ಪಾತ್ರಗಳು:
೧. ಮುದುಕಿ
೨. ಕಪ್ಪುಡುಪಿನ ಮುದುಕಿ
೩.ಕೆಂಪುಡುಪಿನ ಮುದುಕಿ
೪. ಹಲವು ಮಕ್ಕಳು
೫. ದೇವತೆಯ ದೂತ
ಪರಿಕರಗಳು:
ರಟ್ಟಿನಿಂದ ತಯಾರಿಸಿದ ಹಲವು ಸೋರೆಬುರುಡೆಗಳು, ಗೋಡೆ, ಒಂದು ಮಾಡಿನ ಷೀಟು, ಎತ್ತರದ ಬೆಂಚು, ಮನೆಯೊಳಗಿನ ಸಾಮಗ್ರಿಗಳು, ಅಡುಗೆ ಪಾತ್ರೆಗಳು, ಗಿಡಬಳ್ಳಿಗಳು, ಮರಗಳು
ದೃಶ್ಯ ಒಂದು: ಗುಡಿಸಲು
(ವಿಶಾಲವಾದ ರಂಗ. ರಂಗದ ಮಧ್ಯದ ವರೆಗೆ ಬರುವಂತೆ ಎಡಗಡೆಯ ಮುಕ್ಕಾಲು ಭಾಗ ಒಂದು ಗುಡಿಸಲು. ಗುಡಿಸಲಿನಲ್ಲಿ ಕೆಲವು ಪತ್ರೆ ಪರಡಿ, ಚಿಂದಿ ಚಿಂದಿ ಬಟ್ಟೆಬರೆ ಇತ್ಯಾದಿ. ಹಿಂದುಗಡೆಗೆ ಒಂದು ಎತ್ತರದ ಉದ್ದನೆಯ ಮೇಜು. ಮೇಜಿನ ಹಿಂದುಗಡೆ ಪರದೆ. ಬಲಗಡೆಗೆ ಒಂದು ಗೋಡೆ. ಗೋಡೆಗೆ ಒಂದು ಕಿಟಕಿ. ಗೋಡೆಯ ಮೇಲೆ ಗುಡಿಸಲಿನ ಮಾಡಿನ ಭಾಗದಂತೆ ತೋರುವ ತುಂಡು ಮಾಡು. ಗೋಡೆಯ ಪಕ್ಕದಲ್ಲಿ ಹೊರಗಡೆ ಕೆಲವು ಮರಗಳು. ಗುಡಿಸಲಿನ ಮುಂದಿನ ಅಂಗಳದಲ್ಲಿ ಬಾಳೆ ಮತ್ತು ಇತರ ಗಿಡಗಳು, ಕಾಯಿಪಲ್ಲೆಯ ಗಿಡಬಳ್ಳಿಗಳು. ಒಂದು ದೊಡ್ಡ ಸೋರೆ ಬುರುಡೆ ಮತ್ತು ಒಂದು ಚಿಕ್ಕ ಸೋರೆ ಬುರುಡೆ. ಬೆಳಗ್ಗಿನ ಹೊತ್ತು . ತುಸು ಮಬ್ಬು ಬೆಳಕು. ಅರುವತ್ತು ವರ್ಷ ದಾಟಿದ ಮುದುಕಿಯೊಬ್ಬಳು ಗುಡಿಸಲಿನಲ್ಲಿ ಕುಳಿತಿದ್ದಾಳೆ. ಏನೋ ಗೊಣಗುತ್ತಿದ್ದಾಳೆ. ಎದ್ದು ಸೂರ್ಯನನ್ನು ದಿಟ್ಟಿಸಿ ಮನಸ್ಸಿಲ್ಲದ ಮನಸ್ಸಿನಿಂದ ಪೊರಕೆಯನ್ನು ಎತ್ತಿ ಗುಡಿಸತೊಡಗುತ್ತಾಳೆ.)
ಮು: (ಮರಗಳನ್ನು ಒಮ್ಮೆ ದಿಟ್ಟಿಸಿ) ಅರುವತ್ತು ವರ್ಷಗಳಿಂದ ನೀವು ಎಲೆಗಳನ್ನು ಉದುರಿಸುತ್ತಾ ಇದ್ದೀರಿ! ಅರುವತ್ತು ವರ್ಷಗಳಿಂದ ನಾನು ಗುಡಿಸುತ್ತಾ ಇದ್ದೇನೆ. ಗುಡಿಸಿ ಗುಡಿಸಿ ನಾನು ಬಗ್ಗಿಹೋಗಿದ್ದೇನೆ. ನೀವು ಎಲೆಗಳನ್ನು ಉದುರಿಸಿ ಉದುರಿಸಿ ಎತ್ತರಕ್ಕೆ ಮತ್ತೂ ಎತ್ತರಕ್ಕೆ ಬೆಳೆದಿದ್ದೀರಿ. (ಕಷ್ಟಪಟ್ಟು ಬೆನ್ನು ಸೆಟೆಸಿ ನಿಂತು ನೋಡುತ್ತಾಳೆ) ನಾನು ಇಡೀ ದಿನ ಕೆಲಸ ಮಾಡ್ತಾ ಇದ್ದೇನೆ. ನೀವು ಸುಮ್ಮನೆ ನಿಂತು ನೋಡುತ್ತ್ತಾ ಇದ್ದೀರಿ. ನನ್ನ ಸಹಾಯಕ್ಕೆ ಒಂದು ಸಲವಾದ್ರೂ ಬಂದಿರಾ? (ಸೊಂಟಕ್ಕೆ ಕೈಯಿರಿಸಿ ನಿಂತು ನೋಡುತ್ತಾಳೆ) ಓ ಬಾಳೆಗಳು ಬಾಡ್ತಾ ಇವೆ. ನೀರು ಹಾಕಬೇಕು! ಹೊಳೆಯಲ್ಲಿ ಕೂಡ ನೀರು ಆರ್ತಾ ಇದೆ! (ಪೊರಕೆ ಬಿಸಾಡಿ, ಸೋರೆ ಬುರುಡೆ ಎತ್ತಿಕೊಂಡು ಹೋಗುತ್ತಾಳೆ. ಪಾತ್ರೆಯಲ್ಲಿ ನೀರು ತುಂಬುವ ಗುಳುಗುಳು ಶಬ್ದ. ಓಡಿಹೋಗಿ ನೀರು ತಂದು ಗಿಡದ ಬುಡಕ್ಕೆ ಹಾಕುತ್ತಾಳೆ ) ಇನ್ನು ಅಡಿಗೆ ಆಗಬೇಕು!…. ಎಷ್ಟು ಕೆಲಸ! ಜೀವನವಿಡೀ ಕೆಲಸ! (ಹೊಸ್ತಿಲ ಮೇಲೆ ಕುಳಿತುಕೊಳ್ಳುತ್ತಾಳೆ. ಅದೇ ಹೊತ್ತು ಗುಡಿಸಲಿನ ಎಡಗಡೆಗೆ ಮರದ ಬುಡದಲ್ಲಿ ಇಬ್ಬರು ಮುದುಕಿಯರು ಕಾಣಿಸಿಕೊಂಡು ಕಿಟಕಿಯಲ್ಲಿ ಮುಖವಿರಿಸಿ ಮುದುಕಿಯನ್ನು ಲೇವಡಿ ಮಾಡುತ್ತಾರೆ. ಒಬ್ಬಳು ಕೆಂಪಂಗಿಯವಳು. ಇನ್ನೊಬ್ಬಳು ಕಪ್ಪಂಗಿಯವಳು. ಅವರು ಮುದುಕಿಗೆ ಕಾಣಿಸುವುದಿಲ್ಲ. ಮುದುಕಿಯ ಮಾತುಗಳು ಅವರು ಆಡುವ ಮಾತುಗಳಿಗೆ ನೇರ ಪ್ರತಿಕ್ರಿಯೆ ಎಂದು ತಿಳಿಯಬಾರದು)
ಕೆ, ಕ: ಅಯೊ ಅಯೊ! ಜೀವನವಿಡೀ ಕೆಲಸ! ಮುಗಿಯದ ಕೆಲಸ!
ಕೆ: ಯಾರನ್ನಾದ್ರೂ ಸಹಾಯಕ್ಕೆ ಕರೆದಿಯಾ ಮುದುಕಿ ನೀನು?
ಕ: ಅರುವತ್ತು ವರ್ಷದಿಂದ ಕೇಳ್ತಾ ಇದ್ದೇವೆ! ನಮ್ಮನ್ನ ಒಳಗೆ ಬರ್ಲಿಕ್ಕೆ ಬಿಟ್ಟಿಯಾ ನೀನು? ಜಿಪುಣೆ! ಯಾರಿಗಾದ್ರೂ ಒಂದು ಅಗಳು ಕೊಟ್ಟಿಯಾ ನೀನು?
ಕ: ಯಾರನ್ನಾದ್ರೂ ಪ್ರೀತಿಸಿದ್ಯಾ ನೀನು? ಎಲ್ಲಾ ನಾನೇ ಮಾಡ್ಕೋತೀನಿ ಅಂತ ಗರ್ವದಿಂದ ಹೇಳ್ಕೋತಿದ್ಯಲ್ಲ? ಈಗ ನಿನ್ನ ಕೈಲಾಗದಿರುವಾಗ ಯಾರು ಬರ್ತಾರೆ?
ಕೆ: ಹೊಳೆಯಲ್ಲಿ ನೀರು ಆರ್ತಾ ಇದೆ. ನಿನ್ನ ಸೋರೆಬುರುಡೆ ಕೊಂಡುಕೊಳ್ಳೋರು ಯಾರು?
ಕ: ನೀರಿಲ್ಲದೇ ಹೋದ್ರೆ, ಗಾಳಿ ತುಂಬ್ಸಿಡೋಕೆ ಯಾರಾದ್ರೂ ನಿನ್ನ ಸೋರೆ ಬುರುಡೆ ಕೊಳ್ಳೋಕೆ ಬರ್ತಾರಾ?(ನಗುತ್ತಾರೆ)
ಮು: ನಾನು ಪ್ರತಿ ದಿನ ಬೆಳಿಗ್ಗೆ ಮತ್ತು ಸಾಯಂಕಾಲ ಬೆಟ್ಟದ ಮೇಲಿನ ದೇವರನ್ನು ಪ್ರಾರ್ಥನೆ ಮಾಡ್ಲಿಲ್ವ? ಅವ್ನಿಗೆ ನನ್ನ ಪ್ರಾರ್ಥನೆ ಕೇಳಿಸೋದಿಲ್ವ?
ಕ: ಪ್ರಾರ್ಥನೆ ನಾವು ಕೂಡ ಮಾಡ್ತೀವಿ. ದೇವ್ರಿಗೆ ಪ್ರಾರ್ಥನೆ ಮಾಡಿದ್ರೆ ಹೋದ ಯವನ ಪುನ: ಬರುತ್ತಾ?
ಕೆ: ನೀನು ಮಹಾ ಜಿಪುಣೆ! ದುಡಿದು ಬಂದ ಗಂಡನಿಗೆ ಸರಿಯಾಗಿ ಊಟ ಕೂಡ ಹಾಕ್ಲಿಲ್ಲ! ಆದ್ರಿಂದ ಅವನು ಓಡಿಹೋದ. ದೇವರು ನಿನಗೆ ಮಕ್ಕಳನ್ನೂ ಕೊಡಲಿಲ್ಲ.
(ಮುದುಕಿ ಮೊದಲು ಮನೆಯ ಎಡಗಡೆಗೆ ನೋಡಿ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು ಬಲಗಡೆಗೆ ಬರುವಾಗ ಅಲ್ಲಿದ್ದ ಮುದುಕಿಯರು ಮರಗಳೆಡೆಯಲ್ಲಿ ಮರೆಯಾಗಿ ನಿಲ್ಲುತ್ತಾರೆ. ಜೋರಾಗಿ ಗಾಳಿ ಬೀಸತೊಡಗುತ್ತದೆ. ಮುದುಕಿ ಈಚೆಗೆ ಬಂದೊಡನೆ, ಆ ಮುದುಕಿಯರು ಪುನ: ಬಂದು ಕಿಟಿಕಿಯಲ್ಲಿ ಮುಖವಿರಿಸಿ ನಿಲ್ಲುತ್ತಾರೆ)
ಮು: ಗಾಳಿ ಬೀಸ್ತಾ ಇದೆ. ( ಗಾಳಿಯ ಬೀಸುವಿಕೆ ಬಲವಾಗಿ ಗೋಡೆಯ ಮೇಲಿನ ಮಾಡು ಶೀಟು ಕೆಳಜಾರಿ ಗೋಡೆಗೊರಗಿಕೊಂಡು ನಿಲ್ಲುತ್ತದೆ. ಮುದುಕಿ ಹೋಗಿ ಕಷ್ಟಪಟ್ಟು ಅದನ್ನೆತ್ತಿ ಮೊದಲಿನಂತೆ ಇರಿಸುತ್ತಾಳೆ. ತಲೆಯೆತ್ತಿ ನೋಡುತ್ತಾಳೆ.) ಬೆಟ್ಟದ ಮೇಲಿನ ಮಂಜು ಕರಗ್ತಾ ಇದೆ. ಹೊಳೆಯಲ್ಲಿ ನೀರು ಬರ್ಬಹುದು. ಪರ್ವತದ ಮೇಲಿರುವ ದೇವತೆಯೆ, ನಿನಗೆ ನಾನು ಪ್ರತಿ ದಿನ ಪ್ರಾರ್ಥನೆ ಸಲ್ಲಿಸಿದ್ದೇನೆ. ಈಗ ನನ್ನಿಂದ ಕೆಲಸ ಮಾಡ್ಲಿಕ್ಕೆ ಆಗ್ತಾ ಇಲ್ಲ. ನನಗೆ ಯಾರೂ ಇಲ್ಲ. ನಿನಗೆ ನನ್ನ ಮೇಲೆ ಯಾಕೆ ಕರುಣೆ ಇಲ್ಲ? ನನ್ನ ಕಷ್ಟ ನಿನಗೆ ಕಾಣಿಸುವುದಿಲ್ಲವೆ? ಸಂತೆಗೂ ನಾನೇ ಹೋಗ್ಬೇಕು.(ಗೊಣಗುತ್ತಾ ಸೋರೆ ಪಾತ್ರೆ ಎತ್ತಿಕೊಂಡು ಹೋಗುತ್ತಾಳೆ. ಕಿಟಕಿಯಲ್ಲಿ ಮುಖವಿಟ್ಟ ಮುದುಕಿಯರು ಮರಗಳೆಡೆಯಲ್ಲಿ ಕಣ್ಮರೆಯಾಗುತ್ತಾರೆ. ಅವಳು ಸೊಂಟದ ಮೇಲೆ ನೀರು ತುಂಬಿದ ಸೋರೆ ಬುರುಡೆ ಇರಿಸಿಕೊಂಡು ಮರಳಿ ಬರುವಾಗ ಕಾಯಿಪಲ್ಲೆ ಗಿಡಗಳ ನಡುವೆ ಒಬ್ಬ ಎತ್ತರದ ಸುಂದರ ಗಂಡಸು ಕಾಣಿಸಿಕೊಳ್ಳುತ್ತಾನೆ. ಮುದುಕಿಯನ್ನು ನೋಡಿ ಮುಗುಳ್ನ್ನಗುತ್ತಾನೆ)
ಮು: ಯಾರು ನೀನು?
ಗಂ: ನಾನು ಬೆಟ್ಟದ ಮೇಲಿನ ದೇವತೆಯ ದೂತ. ನಿನ್ನ ಕಷ್ಟವನ್ನು ನೋಡಿ ದೇವತೆಗೆ ನಿನ್ನ ಮೇಲೆ ಕರುಣೆ ಉಂಟಾಗಿದೆ. ನಿನಗೆ ನಮ್ಮ ದೇವತೆಯಿಂದ ಒಂದು ಸಂದೇಶ ಇದೆ.
ಮು: ಏನು ಸಂದೇಶ?
ಗಂ: ನೀನು ಈ ನಿನ್ನ ಸೋರೆ ಬಳ್ಳಿಗಳನ್ನು ಚೆನ್ನಾಗಿ ಆರೈಕೆ ಮಾಡು. ಅದರ ಮೂಲಕ ನಿನಗೆ ಭಾಗ್ಯ ಬರುತ್ತದೆ.
ಮು: ಏನು? ಈ ಸೋರೆ ಬಳ್ಳಿಗಳಿಂದ ನನಗೆ ಭಾಗ್ಯ ಬರುತ್ತದೆಯೆ? (ಆಶ್ಚರ್ಯದಿಂದ ಸೋರೆ ಬಳ್ಳಿಗಳನ್ನು ನೋಡುತ್ತಿರುವಾಗ ಗಂಡಸು ಕಣ್ಮರೆಯಾಗುತ್ತಾನೆ. ತಿರುಗಿ ನೋಡಿ ಅವನು ಮಾಯವಾಗಿರುವುದನ್ನು ಕಂಡು, ಆಶ್ಚ್ಚರ್ಯಪಡುತ್ತಾಳೆ) ಹಾಗಾದರೆ ಚೆನ್ನಾಗಿ ನೀರು ಹಾಕುತ್ತೇನೆ. ದೇವತೆಯ ಸಂದೇಶದಲ್ಲಿ ಸತ್ಯ ಇದೆಯೊ ನೋಡುತ್ತೇನೆ. (ಕೊಡ ಎತ್ತಿಕೊಂಡು ಹೋಗುತ್ತಾಳೆ)
ಫೇಡ್ ಔಟ್
ದೃಶ್ಯ ಎರಡು: ಗುಡಿಸಲು
(ಎತ್ತರದ ಬೆಂಚಿನ ಮೇಲೆ ಸಾಲಾಗಿ ಕೆಲವು ಸೋರೆ ಬುರುಡೆಗಳು. ಮುದುಕಿಯ ಕೈಯಲ್ಲಿ ಒಂದು ಸೋರೆಬುರುಡೆಯಿದೆ. ಅದರೊಳಗೆ ಉದ್ದನೆಯ ಚಾಕು ಹಾಕಿ ಕೆರೆದು ಶುಚಿ ಮಾಡಿ, “ ಸಾಲದು. ಇನ್ನೂ ಒಣಗಬೇಕು ” ಎನ್ನುತ್ತಾಳೆ. ಅದನ್ನು ಹೊರಗೆ ಬಿಸಿಲಿನಲ್ಲಿ ಇರಿಸುತ್ತಾಳೆ. ದೊಡ್ಡ ಸೋರೆಬುರುಡೆಯನ್ನು ಎತ್ತಿಕೊಂಡು ನೀರಿಗೆ ಹೋಗುತ್ತಾಳೆ. ಒಮ್ಮೆ ತಂದು ಗಿಡಗಳ ಬುಡಕ್ಕೆ ಸುರಿಯುತ್ತಾಳೆ. “ಇನ್ನು ಸಂತೆಗೆ ಹೋಗಬೇಕು” ಎಂದು ಎರಡು ಸೋರೆ ಬುರುಡೆಗಳನ್ನು ಆರಿಸಿ ಎತ್ತಿಕೊಂಡು, “ಸಂತೆಗೆ ಹೊತ್ತಾಯ್ತು . ಎಂಥ ಭಾಗ್ಯವೋ ಏನೊ. ಎಷ್ಟು ಸಿಗುವುದೊ ಏನೊ” ಎಂದುಕೊಂಡು ಹೋಗುತ್ತಾಳೆ. ಅವಳು ಹೊರಡುವ ಮೊದಲೇ ರಂಗದಲ್ಲಿ ನಿಧಾನವಾಗಿ ಕತ್ತಲಾವರಿಸಿ ಮತ್ತೆ ಬೆಳಕು ಬರುವಾಗ ಮೇಜಿನ ಮೇಲೆ ಸಾಲಾಗಿ ಇರಿಸಿದ್ದ್ದ ಸೋರೆ ಬುರುಡೆಗಳು ಮಕ್ಕಳಾಗಿ ರೂಪಾಂತರಗೊಂಡಿವೆ. ಅವರು ಕೆಳಜಿಗಿದು ಬರುತ್ತಾರೆ. ಕೆಲವು ಗಂಡು, ಕೆಲವು ಹೆಣ್ಣು. ಒಬ್ಬನು ದೊಡ್ಡವನು. ಅವನು ಅವರ ನಾಯಕ. ಕಿಟ್ಟಿ ಅವನ ಹೆಸರು. ಅವರ ಪೈಕಿ ಒಬ್ಬ ತುಂಬಾ ಚಿಕ್ಕವನು, ತುಸು ಕುಂಟು. ಅವನಿಗೆ ಬೆಂಚಿನಿಂದ ಕೆಳಗಿಳಿಯಲಾಗುವುದಿಲ್ಲ. ಅವನನ್ನು ಕಿಟ್ಟಿ ಎತ್ತಿ ಕೆಳಗಿಳಿಸುತ್ತಾನೆ. ಮಕ್ಕಳೆಲ್ಲ “ಕಿಟ್ಟಿ , ಕಿಟ್ಟಿ ”ಎಂದು ಸಂಭ್ರಮದಿಂದ ಕೂಗುತ್ತಾ ತಮ್ಮ ನಾಯಕನ ಸುತ್ತ ನಿಲ್ಲುತ್ತವೆ)
ಕಿಟ್ಟಿ: ಈಗ ಆಟ ಇಲ್ಲ. ಎಲ್ಲ ಕೆಲಸ ಬೇಗ ಬೇಗ ಮುಗಿಸಬೇಕು. (ಒಬ್ಬೊಬ್ಬರಿಗೆ ಒಂದೊಂದು ಕೆಲಸ ಹೇಳುತ್ತಾನೆ) ನೀನು ಒಲೆ ಉರಿಸು. ನೀನು ನೀರು ತಾ. ನೀನು ಅಂಗಡಿಗೆ ಹೋಗಿ ಅಡಿಗೆಗೆ ಬೇಕಾದ ಎಲ್ಲ ಸಾಮಾನು ತಾ. ನೀನು ಒಂದು ಚೀಲ ಅಕ್ಕಿ ಬೆಲ್ಲ ಉಪ್ಪು ಸಕ್ಕರೆ ತಾ. ನೀನು ಅಂಗಳ ಗುಡಿಸು. ನೀನು ಮನೆಯನ್ನೆಲ್ಲ ಗುಡಿಸಿ ಶುಚಿ ಮಾಡು. . ನೀನು ತರಕಾರಿ ಹೆಚ್ಚು. ನೀನು… (ಹೀಗೆ ಒಬ್ಬೊಬ್ಬರಿಗೊಂದೊಂದು ಕೆಲಸ ಹೇಳುತ್ತಾನೆ. ಎಲ್ಲರೂ ಚುರುಕಿನಿಂದ ಅತ್ತಿತ್ತ ಓಡಿ ಅವನು ಹೇಳಿದ ಕೆಲಸ ಮಾಡುತ್ತಾರೆ. ಚಿಕ್ಕ ಹುಡುಗ ಕೆಲಸ ಮಾಡುವುದಿಲ್ಲ. ಮುಗುಳುನಗುತ್ತಾ ಅತ್ತಿತ್ತ ಹೋಗುತ್ತಾ ಚಪ್ಪಾಳೆ ತಟ್ಟುತ್ತಾ ಇತರರು ಕೆಲಸ ಮಾಡುವುದನ್ನು ನೋಡುತ್ತಾ ಇರುತ್ತಾನೆ. ತುಂಬಾ ಸಂತೋಷದಿಂದ, ಸಂತೋಷವೇ ಮೂರ್ತಿವೆತ್ತಂತೆ ಇರುತ್ತಾನೆ. ಅವರ ಕೆಲಸ ನಡೆಯುತ್ತಿರುವಾಗ ಕೆಂಪು ಮುದುಕಿ ಮತ್ತು ಕಪ್ಪು ಮುದುಕಿ ನಿಶ್ಶಬ್ದವಾಗಿ ಬಂದು ಕಿಟಕಿಯಲ್ಲಿ ಮುಖವಿರಿಸಿ ನೋಡುತ್ತಾ ಇರುತ್ತಾರೆ. ಕಿಟ್ಟಿ ತಾನೂ ಕೆಲಸ ಮಾಡುತ್ತಾ ಇತರರನ್ನೂ ಹುರಿದುಂಬಿಸುತ್ತಾ ಇರುತ್ತಾನೆ. ಅವನ ಮಾತಿಗೆ ಮಕ್ಕಳು “ಆಗ್ಲಿ ಕಿಟ್ಟಿ,… ಮಾಡ್ತೀನಿ ಕಿಟ್ಟಿ …ಆಯ್ತು ಕಿಟ್ಟಿ … ತರ್ತೀನಿ ಕಿಟ್ಟಿ… ಆಗೇ ಬಿಟ್ಟಿತು ಕಿಟ್ಟಿ…” ಮುಂತಾದ ಮಾತುಗಳಿಂದ ಪ್ರತಿಕ್ರಿಯಿಸುತ್ತಾ ಕೆಲಸ ಮಾಡುತ್ತಾರೆ. ಮಕ್ಕಳು ಕೆಲಸವೆಲ್ಲ ಮುಗಿಸುತ್ತಾರೆ. ಮೊದಲಿನಂತೆ ಸಾಲಾಗಿ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾರೆ. ಚಿಕ್ಕವನನ್ನು ಕಿಟ್ಟಿ ಎತ್ತಿ ಕುಳ್ಳಿರಿಸುತ್ತಾನೆ. ಅವನನ್ನು ಎತ್ತಿ ಕುಳ್ಳಿರಿಸಿ ಅವನೂ ಕುಳಿತುಕೊಳ್ಳುವಷ್ಟರಲ್ಲಿ ರಂಗದ ಮೇಲೆ ಕತ್ತಲೆಯಾಗಿ ಮತ್ತೆ ಬೆಳಕು ಬರುವಾಗ ಮಕ್ಕಳೆಲ್ಲ ಸೋರೆಬುರುಡೆಗಳಾಗಿ ರೂಪಾಂತರ ಹೊಂದಿರುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಮುದುಕಿ ಬರುತ್ತಾಳೆ. ಕಿಟಕಿಯಲ್ಲಿ ನೋಡುತ್ತಿದ್ದ ಮುದುಕಿಯರು ಮರಗಳ ಮರೆಯಲ್ಲಿ ಕಾಣೆಯಾಗುತ್ತಾರೆ. ಮುದುಕಿ ಗುಡಿಸಲಿನ ಒಳಹೋಗಿ ಒಳಗೆ ಆಗಿರುವ ಬದಲಾವಣೆಗಳನ್ನು ನೋಡಿ ಆಶ್ಚರ್ಯದಿಂದ ನಿಲ್ಲುತ್ತಾಳೆ)
ಮು: ಅಡಿಗೆ ಕೂಡ ಆಗಿದೆ! (ಪಾತ್ರೆಯ ಬಾಯಿ ತೆಗೆದು ನೋಡಿ) ಅಹ ಏನು ಘಮಘಮ ವಾಸನೆ! ಮನೆ ಎಷ್ಟೊಂದು ಶುಚಿಯಾಗಿದೆ! ಒಹ್ ಅಕ್ಕಿ! ಸಕ್ಕರೆ! ಬೇಳೆ! ಬೆಲ್ಲ, ಕಾಯಿಪಲ್ಲೆ! ಒಹ್ ಏನೆಲ್ಲಾ ಇದೆ! (ಉದ್ಗರಿಸುತ್ತಾ ಅಂಗಳಕ್ಕೆ ಬರುತ್ತಾಳೆ) ಯಾರ ಕೆಲಸ ಇದು? ಯಾರು ಇಷ್ಟು ದಯಾಳುಗಳು? ಒಬ್ಬರಿಂದ ಆಗುವ ಕೆಲಸ ಅಲ್ಲ ಇದು! ಒಹೋಯ ಯಾರಲ್ಲಿ ಅಡಗಿರುವುದು? (ಮರಗಳ ಕಡೆಗೆ ನೋಡಿ ಕೂಗುತ್ತಾಳೆ. ಕಪ್ಪಂಗಿ, ಕೆಂಪಂಗಿ ಬರುತ್ತಾರೆ) ಯಾರು ಮಾಡಿದ್ದು ಇದನ್ನೆಲ್ಲ? ನೀವು ಮಾಡಿದಿರಾ?
ಕ: ಏನು ಹೇಳುವುದು?
ಕೆ: ಅದ್ಭುತ!
ಮು: ಏನು ಅದ್ಭುತ?
ಕ: ವಿಚಿತ್ರ!
ಕೆ: ವಿಚಿತ್ರ!
ಮು: ಏನು ಅದ್ಭುತ ? ಏನು ವಿಚಿತ್ರ? ನಾನು ಆಶ್ಚರ್ಯದಿಂದ ಸಾಯುತ್ತಾ ಇದ್ದೇನೆ. ಬೇಗ ಹೇಳಿ!
ಕ: ನೀನು ಆಚೆ ಹೋದ ಕೂಡಲೇ ನಿನ್ನ ಸೋರೆಪಾತ್ರೆಗಳೆಲ್ಲ ಮಕ್ಕಳಾಗಿ ಬದಲಾದುವು.
ಕೆ: ಅವುಗಳು ಪುಟುಪುಟು ಅಂತ ಅತ್ತಿತ ಓಡಿ ಅರ್ಧ ಗಂಟೆಯಲ್ಲಿ ನಾವು ಆರು ದಿನ ಮಾಡುವುದಕ್ಕಿಂತ ಹೆಚ್ಚು ಮಾಡಿದುವು.
ಮು: ನಿಜವೆ?
ಕ: ನಿಜ.
ಮು: ನನ್ನಿಂದ ನಂಬ್ಲಿಕ್ಕೆ ಆಗ್ತಾ ಇಲ್ಲ.
ಕೆ: ನಾವ್ಯಾಕೆ ಸುಳ್ಳು ಹೇಳ್ಬೇಕು?
ಮು: ನೀವು ಯಾವಾಗಲೂ ಕೀಟಲೆ ಮಾಡಿ ನನ್ನನ್ನ ಗೋಳುಹೊಯೊತಾ ಇರ್ತೀರಿ! ನೀವೇ ಏನೋ ಆಟ ಆಡ್ತಾ ಇದ್ದೀರಿ!
ಕ: (ಹೊರಡುತ್ತಾ) ಸಂಶಯ ಪಿಶಾಚಿ ನೀನು! ಯಾರ ಮೇಲೂ ನಂಬಿಕೆ ಇಲ್ಲ ನಿನಗೆ!
ಕೆ: (ಹೊರಡುತ್ತಾ)ನಿಂಗೆ ಯಾರ ಮೇಲೆ ಪ್ರೀತಿಯೂ ಇಲ್ಲ, ನಂಬಿಕೆಯೂ ಇಲ್ಲ!
ಕ: ನಿಂಗೆ ಭಾಗ್ಯ ಬಂದರೂ ಒಂದೇ.
ಕೆ: ದುರ್ಭಾಗ್ಯ ಬಂದರೂ ಒಂದೇ.
(ಹೋಗುತ್ತಾರೆ. ಮುದುಕಿ ಒಳಹೋಗಿ ಊಟದ ಪಾತ್ರೆ ತೆಗೆದುಕೊಂಡು ಬಡಿಸಿಕೊಳ್ಳಲು ಅಣಿಯಾಗುತ್ತಾಳೆ. ಕಪ್ಪಂಗಿ ಮತ್ತು ಕೆಂಪಂಗಿ ಕಿಟಿಕಿಯಲ್ಲಿ ಮುಖವಿರಿಸಿ ಅವಳನ್ನು ನೋಡಿ)
ಕ: ನಿಂಗೆ ಬಂದ ಭಾಗ್ಯ! ನೀನೊಬ್ಳೇ ತಿನ್ನು! ಜಿಪುಣೆ!
ಕೆ: ಹಂಚಿ ತಿನ್ಬೇಡ! ಒಂಟಿ ಮುದುಕಿ! (ಇಬ್ಬರೂ ಒಂದೇ ದನಿಯಲ್ಲಿ ಜಿಪುಣೆ! ಒಂಟಿ ಮುದುಕಿ ಎಂದು ಎರಡೆರಡು ಬಾರಿ ಹೇಳಿ ಹೋಗುತ್ತಾರೆ. ಮುದುಕಿ ಏನೂ ಕೇಳಿಸದವಳಂತೆ ಊಟಕ್ಕೆ ಕುಳಿತು ಕೊಳ್ಳುತ್ತಾಳೆ )
ಫೇಡ್ ಔಟ್
ದೃಶ್ಯ ಮೂರು: ಗುಡಿಸಲು
(ಮುದುಕಿ ಈಗ ಸ್ವಲ್ಪ ಮಟ್ಟಿಗೆ ಸಿರಿವಂತೆಯಾಗಿದ್ದಾಳೆ. ತುಂಡುಗೋಡೆ ಮಾಯವಾಗಿದೆ. ಗೋಡೆ ಬಳಿಯಲ್ಲಿ ಮರಗಳು ಕೂಡ ಇಲ್ಲ)
ಮು: ನಾನು ಸಂತೆಗೆ ಹೋದಾಗ ಈ ಮಕ್ಕಳು ಎಲ್ಲಿಂದ ಬರುತ್ತಾರೆ? ದೇವರೇ ಇವರನ್ನು ಕಳಿಸಿರುವುದು ಖಂಡಿತ! ನಂಗೆ ಅವರನ್ನು ಇವತ್ತು ಕಾಣಲೇ ಬೇಕು! ಸಂತೆಗೆ ಹೋಗುವ ತಯಾರಿ ಮಾಡಿಕೊಂಡು, ಗಟ್ಟಿಯಾದ ಸ್ವರದಲ್ಲಿ) ನಾನು ಸಂತೆಗೆ ಹೋಗಿಬರುತ್ತೇನೆ (ಈ ಕಡೆ ಬಂದು ಕಿಟಕಿಯಲ್ಲಿ ಮುಖವಿರಿಸಿ ನಿಂತು ನೋಡುತ್ತಾಳೆ. ಸೋರೆಬುರುಡೆಗಳು ಮಕ್ಕಳಾಗಿ ಪರಿವರ್ತನೆಗೊಂಡು ಕೆಲಸದಲ್ಲಿ ತೊಡಗುತ್ತವೆ. “ಎಷ್ಟು ಚೆಂದದ ಮಕ್ಕಳು! ಎಷ್ಟು ಚೆನ್ನಾಗಿ ಕೆಲಸಮಾಡುತ್ತಾರೆ!” ಎಂದೆಲ್ಲ ಉದ್ಗರಿಸುತ್ತಾಳೆ. ಅವರ ಕೆಲಸ ಎಂದಿನಂತೆ ಮುಗಿಯುವುದರಲ್ಲಿರುವಾಗ ಮೆಲ್ಲನೆ ಅವರಿಗೆ ಕಾಣದಂತೆ ಈಚೆಗೆ ಬಂದು ಕಿಟ್ಟಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾಳೆ)
ಕಿಟ್ಟಿ: ಬಿಡು ಬಿಡು! ನಾವು ಹೋಗಬೇಕು!
ಮು: ಬೇಡ ಬೇಡ. ನೀವು ನನ್ನ ಜೊತೆಯಲ್ಲಿಯೆ ಇರಿ! ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ.
ಎಲ್ಲಾ ಮಕ್ಕಳೂ: ಇಲ್ಲ ನಾವು ಹೋಗಬೇಕು.
ಮು: ನಾನು ಒಂಟಿ ಮುದುಕಿ. ನನ್ನವರು ಎನ್ನುವವರು ಯಾರೂ ಇಲ್ಲ. ನೀವು ಇಲ್ಲಿಯೆ ಇರಿ ಮಕ್ಕಳೆ. ನಾನು ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ.
ಎಲ್ಲಾ ಮಕ್ಕಳೂ: ಇಲ್ಲ , ನಾವು ಹೋಗಬೇಕು.
ಮು: ಈ ಮುದುಕಿಯ ಮೇಲೆ ಇಷ್ಟು ಕರುಣೆಯೂ ಇಲ್ಲವೆ ನಿಮ್ಗೆ? (ಅಳುತ್ತಾಳೆ. ಅವಳು ಅಳುವುದನ್ನು ನೋಡಿ ಮಕ್ಕಳ ಮನಕರಗುತ್ತದೆ. ಅಳಬೇಡ ಎಂದು ಬಳಿಬಂದು ಸಂತೈಸುತ್ತವೆ)
ಕಿ: ಆಗ್ಲಿ ನಿಲ್ಲುತ್ತೇವೆ. ಆದರೆ ನೀನು ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ನಮ್ಮನ್ನು ಬೈಯಬಾರದು.
ಮು: ಖಂಡಿತ ಬೈಯುವುದಿಲ್ಲ, ಪ್ರ್ರೀತಿಯಿಂದ ನೋಡಿಕೊಳ್ಳುತ್ತೇನೆ.
ಕಿ: ಎಲ್ಲಾ ಕೆಲಸಗಳನ್ನು ನಾವು ಮಾಡುತ್ತೇವೆ. ಎಲ್ಲಾ ಸಾಮಾನುಗಳನ್ನೂ ನಾವು ತರುತ್ತೇವೆ. ಆದ್ರೆ ಎರಡು ಕೆಲಸಗಳನ್ನು ನೀನು ಮಾಡ್ಬೇಕು.
ಮು: ಯಾವ ಕೆಲಸ?
ಕಿ: ಒಂದು: ಒಲೆ ಉರಿಸಿ ಅನ್ನ ಬೇಯಿಸುವುದು. ಎರಡು: ಸೋರೆ ಬುರುಡೆಗಳನ್ನು ಸಂತೆಗೆ ಕೊಂಡುಹೋಗಿ ಮಾರಿ ಹಣ ತರುವುದು.
ಮು: ಆಗ್ಲಿ , ಆ ಕೆಲಸ ನಾನು ಮಾಡುತ್ತೇನೆ.
ಚಿಕ್ಕ ಹುಡುಗ: ಪ್ರೀತಿಯಿಂದ ಮಾಡ್ಬೇಕು.
ಮು: ಪ್ರೀತಿಯಿಂದ ಮಾಡ್ತೇನೆ.
ಕಿ: ಸರಿ. ನಿನ್ನ ಸೋರೆ ಬಳ್ಳಿಗಳಿಗೆ ನೀರು ಕೂಡ ನಾವೇ ತಂದು ಹಾಕ್ತೇವೆ.
ಮು: ಆಗ್ಲಿ.
ಕಿ: ಸರಿ. ಈಗ ನೀನು ಸಂತೆಗೆ ಹೋಗಿ ಬಾ. ಮನೆಯ ಕೆಲಸ ನಾವು ಮಾಡುತ್ತೇವೆ.
ಮು: ಆಗ್ಲಿ .
(ಮುದುಕಿ ಸಂತೋಷದಿಂದ ಮೂರ್ನಾಲ್ಕು ಸೋರೆ ಬುರುಡೆಗಳನ್ನು ತೆಗೆದುಕೊಂಡು ಹೋಗುತ್ತಾಳೆ)
ಫೇಡ್ ಔಟ್
ದೃಶ್ಯ ನಾಲ್ಕು: ಸಂತೆ
(ಮುದುಕಿ ಸೋರೆ ಬುರುಡೆಗಳೊಂದಿಗೆ ಒಂದು ಕಡೆ ಕುಳಿತಿದ್ದಾಳೆ. ಈಗ ಅವಳ ಕತ್ತಿನಲ್ಲಿ ಚಿನ್ನದ ಸರಗಳಿವೆ. ಕಪ್ಪಂಗಿ ಮತ್ತು ಕೆಂಪಂಗಿ ಬಳಿ ಬರುತ್ತಾರೆ)
ಮು: ಎಲ್ಲಿ ಹೋದಿರಿ ನೀವು! ಒಂದು ತಿಂಗಳಾಯ್ತು ನಿಮ್ಮನ್ನು ಕಾಣಲಿಕ್ಕೇ ಇಲ್ಲ!
ಕ: ನಾವಿಬ್ರೂ ತಾಯಿಮನೇಲಿದ್ದೀವಿ.
ಮು:ಬರೋಲ್ವ ನೀವು ನಿಮ್ಮ ಮನೆಗೆ?
ಕ: ಬರ್ತೀವಿ ಕೀಟಲೆ ಮಾಡ್ಲಿಕ್ಕೆ. (ನಗುತ್ತಾಳೆ)
ಕೆ: ಹೇಗಿದ್ದಾರೆ ನಿನ್ನ ಮಕ್ಕಳು?
ಮು: ಹೂಂ ಇದ್ದಾರೆ.
ಕ: ಯಾಕೆ ಏನಾಯ್ತು? ಯಾಕೆ ಬೇಜಾರು? ನಿನ್ನನ್ನು ಅವರು ಚೆನ್ನಾಗಿ ನೋಡಿಕೊಳ್ತಾ ಇಲ್ವ?
ಮು: ಏನು ಚೆನ್ನಾಗಿ ನೋಡಿಕೊಳ್ಳೋದು? ಎಲ್ಲಾ ತಂದ್ಹಾಕ್ತಾರೆ. ಆದ್ರೆ ಅಡಿಗೆ ನಾನೇ ಮಾಡ್ಬೇಕು.
ಕೆ: ಅಷ್ಟೇ ತಾನೆ? ಪಾತ್ರೆ ಅವ್ರು ತೊಳೆಯೊಲ್ವ?
ಮು: ಪಾತ್ರೆ ತೊಳೀತಾರೆ.
ಕ: ಕಾಯಿಪಲ್ಲೆ ಗಿಡಗಳಿಗೆ ನೀರು ಹಾಕೊಲ್ವ?
ಮು: ಹಾಕ್ತಾರೆ.
ಕೆ: ಭಾಗ್ಯವಂತೆ ನೀನು! ಇನ್ನೇನಾಗ್ಬೇಕು ನಿಂಗೆ?
ಕ: ಇಷ್ಟು ಭಾಗ್ಯ ಯಾರಿಗಿದೆ? ಸ್ವಂತ ಮಕ್ಕಳಿರುವವರಿಗೇ ಇಲ್ಲ.
ಕೆ: (ಮುದುಕಿಯ ಕತ್ತಿನಲ್ಲಿರುವ ಚಿನ್ನದ ಸರಗಳನ್ನು ಮುಟ್ಟಿ ನೋಡಿ) ಚಿನ್ನದ ಸರಗಳನ್ನ ಮಾಡಿಕೊಂಡಿದ್ದಿ? ಇಷ್ಟೊಳ್ಳೆಯ ಸೀರೆ ಉಟ್ಟುಕೊಂಡಿದ್ದಿ? ಕೆಲಸ ಎಲ್ಲಾ ಅವ್ರೇ ಮಾಡ್ತಾರೆ. ನೀನು ಮಾಡ್ಬೇಕಾಗಿರೋದು ಅಡಿಗೆ ಕೆಲಸ ಮಾತ್ರ ಅಲ್ವ?
ಮು: ನಿಜ. ಅಡಿಗೆ ಕೆಲಸ ಅಂದ್ರೇನು ಸಣ್ದಾ? ಅವ್ರು ಜನ ಎಷ್ಟಿದ್ದಾರೆ?
ಕ: ಮಕ್ಕಳಲ್ವಾ?
ಮು: ಮಕ್ಕಳಾದ್ರೇನು? ಅದು ಒಂದು ದೊಡ್ಡ ಸೈನ್ಯ! ಸೌದೆ ತಂದು, ಒಲೆ ಉರಿಸಿ, ಬೆಂಕಿ ಮಾಡಿ, ಅಕ್ಕಿ ತೊಳ್ದು , ಬೇಯಿಸಿ ಬಡಿಸಬೇಕು.
ಕೆ: ಬೇಯಿಸುವುದು ನೀನಲ್ಲ, ಬೆಂಕಿ! (ನಗುತ್ತಾಳೆ)
ಮು: ಸೋರೆಬುರುಡೆಗಳನ್ನು ಕೊಯ್ದು , ತಿರುಳು ತೆಗೆದು ಒಣಗಿಸಿ ಇಡಬೇಕು.
ಕೆ: ಒಣಗಿಸುವುದು ನೀನಲ್ಲ ಸೂರ್ಯ! (ನಗುತ್ತಾಳೆ)
ಮು: ಆದ್ರೆ ಸೋರೆ ಬುರುಡೆಗಳನ್ನು ನಾನೇ ಸಂತೆಗೆ ಹೊತ್ತು ತರಬೇಕು.
ಕ: ಅಬ್ಬಾ ! ಸೋರೆ ಬುರುಡೆ ಅಷ್ಟು ಭಾರವಾದದ್ದು ಯಾವಾಗ? ಹತ್ತು ಸೋರೆ ಬುರುಡೆ ಸೇರಿಸಿದ್ರೂ ನಿನ್ನ ತಲೆಬುರುಡೆಯಷ್ಟು ಭಾರ ಆಗ್ಲಿಕ್ಕಿಲ್ಲ.
ಕೆ: ನಿನ್ನ ತಲೆಬುರುಡೆ ಮನೇಲಿಟ್ಟು ಸೋರೆ ಬುರುಡೆ ಮಾತ್ರ ತಕ್ಕೊಂಡು ಸಂತೆಗೆ ಬಾ. (ನಗುತ್ತಾಳೆ)
ಮು: ನಿಮ್ಮ ಕೀಟಲೆ ಮಾಡೋ ಅಭ್ಯಾಸ ಬಿಟ್ಟಿಲ್ಲ ನೀವು!
ಕೆ: ಹೇಗೆ ಬಿಡೋದು? ಅದು ನಮಗೆ ತಾಯಿಮನೆಯಲ್ಲಿ ಆದ ಅಭ್ಯಾಸ !
ಮು: ನನಗೀಗ ಮೊದಲಿನಷ್ಟು ಕೆಲಸ ಮಾಡ್ಲಿಕ್ಕೆ ಆಗ್ತಾ ಇಲ್ಲ.
ಕ: ಭಾಗ್ಯ ಬಂದವರಿಗೆಲ್ಲಾ ಇರೋ ಸುಖ ಅಂದ್ರೆ ಅದೇ. (ನಗು)
ಕೆ: ಏನೆ ಆಗ್ಲಿ ಈಗ ನೀನು ಶ್ರೀಮಂತಳಾಗಿರುವಿ! ಆರೋಗ್ಯದಿಂದ ಇರುವಿ! ಹೀಗಿದ್ರೆ ಖಂಡಿತ ಇನ್ನೂ ಐವತ್ತು ವರ್ಷ ಬದುಕ್ತಿ. ಭಾಗ್ಯವಂತೆ ನೀನು! ಎಷ್ಟು ಒಳ್ಳೆಯ ಮಕ್ಕಳು! ನಾವು ನೋಡು. ಹಾಗೆಯೆ ಇದ್ದೇವೆ!
ಮು: ನಾನು ದಿನಾ ಬೆಟ್ಟದ ಮೇಲಿನ ದೇವತೆಯನ್ನ ಪ್ರಾರ್ಥಿಸ್ಲಿಲ್ವ?
ಕ,ಕೆಂ: ನಾವೂ ಪ್ರಾರ್ಥಿಸ್ಲಿಲ್ವ? ಆದ್ರೆ ನಮ್ಗೆ ಬರ್ಲಿಲ್ಲ ಭಾಗ್ಯ! (ಹೊರಟು ಹೋಗುತ್ತಾರೆ)
ಫೇಡ್ ಔಟ್
ದೃಶ್ಯ ಐದು: ಗುಡಿಸಲು
(ಮುದುಕಿ ಸಂತೆಯಿಂದ ಬರುತ್ತಾಳೆ. ಗೊಣಗಿಕೊಂಡೇ ಬರುತ್ತಾಳೆ. ಮುಖದಲ್ಲಿ ಅತೃಪ್ತಿ, ಅಸಹನೆ. ಮಕ್ಕಳು ಬೆಂಚಿನ ಮೇಲೆ ಕುಳಿತಿದ್ದಾರೆ. ಕಿಟ್ಟಿ ಮಾತ್ರ ನಿಂತುಕೊಂಡಿದ್ದಾನೆ)
ಮು: ನಡ್ದು ನಡ್ದು ಸಾಕಾಯ್ತು . ಇನ್ನು ಬೇಯಿಸ್ಬೇಕು! ಎಷ್ಟು ಬೇಯಿಸುವುದು! ಎಷ್ಟು ಬೇಯಿಸುವುದು! ಒಂದೊಂದ್ಸಲವಾದ್ರೂ ತಿನ್ನುವವರಿಗೇ ಬೇಯಿಸಲಿಕ್ಕಾಗುವುದಿಲ್ವ? ಸೋಮಾರಿಗಳು! (ಹೊಸ್ತಿಲ ಬಳಿ ಚಿಕ್ಕ ಹುಡುಗ ಮಲಗಿಕೊಂಡಿರುತ್ತಾನೆ. ಅವನನ್ನು ಕಾಣದೆ ಮುದುಕಿ ಎಡವಿ ಬೀಳುತ್ತಾಳೆ) ಯಾರು? ಯಾಕೆ ಇಲ್ಲಿ ಮಲಗಿದ್ದಿ? ದಾರಿಗೆ ಅಡ್ಡ? ನನ್ನನ್ನ್ನು ಕೊಲ್ಬೇಕೂಂತ ಮಾಡಿದ್ಯಾ ಕುಂಟ? ನಿಮ್ಗೆಲ್ಲ ಏನಾಗಿದೆ? (ಕಿಟ್ಟಿಯನ್ನು ನೋಡಿ) ಏನು ಎಲ್ಲಾ ಆರಾಮವಾಗಿ ಕೂತ್ಕೊಂಡಿದೀರಿ? ಕೆಲಸ ಎಲ್ಲಾ ಆಯಾ?
ಕಿ: ಆಯ್ತಜ್ಜಿ.
(ಮಕ್ಕಳು ಒಂದೊಂದೇ ಮಾತಾಡುತ್ತವೆ)
ಒಂದು: ಅಂಗಳ ಗುಡಿಸಿದ್ವಿ.
ಎರಡು: ಮನೆ ಗುಡಿಸಿದ್ವಿ.
ಮೂರು: ನೀರು ತಂದ್ವಿ.
ನಾಲ್ಕು: ಬಟ್ಟೆ ಒಗೆದ್ವಿ.
ಐದು: ಸೌದೆ ತಂದ್ವಿ.
ಆರು: ಸೋರೆಗಿಡಗಳಿಗೆ ನೀರು ಹಾಕಿದ್ವಿ.
ಏಳು: ಪಾತ್ರೆ ತೊಳೆದ್ವಿ.
ಒಂಬತ್ತು: ಸಾರು ಮಾಡಿದ್ವಿ.
ಹತ್ತು: ಪಲ್ಯ ಮಾಡಿದ್ವಿ.
ಒಂದು: ಮೊಸರಿನಿಂದ ಬೆಣ್ಣೆ ತೆಗೆದ್ವಿ
ಎರಡು: ಒಂದು ದೊಡ್ಡ ಸೊರೆ ಪಾತ್ರೆ ತಂಬಾ ಅಜ್ಜಿಗೆ ಇಷ್ಟವಾದ ದಪ್ಪ ಮಜ್ಜಿಗೆ ಮಾಡಿಟ್ವಿ.
ಮು: ಇಷ್ಟು ಮಾಡಿದ್ಮೇಲೆ ನಿಮ್ಗೆ ಅನ್ನ ಬೇಯಿಸ್ಲಿಕ್ಕಾಗ್ಲಿಲ್ವ?
ಕಿ: ಅನ್ನ ಬೇಯೊದು ಯಾವಾಗ್ಲೂ ನೀನೇ ಅಲ್ವ ಅಜ್ಜಿ? ಅದ್ಕೇ ಮಾಡ್ಲಿಲ್ಲ. ಅಲ್ದೆ ನೀನು ಬೇಯಿಸಿದ ಅನ್ನದ ರುಚೀನೇ ಬೇರೆ. ನಾವು ಬೇಯಿಸಿದ ಅನ್ನಕ್ಕೆ ರುಚೀನೇ ಇಲ್ಲ.
ಮು: ಅದೆಲ್ಲ ಸುಳ್ಳು! ಯಾರು ಬೇಯಿಸಿದ್ರೂ ಅನ್ನಕ್ಕೆ ಒಂದೇ ರುಚಿ. ಸೋಮಾರಿಗಳು ನೀವು! ಅದಕ್ಕೇ ಇಲ್ಲದ ನೆಪ ಹೇಳ್ತಿದ್ದೀರಿ!
(ರಂಗದಲ್ಲಿ ಕತ್ತಲು ನಿಧಾನವಾಗಿ ಆವರಿಸಿಕೊಳ್ಳುತ್ತದೆ)
ಕಿ: ಇಲ್ಲಜ್ಜಿ. ಅಮ್ಮ ಬೇಯಿಸಿದ ಅನ್ನದ ರುಚಿ….
ಒಂದು: ಅಜ್ಜಿ ಬೇಯಿಸಿದ ಅನ್ನದ ರುಚಿ…
ಎರಡು: ಮಕ್ಕಳು ಬೇಯಿಸಿದ ಅನ್ನದ ರುಚಿ…
ಮೂರು: ಕೆಲಸದಾಳುಗಳು ಬೇಯಿಸಿದ ಅನ್ನದ ರುಚಿ….
ಕಿ: (ಚಿಕ್ಕ ಹುಡುಗನನ್ನು ಎತ್ತಿ ಬೆಂಚಿನ ಮೇಲೆ ಕುಳ್ಳಿರಿಸಿ) ಎಲ್ಲಾ ಬೇರೆ ಬೇರೆ.
ಮ: ಇಷ್ಟೊಂದು ರುಚಿ ಗೊತ್ತಿದ್ಯಾ ನಿಮ್ಗೆ? ರುಚಿಯ ಬಗ್ಗೆ ನಿಮ್ಗೆ ಏನು ಗೊತ್ತು? ನೀವು ಎಷ್ಟೆಂದ್ರೂ ಸೋರೆಬುರುಡೆಗಳಲ್ವ? (ರಂಗ ಪೂರ್ತಿ ಕತ್ತಲಾಗಿ, ನಿಧಾನವಾಗಿ ಮತ್ತೆ ಬೆಳಕು ಬರುವಾಗ ಬೆಂಚಿನ ಮೇಲೆ ಕುಳಿತಿದ್ದ ಮಕ್ಕಳು ಸೋರೆ ಬುರುಡೆಗಳಾಗಿ ಬದಲಾಗಿರುತ್ತವೆ. ಮುದುಕಿ ಬೆರಗಾಗಿ ನೋಡುತ್ತಾ ನಿಂತಿದ್ದಾಳೆ. ಗೋಳೋ ಎಂದು ಅಳತೊಡಗುತ್ತಾಳೆ)
ಫೇಡ್ ಔಟ್
Leave A Comment