ಪಾತ್ರಗಳು:
ತಾಯಿ, ತಂದೆ, ಒಂಬತ್ತು ಹುಡುಗರು
ರಾಜ, ರಾಣಿ, ರಾಜಕುಮಾರಿ
ಬೆಕ್ಕು, ಕುದುರೆ

ದೃಶ್ಯ ಒಂದು: ಒಂದು ಬಡ ಮನೆ

(ತಾಯಿ ಮತ್ತು ತಂದೆ ಒಂಬತ್ತು ಗಂಡು ಮಕ್ಕಳು. ಕೊನೆಯವನ (ಅಪ್ಪು ಎಂದು ಅವನ ಹೆಸರು) ಕೈಯಲ್ಲಿ ಯಾವಾಗಲೂ ಒಂದು ಬೆಕ್ಕು. ಮಕ್ಕಳು ಗದ್ದಲವೆಬ್ಬಿಸುತ್ತಾ ಹೊರಗಿಂದ ಓಡಿಕೊಂಡು ಒಳಗೆ ಬರುತ್ತಾರೆ. ಎಲ್ಲಾ ಮಕ್ಕಳೂ ಹೆಚ್ಚು ಕಡಿಮೆ ಒಂದೇ ಪ್ರಾಯದವರಂತೆ (ಸುಮಾರು ಹತ್ತು  ವರ್ಷ) ಇದ್ದಾರೆ. ತಂದೆ ಕೈಯಲ್ಲಿ ಚಮ್ಮಟಿ ಮತ್ತು ಮೊಳೆಗಳನ್ನು ಇಟ್ಟ್ಟುಕೊಂಡು ಮುರಿದ ಕುರ್ಚಿಯೊಂದನ್ನು ರಿಪೇರಿ ಮಾಡುತ್ತಿದ್ದಾನೆ. ತಾಯಿ ಹರಿದ ಅಂಗಿಯೊಂದಕ್ಕೆ ತೇಪೆ ಹಾಕುತ್ತಾ ಇದ್ದಾಳೆ. ಮಕ್ಕಳ ಬಟ್ಟೆಗಳು ಹಳೆಯವು ಮತ್ತು ಸ್ವಲ್ಪ ಹರಕಾಗಿವೆ. ಮೂಲೆಯಲ್ಲಿ  ಒಂದು ಬೆಕ್ಕು (ಬೆಕ್ಕಿನ ವೇಷದಲ್ಲಿರುವ ಹುಡುಗ) ಕುಳಿತಿದೆ )

ತಾಯಿ: ನಿಲ್ಲಿಸಿ ನಿಲ್ಲಿಸಿ ನಿಮ್ಮ ಗಲಾಟೆ!

ತಂದೆ: ನಡೀರಿ! ಎಲ್ಲಾ ಹೊರಗೆ ನಡೀರಿ!

ಹು೧: ನಮಗೆ ಒಳಗೆ ಹೊರಗೆ ಹೋಗಿ ಸಾಕಾಯ್ತು.

ತಾಯಿ: ಹಾಗಾದ್ರೆ ಒಂದು ಕಡೆ ಸುಮ್ಮನೆ ಕೂತ್ಕೊಳ್ಳಿ.

ತಂದೆ: ನನ್ನ ಎದುರು ಕೂತ್ಕೊಳ್ಬೇಡಿ. ಎಲ್ಲಿಯಾದ್ರೂ ಹೊರಗೆ ಹೋಗಿ ಕೂತ್ಕೊಳ್ಳಿ.

ಹು೨: ಅಮಾ , ನಂಗೆ ಹಸಿವು.

ಎಲ್ಲರೂ: ನಮ್ಗೂ ಹಸಿವು.

ತಾಯಿ: ಮನೆಯಲ್ಲಿ  ತಿನ್ನುವಂಥದು ಏನೂ ಇಲ್ಲ.

ತಂದೆ: (ಸಿಟ್ಟಿನಿಂದ)ನನ್ನನ್ನೇ ತಿಂದುಬಿಡಿ.

(ಮಕ್ಕಳು ಸುಮ್ಮನಾಗಿ ಅಲ್ಲಿ ಇಲ್ಲಿ ಕುಳಿತುಕೊಳ್ಳುತ್ತಾರೆ)

ತಾಯಿ: (ದೈನ್ಯವಾಗಿ) ನಿಮ್ಮಿಂದ ಏನಾದರೂ ಕೆಲಸ ಮಾಡಲಿಕ್ಕೆ ಆಗುವುದಿಲ್ವ?

೧ನೆ: ನೀವು ನಮಗೆ ಯಾವ ಕೆಲಸವನ್ನೂ ಕಲಿಸಲಿಲ್ಲ.

ತಾಯಿ: ಕೆಲಸವನ್ನು ನೀವೇ ನೋಡಿ ಕಲಿಯಬೇಕು.ಕಲಿತುಕೊಳ್ಳಲು ನೀವು ಬರಲಿಲ್ಲ.

೨ನೆ: ನೀವು ನಮಗೆ ಓದಿಸಲಿಲ್ಲ.

ತಂದೆ:  ಅರ್ಧ ಅರ್ಧ ಓದಿ ವಾಪಾಸು ಬಂದಿರಿ. ನೀವೇ ಮುಂದಕ್ಕೆ ಓದಲಿಲ್ಲ.

೩ನೆ: ನೀವು ನಮಗೆ ಬೇರೆ ಊರು ತೋರಿಸಲಿಲ್ಲ.

ತಾಯಿ: ಬೇರೆ ಊರು ತೋರಿಸುವಷ್ಟು ಹಣ ನಮ್ಮ ಬಳಿ ಇರಲಿಲ್ಲ.

೪ನೆ: ನೀವು ಯಾವತ್ತೂ ನಮಗೆ ಹೊಟ್ಟೆ  ತುಂಬಾ ಊಟ ತಿಂಡಿ ಕೊಡಲಿಲ್ಲ.

ತಂದೆ: ಹಡಗನ್ನು ತುಂಬಿಸಬಹುದು. ಹೊಟ್ಟೆ ತುಂಬಿಸಲಿಕ್ಕೆ ಆಗುವುದಿಲ್ಲ.

೫ನೆ: ನಮಗೆ ಯಾವತ್ತೂ  ನೀವು ಒಳ್ಳೆಯ ಉಡುಪು ಹೊಲಿಸಲಿಲ್ಲ.

ತಾಯಿ: ಅಷ್ಟು ಹಣ ನಮ್ಮ ಬಳಿ ಇರಲಿಲ್ಲ.

೬ನೆ: ದೀಪಾವಳಿಗೆ ನೀವು ನಮಗೆ ಪಟಾಕಿ ತರಲಿಲ್ಲ.

ತಂದೆ: ಪಟಾಕಿ ಸುಡುವುದಕ್ಕೆ ನನ್ನ ಬಳಿ ಹಣ ಇರಲಿಲ್ಲ.

೭ನೆ: ನಮ್ಮ  ಎಲ್ಲಾ  ಪ್ರಶ್ನೆಗಳಿಗೆ ನೀವು ಉತ್ತರಿಸಲಿಲ್ಲ.

ತಾಯಿ: ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ನಮಗೆ ಉತ್ತರ ಗೊತ್ತಿಲ್ಲ.

೮ನೆ: ಯಾವುದಕ್ಕೆ ಹಣ ಕೇಳಿದ್ರೂ ನೀವು ಹೇಳಿದ್ದು ಇಲ್ಲ ಇಲ್ಲ ಇಲ್ಲ.

ತಂದೆ: ಯಾಕಂದರೆ, ನಮ್ಮ ಬಳಿ ಹಣ ಇಲ್ಲ ಇಲ್ಲ ಇಲ್ಲ.

೯ನೆ: ನೀವು ನಮಗೆ ಮದುವೆ ಸಹ ಮಾಡಿಸಲಿಲ್ಲ.

(ಎಲ್ಲಾ ಮಕ್ಕಳು ಒಮ್ಮೆಲೇ ಜೋರಾಗಿ ನಗುತ್ತಾರೆ)

ತಂದೆ: (ಜೋರಾಗಿ)ನಿಲ್ಲಿಸಿ ನಿಮ್ಮ ನಗು!

(ಮಕ್ಕಳ ನಗು ತಟ್ಟನೆ ನಿಲ್ಲುತ್ತದೆ)

೯ನೆ: ನಾವು ಎಲ್ಲಿಗಾದರೂ ಹೋಗುತ್ತೇವೆ!

ತಂದೆ: ಎಲ್ಲಿಗಾದ್ರೂ ಹೋಗಿ! ತೊಲಗಿ!

ತಾಯಿ: ಎಲ್ಲಿಗೆ ಹೋಗುತ್ತೀರಿ ನೀವು?

೧ನೆ: ನಾನು ಪೂರ್ವಕ್ಕೆ ಹೋಗುತ್ತೇನೆ.

೨ನೆ: ನಾನು ಪಶ್ಚಿಮಕ್ಕೆ ಹೋಗುತ್ತೇನೆ.

೩ನೆ: ನಾನು ಉತ್ತರಕ್ಕೆ ಹೋಗುತ್ತೇನೆ.

೪ನೆ: ನಾನು ದಕ್ಷಿಣಕ್ಕೆ ಹೋಗುತ್ತೇನೆ.

೫ನೆ: ನಾನು ವಾಯವ್ಯಕ್ಕೆ ಹೋಗುತ್ತೇನೆ.

೬ನೆ: ನಾನು ಈಶಾನ್ಯಕ್ಕೆ ಹೋಗುತ್ತೇನೆ.

೭ನೆ: ನಾನು ಆಗ್ನೇಯಕ್ಕೆ ಹೋಗುತ್ತೇನೆ.

೮ನೆ: ನಾನು ನೈರುತ್ಯಕ್ಕೆ ಹೋಗುತ್ತೇನೆ.

ತಂದೆ: ಹೋಗಿ ನಿಮಗೆ ಬೇಕಾದಲ್ಲಿ ಹೋಗಿ. ನಿಮಗೆ ಬೇಕಾದ್ದು ಮಾಡಿ.

(ಎಲ್ಲರೂ ಹೊರಟು ಹೋಗುತ್ತಾರೆ. ೯ನೆಯವನು ಕುಳಿತೇ ಇದ್ದಾನೆ. ಬೆಕ್ಕು ಎದ್ದು ಹೋಗಿ ೯ನೆಯವನಿಗೆ ಅಂಟಿ ಕುಳಿತುಕೊಳ್ಳುತ್ತದೆ)

ತಂದೆ: ನಿನಗೆ ದಿಕ್ಕು ಇಲ್ಲವೆ?

೯ನೆ: ನಾನು ಮೇಲಕ್ಕೆ ಹೋಗುತ್ತೇನೆ.

ತಾಯಿ: (ಆಶ್ಚರ್ಯ ಮತ್ತು ಆತಂಕದಿಂದ) ಮೇಲಕ್ಕೆ? ಎಲ್ಲಿಗೆ?

೯ನೆ: ಪರ್ವತದ ತುದಿಯಲ್ಲಿರುವ ಕೋಟೆಗೆ.

ತಂದೆ: ಅಲ್ಲಿಗೆ ಯಾರೂ ಈ ತನಕ ಹೋಗಿಲ್ಲ.

ತಾಯಿ: ಅಲ್ಲಿಗೆ ಹೋಗುವ ದಾರಿ ಯಾರಿಗೂ ತಿಳಿದಿಲ್ಲ.

ತಂದೆ: ನಾನು ಅರ್ಧ ದಾರಿ ಹೋಗಿ ವಾಪಾಸು ಬಂದಿದ್ದೇನೆ.

೯ನೆ: ನಾನು ವಾಪಾಸು ಬರುವುದಿಲ್ಲ.

ತಾಯಿ: ಅಪ್ಪು, ನೀನು ಅಲ್ಲಿಗೆ ಹೋಗಬೇಡ. ದಾರಿ ತಪ್ಪಿ ಎಲ್ಲೆಲ್ಲಾದರೂ ಹೋದೀಯೆ?

೯ನೆ: ನನಗೆ ದಾರಿ ಚೆನ್ನಾಗಿ ತಿಳಿದಿದೆ. (ಎದ್ದು ನಿಲ್ಲುತ್ತಾನೆ)

ತಾಯಿ: ಯಾರು ತೋರಿಸಿದ್ರು?

೯ನೆ: (ಬೆಕ್ಕನ್ನು ತೋರಿಸಿ) ಈ ಬೆಕ್ಕಿಗೆ ದಾರಿ ಗೊತ್ತಿದೆ. ಅದು ಪ್ರತಿ ರಾತ್ರಿ ಕನಸಿನಲ್ಲಿ ಬಂದು ನನಗೆ ದಾರಿ ತೋರಿಸುತ್ತದೆ.

(ತಾಯಿ ತಂದೆ ಅವನ ಮಾತಿಗೆ ಬೆರಗಾಗಿ ಬೆಕ್ಕನ್ನು ಮತ್ತು ಅವನನ್ನು ನೋಡುತ್ತಿರುವಾಗ ಅವನು ಹೋಗುತ್ತಾನೆ. ಬೆಕ್ಕು ಅವನ ಹಿಂದೆಯೆ ಹೋಗುತ್ತದೆ)

ತಾಯಿ: (ಕ್ಷಣದ ಬಳಿಕ, ದು:ಖದಿಂದ) ಛೆ! ಎಲ್ಲರೂ ಹೊರಟುಹೋದರಲ್ಲ!

ತಂದೆ: (ಅಷ್ಟೇ ವಿಷಾದದಿಂದ) ಛೆ! ಹೋಗಬಾರದಾಗಿತ್ತು.

ತಾಯಿ: ಮರಳಿ ಬಂದಾರು.

ತಂದೆ: ಹೌದು ಮರಳಿ ಬಂದಾರು. ಬರುವ ದಾರಿ ಅವರಿಗೆ ತಿಳಿದಿದೆ.

ಫೇಡ್ ಔಟ್

ದೃಶ್ಯ ಎರಡು: ಬೀದಿ

(ಎಂಟು ಮಕ್ಕಳು ಗುಂಪಾಗಿ ನಿಂತುಕೊಂಡಿದ್ದಾರೆ.  ಯಾವುದು ಯಾವ ದಿಕ್ಕು ಎಂದು ಅವರಿಗೆ ಗೊತ್ತಿಲ್ಲ. ಆದ್ದರಿಂದ ಆ ಕುರಿತು ಮಾತು ಮತ್ತು ಚರ್ಚೆ ನಡೆದಿದೆ. ೯ನೆಯವನು ಬರುತ್ತಾನೆ. ಅವನ ಕೈಯಲ್ಲಿ ಬೆಕ್ಕು (ಗೊಂಬೆ) ಇದೆ)

೯ನೆ: ಏನು ಚರ್ಚೆ ನಡೆದಿದೆ?

೧ನೆ: ನಮಗೆ

೨: ದಿಕ್ಕುಗಳ

೩: ಹೆಸರು

೪ನೆ: ಮಾತ್ರ

೫ನೆ: ಗೊತ್ತಿದೆ.

೬ನೆ: ಯಾವುದು ಯಾವ ದಿಕ್ಕು

೭ನೆ: ಎಂದು

೮ನೆ: ಗೊತ್ತಿಲ್ಲ.

೧ನೆ: ನಿನಗೆ ಗೊತ್ತಿದ್ದರೆ ತೋರಿಸು. ಆ ದಿಕ್ಕಿನಲ್ಲಿ ಹೋಗುತ್ತೇವೆ

(೯ನೆಯನು ಇದು ಪೂರ್ವ, ಇದು ಪಶ್ಚಿಮ… ಎಂಬುದಾಗಿ ಎಂಟು ದಿಕ್ಕುಗಳನ್ನು ತೋರಿಸುತ್ತಾನೆ. (ನಿಜವಾದ ದಿಕ್ಕುಗಳನ್ನೇ ತೋರಿಸಬೇಕು). ಎಂಟು ಮಂದಿಯೂ ಅವನು ತೋರಿಸಿದ ದಿಕ್ಕಿಗೆ ಮುಖ ಮಾಡಿ ನಿಲ್ಲುತ್ತಾರೆ.

೯ನೆ: ಸರಿ ಹೋಗಿ!

ಎಲ್ಲರೂ: (ಒಂದೆರಡು ಹೆಜ್ಜೆ ಮುಂದೆ ಹೋಗಿ ) ನೀನು ಎಲ್ಲಿಗೆ ಹೋಗುತ್ತಿ?

೯ನೆ: ನಾನು  ಮೇಲೆ ಹೋಗುತ್ತೇನೆ.

೧ನೆ: (ಆಶ್ಚರ್ಯದಿಂದ) ಮೇಲಕ್ಕೆ? ಎಲ್ಲಿಗೆ?

೯ನೆ: ಅಲ್ಲಿ ನೋಡಿ. ಪರ್ವತದ ತುದಿಯಲ್ಲಿ ಮೋಡಗಳ ನಡುವೆ ಒಂದು ಕೋಟೆ ಕಾಣಿಸುವುದಿಲ್ಲವೆ?

ಎಲ್ಲರೂ: (ಮೇಲಕ್ಕೆ ನೋಡಿ)ಕಾಣಿಸುತ್ತದೆ.

೨ನೆ: ನಾವು ಅದನ್ನು ದಿನಾ ನೋಡುತ್ತೇವೆ.

೯ನೆ: ನಾನು ಅಲ್ಲಿಗೆ ಹೋಗುತ್ತೇನೆ. ಅದರೊಳಗೆ ಒಂದು ಅರಮನೆಯಿದೆ.

೧ನೆ: ಹೇಗೆ ಗೊತ್ತು ನಿನಗೆ?

೯ನೆ: ಕೋಟೆಯೊಳಗೆ ಅರಮನೆಯಿರಲೇ ಬೇಕು ಯಾಕೆಂದರೆ, ಕೊಟೆಯಿರುವುದೇ ಅರಮನೆಗಾಗಿ.

೩ನೆ: ಆ ಕೋಟೆಗೆ ಯಾರೂ ಈ ತನಕ ಹೋಗಿಲ್ಲ.

೯ನೆ: ನಾನು ಹೋಗುತ್ತೇನೆ.

೪ನೆ: ದಾರಿ ಗೊತ್ತಿದೆಯೆ ನಿಂಗೆ?

೯ನೆ: ನನ್ನ ಬೆಕ್ಕಿಗೆ ಗೊತ್ತಿದೆ. ನನ್ನ ಹಿಂದೆಯೆ ಬಾ ಎಂದು ಅದು ಹೇಳಿದೆ.

ಎಲ್ಲರೂ: (ಆಶ್ಚರ್ಯದಿಂದ) ಯಾವಾಗ?

೯ನೆ: ಕನಸಿನಲ್ಲಿ

ಎಲ್ಲರೂ: (ಪರಮಾಶ್ಚರ್ಯದಿಂದ)ಕನಸಿನಲ್ಲಿ?

೯ನೆ: ಹೌದು ಕನಸಿನಲ್ಲಿ.

೧ನೆ: ಇದು ನಿನ್ನ ಕನಸಿನಲ್ಲಿ ಬಂದ ಬೆಕ್ಕೆ?

೯ನೆ: ಹೌದು.

(ಎಲ್ಲರೂ ಆಶ್ಚರ್ಯದಿಂದ ಅವನನ್ನು ಮತ್ತು ಬೆಕ್ಕನ್ನು ನೋಡುತ್ತಾರೆ)

೪ನೆ: ಅಲ್ಲಿ ಹೋಗಿ ಏನು ಮಾಡುತ್ತಿ? ನಿಂಗೆ ಯಾವ ಕೆಲಸವೂ ಗೊತ್ತಿಲ್ಲ.

೯ನೆ: ಈ ಬೆಕ್ಕಿಗೆ ಎಲ್ಲಾ ಕೆಲಸ ಗೊತ್ತಿದೆ. ಬೆಕ್ಕು ಮತ್ತು ನಾನು ಸೇರಿ ಎಲ್ಲಾ ಕೆಲಸ ಮಾಡುತ್ತೇವೆ.

ಎಲ್ಲರೂ: ಆಗಲಿ. ನಿನಗೆ ಒಳ್ಳೆಯದಾಗಲಿ. (ಅವರವರ ದಿಕ್ಕಿನಲ್ಲಿ ಹೋಗುತ್ತಾರೆ)

೯ನೆ: (ಬೆಕ್ಕಿನೊಡನೆ) ನಡೆ ನಾವೂ ಹೋಗೋಣ.

ಫೇಡ್ ಔಟ್

ದೃಶ್ಯ ಮೂರು: ಅರಮನೆ

(ಅಪ್ಪು  ಅರಮನೆಯ ಬಾಗಿಲು ತಟ್ಟುತ್ತಾನೆ. ಈಗ ಬೆಕ್ಕು ಅವನ  ಪಕ್ಕದಲ್ಲಿ ಕುಳಿತಿದೆ. (ಹುಡುಗ ಬೆಕ್ಕಿನ ವೇಷದಲ್ಲಿ)ಅವನದೇ ಪ್ರಾಯದ ರಾಜಕುಮಾರಿ ಬಾಗಿಲು ತರೆಯುತ್ತಾಳೆ)

ರಾಕು: ಯಾರು ನೀನು?

ಅಪ್ಪು: ನಾನು ಯಾರೂ ಅಲ್ಲ. ನಾನು ಅಪ್ಪು.

ರಾಕು: ಅಂದರೆ?

(ಬೆಕ್ಕು ತಲೆಯೆತ್ತಿ ರಾಜಕುಮಾರಿಯ ಮುಖವನ್ನೇ ನೋಡುತ್ತದೆ)

ಅಪ್ಪು: ಅಂದರೆ, ನನ್ನ ಹೆಸರು ಅಪ್ಪು.

ರಾಕು: ಇಲ್ಲಿಗೆ ಹೇಗೆ ಬಂದೆ?

ಅಪ್ಪು: ನನ್ನ ಕನಸಿನ ಬೆಕ್ಕು ತೋರಿಸಿದ ದಾರಿಯಲ್ಲಿ ಬಂದೆ.

ರಾಕು: ಏನು ಇದು ನಿನ್ನ ಕನಸಿನ ಬೆಕ್ಕೆ?

ಅಪ್ಪು: ಹೌದು.

ರಾಕು:ಏನು ಹಾಗೆಂದರೆ?

ಅಪ್ಪು: ಇದು ನನ್ನ ಕನಸಿನಲ್ಲಿ ಬಂದ ಬೆಕ್ಕು.

(ಬೆಕ್ಕು ಮಿಯಾಂವ್ ಎನ್ನುತ್ತದೆ)

ರಾಕು: ಬಾ ಒಳಗೆ.

ಅಪ್ಪು: (ತಡೆದು ನಿಂತು)ನೀನು ಯಾರು ಎಂದು ಕೇಳಬಹುದೆ?

ರಾಕು: ನಾನು ರಾಜಕುಮಾರಿ.

ಅಪ್ಪು: (ಆಶ್ಚರ್ಯದಿಂದ)ರಾಜಕುಮಾರಿಯೆ ಬಂದು ಅರಮನೆಯ ಬಾಗಿಲು ತೆರೆಯುವುದುಂಟೆ?

ರಾಕು: ಯಾಕೆ ತೆರೆಯಬಾರದು?

ಅಪ್ಪು: ಸೇವಕರಿಲ್ಲವೆ?

ರಾಕು: ಇಲ್ಲ.

ಅಪ್ಪು: ಏನು? ಸೇವಕರಿಲ್ಲದ ರಾಜರಿರುತ್ತಾರೆಯೆ? (ಉದ್ಗಾರ)

ರಾಕು: ಈ ಸಾಮಾಜ್ಯದಲ್ಲಿ ಸೇವಕರು, ಸೈನಿಕರು ಯಾರೂ ಇಲ್ಲ.  ಇಲ್ಲಿರುವುದು ನಾವು ಮೂವರು ಮಾತ್ರ.

ಅಪ್ಪು: (ಮತ್ತಷ್ಟು ಬೆರಗಾಗಿ) ಮೂವರು ಮಾತ್ರ ಇರುವ ಸಾಮಾಜ್ಯ! ಇಲ್ಲಿ ನಿಮ್ಮ ಕೆಲಸಗಳನ್ನು ಯಾರು ಮಾಡುತ್ತಾರೆ?

ರಾಕು: ಇಲ್ಲಿ ನಮ್ಮ ಎಲ್ಲಾ ಕೆಲಸಗಳನ್ನು ನಾವೇ ಮಾಡಿಕೊಳ್ಳಬೇಕು.

ಅಪ್ಪು: ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ರಾಜ ರಾಣಿ ಮತ್ತು ರಾಜಕುಮಾರಿ! ಅದ್ಭುತ! ಅದ್ಭುತ!

ರಾಕು: ಬಾ ಒಳಗೆ. ನಿನ್ನನ್ನು ನನ್ನ   ಅಜ್ಜಿ ಮತ್ತು ತಾತನ ಬಳಿ ಕರೆದುಕೊಂಡು ಹೋಗುತ್ತೇನೆ.

(ಬೆಕ್ಕು ಅವರ ಜೊತೆಯಲ್ಲಿ  ಒಳ ಹೋಗುತ್ತದೆ)

ಫೇಡ್ ಔಟ್

ದೃಶ್ಯ ನಾಲ್ಕು: ರಾಜನ ವಾಸಸ್ಥಾನ

(ಸರಳವಾದ ವಾಸದ ಕೋಣೆ. ರಾಜ ರಾಣಿ ಇಬ್ಬರೂ ಕುರ್ಚಿಯಲ್ಲಿ ಕುಳಿತುಕೊಂಡು ಓದುವುದರಲ್ಲಿ ಮಗ್ನರಾಗಿದ್ದಾರೆ. ಇಬ್ಬರಿಗೂ ತುಂಬಾ ವಯಸ್ಸಾಗಿದೆ. ರಾಜಕುಮಾರಿ  ಅಪ್ಪು ಮತ್ತು ಬೆಕ್ಕು ಒಳಬರುತ್ತಾರೆ)

ಅಪ್ಪು; (ಸ್ವಗತ) ಅರಸನ ಕೋಣೆ ನಾನು ಕನಸಿನಲ್ಲಿ ಕಂಡ ಕೋಣೆಯಂತೆಯೆ ಇದೆ! ಕನಸಿನಲ್ಲಿ ಕಂಡಂತೆಯೆ ಇಬ್ಬರೂ ದಪ್ಪ ದಪ್ಪದ ಮಕ್ಕಳ ಪುಸ್ತಕಗಳನ್ನು ಓದುತ್ತಿದ್ದಾರೆ. ಕೋಣೆಯಲ್ಲಿ ಪುಸ್ತಕ ತುಂಬಿರುವ ಬೀರುಗಳಿವೆ. (ಅರಸ ಪುಸ್ತಕ ಓದುತ್ತಿರುವುದನ್ನು ನೋಡಿ ಬೆರಗಾಗಿ) ನಿಜವಾಗಿಯೂ ಅರಸರು ಪುಸ್ತಕ ಓದುತ್ತಾರಾ? (ಸರಸರನೆ ರಾಜನ ಬಳಿ ಹೋಗಿ  ಬಗ್ಗಿ ಅವನ ಕೈಯಲ್ಲಿದ್ದ  ಪುಸ್ತಕವನ್ನು ನೋಡಿ) ನೀವು ಕೂಡ ಪುಸ್ತಕ ಓದ್ತೀರಾ? (ರಾಜ ರಾಣಿ ಸ್ವಲ್ಪ ಮಾತ್ರವೇ ಅಚ್ಚರಿಯಿಂದ ಅಪ್ಪುವನ್ನು ನೋಡಿ ಮುಗುಳ್ನಗುತ್ತಾರೆ)

ರಾಜ: (ತಲೆಯೆತ್ತಿ)ಹೌದು.

ಅಪ್ಪು: ಮಕ್ಕಳ ಪುಸ್ತಕಗಳನ್ನು?

ರಾಜ: (ಮುಗುಳ್ನಕ್ಕು) ಹೌದು. (ರಾಣಿಯ ಕಡೆಗೆ ತಿರುಗಿ) ನಾನು ಹೇಳಲಿಲ್ಲವೆ? ಒಂದು ದಿನ ಯಾರಾದರೊಬ್ಬರು ಬಂದೇ ಬರುತ್ತಾರೆ ಅಂತ?

ರಾಣಿ: ನಿಜ ನನಗೂ ಹಾಗೇ ಅನಿಸ್ತಿತ್ತು. ಯಾರು ಮಗು ನೀನು?

ಅಪ್ಪು: ನನ್ನ ಹೆಸರು ಅಪ್ಪು.

ರಾಣಿ: ಹೇಗೆ ಬಂದೆ ಇಲ್ಲಿಗೆ?

ಅಪ್ಪು: ನನ್ನ ಕನಸಿನ ಬೆಕ್ಕು ತೋರಿಸಿದ ದಾರಿಯಲ್ಲಿ ಬಂದೆ.

(ಬೆಕ್ಕು ಅಪ್ಪುವಿನ ಪಕ್ಕದಲ್ಲಿದೆ)

ರಾಣಿ: ಇದೇ ಏನು ನಿನ್ನ ಕನಸಿನ ಬೆಕ್ಕು?

ಅಪ್ಪು: ಹೌದು.

ರಾಣಿ: ತುಂಬಾ ಕನಸು ಕಾಣುತ್ತೀಯ?

ಅಪ್ಪು: ಹೌದು. ರಾತ್ರಿ ಮಾತ್ರ.

ರಾಜ: ಹಗಲು ಏನು ಮಾಡುತ್ತಿ? ಓದುತ್ತೀಯ?

ಅಪ್ಪು: ಓದಲು ಮನೆಯಲ್ಲಿ  ಒಂದು ಪುಸ್ತಕವೂ ಇಲ್ಲ.

ರಾಜ: ಯಾಕಿಲ್ಲ?

ಅಪ್ಪು: ನನ್ನ ಅಪ್ಪ ಅಮ್ಮ ಬಹಳ ಬಡವರು. ಅವರ ಬಳಿ ಪುಸ್ತಕ ಕೊಳ್ಳಲು ಹಣ ಇಲ್ಲ.

ರಾಜ: ಇಲ್ಲಿ ಸಾವಿರಾರು ಪುಸ್ತಕಗಳಿವೆ. ನಿನಗೆ ಬೇಕಾದುದನ್ನು ಓದಬಹುದು.

ಅಪ್ಪು: ಈ ಸಾಮಾಜ್ಯದ ಬಗ್ಗೆ ನನಗೆ ತಿಳಿದುಕೊಳ್ಳಬೇಕು.

ರಾಜ: ಇದು ಬಹಳ ಚಿಕ್ಕದಾದ ಒಂದು ಸಾಮಾಜ್ಯ. ನಾನು ಮತ್ತು ನನ್ನ ಹೆಂಡತಿಗೆ ಟ್ರೆಕ್ಕಿಂಗ್ ಅಂದರೆ ತುಂಬಾ ಇಷ್ಟ. ಒಂದು ಬಾರಿ ಟ್ರೆಕ್ಕಿಂಗ್ ಮಾಡುತ್ತಾ ದಾರಿ ತಪ್ಪಿ ನಾವು ಇಲ್ಲಿಗೆ ತಲಪಿದೆವು. ಈ ಅರಮನೆಯೊಳಗೆ ಒಂದು ಮನೆಯಲ್ಲಿ  ಏನಿರಬೇಕೋ ಅದೆಲ್ಲಾ ಇದೆ. ಹಿಂದೆ ಇಲ್ಲಿ ಒಂದು ಸಾಮಾಜ್ಯ ಇತ್ತು. ಇಲ್ಲಿ ರಾಜ ರಾಣಿ ಎಲ್ಲಾ ಇದ್ದರು. ಇದು ಅರಮನೆಯಾಗಿತ್ತು. ಯಾವುದೋ ಉತ್ಪಾತದಿಂದಾಗಿ ಇಲ್ಲಿನ ಜನರೆಲ್ಲಾ ನಾಶವಾದರು.

ಅಪ್ಪು: ನಿಮಗೆ ಹೇಗೆ ತಿಳಿಯಿತು?

ರಾಜ: ಇಲ್ಲಿ ನ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿ ತಿಳಿಯಿತು.

ರಾಣಿ: ಇಲ್ಲಿ  ಒಂದೇ ಒಂದು ಹೊಲ ಇದೆ.  ಅದರಲ್ಲಿ ಎಲ್ಲಾ ಆಹಾರ ಧಾನ್ಯಗಳೂ ತಾವಾಗಿ ಬೆಳೆಯುತ್ತವೆ.  ಹೊಲದ ಬಳಿ ಒಂದೇ ಒಂದು ಮರ ಇದೆ. ಇದರಲ್ಲಿ ವಿಶ್ವದಲ್ಲಿರುವ ಎಲ್ಲಾ ಹಣ್ಣುಗಳು ಆಗುತ್ತವೆ. ಒಂದೇ ಒಂದು ಬಳ್ಳಿ ಇದೆ. ಅದರಲ್ಲಿ  ಎಲ್ಲಾ ಕಾಯಿಪಲ್ಲೆಗಳೂ ಬೆಳೆಯುತ್ತವೆ. ಇಲ್ಲಿ ಪರಿಸರ ಮಾಲಿನ್ಯವೆಂಬುದಿಲ್ಲ.  ಯಾವ ಶಬ್ದವೂ ಇಲ್ಲ. ನಮಗೆ ಈ ಸಾಮಾಜ್ಯ ತುಂಬಾ ಇಷ್ಟವಾಯಿತು. ಆದ್ದರಿಂದ ನಾವು ಇಲ್ಲಿಯೆ ಉಳಿದೆವು. ಇಲ್ಲಿ ನಾವೇ ಅರಸರು ನಾವೇ ಪ್ರಜೆಗಳು.

ರಾಜ: ನಮಗೆ ಒಬ್ಬಳು ಮಗಳು ಹುಟ್ಟಿದಳು. ಅವಳು ಪ್ರಾಯಕ್ಕೆ ಬಂದ ಮೇಲೆ ಅವಳಿಗೆ ಮದುವೆ ಮಾಡಿಸುವುದು ಹೇಗೆ ಎಂಬುದು ನಮಗೆ ಚಿಂತೆಯಾಯಿತು. ಒಂದು ದಿನ ಕುದುರೆಯ ಮೇಲೆ ಒಬ್ಬ ರಾಜಕುಮಾರ ಬಂದ. ನಮ್ಮ ಸಮಸ್ಯೆ ಪರಹಾರವಾಯಿತು ಎಂದು ನಮಗೆ ಸಂತೋಷವಾಯಿತು. ನಾವು ಅವರಿಬ್ಬರ ಮದುವೆ ಮಾಡಿಸಿದೆವು. ಇವಳು ಅವರ ಮಗಳು. ಅಂದರೆ ನಮ್ಮ ಮೊಮ್ಮಗಳು. ಇವಳಿಗೆ ಐದು ವರ್ಷ ಪ್ರಾಯವಾಗುವಾಗ ಒಂದು ಸಂಜೆ ಹೊರಗೆ ತಿರುಗಾಡಲು ಹೋದ ಇವಳ ಅಪ್ಪ ಅಮ್ಮ ವಾಪಾಸು ಬರಲಿಲ್ಲ. ಅವರಿಗೆ ಏನಾಯಿತೆಂದು ನಮಗೆ ತಿಳಿಯಲಿಲ್ಲ.

ರಾಣಿ: (ದು:ಖಿಸುತ್ತಾ) ಇವತ್ತು ಬರಬಹುದು ನಾಳೆ ಬರಬಹುದು ಎನ್ನುತ್ತಾ ಐದು ವರ್ಷಗಳು ಕಳೆದುಹೋದುವು. ಇನ್ನು ಅವರು ಬರುತ್ತಾರೆಂದು ನನಗೆ ಅನಿಸುವುದಿಲ್ಲ.

ಅಪ್ಪು:  ಆ ಕುದುರೆ ಎಲ್ಲಿದೆ?

ರಾಜ: ಇಲ್ಲೇ ಇದೆ. ಬಹಳ  ಚೆಂದದ ಕುದುರೆ.

ರಾಕು: ಬಿಳಿ ಕುದುರೆ. ಚಂದ್ರನಂಥ ಬಿಳಿ.

ರಾಜ: ನಮಗೆ ವಯಸ್ಸಾಯಿತು. ನಾವು ಇನ್ನು ಹೆಚ್ಚು ಕಾಲ ಬದುಕುವುದಿಲ್ಲ. ನಮ್ಮ ಮೊಮ್ಮಗಳ ಚಿಂತೆ ನಮ್ಮನ್ನು ಕಾಡುತ್ತಿತ್ತು. ಅಷ್ಟರಲ್ಲಿ ದೇವರೇ ಕಳಿಸಿದಂತೆ ನೀನು ಬಂದೆ. ನಿಮ್ಮಿಬ್ಬರಿಗೆ ಮದುವೆಯ ಪ್ರಾಯವಾಗುವಾಗ ನಿಮಗೆ ಮದುವೆ ಮಾಡಿಸುತ್ತೇವೆ. ಇನ್ನು ನಮಗೆ ಚಿಂತೆಯೆಂಬುದಿಲ್ಲ. ಅರಮನೆಯಲ್ಲಿ ಸಕಲ ಸೌಭಾಗ್ಯವೂ ಇದೆ. ನೀವು ಇಲ್ಲಿ ಸಂತೋಷವಾಗಿ ಇರಬಹುದು. ನಮಗೆ ಈಗೀಗ ಕೆಲಸ ಮಾಡಲು ಕಷ್ಟವಾಗುತ್ತದೆ. ನೀನು ಕೆಲಸಗಳನ್ನು ಕಲಿತುಕೊಂಡಿದ್ದೀಯ?

ಅಪ್ಪು: ಇಲ್ಲ. ಅಪ್ಪ ಅಮ್ಮ ನನಗೆ ಯಾವ ಕೆಲಸವನ್ನೂ  ಕಲಿಸಲಿಲ್ಲ. ಆದರೆ ಈ ಬೆಕ್ಕು ಮನೆಯ ಎಲ್ಲಾ ಕೆಲಸಗಳನ್ನೂ ಮಾಡುತ್ತದೆ. ಅಡಿಗೆ ಮಾಡುತ್ತದೆ, ಪಾತ್ರೆ ತೊಳೆಯುತ್ತದೆ. ಮನೆ ಗುಡಿಸಿ ಕಸ ತೆಗೆದು ಸ್ವಚ್ಛಗೊಳಿಸುತ್ತದೆ. ಅದರ ಜೊತೆಯಲ್ಲಿ ಸೇರಿಕೊಂಡು ನಾನು ಕೆಲಸ ಕಲಿಯುತ್ತೇನೆ

ರಾಣಿ: ಬಹಳ ಸಂತೋಷ. ಇಲ್ಲಿ ಮನೆ ಯಾವಾಗಲೂ ಶುಚಿಯಾಗಿಯೆ ಇರುತ್ತದೆ. ಇಲ್ಲಿ ಧೂಳು ಸಹ ಇಲ್ಲ. ಅಡಿಗೆಯ ಕೆಲಸವನ್ನು ಕಲಿತುಕೊಂಡರಾಯ್ತು.

ಅಪ್ಪು: (ಬೆಕ್ಕಿನೊಡನೆ) ಅಡಿಗೆಮನೆಗೆ ಹೋಗಿ ಏನಾಗಬೇಕಾಗಿದೆ ಎಂದು ನೋಡು.

(ಬೆಕ್ಕು ಒಳಗೆ ಹೋಗುತ್ತದೆ)

ರಾಕು: ನಾನು ಅಪ್ಪುವಿಗೆ  ಕ್ಯಾಪ್ಟನನ್ನು   ತೋರಿಸುತ್ತೇನೆ. (ಕುದುರೆ ಕೋಣೆಯೊಳಗೆ ಬರುತ್ತದೆ) ಕ್ಯಾಪ್ಟನ್‌ಎಂಬ ಶಬ್ದ ಬಾಯಿಂದ ಬಿದ್ದುದೇ ತಡ ಕ್ಯಾಪ್ಟನ್ ಪ್ರತ್ಯಕ್ಷ. (ಕುದುರೆಯನ್ನು ಮುದ್ದುಮಾಡುತ್ತಾಳೆ. ಅಪ್ಪು ಕೂಡ ಅದರ ಮೈದಡವಿ ಪ್ರೀತಿ ತೋರಿಸುತ್ತಾನೆ)

ರಾಕು: ಅಪ್ಪು, ಬಾ. ನಿನಗೆ ಹಣ್ಣಿನ ಮರ ಮತ್ತು ಕಾಯಿಪಲ್ಲೆಯ ಬಳ್ಳಿಯನ್ನು ತೋರಿಸುತ್ತೇನೆ. (ಅಪ್ಪುವಿನ ಕೈ ಹಿಡಿದು ಕರೆದುಕೊಂಡು ಹೋಗುತ್ತಾಳೆ)

ಫೇಡ್ ಔಟ್

ದೃಶ್ಯ ಐದು: ಅರಮನೆ

(ರಾಜ ಮತ್ತು ರಾಣಿ ಓದಿನಲ್ಲಿ ನಿರತರಾಗಿದ್ದಾರೆ. ಕುದುರೆ, ಅಪ್ಪು ಮತ್ತು ರಾಜಕುಮಾರಿ ಒಳಬರುತ್ತಾರೆ. ಅಪ್ಪು ರಾಜಕುಮಾರನ ಉಡುಪಿನಲ್ಲಿದ್ದಾನೆ)

ಅಪ್ಪು: ನಾನು ಒಮ್ಮೆ ಮನೆಗೆ ಹೋಗಿ ಬರಬೇಕು.

ರಾಣಿ: ಯಾಕೆ ಮಗೂ ಇಲ್ಲಿ ಬೇಸರ ಬಂತೆ?

ಅಪ್ಪು: ಅಪ್ಪ ಅಮ್ಮನನ್ನು ಕಾಣಬೇಕೆಂದು ಆಸೆಯಾಗಿದೆ.

ರಾಣಿ: ಹೋದರೆ ವಾಪಾಸು ಬರುತ್ತೀಯಾ?

ಅಪ್ಪು: ಬರುತ್ತೇನೆ.

ರಾಕು: ನಾನು ಕೂಡ ಅಪ್ಪುವಿನ ಜೊತೆಯಲ್ಲಿ ಹೋಗುತ್ತೇನೆ ಅಜ್ಜಿ?

ರಾಜ: ಬೇಡ ಮಗಳೆ, ಅಷ್ಟು ದೂರ!

ರಾಕು: ಕುದುರೆಯ ಮೇಲೆ ಹೋಗುತ್ತೇವೆ ತಾತ.

ಅಪ್ಪು: ಹೌದು. ಕುದುರೆಯ ಮೇಲೆ ಹೋಗುತ್ತೇವೆ. ರಾಜಕುಮಾರಿ ನನಗೆ ಕುದುರೆ ಓಡಿಸಲು ಕಲಿಸಿದ್ದಾಳೆ.

ರಾಜ: ಅಪ್ಪು, ನೀನು ಹೋದರೆ ವಾಪಾಸು ಬರುತ್ತಿ ಎಂದು ಅನಿಸುವುದಿಲ್ಲ. ನಿನ್ನ ಅಪ್ಪ ಅಮ್ಮ ನಿನ್ನನ್ನು ಬರಲು ಬಿಡದಿದ್ದರೆ?

ಅಪ್ಪು: (ನಕ್ಕು) ಮನಸ್ಸಾಗದಿರಲು ಅಲ್ಲೇನು ಸಾಮಾಜ್ಯವಿದೆಯೆ? ಖಂಡಿತ ಬಿಡುತ್ತಾರೆ.

ರಾಣಿ: ಅಪ್ಪ ಅಮ್ಮನನ್ನು ಬಿಟ್ಟು ಬರಲು ನಿನಗೆ ಮನಸ್ಸಾಗದಿದ್ದರೆ?

ಅಪ್ಪು: (ನಕ್ಕು) ಮನಸ್ಸಾಗದಿರಲು ನಾನೇನು ರಾಜಕುಮಾರನೆ? ಮನಸ್ಸಾಗಿಯೆ ಆಗುತ್ತದೆ.

ರಾಜ: ಹಾಗಾದರೆ ಸರಿ. ಹೋಗಿ ನಾಳೆಯೆ ವಾಪಾಸು ಬನ್ನಿ.

ಅಪ್ಪು:  ನಾಳೆ ಸಾಯಂಕಾಲದೊಳಗೆ ವಾಪಾಸು ಬರುತ್ತೇವೆ

ರಾಜ: (ರಾಣಿಯೊಡನೆ) ಅಪ್ಪುವಿನ ಅಮ್ಮ ಅಮ್ಮನಿಗೆ ಉಡುಗೊರೆ ಕೊಡಲು ನಮ್ಮಲ್ಲಿ ಏನೂ ಇಲ್ಲ. ಒಂದು ಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ನೂರು ವಜ್ರಗಳನ್ನು ಕೊಡು.

ರಾಣಿ: ಆಗಲಿ. ಅಪ್ಪು ನಿನ್ನ ಬೆಕ್ಕನ್ನೇನು ಮಾಡುತ್ತಿ?

ಅಪ್ಪು: ಬೆಕ್ಕು ನಿಮ್ಮ ಬಳಿ ಯೆ ಇರಲಿ. ಮನೆಯ ಕೆಲಸಗಳು ಆಗಬೇಕಲ್ಲ?

ರಾಣಿ: ಅಪ್ಪು  ನಮ್ಮ ಮಗಳನ್ನು ಕರೆದುಕೊಂಡು ನೀನು ಮರಳಿ ಬರಲೇ ಬೇಕು. ನಾವೇ ನಿಮ್ಮ ಮದುವೆ ಮಾಡಿಸಬೇಕು. ನಮ್ಮ ಕಾಲದ ನಂತರ ನೀವು ಬೇಕಾದಲ್ಲಿಗೆ ಹೋಗಿ. (ಕಣ್ಣೀರು ಮಿಡಿಯುತ್ತಾಳೆ)

ರಾಕು: ಖಂಡಿತ ವಾಪಾಸು ಬರುತ್ತೇವೆ ಅಜ್ಜಿ. ಕ್ಯಾಪ್ಟನ್ ಮೇಲೆ ಕುಳಿತರೆ ಆಯ್ತು . ಅದು ನಮ್ಮನ್ನು ಆಕಾಶದಲ್ಲಿ ಹಾರಿಸಿಕೊಂಡು ಬಂದು ಇಲ್ಲಿ ಇಳಿಸುತ್ತದೆ.

ಅಪ್ಪು: ನನ್ನ ಬೆಕ್ಕು ಎಲ್ಲಿದೆಯೊ ನಾನು ಅಲ್ಲಿ ಇರಲೇ ಬೇಕು. ಅದು ಬರೀ ಬೆಕ್ಕಲ್ಲ. ಅದು ನನ್ನ ಕನಸು.

ರಾಣಿ: ಅದನ್ನು ನಾವು ಜೋಪಾನವಾಗಿ ನೋಡಿಕೊಳ್ಳುತ್ತೇವೆ.

ಅಪ್ಪು: (ನಕ್ಕು) ನೀವನೂ ಮಾಡಬೇಕಾಗಿಲ್ಲ. ನೀವು ಓದುತ್ತಾ ಇರಿ. ಅದು ನಿಮ್ಮನ್ನು  ಜೋಪಾನವಾಗಿ ನೋಡಿಕೊಳ್ಳುತ್ತದೆ.

ಫೇಡ್ ಔಟ್

ದೃಶ್ಯ ಆರು: ಅಪ್ಪುವಿನ ತಾಯಿತಂದೆಯ ಮನೆ

(ಅಪ್ಪು ಮತ್ತು ರಾಜಕುಮಾರಿಯ ಪ್ರವೇಶ. ಮೊದಲಿನ ದೃಶ್ಯದ ಸ್ಥಿತಿಯಲ್ಲಿಯೆ ಇದ್ದ ಅಪ್ಪ ಅಮ್ಮ ಬೆರಗಾಗಿ ನೋಡುತ್ತಾರೆ.)

ಇಬ್ಬರೂ: ಅಪ್ಪು!

(ಅಪ್ಪು ಹೋಗಿ ತಾಯಿ ತಂದೆಗಳ ಪಾದಕ್ಕೆ ನಮಸ್ಕರಿಸುತ್ತಾನೆ. ರಾಜಕುಮಾರಿಯೂ ನಮಸ್ಕರಿಸುತ್ತಾಳೆ)

ತಾಯಿ: ಇದು ಯಾರು?

ಅಪ್ಪು: ಇದು ಪರ್ವತದ ಮೇಲಿನ ಅರಮನೆಯ ರಾಜನ ಮಗಳು. ಬಾಕಿ ಕಥೆಯನ್ನು ಆ ಮೇಲೆ ಹೇಳುತ್ತೇನೆ. ಇದು ರಾಜ ಮತ್ತು ರಾಣಿ ನಿಮಗೆ ಕೊಟ್ಟಿರುವ ಉಡುಗೊರೆ.

(ಇಬ್ಬರೂ ಚೀಲದೊಳಗಿರುವುದನ್ನು ನೋಡಿ ಬೆರಗಾಗುತ್ತಾರೆ)

ತಾಯಿ: (ರಾಜಕುಮಾರಿಯೊಡನೆ) ಏನಮ್ಮ ನಿನ್ನ ಹೆಸರು?

ರಾಕು: ನನಗಿನ್ನೂ ಹೆಸರು ಇರಿಸಿಲ್ಲ.

ತಾಯಿ: (ಆಶ್ಚರ್ಯದಿಂದ) ಹೆಸರಿಲ್ಲದಿರುವ ರಾಜಕುಮಾರಿ!

ಅಪ್ಪು: ಇವಳು ರಾಜ ಮತ್ತು ರಾಣಿಯ ಮೊಮ್ಮಗಳು. ನನ್ನದೇ ಪ್ರಾಯ. ಹತ್ತು ವರ್ಷ. ಇನ್ನು  ಐದು  ವರ್ಷದ ಬಳಿಕ ನಮ್ಮ ಮದುವೆ.

ತಾಯಿ: ಮದುವೆ ಎಲ್ಲಿ?

ಅಪ್ಪು : ಮದುವೆ ಅಲ್ಲಿ. (ಮೇಲಕ್ಕೆ ತೋರಿಸುತ್ತಾನೆ)

ತಾಯಿ: ಮದುವೆ ಇಲ್ಲಿಯೆ ಆಗಬೇಕು!

ಅಪ್ಪು: (ಅಮ್ಮನ ಕೈಯಲ್ಲಿರುವ ನಾಣ್ಯದ ಚೀಲವನ್ನು ಒಮ್ಮೆ ಅಲ್ಲಾಡಿಸಿ)ಹೌದು. ಮದುವೆ ಇಲ್ಲಿಯೆ ಆಗಬೇಕು! ಇಡೀ ಊರಿಗೆ ಆಮಂತ್ರಣ ಹಂಚಬೇಕು! ಮದುವೆ ಮೂರು ದಿನ ನಡೆಯಬೇಕು! ಪ್ರತಿ ದಿನ ಐವತ್ತು ಸಾವಿರ ಮಂದಿಗೆ ಪಾಯಸದ ಊಟ ಹಾಕಬೇಕು! (ಜೋರಾಗಿ ನಗುತ್ತಾನೆ. ತಾಯಿ ತಂದೆಯ ಮುಖ ಪೆಚ್ಚಾಗುತ್ತದೆ)

ರಾಕು: (ಮುಗಳ್ನಕ್ಕು) ಮದುವೆಗೆ ಇನ್ನೂ ಹತ್ತು ವರ್ಷ ಇದೆ!

ಅಪ್ಪು: ಆದರೆ ಮದುವೆ ಆಗುವುದು ಅಲ್ಲಿಯೆ ಎಂದು ರಾಜ ಮತ್ತು ರಾಣಿಗೆ ಮಾತು ಕೊಟ್ಟಿದ್ದೇವೆ.

ತಾಯಿ: ಏನಿದ್ದರೂ ಅದು ಹತ್ತು ವರ್ಷಗಳ ನಂತರದ ವಿಚಾರ.

ಅಪ್ಪು: ನಾವು ಈಗಲೇ ವಾಪಾಸು ಹೋಗಬೇಕು.

ತಾಯಿ: ಈಗಷ್ಟೇ ಬಂದಿದ್ದಿ. ಈಗಲೇ ಹೋಗುತ್ತೀಯ? ನೀನು ಹೋಗಿ ಐದು ವರ್ಷ ಆಯಿತು. ಸ್ವಲ್ಪ ದಿನ ಇದ್ದು ಹೋಗಿ.

(ತಂದೆ ಚಿನ್ನದ ನಾಣ್ಯಗಳ ಚೀಲ ಮತ್ತು ವಜ್ರಗಳ ಚೀಲವನ್ನು ತೆಗೆದು ಪೆಟ್ಟಿಗೆಯೊಳಗೆ ಭದ್ರವಾಗಿಡುತ್ತಾನೆ)

ಅಪ್ಪು: ಇಲ್ಲಮ್ಮ ಸಾಯಂಕಾಲದೊಳಗೆ ವಾಪಾಸು ಮುಟ್ಟುತ್ತೇವೆ ಎಂದು ಭಾಷೆ ಕೊಟ್ಟಿದ್ದೇವೆ.

ತಂದೆ: ನಾಳೆಯ ವರೆಗೆ ಇರಬಹುದಲ್ಲ ಅಪ್ಪು?

ಅಪ್ಪು: ಇಲ್ಲಪ್ಪ. ನಾವು ಈಗಲೇ ಹೊರಡಬೇಕು.

ತಾಯಿ: ನೀವು ಹೇಗೆ ಬಂದಿರಿ?

ರಾಕು: ಕುದುರೆಯ ಮೇಲೆ ಬಂದೆವು. ಕ್ಯಾಪ್ಟನ್.

(ಕುದುರೆ ಒಳಬರುತ್ತದೆ.  ಬೆಳಕು ಕಡಿಮೆಯಾಗುತ್ತಾ ಹೋಗುತ್ತದೆ. ಅಪ್ಪುವಿನ ಅಪ್ಪ ಅಮ್ಮ ಬೆರಗಿನಿಂದ ನೋಡುತ್ತಾರೆ)

ತಂದೆ: ಏನು? ಈ ಕುದುರೆ  ನಿಮ್ಮನ್ನು  ಬೆನ್ನ ಮೇಲಿರಿಸಿಕೊಂಡು ಆ ಬೆಟ್ಟ ಇಳಿದು ಬಂತೆ?

ಅಪ್ಪು: ಹೌದು. (ತುಂಟತನದ ನಗು)

ತಂದೆ: ಅದೇ ರೀತಿ ಪುನ: ಬೆಟ್ಟ ಹತ್ತುತ್ತದೆಯೆ?

ಅಪ್ಪು: ಅಪ್ಪಾ, ಇದು ಬೆಟ್ಟವನ್ನು ಹತ್ತುವುದೂ ಇಲ್ಲ ಇಳಿಯುವುದೂ ಇಲ್ಲ. ಇದು ಆಕಾಶದಲ್ಲಿ ಹಾರುತ್ತದೆ.

(ರಂಗದ ಬೆಳಕು ಆರತೊಡಗುತ್ತದೆ. ಇಬ್ಬರೂ ಕುದುರೆಯನ್ನು ಏರುತ್ತಾರೆ. ಕುದುರೆ ನಿಧಾನವಾಗಿ ನಿರ್ಗಮಿಸುತ್ತದೆ.ಅಪ್ಪು ಮತ್ತು ರಾಜಕುಮಾರಿ ಕೈಬೀಸುತ್ತಾರೆ. ಬೆಳಕು ಪೂರ್ತಿ ಆರಿದ ಬಳಿಕ ನಿಧಾನವಾಗಿ ಮರಳುತ್ತದೆ)

ತಾಯಿ: (ಕಣ್ಣು ತಿಕ್ಕಿಕೊಳ್ಳುತ್ತಾ) ಇದು ಕನಸಲ್ಲವಷ್ಟೆ?

ತಂದೆ: (ಪೆಟ್ಟಿಗೆ ತೆರೆದು ಚೀಲಗಳನ್ನು ನೋಡಿ) ಅಲ್ಲ, ಕನಸಲ್ಲ. (ಪೆಟ್ಟಿಗೆಯನ್ನು ಪುನ: ಭದ್ರಪಡಿಸುವಷ್ಟರಲ್ಲಿ ಹೊರಗೆ ಗದ್ದಲ ಕೇಳಿಸುತ್ತದೆ. ಎಂಟು ಮಕ್ಕಳು ಒಳಬರುತ್ತಾರೆ. ಅದೇ ಹರಕು ಉಡುಪಿನಲ್ಲಿದ್ದಾರೆ)

ತಾಯಿ ತಂದೆ: ನೀವಾ?

ಎಲ್ಲರೂ: ಹೌದು ನಾವೇ.

ತಂದೆ: ಎಲ್ಲಿಗೆ ಹೋದಿರಿ?

ಎಲ್ಲರೂ: ಎಂಟು ಮಂದಿ ಎಂಟು ದಿಕ್ಕುಗಳಿಗೆ.

ತಂದೆ:  ಏನು ಮಾಡಿದಿರಿ? ಏನಾಯಿತು?

ಎಲ್ಲರೂ: ಹೋಗಿ ಹೋಗಿ ಹೋಗಿ ಹೋಗಿ…

ತಂದೆ: ಹೋಗಿ?

೧ನೆ: ಹೊರಟಲ್ಲಿಗೇ ಬಂದು ತಲಪಿದೆವು.

ತಾಯಿ: ಅಂದರೆ, ಏನೂ ಆಗಲಿಲ್ಲ!

೨ನೆ: ಆಯಿತು. ಒಂದು ಸತ್ಯವನ್ನು ಕಂಡುಕೊಂಡೆವು.

ತಾಯಿತಂದೆ: (ಕುತೂಹಲದಿಂದ)ಏನು?

ಎಲ್ಲರೂ: ಭೂಮಿಯು ಗೋಲಾಕಾರವಾಗಿದೆ.

ಫೇಡ್ ಔಟ್