ಪಾತ್ರಗಳು:
ಕೋಡೆ
ಮುರಾನಿ (ಕೋಡೆಯ ಹೆಂಡತಿ)
ಧರ್ಮಗುರು, ಧರ್ಮಗುರುವಿನ ದೂತ, ಜನರು
ವ್ಯಕ್ತಿಗಳು (ಗಿರಾಕಿಗಳು)
ದೃಶ್ಯ ಒಂದು: ಕೋಡೆ ಮುರಾನಿಯ ಮನೆ
(ಕುರಿಗಳ ಮತ್ತು ಕೋಳಿಗಳ ರಾಜನೆನಿಸಿಕೊಂಡಿರುವ ಕೋಡೆ ಮತ್ತು ಅವನ ಹೆಂಡತಿ ಮುರಾನಿ. ಕೋಡೆ ಹರಿದ ಅಂಗಿಗೆ ತೇಪೆ ಹಾಕುತ್ತಿದ್ದಾನೆ. ಮುರಾನಿ ಹಣ ಎಣಿಸುತ್ತಿದ್ದಾಳೆ. ಹಿನ್ನೆಲೆಯಲ್ಲಿ ಕುರಿ ಕೋಳಿಗಳ ಕೂಗು. ಧರ್ಮಗುರುವಿನ ದೂತನ ಆಗಮನ)
ಕೋ: ಬನ್ನಿ ಬನ್ನಿ ಧರ್ಮಗುರುಗಳ ದೂತರೆ, ಕುಳಿತುಕೊಳ್ಳಿ. ಏನು ವಿಶೇಷ?
ದೂ: (ಕುಳಿತುಕೊಂಡು)ವಿಶೇಷವೇನು ಅಂತ ನನಗೆ ಗೊತ್ತಿಲ್ಲ. ಕುರಿಕೋಳಿಗಳ ರಾಜ ಕೋಡೆಯನ್ನು ತೆಗೆದುಕೊಂಡು ಬಾ ಎಂದು ಧರ್ಮಗುರುಗಳು ಹೇಳಿದ್ದಾರೆ.
ಮು: (ರೇಗಿ) “ತೆಗೆದುಕೊಂಡು ಬಾ” ಎಂದರೆ ಏನು? ತೆಗೆದುಕೊಂಡು ಹೋಗಲು ಅವರೇನು ಕುರಿಯೆ ಕೋಳಿಯೆ?
ದೂ: ಕ್ಷಮಿಸಬೇಕು. ನನ್ನ ಬಾಯಿತಪ್ಪಿನಿಂದ ಹಾಗೆ ಹೇಳಿಬಿಟ್ಟ್ಟೆ ಮುರಾನಿದೇವಿಯವರೆ. ಧರ್ಮಗುರುಗಳು ಕರೆದುಕೊಂಡು ಬಾ ಎಂದು ಹೇಳಿದರು.
ಮು: ಹಾಗೆ ಹೇಳಿ ಮತ್ತೆ! (ಗಂಡನೊಡನೆ) ಏನ್ರಿ ನಿಮಗೆ ಧರ್ಮಗುರುಗಳ ಬಳಿ ಹೋಗಲು ಬಿಡುವಿದೆಯೆ ಇವತ್ತು?
ಕೋ: ಬಿಡುವು? ಇಲ್ಲವಲ್ಲ?
ಮು: ಹಾಗೆಂದರೆ ಹೇಗೆ ಮುರಾನಿದೇವಿಯವರೆ? ಕರೆದುಕೊಂಡು ಬಾ ಎಂದಿದ್ದಾರೆ.
ಮು: ಇವತ್ತು ಅವರಿಗೆ ಪುರುಸೋತು ಇಲ್ಲ ನಾಳೆ ಬರುತ್ತಾರೆ ಅಂತ ಹೇಳಿ.
ದೂತ: ಆಗಲಿ ಹಾಗೇ ಹೇಳುತ್ತೇನೆ. (ಏಳುತ್ತಾನೆ)
ಕೋ: ಕುಳಿತುಕೊಳ್ಳಿ. ಕುಡಿಯಲು ಕಾಪಿs, ಚಹ ಏನಾದ್ರೂ…
ಮು: ಕಾಪಿs, ಚಹಕ್ಕೆ ಹಾಲು ಇಲ್ಲ.
ದೂತ: ಪರವಾಗಿಲ್ಲ. ಒಂದು ಮೊಟ್ಟೆ ಕೊಡಿ.
ಮು: ಮೊಟ್ಟೆ! ಯಾಕೆ?
ದೂತ: ಮರಿ ಮಾಡಲಿಕ್ಕೆ.
ಮು: ಹಸಿ ಮೊಟ್ಟೆ ಇಲ್ಲ, ಬೇಯಿಸಿದ ಮೊಟ್ಟೆ ಆದೀತಾ?
ದೂತ: ಆದೀತು ಆದೀತು. ಬೇಯಿಸಿದ ಮೊಟ್ಟೆಯಾದರೆ ತಿನ್ನಬಹುದು.
ಮು: ಈಗ ಅದೂ ಖಾಲಿಯಾಗಿದೆ. ನಾಳೆ ಬನ್ನಿ.
ದೂತ: (ಹಾಡುತ್ತಾ ಹೋಗುತ್ತಾನೆ)
ನಾಳೆ ನಾಳೆ ನಾಳೆ
ಇವತ್ತೆಲ್ಲ ಗೋಳೆ
ಕೋಳಿ ಕುರಿ ರಾಜ
ಕೊತ್ತಂಬರಿ ಬೀಜ
(ಮತ್ತೊಮ್ಮೆ ಅದೇ ಸಾಲುಗಳನ್ನು ಹಾಡುತ್ತಾನೆ)
ದೃಶ್ಯ ಎರಡು: ಧರ್ಮಗುರುವಿನ ಮನೆ
(ಕೋಡೆ, ಮುರಾನಿ ಮತ್ತು ಕೆಲವು ಜನರು ಸೇರಿದ್ದಾರೆ, ದೂತ ಒಂದು ಕಡೆ ನಿಂತಿದ್ದಾನೆ)
(ವ್ಯಾಪಾರಿಗಳು ಹರ್ಷದಿಂದ ತಮ್ಮೊಳಗೆ “ಒಂದೇ ವಸ್ತು, ಒಂದೇ ವಸ್ತು”ಎನ್ನುತ್ತಾರೆ)
ಧರ್ಮ: ಅನಾವೃಷ್ಟಿಯಿಂದಾಗಿ ಜನ ಬಳಲಿದ್ದಾರೆ. ಎಲ್ಲರೂ ಸಹಾಯಮಾಡಬೇಕು. ತುಂಬಾ ಕೊಡಿ ಎಂದು ಹೇಳುವುದಿಲ್ಲ. ನೀವು ಏನೇನು ಬೆಳೆದು ಮಾರಾಟ ಮಾಡುತ್ತೀರೋ ಅವುಗಳ ಪೈಕಿ ನಾಳೆ ಸಂತೆಯಲ್ಲಿ ಯಾವುದಾದರೂ ಒಂದು ವಸ್ತುವಿನ ಮಾರಾಟದಿಂದ ಸಿಕ್ಕಿದ ಹಣವನ್ನು ತಂದುಕೊಡಿ.
೧ನೆ: ನಾನು ನಾಳೆ ಸಂತೆಯಲ್ಲಿ ಎಲೆಕೋಸು ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
೨ನೆ: ನಾನು ಕಡ್ಲೇ ಕಾಯಿ ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
೩ನೆ: ನಾನು ಕುಂಬ್ಳಕಾಯಿ ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
೪ನೆ: ನಾನು ಕಲ್ಲಂಗ್ಡಿ ಹಣ್ಣು ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
೫ನೆ: ನಾನು ಜೇನು ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
೬ನೆ: ನಾನು ಉಳ್ಳಾಗಡ್ಡಿ ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀನಿ.
ಕೋ: (ಹೆಂಡತಿಯ ಮುಖ ನೋಡುತ್ತಾ ಭಯದಿಂದ) ನಾನು ಕೋ…ಕೋ…
ಮು: ನಾವು ಒಂದು ಕುರಿ ಮಾರಾಟದಿಂದ ಸಿಕ್ಕಿದ ಹಣ ತಂದುಕೊಡ್ತೀವಿ.
ಧರ್ಮ: ಬಹಳ ಸಂತೋಷ. ನೀವೆಲ್ಲಾ ಈ ರೀತಿ ದೊಡ್ಡ ಮನಸ್ಸು ಮಾಡಿ ದಾನ ಮಾಡಿದ್ರೆ ಬರಗಾಲದಿಂದ ನರಳುತ್ತಿರುವವರ ಕಷ್ಟ ಪರಿಹಾರವಾಗುತ್ತದೆ.
(ಎಲ್ಲರೂ ನಿರ್ಗಮಿಸುತ್ತಾರೆ. ಕೋಡೆ ಮತ್ತು ಮುರಾನಿ ನಿಂತುಕೊಂಡು ಗಂಭೀರವಾದ ಚರ್ಚೆ (ಮ್ಯೂಟ್)ಯಲ್ಲಿ ಮುಳುಗುತ್ತಾರೆ. ದೂರದಲ್ಲಿ ದೂತ ನಿಂತುಕೊಂಡು ಏನೋ ಮಸಲತ್ತು ನಡೆದಿದೆ ಎಂಬರ್ಥದಲ್ಲಿ ತಲೆಯಾಡಿಸುತ್ತಾ ಮೆಲ್ಲನೆ ಹತ್ತಿರ ಬರುತ್ತಾನೆ)
ದೂತ: ಮುರಾನಿಯಮ್ಮ , ಬೆಂದ ಮೊಟ್ಟೆ ಇದೆಯೆ?
ಮು: ಇಲ್ಲ. ಇನ್ನು ಹೋಗಿ ಒಲೆ ಉರಿಸಬೇಕು.
ದೂತ: ಹಸಿ ಮೊಟ್ಟೆ ಆದೀತು.
ಕೋ: ಇವತ್ತು ಕೋಳಿಗಳು ಮೊಟ್ಟೆ ಇಟ್ಟೇ ಇಲ್ಲ.
ದೂತ: ನಿನ್ನೆಯ ಮೊಟ್ಟೆ ಆದೀತು.
ಮು: ನಿನ್ನೆಯ ಮೊಟ್ಟೆ ನಿನ್ನೆಗೇ ಮುಗಿಯಿತು.
ದೂತ: ಹಾಗಾದರೆ ಇವತ್ತು ನೀವು ಬೇಯಿಸುವುದು ಯಾವತ್ತಿನ ಮೊಟ್ಟೆ?
ಕೋ: ಮೊನ್ನೆಯ ಮೊಟ್ಟೆ.
ದೂತ: (ನಕ್ಕು) ನಾಳೆಯ ಮೊಟ್ಟೆಯನ್ನು ಇವತ್ತು ಬೇಯಿಸಲಿಕ್ಕೆ ಆಗುವುದಿಲ್ವ?
ಮು: ಆಗುತ್ತೆ.
ದೂತ: ಅದನ್ನೇ ಕೊಡಿ. ಹಸಿಯೂ ಆದೀತು, ಬೇಯಿಸಿದ್ದೂ ಆದೀತು. ಅರ್ಧ ಬೆಂದದ್ದೂ ಆದೀತು.
ಮು: ನಾಳೆ ಬನ್ನಿ. (ಇಬ್ಬರೂ ತಟ್ಟನೆ ಹೋಗಿಬಿಡುತ್ತಾರೆ)
ದೂತ: (ಹಾಡುತ್ತಾ ಹೋಗುತ್ತಾನೆ)
ನಾಳೆ ನಾಳೆ ನಾಳೆ
ಇವತ್ತೆಲ್ಲ ಗೋಳೆ
ಕೋಳಿ ಕುರಿ ರಾಜ
ಕೊತ್ತಂಬರಿ ಬೀಜ
ಫೇಡ್ ಔಟ್
ದೃಶ್ಯ ಮೂರು: ಸಂತೆ.
(ಕೋಡೆ ಮತ್ತು ಮುರಾನಿ. ಸ್ವಲ್ಪ ದೂರದಲ್ಲಿ ಒಂದು ಕುರಿ ಮತ್ತು ಒಂದು ಕೋಳಿಯನ್ನು ಕಟ್ಟಿ ಹಾಕಲಾಗಿದೆ)
ಕೋ: ಬನ್ನಿ ಬನ್ನಿ. ಈ ಕಡೆ ಬನ್ನಿ . ಅತ್ಯುತ್ತಮ ಕುರಿಗಳು!
ಮು: ಅತ್ಯುತ್ತಮ ಕೋಳಿಗಳು!
(ಇಬ್ಬರು ಗಿರಾಕಿಗಳು ಬರುತ್ತಾರೆ. ಗಿರಾಕಿ೨ ವೇಷ ಮರೆಸಿಕೊಂಡಿರುವ ದೂತ. ಒಂದು ದೊಡ್ಡ ಟೊಪ್ಪಿಗೆ ಧರಿಸಿದ್ದಾನೆ)
ಗಿ೧: ಏನು ಕುರಿಯ ಬೆಲೆ?
ಕೋ: ಹತ್ತೇ ರುಪಾಯಿ.
ಗಿ೧: ಏನು ಬರೀ ಹತ್ತು ರುಪಾಯಿಯೆ?
ಮು: ಹೌದು ಬರೀ ಹತ್ತು ರುಪಾಯಿ. ಆದರೆ ಒಂದು ಕುರಿಯ ಜೊತೆ ಒಂದು ಕೋಳಿಯನ್ನು ಕೂಡ ಕೊಂಡುಕೊಳ್ಳಲೇ ಬೇಕು.
ಗಿ೧: ಏನು ಒಂದು ಕೋಳಿಯ ಬೆಲೆ?
ಮು: ಒಂದು ಸಾವಿರ ರುಪಾಯಿ.
ಗಿ೧: (ಸ್ವಲ್ಪ ಯೊಚಿಸಿ)ಆಗಲಿ. ನನಗೆ ಒಂದು ಕುರಿ ಮತ್ತು ಒಂದು ಕೋಳಿ ಬೇಕು.
(ಗಿರಾಕಿ ಹಣ ಕೊಡುತ್ತಾನೆ. ಮುರಾನಿ ಹಣ ತೆಗೆದುಕೊಳ್ಳುತ್ತಾಳೆ)
ಮು: (ಗಂಡನೊಡನೆ) ಹಣ ಬಂತು. ಕುರಿ ಮತ್ತು ಕೋಳಿಯನ್ನು ಬಿಚ್ಚಿ ಕೊಡಿ.
(ಕೋಡೆ ಕುರಿ ಮತ್ತು ಕೋಳಿಯನ್ನು ಬಿಚ್ಚಿಕೊಡುತ್ತಿರುವಾಗ)
ಗಿ೨: ನನಗೂ ಒಂದು ಕುರಿ ಒಂದು ಕೋಳಿ ಬೇಕು.
ಮು: ಇಲ್ಲ. ಇವತ್ತು ನಾವು ತಂದಿರೋದು ಒಂದು ಕುರಿ ಮತ್ತು ಒಂದು ಕೋಳಿ ಮಾತ್ರ.
ಗಿ೨: ಅದೇನು? ನಿಮ್ಮ ಬಳಿ ನೂರಾರು ಕುರಿ ಕೋಳಿ ಇವೆಯಲ್ಲ?
ಕೋ: (ಗಿ೧ನ್ನು ಕಳಿಸಿ ಮರಳಿ ಬಂದು) ಇವೆ. ಆದ್ರೆ…
ಮು: ಇವತ್ತು ನಮಗೆ ಬೇರೆ ಕೆಲಸ ಇದೆ. ಬೇಗನೆ ಹೋಗ್ಬೇಕು.
ಕೋ: ಆದ್ದರಿಂದ ಒಂದು ಕುರಿ ಮತ್ತು ಒಂದು ಕೋಳಿ ಮಾತ್ರ ತಂದಿದ್ದೇವೆ.
ಗಿ೨: ನನಗೆ ಒಂದು ಕುರಿ ಮತ್ತು ಕೋಳಿ ಅಗತ್ಯವಾಗಿ ಬೇಕಾಗಿದೆ.
ಮು: ನಾಳೆ ಬನ್ನಿ .
ಗಿ೨: ನಾಳೆಯೂ ಈ ಕೊಡುಗೆ ಇದೆಯೆ?
ಮು: (ದೊಡ್ಡ ಮುಗುಳುನಗೆಯೊಂದಿಗೆ) ಈ ಕೊಡುಗೆ ಯಾವತ್ತೂ ಇರುತ್ತದೆ. ಆದರೆ ಮೊದಲೇ ತಿಳಿಸದೆ ವ್ಯಾಪಾರದ ನಿಯಮವನ್ನು ಬದಲಾಯಿಸುವ ಹಕ್ಕು ನಮಗೆ ಇದೆ. (ತರಾತುರಿಯಿಂದ ಹೋಗುತ್ತಾರೆ)
ಗಿ೨: (ಟೊಪ್ಪಿಗೆ ತೆಗೆದು ಕೈಯಲ್ಲಿ ಹಿಡಿದುಕೊಂಡು ಹಾಡುತ್ತಾ ಹೋಗುತ್ತಾನೆ)
ರಾಣಿ ರಾಣಿ ರಾಣಿ
ಕೋಡೆ ಮುರಾನಿ
ಕುರಿ ಕೋಳಿ ರಾಣಿ
ಹಣ ಗೋಣಿ ಗೋಣಿ
ರಾಣಿ ರಾಣಿ ರಾಣಿ
ರಾಜ ರಾಜ ರಾಜ
ಕೋಳಿ ಕುರಿ ರಾಜ
ಕೊತ್ತಂಬರಿ ಬೀಜ
ರಾಜ ರಾಜ ರಾಜ
ಫೇಡ್ ಔಟ್
ದೃಶ್ಯ ನಾಲ್ಕು: ಧರ್ಮಗುರುವಿನ ಮನೆ
(ಹಣ ಕೊಡುವ ಜನರ ಸಾಲು. ಒಬ್ಬೊಬ್ಬರೇ ಹಣ ಕೊಟ್ಟು ಹೋಗುತ್ತಾರೆ)
೧ನೆ: ಇವತ್ತು ಎಲೆಕೋಸು ಮಾರಿ ಸಿಕ್ಕಿದ ಹಣ.
೨ನೆ: ಇವತ್ತು ಕಡ್ಲೇ ಕಾಯಿ ಮಾರಿ ಸಿಕ್ಕಿದ ಹಣ.
೩ನೆ: ಇವತ್ತು ಕುಂಬ್ಳಕಾಯಿ ಮಾರಿ ಸಿಕ್ಕಿದ ಹಣ.
೪ನೆ: ಇವತ್ತು ಕಲ್ಲಂಗ್ಡಿ ಹಣ್ಣು ಮಾರಿ ಸಿಕ್ಕಿದ ಹಣ.
೫ನೆ: ಇವತ್ತು ಜೇನು ಮಾರಿ ಸಿಕ್ಕಿದ ಹಣ.
೬ನೆ: ಇವತ್ತು ಉಳ್ಳಾಗಡ್ಡಿ ಮಾರಿ ಸಿಕ್ಕಿದ ಹಣ.
(ಕೋಡೆ ಮತ್ತು ಮುರಾನಿ ಜೊತೆಯಾಗಿ ಹೋಗುತ್ತಾರೆ)
ಕೋಡೆ: ಒಂದು ಕುರಿ ಮಾರಿ ಸಿಕ್ಕಿದ ಹಣ.
(ಧರ್ಮ ಗುರು ಕೋಡೆಯ ಕೈಯಿಂದ ಹಣ ತೆಗೆದುಕೊಂಡು ಆಶ್ಚರ್ಯದಿಂದ)
ಧರ್ಮ: ಏನು? ಒಂದು ಕುರಿಯನ್ನ ಬರೀ ಹತ್ತು ರುಪಾಯಿಗೆ ಮಾರಿದ್ಯಾ?
ಕೋಡೆ: ಹೌದು ಗುರುಗಳೆ.
ಧರ್ಮ: ಒಂದು ಕುರಿಗೆ ಕಡಿಮೆಯೆಂದರೆ ಸಾವಿರ ರುಪಾಯಿ ಬೆಲೆಯಿದೆ. ಆದ್ರೂ ಹತ್ತೇ ರುಪಾಯಿಗೆ ಮಾರಿದ್ಯಾ?
ಮುರಾನಿ: ಹೌದು ಗುರುಗಳೆ.
ಧ: ಯಾವಾಗಲೂ ಹತ್ತು ರುಪಾಯಿಗೇ ಮಾರುತ್ತೀರಾ?
ಕೋಡೆ, ಮುರಾನಿ: ಹೌದು ಗುರುಗಳೆ.
ಧ: ಸರಿ. (ಅವರು ಹೋದ ಮೇಲೆ ದೂತನೊಡನೆ) ಹಾಗಾದ್ರೆ ನೀನು ಹೇಳಿದಂತೆ ಅವರು ಕುರಿಯನ್ನು ಹತ್ತು ರುಪಾಯಿಗೂ ಕೋಳಿಯನ್ನು ಸಾವಿರ ರುಪಾಯಿಗೂ ಮಾರಿದ್ದಾರೆ.
ದೂತ: ಹೌದು ಗುರುಗಳೆ.
ಧ: ಹಾಗಾದರೆ ಹೋಗು. ಕೋಡೆ ಮುರಾನಿ ಒಂದು ಕುರಿಗೆ ಹತ್ತು ರುಪಾಯಿಯಂತೆ ಮಾರುತ್ತಿದ್ದಾರೆ ಎಂದು ಬೀದಿಯುದ್ದಕ್ಕೂಘೋಷಿಸುತ್ತಾ ಹೋಗು.
ದೂತ: ಆಗಲಿ ಗುರುಗಳೆ. (ದೂತ ಹೋಗುತ್ತಾನೆ. ಹೊರಗಡೆಯಿಂದ ಅವನ ಘೋಷ ಕೇಳಿಸುತ್ತದೆ) “ಕೋಡೆ ಮುರಾನಿ ಹತ್ತು ರುಪಾಯಿಗೆ ಕುರಿ ಮಾರುತ್ತಿದ್ದಾರೆ!” “ಕೋಡೆ ಮುರಾನಿ ಹತ್ತು ರುಪಾಯಿಗೆ ಕುರಿ ಮಾರುತ್ತಿದ್ದಾರೆ!”
ಫೇಡ್ ಔಟ್
ದೃಶ್ಯ ಐದು: ಕೋಡೆಮುರಾನಿಯ ಮನೆ
(ಕೋಡೆಯ ಮನೆಯಲ್ಲಿ ಕೋಡೆ ಮಾತ್ರ ಇದ್ದಾನೆ. ಧರ್ಮಗುರು ಬರುತ್ತಾನೆ)
ಕೋಡೆ: (ಎದ್ದು ನಿಂತು ನಮ್ರತೆಯಿಂದ) ನಮಸ್ಕಾರ ಧರ್ಮಗುರುಗಳಿಗೆ.
ಧರ್ಮ: ಒಂದು ಕುರಿ ಬೇಕಾಗಿತ್ತು ಕೋಡೆ.
ಕೋಡೆ: ಇದೆ ಗುರುಗಳೆ.
ಧರ್ಮ: ಕುರಿಯ ಬೆಲೆ ಹತ್ತು ರುಪಾಯಿಯಲ್ಲವೆ?
ಕೋಡೆ: ಹೌದು ಗುರುಗಳೆ. ಆದರೆ ಒಂದು ಕುರಿ ಜೊತೆಗೆ ಒಂದು ಕೋಳಿಯನ್ನು ಕೊಂಡುಕೊಳ್ಳಲೇ ಬೇಕು.
ಧರ್ಮ: ಏನು ಕೋಳಿಯ ಬೆಲೆ?
ಕೋಡೆ: ಕೋಳಿಯ ಬೆಲೆ ಸಾವಿರ ರುಪಾಯಿ.
ಧರ್ಮ: ನಾಳೆಯೂ ಇದೇ ಬೆಲೆಗೆ ಮಾರುತ್ತೀಯಾ?
ಕೋಡೆ: ಹೌದು ಗುರುಗಳೆ.
ಧರ್ಮ: ಸರಿ. ತೆಗೆದುಕೊ ಹತ್ತು ರುಪಾಯಿ. ಕುರಿ ಇವತ್ತು ಕೊಂಡುಹೋಗುತ್ತೇನೆ. ಕೋಳಿ ನಾಳೆ ಕೊಂಡುಹೋಗುತ್ತೇನೆ.
ದೃಶ್ಯ ಆರು: ಧರ್ಮಗುರುವಿನ ಮನೆ
(ಆರೇಳು ವ್ಯಕ್ತಿಗಳು ಮತ್ತು ದೂತ ಕುಳಿತುಕೊಂಡಿದ್ದಾರೆ. ಕೋಡೆ ಮತ್ತು ಮುರಾನಿ ಬರುತ್ತಾರೆ. ಮುರಾನಿಯ ಕೈಯಲ್ಲಿ ಕೋಳಿ ಇದೆ)
ಧರ್ಮ: (ವ್ಯಕ್ತಿಗಳೊಡನೆ) ನಾಳೆಯೆ ನಾವು ಬರಗಾಲ ಪೀಡಿತ ಪ್ರದೇಶಕ್ಕೆ ಹೋಗಿ ಸಂಗ್ರಹವಾದ ಹಣವನ್ನು ಕೊಟ್ಟು ಒಂದು ದಿನದ ಶ್ರಮದಾನ ಮಾಡಿ ಬರಬೇಕು.
ಕೋಡೆ: ಗುರುಗಳೆ, ಇದು ನೀವು ಮೊನ್ನೆ ಕೊಂಡುಹೋದ ಕುರಿಯ ಜೊತೆ ಕೊಂಡುಕೊಂಡ ಕೋಳಿ. ತಕ್ಕೊಳ್ಳಿ. ಹಣ ಕೊಡಿ.
ಧರ್ಮ: ಹಾಂ. ಕೋಳಿಯ ಹಣ. ಸಾವಿರ ರುಪಾಯಿ.
ಕೋಡೆ ಮುರಾನಿ: ಹೌದು ಗುರುಗಳೆ.
(ಸಾವಿರ ರುಪಾಯಿ! ಎಂದು ವ್ಯಕ್ತಿಗಳು ಉದ್ಗರಿಸುತ್ತಾರೆ)
ಧರ್ಮ: ಛೆ! ನೀವು ಯಾಕೆ ಬಂದಿರಿ? ನಾಳೆ ನಾನೇ ಬರುವವನಿದ್ದೆ.
ಮುರಾನಿ: ನಿನ್ನೆಯೆ ನೀವು ಕೊಡಬೇಕಾಗಿತ್ತು ಗುರುಗಳೆ.
ಧರ್ಮ: ನಿನ್ನೆ ಕೊಡ್ತೇನೆ ಅನ್ಲಿಲ್ಲ. ನಾಳೆ ಕೊಡ್ತೇನೆ ಅಂದಿದ್ದೆ.
ಕೋಡೆ: ನಾಳೆ ಎಂದರೆ ನಿನ್ನೆ ಅಲ್ಲವೆ ಗುರುಗಳೆ?
ಧರ್ಮ: ನಾಳೆ ಎಂದರೆ ನಾಳೆಯೆ. ನಾಳೆ ನಿನ್ನೆ ಹೇಗಾಗುತ್ತೆ ಕೋಡೆ? (ಎಲ್ಲರೂ ನಗುತ್ತಾರೆ)
ಮುರಾನಿ: ನೀವು ಕೊಂಡುಹೋದದ್ದು ಮೊನ್ನೆ ಗುರುಗಳೆ.
ಧರ್ಮ: ಹೌದು ಮೊನ್ನೆ.
ಮುರಾನಿ: ನಾಳೆ ಕೊಡ್ತೇನೆ ಅಂತ ಹೇಳಿದ್ದೀರಿ.
ಧರ್ಮ: ಹೌದು ನಾಳೆ.
ಮುರಾನಿ: ನಾಳೆ ಅಂದರೆ ನಿನ್ನೆ.
ಧರ್ಮ: ಪುನ: ಅದನ್ನೇ ಹೇಳ್ತಿದ್ದಿಯಲ್ಲಾ ಮುರಾನಿ? ನಿನ್ನೆ ನಿನ್ನೆಯೆ, ನಾಳೆ ನಾಳೆಯೆ. (ವ್ಯಕ್ತಿಗಳೊಡನೆ) ಅಲ್ವ ನೀವೇ ಹೇಳಿ. (ಏನು ಹೇಳಬೇಕು ಎಂದು ತಿಳಿಯದೆ ಕೋಡೆ ಮುರಾನಿ ಗೊಂದಲದಲ್ಲಿ ಮುಳುಗುತ್ತಾರೆ) ಸ್ಪಷ್ಟವಾಗಲಿಲ್ವ? ನೋಡಿ. ಒಂದು ವೇಳೆ ನಿನ್ನೆಯೆ ನಾನು ಬರುತ್ತಿದ್ದರೆ, ಅದು ನಾಳೆ ಆಗುತ್ತದೆಯೆ? ಇಲ್ಲ. ಅದು ನಿನ್ನೆಯೆ ಆಗುತ್ತದೆ. ನಿನ್ನೆ ಕೂಡ ನಾಳೆ ಆಗುವುದಾದರೆ, ಇವತ್ತು ಕೂಡ ನಾಳೆಯೆ ಆಗುತ್ತದಲ್ಲ? ಆದರೆ ಇವತ್ತನ್ನು ನಾಳೆ ಅಂತ ಯಾರಾದ್ರೂ ಹೇಳ್ತಾರಾ? (ನಗುತ್ತಾನೆ. ವ್ಯಕ್ತಿಗಳು ಕೂಡ ನಗುತ್ತಾರೆ) ಇಲ್ಲ! ನಿಜವಾದ ನಾಳೆ ಯಾವತ್ತೂ ನಾಳೆಯೆ ಆಗಿರುತ್ತದೆ. ಆದುದರಿಂದಲೇ ನಾನು ನಾಳೆ ಕೊಡುತ್ತೇನೆ ಅಂತ ಹೇಳಿದ್ದು. ನಾಳೆ ನೀವು ಬರುವುದು ಬೇಡ. ನಾನೇ ಬಂದು ಕೊಡುತ್ತೇನೆ.
ಮುರಾನಿ: ನಾಳೆ ನೀವು ಬರಗಾಲ ಪೀಡಿತ ಪ್ರದೇಶಕ್ಕೆ ಹೋಗುತ್ತೀರಿ ಅಂತ ಈಗ ಹೇಳಿದಿರಿ!
ದರ್ಮ: ನಿಜ. ನಾಳೆ ಬರಗಾಲ ಪೀಡಿತ ಪ್ರದೇಶಕ್ಕೆ ಹೋಗ್ತೀವಿ. ಆದರೆ ನಾಳೆ ಏನು ನಾಳೆಗೇ ಮುಗಿದುಹೋಗ್ತದಾ? ನಾಳೆ ಮತ್ತೂ ಇದ್ದೇ ಇರುತ್ತದೆ. (ವ್ಯಕ್ತಿಗಳೊಡನೆ) ಅಲ್ವ?
ಎಲ್ಲರೂ: ಹೌದು ಹೌದು. ನಾಳೆ ಮತ್ತೂ ಇರುತ್ತದೆ.
(ಗೊಂದಲದ ಸ್ಥಿತಿಯಲ್ಲಿ ಕೋಡೆ ಮುರಾನಿ ಹೊರಡುತ್ತಾರೆ)
ದೂತ: (ಹಾಡುತ್ತಾನೆ)ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.
ಎಲ್ಲರೂ: ಕೋಡೆ ಮುರಾನಿಯ ಕೋಳಿಗೆ
ಫೇಡ್ ಔಟ್
Leave A Comment