ಪಾತ್ರಗಳು:
ಚೆನ್ನ (೪೦) ಪಿಟೀಲು ವಾದಕ
ಪುಟ್ಟಿ (೧೦) ಚೆನ್ನನ ಮಗಳು
ತಿರುಕ (೮೦)
ಮುದುಕಿ (೭೦)
ಶ್ರೀಮಂತ, ನ್ಯಾಯಾಧೀಶ, ವಕೀಲರು, ಜನರು
ದೃಶ್ಯ ಒಂದು: ಮನೆ
(ಸಾಯಂಕಾಲದ ಹೊತ್ತು . ಪಿಟೀಲು ವಾದಕ ಚೆನ್ನ ಮತ್ತು ಅವನ ಮಗಳು ಪುಟ್ಟಿ. ಚೆನ್ನ ನಿರುತ್ಸಾಹದಿಂದ ಪಿಟೀಲು ನುಡಿಸುತ್ತಿದ್ದಾನೆ. ಮಗಳು ಪುಟ್ಟಿ ಬಳಿಯಲ್ಲ್ಲಿ ಕುಳಿತು ಆಸಕ್ತಿಯಿಂದ ಆಲಿಸುತ್ತಿದ್ದಾಳೆ. ಅವನು ಬಾರಿಸುವುದನ್ನು ನಿಲ್ಲಿಸಿದಾಗ)
ಪುಟ್ಟಿ: ಅಪ್ಪಾ , ಇನ್ನೊಂದು ಹಾಡು ಬಾರಿಸು!
ಚೆನ್ನ: ಬೇಜಾರು ಪುಟ್ಟಿ.
ಪುಟ್ಟಿ: ಯಾವುದಪ್ಪಾ?
ಚೆನ್ನ: ಈ ಊರು.
ಪುಟ್ಟಿ: ಯಾಕಪ್ಪಾ ? ಅಮ್ಮ ಇಲ್ಲಾಂತ್ಲಾ?
ಚೆನ್ನ : ಅದೂ ನಿಜ, ಮಗು. (ಪಿಟೀಲು ಅತ್ತ ಇರಿಸಿ, ಮಗಳನ್ನು ತಬ್ಬಿಕೊಂಡು ಅಳುತ್ತಾನೆ)
ಪುಟ್ಟಿ: ಅಮ್ಮ ಇನ್ನು ಬರೋಲ್ವ ಅಪ್ಪಾ?
ಚೆನ್ನ: ಇಲ್ಲ ಪುಟ್ಟಿ. ಅಮ್ಮ ಬೇರೆ ಲೋಕಕ್ಕೆ ಹೋಗಿದ್ದಾಳೆ.
ಪುಟ್ಟಿ: ಅಮ್ಮನಿಗೆ ಕೂಡ ಈ ಊರು ಬೇಜಾರು ಬಂತ ಅಪ್ಪಾ?
ಚೆನ್ನ: ಅಮ್ಮನಿಗೂ ನಂಗೂ ಈ ಊರು ಯಾವಾಗ್ಲೂ ಬೇಜಾರ ಪುಟ್ಟಿ.
ಪುಟ್ಟಿ: ಯಾಕಪ್ಪಾ?
ಚೆನ್ನ: ಈ ಊರ್ನಲ್ಲಿ ನನ್ನ ಸಂಗೀತವನ್ನ ಕೇಳೋರೇ ಇಲ್ಲಮ್ಮ.
ಪುಟ್ಟಿ: ಅದೆಷ್ಟು ಚೆನ್ನಾಗಿ ಬಾರಿಸುತ್ತಿ! ಯಾಕಪ್ಪಾ ಕೇಳೋರಿಲ್ಲ?
ಚೆನ್ನ: ಗೊತ್ತಿಲ್ಲ ಪುಟ್ಟಿ . ಜನರಿಗೆ ಏನೋ ಆಗಿದೆ. ನಮ್ಮ ಬಳಿ ತುಂಬಾ ಹಣ ಇದ್ರೆ ಸಂಗೀತ ಕೇಳೋಕೆ ಬರ್ತಿದ್ರೊ ಏನೊ.
ಪುಟ್ಟಿ: ಹಾಗಾದ್ರೆ ಏನು ಮಾಡೋದಪ್ಪಾ?
ಚೆನ್ನ: ನಾವು ಪಟ್ಟಣಕ್ಕೆ ಹೋಗೋಣ. ಅಲ್ಲಿಯಾದ್ರೂ ಹೊಟ್ಟೆಬಟ್ಟೆಗೆ ಸಾಲುವಷ್ಟು ಸಂಪಾದನೆ ಆಗುತ್ತೊ ನೋಡೋಣ. ಆಗ್ದಾ?
ಪುಟ್ಟಿ: ಪಟ್ಟಣ ಅಂದ್ರೆ ಹೇಗಿರುತ್ತಪ್ಪಾ?
ಚೆನ್ನ: ಪಟ್ಟಣದಲ್ಲಿ ತುಂಬಾ ಜನ ಇರ್ತಾರೆ. ದೊಡ್ಡ ದೊಡ್ಡ ಮನೆಗಳಿರ್ತವೆ. ಜನರ ಕೈಲಿ ತುಂಬಾ ಹಣ ಇರ್ತದೆ.
ಪುಟ್ಟಿ: ಅವರು ನಿನ್ನ ಪಿಟೀಲಿನ ಹಾಡು ಕೇಳ್ತಾರಾ?
ಚೆನ್ನ: ಕೇಳ್ಬಹುದು. ನಮ್ಮ ಹೊಟ್ಟೆ ಬಟ್ಟೆಗೆ ತಕ್ಕಷ್ಟು ಸಿಕ್ಕರೆ ಸಾಕು.
ಪುಟ್ಟಿ: ಆಗ್ಲಪ್ಪಾ ಹೋಗೋಣ.
ಚೆನ್ನ: ಹಾಗಾದ್ರೆ ನಾಳೆನೇ ಹೋಗೋಣ. ರೊಟ್ಟಿಗೆ ಹಿಟ್ಟಿದೆಯೆ ಅಂತ ನೋಡು.
(ಪುಟ್ಟಿ ಪುಟಪುಟನೆ ಒಳಗೆ ಓಡಿ, ಮರಳಿ ಬಂದು)
ಪುಟ್ಟಿ: ಒಟ್ಟು ಎಂಟು ರೊಟ್ಟಿಗೆ ಸಾಕಾಗುವಷ್ಟು ಇದೆ ಅಪ್ಪಾ. ನಾಲ್ಕು ದೊಡ್ಡದು ನಾಲ್ಕು ಸಣ್ಣದು.
ಚೆನ್ನ: ಸರಿ. ಸಾಕಾಗುತ್ತಾ ನಾಳೆ ರಾತ್ರಿಯ ವರೆಗೆ?
ಪುಟ್ಟಿ: (ಬೆರಳಿನಲ್ಲಿ ಲೆಖ್ಖ ಮಾಡುತ್ತಾ) ಇವತ್ತು ರಾತ್ರಿಗೆ ಎರಡು, ನಾಳೆ ಬೆಳಿಗ್ಗೆ ಎರಡು, ಮಧ್ಯಾಹ್ನ ಎರಡು, ರಾತ್ರಿ ಎರಡು. ಒಟ್ಟು ಎಂಟು. ಸರಿಯಾಗುತ್ತಪ್ಪಾ.
ಚೆನ್ನ: ಸರಿ. ನಾಳೆ ಬೆಳಿಗ್ಗೇನೆ ಹೊರಡೋಣ. ಈಗ ಹಸಿವಾಗೋಲ್ವ?
ಪುಟ್ಟಿ: ಆಗುತ್ತಪ್ಪಾ.
ಚೆನ್ನ: ಮನೆಯಲ್ಲಿ ಏನಿದೆ?
ಪುಟ್ಟಿ: ಸ್ವಲ್ಪ ಅವ್ಲಕ್ಕಿ, ಸ್ವಲ್ಪ ಹಾಲು ಮತ್ತು ಸ್ವಲ್ಪ ಕಾಪಿs ಪುಡಿ ಇದೆ.
ಚೆನ್ನ: ಏನು ಮಾಡೋದೀಗ?
ಪುಟ್ಟಿ: ನಿಂಗೆ ಸ್ವಲ್ಪ ಕಾಪಿs ಮಾಡ್ಲಾ?
ಚೆನ್ನ: ಮಾಡು ಪುಟ್ಟಿ.
(ಪುಟ್ಟಿ ಒಳಹೋಗುತ್ತಾಳೆ. ಚೆನ್ನ ಪಿಟೀಲು ಎತ್ತಿಕೊಂಡು ಸ್ವಲ್ಪ ಹೆಚ್ಚಿನ ಉತ್ಸಾಹದಿಂದ ಬಾರಿಸುತ್ತಾನೆ)
ಫೇಡ್ ಔಟ್
ದೃಶ್ಯ ಎರಡು: ಕಾಡಿನ ರಸ್ತೆ
(ಚೆನ್ನ ಮತ್ತು ಪುಟ್ಟಿ ನಡೆದು ಸುಸ್ತಾಗಿ ಒಂದು ಮರದ ಅಡಿಯಲ್ಲಿ ಕುಳಿತುಕೊಳ್ಳುತ್ತಾರೆ.ಜೊತೆಯಲ್ಲಿ ಒಂದು ಗಂಟು ಅದರಲ್ಲಿ ರೊಟ್ಟಿ, ನೀರು, ಬಟ್ಟೆ ಇತ್ಯಾದಿ)
ಚೆನ್ನ: ಹಸಿವಾಗುತ್ತಾ ಪುಟ್ಟಿ?
ಪುಟ್ಟಿ: ಹೌದಪ್ಪಾ.
ಚೆನ್ನ: (ಮುಗುಳ್ನಕ್ಕು) ಬೆಳಿಗ್ಗೆ ತಿಂದದ್ದು ಖರ್ಚಾಯಾ?
ಪುಟ್ಟಿ: ಹೂಂ.
ಚೆನ್ನ: ರೊಟ್ಟಿ ತಿನ್ನೋಣ್ವಾ?
ಪುಟ್ಟಿ: ಹೂಂ.
(ಗಂಟು ಬಿಚ್ಚಿ ಒಂದು ರೊಟ್ಟಿ ಪುಟ್ಟಿಯ ಕೈಯಲ್ಲಿರಿಸುತ್ತಾನೆ. ತಾನು ಒಂದನ್ನು ಎತ್ತಿಕೊಳ್ಳುವಷ್ಟರಲ್ಲಿ ಒಬ್ಬ ಎಂಬತ್ತು ವರ್ಷ ವಯಸ್ಸಿನ ಹರಕು ಉಡುಪಿನ, ತೋಳಿನಲ್ಲಿ ಒಂದು ಜೋಳಿಗೆ ಹಾಕಿಕೊಂಡಿರುವ ಮುದುಕ ಬರುತ್ತಾನೆ. ಬಳಿ ಬಂದು ಕೈನೀಡಿ)
ಮುದುಕ: ಹಸಿವು! ಹಸಿವು! ಮೂರು ದಿನದಿಂದ ಏನೂ ತಿಂದಿಲ್ಲ. ಏನಾದ್ರೂ ಕೊಡಿ. ಹಸಿವೆಯಿಂದ ಸಾಯಾ ಇದ್ದೇನೆ.
(ಚೆನ್ನ ತನ್ನ ಕೈಯಲ್ಲಿದ್ದುದನ್ನು ಅವನಿಗೆ ಕೊಡುತ್ತಾನೆ. ಮುದುಕ ಅದನ್ನು ತೆಗೆದುಕೊಂಡು ಪುಟ್ಟಿಯ ಕೈಯಲ್ಲಿದ್ದುದನ್ನು ನೋಡುತ್ತಾ)
ಮುದುಕ: ಇದೆಲ್ಲಿಗೆ ಸಾಕು ನಂಗೆ? ಅದನ್ನೂ ಕೊಡು.
(ಪುಟ್ಟಿ ಅಪ್ಪನ ಮುಖ ನೋಡುತ್ತಾಳೆ. ಚೆನ್ನ ಕೊಡು ಎಂದು ಸಂಜ್ಞೆ ಮಾಡುತ್ತಾನೆ. ಪುಟ್ಟಿ ಅದನ್ನು ಅವನ ಕೈಗೆ ಕೊಡುತ್ತಾಳೆ)
ಮುದುಕ: (ತಿನ್ನುತ್ತಾ) ಇಷ್ಟೆಯಾ? ಇನ್ನು ಇಲ್ವ?
ಚೆನ್ನ: ಇನ್ನು ಎರಡು ಇದೆ. ರಾತ್ರಿಗೆ ಅಂತ ಇಟ್ಕೊಂಡಿದ್ದೇವೆ.
ಮುದುಕ: ಅದನ್ನೂ ಕೊಡು. (ಚೆನ್ನ ಅದನ್ನು ತೆಗೆದು ಕೊಡಲನುವಾದಾಗ, ಮುದುಕ ಮನಸ್ಸು ಬದಲಾಯಿಸಿ) ಬೇಡ ಸಾಕು. ಅದು ನಿಮ್ಗಿರ್ಲಿ. ನೀರಿದ್ಯಾ?
ಚೆನ್ನ: ಇದೆ. (ನೀರಿನ ಬಾಟಲಿ ಕೊಡುತ್ತಾನೆ)
ಮುದುಕ: (ರೊಟ್ಟಿ ತಿಂದು ನೀರು ಕುಡಿದು) ಈಗ ಹೊಟ್ಟೆಗೆ ಶಾಂತಿಯಾಯ್ತು. ಇನ್ನು ದಾರಿ ನಡೀಬಹುದು. ಹಾಂ. ನಿಮ್ಮ ಉಪಕಾರಕ್ಕೆ ಬದಲಾಗಿ ಕೊಡಲು ನನ್ನ ಬಳಿ ಏನೂ ಇಲ್ಲ. (ತನ್ನ ಜೋಳಿಗೆಯಲ್ಲಿ ಹುಡುಕುತ್ತಾನೆ)
ಚೆನ್ನ: ಏನೂ ಬೇಡ.
ಮುದುಕ: (ಜೋಳಿಗೆಯೊಳಗಿಂದ ಒಂದು ಬಳೆ ಹೊರತೆಗೆದು) ಈ ಕಬ್ಬಿಣದ ಬಳೆಯನ್ನು ಇಟ್ಟುಕೊ. ಇದರಿಂದ ಏನಾದ್ರೂ ಉಪಯೊಗ ಆದೀತು.
ಚೆನ್ನ: ಏನು ಉಪಯೊಗ?
ಮುದುಕ: ಇದನ್ನು ಎಡಗೈಗೆ ಹಾಕಿಕೊಂಡು ಪಿಟೀಲು ಬಾರಿಸಿದ್ರೆ, ಅದನ್ನು ಕೇಳಿದವರ ಕಾಯಿಲೆ ವಾಸಿಯಾಗುತ್ತೆ. ಬಲಗೈಗೆ ಹಾಕಿಕೊಂಡು ಬಾರಿಸಿದ್ರೆ, ಅದನ್ನು ಕೇಳಿದವರು ಕುಣಿಯುತ್ತಾರೆ.
(ಮುದುಕ ಬಳೆಯನ್ನು ಚೆನ್ನನ ಬಟ್ಟೆ ಗಂಟಿನೊಳಗೆ ತುರುಕಿ ಹೋಗಿಬಿಡುತ್ತಾನೆ)
ಫೇಡ್ ಔಟ್
ದೃಶ್ಯ ಮೂರು: ಪಟ್ಟಣದಲ್ಲಿ ಒಂದು ಗುಡಿಸಲು.
(ಸಾಯಂಕಾಲದ ಹೊತ್ತು. ಗುಡಿಸಲಿನಲ್ಲಿ ಒಂದು ಮುದುಕಿ ನಿಶ್ಶಕ್ತಳಾಗಿ ಮಲಗಿದ್ದಾಳೆ. ನರಳುವ ಶಬ್ದ ಕೇಳಿ ಚೆನ್ನ ಮತ್ತು ಪುಟ್ಟಿ ಬಳಿ ಹೋಗುತ್ತಾರೆ)
ಚೆನ್ನ: ಏನಾಗ್ತಿದೆ ಅಜ್ಜಿ?
ಮುದುಕಿ: ಶಕ್ತಿಯೆ ಇಲ್ಲ.
ಚೆನ್ನ: ಯಾಕೆ? ಏನಾಯ್ತು?
ಮುದುಕಿ: ಮೂರು ದಿನದಿಂದ ಏನೂ ತಿಂದಿಲ್ಲ.
(ಚೆನ್ನ ಮತ್ತು ಪುಟ್ಟಿ ಮುಖ ಮುಖ ನೋಡುತ್ತಾರೆ)
ಚೆನ್ನ: ಹಸಿವೆ ಇದೆಯೆ?
ಮುದುಕಿ: ಹೌದು. ವಿಪರೀತ ಹಸಿವೆ ಇದೆ. ಆದ್ರೆ ತಿನ್ನಲು ಸಹ ಶಕ್ತಿ ಇಲ್ಲ.
ಚೆನ್ನ: ತಿನ್ನುವ ಶಕ್ತಿ ಬರಲು ಏನು ಮಾಡ್ಬೇಕು?
ಮುದುಕಿ: ತಿನ್ಬೇಕು. ಆದ್ರೆ ತಿನ್ನಲು ಶಕ್ತಿ ಇಲ್ಲ.
(ಪುಟ್ಟಿ ಕೈಗಳಿಂದ ಬಾಯಿ ಮುಚ್ಚಿಕೊಂಡು ನಗುತ್ತಾಳೆ)
ಚೆನ್ನ: ಮನೆಯಲ್ಲಿ ತಿನ್ನಲಿಕ್ಕಾಗುವಂಥದು ಏನಾದ್ರೂ ಇದ್ಯಾ?
ಮುದುಕಿ: ಏನೂ ಇಲ್ಲ.
(ಚೆನ್ನ ಎಡಗೈಗೆ ಬಳೆ ಹಾಕಿಕೊಂಡು ಪಿಟೀಲು ನುಡಿಸುತ್ತಾನೆ. ಮುದುಕಿ ನಿಧಾನವಾಗಿ ಎದ್ದು ಕುಳಿತುಕೊಳ್ಳುತ್ತಾಳೆ. ಮೈಯಲ್ಲಿ ಶಕ್ತಿ ಬಂದ ಲಕ್ಷಣಗಳನ್ನು ತೋರಿಸುತ್ತಾಳೆ)
ಚೆನ್ನ: (ನುಡಿಸುವುದನ್ನು ನಿಲ್ಲಿಸಿ) ಬಂತಾ ಶಕ್ತಿ?
ಮುದುಕಿ: ಬಂತು.
ಚೆನ್ನ: ಈಗೇನಾಗ್ತಿದೆ?
ಮುದುಕಿ: ಹಸಿವಾಗ್ತಿದೆ. ನಿಮ್ಮ ಬಳಿ ಏನಿದೆ?
ಚೆನ್ನ: ಎರಡು ರೊಟ್ಟಿ ಇದೆ.
ಮುದುಕಿ: ಕೊಡಿ.
(ಚೆನ್ನ ರೊಟ್ಟಿ ತೆಗೆದು ಕೊಡುತ್ತಾನೆ. ಮುದುಕಿ ಅವುಗಳನ್ನು ತಿಂದು)
ಮುದುಕಿ: ನೀವು ಈ ಮುಸ್ಸಂಜೆ ಹೊತ್ತು ಎಲ್ಲಿಗೆ ಹೋಗ್ತಾ ಇದ್ದೀರಿ?
ಚೆನ್ನ: ನಾವು ಪಟ್ಟಣಕ್ಕೆ ಹೋಗ್ತಾ ಇದ್ದೀವಿ.
ಮುದುಕಿ: ಇದು ಪಟ್ಟಣ. ಯಾಕೆ ಹೋಗ್ತಾ ಇದ್ದೀರಿ ಪಟ್ಟಣಕ್ಕೆ?
ಚೆನ್ನ: ಹೊಟ್ಟೆ ಬಟ್ಟೆಗೆ ಏನಾದ್ರೂ ಸಂಪಾದನೆ ಮಾಡೋಣಾಂತ.
ಮುದುಕಿ: ಹೇಗೆ?
ಚೆನ್ನ: ಪಿಟೀಲು ನುಡಿಸಿ.
ಮುದುಕಿ: ನಿಜ. ಈ ಸಂಗೀತ ನುಡಿಸಿ ಬೇಕಾದಷ್ಟು ಸಂಪಾದ್ನೆ ಮಾಡ್ಬಹುದು. ಆದ್ರೆ ಈ ಮಗುವನ್ನ ಜೊತೆಗಿಟ್ಟುಕೊಂಡು ಯಾಕೆ ಓಡಾಡ್ತಿ? ಮನೇಲಿ ಅಮ್ಮನ ಬಳಿ ಬಿಡ್ಬಾರ್ದಾ?
ಚೆನ್ನ: ಅಮ್ಮ ಸತ್ತು ಹೋದ್ಲು.
ಮುದುಕಿ: ಪಾಪ. (ಪುಟ್ಟಿಯೊಡನೆ) ನಿಂಗೆ ಹಸಿವೆ ಆಗ್ತಿಲ್ವ? (ಪುಟ್ಟಿ ಏನೂ ಹೇಳದೆ ಮುಗುಳ್ನಗುತ್ತಾಳೆ) ಹಾಂ. ನಿಮ್ಮ ರೊಟ್ಟಿಯನ್ನು ನಾನು ತಿಂದ್ಬಿಟ್ಟೆ! ಈಗ ನಂಗೆ ಶಕ್ತಿ ಬಂದಿದೆ. ಬನ್ನಿ. ಬೇಕಾದಷ್ಟು ಜೋಳದ ಹಿಟ್ಟಿದೆ. ಕಾಯಿಪಲ್ಲೆ ಇದೆ. ರೊಟ್ಟಿ ಮಾಡಿ ಹಾಕ್ತೀನಿ. ರಾತ್ರಿ ಇಲ್ಲೇ ಉಳೀಬಹುದು. (ಒಳಹೋಗುತ್ತಾ) ಬೆಳಿಗ್ಗೆ ಎದ್ದು ಹೋಗಿ ನೀನು ಸಂಪಾದ್ನೆ ಮಾಡಿಕೊಂಡು ಬಾ. ಮಗು ಇಲ್ಲೇ ಇರ್ಲಿ. ನಾನು ನೋಡ್ಕೋತೀನಿ.
ಫೇಡ್ ಔಟ್
ದೃಶ್ಯ ನಾಲ್ಕು: ಶ್ರೀಮಂತನ ಮನೆ
(ಬೆಳಗ್ಗಿನ ಹೊತ್ತು. ದೊಡ್ಡ ಹೊಟ್ಟೆಯ ಶ್ರೀಮಂತ ಮಲಗಿಕೊಂಡು ಹೊರಳಾಡುತ್ತಾ, ಜೋರಾಗಿ ನರಳುತ್ತಾ ಇದ್ದಾನೆ. ಚೆನ್ನ ಬಳಿ ಹೋಗಿ ನೋಡುತ್ತಾನೆ)
ಚೆನ್ನ: ಏನಾಗ್ತಿದೆ?
ಶ್ರೀಮಂತ: (ಒರಟಾಗಿ) ಕಾಣಿಸ್ತಾ ಇಲ್ವ? (ಭೀಕರವಾಗಿ ನರಳುತ್ತಾ) ಹೊಟ್ಟ್ಟೆನೋವು! ಭಯಂಕರ ಹೊಟ್ಟೆನೋವು! ಸಹಿಸಿಕೊಳ್ಳೋಕಾಗ್ತಾ ಇಲ್ಲ. (ಬಿದ್ದು ಹೊರಳಾಡುತ್ತಾನೆ)
ಚೆನ್ನ: ಹೊಟ್ಟೆನೋವು ಗುಣಪಡಿಸಿದ್ರೆ ಏನು ಕೊಡ್ತೀರಿ?
ಶ್ರೀಮಂತ: ಅಯೊ! ಸಾಧ್ಯವಿದ್ರೆ ನಿಲ್ಲಿಸು! ನೀನು ಕೇಳಿದ್ದು ಕೊಡ್ತೀನಿ.
ಚೆನ್ನ: ಇಬ್ಬರಿಗೆ ಇವತ್ತಿನ ಊಟಕ್ಕೆ ತಕ್ಕಷ್ಟು ಹಣ ಕೊಡಿ ಸಾಕು.
ಶ್ರೀಮಂತ: ಆಗ್ಲಿ, ಕೊಡ್ತೀನಿ.
(ಚೆನ್ನ (ಬಳೆ ಎಡಗೆಯಲ್ಲೇ ಇದೆ) ಪಿಟೀಲು ನುಡಿಸುತ್ತಾನೆ. ಸ್ವಲ್ಪವೇ ಹೊತ್ತಿನಲ್ಲಿ ಶ್ರೀಮಂತ ಗುಣಮುಖನಾಗುತ್ತಾನೆ)
ಶ್ರೀಮಂತ: (ಚೆನ್ನ ನಿಂತೇ ಇರುವುದನ್ನು ನೋಡಿ)ಯಾರು ನೀನು? ಏನಾಗಬೇಕು?
ಚೆನ್ನ: ನಿಮ್ಮ ಮಾತಿನಂತೆ ನೀವು….
ಶ್ರೀಮಂತ: ಏನು?
ಚೆನ್ನ: ಇಬ್ಬರಿಗೆ ಇವತ್ತಿನ ಊಟಕ್ಕೆ ತಕ್ಕಷ್ಟು ಹಣ.
ಶ್ರೀಮಂತ: ನಾನುಯಾಕೆ ಕೊಡ್ಬೇಕು?
ಚೆನ್ನ: ಪಿಟೀಲು ನುಡಿಸಿ ನಿಮ್ಮ ಕಾಯಿಲೆ ಗುಣಪಡಿಸಿದ್ದಕ್ಕೆ.
ಶ್ರೀಮಂತ: ಏನು? ನೀನು ಪಿಟೀಲು ಕುಯ್ದದ್ರಿಂದ ನನ್ನ ಹೊಟ್ಟೆ ನೋವು ವಾಸಿಯಾಯ್ತ? (ನಕ್ಕು) ನಿಂಗೆ ತಲೆ ಸರಿ ಇಲ್ಲ! ನಾನು ನಿನ್ನೆ ರಾತ್ರಿ ಕುಡಿದ ಕಾಳುಮೆಣಸಿನ ಕಷಾಯದಿಂದ ಇವತ್ತು ಹೊಟ್ಟೆನೋವು ಗುಣ ಆಗಿದೆ.
ಚೆನ್ನ: ಸರಿ. (ಶ್ರೀಮಂತನಿಗೆ ಕಾಣಿಸದಂತೆ ಬಳೆ ಎಡಗೈಯಿಂದ ತೆಗೆದು ಬಲಗೈಗೆ ಹಾಕಿಕೊಂಡು ಪಿಟೀಲು ನುಡಿಸುತ್ತಾನೆ. ಶ್ರೀಮಂತ ನರ್ತಿಸಲು ಆರಂಭಿಸುತ್ತಾನೆ. ಚೆನ್ನ ಒಮ್ಮೆ ಏರು ಸ್ವರದಲ್ಲಿ ಇನ್ನೊಮ್ಮೆ ತಗ್ಗಿದ ಸ್ವರದಲ್ಲಿ ವೈವಿಧ್ಯಮಯವಾಗಿ ನುಡಿಸುತ್ತಾನೆ. ಶ್ರೀಮಂತ ಚಿತ್ರವಿಚಿತ್ರವಾಗಿ ಕುಣಿಯುತ್ತಾನೆ. ಸುಸ್ತಾಗಿ “ನಿಲ್ಲಿಸು! ನಿಲ್ಲಿಸು!” ಎಂದು ಕೂಗುತ್ತಾ ಇರುತ್ತಾನೆ)
ಶ್ರೀಮಂತ: ನಿಲ್ಲಿಸು! ನಿಲ್ಲಿಸು! ಒಂದು ದಿವಸದ್ದಲ್ಲ ಒಂದು ವಾರದ ಊಟಕ್ಕೆ ಬೇಕಾದ ಹಣ ಕೊಡ್ತೇನೆ! (ಚೆನ್ನ ಬಾರಿಸುವುದನ್ನು ನಿಲ್ಲಿಸುವುದಿಲ್ಲ) ಅಯೊ ನಿಲ್ಲಿಸು! ಹತ್ತು ಚಿನ್ನದ ನಾಣ್ಯ ಕೊಡ್ತೇನೆ ನಿಲ್ಲಿಸು! (ಚೆನ್ನ ನಿಲ್ಲಿಸುತ್ತಾನೆ. ಶ್ರೀಮಂತ ದುರದುರನೆ ಅವನನ್ನು ದಿಟ್ಟಿಸಿ, ಒಳಹೋಗಿ ಒಂದು ಚೀಲ ತಂದು ಕೊಟ್ಟು) ತಕೊ ಇದರಲ್ಲಿ ಹತ್ತು ಚಿನ್ನದ ನಾಣ್ಯಗಳಿವೆ. (ಚೆನ್ನ ಸಂತೋಷದಿಂದ ನಿರ್ಗಮಿಸುತ್ತಾನೆ)
ಫೇಡ್ ಔಟ್
ದೃಶ್ಯ ಐದು: ಪಟ್ಟಣದ ರಸ್ತೆ.
(ರಸ್ತೆಯಲ್ಲಿ ನಡೆಯುತ್ತಿರುವ ಚೆನ್ನ. ಹಿಂದಿನಿಂದ ದೂರದಲ್ಲಿ ಶ್ರೀಮಂತ ಮತ್ತು ಇಬ್ಬರು ಪೊಲೀಸರು. ಶ್ರೀಮಂತ ಪೊಲೀಸರಿಗೆ ಚೆನ್ನನನ್ನು ತೋರಿಸುತ್ತಾನೆ. ಪೊಲೀಸರು ಮುಂದೆ ಬಂದು ಚೆನ್ನನ ತೋಳು ಹಿಡಿದುಕೊಳ್ಳುತ್ತಾರೆ)
ಪೊ೧: ನಿನ್ನನ್ನು ಬಂಧಿಸಲಾಗಿದೆ.
ಚೆನ್ನ: ಯಾಕೆ?
ಪೊ೨: ನೀನು ಕಳ್ಳ .
ಪೊ೧: ನೀನು ಆ ಶ್ರೀಮಂತನ ಚಿನ್ನದ ಚೀಲ ಕದ್ದಿರುವೆ. (ಚೆನ್ನನ ಕೈಯಿಂದ ಚೀಲವನ್ನು ಕಿತ್ತುಕೊಳ್ಳುತ್ತಾನೆ)
ಚೆನ್ನ: ನಾನು ಕದೀಲಿಲ್ಲ. ಅವರು ಅದನ್ನು ನನಗೆ ಕೊಟ್ಟರು.
ಶ್ರೀಮಂತ: (ಮುಂದೆ ಬಂದು) ಅಲ್ಲ! ಅವನು ಅದನ್ನು ನನ್ನ ಮನೆಯಿಂದ ಕದ್ದಿದ್ದಾನೆ.
ಪೊ೨: ಇವರು ಕೊಟ್ರೆ? ಯಾಕೆ?
ಚೆನ್ನ: ಪಿಟೀಲು ಬಾರಿಸುವುನ್ನು ನಿಲ್ಲಿಸಲು.
(ಪೊಲೀಸರು ಜೋರಾಗಿ ನಗುತ್ತಾರೆ)
ಪೊ೧: ಪಿಟೀಲು ಬಾರಿಸಲು ಹಣ ಕೊಡುವುದುಂಟು. ಪಿಟೀಲು ಬಾರಿಸುವುದನ್ನು ನಿಲ್ಲಿಸಲು ಹಣ ಕೊಡುವುದುಂಟಾ?
ಪೊ೨: ಇವ ಕಳ್ಳ ಮಾತ್ರ ಅಲ್ಲ . ಇವನ ತಲೆ ಕೂಡ ನೆಟ್ಟಗಿಲ್ಲ.
ಶ್ರೀಮಂತ: ಹೌದು ಅವನು ಸುಳ್ಳು ಹೇಳುತ್ತಿದ್ದಾನೆ.
ಪೊ೨: ನಡಿ.
ಚೆನ್ನ: ಎಲ್ಲಿಗೆ?
ಪೊ೨: ನಿನ್ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುತ್ತೇವೆ.
ಫೇಡ್ ಔಟ್
ದೃಶ್ಯ ಆರು: ನ್ಯಾಯಾಲಯ
(ನ್ಯಾಯಾಧೀಶ. ಚೆನ್ನ, ಪೊಲೀಸರು, ವಕೀಲರು, ಶ್ರೀಮಂತ,ಪೊಲೀಸ್ ಪೇದೆ, ಗುಮಾಸ್ತ , ಜನರು. ಚೆನ್ನನ ಪಿಟೀಲು ಮತ್ತು ಚಿನ್ನದ ಚೀಲ ನ್ಯಾಯಾಧೀಶನ ಮೇಜಿನ ಮೇಲಿದೆ. ಚೆನ್ನ್ನ ಕಟಕಟೆಯಲ್ಲಿ ನಿಂತಿದ್ದಾನೆ)
ನ್ಯಾಯಾ: ನೀನು ಆ ಶ್ರೀಮಂತನ ಮನೆಯಿಂದ ಈ ಚಿನ್ನದ ನಾಣ್ಯಗಳ ಚೀಲವನ್ನು ಕದ್ದಿರುವುದು ನಿಜವೆ?
ಚೆನ್ನ: ಅಲ್ಲ. ನಾನು ಕದಿಯಲಿಲ್ಲ.
ನ್ಯಾಯಾ: (ವಕೀಲರೊಡನೆ) ವಿಚಾರಣೆ ಮುಂದರಿಸಿರಿ.
ವಕೀಲ: (ಎದ್ದು ಬಂದು) ನೀನು ಕದ್ದಿರುವ ಚೀಲದಲ್ಲಿ ಇಪ್ಪತ್ತು ಚಿನ್ನ ನಾಣ್ಯಗಳಿದ್ದುದು ನಿಜವೆ?
ಚೆನ್ನ: ಅಲ್ಲ. ಅದರಲ್ಲಿ ಹತ್ತು ನಾಣ್ಯಗಳು ಮಾತ್ರ ಇದ್ದುದು.
(ಇಡೀ ನ್ಯಾಯಾಲಯ ನಗೆಗಡಲಿನಲ್ಲಿ ಮುಳುಗುತ್ತದೆ. ಕಳ್ಳ ಸಿಕ್ಕಿಬಿದ್ದ ಎಂದು ಕೆಲವರು ಕೂಗುತ್ತಾರೆ)
ನ್ಯಾಯಾ: ಆರ್ಡರ್! ಆರ್ಡರ್!
ವಕೀಲ: ಚೀಲದಲ್ಲಿರುವ ನಾಣ್ಯಗಳನ್ನು ನೀನು ಲೆಖ್ಖ ಮಾಡಿದ್ದೀಯ?
ಚೆನ್ನ: ಇಲ್ಲ.
ವಕೀಲ: ಹಾಗಾದರೆ ಅದರಲ್ಲಿ ಹತ್ತೇ ನಾಣ್ಯಗಳಿವೆ ಎಂದು ಹೇಗೆ ಹೇಳುತ್ತಿ?
ಚೆನ್ನ: ಹತ್ತು ನಾಣ್ಯಗಳಿವೆ ಎಂದು ಹೇಳಿ ಶ್ರೀಮಂತರು ನನಗೆ ಚೀಲವನ್ನು ಕೊಟ್ಟರು. ನಾನು ತೆರೆದು ನೋಡಿಲ್ಲ.
ವಕೀಲ: ಯಾಕೆ ನೋಡಿಲ್ಲ?
ಚೆನ್ನ: ನೋಡುವವನಿದ್ದೆ. ಆದರೆ ಅಷ್ಟರಲ್ಲಿ ಪೊಲೀಸರು ಬಂದು ಹಿಡಿದುಕೊಂಡರು.
ವಕೀಲ: ಶ್ರೀಮಂತರು ನಿನಗೆ ನಾಣ್ಯಗಳನ್ನು ಯಾಕೆ ಕೊಟ್ಟರು?
ಚೆನ್ನ: ಪಿಟೀಲು ಬಾರಿಸುವುದನ್ನು ನಿಲ್ಲಿಸಲು ಕೊಟ್ಟರು.
(ಎಲ್ಲರೂ ನಗುತ್ತಾರೆ)
ನ್ಯಾಯಾ: ಆರ್ಡರ್! ಆರ್ಡರ್!
ವಕೀಲ: ಏನು? ಪಿಟೀಲು ಬಾರಿಸುವುದನ್ನು ನಿಲ್ಲಿಸಲು ಕೊಟ್ಟರೆ?
ಚೆನ್ನ: ಹೌದು.
ವಕೀಲ: ಮೈ ಲಾರ್ಡ್, ಈತನನ್ನು ಇನ್ನ್ನು ವಿಚಾರಿಸಿ ಪ್ರಯೊಜನವಿಲ್ಲ. ಈತ ಹೊಸ ಹೊಸ ಸುಳ್ಳುಗಳನ್ನು ಹೇಳುತ್ತಿದ್ದಾನೆ. ಇವನು ಮಾಡಿದ ತಪ್ಪಿಗೆ ಮರಣದಂಡನೆಯೆ ಸರಿಯಾದ ಶಿಕ್ಷೆ.
ನ್ಯಾಯಾ: (ಬರೆದು) ನೀನು ಅಪರಾಧಿ ಎಂದು ಸಾಬೀತಾಗಿರುವುದರಿಂದ ನಿನಗೆ ಮರಣದಂಡನೆ ವಿಧಿಸಲಾಗಿದೆ. (ಕ್ಷಣ ತಡೆದು) ನಿನ್ನ ಕೊನೆಯ ಆಸೆ ಏನಾದ್ರೂ ಇದ್ದರೆ ಹೇಳು.
ಚೆನ್ನ: (ಕ್ಷಣ ತಡೆದು) ಕೊನೆಯದಾಗಿ ಒಮ್ಮೆ ನನ್ನ ಪಿಟೀಲು ನುಡಿಸಲು ಅನುಮತಿ ಕೊಡಬೇಕು.
ನ್ಯಾಯಾ: ಆಗಲಿ.
(ನ್ಯಾಯಾಧೀಶ ಪಿಟೀಲು ತೆಗೆದು ಜವಾನನ ಕೈಯಲ್ಲಿ ಕೊಡುತ್ತಾನೆ. ಜವಾನ ಚೆನ್ನನಿಗೆ ಕೊಡುತ್ತಾನೆ. ಬಳೆ ಚೆನ್ನನ ಬಲಗೈಯಲ್ಲಿ ಮೊದಲೇ ಇದೆ. ಚೆನ್ನ ಪಿಟೀಲು ನುಡಿಸಲು ತೊಡಗುತ್ತಾನೆ. ಎಲ್ಲರೂ ಎದ್ದು ಕುಣಿಯುತ್ತಾರೆ. ಚೆನ್ನ ಒಮ್ಮೆ ಏರು ಸ್ವರದಲ್ಲಿ ಇನ್ನೊಮ್ಮೆ ತಗ್ಗಿದ ಸ್ವರದಲ್ಲಿ ವೈವಿಧ್ಯಮಯವಾಗಿ ನುಡಿಸುತ್ತಾನೆ. ಎಲ್ಲರೂ ಕುಣಿಯುತ್ತಾರೆ. ಕೆಲವರು ವಕ್ರ ವಕ್ರವಾಗಿ ಕುಣಿಯುತ್ತಾರೆ. ಕುಣಿದು ಸುಸ್ತಾಗಿ “ನಿಲ್ಲಿಸು! ನಿಲ್ಲಿಸು!” ಎಂದು ಬೊಬ್ಬಿಡುತ್ತಾರೆ. ಚೆನ್ನ ಮತ್ತೂ ಸ್ವಲ್ಪ ಹೊತ್ತು ನುಡಿಸುತ್ತಾನೆ. ಶ್ರೀಮಂತ, ವಕೀಲ ಮತ್ತು ಪೊಲೀಸರು ಕುಣಿಕುಣಿದು ಕುಸಿದು ಬೀಳುತ್ತಾರೆ. ನ್ಯಾಯಾಧೀಶ ನಿಂತು ಕುಣಿಯಲಾರದೆ ತನ್ನ ಆಸನದಲ್ಲಿ ಕುಸಿದು ಕುಳಿತು ಏದುಸಿರು ಬಿಡುತ್ತಾನೆ. ಕೆಲವರು ಇನ್ನೂ ಏಳಲಿಕ್ಕಾಗದೆ ಏದುಸಿರು ಬಿಡುತ್ತಾ ಬಿದ್ದಲ್ಲಿಯೆ ಇದ್ದಾರೆ)
ನ್ಯಾಯಾ: (ಕಷ್ಟದಿಂದ ಸುತ್ತಿಗೆ ಎತ್ತಿ ಬಡಿದು) ಆರ್ಡರ್! ಆರ್ಡರ್!
(ಚೆನ್ನನ ಪಿಟೀಲು ವಾದನ ತಟ್ಟನೆ ನಿಲ್ಲುತ್ತದೆ. ಜನರು ಬೇರೆ ಬೇರೆ ಸ್ಥ್ಥಿತಿಯಲ್ಲಿರುವಂತೆಯೆ ತಟ್ಟನೆ ಸ್ತಬ್ಧತೆ ನೆಲಸುತ್ತದೆ.) ಪಿಟೀಲು ವಾದಕ ಚೆನ್ನ ಸತ್ಯವನ್ನೇ ಹೇಳಿದ್ದಾನೆ. ಸುಳ್ಳುಗಾರನಾದ ಶ್ರೀಮಂತನಿಗೆ ಐದು ವರ್ಷದ ಸೆರೆಮನೆವಾಸ ವಿದಿಸಲಾಗಿದೆ. ಮತ್ತು ಅವನು ಚೆನ್ನನಿಗೆ ನೂರು ಚಿನ್ನದ ನಾಣ್ಯಗಳ ದಂಡ ಕೊಡತಕ್ಕದ್ದು.
ಚೆನ್ನ: ಬೇಡ! ನನಗೆ ಆ ಶ್ರೀಮಂತನ ನಾಣ್ಯಗಳು ಬೇಡ.
ನ್ಯಾಯಾ: ಯಾಕೆ ಬೇಡ?
(ಚೆನ್ನ ಮುಗುಳ್ನಗುತ್ತಾ ಬಳೆಯನ್ನು ಎಡಗೈಗೆ ಹಾಕಿಕೊಂಡು ಪಿಟೀಲು ನುಡಿಸುವ ಭಾವವನ್ನು ತೋರಿಸುತ್ತಾನೆ. ತುಸು ಹೊತ್ತು ಎಲ್ಲರ ಮುಖದಲ್ಲಿಯೂ ಎಲ್ಲಿ ಪುನ: ಕುಣಿಯಬೇಕಾಗುವುದೋ ಎಂಬ ಆತಂಕ. ಚೆನ್ನ ಪಿಟೀಲು ನುಡಿಸಲು ಆರಂಭಿಸುತ್ತಾನೆ. ಮರುಕ್ಷಣ ಎಲ್ಲರಲ್ಲಿಯೂ ಅಪೂರ್ವ ಚೇತನ, ಉಲ್ಲಾಸ, ಉತ್ಸಾಹ. ಬಿದ್ದಿದ್ದವರು, ಕುಸಿತು ಕುಳಿತವರು ನವೋಲ್ಲಾಸದಿಂದ ಎದ್ದು ಕುಳಿತುಕೊಳ್ಳುತ್ತಾರೆ. ಎಲ್ಲರೂ ನಗುತ್ತಾರೆ. ಪಿಟೀಲು ವಾದನ ಮುಂದರಿಯುತ್ತದೆ. ನ್ಯಾಯಾಧೀಶ “ಆರ್ಡರ್ ಆರ್ಡರ್” ಎಂದು ಬಡಿಯಲು ಎತ್ತಿದ ಸುತ್ತಿಗೆಯನ್ನು ಬಹಳ ಮೇಲಕ್ಕೆ ಎತ್ತುತ್ತಾನೆ. ಮನಸ್ಸು ಬದಲಿಸಿ ಬಹಳ ನಿಧಾನವಾಗಿ ಕೆಳತಂದು ಸದ್ದು ಮಾಡದೆ ಮೇಜಿನ ಮೇಲಿರಿಸುತ್ತಾನೆ)
ಫೇಡ್ ಔಟ್
Leave A Comment