ಪಾತ್ರಗಳು:
ಅಜ್ಜಿ, ಮಾಮೊ (ಅಜ್ಜಿಯ  ಮೊಮ್ಮಗ)
ವ್ಯಕ್ತಿ೧, ವ್ಯಕ್ತಿ೨, ವ್ಯಕ್ತಿ೩, ವ್ಯಕ್ತಿ೪, ಕತ್ತೆಮರಿ
ಸಖಿ೧, ಸಖಿ೨, ರಾಜಕುಮಾರಿ, ರಾಜ, ರಾಣಿ , ಮಂತ್ರಿ 

 

ದೃಶ್ಯ ಒಂದು: ಬೀದಿ

(ಮಾಮೊ. ಸುಮಾರು ಹದಿನೆಂಟು ವರ್ಷದ ತೆಳ್ಳಗಿನ ದೇಹದ ಯುವಕ. ಸೋಮಾರಿಯಂತೆ ನಡೆಯುತ್ತಿದ್ದಾನೆ. ವ್ಯಕ್ತಿ ೧ ಎದುರಾಗುತ್ತಾನೆ)

ಮಾಮೊ: ಅಜ್ಜಿ ಹೇಳಿದ್ದಾಳೆ ಕೆಲಸ ಮಾಡು ಅಂತ. ನನಗೆ ಒಂದು ಕೆಲಸ ಕೊಡಿ.

ವ್ಯ೧: ಏನು ಕೆಲಸ ಮಾಡುತ್ತಿ ನೀನು?

ಮಾಮೊ: ಯಾವುದೇ ಕೆಲಸ. ನೀವು ಹೇಳಿದ ಕೆಲಸ.

ವ್ಯ೧: (ಎತ್ತರಕ್ಕೆ ಬೆಟ್ಟು ಮಾಡಿ ತೋರಿಸಿ) ಆ ಮರದ ತುದಿಯಲ್ಲಿ ಒಣಗಿದ ತೆಂಗಿನಕಾಯಿಯ ಗೊನೆ ಕಾಣಿಸುತ್ತಿದೆಯೆ?

ಮಾಮೊ: ಕಾಣಿಸುತ್ತಿದೆ.

ವ್ಯ೧: ಮರ ಹತ್ತಿ ಅದನ್ನು ಕೊಯ್ದು ಹಾಕ್ತೀಯ?

ಮಾಮೊ: ಇಲ್ಲ .ಅದು ನನ್ನಿಂದಾಗಲಿಕ್ಕಿಲ್ಲ.

ವ್ಯ೧: (ಕೆಳಗೆ ಆಳಕ್ಕೆ ಬೆಟ್ಟು ಮಾಡಿ ತೋರಿಸಿ)ಬಾವಿಗೆ ಒಂದು ಕೊಡ ಬಿದ್ದಿದೆ. ಕಾಣಿಸ್ತಿದೆಯ?

ಮಾಮೊ: (ಬಗ್ಗಿ ನೋಡಿ) ಇಲ್ಲ, ಕಾಣಿಸ್ತಿಲ್ಲ.

ವ್ಯ೧: ಕಾಣಿಸ್ತಿಲ್ಲ ಯಾಕೆಂದರೆ, ಅದು ನೀರಿನಡಿಯಲ್ಲಿದೆ. ಅದನ್ನ ಮೇಲಕ್ಕೆ ತರ‍್ತೀಯ?

ಮಾಮೊ: ಇಲ್ಲ . ಅದು ನನ್ನಿಂದಾಗ್ಲಿಕ್ಕಿಲ್ಲ.

ವ್ಯ೧: ನನ್ನ ಒಂದು ಹಸು ಗೂಟ ಕಿತ್ಕೊಂಡು ಓಡಿಹೋಗಿದೆ. ಹುಡುಕಿ ತರ‍್ತೀಯ?

ಮಾಮೊ: ಇಲ್ಲ . ಅದು ನನ್ನಿಂದಾಗ್ಲಿಕ್ಕಿಲ್ಲ.

ವ್ಯ೧: (ಸಿಟ್ಟಿನಿಂದ) ಮತ್ತೆಂಥಾ ಕೆಲಸ ನೀನು ಮಾಡೋದು?

ಮಾಮೊ: ನೀವು ಹೇಳಿದ ಕೆಲಸ.

ವ್ಯ೧: ಈಗ ಹೇಳಿದ್ದೆಲ್ಲ ನಾನು ಹೇಳಿದ ಕೆಲಸ ಅಲ್ವ?

ಮಾಮೊ: ನೀವು ಹೇಳಿದ ಬೇರೆ ಒಂದು ಕೆಲಸ ಮಾಡ್ತೇನೆ.

ವ್ಯ೧: (ರೇಗಿ) ನಾನು ದೊಡ್ಡ ರೊಟ್ಟಿ ಮಾಡಿಟ್ಟಿದ್ದೇನೆ. ಅದನ್ನು ನಾಲ್ಕು ತುಂಡು ಮಾಡ್ತೀಯ?

ಮಾಮೊ: (ಉತ್ಸಾಹದಿಂದ) ಅದನ್ನು ಮಾಡ್ತೀನಿ.

ವ್ಯ೧: ಅದನ್ನು ಮಾಡ್ತೀಯ? ತುಂಡು ಮಾಡಿ ಬಾಯಿಗೂ ಇಡ್ತೀಯ? ಬಾಯಿಗಿಟ್ಟ ಮೇಲೆ ನುಂಗ್ತೀಯ ಅಲ್ಲಾ  ಉಗುಳ್ತೀಯ?

ಮಾಮೊ: ನುಂಗ್ತೀನಿ.

ವ್ಯ೧: ಬೇಗ ಓಡು ಇಲ್ಲಿಂದ. ಇಲ್ಲದಿದ್ರೆ ನಾನೇ ನುಂಗ್ತೇನೆ ನಿನ್ನನ್ನು!

(ಮಾಮೊ ಓಡಿಹೋಗುತ್ತಾನೆ)

ವ್ಯಕ್ತಿ೧ : ಸೋಮಾರಿ! (ಹೋಗುತ್ತಾನೆ. ಅವನು ಹೋದ ಮೇಲೆ ಪುನ: ಮಾಮೊ ರಂಗದ ಮೇಲೆ ಕಾಣಿಸಿಕೊಳ್ಳುತ್ತಾನೆ)

(ವ್ಯಕ್ತಿ ೨ಎದುರಾಗುತ್ತಾನೆ)

ಮಾಮೊ: ಅಜ್ಜಿ ಕೆಲಸಮಾಡು ಅಂತ ಹೇಳಿದ್ದಾಳೆ. ಯಾರಾದ್ರೂ ಕೆಲಸ ಕೊಡಿ.

ವ್ಯ೨: ಅಜ್ಜಿ  ಕೆಲಸ ಮಾಡು ಅಂತ ಹೇಳಿದ್ದಾಳಾ?

ಮಾಮೊ: ಹೌದು.

ವ್ಯ೨:  ಕೆಲಸ ನೋಡು ಅಂತಲ್ವ ಅಜ್ಜಿ ಹೇಳಿದ್ದು?

ಮಾಮೊ: ಅಲ್ಲ.  ಕೆಲಸ ಮಾಡು ಅಂತ.

ವ್ಯ೨: ಮಾಡುವ ಕೆಲಸ ಇಲ್ಲ . ನೋಡುವ ಕೆಲಸ ಆದೀತಾ?

ಮಾಮೊ: ಏನು ಕೆಲಸ?

ವ್ಯ೨: ನೋಡು ಅಲ್ಲಿ ಕೊಬ್ಬರಿ ಒಣಗಲು ಹಾಕಿದ್ದೇನೆ. ಅದನ್ನು ತಿನ್ನಲು ಕಾಗೆಗಳು ಬರದ ಹಾಗೆ  ನೋಡ್ಬೇಕು. (ದೂರದಲ್ಲಿ ಕಾಗೆಗಳ ಕೂಗು ಕೇಳಿಸುತ್ತದೆ)

ಮಾಮೊ: ಬಂದ ಮೇಲೆ ಓಡಿಸೋದು ಬೇಡ್ವಾ?

ವ್ಯ೨: ಓಡಿಸ್ಬೇಕು.

ಮಾಮೊ: ಓಡಿಸಿದ್ಮೇಲೆ ವಾಪಾಸು ಬಂದ್ರೆ?

ವ್ಯ೨: ವಾಪಾಸು ಓಡಿಸ್ಬೇಕು.

ಮಾಮೊ: ವಾಪಾಸು ಬಂದ್ರೆ?

ವ್ಯ೨: ವಾಪಾಸು ಓಡಿಸ್ಬೇಕು.

ಮಾಮೊ:  ಹಾಗೆ ಬರ‍್ತಾ ಇದ್ರೆ?

ವ್ಯ೨: ಓಡಿಸ್ತಾ ಇರ‍್ಬೇಕು.

ಮಾಮೊ:  (ಖುಷಿಯಿಂದ)ಒಳ್ಳೇ ಕೆಲಸ. ಮಾಡ್ತೇನೆ.

ವ್ಯ೨: ಇಲ್ಲಿ ಕೂತ್ಕೊ. ಕೂತ್ಕೊಂಡಲ್ಲಿಂದ್ಲೇ  ಓಡಿಸಿದ್ರೆ ಕೆಲವು ಸಲ ಓಡುವುದಿಲ್ಲ. ಎದ್ದು ಓಡಿಸ್ಬೇಕು.

ಮಾಮೊ: ಆಯ್ತು.

ವ್ಯ೨: ಆಯ್ತು , ತಿನ್ನುವುದಿಲ್ಲ. (ವ್ಯಕ್ತಿ ೨ ಹೋಗುತ್ತಾನೆ)

(ಕಾಗೆಗಳ ಕೂಗು ಜೋರು. ಮಾಮೊ ಕಾಗೆಗಳನ್ನು ಕುಳಿತಲ್ಲಿಂದಲೇ ಓಡಿಸುತ್ತಾನೆ. ಒಂದು ತುಂಡು ಕೊಬ್ಬರಿ ತೆಗೆದು ತಿನ್ನುತ್ತಾನೆ)

ಮಾಮೊ: ಎಲಾ, ಈ ಕಾಗೆಗಳಿಗೆ ಸ್ವಲ್ಪ ಕೂಡ ಬುದ್ಧಿ ಇಲ್ವ? ಇವುಗಳಿಗೆ ಕಲ್ಲಿನಿಂದ ಹೊಡೀಬೇಕು. ಇಲ್ಲಿ ಒಂದು ಕಲ್ಲು ಕೂಡ ಕಾಣಿಸುತ್ತಿಲ್ಲ. (ಅತ್ತಿತ್ತ ನೋಡಿ) ಕೊಬ್ಬರಿಯೆ ಉಂಟಲ್ಲ? ಅದ್ರಿಂದ್ಲೇ ಹೊಡೀತೇನೆ. (ಒಂದೊಂದೇ ಕೊಬ್ಬರಿ ತೆಗೆದು ಕಾಗೆಗಳಿಗೆ ಗುರಿಯಿಟ್ಟು ಎಸೆಯುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಕಾಗೆಗಳ ಕೂಗು ನಿಲ್ಲುತ್ತದೆ) ಕಾಗೆಗಳನ್ನು ಓಡಿಸುವುದು  ಎಷ್ಟು ಸುಲಭ! ಇದು ಒಳ್ಳೆಯ ಕೆಲಸ!

(ವ್ಯಕ್ತಿ ಬರುತ್ತಾನೆ. ಕೈಯಲ್ಲಿ  ಒಂದು ಪ್ಲಾಸ್ಟಿಕ್ ಕ್ಯಾನ್. ಕೊಬ್ಬರಿಯ ರಾಶಿ ನೋಡಿ ಹೌಹಾರಿ ನಿಲ್ಲುತ್ತಾನೆ)

ವ್ಯ೨: ಎಲ್ಲಿ ಹೋಯಿತು ಕೊಬ್ಬರಿ ಎಲ್ಲಾ? ಅರೆವಾಸಿ ಮಾತ್ರ ಇದೆ!

ಮಾಮೊ: ಕಾಗೆಗಳನ್ನು ಓಡಿಸ್ಲಿಕ್ಕೆ ಉಪಯೊಗಿಸಿದೆ. ಈಗ ಒಂದು ಕಾಗೆಯೂ ಇಲ್ಲ.

ವ್ಯ೨: ಹೇಗೆ ಉಪಯೊಗಿಸಿದೆ?

ಮಾಮೊ: ಕಾಗೆಗಳಿಗೆ ಗುರಿಯಿಟ್ಟು ಎಸೆದೆ. ಕಾಗೆಗಳೆಲ್ಲ ಓಡಿಹೋದುವು.

ವ್ಯ೨: (ವ್ಯಕ್ತಿ ತಲೆ ತಲೆ ಚಚ್ಚಿಕೊಳ್ಳುತ್ತಾ) ಏಳು. ಓಡು ಇಲ್ಲಿಂದ. ಬೇಗ!

ಮಾಮೊ: ನನ್ನ ಸಂಬಳ?

ವ್ಯ೨: ಏನು ಸಂಬಳವಾ?

ಮಾ: ಹೌದು ಸಂಬಳ.

ವ್ಯ೨: ಕೊಡಲೇ ಬೇಕಾ?

ಮಾ:  ಕೊಡಲೇ ಬೇಕು.

ವ್ಯ೨: ತಗೊ.  (ಕ್ಯಾನಿನ ತಳದಲ್ಲಿದ್ದ  ಅಲ್ಪ ಸ್ವಲ್ಪ ಎಣ್ಣೆಯನ್ನು ಮಾಮೊನ ಕೋಟಿನ ಎಲ್ಲಾ ಜೇಬುಗಳಿಗೂ ಸುರಿಯುತ್ತಾನೆ. (ನೀರು ಉಪಯೊಗಿಸಬೇಕು)

ಫೇಡ್ ಔಟ್

ದೃಶ್ಯ ಎರಡು: ಮನೆ

(ಅಜ್ಜಿ ಮತ್ತು ಮಾಮೊ. ಅಜ್ಜಿ ಪಾತ್ರೆ ತೊಳೆಯುತ್ತಿದ್ದಾಳೆ)

ಅ: ಬಂದ್ಯಾ? ಸಂಬಳ ತಂದ್ಯಾ?

ಮಾ: ತಂದಿದ್ದೇನೆ.

ಅ: ಎಲ್ಲಿದೆ?

ಮಾಮೊ: ಇಲ್ಲಿದೆ. (ಎಣ್ಣೆಯಿಂದ ಒದ್ದೆಯಾದ ಜೇಬುಗಳನ್ನು ತೋರಿಸುತ್ತಾನೆ)

ಅ: (ಅಜ್ಜಿ ಕುತೂಹಲದಿಂದ ಎದ್ದು ಬಂದು ಪರಿಶೀಲಿಸಿ, ಮೂಸಿ ನೋಡಿ) ಸಂಬಳ ಎಣ್ಣೆ ಯಾ?

ಮಾಮೊ: ಹೌದಜ್ಜಿ.

ಅ: ಥತ್! ನೀನೊಬ್ಬ!  ಅದನ್ನು ಒಂದು ಬಾಟಲಿಯಲ್ಲಿ ಹಾಕಿ ಕೈಯಲ್ಲಿ ಹಿಡಿದುಕೊಂಡು ಬರ್ಲಿಕ್ಕಾಗ್ತಿರ್ಲಿಲ್ವ? ಹೀಗೆ ಕೋಟಿನ ಜೇಬುಗಳಿಗೆ ಹೊಯ್ಸಿಕೊಳ್ಳುವ ಬದಲು ತಲೆಗಾದ್ರೂ ಹಾಕಿಸಿಕೊಳ್ಳಬಹುದಾಗಿತ್ತು.

ಮಾಮೊ: ಇನ್ನು ಹಾಗೇ ಮಾಡುತ್ತೇನೆ.

ಅ: ಆಯ್ತು .ಇನ್ನು ಹಾಗೇ ಮಾಡು. ಈಗ ಏನು ಮಾಡುತ್ತಿ?

ಮಾಮೊ: ಊಟ ಮಾಡ್ತೇನೆ.

ಅ: ಊಟಕ್ಕೆ ಆಗಿಲ್ಲ. ಅನ್ನ ಇನ್ನೂ ಬೆಂದಿಲ್ಲ.

ಮಾಮೊ: ಬೇಯಿಸು. ನಂಗೆ ಜೋರು ಹಸಿವು.

ಅ:  ಮೊದಲು ಸ್ನಾನ ಮಾಡು.

ಮಾಮೊ: ಸ್ನಾನ ಮಾಡಿದ್ರೆ ಹಸಿವು ಜಾಸ್ತಿಯಾಗುತ್ತೆ.

ಅ: ಹಾಗಿದ್ರೆ ಸ್ನಾನ ಮಾಡ್ಬೇಡ. ಸ್ವಲ್ಪ ಹೊತ್ತು ನೆಲದ ಮೇಲೆ ಕವಚಿ ಮಲಗು.

ಮಾಮೊ: ಮಲಗಿಕೊಂಡು ಏನು ಮಾಡ್ಲಿ?

ಅ:  ಏನೂ ಮಾಡ್ಬೇಡ. ಯಾಕಂದ್ರೆ  ಊಟ ಮಾಡುವುದರ ಹೊರತು ನಿನ್ನಿಂದ ಬೇರೆ ಏನೂ ಮಾಡ್ಲಿಕ್ಕೆ ಆಗುವುದಿಲ್ಲ. ಎಂಥ ಭಾಗ್ಯವಂತ ನೀನು! (ಬೆಳಕು ಕಡಿಮೆಯಾಗಲು ಆರಂಭ) ಮಲಗಿಕೊಂಡು  ಪದ್ಯ ಹೇಳು. ಆಗ ಹಸಿವು ಕಡಿಮೆ ಆಗ್ತದೆ. ನಾಳೆ ಏನು ಕೆಲಸ ಮಾಡ್ಲಿಕ್ಕೆ ಆಗ್ತದೆ ಅಂತ ಯೊಚನೆ ಮಾಡು. ಅಜ್ಜಿಗೆ ಕಾಯಿಲೆಯಾಗಿ ಮಲಗಿದ್ರೆ ಅನ್ನ ಬೇಯಿಸೋರು ಯಾರು ಅಂತ್ಲೂ ಯೊಚನೆ ಮಾಡು. ಅಜ್ಜಿ ಸತ್ತ ಮೇಲೆ ಏನು ಮಾಡುವುದು ಅಂತ್ಲೂ ಯೊಚನೆ ಮಾಡು.

ಫೇಡ್ ಔಟ್

 

ದೃಶ್ಯ ಮೂರು: ಬಯಲು

(ವ್ಯಕ್ತಿ  ಕುಳಿತುಕೊಂಡು ಕೈಯಲ್ಲಿ  ಹಗ್ಗ  ಹೊಸೆಯುತ್ತಿದ್ದಾನೆ. ಬಳಿಯಲ್ಲಿ ಒಂದು ನಾರಿನ ಸಿಂಬಿ. ಮಾಮೊ ಬಳಿ ಹೋಗಿ ಕುತೂಹಲದಿಂದ ಅವನ ಕೆಲಸವನ್ನು ನೋಡುತ್ತಾನೆ)

ಮಾಮೊ:  ಏನು ಮಾಡ್ತಾ ಇದ್ದೀರಿ ನೀವು?

ವ್ಯ ೩: ಕಾಣಿಸ್ತಿಲ್ವಾ? ಹಗ್ಗ  ಹೊಸೆಯುತ್ತಿದ್ದೇನೆ.

ಮಾಮೊ: ಹೀಗಾ ಹಗ್ಗ ಹೊಸೆಯೊದು?

ವ್ಯ ೩: ಹೌದು. ನಿಂಗೇನಾಗ್ಬೇಕು?

ಮಾಮೊ: ಅಜ್ಜಿ  ಕೆಲಸ ಮಾಡಲು ಹೇಳಿದ್ದಾಳೆ. ಕೆಲಸ ಕೊಡಿ.

ವ್ಯ ೩: ಯಾರಿಗೆ?

ಮಾಮೊ: ನಂಗೆ. ಮತ್ಯಾರಿಗೆ?

ವ್ಯ ೩: ಹಗ್ಗ  ಹೊಸೀತೀಯಾ?

ಮಾಮೊ: ಓ. ಹೊಸಿತೀನಿ.

ವ್ಯ೩: ಹೇಗೆ ಅಂತ ಗೊತ್ತಾಯಾ?

ಮಾಮೊ: ಓ. ಗೊತ್ತಾಯ್ತು.

ವ್ಯ ೩: ಬಾ ಕೂತ್ಕೊ. ಸ್ವಲ್ಪ  ಹೊತ್ತು  ಹೊಸಿ. ನಾನು ಹಸುಗಳನ್ನ  ಮೇಯಲು ಬಿಟ್ಟು  ಬರ‍್ತೇನೆ.

(ಮಾಮೊ ಹೊಸೆಯಲು ಕುಳಿತುಕೊಳ್ಳುತ್ತಾನೆ. ವ್ಯಕ್ತಿ  ಹೋಗುತ್ತಾನೆ. ಮಾಮೊ ಸ್ವಲ್ಪ ಹೊತ್ತು  ಹೊಸೆಯಲು ಪ್ರಯತ್ನಿಸುತ್ತಾನೆ. ಅವನಿಂದ ಆಗುವುದಿಲ್ಲ. ಅತ್ತಿತ್ತ  ನೋಡಿ ನಾರಿನ ಸಿಂಬಿಯ ಮೇಲೆ ತಲೆಯಿಟ್ಟು ಮಲಗುತ್ತಾನೆ. ಸ್ವಲ್ಪ ಹೊತ್ತಿನಲ್ಲಿ  ವ್ಯಕ್ತಿ ಬರುತ್ತಾನೆ. ಮಲಗಿರುವ ಮಾಮೊನನ್ನು ಕಂಡು ರೇಗಿ ಅವನ ತಲೆಗೆ ಮುಷ್ಟಿಯಿಂದ ಬಲವಾಗಿ ಕುಟ್ಟುತ್ತಾನೆ. ಮಾಮೊ ಅಯ್ಯಯೊ ಎಂದು ತಲೆ ತಿಕ್ಕುತ್ತಾ ಓಡಿಹೋಗುತ್ತಾನೆ)

ಫೇಡ್ ಔಟ್

 

ದೃಶ್ಯ  ನಾಲ್ಕು: ಮನೆ

(ಅಜ್ಜಿ  ಕಾಯಿಪಲ್ಲೆ  ಹೆಚ್ಚುತ್ತಿದ್ದಾಳೆ. ಮಾಮೊ ಹೋಗಿ ಅಜ್ಜಿಯ ಬಳಿಯಲ್ಲಿ ಕುಳಿತುಕೊಳ್ಳುತ್ತಾನೆ)

ಅ: ಯಾರು?

ಮಾಮೊ:  ನಾನು ಮಾಮೊ.

ಅ: ಕೆಲಸ ಬೇಗ ಮುಗೀತಾ?

ಮಾಮೊ: (ತಲೆ ತಿಕ್ಕಿಕೊಳ್ಳುತ್ತಾ) ಹೂಂ. ಬೇಗ ಮುಗೀತು.

ಅ: ಸಂಬಳ ತಂದಿದ್ದೀಯ?

ಮಾಮೊ:  ತಂದಿದ್ದೇನೆ

ಅ: ಹೇಗೆ ತಂದೆ?

ಮಾಮೊ: ತಲೆಯಲ್ಲಿ ತಂದೆ.

ಅ: ಎಲ್ಲಿದೆ? (ಅಜ್ಜಿ  ಎದ್ದುಬರುತ್ತಾಳೆ)

ಮಾಮೊ: ಇಲ್ಲಿದೆ.

ಅ: (ಅಜ್ಜಿ ಬಂದು ತಲೆಯನ್ನು ಪರೀಕ್ಷಿಸಿ) ಇಷ್ಟೆತ್ತರ ಉಬ್ಬಿಕೊಂಡಿದೆ? ಏನು ಇದು?

ಮಾ: ಸಂಬಳ.

ಅ: ನಿಂಗೆ  ಇಷ್ಟು ದೊಡ್ಡ  ಸಂಬಳವೂ ಸಿಗ್ಲಿಕ್ಕೆ ಶುರುವಾಯಾ ? ಇವತ್ತು ಹಸಿವೆ ಇಲ್ವ?

ಮಾಮೊ: ಉಂಟು.

ಅ: ಬಾ ಊಟ ಹಾಕ್ತೀನಿ. ನಾಳೆ ಎಂಥ ಕೆಲಸ ಮಾಡ್ತಿ?

ಮಾಮೊ: ನಾಳೆ ಒಳ್ಳೆಯ ಕೆಲಸ ಮಾಡಿ ಸಂಬಳವನ್ನ ಹೆಗಲಿನ ಮೇಲೆ ತರ‍್ತೇನೆ.

 

ದೃಶ್ಯ ಐದು: ಬಯಲು

(ಮಾಮೊ ಹೆಗಲ ಮೇಲೆ ಒಂದು ಕತ್ತೆಮರಿಯನ್ನಿರಿಸಿಕೊಂಡು ನಡೆಯುತ್ತಿದ್ದಾನೆ. ವ್ಯಕ್ತಿ೪ ಅವನನ್ನು ತಡೆದು ನಿಲ್ಲಿಸಿ)

ವ್ಯ ೪: ಎಲ್ಲಿಗೆ ಒಯಾ ಇದ್ದಿ ಈ ಕತ್ತೆ ಮರಿಯನ್ನ?

ಮಾಮೊ: ಇದು ನನ್ನ  ಕೆಲಸಕ್ಕೆ ಇವತ್ತು ಸಿಕ್ಕಿದ ಸಂಬಳ.

ವ್ಯ ೪: ಏನು ಕೆಲಸ ಮಾಡಿದೆ?

ಮಾಮೊ: ಹೊಲ ಅಗ್ದೆ.

ವ್ಯ ೪: ಒಳ್ಳೆಯ ಕೆಲಸ. ಇದು ಹೊಲದ ಯಾಜಮಾನ ಕೊಟ್ಟ  ಸಂಬಳವಾ?

ಮಾಮೊ: ಹೌದು.

ವ್ಯ ೪: ಹೆಗಲ ಮೇಲೆ ಯಾಕೆ ಇಟ್ಕೊಂಡಿದ್ದಿ? ನಡೆಸಿಕೊಂಡು ಹೋಗ್ಬಹುದಲ್ಲ?

ಮಾಮೊ: ಸಂಬಳವನ್ನು ಹೆಗಲ ಮೇಲೆ ಇಟ್ಟುಕೊಂಡು ಬಾ ಅಂತ ಅಜ್ಜಿ ಹೇಳಿದ್ದಾಳೆ.

ವ್ಯ ೪: ಅಜ್ಜಿ ಹೇಳಿದ್ದು ಸರಿ.

ಮಾಮೊ: ನಾನು ಮಾಡಿದ್ದು ಸರಿಯಲ್ವ?

ವ್ಯ ೪: ನೀನು ಮಾಡಿದ್ದು ಕೂಡ ಸರಿ. (ಉಕ್ಕಿ ಬರುವ ನಗುವನ್ನು ತಡೆದುಕೊಂಡು ಹೋಗುತ್ತಾನೆ)

ಫೇಡ್ ಔಟ್

 

ದೃಶ್ಯ ಆರು: ಅರಮನೆಯ ಮುಂದಿನ ರಸ್ತೆ

(ಮಾಮೊ ಕತ್ತೆಮರಿಯನ್ನು ಹೊತ್ತುಕೊಂಡು ನಡೆಯುತ್ತಿದ್ದಾನೆ. ಕತ್ತೆ ಬ್ಯಾಂ ಬ್ಯಾಂ ಎಂದು ಕೂಗುತ್ತದೆ. ರಾಜಕುಮಾರಿ ಅರಮನೆಯ ಹೊಸ್ತಿಲ ಒಳಗೆ ಕುಳಿತಿದ್ದಾಳೆ. ಕತ್ತೆಯ ಕೂಗು ಕೇಳಿ  ರಾಜಕುಮಾರಿಯ ಸಖಿಯರು ಬರುತ್ತಾರೆ. ಮಾಮೊ ಕತ್ತೆಯನ್ನು ಹೊತ್ತುಕೊಂಡು ನಡೆಯುತ್ತಿರುವ ದೃಶ್ಯವನ್ನು ನೋಡಿ ಜೋರಾಗಿ ನಗುತ್ತಾರೆ.  ಮಾಮೊ ಹಾಗೆಯೆ ನಿಂತು ಅವಳನ್ನು ನೋಡುತ್ತಾನೆ. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ರಾಜಕುಮಾರಿ ಎದ್ದು  ಕುಳಿತುಕೊಳ್ಳುತ್ತಾಳೆ. ಸಖಿಯರ ಮಾತು ವೀಕ್ಷಕ ವಿವರಣೆಯಂತಿರುತ್ತದೆ)

ಸಖಿ೧: (ಸಂಭ್ರಮಾತಿಶಯದಿಂದ) ರಾಜಕುಮಾರಿ ಕುಳಿತಿದ್ದಾಳೆ! (ರಾಜಕುಮಾರಿ ಎದ್ದು ನಿಲ್ಲುತ್ತಾಳೆ)

ಸಖಿ೨: ರಾಜಕುಮಾರಿ ಎದ್ದು  ನಿಂತಿದ್ದಾಳೆ! (ರಾಜಕುಮಾರಿ ನಗುತ್ತಾಳೆ)

ಸಖಿ೧: ರಾಜ ಕುಮಾರಿ ನಗ್ತಿದ್ದಾಳೆ!

(ರಾಜಕುಮಾರಿ ಒಂದೇ ಸವನೆ ನಗುತ್ತಾಳೆ. ಹೊಸ್ತಿಲಿನ ಹೊರಗೆ ಬರುತ್ತಾಳೆ)

ಸಖಿ೨:ರಾಜಕುಮಾರಿ ನಡೆಯುತ್ತಿದ್ದಾಳೆ!  (ರಾಜಕುಮಾರಿ ಮೆಟ್ಟಲಿಳಿಯುತ್ತಾಳೆ)

ಸಖಿ೧: ರಾಜಕುಮಾರಿ ಮೆಟ್ಟಲು ಇಳಿಯುತ್ತಿದ್ದಾಳೆ! (ರಾಜಕುಮಾರಿ ಮಾಮೊನ ಬಳಿ ಬಂದು ನಗುತ್ತಾ)

ರಾಕು: ಇದೇನು?

ಸಖಿ: ರಾಜಕುಮಾರಿ ಮಾತಾಡುತ್ತಿದ್ದಾಳೆ!

ಮಾಮೊ: ಕಾಣ್ತಾ ಇಲ್ವ?

ರಾಕು: ಕತ್ತೆ ಮರಿ.

ಮಾಮೊ: ಹೌದು ಕತ್ತೆ ಮರಿ.

ರಾಕು: ಇದನ್ನು ಯಾಕೆ ಹೊತ್ತುಕೊಂಡು ಹೋಗ್ತಾ ಇದ್ದಿ?

ಮಾಮೊ: ಯಾಕೆಂದರೆ ಇದು ನನ್ನ ಸಂಬಳ.

ರಾಕು: ಇದು ನಿನ್ನ ಸಂಬಳವಾ? (ಜೋರಾಗಿ ನಗುತ್ತಾಳೆ)

ಸಖಿ೧: ರಾಜಕುಮಾರಿ ಮಾತಾಡುತ್ತಾ ಇದ್ದಾಳೆ!

ಸಖಿ೨: ರಾಜಕುಮಾರಿ ಜೋರಾಗಿ ನಗುತ್ತಾ ಇದ್ದಾಳೆ!

ಸಖಿ೧: ರಾಜಕುಮಾರಿಯ ಕಾಯಿಲೆ ಗುಣವಾಗಿದೆ!

ಸಖಿ೨:ರಾಜಕುಮಾರಿಯ ಕಾಯಿಲೆ ಸಂಪೂರ್ಣ ಗುಣವಾಗಿದೆ!

(ರಾಜ, ರಾಣಿ ಮತ್ತು  ಮಂತ್ರಿಯ ಆಗಮನ)

ರಾಜ: ಏನು ನಮ್ಮ ರಾಜಕುಮಾರಿ ನಕ್ಕಳೆ?

ಸಖಿ೧: ಹೌದು. ನಕ್ಕಳು.

ಸಖಿ೨: ಮಲಗಿದಲ್ಲಿಂದ ಎದ್ದಳು.

ಸಖಿ೧: ಎದ್ದು ನಡೆದಳು.

ಸಖಿ೨: ಮಾತಾಡಿದಳು.

ರಾಜ: ಯಾರು ಈ ಕಾಯಿಲೆಯನ್ನು ಗುಣಪಡಿಸಿದ ವೈದ್ಯ?

ಸಖಿ೧: (ಮಾಮೊವನ್ನು ತೋರಿಸಿ) ಇವನು.

ರಾಜ, ರಾಣಿ, ಮಂತ್ರಿ: ಯಾರು ಇವನೆ?

ಸಖಿ೨: ಹೌದು ಮಹಾಪ್ರಭು.  ಇವನೇ.

ರಾಣಿ: (ಮಾಮೊನ ಹೆಗಲ ಮೇಲಿನ ಕತ್ತೆಯನ್ನು ತೋರಿಸಿ) ಅದೇನು?

ಸಖಿ೧: ಇದು ಈ ವೈದ್ಯನ ಔಷಧಿ ಪೆಟ್ಟಿಗೆ. (ನಗುತ್ತಾಳೆ. ಇನ್ನೊಬ್ಬ ಸಖಿಯೂ ನಗುತ್ತಾಳೆ. ರಾಜಕುಮಾರಿ ಜೋರಾಗಿ ನಗುತ್ತಾಳೆ. ರಾಜ, ರಾಣಿ, ಮಂತ್ರಿ ಎಲ್ಲರೂ ನಗುತ್ತಾರೆ)

ರಾಜ: (ನಗು ನಿಲ್ಲಿಸಿ, ಮಾಮೊನೊಡನೆ) ನೀನು ಇಡೀ ದೇಶವೇ ನಗುವ ಹಾಗೆ ಮಾಡಿರುವೆ.

ಮಂತ್ರಿ: ನೀನು ನಮ್ಮ ರಾಜಕುಮಾರಿಯ ಕಾಯಿಲೆಯನ್ನು ಗುಣಪಡಿಸಿರುವೆ.

ರಾಜ: ನಾವು ಘೋಷಿಸಿರುವಂತೆ ರಾಜಕುಮಾರಿಯನ್ನು ನಿನಗೆ ಮದುವೆ ಮಾಡಿಕೊಡಲಾಗುವುದು.

ರಾಣಿ: ನೀನು ಇನ್ನು ಅರಮನೆಯಲ್ಲಿಯೆ ಇರುತ್ತಿ.

ರಾಜ: ನಮಗೆ ಗಂಡು ಮಕ್ಕಳಿಲ್ಲ. ಆದ್ದರಿಂದ ಮುಂದೆ ನೀನು ಈ ದೇಶದ ರಾಜ.

ಮಂತ್ರಿ: ಇವನು ರಾಜ್ಯವನ್ನು ಆಳಲು ತಕ್ಕವನಿದ್ದಾನೆ. ಏನು ನಿನ್ನ ಹೆಸರು? ಮಾಮೊ: ಮಾಮೊ.

ಸಖಿ೧: (ನಗು ತಡೆದುಕೊಂಡು)ಡಾಕ್ಟರ್ ಮಾಮೊ.

ರಾಜ: ನಿಜ. ನಮಗೆ ರಾಜ್ಯವನ್ನು ಆಳಲು ಇಂಥ ಬುದ್ಧಿವಂತರೇ ಬೇಕು.

ರಾಕು: ವೈದ್ಯರೆ, ನೀವು ಇನ್ನು ನಿಮ್ಮ ಔಷಧಿ ಪೆಟ್ಟಿಗೆಯನ್ನು ಕೆಳಗಿಳಿಸಿಬಹುದು. (ಜೋರಾಗಿ ನಗುತ್ತಾಳೆ)

ರಾಣಿ: (ರಾಜಕುಮಾರಿಯ ಕಿವಿಯಲ್ಲಿ) ಮಗಳೆ, ನಕ್ಕದ್ದು ಸಾಕು. ನೀನು ಇನ್ನು ಗಂಭೀರವಾಗಿರಬೇಕು. ನೀನೀಗ ಮದುವಣಗಿತ್ತಿ)

ರಾಕು: (ಮಾಮೊವಿನ ಹೆಗಲ ಮೇಲಿರುವ ಕತ್ತೆ ಮರಿಯನ್ನು ತೋರಿಸಿ) ಅದನ್ನು ಕೆಳಗಿಳಿಸುವ ವರೆಗೆ ನನ್ನಿಂದ ಗಂಭೀರವಾಗಿರಲು ಸಾಧ್ಯವಿಲ್ಲ.

(ರಾಣಿ ರಾಜನ ಕಿವಿಯಲ್ಲಿ ಮಾತಾಡುತ್ತಾಳೆ. ರಾಜ ಮಂತ್ರಿ ಕಿವಿಯಲ್ಲಿ ಮಾತಾಡುತ್ತಾನೆ. ಮಂತ್ರಿ ಚಪ್ಪಾಳೆ ತಟ್ಟುತ್ತಾನೆ. ಇಬ್ಬರು ಸೇವಕರು ಪ್ರತ್ಯಕ್ಷವಾಗುತ್ತಾರೆ)

ಮಂತ್ರಿ: (ಕತ್ತೆ ಮರಿಯನ್ನು ತೋರಿಸಿ) ಅದನ್ನು ಒಯ್ಯಿರಿ.

ರಾಜ: ಅದನ್ನು  ಚೆನ್ನಾಗಿ ತೊಳೆಯಿರಿ.

ರಾಣಿ: ಸುಗಂಧ ದ್ರವ್ಯಗಳನ್ನು ಹಚ್ಚಿ , ಒಳ್ಳೆಯ ಉಡುಪು ತೊಡಿಸಿರಿ.

ರಾಜ: ತಿನ್ನಲು  ಉತ್ತಮವಾದ ಆಹಾರ ಕೊಡಿರಿ.

ರಾಣಿ: ಅದಕ್ಕಾಗಿಯೆ ಒಂದು ವಿಶೇಷವಾದ ಕೋಣೆ ಮಾಡಿ ಅದರಲ್ಲಿ ಇರಿಸಿರಿ.

ಮಾಮೊ: ಬೇಡ ಬೇಡ.  ಅದು ನನ್ನ ಸಂಬಳ. ಅದನ್ನು ನನ್ನ ಅಜ್ಜಿಗೆ ತಲಪಿಸಿರಿ.

ರಾಜ: (ನಗುತ್ತಾ) ತಲಪಿಸೋಣ.

ರಾಣಿ: (ಸೇವಕರೊಡನೆ) ಮಾಮೊನ ಅಜ್ಜಿಯನ್ನು  ಮದುವೆಗೆ ಕರೆದುಕೊಂಡು ಬನ್ನಿ.

(ಸೇವಕರು ರಾಜನಿಗೆ ತಲೆಬಾಗಿ ಕತ್ತೆಯನ್ನು ಒಯ್ಯುತ್ತಾರೆ. ರಾಜಕುಮಾರಿ ಬಂದು ಬಾ ಎಂದು ಮಾಮೊನ ಕೈಹಿಡಿದು ಕರೆದುಕೊಂಡು ಹೋಗುತ್ತಾಳೆ)

ಫೇಡ್ ಔಟ್