ಪಾತ್ರಗಳು:
ಮುನ್ನ (೧೦): ಅಣ್ಣ
ಮುನ್ನಿ (೮): ತಂಗಿ
ತಂದೆ, ಮಲತಾಯಿ,
ಅಜ್ಜಿ (ಮಾಟಗಾತಿ)
ದೃಶ್ಯ ಒಂದು: ಕಾಡು
(ಒಬ್ಬ ಸುಮಾರು ನಲ್ವತ್ತು ವರ್ಷ ಪ್ರಾಯದ ವ್ಯಕ್ತಿ ಮರ ಕಡಿಯುತ್ತಿದ್ದಾನೆ. ಅವನ ಇಬ್ಬರು ಮಕ್ಕಳು (ಅಣ್ಣ, ಮುನ್ನ ಹತ್ತು ವರ್ಷ, ತಂಗಿ, ಮುನ್ನಿ) ಎಂಟು ವರ್ಷ ಆಟ ಆಡುತ್ತಾ ಸೌದೆ ಆರಿಸಿಡುತ್ತಾ ಇದ್ದಾರೆ. ತಂದೆ ಕಡಿಯುವುದನ್ನು ನಿಲ್ಲಿಸಿ ಆಯಾಸದಿಂದ ಒಂದು ಮರದ ದಿಮ್ಮಿಯ ಮೇಲೆ ಕುಳಿತುಕೊಳ್ಳುತ್ತಾನೆ)
ತಂದೆ: ಹಸಿವಾಗುತ್ತಾ?
ಮುನ್ನಿ : ಇಲ್ಲ. ಅಮ್ಮ ಯಾವಾಗ ಬರ್ತಾಳೆ?
ತಂದೆ: (ವಿಷಾದದಿಂದ) ಅಮ್ಮ ಇನ್ನು ಬರೋಲ್ಲ ಮಕ್ಕಳೆ.
ಮುನ್ನ: ಅಮ್ಮ ಸತ್ತು ಹೋಗಿದ್ದಾಳೆ. ಅಲ್ವಾ ಅಪ್ಪ?
ತಂದೆ: ಹೌದು ಮುನ್ನ.
ಮುನ್ನಿ: ಹಾಗಾದ್ರೆ ಅಮ್ಮ ತಿಂಡಿ ತಕ್ಕೊಂಡು ಬರೋಲ್ವ?
ತಂದೆ: ಇಲ್ಲ ಮುನ್ನಿ. ಅದ್ಕೇ ನಾನಿವತ್ತು ಬರುವಾಗ್ಲೇ ತಿಂಡಿ ತಕ್ಕೊಂಡು ಬಂದಿದ್ದೀನಿ. ಹಸಿವಾಗ್ತಿದ್ರೆ ಈಗ್ಲೇ ತಿನ್ನುವಿರಂತೆ.
ಮುನ್ನ್ನಿ: ನಂಗೆ ಹಸಿವಿಲ್ಲ.
ಮುನ್ನ: ನಂಗೂ ಇಲ್ಲ.
ತಂದೆ: ಹಾಗಾದ್ರೆ ಆಡ್ತಾ ಇರಿ. ನಾನು ಇನ್ನಷ್ಟು ಸೌದೆ ಮಾಡ್ತೀನಿ.
ಮುನ್ನಿ: ಅಪ್ಪಾ ಇವತ್ತು ತಿಂಡಿ ಎಲ್ಲಾ ನೀನೇ ಮಾಡಿದ್ದಾ?
ತಂದೆ: ಹೌದು.
ಮುನ್ನಿ: ಯಾವಾಗ? ನಾನು ನೋಡೇ ಇಲ್ಲ.
ತಂದೆ: ನೀವು ಏಳುವ ಮೊದಲೇ ಎದ್ದು ಎಲ್ಲಾ ಮಾಡಿ ಮುಗಿಸಿದೆ.
ಮುನ್ನ: ಇನ್ನು ದಿನಾ ನೀನೇ ಮಾಡ್ತೀಯ?
ತಂದೆ: ಹೌದು.
ಮುನ್ನ: ಪ್ರತಿ ದಿನ! ನಿನ್ನಿಂದಾಗುತ್ತಾ?
ತಂದೆ: ಹೂಂ ಆಗುತ್ತೆ. ಸ್ವಲ್ಪ ಕಷ್ಟ ಆಗುತ್ತೆ. ನೀವು ಒಪ್ಪಿಗೆ ಕೊಟ್ರೆ ಚಿಕ್ಕಮ್ಮನನ್ನ ಕರ್ಕೊಂಡು ಬರ್ತೀನಿ.
ಮುನ್ನಿ: ಎಲ್ಲಿದ್ದಾಳೆ ಚಿಕ್ಕಮ್ಮ?
ತಂದೆ: ಇರ್ತಾಳೆ ಎಲ್ಲಾದ್ರೂ. ಹುಡುಕ್ಕೊಂಡು ಹೋಗ್ಬೇಕು.
ಮುನ್ನ: ಅವಳು ನಮ್ಮಮ್ಮನ ಹಾಗೆ ಒಳ್ಳೆಯವಳಾಗಿರ್ತಾಳಾ?
ತಂದೆ: ಯಾಕಿರಲ್ಲ? ಇರ್ತಾಳೆ.
ಮುನ್ನಿ: ಅಮ್ಮನ ಹಾಗೇನೆ ಪ್ರೀತಿಯಿಂದ ನೋಡಿಕೊಳ್ತಾಳಾ?
ತಂದೆ: ಹೂಂ ನೋಡಿಕೊಳ್ತಾಳೆ.
ಮುನ್ನ: ಹಾಗಾದ್ರೆ ಆಗ್ಬಹುದು.
ತಂದೆ: ಹಾಗಾದ್ರೆ ಈಗ ತಿಂಡಿ ತಿನ್ತೀರಾ?
ಮುನ್ನ, ಮುನ್ನಿ: ತಿಂತೀವಿ.
(ತಂದೆ ಬುತ್ತಿ ಬಿಚ್ಚುತ್ತಾನೆ)
ಫೇಡ್ ಔಟ್
ದೃಶ್ಯ ಎರಡು: ಮನೆ
(ರಂಗವನ್ನು ಚಾವಡಿ ಮತ್ತು ಅಡಿಗೆ ಕೋಣೆಗಳಾಗಿ ವಿಭಜಿಸಬೇಕು. ಅಡಿಗೆ ಕೋಣೆಯಲ್ಲಿ ಮಲತಾಯಿ ಸಿಡಿಮಿಡಿಗುಟ್ಟುತ್ತಾ ಮನೆಗೆಲಸ ಮಾಡುತ್ತಿದ್ದಾಳೆ. ಅಲ್ಲಿಯೆ ಒಂದು ಕಡೆ ತಂದೆ ಕುಳಿತುಕೊಂಡು ಒಡೆದ ಪಿಂಗಾಣಿ ಪಾತ್ರೆಯನ್ನು ಅಂಟು ಹಚ್ಚಿ ಜೋಡಿಸುವ ವ್ಯರ್ಥ ಕೆಲಸದಲ್ಲಿದ್ದಾನೆ. ಮುನ್ನ ಮತ್ತು ಮುನ್ನಿ ಇನ್ನೊಂದು ಕೋಣೆಯಲ್ಲಿ ಕುಳಿತು ಶಾಲೆಯ ಹೋಮವರ್ಕ್ ಕೆಲಸ ಮಾಡುತ್ತಿದ್ದಾರೆ)
ಮಲತಾಯಿ: ತಿನ್ನುವ ಬಾಯಿಗಳು ಹೆಚ್ಚಾಗಿವೆ. ಅವಕ್ಕೆ ತಕ್ಕಷ್ಟು ಸಂಪಾದನೆ ಇಲ್ಲ. (ತಂದೆ ಮನವಾಗಿದ್ದಾನೆ) ಮಕ್ಕಳಿಗೆ ಜೀರ್ಣಶಕ್ತಿ ಜಾಸ್ತಿ. (ತಂದೆ ಮನವಾಗಿದ್ದಾನೆ). ಶಾಲೆ ಬೇರೆ ಕೇಡು. (ತಂದೆ ಮನವಾಗಿದ್ದಾನೆ) ಕೇಳಿಸ್ತದಾ ನಿಮ್ಗೆ?
ತಂದೆ: ಕೇಳಿಸ್ತದೆ.
ಮಲತಾಯಿ: ಕೇಳಿಸಿದ್ರೆ ಸಾಲ್ದು. ಪರಿಹಾರ ಕಂಡುಹುಡುಕ್ಬೇಕು.
ತಂದೆ: ಏನು ಪರಿಹಾರ?
(ಮುನ್ನ ಮುನ್ನಿ ನಿಶ್ಶಬ್ದವಾಗಿ ಎದ್ದು ಬಂದು ಬಾಗಿಲ ಮರೆಯಲ್ಲಿ ನಿಲ್ಲುತ್ತಾರೆ)
ಮಲತಾಯಿ: ಪರಿಹಾರ ಏನೂ ಕಾಣಿಸ್ತಾ ಇಲ್ವ?
ತಂದೆ: ಇಲ್ಲ.
ಮಲತಾಯಿ: ನಂಗೆ ಕಾಣಿಸ್ತಾ ಇದೆ.
ತಂದೆ: ಏನು?
ಮಲತಾಯಿ: (ಮೆತ್ತಗಿನ ದನಿಯಲ್ಲಿ) ನಿನ್ನೆಯೆ ಹೇಳ್ಳಿಲ್ವ ನಾನು? ಅವರನ್ನು ಎಲ್ಲಿಯಾದ್ರೂ ಬಿಟ್ಟು ಬನ್ನಿ.
ತಂದೆ: ಎಲ್ಲಿಯಾದ್ರೂ ಅಂದ್ರೆ ಎಲ್ಲಿ?
ಮಲತಾಯಿ: ಅವರಿಗೊಬ್ಳು ಅಜ್ಜಿ ಇದಾಳಲ್ಲ?
ತಂದೆ: ಅವಳು ಸಿಟ್ಟು ಮಾಡಿಕೊಂಡು ಹೋದೋಳು ಎಲ್ಲಿದ್ದಾಳೆ ಅಂತ್ಲೇ ಗೊತ್ತಿಲ್ಲ. ಸತ್ತುಹೋದ್ಲು ಅಂತ ಜನ ಹೇಳ್ತಾರೆ.
ಮಲತಾಯಿ: ಅಜ್ಜಿಮನೆ ಇಲ್ದದಿದ್ರೆ ಕಾಡಿನಲ್ಲಿ ಬಿಟ್ಟು ಬನ್ನಿ. ಅಂತೂ ನಂಗೆ ಅವ್ರನ್ನ ಸಾಕೋಕೆ ಸಾಧ್ಯ ಇಲ್ಲ!
(ತಂದೆ ಏನೂ ಹೇಳುವುದಿಲ್ಲ. (ಮಲತಾಯಿಯ ಮಾತನ್ನು ಕೇಳಿಸಿಕೊಂಡ ಮುನ್ನ ಮನ್ನಿ ವಿಸ್ಮಿತರಾಗುತ್ತಾರೆ. ಬೇಸರದಿಂದ ಮತ್ತೆ ತಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ)
ಮುನ್ನ: ಚಿಕ್ಕಮ್ಮನ ಮಾತಿಗೆ ಅಪ್ಪ ಏನೂ ಹೇಳಲಿಲ್ಲ!
ಮುನ್ನಿ: ಚಿಕ್ಕಮ್ಮ ಹೇಳಿದ ಹಾಗೆ ಅಪ್ಪ ಮಾಡ್ಬಹುದಾ?
ಮುನ್ನ; ಹೂಂ ಮಾಡಿದ್ರೂ ಮಾಡ್ಬಹುದು. ಈಗ ಅಪ್ಪ ನಮ್ಮ ಮಾತೇ ಕೇಳೋಲ್ಲ. ಆಕೆ ಹೇಳಿದ ಹಾಗೆ ನಡ್ಕೋತಾರೆ.
ಮುನ್ನಿ: ಅಪ್ಪ ನಮ್ಮನ್ನ ಕಾಡಿನಲ್ಲಿ ಬಿಟ್ಟು ಬಂದ್ರೆ ಏನ್ಮಾಡೋದು?
ಮುನ್ನ; ಹೆದರ್ಬೇಡ. ನನ್ನ ಬಳಿ ಒಂದು ಐಡಿಯ ಇದೆ.
ಮುನ್ನಿ: ಏನು ಐಡಿಯ?
ಮುನ್ನ: ಈಗ ಹೇಳಲ್ಲ.
ಮುನ್ನಿ: ನಿನ್ನೆ ಚಿಕ್ಕಮ್ಮ ನನ್ನ ತಲೆಗೆ ಕುಟ್ಟಿ ಶಾಲೆಗೆ ಹೊಗೋದು ಬೇಡ ಏನಾದ್ರೂ ಕೆಲಸ ಮಾಡುಅಂದ್ಲು.
ಮುನ್ನ; ನಾವು ಶಾಲೆಗೆ ಹೋಗೋದು ಚಿಕ್ಕಮ್ಮನಿಗೆ ಇಷ್ಟ ಇಲ್ಲ.
ಮುನ್ನಿ: ಏನು ಮಾಡೋದು?
ಮುನ್ನ: ಯಾವುದಕ್ಕೆ?
ಮುನ್ನಿ: ಚಿಕ್ಕಮ್ಮ ನಮ್ಮನ್ನ ಶಾಲೆಗೆ ಹೋಗೋಕೆ ಬಿಡದಿದ್ರೆ?
ಮುನ್ನ: ನಾಳೆ ಭಾನುವಾರ. ನನ್ನ ಬಳಿ ಐಡಿಯಗಳಿವೆ. ಏನಾದ್ರೂ ಮಾಡ್ಬಹುದು. ಈಗ ಪುಸ್ತಕ ಮುಚ್ಚಿ ಮಲಗೋಣ.
ಫೇಡ್ ಔಟ್
ದೃಶ್ಯ ಮೂರು: ಕಾಡಿನ ದಾರಿ
(ಮುನ್ನ ಮತ್ತು ಮುನ್ನಿ ತಂದೆಯ ಜೊತೆಯಲ್ಲಿ ನಡೆಯುತ್ತಿದ್ದಾರೆ)
ಮುನ್ನ: ಅಪ್ಪಾ , ಇವತ್ತು ಕೊಡಲಿ ಬೇಡ್ವ?
ತಂದೆ: ಇವತ್ತು ನಾವು ಮರ ಕಡೀಲಿಕ್ಕೆ ಹೋಗ್ತಾ ಇಲ್ಲ.
ಮುನ್ನ: ಮತ್ತೆ?
ತಂದೆ: ನಿಮ್ಮ ಅಜ್ಜಿ ಮನೆಗೆ ಹೋಗ್ತಾ ಇದೀವಿ.
ಮುನ್ನಿ: ಯಾವಾಗ ವಾಪಾಸು ಬರೋದು? ನಾಳೆ ಶಾಲೆ ಇದೆ.
ತಂದೆ: ಸಾಯಂಕಾಲ ವಾಪಾಸು ಬರೋಣ.
ಮುನ್ನ: ನಮ್ಗೆ ಅಜ್ಜಿ ಇದ್ದಾಳಾ ಅಪ್ಪಾ?
ತಂದೆ: ಹೌದು ಇದಾಳೆ.
ಮುನ್ನ: ಈ ವರೆಗೆ ನಾವು ಅವಳನ್ನ ಕಂಡೇ ಇಲ್ಲ!
ತಂದೆ: ಇವತ್ತು ಕಾಣ್ತೀರಿ. ನಡೀರಿ.
(ಫೇಡ್ ಔಟ್ ಆಗಿ ಬೆಳಕು ಬರುವಾಗ ಮೂವರೂ ಬಳಲಿದ್ದು ಒಂದು ಮರದ ಕೆಳಗೆ ವಿಶ್ರಾಂತಿಯಲ್ಲಿದ್ದಾರೆ)
ತಂದೆ: ಹಸಿವಾಗ್ತಿದೆಯೆ?
ಮುನ್ನ, ಮುನ್ನಿ: ಹೌದು.
ತಂದೆ: ಹಾಗಾದ್ರೆ, ತಿಂಡಿ ತಿಂದು ಸ್ವಲ್ಪ ಕುಳಿತುಕೊಳ್ಳೋಣ.
(ಕುಳಿತುಕೊಳ್ಳುತ್ತಾರೆ. ತಂದೆ ತಿಂಡಿ ಪೊಟ್ಟಣ ಬಿಚ್ಚುತ್ತಾನೆ. ಫೇಡ್ ಔಟ್ ಆಗಿ ಬೆಳಕು ಮರಳುವಾಗ ಮಕ್ಕಳು ಮರದಡಿಯಲ್ಲಿ ನಿದ್ರಿಸುತ್ತಿರುವುದು ಕಾಣಿಸುತ್ತದೆ)
ಮುನ್ನಿ: (ಎಚ್ಚರಗೊಂಡು) ಮುನ್ನಾ, ಅಪ್ಪ ಇಲ್ಲ!
ಮುನ್ನ: (ಎಚ್ಚತ್ತು) ಅಪ್ಪ ನಮ್ಮನ್ನು ಬಿಟ್ಟು ಹೋಗಿದ್ದಾನೆ!
ಮುನ್ನಿ: ಏನು ಮಾಡೋದು?
ಮುನ್ನ: (ನಕ್ಕು) ವಾಪಾಸು ಮನೆಗೆ ಹೋಗೋಣ.
ಮುನ್ನಿ: ಕತ್ತಲಾಗ್ತಾ ಇದೆ! ನಮ್ಗೆ ದಾರಿ ಗೊತ್ತಾಗುತ್ತಾ?
ಮುನ್ನ: ಗೊತ್ತಾಗುತ್ತೆ.
ಮುನ್ನಿ: ಹೇಗೆ?
ಮುನ್ನ: ನೋಡು ಅಲ್ಲಿ ದೂರದಲ್ಲಿ ಮಿನುಗ್ತಾ ಇದೆಯಲ್ಲಾ, ಏನು ಗೊತ್ತಾ?
ಮುನ್ನಿ: (ಮುನ್ನಿ ಓಡಿ ಹೋಗಿ ಅದನ್ನು ಹೆಕ್ಕಿಕೊಂಡು)ಗೋಲಿ!
ಮುನ್ನ: ನಾನು ಇವತ್ತು ನಸುಕಿನಲ್ಲಿಯೆ ಎದ್ದು ಹೊಳೆ ದಂಡೆಗೆ ಹೋಗಿ ಚಡ್ಡಿ ಜೇಬಿನ ತುಂಬಾ ಗೋಲಿ ತುಂಬಿಸಿಕೊಂಡು ಬಂದೆ. ದಾರಿ ಉದ್ದಕ್ಕೂ ಒಂದೊಂದೇ ಗೋಲಿ ಎಸೀತಾ ಬಂದೆ. ಅದರ ಆಧಾರದಿಂದ ದಾರಿ ಗುರುತಿಸಿಕೊಂಡು ಮನೆಗೆ ಹೋಗ್ಬಹುದು. ಏಳು ಹೋಗೋಣ.
(ಇಬ್ಬರೂ ದಾರಿ ಗುರುತಿಸಿಕೊಳ್ಳುತ್ತಾ ಹೋಗುತ್ತಾರೆ)
ಮುನ್ನಿ: ನೋಡು ಅಲ್ಲಿ ದೂರದಲ್ಲಿ ಒಂದು ಗೋಲಿ ಹೊಳೀತಾ ಇದೆ! (ಓಡುತ್ತಾಳೆ. ಮುನ್ನ ಅವಳನ್ನು ಸೇರಿಕೊಳ್ಳುತ್ತಾನೆ. ಇಬ್ಬರೂ ಓಡತೊಡಗುತ್ತಾರೆ)
ಫೇಡ್ ಔಟ್
ದೃಶ್ಯ ನಾಲ್ಕು: ಮನೆ
(ಹೊರಗಿನ ಕೋಣೆಯಲ್ಲಿ ತಂದೆ ಮಾನವದನನಾಗಿ ಕುಳಿತಿದ್ದಾನೆ, ಮುನ್ನ ಮುನ್ನಿ ಓಡಿಕೊಂಡು ತಂದೆಯ ಬಳಿ ಬರುತ್ತಾರೆ. ತಂದೆ ಆನಂದದಿಂದ ಕಣ್ಣೀರು ಸುರಿಸುತ್ತಾನೆ. ಅದೇ ಹೊತ್ತು ಮಲತಾಯಿ ಒಳ ಬರುತ್ತಾಳೆ)
ಮಲತಾಯಿ: ಹೋದೆಯಾ ಶನಿ ಅಂದ್ರೆ ಬಂದೆ ಗವಾಕ್ಷಿಯಿಂದ ಅಂತ ಪುನ: ಬಂದ್ರಾ ಇವ್ರು! (ಕೊಡ ತೆಗೆದುಕೊಂಡು) ಒಳಗೆ ತಿನ್ನುವಂಥದ್ದು ಏನೂ ಇಲ್ಲ. ನಾನು ನೀರು ತರುವಷ್ಟರಲ್ಲಿ ಸೌದೆ ತಂದು ಬೆಂಕಿ ಮಾಡಿ. ಬೇಯುವಂಥದ್ದು ಏನಾದ್ರೂ ಇದ್ರೆ ಬೇಯಿಸಿ. ಇಲ್ಲದಿದ್ರೆ ನಿನ್ನೆಯ ಒಣ ರೊಟ್ಟಿ ಇದೆ. ಉಪ್ಪು ಹಚ್ಚಿಕೊಂಡು ತಿನ್ನಿ! ಈ ಶನಿಗಳ ಹೊಟ್ಟೆ ತುಂಬಿಸಲು ನನ್ನಿಂದ ಸಾಧ್ಯ ಇಲ್ಲ! ಅವರನ್ನು ಪುನ: ಅಜ್ಜಿ ಮನೆಯಲ್ಲಿ ಅಥವಾ ಯಾವುದಾದ್ರೂ ಭೂತದ ಮನೆಯಲ್ಲಿ ಬಿಟ್ಟು ಬನ್ನಿ!
ಮುನ್ನ, ಮುನ್ನಿ: ನಮಗೆ ಶಾಲೆಗೆ ಹೋಗ್ಬೇಕು.
ಮಲತಾಯಿ: ನೀವು ಶಾಲೆಗೆ ಹೋಗದಿದ್ರೆ ಶಾಲೆಯೆನೂ ಮಗುಚಿ ಬೀಳೋಲ್ಲ! (ಹೋಗುತ್ತಾಳೆ)
ಮುನ್ನ: ಅಪ್ಪಾ, ನೀನು ನಮ್ಮನ್ನ ಯಾಕೆ ಕಾಡಿನಲ್ಲಿ ಬಿಟ್ಟು ಬಂದದ್ದು?
ತಂದೆ: ನಾನು ಕೂಡ ಅಲ್ಲೇ ಒಂದು ಕಡೆ ಮಲಗಿದ್ದೆ. ನನಗೆ ಎಚ್ಚರಾಗಿ ನೋಡುವಾಗ ನೀವು ಕಾಣಿಸಲಿಲ್ಲ. ನಾನು ನಿಮ್ಮನ್ನು ಹುಡುಕುತ್ತಾ ವಾಪಾಸು ಬಂದೆ.
ಮುನ್ನಿ: ನೀನು ನಮಗಿಂತ ಮೊದಲೇ ಮುಟ್ಟಿದ್ದಿಯಲ್ಲಾ?
ತಂದೆ: ನಾನು ಬೇರೆ ದಾರಿಯಲ್ಲಿ ಬಂದೆ. ಓಡ್ತಾ ಬಂದೆ. ನಿಮ್ಗೆ ಹಸಿವಾಗ್ತಿರ್ಬೇಕಲ್ಲ?
ಮುನ್ನ, ಮುನ್ನಿ: ಹೌದು.
ಇರಿ. ಆ ಒಣ ರೊಟ್ಟಿ ತಿನ್ನಕಾಗಲ್ಲ. ನಾನು ಅಂಗಡಿಯಿಂದ ಬ್ರೆಡ್ ಮತ್ತು ಬೆಣ್ಣೆ ತರ್ತೀನಿ. (ಹೋಗುತ್ತಾನೆ)
ಮುನ್ನಿ: ಮೊದಲು ಅಪ್ಪ ಯಾವತ್ತೂ ಸುಳ್ಳು ಹೇಳ್ತಿರ್ಲಿಲ್ಲ. ಈಗ ಅದೆಷ್ಟು ಸುಳ್ಳು ಹೇಳ್ತಾನೆ!
ಮುನ್ನ: ಬರೀ ಸುಳ್ಳಲ್ಲ. ಮಕ್ಕಳು ಕೂಡ ನಂಬ್ಲಿಕ್ಕಿಲ್ಲ. ಅಂಥ ಸುಳ್ಳು!
ಮುನ್ನಿ: ನಾಳೆ ಕೂಡ ನಮ್ಮನ್ನು ಕಾಡಿನಲ್ಲಿ ಬಿಟ್ಟು ಬರ್ತಾರಾ?
ಮುನ್ನ: ಖಂಡಿತ. ಇಲ್ಲದಿದ್ರೆ ಚಿಕ್ಕಮ್ಮ ಸುಮ್ಮನಿರ್ತಾರಾ?
ಮುನ್ನಿ: ಏನ್ಮಾಡೋದು?
ಮುನ್ನ: (ತುಸು ಚಿಂತಿಸಿ) ಚಿಂತಿಸ್ಬೇಡ. ನನ್ನ ಬಳಿ ಐಡಿಯಗಳಿವೆ. ತಡಿ, ನಾನು ಆ ಒಣ ರೊಟ್ಟಿ ತರ್ತೀನಿ. (ಒಳಹೋಗಿ ರೊಟ್ಟಿ ತರುತ್ತಾನೆ) ಇವುಗಳನ್ನ ಚೂರು ಚೂರು ಮಾಡಿ ನಮ್ಮ ಜೇಬುಗಳಲ್ಲಿ ತುಂಬಿಸಿಕೊಳ್ಳೋಣ. ಹೋಗುವಾಗ ಒಂದೊಂದೇ ಚೂರು ಬೀಳಿಸ್ತ್ತಾ ಹೋಗೋಣ. ರೊಟ್ಟಿ ಚೂರುಗಳು ಬಿದ್ದ ದಾರೀಲೆ ವಾಪಾಸು ಬರೋಣ. (ರೊಟ್ಟಿಗಳನ್ನು ಚೂರು ಚೂರು ಮಾಡತೊಡಗುತ್ತಾರೆ)
ಫೇಡ್ ಔಟ್
ದೃಶ್ಯ ಐದು: ಕಾಡು
(ಮುನ್ನ ಮುನ್ನಿ ನಡೆದು ಬಳಲಿದ್ದಾರೆ. ಇಲ್ಲಿ ಕುಳಿತುಕೊಂಡು ತಿಂಡಿ ತಿನ್ನುವ. ಕುಳಿತುಕೊಂಡು ರೊಟ್ಟಿ ತಿನ್ನುತ್ತಿದ್ದಾರೆ)
ಮುನ್ನ: ಅಪ್ಪಾ , ಈ ದಾರಿಯಿಂದ ಹೋದ್ರೆ ಅಜ್ಜಿ ಮನೆಗೆ ಬೇಗ ತಲಪುತ್ತಾ?
ತಂದೆ: ಹೌದು.
ಮುನ್ನಿ: ಅಜ್ಜಿ ಮನೇಲಿ ನಾವು ಎಷ್ಟು ದಿನ ಇರ್ತೀವಿ?
ತಂದೆ: ನಾನು ಬಂದು ಕರೆದುಕೊಂಡು ಹೋಗುವ ವರೆಗೆ.
ಮುನ್ನ: ನಮ್ಗೆ ಶಾಲೆ ತಪ್ಪುತ್ತಲ್ಲಪ್ಪಾ.
ತಂದೆ: ಒಂದೆರಡು ವರ್ಷ ಶಾಲೆ ತಪ್ಪಿದ್ರೆ ಏನೂ ಆಗುವುದಿಲ್ಲ.
ಮುನ್ನ: (ಆಶ್ಚರ್ಯದಿಂದ)ಒಂದೆರಡು ವರ್ಷ!
ಮುನ್ನಿ : ಹೌದು. ಚಿಕ್ಕಮ್ಮ ಹೇಳಿದ್ರಲ್ಲಾ , ನಾವು ಹೋಗದೆ ಇದ್ರೆ ಶಾಲೆ ಮಗುಚಿ ಬೀಳಲ್ಲ ಅಂತ!
ಮುನ್ನ: (ರೊಟ್ಟಿ ತಿನ್ನುವುದನ್ನು ಮುಗಿಸಿ, ತುಸು ಹಲ್ಲು ಕಿರಿದು) ಇನ್ನು ಸ್ವಲ್ಪ ಹೊತ್ತು ಮಲ್ಕೊಳ್ಳೋದು. ಅಲ್ವಾ ಅಪ್ಪಾ?
ತಂದೆ: ಹೌದು.
(ಮಲಗುತ್ತಾರೆ. ಬೆಳಕು ಆರಿ ಮತ್ತೆ ಬರುವಾಗ ತಂದೆ ಇಲ್ಲ)
ಮುನ್ನ: ಸುಮ್ಮನೆ ಕಣ್ಣು ಮುಚ್ಚಿ ಮಲಗಿದ್ದೆ. ನಿದ್ದೆ ಬಂದುಬಿಟ್ಟಿತು.
ಮುನ್ನಿ: ನಂಗೂ ಹಾಗೇ ಆಯಿತು. ಕಣ್ಣು ಬಿಟ್ಕೊಂಡೇ ಇದ್ದೆ. ನಿದ್ದೆ ಬಂದದ್ದೇ ತಿಳೀಲಿಲ್ಲ. ಈಗೇನು ಮಾಡೋದು?
ಮುನ್ನ: (ಎದ್ದು ದಾರಿ ನೋಡುತ್ತಾ) ರೊಟ್ಟಿ ಚೂರುಗಳ ಗುರುತು ಹಿಡಿದು ಮನೆಗೆ ಹೋಗೋಣ.
ಮುನ್ನಿ: ನಾಳೆ ಮತ್ತೆ ಅಪ್ಪ ನಮ್ಮನ್ನು ಇದೇ ರೀತಿ ಕಾಡಿನಲ್ಲಿ ಬಿಟ್ಟು ಹೋದ್ರೆ?
ಮುನ್ನ: (ರೊಟ್ಟಿ ಚೂರುಗಳನ್ನು ಹುಡುಕುತ್ತಾ) ಎಷ್ಟು ದಿನ ಹೀಗೆ ಮಾಡ್ತಾರೆ ನೋಡೋಣ. ಒಂದಿವ್ಸ ಸುಸ್ತಾಗಿ ಸುಮ್ಮನಾಗ್ತಾರೆ. ಅನಂತರ ಶಾಲೆಗೆ ಹೋಗೋಣ. (ತಟ್ಟನೆ) ಮುನ್ನಿ!
ಮುನ್ನಿ: ಏನು?
ಮುನ್ನ: ರೊಟ್ಟಿ ಚೂರುಗಳು ಕಾಣಿಸ್ತಾನೆ ಇಲ್ಲ!
ಮುನ್ನಿ: ಪಕ್ಷಿಗಳು ತಿಂದಿರ್ಬಹುದು.
ಮುನ್ನ: ನಿಜ. ಪಕ್ಷಿಗಳು ಅಥ್ವಾ ಇರುವೆಗಳು.
ಮುನ್ನಿ: ಹಾಗಾದ್ರೆ ಏನು ಮಾಡೋದು ಈಗ? ಬೇರೆ ಐಡಿಯ ಉಂಟಾ?
ಮುನ್ನ: ಹೆದರ್ಬೇಡ. ಯಾವುದಾದ್ರೂ ಒಂದು ಕಡೆ ನಡೆಯೊಣ. ಯಾರಾದ್ರೂ ಕಾಣಸಿಗಬಹುದು. ಅವರ ಬಳಿ ಮನೆ ದಾರಿ ಕೇಳೋಣ.
ಮುನ್ನಿ: ಸರಿ. ಹಾಗೇ ಮಾಡೋಣ.
ಫೇಡ್ ಔಟ್
ದೃಶ್ಯ ಆರು: ಮಾಟಗಾತಿಯ ಮನೆ
(ಮಾಟಗಾತಿಯ ಮನೆಯ ಸುತ್ತ ವೃತ್ತಾಕಾರದಲ್ಲಿ ಎತ್ತರದ ಗೋಡೆ. ಗೋಡೆಯಲ್ಲಿ ಬಾಗಿಲು. ಬಾಗಿಲು ಬಡಿದ ಶಬ್ದ ಕೇಳಿ ಮಾಟಗಾತಿ ಬಾಗಿಲು ತೆಗೆಯುತ್ತಾಳೆ. ಮಾಟಗಾತಿ ಹಣ್ಣು ಹಣ್ಣು ಮುದುಕಿ. ಸೊಂಟದಲ್ಲಿ ಸಿಲುಕಿಸಿಕೊಂಡಿರುವ ಒಂದು ಪುಟ್ಟ ಬಣ್ಣದ ಕೋಲು. ಮುನ್ನ ಮುನ್ನಿ ಒಳಬರುತ್ತಾರೆ)
ಮುದುಕಿ: ಬನ್ನಿ ಮಕ್ಕಳೆ ಬನ್ನಿ. ಎಷ್ಟು ಸಮಯದಿಂದ ನಾನು ನಿಮ್ಮ ದಾರಿ ನೋಡುತ್ತಿದ್ದೇನೆ!
ಮುನ್ನ್ನಿ: ನೀನು ನಮ್ಮ ಅಜ್ಜಿಯಾ?
ಮುದುಕಿ: (ಗೊಂದಲಕ್ಕೊಳಗಾಗಿ) ಹಾಂ ಹಾಂ. ಹೌದು ಹೌದು.
ಮುನ್ನ: ಇದ್ಯಾಕಜ್ಜಿ ಮನೆಯ ಸುತ್ತು ಇಷ್ಟು ಎತ್ತರದ ಗೋಡೆ?
ಮುದುಕಿ: ಯಾಕಂದ್ರೆ, ಯಾರೂ ಒಳಗೆ ಬರಕೂಡದು ಅಂತ. (ಕೋಟೆಯ ಬಾಗಿಲನ್ನು ಒಳಗಿಂದ ಭದ್ರ ಪಡಿಸಿ ಬೀಗ ಹಾಕುತ್ತಾಳೆ)
ಮುನ್ನಿ: ಯಾಕಜ್ಜಿ ಬೀಗ ಹಾಕಿದ್ದು?
ಮುದುಕಿ: ಒಳಗೆ ಬಂದವರು ಮತ್ತೆ ಹೊರಗೆ ಹೋಗಲಿಕ್ಕೆ ಕೂಡದು ಅಂತ.
ಮುನ್ನ: ಅಂದ್ರೆ, ನಮ್ಗೆ ಹೊರಗೆ ಹೋಗಲಿಕ್ಕೆ ಇಲ್ವ?
ಮುದುಕಿ: ಯಾಕೆ ಹೊರಗೆ ಹೋಗೋದು ನೀವು? ಇಲ್ಲೇ ಕೆಲಸ ಮಾಡಿಕೊಂಡು ನನ್ನ ಸೇವೆ ಮಾಡಿಕೊಂಡು ಇರಿ.
ಮುನ್ನ: ಸೇವೆ ಅಂದ್ರೆ ಏನಜ್ಜಿ?
ಮುದುಕಿ: ಸೌದೆ ಆರಿಸಿ ತರೋದು. ಕಾಯಿಪಲ್ಲೆ ಗಿಡ ಬೆಳೆಸೋದು. ಅಡಿಗೆ ಮಾಡೋದು. ಪಾತ್ರೆ ತೊಳೆಯೊದು. ಬಟ್ಟೆ ಒಗೆಯೊದು. ನಂಗೆ ಸ್ನಾನಕ್ಕೆ ನೀರು ಕಾಯೊದು. ನನ್ನ ಕಾಲು ಒತ್ತೋದು.
ಮುನ್ನಿ: ಅಷ್ಟೆಲ್ಲ ಕೆಲಸ ನಮ್ಮಿಂದಾಗುತ್ತಾ?
ಮುದುಕಿ: ಆಗುತ್ತಾ ಅನ್ನೋ ಪ್ರಶ್ನೆ ಇಲ್ಲ. ಮಾಡ್ಲೇ ಬೇಕು.
ಮುನ್ನ: ಇಲ್ಲಿ ಶಾಲೆ ಇದ್ಯಾ ಅಜ್ಜಿ?
ಮುದುಕಿ: (ಜೋರಾಗಿ ನಕ್ಕು) ಇದೇ ಮನೆ ಇದೇ ಶಾಲೆ. ನಾನೇ ನಿಮ್ಮ ಟೀಚರು. ನಾನು ಹೇಳಿದ ಕೆಲಸವೇ ನಿಮ್ಮ ಪಾಠ!
ಮುನ್ನಿ: ಆಟ?
ಮುದುಕಿ: ಆಟ ಇಲ್ಲ. ಪಾಠ ಮಾತ್ರ. (ಗಟ್ಟಿಯಾಗಿ ನಗುತ್ತಾಳೆ)
ಮುನ್ನ: ಅಜ್ಜಿ , ಇದು ಅನ್ಯಾಯ!
ಮುದುಕಿ: ಅನ್ಯಾಯವೇ ನ್ಯಾಯ. ನಡೀರಿ ಕೆಲಸ ಶುರುಮಾಡಿ! ಹುಡುಗ, ನೀನು ಸೌದೆ ತಾ. ಹುಡುಗಿ, ನೀನು ಅಡಿಗೆ ಮಾಡು. ಹಸಿವಾಗ್ತಾ ಇದೆ!
ಮುನ್ನ: ನಮ್ಗೆ ಹೆಸರಿದೆ. ನನ್ನ ಹೆಸರು ಮುನ್ನ, ಇವಳು ನನ್ನ ತಂಗಿ, ಮುನ್ನಿ. ಮುದುಕಿ: ನಿಮ್ಮ ಹೆಸರುಗಳು ನನಗೆ ಬೇಕಾಗಿಲ್ಲ. ನೀನು ಒಂದು ಹುಡುಗ, ಅವಳು ಒಂದು ಹುಡುಗಿ. ಅಷ್ಟೆ!
ಮುನ್ನ: ಹಾಗಾದ್ರೆ ನೀನು ನಮ್ಮ ಅಜ್ಜಿ ಅಲ್ಲ! ನೀನೊಬ್ಳು ಮಾಟಗಾತಿ!
ಮುದುಕಿ: ಹೌದು. ನಾನು ಹೇಳಿದ ಹಾಗೆ ಕೇಳದಿದ್ರೆ ನಿಮ್ಮನ್ನ ನಾಯಿಮರಿಗಳಾಗಿ ಬದಲಾಯಿಸ್ತೀನಿ!
ಮುನ್ನ: ಹೌದಾ? (ತಟ್ಟನೆ ಅವಳ ಸೊಂಟದಲ್ಲಿರುವ ಕೋಲು ಕಸಿದುಕೊಳ್ಳುತ್ತಾನೆ)
ಮುದುಕಿ: ಏಯ ಹುಡುಗ ಕೊಡು ಅದನ್ನು! ಅದನ್ನು ಅವನ ಕೈಯಿಂದ ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ. ಅಜ್ಜಿ ಅತ್ತಿತ್ತ ಓಡಿ ಬಿದ್ದುಬಿಡುತ್ತಾಳೆ)
ಮುನ್ನ: ಏನು ಕೋಲು ಇದು? ಮಂತ್ರದ ಕೋಲಿನ ಹಾಗಿದೆ ಅಲ್ವ ಮುನ್ನ್ನಿ?
ಮುನ್ನ: ನಿಜ. ಮಂತ್ರದ ಕೋಲಿನ ಹಾಗೇ ಇದೆ.
ಮುದುಕಿ: (ಏಳಲು ಪ್ರಯತ್ನಿಸುತ್ತಾ) ಹೌದು ಮಂತ್ರದ ಕೋಲು! ನಿನ್ನ ಕೈಯಲ್ಲಿದ್ದರೆ ಅಪಾಯ! ಕೊಡು ಅದನ್ನು!
ಮುನ್ನ: ಏನು ಅಪಾಯ ? ನಿಂಗೆ ನಾವು ಯಾಕೆ? ಇದರ ಹತ್ರ ಹೇಳಿದ್ರೆ ಬೇಕಾದ್ದು ಮಾಡೋಲ್ವ? ಮೊದಲು ನಾನು ನಿನ್ನನ್ನೇ ಒಂದು ನಾಯಿಮರಿ ಮಾಡ್ತೀನಿ! ಮಂತ್ರದ ಕೋಲೆ, ಮಂತ್ರದ ಕೋಲೆ, ಈ ಮುದುಕಿಯನ್ನ ನಾಯಿಮರಿ ಮಾಡು!
(ಏನೂ ಆಗದಿರುವುದರಿಂದ ಖಿನ್ನನಾಗುತ್ತಾನೆ)
ಮುನ್ನಿ: ಮುನ್ನ, ಬೇರೇನಾದ್ರೂ ಹೇಳು.
ಮುದುಕಿ: ಅದು ಅಂಥ ಮಂತ್ರದ ಕೋಲು ಅಲ್ಲ!
ಮುನ್ನ: ಮತ್ತೆ ಎಂಥ ಮಂತ್ರದ ಕೋಲು?
ಮುದುಕಿ: ಇಲ್ಲಿ ಕೊಡು. ಹೇಳ್ತೇನೆ.
ಮುನ್ನ: ಹೇಳು. ಆ ಮೇಲೆ ಕೊಡ್ತೇನೆ.
ಮುದುಕಿ: ನಾ ಹೇಳಲ್ಲ!
(ಅವಳು ಏಳಲು ಪ್ರಯತ್ನಿಸುವಾಗ ಮುನ್ನ ಒಳ ಹೋಗಿ ಒಂದು ಬಟ್ಟೆ ತಂದು ಅವಳ ಕಾಲು ಕಟ್ಟಿಬಿಡುತ್ತಾನೆ)
ಮುನ್ನ: ಹೇಳೋಲ್ವ? ನೀನು ಹೀಗೇ ಬಿದ್ದಿರು! ಕೋಲನ್ನ ಮುರಿದು ಕೋಟೆಯ ಹೊರಗೆ ಬಿಸಾಡ್ತೇನೆ. ನಾವು ಬೀಗ ಒಡ್ದು ಹೊರಗೆ ಹೋಗ್ತೇವೆ. (ಕೋಲನ್ನು ಮುರಿಯುವ ನಟನೆ ಮಾಡುತ್ತಾನೆ)
ಮುದುಕಿ: ಮುರೀಬೇಡ. ಇಲ್ಲಿ ಕೊಡು. ಅದರ ರಹಸ್ಯ ಹೇಳ್ತೇನೆ.
ಮುನ್ನ: ನನ್ನ ಕೈಯಲ್ಲಿರುವಾಗಲೇ ಹೇಳು.
ಮುದುಕಿ: ಅದು ಅದ್ಭುತ ಶಕ್ತಿಯ ಮಂತ್ರ ಕೋಲು ಅಲ್ಲ. ಅದರಿಂದ ಒಂದು ಕೆಲಸ ಮಾತ್ರ ಸಾಧ್ಯ?
ಮುನ್ನ: ಏನು?
ಮುದುಕಿ: ಅದರ ಹತ್ತಿರ ನಮ್ಗೆ ಗೊತ್ತಿರೋ ಒಬ್ರ ಹೆಸರು ಹೇಳಿ ಅವರನ್ನು ಕರೆದುಕೊಂಡು ಬಾ ಅಂದ್ರೆ ಅವರನ್ನು ಕರೆದು ತರ್ತದೆ. ಅವರ ತಲೆಗೆ ಅದನ್ನ ತಾಗಿಸಿ ಅವರ ಮನಸ್ಸನ್ನ ನಮಗೆ ಬೇಕಾದ ಹಾಗೆ ಬದ್ಲಾಯಿಸ್ಬಹುದು.
ಮುನ್ನ: ನೀನು ಹಾಗೆ ಬೇರೆಯವರನ್ನು ಕರೆಸ್ಕೊಂಡು ಅವರ ಮನಸ್ಸು ಬದಲಾಯ್ಸಿ ಅವರಿಂದ ಕೆಲಸ ಮಾಡ್ಕೋತಿದ್ದೀಯ?
ಮುದುಕಿ: ಹೌದು.
ಮುನ್ನ: ಈಗ ಯಾಕೆ ಹಾಗೆ ಯಾರನ್ನಾದ್ರೂ ಕರೆಸ್ಕೋಬಾರ್ದು?
ಮುದುಕಿ: ಈಗ ನಂಗೆ ಗೊತ್ತಿರೋರು ಯಾರೂ ಇಲ್ಲ.
ಮುನ್ನ: ಏನು ಮಾಡ್ದೆ? ಎಲ್ರನ್ನೂ ಕರೆಸ್ಕೊಂಡು ಅವ್ರಿಂದ ಕೆಲ್ಸ ಮಾಡ್ಸಿ ಸಾಯಿಸಿದ್ಯಾ? (ಮುದುಕಿ ಸುಮ್ಮನಿದ್ದಾಳೆ)
ಮುನ್ನ: ಸರಿ. ಇದರ ಶಕ್ತಿಯನ್ನು ಈಗ್ಲೇ ಪರೀಕ್ಷಿಸುತ್ತೇನೆ. (ಮುದುಕಿಯ ತಲೆಯ ಮೇಲೆ ಇರಿಸಿ) ಮಂತ್ರದ ಕೋಲೆ ಮಂತ್ರದ ಕೋಲೆ, ಈಕೆಯ ಮನಸ್ಸು ಸತ್ತು ಹೋಗಿರುವ ನನ್ನ ಅಜ್ಜಿಯ ಮನಸ್ಸಾಗಿ ಬದಲಾಗ್ಲಿ!
ಮುದುಕಿ: (ತಕ್ಷಣ ) ಬನ್ನಿ ಮಕ್ಕಳೆ, ಮೋನ, ಸೋನ! ಬನ್ನಿ! ನಿಮ್ಮ ಪ್ರೀತಿಯ ಅಜ್ಜಿಯ ಹತ್ತಿರ ಬನ್ನಿ. ಅಯೊ ಎಷ್ಟು ಕಾಲವಾಯ್ತು ನಿಮ್ಮನ್ನ ಕಾಣದೆ? ಮಕ್ಕಳೆ. ನಿಮಾಗಿ ಚಕ್ಕುಲಿ, ಉಂಡೆ, ಕೋಡುಬಳೆ ಮಾಡಿಟ್ಟಿದ್ದೀನಿ. ತಿನ್ನಿ ಮಕ್ಕಳೆ!
ಮುನ್ನಿ: (ತಟ್ಟನೆ) ಮುನ್ನ, ಇದನ್ನು ನಂಬೋದು ಹ್ಯಾಗೆ? ಮುದುಕಿ ನಾಟಕ ಮಾಡ್ತಿರ್ಬಹುದು.
ಮುನ್ನ: ನಮ್ಮ ಹೆಸರು ಹೇಳ್ತಿದಾಳೆ!
ಮುನ್ನಿ: ಮಾಟಗಾತಿಯರಿಗೆ ಎಲ್ಲ ಗೊತ್ತಿರ್ತದಂತೆ!
ಮುನ್ನ: ನಿಜ. ಹಾಗಾದ್ರೆ ತಾಳು! (ಸ್ವಲ್ಪ ಹೊತ್ತು ಚಿಂತಿಸಿ) ಮಂತ್ರದ ಕೋಲೆ, ಮಂತ್ರದ ಕೋಲೆ, ನನ್ನ ಅಪ್ಪನನ್ನು ಮತ್ತು ಚಿಕ್ಕಮ್ಮನನ್ನು ಕರೆಸು.
(ಮರುಕ್ಷಣವೇ ಕೋಟೆಯ ಬಾಗಿಲು ತೆರೆದುಕೊಂಡು ಅವರ ತಂದೆ ಮತ್ತು ಚಿಕ್ಕಮ್ಮ ಬರುತ್ತಾರೆ. ತಂದೆಯ ಮುಖದಲ್ಲಿ ಕುರಿಯ ದೈನ್ಯತೆ. ಚಿಕ್ಕಮ್ಮನ ಮುಖದಲ್ಲಿ ಹುಲಿಯ ಕ್ರೌರ್ಯ)
ಮುನ್ನ: (ತಟ್ಟನೆ ಜಿಗಿದು ಚಿಕ್ಕಮ್ಮನ ತಲೆಯ ಮೇಲೆ ಮಂತ್ರದ ಕೋಲು ಇರಿಸಿ) “ಮಂತ್ರದ ಕೋಲೆ ಮಂತ್ರದ ಕೋಲೆ, ಸತ್ತು ಹೋಗಿರುವ ನಮ್ಮ ಅಮ್ಮನ ಮನಸ್ಸು ಚಿಕ್ಕಮ್ಮನಿಗೆ ಬರಲಿ!” ಎನ್ನುತ್ತಾನೆ. ತಕ್ಷಣ ಚಿಕ್ಕಮ್ಮನ ಮುಖಭಾವ ಬದಲಾಗುತ್ತದೆ)
ಚಿಕ್ಕಮ್ಮ: ಬನ್ನಿ ಮಕ್ಕಳೆ. ಎಷ್ಟು ಕಾಲವಾಯ್ತು ನಿಮ್ಮನ್ನು ಕಾಣದೆ? ಬನ್ನಿ! (ಇಬ್ಬರನ್ನೂ ಅಪ್ಪಿಕೊಂಡು ಕಣ್ಣೀರು ಸುರಿಸುತ್ತಾಳೆ)
ಮುನ್ನ: (ತಟ್ಟನೆ ಜಿಗಿದು, ಕೋಲನ್ನು ತಂದೆಯ ತಲೆಯ ಮೇಲಿರಿಸಿ) ಮಂತ್ರದ ಕೋಲೆ ಮಂತ್ರದ ಕೋಲೆ, ನಮ್ಮ ತಂದೆಯಲ್ಲಿ ನಮ್ಮ ಪ್ರೀತಿಯ ವೀರನಾದ ಭೀಮನ ಅರ್ಧ ಧೈರ್ಯವನ್ನು ತುಂಬು. ಸಾಕು.
ತಂದೆ: ಬನ್ನಿ ಮಕ್ಕಳೆ. (ಸ್ವರ ಕೂಡ ಗಡಸಾಗಿ ಬದಲಾಗಿದೆ. ಮಕ್ಕಳನ್ನು ಅಪ್ಪಿಕೊಳ್ಳುತ್ತಾನೆ. ಮುದುಕಿಯನ್ನು ಎಬ್ಬಿಸಿ) ಏಳಮ್ಮ. ಮನೆಗೆ ಹೋಗೋಣ. (ಹೆಂಡತಿಯೊಡನೆ, ಅಧಿಕಾರವಾಣಿಯಿಂದ) ನಡಿ. ಮನೆಗೆ ಹೋಗೋಣ. ನೀನು ಮಕ್ಕಳ ಕೈ ಹಿಡಿದುಕೊ. (ಮಲತಾಯಿ ಪ್ರೀತಿಯಿಂದ ಮುನ್ನ ಮುನ್ನಿಯರ ಕೈಹಿಡಿದುಕೊಳ್ಳುತ್ತಾಳೆ) ನಡೀರಿ ಹೋಗೋಣ.
ಮುನ್ನ: ಇನ್ನು ಈ ಮಂತ್ರದ ಕೋಲು ಬೇಡ.
(ಮುರಿದು ಬಿಸಾಡುತ್ತಾನೆ)
ಫೇಡ್ ಔಟ್
Leave A Comment