ಪಾತ್ರಗಳು:
ಚಿಂಕು ಎಂಬ ಹುಡುಗ, ಅಂಗಡಿಯವನು, ಕರಡಿ
ಅರಸ, ಪ್ರಧಾನ ಸಚಿವ ಮತ್ತು  ಸಭಾಸದರು

ದೃಶ್ಯ ಒಂದು: ಸಂತೆ.

(ಸಂತೆಯಲ್ಲಿ ಆಟಿಕೆಗಳ ವಿಭಾಗ. ಚಿಂಕು ಎಂಬ ಹನ್ನೆರಡು ವರ್ಷದ ಹುಡುಗ. ಅವನ ಬಳಿ ಕೆಲವೇ ಕೆಲವು ನಾಣ್ಯಗಳಿವೆ. ಅವನು ಅದನ್ನು ಜೇಬಿನಿಂದ ತೆಗೆದು ಮನವಾಗಿ ಲೆಖ್ಖಮಾಡಿಕೊಂಡು ಆಟಿಕೆಯಂಗಡಿಗೆ ಹೋಗುತ್ತಾನೆ)

ಚಿಂ: (ಆಟಿಕೆಗಳನ್ನು ನೋಡಿ) ನನಗೆ ಒಂದು ಹಾಡು ಕಲಿಸುವ ಗೊಂಬೆ ಬೇಕು.

ಅಂ: ಹಾಡುವ ಗೊಂಬೆ ಇದೆ.

ಚಿಂ: ಹಾಡಿದರೆ ಸಾಲದು. ಹಾಡಲು ಕಲಿಸಬೇಕು.

ಅಂ: ಹಾಡುವ ಗೊಂಬೆ ಹಾಡುತ್ತದಲ್ಲಾ, ಕೇಳಿ ಕಲಿತುಕೊ.

ಚಿಂ: ಹಾಡುವ ಗೊಂಬೆ ಹಾಡಿದ್ದನ್ನೇ ಹಾಡುತ್ತದೆ. ಹೊಸ ಹೊಸ ಹಾಡುಗಳನ್ನು ಹಾಡುವ ಗೊಂಬೆ ಬೇಕು.

ಅಂ: ಅಂಥ ಗೊಂಬೆ  ಎಲ್ಲಿಯೂ ಸಿಗುವುದಿಲ್ಲ. ಒಂದು ಹಾಡುವ ಹುಡುಗಿಯನ್ನು ಮದುವೆಯಾಗು (ನಗು)

ಚಿಂ: ಗೊಂಬೆಗೂ ಹುಡುಗಿಗೂ ವ್ಯತ್ಯಾಸವಿಲ್ಲವೆ?

ಅಂ: ಇದೆ. ಹುಡುಗಿ ಕಲಿಸುತ್ತದಲ್ಲ? ಅದೇ ವ್ಯತ್ಯಾಸ.

ಚಿಂ: ಅದಲ್ಲ. ಗೊಂಬೆಗೆ ಹಸಿವೆ ಇಲ್ಲ. ಹುಡುಗಿಗೆ ಹಸಿವೆ ಇರುತ್ತಲ್ಲ?

ಅಂ: ಹೂಂ. ಹುಡುಗಿ ಅಂದ್ಮೇಲೆ ಹಸಿವೆ ಇದ್ದೇ ಇರುತ್ತೆ.

ಚಿಂ:  ನನ್ನ ಬಳಿ ಹುಡುಗಿಗೆ ತಿಂಡಿ ಕೊಡಿಸಲು ಹಣ ಇಲ್ಲ.

ಅಂ: ಹಾಗಾದ್ರೆ ಹಣ ಆಗಿ ಮದುವೆ ಆಗುವ ತನಕ ಪುಕ್ಕಟೆಯಾಗಿ ಸಿಕ್ಕ ಹಾಡುಗಳನ್ನು ಕೇಳು.

ಚಿಂ: ಹಾಗಾದ್ರೆ ಗೊಂಬೆ ಬೇಡ. ನಿನ್ನ ಸಲಹೆಗೆ ಧನ್ಯವಾದಗಳು.(ಹಣವನ್ನು ಪುನ: ಜೇಬಿಗೆ ಹಾಕಿಕೊಳ್ಳುತ್ತಾನೆ)

ಅಂ: (ನಕ್ಕು) ಹೂಂ. ಬುದ್ಧಿವಂತನಿದ್ದಿ ನೀನು! (ತಮಾಷೆಯಾಗಿ) ನನ್ನ ಸಲಹೆಗೆ  ನೀನು ಹಣ ಕೊಡಬೇಕಾಗುತ್ತೆ!

ಚಿಂ : ನನ್ನ ಮದುವೆ ಆದ ಕೂಡ್ಲೇ ಕೊಡ್ತೇನೆ.

ಫೇಡ್ ಔಟ್

ದೃಶ್ಯ ಎರಡು:ಉದ್ಯಾನವನ.

(ಉದ್ಯಾನವನದಲ್ಲಿ ಒಂದು ದೊಡ್ಡ ಮರದ ಹಿಂದೆ ಒಂದು ದೊಡ್ಡ ಪಂಜರ. ಪಂಜರದೊಳಗೆ ಒಂದು ಕರಡಿ. ಚಿಂಕು ಪಂಜರದಲ್ಲಿರುವ ಕರಡಿಯನ್ನು ನೋಡಿ)

ಚಿಂ: ಪಾಪ. ಇವನನ್ನು ಯಾಕೆ ಪಂಜರದಲ್ಲಿ ಇರಿಸಿದ್ದಾರೆ?

ಕರ: ಹುಲಿ, ಸಿಂಹ, ಕರಡಿಗಳನ್ನ್ನು ಯಾಕೆ ಪಂಜರದಲ್ಲಿ ಇರಿಸಿದ್ದಾರೆ. ನಿಮ್ಮಂಥವರ ಮೋಜಿಗಾಗಿ.

ಚಿಂ: (ಆಶ್ಚರ್ಯದಿಂದ) ನಿನಗೆ ಮಾತಾಡಲು  ಬರುತ್ತದೆ!

ಕರ: ನಾನು ಮನುಷ್ಯರ ಭಾಷೆ ಮಾತ್ರವಲ್ಲ,  ಮೃಗ ಪಕ್ಷಿಗಳ ಭಾಷೆಯನ್ನು ಕೂಡ ಕಲಿತಿದ್ದೇನೆ.

ಚಿಂ: ಹೌದಾ? ಯಾರು ನಿನಗೆ ಕಲಿಸಿದ್ದು?

ಕರ: ನಾನೇ ಕಲಿತುಕೊಂಡೆ.

ಕರ: ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಾ. ಕೇಳಿದ್ದನ್ನು ಮನಸ್ಸಿನಲ್ಲಿ ಉರುಹಾಕುತ್ತಾ.

ಚಿ: ನಿಂಗೆ ಹಾಡಲು ಕೂಡ ಬರುತ್ತದೆಯೆ?

ಕರ: ಹೌದು.

ಚಿಂ: ಹಾಡಲು ಹೇಗೆ ಕಲಿತೆ?

ಕರ: ಹಾಗೆಯೆ. ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಾ. ಕೇಳಿದ್ದನ್ನು ಮನಸ್ಸಿನಲ್ಲಿ ಉರುಹಾಕುತ್ತಾ.

ಚಿಂ: ನೀನು ಎಷ್ಟು ಹಾಡುಗಳನ್ನು ಹಾಡಬಲ್ಲೆ?

ಕರ: ಲೆಖ್ಖವಿಲ್ಲದಷ್ಟು  ಹಾಡುಗಳನ್ನು ಹಾಡಬಲ್ಲೆ.

ಚಿಂ: ಅದು ಹೇಗೆ ಸಾಧ್ಯ?

ಕರ: ನಾನು  ಹಾಡುವುದು ಇತರರ ಹಾಡುಗಳನ್ನಲ್ಲ.

ಚಿಂ: ಅಂದರೆ?

ಕರ: ಅಂದರೆ ನೀನು ಈಗಾಗಲೇ ಕೇಳಿರುವ ಹಾಡುಗಳನ್ನಲ್ಲ.

ಚಿಂ: ಮತ್ತೆ?

ಕರ: ನಾನು ಹೊಸ ಹೊಸ ಹಾಡುಗಳನ್ನು ಹಾಡುತ್ತೇನೆ. ನನ್ನ ಹಾಡುಗಳನ್ನು ನಾನೇ ರಚಿಸಿಕೊಳ್ಳುತ್ತೇನೆ.

ಚಿಂ: ಪಕ್ಷಿಗಳ, ಮೃಗಗಳ ಮತ್ತು ಮನುಷ್ಯರ ಭಾಷೆಯಲ್ಲಿ ಕೂಡ?

ಕರ: ಹೌದು. ಪಕ್ಷಿಗಳ, ಮೃಗಗಳ  ಮತ್ತು ಮನುಷ್ಯರ ಭಾಷೆಯಲ್ಲಿ ಕೂಡ.

ಚಿಂ: ಪಕ್ಷಿಗಳ, ಮೃಗಗಳ  ಮತ್ತು ಮನುಷ್ಯರ ಭಾಷೆಯಲ್ಲಿದ್ದರೆ ಸಾಲದು. ಪಕ್ಷಿಗಳ, ಮೃಗಗಳ  ಮತ್ತು ಮನುಷ್ಯರ ಭಾವನೆಯೂ ಹಾಡುಗಳಲ್ಲಿ ಇರಬೇಕು.

ಕರ: ಖಂಡಿತ ಇರುತ್ತದೆ.

ಚಿಂ: ನಿನಗೆ ಪಂಜರದೊಳಗೆ  ಇರಲು  ಇಷ್ಟವೆ ಕಾಡಿನಲ್ಲಿ  ಇರಲು ಇಷ್ಟವೆ?

ಕರ: ಪಂಜರದಲ್ಲಿ ಇರಲು ಯಾರಿಗೆ  ತಾನೇ ಇಷ್ಟವಾದೀತು? ನಿನಗೆ ಇಷ್ಟವಾದೀತೆ?

ಚಿಂ: ಖಂಡಿತ ಇಲ್ಲ.

ಕರ: ನನಗೆ ಸ್ವತಂತ್ರವಾಗಿ ಓಡಾಡಿಕೊಂಡಿರಲು ಆಸೆಯಾಗುತ್ತದೆ.  ಆದರೆ ನನ್ನನ್ನು ಇಲ್ಲಿ ಬಂಧಿಸಿ ಇರಿಸಿದವರಿಗೆ ನನ್ನ ಭಾವನೆ ಅರ್ಥವಾಗುವುದಿಲ್ಲ. ಅರ್ಥವಾದರೂ ಅರ್ಥವಾಗುವುದು ಅವರ ಬುದ್ಧಿಗೆ ಮಾತ್ರ.   ಅವರ ಹೃದಯಕ್ಕೆ ಅರ್ಥವಾಗುವುದಿಲ್ಲ.

ಚಿಂ: ನನಗೆ ಮೃಗಗಳ ಮತ್ತು ಪಕ್ಷಿಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು.

ಕರ: ಅದು ಸ್ವಲ್ಪ ಕಷ್ಟ. ನಾನು ಹಾಡುವ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ನೀನು ಅರ್ಥಮಾಡಿಕೊಳ್ಳಬಹುದು.

ಚಿಂ: ನನಗೆ ಕೂಡ ಹಾಡಲು  ಕಲಿಸುತ್ತೀಯ?

ಕರ: ಕಲಿಸುತ್ತೇನೆ. ಬೆಳಿಗ್ಗೆ ಐದು ಗಂಟೆಯ ಹೊತ್ತಿಗೆ ಬಾ. ಬರುವಾಗ ನನಗೆ ತಿಂಡಿ ತಾ.

ಚಿಂ:  ಏನು ತಿಂಡಿ ತರಲಿ?

ಕರ: ಕಡ್ಲೇಕಾಯಿ ನಂಗೆ ತುಂಬಾ ಇಷ್ಟ. ಒಂದೊಂದು ಸಲ ಸ್ವಲ್ಪ ಜೇನು.

ಚಿಂ: ನಾಳೆ ಕಡ್ಲೆಕಾಯಿ ತರುತ್ತೇನೆ. ಜೇನು ಇನ್ನೊಂದು ದಿನ ತರುವೆ.

ಕರ: ಆಗಲಿ.

(ಚಿಂಕು ಅಲ್ಲಿಂದ ಹೊರಡುವಾಗ ಡೋಲು ಹಿಡಿದುಕೊಂಡು ಡಂಗುರ ಸಾರುವವನು ಒಂದು ಕಡೆ ನಿಂತು, ಡೋಲು ಬಡಿದು)

ಡಂ: ಕೇಳಿರಿ ಕೇಳಿರಿ! ಅರಸರಿಗೆ ಒಬ್ಬರು ಸಂಗೀತ ಮಂತ್ರಿಯ ಅಗತ್ಯವಿದೆ. ಅರ್ಹತೆಯುಳ್ಳವರು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಸಂದರ್ಶನಕ್ಕೆ ಹಾಜರಾಗಬಹುದು.

ಚಿಂ: ಸಂದರ್ಶನ ಎಲ್ಲಿ ನಡೆಯುವುದು?

ಡಂ: ಮತ್ತೆಲ್ಲಿ? ಆಸ್ಥಾನದಲ್ಲಿ.

ಚಿಂ: ಆಸ್ಥಾನದಲ್ಲಿ ಸಂಗೀತ ತಿಳಿದವರಿದ್ದಾರೆಯೆ?

ಡಂ: ಆಸ್ಥಾನದಲ್ಲಿ ಸಂಗೀತ ತಿಳಿದವರು ಮಾತ್ರವಲ್ಲ, ಮಹಾ ಮಹಾ ಸಂಗೀತ ಪಂಡಿತರುಗಳಿದ್ದಾರೆ.

ಚಿಂ: ಅವರಿಂದಲೇ ಸಂಗೀತ ಮಂತ್ರಿಯನ್ನು ಯಾಕೆ ಆರಿಸುವುದಿಲ್ಲ?

ಡಂ: ಸಂಗೀತ ಪಂಡಿತರುಗಳಿಗೆ ಹಾಡಲು ಬರುವುದಿಲ್ಲ. ಅವರು ಬರೀ ಪಂಡಿತರು. ಮಹಾರಾಜರಿಗೆ ಹಾಡುವ ಮಂತ್ರಿ ಬೇಕು.

(ಚಿಂಕು ಸ್ವಲ್ಪ ಹೊತ್ತು ಯೊಚನೆಯಲ್ಲಿ ಮುಳುಗಿ ಏನೋ ತೀಮಾನ ಮಾಡಿ ಕರಡಿಯ ಪಂಜರದ ಬಳಿ ಹೋಗಿ ಸರಳುಗಳೆಡೆಯಿಂದ ಏನೋ ಮಾತುಕತೆ ನಡೆಸುತ್ತಿರುವಾಗ)

ಫೇಡ್ ಔಟ್

ದೃಶ್ಯ ನಾಲ್ಕು: ಅರಮನೆ

(ಅರಸನ ಆಸ್ಥಾನ. ರಾಜ, ರಾಣಿ, ಮಂತ್ರಿಗಳು ಮತ್ತು ಸಂಗೀತ ಪಂಡಿತರು ಆಸೀನರಾಗಿದ್ದಾರೆ. ಚಿಂಕು ಮತ್ತು ಇಬ್ಬರು ಒಂದು ಬೆಂಚಿನ ಮೇಲೆ ಕುಳಿತಿದ್ದಾರೆ. ಒಂದು ಕಡೆ ವಾದ್ಯವೃಂದದವರು. ಪ್ರಧಾನ ಸಚಿವ ಮಾತಾಡುತ್ತಾನೆ)

ಪ್ರಸ: ಇವತ್ತು ಮೂರು ಅಭ್ಯರ್ಥಿಗಳ ಸಂದರ್ಶನ ಮಾತ್ರ ನಡೆಯುವುದು. ಅವರ ಪೈಕಿ ಸೂಕ್ತವಾದ ವ್ಯಕ್ತಿ ಸಿಗದಿದ್ದರೆ ನಾಳೆ ಬೇರೆ ಅಭ್ಯರ್ಥಿಗಳನ್ನು ಕರೆಯಲಾಗುವುದು.

ರಾಜ: ಇಂದಿನ ಅಭ್ಯರ್ಥಿಗಳ ಹೆಸರುಗಳನ್ನು ಹೇಳಿ ಪ್ರಧಾನ ಸಚಿವರೆ.

ಪ್ರಸ: ಅಪ್ಪಣೆ ಮಹಾಪ್ರಭು.

(ಪಧಾನ ಸಚಿವ ಒಂದು  ಬಹಳ ಉದ್ದದ ಕಾಗದದ  ಹಾಳೆಯನ್ನು ಹೊರ ತೆಗೆಯುತ್ತಾನೆ.)

ರಾಜ: (ನಗುತ್ತಾ) ಮೂರು ಹೆಸರುಗಳಿಗೆ ಇಷ್ಟು ದೊಡ್ಡ ಹಾಳೆಯೆ ಪ್ರಧಾನ ಸಚಿವರೆ?

ಪ್ರಸ: ನಾಳೆಯ ಅಭ್ಯರ್ಥಿಗಳ ಹೆಸರುಗಳನ್ನು ಕೂಡ ಈ ಹಾಳೆಯಲ್ಲಿಯೆ ಸೇರಿಸಿಕೊಳ್ಳುತ್ತೇನೆ ಮಹಾಪ್ರಭು.

ರಾಜ: (ಪ್ರ.ಸ. ನ ಬುದ್ಧಿವಂತಿಕೆಗೆ ತಲೆದೂಗಿ) ಸರಿ. ಇನ್ನು ಹೆಸರುಗಳನ್ನು ಓದಿ.

ಪ್ರಸ: ಮೊದಲು ಸ್ಪರ್ಧೆಯ ನಿಯಮಗಳನ್ನು ಕೇಳಿ. ಹಾಡು ನೀವೇ ರಚಿಸಿದ್ದಾಗಿರಬೇಕು.

ರಾಜ: ನಿಜ. ನಾವು ಸಂಗೀತಕ್ಕೆ ನೀಡುವಷ್ಟೇ  ಪ್ರಾಧಾನ್ಯವನ್ನು ಸಂಗೀತದ ಹಿಂದಿರುವ ಶಬ್ದಗಳಿಗೂ ನೀಡುತ್ತೇವೆ. ಸಂಗೀತವೆಂದರೆ ಕೇವಲ ನಾದವಾಗಬಾರದು.

ರಾಣಿ: ಹೌದು ಅದು ಕಾವ್ಯವೂ ಆಗಿರಬೇಕು.

ರಾಜ: ನಿಜ ಮಹಾರಾಣಿ. ಸಂಗೀತದಲ್ಲಿ  ಕಾವ್ಯ ಬೇಕೇ ಬೇಕು. ಸರಿ. ಮುಂದರಿಸಿ ಪ್ರಧಾನಿಗಳೆ.

ಮೂರು ನಿಮಿಷದೊಳಗೆ ಮುಗಿಯಬೇಕು.ನಾನು ಆ ಹೆಸರುಗಳನ್ನು ಓದಿದಾಗ ನೀವು ಎದ್ದು ನಿಲ್ಲತಕ್ಕದ್ದು. ನಿಮ್ಮ ಪದ್ಯಕ್ಕೆ ತಕ್ಕಂತೆ ವಾದ್ಯವೃಂದದವರು ವಾದ್ಯ ನುಡಿಸುತ್ತಾರೆ ಎಂಬುದನ್ನು ಗಮನಿಸಬೇಕು (ಮೂವರೂ ತಲೆ ಬಾಗುತ್ತಾರೆ) ಮೊದಲನೆಯ ಅಭ್ಯರ್ಥಿ ಚಂದ್ರು. ಎರಡನೆಯ ಅಭ್ಯರ್ಥಿ ಸುಂದ್ರು. ಮೂರನೆಯ ಅಭ್ಯರ್ಥಿ ಚಿಂಕು. (ಅವರವರ ಹೆಸರು ಕೇಳಿದಾಗ ಎದ್ದು ನಿಂತು ಮಹಾರಾಜರಿಗೂ  ಸಭೆಗೂ ವಂದಿಸುತ್ತಾರೆ) ಈಗ ಚಂದ್ರು.

ಚಂ: (ರಾಗವಾಗಿ) ಬನ್ನಿ ಆಡುವ ಮಾತು ಹೂವಿನ ಹಾಗೆ
ಹಾಡುವ ಹಾಡು ಹಾಡು ಹಕ್ಕಿಯಂತೆ
ಬನ್ನಿ ನಡೆಯುವ ನಾವು ಬೆಳದಿಂಗಳ ಹಾದಿಯಲ್ಲಿ
ನನೆಯುತ್ತ ಮೊದಲ ಮಳೆ ಹನಿಯಲ್ಲಿ.

                        ಉಯಾಲೆಯಾಡಲು ನಮಗೆ ಇದೆ ಕಾಮನ ಬಿಲ್ಲು
ಕುಣಿದಾಡಲು ಇದೆ  ಹಸುರು ಹುಲ್ಲು .
ಮೆಲ್ಲಲು ಇದೆ ಬಾಲ್ಯಕಾಲದ ನೆನಪು
ಕಾಣಲು ಕಣ್ತುಂಬ ಹಗಲುಗನಸು.

(ಪಂಡಿತರು ಸಚಿವರು ಎಲ್ಲರೂ ಚಪ್ಪಾಳೆ ತಟ್ಟಿ ಹಾಡಿಗೆ ಮೆಚ್ಚುಗೆ ಸೂಚಿಸುತ್ತಾರೆ)

ರಾಜ: ಇದು ಸಂತೋಷದ ಪದ್ಯ.

ಪ್ರಸ: ಹೌದು ಮಹಾಪ್ರಭು, ಇದು ಸಂತೋಷದ ಪದ್ಯ. ಈಗ ಎರಡನೆಯ ಅಭ್ಯರ್ಥಿ ಸುಂದ್ರು.

ಸುಂದ್ರು: (ರಾಗವಾಗಿ)
ರೊಟ್ಟಿಗೆ ಹಿಟ್ಟಿಲ್ಲದ ಗುಂಡನ ಮಗಳ ಮದುವೆಯ ಊಟ
ಮೊದಲು ಕುಳಿತವರಿಗೆ ಬಸುಮತಿ ಅನ್ನ
ಹನ್ನೊಂದು ಬಗೆಯ ಭಕ್ಷ
ಎರಡೆರಡು ಹೋಳಿಗೆ ಲಾಡು ಖೀರು.
ಮತ್ತೆ ಕುಳಿತವರಿಗೆ ಬರೀ ಅನ್ನ ಸಾರು
ಪಾಯಸದ ಬದಲು ಬೆಲ್ಲ ನೀರು.
ಮತ್ತೆ ಬಂದವರಿಗೆ ಬರಿಯ ಅಂಗೈ ಮೇಲೆ
ಒಂದೊಂದು ಲೋಟ ಬಿಸಿನೀರು.

(ಸಭಾಸದರು ನಕ್ಕು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸುತ್ತಾರೆ)

ರಾಜ: ಇದು ಹಾಸ್ಯಪದ್ಯ.

ಪ್ರಸ: ಹೌದು ಮಹಾಪ್ರಭು.

ರಾಜ: (ಗಂಭೀರವಾಗಿ)ನಮಗೆ ಈ ಸಂತೋಷ ಪದ್ಯಗಳನ್ನು ಮತ್ತು ಹಾಸ್ಯಪದ್ಯಗಳನ್ನು ಕೇಳಿ ಕೇಳಿ  ಬೇಜಾರು ಬಂದಿದೆ. ನಮಗೆ ಮುದ ನೀಡುವ ದು:ಖದ ಪದ್ಯಗಳು ಬೇಕು.

ಪ್ರಸ: ಈಗ ಚಿಂಕು.

ರಾಜ: ನಿನ್ನದು ಎಂಥ ಪದ್ಯ?

ಚಿಂಕು: ದು:ಖದ ಪದ್ಯ ಮಹಾಪ್ರಭು.

ರಾಜ: ಬಹಳ ಸಂತೋಷ. ಹಾಡು.

ಚಿಂಕು: ಆದರೆ ನನ್ನ ದು:ಖದ ಪದ್ಯಕ್ಕೆ ಮಹಾರಾಜರ ಆಸ್ಥಾನ ಸೂಕ್ತವಾದ ಸ್ಥಳವಲ್ಲ ಮಹಾಪ್ರಭು.

ರಾಜ: (ಆಶ್ಚರ್ಯದಿಂದ) ಏನು ಆಸ್ಥಾನ ಸೂಕ್ತವಾದ ಸ್ಥಳವಲ್ಲವೆ? ಮತ್ತೆ ಯಾವುದು ಸೂಕ್ತವಾದ ಸ್ಥಳ?

ಚಿಂಕು: ಅರಮನೆಯ  ಹೊರಗಿರುವ ಉದ್ಯಾನವನ ಸೂಕ್ತವಾದ ಜಾಗ ಮಹಾಪ್ರಭು.

ರಾಜ: ಹಾಗೊ? ಹಾಗೇ ಆಗಲಿ. ಕೂಡಲೇ ಅಲ್ಲಿ  ಆಸನಗಳನ್ನು ಹಾಕಿಸಿರಿ. ಈತ ಅಲ್ಲಿಯೆ ಹಾಡಲಿ.

(ಸಭಾಸದರೆಲ್ಲಾ  ಇದು ಅತಿ, ವಿಚಿತ್ರ, ವಿಲಕ್ಷಣ, ಉದ್ಯಾನ ಸಂಗೀತಕ್ಕತ ತಕ್ಕ ಸ್ಥಳ ಎಂದಿತ್ಯಾದಿಯಾಗಿ  ಎಂದು ತಂತಮ್ಮೊಳಗೆ ಮಾತಾಡುತ್ತಿರುವಾಗ)

ಫೇಡ್ ಔಟ್

ದೃಶ್ಯ ಐದು: ಉದ್ಯಾನವನ

(ಕರಡಿಯ ಪಂಜರ ಮರದ ಹಿಂದುಗಡೆಯಿದೆ. ಮರದ ಎದುರುಗಡೆ ಚಿಂಕು ನಿಂತುಕೊಂಡಿದ್ದಾನೆ.  ಸೂಕ್ತವಾದ ರೀತಿಯಲ್ಲಿ  ಆಸನಗಳನ್ನು ಇರಿಸಲಾಗಿದೆ. ರಾಜ, ಪ್ರಧಾನ ಸಚಿವ ಮತ್ತಿತರ ಸಭಾಸದರು ಆಸೀನರಾಗಿದ್ದಾರೆ)

ರಾಜ: ಸರಿ ಇನ್ನು ನೀನು ಹಾಡಬಹುದು.

ಚಿಂಕು: ಇದು ಒಂದು ದು:ಖದ ಪದ್ಯ. (ಕರಡಿಗೆ ಕೇಳಿಸಬೇಕೆಂಬ ಉದ್ದೇಶದಿಂದ ಈ ಮಾತನ್ನು  ಗಟ್ಟಿಯಾಗಿಹೇಳುತ್ತಾನೆ. ರಾಗವಾಗಿ ಹಾಡುತ್ತಾನೆ)

ಅಮ್ಮ ಕೊಟ್ಟ ಒಂಟೆಯಿತ್ತು
ಹಸಿವಿನ ಮರುಭೂಮಿ ದಾಟಿ ಬಂದೆ.
ಅಪ್ಪ ಕೊಟ್ಟ ದೋಣಿಯಿತ್ತು
ಕಣ್ಣೀರ ಸಾಗರ ದಾಟಿ ಬಂದೆ.
ನಡುವೆ ಈ ಕಾಡಿನಲ್ಲಿ ನಾನಾಗಿರುವೆ ಒಂಟಿ .
ಮುಂದಕ್ಕೆ ಹೋಗಲಾರೆ
ಹಿಂದಕ್ಕೆ ಹೋಗಲಾರೆ
ನಿಂತಲ್ಲಿಂದ ಕದಲಲಾರೆ
ನಾನಾಗಿರುವೆ ಒಂಟಿ.

(ರಾಜನೂ ಸೇರಿದಂತೆ ಎಲ್ಲರೂ ಕಣ್ಣೀರೊರಸಿಕೊಳ್ಳುತ್ತಾರೆ)

ರಾಜ: (ಕಣ್ಣೊರಸಿಕೊಳ್ಳುತ್ತಾ)ಬಹಳ ಆಹ್ಲಾದಾಯಕವಾದ ದು:ಖದ ಪದ್ಯ.

ರಾಣಿ: ಇಷ್ಟು ದು:ಖದ ಪದ್ಯವನ್ನು ನಾನು ಈ ತನಕ ಕೇಳಿಲ್ಲ. ಇದು ನಮ್ಮ ದು:ಖವನ್ನು ಅರ್ಥಮಾಡಿಕೊಳ್ಳುವ ಶಕ್ತಿಗೆ ನವಚೈತನ್ಯವನ್ನು ನೀಡಿದೆ.

ರಾಜ: ಈ ಪದ್ಯವನ್ನು ಕೇಳಿ ನಮಗೆಲ್ಲಾ ಬಹಳ ಸಂತೋಷವಾಗಿದೆ. ಅಲ್ಲವೆ?

ಸಭೆ: ಹೌದು.  ಬಹಳ ಸಂತೋಷವಾಗಿದೆ.  ಬಹಳ ಸಂತೋಷವಾಗಿದೆ.

(ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ)

ರಾಜ: ಚಿಂಕುವನ್ನು ನಾನು ಸಂಗೀತ ಮಂತ್ರಿಯಾಗಿ ನೇಮಿಸಿಕೊಂಡಿದ್ದೇನೆ.

(ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ)

ಚಿಂಕು: ಮಹಾಪ್ರಭು. ನಾನು ಯಾವತ್ತೂ ಆಸ್ಥಾನದಲ್ಲಿ ಹಾಡಲಾರೆ.

ರಾಜ: ಆಸ್ಥಾನದಲ್ಲಿ ಯಾಕೆ ಹಾಡಲಾರೆ?

ಚಿಂಕು: ಹಾಡಿದ್ದು ನಾನಲ್ಲ ಮಹಾಪ್ರಭು.

ರಾಜ: ಹಾಗೆಂದರೆ?

ಚಿಂ: ನನಗೆ ಹಾಡಲು ಬರುವುದಿಲ್ಲ. ನಾನು ಹಾಡಿನ ಶಬ್ದಗಳಿಗೆ ಸರಿಯಾಗಿ ಬಾಯಿ ಅಲ್ಲ್ಲಾಡಿಸಿದ್ದು ಮಾತ್ರ.

ರಾಜ: ಹಾಗಾದರೆ ಹಾಡಿದ್ದು ಯಾರು?

ಚಿಂ: ನನ್ನ ಗುರು.

ರಾಜ: ನಿನ್ನ ಮಾತು ಒಗಟಾಗಿದೆ.  ಎಲ್ಲಿದ್ದಾರೆ ನಿನ್ನ ಗುರು?

ಚಿಂ: (ಕರಡಿಯನ್ನು ತೋರಿಸಿ) ಆ ಕರಡಿ ನನ್ನ ಗುರು. ಹಾಡಿದ್ದು  ಅದೇ ಕರಡಿ.

(ಸಭಾಸದರು ತಂತಮ್ಮೊಳಗೆ ಮಾತಾಡಿಕೊಳ್ಳುತ್ತಾರೆ: ಇದು ಮೋಸ, ಹೀಗೂ ಇದೆಯೆ? ಕರಡಿ ಹಾಡುವುದೆ? ಇತ್ಯಾದಿ)

ರಾಜ: ಅಂದರೆ ನೀನು ನಮಗೆ ಮೋಸ ಮಾಡಿದ್ದಿ!

ಚಿಂ: ಹೌದು ಮಹಾಪ್ರಭು. ನಾನು ನನಗಾಗಿ ಮೋಸ ಮಾಡಿದ್ದಲ್ಲ. ಪಂಜರದಲ್ಲಿ ಪರಿತಪಿಸುತ್ತಿರುವ ಕರಡಿಗಾಗಿ ಮಾಡಿದ್ದು. ಅದು ಸಾಮಾನ್ಯ ಕರಡಿಯಲ್ಲ. ಅದು ಪ್ರತಿಭಾವಂತ ಕರಡಿ. ಅದಕ್ಕೆ ಸಂಗೀತ ಮಂತ್ರಿ ಪದವಿ ಕೊಡಿಸಲು ಹೀಗೆ ಮಾಡಿದೆ. ಕ್ಷಮಿಸಬೇಕು.

ರಾಜ: (ಸೈನಿಕರೊಡನೆ) ಹೋಗಿ ಆ ಕರಡಿಯನ್ನು ಪಂಜರದಿಂದ ಹೊರಗೆ ಕರೆದುಕೊಂಡು ಬನ್ನಿರಿ. (ಚಿಂಕುವಿನೊಡನೆ) ನೀನು ಮಾಡಿದ್ದು ಅಪರಾಧವಲ್ಲ ಚಿಂಕು. ನಿನ್ನ ಗುಣ ದೊಡ್ಡದು. ಕರಡಿಗೆ  ಸಂಗೀತ ಮಂತ್ರಿಪದವಿ ಕೊಡುತ್ತೇನೆ. ನಿನಗೂ ಒಂದು ಸೂಕ್ತವಾದ ಮಂತ್ರಿಪದವಿ ಕೊಡುತ್ತೇನೆ.

(ಸೈನಿಕರು ಕರಡಿಯನ್ನು ಕರೆದುಕೊಂಡು ಬರುತ್ತಾರೆ) ಭಲ್ಲೂಕ ಮಹಾಶಯ, ಹಾಡನ್ನು ಹಾಡಿದ್ದು ನೀನೇ ಏನು?

ಕರ: ಹೌದು ಮಹಾಪ್ರಭು.

(ಸಭಾಸದರು ಅದ್ಭುತ ಅದ್ಭುತ ಎಂದು ಪಿಸುಗುಟ್ಟುತ್ತಾರೆ)

ರಾಜ: ನೀನು ಹೊಸ ಹೊಸ ಹಾಡುಗಳನ್ನು ರಚಿಸಿ ಹಾಡಬಲ್ಲೆಯ?

ಕರ: ಹೌದು ಮಹಾಪ್ರಭು.

ರಾಜ: ಎಲ್ಲಾ ಭಾವನೆಯ ಪದ್ಯಗಳನ್ನು ರಚಿಸಬಲ್ಲೆಯ?

ಕರ: ರಚಿಸಬಲ್ಲೆ ಮಹಾಪ್ರಭು.

ರಾಜ: ಹಾಗಾದರೆ ಇಂದಿನಿಂದ ನೀನು ನಮ್ಮ ಆಸ್ಥಾನದಲ್ಲಿ ಒಬ್ಬ ಮಂತ್ರಿ. ಸಂಗೀತ ಮಂತ್ರಿ.

ಕರ: ಕೃತಜ್ಞತೆಗಳು ಮಹಾಪ್ರಭು.

(ಸಭಾಸದರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ) ಚಿಂಕುವಿಗೆ ಕೂಡ ಒಂದು  ಮಂತ್ರಿ ಪದವಿ ನೀಡುತ್ತೇನೆ. ಚಿಂಕು, ನೀನು ಪರಿಸರ ಮಂತ್ರಿ. (ಚಿಂಕುವಿನ ಕಡೆಗೆ ತಿರುಗಿ)ಆಗದೆ?

ಚಿಂ: (ತಲೆಬಾಗಿ) ನಾನು ತಮಗೆ ತುಂಬಾ ಕೃತಜ್ಞ ಮಹಾಪ್ರಭು. ನನ್ನ ಗುರುವಿಗೆ ತಾವು ದಯಪಾಲಿಸಿದ ಪದವಿಯಿಂದ ನನಗೆ ತುಂಬಾ ಸಂತೋಷವಾಗಿದೆ.  ಯಾಕೆಂದರೆ, ಇನ್ನು ನಾನು ಸಚಿವ ಸಂಪುಟದೊಳಗೇ ಸಂಗೀತ ಕಲಿಯಬಹುದು.

(ಸಭಾಸದರ ಚಪ್ಪಾಳೆ ಮತ್ತು ಅಟ್ಟಹಾಸ)

ಫೇಡ್ ಔಟ್