿದ್ದಾರೆ.
ಪಂ: ಮಹಾರಾಜರು ಮಾಡಿಕೊಡಬೇಕೆಂದ ಮೇಲೆ ಮಾಡಿಕೊಡಲೇ ಬೇಕು.
ಕಮಾ: ಇಲ್ಲದಿದ್ರೆ ತಲೆ ಹೋಗುತ್ತದೆ.
ಪಂ: ಹೌದು ಖಂಡಿತ ಹೋಗುತ್ತದೆ.
ಕಮಾ: ತಲೆಯನ್ನು ಉಳಿಸಿಕೊಳ್ಳಬೇಕು. ತಾವು ದಯಮಾಡಿ ಈ ಸಮಸ್ಯೆಗೆ ಪರಿಹಾರ ಹೇಳಿ.
ಪಂ: ಇಲ್ಲಿಗೆ ಬರುವ ಮೊದಲು ಬೇರೆ ಎಲ್ಲಿಗಾದರೂ ಹೋಗಿಲ್ವ?
ಕಮಾ: ಹೆಂಡತಿಯ ಹತ್ತಿರ ಹೇಳಿದೆ. ಅವಳು ತಮ್ಮ ಬಳಿ ಹೋಗಲು ಹೇಳಿದಳು.
ಪಂ: ನನಗೆ ಏನೂ ಕಾಣಿಸುತ್ತಿಲ್ಲ. ನೀನು ವಿಜ್ಞಾನಿಶ್ರೇಷ್ಠನ ಬಳಿ ಹೋಗು.
ಫೇಡ್ ಔಟ್
ದೃಶ್ಯ ಐದು: ವಿಜ್ಞಾನಿಯ ಮನೆ
(ವಿಜ್ಞಾನಿ ಯಾವುದೋ ಪ್ರಯೊಗದಲ್ಲಿದ್ದಾನೆ. ಕಮಾರನ ಪ್ರವೇಶ)
ಕಮಾ: ಪ್ರಣಾಮಗಳು ವಿಜ್ಞಾನಿಶ್ರೇಷ್ಠರಿಗೆ.
ವಿ: ಬನ್ನಿ ಬನ್ನಿ ಕಮಾರ ಶ್ರೇಷ್ಠರೆ. ಏನು ವಿಶೇಷ?
ಕಮಾ: ಒಂದು ದೊಡ್ಡ ಸಮಸ್ಯೆ ತಲೆ ತಿನ್ತಾ ಇದೆ ವಿಜ್ಞಾನಿಶ್ರೇಷ್ಠರೆ.
ವಿ: ತಲೆ ತಿನ್ತಿರುವ ಸಮಸ್ಯೆಯ ತಲೆ ಎಲ್ಲಿದೆ ಅಂತ ಕಂಡುಹಿಡೀಬೇಕು. ಏನು ಸಮಸ್ಯೆ?
ಕಮಾ: ಮಹಾರಾಜರು ಒಂದು ಜೀವಂತ ಕಬ್ಬಿಣದ ಮನುಷ್ಯನನ್ನು ಮಾಡಿಕೊಡಬೇಕೆಂದು ಅಪ್ಪಣೆ ಮಾಡಿದ್ದಾರೆ.
ವಿ: ಮಹಾರಾಜರು ಮಾಡಿಕೊಡಬೇಕೆಂದ ಮೇಲೆ ಮಾಡಿಕೊಡಲೇ ಬೇಕು.
ಕಮಾ: ಇಲ್ಲದಿದ್ರೆ ತಲೆ ಹೋಗುತ್ತದೆ.
ವಿ: ಹೌದು ಖಂಡಿತ ಹೋಗುತ್ತದೆ.
ಕಮಾ: ತಲೆಯನ್ನು ಉಳಿಸಿಕೊಳ್ಳಬೇಕು. ತಾವು ದಯಮಾಡಿ ಈ ಸಮಸ್ಯೆಗೆ ಪರಿಹಾರ ಹೇಳಿ.
ವಿ: ಇಲ್ಲಿಗೆ ಬರುವ ಮೊದಲು ಬೇರೆ ಎಲ್ಲಿಗಾದರೂ ಹೋಗಿಲ್ವ?
ಕಮಾ: ಹೆಂಡತಿಯ ಹತ್ತಿರ ಹೇಳಿದೆ. ಅವಳು ಪಂಡಿತರ ಬಳಿ ಹೋಗಲು ಹೇಳಿದಳು. ಪಂಡಿತರು ನಿಮ್ಮ ಬಳಿ ಹೋಗಲು ಹೇಳಿದರು.
ವಿ: ನನಗೆ ಏನೂ ಕಾಣಿಸುತ್ತಿಲ್ಲ. ನೀನು ಕವಿಶ್ರೇಷ್ಠನ ಬಳಿ ಹೋಗು.
ಫೇಡ್ ಔಟ್
ದೃಶ್ಯ ಆರು: ಕವಿಯ ಮನೆ
(ಕವಿ ಹಾಡುತ್ತಾ ಕವಿತೆ ಬರೆಯುತ್ತಿದ್ದಾನೆ. ಕಮಾರನ ಪ್ರವೇಶ)
ಕಮಾ: ಪ್ರಣಾಮಗಳು ಕವಿಶ್ರೇಷ್ಠರಿಗೆ.
ಕವಿ: ಬನ್ನಿ ಬನ್ನಿ ಕಮಾರ ಶ್ರೇಷ್ಠರೆ. ಏನು ವಿಶೇಷ?
ಕಮಾ: ಒಂದು ದೊಡ್ಡ ಸಮಸ್ಯೆ ಪ್ರಾಣ ಹಿಂಡ್ತಾ ಇದೆ ಕವಿಶ್ರೇಷ್ಠರೆ.
ಕವಿ: ಹಿಂಡಲೇಕೆ ಸಮಸ್ಯೆ ಪ್ರಾಣಅದಕುಂಟೊಂದು ರಾಮಬಾಣ
ಕಂಡುಕೊಂಡವನೇ ಜಾಣ ಕಾಣದವನು ಬರೀ ಕೋಣ
ಏನು ಸಮಸ್ಯೆ?
ಕಮಾ: ಮಹಾರಾಜರು ಒಂದು ಜೀವಂತ ಕಬ್ಬಿಣದ ಮನುಷ್ಯನನ್ನು ಮಾಡಿಕೊಡಬೇಕೆಂದು ಅಪ್ಪಣೆ ಮಾಡಿದ್ದಾರೆ.
ಕವಿ: ಮಹಾರಾಜರು ಮಾಡಿಕೊಡಬೇಕೆಂದ ಮೇಲೆ ಮಾಡಿಕೊಡಲೇ ಬೇಕು.
ಕಮಾ: ಇಲ್ಲದಿದ್ರೆ ತಲೆ ಹೋಗುತ್ತದೆ.
ಕವಿ: ಹೌದು ಖಂಡಿತ ತಲೆ ಹೋಗುತ್ತದೆ.
ಕಮಾ: ತಲೆಯನ್ನು ಉಳಿಸಿಕೊಳ್ಳಬೇಕು. ತಾವು ದಯಮಾಡಿ ಈ ಸಮಸ್ಯೆಗೆ ಪರಿಹಾರ ಹೇಳಿ.
ಕವಿ: ಇಲ್ಲಿಗೆ ಬರುವ ಮೊದಲು ಬೇರೆ ಎಲ್ಲಿಗಾದರೂ ಹೋಗಿಲ್ವ?.
ಕಮಾ: ಹೆಂಡತಿಯ ಹತ್ತಿರ ಹೇಳಿದೆ. ಅವಳು ಪಂಡಿತರ ಬಳಿ ಹೋಗಲು ಹೇಳಿದಳು. ಪಂಡಿತರು ವಿಜ್ಞಾನಿಯ ಬಳಿ ಹೋಗಲು ಹೇಳಿದರು. ವಿಜ್ಞಾನಿಗಳು ನಿಮ್ಮ ಬಳಿ ಹೋಗಲು ಹೇಳಿದರು.
ಕವಿ: ನನಗೆ ಏನೂ ಕಾಣಿಸುತ್ತಿಲ್ಲ. ನೀನು ಯಾವುದಾದರೂ ಹುಚ್ಚನ ಬಳಿ ಹೋಗು.
ಕಮಾ: (ಆಶ್ಚರ್ಯದಿಂದ)ಹುಚ್ಚನ ಬಳಿ?
ಫೇಡ್ ಔಟ್
ದೃಶ್ಯ ಏಳು: ಬೀದಿಯ ಪಕ್ಕ
(ಹುಚ್ಚ ಒಂದು ಪೇಪರನ್ನು ತಲೆಕೆಳಗಾಗಿ ಹಿಡಿದುಕೊಂಡು ಓದುತ್ತಿರುವಂತೆಯೆ ಹಾಡುತ್ತಿದ್ದಾನೆ. ನಡುನಡುವೆ ಒಂದು ಸೇಬು ಹಣ್ಣನ್ನು ತಿನ್ನುತ್ತಿದ್ದಾನೆ. ಕಮಾರನ ಪ್ರವೇಶ)
ಕಮಾ: ಆಶ್ಚರ್ಯ! ಎಂಥ ಹುಚ್ಚ ಇವನು? ತಿನ್ನುವುದು, ಓದುವುದು, ಹಾಡುವುದು ಮೂರು ಕೆಲಸಗಳನ್ನು ಒಟ್ಟಿಗೇ ಮಾಡುತ್ತಿದ್ದಾನೆ! ಇಂಥವನು ಹುಚ್ಚನೆ? ಪ್ರಣಾಮಗಳು ಹುಚ್ಚಶ್ರೇಷ್ಠರಿಗೆ.
ಹುಚ್ಚ: ಪ್ರ-ನಾಮ-ಗಲ್ಲು! (ನಗುತ್ತಾನೆ. ಒಂದು ಹಣ್ಣು ತೆಗೆದುಕೊಟ್ಟು ತಿನ್ನಲು ಸೂಚಿಸುತ್ತಾನೆ)
ಕಮಾ: (ಹಣ್ಣು ತಿನ್ನುತ್ತಾ) ಒಂದು ಸಮಸ್ಯೆ ನನ್ನನ್ನು ಸುತ್ತಿಕೊಂಡಿದೆ ಹುಚ್ಚಶ್ರೇಷ್ಠರೆ. ಅದಕ್ಕೊಂದು ಪರಿಹಾರ ಹೇಳಿ.
ಹುಚ್ಚ: ಸಮ ಸಮ ಸಮ! ಸ್ಯೆ ಸ್ಯೆ ಸ್ಯೆ! (ನಕ್ಕು, ಏನು ಎಂದು ಕೇಳುವಂತೆ ಕೈ ಸಂಜ್ಞೆ ಮಾಡುತ್ತಾನೆ)
ಕಮಾ: ಮಹಾರಾಜರು ಒಂದು ಜೀವಂತ ಕಬ್ಬಿಣದ ಮನುಷ್ಯನನ್ನು ಮಾಡಿಕೊಡಬೇಕೆಂದು ಅಪ್ಪಣೆ ಮಾಡಿದ್ದಾರೆ.
ಹುಚ್ಚ: ಮನುಷ್ಯ! (ನಗು) ಕಬ್ಬಿಣ! (ನಗು) ಜೀವ! (ಜೋರಾಗಿ ನಗು)
ಕಮಾ: ಹೌದು ಹೌದು. ಜೀವವಿರುವ ಕಬ್ಬಿಣದ ಮನುಷ್ಯ.
ಹುಚ್ಚ: ಮಹಾರಾಜ ಮಹಾ ಹುಚ್ಚ! (ಕಮಾರ ಗಾಬರಿಗೊಂಡು ಸುತ್ತ ಮುತ್ತ ನೋಡುತ್ತಾನೆ). ಬೇಕು ಸಾವಿರ ಗಾಡಿ ಇದ್ದಲು ವಿಶೇಷ ! ಪ್ರಜೆಗಳ ಕೂದಲಿನಿಂದ! ನೀರು ವಿಶೇಷ ನೂರು ಕೊಡ! ಪ್ರಜೆಗಳ ಕಣ್ಣೀರು! (ಒಂದೇ ಸವನೆ ನಗು. ನಗು ನಿಲ್ಲುವುದೇ ಇಲ್ಲ)
ಕಮಾ: (ಆಲೋಚಿಸುತ್ತಾನೆ. ತಟ್ಟನೆ ಉತ್ತರ ಹೊಳೆದು ಪ್ರಫುಲ್ಲಿತನಾಗುತ್ತಾನೆ, ಹುಚ್ಚನ ನಗು ನಿಲ್ಲದಿರುವುದರಿಂದ, ಕೃತಜ್ಞತೆ ಹೇಳಲು ಅವಕಾಶವಾಗದೆ ಅವನ ನಗುವಿನೆಡೆಯಲ್ಲಿಯೆ) ಧನ್ಯವಾದಗಳು ಹುಚ್ಚಶ್ರೇಷ್ಠರೆ, ಧನ್ಯವಾದಗಳು! (ನಿರ್ಗಮನ)
ಫೇಡ್ ಔಟ್
ದೃಶ್ಯ ಎಂಟು: ಅರಮನೆ
(ರಾಜ ಕುರ್ಚಿಯಲ್ಲಿ ಕುಳಿತಿದ್ದಾನೆ. ಮಂತ್ರಿ ಮತ್ತು ಇತರರು)
ರಾಜ: ಏನು ಕಮಾರ? ಮನುಷ್ಯ ತಯಾರಾಗಿದ್ದಾನೆಯೆ?
ಕಮಾ: ಇಲ್ಲ ಮಹಾಪ್ರಭು. ಅದಕ್ಕೆ ಕೆಲವು ಸಾಮಗ್ರಿಗಳು ಬೇಕಾಗಿವೆ.
ರಾಜ: ಕಬ್ಬಿಣದ ಕೊರತೆಯೆ?
ಕಮಾ: ಕಬ್ಬಿಣದ ಕೊರತೆ ಅಲ್ಲ ಮಹಾಪ್ರಭು.
ರಾಜ: ಬೇರೇನು?
ಕಮಾ: ಅದಕ್ಕೆ ವಿಶೇಷವಾದ ಇದ್ದಲು ಬೇಕು ಮಹಾಪ್ರಭು.
ರಾಜ: ಎಂತಹ ಇದ್ದಲು?
ಕಮಾ: ಸಾವಿರ ಗಾಡಿ ಮನುಷ್ಯಕೇಶದ ಇದ್ದಲು ಬೇಕು ಮಹಾಪ್ರಭು.
ರಾಜ: ಸಾವಿರ ಗಾಡಿ! ಎಲ್ಲಿಂದ?
ಕಮಾ: ಅದಕ್ಕೆ ಇಡೀ ರಾಜ್ಯದ ಪ್ರಜೆಗಳ ತಲೆಯನ್ನು ಬೋಳಿಸಬೇಕಾಗುತ್ತದೆ. ಆ ಕೇಶವನ್ನು ಸುಟ್ಟು ಇದ್ದಲು ಮಾಡಬೇಕು ಮಹಾಪ್ರಭು. ಮತ್ತೆ….
ರಾಜ: ಮತ್ತೆ?
ಕಮಾ: ಹಾಗೆಯೆ ನೂರು ಕೊಡ ವಿಶೇಷವಾದ ನೀರು ಬೇಕು.
ರಾಜ: ವಿಶೇಷವಾದ ನೀರು ಅಂದರೆ?
ಕಮಾ: ಅಂದರೆ ಮನುಷ್ಯರ ಕಣ್ಣೀರು ಮಹಾಪ್ರಭು. ಇಡೀ ರಾಜ್ಯದ ಜನರಿಂದ ಅಷ್ಟು ಕಣ್ಣೀರು ಸಂಗ್ರಹಿಸಬಹುದು ಮಹಾಪ್ರಭು.
(ಕಮಾರನ ಮಾತುಗಳನ್ನು ಕೇಳಿ ಎಲ್ಲರೂ ಬೆರಗಾಗುತ್ತ್ತಾರೆ)
ರಾಜ: ಸರಿ ಅದಕ್ಕೆ ಏರ್ಪಾಡು ಮಾಡಲಾಗುವುದು. ಒಂದು ವಾರ ಕಳೆದು ಬಾ.
ಫೇಡ್ ಔಟ್
ದೃಶ್ಯ ಒಂಬತ್ತು: ಕಮಾರನ ಮನೆ
(ಕಮಾರನ ಹೆಂಡತಿ ಚಿಂತೆಯಿಂದ ಕುಳಿತಿದ್ದಾಳೆ. ಮಗ ಅವಳ ಮಡಿಲಲ್ಲಿ ತಲೆಯಿರಿಸಿ ಮಲಗಿದ್ದಾನೆ. ಕಮಾರನನ್ನು ಕಂಡು ಇಬ್ಬರೂ ಆತುರದಿಂದ ಎದ್ದುಬರುತ್ತಾರೆ)
ಕ.ಹೆ: ಏನಾಯ್ತು?
ಕಮಾ: ಏನೂ ಆಗಲಿಲ್ಲ.
ಕಮಾ: ನನ್ನ ಬೇಡಿಕೆಗಳನ್ನು ಮಹಾರಾಜರ ಮುಂದಿರಿಸಿದೆ. ಒಂದು ವಾರ ಬಿಟ್ಟು ಬರಲು ಹೇಳಿದ್ದಾರೆ.
ಕ.ಹೆ: ಒಂದು ವಾರ ಕಳೆದ ಮೇಲೆ ಏನಾಗುತ್ತೆ?
ಕಮಾ: ನೀನೊಬ್ಳು! ಏನಾಗುತ್ತೆ? ಇಡೀ ರಾಜ್ಯದ ಜನರ ತಲೆಗೂದಲಿನಿಂದ ಸಾವಿರ ಗಾಡಿ ಇದ್ದಲು ಆಗುತ್ತಾ? ಇಡೀ ರಾಜ್ಯದ ಜನರು ಕಣ್ಣೀರು ಸುರಿಸಿದ್ರೆ ನೂರು ಕೊಡ ಕಣ್ಣೀರಾಗುತ್ತಾ? (ನಗುತ್ತ್ತಾನೆ) ದೇವರೆ, ಹುಚ್ಚನ ಮೇಲೆ ನಿನ್ನ ದಯೆಯಿರಲಿ.
ಕ.ಹೆ: ಮಹಾರಾಜರು ಕಳಿಸಿರುವ ಕಬ್ಬಿಣವನ್ನೇನು ಮಾಡ್ತೀರಿ?
ಕಮಾ: ನಾನು ಮಾಡೋದೇನು? ಅವ್ರೇ ವಾಪಾಸು ಕೊಂಡ್ಹೋಗಿ ಜೀವವಿರುವ ಮನುಷ್ಯನನ್ನು ಮಾಡ್ಲಿ. (ನಗು)
ಕ.ಹೆ: ಈಗೇನು ಮಾಡ್ತೀರಿ?
ಕಮಾ: ಈಗ ಊಟ ಮಾಡಿ ನಿದ್ದೆ ಮಾಡೋದು.
ಕ.ಹೆ: ಅದು ಇದ್ದೇ ಇದೆಯಲ್ಲ? (ನಗು)
ಕಮಾ: ಬೇರೇನೂ ಇಲ್ದಿದ್ರೆ ಅದೇ ಇರೋದು.(ನಗು)
ಕ.ಮ: ನಂಗೂ ಅದೇ ಇರೋದು. ಬಡಿಸು. ಹಸಿವು!
ಫೇಡ್ ಔಟ್
ದೃಶ್ಯ ಹತ್ತು: ಅರಮನೆ
(ರಾಜ ಮತ್ತು ಮಂತ್ರಿ ಮತ್ತು ಇತರರು)
ಕಮಾ: ಪ್ರಣಾಮಗಳು.
ಮಂತ್ರಿ: ಇಡೀ ರಾಜ್ಯದ ಪ್ರಜೆಗಳ ತಲೆಗಳನ್ನು ಬೋಳಿಸಲಾಯಿತು ಕಮಾರಶ್ರೇಷ್ಠರೆ.
ರಾಜ: ಅದರಿಂದ ತಯಾರಿಸಿದ ಇದ್ದಲು ಒಂದು ಗಾಡಿಯಷ್ಟೂ ಆಗಲಿಲ್ಲ.
ಮಂತ್ರಿ: ಇಡೀ ರಾಜ್ಯದ ಜನರು ಒಂದು ವಾರವಿಡೀ ಕಣ್ಣೀರು ಸುರಿಸಿದರು.
ರಾಜ: ಅದು ಒಂದು ಕೊಡವೂ ಆಗಲಿಲ್ಲ.
ಕಮಾ: ಹಾಗಾದರೆ ನಾನು ಏನು ಮಾಡಲಿ ಮಹಾಪ್ರಭು?
ರಾಜ: ನಾವು ಒಂದು ಅಸಾಧ್ಯವಾದ ಕೆಲಸವನ್ನು ನಿನಗೆ ಒಪ್ಪಿಸಿದೆವು. ನೀನು ಎರಡು ಅಸಾಧ್ಯವಾದ ಕೆಲಸಗಳನ್ನ ನಮಗೆ ಒಪ್ಪಿಸಿದೆ. ನೀನು ತುಂಬಾ ಜಾಣನಿರುವೆ. ಇವನಿಗೆ ಸೂಕ್ತವಾದ ಉಡುಗೊರೆಯನ್ನು ನೀಡಿ ಕಳಿಸಿ ಮಂತ್ರಿಯವರೆ.
ಮಂತ್ರಿ: ಆಗಲಿ ಮಹಾಪ್ರಭು
ಕಮಾ: ಮಹಾಪ್ರಭುಗಳು ಕಳಿಸಿರುವ ಕಬ್ಬಿಣವನ್ನು ಏನು ಮಾಡಲಿ ಮಹಾಪ್ರಭು?
ರಾಜ: (ಯೊಚಿಸಿ) ಅದರಿಂದ ರಾಜ್ಯದ ರೈತರಿಗೆ ಬೇಕಾದ ಸಲಕರಣೆಗಳನ್ನು ಮಾಡಿಕೊಡು. ಉಚಿತವಾಗಿ ಅಲ್ಲ. ಆದರೆ ಹೆಚ್ಚು ತೆಗೆದುಕೊಳ್ಳಬೇಡ.
ಕಮಾ: ಅಪ್ಪಣೆ ಮಹಾಪ್ರಭು.
ಫೇಡ್ ಔಟ್
Leave A Comment